Sunday, March 17, 2013


ಶಬ್ದ ಮಾಲಿನ್ಯದ ಗದ್ದಲಕ್ಕೆ ಕಡಿವಾಣ ತೊಡಿಸುವವರು
ಯಾರು?
ಭಾರತೀಯರು ನೆಮ್ಮದಿಯಿಂದ ಜೀವಿಸಲು ದೇಶದ ಸಂವಿಧಾನದಲ್ಲಿ ಅನೇಕ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ.ಇದಕ್ಕಾಗಿ ಅವಶ್ಯಕ ಕಾನೂನು ಮತ್ತು ನೀತಿನಿಯಮಗಳನ್ನೂ ರೂಪಿಸಲಾಗಿದೆ.ಆದರೆ ಇವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಇರುವುದರಿಂದಾಗಿ ಪ್ರಜೆಗಳ ದೈನಂದಿನ ಜೀವನದಲ್ಲಿ ಹಲವಾರು ಸಮಸ್ಯೆಗಳು ಅಡ್ಡಿ ಆತಂಕಗಳನ್ನು ಒಡ್ಡುತ್ತಿವೆ.ಇಂತಹ ಸಮಸ್ಯೆಗಳಲ್ಲಿ "ಶಬ್ದ ಮಾಲಿನ್ಯ"ವೂ ಒಂದಾಗಿದೆ.
ಕಿವಿಗಡಚಿಕ್ಕುವ ಸದ್ದು  
ನಿಮ್ಮ ನಗರದ ರಸ್ತೆಗಳಲ್ಲಿ ನಡೆದಾಡುವಾಗ ನಿಮ್ಮನ್ನು ಬೆಚ್ಚಿಬೀಳಿಸುವ ವಾಹನಗಳ ಕರ್ಕಶವಾದ ಹಾರ್ನ್ ಮತ್ತು ಸಭೆ ಸಮಾರಂಭಗಳ ಪ್ರಚಾರಕ್ಕಾಗಿ ವಾಹನಗಳಲ್ಲಿ ಅಳವಡಿಸಿದ ಗಜಗಾತ್ರದ ಹಲವಾರು ಸ್ಪೀಕರ್ ಗಳಿಂದ ಹೊರಹೊಮ್ಮುವ ಕಿವಿಗಡಚಿಕ್ಕುವ ಸಂಗೀತ ಹಾಗೂ ಪ್ರಚಾರಕರ ಕಿರುಚಾಟಗಳಿಂದ ತೀವ್ರತರವಾದ ತೊಂದರೆಗಳನ್ನು ಅನುಭವಿಸಿರಲೇಬೇಕು.ನಗರಗಳ ಮಿತಿಯಲ್ಲಿ ಭಾರೀ ಸದ್ದುಮಾಡುವ ಕರ್ಕಶ ಹಾರ್ನ್ ಗಳನ್ನು ಬಳಸುವುದನ್ನು ಸಾರಿಗೆ ಇಲಾಖೆಯು ನಿಷೇಧಿಸಿದೆ.ಅದೇ ರೀತಿಯಲ್ಲಿ ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೬ಗಂಟೆಯ ನಡುವೆ ಧ್ವನಿವರ್ಧಕಗಳನ್ನು ಬಳಸದಂತೆ ದೇಶದ ಸರ್ವೋಚ್ಚ ನ್ಯಾಯಾಲಯವೇ ಆದೇಶಿಸಿದೆ.ಇದಲ್ಲದೇ ಶಾಲಾ ಕಾಲೇಜುಗಳ ವಠಾರ,ಸರಕಾರೀ ಕಛೇರಿಗಳು,ಪರೀಕ್ಷಾ ಕೇಂದ್ರಗಳು,ಆಸ್ಪತ್ರೆ-ಶುಶ್ರೂಷಾ ಕೇಂದ್ರಗಳೇ ಮುಂತಾದ ಸ್ಥಳಗಳ ಸಮೀಪದಲ್ಲಿ ಕರ್ಕಶ ಹಾರ್ನ್ ಮತ್ತು ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.ಇತರ ಸ್ಥಳಗಳಲ್ಲೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಧ್ವನಿವರ್ಧಕದ ಸದ್ದನ್ನು ನಿಗದಿತ ಮಿತಿಯಲ್ಲಿ  ಬಳಸಬೇಕಾದ ನಿಯಮವಿದೆ.ಆದರೆ ನಮ್ಮ ದೇಶದಲ್ಲಿ ಇವೆಲ್ಲಾ ಕಾನೂನು ಮತ್ತು ನೀತಿ ನಿಯಮಗಳ ಉಲ್ಲಂಘನೆಯು ಪ್ರತಿನಿತ್ಯ ರಾಜಾರೋಷವಾಗಿ ನಡೆಯುತ್ತಲೇ ಇದೆ.ಪ್ರಜೆಗಳ ಮೂಲಭೂತ ಹಕ್ಕುಗಳು ಮತ್ತು ಆರೋಗ್ಯಕ್ಕೂ ಚ್ಯುತಿಯಾಗುವ ಇಂತಹ ವರ್ತನೆಗಳಿಗೆ ಕಡಿವಾಣವನ್ನು ತೊಡಿಸಲೇ ಬೇಕಾಗಿದೆ.ಜೊತೆಗೆ ಇಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಕೈಗೊಳ್ಳಬೇಕಾಗಿದೆ.ಇದನ್ನು ನಿರ್ಲಕ್ಷಿಸಿದಲ್ಲಿ ಶ್ರವಣ ದೋಷಗಳು ಹಾಗೂ ಕಿವುಡುತನ,ರಕ್ತದೊತ್ತಡದ ಏರುವಿಕೆ,ಹೃದ್ರೋಗಗಳು ಉಲ್ಬಣಿಸುವುದು,ವ್ಯಗ್ರತೆ ಮತ್ತು ಮತ್ತು ಕೆಲವಿಧದ ಮಾನಸಿಕ ರೋಗಗಳು ದೇಶದ ಪ್ರಜೆಗಳನ್ನು ಕಾಡಲಿವೆ. 
ಗತಕಾಲದಲ್ಲಿ ಸಂಪರ್ಕ ಸೌಲಭ್ಯ,ಪ್ರಸಾರಣ ಮಾಧ್ಯಮಗಳು ಮತ್ತು ಜಾಹೀರಾತುಗಳ ಕೊರತೆ ಇದ್ದುದರಿಂದಾಗಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳ ಪ್ರಾಯೋಜಕರು ವಾಹನಗಳಲ್ಲಿ ಧ್ವನಿವರ್ಧಕವನ್ನು ಅಳವಡಿಸಿ,ತಮ್ಮ ಮತ್ತು ಸುತ್ತಮುತ್ತಲ ಊರುಗಳಲ್ಲಿ ಕಾರ್ಯಕ್ರಮದ ಬಗ್ಗೆ ಪ್ರಚಾರವನ್ನು ನಡೆಸುತ್ತಿದ್ದರು.ಜೊತೆಗೆ ಅಂದಿನ ದಿನಗಳಲ್ಲಿ ಹಾರ್ನ್ ಸ್ಪೀಕರ್ ಗಳನ್ನು ಬಳಸುತ್ತಿದ್ದು,ಇವುಗಳ ಸದ್ದನ್ನು ಸಹನೀಯ ಪ್ರಮಾಣದಲ್ಲಿ ಇರಿಸಲಾಗುತ್ತಿತ್ತು.
ಆದರೆ ಇಂದು ಮೊಬೈಲ್ ಸಂದೇಶ,ದೂರವಾಣಿ ಕರೆ,ಕರಪತ್ರಗಳು,ಭಿತ್ತಿಪತ್ರಗಳು,ಬ್ಯಾನರ್ ಗಳು,ಪತ್ರಿಕಾ ಪ್ರಕಟಣೆ-ಜಾಹೀರಾತು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಕಟಣೆ-ಜಾಹೀರಾತುಗಳನ್ನು ನೀಡುವ ಅವಕಾಶವಿದ್ದು,ಧ್ವನಿವರ್ಧಕಗಳ ಬಳಕೆಯು ಅನಿವಾರ್ಯವಲ್ಲ.ವಿಶೇಷವೆಂದರೆ ವಿವಿಧ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡಿದರೂ,ವಾಹನಗಳಲ್ಲಿ ಗಜಗಾತ್ರದ ಹಲವಾರು ಬಾಕ್ಸ್ ಸ್ಪೀಕರ್ ಗಳನ್ನು ಅಳವಡಿಸಿ ಗರಿಷ್ಟಮಟ್ಟದ ಸದ್ದಿನೊಂದಿಗೆ ಪ್ರತಿಧ್ವನಿಸುವ ಧ್ವನಿವರ್ಧಕಗಳನ್ನು ಬಳಸುವ ಹವ್ಯಾಸ ಮಿತಿಮೀರಿದೆ.ತತ್ಪರಿಣಾಮವಾಗಿ ಸಾರ್ವಜನಿಕರ ನೆಮ್ಮದಿ ಮತ್ತು ಆರೋಗ್ಯಗಗಳಿಗೆ ಧಕ್ಕೆಯಾಗುತ್ತಿದೆ.ಈ ಸಮಸ್ಯೆಯನ್ನು ಬಗೆಹರಿಸಬೇಕಾದ ಅಧಿಕಾರಿಗಳು ತೆಪ್ಪಗಿರುವುದರಿಂದಾಗಿ,ಶಬ್ದಮಾಲಿನ್ಯದ ಪ್ರಮಾಣ ಮತ್ತು ಸಮಸ್ಯೆ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ.
ಶರತ್ತುಗಳ ಉಲ್ಲಂಘನೆ?
ಸಾಮಾನ್ಯವಾಗಿ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವ ಮುನ್ನ ಸಮೀಪದ ಆರಕ್ಷಕ ಠಾಣೆಯಲ್ಲಿ ಅರ್ಜಿಯನ್ನು ಸಲ್ಲಿಸುವುದರೊಂದಿಗೆ, ನಿಗದಿತ ಶುಲ್ಕವನ್ನು ಪಾವತಿಸಿ ಅನುಮತಿಯನ್ನು ಪಡೆದುಕೊಳ್ಳಬೇಕು.ಅರ್ಜಿಯಲ್ಲಿ ಅರ್ಜಿದಾರರ ಹೆಸರು,ವಿಳಾಸ,ಪರವಾನಿಗೆ ಪಡೆದುಕೊಳ್ಳುವ ಉದ್ದೇಶ,ಪರವಾನಿಗೆಯ ಪರಿಮಿತಿ,ವ್ಯಾಪ್ತಿ,ದಿನಾಂಕಮತ್ತು ವೇಳೆಗಳೊಂದಿಗೆ ಉಪಯೋಗಿಸುವ ಸ್ಥಳಗಳ ವಿವರಗಳನ್ನು ನಮೂದಿಸಬೇಕು. ಅಂತೆಯೇ ಅನುಮತಿಪತ್ರದಲ್ಲಿನ ಶರತ್ತುಗಳನ್ನು ಕಡ್ಡಾಯವಾಗಿ ಪರಿಪಾಲಿಸಬೇಕು.ಇದಕ್ಕೆ ತಪ್ಪಿದಲ್ಲಿ ಕರ್ನಾಟಕ ಪೋಲೀಸ್ ಕಾಯಿದೆಯ ಸೆಕ್ಷನ್ ೩೭ರಂತೆ  ಮೂರು ತಿಂಗಳ ಸಜೆ ಅಥವಾ ೫೦೦ರೂ.ದಂಡ ಅಥವಾ ಇವೆರಡನ್ನೂ ವಿಧಿಸಬಹುದಾಗಿದೆ.ಬಹುತೇಕ ಜನರು ನಿರ್ದಿಷ್ಟ ಕಾರ್ಯಕ್ರಮವೊಂದರ ಪ್ರಚಾರದ ಸಲುವಾಗಿಯೇ ಅನುಮತಿಯನ್ನು ಪಡೆದುಕೊಳ್ಳುತ್ತಿದ್ದು,ಪರವಾನಿಗೆಯ ಷರತ್ತಿನಂತೆ ಧ್ವನಿವರ್ಧಕಗಳನ್ನು ಪ್ರಚಾರ ಅಥವಾ ಅಪಪ್ರಚಾರಕ್ಕಾಗಿ ಬಳಸುವಂತಿಲ್ಲ!.ಅರ್ಥಾತ್ ಸಂಗೀತ,ನಾಟಕ,ನೃತ್ಯ ಮತ್ತಿತರ ಸಭಾ ಕಾರ್ಯಕ್ರಮಗಳನ್ನು ಹೊರತುಪಡಿಸಿ,ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಕೇವಲ ಪ್ರಚಾರಕ್ಕಾಗಿ ಬಳಸುವಂತಿಲ್ಲ.ಇಲಾಖೆಯ ಷರತ್ತು ಇಂತಿದ್ದರೂ,ಪ್ರಚಾರಕ್ಕಾಗಿ ಪರವಾನಿಗೆಯನ್ನು ನೀಡುವುದನ್ನು ಆರಕ್ಷಕ ಇಲಾಖೆಯು ಇಂದಿಗೂ ನಿಲ್ಲಿಸಿಲ್ಲ!. 
ಪರವಾನಿಗೆಯ ಇತರ ಷರತ್ತುಗಳು ಇಂತಿವೆ.ಸಾರ್ವಜನಿಕ ಹಿತದೃಷ್ಟಿಯಲ್ಲಿ ಯಾರಿಗೂ ತೊಂದರೆಯಾಗುವಂತೆ  ಧ್ವನಿವರ್ಧಕಗಳನ್ನು ಉಪಯೋಗಿಸಬಾರದು.ಪರವಾನಿಗೆಯಲ್ಲಿ ನಿಗದಿಪಡಿಸಿದ ವೇಳೆಗಿಂತ ಅಧಿಕ ಸಮಯ ಪರವಾನಿಗೆಯನ್ನು (ಅರ್ಥಾತ್ ಧ್ವನಿವರ್ಧಕವನ್ನು) ಉಪಯೋಗಿಸಬಾರದು.ಶಾಲಾ ಕಾಲೇಜು ವಠಾರ,ಸರಕಾರೀ ಕಚೇರಿ,ಪರೀಕ್ಷಾ ಕೇಂದ್ರ,ಆಸ್ಪತ್ರೆ ಇತ್ಯಾದಿಗಳ ಬಳಿಯಲ್ಲಿ ಉಪಯೋಗಿಸಿ ಶಾಂತಿಗೆ ಭಂಗವನ್ನು  ಎಸಗತಕ್ಕದ್ದಲ್ಲ.ನಿಬಂಧನೆಗಳಿಗೆ ವಿರೋಧವಾಗಿ ಯಾವುದೇ ಸಂದರ್ಭದಲ್ಲಿ ಪರವಾನಿಗೆಯನ್ನು ಉಪಯೋಗಿಸಿದಲ್ಲಿ ಧ್ವನಿವರ್ಧಕವನ್ನು ಮುಟ್ಟುಗೋಲು ಹಾಕಿ ಮುಂದಿನ ಕಾನೂನು ಕ್ರಮಗಳನ್ನು ಜರಗಿಸಲಾಗುವುದು ಎನ್ನುವ ನಿಯಮಗಳನ್ನು ಪರವಾನಿಗೆಯಲ್ಲಿ ನಮೂದಿಸಿರುತ್ತದೆ.ವಿಶೇಷವೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಪರವಾನಿಗೆಯನ್ನು ಈ ನಿಯಮಗಳಿಗೆ ವಿರುದ್ಧವಾಗಿ ಇದನ್ನು ಕೇವಲ "ಪ್ರಚಾರ"ದ ಸಲುವಾಗಿಯೇ ಬಳಸಿಕೊಳ್ಳುವುದು ಮಾತ್ರ ನಂಬಲಸಾಧ್ಯ ಎನಿಸುತ್ತದೆ!.
ಈ ರೀತಿಯಲ್ಲಿ ಪರವಾನಿಗೆಯ ಶರತ್ತುಗಳನ್ನು ರಾಜಾರೋಷವಾಗಿ ಉಲ್ಲಂಘಿಸುತ್ತಿದ್ದರೂ,ಆರಕ್ಷಕ ಇಲಾಖೆಯು ಸುಮ್ಮನಿರಲು ಕಾರಣವೇನೆಂದು ಆ ಶಿವನೇ ಬಲ್ಲ.ಆದರೆ ಈ ಶಬ್ದ ಮಾಲಿನ್ಯ ಮತ್ತು ತತ್ಸಂಬಂಧಿತ ನಿಯಮಗಳು-ಷರತ್ತುಗಳ ಬಗ್ಗೆ  ಸಾರ್ವಜನಿಕರಿಗೆ ಒಂದಿಷ್ಟು ಮಾಹಿತಿಯನ್ನು ನೀಡುವ ಮೂಲಕ ಅರಿವನ್ನು ಮೂಡಿಸುವುದೇ ಈ ಲೇಖನದ ಉದ್ದೇಶವಾಗಿದೆ.ಆದರೆ ಇದರೊಂದಿಗೆ ಸಂಬಂಧಿತ ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಲು ಯಶಸ್ವಿಯಾದಲ್ಲಿ ಸಾರ್ವಜನಿಕರ ನೆಮ್ಮದಿ ಮತ್ತು ಆರೋಗ್ಯಗಳಿಗೆ ನಿಸ್ಸಂದೇಹವಾಗಿಯೂ ಹಿತಕರ ಎನಿಸಲಿದೆ!.
ಡಾ.ಸಿ.ನಿತ್ಯಾನಂದ ಪೈ,ಪುತ್ತೂರು