Sunday, June 29, 2014

DOCTORS DAY- SPECIAL





 ಆರೋಗ್ಯ ರಕ್ಷಣೆ : ವೈದ್ಯರ ಹೊಣೆ 

ಸಹಸ್ರಾರು ವರ್ಷಗಳಿಂದ ಸಮಾಜದ ಸ್ವಾಸ್ಥ್ಯ ಸಂರಕ್ಷಣೆಯ ಮಹತ್ತರವಾದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ವೈದ್ಯರನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದ್ದ ನಮ್ಮ ಪೂರ್ವಜರು, " ವೈದ್ಯೋ ನಾರಾಯಣೋ ಹರಿ" ಎನ್ನುವ ಮಾತುಗಳನ್ನು ಅಕ್ಷರಶಃ ಪರಿಪಾಲಿಸುತ್ತಿದ್ದರು. ಅರ್ಥಾತ್ ವೈದ್ಯರನ್ನು ಪೂಜ್ಯ ಭಾವನೆಯಿಂದ ಗೌರವಿಸುತ್ತಿದ್ದರು. ಬಡವ ಬಲ್ಲಿದನೆಂಬ ಭೇದವಿಲ್ಲದೇ, ಅನ್ಯಥಾ ಶರಣಂ ನಾಸ್ತಿ ಎಂದು ತಮ್ಮಲ್ಲಿ ಚಿಕಿತ್ಸೆಗಾಗಿ ಬರುವ ಪ್ರತಿಯೊಬ್ಬ ರೋಗಿಯ ಕಾಯಿಲೆಯನ್ನು ನಿಖರವಾಗಿ ಪತ್ತೆಹಚ್ಚಿ, ಅತ್ಯುತ್ತಮ ಚಿಕಿತ್ಸೆಯನ್ನು ನೀಡಿ ಸಾಂತ್ವನಿಸುವ ವೈದ್ಯರಿಗೆ ಇಂದಿಗೂ ನಮ್ಮ ಸಮಾಜದಲ್ಲಿ ವಿಶೇಷವಾದ ಸ್ಥಾನಮಾನಗಳಿವೆ. 

ಜನಸಾಮಾನ್ಯರ ಆರೋಗ್ಯದ ರಕ್ಷಣೆ ಮತ್ತು ವ್ಯಾಧಿಪೀಡಿತರ ಚಿಕಿತ್ಸೆಗಾಗಿ ಹಗಲಿರುಳು ಶ್ರಮಿಸುವ ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಧ್ಯಯನ ಮತ್ತು ಸಂಶೋಧನೆಗಳ ಫಲವಾಗಿ, ನಮ್ಮ ಆರೋಗ್ಯದ ಗುಣಮಟ್ಟಗಳು ಹೆಚ್ಚಿವೆ. ಜೊತೆಗೆ ಭಾರತೀಯರ ಸರಾಸರಿ ಆಯುಷ್ಯದ ಪ್ರಮಾಣವೂ ನಿಸ್ಸಂದೇಹವಾಗಿ ವೃದ್ಧಿಸುತ್ತಿದೆ. 

ಮನುಕುಲವನ್ನು ಕಾಡುವ ಅಸಂಖ್ಯ ವ್ಯಾಧಿಗಳಿಗೆ ನೂರಾರು ಕಾರಣಗಳಿದ್ದು, ಇವುಗಳಲ್ಲಿ ಅನುವಂಶಿಕತೆ, ರೋಗಕಾರಕ ಸೂಕ್ಷ್ಮಾಣು ಜೀವಿಗಳು, ಜನ್ಮದತ್ತ ತೊಂದರೆಗಳು ಹಾಗೂ ವೈಕಲ್ಯಗಳು, ನಮ್ಮ ಸುತ್ತಮುತ್ತಲ ಪರಿಸರ, ನಾವು ಸೇವಿಸುವ ಗಾಳಿ, ನೀರು ಮತ್ತು ಆಹಾರಗಳ ಗುಣಮಟ್ಟ, ಮಾನಸಿಕ ಒತ್ತಡಗಳು ಮತ್ತು ದುಶ್ಚಟಗಳು ಪ್ರಮುಖವಾಗಿವೆ. 

ಅದೇ ರೀತಿಯಲ್ಲಿ ಅಧಿಕತಮ ವ್ಯಾಧಿಗಳನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಹಾಗೂ ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿ ಇರಿಸಬಲ್ಲ ಔಷದಗಳು ಲಭ್ಯವಿದೆ. ಆದರೆ ಕೆಲವೊಂದು ಕಾಯಿಲೆಗಳನ್ನು ಚಿಕಿತ್ಸಿಸಬಲ್ಲ, ನಿಯಂತ್ರಿಸಬಲ್ಲ ಹಾಗೂ ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳೇ ಲಭ್ಯವಿಲ್ಲ ಎನ್ನುವುದು ನಿಮಗೂ ತಿಳಿದಿರಬೇಕು. ಆದರೂ ಇಂತಹ ಕಾಯಿಲೆಗಳನ್ನು ತಡೆಗಟ್ಟಬಲ್ಲ ಲಸಿಕೆಗಳು ಮತ್ತು ಗುಣಪಡಿಸಬಲ್ಲ ಔಷದಗಳನ್ನು ಸಂಶೋಧಿಸುವ ಪ್ರಯತ್ನ ನಡೆಯುತ್ತಲೇ ಇದೆ. 

ಆದರೆ ಸೂಕ್ತ ಲಸಿಕೆ ಅಥವಾ ಔಷದಗಳು ಲಭ್ಯವಿಲ್ಲದ ವ್ಯಾಧಿಗಳಿಂದ ಪೀಡಿತ ರೋಗಿಗಳಿಗೆ ಧೈರ್ಯ ತುಂಬಿ, ಅವರ ನೋವನ್ನು ಕಡಿಮೆಮಾಡುವ ಹಾಗೂ ಬದುಕನ್ನು ಒಂದಿಷ್ಟು ಸಹನೀಯವನ್ನಾಗಿಸುವ ಪ್ರಯತ್ನವನ್ನು ವೈದ್ಯರು ಸದಾ ಮಾಡುತ್ತಾರೆ. ಅಹರ್ನಿಶಿ ತಮ್ಮ ರೋಗಿಗಳ ಹಿತರಕ್ಷಣೆಗಾಗಿ ದುಡಿಯುವ ವೈದ್ಯರು, ಅನೇಕ ಸಂದರ್ಭಗಳಲ್ಲಿ ತಮ್ಮ ಆರೋಗ್ಯವನ್ನೇ ನಿರ್ಲಕ್ಷಿಸಿದ ಉದಾಹರಣೆಗಳೂ ಸಾಕಷ್ಟಿವೆ. 

ವಿಶ್ವಾಸವೇ ಸಂಜೀವಿನಿ 

ವೈದ್ಯರು ಮತ್ತು ರೋಗಿಗಳ ನಡುವಿನ ಅವಿನಾಭಾವ ಸಂಬಂಧವು " ವಿಶ್ವಾಸ " ಎನ್ನುವ ಭದ್ರವಾದ ತಳಹದಿಯ ಮೇಲೆ ಸ್ಥಿರವಾಗಿ ನಿಂತಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಈ ಅಚಲ ವಿಶ್ವಾಸವೇ ರೋಗಿಯ ಕಾಯಿಲೆಯನ್ನು ಗುಣಪಡಿಸುವಲ್ಲಿ ಯಾವುದೇ ಚಿಕಿತ್ಸೆಗಿಂತಲೂ ಅಧಿಕ ಪರಿಣಾಮವನ್ನು ಬೀರುತ್ತದೆ. ಜನಸಾಮಾನ್ಯರು "ವೈದ್ಯರ ಕೈಗುಣ " ಎನ್ನುವುದು ನಿಜಕ್ಕೂ ರೋಗಿಗೆ ವೈದ್ಯರ ಮೇಲಿರುವ ವಿಶ್ವಾಸವೇ ಹೊರತು ಬೇರೇನೂ ಅಲ್ಲ!. ಈ ರೀತಿಯ ವಿಶ್ವಾಸವನ್ನು ಗಳಿಸಲು ಹಲವಾರು ವರ್ಷಗಳೇ ಬೇಕಾಗುವುದಾದರೂ, ಇದನ್ನು ಕಳೆದುಕೊಳ್ಳಲು ಅತ್ಯಲ್ಪ ಸಮಯ ಸಾಕಾಗುತ್ತದೆ. 

ಚಿಕಿತ್ಸೆ ಎಂತು, ಏನು?

ಸಾಮಾನ್ಯವಾಗಿ ತಮ್ಮಲ್ಲಿ ಚಿಕಿತ್ಸೆಗಾಗಿ ಬರುವ ಅನಾರೋಗ್ಯ ಪೀಡಿತರನ್ನು ಕೂಲಂಕುಶವಾಗಿ ಪರೀಕ್ಷಿಸಿ, ಅವರನ್ನು ಬಾಧಿಸುತ್ತಿರುವ ವ್ಯಾಧಿಯನ್ನು ನಿಖರವಾಗಿ ಪತ್ತೆಹಚ್ಚಬೇಕಾದ ಹೊಣೆಗಾರಿಕೆ ವೈದ್ಯರ ಮೇಲಿದೆ. ಬಳಿಕ ಅತ್ಯಲ್ಪ ವೆಚ್ಚದಲ್ಲಿ ಹಾಗೂ ಅತ್ಯಂತ ಕಡಿಮೆ ಅವಧಿಯಲ್ಲಿ ಇದನ್ನು ಗುಣಪಡಿಸಲು ಅತ್ಯವಶ್ಯಕ ಎನಿಸುವಷ್ಟೇ ಔಷದಗಳನ್ನು ನೀಡಬೇಕಾಗುತ್ತದೆ. ಈ ಅಲಿಖಿತ ನಿಯಮವನ್ನು ಪರಿಪಾಲಿಸುವುದು ಪ್ರತಿಯೊಬ್ಬ ವೈದ್ಯರ ವೃತ್ತಿಧರ್ಮವೂ ಆಗಿದೆ. 

ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಕಾರಣಾಂತರಗಳಿಂದ ಹಳಸುತ್ತಿರುವ ರೋಗಿ ಮತ್ತು ವೈದ್ಯರ ಸಂಬಂಧಗಳಿಂದಾಗಿ, ಮಾನವೀಯ ಮೌಲ್ಯಗಳೇ ಕಣ್ಮರೆಯಾಗುತ್ತಿವೆ. ಪ್ರಾಯಶಃ ಇದೇ ಕಾರಣದಿಂದಾಗಿ ಕ್ಷುಲ್ಲಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೂ ಅನಾವಶ್ಯಕ ಪರೀಕ್ಷೆಗಳನ್ನು ನಡೆಸುವ ಹಾಗೂ ಅವಶ್ಯಕತೆ ಇಲ್ಲದಿದ್ದರೂ ಪ್ರಬಲ ಔಷದಗಳನ್ನು ನೀಡುವ ಪ್ರವೃತ್ತಿ ಹೆಚ್ಚುತ್ತಿದೆ. ಅಂತೆಯೇ ಅತ್ಯಂತ ಅನಿವಾರ್ಯವೆನಿಸುವ ನಿರ್ದಿಷ್ಟ ಪರೀಕ್ಷೆಯೊಂದನ್ನು ಮಾಡಿಸಲೇ ಬೇಕೆಂದ ಅಥವಾ ಸಂದರ್ಭೋಚಿತವಾಗಿ ಅನ್ಯಮಾರ್ಗವಿಲ್ಲದೇ ದುಬಾರಿ ಔಷದಗಳನ್ನು ನೀಡಿರುವ ವೈದ್ಯರನ್ನು ಸಂದೇಹದ ದೃಷ್ಟಿಯಿಂದ ನೋಡುವ ರೋಗಿಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. ತತ್ಪರಿಣಾಮವಾಗಿ ರೋಗಿ ಮತ್ತು ವೈದ್ಯರ ನಡುವಿನ ಸಂಬಂಧಗಳಲ್ಲಿ ಒಡಕುಗಳು ಮೂಡುತ್ತಿವೆ. ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿಗಳ ವಾಣಿಜ್ಯೀಕರಣಗಳೂ ಈ ಸಮಸ್ಯೆಗೆ ಪರೋಕ್ಷವಾಗಿ ಕಾರಣವೆನಿಸಿವೆ. ಇವೆಲ್ಲಾ ಕಾರಣಗಳಿಂದಾಗಿ ರೋಗಿಗಳು ಮತ್ತು ವೈದ್ಯರ ನಡುವೆ ಪರಸ್ಪರ ಪ್ರೀತಿ,ವಿಶ್ವಾಸಗಳ ಬದಲಾಗಿ ಸಂದೇಹ ಮತ್ತು ಅವಿಶ್ವಾಸಗಳು ಕಂಡುಬರುತ್ತಿವೆ. ಈ ಅನಪೇಕ್ಷಿತ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿದಲ್ಲಿ, " ವೈದ್ಯರ ದಿನ " ದ ಆಚರಣೆಯು ಇನ್ನಷ್ಟು ಅರ್ಥಪೂರ್ಣವೆನಿಸಲಿದೆ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



DOCTORS DAY




  ಜುಲೈ ೧, ರಾಷ್ಟ್ರೀಯ ವೈದ್ಯರ ದಿನ - ವೈದ್ಯ ಬಾಂಧವರಿಗೆ ನಮನಗಳನ್ನು ಸಲ್ಲಿಸುವ ದಿನ 

ಬಡವ ಬಲ್ಲಿದರೆನ್ನುವ ಭೇದಭಾವವಿಲ್ಲದೇ, ಹಗಲು- ಇರುಳುಗಳೆನ್ನುವ ಮತ್ತು ಹೊತ್ತುಗೊತ್ತಿನ ಪರಿವೆಯಿಲ್ಲದೇ, ಸದಾ ನಿಮ್ಮ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುವ ವೈದ್ಯರಿಗೆ ನೀವು ಕೃತಜ್ಞತೆಗಳನ್ನು ಸಮರ್ಪಿಸುವ ದಿನವೇ " ರಾಷ್ಟ್ರೀಯ ವೈದ್ಯರ ದಿನ". ನಿಮ್ಮನ್ನು ಪೀಡಿಸುವ ಸಣ್ಣಪುಟ್ಟ ಅಥವಾ ಗಂಭೀರ ಆರೋಗ್ಯದ ಸಮಸ್ಯೆಗಳನ್ನು ನಿಖರವಾಗಿ ಪತ್ತೆಹಚ್ಚಿ, ಸೂಕ್ತ ಔಷದಗಳನ್ನು ನೀಡುವುದರೊಂದಿಗೆ ನಿಮ್ಮನ್ನು ಸಾಂತ್ವನಿಸಿ ಧೈರ್ಯ ತುಂಬುವ, ನಿಮ್ಮ ಚಿರಪರಿಚಿತ ವೈದ್ಯರಿಗೆ ನಮನಗಳನ್ನು ಸಲ್ಲಿಸಲು ವೈದ್ಯರ ದಿನ ಅತ್ಯಂತ ಪ್ರಶಸ್ತವಾಗಿದೆ. ವಿಶ್ವದ ಅಧಿಕತಮ ರಾಷ್ಟ್ರಗಳಲ್ಲಿ ವೈದ್ಯರ ದಿನದಂದು ಆಯೋಜಿಸುವ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ, ವೈದ್ಯರ ಸೇವೆಯನ್ನು ಸ್ಮರಿಸಿ ಕೃತಜ್ಞತೆಗಳನ್ನು ಸಲ್ಲಿಸಲಾಗುತ್ತದೆ. 

ಹಿನ್ನೆಲೆ 

ಜಾಗತಿಕ ಮಟ್ಟದಲ್ಲಿ ಮೊತ್ತ ಮೊದಲಬಾರಿಗೆ "ವೈದ್ಯರ ದಿನ " ವನ್ನು ಮಾರ್ಚ್ ೩೦, ೧೯೩೩ ರಲ್ಲಿ ಆಚರಿಸಲಾಗಿತ್ತು. ಖ್ಯಾತ ವೈದ್ಯ ಚಾರ್ಲ್ಸ್.ಬಿ.ಆಲ್ಮಂಡ್ ಇವರ ಪತ್ನಿ ಇ.ಬಿ.ಆಲ್ಮಂಡ್ ಇವರು, ವೈದ್ಯರನ್ನು ಗೌರವಿಸುವ ಸಲುವಾಗಿ ವರ್ಷದಲ್ಲಿ ಕನಿಷ್ಠ ಒಂದು ದಿನವನ್ನು ಮೀಸಲಿಡಬೇಕು ಎಂದು ನಿರ್ಧರಿಸಿದಂತೆ ಇದನ್ನು ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯರಿಗೆ ಶುಭಾಶಯ ಪತ್ರಗಳನ್ನು ಕಳುಹಿಸುವ ಅಥವಾ ಹೇಳುವ ಮತ್ತು ವಿಧಿವಶರಾಗಿರುವ ಖ್ಯಾತ ವೈದ್ಯರ ಸಮಾಧಿಗಳ ಮೇಲೆ ಪುಷ್ಪಗುಚ್ಛಗಳನ್ನು ಇರಿಸುವ ಮೂಲಕ ಗೌರವಿಸಲಾಗುತ್ತಿತ್ತು. 

ತದನಂತರ ಅಮೇರಿಕ ದೇಶದ ಜನಪ್ರತಿನಿಧಿಗಳು ೧೯೫೮ ರ ಮಾರ್ಚ್ ೩೦ ರಂದು ವೈದ್ಯರ ದಿನವನ್ನು ಆಚರಿಸುವ ನಿರ್ಣಯವೊಂದನ್ನು ಅಂಗೀಕರಿಸಿದ್ದರು. ಜಾರ್ಜ್ ಬುಶ್ ಅಮೇರಿಕ ದೇಶದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ವರ್ಷಂಪ್ರತಿ ಮಾರ್ಚ್ ೩೦ ರಂದು ವೈದ್ಯರ ದಿನವನ್ನಾಗಿ ಆಚರಿಸುವ ವಿಧೇಯಕಕ್ಕೆ ಅಕ್ಟೋಬರ್ ೩೦, ೧೯೯೦ ರಂದು ಸಹಿ ಹಾಕಿದ್ದು, ೧೯೯೧ ರಿಂದ ಇದು ಜಾರಿಗೊಂಡಿತ್ತು. 

ನಿಜ ಹೇಳಬೇಕಿದ್ದಲ್ಲಿ ಮಾರ್ಚ್ ೩೦ ರಂದು ವೈದ್ಯರ ದಿನವನ್ನು ಆಚರಿಸಲು ನಿರ್ದಿಷ್ಟ ಕಾರಣವೊಂದು ಇಂತಿದೆ. ಡಾ.ಕ್ರಾಫರ್ಡ್ ಲಾಂಗ್ ಎನ್ನುವ ವೈದ್ಯರು ೧೮೪೨ ರ ಮಾರ್ಚ್ ೩೦ ರಂದು ಮೊತ್ತ ಮೊದಲಬಾರಿಗೆ ಈಥರ್ ಎನ್ನುವ ಅರಿವಳಿಕೆ ಔಷದವೊಂದನ್ನು ಬಳಸಿ,ರೋಗಿಯೊಬ್ಬನ ಕುತ್ತಿಗೆಯ ಭಾಗದಲ್ಲಿದ್ದ ಗಡ್ದೆಯೊಂದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದ್ದರು. ಈ ಸಂದರ್ಭದಲ್ಲಿ ತನಗೆ ಕಿಂಚಿತ್ ಕೂಡಾ ನೋವಿನ ಅನುಭವ ಆಗಿರಲಿಲ್ಲವೆಂದು ರೋಗಿಯು ಹೇಳಿದ್ದನು. ನೋವಿಲ್ಲದೆ ಶಸ್ತ್ರಚಿಕಿತ್ಸೆಯನ್ನು ಮಾಡಬಹುದಾದ ವಿಧಾನ ಹಾಗೂ ಔಷದವನ್ನು ಕಂಡುಹಿಡಿದು ಬಳಸಿದ್ದ ಈ ದಿನವನ್ನು, ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ವೈದ್ಯರ ದಿನವನ್ನಾಗಿ ಇಂದಿಗೂ ಆಚರಿಸಲಾಗುತ್ತಿದೆ. 

ಡಾ.ಬಿ.ಸಿ.ರಾಯ್ ಜನ್ಮ ದಿನ 

ಭಾರತದಲ್ಲಿ ೧೯೯೧ ರಿಂದ ಜುಲೈ ೧ ರಂದು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಾನ್ ಮೇಧಾವಿ, ಅಪ್ರತಿಮ ವೈದ್ಯ, ಸ್ವಾತಂತ್ರ್ಯ ಹೋರಾಟಗಾರ, ಚತುರ ರಾಜಕಾರಣಿ, ಶಿಕ್ಷಣ ತಜ್ಞ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ ಆಗಿದ್ದ ಡಾ.ಬಿದಾನ್ ಚಂದ್ರ ರಾಯ್, ಇವರ ಜನ್ಮ ದಿನವನ್ನು ನಮ್ಮ ದೇಶದಲ್ಲಿ "ರಾಷ್ಟ್ರೀಯ ವೈದ್ಯರ ದಿನ " ವನ್ನಾಗಿ ಆಚರಿಸುವ ಮೂಲಕ ಈ ಧೀಮಂತ ವ್ಯಕ್ತಿಗೆ ಮತ್ತು ವೈದ್ಯ ಸಮುದಾಯಕ್ಕೆ ಗೌರವ ಮತ್ತು ಕೃತಜ್ಞತೆಗಳನ್ನು ಸಲ್ಲಿಸಲಾಗುತ್ತದೆ. 

ಬಿಹಾರದ ಪಾಟ್ನಾದಲ್ಲಿ ೧೮೮೨ ರ ಜುಲೈ ೧ ರಂದು ಜನಿಸಿದ್ದ ಡಾ.ರಾಯ್, ಕೊಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ ಬಳಿಕ ಲಂಡನ್ ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಗಳಿಸಿದ್ದರು. ಬಳಿಕ ೧೯೧೧ ರಲ್ಲಿ ಭಾರತಕ್ಕೆ ಮರಳಿ, ಕೊಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಲು ಆರಂಭಿಸಿದ್ದರು. 

ಮಹಾತ್ಮಾ ಗಾಂಧಿಯವರ ನೇತ್ರತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮದಿಂದ ಪ್ರಭಾವಿತರಾಗಿ ಇದರಲ್ಲಿ ಪಾಲ್ಗೊಂಡ ಡಾ.ರಾಯ್,ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ೧೪ ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿದ್ದರು. ಅನೇಕ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ಆರಂಭಿಸಿದ್ದ ಡಾ.ಬಿ.ಸಿ.ರಾಯ್, ಕೇವಲ ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲ,ರಾಜಕೀಯ ಕ್ಷೇತ್ರದಲ್ಲೂ ಅಸಾಧಾರಣ ಸಾಧನೆಗಳನ್ನು ಮಾಡಿದ್ದರು. ಇವರ ಅನನ್ಯ ಸಾಧನೆಗಳನ್ನು ಗುರುತಿಸಿದ ಭಾರತ ಸರ್ಕಾರವು ಇವರಿಗೆ "ಭಾರತ ರತ್ನ " ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಸುದೀರ್ಘಕಾಲ ಜನಸೇವೆ ಮಾಡಿದ್ದ ಡಾ.ರಾಯ್, ೧೯೬೨ ರ ಜುಲೈ ೧ ರಂದು ಅರ್ಥಾತ ತಮ್ಮ ಜನ್ಮದಿನದಂದೇ ವಿಧಿವಶರಾಗಿದ್ದರು. ಇವರ ಸ್ಮರಣಾರ್ಥ ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸಿದ - ಸಾಧನೆಯನ್ನು ಮಾಡಿದ ವೈದ್ಯರಿಗೆ ೧೯೭೬ ರಿಂದ, ರಾಷ್ಟ್ರೀಯ ವೈದ್ಯರ ದಿನದಂದು ಡಾ.ಬಿ.ಸಿ.ರಾಯ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು  


Thursday, June 26, 2014

Street dogs and rabies





 ಬೀದಿನಾಯಿಗಳ ಕಾಟ : ಜನರಿಗೆ ಪ್ರಾಣಸಂಕಟ 

ನಮ್ಮ ರಾಜ್ಯದಲ್ಲಿ ಬೀದಿನಾಯಿಗಳ ಮಾರಕ ದಾಳಿಗೆ ಹಲವಾರು ಮಕ್ಕಳು ಬಲಿಯಾದ ಘಟನೆಗಳನ್ನು ಬಹುತೇಕ ಜನರು ಈಗಾಗಲೇ ಮರೆತುಬಿಟ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳು ವರ್ಷಂಪ್ರತಿ ನಡೆಸುತ್ತಿದ್ದ "ಶ್ವಾನ ಸಂಹಾರ " ವನ್ನು ನಿಲ್ಲಿಸಿದ ಬಳಿಕ, ಬೀದಿನಾಯಿಗಳ ಸಂತತಿ ಅನಿಯಂತ್ರಿತವಾಗಿ ವೃದ್ಧಿಸಿರುವುದೇ ಇದಕ್ಕೆ ಕಾರಣವೆಂದು ಜನಸಾಮಾನ್ಯರು ದೂರುತ್ತಾರೆ. ಆದರೆ ತಾವು ಸಾಕಿದ ಹೆಣ್ಣು ನಾಯಿಯು ಮರಿ ಹಾಕಿದ ಬಳಿಕ, ಇವುಗಳಲ್ಲಿನ ಹೆಣ್ಣು ಮರಿಗಳನ್ನು ಬೀದಿಪಾಲು ಮಾಡುವ ಹಾಗೂ ಬೀದಿನಾಯಿಗಳಿಗೆ ತಮ್ಮಲ್ಲಿ ಉಳಿದಿರುವ ಆಹಾರವನ್ನು ನೀಡಿ ಸಲಹುವ ನಾಗರಿಕರೂ, ಈ ಸಮಸ್ಯೆಗೆ ನೇರವಾಗಿ ಹೊಣೆಗಾರರು ಎಂದಲ್ಲಿ ತಪ್ಪೆನಿಸಲಾರದು. ಅಂತೆಯೇ, ತಾವು ಸಾಕಿದ ಹೆಣ್ಣು ನಾಯಿಗೆ ಪಶುವೈದ್ಯರ ಸಲಹೆಯನ್ನು ಪಡೆದು ಸಂತತಿ ನಿಯಂತ್ರಣಕ್ಕೆ ಉಪಯುಕ್ತವೆನಿಸುವ ಮಾತ್ರೆಗಳನ್ನು ನೀಡದ ಜನರ ಬೇಜವಾಬ್ದಾರಿಯೂ, ಬೀದಿನಾಯಿಗಳ ಸಂತತಿ ಹೆಚ್ಚುತ್ತಿರಲು ಮತ್ತೊಂದು ಪ್ರಮುಖ ಕಾರಣವೆನಿಸಿದೆ. 

ಅದೇನೇ ಇರಲಿ, ಭಾರತದಲ್ಲಿ ಸುಮಾರು ೨೫ ರಿಂದ ೩೦ ಲಕ್ಷ ಬೀದಿನಾಯಿಗಳು ಇವೆ ಎಂದು ಅಂದಾಜು ಮಾಡಲಾಗಿದ್ದು, ವರ್ಷಂಪ್ರತಿ ಸುಮಾರು ೩೦ ರಿಂದ ೫ ಲಕ್ಷಕ್ಕೂ ಅಧಿಕ ಜನರು "ನಾಯಿಕಡಿತ " ಕ್ಕೆ ಒಳಗಾಗುತ್ತಾರೆ. ಅದೇ ರೀತಿಯಲ್ಲಿ ವಿಶ್ವಾದ್ಯಂತ " ಹುಚ್ಚುನಾಯಿ" ಗಳ ಕಡಿತದಿಂದಾಗಿ ಉದ್ಭವಿಸುವ ಮಾರಕ "ರೇಬೀಸ್" ಕಾಯಿಲೆಗೆ ಬಲಿಯಾಗುತ್ತಿರುವ ಶೇ.೫೦ ರಷ್ಟು ಜನರು ಭಾರತೀಯರೇ ಆಗಿದ್ದಾರೆ ಎನ್ನುವ ವಿಚಾರ ಪ್ರಾಯಶಃ ನಿಮಗೂ ತಿಳಿದಿರಲಾರದು. ಏಕೆಂದರೆ ಪುಟ್ಟ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದರೂ, ಹುಚ್ಚುನಾಯಿ ಕಡಿತದಿಂದ ಮೃತಪಟ್ಟವರ ಬಗ್ಗೆ ಮಾಧ್ಯಮಗಳಲ್ಲಿ ಅವಶ್ಯಕ ಅಂಕಿಅಂಶಗಳು ಪ್ರಕಟವಾಗುವುದಿಲ್ಲ. 

ಪರಿಹಾರ ಕಾಣದ ಸಮಸ್ಯೆ 

ಹಲವಾರು ವರ್ಷಗಳ ಹಿಂದೆ ಪ್ರಾಣಿದಯಾ ಸಂಘಗಳ ತೀವ್ರ ಪ್ರತಿಭಟನೆಯಿಂದಾಗಿ ದೇಶಾದ್ಯಂತ ಸ್ಥಳೀಯ ಸಂಸ್ಥೆಗಳು ಕನಿಷ್ಠ ವರ್ಷದಲ್ಲಿ ಒಂದುಬಾರಿ ನಡೆಸುತ್ತಿದ್ದ ಬೀದಿನಾಯಿಗಳ ಸಾಮೂಹಿಕ ಸಂಹಾರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು. ಬೀದಿನಾಯಿಗಳ ಸಂತತಿ ಅನಿಯಂತ್ರಿತವಾಗಿ ಹೆಚ್ಚಲು ಇದೊಂದು ಪ್ರಮುಖ ಕಾರಣವೆನಿಸಿತ್ತು. 

ಬೀದಿನಾಯಿಗಳ ಸಂಖ್ಯೆಯೊಂದಿಗೆ ರೇಬೀಸ್ ಕಾಯಿಲೆಯನ್ನು ನಿಯಂತ್ರಿಸಬಲ್ಲ ಯೋಜನೆಗಳನ್ನು ಸರ್ಕಾರ- ಸ್ಥಳೀಯ ಸಂಸ್ಥೆಗಳು ಅನುಷ್ಠಾನಿಸುವುದು ಸುಲಭಸಾಧ್ಯವೇನಲ್ಲ. ಜೊತೆಗೆ ನಾಗರಿಕರ ಪರಿಪೂರ್ಣ ಸಹಕಾರವಿಲ್ಲದೇ ಇಂತಹ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆಗಳೂ ಇಲ್ಲ. 

ನಿಜ ಹೇಳಬೇಕಿದ್ದಲ್ಲಿ ಬೀದಿನಾಯಿಗಳ ಸಂತತಿ ನಿಯಂತ್ರಣದ ಕಾರ್ಯಕ್ರಮದ ಅನುಷ್ಠಾನವು ದುಬಾರಿ ಹಾಗೂ ಕಷ್ಟಸಾಧ್ಯವಾಗಿದೆ. ಬೀದಿನಾಯಿಗಳಿಗೆ ಪ್ರತಿವರ್ಷ ರೇಬೀಸ್ ನಿರೋಧಕ ಚುಚ್ಚುಮದ್ದನ್ನು ನೀಡುವುದು ಅಸಾಧ್ಯವೂ ಹೌದು. ಇದೇ ಕಾರಣದಿಂದಾಗಿ ರೇಬೀಸ್ ವ್ಯಾಧಿಯನ್ನು ತದೆಗತ್ತುವುದೂ ಕಷ್ಟಸಾಧ್ಯ. ಇದರೊಂದಿಗೆ ಅನೇಕ ಜನರು ತಾವು ಸಾಕಿರುವ ನಾಯಿಗಳಿಗೆ ಈ ಚುಚ್ಚುಮದ್ದನ್ನು ಕೊಡಿಸದೇ ಇರುವುದು ಕೂಡಾ ಈ ವ್ಯಾಧಿಯ ಹರಡುವಿಕೆಗೆ ಕಾರಣವೆನಿಸುತ್ತಿದೆ. ಈ ಕಾಯಿಲೆಗೆ ಅಸಂಖ್ಯ ಜನರು ಬಲಿಯಾಗುತ್ತಿರಲು, ಜನಸಾಮಾನ್ಯರ ಅಜ್ನಾನದೊಂದಿಗೆ ರೇಬೀಸ್ ಪ್ರತಿರೋಧಕ ಲಸಿಕೆಯ ದುಬಾರಿ ಬೆಲೆಯೂ ಕಾರಣವೆನಿಸಿದೆ. 


 ನಿಜ ಹೇಳಬೇಕಿದ್ದಲ್ಲಿ ಯಾವುದೇ ನಾಯಿ ಕಚ್ಚಿದರೂ ರೇಬೀಸ್ ನಿರೋಧಕ ಚುಚ್ಚುಮದ್ದನ್ನು ಪಡೆದುಕೊಳ್ಳುವುದು ನಿಶ್ಚಿತವಾಗಿಯೂ ಜೀವರಕ್ಷಕ ಎನಿಸುವುದು. ಕಾರಣಾಂತರಗಳಿಂದ ಚುಚ್ಚುಮದ್ದನ್ನು ಪಡೆಯದೇ ರೇಬೀಸ್ ವ್ಯಾಧಿ ಉದ್ಭವಿಸಿದಲ್ಲಿ, ರೋಗಿಯು ಬದುಕಿ ಉಳಿಯುವ ಸಾಧ್ಯತೆಗಳೇ ಇರುವುದಿಲ್ಲ. ಏಕೆಂದರೆ ರೇಬೀಸ್ ಕಾಯಿಲೆ ಉದ್ಭವಿಸಿದ ಬಳಿಕ, ಇದನ್ನು ಗುಣಪಡಿಸಬಲ್ಲ ಔಷದಗಳೇ ಲಭ್ಯವಿಲ್ಲ. ಆದರೂ ಈ ಕಾಯಿಲೆಯನ್ನು ಗುಣಪಡಿಸುವುದಾಗಿ ಹೇಳುವ ಹಾಗೂ ಗಿಡಮೂಲಿಕೆಗಳಿಂದ ತಯಾರಿಸಿದ "ಹಳ್ಳಿ ಮದ್ದು" ಪ್ರಯೋಗಿಸಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರ ಸಂಖ್ಯೆಯೂ ಕಡಿಮೆಯೇನಿಲ್ಲ!. ಇದೇ ಕಾರಣದಿಂದಾಗಿ ಮಾರಕ ರೇಬೀಸ್ ವ್ಯಾಧಿಯನ್ನು ತಡೆಗಟ್ಟಲು " ರೇಬೀಸ್ ನಿರೋಧಕ ವ್ಯಾಕ್ಸೀನ್" ಚುಚ್ಚುಮದ್ದನ್ನು ಹೊರತುಪಡಿಸಿ, ಅನ್ಯ ಚಿಕಿತ್ಸೆಗಳನ್ನು ಪ್ರಯೋಗಿಸುವುದು ನಿಶ್ಚಿತವಾಗಿಯೂ ರೋಗಿಯ ಮರಣಕ್ಕೆ ಕಾರಣವೆನಿಸಬಲ್ಲದು. 

ಮಾರಕ ರೇಬೀಸ್ 

ಸಾಮಾನ್ಯವಾಗಿ ಹುಚ್ಚು ನಾಯಿ ( ಹಾಗೂ ಇತರ ಕೆಲ ಪ್ರಾಣಿಗಳ ) ಕಡಿತದಿಂದ ಉದ್ಭವಿಸುವ ಭಯಾನಕ ಹಾಗೂ ಮಾರಕ ರೇಬೀಸ್ ಕಾಯಿಲೆಯನ್ನು ಕ್ರಿ.ಪೂ. ೩೦೦ ರಲ್ಲೇ ಅರಿಸ್ಟಾಟಲ್ ಗುರುತಿಸಿದ್ದರು. ಅಂತೆಯೇ ರೇಬೀಸ್ ನಿರೋಧಕ ಚುಚ್ಚುಮದ್ದನ್ನು ಲೂಯಿ ಪ್ಯಾಶ್ಚರ್ ೧೮೮೫ ರಲ್ಲಿ ಮೊದಲ ಬಾರಿಗೆ ಆಲ್ಬರ್ಟ್ ಮೈಸ್ಟರ್ ಎನ್ನುವ ವ್ಯಕ್ತಿಯ ಮೇಲೆ ಪ್ರಯೋಗಿಸಿದ್ದರು. ಈ ಚುಚ್ಚುಮದ್ದಿನ ಪರಿಣಾಮವಾಗಿ ರೇಬೀಸ್ ಕಾಯಿಲೆಯಿಂದ ಪಾರಾಗಿದ್ದ ಆಲ್ಬರ್ಟ್, ೧೯೪೦ ರ ತನಕ ಪ್ಯಾಸ್ಚರ್ ಇನ್ಸ್ಟಿಟ್ಯೂಟ್ ನ ಉದ್ಯೋಗಿಯಾಗಿದ್ದರು. 

ಸಾಮಾನ್ಯವಾಗಿ ಹುಚ್ಚುನಾಯಿ ಕಚ್ಚಿದ ಬಳಿಕ ರೇಬೀಸ್ ವ್ಯಾಧಿಯ ಲಕ್ಷಣಗಳು ಪ್ರತ್ಯಕ್ಷವಾಗಲು ಕೆಲವಾರು ದಿನಗಳಿಂದ ಹಿಡಿದು ಹಲವಾರು ತಿಂಗಳುಗಳೇ ತಗಲಬಹುದು. ಆದರೆ ಕಚ್ಚಿದ ನಾಯಿಯು ನಿಶ್ಚಿತವಾಗಿಯೂ ರೇಬೀಸ್ ಪೀಡಿತವಾಗಿದ್ದಲ್ಲಿ, ೭ ರಿಂದ ೧೦ ದಿನಗಳಲ್ಲಿ ನಿಸ್ಸಂದೇಹವಾಗಿಯೂ ಸಾಯುವುದು. 

ವ್ಯಾಧಿಪೀಡಿತ ನಾಯಿಯ ಜೊಲ್ಲಿನ ಮೂಲಕ ಹರಡುವ ವೈರಸ್ ಗಳು, ಕಡಿತಕ್ಕೆ ಒಳಗಾದ ಮನುಷ್ಯ ಅಥವಾ ಪ್ರಾಣಿಯ ಮೆದುಳು ಮತ್ತು ನರಮಂಡಲಗಳಿಗೆ ತೀವ್ರ ಸ್ವರೂಪದ ಹಾನಿಯನ್ನು ಉಂಟುಮಾಡುತ್ತವೆ. ಸೋಂಕು ಪೀಡಿತ ವ್ಯಕ್ತಿಗೆ ಪ್ರಾರಂಭಿಕ ಹಂತದಲ್ಲಿ ಜ್ವರ ಹಾಗೂ ಮೈಕೈ ನೋವುಗಳಂತಹ ಲಕ್ಷಣಗಳು ಕಂಡುಬರುತ್ತವೆ. ಮುಂದಿನ ಹಂತದಲ್ಲಿ ತೀವ್ರ ಜ್ವರ, ಮಾನಸಿಕ ಗೊಂದಲ ಹಾಗೂ ನಾಯಿ ಕಚ್ಚಿದ ಭಾಗದಲ್ಲಿ ನೋವು ಮತ್ತು ಚುಚ್ಚಿದಂತಹ ಸಂವೇದನೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ. 

ರೇಬೀಸ್ ರೋಗ ಲಕ್ಷಣಗಳು ಹುಚ್ಚುನಾಯಿ ಕಡಿತಕ್ಕೆ ಒಳಗಾದ ೧ ರಿಂದ ೮ ವಾರಗಳಲ್ಲಿ ತಲೆದೋರುತ್ತವೆ. ರೇಬೀಸ್ ವ್ಯಾಧಿಯನ್ನು ತಡೆಗಟ್ಟಬಲ್ಲ ವ್ಯಾಕ್ಸೀನ್ ಗಳನ್ನು ಹುಚ್ಚುನಾಯಿ ಕಚ್ಚಿದ ಕೂಡಲೇ ಪಡೆದುಕೊಳ್ಳದೇ ಇದ್ದಲ್ಲಿ, ರೇಬೀಸ್ ಉದ್ಭವಿಸಿ ಉಲ್ಬಣಿಸುವುದರಿಂದ ರೋಗಿಯು ದಾರುಣವಾಗಿ ಮೃತಪಡುವುದರಲ್ಲಿ ಸಂದೇಹವಿಲ್ಲ. ಶಾಲಾ ವಿದ್ಯಾರ್ಥಿಗಳಿಗೂ ತಿಳಿದಿರುವ ಈ ವಿಚಾರದ ಬಗ್ಗೆ ಸಾಕಷ್ಟು ಜನರ ಮನದಲ್ಲಿ ಅನೇಕ ರೀತಿಯ ತಪ್ಪು ಕಲ್ಪನೆಗಳಿವೆ. 

ರೇಬೀಸ್ ರೋಗ ಉಲ್ಬಣಿಸಿದ ಸಂದರ್ಭದಲ್ಲಿ ರೋಗಪೀಡಿತ ವ್ಯಕ್ತಿಯಲ್ಲಿ "ಹೈಡ್ರೋಫೋಬಿಯಾ " ಅರ್ಥಾತ್ ನೀರಿನ ಭಯ ದೊಂದಿಗೆ ಇನ್ನಿತರ ರೋಗ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಹಾಗೂ ವ್ಯಾಧಿ ಉದ್ಭವಿಸಿದ ಕೆಲವೇ ದಿನಗಳಲ್ಲಿ ರೋಗಿ ಮೃತಪಡುತ್ತಾನೆ. 


ರೇಬಿಸ್ ನಿಂದ ರಕ್ಷಣೆ 

ರೇಬಿಸ್ ಕಾಯಿಲೆಯಿಂದ ಮನುಷ್ಯನನ್ನು ರಕ್ಷಿಸಬಲ್ಲ ಲಸಿಕೆಗಳು ನಮ್ಮ ದೇಶದಲ್ಲಿ ಲಭ್ಯವಿದೆ. ಯಾವುದೇ ನಾಯಿ ಕಚ್ಚಿದ ಅಥವಾ ಪರಚಿದ ಸಂದರ್ಭದಲ್ಲಿ ಉಂಟಾದ ಗಾಯವನ್ನು ಸಾಬೂನು ಮತ್ತು ಅಯೋಡಿನ್ ಯುಕ್ತ ಕ್ರಿಮಿನಾಶಕ ದ್ರಾವನದಿಂದ ತೊಳೆದು ಶುಚಿಗೊಳಿಸಬೇಕು. ಬಳಿಕ ವೈದ್ಯರನ್ನು ಸಂದರ್ಶಿಸಿ, ಒಂದು ಟೆಟನಸ್ ಟಾಕ್ಸಾಯ್ದ್ ಇಂಜೆಕ್ಷನ್, ಒಂದು ಇಮ್ಮ್ಯುನೋಗ್ಲೋಬ್ಯುಲಿನ್ ಮತ್ತು ರೇಬಿಸ್ ಪ್ರತಿರೋಧಕ ಇಂಜೆಕ್ಷನ್ ಗಳನ್ನು ಆದಷ್ಟು ಶೀಘ್ರ ಪಡೆದುಕೊಳ್ಳಬೇಕು. ನಿಗದಿತ ದಿನಗಳಲ್ಲಿ ಮೂರು ರೇಬಿಸ್ ಪ್ರತಿರೋಧಕ ಇಂಜೆಕ್ಷನ್ ಪಡೆದುಕೊಂಡ ಬಳಿಕವೂ ಕಚ್ಚಿದ ನಾಯಿ ಬದುಕಿ ಉಳಿದಲ್ಲಿ ಚಿಕಿತ್ಸೆಯನ್ನು ನಿಲ್ಲಿಸಬಹುದು. ಆದರೆ ಬೀದಿನಾಯಿಗಳು ಕಚ್ಚಿದಲ್ಲಿ ಐದು ಚುಚ್ಚುಮದ್ದುಗಳನ್ನು ಪಡೆದುಕೊಳ್ಳುವುದು ಸುರಕ್ಷಿತ ಹಾಗೂ ಜೀವರಕ್ಷಕವೆನಿಸುವುದು. 

ರೇಬಿಸ್ ನಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಮೂರು ರೇಬಿಸ್ ಇಂಜೆಕ್ಷನ್ ಪಡೆದಿರುವವರು, ಆಕಸ್ಮಿಕವಾಗಿ ನಾಯಿಕಡಿತಕ್ಕೆ ಈಡಾದಲ್ಲಿ ಇಮ್ಮ್ಯುನೋಗ್ಲೋಬ್ಯುಲಿನ್ ಇಂಜೆಕ್ಷನ್ ಪಡೆಯಬೇಕಿಲ್ಲ. ಜೊತೆಗೆ ಐದು ರೇಬಿಸ್ ಪ್ರತಿರೋಧಕ ಇಂಜೆಕ್ಷನ್ ಗಳಿಗೆ ಬದಲಾಗಿ, ಕೇವಲ ಎರಡು ಇಂಜೆಕ್ಷನ್ ಗಳನ್ನು ಪಡೆದುಕೊಂಡರೆ ಸಾಕಾಗುತ್ತದೆ. 

ಇವೆಲ್ಲಕ್ಕೂ ಮಿಗಿಲಾಗಿ ತಾವು ಸಾಕಿದ ನಾಯಿಗಳಿಗೆ ವರ್ಷಂಪ್ರತಿ ತಪ್ಪದೇ ರೇಬಿಸ್ ನಿರೋಧಕ ಇಂಜೆಕ್ಷನ್ ಕೊಡಿಸಿದಲ್ಲಿ, ಈ ವ್ಯಾಧಿಯ ಹಾವಳಿಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸಬಹುದಾಗಿದೆ. ಇದರೊಂದಿಗೆ ಮನೆಮಂದಿಯೆಲ್ಲರೂ ಈ ವ್ಯಾಧಿಯಿಂದ ರಕ್ಷಣೆಯನ್ನು ಪಡೆಯಲು ಮೂರು ರೇಬಿಸ್ ಪ್ರತಿರೋಧಕ ಇಂಜೆಕ್ಷನ್ ಗಳನ್ನು ಪಡೆದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ಉಪಕ್ರಮವೆನಿಸುವುದು. 

ಕೆಲ ದಶಕಗಳ ಹಿಂದೆ ನಮ್ಮ ದೇಶದಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿದ್ದ, ರೋಗಿಗಳ ಹೊಕ್ಕುಳಿನ ಸುತ್ತಲೂ ಚುಚ್ಚಲಾಗುತ್ತಿದ್ದೆ " ಸೆಂಪಲ್ ವ್ಯಾಕ್ಸೀನ್" ಅನ್ನು ಕೆಲ ವರ್ಷಗಳ ಹಿಂದೆ ನಿಷೇಧಿಸಲಾಯಿತು. ಏಕೆಂದರೆ ಈ ಲಸಿಕೆಯ ಅಡ್ಡ ಹಾಗೂ ದುಷ್ಪರಿಣಾಮಗಳಿಂದಾಗಿ ಮತ್ತು ತೀವ್ರ ಸ್ವರೂಪದ ಪ್ರತಿಕ್ರಿಯೆಗಳಿಂದಾಗಿ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದರು. ಇದೇ ಕಾರಣದಿಂದಾಗಿ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ಪರಿಣಾಮವಾಗಿ, ಈ ವ್ಯಾಕ್ಸೀನ್ ನ ಬಳಕೆಯನ್ನೇ ನಿಷೇಧಿಸಲಾಗಿತ್ತು. 

ಇದೀಗ ಬಳಕೆಯಲ್ಲಿರುವ " ಸೆಲ್ ಕಲ್ಚರ್ ವ್ಯಾಕ್ಸೀನ್" ಸುರಕ್ಷಿತವೆನಿಸಿದ್ದರೂ, ತುಸು ದುಬಾರಿಯಾಗಿರುವುದರಿಂದ ಬಡವರಿಗೆ ಹೊರೆಯಾಗಿ ಪರಿಣಮಿಸುತ್ತಿದೆ. ಆದರೆ ಇದನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿರುವ ವ್ಯಾಕ್ಸೀನ್ ಚರ್ಮದ ಪದರಕ್ಕೆ ಚುಚ್ಚಬಹುದಾಗಿದ್ದು, ಇದರ ಪ್ರಮಾಣವೂ ಅತ್ಯಂತ ಕಡಿಮೆಯಾಗಿದೆ. ತತ್ಪರಿಣಾಮವಾಗಿ ಒಂದು ವ್ಯಾಕ್ಸೀನ್ ನನ್ನು ಹಲವಾರು ರೋಗಿಗಳಿಗೆ ನೀಡಬಹುದಾಗಿದೆ. 

ಕೊನೆಯ ಮಾತು 

ನೀವು ಸಾಕಿರುವ ಹೆಣ್ಣು ನಾಯಿಗೆ ವರ್ಷಂಪ್ರತಿ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ತಪ್ಪದೇ ಕೊಡಿಸಿ. ಜೊತೆಗೆ ಪಶುವೈದ್ಯರ ಸಲಹೆಯನ್ನು ಪಡೆದು ಗರ್ಭ ನಿರೋಧಕ ಮಾತ್ರೆಗಳನ್ನು ನೀಡುವ ಮೂಲಕ, ಅನಾವಶ್ಯಕ ಗರ್ಭಧಾರಣೆಯನ್ನು ತಡೆಗಟ್ಟಿ. ಇಂತಹ ಉಪಕ್ರಮಗಳಿಂದ ರೇಬಿಸ್ ವ್ಯಾಧಿಯನ್ನು ಮತ್ತು ಬೀದಿನಾಯಿಗಳ ಸಂಖ್ಯೆಯನ್ನು ನಿಶ್ಚಿತವಾಗಿಯೂ ತಡೆಗಟ್ಟಬಹುದಾಗಿದೆ. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೮-೧೧-೨೦೦೭ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 


Saturday, June 21, 2014

IODINE DEFICIENCY




 ಹಸುಗೂಸುಗಳನ್ನು ಬಾಧಿಸುವ ಅಯೋಡಿನ್ ಕೊರತೆ 

ತಾಯಿಯ ಎದೆಹಾಲು ಹಸುಗೂಸುಗಳ ಆರೋಗ್ಯದ ದೃಷ್ಟಿಯಿಂದ ಅಮೃತದಂತೆ ಪರಿಣಮಿಸುತ್ತದೆ ಎನ್ನುವುದು ನಿಮಗೂ ತಿಳಿದಿರಲೇಬೇಕು. ಆದರೆ ತಾಯಿಯ ಹಾಲಿನಲ್ಲಿ ಇರಬಹುದಾದ ರಾಸಾಯನಿಕವೊಂದು, ಪುಟ್ಟ ಕಂದನ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು ಎನ್ನುವ ವಿಚಾರ ನಿಮಗೂ ತಿಳಿದಿರಲಾರದು. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 

ಹಲವಾರು ವರ್ಷಗಳ ಹಿಂದೆ ಜನಸಾಮಾನ್ಯರು ಬಳಸುತ್ತಿದ್ದ ಸಾಮಾನ್ಯ ಅಡುಗೆ ಉಪ್ಪಿನ ಬದಲಾಗಿ,ಅಯೋಡಿನ್ ಮಿಶ್ರಿತ ಉಪ್ಪನ್ನೇ ಕಡ್ಡಾಯವಾಗಿ ಮಾರಾಟ ಮಾಡುವಂತೆ ಸರ್ಕಾರ ಆದೇಶಿಸಿತ್ತು. ತತ್ಪರಿಣಾಮವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿದ್ದ " ಅಯೋಡಿನ್ ಯುಕ್ತ ಉಪ್ಪು " ಶ್ರೀಸಾಮಾನ್ಯನ ಪಾಲಿಗೆ ದುಬಾರಿಯಾಗಿ ಪರಿಣಮಿಸಿತ್ತು!. 

ಅಯೋಡಿನ್ ಕೊರತೆ 

ಕಾರಣಾಂತರಗಳಿಂದ ಮನುಷ್ಯನ ಶರೀರದಲ್ಲಿ ಅಯೋಡಿನ್ ಕೊರತೆ ಉಂಟಾದಲ್ಲಿ ಉದ್ಭವಿಸಬಲ್ಲ ಆರೋಗ್ಯದ ಸಮಸ್ಯೆಗಳನ್ನು ತಡೆಗಟ್ಟುವ ಸಲುವಾಗಿ, ಕೇಂದ್ರ ಸರ್ಕಾರವು ಈ ನಿರ್ಧಾರವು ನಿಜಕ್ಕೂ ಅಪೇಕ್ಷಿತ ಪರಿಣಾಮವನ್ನು ತೋರಿದೆಯೇ ಎನ್ನುವ ಬಗ್ಗೆ ಯಾವುದೇ ಸಮೀಕ್ಷೆ- ಅಧ್ಯಯನಗಳನ್ನು ನಡೆಸಿಲ್ಲ. ಇದೇ ಕಾರಣದಿಂದಾಗಿ ಅಯೋಡಿನ್ ಯುಕ್ತ ಉಪ್ಪನ್ನೇ ಮಾರಾಟ ಮಾಡುವ ಪದ್ದತಿಯು ನಮ್ಮ ದೇಶದಲ್ಲಿ ಇಂದಿಗೂ ಮುಂದುವರೆದಿದೆ. 

ಆದರೆ ಪುಟ್ಟ ಕಂದಮ್ಮಗಳಲ್ಲಿ ಅಪರೂಪದಲ್ಲಿ ಕಾಣಿಸಬಲ್ಲ ಅಯೋಡಿನ್ ಕೊರತೆಗೆ ನಿರ್ದಿಷ್ಟ ಕಾರಣವೊಂದು ಇಂತಿದೆ. ಪರ್ ಕ್ಲೋರೇಟ್ ಎನ್ನುವ ಪ್ರದೂಷಕ ದ್ರವ್ಯವೇ ಈ ಸಮಸ್ಯೆಯ ಮೂಲವೆನಿಸಿದೆ. 

ಸಾಮಾನ್ಯವಾಗಿ ಹಸುಳೆಗೆ ಅತ್ಯವಶ್ಯಕ ಎನಿಸುವಷ್ಟು ಪ್ರಮಾಣದ ಅಯೋಡಿನ್ ತಾಯಿಯ ಹಾಲಿನಿಂದಲೇ ಲಭಿಸುತ್ತದೆ. ಆದರೂ ಅನೇಕ ಹಸುಗೂಸುಗಳಲ್ಲಿ ಅಯೋಡಿನ್ ಕೊರತೆಯುಂಟಾಗಲು ಎರಡು ಪ್ರಮುಖ ಕಾರಣಗಳಿವೆ. ಇವುಗಳಲ್ಲಿ ಮಗುವಿಗೆ ಮೊಲೆಹಾಲನ್ನು ಉಣಿಸುವ ತಾಯಂದಿರಲ್ಲಿ ಪೌಷ್ಠಿಕ ಅಂಶಗಳ ನ್ಯೂನತೆ ಮತ್ತು ಅಯೋಡಿನ್ ನ ಕೊರತೆ ಇರುವುದು ಅಥವಾ ತಾಯಿಯ ಹಾಲಿನಲ್ಲಿ ಇರುವ ಅಯೋಡಿನ್ ನ ಅಂಶವನ್ನು ಹೀರಿಕೊಳ್ಳಲು, ಹಸುಳೆಯ ಜೀರ್ಣಾಂಗಗಳು ವಿಫಲವಾಗುವುದೇ ಈ ಸಮಸ್ಯೆಯ ಮೂಲ ಕಾರಣಗಳಾಗಿವೆ. ಇವುಗಳಲ್ಲಿ ಎರಡನೆಯ ಕಾರಣವು "ಪರ್ ಕ್ಲೋರೇಟ್ ಅನ್ನುವ ರಾಸಾಯನಿಕದ ಪ್ರದೂಷಕ ಪರಿಣಾಮದಿಂದ ಸಂಭವಿಸುತ್ತದೆ. 

ಪರ್ ಕ್ಲೋರೇಟ್ ಎನ್ನುವ ಅಪಾಯಕಾರಿ ರಾಸಾಯನಿಕವನ್ನು ಪಟಾಕಿ,ಸಿಡಿಮದ್ದು, ಸ್ಪೋಟಕಗಳ ತಯಾರಿಕೆ ಮತ್ತು ರಾಕೆಟ್ ಗಳ ಇಂಧನವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಅನೇಕ ವರ್ಷಗಳಿಂದ ಈ ರಾಸಾಯನಿಕವನ್ನು ಅತಿಯಾಗಿ ಬಳಸಿರುವುದರಿಂದಾಗಿ, ನಾವು ಸೇವಿಸುತ್ತಿರುವ ನೀರು ಮತ್ತು ಆಹಾರ ಪದಾರ್ಥಗಳಲ್ಲಿ ಇದರ ಅಂಶ ಬೆರೆತಿರುವುದು ಪತ್ತೆಯಾಗುತ್ತಿದೆ. 

ಈ ರಾಸಾಯನಿಕದ ಪ್ರದೂಷಣೆಗೆ ಈಡಾಗಿರುವ ಮಾತೆಯರ ಶಿಶುಗಳು, ತಾಯಿಯ ಎದೆಹಾಲಿನಲ್ಲಿರುವ ಅಯೋಡಿನ್ ಅಂಶವನ್ನು ಹೀರಿಕೊಳ್ಳುವ ಸಾಮರ್ಥ್ಯದ ಬಗ್ಗೆ ವೈದ್ಯಕೀಯ ಅಧ್ಯಯನವನ್ನು ನಡೆಸಲಾಗಿತ್ತು. ಇದರ ಅಂಗವಾಗಿ ೧೩ ಬಾಣಂತಿಯರ ಎದೆಹಾಲಿನ ಮಾದರಿಗಳನ್ನು ಸಂಗ್ರಹಿಸಿ, ಇವುಗಲ್ಲಿರುವ ಅಯೋಡಿನ್ ಮತ್ತು ಪರ್ ಕ್ಲೋರೇಟ್ ಗಳ ಪ್ರಮಾಣವನ್ನು ಅಳೆಯಲಾಗಿತ್ತು. ಈ ಮಾದರಿಗಳಲ್ಲಿ ೧೨ ಮಾತೆಯರ ಎದೆಹಾಲಿನಲ್ಲಿ ಪರ್ ಕ್ಲೋರೇಟ್ ನ ಪ್ರಮಾಣವು ಅತ್ಯಧಿಕವಾಗಿದ್ದುದರಿಂದ, ೧೨ ಹಸುಳೆಗಳು ಅವಶ್ಯಕ ಪ್ರಮಾಣದ ಅಯೋಡಿನ್ ಹೀರಿಕೊಳ್ಳಲು ವಿಫಲವಾಗಿದ್ದವು. 

 ಅವಶ್ಯಕತೆ ಎಷ್ಟು ?

ವಾಷಿಂಗ್ಟನ್ ಡಿಸಿ ಯಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನ್ ಸಂಸ್ಥೆಯ ತಜ್ಞರ ಅಭಿಪ್ರಾಯದಂತೆ, ನವಜಾತ ಶಿಶುಗಳಿಗೆ ೬ ತಿಂಗಳು ತುಂಬುವ ತನಕ ಪ್ರತಿನಿತ್ಯ ೧೧೦ ಮೈಕ್ರೋ ಗ್ರಾಂ ಅಯೋಡಿನ್ ನ ಅವಶ್ಯಕತೆ ಇರುತ್ತದೆ. ಆದರೆ ತಾಯಿಯ ಹಾಲಿನಲ್ಲಿರುವ ಪರ್ ಕ್ಲೋರೇಟ್ ನ ದುಷ್ಪರಿಣಾಮದಿಂದಾಗಿ ಅನೇಕ  ಶಿಶುಗಳಿಗೆ ಕೇವಲ ೧೦ ರಿಂದ ೧೨ ಮೈಕ್ರೋ ಗ್ರಾಂ ಗಳಷ್ಟು ಅಯೋಡಿನ್ ಲಭಿಸುತ್ತಿದೆ. 

ಇದಲ್ಲದೇ ತಾಯಿಯ ಶರೀರದಲ್ಲಿರುವ ಅಯೋಡಿನ್ ನ ಶೇ. ೨೨ ರಷ್ಟು ಅಂಶವು ಎದೆಹಾಲಿನಲ್ಲೇ ಇರುವುದಾದರೂ, ಆಕೆಯ ಶರೀರದಲ್ಲಿರುವ ಪರ್ ಕ್ಲೋರೇಟ್ ನ ಶೇ. ೫೦ ರಷ್ಟು ಅಂಶವು ಎದೆಹಾಲನ್ನು ಸೇರುತ್ತದೆ. ತತ್ಪರಿಣಾಮವಾಗಿ ಈ ಹಸುಳೆಗಳ ತೂಕಕ್ಕೆ ಅನುಗುಣವಾಗಿ ೦.೨ ರಿಂದ ೦.೩ ಮೈಕ್ರೋ ಗ್ರಾಂ ನಷ್ಟು ಪರ್ ಕ್ಲೋರೇಟ್ ಪ್ರತಿನಿತ್ಯ ಇವುಗಳ ಉದರವನ್ನು ಸೇರುತ್ತದೆ!. 

ಅಯೋಡಿನ್ ನ ಕೊರತೆಯಿಂದಾಗಿ ಮನುಷ್ಯನ ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಯಲ್ಲಿ ವ್ಯತ್ಯಯವಾಗುತ್ತದೆ. ಈ ಗ್ರಂಥಿಯು ಸ್ರವಿಸುವ ಥೈರಾಕ್ಸಿನ್ ಎನ್ನುವ ಹಾರ್ಮೋನ್ ಶಿಶುಗಳ ನರಮಂಡಲದ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಈ ಹಾರ್ಮೋನ್ ನ ಕೊರತೆಯಿಂದಾಗಿ ಶಿಶುಗಳ ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುವುದು, ಮೆದುಳಿಗೆ ಹಾನಿಯಾಗುವುದು ಮತ್ತು ಶಾರೀರಿಕ ಬೆಳವಣಿಗೆಯಲ್ಲಿ ವ್ಯತ್ಯಯಗಳು ಸಂಭವಿಸುವ ಸಾಧ್ಯತೆಗಳಿವೆ. ಇದರೊಂದಿಗೆ ಇಂತಹ ಶಿಶುಗಳು ಬದುಕಿ ಉಳಿಯುವ ಸಾಧ್ಯತೆಗಳೂ ಕಡಿಮೆಯಾಗುತ್ತವೆ. ಈ ಸಮಸ್ಯೆಯನ್ನು ನಿಯಂತ್ರಿಸುವ ಸಲುವಾಗಿಯೇ, ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಅಯೋಡಿನ್ ಯುಕ್ತ ಉಪ್ಪಿನ ಮಾರಾಟವನ್ನು ಕಡ್ಡಾಯಗೊಳಿಸಲಾಗಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೦೨-೦೨-೨೦೧೧ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. 





Friday, June 20, 2014

ROAD INFORMATION SYSTEM




 ರಸ್ತೆ ಮಾಹಿತಿ ವ್ಯವಸ್ಥೆ : ಉಪಯುಕ್ತವೆನಿಸಬಲ್ಲದೇ?

ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಎಲ್ಲಾ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಪೂರ್ಣ ಮಾಹಿತಿಗಳನ್ನು ಒಳಗೊಂಡ " ರಸ್ತೆ ಮಾಹಿತಿ ವ್ಯವಸ್ಥೆ " ಯನ್ನು ರಾಜ್ಯ ಸರ್ಕಾರವು ಸದ್ಯೋಭವಿಷ್ಯದಲ್ಲಿ ಆರಂಭಿಸಲಿದೆ ಎಂದು ಕೆಲ ದಿನಗಳ ಹಿಂದೆ ಲೋಕೋಪಯೋಗಿ ಸಚಿವರು ಘೋಷಿಸಿದ್ದರು. ಸಚಿವರ ಹೇಳಿಕೆಯಂತೆ ರಸ್ತೆಗಳ ನಿರ್ಮಾಣ ಮತ್ತು ಕಾಮಗಾರಿಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಹಾಗೂ ಇದರಲ್ಲಿ ನಡೆಯುವ ಭ್ರಷ್ಟಾಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯ ವತಿಯಿಂದ ಆರ್.ಐ.ಎಸ್ ( ರೋಡ್ ಇನ್ಫೋರ್ಮೆಶನ್ ಸಿಸ್ಟಂ ) ಜಾರಿಗೊಳಿಸಲಾಗುತ್ತದೆ. 

ನೂತನ ವ್ಯವಸ್ಥೆ ಅನುಷ್ಠಾನಗೊಂಡ ಬಳಿಕ ರಸ್ತೆಗಳು ಹಾಳಾಗಲು ನಿರ್ದಿಷ್ಟ ಕಾರಣಗಳು, ಇವುಗಳನ್ನು ದುರಸ್ತಿಪಡಿಸಿದ ಸಮಯ ಹಾಗೂ ಇದಕ್ಕಾಗಿ ತಗಲಿದ ಅವಧಿ, ದುರಸ್ತಿಪಡಿಸದೇ ಇದ್ದಲ್ಲಿ ಇದಕ್ಕೆ ಸಮರ್ಥನೀಯ ಕಾರಣಗಳು ಮತ್ತು ಕಾಮಗಾರಿಗಳಿಗೆ ತಗಲಿದ ವೆಚ್ಚ ಮತ್ತಿತರ ಮಾಹಿತಿಗಳು ಆರ್.ಐ.ಎಸ್ ನಲ್ಲಿ ಲಭಿಸುತ್ತವೆ. ಇದರ ಉಸ್ತುವಾರಿಯನ್ನು ವಹಿಸಲು ಟೆಂಡರ್ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಈ ಎಲ್ಲಾ ಮಾಹಿತಿಗಳನ್ನು ಇಲಾಖೆಯ ಅಂತರ್ಜಾಲ ತಾಣದಲ್ಲಿ ಪ್ರಕಟಿಸುವ ಮೂಲಕ ಜನರಿಗೆ ಸಂಪೂರ್ಣ ವಿವರಗಳು ಲಭಿಸುವಂತೆ ಮಾಡಲಾಗುವುದು. ಇಂತಹ ವ್ಯವಸ್ಥೆಯಿಂದಾಗಿ ಅವ್ಯವಹಾರಗಳಿಗೆ ಕಡಿವಾಣ ತೊಡಿಸಲು ಸಾಧ್ಯವೆಂದು ಸಚಿವರು ಹೇಳಿದ್ದಾರೆ. 

ಆರ್.ಐ.ಎಸ್ ಯಶಸ್ವಿಯಾಗುವುದೇ ?

ಲೋಕೋಪಯೋಗಿ ಸಚಿವರು ಹೇಳಿದಂತೆ ರಸ್ತೆಗಳು ಹಾಳಾಗಲು ನಿರ್ದಿಷ್ಟ ಕಾರಣಗಳನ್ನು ಅರಿತುಕೊಳ್ಳಲು ನೂತನ ವ್ಯವಸ್ಥೆಯ ಅವಶ್ಯಕತೆಯೇ ಬೇಕಾಗಿಲ್ಲ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ. ಅಂತೆಯೇ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೊಡನೆ ಅವ್ಯವಹಾರಗಳಿಗೆ ಕಡಿವಾಣ ತೊಡಿಸಬಹುದು ಎನ್ನುವ ವಿಚಾರವೂ ಸರಿಯಲ್ಲ. ಏಕೆಂದರೆ ರಸ್ತೆಗಳ ನಿರ್ಮಾಣ, ನಿರ್ವಹಣೆ ಮತ್ತು ದುರಸ್ತಿಗಳ ಕಾಮಗಾರಿಗಳಲ್ಲಿ ಸರ್ಕಾರ ವ್ಯಯಿಸುವ ಕೋಟ್ಯಂತರ ರೂಪಾಯಿಗಳು ಸೋರಿಹೊಗುತ್ತಿರುವುದು ಗುಟ್ಟಿನ ವಿಷಯವೇನಲ್ಲ. ಜೊತೆಗೆ ಸೋರಿಹೋಗುವ ಮೊತ್ತ ಎಲ್ಲಿಗೆ ತಲುಪುತ್ತದೆ ಎನ್ನುವ ವಿಚಾರವು ಸಚಿವರಿಗೂ ತಿಳಿದಿರಲೇಬೇಕು!. 

ನಿಜಸ್ಥಿತಿ ಇಂತಿರುವಾಗ ಆರ್.ಐ.ಎಸ್ ವ್ಯವಸ್ಥೆಯನ್ನು ಇದಕ್ಕಾಗಿ ಜಾರಿಗೊಳಿಸುವ ಅವಶ್ಯಕತೆಯೇ ಉದ್ಭವಿಸುವುದಿಲ್ಲ. ಹಾಗೂ ಇದಕ್ಕಾಗಿ ಇನ್ನಷ್ಟು ಹಣವನ್ನು ವ್ಯಯಿಸಬೇಕಾದ ಅನಿವಾರ್ಯತೆಯೂ ಇಲ್ಲವೆಂದಲ್ಲಿ ತಪ್ಪೆನಿಸಲಾರದು. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ಅನುದಾನದ ಹಣದಿಂದ ಅನುಷ್ಠಾನಗೊಳ್ಳುವ ರಸ್ತೆಗಳ ಕಾಮಗಾರಿಗಳ ಗುಣಮಟ್ಟಗಳು ಕಳಪೆಯಾಗಿರುತ್ತವೆ ಎನ್ನುವುದನ್ನು ರಾಜ್ಯದ ಹಿರಿಯ ಮಂತ್ರಿ ಹಾಗೂ ಮಂಗಳೂರಿನ ಸಂಸದರೂ ೨೦೧೦ ರಲ್ಲಿ ಒಪ್ಪಿಕೊಂಡಿದ್ದರು. ಈ ಸಮಸ್ಯೆಯನ್ನು ತಡೆಗಟ್ಟಲು ಪ್ರತಿಯೊಂದು ಕಾಮಗಾರಿಗಳ ಗುಣಮಟ್ಟಗಳನ್ನು ಪರಿಶೀಲಿಸುವ ಸಲುವಾಗಿ, ಸ್ಥಳೀಯ ಆಡಳಿತ ಸಂಸ್ಥೆಗಳು ಪ್ರಯೋಗಾಲಯಗಳನ್ನು ಸ್ಥಾಪಿಸಲು ಸರ್ಕಾರ ಸೂಚಿಸಿತ್ತು. ಆದರೆ ನಮಗೆ ತಿಳಿದಂತೆ ೨೦೧೦ ರಲ್ಲಿ ರಾಜ್ಯ ಸರ್ಕಾರ ನೀಡಿದ್ದ ಈ ಸೂಚನೆಯು ಇಂದಿನ ತನಕ ಅನುಷ್ಠಾನಗೊಂಡಿಲ್ಲ!.

ಕಳಪೆ ಕಾಮಗಾರಿಗಳಿಗೆ ಮೂಲ ಕಾರಣವೆನಿಸಿರುವ ಭ್ರಷ್ಟಾಚಾರದೊಂದಿಗೆ ಇತರ ನಿರ್ದಿಷ್ಟ ಕಾರಣಗಳನ್ನು ನಿಗ್ರಹಿಸಲು ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದಲ್ಲಿ, ಬಹುತೇಕ ರಸ್ತೆಗಳ ಕಾಮಗಾರಿಗಳ ಗುಣಮಟ್ಟ ಹೆಚ್ಚುವುದರೊಂದಿಗೆ, ನಮ್ಮ ರಸ್ತೆಗಳು ಸುದೀರ್ಘಕಾಲ ಬಾಳ್ವಿಕೆ ಬರುವ ಸಾಧ್ಯತೆಗಳಿವೆ.  

ಸಮಸ್ಯೆ- ಕಾರಣಗಳು 

ಸಾಮಾನ್ಯವಾಗಿ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಅನುಷ್ಠಾನಿಸುವ ರಸ್ತೆ ಕಾಮಗಾರಿಗಳ ಅಂದಾಜುಪಟ್ಟಿಯನ್ನು ಲೋಕೋಪಯೋಗಿ ಇಲಾಖೆಯ ದರಪಟ್ಟಿಯ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ. ತದನಂತರ ಈ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುತ್ತದೆ. ಈ ದರಪಟ್ಟಿಯನ್ನು ಅಪರೂಪದಲ್ಲೊಮ್ಮೆ ಪರಿಷ್ಕರಿಸುವುದರಿಂದ, ಹೆಚ್ಚಿನ ಗುತ್ತಿಗೆದಾರರು ಅಂದಾಜುಪಟ್ಟಿಯಲ್ಲಿ ನಮೂದಿಸಿದ ದರಗಳಿಗಿಂತಲೂಶೇ.೧೦ ರಿಂದ ೩೦ ರಷ್ಟು ಅಧಿಕ ದರಗಳನ್ನು ತಮ್ಮ ಬಿಡ್ಡುಗಳಲ್ಲಿ ನಮೂದಿಸುತ್ತಾರೆ. ಅಂತಿಮವಾಗಿ ಅತ್ಯಂತ ಕಡಿಮೆ ದರವನ್ನು ನಮೂದಿಸಿದ ಗುತ್ತಿಗೆದಾರರಿಗೆ ಕಾಮಗಾರಿಗಳ ಗುತ್ತಿಗೆಯನ್ನು ನೀಡಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ಗುತ್ತಿಗೆದಾರರೊಂದಿಗೆ ಈ ದರಗಳ ಬಗ್ಗೆ ಒಂದಿಷ್ಟು ಚೌಕಾಶಿಯನ್ನೂ ಮಾಡಲಾಗುತ್ತದೆ. 

ವಿಶೇಷವೆಂದರೆ ಗುತ್ತಿಗೆಯನ್ನು ಪಡೆದುಕೊಳ್ಳಲು ಮತ್ತು ಕಾಮಗಾರಿಗಳು ಮುಗಿದ ಬಳಿಕ ಅಂತಿಮ ಬಿಲ್ಲುಗಳ ಮೊತ್ತವನ್ನು ಪಡೆದುಕೊಳ್ಳಲು ಗುತ್ತಿಗೆದಾರರು ವಿವಿಧ ಹಂತಗಳಲ್ಲಿ ಸಂಬಂಧಿತ ವ್ಯಕ್ತಿಗಳಿಗೆ ನಿರ್ದಿಷ್ಟ ಪ್ರಮಾಣದ " ರುಷುವತ್ತು " ನೀಡಲೇಬೇಕಾಗುತ್ತದೆ!. ಹರಸಾಹಸವನ್ನೇ ನಡೆಸಿ ಗುತ್ತಿಗೆಯನ್ನು ಪಡೆದುಕೊಳ್ಳಲು ಯಶಸ್ವಿಯಾಗುವ ಗುತ್ತಿಗೆದಾರರು, ಗುತ್ತಿಗೆಯ ಮೊತ್ತದ ಶೇ.೭.೫ ರಷ್ಟನ್ನು ಧಾರಣಾ ಮೊತ್ತವನ್ನಾಗಿ ಇರಿಸಬೇಕಾಗುವುದು. ಕಾಮಗಾರಿಗಳು ಪರಿಪೂರ್ಣಗೊಂಡ ಬಳಿಕ, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಕಂಡುಬರಬಹುದಾದ ಲೋಪದೋಷಗಳನ್ನು ಗುತ್ತಿಗೆದಾರರು ಸರಿಪಡಿಸಿದಲ್ಲಿ ಮಾತ್ರ ಈ ಮೊತ್ತವನ್ನು ಅವರಿಗೆ ಮರಳಿಸಲಾಗುತ್ತದೆ. 

ನಿಗದಿತ ಕಾಮಗಾರಿಗಳು ಮುಗಿದ ಬಳಿಕ ಥರ್ಡ್ ಪಾರ್ಟಿ ಇನ್ಸ್ಪೆಕ್ಷನ್ ವರದಿಯಲ್ಲಿ ಕಾಮಗಾರಿಗಳ ಗುಣಮಟ್ಟಗಳು ತೃಪ್ತಿಕರವಾಗಿವೆ ಎಂದು ಉಲ್ಲೇಖಿಸಿದಲ್ಲಿ ಮಾತ್ರ ಗುತ್ತಿಗೆದಾರರ ಅಂತಿಮ ಬಿಲ್ಲಿನ ಮೊತ್ತವನ್ನು ಪಾವತಿಸಲಾಗುತ್ತದೆ. ಆದರೆ ಇದಕ್ಕೂ ಮುನ್ನ ಗುತ್ತಿಗೆಯ ಮೊತ್ತದ ಶೇ. ೨.೨೫ ರಷ್ಟು ಆದಾಯ ತೆರಿಗೆ,ಶೇ. ೪ ರಷ್ಟು ಕಾಮಗಾರಿ ಗುತ್ತಿಗೆ ತೆರಿಗೆ(ಮಾರಾಟ ತೆರಿಗೆ), ಕಾಮಗಾರಿಗಳಲ್ಲಿ ಬಳಸಿರುವ ಜಲ್ಲಿ, ಮರಳು ಹಾಗೂ ಶಿಲೆಕಲ್ಲು ಇತ್ಯಾದಿಗಳ ಪ್ರಮಾಣಕ್ಕೆ ಅನುಗುಣವಾಗಿ ರಾಜಧಾನ, ಮತ್ತು ಶೇ.೧ ರಷ್ಟು ಮೊತ್ತವನ್ನು ಕಾರ್ಮಿಕರ ಕಲ್ಯಾಣ ನಿಧಿಗಳ ಸಲುವಾಗಿ ಕಡಿತ ಮಾಡಲಾಗುತ್ತದೆ. ಇವೆಲ್ಲವುಗಳನ್ನು ಸೇರಿಸುವಾಗ ಕಡಿತವಾಗುವ ಹಣದ ಪ್ರಮಾಣವು ಶೇ.೧೦ ರಷ್ಟಾಗುವುದು. ಇದರೊಂದಿಗೆ ಗುತ್ತಿಗೆದಾರರು ಇರಿಸಿದ ಧಾರಣಾ ಮೊತ್ತವನ್ನು ಸೇರಿಸಿದಲ್ಲಿ, ಇದು ಶೇ. ೧೭.೫ ರಷ್ಟಾಗುವುದು. ಇದಲ್ಲದೇ ಕಾಮಗಾರಿಗಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮತ್ತು ಇತರ ಸಿಬಂದಿಗಳಿಗೆ ಪಾವತಿಸಲೇ ಬೇಕಾದ " ದಕ್ಷಿಣೆ" ಯ ಮೊತ್ತವು ಸುಮಾರು ಶೇ.೩೦ ರಷ್ಟಿದ್ದು, ಇವೆಲ್ಲವುಗಳ ಒಟ್ಟು ಮೊತ್ತವು ಶೇ.೪೭.೫೦ ಆಗುತ್ತದೆ!. 

ಈ ರೀತಿಯಲ್ಲಿ ತಮಗೆ ದೊರೆಯಲಿರುವ ಗುತ್ತಿಗೆಯ ಮೊತ್ತದ ಶೇ.೪೭.೫೦ ರಷ್ಟು ಮೊತ್ತವನ್ನು( ಶೇ.೭.೫೦ ಮರಳಿ ದೊರೆತಲ್ಲಿ ಈ ಮೊತ್ತ ಶೇ.೪೦ ರಷ್ಟಾಗುವುದು) ಕಳೆದುಕೊಳ್ಳಲಿರುವ ಗುತ್ತಿಗೆದಾರರು, ಉತ್ತಮ ಗುಣಮಟ್ಟದ ಹಾಗೂ ಸುದೀರ್ಘಕಾಲ ಬಾಳ್ವಿಕೆ ಬರುವಂತಹ ರಸ್ತೆಗಳನ್ನು ನಿರ್ಮಿಸುವುದಾದರೂ ಹೇಗೆಂದು ಊಹಿಸುವುದು ಕೂಡಾ ಜನಸಾಮಾನ್ಯರಿಗೆ ಅಸಾಧ್ಯವೆನಿಸುವುದು. ಇವೆಲ್ಲಾ ವಿಚಾರಗಳ ಬಗ್ಗೆ ನಮ್ಮನ್ನಾಳುವವರಿಗೆ ಸಾಕಷ್ಟು ಮಾಹಿತಿ ತಿಳಿದಿದೆ. ಅಂತೆಯೇ ಇದನ್ನು ಪರಿಹರಿಸುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಇದೆ. ಇವೆಲ್ಲಾ ಕಾರಣಗಳಿಂದಾಗಿ ನಮ್ಮ ದೇಶದ ಪುಟ್ಟ ಹಳ್ಳಿಯಿಂದ ಹಿಡಿದು ದಿಲ್ಲಿಯ ತನಕ ಅನುಷ್ಠಾನಿಸಲ್ಪಡುತ್ತಿರುವ ಬಹುತೇಕ ರಸ್ತೆ ಕಾಮಗಾರಿಗಳ ಗುಣಮಟ್ಟಗಳು ಕಳಪೆಯಾಗಿ ಇರುತ್ತವೆಯೇ ಹೊರತು ಉತ್ತಮವಾಗಿ ಇರುವುದಿಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 




Wednesday, June 18, 2014

TRASH ON THE RAILWAY TRACKS !




 ರೈಲುಹಳಿಗಳ ಬದಿಯಲ್ಲಿ ಎಷ್ಟೊಂದು ತ್ಯಾಜ್ಯ !

ಪ್ರತಿನಿತ್ಯ ಬೆಳಗಿನ ಜಾವ ಅಥವಾ ಸಾಯಂಕಾಲದ ಸಮಯದಲ್ಲಿ ತಮ್ಮ ಆರೋಗ್ಯವನ್ನು ಉನ್ನತ ಸ್ತರದಲ್ಲಿ ಇರಿಸಿಕೊಳ್ಳುವ ಸಲುವಾಗಿ ನಡಿಗೆಯಲ್ಲಿ ತೊಡಗಿಸಿಕೊಳ್ಳುವ ಹವ್ಯಾಸ ಅನೇಕರಲ್ಲಿದೆ. ಸಾಮಾನ್ಯವಾಗಿ ಬೆಳಗಿನ ಜಾವದಲ್ಲಿ ನಿರ್ಜನವಾಗಿರುವ ಹಾಗೂ ವಾಹನಗಳ ಓಡಾಟ ಇಲ್ಲದ ಕಾರಣದಿಂದ ಧೂಳು ಅಥವಾ ಹೊಗೆಯ ಬಾಧೆಯೂ ಇಲ್ಲದ ರಸ್ತೆಗಳಲ್ಲಿ ಅನೇಕರು ವಾಕಿಂಗ್ ಮಾಡುವುದನ್ನು ನೀವೂ ಕಂಡಿರಬಹುದು. ಇನ್ನು ಕೆಲವರು ಶಾಲೆಗಳ ಆಟದ ಮೈದಾನ ಅಥವಾ ರೈಲ್ವೆ ಹಳಿಗಳ ಬದಿಗಳಲ್ಲೂ ನಡೆಯುವುದು ಅಪರೂಪವೇನಲ್ಲ. 

ಅದೊಂದು ದಿನ ಮುಂಜಾನೆ ಎಂದಿನಂತೆ ಪ್ರಧಾನ ರಸ್ತೆಯಲ್ಲಿ ವಾಕಿಂಗ್ ಹೋಗಲು ತುಸು ತಡವಾಗಿದ್ದುದರಿಂದ, ಮನೆಯ ಸಮೀಪದಲ್ಲಿರುವ ರೈಲ್ವೆ ಹಳಿಗಳ ಮೇಲೆ ನಡೆಯಲು ನಿರ್ಧರಿಸಿದೆ. ಹಳಿಗಳ ಪಕ್ಕದಲ್ಲಿ ದಿನನಿತ್ಯ ಓಡಾಡುವ ಜನರಿಂದಾಗಿ ನಿರ್ಮಾಣಗೊಂಡಿದ್ದ ಕಾಲುದಾರಿಯಿದ್ದರೂ, ಇದರ ಮೇಲೆ ನಡೆಯುವುದು ಅಷ್ಟೊಂದು ಸುಲಭವಲ್ಲ ಎನ್ನುವುದು ಅಂದು ತಿಳಿಯಿತು. ಅಂತೆಯೇ ರೈಲು ಹಳಿಗಳ ಇಕ್ಕೆಲಗಳಲ್ಲಿ ಪ್ರಯಾಣಿಕರು ಎಸೆದಿರುವ ವೈವಿಧ್ಯಮಯ ತ್ಯಾಜ್ಯಗಳನ್ನು ಕಣ್ಣಾರೆ ಕಾಣುವ ಅವಕಾಶವೂ ಲಭಿಸಿತ್ತು. 

ಈ ಸಮಸ್ಯೆಗೆ ಕಾರಣವೇನು ?

 ರೈಲುಹಳಿಗಳ ಇಕ್ಕೆಲಗಳಲ್ಲಿ ಇಷ್ಟೊಂದು ತ್ಯಾಜ್ಯಗಳು ಬಿದ್ದಿರಲು ಕಾರಣವೇನು ಎಂದು ಸ್ನೇಹಿತರ ಬಳಿ ವಿಚಾರಿಸಿದಾಗ, ಮಹತ್ವಪೂರ್ಣವಾದ ಮಾಹಿತಿ ಲಭಿಸಿತ್ತು. ರೈಲುಗಳಲ್ಲಿ ಹೆಚ್ಚಾಗಿ ಸಂಚರಿಸುವ ಪ್ರಯಾಣಿಕರು ಹೇಳುವಂತೆ, ದೀರ್ಘಾವಧಿಯ ಅಥವಾ ಹಗಲು ಪ್ರಯಾಣದ ಸಂದರ್ಭದಲ್ಲಿ ಬಹುತೇಕ ಜನರು ತಮಗೆ ಬೇಕಾಗುವಷ್ಟು ಖಾದ್ಯಪೇಯಗಳನ್ನು ತರುತ್ತಾರೆ. ಏಕೆಂದರೆ ರೈಲು ನಿಲ್ಲುವ ಬಹುತೇಕ ತಾಣಗಳಲ್ಲಿ ತಾವು ಬಯಸುವ ಖಾದ್ಯಪೇಯಗಳು ಲಭಿಸದೆ ಇರುವ ಅಥವಾ ಖಾದ್ಯಪೇಯಗಳನ್ನು ಖರೀದಿಸಿ ತರುವಷ್ಟು ಸಮಯ ರೈಲು ನಿಲ್ಲದೆ ಇರುವ ಮತ್ತು ವಯೋವೃದ್ಧರು ಹಾಗೂ ಮಹಿಳೆಯರು ಯಾವುದೇ ನಿಲ್ದಾಣದಲ್ಲಿ ಇಳಿದು ತಮಗೆ ಬೇಕಾದ ಆಹಾರಗಳನ್ನು ಖರೀದಿಸುವಷ್ಟು ಸಾಮರ್ಥ್ಯವನ್ನು ಹೊಂದಿರದಿರುವುದೇ ಇದಕ್ಕೆ ಪ್ರಮುಖ ಕಾರಣವೆನಿಸಿದೆ. 

ಬಹುತೇಕ ಪ್ರಯಾಣಿಕರು ತಾವು ಮನೆಯಿಂದ ಅಥವಾ ಹೋಟೆಲ್ ಗಳಿಂದ ತಂದಿದ್ದ ಖಾದ್ಯಪೇಯಗಳನ್ನು ಸೇವಿಸುವ ಸಂದರ್ಭದಲ್ಲಿ, ಬಳಸಿ ಎಸೆಯುವ ಪ್ಲಾಸ್ಟಿಕ ನಿರ್ಮಿತ  ಲೋಟ, ತಟ್ಟೆ, ಚಮಚ ಮತ್ತಿತರ ಪರಿಕರಗಳನ್ನು ಬಳಸುತ್ತಾರೆ. ಅಂತೆಯೇ ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರೆಯುವ ನೀರು ಅಥವಾ ಲಘುಪಾನೀಯಗಳನ್ನು ಮತ್ತು ಇನ್ನುಕೆಲವರು ಮಾದಕ ಪೇಯಗಳನ್ನೂ ಕದ್ದುಮುಚ್ಚಿ ಕುಡಿಯುತ್ತಾರೆ. ಬಳಿಕ ತಾವು ಬಳಸಿದ ಲೋಟ,ತಟ್ಟೆ, ಚಮಚ ಮತ್ತು ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲಿಗಳನ್ನು ರೈಲಿನ ಕಿಟಿಕಿ- ಬಾಗಿಲುಗಳಿಂದ ಹೊರಗೆಸೆಯುತ್ತಾರೆ.ಏಕೆಂದರೆ ರೈಲುಗಳ ಬೋಗಿಗಳಲ್ಲಿ ಪ್ರಯಾಣಿಕರು ಬಳಸಿ ಎಸೆಯುವ ತ್ಯಾಜ್ಯಗಳನ್ನು ಹಾಕಲು ಸೂಕ್ತ ವ್ಯವಸ್ಥೆಯೇ ಇಲ್ಲ. ಈ ವ್ಯವಸ್ಥೆ ಇರುವ ರೈಲುಗಳಲ್ಲೂಅವಶ್ಯಕ ಪ್ರಮಾಣದ ತ್ಯಾಜ್ಯಗಳನ್ನು ಸಂಗ್ರಹಿಸಬಲ್ಲ ಡಬ್ಬಿಗಳನ್ನು ಇರಿಸಲಾಗಿಲ್ಲ. ಪ್ರಯಾಣಿಕರೊಬ್ಬರು ಹೇಳುವಂತೆ ತ್ಯಾಜ್ಯಗಳನ್ನು ಹಾಕಲು ಇರಿಸಿದ ಡಬ್ಬಿಗಳಲ್ಲಿ ಸುಮಾರು ಒಂದು ಬಕೆಟ್ ನಲ್ಲಿ ಹಿಡಿಯುವಷ್ಟು ತ್ಯಾಜ್ಯಗಳನ್ನು ಹಾಕಬಹುದಾಗಿದೆ. ಸಾಮಾನ್ಯವಾಗಿ ಕುಳಿತು ಪ್ರಯಾಣಿಸುವ ರೈಲು ಬೋಗಿಯೊಂದರಲ್ಲಿ ಸುಮಾರು ೧೦೮ ಮತ್ತು ಸ್ಲೀಪರ್ ಬೋಗಿಗಳಲ್ಲಿ ಸುಮಾರು ೭೨ ಪ್ರಯಾಣಿಕರಿಗೆ ಸ್ಥಳಾವಕಾಶ ಇರುತ್ತದೆ. ದೂರ ಪ್ರಯಾಣದ ರೈಲುಗಳಲ್ಲಿ ಇವೆಲ್ಲಾ ಬೋಗಿಗಳು ಜನರಿಂದ ತುಂಬಿ ತುಳುಕುತ್ತವೆ. ಈ ರೀತಿಯಲ್ಲಿ ಒಂದು ರೈಲಿನಲ್ಲಿ ಸಾವಿರಕ್ಕೂ ಅಧಿಕ ಪ್ರಯಾಣಿಕರು ಇರುವುದರಿಂದ, ಇವರು ಉತ್ಪಾದಿಸುವ ತ್ಯಾಜ್ಯಗಳ ಪ್ರಮಾಣವೂ ಸ್ವಾಭಾವಿಕವಾಗಿಯೇ ಸಾಕಷ್ಟು ಅಧಿಕವಾಗಿರುತ್ತದೆ. ಇದೇ ಕಾರಣದಿಂದಾಗಿ ರೈಲುಹಳಿಗಳ ಇಕ್ಕೆಲಗಳಲ್ಲಿ ಇಂತಹ ಅಪಾರ ಪ್ರಮಾಣದ ತ್ಯಾಜ್ಯಗಳು ಅಲ್ಲಲ್ಲಿ ಬಿದ್ದಿರುತ್ತವೆ. ನಗರ- ಪಟ್ಟಣಗಳ ರಸ್ತೆಗಳ ಬದಿಗಳಲ್ಲಿ ಬಿದ್ದಿರುವ ತ್ಯಾಜ್ಯಗಳನ್ನು ಪೌರ ಕಾರ್ಮಿಕರು ಸಂಗ್ರಹಿಸಿ ವಿಲೇವಾರಿ ಮಾಡುವರಾದರೂ, ರೈಲುಹಳಿಗಳ ಅಕ್ಕಪಕ್ಕದಲ್ಲಿ ಬಿದ್ದಿರುವ ತ್ಯಾಜ್ಯಗಳನ್ನು ಹೆಕ್ಕುವ ವ್ಯವಸ್ಥೆ ಇಲ್ಲ.ಇದೇ ಕಾರಣದಿಂದಾಗಿ ಮುಂದಿನ ಕೆಲವೇ ವರ್ಷಗಳಲ್ಲಿ ರೈಲುಹಳಿಗಳ ಇಕ್ಕೆಲಗಳು ವೈವಿಧ್ಯಮಯ ತ್ಯಾಜ್ಯಗಳಿಂದ ತುಂಬಿ, ಬೃಹತ್ ತ್ಯಾಜ್ಯ ವಿಲೇವಾರಿ ಘಟಕಗಳಂತೆ ಗೋಚರಿಸಲಿವೆ!. 

ಪರಿಹಾರವೇನು? 

ಈ ಸಮಸ್ಯೆಯನ್ನು ಪರಿಹರಿಸಲು ಪ್ರಯಾಣಿಕರು ಮತ್ತು ರೈಲ್ವೇ ಇಲಾಖೆಯ ಅಧಿಕಾರಿಗಳ ಸಹಕಾರಗಳ ಅವಶ್ಯಕತೆಯಿದೆ. ಮೊದಲನೆಯದಾಗಿ ರೈಲ್ವೆ ಇಲಾಖೆಯ ವತಿಯಿಂದ ಆಯ್ದ ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಗಳಲ್ಲಿ ಹಲವಾರು ಕಸದ ತೊಟ್ಟಿಗಳನ್ನು ಇರಿಸುವ ವ್ಯವಸ್ಥೆಯನ್ನು ಮಾಡಬೇಕು.ಅಂತೆಯೇ ಪ್ರಯಾಣಿಕರು ತಾವು ಕೊಂಡೊಯ್ದ ಖಾದ್ಯಪೇಯಗಳನ್ನು ಸೇವಿಸಿದ ಬಳಿಕ ಉತ್ಪನ್ನವಾದ ತ್ಯಾಜ್ಯಗಳನ್ನು ಮತ್ತೆ ಅದೇ ರೀತಿಯಲ್ಲಿ ಸಂಗ್ರಹಿಸಿ, ನಿಗದಿತ ನಿಲ್ದಾಣಗಳಲ್ಲಿ ಇರಿಸಿದ ಕಸದ ತೊಟ್ಟಿಗಳಲ್ಲಿ ಹಾಕಬೇಕು. ಅಥವಾ ನಿಗದಿತ ನಿಲ್ದಾಣಗಳಲ್ಲಿ ರೈಲಿನ ಬೋಗಿಗಳಿಂದಲೇ ಇಂತಹ ತ್ಯಾಜ್ಯಗಳನ್ನು ಸಂಗ್ರಹಿಸಲು ಅವಶ್ಯಕ ಸಿಬಂದಿಗಳನ್ನು ನೇಮಿಸಬೇಕು.ಇಂತಹ ವ್ಯವಸ್ಥೆಯನ್ನು ಕಲ್ಪಿಸಲು ಇಲಾಖೆಯ ಅಧಿಕಾರಿಗಳಿಗೆ ಸಾಧ್ಯವಾಗದೇ ಇದ್ದಲ್ಲಿ , ರೈಲುಗಳಲ್ಲಿ ಪ್ಲಾಸ್ಟಿಕ್ ನಿರ್ಮಿತ ಲೋಟ, ತಟ್ಟೆ, ಚಮಚ ಮತ್ತು ಬಾಟಲಿಗಳನ್ನು ಬಳಸುವುದನ್ನೇ ನಿಷೇಧಿಸಬೇಕು. ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ, ಭಾರತದ ಬಹುತೇಕ ರೈಲುಹಳಿಗಳ ಉದ್ದಕ್ಕೂ ಬೀಳಲಿರುವ ತ್ಯಾಜ್ಯಗಳು ಇನ್ನಷ್ಟು ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುವುದರಲ್ಲಿ ಸಂದೇಹವಿಲ್ಲ. 

ಕೊನೆಯ ಮಾತು 

ಅಧಿಕತಮ ಪ್ರಯಾಣಿಕರು ಹೇಳುವಂತೆ ದೂರ ಪ್ರಯಾಣದ ರೈಲುಗಳ ಬೋಗಿಗಳೇ ಸ್ವಚ್ಛವಾಗಿರುವುದಿಲ್ಲ. ಸಾಕಷ್ಟು ಕಸದಿಂದ ತುಂಬಿರುವ ಬೋಗಿಗಳು ಮತ್ತು ಸ್ವಚ್ಛಗೊಳಿಸದ ಕಾರಣದಿಂದಾಗಿ ದುರ್ವಾಸನೆಯನ್ನು ಬೀರುವ ಶೌಚಾಲಯಗಳನ್ನು ಕಂಡಲ್ಲಿ, ಇವುಗಳಲ್ಲಿ ಪ್ರಯಾಣಿಸುವ ವ್ಯಕ್ತಿಗಳಿಗೆ ಜಿಗುಪ್ಸೆಯನ್ನು ಉಂಟುಮಾಡುತ್ತದೆ. ರೈಲುಗಳ ಬೋಗಿಗಳನ್ನು ಸ್ವಚ್ಛವಾಗಿ ಇರಿಸದ ಇಲಾಖೆಯ ಸಿಬಂದಿಗಳು, ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಗೋಜಿಗೆ ಹೋಗುವುದಿಲ್ಲ ಎಂದು ಇತ್ತೀಚಿಗೆ ದೆಹಲಿಗೆ ಪ್ರಯಾಣಿಸಿದ ರೋಟರಿ ಸದಸ್ಯರು ಹೆಲುತ್ತಾರೆ. ಇವರು ಹೇಳುವಂತೆ ದೆಹಲಿಯಿಂದ ಮರಳುವಾಗ ಪ್ರಯಾಣವನ್ನು ಆರಂಭಿಸುವ ತಾಣದಲ್ಲೇ ರೈಲಿನ ಬೋಗಿಗಳು ಮತ್ತು ಶೌಚಾಲಯಗಳು ಹೊಲಸಾಗಿದ್ದವು. ನಿಜ ಸ್ಥಿತಿ ಇಂತಿದ್ದಲ್ಲಿ, ರೈಲುಗಳಲ್ಲಿ ತ್ಯಾಜ್ಯಗಳನ್ನು ಹಾಕಲು ಸೂಕ್ತ ವ್ಯವಸ್ಥೆಯನ್ನು ಸಂಬಂಧಿತ ಅಧಿಕಾರಿಗಳು ಒದಗಿಸುವ ಸಾಧ್ಯತೆಗಳೇ ಇಲ್ಲ. ವಿಶೇಷವೆಂದರೆ ದೆಹಲಿಯನ್ನು ಸಮೀಪಿಸುತ್ತಿದ್ದಂತೆಯೇ ಅನೇಕ ನಿಲ್ದಾಣಗಳಲ್ಲಿ ಹದಿಹರೆಯದ ಹುಡುಗರು ಬೋಗಿಗಳನ್ನು ಪ್ರವೇಶಿಸಿ, ಪ್ರಯಾಣಿಕರು ಅಲ್ಲಲ್ಲಿ ಎಸೆದಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು ಗೋಣಿಚೀಲಗಳಲ್ಲಿ ತುಂಬಿಸಿ ಕೊಂಡೊಯ್ದ ಕಾರಣದಿಂದಾಗಿ ಬೋಗಿಗಳಲ್ಲಿ ತ್ಯಾಜ್ಯಗಳ ಪ್ರಮಾಣ ಒಂದಿಷ್ಟು ಕಡಿಮೆಯಾಗಿತ್ತು ಎನ್ನುವುದನ್ನೂ ಇವರು ಗಮನಿಸಿದ್ದಾರೆ. 

ಅದೇನೇ ಇರಲಿ, ಇದೀಗ ಪ್ರಯಾಣದ ದರವನ್ನು ಹೆಚ್ಚಿಸಲು ಸನ್ನದ್ಧವಾಗುತ್ತಿರುವ ರೈಲ್ವೆ ಇಲಾಖೆಯು, ರೈಲುಗಳು ಮತ್ತು ನಿಲ್ದಾಣಗಳ ಸ್ವಚ್ಛತೆಯತ್ತ   ಗಮನಹರಿಸಬೇಕಾಗಿದೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 






Tuesday, June 17, 2014

Water water everywhere.........!





 " ಜೀವಜಲ " ವನ್ನು ಅನಾವಶ್ಯಕವಾಗಿ ಪೋಲು ಮಾಡದಿರಿ 

ಕೇವಲ ಮೂರು ದಶಕಗಳ ಹಿಂದೆ ಹಗಲಿರುಳು ಸುರಿಯುತ್ತಿದ್ದ ಮುಂಗಾರು ಮಳೆಯು, ಕಾಲಕ್ರಮೇಣ ಕಡಿಮೆಯಾಗುತ್ತಾ ಬಂದು ವರುಷಗಳೇ ಸಂದಿವೆ.ಥಟ್ಟನೆ ಪ್ರಾರಂಭವಾಗಿ ಅಷ್ಟೇ ವೇಗದಲ್ಲಿ ಸುರಿದು ಮಾಯವಾಗುವ ಇಂದಿನ ಮಳೆಗಾಲ ಮತ್ತು ಹಿಂದೆ ಧೋ ಎಂದು ಸುರಿಯುತ್ತಿದ್ದ ಜಡಿಮಳೆಗೆ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ಬೆಳಗಿನ ಜಾವ ಸೂರಿನ ಮೇಲೆ ಬೀಳುತ್ತಿದ್ದ ಮಳೆನೀರಿನ ಸದ್ದಿಗೆ ಎಚ್ಚರವಾಗುತ್ತಿದ್ದ ಮತ್ತು ಮಳೆಯ ಸದ್ದನ್ನು ಆಲಿಸುತ್ತಾ ನಿದ್ರೆಗೆ ಜಾರುತ್ತಿದ್ದ ದಿನಗಳು ಇದೀಗ ಕೇವಲ ನೆನಪುಗಳಾಗಿರುವುದು ಸತ್ಯ. ಅಂತೆಯೇ ಕೈಯ್ಯಲ್ಲಿ ಕೊಡೆಯನ್ನು ಹಿಡಿಯದೇ ಮನೆಯಿಂದ ಹೊರಹೋಗಲಾರದ ಸನ್ನಿವೇಶ ಇಂದಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆ, ಕಾಂಕ್ರೀಟ್ ಕಾಡುಗಳ ನಿರ್ಮಾಣ, ಅರಣ್ಯ ನಾಶ, ಕೃಷಿಭೂಮಿಯನ್ನು ಅನ್ಯ ಉದ್ದೇಶಗಳಿಗಾಗಿ ಬಳಸುತ್ತಿರುವುದು ಮತ್ತು ಅನಿಯಂತ್ರಿತ ಪರಿಸರ ಪ್ರದೂಷಣೆಗಳೇ ಈ ರೀತಿಯ ಹವಾಮಾನದ ವ್ಯತ್ಯಯಗಳಿಗೆ ಕಾರಣವೆನಿಸುತ್ತಿವೆ. ಮುಂದಿನ ದಿನಗಳಲ್ಲಿ ಜಲಕ್ಷಾಮಕ್ಕೂ ಕಾರಣವೆನಿಸಬಲ್ಲ ಈ ಅಪಾಯಕಾರಿ ಸಮಸ್ಯೆಯನ್ನು ನಾವಿಂದು ಗಂಭೀರವಾಗಿ ಪರಿಗಣಿಸಿಲ್ಲ. 

ಕ್ಷಯಿಸುತ್ತಿರುವ ಮುಂಗಾರು ಮಳೆ 

ಈ ವರ್ಷ ಸುರಿಯಲಿರುವ ಮುಂಗಾರು ಮಳೆಯ ಪ್ರಮಾಣವು ಎಂದಿಗಿಂತ ಒಂದಿಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿತ್ತು. ಆದರೆ ಜೂನ್ ತಿಂಗಳಿನ ಎರಡು ವಾರಗಳು ಕಳೆದ ಬಳಿಕವೂ ಪೂರ್ಣಪ್ರಮಾಣದಲ್ಲಿ ಪ್ರತ್ಯಕ್ಷವಾಗದ ಮುಂಗಾರು ಮಳೆಯು ಮುಂದಿನ ತಿಂಗಳುಗಳಲ್ಲೂ ಇದೇ ರೀತಿಯಲ್ಲಿ ಸುರಿದಲ್ಲಿ, ಕೆಲವೇ ತಿಂಗಳುಗಳಲ್ಲಿ ನೀರಿನ ಕೊರತೆಯೊಂದಿಗೆ ಬರಗಾಲದ ಸಮಸ್ಯೆಯೂ ತಲೆದೋರುವ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರವು ಇಂತಹ ಸಾಧ್ಯತೆಗಳನ್ನು ಎದುರಿಸಲು ಸಿದ್ಧತೆಗಳನ್ನು ನಡೆಸುತ್ತಿದೆ. ಆದರೆ ಈ ವಿಚಾರವನ್ನು ಅರಿತ ಬಳಿಕವೂ, ಅಧಿಕತಮ ಭಾರತೀಯರು ತಾವು ಪ್ರತಿನಿತ್ಯ ಪೋಲು ಮಾಡುತ್ತಿರುವ ನೀರಿನ ಪ್ರಮಾಣವನ್ನು ಕಡಿಮೆಮಾಡದೇ ಇದ್ದಲ್ಲಿ, ಕೆಲವೇ ವರ್ಷಗಳಲ್ಲಿ ಭಾರತದಲ್ಲಿ " ಜಲಕ್ಷಾಮ " ದ ಸಮಸ್ಯೆ ಉದ್ಭವಿಸುವುದರಲ್ಲಿ ಸಂದೇಹವಿಲ್ಲ. 

ಜಗತ್ತಿನ ಜಲ ಸಂಪನ್ಮೂಲದ ಶೇ. ೪ ರಷ್ಟನ್ನು ಹೊಂದಿರುವ ಭಾರತವು " ಜಲ ಸಮೃದ್ಧ " ದೇಶವಾಗಿತ್ತು. ಅಗಾಧ ಪ್ರಮಾಣದ ಜಲ ಸಂಪನ್ಮೂಲಗಳಿದ್ದರೂ, ೨೦೧೧ ರಲ್ಲಿ ನಮ್ಮ ದೇಶವು " ನೀರಿನ ಸಮಸ್ಯೆ " ಇರುವ ರಾಷ್ಟ್ರಗಳ ಯಾದಿಯಲ್ಲಿ ಸೇರ್ಪಡೆಗೊಂಡಿತ್ತು. ಈ ವಿಲಕ್ಷಣ ಸಮಸ್ಯೆಗೆ ಹಲವಾರು ಕಾರಣಗಳೂ ಇವೆ. 

ಬೇಡಿಕೆ - ಲಭ್ಯತೆ 

ಪ್ರಸ್ತುತ ಭಾರತದಲ್ಲಿ ನೀರಿನ ಬೇಡಿಕೆಯ ಪ್ರಮಾಣವು ೭೧೮ ಬಿಲಿಯನ್ (ಲಕ್ಷ ಕೋಟಿ) ಕ್ಯುಬಿಕ್ ಮೀಟರ್ ಗಳಾಗಿದ್ದು, ೨೦೨೫ ರಲ್ಲಿ ಈ ಪ್ರಮಾಣವು ೮೩೩ ಲಕ್ಷ ಕೋಟಿ ಕ್ಯುಬಿಕ್ ಮೀಟರ್  ತಲುಪಲಿದೆ. ಇದರಲ್ಲಿ ಕೃಷಿ ಜಮೀನಿನ ನೀರಾವರಿಗಾಗಿ ಬಳಸಲ್ಪಡುತ್ತಿದ್ದ ನೀರಿನ ಪ್ರಮಾಣವು ೨೦೧೦ ರಲ್ಲಿ  ೫೫೭ ಬಿ.ಕ್ಯು.ಮೀ. ಗಳಾಗಿದ್ದು, ೨೦೫೦ ರಲ್ಲಿ ಇದು ೮೦೭ ಬಿ.ಕ್ಯು.ಮೀ. ಆಗಲಿದೆ. ದೇಶದ ಜನರ ಗೃಹ ಬಳಕೆಯ ನೀರಿನ ಪ್ರಮಾಣವು ೨೦೧೦ ರಲ್ಲಿ ಕೇವಲ ೪೩ ಬಿ.ಕ್ಯು.ಮೀ. ಆಗಿದ್ದು, ೨೦೨೫ ರಲ್ಲಿ ೬೨ ಹಾಗೂ ೨೦೫೦ ರಲ್ಲಿ ೧೧೧ ಬಿ.ಕ್ಯು.ಮೀ. ತಲುಪಲಿದೆ. ಉದ್ದಿಮೆಗಳು ಬಳಸುತ್ತಿದ್ದ ನೀರಿನ ಪ್ರಮಾಣವು ೨೦೧೦ ರಲ್ಲಿ ಕೇವಲ ೩೭ ಬಿ.ಕ್ಯು.ಮೀ. ಆಗಿದ್ದು, ೨೦೨೫ ರಲ್ಲಿ ೬೭ ಮತ್ತು ೨೦೫೦ ರಲ್ಲಿ ೮೧ ಬಿ,ಕ್ಯು.ಮೀ. ಆಗಲಿದೆ. ಅದೇ ರೀತಿಯಲ್ಲಿ ವಿದ್ಯುತ್ ಉತ್ಪಾದನೆಗೆ ೨೦೧೦ ರಲ್ಲಿ ೧೯ ಬಿ.ಕ್ಯು.ಮೀ. ಬಳಕೆಯಾಗಿದ್ದು, ೨೦೨೫ ರಲ್ಲಿ ಇದು ೩ ಮತ್ತು ೨೦೫೦ ರಲ್ಲಿ ೭೦ ಬಿ.ಕ್ಯು.ಮೀ. ಮೀರಲಿದೆ. ಈ ರೀತಿಯಲ್ಲಿ ವಿವಿಧ ಉದ್ದೇಶಗಳಿಗಾಗಿ ನಮಗಿಂದು ಅಗಾಧ ಪ್ರಮಾಣದ ನೀರಿನ ಅವಶ್ಯಕತೆಯಿದ್ದರೂ, ದೇಶದ ಅನೇಕ ಭಾಗಗಳಲ್ಲಿ ಕಂಡುಬರುತ್ತಿರುವ ಜಲಕ್ಷಾಮದ ಸಮಸ್ಯೆ ಇನ್ನಷ್ಟು ಹೆಚ್ಚುತ್ತಿದೆ. ಆದರೆ ನಮ್ಮ ದೇಶದಲ್ಲಿ ಸುರಿಯುವ ಮಳೆನೀರಿನ ಶೇ. ೬೫ ರಷ್ಟು ಪಾಲು, ನದಿಗಳ ಮೂಲಕ ಸಮುದ್ರವನ್ನು ಸೇರುತ್ತಿದೆ. 

ಭಾರತವು ಒಂದು ವರ್ಷದಲ್ಲಿ ೨೧೦ ಬಿ.ಕ್ಯು.ಮೀ. ಗಿಂತಲೂ ಅಧಿಕ ಪ್ರಮಾಣದ ಅಂತರ್ಜಲವನ್ನು ಬಳಸುತ್ತಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕ ಎನ್ನಲಾಗಿದೆ. ನಮ್ಮ ದೇಶದಲ್ಲಿನ ಶೇ. ೬೦ ರಷ್ಟು ನೀರಾವರಿ ಜಮೀನಿಗೆ ಇದೇ ಅಂತರ್ಜಲವನ್ನು ಬಳಸಲಾಗುತ್ತಿದೆ. ತತ್ಪರಿಣಾಮವಾಗಿ ದೇಶದ ಶೇ ೬೦ ಕ್ಕೂ ಅಧಿಕ ಜಿಲ್ಲೆಗಳಲ್ಲಿ ನೀರಿನ ಕೊರತೆ ಬಾಧಿಸುತ್ತಿದೆ. 

೨೦೧೦ ರಲ್ಲಿ ಭಾರತದ ಜನಸಂಖ್ಯೆಯು ೧,೦೨೯ ದಶಲಕ್ಷವಾಗಿದ್ದು, ಅಂದಿನ ನೀರಿನ ಲಭ್ಯತೆಯ  ಪ್ರಮಾಣವು ಒಂದು ವರ್ಷದಲ್ಲಿ ತಲಾ ೧,೮೧೬ ಕ್ಯು.ಮೀಟರ್ ಆಗಿತ್ತು. ೨೦೧೧ ರಲ್ಲಿ ಜನಸಂಖ್ಯೆ ೧,೨೧೦ ದಶಲಕ್ಷ ಹಾಗೂ ನೀರಿನ ಲಭ್ಯತೆಯ ಪ್ರಮಾಣವು ೧,೫೪೫ , ೨೦೨೫ ರಲ್ಲಿ ಜನಸಂಖ್ಯೆ ೧,೩೯೪ (ಅಂದಾಜು) ದ.ಲ. ಮತ್ತು ಲಭ್ಯತೆ ೧,೩೪೦ ಮತ್ತು ೨೦೫೦ ರಲ್ಲಿ ಜನಸಂಖ್ಯೆ ೧,೬೪೦ (ಅಂದಾಜು) ದ.ಲ. ಮತ್ತು ಲಭ್ಯತೆ ೧,೧೪೦ ಕ್ಯು.ಮೀ. ತಲುಪಲಿದೆ!. ಅರ್ಥಾತ್, ನೀರಿನ ಲಭ್ಯತೆಯ ಪ್ರಮಾಣವು ಮುಂದಿನ ವರ್ಷಗಳಲ್ಲಿ ಕಡಿಮೆಯಾಗುತ್ತಾ ಹೋಗಲಿದೆ. 

ಕಲುಷಿತ ನೀರು 

ದೇಶದಲ್ಲಿನ ಉದ್ದಿಮೆಗಳು ಸ ತಾವು ಬಳಸಿ ವಿಸರ್ಜಿಸುವ ಶೇ. ೯೦ ರಷ್ಟು ಕಲುಷಿತ ನೀರನ್ನು ಶುದ್ಧೀಕರಿಸಿ ನದಿಗಳಿಗೆ ವಿಸರ್ಜಿಸುತ್ತಿವೆ. ಆದರೆ ಈ ಶುದ್ಧೀಕರಿಸಿದ ಕಲುಷಿತ ನೀರು ಪರಿಸರಸ್ನೇಹಿ ಮಾನದಂಡಗಳಿಗೆ ಅನುಗುಣವಾಗಿಲ್ಲ. ನಿಜ ಹೇಳಬೇಕಿದ್ದಲ್ಲಿ ಎಲ್ಲ ನಗರ - ಪಟ್ಟಣಗಳ ಚರಂಡಿಗಳಲ್ಲಿ ಹರಿಯುವ ಕೊಳಚೆ ನೀರನ್ನು ಸ್ನಾನಕ್ಕೆ ಯೋಗ್ಯವಾಗಿರುವಷ್ಟು ಶುದ್ಧೀಕರಿಸಲೇಬೇಕು. ಆದರೆ ನಮ್ಮ ದೇಶದಲ್ಲಿ ಇಂತಹ ನೀತಿ ನಿಯಮಗಳನ್ನು ಜಾರಿಗೊಳಿಸುವ ಮತ್ತು ಅನುಷ್ಠಾನಿಸುವ ಇಚ್ಛಾಶಕ್ತಿ ನಮ್ಮನ್ನಾಳುವವರಲ್ಲಿ ಇಲ್ಲ. 

ಭಾರತದ ಶೇ. ೭೦ ರಷ್ಟು ಪ್ರಮಾಣದ ಜಲಪ್ರದೂಷಣೆಗೆ ನಗರ - ಮಹಾನಗರಗಳು ಉತ್ಪಾದಿಸುತ್ತಿರುವ ತ್ಯಾಜ್ಯಗಳೇ ಕಾರಣವೆನಿಸಿವೆ. ದೇಶದ ಶೇ.೩೬ ಜನರು ವಾಸಿಸುವ ನಗರಗಳು ಬೃಹತ್ ಪ್ರಮಾಣದಲ್ಲಿ ಕಲುಷಿತ ನೀರನ್ನು ಉತ್ಪಾದಿಸಿ ವಿಸರ್ಜಿಸುತ್ತಿವೆ. ಅವಶ್ಯಕ ಮೂಲಸೌಕರ್ಯಗಳ ಕೊರತೆಯಿಂದಾಗಿ ನಗರಗಳು ಕೇವಲ ಶೇ.೩೧ ರಷ್ಟು ಕಲುಷಿತ ನೀರನ್ನು ಶುದ್ಧೀಕರಿಸುತ್ತಿವೆ. ಹಾಗೂ ಇನ್ನುಳಿದ ಶೇ. ೬೯ ರಷ್ಟು ಕಲುಷಿತ ನೀರನ್ನು ಯಥಾಸ್ಥಿತಿಯಲ್ಲಿ ಚರಂಡಿಗಳಲ್ಲಿ ವಿಸರ್ಜಿಸುತ್ತವೆ. ಈ ಕಲುಷಿತ ನೀರಿನಿಂದಾಗಿ ದೇಶದ ನಿವಾಸಿಗಳಿಗೆ ಅಯಾಚಿತ ಸಮಸ್ಯೆಗಳು ಬಾಧಿಸುತ್ತಿವೆ. ಇವುಗಳಲ್ಲಿ ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ಅನೇಕ ಅಮಾಯಕರು ಬಲಿಯಾಗುತ್ತಿದ್ದಾರೆ. 

ಪರಿಹಾರವೇನು?

ದೇಶದ ಪ್ರತಿಯೊಂದು ರಾಜ್ಯದ ಪ್ರತಿಯೊಂದು ನಗರ- ಪಟ್ಟಣಗಳಲ್ಲಿನ ಪ್ರತಿಯೊಂದು ಕಟ್ಟಡಗಳಲ್ಲಿ ಮಳೆನೀರು ಕೊಯ್ಲನ್ನು ಕಡ್ಡಾಯವಾಗಿಸಬೇಕು. ಇದರಿಂದಾಗಿ ನಾವಿಂದು ಬಳಸದೆ ಇರುವ ಶೇ. ೬೫ ರಷ್ಟು ಮಳೆನೀರನ್ನು ಬಳಸಿ ಉಳಿಸಬಹುದಾಗಿದೆ. 

ಅದೇ ರೀತಿಯಲ್ಲಿ ಧಾರಾಳ ನೀರು ಲಭ್ಯವಿರುವಲ್ಲಿ ಅನಾವಶ್ಯಕವಾಗಿ ಯಥೇಚ್ಛ ನೀರನ್ನು ಬಳಸಿ ಪೋಲು ಮಾಡುವ ಹವ್ಯಾಸವನ್ನು ತತ್ ಕ್ಷಣದಿಂದಲೇ ನಿಲ್ಲಿಸಬೇಕು. 

ಕಲುಷಿತ ಜಲಮೂಲಗಳಲ್ಲಿನ ನೀರನ್ನು ಶುದ್ಧೀಕರಿಸಲು ಲಭ್ಯವಿರುವ ೧೩೦ ಕ್ಕೂ ಅಧಿಕ ವಿಧದ ಸಸ್ಯಗಳನ್ನು ಮತ್ತು ಸೂಕ್ಷ್ಮಾಣುಜೀವಿಗಳನ್ನು ಬಳಸುವ ಮೂಲಕ, ಈ ನೀರಿನ ಗುಣಮಟ್ಟಗಳನ್ನು ವೃದ್ಧಿಸಬೇಕು. ಜೊತೆಗೆ ಇಂತಹ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಇನ್ನಷ್ಟು ಜನರು ಇವುಗಳನ್ನು ಬಳಸುವಂತಾಗಬೇಕು. 

ಅಂತಿಮವಾಗಿ ಬೃಹತ್ ಉದ್ದಿಮೆಗಳು, ಮಹಾನಗರಗಳು ಮತ್ತು ಅತ್ಯಧಿಕ ಪ್ರಮಾಣದಲ್ಲಿ ಜಲಪ್ರದೂಷಣೆಗೆ ಕಾರಣವೆನಿಸುವ ಮೂಲಗಳೇ, ಈ ಸಮಸ್ಯೆಯನ್ನು ಪರಿಹರಿಸಬೇಕು ಎನ್ನುವ ಕಟ್ಟುನಿಟ್ಟಿನ ಕಾನೂನನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಇವೆಲ್ಲವುಗಳೊಂದಿಗೆ ನಾವಿಂದು ಅತಿಯಾಗಿ ಬಳಸಿ ಪೋಲು ಮಾಡುತ್ತಿರುವ ಅಗಾಧ ಪ್ರಮಾಣದ ನೀರನ್ನು ಉಳಿಸಲು ಅವಶ್ಯಕ ಕ್ರಮಗಳನ್ನು ಅನುಸರಿಸಬೇಕು. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 





Monday, June 16, 2014

PROTECT ENVIRONMENT






 

 ತ್ಯಾಜ್ಯಗಳನ್ನು ಸಂಗ್ರಹಿಸಿ : ಪರಿಸರವನ್ನು ಸಂರಕ್ಷಿಸಿ 

ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಆರಂಭವಾಗುವ ಮುಂಗಾರು ಮಳೆಯ ಅಬ್ಬರವು, ಈ ಬಾರಿ ಅತ್ಯಂತ ದುರ್ಬಲವಾಗಿದೆ. ಧಾರಾಕಾರ ವರ್ಷಾಧಾರೆಗೆ ಬದಲಾಗಿ, ಬಿಸಿಲು- ಮಳೆಗಾಲ ಕಣ್ಣುಮುಚ್ಚಾಲೆ ನಡೆಯುತ್ತಲೇ ಇದೆ. ಅವಶ್ಯಕ ಪ್ರಮಾಣದ ಮಳೆ ಬೀಳದಿದ್ದಲ್ಲಿ ನೀರಿನ ಕೊರತೆಯೊಂದಿಗೆ, ಬೆಲೆಯೇರಿಕೆಯ ಬಿಸಿಯೂ ಜನಸಾಮಾನ್ಯರನ್ನು ಕಾಡಲಿದೆ. ಆದರೆ ಈ ರೀತಿಯ ಹವಾಮಾನದ ವ್ಯತ್ಯಯಗಳಿಗೆ ನಾವಿಂದು ಅತಿಯಾಗಿ ಉತ್ಪಾದಿಸುತ್ತಿರುವ ಹಾಗೂ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡದೇ ರಾಶಿಹಾಕಿರುವ ತ್ಯಾಜ್ಯಗಳೂ ಕಾರಣವೆನಿಸುತ್ತಿವೆ. ಅದರಲ್ಲೂ ನಾವು ನೀವೆಲ್ಲರೂ ಬಳಸಿ ಎಸೆಯುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳು, ಕೇವಲ ಹವಾಮಾನದ ವ್ಯತ್ಯಯ ಮಾತ್ರವಲ್ಲ, ಅನೇಕ ವಿಧದ ಅನ್ಯ ಸಮಸ್ಯೆಗಳಿಗೂ ಕಾರಣವೆನಿಸುತ್ತಿವೆ. 

ಹವಾಮಾನದ ವ್ಯತ್ಯಯ 

ಕಳೆದ ಕೆಲ ವರುಷಗಳಿಂದ ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಕಂಡುಬರುತ್ತಿರುವ ಹವಾಮಾನದ ವ್ಯತ್ಯಯಗಳಿಂದಾಗಿ, ಜನಸಾಮಾನ್ಯರಿಗೆ ಮತ್ತು ಸರ್ಕಾರಗಳಿಗೆ ಸಾಕಷ್ಟು ಕಷ್ಟನಷ್ಟಗಳು ಸಂಭವಿಸುತ್ತಿವೆ. ದೇಶದ ಒಂದು ಭಾಗದಲ್ಲಿ ಬೇಸಗೆಯ ಧಗೆಯೊಂದಿಗೆ ಏರುತ್ತಿರುವ ತಾಪಮಾನದ ಮಟ್ಟವು ಅನೇಕ ಜೀವಗಳನ್ನು ಈಗಾಗಲೇ ಬಲಿಪಡೆದಿದೆ. ಇನ್ನು ಕೆಲ ರಾಜ್ಯಗಳಲ್ಲಿ ಅಕಾಲಿಕ ಅತಿವೃಷ್ಟಿ ಹಾಗೂ ಆಲಿಕಲ್ಲು ಮಳೆ ಸುರಿದ ಪರಿಣಾಮವಾಗಿ ರೈತಾಪಿ ಜನರು ಬೆಳೆದಿರುವ ವಿವಿಧ ಬೆಳೆಗಳು ಹಾನಿಗೀಡಾಗಿವೆ. ಅದೇ ರೀತಿಯಲ್ಲಿ ಮುಂಗಾರು ಮಳೆಯ ಕಣ್ಣುಮುಚ್ಚಾಲೆಯಿಂದಾಗಿ ಹಲವಾರು ರಾಜ್ಯಗಳಲ್ಲಿ " ಬರ " ದ ಹಾಗೂ ಅನಾವೃಷ್ಟಿಯ ಭಯ ಕಾಡುತ್ತಿದೆ. ಈ ಸಮಸ್ಯೆಗೆ ಅತಿಯಾದ ಪರಿಸರ ಪ್ರದೂಷಣೆಯ ಪರಿಣಾಮವಾಗಿ ಏರುತ್ತಿರುವ ತಾಪಮಾನವೂ ಕಾರಣವೆನಿಸುತ್ತಿದೆ. ಇವೆಲ್ಲಕ್ಕೂ ಮಿಗಿಲಾಗಿ ನಾವಿಂದು ಅತಿಯಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳು ಮತ್ತು ಇದರಿಂದಾಗಿ ಸಂಭವಿಸುತ್ತಿರುವ ಪರಿಸರ ಪ್ರದೂಷಣೆ ಮೂಲವೆನಿಸುತ್ತಿರುವುದು ಸುಳ್ಳೇನಲ್ಲ. ಅಯಾಚಿತ ಸಮಸ್ಯೆಗಳಿಗೆ ಕಾರಣವೆನಿಸುತ್ತಿರುವ ಜನಸಾಮಾನ್ಯರ ಈ ಕೆಟ್ಟ ಹವ್ಯಾಸವನ್ನು ನಿವಾರಿಸದೇ ಇದ್ದಲ್ಲಿ, ಇಂತಹ ಸಮಸ್ಯೆಗಳು ಅನಿಯಂತ್ರಿತವಾಗಿ ವೃದ್ಧಿಸಲಿವೆ. 

ತ್ಯಾಜ್ಯಗಳನ್ನು ಸಂಗ್ರಹಿಸಿ 

ಜನಸಾಮಾನ್ಯರು ಪ್ರತಿನಿತ್ಯ ಉತ್ಪಾದಿಸುವ ವೈವಿಧ್ಯಮಯ ತ್ಯಾಜ್ಯಗಳನ್ನು ವೈಜ್ಞಾನಿಕ ವಿಧಾನಗಳಿಂದ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯು ನಮ್ಮ ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿಲ್ಲ. ಆದರಲ್ಲೂ ಅತ್ಯಂತ ಅಪಾಯಕಾರಿ ಎನಿಸುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಪುನರ್ ಆವರ್ತನಗೊಳಿಸುವ ಅಥವಾ ಮತ್ತೆ ಇದರಿಂದ ಇಂಧನವನ್ನು ಉತ್ಪಾದಿಸುವ ವ್ಯವಸ್ಥೆ ನಮ್ಮಲ್ಲಿ ಲಭ್ಯವಿರಲಿಲ್ಲ. ಆದರೆ ಇದೀಗ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ  ಬೆಳ್ಳಾರೆಯಲ್ಲಿ ಸುಮಾರು ೧.೬ ಕೋಟಿ ರೂ. ವೆಚ್ಚದಲ್ಲಿ ಇಂತಹ ಘಟಕವೊಂದು ಸಿದ್ಧಗೊಳ್ಳುತ್ತಿದ್ದು, ವಿವಿಧರೀತಿಯ " ಸ್ವಚ್ಚವಾಗಿರುವ ಪ್ಲಾಸ್ಟಿಕ್ ತ್ಯಾಜ್ಯ " ಗಳನ್ನು ಸಂಗ್ರಹಿಸಿ, ಇವುಗಳಿಂದ ಇಂಧನವನ್ನು ಪಡೆಯುವ ಮೂಲಕ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯನ್ನು ಪರಿಹರಿಸಲಿದೆ. ಮುಂದಿನ ತಿಂಗಳಿನಲ್ಲಿ ಪ್ರಾರಂಭವಾಗಲಿರುವ ಈ ಘಟಕಕ್ಕೆ ನಾವು ದಿನನಿತ್ಯ ಉತ್ಪಾದಿಸುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ನೀಡುವ ಮೂಲಕ ಕಿಂಚಿತ್ ಆದಾಯವನ್ನೂ ಗಳಿಸಬಹುದಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಸಿದ್ಧಗೊಳ್ಳಲಿರುವ ಈ ಘಟಕವು ಪರಿಸರಸ್ನೇಹಿಯಾಗಿದ್ದು, ಯಾವುದೇ ರೀತಿಯ ಪ್ರದೂಷಣೆಗೆ ಕಾರಣವೆನಿಸುವುದಿಲ್ಲ. ತ್ಯಾಜ್ಯ ಪ್ಲಾಸ್ಟಿಕ್ ನ್ನು ಮರುಸಂಸ್ಕರಣೆ ಮಾಡುವ ಸಂದರ್ಭದಲ್ಲಿ ಉತ್ಪನ್ನವಾಗುವ ಅನಿಲವನ್ನೇ ಈ ಘಟಕದಲ್ಲಿರುವ ಯಂತ್ರಗಳಿಗೆ ಇಂಧನವನ್ನಾಗಿ ಬಳಸುವುದರಿಂದ, ಪ್ರತ್ಯೇಕ ಇಂಧನಕ್ಕಾಗಿ ಹಣವನ್ನು ವ್ಯಯಿಸಬೇಕಾಗಿಲ್ಲ. 

ಪ್ಲಾಸ್ಟಿಕ್ ನಿಂದ ಇಂಧನ 

ಬಹುತೇಕ ಜನರಿಗೆ ಪ್ಲಾಸ್ಟಿಕ್ ತಯಾರಿಕೆಗೆ ಭೂಗರ್ಭದಲ್ಲಿ ದೊರೆಯುವ ಕಚ್ಚಾ ತೈಲವೇ ಮೂಲವೆಂದು ತಿಳಿದಿಲ್ಲ. ಕಚ್ಚಾ ತೈಲವನ್ನು ಸಂಸ್ಕರಿಸಿ ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ತಯಾರಿಸುವ ಸಂದರ್ಭದಲ್ಲಿ ಇದರ ಉಪ ಉತ್ಪನ್ನವಾಗಿರುವ ಪ್ಲಾಸ್ಟಿಕ್ ಲಭಿಸುತ್ತದೆ. ಇದೇ ಕಾರಣದಿಂದಾಗಿ ತ್ಯಾಜ್ಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮರಳಿ ತೈಲ ರೂಪಿ ಇಂಧನವನ್ನಾಗಿ ಪರಿವರ್ತಿಸಬಹುದಾಗಿದೆ. ರಿಕ್ಲೈಮೇಶನ್ ವಿಧಾನದಿಂದ ಸುಮಾರು ೫೦೦ ಕಿಲೋ ತ್ಯಾಜ್ಯ ಪ್ಲಾಸ್ಟಿಕ್ ತ್ಯಾಜ್ಯಗಳಿಂದ  ೨೫೦ ಲೀಟರ್ ದ್ರವರೂಪಿ ಇಂಧನವನ್ನು ಪಡೆಯಬಹುದಾಗಿದೆ. ಹಾಗೂ ಇದನ್ನು ವಿದ್ಯುತ್ ಜನಕ, ವಾಹನಗಳು ಮತ್ತು ಕಾರ್ಖಾನೆಗಳ ಬಾಯ್ಲರ್ ಗಳಲ್ಲಿ ಬಳಸಬಹುದಾಗಿದೆ. ಇವೆಲ್ಲಕ್ಕೂ ಮಿಗಿಲಾಗಿ ಈ ಇಂಧನದ ಬೆಲೆಯೂ ಡೀಸೆಲ್ ಹಾಗೂ ಪೆಟ್ರೋಲ್ ಗಳಿಗಿಂತಲೂ ಸಾಕಷ್ಟು ಕಡಿಮೆಯಿರುತ್ತದೆ. 

ದ.ಕ ಜಿಲ್ಲೆಯ ೨೦೩ ಗ್ರಾಮಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಈ ಘಟಕವು ಬಳಸಲಿದ್ದು, ಇದರಿಂದಾಗಿ ಪ್ಲಾಸ್ಟಿಕ್ ತ್ಯಾಜ್ಯಗಳ ವೈಜ್ಞಾನಿಕ ಮತ್ತು ಸುರಕ್ಷಿತ ವಿಲೇವಾರಿಗಾಗಿ ಈ ಸ್ಥಳೀಯ ಸಂಸ್ಥೆಗಳು ತಮ್ಮ ಆದಾಯವನ್ನು ವ್ಯಯಿಸಬೇಕಿಲ್ಲ. ಅಂತೆಯೇ ನೂತನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಸರ್ಕಾರವು ಕೋಟ್ಯಂತರ ರೂ.ಗಳನ್ನು ವ್ಯಯಿಸಬೇಕಾಗಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇಂಧನವನ್ನಾಗಿ ಪರಿವರ್ತಿಸುವ ಘಟಕಗಳನ್ನು ಸ್ಥಾಪಿಸಿದಲ್ಲಿ, ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ಬಂದುಬೀಳುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣ ಸಾಕಷ್ಟು ಕಡಿಮೆಯಾಗುವುದು. ಈ ವಿಶಿಷ್ಟ ಯೋಜನೆಯ ಯಶಸ್ಸಿಗಾಗಿ ಜನಸಾಮಾನ್ಯರ ಸಹಕಾರ ಅತ್ಯವಶ್ಯಕವೂ ಹೌದು. ಜನಸಾಮಾನ್ಯರು ತಾವು ಉತ್ಪಾದಿಸಿದ ಪ್ರತಿಯೊಂದು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಈ ಘಟಕಕ್ಕೆ ನೀಡಿದಲ್ಲಿ, ಬೀದಿಬದಿ- ಚರಂಡಿಗಳಲ್ಲಿ ತುಂಬಿರುವ ಮತ್ತು ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ರಾಶಿ ಬಿದ್ದಿರುವ ಬೆಟ್ಟದಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳು ಸದ್ಯೋಭವಿಷ್ಯದಲ್ಲಿ ಕಣ್ಮರೆಯಾಗಲಿವೆ.

ಮುಂದಿನ ತಿಂಗಳಿನಲ್ಲಿ ಕಾರ್ಯಾರಂಭ ಮಾಡಲಿರುವ ಈ ಘಟಕಕ್ಕೆ ಸ್ವಚ್ಚವಾದ ಯಾವುದೇ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನೀವು ನೀಡಬಹುದಾಗಿದೆ. ಇದಲ್ಲದೇ ನಿಮ್ಮದೇ ಊರಿನ ಗುಜರಿ ಅಂಗಡಿಗಳೂ ಎಲ್ಲಾ ವಿಧದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಖರೀದಿಸುತ್ತಿವೆ. ಆದುದರಿಂದ ಇಂದಿನಿಂದಲೇ ನೀವು ಬಳಸಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿಡಿ. ಹಾಗೂ ಇವುಗಳನ್ನು ಮಾರಾಟಮಾಡಿ ಒಂದಿಷ್ಟು ಆದಾಯವನ್ನೂ ಗಳಿಸಿ. ತನ್ಮೂಲಕ ನಿಮ್ಮ ಸುತ್ತಮುತ್ತಲ ಪರಿಸರವನ್ನು ಮತ್ತು ನಿಮ್ಮ ಊರನ್ನು ಸ್ವಚ್ಛವಾಗಿರಿಸಲು  ಸಹಕರಿಸಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


Tuesday, June 10, 2014

JUNE 14- WORLD BLOOD DONORS DAY





    ವಿಶ್ವ ರಕ್ತದಾನಿಗಳ ದಿನಾಚರಣೆ 

ಮಾತೆಯರನ್ನು ರಕ್ಷಿಸಲು ಸುರಕ್ಷಿತ ರಕ್ತ 

ನಮ್ಮ ದೇಶದಲ್ಲಿ ಪ್ರತಿನಿತ್ಯ ೮೦೦ ಕ್ಕೂ ಅಧಿಕ ಮಾತೆಯರು ಗರ್ಭಧರಿಸಿದ ಅಥವಾ ಹೆರಿಗೆಯ ಸಂದರ್ಭದಲ್ಲಿ ಉದ್ಭವಿಸಬಲ್ಲ ಸಂಕೀರ್ಣ ಸಮಸ್ಯೆಗಳಿಂದ ಮೃತಪಡುತ್ತಿದ್ದಾರೆ. ಹೆರಿಗೆಯ ಸಂದರ್ಭದಲ್ಲಿ ಮತ್ತು ಹೆರಿಗೆಯ ನಂತರ ಸಂಭವಿಸಬಹುದಾದ ತೀವ್ರ ರಕ್ತಸ್ರಾವವು ಅನೇಕ ಮಾತೆಯರ ಮರಣ, ಮಾರಕತೆ ಮತ್ತು ದೀರ್ಘಕಾಲೀನ ವೈಕಲ್ಯಗಳಿಗೆ ಪ್ರಮುಖ ಕಾರಣವೆನಿಸುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಈ ವರ್ಷದ ವಿಶ್ವ ರಕ್ತದಾನಿಗಳ ದಿನಾಚರಣೆಯ ಸಂದರ್ಭದಲ್ಲಿ, ಜನಸಾಮಾನ್ಯರಲ್ಲಿ ಈ ಗಂಭೀರ ಸಮಸ್ಯೆಯ ಬಗ್ಗೆ ಅರಿವನ್ನು ಮೂಡಿಸುವ " ಮಾತೆಯರನ್ನು ರಕ್ಷಿಸಲು ಸುರಕ್ಷಿತ ರಕ್ತ" ಎನ್ನುವ ಘೋಷಣೆಯೊಂದಿಗೆ ಅನೇಕ ಕಾರ್ಯಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ಹಮ್ಮಿಕೊಂಡಿವೆ. ಅಮಾಯಕ ಮಾತೆಯರ ಮರಣದ ಸಂಭಾವ್ಯತೆಯನ್ನು ತಡೆಗಟ್ಟಲು ಸೂಕ್ತ ಸಮಯದಲ್ಲಿ ಸುರಕ್ಷಿತ ಮತ್ತು ಅವಶ್ಯಕ ಪ್ರಮಾಣದ ರಕ್ತ ಅಥವಾ ರಕ್ತದ ಘಟಕಗಳ ಲಭ್ಯತೆಯ ಅವಶ್ಯಕತೆಯನ್ನು ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಪ್ರಜೆಗಳಿಗೆ ತಿಳಿಸುವ ಉದ್ದೇಶದಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ವಿಶ್ವ ರಕ್ತದಾನಿಗಳ ದಿನ 

ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ೨೦೦೪ ರ ಜೂನ್ ೧೪ ರಂದು ಮೊಟ್ಟಮೊದಲಬಾರಿಗೆ ಆಚರಿಸಲಾಗಿತ್ತು. ತದನಂತರ ವರ್ಷಂಪ್ರತಿ ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳಲ್ಲಿ ಇದನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಕ್ತದಾನದ ಮಹತ್ವ ಹಾಗೂ ಅವಶ್ಯಕತೆ, ಸುರಕ್ಷಿತ ರಕ್ತ ಹಾಗೂ ರಕ್ತದ ಉತ್ಪನ್ನಗಳು, ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂಪ್ರೇರಿತ ರಕ್ತದಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳೊಂದಿಗೆ, ಅಸಂಖ್ಯ ಪ್ರಾಣಗಳನ್ನು ಉಳಿಸಿರುವ ರಕ್ತದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. 

ಸುರಕ್ಷಿತ ರಕ್ತ ಮತ್ತು ರಕ್ತದ ಘಟಕಗಳ ಪೂರಣವು ಲಕ್ಷಾಂತರ ಜನರ ಪ್ರಾಣವನ್ನು ಉಳಿಸುತ್ತಿದೆ. ಪ್ರಾಣಾಪಾಯದ ಸ್ಥಿತಿಯಲ್ಲಿರುವವರನ್ನು ರಕ್ಷಿಸುವುದರೊಂದಿಗೆ, ರಕ್ತದಾನಿಗಳನ್ನು ಸುದೀರ್ಘಕಾಲ ಆರೋಗ್ಯವಂತರಾಗಿ ಜೀವಿಸಲು ನೆರವಾಗುತ್ತದೆ. ಜೊತೆಗೆ ಸಂಕೀರ್ಣ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಡೆಸಲು ಹಾಗೂ ಬಾಣಂತಿಯರು ಮತ್ತು ನವಜಾತ ಶಿಶುಗಳನ್ನು ಪ್ರಾಣಾಪಾಯದ ಸ್ಥಿತಿಯಿಂದ ಪಾರುಮಾಡುತ್ತದೆ. 

ಮಹತ್ವ 

ಕಾರ್ಲ್ ಲ್ಯಾಂಡ್ ಸ್ಟೈನರ್ ನಾಮಾಂಕಿತ ವೈದ್ಯ ಹಾಗೂ ಬಯಾಲಜಿಸ್ಟ್ ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆಧುನಿಕ ರಕ್ತಪೂರಣಾ ವಿಧಾನದ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ಈ ವೈದ್ಯರು, ೧೯೦೧ ರಲ್ಲಿ ರಕ್ತದ ಎ, ಬಿ, ಓ ಗುಂಪುಗಳನ್ನು ಪತ್ತೆಹಚ್ಚಿದ ಹಾಗೂ ಆಧುನಿಕ ಪದ್ದತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. ೧೯೩೭ ರಲ್ಲಿ ಅಲೆಕ್ಸಾಂಡರ್ ವೈನರ್ ಎನ್ನುವ ಸಂಶೋಧಕರೊಂದಿಗೆ " ರೀಸಸ್ ಫ್ಯಾಕ್ಟರ್ " ಎನ್ನುವ ಅಂಶವನ್ನು ಗುರುತಿಸುವ ಮೂಲಕ, ರೋಗಿಯ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತಪೂರಣ ಮಾಡಲು ಇವರು ಕಾರಣಕರ್ತರೆನಿಸಿದ್ದರು.

ಈ ವೈದ್ಯರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ, ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸುವ ಮೂಲಕ ಗೌರವಿಸಲಾಗಿದೆ. 

ದಾನಿಗಳ - ರಕ್ತದ ಕೊರತೆ 


ಪ್ರಸ್ತುತ ವಿಶ್ವಾದ್ಯಂತ ಕಾರಣಾಂತರಗಳಿಂದ ಪ್ರಾಣಾಪಾಯದ ಸ್ಥಿತಿಯಲ್ಲಿರುವ ರೋಗಿಗಳ ಪಾಲಿಗೆ ಸಾಕ್ಷಾತ್ " ಸಂಜೀವಿನಿ " ಎನಿಸಬಲ್ಲ ರಕ್ತದ ಪೂರೈಕೆಯ ಪ್ರಮಾಣವು, ಇದರ ಬೇಡಿಕೆಯ ಶೇ. ೩೦ ರಷ್ಟಿದೆ. ರಕ್ತದ ಪೂರೈಕೆಯ ಪ್ರಮಾಣದ ಕೊರತೆಯಿಂದಾಗಿಯೇ ಅನೇಕ ಜನರು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ನಮ್ಮ ದೇಶವೂ ಇದಕ್ಕೆ ಅಪವಾದವೆನಿಸಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ೧೮ ರಿಂದ ೫೫ ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನವನ್ನು ಮಾಡುವ ಮೂಲಕ, ತಮ್ಮ ಆರೋಗ್ಯವನ್ನು ಉನ್ನತಮಟ್ಟದಲ್ಲಿ ಕಾಪಾಡಿಕೊಳ್ಳುವುದರೊಂದಿಗೆ, ಸಾವಿನ ದವಡೆಗಳಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬನ ಜೀವವನ್ನು ಉಳಿಸಬಹುದಾಗಿದೆ. 


ಪ್ರಸ್ತುತ ವಿಶ್ವದ ೬೦ ಕ್ಕೂ ಅಧಿಕ ರಾಷ್ಟ್ರಗಳಲ್ಲಿ " ರಕ್ತಪೂರಣ ಸೇವೆ " ಯು ಸ್ವಯಂಪ್ರೇರಿತ ದಾನಿಗಳ ನೆರವಿನಿಂದಲೇ ನಡೆಯುತ್ತಿದ್ದು, ೨೦೦೨ ರಲ್ಲಿ ಇದು ಕೇವಲ ೩೯ ರಾಷ್ಟ್ರಗಳಿಗೆ ಸೀಮಿತವಾಗಿತ್ತು. ೨೦೦೨ ರ ಮೆಲ್ಬೋರ್ನ್ ಘೋಷಣೆಯಂತೆ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ೨೦೨೦ ಕ್ಕೆ ಮುನ್ನ, ರಕ್ತದಾನದ ಸೇವೆಯನ್ನು ಶತಪ್ರತಿಶತ ಯಾವುದೇ ಫಲಾಪೇಕ್ಷೆಯಿಲ್ಲದೆ ರಕ್ತವನ್ನು ನೀಡುವ ದಾನಿಗಳಿಂದಲೇ ನಡೆಯುವಂತೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. 

ಭಾರತವೂ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ರಕ್ತಪೂರಣದ ಅವಶ್ಯಕತೆ ಇರುವವರಿಗೆ ಬೇಕಾಗುವಷ್ಟು ಪ್ರಮಾಣದ ರಕ್ತವನ್ನು ದಾನಿಗಳಿಂದಲೇ ಪಡೆಯಲಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಸಮೀಪದ ಸಂಬಂಧಿಗಳಿಂದ ಮತ್ತು ಅನಿವಾರ್ಯವೆನಿಸಿದಲ್ಲಿ ಹಣವನ್ನು ಪಡೆದು ರಕ್ತವನ್ನು ನೀಡುವ ವೃತ್ತಿಪರ ದಾನಿಗಳಿಂದ ಪಡೆಯಲಾಗುತ್ತದೆ. ಇದೇ ದಶಕದ ಅಂತ್ಯಕ್ಕೆ ಮುನ್ನ, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳಲ್ಲಿ ಸ್ವಯಂಪ್ರೇರಿತ ರಕ್ತದಾನದ ಮೂಲಕ ಅವಶ್ಯಕ ಪ್ರಮಾಣದ ರಕ್ತವನ್ನು ಪಡೆಯುವ ಪದ್ಧತಿ ಜಾರಿಗೆ ಬರಬೇಕು ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಆಶಯವಾಗಿದೆ. 

ನೀವೇನು ಮಾಡಬಹುದು 

ನೀವು ಧೃಢವಾಗಿ ನಂಬಿರುವಂತೆ ಕಾರಣಾಂತರಗಳಿಂದ ಪ್ರಾಣಾಪಾಯದ ಸ್ಥಿತಿಯಲ್ಲಿರುವ ವ್ಯಕ್ತಿಯೊಬ್ಬನನ್ನು ಕೇವಲ ವೈದ್ಯರು ಮಾತ್ರ ಉಳಿಸಬಲ್ಲರು ಎನ್ನುವುದು ನಿಜವಲ್ಲ. ಇಂತಹ ವ್ಯಕ್ತಿಗಳ ಜೀವವನ್ನು ಉಳಿಸಲು ನಿಮ್ಮಿಂದಲೂ ಸಾಧ್ಯ ಎನ್ನುವುದು ಪ್ರಾಯಶಃ ನಿಮಗೂ ತಿಳಿದಿರಲಾರದು. ನೀವು ಸ್ವಯಂಪ್ರೇರಿತರಾಗಿ ನೀಡುವ ಒಂದು ಯೂನಿಟ್ ರಕ್ತವು ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ವ್ಯಕ್ತಿಗಳ ಪ್ರಾಣವನ್ನು ಉಳಿಸಲು ಅತ್ಯಂತ ಉಪಯುಕ್ತ ಎನಿಸುವುದು. 

ನಿಮಗೆ ೧೮ ವರ್ಷ ವಯಸ್ಸಾದಂದಿನಿಂದ ೬೦ ವಯಸ್ಸಿನ ತನಕ, ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಿದ್ದಲ್ಲಿ ೫೦೦ ಕ್ಕೂ ಅಧಿಕ ಜನರ ಪ್ರಾಣಗಳನ್ನು ಉಳಿಸಬಹುದಾಗಿದೆ. ತನ್ಮೂಲಕ ಧಾರಾಳ ಮಾನಸಿಕ ಸಂತೃಪ್ತಿಯೊಂದಿಗೆ ಒಂದಿಷ್ಟು ಪುಣ್ಯವನ್ನೂ ಅನಾಯಾಸವಾಗಿ ಗಳಿಸಬಹುದಾಗಿದೆ. ಇದರೊಂದಿಗೆ  ನಿಮ್ಮ ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಬಹುದಾಗಿದೆ.

ರಕ್ತದಾನ - ಶ್ರೇಷ್ಠ ದಾನ 

ಸಹಸ್ರಾರು ವರ್ಷಗಳಿಂದ ಭಾರತದ ಹಿಂದೂ ಮತ್ತು ಅನ್ಯ ಧರ್ಮೀಯರು ಸಂದರ್ಭೋಚಿತವಾಗಿ ವಿವಿಧರೀತಿಯ ದಾನಗಳನ್ನು ನೀಡುವ ಪದ್ಧತಿ ರೂಢಿಯಲ್ಲಿದೆ. ಅರ್ಹ ವ್ಯಕ್ತಿಗಳಿಗೆ ನೀಡುವ ದಾನದಿಂದ ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರಿಗೆ ಒಂದಿಷ್ಟು ಪುಣ್ಯವೂ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯೂ ನಮ್ಮ ದೇಶದಲ್ಲಿ ಇಂದಿಗೂ ಜೀವಂತವಾಗಿದೆ. ಆದರೆ ಇವೆಲ್ಲಾ ದಾನಗಳಿಗಿಂತ ಮಿಗಿಲಾದ ಮತ್ತು ಸಾವಿನ ದವಡೆಗಳಲ್ಲಿ ಸಿಲುಕಿದವರನ್ನು ಬದುಕಿಸಬಲ್ಲ ಅತ್ಯಂತ ಶ್ರೇಷ್ಠ ದಾನವೇ ರಕ್ತದಾನ. ಅಕ್ಷರಶಃ " ಜೀವದಾನ " ಎನಿಸುವ ಈ ದಾನಕ್ಕೆ ಇತರ ಯಾವುದೇ ದಾನ ಸಾಟಿಯಲ್ಲ ಎನ್ನುವುದನ್ನು ಮರೆಯದಿರಿ. ಇಂದೇ ರಕ್ತದಾನ ಮಾಡಿ. 

ಡಾ. ಸಿ.ನಿತ್ಯಾನಂದ ಪೈ, ಪುತ್ತೂರು 





Thursday, June 5, 2014

SVACHA PUTTOORU JAAGRATI ABHIYAANA




 ಸ್ವಚ್ಚ ಪುತ್ತೂರು ಜಾಗೃತಿ ಅಭಿಯಾನ 

ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯಲ್ಲಿ ಸಹಕರಿಸಿ 

ಕಳೆದ ಒಂದೆರಡು ದಶಕಗಳಲ್ಲಿ ಪುತ್ತೂರಿನ ಜನಸಂಖ್ಯೆ ಸಾಕಷ್ಟು ಹೆಚ್ಚಿದೆ. ಜನಸಂಖ್ಯೆಯ ಆಧಾರದಲ್ಲಿ ಪುತ್ತೂರು ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೆ ಏರದೇ ಇದ್ದರೂ, ತ್ಯಾಜ್ಯಗಳ ಉತ್ಪಾದನೆಯಲ್ಲಿ ಮತ್ತು ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯುವ ವಿಚಾರದಲ್ಲಿ ಪುತ್ತೂರು ನಿಸ್ಸಂದೇಹವಾಗಿಯೂ ಮೇಲ್ದರ್ಜೆಗೆ ಏರಿದೆ!. 

ಕೇವಲ ಒಂದೆರಡು ದಶಕಗಳ ಹಿಂದೆ ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಉತ್ಪನ್ನವಾಗುತ್ತಿದ್ದ ತ್ಯಾಜ್ಯಗಳನ್ನು ನಗರದ ವಿವಿಧಭಾಗಗಳಲ್ಲಿ ಇರಿಸಲಾಗಿದ್ದ ಕಸದ ತೊಟ್ಟಿಗಳಲ್ಲಿ ಹಾಕಲಾಗುತ್ತಿತ್ತು. ಪೌರಕಾರ್ಮಿಕರು ದಿನನಿತ್ಯ ಇವುಗಳನ್ನು ಸಂಗ್ರಹಿಸಿ, ನೆಕ್ಕಿಲದಲ್ಲಿರುವ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಸುರಿದು ಬರುತ್ತಿದ್ದರು. ತದನಂತರ ಗತದಶಕದಲ್ಲಿ ಅನುಷ್ಠಾನಗೊಂಡಿದ್ದ ೫೬.೯೮ ಕೋಟಿ ರೂ. ವೆಚ್ಚದ ಕುಡ್ಸೆಂಪ್ ಯೋಜನೆಗಳಲ್ಲಿ ನೆಕ್ಕಿಲದಲ್ಲಿ ಸುಸಜ್ಜಿತ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿತ್ತು. ಇದರೊಂದಿಗೆ ನಗರದ ಆಯ್ದ ಭಾಗಗಳಲ್ಲಿ ಆಧುನಿಕ ಕಸದ ತೊಟ್ಟಿಗಳನ್ನು ಇರಿಸಿ, ಇವುಗಳಲ್ಲಿ ಸಂಗ್ರಹಿತವಾಗಿದ್ದ ತ್ಯಾಜ್ಯಗಳನ್ನು ಇದಕ್ಕಾಗಿಯೇ ಒದಗಿಸಿದ್ದ ವಾಹನಗಳಲ್ಲಿ ಸಾಗಿಸಿ ನೆಕ್ಕಿಲದ ನೂತನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ತಕ್ಕ ಮಟ್ಟಿಗೆ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಕಾರ್ಯಕ್ರಮವು, ಕೆಲವೇ ವರ್ಷಗಳಲ್ಲಿ ಹಳಿತಪ್ಪಿತ್ತು. ಆದರೆ ಇದಕ್ಕೊಂದು ನಿರ್ದಿಷ್ಟ ಕಾರಣವೂ ಇದ್ದಿತು. 

ಸರ್ವೋಚ್ಛ ನ್ಯಾಯಾಲಯದ ಆದೇಶ 

ದೇಶಾದ್ಯಂತ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಯನ್ನು ವೈಜ್ಞಾನಿಕ ವಿಧಾನಗಳಿಂದ ನಡೆಸುವಂತೆ ಮತ್ತು ಬೀದಿಬದಿಗಳಲ್ಲಿ ಇರಿಸಿರುವ ಕಸದ ತೊಟ್ಟಿಗಳು ತುಂಬಿ ತುಳುಕುವ ಕಾರಣದಿಂದಾಗಿ, ಇವೆಲ್ಲಾ ಕಸದ ತೊಟ್ಟಿಗಳನ್ನು ತೆಗೆದು ತ್ಯಾಜ್ಯಗಳು ಉತ್ಪನ್ನವಾಗುವ ಸ್ಥಳಗಳಿಂದಲೇ ಸಂಗ್ರಹಿಸುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ದೇಶದ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು. ಆದರೆ ಈ ಆದೇಶವನ್ನು ಕಾರ್ಯರೂಪಕ್ಕೆ ತರುವುದು ಹೇಳಿದಷ್ಟು ಸುಲಭವಾಗಿರಲಿಲ್ಲ. ತ್ಯಾಜ್ಯ ಸಂಗ್ರಹ ಮತ್ತು ಸಾಗಾಟಕ್ಕೆ ಬೇಕಾಗುವ ಕಾರ್ಯಕರ್ತರು ಮತ್ತು ವಾಹನಗಳ ವ್ಯವಸ್ಥೆಯನ್ನು ಒದಗಿಸಲು ಆರ್ಥಿಕ ಮತ್ತು ಇತರ ಅಡಚಣೆಗಳಿದ್ದ ಸ್ಥಳೀಯ ಸಂಸ್ಥೆಗಳು, ನೂತನ ವ್ಯವಸ್ಥೆಯನ್ನು ಜಾರಿಗೊಳಿಸಲು ದಯನೀಯವಾಗಿ ವಿಫಲಗೊಂಡಿದ್ದವು. ಇದಿಷ್ಟು ಸಾಲದೆನ್ನುವಂತೆ ತ್ಯಾಜ್ಯ ಸಂಗ್ರಹಕ್ಕಾಗಿ ನಿಗದಿತ ಶುಲ್ಕವನ್ನು ಪಾವತಿಸಲು ನಿರಾಕರಿಸಿದ ಸ್ಥಳೀಯ ಜನರಿಂದಾಗಿ, ಸಮಗ್ರ ವ್ಯವಸ್ಥೆಯೇ ಕುಸಿದ ಪರಿಣಾಮವಾಗಿ ಬಹುತೇಕ ನಗರ- ಪಟ್ಟಣಗಳ ಬೀದಿಬೀದಿಗಳಲ್ಲಿ ಮತ್ತು ಚರಂಡಿಗಳಲ್ಲಿ ತ್ಯಾಜ್ಯಗಳು ರಾಶಿ ಬಿದ್ದು ಸುತ್ತ ಮುತ್ತಲ ಪರಿಸರವೇ ಅನಾರೋಗ್ಯಕರವಾಗಿ ಪರಿವರ್ತನೆಗೊಂಡಿತ್ತು. ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆಯನ್ನು ಸಮರ್ಪಕವಾಗಿ ಬಗೆಹರಿಸಲು ಸ್ಥಳೀಯ ಸಂಸ್ಥೆಗಳು ನಡೆಸಿದ್ದ ಪ್ರಯತ್ನಗಳು ಅಪೇಕ್ಷಿತ ಪರಿಣಾಮವನ್ನು ನೀಡಲು ವಿಫಲವಾಗಿದ್ದವು. ತತ್ಪರಿಣಾಮವಾಗಿ ಸರ್ವೋಚ್ಚ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದ ಸ್ಥಳೀಯ ಸಂಸ್ಥೆಗಳು, ಇದೀಗ ತಮ್ಮ ವ್ಯಾಪ್ತಿಯಲ್ಲಿ ಉತ್ಪನ್ನವಾಗುತ್ತಿರುವ ತ್ಯಾಜ್ಯಗಳನ್ನು ಸಂಗ್ರಹಿಸಿ, ಇವುಗಳನ್ನು ಪ್ರತ್ಯೇಕಿಸಿದ ಬಳಿಕ ನಿರುಪಯುಕ್ತ ತ್ಯಾಜ್ಯಗಳನ್ನು ಮಾತ್ರ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ಹರಸಾಹಸವನ್ನೇ ನಡೆಸುತ್ತಿವೆ. ಈ ವಿಚಾರದಲ್ಲಿ ಪುತ್ತೂರು ಪುರಸಭೆಯೂ ಅಪವಾದವೆನಿಸಿಲ್ಲ. 

ಜಾಗೃತಿ ಅಭಿಯಾನ 

ಪುತ್ತೂರು ಪುರಸಭೆಯ ವತಿಯಿಂದ ವಿಶ್ವ ಪರಿಸರ ದಿನದಂದು "ಸ್ವಚ್ಛ ಪುತ್ತೂರು ಜಾಗೃತಿ ಅಭಿಯಾನ" ಉದ್ಘಾಟನೆಗೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ವಸತಿ- ವಾಣಿಜ್ಯ ಕೇಂದ್ರಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸಲು ಏಳು ವಾಹನಗಳೊಂದಿಗೆ, ಸುಮಾರು ೨೫ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಅಭಿಯಾನದಲ್ಲಿ ಸ್ಥಳೀಯ ಜನರು ಮನಸ್ಪೂರ್ವಕ ಸಹಕಾರವನ್ನು ನೀಡಿದಲ್ಲಿ, ಸ್ವಚ್ಚ ಪುತ್ತೂರು ಜಾಗೃತಿ ಅಭಿಯಾನವು ಯಶಸ್ವಿಯಾಗಲಿದೆ. ಇದರೊಂದಿಗೆ ಕಂಡಲ್ಲಿ ಕಸವನ್ನು ಎಸೆಯುವ ಕೆಟ್ಟ ಪ್ರವೃತ್ತಿಯನ್ನು ತ್ಯಜಿಸಿದಲ್ಲಿ ಪುತ್ತೂರು ನಗರವು " ನಿರ್ಮಲ ನಗರ" ವಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂದೇಹವಿಲ್ಲ. 

ಕೊನೆಯ ಮಾತು 

ಜಾಗತಿಕ ಮಟ್ಟದಲ್ಲಿ ವರ್ಷದಲ್ಲಿ ಅನೇಕ "ದಿನ" ಗಳನ್ನು ಆಚರಿಸಲಾಗುತ್ತಿದ್ದು, ಬಹುತೇಕ ದಿನಗಳು ಸರಕಾರೀ ಪ್ರಾಯೋಜಿತ ಕಾರ್ಯಕ್ರಮಗಳೇ ಆಗಿರುತ್ತವೆ. ಉದಾಹರಣೆಗೆ ವಿಶ್ವ ಪರಿಸರ ದಿನಾಚರಣೆಯಂದು ಪುತ್ತೂರಿನಲ್ಲೂ ಪೂರ್ವ ನಿಗದಿತ ಕಾರ್ಯಕ್ರಮಗಳು ಜರಗಿವೆ. ಇವುಗಳಲ್ಲಿ ಪರಿಸರ ಸಂರಕ್ಷಣೆಯ ಸಲುವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನೂ ನಡೆಸಲಾಗಿತ್ತು. ಆದರೆ ಈ ಸಂದರ್ಭದಲ್ಲಿ ನೆಟ್ಟಿರುವ ಗಿಡಗಳನ್ನು ನೀರೆರೆದು ಸಂರಕ್ಷಿಸದೇ ಇದ್ದಲ್ಲಿ, ನಮ್ಮ ಸುತ್ತಮುತ್ತಲ ಪರಿಸರದಂತೆಯೇ ಈ ಗಿಡಗಳೂ ನಿರ್ಲಕ್ಷ್ಯಕ್ಕೆ ಒಳಗಾಗಿ ನಾಶವಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಸಂಬಂಧಿತರು ಗಮನ ಹರಿಸಿ, ಈ ಗಿಡಗಳನ್ನು ಮತ್ತು ನಮ್ಮ ಸುತ್ತಮುತ್ತಲ ಪರಿಸರವನ್ನು ಸಂರಕ್ಷಿಸಬೇಕಾದ ಅವಶ್ಯಕತೆಯಿದೆ.  


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

Wednesday, June 4, 2014

THE UGLY INDIAN






 " ಕುರೂಪಿ ಭಾರತೀಯ": ಕಾರ್ಯಕರ್ತರ ಸೇವೆ ಅನುಕರಣೀಯ 

ಭಾರತದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ನಗರ- ಪಟ್ಟಣಗಳ ಬಹುತೇಕ ರಸ್ತೆಗಳು ಹಾಗೂ ರಾಜ್ಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ ಅಗಾಧ ಪ್ರಮಾಣದ ವೈವಿಧ್ಯಮಯ ತ್ಯಾಜ್ಯಗಳ ರಾಶಿಗಳು ಸದಾ  ಕಾಣಸಿಗುತ್ತವೆ. ಈ ಸಮಸ್ಯೆಯು ಅನಿಯಂತ್ರಿತವಾಗಿ ವೃದ್ಧಿಸುತ್ತಲೇ ಇದ್ದು, ಇದನ್ನು ಪರಿಹರಿಸುವುದು ಬಿಡಿ, ನಿಯಂತ್ರಿಸಲೂ ಆಗದಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಬಗ್ಗೆ ತತ್ಸಂಬಂಧಿತ ಅಧಿಕಾರಿಗಳು ಮತ್ತು ಸಿಬಂದಿಗಳನ್ನು ದೂರುವ ನಾಗರಿಕರು, ತಾವು ಅತಿಯಾಗಿ ಉತ್ಪಾದಿಸಿ ಕಂಡಲ್ಲಿ ಎಸೆಯುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆಮಾಡುವ ಅಥವಾ ಸ್ಥಳೀಯ ಸಂಸ್ಥೆಗಳ ಸಿಬಂದಿಗಳೊಂದಿಗೆ ಸಹಕರಿಸುವ ವಿಚಾರವನ್ನು ಅನುಕೂಲಕರವಾಗಿ ಮರೆತುಬಿಡುತ್ತಾರೆ!. 

ನಮ್ಮದೇ ರಾಜ್ಯದ ಅನೇಕ ನಗರ- ಪಟ್ಟಣಗಳ ಪ್ರಧಾನ ರಸ್ತೆಯೂ ಸೇರಿದಂತೆ ಅಧಿಕತಮ ರಸ್ತೆಗಳ ಬದಿಗಳಲ್ಲಿ ಎಸೆದ ತ್ಯಾಜ್ಯಗಳು ಕೊಳೆತು ನಾರುತ್ತಿದ್ದರೂ, ಇನ್ನಷ್ಟು ತ್ಯಾಜ್ಯಗಳನ್ನು ಅದೇ ರಾಶಿಯ ಮೇಲೆ ತಂದು ಸುರಿಯುವ ಜನರು, ತಾವು ಮಾಡುತ್ತಿರುವ ತಪ್ಪನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಾರೆ. ಜೊತೆಗೆ ಪೌರ ಕಾರ್ಮಿಕರು ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳನ್ನು ದೂಷಿಸುತ್ತಾರೆ. ಆದರೆ ಈ ರೀತಿಯಲ್ಲಿ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದು ಕಾನೂನುಬಾಹಿರ ಮತ್ತು ಅನಾರೋಗ್ಯಕರ ಎನ್ನುವುದನ್ನು ಮರೆತುಬಿಡುತ್ತಾರೆ!. 

ದ ಅಗ್ಲಿ ಇಂಡಿಯನ್ 

ದೇಶದ ಮೂಲೆಮೂಲೆಗಳಲ್ಲಿ ಕಂಡುಬರುತ್ತಿರುವ ಈ ಸಮಸ್ಯೆಯನ್ನು ಸದ್ದು ಗದ್ದಲವಿಲ್ಲದೇ ಪರಿಹರಿಸುವ ಪ್ರಾಮಾಣಿಕ ಪ್ರಯತ್ನವೊಂದು ಇದೀಗ ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ನಡೆಯುತ್ತಿದೆ. ವಿಶೇಷವೆಂದರೆ ಇದನ್ನು ಪರಿಹರಿಸಲು ಪ್ರಯತ್ನಿಸುತ್ತಿರುವ " ದ ಅಗ್ಲಿ ಇಂಡಿಯನ್ " ಎನ್ನುವ ಸ್ವಯಂ ಸೇವಾ ಸಂಘಟನೆಯ ಅನಾಮಧೇಯ ಸದಸ್ಯರು, ಈಗಾಗಲೇ ತಮ್ಮ ಕೈಚಳಕವನ್ನು ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ತೋರಿದ್ದಾರೆ. ದಾರಿಹೋಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಸ್ಥಳಗಳಲ್ಲಿ ರಾಶಿಬಿದ್ದಿರುವ ತ್ಯಾಜಗಳನ್ನು ತೆಗೆದು, ಈ ಪ್ರದೇಶವನ್ನು ಸ್ವಚ್ಚಗೊಳಿಸಿದ ಬಳಿಕ ಅವಶ್ಯಕತೆಯಿದ್ದಲ್ಲಿ ಕಾಲುದಾರಿಗಳನ್ನು ದುರಸ್ಥಿಪಡಿಸುವುದರೊಂದಿಗೆ ಅಕ್ಕಪಕ್ಕದಲ್ಲಿರಬಹುದಾದ ಗೋಡೆಗಳಿಗೆಮತ್ತು ಕಾಲುದಾರಿಯ ಅಂಚಿಗೆ ಸುಣ್ಣ ಬಣ್ಣಗಳನ್ನು ಬಳಿದು ಆಕರ್ಷಕವಾಗಿ ಕಾಣುವಂತೆ ಪರಿವರ್ತಿಸುತ್ತಾರೆ.ಸ್ಥಳಾವಕಾಶವಿದ್ದಲ್ಲಿ ಜನರು ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳನ್ನೂಅಳವಡಿಸುತ್ತಾರೆ. "ಸ್ಪಾಟ್ ಫಿಕ್ಸಿಂಗ್ " ಎಂದು ಕರೆಯಲ್ಪಡುವ ಈ ವಿಶಿಷ್ಟ ಕಾರ್ಯಾಚರಣೆಯು, ಅತ್ಯಂತ ಅಸಹ್ಯಕರ ಎನಿಸುವಂತಿದ್ದ ಸ್ಥಳಗಳನ್ನು ಅತ್ಯಂತ ನಿರ್ಮಲ ಹಾಗೂ ಆಕರ್ಷಕವಾಗಿ ಪರಿವರ್ತಿಸಲು ಯಶಸ್ವಿಯಾಗಿದೆ. ೨೫ ರಿಂದ ೪೦ ವರ್ಷ ವಯಸ್ಸಿನ ಈ " ಪ್ರಜ್ಞಾವಂತ ನಾಗರಿಕ "  ಸಂಘಟನೆಯ ಸದಸ್ಯರು ಉನ್ನತ ವಿದ್ಯಾಭ್ಯಾಸವನ್ನು ಪಡೆದು ಉತ್ತಮ ಉದ್ಯೋಗಗಳಲ್ಲಿದ್ದರೂ, ಇಂತಹ ಕೆಲಸಗಳಲ್ಲಿ ಭಾಗಿಯಾಗಲು ಹಿಂಜರಿಯುವುದೇ ಇಲ್ಲ!. 

ನಮ್ಮ ರಸ್ತೆಗಳ ಬದಿಗಳಲ್ಲಿ ರಾಶಿಬಿದ್ದಿರುವ ತ್ಯಾಜ್ಯಗಳ ಸಮಸ್ಯೆಯ ಬಗ್ಗೆ ಪ್ರಬಲವಾದ ಭಾವನೆಗಳನ್ನು ಹೊಂದಿರುವ ಈ ಸಂಘಟನೆಯ ಸದಸ್ಯರು " ಸ್ಟಾಪ್ ಟಾಕಿಂಗ್, ಸ್ಟಾರ್ಟ್ ವರ್ಕಿಂಗ್ " ಎನ್ನುವ ಮಾತನ್ನು ಅಕ್ಷರಶಃ ಪರಿಪಾಲಿಸುತ್ತಾರೆ. ಯಾವುದೇ ಸಮಸ್ಯೆಯ ಬಗ್ಗೆ ಯಾರನ್ನೂ ದೂರದೇ, ನೇರವಾಗಿ ಇದನ್ನು ಪರಿಹರಿಸಲು ಸರಳವಾದ ಕಾರ್ಯತಂತ್ರವನ್ನು ಜಾರಿಗೊಳಿಸುವ ಮೂಲಕ ಅಪೇಕ್ಷಿತ ಪರಿವರ್ತನೆಯನ್ನು ಅನುಷ್ಠಾನಿಸುವ ಈ ಸಂಘಟನೆಯ ಕೆಲಸಕಾರ್ಯಗಳು  ಅನುಕರಣೀಯವೂ ಹೌದು. ಇವರ ಅಭಿಪ್ರಾಯದಂತೆ ನಾಗರಿಕ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಪರಿಹರಿಸಬಲ್ಲ ಮಂತ್ರದಂಡ ನಮಗಿಂದು ಲಭ್ಯವಿಲ್ಲ. ಆದರೆ ನಾವಿಂದು ಎದುರಿಸುತ್ತಿರುವ ಬಹುತೇಕ ನಾಗರಿಕ ಸಮಸ್ಯೆಗಳಲ್ಲಿ, ತ್ಯಾಜ್ಯಗಳ ಸಮಸ್ಯೆ ಪ್ರಮುಖವಾಗಿದ್ದು, ಇದಕ್ಕೆ ಜನರ ವರ್ತನೆ ಮತ್ತು ಧೋರಣೆಗಳೇ ಕಾರಣವೆನಿಸಿವೆ. ಈ ಸಮಸ್ಯೆಯನ್ನು ನಾವಿಂದು ಪರಿಹರಿಸಬಹುದಾಗಿದೆ. ಇದಕ್ಕಾಗಿ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬದಲಾಯಿಸುವ, ಸಾಕಷ್ಟು ಹಣವನ್ನು ವ್ಯಯಿಸುವ ಮತ್ತು ವ್ಯವಸ್ಥೆಯನ್ನೇ ಬದಲಾಯಿಸುವ ಅವಶ್ಯಕತೆಯಿಲ್ಲ. ಕೇವಲ " ಕುಶಲ ಕಲ್ಪನೆ"( Smart ideas) ಗಳ ಮೂಲಕ ಜನರ ಸಾಂಸ್ಕೃತಿಕ ವರ್ತನೆಗಳು ಮತ್ತು ಧೋರಣೆಗಳನ್ನು ಬದಲಾಯಿಸಬೇಕಾಗುವುದು. ಇದಕ್ಕಾಗಿ ಈ ಕುಶಲ ಕಲ್ಪನೆಗಳನ್ನು ಯಶಸ್ವಿಗೊಳಿಸಲು ಒಂದಿಷ್ಟು ಶ್ರಮಿಸಬೇಕಾಗುತ್ತದೆ. 

ಅಗ್ಲಿ ಇಂಡಿಯನ್ ಸಂಘಟನೆಯು ಭಾಷಣಗಳನ್ನು ಬಿಗಿಯುವ, ಕರಪತ್ರಗಳನ್ನು ಹಂಚುವುದೇ ಮುಂತಾದ ವಿಧಾನಗಳನ್ನು ಅನುಸರಿಸದೇ, ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಬೆಂಬಲಿಸುವ ಮೂಲಕ ಹಾಗೂ ಇದರ ಪರಿಣಾಮವನ್ನು ವೃದ್ಧಿಸುವ ಮೂಲಕ ಒಳಿತನ್ನು ಮಾಡುತ್ತದೆ. ನಮ್ಮ ಸಂಘಟನೆಯ ಸದಸ್ಯರು ಅನಾಮಧೇಯರಾಗಿ ಉಳಿದುಕೊಳ್ಳಲು ಇವರ ಪರಿಚಯ ಅಥವಾ ನಿರ್ದಿಷ್ಟ ವ್ಯಕ್ತಿಯೊಬ್ಬನ ವಿಚಾರ ಮಹತ್ವಪೂರ್ಣವಲ್ಲ. ಏಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಕಣ್ಣಿಗೆ ಕಾಣುವ ಪರಿಣಾಮ ದೊರೆಯಲು ನೂರರು ಜನರ ಬೆಂಬಲದ ಅವಶ್ಯಕತೆಯಿದೆ. ಪ್ರತಿಯೊಂದು ಸಮುದಾಯದಲ್ಲಿ ಒಬ್ಬ "ಕುರೂಪಿ ಭಾರತೀಯ"ನಿದ್ದು, ಈತನು ಮೊದಲ ಹೆಜ್ಜೆಯನ್ನಿರಿಸಬೇಕು. ಆದರೆ ಇದಕ್ಕೆ ಸಮಗ್ರ ಸಮುದಾಯವು ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದಲ್ಲಿ, ಈ ಹೆಜ್ಜೆಯೂ ಅಪೇಕ್ಷಿತ ಪರಿಣಾಮವನ್ನು ನೀಡಲು ಯಶಸ್ವಿಯಾಗದು ಎನ್ನುವುದು  ಸಂಘಟನೆಯ ಅಭಿಪ್ರಾಯವಾಗಿದೆ. 

ಪ್ರಸ್ತುತ ಭಾರತದ ಅನೇಕ ಮಹಾನಗರ ಮತ್ತು ಪ್ರಮುಖ ನಗರಗಳಾಗಿರುವ ಬೆಂಗಳೂರು, ಆಗ್ರಾ, ಕಾನ್ಪುರ, ವಿಶಾಖಪಟ್ಟಣ, ಹೈದರಾಬಾದ್, ಮುಂಬೈ, ಪುಣೆಗಳಲ್ಲಿ ದ ಅಗ್ಲಿ ಇಂಡಿಯನ್ ಸಂಘಟನೆಯು ಕಾರ್ಯಾಚರಿಸುತ್ತಿದ್ದು, ಸದ್ಯೋಭವಿಷ್ಯದಲ್ಲಿ ಚೆನ್ನೈ, ದೆಹಲಿ, ಗೋವಾ ಮತ್ತಿತರ ಪ್ರದೇಶಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಈ ಸಂಘಟನೆಯ ಕಾರ್ಯತಂತ್ರದ ಯಶಸ್ಸನ್ನು ಗಮನಿಸಿರುವ ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಶಿಯಾ ಮತ್ತು ಇತರ ಯುರೋಪಿಯನ್ ದೇಶಗಳು ಇವರು ನಡೆಸುವ "ಸ್ಪಾಟ್ ಫಿಕ್ಸಿಂಗ್ " ಬಗ್ಗೆ ಅರಿತುಕೊಳ್ಳಲು ಇವರನ್ನು ಸಂಪರ್ಕಿಸಿದ್ದಾರೆ.

ಈ ಸಂಘಟನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಅರಿತುಕೊಳ್ಳಲು ಅಂತರ್ಜಾಲ ತಾಣದ ಮೂಲಕ ಇದರ ವಿವರಗಳನ್ನು ಅರಿತುಕೊಳ್ಳಬಹುದು. ಅಂತೆಯೇ ಪ್ರತಿಯೊಂದು ಊರಿನಲ್ಲೂ ಇಂತಹ ಸಂಘಟನೆಯನ್ನು ಪ್ರಾರಂಭಿಸಿ, ಇದೇ ರೀತಿಯಲ್ಲಿ ಕಾರ್ಯಾಚರಿಸಿದಲ್ಲಿ  ನಮ್ಮ ದೇಶದ ಪ್ರತಿಯೊಂದು ನಗರ- ಪಟ್ಟಣಗಳು " ನಿರ್ಮಲ ನಗರ" ಗಳಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಚಿತ್ರ- ಬೆಂಗಳೂರಿನ ತ್ಯಾಜ್ಯಭರಿತ ಪ್ರದೇಶವನ್ನು ಸ್ವಚ್ಚ ಹಾಗೂ ಆಕರ್ಷಕವಾಗಿ ಪರಿವರ್ತಿಸಿರುವ ದೃಶ್ಯ.