Saturday, September 27, 2014

SVACH BHAARAT: SVASTH - SUNDAR BHAARAT




 ಸ್ವಚ್ಛ ಭಾರತ: ಸ್ವಸ್ಥ - ಸುಂದರ ಭಾರತ 

ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಗಾಂಧೀಜಿಯವರ ಜನ್ಮದಿನವಾಗಿರುವ ಅಕ್ಟೋಬರ್ ೨ ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆಯನ್ನು ನೀಡಲಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯೂ ವರ್ಷದಲ್ಲಿ ೧೦೦ ಗಂಟೆಗಳನ್ನು ಸ್ವಚ್ಚತಾ ಅಭಿಯಾನಕ್ಕಾಗಿ ಮೀಸಲಿಡಬೇಕು ಎಂದು ವಿನಂತಿಸಿದ್ದಾರೆ. ಮೋದಿಯವರ ಅಭಿಯಾನದಲ್ಲಿ ಪ್ರತಿಯೊಬ್ಬರೂ ಭಾಗಿಯಾದಲ್ಲಿ, ನಮ್ಮ ದೇಶವೂ ಅನ್ಯ ಪಾಶ್ಚಾತ್ಯ ದೇಶಗಳಂತೆ ಸ್ವಚ್ಛವಾಗುವುದರೊಂದಿಗೆ, ಸ್ವಸ್ಥ ಹಾಗೂ ಸುಂದರವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಈ ಅಭಿಯಾನದಲ್ಲಿ ಪ್ರಚಾರದ ಸಲುವಾಗಿ ಭಾಗಿಯಾಗಿ, ಮರುದಿನ ಮತ್ತೆ ಎಂದಿನಂತೆ ತ್ಯಾಜ್ಯಗಳನ್ನು ಅತಿಯಾಗಿ ಉತ್ಪಾದಿಸುವುದರೊಂದಿಗೆ, ಕಂಡಲ್ಲಿ ಇವುಗಳನ್ನು ಎಸೆಯುವುದು ಈ ಅಭಿಯಾನದ ವೈಫಲ್ಯದೊಂದಿಗೆ ಮತ್ತಷ್ಟು ಸಮಸ್ಯೆಗಳಿಗೆ ಕಾರಣವೆನಿಸಲಿದೆ.

ಸ್ವಚ್ಛತೆ- ಆರೋಗ್ಯ 

ಮನುಷ್ಯನ ಆರೋಗ್ಯ ಮತ್ತು ಸ್ವಚ್ಛತೆಗಳಿಗೆ ಅವಿನಾಭಾವ ಸಂಬಂಧವಿದೆ. ನಮ್ಮ ವೈಯುಕ್ತಿಕ ಮತ್ತು ಸುತ್ತಮುತ್ತಲ ಪರಿಸರದ ಸ್ವಚ್ಛತೆಗಳಿಗೆ ಅನುಗುಣವಾಗಿ ನಮ್ಮ ಆರೋಗ್ಯ ಮತ್ತು ಅನಾರೋಗ್ಯಗಳ ಸ್ಥಿತಿಗತಿಗಳು ಬದಲಾಗುತ್ತವೆ. ಅದೇ ರೀತಿಯಲ್ಲಿ ನಾವಿಂದು ಅತಿಯಾಗಿ ಉತ್ಪಾದಿಸಿ, ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳು, ಪರಿಸರದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿವೆ. ತತ್ಪರಿಣಾಮವಾಗಿ ಜಾಗತಿಕ ತಾಪಮಾನದ ಹೆಚ್ಚಳ ಮತ್ತು ಹವಾಮಾನದ ವ್ಯತ್ಯಯಗಳಂತಹ ಗಂಭೀರ ಸಮಸ್ಯೆಗಳು ಉದ್ಭವಿಸುತ್ತಿವೆ. 

ಒಂದೆಡೆ ಕುಂಭದ್ರೋಣ ಮಳೆಯಿಂದಾಗಿ ಪ್ರವಾಹ ಬಾಧಿಸಿದಲ್ಲಿ, ಮತ್ತೊಂದೆಡೆ ಬರದ ಬಾಧೆಯಿಂದಾಗಿ ಕುಡಿಯುವ ನೀರಿಗೂ ತತ್ವಾರವಾಗುತ್ತಿದೆ. ಮತ್ತೆ ಕೆಲವೆಡೆ ಕಡುಬೇಸಗೆಯ ದಿನಗಳಲ್ಲೂ ಆಲಿಕಲ್ಲು ಮಳೆ ಸುರಿಯುವ ಹಾಗೂ ಚಳಿಗಾಲದ ದಿನಗಳಲ್ಲಿ ವಿಪರೀತ ಸೆಖೆಯ ಪೀಡೆ ಕಾಡುವ ವಿಚಾರ ಜನಸಾಮಾನ್ಯರಿಗೂ ತಿಳಿದಿದೆ. ಆದರೆ ಇಂತಹ ಸಮಸ್ಯೆಗಳಿಗೆ ಹೆಚ್ಚುತ್ತಿರುವ ದೇಶದ ಜನಸಂಖ್ಯೆ, ವಾಹನಗಳ ಸಂಖ್ಯೆ, ಪೋಲುಮಾಡುತ್ತಿರುವ ಅಮೂಲ್ಯ ನೀರು, ವಾತಾವರಣದಲ್ಲಿ ಬಿಡುಗಡೆ ಮಾಡುತ್ತಿರುವ ಹಸಿರುಮನೆ ಅನಿಲಗಳೊಂದಿಗೆ, ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ವೈವಿಧ್ಯಮಯ ತ್ಯಾಜ್ಯಗಳೂ ಕಾರಣ ಎನ್ನುವುದು ಅನೇಕರಿಗೆ ತಿಳಿದಿಲ್ಲ. ವರ್ಷದಲ್ಲೊಮ್ಮೆ ವನಮಹೋತ್ಸವವನ್ನು ಆಚರಿಸಿ ಒಂದಷ್ಟು ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಇದು ಪರಿಹಾರಗೊಳ್ಳುವುದೂ ಇಲ್ಲ. 

ತ್ಯಾಜ್ಯ ವಿಲೇವಾರಿಯ ಸಮಸ್ಯೆ 

ನಮ್ಮ ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಪ್ರತಿನಿತ್ಯ ನಾಲ್ಕರಿಂದ ಐದು ಟನ್ ತ್ಯಾಜ್ಯಗಳನ್ನು ಉತ್ಪಾದಿಸಲಾಗುತ್ತಿದ್ದು, ಇದನ್ನು ಕ್ರಮಬದ್ಧವಾಗಿ ವಿಂಗಡಿಸಿ, ಸುರಕ್ಷಿತವಾಗಿ ಸಾಗಿಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಅಸಾಧ್ಯವೆನಿಸುತ್ತಿದೆ. ಜೊತೆಗೆ ಈಗಾಗಲೇ ನಿರ್ಮಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕಗಳು ಹಾಗೂ ಲ್ಯಾಂಡ್ ಫಿಲ್ ಸೈಟ್ ಗಳು ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿದ್ದು, ಇನ್ನಷ್ಟು ತ್ಯಾಜ್ಯ ವಿಲೇವಾರಿ ಘಟಕಗಳು ಮತ್ತು ಲ್ಯಾಂಡ್ ಫಿಲ್ ಸೈಟ್ ಗಳನ್ನುನಿರ್ಮಿಸಲು ನಗರಗಳ ಹೊರವಲಯಗಳಲ್ಲಿರುವ ಹಳ್ಳಿಗಳ ನಿವಾಸಿಗಳು ಸಂಮತಿಸುತ್ತಿಲ್ಲ.ಈ ಸಮಸ್ಯೆಗೆ ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳೂ ಅಪವಾದವೆನಿಸಿಲ್ಲ. ದೇಶದ ಸರ್ವೊಚ್ಛ ನ್ಯಾಯಾಲಯವು ದೇಶದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವೈಜ್ಞಾನಿಕ ವಿಧಾನಗಳಿಂದ ತ್ಯಾಜ್ಯ ವಿಲೇವಾರಿ ಮಾಡಬಲ್ಲ ಘಟಕಗಳನ್ನು ಸ್ಥಾಪಿಸುವಂತೆ ಆದೇಶಿಸಿ ಹಲವಾರು ವರ್ಷಗಳೇ ಸಂದಿವೆ. ಆದರೆ ಈ ಆದೇಶವು ಈಗಾಗಲೇ ಕಸದ ಬುಟ್ಟಿಯನ್ನು ಸೇರಿದೆ. ಏಕೆಂದರೆ ಕಂಡಲ್ಲಿ ಕಸವನ್ನು ಎಸೆಯುವ ಜನರ ಕೆಟ್ಟ ಹವ್ಯಾಸದಿಂದಾಗಿ, ಇವೆಲ್ಲವನ್ನೂ ಪ್ರತಿನಿತ್ಯ ಸಂಗ್ರಹಿಸುವುದು ಪೌರ ಕಾರ್ಮಿಕರಿಗೂ ಅಕ್ಷರಶಃ ಅಸಾಧ್ಯವೆನಿಸುತ್ತಿದೆ. 

ವ್ಯವಸ್ಥೆಯ ವೈಫಲ್ಯ 

ವಿಶೇಷವೆಂದರೆ ಅನೇಕ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯಗಳು ಉತ್ಪನ್ನವಾಗುತ್ತಿರುವ ಮೂಲಗಳಿಂದಲೇ ಸಂಗ್ರಹಿಸಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿವೆ. ಈ ವ್ಯವಸ್ಥೆಗಾಗಿ ಅಲ್ಪಪ್ರಮಾಣದ ಶುಲ್ಕವನ್ನೂ ನಿಗದಿಸಿವೆ. ಆದರೆ ಮಾಸಿಕ ೩೦ ರಿಂದ ೫೦ ರೂ.ಶುಲ್ಕವನ್ನು ನೀಡಲು ಸಿದ್ಧರಿಲ್ಲದ ಜನರಿಂದಾಗಿ, ಸಮಗ್ರ ವ್ಯವಸ್ಥೆಯೇ ವಿಫಲವೆನಿಸುತ್ತಿದೆ. ಶುಲ್ಕವನ್ನು ನೀಡಲು ನಿರಾಕರಿಸುವ ಜನರು ತಮ್ಮ ವಸತಿ- ವಾಣಿಜ್ಯ ಕಟ್ಟಡಗಳಲ್ಲಿ ದಿನನಿತ್ಯ ಸಂಗ್ರಹವಾಗುವ ತ್ಯಾಜ್ಯಗಳನ್ನು ಕತ್ತಲಾದ ಬಳಿಕ ಅಥವಾ ಹೊತ್ತುಮೂಡುವ ಮುನ್ನ, ಸಮೀಪದ ಖಾಲಿಜಾಗಗಳಲ್ಲಿ ಅಥವಾ ಮಳೆನೀರು ಹರಿವ ಚರಂಡಿಗಳಲ್ಲಿ ಎಸೆದು ಮರೆಯಾಗುತ್ತಾರೆ. ಈ ತ್ಯಾಜ್ಯಗಳು ಮಳೆನೀರಿನ ಹರಿವಿಗೆ ಅಡಚಣೆಯನ್ನು ಒಡ್ಡುವುದರಿಂದ, ಅಲ್ಲಲ್ಲಿ ಮಡುಗಟ್ಟಿ ನಿಂತ ನೀರು ಸೊಳ್ಳೆಗಳ ಸಂತಾನಾಭಿವೃದ್ಧಿ ಕೇಂದ್ರವಾಗಿ ಪರಿಣಮಿಸುತ್ತದೆ. ಹಾಗೂ ಸೊಳ್ಳೆ, ಇಲಿ ಮತ್ತು ಕಲುಷಿತ ನೀರಿನಿಂದ ಉದ್ಭವಿಸಿ ಹರಡುವ ವ್ಯಾಧಿಗಳಿಗೆ ಮೂಲವೆನಿಸುತ್ತದೆ. ಇದಕ್ಕೂ ಮಿಗಿಲಾಗಿ ಬೃಹತ್ ಚರಂಡಿಗಳಲ್ಲಿ ಎಸೆದ ತ್ಯಾಜ್ಯಗಳು ಮಳೆನೀರಿನೊಂದಿಗೆ ಹರಿದು, ನದಿ ಹಾಗೂ ಸಮುದ್ರಗಳನ್ನು ಸೇರುತ್ತಿವೆ. ಇದರಿಂದಾಗಿ ಜಲಚರಗಳಿಗೂ ಕಂಟಕವಾಗಿ ಪರಿಣಮಿಸುತ್ತಿವೆ. ಕಡಲ ಒಡಲಲ್ಲಿ ತುಂಬಿರುವ ಅಗಾಧ ಪ್ರಮಾಣದ ತ್ಯಾಜ್ಯಗಳ ಹಾಗೂ ಇವುಗಳ ದುಷ್ಪರಿಣಾಮಗಳ ಬಗ್ಗೆ ಅಂತರ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಗಳು ಈಗಾಗಲೇ ಎಚ್ಚರಿಕೆಯನ್ನು ನೀಡಿವೆ.

ಕಷ್ಟನಷ್ಟಗಳಿಗೆ ಮೂಲ 

ಯಾವುದೇ ದೇಶದ ಪ್ರಜೆಗಳಿಗೆ ಅತಿಯಾದ ಅನಾರೋಗ್ಯದ ಸಮಸ್ಯೆಗಳು ಪೀಡಿಸುತ್ತಿದ್ದಲ್ಲಿ, ದೇಶದ ಉತ್ಪಾದನೆಯ ಹಾಗೂ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂತೆಯೇ ಅನಾರೋಗ್ಯ ಪೀಡಿತ ಜನರು ದುಡಿಯಲಾಗದೇ ಇರುವುದರಿಂದ, ಅವರ ಆದಾಯಕ್ಕೂ ಕತ್ತರಿ ಬೀಳುತ್ತದೆ. ಆದಾಯವಿಲ್ಲದ ಕಾರಣದಿಂದಾಗಿ ಔಷದ ಸೇವಿಸದೇ ಇದ್ದಲ್ಲಿ, ಅನಾರೋಗ್ಯದ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ ಸಹಸ್ರಾರು " ಮಾನವ ಘಂಟೆ" ಗಳು ನಷ್ಟವಾಗುತ್ತವೆ. ಅದೇ ರೀತಿಯಲ್ಲಿ ಪ್ರಜೆಗಳ ಅನಾರೋಗ್ಯದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ನಷ್ಟ ಸಂಭವಿಸುತ್ತದೆ.

ಪ್ರಜ್ಞಾಪರಾಧ

ಮನುಷ್ಯನು ಗೊತ್ತಿದ್ದೂ ಮಾಡುವ ಅಪರಾಧವನ್ನು ಪ್ರಜ್ಞಾಪರಾಧ ಎನ್ನುತ್ತಾರೆ. ಆಯುರ್ವೇದ ಸಂಹಿತೆಗಳಲ್ಲಿ ಉಲ್ಲೇಖಿಸಿರುವ ಈ ಪ್ರಮುಖ ವಿಚಾರವು, ತ್ಯಾಜ್ಯಗಳಿಂದ ಉದ್ಭವಿಸುತ್ತಿರುವ ವೈವಿಧ್ಯಮಯ ಆರೋಗ್ಯದ ಮತ್ತಿತರ ಸಮಸ್ಯೆಗಳ ವಿಚಾರದಲ್ಲಿ ಶತಪ್ರತಿಶತ ಸತ್ಯವೆನಿಸುತ್ತಿದೆ. ನಿಜ ಹೇಳಬೇಕಿದ್ದಲ್ಲಿ ದೇಶದ ಅಧಿಕತಮ ವಿದ್ಯಾವಂತರಿಗೆ ಇವೆಲ್ಲಾ ವಿಚಾರಗಳ ಅರಿವಿದೆ. ಆದರೆ ಸ್ವಯಂ ವಿದ್ಯಾವಂತರೇ ಬಳಸಿ ಎಸೆಯುವ ವಸ್ತುಗಳನ್ನು ಅತಿಯಾಗಿ ಬಳಸುವ ಮೂಲಕ, ತ್ಯಾಜ್ಯಗಳ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ. ಇದರೊಂದಿಗೆ ಅಲ್ಲಲ್ಲಿ ರಾಶಿಬಿದ್ದಿರುವ ತ್ಯಾಜ್ಯಗಳನ್ನು ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರು ತೆರವುಗೊಳಿಸುತ್ತಿಲ್ಲ ಎಂದು ದೂರುವ ಜನರು, ಅಲ್ಲಲ್ಲಿ ತ್ಯಾಜ್ಯಗಳನ್ನು ಎಸೆಯುವ ಅವಿವೇಕಿಗಳ ಬಗ್ಗೆ ತುಟಿ ಬಿಚ್ಚುವುದೇ ಇಲ್ಲ!.

ನೀವೇನು ಮಾಡಬಹುದು  

ಅದೇನೇ ಇರಲಿ, ಇದೀಗ ದೇಶದ ಪ್ರಧಾನ ಮಂತ್ರಿಯವರು ವಿನಂತಿಸಿರುವಂತೆ, ಕನಿಷ್ಠಪಕ್ಷ ನೀವು ಪ್ರತಿನಿತ್ಯ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡಿ. ಹಾಗೂ ಉತ್ಪಾದಿಸಿರುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಮನೆಮನೆಯಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯಕರ್ತರಿಗೆ ತಪ್ಪದೆ ನೀಡಿ. ನಿಮ್ಮ ಅಕ್ಕಪಕ್ಕದ ನಿವಾಸಿಗಳೂ ಇದರಲ್ಲಿ ಸಹಕರಿಸುವಂತೆ ಪ್ರೇರೇಪಿಸಿ. ನಿಮ್ಮ ಮನೆ, ಸುತ್ತಲಿನ ಆವರಣ, ನಿಮ್ಮ ಊರು ಮತ್ತು ಪರಿಸರಗಳನ್ನು ಸ್ವಚ್ಚವಾಗಿ ಇರಿಸಲು ಮನಸ್ಪೂರ್ವಕ ಸಹಕಾರವನ್ನು ನೀಡಿ. ತನ್ಮೂಲಕ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು, ಸ್ವಸ್ಥ ಹಾಗೂ ಸುಂದರ ಭಾರತ ಎನ್ನುವ ಮೋದಿಯವರ ಕನಸನ್ನು ನನಸಾಗಿಸಲು ಸಜ್ಜಾಗುವುದರೊಂದಿಗೆ, ಮಹಾತ್ಮಾ ಗಾಂಧಿಯವರ ಜನ್ಮದಿನವನ್ನು " ಅವಿಸ್ಮರಣೀಯ " ವನ್ನಾಗಿಸಿ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


Thursday, September 25, 2014

RTI - WILL IT BE BURRIED?





 ಮಾಹಿತಿಹಕ್ಕು ಕಾಯಿದೆ ಸಮಾಧಿಯಾಗಲಿದೆಯೇ?

ಭಾರತದಾದ್ಯಂತ ಮಾಹಿತಿ ಪಡೆಯುವ ಹಕ್ಕು ಕಾಯಿದೆ -೨೦೦೫ ಜಾರಿಗೆ ಬಂದು ಇದೀಗ ಮೂರು ವರ್ಷಗಳೇ ಸಂದಿದ್ದರೂ,ಈ ಕಾಯಿದೆಯು ಅಪೇಕ್ಷಿತ ರೀತಿಯಲ್ಲಿ ಹಾಗೂ ಪರಿಪೂರ್ಣವಾಗಿ ಅನುಷ್ಠಾನಗೊಂಡಿಲ್ಲ.ವಿವಿಧ ರಾಜ್ಯಗಳ ಮತ್ತು ಕೇಂದ್ರ ಮಾಹಿತಿ ಆಯೋಗಗಳಲ್ಲಿ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದಲ್ಲಿ, ಈ ಕಾಯಿದೆಯು ಸದ್ಯೋಭವಿಷ್ಯದಲ್ಲಿ ಸಮಾಧಿಯಾಗುವುದರಲ್ಲಿ ಸಂದೇಹವಿಲ್ಲ!. 
------------              ------------            -------------------            -----------             ----------

ಭಾರತಕ್ಕೆ ಸ್ವಾತಂತ್ರ್ಯ ದೊರೆತು ೫೮ ವರ್ಷಗಳ ಕಾಲ ಕೇಂದ್ರ - ರಾಜ್ಯ ಸರ್ಕಾರಗಳು ಗೌಪ್ಯತೆಯ ಮುಸುಕಿನಲ್ಲೇ ಕಾರ್ಯನಿರ್ವಹಿಸುತ್ತಿದ್ದವು. ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದರೂ, ದೇಶದ ಪ್ರಜೆಗಳಿಗೆ ಮಾತ್ರ ತಮಗೆ ಬೇಕಾದ ಮಾಹಿತಿಗಳನ್ನು ಸರ್ಕಾರದಿಂದ ಪಡೆದುಕೊಳ್ಳುವ ಸ್ವಾತಂತ್ರ್ಯವೇ ಇರಲಿಲ್ಲ. ಏಕೆಂದರೆ ಇತ್ತೀಚಿನ ತನಕ " ಸರ್ಕಾರಿ ರಹಸಗಳ ಅಧಿನಿಯಮ - ೧೯೨೩ " ( ಒಫಿಷಿಯಲ್ ಸೀಕ್ರೆಟ್ಸ್ ಆಕ್ಟ್ ) ರಂತೆ,  ಸರ್ಕಾರದ ಸ್ವಾಧೀನದಲ್ಲಿರುವ ಮಾಹಿತಿಗಳ ನ್ನು ಬಹಿರಂಗಗೊಳಿಸುವುದು ಶಿಕ್ಷಾರ್ಹ ಅಪರಾಧವಾಗಿತ್ತು. ಆದರೆ ೨೦೦೫ ಅಕ್ಟೋಬರ್ ೧೨ ರಂದು ಜಾರಿಗೆ ಬಂದಿದ್ದ " ಮಾಹಿತಿ ಹಕ್ಕು ಅಧಿನಿಯಮವು ಕೆಲವೊಂದು ನಿರ್ದಿಷ್ಟ ಮಾಹಿತಿಗಳನ್ನು ಹೊರತುಪಡಿಸಿ, ಸರ್ಕಾರದ ಸ್ವಾಧೀನದಲ್ಲಿರುವ ಎಲ್ಲಾ ಮಾಹಿತಿಗಳನ್ನು ಬಹಿರಂಗಗೊಳಿಸುವುದನ್ನು ಕಡ್ಡಾಯಗೊಳಿಸಿದೆ.

ಕಾಯಿದೆಯ ಉದ್ದೇಶ 

ಪ್ರಜೆಗಳೇ ಪ್ರಭುಗಳಾಗಬೇಕು ಹಾಗೂ ಪ್ರಜಾಪ್ರಭುತ್ವದ ನೈಜ ಉದ್ದೇಶವು ಸಫಲವಾಗಬೇಕಿದ್ದಲ್ಲಿ ಸರ್ಕಾರದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಅತ್ಯವಶ್ಯಕ ಎನಿಸುವುದು. ಆಡಳಿತದಲ್ಲಿ ಪ್ರಜೆಗಳು ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಪ್ರಜಾಪ್ರಭುತ್ವವು ಅರ್ಥಪೂರ್ಣವೆನಿಸುತ್ತದೆ. ಆದರೆ ಇದು ಕೇವಲ ಮತಚಲಾವಣೆಗಾಗಿ ಮಾತ್ರ ಸೀಮಿತವಾಗಿರದೇ, ಸರ್ಕಾರದ ಪ್ರತಿಯೊಂದು ಕಾರ್ಯಗಳಲ್ಲಿ ನಾಗರಿಕರು ಭಾಗವಹಿಸಬೇಕಾಗಿದೆ. ಇದರಿಂದ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವಗಳು ಹೆಚ್ಚುವುದರಿಂದ, ಸ್ವಾಭಾವಿಕವಾಗಿಯೇ ದಕ್ಷತೆ ಮತ್ತು ಪ್ರಾಮಾಣಿಕತೆಗಳೂ ಹೆಚ್ಚುತ್ತವೆ. ತತ್ಪರಿಣಾಮವಾಗಿ ಆಡಳಿತದ ಗುಣಮಟ್ಟಗಳು ಇನ್ನಷ್ಟು ಉತ್ತಮಗೊಳ್ಳುವುದರೊಂದಿಗೆ, ಭ್ರಷ್ಟಾಚಾರಕ್ಕೂ ಕಡಿವಾಣ ಬೀಳುತ್ತದೆ. 

ಆಡಳಿತದಲ್ಲಿ ಪ್ರಜೆಗಳು ಭಾಗವಹಿಸುವುದರ ಪರಿಣಾಮಕಾರಿ ವಿಧಾನವೇ, ಮಾಹಿತಿ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು. ಈ ಕಾಯಿದೆಯು ಭಾರತದ ಪ್ರತಿಯೊಬ್ಬ ಪ್ರಜೆಗೆ ಅಪೇಕ್ಷಿತ ಮಾಹಿತಿಯನ್ನು ಪಡೆದುಕೊಳ್ಳುವ ಹಕ್ಕನ್ನು ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಸ್ವಾಧೀನದಲ್ಲಿರುವ ಎಲ್ಲಾ ಮಾಹಿತಿಗಳು ಸಾರ್ವಜನಿಕರ ಸೊತ್ತು ಎನ್ನುವುದನ್ನು ಈ ಕಾಯಿದೆ ಅಂಗೀಕರಿಸಿದೆ. ಇದೇ ಕಾರಣದಿಂದಾಗಿ ಜನಸಾಮಾನ್ಯರು ಅಪೇಕ್ಷಿಸುವ ಮಾಹಿತಿಗಳನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಆದರೆ ಪ್ರಜೆಗಳ ಪಾಲಿಗೆ ಪ್ರಬಲ ಅಸ್ತ್ರವೆಂದು ಪರಿಗಣಿಸಲ್ಪಟ್ಟಿರುವ ಈ ಕಾಯಿದೆಯನ್ನು ಪರಿಣಾಮಕಾರಿಯಾಗಿ ಬಳಸುತ್ತಿರುವ ನಾಗರಿಕರಿಗೆ, ಅನೇಕ ರೀತಿಯ ಅಡ್ಡಿ ಆತಂಕಗಳನ್ನು ಒಡ್ಡಲಾಗುತ್ತಿದೆ. ಹಾಗೂ ಇವುಗಳಿಗೆ ನಿರ್ದಿಷ್ಟ ಕಾರಣಗಳೂ ಇವೆ. 

ಅನುಷ್ಠಾನದಲ್ಲಿ ಅಡಚಣೆಗಳು 

ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ ೪ ರಂತೆ, ಸಾರ್ವಜನಿಕ ಪ್ರಾಧಿಕಾರಗಳು ೧೭ ವಿಧದ ಮಾಹಿತಿಗಳನ್ನು ಸ್ವಯಂ  ಪ್ರೇರಿತವಾಗಿ ಪ್ರಕಟಿಸಬೇಕಾಗಿದೆ. ಇವುಗಳಲ್ಲಿ ಪ್ರಾಧಿಕಾರದ ಸಂರಚನೆ, ಕಾರ್ಯನಿರ್ವಹಿಸುವ ಕ್ರಮ, ಪ್ರಾಧಿಕಾರದ ಆಯವ್ಯಯಗಳ ವಿವರಗಳು, ಸಾರ್ವಜನಿಕರು ಭಾಗವಹಿಸಬಹುದಾದ ವೇದಿಕೆಗಳ ವಿವರ, ಮಾಹಿತಿ ಪಡೆಯುವ ವಿಧಾನಗಳೇ ಮುಂತಾದ ವಿವರಗಳನ್ನು ತಾವಾಗಿ ಪ್ರಕಟಿಸುವುದರೊಂದಿಗೆ, ಆಗಾಗ ಇವುಗಳನ್ನು ಪರಿಷ್ಕರಿಸಬೇಕಾಗುತ್ತದೆ. ನಾಗರಿಕರಿಗೆ ಅವಶ್ಯಕ ಹಾಗೂ ಉಪಯುಕ್ತವೆನಿಸುವ ಮಾಹಿತಿಗಳು ನೇರವಾಗಿ ಹಾಗೂ ಸುಲಭವಾಗಿ ದೊರೆಯಬೇಕು ಎನ್ನುವುದೇ ಇದರ ಉದ್ದೇಶವಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿನ ಅಧಿಕತಮ ಸಾರ್ವಜನಿಕ ಪ್ರಾಧಿಕಾರಗಳು ಸ್ವಯಂ ಪ್ರೇರಿತವಾಗಿ ಇಂತಹ ಮಾಹಿತಿಗಳನ್ನು ಪ್ರಕಟಿಸದೆ ಇರುವುದರಿಂದ, ಈ ಕಾಯಿದೆಯ ಪ್ರಾಥಮಿಕ ಉದ್ದೇಶವೇ ವಿಫಲವೆನಿಸುತ್ತಿದೆ. 

ಅರ್ಜಿದಾರರಿಗೆ ಅಡ್ಡಿ- ಆತಂಕಗಳು 

ಸರ್ಕಾರ ನಿಗದಿಸಿದ ಕೆಲವೊಂದು ನಿರ್ದಿಷ್ಟ ವಿಷಯಗಳನ್ನು ಹೊರತುಪಡಿಸಿ, ಜನಸಾಮಾನ್ಯರು ಅಪೇಕ್ಷಿಸುವ ಮಾಹಿತಿಗಳನ್ನು ನೀಡಬೇಕಾದ ಹೊಣೆಗಾರಿಕೆಯಿರುವ ಸಾರ್ವಜನಿಕ ಪ್ರಾಧಿಕಾರಗಳು, ಮಾಹಿತಿಯನ್ನು ಪಡೆಯಲು ನಾಗರಿಕರು ಸಲ್ಲಿಸಿದ್ದ ಅರ್ಜಿಯನ್ನೇ ಸ್ವೀಕರಿಸಲು ನಿರಾಕರಿಸಿದ,ಅರ್ಜಿಯನ್ನು ಸ್ವೀಕರಿಸಿದರೂ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದ, ಅಪೂರ್ಣ ಅಥವಾ ಸುಳ್ಳು ಮಾಹಿತಿಗಳನ್ನು ನೀಡಿದ, ಅರ್ಜಿಯ ಸಲ್ಲಿಸಿದ್ದ ವ್ಯಕ್ತಿಗಳಿಗೆ ಕಿರುಕುಳ ನೀಡಿದ ಅಥವಾ ಬೆದರಿಕೆಯನ್ನು ಒಡ್ಡಿದ ಅಸಂಖ್ಯ ಪ್ರಕರಣಗಳು ವರದಿಯಾಗಿವೆ. 

ಅದೇ ರೀತಿಯಲ್ಲಿ ಮಾಹಿತಿಯನ್ನು ನೀಡಲು ನಿಗದಿತ ಶುಲ್ಕಕ್ಕೆ ಬದಲಾಗಿ ದುಬಾರಿ ಶುಲ್ಕವನ್ನು ವಿಧಿಸಿದ, ಅಪೇಕ್ಷಿತ ಮಾಹಿತಿಗಳು ( ಕಡತಗಳು ) ತಮ್ಮಲ್ಲಿ ಇಲ್ಲವೆಂದು ಉತ್ತರಿಸಿದ, ವಿವಿಧ ಕಾಮಗಾರಿಗಳಲ್ಲಿ ನಡೆದ ಅಕ್ರಮಗಳನ್ನು ಮತ್ತು ಭ್ರಷ್ಟ ಅಧಿಕಾರಿಗಳ ಅಥವಾ ಇಲಾಖೆಗಳ ಹಗರಣಗಳನ್ನು ಬಯಲಿಗೆಳೆಯಲು ಮಾಹಿತಿ ಹಕ್ಕು ಕಾಯಿದೆಯನ್ನು ಬಳಸಿದ್ದ ಕಾರ್ಯಕರ್ತರೊಬ್ಬರ ಮನೆಯನ್ನೇ ನೆಲಸಮಗೊಳಿಸಿದ ಹಲವಾರು ಘಟನೆಗಳು ಕೆಲ ರಾಜ್ಯಗಳಲ್ಲಿ ನಡೆದಿವೆ. 

ಇಷ್ಟೆಲ್ಲಾ ಸಾಲದೆನ್ನುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಅಪೇಕ್ಷಿತ ಮಾಹಿತಿಯನ್ನು ನೀಡಲು ವಿಳಂಬಿಸಿದ ಅಥವಾ ನಿರಾಕರಿಸಿದ ಅಥವಾ ಅರ್ಜಿದಾರರಿಗೆ ಕಿರುಕುಳ ನೀಡಿ ಸತಾಯಿಸಿದ ಪ್ರಕರಣಗಳಲ್ಲಿ ರಾಜ್ಯ - ಕೇಂದ್ರ ಮಾಹಿತಿ ಆಯೋಗಗಳಿಗೆ ಮೇಲ್ಮನವಿ ಸಲ್ಲಿಸಿದ ಸಂದರ್ಭದಲ್ಲಿ, ವಿಚಾರಣೆಯ ಬಳಿಕ ಸಂಬಂಧಿತ ಅಧಿಕಾರಿಗಳಿಗೆ ದಂಡವನ್ನು ವಿಧಿಸದ ಅಥವಾ ಶಿಸ್ತುಕ್ರಮ ಕೈಗೊಳ್ಳದ ನೂರಾರು ಪ್ರಕರಣಗಳಿವೆ. ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಎಸಗಿದ ತಪ್ಪುಗಳಿಗೆ ಸೂಕ್ತ ಶಿಕ್ಷೆಯನ್ನು ನೀಡದಿರುವುದು ಈ ಕಾಯಿದೆಯ ಮೂಲ ಉದ್ದೇಶಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ. 

ಅಪರೂಪದಲ್ಲಿ ವಿಘ್ನಸಂತೋಷಿಗಳು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತೊಂದರೆಯನ್ನು ನೀಡುವ ಏಕಮಾತ್ರ ಉದ್ದೇಶದಿಂದ, ನೂರಾರು ಪುಟಗಳ ಅನಾವಶ್ಯಕ ಮಾಹಿತಿಯನ್ನು ಅಪೇಕ್ಷಿಸಿ ಅರ್ಜಿಯನ್ನು ಸಲ್ಲಿಸುವುದರಿಂದ, ಇತರ ಪ್ರಾಮಾಣಿಕ ನಾಗರಿಕರಿಗೆ ಅವಶ್ಯಕ ಮಾಹಿತಿ ದೊರೆಯಲು ವಿಳಂಬವಾಗುತ್ತಿದೆ. 

ಇದಲ್ಲದೇ ಜನಸಾಮಾನ್ಯರು ಸ್ಥಳೀಯ ಸಾರ್ವಜನಿಕ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಿ, ನಿಗದಿತ ಅವಧಿಯಲ್ಲಿ ಮಾಹಿತಿ ದೊರೆಯದ ಕಾರಣದಿಂದಾಗಿ ಪ್ರಥಮ ಮೇಲ್ಮನವಿಯನ್ನು ಸಲ್ಲಿಸಿದ ಬಳಿಕವೂ ಅಪೇಕ್ಷಿತ ಮಾಹಿತಿ ಲಭಿಸದೇ ಇದ್ದಲ್ಲಿ, ರಾಜ್ಯ ಮಾಹಿತಿ ಆಯೋಗಕ್ಕೆ ದ್ವಿತೀಯ ಮೇಲ್ಮನವಿಯನ್ನು ಸಲ್ಲಿಸಬೇಕಾಗುತ್ತದೆ. ಪ್ರಸ್ತುತ ದೇಶದ ಪ್ರತಿಯೊಂದು ಮಾಹಿತಿ ರಾಜ್ಯಗಳ ಮಾಹಿತಿ ಆಯೋಗಗಳಲ್ಲಿ ಇಂತಹ ಸಹಸ್ರಾರು ಮನವಿಗಳು ಇದ್ದು, ಮಹಾರಾಷ್ಟ್ರದಲ್ಲಿ ೧೬,೦೦೦ ಮತ್ತು ಕರ್ನಾಟಕದಲ್ಲಿ ಸುಮಾರು ೪೦೦೦ ಪ್ರಕರಣಗಳು ಇತ್ಯರ್ಥವಾಗದೇ ಉಳಿದುಕೊಂಡಿವೆ. ಇಷ್ಟೊಂದು ಮೇಲ್ಮನವಿಗಳ ವಿಲೇವಾರಿಗೆ ಹಲವಾರು ತಿಂಗಳುಗಳೇ ಬೇಕಾಗುತ್ತವೆ. ಜೊತೆಗೆ ಮೇಲ್ಮನವಿ ಸಲ್ಲಿಸಿದ್ದ ನಾಗರಿಕರು ಆಯೋಗದ ಮುಂದೆ ಹಾಜರಾಗಲು ಸಾಕಷ್ಟು ಸಮಯ ಮತ್ತು ಹಣವನ್ನು ವ್ಯಯಿಸಬೇಕಾಗುವುದರಿಂದ, ಬಹುತೇಕ ನಾಗರಿಕರು ತಮಗೆ ಬೇಕಾದ ಮಾಹಿತಿಗಳನ್ನು ಪಡೆದುಕೊಳ್ಳಲು ಅರ್ಜಿಯನ್ನೇ ಸಲ್ಲಿಸುವುದಿಲ್ಲ!. 

ಈ ಸಮಸ್ಯೆಗೆ ಅವಶ್ಯಕ ಸಂಖ್ಯೆಯ ಮಾಹಿತಿ ಆಯುಕ್ತರನ್ನು ರಾಜ್ಯ ಸರ್ಕಾರಗಳು ನೇಮಕ ಮಾಡದೇ ಇರುವುದು, ಆಯೋಗ ಕ್ಷಿಪ್ರಗತಿಯಲ್ಲಿ ಕಾರ್ಯನಿರ್ವಹಿಸಲು ಅವಶ್ಯಕ ಸಂಖ್ಯೆಯ ಸಿಬಂದಿಗಳನ್ನು ಮತ್ತು ಇತರ ವ್ಯವಸ್ಥೆಗಳನ್ನು ಒದಗಿಸದಿರುವುದು ಪ್ರಮುಖ ಕಾರಣಗಳಾಗಿವೆ. ಇದರಿಂದಾಗಿ ಸಾರ್ವಜನಿಕ ಪ್ರಾಧಿಕಾರವೊಂದರಿಂದ ಮಾಹಿತಿ ದೊರೆಯದೇ, ಕೊನೆಯ ಪ್ರಯತ್ನವಾಗಿ ರಾಜ್ಯ ಮಾಹಿತಿ ಆಯೋಗಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ ವ್ಯಕ್ತಿಗಳಿಗೆ ಅಪೇಕ್ಷಿತ ಮಾಹಿತಿ ದೊರೆಯಲು ಹಲವಾರು ತಿಂಗಳುಗಳೇ ತಗಲುತ್ತವೆ!. 

ಕೇಂದ್ರ ಮಾಹಿತಿ ಆಯೋಗಕ್ಕೆ ಎಪ್ರಿಲ್ ೨೦೦೭ ರಿಂದ ಮಾರ್ಚ್ ೨೦೦೮ ರ ಅವಧಿಯಲ್ಲಿ ೨೨,೬೮೮ ಮೇಲ್ಮನವಿಗಳು ಬಂದಿದ್ದು, ಇವುಗಳಲ್ಲಿ ಕೇವಲ ೧೨,೪೪೧ ಪ್ರಕರಣಗಳನ್ನು ಮಾತ್ರ ವಿಚಾರಣೆಗಾಗಿ ಸ್ವೀಕರಿಸಲಾಗಿದೆ.ಇನ್ನುಳಿದ ಅರ್ಜಿಗಳನ್ನು ಸಮರ್ಪಕವಾಗಿ ಭಾರ್ತಿ ಮಾಡಿಲ್ಲ ಹಾಗೂ ಅಪ್ರಸ್ತುತ ಮಾಹಿತಿಗಳನ್ನು ಕೇಳಲಾಗಿದೆ ಎನ್ನುವ ನೆಪವನ್ನು ಒಡ್ಡಿ ತಿರಸ್ಕರಿಸಲಾಗಿದೆ!. ಇದೇ ರೀತಿಯಲ್ಲಿ ಅನೇಕ ರಾಜ್ಯಗಳ ಮಾಹಿತಿ ಆಯೋಗಗಳಲ್ಲಿ ಉಳಿದುಕೊಂಡಿರುವ ಸಹಸ್ರಾರು ಮೇಲ್ಮನವಿಗಳು, ಈ ಆಯೋಗಗಳ ನಿಧಾನಗತಿಯ ಕಾರ್ಯವೈಖರಿಗೆ ಸಾಕ್ಷಿಯಾಗಿವೆ. 

ಕೇಂದ್ರ ಮಾಹಿತಿ ಆಯೋಗಕ್ಕೆ ಮೇಲ್ಮನವಿಯನ್ನು ಸಲ್ಲಿಸಿದವರು ತಮ್ಮ ಅರ್ಜಿಗಳ ಸ್ಥಿತಿಗತಿಗಳನ್ನು ಮತ್ತು ಪ್ರತಿನಿತ್ಯ ವಿಚಾರಣೆಯಾಗಲಿರುವ ಪ್ರಕರಣಗಳ ವಿವರಗಳನ್ನು ಆಯೋಗದ " ಅಂತರ್ಜಾಲ ತಾಣ " ದಲ್ಲಿ ಪರಿಶೀಲಿಸಬಹುದಾಗಿತ್ತು. ಆದರೆ ಇದೀಗ ಈ ವ್ಯವಸ್ಥೆಯನ್ನೇ ರದ್ದುಪಡಿಸಿರುವುದು, ಮಾಹಿತಿ ಹಕ್ಕು ಕಾಯಿದೆಯನ್ನು ದುರ್ಬಲಗೊಳಿಸುವ ಯತ್ನಕ್ಕೆ ಸಾಕ್ಷಿಯಾಗಿದೆ.

ಅದೇನೇ ಇರಲಿ, ನಿಮ್ಮ ಊರಿನಲ್ಲಿರುವ ಸರ್ಕಾರಿ ಕಛೇರಿಯಲ್ಲಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಆರಂಭಿಸಿ, ರಾಜ್ಯ ಮತ್ತು ಕೇಂದ್ರ ಮಾಹಿತಿ ಆಯೋಗಗಳ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಮಾಹಿತಿ ಹಕ್ಕು ಅಧಿನಿಯಮವು ಸದ್ಯೋಭವಿಷ್ಯದಲ್ಲಿ ಸದ್ದಿಲ್ಲದೇ ಸಮಾಧಿಯಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೩-೧೦- ೨೦೦೮ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.


Wednesday, September 24, 2014

RTI ACT - may become useless

ಮಾಹಿತಿ ಹಕ್ಕು ಕಾಯಿದೆಗೆ ಆಪತ್ತು!

ನಮ್ಮ ದೇಶದ ಭ್ರಷ್ಟ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ಗಣಿ ಮತ್ತು ಭೂಗಳ್ಳರ ಬಹುಕೋಟಿ ಹಗರಣಗಳನ್ನು ಬಯಲಿಗೆಳೆಯಲು ಅತ್ಯಂತ ಉಪಯುಕ್ತವೆನಿಸಿದ್ದ " ಮಾಹಿತಿ ಪಡೆಯುವ ಹಕ್ಕು ಕಾಯಿದೆ- ೨೦೦೫ " ರ ಮೂಲ ಉದ್ದೇಶವನ್ನೇ ವಿಫಲಗೊಳಿಸಬಲ್ಲ ತೀರ್ಪೊಂದನ್ನು ಮದ್ರಾಸಿನ ಉಚ್ಚ ನ್ಯಾಯಾಲಯವು ನೀಡಿದೆ. ತತ್ಪರಿಣಾಮವಾಗಿ  ಪ್ರಜಾಡಳಿತದಲ್ಲಿ ಅತ್ಯವಶ್ಯಕವೆನಿಸುವ ಪಾರದರ್ಶಕತೆ ಮತ್ತು ಉತ್ತರದಾಯಿತ್ವಗಳನ್ನೇ ನಿರ್ಮೂಲನಗೊಳಿಸುವಂತಹ ಸನ್ನಿವೇಶ ಸೃಷ್ಠಿಯಾಗಲಿದೆ. ಜೊತೆಗೆ ಈ ಕಾಯಿದೆಯು " ಹಲ್ಲು ಕಿತ್ತ ಹಾವಿನಂತಾಗಲಿದೆ ". 

ಮಾಹಿತಿ ಹಕ್ಕು ಕಾಯಿದೆಗೆ ಸಂಬಂಧಿಸಿದ ವ್ಯಾಜ್ಯವೊಂದರ ಬಗ್ಗೆ ತನ್ನ ತೀರ್ಪನ್ನು ಪ್ರಕಟಿಸಿರುವ ಮದ್ರಾಸಿನ ಉಚ್ಚ ನ್ಯಾಯಾಲಯವುಮಾಹಿತಿ ಹಕ್ಕು ಕಾಯಿದೆಯನ್ವಯ ನಿರ್ದಿಷ್ಟ ಮಾಹಿತಿಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸುವಾಗಈ ಮಾಹಿತಿಯನ್ನು ಯಾವ ಉದ್ದೇಶಕ್ಕಾಗಿ ಪಡೆದುಕೊಳ್ಳಲು ಬಯಸುವುದಾಗಿ ಅರ್ಜಿದಾರರು ತಿಳಿಸಬೇಕಾಗುತ್ತದೆ. ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಒಬ್ಬರಿಗೆ ಸಂಬಂಧಿಸಿದ ವ್ಯಾಜ್ಯವೊಂದರ ತೀರ್ಪಿನಲ್ಲಿ,  ಅಪೇಕ್ಷಿತ ಮಾಹಿತಿಯನ್ನು ಪಡೆದುಕೊಳ್ಳಲು ಇಚ್ಚಿಸುವ ವ್ಯಕ್ತಿಯು ಇದಕ್ಕೆ ಸೂಕ್ತ ಕಾರಣ ಮತ್ತು ಉದ್ದೇಶಗಳನ್ನು ತನ್ನ ಅರ್ಜಿಯಲ್ಲಿ ನಮೂದಿಸಲೇಬೇಕು ಹಾಗೂ ಇದು ಕಾನೂನು ಸಮ್ಮತವಾಗಿರಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಜೊತೆಗೆ ಮಾಹಿತಿಯನ್ನು ಒಬ್ಬ ವ್ಯಕ್ತಿಗೆ ನೀಡಬೇಕಿದ್ದಲ್ಲಿಇದನ್ನು ಪಡೆದುಕೊಳ್ಳಲು ಯಾವುದೇ ಕಾರಣ ಇಲ್ಲದಿದ್ದಲ್ಲಿಮಾಹಿತಿ ಹಕ್ಕು ಕಾಯಿದೆಯನ್ವಯ ಇಂತಹ ಮಾಹಿತಿಗಳನ್ನು " ಕರಪತ್ರ " ಗಳಂತೆ ಹಂಚುವುದು ವಿಧೇಯಕದ ಉದ್ದೇಶವಲ್ಲ ಎಂದು ತೀರ್ಪಿನಲ್ಲಿ ನಮೂದಿಸಿದ್ದು, ಇದು ಮಾಹಿತಿ ಹಕ್ಕು ಕಾಯಿದೆಗೆ ತೊಡಕಾಗಿ ಪರಿಣಮಿಸಲಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರು ಅಭಿಪ್ರಾಯಿಸಿದ್ದಾರೆ.

ವಿಶೇಷವೆಂದರೆ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ ೬ (೨ ) ರಂತೆಅಪೇಕ್ಷಿತ ಮಾಹಿತಿಗಾಗಿ ಕೋರಿಕೆಯನ್ನು ಸಲ್ಲಿಸುವ ಅರ್ಜಿದಾರರನ್ನು, ಅವರನ್ನು ಸಂಪರ್ಕಿಸಲು ಅವಶ್ಯವಿರುವ ವಿವರಗಳನ್ನು ಹೊರತುಪಡಿಸಿ ಮಾಹಿತಿ ಕೋರಿಕೆಗೆ ಯಾವುದೇ ಕಾರಣವನ್ನು ಅಥವಾ ಯಾವುದೇ ಇತರ ವಿವರಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಆದರೆ ಉಚ್ಚ ನ್ಯಾಯಾಲಯವು ಇದನ್ನು ಪರಿಗಣಿಸಿದಂತೆ ಕಾಣುವುದಿಲ್ಲ.

ಖ್ಯಾತ ನ್ಯಾಯವಾದಿಗಳ ಅಭಿಪ್ರಾಯದಂತೆ ಈ ಆದೇಶವು " ಕಾನೂನುಬಾಹಿರ " ವಾಗಿದ್ದು, ಇದಕ್ಕೂ ಮುನ್ನ ಅನೇಕ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪುಗಳಂತೆಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೊಳಿಸುವುದನ್ನು ನಿಸ್ಸಂದೇಹವಾಗಿಯೂ ಅಡ್ಡಿಯಾಗಲಿದೆ. ಅಂತೆಯೇ ನ್ಯಾಯಾಲಯವು ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ ೬ (೨ ) ನ್ನು ಹೆಸರಿಸದೇಇದನ್ನು ಕಿತ್ತು ಹಾಕುತ್ತದೆ ಹಾಗೂ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪೊಂದರಲ್ಲಿ ಘೋಷಿಸಿದ್ದಂತೆಮಾಹಿತಿ ಪಡೆಯುವ ಹಕ್ಕು ಮೂಲಭೂತ ಹಕ್ಕು ಎನ್ನುವುದನ್ನೇ ಉಲ್ಲಂಘಿಸುತ್ತದೆ ಎಂದು ಅನೇಕ ಕಾರ್ಯಕರ್ತರು ಅಭಿಪ್ರಾಯಿಸಿದ್ದಾರೆ.

ಈ ತೀರ್ಪಿನ ಪರಿಣಾಮವಾಗಿ ನೂರಾರು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಹಿನ್ನಡೆಯಾಗಲಿದೆ. ಆದರೆ ಇದೇ ಸಂದರ್ಭದಲ್ಲಿ ಭ್ರಷ್ಟ ಅಧಿಕಾರಿಗಳು ಹಾಗೂ  ರಾಜಕಾರಣಿಗಳು ಮತ್ತು ಸರ್ಕಾರಿ ಸಂಪತ್ತನ್ನು ದೋಚುತ್ತಿರುವ ಗಣಿ ಹಾಗೂ ಭೂಗಳ್ಳರಿಗೆ ಇದು ನಿಶ್ಚಿತವಾಗಿಯೂ ವರದಾನವೆನಿಸಲಿದೆ.


ಅದೇನೇ ಇರಲಿ, ನಮ್ಮ ದೇಶದಲ್ಲಿ ಸಕ್ರಿಯವಾಗಿರುವ ಅನೇಕ ಸ್ವಯಂ ಸೇವಾ ಸಂಘಟನೆಗಳು ಮದ್ರಾಸಿನ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದರಲ್ಲಿ ಸಂದೇಹವಿಲ್ಲ. ಅದೇ ರೀತಿಯಲ್ಲಿ " ಸತ್ಯಮೇವ ಜಯತೇ " ಎನ್ನುವ ಮಾತು ನಿಜವೆನಿಸುವುದರಲ್ಲಿಯೂ ಸಂದೇಹವಿಲ್ಲ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು  



Tuesday, September 23, 2014

DIABETES

ಸಕ್ಕರೆಯ ಮೇಲೆ ಏಕಿಷ್ಟು ಅಕ್ಕರೆ?

ಸಕ್ಕರೆಯಂತಹ ಸವಿಮಾತುಗಳಿಗೆ ಮನಸೋಲುವ ಹುಲುಮಾನವರು, ಸಕ್ಕರೆಯಿಂದ ತಯಾರಿಸಿದ ಸ್ವಾದಿಷ್ಟ ಖಾದ್ಯಪೇಯಗಳಿಗೆ ಮನಸೋಲದಿರುವುದು ಅಸಾಧ್ಯ. ಜಿಲೇಬಿ, ಗುಲಾಬ್ ಜಾಮೂನ್, ಹೋಳಿಗೆ, ಪಾಯಸಗಳ ಹೆಸರುಗಳನ್ನೂ ಕೇಳಿದೊಡನೆ ಬಾಯಲ್ಲಿ ನೀರೂರಿಸುವ ಭಾರತೀಯರ ಅಡುಗೆಮನೆಯಲ್ಲಿಸಕ್ಕರೆಗೆ ಪ್ರಾಯಶಃ ಇದೇ ಕಾರಣದಿಂದಾಗಿ ಅಗ್ರಸ್ಥಾನ ಸಲ್ಲುತ್ತದೆ.
ಶುಭ ಸಮಾಚಾರಗಳನ್ನು ಅಥವಾ ವಿಶೇಷವಾದ ಸಂತೋಷದ ಸುದ್ದಿಯೊಂದನ್ನು ಬಂಧುಮಿತ್ರರಿಗೆ ತಿಳಿಸುವಾಗ ಬಾಯಿ ಸಿಹಿಮಾಡುವ ಸಂಪ್ರದಾಯ ನಮ್ಮಲ್ಲಿದೆ. ಜನನ- ಮರಣಗಳಿಗೆ ಸಂಬಂಧಿಸಿದ ವಿಶಿಷ್ಟ ಆಚರಣೆಗಳ ಸಂದರ್ಭಗಳಲ್ಲೂಸಿಹಿತಿಂಡಿಗಳನ್ನು ಬಡಿಸುವುದು ಭಾರತೀಯರ ವಿಶೇಷತೆಯಾಗಿದೆ. ವಿವಿಧ ಧರ್ಮೀಯರ ಹಬ್ಬಹರಿದಿನಗಳಲ್ಲಂತೂ ಸಿಹಿತಿಂಡಿಗಳ ವಿನಿಮಯ ಅನಿವಾರ್ಯವೆನಿಸಿದೆ. ಇವೆಲ್ಲಾ ಕಾರಣಗಳಿಂದಾಗಿ ಭಾರತೀಯರು ಸೇವಿಸುತ್ತಿರುವ ವೈವಿಧ್ಯಮಯ  ಸಿಹಿತಿಂಡಿಗಳ ಪ್ರಮಾಣವುಅನ್ಯ ದೇಶಗಳ ಜನರಿಗಿಂತ ಸಾಕಷ್ಟು ಹೆಚ್ಚಾಗಿದೆ.
ಭಾರತದಲ್ಲಿ ಜರಗುವ ಪ್ರತಿಯೊಂದು ಸಮಾರಂಭ ಹಾಗೂ ಔತಣಕೂಟಗಳಲ್ಲಿ ಸಿಹಿತಿಂಡಿಗಳು ಮತ್ತು ಪಾಯಸಗಳಿಗೆ ವಿಶೇಷವಾದ ಸ್ಥಾನಮಾನಗಳಿವೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ವೈವಿಧ್ಯಮಯ ಸಿಹಿತಿಂಡಿಗಳನ್ನು ಮನಸಾರೆ ಸವಿಯುವ ಅತಿಥಿಗಳು, ಅಪ್ಪಿತಪ್ಪಿಯೂ ತಾವು ಸೇವಿಸಿರುವ ಖಾದ್ಯಪೇಯಗಳಲ್ಲಿ ಇದ್ದ ಸಕ್ಕರೆಯ ಪ್ರಮಾಣ ಹಾಗೂ ಇವುಗಳ ಅತಿಯಾದ ಸೇವನೆಯು ತಮ್ಮ ಆರೋಗ್ಯದ ಮೇಲೆ ಬೀರಬಹುದಾದ ದುಷ್ಪರಿಣಾಮಗಳ ಬಗ್ಗೆ ಚಿಂತಿಸುವುದೇ ಇಲ್ಲ. ಇಷ್ಟು ಮಾತ್ರವಲ್ಲ, ಅನೇಕ ಮಧುಮೇಹ ಪೀದಿತರೂ ತಮ್ಮ ಮನೆಮಂದಿಯ ಕಣ್ಣು ತಪ್ಪಿಸಿಸಿಹಿತಿಂಡಿಗಳನ್ನು ಮೆಲ್ಲಬಹುದಾದ ಇಂತಹ ಅವಕಾಶಗಳನ್ನು ತಪ್ಪಿಸಿಕೊಳ್ಳುವುದಿಲ್ಲ!.
ಅನುಭವೀ ವೈದ್ಯರೇ ಹೇಳುವಂತೆಅವರಲ್ಲಿ ತಪಾಸಣೆಗಾಗಿ ಬಂದವರಿಗೆ ಆಕಸ್ಮಿಕವಾಗಿ ಮಧುಮೇಹ ವ್ಯಾಧಿ ಇರುವುದು ಪತ್ತೆಯಾದಲ್ಲಿಈ ವ್ಯಾಧಿಯ ಇರುವಿಕೆಗಿಂತ ಹೆಚ್ಚಾಗಿ ತಾವಿನ್ನು ಸಿಹಿತಿಂಡಿಗಳನ್ನು ತಿನ್ನುವಂತಿಲ್ಲ ಎನ್ನುವ ವಿಚಾರವೇ ಅವರಿಗೆ " ಶಾಕ್ " ನೀಡುತ್ತದೆ. ಭಾರತೀಯರಿಗೆ ಸಕ್ಕರೆಯ ಮೇಲಿರುವ ಅತಿಯಾದ ಅಕ್ಕರೆಗೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇರೊಂದಿಲ್ಲ!.
ಅತಿಯಾದರೆ ಅಮೃತವೂ......
ಇತ್ತೀಚಿನ ಅಂಕಿ ಅಂಶಗಳಂತೆ ಭಾರತೀಯರು ವರ್ಷಂಪ್ರತಿ ಸೇವಿಸುತ್ತಿರುವ ಸಕ್ಕರೆಯ ಸರಾಸರಿ ಪ್ರಮಾಣವು ತಲಾ ೩೦ ಕಿಲೋಗ್ರಾಂ ಎಂದಲ್ಲಿ ನೀವೂ ನಂಬಲಾರಿರಿ. ಅರ್ಥಾತ್ ಪ್ರತಿಯೊಬ್ಬ ಭಾರತೀಯನು ಒಂದು ದಿನದಲ್ಲಿ ಸೇವಿಸುವ ಸಕ್ಕರೆಯ ಪ್ರಮಾಣವು ಸುಮಾರು ೮೨ ಗ್ರಾಂ ಗಳಷ್ಟಿರುತ್ತದೆ. ಕಳೆದ ಎರಡು ವರ್ಷಗಳಿಂದ ಈ ಪ್ರಮಾಣವು ಶೇ.೨೦ ರಷ್ಟು ಹೆಚ್ಚುತ್ತಿದೆ. ಈ ಸೇವನಾ ಪ್ರಮಾಣವು ಇನ್ನಷ್ಟು ಹೆಚ್ಚುತ್ತಾ ಹೋದಲ್ಲಿ೨೦೨೦ ಕ್ಕೂ ಮುನ್ನ ಪ್ರತಿವರ್ಷ ನಾವು ಸೇವಿಸುವ ಸಕ್ಕರೆಯ ಪ್ರಮಾಣವು ದುಪ್ಪಟ್ಟಾಗಳಿದೆ!.
ಪ್ರಸ್ತುತ ಭಾರತವು ವಿಶ್ವ ಮಧುಮೇಹಿಗಳ ರಾಜಧಾನಿ ಎನಿಸಿರಲು ಇತರ ಕೆಲವು ಕಾರಣಗಳೊಂದಿಗೆ, ಭಾರತೀಯರಿಗೆ ಸಕ್ಕರೆಯ ಮೇಲಿರುವ ಅತಿಯಾದ ಅಕಾರೆಯೂ ಪ್ರಮುಖ ಕಾರಣವೆನಿಸಿದೆ. ವಿಶೇಷವೆಂದರೆ ಶಾಶ್ವತ ಪರಿಹಾರವಿಲ್ಲದ ಗಂಭೀರ ಕಾಯಿಲೆಯೊಂದಕ್ಕೆ ತಾವು ಸುಲಭವಾಗಿ ಈಡಾಗಲುಅತಿಯಾದ ಸಿಹಿತಿಂಡಿಗಳ ಸೇವನೆಯೂ ಕಾರಣವೆನಿಸಬಲ್ಲದು ಎನ್ನುವುದು ಅನೇಕ ವಿದ್ಯಾವಂತರಿಗೂ ತಿಳಿದಿಲ್ಲ.
ನಾವು ದಿನನಿತ್ಯ ಬಳಸುವ ಒಂದು ಟೀ ಸ್ಪೂನ್ ಸಕ್ಕರೆಯಲ್ಲಿ ೪೮ ಕ್ಯಾಲರಿಗಳಿವೆ. ಸಕ್ಕರೆಯ ಅತಿಯಾದ ಸೇವನೆಯಿಂದ ದಂತ ಕುಳಿಗಳು, ಮಧುಮೇಹ, ಅತಿಬೊಜ್ಜು, ಗೌಟ್ಹೃದ್ರೋಗಗಳು ಮತ್ತು ಕ್ಯಾನ್ಸರ್ ನಂತಹ ಮಾರಕ ವ್ಯಾಧಿಗಳು ಬಾಧಿಸುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ಸಂಶೋಧಕರು ಅಭಿಪ್ರಾಯ ಪಡುತ್ತಾರೆ.
ಸಕ್ಕರೆಯಿಂದ ಕೊಬ್ಬು?
ನಾವು ಸೇವಿಸಿದ ಸಕ್ಕರೆಯು ಜೀರ್ಣವಾದ ಬಳಿಕ ಗ್ಲೂಕೋಸ್ ಮತ್ತು ಫ್ರೂಕ್ಟೋಸ್ ಗಳಾಗಿ ವಿಭಜಿಸಲ್ಪಟ್ಟುಸಣ್ಣ ಕರುಳಿನ ಮೂಲಕ ಕ್ಷಿಪ್ರಗತಿಯಲ್ಲಿ ಹೀರಲ್ಪಡುತ್ತದೆ. ಬಳಿಕ ರಕ್ತದಲ್ಲಿ ಬಿಡುಗಡೆಯಾಗುತ್ತದೆ. ತತ್ಪರಿಣಾಮವಾಗಿ ರಕ್ತದಲ್ಲಿನ ಗ್ಲೂಕೋಸ್ ನ ಪ್ರಮಾಣವು ಹೆಚ್ಚಿನಮ್ಮ ಶಾರೀರಿಕ ಕ್ರಿಯೆಗಳು ಹಾಗೂ ಅನ್ಯ ಚಟುವಟಿಕೆಗಳಿಗೆ ಅವಶ್ಯಕವಾದ " ಶಕ್ತಿ " (ENERGY) ಯನ್ನು ಒದಗಿಸುತ್ತದೆ. ನಮ್ಮ ಶರೀರಕ್ಕೆ ತತ್ ಕ್ಷಣಕ್ಕೆ ಅವಶ್ಯವಿರುವುದಕ್ಕಿಂತಲೂ ಅಧಿಕ ಪ್ರಮಾಣದ ಗ್ಲೂಕೋಸ್ ಲಭ್ಯವಾದಲ್ಲಿ, ಅದು ಗ್ಲೈಕೋಜೆನ್ ಅಥವಾ ಕೊಬ್ಬಿನ ರೂಪದಲ್ಲಿ ಪರಿವರ್ತನೆಗೊಂಡು ಶರೀರದಲ್ಲಿ ಸಂಗ್ರಹವಾಗುತ್ತದೆ. ಇದೆ ಕಾರಣದಿಂದಾಗಿ ನಮ್ಮ ಶರೀರಕ್ಕೆ ಅಗತ್ಯವಿರುವುದಕ್ಕಿಂತ ಅಧಿಕ ಪ್ರಮಾಣದ ಸಕ್ಕರೆಯ ಸೇವನೆಯೊಂದಿಗೆ ಶಾರೀರಿಕ ಚಟುವಟಿಕೆಗಳೂ ಕಡಿಮೆಯಾದಲ್ಲಿ, ಸ್ವಾಭಾವಿಕವಾಗಿ ನಮ್ಮ ಶರೀರದಲ್ಲಿ ಸಂಗ್ರಹವಾಗುವ ಕೊಬ್ಬಿನ ಪ್ರಮಾಣವೂ ಹೆಚ್ಚಿ ಅತಿಬೊಜ್ಜಿನ ಸಮಸ್ಯೆಗೆ ಕಾರಣವೆನಿಸುತ್ತದೆ.
ಸಕ್ಕರೆಯಿಂದ ತಯಾರಿಸಿದ ಖಾದ್ಯಪೇಯಗಳಅತಿಸೇವನೆಯಿಂದ ಶರೀರದಲ್ಲಿ ಇನ್ಸುಲಿನ್ ನ ಸ್ರಾವವು ಹೆಚ್ಚಾಗುವುದರಿಂದರಕ್ತದಲ್ಲಿನ ಟ್ರೈಗ್ಲಿಸರೈಡ್ ಗಳ ಪ್ರಮಾಣವು ಹೆಚ್ಚುವುದು. ಪರಿಣಾಮವಾಗಿ ಎಚ್ .ಡಿ.ಎಲ್ ಕೊಲೆಸ್ಟರಾಲ್ ಣ ಪ್ರಮಾಣವು ಕಡಿಮೆಯಾಗುವುದರಿಂದ ಹೃದ್ರೋಗಗಳು ಬಾಧಿಸುವ ಸಾಧ್ಯತೆಗಳು ಹೆಚ್ಚುತ್ತದೆ.
ಸಕ್ಕರೆಯ ಬಳಕೆಗೆ ಕತ್ತರಿ!
ನಿಜ ಹೇಳಬೇಕಿದ್ದಲ್ಲಿ ನಮ್ಮ ದೈನಂದಿನ ಆಹಾರದಲ್ಲಿ ಸಕ್ಕರೆಯ ಸೇವನೆ ಅನಿವಾರ್ಯವಲ್ಲ. ಕೆಲ ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯು ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವಂತೆ ಜನರ ಮನವೊಲಿಸಲು ಅಂತರ ರಾಷ್ಟ್ರೀಯ ಅಭಿಯಾನವೊಂದನ್ನು ನಡೆಸಿತ್ತು. ಜಾಗತಿಕ ಮಟ್ಟದಲ್ಲಿ ಸಕ್ಕರೆಯ ಅತಿಸೇವನೆಯಿಂದ ಉದ್ಭವಿಸುತ್ತಿರುವ ಅತಿಬೊಜ್ಜು, ಮಧುಮೇಹ ಹಾಗೂ ಹೃದ್ರೋಗಗಳಂತಹ ಗಂಭೀರ ಆರೋಗ್ಯದ ಸಮಸ್ಯೆಗಳ ಪರಮಾನ್ ಹೆಚ್ಚಲು ಆರಂಭಿಸಿದ್ದುದೇ,ಈ ಅಭಿಯಾನವನ್ನು ಹಮ್ಮಿಕೊಳ್ಳಲು ಮೂಲಕಾರಣವೆನಿಸಿತ್ತು.
ಪ್ರಾಯಶಃ ಇವೆಲ್ಲಾ ಕಾರಣಗಳಿಂದಾಗಿ ಅನೇಕ ಪಾಶ್ಚಾತ್ಯರು ತಾವು ದಿನನಿತ್ಯ ಸೇವಿಸುವ ಚಹಾ- ಕಾಫಿಗಳಲ್ಲೂ ಸಕ್ಕರೆಯನ್ನು ಬೆರೆಸುವುದಿಲ್ಲ. ಆದರೆ ಭಾರತದಲ್ಲಿ ಅನೇಕ ಮಧುಮೇಹ ಪೀಡಿತರೂ ಸಕ್ಕರೆಯನ್ನು ವರ್ಜಿಸುವುದೇ ಇಲ್ಲ!.
ಪ್ರಸ್ತುತ ನೀವು ಸೇವಿಸುತ್ತಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಬಯಸುವುದಾದಲ್ಲಿಈ ಕೆಳಗಿನ ಸಲಹೆ ಸೂಚನೆಗಳನ್ನು ಪರಿಪಾಲಿಸಿ.
ಚಾಕೊಲೆಟ್,ಸಿಹಿತಿಂಡಿಗಳು, ಲಗ್ಹುಪಾನೀಯಗಳು ಮತ್ತು ಐಸ್ ಕರೀಂ ಗಳನ್ನು ಆಗಾಗ ಸೇವಿಸದಿರಿ. ಸಮಾರಂಭ- ಔತಣ ಕೂಟಗಳಲ್ಲಿ ಭಾಗವಹಿಸಿದಾಗ ಕೇವಲ ಒಂದು ಸಿಹಿತಿಂಡಿ ಅಥವಾ ಒಂದಿಷ್ಟು ಪಾಯಸವನ್ನು ಮಾತ್ರ ಸೇವಿಸಿ. ಪ್ರತಿನಿತ್ಯ ಸಿಹಿತಿಂಡಿಗಳನ್ನು ಮೆಲ್ಲುವ ಹವ್ಯಾಸವನ್ನು ತ್ಯಜಿಸಿ. ಹಾಲು- ಮೊಸರುಗಳಿಗೂ ಸಕ್ಕರೆಯನ್ನು ಬೆರೆಸಿ ಸೇವಿಸದಿರಿ. ಚಹಾ- ಕಾಫಿಗಳಲ್ಲಿ ಬೆರೆಸುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ. ನಿಮ್ಮ ಮಕ್ಕಳಿಗೆ ದೋಸೆ, ಇಡ್ಲಿ, ಪೂರಿ ಹಾಗೂ ಉಪ್ಪಿಟ್ಟುಗಳಂತಹ ತಿಂಡಿಗಳೊಂದಿಗೆ ಸಕ್ಕರೆ ಅಥವಾ ಹಣ್ಣುಗಳ ಜಾಮ್ ಬೆರೆಸಿ ತಿನ್ನಿಸುವ ಪರಿಪಾಠವನ್ನು ನಿಲ್ಲಿಸಿ. ಇದಕ್ಕೆ ಬದಲಾಗಿ ಸ್ವಾಭಾವಿಕವಾಗಿ ಸಿಹಿಯಾಗಿರುವ ಹಣ್ಣುಗಳನ್ನು ಹಿತಮಿತವಾಗಿ ಸೇವಿಸಿ.
ಅಂತಿಮವಾಗಿ ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವುದರೊಂದಿಗೆ ದಿನನಿತ್ಯ ೩೦ ರಿಂದ ೬೦ ನಿಮಿಷಗಳ ಕಾಲ್ ನಡಿಗೆವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ತೊಡಗಿಸಿಕೊಂಡಲ್ಲಿಅತಿಬೊಜ್ಜು, ಅಧಿಕ ತೂಕ, ಅಧಿಕ ರಕ್ತದ ಒತ್ತಡ, ಮಧುಮೇಹ ಮತ್ತು ಹೃದ್ರೋಗಗಳಲ್ಲದೇಇತರ ಹಲವಾರು ವ್ಯಾಧಿಗಳ ಸಂಭಾವ್ಯತೆಯನ್ನು ಕಡಿಮೆ ಮಾಡುವುದು ಸುಲಭಸಾಧ್ಯ ಎನ್ನುವುದನ್ನು ಮರೆಯದಿರಿ.
ಇಂದು ವಿಶ್ವ ಮಧುಮೇಹ ದಿನ
ವಿಶ್ವಾದ್ಯಂತ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಮಧುಮೇಹ ವ್ಯಾಧಿಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲುಪ್ರತಿವರ್ಷ ನವೆಂಬರ್ ೧೪ ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ. ಅಂತರ ರಾಷ್ಟ್ರೀಯ ಮಧುಮೇಹ ಒಕ್ಕೂಟ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳ ನೇತ್ರತ್ವದಲ್ಲಿ ವಿವಿಧ ರಾಷ್ಟ್ರಗಳ ವೈದ್ಯಕೀಯ ಮತ್ತು ಸ್ವಯಂಸೇವಾ ಸಂಘಟನೆಗಳು ಈ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.
ಅಸಂಖ್ಯ ಮಧುಮೇಹಿಗಳ ಪಾಲಿಗೆ ' ಸಂಜೀವಿನಿ " ಎನಿಸಿರುವ ಇನ್ಸುಲಿನ್ ಔಷದವನ್ನು ಚಾರ್ಲ್ಸ್ ಬೆಸ್ಟ್ ಇವರೊಂದಿಗೆ ಸಂಶೋಧಿಸಿದ್ದ ವಿಜ್ಞಾನಿ ಫ್ರೆಡರಿಕ್ ಬಾಂಟಿನ್ಗ್ ಇವರ ಜನ್ಮ ದಿನವನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಧುಮೇಹ ವ್ಯಾಧಿಯ ಸಂಭಾವ್ಯತೆ, ತಡೆಗಟ್ಟುವ ಮಾರ್ಗೋಪಾಯಗಳು, ಇದರ ದುಷ್ಪರಿಣಾಮಗಳು, ಮಾರಕತೆ ಮತ್ತು ಸೂಕ್ತ ಚಿಕಿತ್ಸಾ ವಿಧಾನಗಳ ಬಗ್ಗೆ ಕನರಿಗೆ ಮಾಹಿತಿಯನ್ನಿ ನೀಡುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿರುವಂತೆ ಪ್ರಸ್ತುತ ಜಗತ್ತಿನಾದ್ಯಂತ ೨೫೦ ಮಿಲಿಯ ಮಧುಮೇಹ ಪೀಡಿತರಿದ್ದಾರೆ. ಗರಿಷ್ಟ ಸಂಖ್ಯೆಯ ಮಧುಮೇಹಿಗಳಿರುವ ಹತ್ತು ರಾಷ್ಟ್ರಗಳಲ್ಲಿ ಭಾರತವು ಆಗ್ರ ಸ್ಥಾನದಲ್ಲಿದೆ. ಹಾಗೂ ಇದೆ ಕಾರಣದಿಂದಾಗಿ ಭಾರತವನ್ನು ವಿಶ್ವದ ಮಧುಮೇಹಿಗಳ ರಾಜಧಾನಿ ಎಂದು ಕರೆಯಲಾಗುತ್ತದೆ. ಭಾರತಕ್ಕಿಂತ ತುಸು ಅಧಿಕ ಜನಸಂಖ್ಯೆ ಇರುವ ಚೀನಾ ದೇಶವು ಈ ಪತ್ತಿಯಾಲಿ ದ್ವಿತೀಯ ಸ್ಥಾನದಲ್ಲಿದೆ.
ಜಗತ್ತಿನಾದ್ಯಂತ ಸಂಭವಿಸುವ ಶೇ.೫ ರಷ್ಟು ಮರಣಗಳುಮಧುಮೇಹ ವ್ಯಾಧಿಯ ಬಾಧೆಯಿಂದಾಗಿಯೇ ಸಂಭವಿಸುತ್ತಿವೆ. ಮಧುಮೇಹ ವ್ಯಾಧಿಯನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ, ಮಧುಮೇಹ ರೋಗಿಗಳ ಮರಣದ ಪ್ರಮಾಣವು ಮುಂದಿನ ೧೦ ವರ್ಷಗಳಲ್ಲಿ ಶೇ.೫೦ ರಷ್ಟು ಹೆಚ್ಚಲಿದೆ.
ಡಾ.ಸಿ.ನಿತ್ಯಾನಂದ ಪೈ, ಪುತ್ತೂರು
ಉದಯವಾಣಿ ಪತ್ರಿಕೆಯ ಡಿ. ೧೪-೧೧-೨೦೦೮ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.    


Friday, September 19, 2014

ORGAN DONATION - SOME INFORMATION





 ಅಂಗದಾನದ ಬಗ್ಗೆ ಮತ್ತೊಂದಿಷ್ಟು ಮಾಹಿತಿ 

 " ಜೀವದಾನ " ಎನಿಸುವ ಅಂಗದಾನವನ್ನು ಪ್ರೋತ್ಸಾಹಿಸಿ ಲೇಖನವನ್ನು ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿದ ಬಳಿಕ ಅನೇಕ ಓದುಗರು ಈ ಬಗ್ಗೆ ತಮ್ಮ ಸಂದೇಹಗಳಿಗೆ ಸಮಾಧಾನವನ್ನು ನೀಡುವಂತೆ ಆಗ್ರಹಿಸಿದ್ದಾರೆ. ಇದೇ ಕಾರಣದಿಂದಾಗಿ ಆ ಲೇಖನವನ್ನು ಮತ್ತೆ ಪರಿಷ್ಕರಿಸಿ ಬ್ಲಾಗ್ ನಲ್ಲಿ ಪ್ರಕಟಿಸಿದ್ದರೂ, ಒಂದಿಷ್ಟು ಹೆಚ್ಚುವರಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. 

ಅಂಗದಾನ ಎಂದರೇನು?

ತನ್ನ ಜೀವಿತಾವಧಿಯಲ್ಲಿ ಸ್ವ ಇಚ್ಛೆಯಿಂದ ಅಂಗದಾನ ಮಾಡುವುದಾಗಿ ಘೋಷಿಸಿ ನೊಂದಾಯಿಸಿದ್ದ ಅಥವಾ ನೊಂದಾಯಿಸದೆ ಇದ್ದ ವ್ಯಕ್ತಿಯೊಬ್ಬ ಕಾರಣಾಂತರಗಳಿಂದ ' ಮಸ್ತಿಷ್ಕ ಮೃತ " ಸ್ಥಿತಿಯಲ್ಲಿರುವಾಗ, ಇವರ ಕುಟುಂಬದ ಸದಸ್ಯರು ಇವರ ಅಂಗಾಂಗಗಳನ್ನು ಮತ್ತೊಬ್ಬ ವ್ಯಕ್ತಿಗೆ ಜೋಡಿಸುವ ಸಲುವಾಗಿ ಅನುಮತಿಯನ್ನು ನೀಡಿದ ಬಳಿಕ, ದಾನಿಯ ಅಂಗಗಳನ್ನು ನೀಡುವುದನ್ನು ಅಂಗದಾನ ಎನ್ನುತ್ತಾರೆ. 

ಯಾರು ಅಂಗದಾನ ಮಾಡಬಹುದು? 

ವಯಸ್ಸು, ಲಿಂಗ, ಜಾತಿಮತಗಳ ಭೇದವಿಲ್ಲದೇ, ಆರೋಗ್ಯವಂತ ವ್ಯಕ್ತಿಯೊಬ್ಬರು ತಮ್ಮ ಪ್ರಮುಖ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಚಿಕ್ಕ ಮಕ್ಕಳೂ ಈ ಜೀವದಾನವೆನಿಸುವ ಮಹತ್ಕಾರ್ಯದಲ್ಲಿ ಭಾಗಿಯಾಗಬಹುದಾದರೂ, ಇದಕ್ಕೆ ಇವರ ಹೆತ್ತವರ ಸಮ್ಮತಿ ಅತ್ಯವಶ್ಯಕವೆನಿಸುವುದು. 

ಆದರೆ ಮಾರಕ ಕ್ಯಾನ್ಸರ್, ಎಚ್.ಐ.ವಿ - ಏಡ್ಸ್, ರಕ್ತನಾಳಗಳ ಮೂಲಕ ಮಾದಕ ದ್ರವ್ಯಗಳನ್ನು ಸೇವಿಸುವ ವ್ಯಸನಿಗಳು ಮತ್ತು ಗಂಭೀರ ಹಾಗೂ ತೀವ್ರ ಸ್ವರೂಪದ ಸೋಂಕು ಪೀಡಿತರು ಅಂಗದಾನಕ್ಕೆ ಅನರ್ಹರೆನಿಸುತ್ತಾರೆ.

ಯಾವ ಅಂಗಗಳನ್ನು ದಾನ ಮಾಡಬಹುದು?

ಮನುಷ್ಯನ ಶರೀರದ ಪ್ರಮುಖ ಅಂಗಗಳಾದ ಹೃದಯ, ಮೂತ್ರಪಿಂಡಗಳು, ಶ್ವಾಸಕೋಶಗಳು, ಯಕೃತ್,ಮೇದೋಜೀರಕ ಗ್ರಂಥಿ ಇತ್ಯಾದಿಗಳನ್ನು ಮಸ್ತಿಷ್ಕ ಮೃತರಾದಲ್ಲಿ ಮಾತ್ರ ದಾನ ಮಾಡಬಹುದು. ಆದರೆ ರೋಗಿಯ ಸಮೀಪ ಸಂಬಂಧಿಗಳು,ತಾವು ಜೀವಂತರಾಗಿರುವಾಗಲೇ ಯಕೃತ್ತಿನ ಒಂದು ಭಾಗ ಅಥವಾ ಒಂದು ಮೂತ್ರಪಿಂಡವನ್ನು ( ಭಾರತದಲ್ಲಿ ಅಸ್ತಿತ್ವದಲ್ಲಿರುವ ಕಾನೂನಿನನ್ವಯ ) ದಾನ ಮಾಡಬಹುದಾಗಿದೆ. ಆದರೆ ದೃಷ್ಟಿಹೀನರಿಗೆ ಅತ್ಯವಶ್ಯಕ ಎನಿಸುವ ಕಾರ್ನಿಯಾ, ಹೃದಯದ ಕವಾಟಗಳು, ಚರ್ಮ ಹಾಗೂ ಎಲುಬುಗಳನ್ನು ಒಬ್ಬ ವ್ಯಕ್ತಿ ಸ್ವಾಭಾವಿಕವಾಗಿ ಮೃತಪಟ್ಟ ಬಳಿಕವೇ ದಾನ ಮಾಡಬೇಕಾಗುವುದು. 

ಮಸ್ತಿಷ್ಕ ಮೃತ ಎಂದರೇನು?

ಅಪಘಾತದಿಂದಾಗಿ ಅಥವಾ ಅನಿರೀಕ್ಷಿತವಾಗಿ ಸಂಭವಿಸುವ ಮೆದುಳಿನ ಆಘಾತದ ಪರಿಣಾಮವಾಗಿ ವ್ಯಕ್ತಿಯೊಬ್ಬನ ಮೆದುಳಿಗೆ ತೀವ್ರಸ್ವರೂಪದ ಹಾನಿ ಸಂಭವಿಸಿದಲ್ಲಿ ಮತ್ತು ಈ ಹಾನಿಯಿಂದಾಗಿ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗುವ ಸ್ಥಿತಿಯನ್ನು ಮಸ್ತಿಷ್ಕ ಮೃತ ಎಂದು ಪರಿಗಣಿಸಲಾಗುತ್ತದೆ. ಆದರೆ ಇದನ್ನು ನಾಲ್ವರು ತಜ್ಞವೈದ್ಯರ ತಂಡವು ಧೃಢಪಡಿಸಬೇಕಾಗುತ್ತದೆ. 

ಅಂಗದಾನ ಉಪಯುಕ್ತವೆನಿಸುವುದೇ?

ಸಾಮಾನ್ಯವಾಗಿ ಅಂಗಾಂಗಗಳ ವೈಫಲ್ಯದಿಂದ ಸಾವಿನ ದವಡೆಗಳಲ್ಲಿ ಸಿಲುಕಿರುವ ವ್ಯಕ್ತಿಗಳಿಗೆ, ಅಂಗ ದಾನವು " ಪುನರ್ಜನ್ಮ " ವೆನಿಸುತ್ತದೆ. ಹೃದಯ, ಶ್ವಾಸಕೋಶ, ಯಕೃತ್, ಮೇದೋಜೀರಕ ಗ್ರಂಥಿ ಇತ್ಯಾದಿ ಅಂಗಗಳ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗಳು  ನೂತನ ಅಂಗಜೋಡನೆಯ ಫಲವಾಗಿ ಮತ್ತೆ ಇತರ ಆರೋಗ್ಯವಂತ ವ್ಯಕ್ತಿಗಳಂತೆ ಸಕ್ರಿಯ ಜೀವನವನ್ನು ನಡೆಸಬಹುದು. ಅಂತೆಯೇ ದೃಷ್ಠಿಹೀನರಿಗೆ ದೃಷ್ಠಿ, ಯಾತನೆಯಿಂದ ಬಳಲುತ್ತಿದ್ದವರಿಗೆ ಇದರಿಂದ ಮುಕ್ತಿ ಮತ್ತು ನಡೆದಾಡಲೂ ಆಗದಿದ್ದ ವ್ಯಕ್ತಿಗಳಿಗೆ ಇತರರಂತೆ ನಡೆದಾಡುವ ಅವಕಾಶವು ಅಂಗದಾನದಿಂದ ಲಭಿಸುವುದು.

ದಾನಿಗಳ ನೊಂದಣಿಯ ಉಪಯುಕ್ತತೆ 

ತಾವು ಅಂಗಾಂಗಗಳ ದಾನ ಮಾಡುವುದಾಗಿ ನಿಗದಿತ ಸ್ವಯಂಸೇವಾ ಸಂಘಟನೆಗಳ ಮೂಲಕ ಹೆಸರನ್ನು ನೋಂದಾಯಿಸಿದಲ್ಲಿ, ಅಂಗಾಂಗಗಳ ದಾನಿಗಳಿಗಾಗಿ ಕಾಯುತ್ತಿರುವ ಸಹಸ್ರಾರು ರೋಗಿಗಳಿಗೆ ಮತ್ತು ಅಂಗಾಂಗಗಳ ಕಸಿಯನ್ನು ಮಾಡುವ ವೈದ್ಯರಿಗೆ ಅತ್ಯಂತ ಉಪಯುಕ್ತವೆನಿಸುತ್ತದೆ. ಸಂದರ್ಭೋಚಿತವಾಗಿ ಇಂತಹ ದಾನಿಗಳು ಕಾರಣಾಂತರಗಳಿಂದ ಮಸ್ತಿಷ್ಕ ಮೃತರಾದಲ್ಲಿ, ಮುಂದಿನ ಪ್ರಕ್ರಿಯೆಗಳಿಗಾಗಿ ಸಮಯವನ್ನು ವ್ಯರ್ಥಮಾಡಬೇಕಾಗುವುದಿಲ್ಲ. ದಾನಿಗಳ ಸಂಬಂಧಿಗಳು ತತ್ಸಂಬಂಧಿತ ಸಂಸ್ಥೆಗಳಿಗೆ ಅಥವಾ ಆಸ್ಪತ್ರೆಗಳಿಗೆ ಮಾಹಿತಿಯನ್ನು ನೀಡಿದೊಡನೆ, ಇವರ ಅಂಗಾಂಗಗಳನ್ನು ಸಂಗ್ರಹಿಸುವ ಹಾಗೂ ಇವುಗಳನ್ನು ಪಡೆಯಲು ಕಾದಿರುವ ರೋಗಿಗಳನ್ನು ಅಂಗಾಂಗ ಜೋಡಣೆಗಾಗಿ ಸಿದ್ಧಪಡಿಸುವ ಕೆಲಸಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತವೆ. ಅದೇ ರೀತಿಯಲ್ಲಿ ಈ ಅಂಗಾಂಗಗಳನ್ನು ಇತರ ನಗರಗಳಿಗೆ ಕೊಂಡೊಯ್ಯಬೇಕಾದಲ್ಲಿ, ಇದಕ್ಕಾಗಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಸಮಯಾವಕಾಶ ಲಭಿಸುತ್ತದೆ. ಏಕೆಂದರೆ ಮಸ್ತಿಷ್ಕ ಮೃತ ವ್ಯಕ್ತಿಯ ಶರೀರದಿಂದ ಸಂಗ್ರಹಿಸಿದ ಅಂಗಗಳನ್ನು ಸುಮಾರು ನಾಲ್ಕರಿಂದ ಐದು ಘಂಟೆಗಳ ಒಳಗಾಗಿ ಮತ್ತೊಬ್ಬ ವ್ಯಕ್ತಿಗೆ ಜೋಡಿಸಬೇಕಾಗುತ್ತದೆ. ಬೆಂಗಳೂರಿನ ಮಹಿಳೆಯೊಬ್ಬರ ಹೃದಯವನ್ನು ತ್ವರಿತಗತಿಯಲ್ಲಿ ಚೆನ್ನೈ ನಗರಕ್ಕೆ ಕೊಂಡೊಯ್ಯಲು ಪೊಲೀಸರೂ ಸೇರಿದಂತೆ ವಿವಿಧ ಸಂಘಟನೆಗಳು ಸಹಕರಿಸಿದುದನ್ನು ಇಲ್ಲಿ ಸ್ಮರಿಸಬಹುದಾಗಿದೆ. 

ನೋಂದಣಿ ಮಾಡುವುದೆಂತು?

ನೀವು ಅಂಗಾಂಗಗಳನ್ನು ದಾನ ಮಾಡಲು ಬಯಸುವುದಾದಲ್ಲಿ ಅಂತರ್ಜಾಲ ತಾಣದಲ್ಲಿ ( ಇಂಟರ್ ನೆಟ್ ) ಈ ಬಗ್ಗೆ ಸೂಕ್ತ ಮಾಹಿತಿ ಲಭ್ಯವಿದೆ. ಭಾರತದಲ್ಲಿ ಅನೇಕ ಸ್ವಯಂಸೇವಾ ಸಂಘಟನೆಗಳು ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವುದರೊಂದಿಗೆ, ಜನಸಾಮಾನ್ಯರು ದಾನಿಗಳಾಗಿ ನೋಂದಣಿ ಮಾಡಲು ಸಹಕರಿಸುತ್ತವೆ. ದಾನಿಗಳಾಗಿ ನೊಂದಾಯಿಸಿಕೊಂಡವರಿಗೆ ಒಂದು ಗುರುತುಚೀಟಿಯನ್ನು ನೀಡಲಾಗುತ್ತದೆ. ಇದನ್ನು ದಾನಿಗಳು ಸದಾ ತಮ್ಮೊಂದಿಗೆ ಇರಿಸಿಕೊಳ್ಳಬೇಕಾಗುತ್ತದೆ. ಅಂತೆಯೇ ತಮ್ಮ ಕುಟುಂಬದ ಸದಸ್ಯರಿಗೆ ಈ ಮಾಹಿತಿಯನ್ನು ನೀಡಬೇಕಾಗುತ್ತದೆ. 

ಕೊನೆಯ ಮಾತು 

ತಮ್ಮ ಮರಣದಲ್ಲೂ ಅನ್ಯ ವ್ಯಕ್ತಿಯೊಬ್ಬರಿಗೆ " ಹೊಸ ಬಾಳು " ನೀಡಬಲ್ಲ ಅಂಗಾಂಗಗಳ ದಾನ ಮಾಡಲು ಹಾಗೂ ಆಕಸ್ಮಿಕವಾಗಿ ಮಸ್ತಿಷ್ಕ ಮೃತರಾದಲ್ಲಿ ನಿಮ್ಮ ಅಂಗಾಂಗಗಳನ್ನು ಸಂಗ್ರಹಿಸಲು ನಡೆಸಬೇಕಾದ ಶಸ್ತ್ರಕ್ರಿಯೆಗಾಗಿ ಹಣವನ್ನು ವ್ಯಯಿಸುವ ಅವಶ್ಯಕತೆಯೇ ಉದ್ಭವಿಸುವುದಿಲ್ಲ. ನಿಮ್ಮ ಆತ್ಮೀಯರು ಮೃತಪಟ್ಟ ಬಳಿಕವೂ, ಮತ್ತೊಬ್ಬರನ್ನು ಬದುಕಿಸುವುದರಿಂದ ಅವರಲ್ಲಿ ನಿಮ್ಮವರನ್ನು ಕಾಣುವುದರಲ್ಲಿ ವಿಶೇಷವಾದ ಸಂತೃಪ್ತಿಯೂ ಇದೆ. 

ಮಸ್ತಿಷ್ಕ ಮೃತಪಟ್ಟ ವ್ಯಕ್ತಿಯೊಬ್ಬರು ನಿಶ್ಚಿತವಾಗಿಯೂ ಬದುಕುವ ಸಾಧ್ಯತೆಗಳೇ ಇಲ್ಲವಾದುದರಿಂದ, ಅವರ ಶರೀರವನ್ನು ಭೂಮಿಯಲ್ಲಿ ಹೂಳುವ ಅಥವಾ ಅಗ್ನಿಯಲ್ಲಿ ಸುಡುವ ಮೂಲಕ ಅಮೂಲ್ಯವೆನಿಸುವ ಅಂಗಾಂಗಗಳನ್ನು ನಾಶಪಡಿಸದಿರಿ. ನಮ್ಮದೇ ದೇಶದಲ್ಲಿ ಅಂಗಾಂಗಗಳ ದಾನಿಗಳ ಅಭಾವದಿಂದಾಗಿ ಮೃತಪಡುತ್ತಿರುವ ಸಹಸ್ರಾರು ರೋಗಿಗಳಿಗೆ " ಜೀವದಾನ " ಮಾಡಲು ಇಂದೇ ನಿರ್ಧರಿಸಿ, ದಾನಿಯಾಗಿ ನಿಮ್ಮ ಹೆಸರನ್ನು ನೋಂದಾಯಿಸಿ. ಜೊತೆಗೆ ನಿಮ್ಮ ಬಂಧುಮಿತ್ರರನ್ನು ಅಂಗದಾನದ ಮಹತ್ಕಾರ್ಯದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


Saturday, September 13, 2014

AIR POLLUTION



 ಭಾರತದ ನಗರವಾಸಿಗಳಿಗೆ ವಾಯುಮಾಲಿನ್ಯದ ಅಪಾಯ 

ನಿರಂತರವಾಗಿ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ, ದೇಶದ ಪ್ರಜೆಗಳು ಖರೀದಿಸಿ ಬಳಸುತ್ತಿರುವ ವೈವಿಧ್ಯಮಯ ವಾಹನಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ದೇಶದ ರಸ್ತೆಗಳಲ್ಲಿ ಸದಾ ಸಂಚರಿಸುತ್ತಿರುವ ಅತಿಯಾದ ವಾಹನಗಳಿಂದಾಗಿ, ಬಹುತೇಕ ನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣವೂ ದಿನೇದಿನೇ ವೃದ್ಧಿಸುತ್ತಿದೆ. ಈ ಗಂಭೀರ ಸಮಸ್ಯೆಯನ್ನು ಸಮರೋಪಾದಿಯಲ್ಲಿ ನಿಯಂತ್ರಿಸದೇ ಇದ್ದಲ್ಲಿ, ನಮ್ಮ ದೇಶದ ಅಧಿಕತಮ ನಗರವಾಸಿಗಳನ್ನು ಪೀಡಿಸುವ ಗಂಭೀರ ಹಾಗೂ ಮಾರಕವೆನಿಸಬಲ್ಲ ಆರೋಗ್ಯದ ಸಮಸ್ಯೆಗಳು ಇನ್ನಷ್ಟು ಹೆಚ್ಚಲಿವೆ. 

ವಿಶ್ವದಲ್ಲೇ ಪ್ರಥಮ 

ವಿಶ್ವ ಆರೋಗ್ಯ ಸಂಸ್ಥೆಯು ಇದೇ ವರ್ಷದ ಮಧ್ಯಭಾಗದಲ್ಲಿ ಪ್ರಕಟಿಸಿದ್ದ  ಜಗತ್ತಿನ ಅತ್ಯಂತ ಪ್ರದೂಷಿತ ೨೦ ನಗರಗಳ ಯಾದಿಯಲ್ಲಿ, ಭಾರತದ ೧೩ ನಗರಗಳು ಸೇರಿವೆ. ಇದಿಷ್ಟು ಸಾಲದೆನ್ನುವಂತೆ ಭಾರತದ ಶೇ.೫೦ ನಗರಗಳು ಅತ್ಯಂತ ಪ್ರದೂಷಿತ ಪ್ರದೇಶಗಳೆನಿಸಿವೆ. ಅಧಿಕೃತ ಮಾಹಿತಿಯಂತೆ ಭಾರತದಲ್ಲಿ ಸಂಭವಿಸುತ್ತಿರುವ ಮರಣಗಳಿಗೆ ಕಾರಣವೆನಿಸುತ್ತಿರುವ ಅಪಾಯಕಾರಿ ಸಮಸ್ಯೆಗಳಲ್ಲಿ, ವಾಯುಮಾಲಿನ್ಯಕ್ಕೆ ಐದನೆಯ ಸ್ಥಾನ ಸಲ್ಲುತ್ತದೆ. ಈ ವಿಚಾರವು ನಿಜಕ್ಕೂ ಭಯಾನಕವೆನಿಸಿದರೂ, ನಿಶ್ಚಿತವಾಗಿಯೂ ಆಶ್ಚರ್ಯಕರವೇನಲ್ಲ. 

ನಮ್ಮ ದೇಶದ ಪ್ರತಿಯೊಂದು ನಗರಗಳ ರಸ್ತೆಗಳು ದ್ವಿಚಕ್ರ, ತ್ರಿಚಕ್ರ ವಾಹನಗಳು, ಕಾರುಗಳು ಮತ್ತು ಡೀಸೆಲ್ ಇಂಧನವನ್ನು ಬಳಸುವ ವಾಹನಗಳಿಂದ ತುಂಬಿ ತುಳುಕುತ್ತಿದ್ದು, ಇವೆಲ್ಲಾ ವಾಹನಗಳು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎನಿಸುವ ವಿಷಪೂರಿತ ಧೂಮವನ್ನು ವಿಸರ್ಜಿಸುತ್ತವೆ. ಇದೇ ಸಂದರ್ಭದಲ್ಲಿ ಪಾದಚಾರಿಗಳು ಹಾಗೂ ಸೈಕಲ್ ಸವಾರರು ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸುವವರ ಸಂಖ್ಯೆ ಇಳಿಮುಖವಾಗುತ್ತಿದೆ. 

ವಿಶ್ವ ಬ್ಯಾಂಕ್ ಇತ್ತೀಚಿಗೆ ಬಹಿರಂಗಪಡಿಸಿದ ಮಾಹಿತಿಯಂತೆ ಭಾರತದ ನಗರವಾಸಿಗಳು ಉಸಿರಾಡುವ ಗಾಳಿಯಲ್ಲಿರುವ ಸೂಕ್ಷ್ಮಾತಿಸೂಕ್ಷ್ಮ ಕಣಗಳ ಪರಿಣಾಮವಾಗಿ, ದೇಶದ ಸರಾಸರಿ ಉತ್ಪನ್ನದ ಶೇ.೩ ರಷ್ಟು ಭಾಗವು ಆರೋಗ್ಯದ ಸಲುವಾಗಿ ವ್ಯಯಿಸಲ್ಪಡುತ್ತಿದೆ. ಈ ಗಂಭೀರ ಹಾಗೂ ಮಾರಕ ಸಮಸ್ಯೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಅನೇಕ ಕಠಿಣ ನಿರ್ಧಾರಗಳನ್ನು ತಳೆಯಲೇ ಬೇಕಾಗುತ್ತದೆ. 

ಮುಂದೇನು?

ತಜ್ಞರ ಅಭಿಪ್ರಾಯದಂತೆ ಮುಂದಿನ ಎರಡು ದಶಕಗಳಲ್ಲಿ ಭಾರತೀಯರ ದೈನಂದಿನ ಸಂಚಾರದ ಪ್ರಮಾಣವು ದುಪ್ಪಟ್ಟಾಗಲಿದೆ.ಇದರೊಂದಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವವರ ಪ್ರಮಾಣವು ಶೇ.೨೬ ರಿಂದ ಶೇ.೧೬ ಕ್ಕೆ ಕುಸಿಯಲಿದೆ. ಇಷ್ಟು ಮಾತ್ರವಲ್ಲ, ವೈಯುಕ್ತಿಕ ವಾಹನಗಳ ಸಂಚಾರದ ಪ್ರಮಾಣವು ಶೇ.೩೪ ರಿಂದ ಶೇ. ೫೧ ಕ್ಕೆ ಏರಲಿದೆ. ಅಂತೆಯೇ ಮಹಾನಗರಗಳಲ್ಲಿ ಸಂಚರಿಸುವ ವಾಹನಗಳ ವೇಗವು ಇದೀಗ ಪ್ರತಿ ಗಂಟೆಗೆ ೧೬ ಕಿ.ಮೀ. ಇದ್ದು, ಇದು ಪ್ರತಿ ಗಂಟೆಗೆ ೮ ಕಿ.ಮೀ. ಗಳಿಗೆ ಇಳಿಯಲಿದೆ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ, ದೇಶದ ನಗರಗಳಲ್ಲಿ ಸಂಭವಿಸುವ ವಾಯುಮಾಲಿನ್ಯ - ಪರಿಸರ ಪ್ರದೂಷಣೆಗಳ ಪ್ರಮಾಣ ಇನ್ನಷ್ಟು ಹೆಚ್ಚಲಿರುವುದು!.

ನಿಯಂತ್ರಣ ಎಂತು - ಏನು?

ಈ ಅನಾರೋಗ್ಯಕರ ಹಾಗೂ ಅಪಾಯಕಾರಿ ಸಮಸ್ಯೆಯನ್ನು ನಿಶ್ಚಿತವಾಗಿ ನಿಯಂತ್ರಿಸಬೇಕಿದ್ದಲ್ಲಿ ಕೇಂದ್ರ ಸರ್ಕಾರವು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇವುಗಳಲ್ಲಿ ರಾಷ್ಟ್ರೀಯ ಪರಿಶುದ್ಧ ಗಾಳಿ ಕ್ರಿಯಾಯೋಜನೆಯೊಂದನ್ನು ರೂಪಿಸಿ, ಇದನ್ನು ಅನುಷ್ಠಾನಿಸುವ ಮೂಲಕ ದೇಶದ ಪ್ರತಿಯೊಂದು ನಗರಗಳು ೨೦೨೦-೨೧ ಕ್ಕೆ ಮುನ್ನ ಪರಿಶುದ್ಧ ಗಾಳಿಯ ಮಾನದಂಡಗಳಿಗೆ ಅನುಗುಣವಾಗಿ ಇರುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. 

ಇದರೊಂದಿಗೆ ವಾಹನಗಳು ವಿಸರ್ಜಿಸುವ ಹೊಗೆಯ ವಿಚಾರದಲ್ಲಿ ರೂಪಿಸಿರುವ ಮಾನದಂಡಗಳನ್ನು ( Bhaarat stage -4,5 and 6 ) ೨೦೨೦-೨೧ ಕ್ಕೆ ಮುನ್ನ ಹಂತಹಂತವಾಗಿ ಜಾರಿಗೆ ತರುವುದು ಅನಿವಾರ್ಯವೆನಿಸಲಿದೆ. ಇದಲ್ಲದೆ ಡೀಸೆಲ್ ವಾಹನಗಳು ಉಗುಳುವ ಹೊಗೆಯಲ್ಲಿನ ಪ್ರದೂಷಕಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು "ಕ್ಯಾನ್ಸರ್ ಕಾರಕ " ಎಂದು ಘೋಷಿಸಿದ್ದು, ಇದನ್ನು ನಿಯಂತ್ರಿಸಲು BS- 6 ಮಾನದಂಡದ ಅನುಷ್ಠಾನ ಅತ್ಯವಶ್ಯಕವೆನಿಸುವುದು. ಇದಲ್ಲದೇ ಡೀಸೆಲ್ ಇಂಧನವನ್ನು ಬಳಸುವ ಶ್ರೀಮಂತರ ವಿಲಾಸಿ ಕಾರುಗಳು ಹಾಗೂ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳ ಅಬಕಾರಿ ಸುಂಕ ಮತ್ತು ಇಂಧನದ ಮೇಲಿನ ತೆರಿಗೆಗಳನ್ನು ಇನ್ನಷ್ಟು ಹೆಚ್ಚಿಸಬೇಕಾಗುವುದು. 

ಇವೆಲ್ಲಾಕ್ಕೂ ಮಿಗಿಲಾಗಿ CNG ( ನೈಸರ್ಗಿಕ ಅನಿಲ ) ಯಂತಹ ಸ್ವಚ್ಚ ಇಂಧನದ ಬಳಕೆಯನ್ನು ಇನ್ನಷ್ಟು ಹೆಚ್ಚಿಸಲು, ಇದರ ಮೇಲೆ ವಿಧಿಸುವ ತೆರಿಗೆಯಲ್ಲಿ ಮತ್ತು ಈ ಅನಿಲವನ್ನು ಬಳಸುವ ವಾಹನಗಳ ಮೇಲಿನ ತೆರಿಗೆಯಲ್ಲಿ  ಇಂದಿಷ್ಟು ವಿನಾಯತಿ ನೀಡಬೇಕಾಗುವುದು. ಅಂತೆಯೇ ಆಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿದ ಹಾಗೂ ಕನಿಷ್ಠ ಪ್ರಮಾಣದ ಪ್ರದೂಷಕಗಳನ್ನು ವಿಸರ್ಜಿಸುವ ಮತ್ತು ಎಲೆಕ್ಟ್ರಿಕ್( ಬ್ಯಾಟರಿ ಚಾಲಿತ ) ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಾಗುವುದು.

ಅಂತಿಮವಾಗಿ ನಗರ ಪ್ರದೇಶಗಳ ನಿವಾಸಿಗಳಿಗೆ ಕೈಗೆಟಕುವ ಶುಲ್ಕದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುವುದು ಹಾಗೂ ಇಂತಹ ವ್ಯವಸ್ಥೆಗೆ ಸರ್ಕಾರದಿಂದ ಧನಸಹಾಯವನ್ನು ನೀಡುವುದು, ಪಾದಚಾರಿಗಳು ನಿರಾತಂಕವಾಗಿ ಸಂಚರಿಸಲು ಅನುಕೂಲಕರವೆನಿಸುವ ಕಾಲುದಾರಿಗಳ ನಿರ್ಮಾಣ, ಸೈಕಲ್ ಸವಾರರಿಗೆ ಪ್ರತ್ಯೇಕ ಹಕ್ಕಿನ ಹಾದಿ, ಶೇ.೮೦ ರಷ್ಟು ನಗರವಾಸಿಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವಂತಹ ಉಪಕ್ರಮಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಒಂದಿಷ್ಟು ತೆರಿಗೆ ವಿನಾಯತಿಯನ್ನು ನೀಡಿ ಈ ನಷ್ಟವನ್ನು ಭರಿಸಲು ಕಾರುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವುದು, ವೈಯುಕ್ತಿಕ ವಾಹನಗಳ ಸಂಖ್ಯೆಯ ನಿಯಂತ್ರಣ, ಖಾಸಗಿ ವಾಹನಗಳಿಗೆ ಉಚಿತ ಪಾರ್ಕಿಂಗ್ ಸೌಲಭ್ಯವನ್ನು ರದ್ದುಪಡಿಸಿ ನಿಗದಿತ ಶುಲ್ಕವನ್ನು ಸಂಗ್ರಹಿಸುವುದೇ ಮುಂತಾದ ನಿರ್ದಿಷ್ಟ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಪರಿಸರ ಸಂರಕ್ಷಣೆಯೊಂದಿಗೆ, ಜನಸಾಮಾನ್ಯರ ಆರೋಗ್ಯ ರಕ್ಷಣೆಯ ಹೊಣೆಗಾರಿಕೆಯನ್ನೂ ಸರ್ಕಾರ ಸುಲಭದಲ್ಲೇ ನಿಭಾಯಿಸಬಹುದಾಗಿದೆ. ಆದರೆ " ಮತನಿಧಿ ರಾಜಕೀಯ " ದ ಸಲುವಾಗಿ ಇಂತಹ ಅತ್ಯವಶ್ಯಕ ಉಪಕ್ರಮಗಳನ್ನು ಸರ್ಕಾರ ಕೈಗೊಳ್ಳದೇ ಇದ್ದಲ್ಲಿ, ಭಾರತದ ಪ್ರತಿಯೊಂದು ನಗರಗಳ ನಿವಾಸಿಗಳು ಸದ್ಯೋಭವಿಷ್ಯದಲ್ಲಿ ವೈವಿಧ್ಯಮಯ ಹಾಗೂ ಮಾರಕ ವ್ಯಾಧಿಗಳಿಗೆ ಈಡಾಗುವುದರಲ್ಲಿ ಸಂದೇಹವಿಲ್ಲ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 


Wednesday, September 10, 2014

ANEMIA




 ರಕ್ತಹೀನತೆಯಿಂದ ರಕ್ಷಿಸಿಕೊಳ್ಳಿ 

ಬಹುತೇಕ ಭಾರತೀಯರಲ್ಲಿ, ಅದರಲ್ಲೂ ವಿಶೇಷವಾಗಿ ಬಡತನದ ರೇಖೆಗಿಂತ ಕೆಳಗಿರುವ ಜನರಲ್ಲಿ ವ್ಯಾಪಕವಾಗಿ ಕಂಡುಬರುವ ಆರೋಗ್ಯದ ಸಮಸ್ಯೆಗಳಲ್ಲಿ ರಕ್ತಹೀನತೆಯೂ ಒಂದಾಗಿದೆ. ಅವಿದ್ಯಾವಂತರ ಅಜ್ಞಾನ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ಮನುಷ್ಯನ ಶರೀರಕ್ಕೆ ಅತ್ಯವಶ್ಯಕವೆನಿಸುವ ಪೋಷಕಾಂಶಗಳನ್ನು ಸೇವಿಸದಿರುವುದೇ, ಬಡವರ್ಗದ ಜನರನ್ನು ಬಾಧಿಸುತ್ತಿರುವ ರಕ್ತಹೀನತೆಗೆ ಪ್ರಮುಖ ಕಾರಣವೆನಿಸಿದೆ. 
---------           ----------          ----------            -----------          -----------           -------------- 

ಉದ್ಯೋಗದಿಂದ ನಿವೃತ್ತರಾದ ಶ್ಯಾಮರಾಯರು, ತನ್ನ ಪತ್ನಿ ಮತ್ತು ಮಗನ ಸಂಸಾರದೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿದ್ದರು. ಸದಾ ಸಕ್ರಿಯರಾಗಿದ್ದ ರಾಯರಿಗೆ, ಇದೀಗ ದೊರೆಯುತ್ತಿದ್ದ ಶಾರೀರಿಕ ಮತ್ತು ಮಾನಸಿಕ ವಿಶ್ರಾಂತಿಗಳಿಂದಾಗಿ ಹಸಿವೆಯೂ ಕಡಿಮೆಯಾಗಿತ್ತು.ಇದರೊಂದಿಗೆ ಹಿಂದಿನ ತಲೆಮಾರಿನ ಅನೇಕ ಹಿರಿಯರಂತೆ, ತನಗೆ ವಯಸ್ಸಾಯಿತು ಎನ್ನುವ ಏಕಮಾತ್ರ ಕಾರಣದಿಂದಾಗಿ ದಿನನಿತ್ಯ ಸೇವಿಸುತ್ತಿದ್ದ  ಆಹಾರದ ಪ್ರಮಾಣವನ್ನೂ ಸಾಕಷ್ಟು ಕಡಿಮೆ ಮಾಡಿದ್ದರು. 

ನಿವೃತ್ತರಾಗಿ ವರ್ಷ ಕಳೆಯುವಷ್ಟರಲ್ಲಿ ರಾಯರಿಗೆ ಆಗಾಗ ವಿಪರೀತ ಆಯಾಸ ಹಾಗೂ ನಿಶ್ಶಕ್ತಿಗಳೊಂದಿಗೆ ತಲೆ ತಿರುಗುವಿಕೆ ಮತ್ತು ಕಣ್ಣುಕತ್ತಲಾವರಿಸುವುದು ಆರಂಭವಾಗಿತ್ತು. ಯಾವುದೇ ಕಾಯಿಲೆಯಿಂದ ಬಳಲದ ರಾಯರು, ಈ ಸಮಸ್ಯೆಗೆ ತನ್ನ ಇಳಿವಯಸ್ಸಿನ ಪ್ರಭಾವವೇ ಕಾರಣವೆಂದು ಭ್ರಮಿಸಿದ್ದರು. ಇದೇ ಕಾರಣದಿಂದಾಗಿ ತನ್ನ ಪತ್ನಿ ಮತ್ತು ಮಗನ ಬಳಿ ಈ ವಿಚಾರವನ್ನು ಪ್ರಸ್ತಾಪಿಸದ ರಾಯರು, ತನ್ನ ಕುಟುಂಬ ವೈದ್ಯರನ್ನು ಕೂಡಾ ಭೇಟಿಯಾಗಿರಲಿಲ್ಲ.

ಅದೊಂದು ದಿನ ಬೆಳಿಗ್ಗೆ ಎದ್ದು ಬಹಿರ್ದೆಸೆಗೆ ತೆರಳಲೆಂದು ಹೊರಟ ರಾಯರು, ನಾಲ್ಕು ಹೆಜ್ಜೆ ನಡೆಯುವಷ್ಟರಲ್ಲಿ ಕುಸಿದುಬಿದ್ದು ಪ್ರಜ್ಞಾಹೀನರಾದರು. ಸದ್ದು ಕೇಳಿ ಧಾವಿಸಿದ ಮನೆಮಂದಿಯ ಉಪಚಾರದಿಂದ ತುಸು ಚೇತರಿಸಿಕೊಂಡ ರಾಯರ ಜಂಘಾಬಲವೇ ಉಡುಗಿಹೋಗಿತ್ತು. ವಾರ ಕಳೆಯುವಷ್ಟರಲ್ಲಿ ಮತ್ತೆ ಎರಡುಬಾರಿ ಪುನರಾವರ್ತನೆಗೊಂಡಿದ್ದ ಈ ಸಮಸ್ಯೆಯಿಂದಾಗಿ, ರಾಯರು ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದರು. 

ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ರಾಯರನ್ನು ಕಾಣಲೆಂದು ಬಂದಿದ್ದ ವೈದ್ಯಮಿತ್ರರಿಗೆ ಸ್ನೇಹಿತನನ್ನು ಕಂಡು ಆಶ್ಚರ್ಯವಾಗಿತ್ತು. ಅರೆಕ್ಷಣವೂ ಸುಮ್ಮನಿರದ ತನ್ನ ಸ್ನೇಹಿತನು ಇದೀಗ ಜೀವಂತಶವದಂತೆ ಹಾಸಿಗೆ ಹಿಡಿದಿರುವುದನ್ನು ಕಂಡ ಮಿತ್ರನಿಗೆ, ಕರುಳು ಕಿತ್ತುಬಂದಂತಾಗಿತ್ತು. ಆದರೆ ಮರುಕ್ಷಣದಲ್ಲೇ ಚೇತರಿಸಿಕೊಂಡ ಮಿತ್ರನ ವೈದ್ಯ ಬುದ್ಧಿ ಜಾಗೃತವಾಗಿತ್ತು. ಬಳಿಕ ರಾಯರನ್ನು ಕೂಲಂಕುಶವಾಗಿ ಪರೀಕ್ಷಿಸಿದ ವೈದ್ಯಮಿತ್ರರಿಗೆ,  "ತೀವ್ರ ರಕ್ತಹೀನತೆ " ಬಾಧಿಸುತ್ತಿರುವುದು ಪತ್ತೆಯಾಗಿತ್ತು. ತಕ್ಷಣ ತನ್ನ ವಾಹನದಲ್ಲಿ ರಾಯರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ತಜ್ಞವೈದ್ಯರಿಂದ ತಪಾಸಣೆಗೆ ಒಳಪಡಿಸಿದಾಗ,ವೈದ್ಯಮಿತ್ರರ ಸಂದೇಹ ನಿಜವಾಗಿತ್ತು. ಅರ್ಥಾತ್, ರಾಯರ ರಕ್ತದಲ್ಲಿನ ಹೆಮೊಗ್ಲೋಬಿನ್ ಸಾಂದ್ರತೆಯು ೪ ಗ್ರಾಂ ಗಳಿಗೆ ಕುಸಿದಿತ್ತು!. 

ರೋಗಿಯ ವಯಸ್ಸು ಮತ್ತು ರಕ್ತಹೀನತೆಯ ತೀವ್ರತೆಯನ್ನು ಗಮನಿಸಿದ ತಜ್ಞವೈದ್ಯರು, ಅವಶ್ಯಕ ಪ್ರಮಾಣದ ರಕ್ತವನ್ನು ನೀಡುವ ಚಿಕಿತ್ಸೆಯನ್ನು ನೀಡಲು ನಿರ್ಧರಿಸಿದರು.ಸೂಕ್ತ ಚಿಕಿತ್ಸೆಯಿಂದ ಚೇತರಿಸಿಕೊಂಡ ರಾಯರು, ಎರಡು ದಿನಗಳ ಬಳಿಕ ಮನೆಗೆ ಮರಳುವಾಗ ನಿರಾಯಾಸದಿಂದ ನಡೆದುಕೊಂಡೇ ಬಂದಿದ್ದರು!. 

ರಕ್ತಹೀನತೆ ಎಂದರೇನು?

ಕಾರಣಾಂತರಗಳಿಂದ ಮನುಷ್ಯನ ರಕ್ತದಲ್ಲಿನ ಹೆಮೊಗ್ಲೋಬಿನ್ ನ ಅಂಶವು ಕಡಿಮೆಯಾಗಿರುವ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ " ಅನೀಮಿಯಾ " ಅರ್ಥಾತ್, ರಕ್ತಹೀನತೆ ಎನ್ನುವರು. ಅಂತೆಯೇ ಈ ವಿಶಿಷ್ಟ ಸಮಸ್ಯೆ ಉದ್ಭವಿಸಲು ಮೂಲವೆನಿಸುವ ಕಾರಣಗಳಿಗೆ ಅನುಗುಣವಾಗಿ ಇವುಗಳ ಪ್ರಭೇದಗಳನ್ನು ಗುರುತಿಸಿದ್ದಾರೆ. 

ಸಾಮಾನ್ಯವಾಗಿ ಆರೋಗ್ಯವಂತ ಪುರುಷರ ರಕ್ತದಲ್ಲಿ ೧೩ ರಿಂದ ೧೮ ಗ್ರಾಮ್ಸ್, ಮಹಿಳೆಯರಲ್ಲಿ ೧೧ ರಿಂದ ೧೬, ಮಕ್ಕಳಲ್ಲಿ ೧೧ ರಿಂದ ೧೬.೫ ಮತ್ತು ಪುಟ್ಟ ಕಂದಮ್ಮಗಳಲ್ಲಿ ೧೬.೫ ರಿಂದ ೧೯.೫ ರಷ್ಟು ಹೆಮೊಗ್ಲೋಬಿನ್ ನ ಅಂಶ ಇರುವುದು. ಸರಳವಾದ ರಕ್ತ ಪರೀಕ್ಷೆಯ ಮೂಲಕ ಸುಲಭವಾಗಿ ಅರಿತುಕೊಳ್ಳಬಹುದಾದ ಈ ಹೆಮೊಗ್ಲೋಬಿನ್ ನ ಪ್ರಮಾಣವು ತೀವ್ರವಾಗಿ ಕಡಿಮೆಯಾದಾಗ, ರೋಗಿಯು ರಕಹೀನತೆಯಿಂದ ಬಳಲುತ್ತಿರುವನೆಂದು ಖಚಿತವಾಗಿ ನಿರ್ಧರಿಸಬಹುದಾಗಿದೆ. 

ಈ ಸಮಸ್ಯೆಗೆ ಕಾರಣವೇನು?

ಬಡತನದ ರೇಖೆಗಿಂತ ಕೆಳಗಿರುವ ಜನರೇ ಹೆಚ್ಚಾಗಿರುವ ಭಾರತದಲ್ಲಿ, ಸಮೃದ್ಧ ಪೋಷಕಾಂಶಗಳಿರುವ ಸಮತೋಲಿತ ಆಹಾರವನ್ನು ಸೇವಿಸದಿರುವುದು ಹಾಗೂ ಸಮರ್ಪಕವಾದ ಶೌಚಾಲಯವನ್ನು ನಿರ್ಮಿಸಿ ಬಳಸದಿರುವುದರಿಂದಾಗಿ ಸುಲಭದಲ್ಲೇ ಹರಡುವ ಜಂತುಹುಳಗಳ ಬಾಧೆ ಈ ಸಮಸ್ಯೆಗೆ ಪ್ರಮುಖ ಕಾರಣವೆನಿಸಿದೆ. 

ನಾವು ಸೇವಿಸುವ ಆಹಾರದಲ್ಲಿ ಕಬ್ಬಿಣದ ಸತ್ವ ಹಾಗೂ ಪೋಷಕಾಂಶಗಳ ಕೊರತೆ, ಶರೀರದ ಕಬ್ಬಿಣದ ಸತ್ವಗಳ ಬೇಡಿಕೆಯ ಪ್ರಮಾಣ ಹೆಚ್ಚಾಗುವ ಸ್ಥಿತಿ ( ಉದಾ- ಗರ್ಭಧಾರಣೆ ), ನಿರ್ದಿಷ್ಟ ಕಾರಣಗಳಿಂದಾಗಿ ಕರುಳಿನಲ್ಲಿ ಕಬ್ಬಿಣದ ಸತ್ವ ಹಾಗೂ ಪೋಷಕಾಂಶಗಳನ್ನು ಹೀರುವ ಪ್ರಕ್ರಿಯೆಯ ತೊಂದರೆಗಳು, ತೀವ್ರ ಅಥವಾ ದೀರ್ಘಕಾಲೀನ ರಕ್ತಸ್ರಾವದ ಸಮಸ್ಯೆಗಳು ಮತ್ತು ಕರುಳಿನ ಕಾಯಿಲೆಗಳು, ಕಾರಣಾಂತರಗಳಿಂದ ಅಸ್ಥಿಮಜ್ಜೆಯಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯಲ್ಲಿ ಕೊರತೆ ಉಂಟಾಗುವುದು ಮತ್ತು ಕೆಲವೊಂದು ಕಾರಣಗಳಿಂದ ಕೆಂಪು ರಕ್ತಕಣಗಳು ಅತಿಯಾಗಿ ನಾಶವಾಗುತ್ತಿರುವುದು ರಕ್ತಹೀನತೆಗೆ ಪ್ರಮುಖ ಕಾರಣಗಳಾಗಿವೆ. 

ಸಾಮಾನ್ಯವಾಗಿ ರಕ್ತಹೀನತೆ ಉದ್ಭವಿಸಲು ಮೇಲೆ ನಮೂದಿಸಿದ ಒಂದು ಅಥವಾ ಅದಕ್ಕೂ ಅಧಿಕ ಕಾರಣಗಳು ಮೂಲವೆನಿಸುತ್ತವೆ. ಇದರೊಂದಿಗೆ ಜಗತ್ತಿನ ಬಹುತೇಕ ಬಡರಾಷ್ಟ್ರಗಳಲ್ಲಿ ವ್ಯಾಪಕವಾಗಿ ಕಂಡುಬರುವ ಈ ವ್ಯಾಧಿಗೆ ಅಜ್ಞಾನ, ಬಡತನ ಮತ್ತು ದಟ್ಟ ದಾರಿದ್ರ್ಯಗಳೇ ಕಾರಣವೆನಿಸುತ್ತವೆ. 

ವ್ಯಾಧಿಯ ಲಕ್ಷಣಗಳು 

ಅನೀಮಿಯಾ ಪೀಡಿತ ವ್ಯಕ್ತಿಗಳಿಗೆ ಅತಿ ಆಯಾಸ, ನಿಶ್ಶಕ್ತಿ, ಒಂದಿಷ್ಟು ಶಾರೀರಿಕ ಶ್ರಮದ ಕೆಲಸಗಳನ್ನು ಮಾಡಿದೊಡನೆ ಏದುಬ್ಬಸ, ತಲೆನೋವು, ನಿದ್ರಾಹೀನತೆ, ದೃಷ್ಠಿಮಾಂದ್ಯ, ವಾಕರಿಕೆ, ವಾಂತಿ, ನಾಡಿ ಮತ್ತು ಹೃದಯ ಬಡಿತಗಳ ಗತಿ ತೀವ್ರಗೊಳ್ಳುವುದು, ಎದೆಯಲ್ಲಿ ಢವಗುಟ್ಟಿದಂತಾಗುವುದು, ಅಂಗೈ, ಅಂಗಾಲು, ಮುಖ, ತುಟಿ,ನಾಲಿಗೆ ಹಾಗೂ ಕಣ್ಣುಗಳು ಬಿಳಿಚಿಕೊಂಡಂತೆ ಕಾಣುವುದು, ಕೈಕಾಲುಗಳ ಬೆರಳುಗಳಲ್ಲಿ ಸೂಜಿಯಿಂದ ಚುಚ್ಚಿದಂತಾಗುವುದು ಮತ್ತು ತಲೆ ತಿರುಗಿದಂತಾಗುವುದೇ ಮುಂತಾದ ಲಕ್ಷಣಗಳು ಕಂಡುಬರುತ್ತವೆ. 

ಅತಿಯಾದ ಹಾಗೂ ದೀರ್ಘಕಾಲೀನ ರಕ್ತಹೀನತೆಯಿಂದ ಬಳಲುತ್ತಿರುವವರಲ್ಲಿ ನಾಲಿಗೆಯ ಉರಿಯೂತ, ಬಾಯಿ ಮತ್ತು ತುಟಿಯ ಎರಡೂ ಮೂಲೆಗಳಲ್ಲಿ ಹುಣ್ಣುಗಳು, ಆಹಾರ ನುಂಗಲು ಮತ್ತು ಮಾತನಾಡಲು ಕಷ್ಟವೆನಿಸುವುದು, ಪ್ಲೀಹವೃದ್ಧಿ ಮತ್ತು ಉಗುರುಗಳು ಚಮಚದ ಆಕಾರವನ್ನು ತಾಳುವುದು ಹೆಚ್ಚಾಗಿ ಕಂಡುಬರುತ್ತದೆ. 

ಅದೇ ರೀತಿಯಲ್ಲಿ ಈ ಸಮಸ್ಯಾಪೀಡಿತ ವಯೋವೃದ್ಧರಲ್ಲಿ, ಎದೆ ಹಾಗೂ ಕಾಲಿನ ಮಾಂಸಪೇಶಿಗಳಲ್ಲಿ ನೋವು, ಪಾದಗಳಲ್ಲಿ ನೀರು ಸಂಗ್ರಹಗೊಂಡು ಉಂಟಾಗುವ ಬಾವು ಮತ್ತು ಹೃದಯ ವೈಫಲ್ಯಗಳಂತಹ ಲಕ್ಷಣಗಳೂ ಕಂಡುಬರುತ್ತವೆ. 

ಚಿಕಿತ್ಸೆ 

ರಕ್ತಹೀನತೆಯ ಮೂಲಕಾರಣವನ್ನು ನಿಖರವಾಗಿ ಪತ್ತೆಹಚ್ಚಿದ ಬಳಿಕ ರೋಗಿಯ ಸಮಸ್ಯೆಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡುವುದು ವೈದ್ಯರ ಆದ್ಯ ಕರ್ತವ್ಯವೂ ಹೌದು. ರಕ್ತಸ್ರಾವದಿಂದ ಬಳಲುವ ರೋಗಿಗಳಲ್ಲಿ ಇರಬಹುದಾದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು, ಕ್ಷಯ ರೋಗ, ಮೂಲವ್ಯಾಧಿ, ಜಠರದ ಹುಣ್ಣುಗಳು, ಕೆಲವಿಧದ ಸೋಂಕುಗಳು ಹಾಗೂ ಜಂತುಹುಳಗಳ ಬಾಧೆಯನ್ನು ನಿವಾರಿಸಲು ಸೂಕ್ತ ಚಿಕಿತ್ಸೆಯನ್ನು ನೀಡಬೇಕಾಗುವುದು. ಇದರೊಂದಿಗೆ ರಕ್ತಹೀನತೆಗೆ ಕಾರಣವೆನಿಸಬಲ್ಲ ಪೋಷಕಾಂಶ ರಹಿತ ಹಾಗೂ ದೋಷಪೂರಿತ ಆಹಾರ ಸೇವನಾ ಕ್ರಮವನ್ನು ಬದಲಾಯಿಸುವುದು ಅತ್ಯವಶ್ಯಕ ಎನಿಸುವುದು. 

ವಿವಿಧ ಕಾರಣಗಳಿಂದ ಉದ್ಭವಿಸಿರಬಹುದಾದ ತೀವ್ರ ರಕ್ತಸ್ರಾವದಿಂದಾಗಿ ಪ್ರಾಣಾಪಾಯದ ಭೀತಿಯಲ್ಲಿರುವ ರೋಗಿಗಳಿಗೆ ಕ್ಷಿಪ್ರಗತಿಯಲ್ಲಿ ಸೂಕ್ತ ಪ್ರಮಾಣದ ರಕ್ತವನ್ನೇ ನೀಡಬೇಕಾಗುವುದು. ಸೌಮ್ಯ ರೂಪದ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಕಬ್ಬಿಣದ ಸತ್ವದ ಮಾತ್ರೆಗಳು, ಕ್ಯಾಪ್ಸೂಲ್ ಅಥವಾ ಸಿರಪ್ ಗಳನ್ನು ನೀಡಬಹುದಾಗಿದೆ. ಅಪರೂಪದಲ್ಲಿ ಕೆಲ ರೋಗಿಗಳಿಗೆ, ವಿಶೇಷವಾಗಿ ದೀರ್ಘಕಾಲೀನ ಚಿಕಿತ್ಸೆಯನ್ನು ಪಡೆದುಕೊಳ್ಳಲು ಬಯಸದ ವ್ಯಕ್ತಿಗಳಿಗೆ ಇಂಜೆಕ್ಷನ್ ನೀಡುವುದುಂಟು.

ತಡೆಗಟ್ಟುವುದೆಂತು?

ಮನುಷ್ಯನ ಶರೀರದ ಮೂಲಭೂತ ಅವಶ್ಯಕತೆಗಳಲ್ಲಿ ಶುದ್ಧವಾದ ಗಾಳಿ,ನೀರು ಮತ್ತು ಆಹಾರಗಳು ಪ್ರಮುಖವಾಗಿವೆ. ಮಾನವ ಶರೀರದ ಪಾಲನೆ, ಪೋಷಣೆ ಹಾಗೂ ವೈವಿಧ್ಯಮಯ ಜೈವಿಕ ಕ್ರಿಯೆಗಳಿಗೆ ಉತ್ತಮ ಗುಣಮಟ್ಟದ ಆಹಾರವು ಅತ್ಯವಶ್ಯಕವಾಗಿದೆ. ಅದೇ ರೀತಿಯಲ್ಲಿ ನಾವು ಸೇವಿಸುವ ಆಹಾರ ಮತ್ತು ನಮ್ಮ ಆರೋಗ್ಯಗಳಿಗೆ ಅವಿನಾಭಾವ ಸಂಬಂಧವೂ ಇದೇ. ಪೋಷಕಾಂಶಗಳಿಂದ ಸಮೃದ್ಧವಾದ ಹಾಗೂ ಸಮತೋಲಿತ ಆಹಾರ ಸೇವನೆಯಿಂದ ನಮ್ಮ ಆರೋಗ್ಯದೊಂದಿಗೆ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅಂತೆಯೇ ಇದರಲ್ಲಿ ಕೊರತೆಯುಂಟಾದಾಗ ನಿಸ್ಸಂದೇಹವಾಗಿ ಅನಾರೋಗ್ಯ ಬಾಧಿಸುತ್ತದೆ. 

ನಾವು ಪ್ರತಿನಿತ್ಯ ಸೇವಿಸುವ ವೈವಿಧ್ಯಮಯ ಆಹಾರಗಳಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ಜೀವಸತ್ವಗಳು, ಖನಿಜಗಳು, ಲವಣಗಳು, ಕೊಬ್ಬು, ನಾರು ಪದಾರ್ಥಗಳು ಮತ್ತು ನೀರು ಎಂದು ವಿಂಗಡಿಸಬಹುದಾದ ಪೋಷಕಾಂಶಗಳು ನಿರ್ದಿಷ್ಟ ಪ್ರಮಾಣದಲ್ಲಿ ಇರುತ್ತವೆ. ಇವುಗಳಲ್ಲಿ ಯಾವುದೇ ಒಂದು ಪೋಷಕಾಂಶದ ಕೊರತೆಯುಂಟಾದಾಗ, ಅದಕ್ಕೆ ಅನುಗುಣವಾಗಿ ಕೆಲವೊಂದು ನಿರ್ದಿಷ್ಟ ಆರೋಗ್ಯದ ಸಮಸ್ಯೆಗಳು ಉದ್ಭವಿಸುತ್ತವೆ. 

ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಬಡವರು ಮೂರು ಹೊತ್ತು ಅನ್ನವನ್ನೇ ಉಣ್ಣುವುದರಿಂದ, ಇಂತಹ ವ್ಯಕ್ತಿಗಳಿಗೆ ಅನ್ನದಲ್ಲಿ ಲಭ್ಯವಿರುವ ಪೋಷಕಾಂಶಗಳು ಮಾತ್ರ ಲಭಿಸುತ್ತವೆ. ಇದರಿಂದಾಗಿ ರಕ್ತವರ್ಧಕ ಪೋಷಕಾಂಶಗಳ ಕೊರತೆ ಉದ್ಭವಿಸುವುದರಿಂದ ರಕ್ತಹೀನತೆ ಬಾಧಿಸುತ್ತದೆ. ಈ ಸಮಸ್ಯೆಯ ನಿವಾರಣೆಗಾಗಿ ರಕ್ತವರ್ಧಕ ಔಷದಗಳನ್ನು ಸೇವಿಸಿದರೂ, ಸಮಸ್ಯೆ ಪರಿಹಾರಗೊಂಡ ಬಳಿಕ ಸಮೃದ್ಧ ಪೋಷಕಾಂಶಗಳಿರುವ ಆಹಾರ ಸೇವನೆಯನ್ನು ದಿನನಿತ್ಯ ಪರಿಪಾಲಿಸಬೇಕಾಗುತ್ತದೆ. ಇದಕ್ಕೆ ತಪ್ಪಿದಲ್ಲಿ ರಕ್ತಹೀನತೆಯ ಸಮಸ್ಯೆ ಮತ್ತೆ ಮರುಕಳಿಸುವ ಸಾಧ್ಯತೆಗಳಿವೆ. 

ಅಂತಿಮವಾಗಿ ಹೇಳುವುದಾದಲ್ಲಿ " ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಮಿಗಿಲು " ಎನ್ನುವ ಆಡುಮಾತಿನಂತೆ, ನಿಮ್ಮ ದೈನಂದಿನ ಆಹಾರ ಸೇವನಾಕ್ರಮದಲ್ಲಿ ಈಗಿನಿಂದಲೇ ಅವಶ್ಯಕ ಬದಲಾವಣೆಗಳನ್ನು ಮಾಡಿಕೊಳ್ಳಿ. ಜೊತೆಗೆ ವರ್ಷದಲ್ಲಿ ಎರಡು ಬಾರಿ ಜಂತುಹುಳಗಳ ನಿವಾರಣೆಗಾಗಿ ಔಷದವನ್ನು ತಪ್ಪದೆ ಸೇವಿಸಿ. ತನ್ಮೂಲಕ ಪೋಷಕಾಂಶಗಳ ಕೊರತೆಯಿಂದ ಉದ್ಭವಿಸುವ ರಕ್ತಹೀನತೆಯನ್ನು ದೂರವಿರಿಸುವುದು ಸುಲಭಸಾಧ್ಯ ಎನ್ನುವುದನ್ನು ಮರೆಯದಿರಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೩೦-೦೬-೨೦೦೫ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.



Saturday, September 6, 2014

ORGAN DONATION - TRANSPLANTATION




 

 


ಜೀವದಾನ ಎನಿಸುವ " ಅಂಗದಾನ " ವನ್ನು ಪ್ರೋತ್ಸಾಹಿಸಿ 

ಕೆಟ್ಟು ಹೋಗಿರುವ ಯಂತ್ರವೊಂದರ ಭಾಗಗಳನ್ನು ತೆಗೆದು, ಹೊಸ ಭಾಗಗಳನ್ನು ಜೋಡಿಸುವಂತೆಯೇ, ಮನುಷ್ಯನ ಶರೀರದ ಪ್ರಮುಖ ಅಂಗಾಂಗಗಳು ಸಮರ್ಪಕವಾಗಿ ಕಾರ್ಯಾಚರಿಸದೇ ಇದ್ದಲ್ಲಿ ಅಥವಾ ವಿಫಲವಾದಲ್ಲಿ, ಈ ಅಂಗಕ್ಕೆ ಬದಲಾಗಿ ದಾನಿಯೊಬ್ಬರ ಶರೀರದ ಅಂಗವನ್ನು ಜೋಡಿಸುವುದು ಸುಲಭಸಾಧ್ಯವೂ ಹೌದು. ಆದರೆ ಇಂತಹ ಚಿಕಿತ್ಸೆಗೆ ಅನಿವಾರ್ಯವೆನಿಸುವ ಮನುಷ್ಯನ ಶರೀರದ ಪ್ರಮುಖ ಅಂಗಾಂಗಗಳನ್ನು ಪಡೆದುಕೊಳ್ಳುವುದು ಅಷ್ಟೊಂದು ಸುಲಭವೇನಲ್ಲ. ಅಕ್ಷರಶಃ ಜೀವದಾನವೆನಿಸುವ ಅಂಗಾಂಗ ದಾನದ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.
-----------         -----------        ------------             -----------           -------------

ಇತ್ತೀಚಿಗೆ ಬೆಂಗಳೂರಿನ "ಮಸ್ತಿಷ್ಕ ಮೃತ" ಮಹಿಳೆಯೊಬ್ಬರ ಹೃದಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು, ನಿಗದಿತ ಅವಧಿಯಲ್ಲಿ ಚೆನ್ನೈ ನಲ್ಲಿರುವ ಆಸ್ಪತ್ರೆಯೊಂದಕ್ಕೆ ವಿಮಾನದ ಮೂಲಕ ಸುರಕ್ಷಿತವಾಗಿ ತಲುಪಿಸಿದಂತೆಯೇ, ಹೃದಯ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಅಳವಡಿಸಿದ ವರದಿಯನ್ನು ಅರಿತ ಜನರು ಮೂಕವಿಸ್ಮಿತರಾಗಿದ್ದುದು ಸತ್ಯ.ಅನಿರೀಕ್ಷಿತವಾಗಿ ಸಂಭವಿಸಿದ್ದ ಈ ಘಟನೆಯು, " ಅಂಗಾಂಗಗಳ ದಾನ " ದ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿರುವುದು ಕೂಡಾ ಅಷ್ಟೇ ಸತ್ಯ.

ಹಿನ್ನೆಲೆ 

ಜಗತ್ತಿನಲ್ಲೇ ಮೊದಲಬಾರಿಗೆ ಮೂತ್ರಪಿಂಡಗಳ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ, ದಾನಿಯೊಬ್ಬರ ಮೂತ್ರಪಿಂಡವನ್ನು ಜೋಡಿಸುವ ಶಸ್ತ್ರಕ್ರಿಯೆಯನ್ನು ಡಾ.ಕ್ರಿಶ್ಚಿಯನ್ ಬರ್ನಾಡ್ ಇವರು ೧೯೫೩ ರಲ್ಲಿ ಅಮೇರಿಕಾದಲ್ಲಿ ಯಶಸ್ವಿಯಾಗಿ ನಡೆಸಿದ್ದರು. ಬಳಿಕ ೧೯೬೭ರ ಡಿಸೆಂಬರ್ ೩ ರಂದು, ಜಗತ್ತಿನ ಮೊದಲ ಬದಲಿ ಹೃದಯ ಜೋಡಣೆಯನ್ನು ಕೂಡಾ ಇದೇ ವೈದ್ಯರು ನಡೆಸಿದ್ದರು. ವಿಶೇಷವೆಂದರೆ ಅಂದು ಅಪಘಾತವೊಂದರಲ್ಲಿ ಗಾಯಗೊಂಡು " ಮಸ್ತಿಷ್ಕ ಮೃತ " ಎಂದು ವೈದ್ಯರು ಘೋಷಿಸಿದ್ದ ಯುವ ಮಹಿಳೆಯೊಬ್ಬಳ ಬಂಧುಗಳ ಒಪ್ಪಿಗೆಯಂತೆ, ಆಕೆಯ ಹೃದಯವನ್ನು ತೆಗೆದು ಈ ರೋಗಿಗೆ ಜೋಡಿಸಲಾಗಿತ್ತು. ತದನಂತರ ಜಗತ್ತಿನ ವಿವಿಧ ದೇಶಗಳಲ್ಲಿ ಬದಲಿ ಅಂಗಾಂಗ ಜೋಡಣೆಯ ಅಸಂಖ್ಯ ಶಸ್ತ್ರಚಿಕಿತ್ಸೆಗಳು ನಡೆದಿದ್ದು, ಸಹಸ್ರಾರು ರೋಗಿಗಳನ್ನು ಸಾವಿನ ದವಡೆಗಳಿಂದ ರಕ್ಷಿಸಲಾಗಿದೆ. 
 

ಮಾನವ ಶರೀರದ ಪ್ರಮುಖ ಅಂಗಾಂಗಗಳನ್ನು ಮತ್ತೊಬ್ಬರಿಗೆ " ಕಸಿ " ಮಾಡುವ ಶಸ್ತ್ರಚಿಕಿತ್ಸೆಯನ್ನು ಭಾರತದ ಅನೇಕ ಪ್ರಮುಖ ನಗರಗಳ ಸುಸಜ್ಜಿತ ಆಸ್ಪತ್ರೆಗಳಲ್ಲಿ ಅನೇಕ ವರ್ಷಗಳಿಂದ ನಡೆಸಲಾಗುತ್ತಿದೆ. ಆದರೆ ಅನೇಕ ವರ್ಷಗಳ ಹಿಂದೆ ಅಂಗಾಂಗ ದಾನದ ಬಗ್ಗೆ ರೂಪಿಸಿದ್ದ ಕಟ್ಟುನಿಟ್ಟಿನ ಕಾನೂನುಗಳು ಇದಕ್ಕೆ ತೊಡಕಾಗಿ ಪರಿಣಮಿಸುತ್ತಿತ್ತು. ಪ್ರಾಯಶಃ ಇದೇ  ಕಾರಣದಿಂದಾಗಿ ಅಮಾಯಕ ಬಡ ಜನರನ್ನು ಮರುಳುಮಾಡಿ, ಇವರ ಅಂಗಗಳನ್ನು ( ಹೆಚ್ಚಾಗಿ ಮೂತ್ರಪಿಂಡಗಳನ್ನು ) ಅತ್ಯಲ್ಪ ಬೆಲೆಗೆ ಖರೀದಿಸಿ, ಶ್ರೀಮಂತ ರೋಗಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುವ ಮಧ್ಯವರ್ತಿಗಳ ಧಂದೆಯು ಅನಿಯಂತ್ರಿತವಾಗಿ ಸಾಗುತ್ತಿತ್ತು. ಇಂತಹ ಅನೇಕ ಪ್ರಕರಣಗಳು ಬಯಲಿಗೆ ಬಂದಂತೆಯೇ " ಅಂಗಾಂಗ ಕಸಿ " ಸೌಲಭ್ಯಕ್ಕೆ ತೀವ್ರ ಹಿನ್ನಡೆ ಉಂಟಾಗಿತ್ತು. ತತ್ಪರಿಣಾಮವಾಗಿ ನಿರ್ದಿಷ್ಟ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಹಾಗೂ ಬದಲಿ ಅಂಗ ಜೋಡಣೆ ಅನಿವಾರ್ಯವೆನಿಸಿದ್ದ ಅಸಂಖ್ಯ ರೋಗಿಗಳ ಮರಣಕ್ಕೂ ಕಾರಣವೆನಿಸಿತ್ತು. ಈ ವಿಲಕ್ಷಣ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಕೇಂದ್ರ ಸರ್ಕಾರವು ೨೦೦೯ ರ ಅಂತ್ಯದಲ್ಲಿ ತತ್ಸಂಬಂಧಿತ ಕಾನೂನುಗಳಿಗೆ ಸೂಕ್ತ ತಿದ್ದುಪಡಿಯನ್ನು ಮಾಡಿತ್ತು. ಆದರೆ ಈ ತಿದ್ದುಪಡಿಯನ್ನು ಜಾರಿಗೊಳಿಸಿ ಸುಮಾರು ನಾಲ್ಕು ವರ್ಷಗಳೇ ಕಳೆದಿದ್ದರೂ, ನಮ್ಮ ದೇಶದಲ್ಲಿ ಅಂಗಾಂಗ ದಾನದ ಬಗ್ಗೆ ಇರುವ ತಪ್ಪುಕಲ್ಪನೆಗಳು ಮತ್ತು ಮೂಢನಂಬಿಕೆಗಳಿಂದಾಗಿ, ಇದರ ನೈಜ ಉದ್ದೇಶವೇ ಈಡೇರುತ್ತಿಲ್ಲ. ಅದೇ ರೀತಿಯಲ್ಲಿ ಹೃದಯ, ಮೂತ್ರಪಿಂಡಗಳು, ಯಕೃತ್, ಪ್ಲೀಹ ಇತ್ಯಾದಿ ಅಂಗಗಳ ದಾನಿಗಳ ಅಭಾವದಿಂದಾಗಿ ಮೃತಪಡುತ್ತಿರುವ ರೋಗಿಗಳ ಸಂಖ್ಯೆಯೂ ಇಳಿಮುಖವಾಗಿಲ್ಲ!. 

೨೦೦೯ ರ ತಿದ್ದುಪಡಿ 

ಭಾರತದಲ್ಲಿ ಮಾನವ ಶರೀರದ ಅಂಗಾಂಗಗಳಿಗೆ ಅಪಾರವಾದ ಬೇಡಿಕೆ ಇರುವುದರಿಂದಾಗಿ ಹಾಗೂ ರೋಗಿಯೊಬ್ಬನಿಗೆ ತನ್ನ ಅಂಗವೊಂದನ್ನು ದಾನ ಮಾಡಬಹುದಾದ ಸಂಬಂಧಿಗಳ ಬಗ್ಗೆ ಸರ್ಕಾರ ಹೇರಿದ್ದ ನಿಬಂಧನೆಗಳೇ ಅಂಗಾಂಗಗಳ ಕಾಳಧಂದೆಗೆ ಮೂಲ ಕಾರಣವೆನಿಸಿತ್ತು. ಆದರೆ ತನ್ನ ತಪ್ಪನ್ನು ಅರಿತ ಸರ್ಕಾರವು ಅಂಗಾಂಗಗಳ ದಾನದ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು " ಟ್ರಾನ್ಸ್ ಪ್ಲಾಂಟೇಶನ್ ಆಫ್ ಹ್ಯುಮನ್ ಆರ್ಗನ್ ಎಂಡ್ ಟಿಶ್ಶ್ಸೂಸ್ ಬಿಲ್ - ೨೦೦೯ " ನ್ನು ಲೋಕಸಭೆಯು ಅಂಗೀಕರಿಸಿತ್ತು. ಈ ಕಾಯಿದೆ ಜಾರಿಗೆ ಬಂದ ಬಳಿಕ ರೋಗಿಯ ಅಜ್ಜ-ಅಜ್ಜಿಯರು ಮತ್ತು ಮೊಮ್ಮಕ್ಕಳನ್ನು ಸಮೀಪದ ಸಂಬಂಧಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದಲ್ಲದೇ ಇಬ್ಬರು ವಿಭಿನ್ನ ರೋಗಿಗಳಿಗೆ ಅವರ ಸಮೀಪದ ಬಂಧುಗಳು ದಾನಮಾಡಿದ ಅಂಗಗಳು ಸಮರ್ಪಕವಾಗಿ ಹೊಂದಾಣಿಕೆ ಆಗದಿದ್ದಲ್ಲಿ, ಈ ಅಂಗಗಳನ್ನು ( ಪರಸ್ಪರ ಹೊಂದಾಣಿಕೆ ಆಗುವುದಾದಲ್ಲಿ ) ಇವರು ಪರಸ್ಪರ ಬದಲಾಯಿಸಿಕೊಳ್ಳಬಹುದಾಗಿದೆ. ಈ ತಿದ್ದುಪಡಿಯು ಅನೇಕ ರೋಗಿಗಳ ಪಾಲಿಗೆ ವರದಾನವೆನಿಸಿತ್ತು. 

ಆದರೆ ಇದೇ ಸಂದರ್ಭದಲ್ಲಿ ಅಲ್ಪ ವೆಚ್ಚದಲ್ಲಿ ಬಡ ಭಾರತೀಯರಿಂದ ಅಂಗಾಂಗಗಳನ್ನು ಖರೀದಿಸಿ, ಕಸಿ ಮಾಡಿಸಿಕೊಳ್ಳಲೆಂದೇ ಭಾರತಕ್ಕೆ ಆಗಮಿಸುತ್ತಿದ್ದ ವಿದೇಶೀ ರೋಗಿಗಳ ಬೇಡಿಕೆಯನ್ನು ಪೂರೈಸುತ್ತಿದ್ದ ಮಧ್ಯವರ್ತಿಗಳ ಕಾನೂನುಬಾಹಿರ ಧಂದೆಗೆ, ಸರ್ಕಾರವು ಇದೇ ಕಾಯಿದೆಯ ಮೂಲಕ ಕಡಿವಾಣವನ್ನು ತೊಡಿಸಿದೆ. ಇದರಿಂದಾಗಿ ಮಾನವ ಶರೀರದ ಅಂಗಾಂಗಗಳನ್ನು ಪಡೆದುಕೊಳ್ಳುವ ಮತ್ತು ಮತ್ತೊಬ್ಬರ ಶರೀರದಲ್ಲಿ ಜೋಡಣೆ ಮಾಡುವ ಮುನ್ನ ಸರ್ಕಾರ ನೇಮಿಸಿದ ಅಧಿಕೃತ ಸಮಿತಿಯ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕಾಗುತ್ತದೆ. 

ಈ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಅಂಗಾಂಗಗಳ ಕಾಳಧಂದೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅಸಾಧ್ಯವೆಂದು ಸರ್ಕಾರಕ್ಕೆ ತಿಳಿದಿತ್ತು. ಇದಕ್ಕಾಗಿ " ಮಸ್ತಿಷ್ಕ ಮೃತ " ವ್ಯಕ್ತಿಗಳ ಹಾಗೂ ಅಪಘಾತಗಳಲ್ಲಿ ಮೃತಪಟ್ಟ  ಸ್ವಾಭಾವಿಕವಾಗಿ ಮೃತಪಟ್ಟ ವ್ಯಕ್ತಿಗಳ ಅಂಗಾಂಗಗಳನ್ನು ದಾನ ಮಾಡುವಂತೆ ಇವರ ಬಂಧುಗಳನ್ನು ಪ್ರೇರೇಪಿಸಲು ಉದ್ದೇಶಿಸಿತ್ತು. ಈ ಹೊಣೆಗಾರಿಕೆಯನ್ನು ಆಸ್ಪತ್ರೆಗಳಲ್ಲಿರುವ ತೀವ್ರ ನಿಗಾ ಘಟಕಗಳಲ್ಲಿನ ಸಿಬಂದಿಗಳು ಮತ್ತು ವೈದ್ಯರಿಗೆ ವಹಿಸಲಾಗಿತ್ತು. 

ವಿಶೇಷವೆಂದರೆ ನಮ್ಮ ದೇಶದಲ್ಲಿ ವ್ಯಾಪಕವಾಗಿ ಕಂಡುಬರುವ ಮೂಢನಂಬಿಕೆಗಳು, ತಪ್ಪುಕಲ್ಪನೆಗಳು ಮತ್ತು ಧಾರ್ಮಿಕ ನಂಬಿಕೆಗಳು ಇಂತಹ ವ್ಯಕ್ತಿಗಳ ಅಂಗಾಂಗಗಳ ದಾನಕ್ಕೆ ತೊಡಕಾಗಿ ಪರಿಣಮಿಸುತ್ತಿವೆ. ತತ್ಪರಿಣಾಮವಾಗಿ ಜೀವನ್ಮರಣಗಳ ನಡುವೆ ತೊಳಲಾಡುತ್ತಿರುವ ರೋಗಿಗಳನ್ನು ಉಳಿಸಬಲ್ಲ ಸಾಮರ್ಥ್ಯವಿರುವ ಅಂಗವೊಂದು, ಮೃತ ವ್ಯಕ್ತಿಯ ಶರೀರದೊಂದಿಗೆ ಮಣ್ಣಿನಲ್ಲಿ ಸೇರಿ ಅಥವಾ ಸುಟ್ಟು ವ್ಯರ್ಥವಾಗುತ್ತದೆ. 

ಉದಾಹರಣೆಗೆ ೨೦೧೩  ರಲ್ಲಿ ಕೇವಲ ಬೆಂಗಳೂರು ನಗರವೊಂದರಲ್ಲೇ ಸಂಭವಿಸಿದ್ದ ೫೨೧೫ ರಸ್ತೆ ಅಪಘಾತಗಳಲ್ಲಿ ೭೫೨ ಜನರು ಮೃತಪಟ್ಟಿದ್ದರು. ಅಪಘಾತದಲ್ಲಿ ಹಾನಿಯಾಗದೇ ಇದ್ದ ಅಂಗಗಳನ್ನು ಇವರ ಸಂಬಂಧಿಗಳು ದಾನಮಾಡಲು ಸಮ್ಮತಿಸಿದ್ದಲ್ಲಿ, ನೂರಾರು ಅಂಧರಿಗೆ ದೃಷ್ಟಿಯನ್ನು ಮತ್ತು ಹೃದಯ, ಮೂತ್ರಪಿಂಡಗಳು, ಯಕೃತ್ ಇತ್ಯಾದಿ ಅಂಗಗಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳಿಂದ ಪೀಡಿತರಾಗಿ ಮರಣಶಯ್ಯೆಯಲ್ಲಿದ್ದ ರೋಗಿಗಳಿಗೆ " ಜೀವದಾನ " ನೀಡಬಹುದಾಗಿತ್ತು!. 

ಅಗ್ರಸ್ಥಾನದಲ್ಲಿ ತಮಿಳುನಾಡು 

ಕೆಲವೇ ವರ್ಷಗಳ ಹಿಂದೆ ಕಾನೂನುಬಾಹಿರ ಅಂಗಾಂಗ ಜೋಡಣೆಯ ವಿಚಾರದಲ್ಲಿ ಕುಖ್ಯಾತವಾಗಿದ್ದ ತಮಿಳುನಾಡು ರಾಜ್ಯವು, ಇಂದು ಮಸ್ತಿಷ್ಕ ಮೃತ ಹಾಗೂ ಅನ್ಯ ಕಾರಣಗಳಿಂದ ಮೃತಪಟ್ಟ ವ್ಯಕ್ತಿಗಳ ಶರೀರಗಳಿಂದ ಸಂಗ್ರಹಿತ ಅಂಗಾಂಗಗಳ ಜೋಡಣೆಯ ವಿಚಾರದಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಇತ್ತೀಚಿಗೆ ಅಲ್ಲಿನ ಸರ್ಕಾರವು  " ಕಾಡಾವರ್ ಟ್ರಾನ್ಸ್ ಪ್ಲಾಂಟ್ ಅಥಾರಿಟಿ" (ಸಿ ಟಿ ಎ ) ಯನ್ನು ಸ್ಥಾಪಿಸಿದ್ದು, ಅಂಗಾಂಗಗಳ ದಾನ ಮತ್ತು ಮರುಜೋಡಣೆಗೆ ಇದು ಪೂರಕವಾಗಿ ಪರಿಣಮಿಸಲಿದೆ. 

ಆದರೆ ಜನಸಾಮಾನ್ಯರಲ್ಲಿ ಅಂಗದಾನದ ಹಾಗೂ ಇದರ ಮಹತ್ವದ ಬಗ್ಗೆ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದಿರುವುದೇ ಇದಕ್ಕೆ ಅತಿ ದೊಡ್ಡ ತೊಡಕಾಗಿ ಪರಿಣಮಿಸಿದೆ. ಅಂತೆಯೇ ಮೃತ ಮಸ್ತಿಷ್ಕ  ಬಂಧುಗಳ ಶರೀರದಿಂದ ಅಂಗಾಂಗಗಳನ್ನು ಸಂಗ್ರಹಿಸಲು ಕುಟುಂಬಸ್ತರು ಅನುಮತಿಯನ್ನು ನೀಡದಿರಲು, ಇವರ ಮನದಲ್ಲಿ ತಮ್ಮ ಬಂಧು ಇನ್ನೂ ಬದುಕಿದ್ದಾರೆ ಎನ್ನುವ ಉತ್ಕಟ ಭಾವನೆಯೂ ಕಾರಣವೆನಿಸುತ್ತದೆ. ಇದಕ್ಕೂ ಮಿಗಿಲಾಗಿ ಮೃತ ಶರೀರದ ಅಂತಿಮ ಸಂಸ್ಕಾರದ ಸಂದರ್ಭದಲ್ಲಿ, ಶರೀರದ ಎಲ್ಲ ಅಂಗಾಂಗಗಳು ಇಲ್ಲದಿದ್ದಲ್ಲಿ ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಾರದು ಎನ್ನುವ ನಂಬಿಕೆಯೂ ಅನೇಕರಲ್ಲಿದೆ!. ಇಂತಹ ಮೂಢನಂಬಿಕೆ ಮತ್ತು ತಪ್ಪುಕಲ್ಪನೆಗಳನ್ನು ನಿವಾರಿಸದೇ ಇದ್ದಲ್ಲಿ, ಅಂಗಾಂಗಗಳ ದಾನಿಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ.ನಿತ್ಯಾನಂದ ಪೈ, ಪುತ್ತೂರು 






Tuesday, September 2, 2014

ARTICLE NO- 200 - ASTHAMA





 ಉಸಿರು ಕಟ್ಟಿಸುವ ಉಬ್ಬಸ (ಆಸ್ತಮಾ ) !

ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅವಿರತ ಸಂಶೋಧನೆಗಳ ಫಲವಾಗಿ ಮಾನವಕುಲಕ್ಕೆ ಅನೇಕ ಅದ್ಭುತ ಔಷದಗಳು ಲಭ್ಯವಾಗಿದ್ದರೂ, ಶಾಶ್ವತವಾಗಿ ನಿಮ್ಮನ್ನು ರೋಗಮುಕ್ತರನ್ನಾಗಿ ಇರಿಸಬಲ್ಲ ಔಷದವನ್ನು ಕಂಡುಹಿಡಿಯಲು ಅಸಾಧ್ಯವೆನಿಸಿರುವ ರೋಗಗಳಲ್ಲಿ ಆಸ್ತಮಾ ವ್ಯಾಧಿಯೂ ಒಂದಾಗಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
------------             -----------            -----------------            ----------------

ಅನಿರೀಕ್ಷಿತ ಅಥಿತಿಯಂತೆ ಬಂದೆರಗುವ ಆಸ್ತಮಾ ವ್ಯಾಧಿಯು ರೋಗಿಯನ್ನು ಗಾಣಕ್ಕೆ ಕೊಟ್ಟ ಕಬ್ಬಿನ ಜಲ್ಲೆಯಂತೆ, ಹಿಂಡಿ ಹಿಪ್ಪೆಮಾಡುತ್ತದೆ. ವಿಶ್ವದ ಜನಸಂಖ್ಯೆಯ ಶೇ.೧೦ ರಿಂದ ೨೦ ರಷ್ಟು ಜನರನ್ನು ಪೀಡಿಸುವ ಈ ಕಾಯಿಲೆಯು, ಅನೇಕರಲ್ಲಿ ಬಹಳ ಸೌಮ್ಯರೂಪದಲ್ಲಿರುತ್ತದೆ. ಇಂದಿನ ಹೈಟೆಕ್ ಯುಗದಲ್ಲಿ ಆಸ್ತಮಾದಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ವೈದ್ಯಕೀಯ ಕ್ಷೇತ್ರದ ಗಮನಕ್ಕೆ ಬಂದಿದ್ದರೂ, ಇದಕ್ಕೆ ಮೂಲಕಾರಣ ಏನೆಂದು ನಿಖರವಾಗಿ ತಿಳಿದಿಲ್ಲ. ಆಸ್ತಮಾದ ರೋಗಕಾರಕ ಶಾರೀರಿಕ ಪ್ರಕ್ರಿಯೆಗಳ ಬಗ್ಗೆ ನಡೆದಿರುವ ಸಂಶೋಧನೆಗಳ ಫಲವಾಗಿ ಇದರ ಚಿಕಿತ್ಸಾ ವಿಧಾನಗಳಲ್ಲಿ ಉನ್ನತಮಟ್ಟವನ್ನು ತಲುಪಿದ್ದರೂ, ಈ ವ್ಯಾಧಿಯ ಮಾರಕತೆಯು ಕ್ಷಯಿಸುವ ಬದಲಾಗಿ ಇನ್ನಷ್ಟು ವೃದ್ಧಿಸುತ್ತಿರುವುದು ಗಮನೀಯ. 

" ನೇವಸ " ಗುಣವಾಗದೇಕೆ ?

ಅರುವತ್ತು ವರ್ಷದ ದೇವಪ್ಪನು ಅವಿದ್ಯಾವಂತ ಕೃಷಿಕ. ಬಾಲ್ಯದಿಂದಲೂ ಪ್ರಭುಗಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದು, ಸರ್ಕಾರದ ಕೃಪೆಯಿಂದಾಗಿ ಈ ಹೊಲದೊಡೆಯನಾಗಿ ಹತ್ತಾರು ವರ್ಷಗಳೇ ಸಂದಿವೆ. ಅಪರೂಪದಲ್ಲಿ  ಬಾಲ್ಯದಿಂದಲೇ ಆತನನ್ನು ಬಾಧಿಸುತ್ತಿದ್ದ ನೇವಸವು ಏರುಜವ್ವನದಲ್ಲಿ ಸಹನೀಯವಾಗಿತ್ತಲ್ಲದೇ, ಕುಟುಂಬ ವೈದ್ಯರ ಚಿಕಿತ್ಸೆಯಿಂದ ಶಮನಗೊಳ್ಳುತ್ತಿತ್ತು. ಪಾಲಿಗೆ ಬಂದಿದ್ದ ಜಮೀನಿನಲ್ಲಿ ಶ್ರಮಪಟ್ಟು ಪುಟ್ಟ ಅಡಿಕೆಯ ತೋಟವನ್ನು ಸೃಷ್ಟಿಸಿದ್ದ ದೇವಪ್ಪನು, ಅಡಿಕೆಯ ಬೆಲೆ ಗಗನಕ್ಕೇರಿದಾಗ, ಕೈಯ್ಯಲ್ಲಿ ಒಂದಿಷ್ಟು ಕಾಸನ್ನೂ ಮಾಡಿಕೊಂಡಿದ್ದ. 

ಇದೀಗ ಇಳಿವಯಸ್ಸಿನಲ್ಲಿ ದಿನನಿತ್ಯ ಕಾಡಲು ಆರಂಭಿಸಿದ್ದ  ನೇವಸದಿಂದಾಗಿ, ಹತ್ತು ಹೆಜ್ಜೆ ನಡೆದರೂ ಹೆಚ್ಚೆನಿಸುತ್ತಿತ್ತು. ಇದೇ ಕಾರಣದಿಂದಾಗಿ ಒಂದಿಷ್ಟು ಹಣ ಖರ್ಚಾದರೂ ತೊಂದರೆಯಿಲ್ಲ, ತನ್ನ ನೇವಸವನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳಬೇಕೆನ್ನುವ  ಛಲದಿಂದ, ಹತ್ತಾರು ವೈದ್ಯರು ಹಾಗೂ ಹಲವಾರು ಆಸ್ಪತ್ರೆಗಳು ಮತ್ತು ವಿಭಿನ್ನ ಪದ್ದತಿಗಳ ಚಿಕಿತ್ಸೆಯನ್ನು ಪ್ರಯೋಗಿಸಿದರೂ, ನೇವಸ ಮಾತ್ರ ಆತನನ್ನು ಬಿಡಲೇ ಇಲ್ಲ!. ದೀರ್ಘಕಾಲೀನ ಶ್ವಾಸಕೋಶಗಳ ಅಡಚಣೆಯ ವ್ಯಾಧಿಗೆ ಶಾಶ್ವತ ಪರಿಹಾರವಿಲ್ಲ. ಈ ಬಗ್ಗೆ ಪ್ರಾಮಾಣಿಕ ಸಲಹೆಯನ್ನು ನೀಡಿದ್ದ ಕುಟುಂಬ ವೈದ್ಯರ ಹಿತವಾದವನ್ನು ನಿರ್ಲಕ್ಷಿಸಿದ್ದ ದೇವಪ್ಪನು, ಸಾಕಷ್ಟು ಹಣವನ್ನು ಕಳೆದುಕೊಂಡ ಬಳಿಕ ಗಳಿಸಿದ್ದು ಕೇವಲ ಅಧಿಕ ರಕ್ತದೊತ್ತಡವನ್ನು ಮಾತ್ರ!. 

ಆಸ್ತಮಾ ವ್ಯಾಧಿಗೆ ಶಾಶ್ವತ ಪರಿಹಾರ ನೀಡಬಲ್ಲ ಔಷದಗಳೇ ಇಲ್ಲವೆಂದು ಅರಿತ ಬಳಿಕವೂ ಅನೇಕ ರೋಗಿಗಳು ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುವ ನಕಲಿ ವೈದ್ಯರ ಸುಳ್ಳು ಭರವಸೆಗಳಿಗೆ ಬಲಿಯಾಗಿ ಸಹಸ್ರಾರು ರೂಪಾಯಿಗಳೊಂದಿಗೆ, ತಮ್ಮ ಆರೋಗ್ಯವನ್ನೂ ಕಳೆದುಕೊಳ್ಳುತ್ತಾರೆ. ನಿಜಜೀವನದಲ್ಲಿ ರೋಗಿಗಳೇ ವೈದ್ಯರನ್ನು ಅರಸಿಕೊಂಡು ಹೋಗುವುದಾದಲ್ಲಿ, ಈ ನಕಲಿ ವೈದ್ಯರು ತಾವೇ ರೋಗಿಗಳನ್ನು ಅರಸಿಕೊಂಡು ಊರಿಂದ ಊರಿಗೆ ಅಲೆಯುತ್ತಾ ( ಗತಕಾಲದ ಟೂರಿಂಗ್ ಟಾಕೀಸ್ ಗಳಂತೆ) ತಮ್ಮ ಧಂದೆಯನ್ನು ನಡೆಸುತ್ತಾರೆ!. 

ಆಸ್ತಮಾ ಎಂದರೇನು?

ಮನುಷ್ಯನ ಶರೀರವನ್ನು ವಿವಿಧರೀತಿಯಲ್ಲಿ ಪ್ರವೇಶಿಸಬಲ್ಲ "ಅಲೆರ್ಜೆನ್ " ಗಳಿಂದಾಗಿ ಉದ್ಭವಿಸುವ ವಿಶಿಷ್ಠ ಶಾರೀರಿಕ ಪ್ರತಿಕ್ರಿಯೆಗಳಿಂದಾಗಿ ಉತ್ಪನ್ನವಾಗುವ ಕೆಮ್ಮು, ಉಸಿರುಗಟ್ಟುವುದು, ಶ್ವಾಸನಾಳ- ಶ್ವಾಸಕೋಶಗಳು ಶ್ಲೇಷ್ಮದಿಂದ ತುಂಬಿ ಆಕುಂಚನಗೊಂಡು ಉಸಿರಾಟಕ್ಕೆ ಅಡಚಣೆಯನ್ನು ಉಂಟುಮಾಡುವ ತೊಂದರೆಯನ್ನು ಆಸ್ತಮಾ ಎನ್ನುತ್ತಾರೆ.

ಸಾಮಾನ್ಯವಾಗಿ ಯಾವುದೇ ವಯಸ್ಸಿನಲ್ಲಿ ಆರಂಭವಾಗಬಹುದಾದ ಆಸ್ತಮಾ, ಬಾಲ್ಯ ಅಥವಾ ಮಧ್ಯವಯಸ್ಸಿನಲ್ಲಿ ಪ್ರಾರಂಭವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಬಾಲ್ಯದಲ್ಲಿ ಬಾಧಿಸುವ ಆಸ್ತಮಾ ಹೆಚ್ಚಾಗಿ ವರ್ಷದ ಕೆಲವೇ ತಿಂಗಳುಗಳಲ್ಲಿ ಉಲ್ಬಣಿಸುವುದಾದರೂ, ಉಳಿದ ಸಮಯದಲ್ಲಿ ರೋಗಿಯು ಸ್ವಸ್ಥನಾಗಿರುತ್ತಾನೆ. ಆದರೆ ಮಧ್ಯವಯಸ್ಸಿನಲ್ಲಿ ಪ್ರತ್ಯಕ್ಷವಾಗುವ ಆಸ್ತಮಾ, ಸಾಮಾನ್ಯವಾಗಿ ದಿನನಿತ್ಯ ರೋಗಿಯನ್ನು ಕಾಡುವುದು. 

ಇನ್ನು ಅತೀ ತೀವ್ರ ಸ್ವರೂಪವನ್ನು ತಾಳಿರುವ ಹಾಗೂ ಕೆಲ ಸಂದರ್ಭಗಳಲ್ಲಿ ಮಾರಕವೆನಿಸಬಲ್ಲ "ಸ್ಟೇಟಸ್ ಅಸ್ತಮ್ಯಾಟಿಕಸ್"ಎಂದು ವೈದ್ಯರು ಗುರುತಿಸುವ ಸ್ಥಿತಿಯಲ್ಲಿ, ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆಯನ್ನು ನೀಡಬೇಕಾಗುವುದು. ಏಕೆಂದರೆ ಆಸ್ತಮಾ ಉಲ್ಬಣಿಸಿದಾಗ ಕೆಲವು ಗಂಟೆಗಳಿಂದ ಹಿಡಿದು ಕೆಲವು ವಾರಗಳ ತನಕ ರೋಗಿಯನ್ನು ಬಾಧಿಸುವ ಸಾಧ್ಯತೆಗಳಿವೆ. 

ಅನಿಲನ ಆಸ್ತಮಾ ಗುಣವಾಯಿತು!

ಆರನೇ ತರಗತಿಯ ವಿದ್ಯಾರ್ಥಿ ಅನಿಲನಿಗೆ ಅದೊಂದು ರಾತ್ರಿ ಆಕಸ್ಮಿಕವಾಗಿ ಆರಂಭವಾಗಿದ್ದ ಕೆಮ್ಮು ಉಲ್ಬಣಿಸಿದ ಪರಿಣಾಮವಾಗಿ ಉಸಿರಾಟದ ತೊಂದರೆ ಉದ್ಭವಿಸಿತ್ತು. ತುರ್ತುಕರೆಗೆ ಸ್ಪಂದಿಸಿದ್ದ ಕುಟುಂಬ ವೈದ್ಯರ ಚಿಕಿತ್ಸೆಯಿಂದ ಸಮಸ್ಯೆ ಪರಿಹಾರಗೊಂಡಿತ್ತು. ಆದರೆ ಮುಂದಿನ ಮೂರು ತಿಂಗಳಿನಲ್ಲಿ ನಾಲ್ಕಾರು ಬಾರಿ ಇದರ ಪುನರಾವರ್ತನೆಯಾಗಿತ್ತು. ವೈದ್ಯರ ಅಭಿಪ್ರಾಯದಂತೆ ಅನಿಲನ ಅಜ್ಜನಲ್ಲಿದ್ದ ಆಸ್ತಮಾ ಕಾಯಿಲೆಯು ಇದೀಗ ಅನುವಂಶಿಕವಾಗಿ ಅನಿಲನನ್ನು ಕಾಡಲಾರಂಭಿಸಿತ್ತು. ಅನೇಕ ರೀತಿಯ ಪರೀಕ್ಷೆಗಳು ಮತ್ತು ವಿವಿಧ ಪದ್ದತಿಯ ವೈದ್ಯರ ಚಿಕಿತ್ಸೆಗಳನ್ನು ಪಡೆದುಕೊಂಡರೂ, ಅನಿಲನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿಲ್ಲ. 

ಅನಿಲನ ಕಾಯಿಲೆಯ ಬಗ್ಗೆ ಅರಿತ ಸಂಬಂಧಿಯೊಬ್ಬರು ಈ ತೆರನ ಸಮಸ್ಯೆಗಳಿಗೆ " ರಾಮಬಾಣ " ದಂತಹ ಔಷದ ಲಭ್ಯವಿದೆ ಎಂದಾಗ ಅನಿಲನ ತಂದೆಗೆ ಮಹದಾನಂದವಾಗಿತ್ತು. ಅವರ ಒಪ್ಪಿಗೆಯ ಬಳಿಕ ಚಿಕಿತ್ಸೆ ಆರಂಭವಾಗಿತ್ತು. ಹಸಿರು ಬಣ್ಣದ ಹಾಗೂ ಗಿಡಮೂಲಿಕೆಗಳಿಂದ ತಯಾರಿಸಿದಂತೆ ಕಾಣಿಸುತ್ತಿದ್ದ ಈ ಔಷದವನ್ನು ದಿನದಲ್ಲಿ ಮೂರುಬಾರಿ ಒಂದೊಂದು ಚಮಚದಷ್ಟು ಸೇವಿಸಬೇಕಾಗಿತ್ತು. ವಿಶೇಷವೆಂದರೆ ಚಿಕಿತ್ಸೆ ಆರಂಭವಾದಂತೆಯೇ ಅನಿಲನ ಆಸ್ತಮಾ ಅದೃಶ್ಯವಾಗಿತ್ತು!. ಆದರೆ ಅನಿಲನ ಶರೀರದ ಗಾತ್ರ ಮತ್ತು ತೂಕಗಳು ಮಾತ್ರ ನಿಧಾನವಾಗಿ ಹೆಚ್ಚುತ್ತಾ ಹೋಗಿತ್ತು. 

ಸಂತುಷ್ಟರಾದ ಅನಿಲನ ತಂದೆ, ಮಗನಿಗೆ ಹೊಸ ಸಮವಸ್ತ್ರಗಳನ್ನು ಹೋಲಿಸಿದರು. ಜೊತೆಗೆ ಕುಟುಂಬ ವೈದ್ಯರ ಬಳಿ,  ಯಾವುದೇ ಚಿಕಿತ್ಸೆಯಿಂದ ಗುಣವಾಗದೆಂದು ನೀವು ಹೇಳಿದ್ದ  ಆಸ್ತಮಾ ವ್ಯಾಧಿಯು, ಕೇವಲ ಗಿಡಮೂಲಿಕೆಗಳಿಂದ ತಯಾರಿಸಿದ ಔಷದಗಳಿಂದ ಗುಣವಾಯಿತೆಂದು ಹೀಯಾಳಿಸಿದರು. 

ಕೆಲದಿನಗಳ ಬಳಿಕ ಅನಿಲನ ಹುಟ್ಟುಹಬ್ಬದಂದು ಅಪರಾತ್ರಿಯಲ್ಲಿ ಆಕಸ್ಮಿಕವಾಗಿ ಆರಂಭಗೊಂಡು ತೀವ್ರವಾಗಿ ಉಲ್ಬಣಿನಿಸಿದ್ದ  ಆಸ್ತಮಾದಿಂದಾಗಿ, ಆತನನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂದಿತ್ತು. ಈ ಸಂದರ್ಭದಲ್ಲಿ ಅನಿಲನ ಕಾಯಿಲೆ ಮತ್ತು ಚಿಕಿತ್ಸೆಗಳ ವಿವರಗಳನ್ನು ಪಡೆದ ತಜ್ಞವೈದ್ಯರು, ರಾಮಬಾಣದಂತಹ ಔಷದದಲ್ಲಿ ಬೆರೆಸಿದ್ದ " ಸ್ಟೆರಾಯ್ಡ್ " ಗಳೇ ಆತನ ಕಾಯಿಲೆಯು ಶಮನಗೊಳ್ಳಲು ಮತ್ತು ಶರೀರದ ತೂಕ ಮತ್ತು ಗಾತ್ರಗಳು ಹೆಚ್ಚಲು ಕಾರಣವೆಂದು ಹೇಳಿದ್ದರು. ಆಧುನಿಕ ಪದ್ಧತಿಯ ಚಿಕಿತ್ಸೆಯಲ್ಲಿ ಕೇವಲ ತುರ್ತುಸ್ಥಿತಿಯಲ್ಲಿ ಬಳಸುವ ಈ ಜೀವರಕ್ಷಕ ಔಷದವನ್ನು, ಗಿಡಮೂಲಿಕೆಗಳಿಂದ ತಯಾರಿಸಿದ ಔಷದದಲ್ಲಿ ಬೆರೆಸಿ ನೀಡಿದ್ದ ನಕಲಿ ವೈದ್ಯನ ಕೈಚಳಕದಿಂದಾಗಿ ಅನಿಲನ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ವೈದ್ಯರಿಂದ ಸ್ಟೆರಾಯ್ಡ್ ಔಷದಗಳ ಸೇವನೆಯ ದುಷ್ಪರಿಣಾಮಗಳನ್ನು ಅರಿತು ಬೆಚ್ಚಿದ ಅನಿಲನ ತಂದೆಯು, ವೈದ್ಯರ ಸಲಹೆಯಂತೆ ಈ ಔಷದವನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬಂದು, ಅಂತಿಮವಾಗಿ ಇದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು.

ಮುಂದಿನ ಮೂರು ತಿಂಗಳುಗಳಲ್ಲಿ ಅನಿಲನು ತನ್ನ ಹಳೆಯ ಸಮವಸ್ತ್ರವನ್ನು ಮತ್ತೆ ಧರಿಸುವಂತಾಗಿದ್ದನು. ತದನಂತರ ವೈದ್ಯರ ಸಲಹೆಯಂತೆ ದಿನಚರಿ ಮತ್ತು ಆಹಾರ ಸೇವನೆಯಲ್ಲಿ ಅವಶ್ಯಕ ಬದಲಾವಣೆ ಮತ್ತು ಕನಿಷ್ಠ ಪ್ರಮಾಣದ ಔಷದ ಸೇವನೆಗಳಿಂದ ಆತನ ಆರೋಗ್ಯ ಸುಧಾರಿಸಿತ್ತು. ಇದರೊಂದಿಗೆ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿತ್ತು!. 

ಈ ಸಮಸ್ಯೆಗೆ ಕಾರಣವೇನು ?

ನಾವು ಉಸಿರಾಡುವ ಗಾಳಿಯೊಂದಿಗೆ ಶ್ವಾಸಕೋಶಗಳನ್ನು ಸುಲಭವಾಗಿ ಪ್ರವೇಶಿಸಬಲ್ಲ ಧೂಳು, ವಿವಿಧ ಸಸ್ಯಗಳ ಪರಾಗಗಳು, ರಾಸಾಯನಿಕ ಧೂಮ, ತಂಬಾಕಿನ ಹೊಗೆ, ಮಂಜು, ತಣ್ಣಗಿನ ಗಾಳಿ ಮತ್ತು ಶ್ವಾಸಕೋಶಗಳ ಸೋಂಕುಗಳು ಆಸ್ತಮಾ ಉದ್ಭವಿಸಲು ಕಾರಣವೆನಿಸುವ ಸಾಧ್ಯತೆಗಳಿವೆ. ಇದಲ್ಲದೇ ಮೊಟ್ಟೆ, ಮೀನು, ಮಾಂಸ, ಹಾಲು, ಮೊಸರು, ಚಾಕಲೆಟ್, ಐಸ್ ಕ್ರೀಮ್, ಕೆಲ ವಿಧದ ಹನ್ನುಹಂಪಲುಗಳ ಸೇವನೆ ಮತ್ತು ತೀವ್ರ ಮಾನಸಿಕ ಒತ್ತಡಗಳೂ ಆಸ್ತಮಾ ಉದ್ಭವಿಸಲು ಮೂಲವೆನಿಸುತ್ತವೆ. ಕೆಲವೊಮ್ಮೆ ಆಸ್ಪಿರಿನ್ ಮತ್ತಿತರ ಔಷದಗಳ ಸೇವನೆಯೂ ಈ ಸಮಸ್ಯೆಗೆ ಕಾರಣವೆನಿಸುತ್ತವೆ. 

ರಾಮಣ್ಣನ ಸಮಸ್ಯೆಗೆ ಕಾರಣವೇನು?

ಬೀಡಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ರಾಮಣ್ಣನಿಗೆ ೫೦ ವರ್ಷ ವಯಸ್ಸಾಗಿದ್ದು, ಮೇಲ್ನೋಟಕ್ಕೆ ಆರೋಗ್ಯವಂತನಂತೆ ಕಂಡರೂ, ಆತನಿಗೆ ಬಾಲ್ಯದಿಂದಲೂ ಆಸ್ತಮಾ ಬಾಧಿಸುತ್ತಿತ್ತು. ಸುಮಾರು ಹತ್ತು ವರ್ಷಗಳ ಹಿಂದೆ ತೀವ್ರವಾಗಿ ಉಲ್ಬಣಿಸಿದ್ದ ಆಸ್ತಮಾದ ಪೀಡೆಯನ್ನು ಸಹಿಸಲಾಗದೇ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದ ಕೆಲವೇ ದಿನಗಳಲ್ಲಿ ಆತನ ಸಮಸ್ಯೆ ಪರಿಹಾರಗೊಂಡಿತ್ತು. ಆದರೆ ವೈದ್ಯರು ತುರ್ತು ಪರಿಸ್ಥಿತಿಯಲ್ಲಿ ಸೂಚಿಸಿದ್ದ ಔಷದಗಳನ್ನು ದಿನನಿತ್ಯ ಸೇವಿಸಲು ಆರಂಭಿಸಿದ ರಾಮಣ್ಣನ ಆಸ್ತಮಾ, ಕಾಣದಂತೆ ಮಾಯವಾಗಿತ್ತು!. 

ಒಂದೆರಡು ವರ್ಷಗಳು ಕಳೆಯುತ್ತಿದ್ದಂತೆಯೇ ರಾಮಣ್ಣನಿಗೆ ಆಗಾಗ ಸಣ್ಣಗೆ ಹೊಟ್ಟೆನೋವು ಹಾಗೂ ಉರಿ, ಹೊಟ್ಟೆ ತೊಳಸಿದಂತಾಗಿ ವಾಂತಿ ಇತ್ಯಾದಿ ತೊಂದರೆಗಳು ಬಾಧಿಸಲು ಆರಂಭವಾಗಿದ್ದವು. ಇದು ಗ್ಯಾಸ್ ಟ್ರಬಲ್ ಎಂದು ನಂಬಿದ್ದ ರಾಮಣ್ಣನು, ಸ್ವಯಂ ಚಿಕಿತ್ಸೆಗೆ ಶರಣಾಗಿದ್ದನು. 

ಅದೊಂದು ಮುಂಜಾನೆ ತೀವ್ರ ಹೊಟ್ಟೆನೋವು ಮತ್ತು ವಾಂತಿಯಿಂದ ಕಂಗೆಟ್ಟ ರಾಮಣ್ಣನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವಶ್ಯಕ ಪರೀಕ್ಷೆಗಳನ್ನು ನಡೆಸಿದ ಬಳಿಕ ಆತನ ಹೊಟ್ಟೆನೋವಿಗೆ ಕಾರಣವೆನಿಸಿದ್ದ " ಜಠರದ ಹುಣ್ಣು " ಪತ್ತೆಯಾದಂತೆಯೇ, ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು. ತಜ್ಞವೈದ್ಯರ ಅಭಿಪ್ರಾಯದಂತೆ ತುರ್ತು ಸ್ಥಿತಿಯಲ್ಲಿ ಆತನ ಆಸ್ತಮಾ ನಿಯಂತ್ರಿಸಲು ತಜ್ಞ ವೈದ್ಯರು ಸೂಚಿಸಿದ್ದ ಹಾಗೂ ತದನಂತರ ಆತನು ವೈದ್ಯರ ಸಲಹೆಯನ್ನೇ ಪಡೆಯದೇ ದಿನನಿತ್ಯ ಸೇವಿಸುತ್ತಿದ್ದ ಸ್ಟೆರಾಯ್ಡ್ ಮಾತ್ರೆಗಳೇ ಈ ಸಮಸ್ಯೆಗೆ ಮೂಲವೆನಿಸಿತ್ತು. 

ಸ್ಟೆರಾಯ್ಡ್ ಎಂದರೇನು?

ನಮ್ಮ ಶರೀರದಲ್ಲಿರುವ ಅಡ್ರಿನಲ್ ಗ್ರಂಥಿಗಳು ಸ್ರವಿಸುವ ಅನೇಕ ಹಾರ್ಮೋನ್ ಗಳಲ್ಲಿ ಸ್ಟೆರಾಯ್ಡ್ ಗಳೂ ಸೇರಿವೆ. ಅಪರೂಪದಲ್ಲಿ ಈ ಗ್ರಂಥಿಗಳ ಅತಿಯಾದ ಕಾರ್ಯಕ್ಷಮತೆಯಿಂದ ಅನೇಕ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ.

ಅತಿಯಾದರೆ ಅಮೃತವೂ ವಿಷವಾಗಬಲ್ಲದು ಎನ್ನುವ ನಾಣ್ಣುಡಿಯು, ಸ್ಟೆರಾಯ್ಡ್ ಗಳ ಬಗ್ಗೆ ಅನ್ವರ್ಥವೆನಿಸುತ್ತದೆ. ಜನಸಾಮಾನ್ಯರು ನಂಬಿರುವಂತೆ ಸ್ಟೆರಾಯ್ಡ್ ಗಳು ನಿಶ್ಚಿತವಾಗಿಯೂ ಸರ್ವರೋಗಹರ ಸಂಜೀವಿನಿ ಅಲ್ಲ. ಆದರೆ ವೈದ್ಯಕೀಯ ತುರ್ತುಪರಿಸ್ಥಿತಿಯಲ್ಲಿ, ಉದಾ- ತೀವ್ರ ಉಲ್ಬಣಿಸಿರುವ ಆಸ್ತಮಾ, ಕೆಲವಿಧದ ಔಷದಗಳ ಸೇವನೆಯಿಂದ ಉದ್ಭವಿಸಬಲ್ಲ ತೀವ್ರ ಪ್ರತಿಕ್ರಿಯೆ ಇತ್ಯಾದಿ ಸಂದರ್ಭಗಳಲ್ಲಿ ಸ್ಟೆರಾಯ್ಡ್ ಗಳು ಜೀವರಕ್ಷಕವೆನಿಸುತ್ತವೆ. ಸಾಮಾನ್ಯವಾಗಿ ಸ್ಟೆರಾಯ್ಡ್ ಗಳನ್ನೂ ಅನಿವಾರ್ಯ ಸಂದರ್ಭಗಳಲ್ಲಿ ಬಳಸುವ ವೈದ್ಯರು, ಆರಂಭಿಕ ಹಂತದಲ್ಲಿ ತುಸು ಅಧಿಕ ಪ್ರಮಾಣದಲ್ಲಿ ಇದನ್ನು ನೀಡಿ, ಬಳಿಕ ಈ ಪ್ರಮಾಣವನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬಂದು, ಅಂತಿಮವಾಗಿ ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಇದು ಅತ್ಯಂತ ಪರಿಣಾಮಕಾರಿ ಹಾಗೂ ಸುರಕ್ಷಿತ ವಿಧಾನವೂ ಹೌದು. 

ಸ್ಟೆರಾಯ್ಡ್ ಗಳ ಸೇವನೆಯು ರೋಗಿಗಳಲ್ಲಿ " ತಾನು ಸೌಖ್ಯದಿಂದ ಹಾಗೂ ಆರಾಮವಾಗಿ ಇದ್ದೇನೆ" (A feeling of well being)ಎನ್ನುವ ಭಾವನೆಯನ್ನು ಸೃಷ್ಟಿಸುತ್ತದೆ. ಅಂತೆಯೇ ಇಂತಹ ಔಷದಗಳನ್ನು ವೈದ್ಯರ ಸಲಹೆ ಪಡೆಯದೇ ಹಾಗೂ ದಿನನಿತ್ಯ ಸೇವಿಸುವುದರಿಂದ ಗಂಭೀರ ಸಮಸ್ಯೆಗಳಲ್ಲದೇ, ಪ್ರಾಣಪಾಯಕ್ಕೂ ಕಾರಣವೆನಿಸುವ ಸಾಧ್ಯತೆಗಳಿವೆ. 

ದಿನಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಜನತೆಯನ್ನು ಮರುಳುಮಾಡುವ, ನಿಗದಿತ ದಿನಗಳಲ್ಲಿ ನಿ ಮ್ಮೂರಿನ ಲಾಡ್ಜ್ ಗಳಲ್ಲಿ ಪ್ರತ್ಯಕ್ಷರಾಗುವ, ವೈದ್ಯಕೀಯ ಶಾಸ್ತ್ರದ ಗಂಧಗಾಳಿಯನ್ನೂ ಅರಿಯದ ಮತ್ತು ಸ್ವಯಂಘೋಷಿತ " ಆಸ್ತಮಾ ತಜ್ಞ" ರು ನಿಜಕ್ಕೂ ' ನಕಲಿ ವೈದ್ಯ" ರಾಗಿದ್ದು, ಇವರು ನೀಡುವ ಔಷದಗಳಲ್ಲಿ ಧಾರಾಳವಾಗಿ ಬಳಸುವುದು ಈ ಸ್ಟೆರಾಯ್ಡ್ ಗಳನ್ನೇ ಹೊರತು ಅನ್ಯ ಔಷದಗಳನ್ನಲ್ಲ. ಆಸ್ತಮಾ ಕಾಯಿಲೆಯನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳು ಇವರಲ್ಲಿದ್ದಲ್ಲಿ, ರೋಗಿಗಳೇ ಇವರನ್ನು ಹುಡುಕಿಕೊಂಡು ಹೋಗಬೇಕಾಗಿತ್ತೇ ಹೊರತು, ಇವರೇ ರೋಗಿಗಳನ್ನು ಹುಡುಕಿಕೊಂಡು ಅಲೆಯಬೇಕಾಗಿರಲಿಲ್ಲ!. 

ಸ್ಟೆರಾಯ್ಡ್ ಗಳ ದುಷ್ಪರಿಣಾಮಗಳು 

ಯಾವುದೇ ವಿಧದ ಸ್ಟೆರಾಯ್ಡ್ ಗಳನ್ನು ವೈದ್ಯರು ಸೂಚಿಸದೇ ಅವಿರತವಾಗಿ ಸೇವಿಸುವುದರಿಂದ ನಿಮ್ಮ ಶರೀರದ ತೂಕ ಮತ್ತು ಗಾತ್ರಗಳು ಹೆಚ್ಚುವುದು, ಮುಖವು ಹುಣ್ಣಿಮೆಯ ಚಂದ್ರನಂತೆ ದುಂಡಗಾಗುವುದು, ಭುಜ, ಹೊಟ್ಟೆ ಮತ್ತು ಸೊಂಟದ ಭಾಗಗಳಲ್ಲಿ ಕೊಬ್ಬು ತುಂಬಿ ಉಬ್ಬುವುದು, ಬಾಣಂತಿಯ ಹೊಟ್ಟೆಯ ಮೇಲೆ ಕಾಣುವಂತಹ ಉದ್ದನೆಯ ಬಿಳಿಯ ಬಣ್ಣದ ಗೆರೆಗಳು ಉದ್ಭವಿಸಿವುದು. ಇದಲ್ಲದೆ ಜಠರದ ಹುಣ್ಣು, ಮಧುಮೇಹ, ಅಧಿಕ ರಕ್ತದ ಒತ್ತಡ, ಮೂಳೆಗಳ ದೌರ್ಬಲ್ಯಗಳು ಪ್ರತ್ಯಕ್ಷವಾಗುವ ಹಾಗೂ ಮಾನಸಿಕ ತೊಂದರೆಗಳು ಮತ್ತು ಅಪಸ್ಮಾರಗಳಂತಹ ಕಾಯಿಲೆಗಳು ಉಲ್ಬಣಿಸುವ ಸಾಧ್ಯತೆಗಳಿವೆ. ಇದರೊಂದಿಗೆ ಶರೀರದ ಮಾಂಸಖಂಡಗಳಲ್ಲಿ ನೋವು, ಕೈಕಾಲುಗಳಲ್ಲಿ ನಿಶ್ಶಕ್ತಿ, ತೀವ್ರ ಶಾರೀರಿಕ ಆಯಾಸ ಇತ್ಯಾದಿ ಸಮಸ್ಯೆಗಳೂ ತಲೆದೋರುತ್ತವೆ. ವಿಶೇಷವಾಗಿ ಮಕ್ಕಳಲ್ಲಿ ಶಾರೀರಿಕ ಬೆಳವಣಿಗೆ ಕುಂಠಿತಗೊಳ್ಳುವುದು, ಗಡ್ಡ - ಮೀಸೆಗಳು ಮೂಡುವುದು, ರಕ್ತ ಹೆಪ್ಪುಗಟ್ಟುವಂತಹ ಸ್ಥಿತಿಯ ವೈಪರೀತ್ಯದಿಂದ ಉಂಟಾಗುವ ತೊಂದರೆಗಳು ಮತ್ತು ಕೆಲವರಲ್ಲಿ ತಲೆಗೂದಲು ಉದುರುವುದೇ ಮುಂತಾದ ಸಮಸ್ಯೆಗಳು ಬಾಧಿಸಬಹುದು. 

ಸ್ಟೆರಾಯ್ಡ್ ಪತ್ತೆಹಚ್ಚಬೇಕೇ ?

ನೀವು ಈಗಾಗಲೇ ನಕಲಿ ವೈದ್ಯರ ಮಾತಿಗೆ ಮರುಳಾಗಿ, ಅವರು ನೀಡಿದ್ದ ಹಾಗೂ ಗಿಡಮೂಲಿಕೆಗಳಿಂದ ತಯಾರಿಸಿದ್ದೆಂದು ನಂಬಿ ಸೇವಿಸುತ್ತಿರುವ ಔಷದಗಳಲ್ಲಿ ಸ್ಟೆರಾಯ್ಡ್ ಗಳು ಇರುವುದೇ ಎಂದು ಅರಿಯಲು ಅಪೇಕ್ಷಿಸುತ್ತೀರಾ ?.

ನಿಮ್ಮ ಉತ್ತರ ಹೌದೆಂದಾದಲ್ಲಿ, ಮೊದಲನೆಯದಾಗಿ ನೀವು ಈ ಔಷದವನ್ನು ಸೇವಿಸಿದ ೩೦ ರಿಂದ ೬೦ ನಿಮಿಷಗಳಲ್ಲಿ ನಿಮ್ಮ ಆಸ್ತಮಾ ಕಡಿಮೆಯಾಗುವುದೇ ?. ಜೊತೆಗೆ ದಿನನಿತ್ಯದ ಔಷದ ಸೇವನೆ ನಿಲ್ಲಿಸಿದೊಡನೆ ಆಸ್ತಮಾ ಮತ್ತೆ ಪ್ರಾರಂಭವಾಗುವುದೇ ?. ಈ ಎರಡೂ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ, ನೀವು ಸೇವಿಸುತ್ತಿರುವ ಔಷದಗಳಲ್ಲಿ ನಿಸ್ಸಂದೇಹವಾಗಿಯೂ ಆಧುನಿಕ ಪದ್ದತಿಯ ಸ್ಟೆರಾಯ್ಡ್ ಗಳನ್ನು ಬೆರೆಸಿರುವುದರಲ್ಲಿ  ಸಂದೇಹವಿಲ್ಲ!. 

ನಿಮ್ಮ ಸಂದೇಹವನ್ನು ನಿವಾರಿಸಿಕೊಳ್ಳಲು ಈ ಔಷದಗಳನ್ನು ಯಾವುದೇ ವೈದ್ಯಕೀಯ ಕಾಲೇಜಿನ ಫಾರ್ಮಕಾಲಜಿ ವಿಭಾಗದಲ್ಲಿ ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸುವ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದೆ.

ನೀವೇನು ಮಾಡಬಹುದು?

ನಿಮಗೆ ಆಸ್ತಮಾ ಕಾಯಿಲೆ ಇದ್ದಲ್ಲಿ ನಿಮ್ಮ ನಂಬಿಗಸ್ಥ ಕುಟುಂಬ ವೈದ್ಯರ ಅಥವಾ ಅವರ ಸಲಹೆಯಂತೆ ತಜ್ಞ ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆಯುವುದು ಹಿತಕರ. ಅವಶ್ಯಕತೆಯಿದ್ದಲ್ಲಿ ಎಕ್ಸ್-ರೇ, ಶ್ವಾಸಕೋಶದ ಕ್ಷಮತೆಯ ಪರೀಕ್ಷೆ, ನಿಮಗಿರುವ ಅಲರ್ಜಿಯನ್ನು ಪತ್ತೆಹಚ್ಚಲು ಅವಶ್ಯಕ ಪರೀಕ್ಷೆ, ಮಲ, ಮೂತ್ರ ಮತ್ತು ಕಫಗಳ ಪರೀಕ್ಷೆಗಳನ್ನು ನಡೆಸುವ ಮೂಲಕ ಸೂಕ್ತ ಚಿಕಿತ್ಸೆಯನ್ನು ನೀಡಬಹುದಾಗಿದೆ. ಇದರೊಂದಿಗೆ ನಿಮ್ಮ ಸಮಸ್ಯೆ ಉಲ್ಬಣಿಸಲು ಕಾರಣವೆಂದು ನೀವು ಗುರುತಿಸಿರುವ ವಾತಾವರಣ, ಖಾದ್ಯಪೇಯಗಳು, ಔಷದಗಳು, ಹಣ್ಣು ಹಂಪಲುಗಳು, ದೈಹಿಕ ಶ್ರಮದ ಕೆಲಸ- ಕಾರ್ಯಗಳು, ಮತ್ತು ಮಾನಸಿಕ ಒತ್ತಡಗಳಿಂದ ದೂರವಿರಿ. ನಿಮ್ಮ ವೈದ್ಯರು ನಿಮಗೆ ನೀಡಿರುವ ಔಷದಗಳನ್ನು ನಿಗದಿತ ಸಮಯದಲ್ಲಿ ಹಾಗೂ ನಿಗದಿತ ಪ್ರಮಾಣದಲ್ಲಿ ಸೇವಿಸಿ. ಆಸ್ತಮಾ ತೀವ್ರವಾಗಿ ಉಲ್ಬಣಿಸಿದಲ್ಲಿ ತಕ್ಷಣ ನಿಮ್ಮ ವೈದ್ಯರನ್ನು ಭೇಟಿಯಾಗಿ. ಯಾವುದೇ ಕಾರಣಕ್ಕೂ ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ನಿಮಗೆ ನೀಡಿರಬಹುದಾದ ಸ್ಟೆರಾಯ್ಡ್ ಮಾತ್ರೆಗಳನ್ನು ಬೇಕಾಬಿಟ್ಟಿಯಾಗಿ ಸೇವಿಸದಿರಿ. 

ನಿಮ್ಮ ಸಮಸ್ಯೆಯನ್ನು ಕೂಲಂಕುಶವಾಗಿ ಅರಿತುಕೊಂಡು ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡು, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಅಂತಿಮವಾಗಿ ನಿಮ್ಮ ವೈದ್ಯರ ರೋಗನಿದಾನ (Diagnosis), ನಡೆಸಿರುವ ಅವಶ್ಯಕ ಪರೀಕ್ಷೆಗಳ ಪರಿಣಾಮಗಳು ಮತ್ತು ಚಿಕಿತ್ಸೆಗಳ ವಿವರಗಳನ್ನು ಕೇಳಿ ಪಡೆದುಕೊಳ್ಳುವ ಹಕ್ಕು ನಿಮಗಿದೆ. ಅಂತೆಯೇ ಯಾವುದೇ ಸಂದರ್ಭದಲ್ಲಿ ಹಾಗೂ ಯಾವುದೇ ಕಾರಣದಿಂದ ವೈದ್ಯರು ಸೂಚಿಸಿದ ಚಿಕಿತ್ಸೆಯನ್ನು ನಿರಾಕರಿಸುವ ಹಕ್ಕು ನಿಮಗಿದೆ. ಜೊತೆಗೆ ಕಾಯಿಲೆಯ - ಚಿಕಿತ್ಸೆಯ ಎಲ್ಲ ದಾಖಲೆಗಳನ್ನು ಕೇಳಿ ಪಡೆದುಕೊಂಡು ಜೋಪಾನವಾಗಿರಿಸುವ ಹೊಣೆಗಾರಿಕೆಯು ನಿಮ್ಮದೇ ಆಗಿದೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ದಿ೨೬-೧೨-೨೦೦೨ ರ ಉದಯವಾಣಿ ಪತ್ರಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ