Friday, May 29, 2015

GLOBAL WARMING - HEAT WAVE






              ವರ್ಷಂಪ್ರತಿ ಹೆಚ್ಚುತ್ತಿದೆ  : ಬೇಸಗೆಯ ಧಗೆ


ದೇಶದ ಹಲವು ರಾಜ್ಯಗಳಲ್ಲಿ ಭಯಾನಕ " ಉಷ್ಣ ಅಲೆ " ಯ ಹಾವಳಿಗೆ ಈಗಾಗಲೇ ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ. ಅದರಲ್ಲೂ ನೆರೆಯ ಆಂಧ್ರಪ್ರದೇಶದಲ್ಲಿ ವಾತಾವರಣದ ಉಷ್ಣತೆಯ ಪ್ರಮಾಣವು ೪೮ ರಿಂದ ೪೯ ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದು,ಈಗಾಗಲೇ ಒಂದು ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹವಾಮಾನ ಇಲಾಖೆಯ ವರದಿಯಂತೆ ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಹೊರತುಪಡಿಸಿ, ಇತರ ರಾಜ್ಯಗಳಲ್ಲಿ ಇನ್ನಷ್ಟು ದಿನಗಳ ಕಾಲ ಉಷ್ಣ ಅಲೆ ಮುಂದುವರೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಾರ್ಚ್ ಮಧ್ಯಭಾಗದ ತನಕ ತಂಪಾದ ವಾತಾವರಣವಿದ್ದು, ಎಪ್ರಿಲ್ ತಿಂಗಳಿನಲ್ಲೇ ಮುಂಗಾರು ಪೂರ್ವ ಮಳೆ ಸುರಿದ ಪರಿಣಾಮವಾಗಿ ಬೇಸಗೆಯ ಧಗೆ ತುಸು ಕಡಿಮೆಯಾಗಿತ್ತು. ಒಂದೆರಡು ದಿನಗಳನ್ನು ಹೊರತುಪಡಿಸಿದರೆ ಇನ್ನುಳಿದ ದಿನಗಳಲ್ಲಿ ತಾಪಮಾನದ ಪ್ರಮಾಣವು ೩೫ ಡಿಗ್ರಿ ಸೆಲ್ಸಿಯಸ್ ನ ಆಸುಪಾಸಿನಲ್ಲೇ ಸುಳಿದಾಡುತ್ತಿತ್ತು. ಆದರೂ ಜಿಲ್ಲೆಯ ಜನರು " ಎಂತಹ ಸೆಕೆ ಮಾರಾಯ್ರೇ " ಎಂದು ಉದ್ಗರಿಸುತ್ತಿದ್ದರು. ರಾಜ್ಯದ ಕೆಲಭಾಗಗಳಲ್ಲಿ ಇದೀಗ ತಾಪಮಾನದ ಮಟ್ಟವು ೪೦ ಡಿಗ್ರಿ ಸೆಲ್ಸಿಯಸ್ ಮೀರಿದ್ದು, ಬೇಸಗೆಯ ಧಗೆ ಅಸಹನೀಯವೆನಿಸುತ್ತಿದೆ. ಎಪ್ರಿಲ್ ತಿಂಗಳಿನಲ್ಲೂ ಒಂದೆರಡು ಬಾರಿ ಅತಿಯಾಗಿ ಹೆಚ್ಚಿದ್ದ ತಾಪಮಾನದ ಪರಿಣಾಮವಾಗಿ, ಸುರಿದಿದ್ದ ಅಕಾಲಿಕ ಮಳೆಯಿಂದಾಗಿ ವಾತಾವರಣವು ಕೊಂಚ ತಂಪಾಗಿತ್ತು. ಇನ್ನು ಕೆಲವೆಡೆ ಆಲಿಕಲ್ಲು ಮಳೆ ಸುರಿದ ಪರಿಣಾಮವಾಗಿ ರೈತಾಪಿ ಜನರಿಗೆ ಸಾಕಷ್ಟು ನಷ್ಟವೂ ಸಂಭವಿಸಿತ್ತು.

ಪ್ರಸ್ತುತ ಆಂಧ್ರದಲ್ಲಿ ಉಷ್ಣ ಅಲೆಗೆ ಬಲಿಯಾದವರಲ್ಲಿ ಬಡ ಜನರ ಸಂಖ್ಯೆಯೇ ಹೆಚ್ಚಿದೆ. ತಜ್ಞರ ಅಭಿಪ್ರಾಯದಂತೆ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಏಕೆಂದರೆ ತಾಪಮಾನದ ಮಟ್ಟ ಅತಿಯಾಗಿ ಏರಿದಾಗ ನಿರ್ದಿಷ್ಟ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಮೃತಪಟ್ಟಲ್ಲಿಆ ವ್ಯಕ್ತಿಯು ಉಷ್ಣ ಅಲೆಗೆ ಬಲಿಯಾಗಿರುವನೆಂದು ಅರಿಯದ ಜನರು ಇದನ್ನು ಸ್ವಾಭಾವಿಕ ಮರಣವೆಂದು ಭಾವಿಸುತ್ತಾರೆ. 

ಯಾವುದೇ ದೇಶದಲ್ಲಿ ಉಷ್ಣ ಅಲೆಗೆ ಬಲಿಯಾಗುತ್ತಿರುವವರಲ್ಲಿ ಬಡವರ ಪಾಲೇ ಅತ್ಯಧಿಕವಾಗಿರುತ್ತದೆ. ಅದರಲ್ಲೂ ಹೊರಾಂಗಣದಲ್ಲಿ ದುಡಿಯುವ ಕೂಲಿ ಕಾರ್ಮಿಕರು, ರಸ್ತೆ ಹಾಗೂ ಕಟ್ಟಡಗಳ ನಿರ್ಮಾಣ ಕಾಮಗಾರಿಯಲ್ಲಿ ದುಡಿಯುವವರೇ ಮುಂತಾದವರು ನೆರಳಿನ ಆಸರೆಯಿಲ್ಲದೇಬಿಸಿಲಿನ ಬೇಗೆಗೆ ದುಡಿಯುವುದರಿಂದ ಉಷ್ಣ ಅಲೆಯ ಹಾವಳಿಗೆ ಸುಲಭದಲ್ಲೇ ಬಲಿಯಾಗುತ್ತಾರೆ. ಅದೇ ರೀತಿಯಲ್ಲಿ ಕೆಲವೊಂದು ಗಂಭೀರ ಹಾಗೂ ಮಾರಕ ಕಾಯಿಲೆಗಳಿಂದ ಬಳಲುತ್ತಿರುವವರು ವಾತಾವರಣದ ಉಷ್ಣತೆ ಅತಿಯಾಗಿ ಹೆಚ್ಚಿದ ಸಂದರ್ಭದಲ್ಲಿ ಮೂತ್ರಪಿಂಡಗಳ ವೈಫಲ್ಯ ಹಾಗೂ ಹೃದಯಾಘಾತದಂತಹ ಸಮಸ್ಯೆಯಿಂದ ಮೃತಪಡುತ್ತಾರೆ.

ಉಷ್ಣ ಅಲೆಯು ಎರಡು ವಿಧದಲ್ಲಿ ತನ್ನ ಮಾರಕತೆಯನ್ನು ತೋರ್ಪಡಿಸುತ್ತದೆ. ಇವುಗಳಲ್ಲಿ “ ಉಷ್ಣ ಆಘಾತ “ (Heat stroke ) ದ ಸಂದರ್ಭದಲ್ಲಿ ವ್ಯಕ್ತಿಯ ಶರೀರದ ತಾಪಮಾನವು ವಿಪರೀತ ಹೆಚ್ಚುವುದರಿಂದ ಉದ್ಭವಿಸುವ ನಿರ್ಜಲೀಕೃತ ಸ್ಥಿತಿ ಮತ್ತು ಆತನ ಮೆದುಳಿಗೆ ಸಂಭವಿಸುವ ಹಾನಿಯೂ ಮರಣಕ್ಕೆ ಕಾರಣವೆನಿಸಬಲ್ಲದು. ಎರಡನೆಯ ವಿಧದಲ್ಲಿ ವಯೋವೃದ್ಧರು ಹಾಗೂ ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳಿಗೆ ಸಂಬಂಧಿಸಿದ ಮತ್ತು ಅನ್ಯ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ರಕ್ತಸಂಚಲನ ವ್ಯವಸ್ಥೆಯ ವೈಫಲ್ಯದಿಂದ ಮರಣ ಸಂಭವಿಸುವ ಸಾಧ್ಯತೆಗಳಿವೆ. ಇದಲ್ಲದೇ ಹಸುಗೂಸುಗಳು ಮತ್ತು ಪುಟ್ಟ ಮಕ್ಕಳ ಮೇಲೂ ಉಷ್ಣ ಅಲೆಯು ದುಷ್ಪರಿಣಾಮವನ್ನು ಬೀರುತ್ತದೆ.

ಜಾಗತಿಕ ತಾಪಮಾನದ ಹೆಚ್ಚಳ

ನಿರಂತರವಾಗಿ ಹೆಚ್ಚುತ್ತಿರುವ ಜನ ಹಾಗೂ ವಾಹನಗಳ ಸಂಖ್ಯೆ, ಅತಿಯಾಗುತ್ತಿರುವ ನಗರೀಕರಣ,ಅರಣ್ಯ – ಕೃಷಿ ಭೂಮಿಗಳನ್ನು ನಾಶಪಡಿಸಿ ತಲೆ ಎತ್ತುತ್ತಿರುವ ಕೈಗಾರಿಕೆ, ಉದ್ದಿಮೆ, ವಿದ್ಯುತ್ ಉತ್ಪಾದನಾ ಘಟಕಗಳು ಮತ್ತು ವಿಶೇಷ ವಿತ್ತ ವಲಯಗಳು, ಕಾಂಕ್ರೀಟ್ ಕಾಡುಗಳ ನಿರ್ಮಾಣ, ಜಲ ಸಂರಕ್ಷಣೆಯ ಬಗ್ಗೆ ನಿರ್ಲಕ್ಷ್ಯ, ಅತಿಯಾಗಿ ಉತ್ಪಾದಿಸುತ್ತಿರುವ ವೈವಿಧ್ಯಮಯ ತ್ಯಾಜ್ಯಗಳ ಪ್ರಮಾಣದಲ್ಲಿ ಹೆಚ್ಚಳ ಹಾಗೂ ಅವೈಜ್ಞಾನಿಕ ವಿಲೇವಾರಿ, ಕೃತಕ ರಾಸಾಯನಿಕ ಗೊಬ್ಬರಗಳ ಅತಿಬಳಕೆ, ಸಾಂಪ್ರದಾಯಿಕ ಉರುವಲುಗಳ ಬಳಕೆ, ಅತಿಯಾಗಿ ಪೋಲು ಮಾಡುತ್ತಿರುವ ನೀರು ಮತ್ತು ಅಂತರ್ಜಾಲದ ಮಟ್ಟವನ್ನು ಹೆಚ್ಚಿಸಬಲ್ಲ ವಿಧಾನಗಳನ್ನು ನಿರ್ಲಕ್ಷಿಸಿರುವುದೇ ಮುಂತಾದ ಕಾರಣಗಳಿಂದಾಗಿ, ಜಾಗತಿಕ ತಾಪಮಾನದ ಮಟ್ಟವು ನಿಧಾನವಾಗಿ ಆದರೆ ನಿಶ್ಚಿತವಾಗಿ ಹೆಚ್ಚುತ್ತಿದೆ. ಪ್ರಕೃತಿಯ ಮೇಲೆ ಮಾನವನು ನಡೆಸುತ್ತಿರುವ ಅತ್ಯಾಚಾರದ ಪರಿಣಾಮವಾಗಿ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತಿದೆ. ಇವೆಲ್ಲವನ್ನೂ ನಿಯಂತ್ರಿಸದೇ ಇದ್ದಲ್ಲಿ, ನಮ್ಮ ಮುಂದಿನ ಸಂತತಿಯನ್ನು ಈ ಸಮಸ್ಯೆಯು ಶಾಪದಂತೆ ಕಾಡಲಿದೆ.

ಹವಾಮಾನದ ವ್ಯತ್ಯಯ

ಜಾಗತಿಕ ಹವಾಮಾನದ ವ್ಯತ್ಯಯದ  ಭಯಾನಕ ದುಷ್ಪರಿಣಾಮಗಳಲ್ಲಿ ಜಾಗತಿಕ ತಾಪಮಾನ ಮತ್ತು ಉಷ್ಣ ಅಲೆಗಳ ಹೆಚ್ಚಳವು ಪ್ರಮುಖವಾಗಿದೆ. ಈ ಸಮಸ್ಯೆಯ ಸಂಭಾವ್ಯತೆ ಮತ್ತು ತೀವ್ರತೆಗಳ ಪ್ರಮಾಣಗಳು ವರ್ಷದಿಂದ ವರ್ಷಕ್ಕೆ ಇನ್ನಷ್ಟು ಹೆಚ್ಚಲಿವೆ.

ಇತೀಚಿನ ದಿನಗಳಲ್ಲಿ ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿರುವ ಜಾಗತಿಕ ತಾಪಮಾನದ ಹೆಚ್ಚಳವು  ಬೇಸಗೆಯ ಧಗೆಯನ್ನು ಹೆಚ್ಚಿಸುವುದರೊಂದಿಗೆ, ಹವಾಮಾನದ ವೈಪರೀತ್ಯಗಳಿಗೆ ಕಾರಣವೆನಿಸುತ್ತಿದೆ. ತತ್ಪರಿಣಾಮವಾಗಿ ಕಡುಬೇಸಗೆಯ ದಿನಗಳಲ್ಲೂ ಗುಡುಗು ಮಿಂಚಿನೊಂದಿಗೆ ಧಾರಾಕಾರ ಮಳೆ ಸುರಿದಲ್ಲಿ ಇನ್ನು  ಕೆಲವೆಡೆ ಆಲಿಕಲ್ಲು ಮಳೆ ಸುರಿಯುತ್ತಿದೆ. ಒಂದೆಡೆ ಅತಿವೃಷ್ಟಿ ಹಾಗೂ ಮತ್ತೊಂದೆಡೆ ಅನಾವೃಷ್ಟಿ, ಮತ್ತೆ ಕೆಲವೆಡೆ ಅತಿಯಾದ ಸೆಕೆ ಅಥವಾ ಅತಿಯಾದ ಚಳಿ ಇತ್ಯಾದಿ ವೈಪರೀತ್ಯಗಳಿಗೆ ಮೇಲೆ ನಮೂದಿಸಿರುವ ಕಾರಣಗಳಲ್ಲದೇ, ಇತರ ಕಾರಣಗಳೂ ಇರುವ ಸಾಧ್ಯತೆಗಳಿವೆ. ಪ್ರಾಕೃತಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಹವಾಮಾನ ತಜ್ಞರು - ವಿಜ್ಞಾನಿಗಳು ಈ ಸಮಸ್ಯೆಗೆ ಸೂಕ್ತ ಪರಿಹಾರವೊಂದನ್ನು ಕಂಡುಹುಡುಕಲು ಶ್ರಮಿಸುತ್ತಿದ್ದರೂ, ಇದು ಫಲಪ್ರದವೆನಿಸಿಲ್ಲ. ಮನುಷ್ಯರ ಪಾಲಿಗೆ ಅತ್ಯಂತ ಅಪಾಯಕಾರಿ ಎನಿಸಿರುವ ಈ ಸಮಸ್ಯೆಗೆ ಪರಿಹಾರವನ್ನು ಸಂಶೋಧಿಸಲು ಅಸಾಧ್ಯವಾಗಿರುವುದರಿಂದ, ಕನಿಷ್ಟಪಕ್ಷ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಿದೆ. ಏಕೆಂದರೆ ಮುಂದಿನ ೮೦ ರಿಂದ ೧೦೦ ವರ್ಷಗಳ ಅವಧಿಯಲ್ಲಿ ಸರಾಸರಿ ತಾಪಮಾನವು ೨ ರಿಂದ ೬ ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಲಿದೆ. ದೇಶದ ಅಧಿಕತಮ ರಾಜ್ಯಗಳಲ್ಲಿ ತಾಪಮಾನದ ಮಟ್ಟದ ಹೆಚ್ಚಳವು  ಗಣನೀಯವಾಗಿದ್ದು, ತೀವ್ರ ಚಳಿ ಇರುತ್ತಿದ್ದ ಪ್ರದೇಶಗಳಲ್ಲಿ ಇದೀಗ ಛಳಿಯ ತೀವ್ರತೆ ಕಡಿಮೆಯಾಗಿರುವುದು ಮತ್ತು ಬೇಸಗೆಯ ದಿನಗಳಲ್ಲಿ ವಾತಾವರಣದ ಉಷ್ಣತೆ ಇನ್ನಷ್ಟು ಹೆಚ್ಚುತ್ತಿದೆ.

ಉಷ್ಣ ಅಲೆ – ಮುಂಜಾಗ್ರತೆ

ಅತಿಯಾದ ತಾಪಮಾನ ಬಾಧಿಸಿದ ಸಂದರ್ಭದಲ್ಲಿ ನೇರವಾಗಿ ಸೂರ್ಯನ ಬಿಸಿಲಿಗೆ ಮೈಯ್ಯನ್ನು ಒಡ್ಡದಿರಿ. ಅನಿವಾರ್ಯವೆನಿಸಿದಲ್ಲಿ ಛತ್ರಿಯನ್ನು ಬಳಸಿರಿ. ಜೊತೆಗೆ ಹೊರಾಂಗಣದಲ್ಲಿ ತೀವ್ರ ಶಾರೀರಿಕ ಶ್ರಮದ ಕೆಲಸಗಳನ್ನು ಮಾಡದಿರಿ. ಧಾರಾಳವಾಗಿ ನೀರು ಹಾಗೂ ಕೊಂಚ  ಪಾನಕ ಮತ್ತು ಹಣ್ಣಿನ ರಸ ಇತ್ಯಾದಿ ದ್ರವಗಳನ್ನು ಸೇವಿಸಿ. ವಿಶೇಷವಾಗಿ ಗಂಭೀರ ವ್ಯಾಧಿಗಳಿಂದ ಬಳಲುತ್ತಿರುವ ರೋಗಿಗಳ ಶರೀರದ ಉಷ್ಣತೆಯು ಹೆಚ್ಚಾಗದಂತೆ ಹವಾ ನಿಯಂತ್ರಕ,ಫ್ಯಾನ್ ಅಥವಾ ಕೂಲರ್ ಗಳನ್ನು ಬಳಸಿ. ಈ ಸೌಲಭ್ಯ ಇಲ್ಲದವರು ಒದ್ದೆ ಬಟ್ಟೆಯಿಂದ ರೋಗಿಯ ಶರೀರವನ್ನು ಆಗಾಗ ಒರೆಸುತ್ತಿರಿ. ಇಂತಹವರ ಆರೋಗ್ಯದಲ್ಲಿ ಕೊಂಚ ಏರುಪೇರು ಸಂಭವಿಸಿದಲ್ಲಿ, ತಕ್ಷಣ ವೈದ್ಯರ ಸಲಹೆಯನ್ನು ಪಡೆಯಿರಿ.

ಉಷ್ಣ ಅಲೆಯ ಬಾಧೆಯ ಸಂದರ್ಭದಲ್ಲೇ ಜ್ವರ, ವಾಂತಿ ಮತ್ತು ಭೇಧಿಯಂತಹ ಸಮಸ್ಯೆಗಳು ಉದ್ಭವಿಸಿದಲ್ಲಿ, ಇವುಗಳನ್ನು  ನಿರ್ಲಕ್ಷಿಸದೇ ಸಮೀಪದ ವೈದ್ಯರನ್ನು ಸಂದರ್ಶಿಸಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


Monday, May 25, 2015

ARE BPL FAMILIES INCREASING IN KARNATAKA ?







ಕರ್ನಾಟಕದಲ್ಲಿ ಬಿ ಪಿ ಎಲ್ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ !

ಒಂದಾನೊಂದು ಕಾಲದಲ್ಲಿ ನಮ್ಮ ದೇಶದಲ್ಲಿ ಬಡತನದ ಸಮಸ್ಯೆ ಅತ್ಯಂತ ವ್ಯಾಪಕವಾಗಿತ್ತು. ಮೂರು ಹೊತ್ತಿನ ತುತ್ತು ಬಿಡಿ, ಒಂದು ಹೊತ್ತಿನ ತುತ್ತಿಗೂ ತತ್ವಾರವಿದ್ದ ಕುಟುಂಬಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿತ್ತು. ಆದರೆ ಇಂದು ಬದಲಾದ ಪರಿಸ್ಥಿತಿಯಲ್ಲಿ ಹೊಟ್ಟೆ ಬಟ್ಟೆಗಳಿಗೆ ಕೊರತೆಯಿರದ ಕುಟುಂಬಗಳ ಸಂಖ್ಯೆ ಸಾಕಷ್ಟಿದೆ. ದುಡಿಯುವ ಕೈಗಳಿಗೆ ಯಾವುದಾದರೊಂದು ಉದ್ಯೋಗ ಸಿಕ್ಕೇ ಸಿಗುತ್ತದೆ. ಜೊತೆಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡುವವರಿಗೂ ಉತ್ತಮ ವೇತನ ದೊರೆಯುತ್ತದೆ. ನಿಜಸ್ಥಿತಿ ಇಂತಿದ್ದರೂ, ಸರ್ಕಾರದ ದಾಖಲೆಗಳಂತೆ ಇಂದಿಗೂ ನಮ್ಮ ರಾಜ್ಯದಲ್ಲಿ " ಬಡತನದ ರೇಖೆಗಿಂತ ಕೆಳಗಿರುವ " ಕುಟುಂಬಗಳ ಸಂಖ್ಯೆ ಹಾಗೂ  ಅಂತ್ಯೋದಯ ಮತ್ತು ಬಿ ಪಿ ಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಸಂಖ್ಯೆಯು ಸರಿಸುಮಾರು ಒಂದು ಕೋಟಿಗೂ ಅಧಿಕವಾಗಿದೆ. ಇದಕ್ಕೊಂದು ನಿರ್ದಿಷ್ಟ ಕಾರಣವೂ ಇದೆ.

ಸರಕಾರೀ ಸೌಲಭ್ಯಗಳಿಗೆ ರಹದಾರಿ

ಕಳೆದ ಹಲವಾರು ವರ್ಷಗಳಿಂದ ಅಧಿಕಾರದ ಗದ್ದುಗೆಯನ್ನೇರುವ ಸಲುವಾಗಿಯೇವಿವಿಧ ರಾಜಕೀಯ ಪಕ್ಷಗಳು ಮತದಾರರಿಗೆ ಹತ್ತು ಹಲವು ಆಮಿಷಗಳನ್ನು ಒಡ್ಡುವ ಪದ್ಧತಿಯನ್ನು ಹುಟ್ಟುಹಾಕಿದ್ದವು. ಇದರ ಅಂಗವಾಗಿ ರಾಜ್ಯದಲ್ಲಿನ " ಬಿ ಪಿ ಎಲ್ ಕುಟುಂಬ " ಗಳ ಸಲುವಾಗಿಯೇ ಅನೇಕ ಸಾಮಾಜಿಕ ಹಾಗೂ ಜನಕಲ್ಯಾಣ ಯೋಜನೆಗಳನ್ನು ಹಮ್ಮಿಕೊಂಡಿದ್ದವು. ಒಂದು ಪಕ್ಷದ ಸರ್ಕಾರ ಅಧಿಕಾರವನ್ನು ಕಳೆದುಕೊಂಡ ಬಳಿಕ ಅಧಿಕಾರದ ಗದ್ದುಗೆಯನ್ನು ಏರಿದ ಮತ್ತೊಂದು ಪಕ್ಷವು ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ  ಮತ್ತಷ್ಟು ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಿಸುತ್ತಿತ್ತು. ಆದರೆ ಇಂತಹ ಜನಪರ ಯೋಜನೆಗಳಿಗಾಗಿ ಸರ್ಕಾರದ ಬೊಕ್ಕಸದ ಹಣವನ್ನು ವ್ಯಯಿಸಲಾಗುತ್ತಿತ್ತೇ ಹೊರತುಪಕ್ಷದ ನಿಧಿಯಿಂದಲ್ಲ. ರಾಜ್ಯದ ಆರ್ಥಿಕ ಸ್ಥಿತಿಗತಿಗಳು ಆರೋಗ್ಯಕರ ಮಟ್ಟದಲ್ಲಿ ಇಲ್ಲದಿದ್ದರೂ ಹಾಗೂ ರಾಜ್ಯ ಸರ್ಕಾರದ ತಲೆಯ ಮೇಲಿನ ಸಾಲದ ಮೊತ್ತ ಒಂದು ಲಕ್ಷ ಕೋಟಿಯನ್ನು ಮೀರಿದರೂ, ಅಧಿಕಾರದಲ್ಲಿರುವ ರಾಜಕೀಯ ಪಕ್ಷವು ಇಂತಹ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಿಸಲು ಹಿಂಜರಿಯುವುದಿಲ್ಲ. ಏಕೆಂದರೆ ಸರ್ಕಾರ ಹಿಂದೆ  ಮಾಡಿದ್ದ ಹಾಗೂ ಇದೀಗ ಮಾಡಲಿರುವ ಸಾಲವನ್ನು ಮರುಪಾವತಿಸಬೇಕಾದ ಹೊಣೆಗಾರಿಕೆಯು ಇಂದಿನ ಸರ್ಕಾರದ ಮೇಲಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಇತೀಚಿನ ಕೆಲವರ್ಷಗಳಿಂದ ಅಧಿಕಾರದಲ್ಲಿರುವ ಪಕ್ಷಗಳು ರಾಜ್ಯದ ಬಡ ಜನತೆಯ ಸಲುವಾಗಿ ಅನೇಕ  " ಉಚಿತ ಭಾಗ್ಯ " ಗಳನ್ನು ನೀಡುವ ಸಂಪ್ರದಾಯವನ್ನು ಆರಂಭಿಸಿವೆ. ಈಗಂತೂ ಪಡಿತರ ಅಕ್ಕಿ ಹಾಗೂ ಗೋಧಿಗಳನ್ನು ಉಚಿತವಾಗಿ ಮತ್ತು ಸಕ್ಕರೆ, ಎಣ್ಣೆ ಮತ್ತು ಉಪ್ಪುಗಳನ್ನು ರಿಯಾಯತಿ ದರದಲ್ಲಿ ನೀಡಲಾಗುತ್ತಿದೆ. ಇದಲ್ಲದೆ ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ. ಅಂತೆಯೇ ಆಶ್ರಯ ಯೋಜನೆಯಲ್ಲಿ ಮನೆಕಟ್ಟಲು ಜಮೀನು, ಶೌಚಾಲಯ ನಿರ್ಮಿಸಲು ಸಹಾಯಧನ ಮತ್ತಿತರ ಹತ್ತುಹಲವು ಯೋಜನೆಗಳ ಸೌಭಾಗ್ಯವನ್ನು ಪಡೆದುಕೊಳ್ಳಬಹುದಾಗಿದೆ. ಅಂತೆಯೇ ಇಂತಹ ಭಾಗ್ಯಗಳನ್ನು ಪಡೆದುಕೊಳ್ಳಬೇಕಿದ್ದಲ್ಲಿ, ಬಿ ಪಿ ಎಲ್ ಪಡಿತರ ಚೀಟಿಯನ್ನು ಹೊಂದಿರುವುದು ಕಡ್ದಾಯವಾಗಿದೆ. ತತ್ಪರಿಣಾಮವಾಗಿ ಬಿ ಪಿ ಎಲ್ ಚೀಟಿಗಳನ್ನು ಪಡೆದುಕೊಳ್ಳಲು ಸಾಕಷ್ಟು ಸ್ಥಿತಿವಂತರೂ ಹರಸಾಹಸವನ್ನೇ ನಡೆಸುತ್ತಿರುವುದು ಸರ್ಕಾರಕ್ಕೆ ತಿಳಿಯದ ಗುಟ್ಟೇನಲ್ಲ. ಇಲ್ಲದಿದ್ದಲ್ಲಿ ಒಂದೆರಡು ವರ್ಷಗಳ ಹಿಂದೆ ಸರ್ಕಾರದ ಅಧಿಕೃತ ಅಂಕಿಅಂಶಗಳಂತೆ, ರಾಜ್ಯದಲ್ಲಿ ಇರುವ ಒಟ್ಟು ಕುಟುಂಬಗಳ ಸಂಖ್ಯೆಗಿಂತ ಹೆಚ್ಚು ಪಡಿತರ ಚೀಟಿಗಳು ಇರಲು ಸಾಧ್ಯವೇ ಇರಲಿಲ್ಲ. ಆದರೆ ತಮ್ಮ ಮತಬ್ಯಾಂಕ್ ಗಳನ್ನು ಭದ್ರವಾಗಿರಿಸಿಕೊಳ್ಳಲು ಅನರ್ಹ ಕುಟುಂಬಗಳ ಬಿ ಪಿ ಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲು ಅಧಿಕಾರದಲ್ಲಿರುವ ಪಕ್ಷ ಹಿಂದೇಟು ಹಾಕುತ್ತಿದೆ.ಇತ್ತೀಚಿಗೆ ಒಂದಷ್ಟು ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದರೂ,  ಹೊಸದಾಗಿ ಪಡಿತರ ಚೀಟಿಗಳನ್ನು ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಿದೆ.  ಹಾಗೂ ಇದೇ ಕಾರಣದಿಂದಾಗಿ  ಪ್ರಜೆಗಳು ತೆತ್ತ ಕೋಟ್ಯಂತರ ರೂಪಾಯಿಗಳ ತೆರಿಗೆಯ ಹಣವು, ಇಂತಹ ಯೋಜನೆಗಳಿಂದಾಗಿ  ಅನರ್ಹರ ಪಾಲಾಗುತ್ತಿದೆ.

ಅನರ್ಹರಿಗೆ ಬಿ ಪಿ ಎಲ್  ಕಾರ್ಡ್   

ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನವೊಂದು ಹಿಂದಿನ ಸರ್ಕಾರದ ಅಧಿಕಾರದ ಅವಧಿಯಲ್ಲಿ ನಡೆದಿತ್ತು. ಹಾಗೂ ಇದಕ್ಕಾಗಿಯೇ  ಬಿ ಪಿ ಎಲ್ ಪಡಿತರ ಚೀಟಿಯನ್ನು ಪಡೆಯಲು ಕೆಲವೊಂದು ಮಾನದಂಡಗಳನ್ನೂ ನಿಗದಿಸಿತ್ತು.. ಈ ನಿಯಮಗಳನ್ನು ಇದೀಗ ಅಧಿಕಾರದಲ್ಲಿರುವ ಸರ್ಕಾರ ಅನುಷ್ಠಾನಿಸಲು ಮುಂದಾಗಿದ್ದು, ಇದರ ಪರಿಣಾಮ ಏನಾಗಲಿದೆ ಎನ್ನುವುದುಮುಂದಿನ ಕೆಲವೇ ತಿಂಗಳುಗಳಲ್ಲಿ ತಿಳಿಯಲಿದೆ.

ನಿಜ ಹೇಳಬೇಕಿದ್ದಲ್ಲಿ ಸರ್ಕಾರ ಪ್ರಕಟಿಸಿರುವ ಮಾನದಂಡವನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಿದಲ್ಲಿ, ಅಧಿಕತಮ ಬಿ ಪಿ ಎಲ್ ಪಡಿತರ ಚೀಟಿಗಳು ರದ್ದಾಗುವುದರಲ್ಲಿ ಸಂದೇಹವಿಲ್ಲ. ಉದಾಹರಣೆಗೆ ೧೦೦ ಸಿ ಸಿ ಗಿಂತ ಅಧಿಕ ಸಾಮರ್ಥ್ಯದ ಹಾಗೂ ಇಂಧನ ಚಾಲಿತ ದ್ವಿಚಕ್ರ, ತ್ರಿಚಕ್ರ ಮತ್ತು ಚತುಷ್ಚಕ್ರ ವಾಹನಗಳನ್ನು ಹೊಂದಿದವರು ಬಿ ಪಿ ಎಲ್ ಪಡಿತರ ಚೀಟಿಯನ್ನು ಪಡೆಯಲು ಅರ್ಹರಲ್ಲ, ಎನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದಲ್ಲಿ ಲಕ್ಷಾಂತರ ಕುಟುಂಬಗಳ  ಚೀಟಿಗಳು ರದ್ದಾಗುವುದರಲ್ಲಿ ಸಂದೇಹವೇ ಇಲ್ಲ.  ಆದರೆ ಅರ್ಜಿದಾರರು ಒದಗಿಸಿದ ಮಾಹಿತಿಗಳನ್ನು ಅಡ್ಡ ಪರಿಶೀಲನೆ ಮಾಡುವ ಅಧಿಕಾರಿಗಳು, ತಮ್ಮ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸದೇ ಇದ್ದಲ್ಲಿ, ಅನರ್ಹರ ಅರ್ಜಿಗಳು ತಿರಸ್ಕೃತಗೊಳ್ಳುವ ಸಾಧ್ಯತೆಗಳೇ ಇಲ್ಲ. ಇದರೊಂದಿಗೆ ಭ್ರಷ್ಟ ಅಧಿಕಾರಿಗಳ ಕೈವಾಡ, ರಾಜಕೀಯ ಪ್ರಭಾವ- ಹಸ್ತಕ್ಷೇಪ  ಮತ್ತು ಮಧ್ಯವರ್ತಿಗಳ ಅಡ್ಡ ದಾರಿಗಳೇ ಮುಂತಾದ  ವಿಧಾನಗಳನ್ನು ಬಳಸುವ ಮೂಲಕ ಬಿ ಪಿ ಎಲ್ ಪಡಿತರ ಚೀಟಿಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ನಿಮಗೆ ತಿಳಿದಂತೆ ಅನರ್ಹ ಕುಟುಂಬಗಳು ಬಿ ಪಿ ಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿದ್ದಲ್ಲಿ, ತತ್ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡುವಂತೆ ಸರ್ಕಾರವೇ ಕೋರಿದ್ದರೂ, ಜನಸಾಮಾನ್ಯರು ಮಾಹಿತಿಯನ್ನು ನೀಡಿದ್ದ ಹಾಗೂ ಚೀಟಿಗಳು ರದ್ದಾದ ನಿದರ್ಶನಗಳೇ ಇಲ್ಲ. ಇವೆಲ್ಲವುಗಳ ಸಂಯುಕ್ತ ಪರಿಣಾಮದಿಂದಾಗಿ ಲಕ್ಷಾಂತರ ಅನರ್ಹ ಕುಟುಂಬಗಳು ಬಡವರಿಗಾಗಿ ಹಮ್ಮಿಕೊಂಡಿರುವ ಯೋಜನೆಗಳನ್ನು ದುರ್ಬಳಕೆ ಮಾಡುವುದನ್ನು ತಡೆಗಟ್ಟಲು ಆಗುತ್ತಿಲ್ಲ.

ಕೊನೆಯ ಮಾತು

ರಾಜ್ಯದಲ್ಲಿರುವ  ನಕಲಿ ಎ ಪಿ ಎಲ್, ಅಂತ್ಯೋದಯ ಮತ್ತು ಬಿ ಪಿ ಎಲ್ ಪಡಿತರ ಚೀಟಿಗಳನ್ನು ಪತ್ತೆಹಚ್ಚುವ ಸಲುವಾಗಿ, ಪ್ರತಿಯೊಂದು ಕುಟುಂಬದ ಸದಸ್ಯರ ಬಯೋಮೆಟ್ರಿಕ್ಸ್ ಮತ್ತು ಭಾವಚಿತ್ರಗಳನ್ನು ಪಡೆದುಕೊಳ್ಳಲಾಗಿದೆ.ಜೊತೆಗೆ ಇದರೊಂದಿಗೆ  ಆಧಾರ್ ಮತ್ತು ಮತದಾರರ ಚೀಟಿಗಳ ಸಂಖ್ಯೆಗಳನ್ನು ಜೋಡಿಸುವ ಕಾರ್ಯ ಈಗಾಗಲೇ ನಡೆದಿದೆ. ಇದರಿಂದಾಗಿ ಲಕ್ಷಾಂತರ ನಕಲಿ ಪಡಿತರ ಚೀಟಿಗಳು ಪತ್ತೆಯಾಗಿದ್ದು, ಗಣನೀಯ ಪ್ರಮಾಣದ ಚೀಟಿಗಳು ರದ್ದುಗೊಂಡಿವೆ. ಇದೀಗ ಜಾತಿ ಜನಗಣತಿ ಕಾರ್ಯದ ಸಂದರ್ಭದಲ್ಲಿ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕಿದ್ದು, ಇದರಿಂದಾಗಿ ಮತ್ತಷ್ಟು ನಕಲಿ ಬಿ ಪಿ ಎಲ್ ಪಡಿತರ ಚೀಟಿಗಳು ರದ್ದಾಗುವ ಸಾಧ್ಯತೆಗಳಿವೆ. ಆದರೆ ಜನಗಣತಿಯ ಸಂದರ್ಭದಲ್ಲಿ ಅನೇಕರು ನೈಜ ಮಾಹಿತಿಯನ್ನು ನೀಡದೇ ಇರುವುದರಿಂದ, ಅವಶ್ಯಕತೆಯಿದ್ದಲ್ಲಿ ಅಡ್ಡ ಪರಿಶೀಲನೆ ನಡೆಸುವಂತೆ ಸರ್ಕಾರ ಕ್ರಮಕೈಗೊಳ್ಳಬೇಕಿದೆ.

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು






Friday, May 22, 2015

DHANALAKSHMI BHAAGYA FOR KARNATAKA MLA'S.

           ಕರ್ನಾಟಕದ ಶಾಸಕರಿಗೆ ಧನಲಕ್ಷ್ಮೀ ಭಾಗ್ಯ !                  

ರಾಜ್ಯದ ಪ್ರಜೆಗಳ ಸೇವೆ ಮಾಡುವ ಸಲುವಾಗಿಯೇ ತಾವು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿರುವುದಾಗಿ ಘಂಟಾಘೋಷವಾಗಿ ಸಾರುವ ನಮ್ಮ ನೇತಾರರು, ತಾವು ಮಾಡುತ್ತಿರುವುದು ಸಮಾಜಸೇವೆಯೇ ಹೊರತು ಇದೊಂದು ಉದ್ಯೋಗವಲ್ಲ ಎಂದು ಪದೇಪದೇ ಹೇಳುವುದನ್ನು ನೀವೂ ಕೇಳಿರಲೇಬೇಕು. ರಾಜ್ಯದ ರಾಜಕಾರಣಿಗಳು ಮಾಡುತ್ತಿರುವ “ ಸಮಾಜಸೇವೆ “ ಗೆ, ಉತ್ತಮ ಉದಾಹರಣೆಯೊಂದು ಇಲ್ಲಿದೆ.

ಕರ್ನಾಟಕದ ಜನತೆಗೆ ( ಮತದಾರರಿಗೆ ) ಸದಾ ಒಂದಲ್ಲ ಒಂದು " ಭಾಗ್ಯ " ವನ್ನು ಕೊಡುಗೆಗಳ  ರೂಪದಲ್ಲಿ ನೀಡುತ್ತಿರುವ ರಾಜ್ಯದ ಶಾಸಕರು, ಇತ್ತೀಚಿಗೆ ತಮಗೊಂದು ಭರ್ಜರಿ ಕೊಡುಗೆಯನ್ನು ತಾವೇ ಮಂಜೂರು ಮಾಡಿಕೊಂಡು ಕೃತಾರ್ಥರಾಗಿದ್ದಾರೆ. ವಿಶೇಷವೆಂದರೆ ಈ ಕೊಡುಗೆಯನ್ನು ವಿಧಾನಸಭೆಯಲ್ಲಿ ಮಂಡಿಸಿದಾಗ, ಪ್ರತಿಯೊಂದು ವಿಚಾರದಲ್ಲೂ ಹಾವು ಮುಂಗುಸಿಗಳಂತೆ ಕಾದಾಡುವ ಆಡಳಿತ ಮತ್ತು ವಿರೋಧ ಪಕ್ಷಗಳ ಶಾಸಕರು ಸದ್ದುಗದ್ದಲಗಳಿಲ್ಲದೇ ಇದನ್ನು ಅಂಗೀಕರಿಸಿದ್ದಾರೆ. ತತ್ಪರಿಣಾಮವಾಗಿ ನಮ್ಮ ಶಾಸಕರು ಐದು ವರ್ಷಗಳ ತಮ್ಮ ಆಡಳಿತಾವಧಿಯನ್ನು ಪರಿಪೂರ್ಣಗೊಳಿಸುವಾಗ, ಕೋಟ್ಯಾಧಿಪತಿಗಳಾಗಲಿದ್ದಾರೆ. ಕಾರಣಾಂತರಗಳಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದಲ್ಲಿ ಅಥವಾ ಸ್ಪರ್ದಿಸಿ ಸೋತಲ್ಲಿ, ಮಾಜಿ ಶಾಸಕರಾಗಿ ಕೈತುಂಬಾ ಪಿಂಚಣಿ ಮತ್ತು ಹಲವಾರು ವಿಧದ ಇತರ ಭತ್ಯೆಗಳನ್ನು ಪಡೆಯುತ್ತಾ ನಿಶ್ಚಿಂತೆಯಿಂದ ಜೀವಿಸಲಿದ್ದಾರೆ!.

ಉತ್ತಮ ಉದ್ಯೋಗ

ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ ಎನ್ನುವ ನುಡಿಮುತ್ತುಗಳು,ನಮ್ಮ ದೇಶದ  ರಾಜಕೀಯ ಕ್ಷೇತ್ರಕ್ಕೆ ಅನ್ವರ್ಥವೆನಿಸುತ್ತದೆ. ಏಕೆಂದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಶ್ರಮಿಸಿ ಉನ್ನತ ಶಿಕ್ಷಣವನ್ನು ಪಡೆದರೂ, ಕೈತುಂಬಾ ಸಂಬಳ ಸಿಗಬಲ್ಲ ಉತ್ತಮ ಉದ್ಯೋಗ ಲಭಿಸುವುದು ಸುಲಭವೇನಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಯಾವುದೇ ಶೈಕ್ಷಣಿಕ ಅರ್ಹತೆಗಳು, ಅನುಭವ ಮತ್ತು ಬುದ್ಧಿವಂತಿಕೆಗಳು ಇಲ್ಲದಿದ್ದರೂ, ಪ್ರತಿ ತಿಂಗಳಿನಲ್ಲೂ   ಸಹಸ್ರಾರು ರೂಪಾಯಿಗಳ  ಮಾಸಿಕ ವೇತನ, ವೇತನಕ್ಕಿಂತ ಹಲವಾರು ಪಟ್ಟು ಅಧಿಕ ಭತ್ಯೆಗಳು, ಮಾಸಿಕ ವೇತನಕ್ಕಿಂತ ಅಧಿಕ ಪಿಂಚಣಿ  ಹಾಗೂ  ಅನ್ಯ ಸವಲತ್ತುಗಳಲ್ಲದೇ, ಜೀವನ ಪರ್ಯಂತ ನಿವೃತ್ತಿ ವೇತನ  ಮತ್ತು ಇತರ ಹಲವಾರು ಸೌಲಭ್ಯಗಳನ್ನು ಗಳಿಸಬಲ್ಲ ಲಾಭದಾಯಕ ಉದ್ಯೋಗವೊಂದು ಇರುವುದು ನಿಮಗೂ ತಿಳಿದಿರಲಾರದು. ಈ ಉದ್ಯೋಗವನ್ನು ಗಳಿಸಬಲ್ಲ ಸಾಮರ್ಥ್ಯ ಇರುವವರು ಕೇವಲ ಐದು ವರ್ಷಗಳ ಕಾಲ ದುಡಿದರೆ ಅಥವಾ ದುಡಿದಂತೆ ನಟಿಸಿದರೆ ಸಾಕು, ಮುಂದೆ ಅಜೀವ ಪರ್ಯಂತ ಪಿಂಚಣಿ ಮತ್ತು ಅನ್ಯ ಉಚಿತ ಸೌಲಭ್ಯಗಳನ್ನು ಗಳಿಸುತ್ತಾ ನಿಶ್ಚಿಂತೆಯಿಂದ  ಬದುಕುವ ಸುವರ್ಣಾವಕಾಶ ಪ್ರಾಪ್ತಿಯಾಗಲಿದೆ.

ಆದರೆ ಈ ಉದ್ಯೋಗ ದೊರೆಯಬೇಕಿದ್ದಲ್ಲಿ ಒಂದಿಷ್ಟು ರಾಜಕೀಯ ಪ್ರಭಾವ, ಸಾಕಷ್ಟು ಧನಬಲ ಮತ್ತು ಒಂದಿಷ್ಟು ತೋಳ್ಬಲಗಳನ್ನು ಹೊಂದಿರುವುದು ಅನಿವಾರ್ಯವೆನಿಸುತ್ತದೆ. ಜೊತೆಗೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲಲೇಬೇಕಾಗುತ್ತದೆ. ಕೇವಲ ಒಂದುಬಾರಿ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಐದು ವರ್ಷಗಳ ಅವಧಿಯನ್ನು ಪರಿಪೂರ್ಣಗೊಳಿಸಿದಲ್ಲಿ, ಮುಂದೆ ನಿಶ್ಚಿಂತೆಯಿಂದ ನಿವೃತ್ತ ಜೀವನವನ್ನು ಸಾಗಿಸಬಹುದಾಗಿದೆ. ವಿಶೇಷವೆಂದರೆ  ಮಧ್ಯಂತರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದ ಮರುದಿನವೇ  ಕಾರಣಾಂತರಗಳಿಂದ ವಿಧಾನಸಭೆಯು ವಿಸರ್ಜಿಸಲ್ಪಟ್ಟರೂ,” ಏಕ್ ದಿನ್ ಕಾ ಸುಲ್ತಾನ್ “ ಎನಿಸುವ ಶಾಸಕರನ್ನೂ, ಪಿಂಚಣಿಯನ್ನು ಪಡೆಯುವ  ಸಲುವಾಗಿ  ( ಒಂದು ಅವಧಿಯನ್ನು ಪೂರೈಸಿದ ) ಮಾಜಿ ಶಾಸಕರನ್ನಾಗಿ ಪರಿಗಣಿಸಲಾಗುತ್ತದೆ!. ಅಂತೆಯೇ ಸೋತ ಅಭ್ಯರ್ಥಿಗಳು ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿ, ತನ್ನ ಪರವಾಗಿ ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ವಿಧಾನಸಭೆಯ ಐದು ವರ್ಷಗಳ ಅವಧಿ ಪರಿಪೂರ್ಣಗೊಂಡಿರುವ ಕಾರಣದಿಂದಾಗಿ  ಶಾಸಕರಾಗಿ ಕರ್ತವ್ಯ ನಿರ್ವಹಿಸಲಾಗದ “ ಶಾಸಕ “ ರನ್ನೂ ಮಾಜಿ ಶಾಸಕರೆಂದು ಪರಿಗಣಿಸಲಾಗುತ್ತದೆ. ಇದೀಗ ನೀವೇ ಹೇಳಿ, ಇದಕ್ಕಿಂತ ಉತ್ತಮ ಅನ್ಯ ಉದ್ಯೋಗವೊಂದು ನಮ್ಮ ಅಥವಾ ಅನ್ಯ ಯಾವುದಾದರೂ ದೇಶದಲ್ಲಿ ಇದೆಯೇ ?.

ವೇತನಕ್ಕಿಂತ ಅಧಿಕ ಪಿಂಚಣಿ

“ ಹುಟ್ಟಿದರೇ ಕನ್ನಡನಾಡಿನಲ್ಲಿ ಹುಟ್ಟಬೇಕು, ಮೆಟ್ಟಿದರೇ ಕನ್ನಡ ನೆಲವನ್ನು ಮೆಟ್ಟಬೇಕು “ ಎನ್ನುವ ಜನಪ್ರಿಯ ಚಿತ್ರಗೀತೆಯಂತೆ, ಕನ್ನಡ ನಾಡಿನಲ್ಲಿ ಹುಟ್ಟಿ ಒಂದುಬಾರಿ ಶಾಸಕರಾಗಿ ಆಯ್ಕೆಯಾದಲ್ಲಿ, ನಿಮ್ಮ ಅದೃಷ್ಟ ಖುಲಾಯಿಸುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಇತ್ತೀಚಿಗೆ ಜರಗಿದ್ದ ವಿಧಾನಸಭಾ( ಬಜೆಟ್ ) ಅಧಿವೇಶನದಲ್ಲಿ ನಮ್ಮ ಶಾಸಕರು, ವಿಧಾನ ಸಭಾ ಅಧ್ಯಕ್ಷರು ಮತ್ತು ಮಂತ್ರಿವರ್ಯರುಗಳ  ಸಂಬಳ, ಭತ್ಯೆಗಳು, ಅನ್ಯ ಸವಲತ್ತುಗಳು ಮತ್ತು ಪಿಂಚಣಿಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ವಿಶೇಷವೆಂದರೆ ವಿಧಾನ ಸಭೆಯಲ್ಲಿ ಮಂಡಿಸಲಾಗಿದ್ದ ಕರ್ನಾಟಕ ವಿಧಾನಮಂಡಲಗಳ ಸದಸ್ಯರ ವೇತನ, ಪಿಂಚಣಿ ಮತ್ತು ಭತ್ಯೆಗಳ ( ತಿದ್ದುಪಡಿ ) ವಿಧೇಯಕ ೨೦೧೫ ನ್ನು ಸೌಜನ್ಯಕ್ಕಾಗಿಯಾದರೂ ಚರ್ಚಿಸದೇ, ಕ್ಷಣಮಾತ್ರದಲ್ಲಿ ಅಂಗೀಕರಿಸಲಾಗಿತ್ತು. ಅಂತೆಯೇ ಇದೀಗ ಈ ತಿದ್ದುಪಡಿಯು ರಾಜ್ಯಪಾಲರ ಅಂಕಿತದೊಂದಿಗೆ ಅನ್ಗೀಕರಿಸಲ್ಪತ್ತಿದ್ದು, ಇದೇ ವರ್ಷದ ಎಪ್ರಿಲ್ ೧ ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆಬರಲಿದೆ.

ಸರ್ವಾನುಮತದ ಅಂಗೀಕಾರ

ಅಪರೂಪದಲ್ಲೊಮ್ಮೆ ನಡೆಯುವ ವಿಧಾನಸಭಾ ಅಧಿವೇಶನದ ಕಲಾಪಗಳ ಸಂದರ್ಭದಲ್ಲಿ ಸದಾ ಸದ್ದುಗದ್ದಲ, ಧರಣಿ, ಪ್ರತಿಭಟನೆ ಮತ್ತು ಸಭಾತ್ಯಾಗ ಮಾಡುವ ವಿರೋಧ ಪಕ್ಷಗಳ ಶಾಸಕರು ಮತ್ತು ಅವಕಾಶ ದೊರೆತಾಗಳೆಲ್ಲಾ ಇವರನ್ನು ಜರೆಯುವ ಮತ್ತು ತೊಡೆ- ತೋಳುಗಳನ್ನು ತಟ್ಟಿ ಹಂಗಿಸುವ ಆಡಳಿತ ಪಕ್ಷದ ಶಾಸಕರ ನಡುವೆ, ಯಾವುದೇ ವಿಚಾರದ ಬಗ್ಗೆ ಏಕಮತ ಮೂಡುವುದಿಲ್ಲ. ಆದರೆ ತಮ್ಮ ಸಂಬಳ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವ ವಿಚಾರದಲ್ಲಿ ಮಾತ್ರ ಇವರಲ್ಲಿ ಭಿನ್ನಾಭಿಪ್ರಾಯಗಳೇ ಉದ್ಭವಿಸುವುದಿಲ್ಲ!.

ಧನಲಕ್ಷ್ಮೀ ಭಾಗ್ಯ

ಈ ಬಾರಿ ನಮ್ಮ ಶಾಸಕರ ಮಾಸಿಕ ವೇತನವನ್ನು ಕೇವಲ ಶೇ.೨೫ ರಷ್ಟು ಅಂದರೆ ಮಾಸಿಕ ೨೦ ಸಾವಿರ ರೂ.ಗಳಿಂದ ೨೫ ಸಾವಿರಕ್ಕೆ ಏರಿಸಲಾಗಿದೆ. ಆದರೆ ನಿವೃತ್ತ ಶಾಸಕರ ಮಾಸಿಕ ಪಿಂಚಣಿಯನ್ನು ೨೫ ಸಾವಿರದಿಂದ ೪೦ ಸಾವಿರಕ್ಕೆ ಹೆಚ್ಚಿಸಲಾಗಿದೆ. ಸಂಚಾರ ಭತ್ಯೆಯನ್ನು ಪ್ರತಿ ಕಿ.ಮೀ. ಗೆ ೨೦ ರಿಂದ ೨೫ ರೂ.ಗಳಿಗೆ, ದೈನಂದಿನ ಭತ್ಯೆಯನ್ನು ರಾಜ್ಯದಲ್ಲಿ  ೧ ಸಾವಿರದಿಂದ ೨ ಸಾವಿರಕ್ಕೆ ಹಾಗೂ ಹೊರರಾಜ್ಯಗಳಲ್ಲಿ ೧.೫ ರಿಂದ ೨ ಸಾವಿರಕ್ಕೆ, ಕ್ಷೇತ್ರ ಪ್ರವಾಸ ಭತ್ಯೆಯನ್ನು ಮಾಸಿಕ ೨೫ ರಿಂದ ೪೦ ಸಾವಿರಕ್ಕೆ, ದೂರವಾಣಿ ವೆಚ್ಚವನ್ನು ಮಾಸಿಕ ೧೫ ಸಾವಿರದಿಂದ ೨೦ ಸಾವಿರಕ್ಕೆ ಮತ್ತು ಕ್ಷೇತ್ರ ಭತ್ಯೆಯನ್ನು ಮಾಸಿಕ ೧೫ ರಿಂದ ೪೦ ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ತತ್ಪರಿಣಾಮವಾಗಿ ಇದುವರೆಗೆ ಮಾಸಿಕ ವೇತನ ಮತ್ತು ಭತ್ಯೆಗಳು ಸೇರಿದಂತೆ ಸುಮಾರು ೯೦ ಸಾವಿರ ರೂ. ಗಳಿಸುತ್ತಿದ್ದ ನಮ್ಮ ಶಾಸಕರು, ಇನ್ನು ಮುಂದೆ ಕನಿಷ್ಠ ೧.೪೦,೦೦೦ ಸಾವಿರ ರೂ.ಗಳನ್ನು ಪಡೆಯಲಿದ್ದಾರೆ!.  

ಅದೇ ರೀತಿಯಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರ ಮಾಸಿಕ ವೇತನವನ್ನು ೨೫ ರಿಂದ ೪೦ ಸಾವಿರ ರೂ. ಗಳಿಗೆ, ರಾಜ್ಯ ಸಚಿವರ ಮಾಸಿಕ ವೇತನವನ್ನು  ವೇತನವನ್ನು ೧೬ ರಿಂದ ೩೫ ಕ್ಕೆ ಮತ್ತು ಮುಖ್ಯಮಂತ್ರಿಗಳ ವೇತನವನ್ನು ೩೦ ರಿಂದ ೫೦ ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ಕ್ಯಾಬಿನೆಟ್ ಮತ್ತು ರಾಜ್ಯ ಸಚಿವರಿಗೆ  ನೀಡುವ ಮಾಸಿಕ ಮನೆಬಾಡಿಗೆಯನ್ನು ಮಾಸಿಕ ೪೦,೦೦೦ ರೂ.ಗಳಿಂದ ೮೦. ಸಾವಿರಕ್ಕೆ ಹಾಗೂ ಮನೆಗಳ ನಿರ್ವಹಣೆಯ ಭತ್ಯೆಯನ್ನು ೧೦ ರಿಂದ ೨೦ ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಸಚಿವರಿಗೆ ನೀಡಲಾಗುತ್ತಿದ್ದ ಇಂಧನದ ಪ್ರಮಾಣವನ್ನು ಮಾಸಿಕ ೭೫೦ ಲೀಟರ್ ನಿಂದ ೧೦೦೦ ಲೀ. ಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ಸಂಚಾರ ಭತ್ಯೆಯನ್ನು ಪ್ರತಿ ಕಿ.ಮೀ. ಗೆ ೨೦ ರಿಂದ ೩೦ ರೂ.ಗಳಿಗೆ ಏರಿಸಲಾಗಿದೆ.

ಇಷ್ಟು ಮಾತ್ರವಲ್ಲ, ಶಾಸಕರ ಕ್ಷೇತ್ರ ಸಂಚಾರ ಭತ್ಯೆಯನ್ನು ೨೫ ರಿಂದ ೪೦ ಸಾವಿರಕ್ಕೆ, ದೂರವಾಣಿ ಭತ್ಯೆಯನ್ನು ೧೫ ರಿಂದ ೨೦ ಕ್ಕೆ ಮತ್ತು ಕ್ಷೇತ್ರ ಭತ್ಯೆಯನ್ನು ಮಾಸಿಕ ೧೫ ರಿಂದ ೪೦ ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ.

ಇದರೊಂದಿಗೆ ವಿಧಾನ ಪರಿಷತ್ತಿನ ಸಭಾಪತಿ ಮತ್ತು ವಿಧಾನ ಸಭೆಯ ಅಧ್ಯಕ್ಷರ ವೇತನ ಮತ್ತು ಭತ್ಯೆಗಳನ್ನು  ಮುಖ್ಯಮಂತ್ರಿಗಳ ವೇತನ ಹಾಗೂ ಭತ್ಯೆಗಳಿಗೆ  ಸಮನಾಗಿ ಹೆಚ್ಚಿಸಲಾಗಿದೆ. ಇದಲ್ಲದೇ ವಿರೋಧ ಪಕ್ಷದ ನಾಯಕ, ಉಪ ಸಭಾಪತಿ, ಉಪಾಧ್ಯಕ್ಷ ಮತ್ತು ಮುಖ್ಯ ಸಚೇತಕರ ವೇತನ – ಭತ್ಯೆಗಳನ್ನೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

ಇನ್ನು ಸದಾ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವ ಶಾಸಕರ ಮಾಸಿಕ ವೇತನವನ್ನು ೨೦ ಸಾವಿರ ರೂ.ಗಳಿಂದ ೨೫ ಸಾವಿರಕ್ಕೆ ಏರಿಸಿದ್ದಲ್ಲಿ, ಮಾಜಿ ಶಾಸಕರ ಮಾಸಿಕ ನಿವೃತ್ತಿ ವೇತನವನ್ನು ೨೫ ರಿಂದ ೪೦ ಸಾವಿರಕ್ಕೆ ಹೆಚ್ಚಿಸಲಾಗಿದೆ!.  ಒಂದು ಅವಧಿಯನ್ನು ಪೂರೈಸಿದ ಬಳಿಕ ಮುಂದಿನ ಅವಧಿಗೆ, ವರ್ಷವೊಂದಕ್ಕೆ ಒಂದು ಸಾವಿರದಂತೆ ಹೆಚ್ಚುವರಿ ನಿವೃತ್ತಿ ವೇತನವನ್ನೂ ನಮ್ಮ ಮಾಜಿ ಶಾಸಕರು ಪಡೆಯಲಿದ್ದಾರೆ. ( ಅರ್ಥಾತ್ ಮೂರು ಅವಧಿಗಳನ್ನು ಯಶಸ್ವಿಯಾಗಿ ಮುಗಿಸಿದ ಶಾಸಕರು, ಮಾಸಿಕ ೫೦ ಸಾವಿರ ರೂ. ಪಿಂಚಣಿಯನ್ನು ಪಡೆಯಲಿದ್ದಾರೆ!.) ಇದರೊಂದಿಗೆ ಆರೋಗ್ಯವಂತರಾಗಿದ್ದರೂ ಮಾಸಿಕ ೪ ಸಾವಿರ ರೂ. ವೈದ್ಯಕೀಯ ವೆಚ್ಚದ ಭತ್ಯೆ, ಜೊತೆಗೆ ಇವರ ಕುಟುಂಬದ ಅನ್ಯ ಸದಸ್ಯರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಪಾವತಿಸುತ್ತದೆ.ಇದಲ್ಲದೇ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಒಬ್ಬ ಸಹವರ್ತಿಯೊಂದಿಗೆ ಉಚಿತ ಪ್ರಯಾಣದ ಸವಲತ್ತು, ರೈಲು ಮತ್ತು ವಿಮಾನಗಳಲ್ಲಿ ಪ್ರಯಾಣಿಸಲು ವಾರ್ಷಿಕ ೧ ಲಕ್ಷ ರೂ., ನೀಡಲಾಗುತ್ತದೆ. ಮಾಜಿಗಳು ರೈಲು ಅಥವಾ ವಿಮಾನದಲ್ಲಿ ಸಂಚರಿಸದೆ ಇದ್ದರೂ, ಈ ಮೊತ್ತವನ್ನು ಅವರಿಗೆ ಪಾವತಿಸಲಾಗುತ್ತದೆ. ಮಾಜಿ ಶಾಸಕರು ಮೃತಪಟ್ಟ ಬಳಿಕ ಇವರ ಕುಟುಂಬದ ಸದಸ್ಯರೊಬ್ಬರಿಗೆ ಕುಟುಂಬ ಪಿಂಚಣಿ ದೊರೆಯುತ್ತದೆ.

ನಮ್ಮ ಶಾಸಕರ ವೇತನ, ಪಿಂಚಣಿ ಹಾಗೂ  ಭತ್ಯೆಗಳನ್ನು ಇದೀಗ ಏರಿಸಿದ ಪರಿಣಾಮವಾಗಿ, ಸರ್ಕಾರದ ಬೊಕ್ಕಸಕ್ಕೆ ಸುಮಾರು ೪೭.೫  ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ.



ಗತಕಾಲದ ರಾಜಮಹಾರಾಜರನ್ನು ಮತ್ತು ಅವರಿಗೆ ಸರ್ಕಾರ ನೀಡುತ್ತಿದ್ದ “ ರಾಜಧನ “ ವನ್ನು ರದ್ದುಪಡಿಸಿ ದಶಕಗಳೇ ಕಳೆದಿವೆ. ಆದರೆ ಇದೀಗ ದೇಶದ ಬಹುತೇಕ ರಾಜ್ಯಗಳ ಶಾಸಕರು ಮತ್ತು ಸಂಸದರು ಪಡೆಯುತ್ತಿರುವ ಮಾಸಿಕ ವೇತನ ಹಾಗೂ ವಿವಿಧ ನಾಮಧೇಯದ ಭತ್ಯೆ ಮತ್ತು ಅನ್ಯ ಸವಲತ್ತುಗಳು ನಿಶ್ಚಿತವಾಗಿಯೂ ರಾಜಮಹಾರಾಜರನ್ನು ನಾಚಿಸುವಂತಿದೆ. ಇಷ್ಟೆಲ್ಲಾ ಆರ್ಥಿಕ ಸೌಲಭ್ಯಗಳನ್ನು ನಮ್ಮ ಶಾಸಕರು ಪಡೆಯುತ್ತಿದ್ದರೂ, ವರ್ಷದ ಕೆಲವೇ ದಿನಗಳ ಕಾಲ ನಡೆಯುವ ಸದನದ ಕಲಾಪದ ಸಂದರ್ಭದಲ್ಲಿ ಶಾಸಕರ ಆಸನಗಳು ಖಾಲಿಯಾಗಿರುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ.

ಕೊನೆಯ ಮಾತು

ಇತ್ತೀಚಿಗೆ ಪ್ರಧಾನಿ ಮೋದಿಯವರು  ದೇಶದ ಆರ್ಥಿಕತೆಗೆ ಹೊರೆಯೆನಿಸುತ್ತಿರುವ ಅಡುಗೆ ಅನಿಲದ ಸಹಾಯಧನವನ್ನು ತ್ಯಜಿಸುವಂತೆ  ಅನುಕೂಲಸ್ತ  ಜನರಿಗೆ ಕರೆನೀಡಿದ್ದರು. ಈ ಕರೆಗೆ ಸ್ಪಂದಿಸಿದ  ಕೇವಲ ಬೆರಳೆಣಿಕೆಯಷ್ಟು ಕೇಂದ್ರ ಸಚಿವರು ಮತ್ತಿತರ ಗಣ್ಯವ್ಯಕ್ತಿಗಳು ಸಹಾಯಧನದ ಅಡುಗೆ ಅನಿಲ ಜಾಡಿಗಳನ್ನು ತ್ಯಜಿಸಿದ್ದರು. ಪ್ರಸ್ತುತ ವಾರ್ಷಿಕ ಲಕ್ಷಾಂತರ ರೂಪಾಯಿಗಳನ್ನು ಅನಾಯಾಸವಾಗಿ ಗಳಿಸುತ್ತಿರುವ  ಕರ್ನಾಟಕದ ಎಷ್ಟು ಮಂದಿ ಶಾಸಕರು ಮತ್ತು ಸಂಸದರು ಸಹಾಯಧನ ಸಹಿತ ಅಡುಗೆ ಅನಿಲಜಾಡಿಗಳನ್ನು ತ್ಯಜಿಸಿದ್ದಾರೆ ಎನ್ನುವುದು, ಇವರನ್ನು ಚುನಾಯಿಸಿದ ಮತದಾರರಿಗೂ ತಿಳಿದಿಲ್ಲ. ಲಭ್ಯ ಮಾಹಿತಿಯಂತೆ ಅಧಿಕತಮ ಶಾಸಕರು ಮತ್ತು ಸಂಸದರು ಇದನ್ನು ತ್ಯಜಿಸಿಲ್ಲ ಹಾಗೂ ಪ್ರಾಯಶಃ ತ್ಯಜಿಸಲೂ ಸಿದ್ಧರಿಲ್ಲ!.

ರಾಜಕಾರಣಿಗಳ ದೃಷ್ಠಿಯಲ್ಲಿ ದೇಶಕ್ಕಾಗಿ ತ್ಯಾಗ ಮಾಡಬೇಕಾದವರು ಪ್ರಜೆಗಳೇ ಹೊರತು ನಮ್ಮನ್ನಾಳುವವರಲ್ಲ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು, ಆದರೆ ಕೆಲವರು ಮಾತ್ರ ಹೆಚ್ಚು ಸಮಾನರು!.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು











Monday, May 18, 2015

PUTTUR : ROAD WIDENING PROBLEMS





ಪುತ್ತೂರು : ರಸ್ತೆಗಳ ವಿಸ್ತರಣೆ- ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಅಡಚಣೆಗಳು  

ಇತ್ತೀಚೆಗಷ್ಟೇ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ್ದ ಪುತ್ತೂರು ನಗರದ ವ್ಯಾಪ್ತಿಯಲ್ಲಿರುವ ಬಹುತೇಕ ರಸ್ತೆಗಳು ಇದೀಗ ಜನ- ವಾಹನಗಳ ದಟ್ಟಣೆಯಿಂದಾಗಿ ತುಂಬಿ ತುಳುಕುತ್ತಿವೆ. ಕೇವಲ ವಾಹನಗಳು ಮಾತ್ರವಲ್ಲ, ಪಾದಚಾರಿಗಳೂ ಈ ಸಮಸ್ಯೆಯಿಂದ ಹೈರಾಣಾಗಿರುವುದು ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಯದ ವಿಚಾರವೇನಲ್ಲ. ಆದರೆ ಯಾವುದೇ ರೀತಿಯ ಯೋಜನೆಯನ್ನು ಹಮ್ಮಿಕೊಳ್ಳದೇಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಪುತ್ತೂರು ಪಟ್ಟಣವು, ಇದೀಗ ಸುಗಮ ಸಂಚಾರಕ್ಕೆ ಅನುಕೂಲವಾಗುವಂತಹ ರಸ್ತೆಗಳೇ ಇಲ್ಲದ ಕಾರಣದಿಂದಾಗಿ ಪ್ರತಿನಿತ್ಯ  ಅಯಾಚಿತ ಸಮಸ್ಯೆಗಳಿಗೆ ಈಡಾಗುತ್ತಿದೆ.

ಸಭೆ- ಸಮಾರಂಭಗಳು ಇರುವ ದಿನಗಳಲ್ಲಂತೂ, ನಗರದ ರಸ್ತೆಗಳಲ್ಲಿ ವಾಹನಗಳಲ್ಲಿ ಮಾತ್ರವಲ್ಲ, ನಡೆದುಕೊಂಡು ಹೋಗಲೂ ಹರಸಾಹಸವನ್ನೇ ನಡೆಸಬೇಕಾಗುತ್ತಿದೆ. ಶಾಲಾವಿದ್ಯಾರ್ಥಿಗಳು, ಮಹಿಳೆಯರು ಮತ್ತು ವಯೋವೃದ್ಧರು ಸ್ಥಳೀಯ ರಸ್ತೆಗಳಲ್ಲಿ ನಿರಾತಂಕವಾಗಿ ನಡೆದಾಡಲು ಸಾಧ್ಯವಾಗದ ಕಾರಣದಿಂದಾಗಿ ಆತಂಕಿತರಾಗಿದ್ದಾರೆ. ಈ ಸಮಸ್ಯೆಗೆ ಅನೇಕ ಕಾರಣಗಳೂ ಇವೆ.

ವಿಸ್ತರಿಸಲ್ಪಡದ ರಸ್ತೆಗಳು

ಒಂದಾನೊಂದು ಕಾಲದಲ್ಲಿ ಎತ್ತಿನಗಾಡಿಗಳ ಸಂಚಾರಕ್ಕೆ ಸೀಮಿತವಾಗಿದ್ದ ಪುತ್ತೂರಿನ ರಸ್ತೆಗಳು, ಗತಕಾಲದ ಮೋಟಾರು ವಾಹನಗಳು ಸಂಚರಿಸಲು ಆರಂಭವಾದ ಬಳಿಕ ಕಿಂಚಿತ್ ಅಭಿವೃದ್ಧಿಗೊಂಡಿದ್ದವು. ಕಾಲಕ್ರಮೇಣ ವಾಹನಗಳ ಸಂಖ್ಯೆ ಹೆಚ್ಚಿದ್ದರೂ, ಬಹುತೇಕ ರಸ್ತೆಗಳ ಅಂಚಿನಲ್ಲೇ ನಿರ್ಮಿಸಲಾಗಿದ್ದ ವಸತಿ ಹಾಗೂ ವಾಣಿಜ್ಯ ಕಟ್ಟಡಗಳಿಂದಾಗಿ ಸ್ಥಳೀಯ ರಸ್ತೆಗಳು ಯಥಾಸ್ಥಿತಿಯಲ್ಲೇ ಉಳಿದುಕೊಂಡಿದ್ದವು. ಉದಾಹರಣೆಗೆ ನಗರದ ಪ್ರಧಾನ ರಸ್ತೆಯು ಅಂದಿನ ದಿನಗಳಲ್ಲಿ ಮಡಿಕೇರಿ - ಮಂಗಳೂರು ರಾಜರಸ್ತೆಯೆಂದು ಕರೆಯಲ್ಪಡುತ್ತಿದ್ದರೂಇದಕ್ಕೆ ರಾಜಯೋಗ ಮಾತ್ರ ಲಭಿಸಿರಲೇ ಇಲ್ಲ. ಪ್ರಧಾನ ರಸ್ತೆಯ ಗತಿ ಹೀಗಿದ್ದಲ್ಲಿ, ಉಳಿದ ಸಣ್ಣಪುಟ್ಟ ರಸ್ತೆಗಳ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ.

 ಗತದಶಕದಲ್ಲಿ ಎ.ಡಿ.ಬಿ ಸಾಲ ಆಧಾರಿತ ಕುಡ್ಸೆಂಪ್ ಯೋಜನೆಗಳು ಅನುಷ್ಠಾನಗೊಳ್ಳುವ ಮುನ್ನ ಅವಸಾನದ ಅಂಚನ್ನು ತಲುಪಿದ್ದ ಆಯ್ದ ರಸ್ತೆಗಳನ್ನು ಸಾಧ್ಯವಿರುವಷ್ಟು ವಿಸ್ತರಿಸಿ ಪುನರ್ನವೀಕರಿಸಲಾಗಿತ್ತು. ತದನಂತರ ಸ್ಥಳೀಯ ರಸ್ತೆಗಳು ತಕ್ಕಮಟ್ಟಿಗೆ ಸಂಚಾರಯೋಗ್ಯ ಎನಿಸಿದ್ದುದು ಸುಳ್ಳೇನಲ್ಲ. ಈ ಯೋಜನೆಯ ಅನುಷ್ಠಾನಕ್ಕೆ ಮುನ್ನ ಮುಂದಿನ ೨೫ ವರ್ಷಗಳಲ್ಲಿ ಬೆಳೆಯಲಿರುವ ಪುತ್ತೂರಿನ ಜನ - ವಾಹನಗಳ ಸಂಖ್ಯೆ ಮತ್ತು ಅನ್ಯ ವಿಚಾರಗಳನ್ನು ಗಮನದಲ್ಲಿರಿಸಿಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರೂ, ಕೇವಲ ೧೦ ವರ್ಷಗಳು ಕಳೆಯುವಷ್ಟರಲ್ಲೇ ಈ ರಸ್ತೆಗಳು ಜನ - ವಾಹನಗಳ ದಟ್ಟಣೆಯನ್ನು ಭರಿಸಲಾಗುತ್ತಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ!.

ಇನ್ನು ನಗರದ ಅನ್ಯ ಸಂಪರ್ಕ ರಸ್ತೆಗಳು ಮತ್ತು ಸಣ್ಣಪುಟ್ಟ ರಸ್ತೆಗಳನ್ನು ವಿಸ್ತರಿಸಬೇಕಿದ್ದಲ್ಲಿ, ಇವುಗಳ ಇಕ್ಕೆಲಗಳಲ್ಲಿರುವ ಜಮೀನು – ಕಟ್ಟಡಗಳ ಮಾಲಕರು ಒಂದಿಷ್ಟು ಜಮೀನನ್ನು ಬಿಟ್ಟುಕೊಡಬೇಕಾಗುವುದು. ಅಥವಾ ನಗರಸಭೆಯು ಅವಶ್ಯಕ ಪ್ರಮಾಣದ ಜಮೀನನ್ನು ಸೂಕ್ತ ಪರಿಹಾರವನ್ನು ನೀಡಿ ಖರೀದಿಸಬೇಕಾಗುವುದು. ಪುತ್ತೂರಿನ ಬಹುತೇಕ ರಸ್ತೆಗಳು ಅಗಲ ಕಿರಿದಾಗಿರುವುದರಿಂದ, ರಸ್ತೆಗಳ ವಿಸ್ತರಣೆಗಾಗಿ ಜಮೀನನ್ನು ಖರೀದಿಸುವುದು ಅನಿವಾರ್ಯವೆನಿಸಿದರೂ, ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿರುವ ನಗರಸಭೆಯು ಜಮೀನುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದೆ. ಏಕೆಂದರೆ ಮೂಲ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರ – ರಾಜ್ಯ ಸರ್ಕಾರಗಳ ಅನುದಾನಗಳನ್ನೇ ಅವಲಂಬಿಸಿರುವ ನಗರಸಭೆಯು, ಲಭ್ಯ ಲಕ್ಷಾಂತರ ರೂಪಾಯಿಗಳನ್ನು  ಪರಿಹಾರ ನೀಡುವ ಸಲುವಾಗಿ ಪಾವತಿಸಿದಲ್ಲಿ, ಮೂಲಸೌಕರ್ಯಗಳ ಅಭಿವೃದ್ಧಿ ಯೋಜನೆಗಳು ಮೂಲೆಗುಂಪಾಗುವುದರಲ್ಲಿ ಸಂದೇಹವಿಲ್ಲ.

ಹಲವಾರು ವರ್ಷಗಳ ಹಿಂದೆ ರಸ್ತೆಗಲ ವಿಸ್ತರಣೆಗಾಗಿ ಜಮೀನನ್ನು ಸ್ವಾಧೀನ ಪಡಿಸುವ ಅಥವಾ ಮಾಲಕರು ತಾವಾಗಿ ಬಿಟ್ಟುಕೊಡುವ ಪದ್ಧತಿ ಇರಲಿಲ್ಲ. ಆದರೆ ಇಂದು ಈ ಬಗ್ಗೆ ಸರ್ಕಾರಗಳು ಸೂಕ್ತ ನೀತಿನಿಯಮಗಳನ್ನು ರೂಪಿಸಿದ್ದರೂ, ಇವುಗಳನ್ನು ಉಲ್ಲಂಘಿಸುವ ಪ್ರಕರಣಗಳು ಸಾಕಷ್ಟಿವೆ.ಅದರಲ್ಲೂ  ನೂತನ ವಸತಿ – ವಾಣಿಜ್ಯ ಕಟ್ಟಡಗಳು ಮತ್ತು ಬಡಾವಣೆಗಳನ್ನು ನಿರ್ಮಿಸುವಾಗ ಇಂತಹ ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿಗಳು, ಸಾಮಾನ್ಯವಾಗಿ ಭ್ರಷ್ಟ ಅಧಿಕಾರಿಗಳ ನೆರವು ಅಥವಾ ರಾಜಕೀಯ ಪ್ರಭಾವವನ್ನು ಬಳಸುವುದು ಜನಸಾಮಾನ್ಯರಿಗೂ ತಿಳಿದಿದೆ. ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ, ಈ ಸಮಸ್ಯೆಯು ಪರಿಹಾರಗೊಳ್ಳದೇ ಇರುವುದರೊಂದಿಗೆ  ಇನ್ನಷ್ಟು ತೊಂದರೆಗಳಿಗೆ ಕಾರಣವೆನಿಸುತ್ತದೆ.

ಇಷ್ಟು ಮಾತ್ರವಲ್ಲ, ಇತ್ತೀಚಿನ ಕೆಲವರ್ಷಗಳಿಂದ ನೂತನ ವಸತಿ – ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಮುನ್ನ ಸ್ಥಳೀಯ ಸಂಸ್ಥೆಯ ಅನುಮತಿಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ನೀಡುವ ನಕ್ಷೆಯಲ್ಲಿ, ಕಟ್ಟಡದ ತಳಅಂತಸ್ತಿನಲ್ಲಿ ವಾಹನಗಳ ನಿಲುಗಡೆಗಾಗಿ ಸ್ಥಳವನ್ನು ಮೀಸಲಿಟ್ಟಿರುವುದನ್ನು ತೋರಿಸಲಾಗುತ್ತದೆ. ಆದರೆ ಕಟ್ಟಡ ಸಿದ್ಧಗೊಂಡ ಬಳಿಕ ಈ ಜಾಗವನ್ನು ಅಂಗಡಿಗಳ ನಿರ್ಮಾಣಕ್ಕಾಗಿ ಬಳಸಲಾಗುತ್ತಿದೆ. ವಿಶೇಷವೆಂದರೆ ಇಂತಹ ಅಂಗಡಿಗಳ ಮಾಲಕರು ಅಥವಾ ಬಾಡಿಗೆದಾರರಿಗೆ ತಮ್ಮ ವ್ಯಾಪಾರವನ್ನು ನಡೆಸಲು ಪರವಾನಿಗೆಯನ್ನು ನೀಡುತ್ತವೆ!. ತತ್ಪರಿಣಾಮವಾಗಿ ಇಂತಹ ಕಟ್ಟಡಗಳ ಮುಂದಿರುವ ರಸ್ತೆಗಳಲ್ಲಿ ಹಲವಾರು ವಾಹನಗಳು  ತಂಗುವುದರಿಂದ, ಜನ – ವಾಹನಗಳ ಸುಗಮ ಸಂಚಾರಕ್ಕೆ ಅದಚನೆಯಾಗುತ್ತದೆ. ಈ ಬಗ್ಗೆ ದೂರು ನೀಡಿದರೂ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಅಧಿಕಾರಿಗಳು, ಇವರ ವಾಣಿಜ್ಯ ಪರವಾನಿಗೆಯನ್ನು ಮಾತ್ರ ರದ್ದುಪಡಿಸದೇ ಇರುವುದು ನಂಬಲು ಅಸಾಧ್ಯವೆನಿಸುತ್ತದೆ.

ಇದಲ್ಲದೇ ನಗರದ ಕೆಲ ಒಳರಸ್ತೆಗಳನ್ನು ಪುನರ್ನವೀಕರಿಸಿದರೂ, ಇವುಗಳ ಇಕ್ಕೆಲಗಳಲ್ಲಿ ಮಳೆನೀರು ಹರಿವ ಚರಂಡಿಗಳನ್ನು ನಿರ್ಮಿಸಿಲ್ಲ ಎಂದು ಅನೇಕರು ದೂರುತ್ತಾರೆ. ಇಂತಹ ರಸ್ತೆಗಳು ಕೇವಲ ಒಂದು ಘನ ವಾಹನ ಸಂಚರಿಸುವಷ್ಟೇ ಅಗಲವಿದ್ದು, ಚರಂಡಿಗಳನ್ನು ನಿರ್ಮಿಸಿದಲ್ಲಿ ರಸ್ತೆ ಇನ್ನಷ್ಟು ಕಿರಿದಾಗಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಉಪಯುಕ್ತವೆನಿಸುತ್ತದೆ. ಇಂತಹ ರಸ್ತೆಗಳ ಇಕ್ಕೆಲಗಳ ನಿವಾಸಿಗಳು ಉದಾರ ಮನೋಭಾವದಿಂದ ಒಂದಿಷ್ಟು ಜಮೀನನ್ನು ನೀಡಿದಲ್ಲಿ,  ರಸ್ತೆಯೊಂದಿಗೆ ಚರಂಡಿಗಳ ನಿರ್ಮಾಣಕ್ಕೆ ಅನುಕೂಲವಾಗುತ್ತದೆ. ಜೊತೆಗೆ ರಸ್ತೆಗಳು ಸುದೀರ್ಘಕಾಲ ಬಾಳ್ವಿಕೆ ಬರುತ್ತವೆ.

ಕೊನೆಯ ಮಾತು

ಅದೇನೇ ಇರಲಿ, ಪ್ರಸ್ತುತ ಪುತ್ತೂರು ನಗರಸಭೆಯು ರಸ್ತೆಗಳ ವಿಸ್ತರಣೆಗಾಗಿ ಯೋಜನೆಗಳನ್ನು ಹಮ್ಮಿಕೊಳ್ಳುವ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ಜೊತೆಗೆ ರಸ್ತೆಗಳ ವಿಸ್ತರಣೆಗಾಗಿ ಒಂದಿಷ್ಟು ಜಮೀನನ್ನು ಬಿಟ್ಟುಕೊಡುವಂತೆ ಮನವೊಲಿಸಬೇಕಿದೆ. ಇದಕ್ಕೂ ಮುನ್ನ ಅನಧಿಕೃತ ಬಡಾವಣೆಗಳು ಹಾಗೂ ವಾಹನಗಳ ತಂಗುದಾಣಕ್ಕಾಗಿ ಸ್ಥಳವನ್ನು ಮೀಸಲಿಡದ ವಾಣಿಜ್ಯ ಮತ್ತು ಬಹುಮಹಡಿ ಕಟ್ಟಡಗಳ ಮಾಲಕರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳಬೇಕಿದೆ. ಅಧಿಕಾರಿಗಳು ಇಂತಹ ಕಾರ್ಯಾಚರಣೆಯನ್ನು ನಡೆಸಿದಲ್ಲಿ ಮತ್ತು ಜನಸಾಮಾನ್ಯರೂ ಇದಕ್ಕೆ ಸ್ಪಂದಿಸಿದಲ್ಲಿ, ಅಗಲಕಿರಿದಾದ ರಸ್ತೆಗಳಿಂದ ಉದ್ಭವಿಸುವ ಸಮಸ್ಯೆಗಳು ನಿಶ್ಚಿತವಾಗಿಯೂ ಅಂತ್ಯಗೊಳ್ಳಲಿವೆ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



Saturday, May 16, 2015

SAKKAREYA ATISEVANE...........



ಸಕ್ಕರೆಯ ಸೇವನೆಯನ್ನು ನಿಯಂತ್ರಿಸಿ : ನಿಮ್ಮ ರಕ್ಷಿಸಿ ಆರೋಗ್ಯವನ್ನು ರಕ್ಷಿಸಿ 

ಬಾಯಲ್ಲಿ ನೀರೂರಿಸುವ ಸ್ವಾದಿಷ್ಟ ಸಿಹಿತಿಂಡಿಗಳಿಗೆ ಮಾರುಹೋಗದ ಭಾರತೀಯರೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಅದರಲ್ಲೂ ಹಿಂದೂ ಧರ್ಮೀಯರು ಹುಟ್ಟಿನಿಂದ ಆರಂಭಿಸಿ ಸಾವಿನ ತನಕ, ಆಚರಿಸುವ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಸಿಹಿತಿಂಡಿಗಳಿಗೆ ಆದ್ಯತೆಯನ್ನು ನೀಡುತ್ತಾರೆ. ಈ ರೀತಿಯ ಸಿಹಿಯಾದ ಖಾದ್ಯಪೇಯಗಳನ್ನು ಅತಿಯಾಗಿ ಸೇವಿಸುವ ಭಾರತೀಯರು," ಪರಸ್ಪರ ಹರಡದ ಕಾಯಿಲೆ " (Non communicable diseases - NCD ) ಗಳಿಗೆ ಸುಲಭದಲ್ಲೇ ಈಡಾಗುತ್ತಿರುವುದು ಸುಳ್ಳೇನಲ್ಲ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು, ಇದನ್ನು ನಿಯಂತ್ರಿಸುವ ಸಲುವಾಗಿ ನೂತನ ಮಾರ್ಗದರ್ಶಿ ಸೂತ್ರಗಳನ್ನು ಇತ್ತೀಚಿಗೆ ಘೋಷಿಸಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಅನಾರೋಗ್ಯಕರ ಜೀವನಶೈಲಿ

ಭಾರತೀಯರು ಸೇವಿಸುವ ಆಹಾರ ಮತ್ತು ಅನುಸರಿಸುವ ಜೀವನಶೈಲಿಗಳ ಬಗ್ಗೆ ವೈದ್ಯಕೀಯ ತಜ್ಞರು ಪದೇಪದೇ ಎಚ್ಚರಿಕೆಯನ್ನು ನೀಡುತ್ತಲೇ ಇರುತ್ತಾರೆ. ಏಕೆಂದರೆ ನಾವಿಂದು ಸೇವಿಸುವ ಆಹಾರದಲ್ಲಿ ಉಪ್ಪು, ಎಣ್ಣೆ, ಬೆಣ್ಣೆ,ತುಪ್ಪ ಮತ್ತು ಸಕ್ಕರೆಗಳ ಪ್ರಮಾಣ ಅತಿಯಾಗಿದೆ. ಅಂತೆಯೇ ಮಧ್ಯಮ ಮತ್ತು ಶ್ರೀಮಂತ ವರ್ಗದವರ ನಿಷ್ಕ್ರಿಯ ಜೀವನಶೈಲಿಯಿಂದಾಗಿ, ಪರಸ್ಪರ ಹರಡದ ಗಂಭೀರ ಕಾಯಿಲೆಗಳ ಪ್ರಮಾಣವೂ ಸ್ವಾಭಾವಿಕವಾಗಿಯೇ ಹೆಚ್ಚುತ್ತಲೇ ಇದೆ. ಅದರಲ್ಲೂ ನಮ್ಮ ದೇಶದಲ್ಲಿ ಮಧುಮೇಹ ವ್ಯಾಧಿಯಿಂದ ಪೀಡಿತರಾದ ಜನರ ಸಂಖ್ಯೆ ಅನಿಯಂತ್ರಿತವಾಗಿ ವೃದ್ಧಿಸಿದ್ದು, ಭಾರತವನ್ನು “ ವಿಶ್ವದ ಮಧುಮೇಹಿಗಳ ರಾಜಧಾನಿ “ ಎಂದೇ ಗುರುತಿಸಲಾಗಿದೆ. ಇದೇ ಕಾರಣದಿಂದಾಗಿ ಈ ಗಂಭೀರ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜನಸಾಮಾನ್ಯರು ವೈದ್ಯಕೀಯ ತಜ್ಞರ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ ಸೂಚನೆಗಳನ್ನು ಪರಿಪಾಲಿಸಬೇಕಾಗಿದೆ. ಇದರ ಅಂಗವಾಗಿ ನಾವಿಂದು ಅತಿಯಾಗಿ ಸೇವಿಸುತ್ತಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲೇಬೇಕಾಗಿದೆ.

ಸಕ್ಕರೆಯ ಸೇವನೆಯನ್ನು ನಿಯಂತ್ರಿಸಿ

ಪರಸ್ಪರ ಹರಡದ ಕಾಯಿಲೆಗಳನ್ನು ನಿಯಂತ್ರಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಸೂಚಿಸಿರುವ ಮಾರ್ಗದರ್ಶಿ ಸೂತ್ರಗಳಂತೆ, ನೀವು ಒಂದು ದಿನದಲ್ಲಿ ಸೇವಿಸುವ ಸಕ್ಕರೆಯ ಪ್ರಮಾಣವು  ನಿಮ್ಮ ದೈನಂದಿನ ಶಾರೀರಿಕ ಚಟುವಟಿಕೆಗಳಿಗೆ ಅಗತ್ಯವೆನಿಸುವ " ಶಕ್ತಿ " ( Energy ) ಯ ಪ್ರಮಾಣದ ಶೇ. ೧೦ ರಷ್ಟು ಮೀರುವಂತಿಲ್ಲ. ಇದರೊಂದಿಗೆ ಮಧ್ಯಮ ಗತಿಯ ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮಕ್ಕಳು ಮತ್ತು ವಯಸ್ಕರು, ಈ ಪ್ರಮಾಣವನ್ನು ಶೇ. ೫ ಕ್ಕೆ, ಅರ್ಥಾತ್, ಸುಮಾರು ೨೫ ಗ್ರಾಂ ಗಳಿಗೆ ಇಳಿಸುವುದು ಹಿತಕರ ಎನ್ನುವ  ಷರತ್ತುಬದ್ಧ ಶಿಫಾರಸನ್ನೂ ಮಾಡಿದೆ.ವಿ..ಸಂಸ್ಥೆಯು ಗ್ಲುಕೋಸ್, ಫ್ರುಕ್ಟೋಸ್ ಗಳಂತಹ ಮೊನೊ ಸಾಕರೈಡ್ಸ್ ಹಾಗೂ ಸೂಕ್ರೋಸ್ ಮತ್ತು ಸಕ್ಕರೆಗಳೊಂದಿಗೆ, ಜೇನುತುಪ್ಪ, ಹಣ್ಣಿನ ರಸಗಳು, ಸಿರಪ್ ಹಾಗೂ ಸಾಂದ್ರೀಕೃತ ಹಣ್ಣುಗಳನ್ನು ಸಕ್ಕರೆಯೆಂದು ಗುರುತಿಸಿದೆ. ಸಕ್ಕರೆಯನ್ನು ಬಳಸಿ ಸಿದ್ಧಪಡಿಸಿದ ಲಘುಪಾನೀಯಗಳಂತಹ ಪೇಯಗಳು ಮತ್ತು ಅತಿಯಾದ ಸಕ್ಕರೆಯ ಅಂಶವನ್ನು ಹೊಂದಿರುವ ಪ್ಯಾಕ್ ಮಾಡಿದ ಆಹಾರಗಳನ್ನೂ ಈ ವರ್ಗದಲ್ಲಿ ಸೇರಿಸಿದೆ. ಇಂತಹ ಆಹಾರಪದಾರ್ಥಗಳ ಸೇವನೆಯನ್ನು ನಿಯಂತ್ರಿಸುವಂತೆ ಸಲಹೆಯನ್ನೂ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರೊಬ್ಬರ ಅಭಿಪ್ರಾಯದಂತೆ ನೀವು ಸೇವಿಸುವ ಸಕ್ಕರೆಯ ಪ್ರಮಾಣವನ್ನು ಕಡಿಮೆಮಾಡಿದಲ್ಲಿ, ಅಧಿಕತೂಕ, ಅತಿಬೊಜ್ಜು,ಮಧುಮೇಹ, ಅಧಿಕ ರಕ್ತದೊತ್ತಡ,ಹೃದ್ರೋಗಗಳು ಮತ್ತು ದಂತಕುಳಿಗಳಂತಹ ಸಮಸ್ಯೆಗಳ ಸಂಭಾವ್ಯತೆಯು ನಿಸ್ಸಂದೇಹವಾಗಿ  ಕಡಿಮೆಯಾಗುವುದು. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿ ಸೂತ್ರಗಳನ್ನು ಇಂತಹ ಪರಸ್ಪರ ಹರಡದ ಕಾಯಿಲೆಗಳ ಸಂಭಾವ್ಯತೆಯ ಅಪಾಯವನ್ನು ಕಡಿಮೆಮಾಡುವ ಉದ್ದೇಶದಿಂದಲೇ ಪ್ರಕಟಿಸಲಾಗಿದೆ.

ನಿಮಗಿದು ತಿಳಿದಿರಲಿ

ವಿಶ್ವ ಆರೋಗ್ಯ ಸಂಸ್ಥೆಯು ನಮ್ಮ ದೈನಂದಿನ ಅವಶ್ಯಕತೆಯ ಶೇ.೧೦ ಕ್ಕೂ ಕಡಿಮೆ ಪ್ರಮಾಣದ ಸಕ್ಕರೆಯನ್ನು ಸೇವಿಸುವಂತೆ ಸೂಚಿಸಿದ್ದರೂ, ತಜ್ಞರು ಹೇಳುವಂತೆ ಭಾರತೀಯರ ಆಹಾರ ಸೇವನಾ ಶೈಲಿಯು ತುಸು ವಿಭಿನ್ನವಾಗಿರುವುದರಿಂದ, ನಾವು ಶೇ. ೫ ರ ಪ್ರಮಾಣವನ್ನು ಅನುಸರಿಸುವುದು ಆರೋಗ್ಯಕರವೆನಿಸುವುದು. ಏಕೆಂದರೆ ಅಧಿಕತಮ ಭಾರತೀಯರು ಸೇವಿಸುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಸಮೃದ್ಧವಾಗಿದ್ದು, ಇದು ಗ್ಲುಕೋಸ್ ಆಗಿ ಪರಿವರ್ತನೆಗೊಳ್ಳುವ ಮೂಲಕ ಶರೀರಕ್ಕೆ ಅಗತ್ಯವಿರುವಷ್ಟು ಸಕ್ಕರೆಯನ್ನು ಪೂರೈಸುತ್ತದೆ. ಹಾಗೂ  ಇದೇ ಕಾರಣದಿಂದಾಗಿ ಭಾರತೀಯರು ಹೆಚ್ಚುವರಿ ಸಕ್ಕರೆಯನ್ನು ಅಥವಾ ಚಾಕಲೆಟ್, ಬಿಸ್ಕೆಟ್, ಸೂಪ್ ಹಾಗೂ ಲಘುಪಾನೀಯ ಇತ್ಯಾದಿಗಳನ್ನು  ಸೇವಿಸುವ ಅವಶ್ಯಕತೆಯೇ ಉದ್ಭವಿಸುವುದಿಲ್ಲ.  

ಉದಾಹರಣೆಗೆ ನೀವು ಗುಟುಕರಿಸುವ ೩೦೦ ಎಂ.ಎಲ್ ಕೋಲಾದಲ್ಲಿ ಸರಿಸುಮಾರು ೩೩ ಗ್ರಾಂ ಸಕ್ಕರೆ ಸೇರಿರುವುದರಿಂದ, ಇಂತಹ ಒಂದು ಪೇಯವನ್ನು ಕುಡಿದ ಬಳಿಕ ಅನ್ಯ ರೂಪದಲ್ಲಿ ಸಕ್ಕರೆಯನ್ನು ಸೇವಿಸಲು ಅವಕಾಶವಿರುವುದಿಲ್ಲ. ಅಕಸ್ಮಾತ್ ಸೇವಿಸಿದರೂ, ಈ ಹೆಚ್ಚುವರಿ ಸಕ್ಕರೆಯು ಅತಿಬೋಜ್ಜಿನ ಸಮಸ್ಯೆಗೆ ಕಾರಣವೆನಿಸುವುದರಲ್ಲಿ ಸಂದೇಹವಿಲ್ಲ. ಅನಿಲ ರಹಿತ ಹಣ್ಣಿನ ರಸಗಳೂ ಸಕ್ಕರೆಯ ಪ್ರಮಾಣದ ವಿಚಾರದಲ್ಲಿ ಕೋಲಾದಂತಹ ಲಘುಪಾನೀಯಗಳಲ್ಲಿ ಇರುವಷ್ಟೇ ಅಥವಾ ಅದಕ್ಕೂ ಅಧಿಕ ಪ್ರಮಾಣದ ಸಕ್ಕರೆಯ ಅಂಶವನ್ನು ಹೊಂದಿರುತ್ತವೆ. ಸುಪ್ರಸಿದ್ಧ ಸಂಸ್ಥೆಯೊಂದು ಭಾರತದಲ್ಲಿ ತಯಾರಿಸಿ ಮಾರಾಟಮಾಡುತ್ತಿರುವ ೩೦೦ ಎಂ.ಎಲ್ ನ ಮಾವಿನ ಹಣ್ಣಿನ ರಸದ ಪೇಯವೊಂದರಲ್ಲ್ಲಿ, ಸುಮಾರು ೪೫ ಗ್ರಾಂ ಸಕ್ಕರೆ ಇರುವುದು. ಇದೇ ಕಾರಣದಿಂದಾಗಿ ಸ ತಾವು ಸೇವಿಸುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಬಯಸುವವರು, ಇಂತಹ ಲಘು  ಪಾನೀಯಗಳು ಹಾಗೂ ಹಣ್ಣಿನ ರಸಗಳ ಸೇವನೆಯನ್ನೇ ವರ್ಜಿಸಬೇಕಾಗುತ್ತದೆ.

ನೀವು ಮಾರುಕಟ್ಟೆಯಲ್ಲಿ ಖರೀದಿಸಿ ಸೇವಿಸುವ ಬಹುತೇಕ ಸಂಸ್ಕರಿತ ಆಹಾರಗಳ ತಯಾರಿಕೆಯಲ್ಲಿ ಬಳಸುವ “ ಸಂರಕ್ಷಕ ರಾಸಾಯನಿಕ ದ್ರವ್ಯ “ ಗಳ ಅಸ್ವಾದಿಷ್ಟ ರುಚಿಯನ್ನು ಮರೆಮಾಚುವ ಸಲುವಾಗಿ, ಇವುಗಳಲ್ಲಿ ಸಕ್ಕರೆಯನ್ನು ತುಸು ಅಧಿಕ ಪ್ರಮಾಣದಲ್ಲೇ ಬೆರೆಸಲಾಗುತ್ತದೆ. ನೀವು ಸಾಮಾನ್ಯವಾಗಿ ಬಳಸುವ ಒಂದು ಚಮಚ ಟೊಮೆಟೋ ಕೆಚಪ್ ನಲ್ಲಿ ೪ ಗ್ರಾಂ ಸಕ್ಕರೆ ಇರುತ್ತದೆ. ಆದುದರಿಂದ ನೀವು ಒಂದು ದಿನದಲ್ಲಿ ಸೇವಿಸುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಬೇಕಿದ್ದಲ್ಲಿ, ನೀವು ಸೇವಿಸುವ ಪ್ರತಿಯೊಂದು ಖಾದ್ಯಪೇಯಗಳಲ್ಲಿ ಇರುವ ಸಕ್ಕರೆಯ ಪ್ರಮಾಣದ ಬಗ್ಗೆ ಮಾಹಿತಿಯನ್ನು ತಿಳಿದಿರುವುದು ಉಪಯುಕ್ತವೆನಿಸುವುದು. ದೆಹಲಿಯ ಉಚ್ಛ ನ್ಯಾಯಾಲಯವು ನೀಡಿದ್ದ ತೀರ್ಪಿನಂತೆ ಗ್ರಾಹಕ ಉತ್ಪನ್ನಗಳ ಲೇಬಲ್ ಗಳ ಮೇಲೆ ಇವುಗಳಲ್ಲಿರುವ ಪೋಷಕಾಂಶಗಳು ಮತ್ತು ಇದರ ತಯಾರಿಕೆಯಲ್ಲಿ ಬಳಸಲಾಗಿರುವ ಅನ್ಯ ದ್ರವ್ಯಗಳ ಹೆಸರು ಮತ್ತು ಪ್ರಮಾಣಗಳನ್ನು ಮುದ್ರಿಸಬೇಕೆಂದು ಶಿಫಾರಸು ಮಾಡಲಾಗಿದೆ. ಉಚ್ಛ ನ್ಯಾಯಾಲಯದ ಅಭಿಪ್ರಾಯದಂತೆ ಇಂತಹ ಉತ್ಪನ್ನಗಳ ಜಾಹೀರಾತುಗಳನ್ನು ಮತ್ತು ಖ್ಯಾತನಾಮ ವ್ಯಕ್ತಿಗಳು ಇವುಗಳಲ್ಲಿ ರೂಪದರ್ಶಿಗಳಾಗಿ ಭಾಗವಹಿಸಿ, ಇವುಗಳನ್ನು ಅನುಮೋದಿಸುವುದನ್ನು ನಿಯಂತ್ರಿಸುವುದು ಉಪಯುಕ್ತವೆನಿಸುವುದು. ಅನೇಕ ದೇಶಗಳಲ್ಲಿ ಇಂತಹ ಕ್ರಮಗಳನ್ನು ಕಡ್ದಾಯವಾಗಿ ಅನುಷ್ಠಾನಿಸಲಾಗುತ್ತಿದೆ.

ಸಕ್ಕರೆ ಮತ್ತು ಅನಾರೋಗ್ಯ  

ವೈದ್ಯಕೀಯ ತಜ್ಞರು ಹೇಳುವಂತೆ ಸಕ್ಕರೆಯ ಅತಿಸೇವನೆ ಹಾಗೂ ಪರಸ್ಪರ ಹರಡದ ಕಾಯಿಲೆಗಳ ಸಂಭಾವ್ಯತೆಯ ಅಪಾಯಗಳ ನಡುವೆ ಅವಿನಾಭಾವ ಸಂಬಂಧವಿದೆ. ನಮ್ಮ ದೇಶದಲ್ಲಿ ಮಧುಮೇಹ ವ್ಯಾಧಿಯು ವ್ಯಾಪಕವಾಗಿ ಕಂಡುಬರುತ್ತಿದ್ದು, ಸುಮಾರು ೬೫ ದಶಲಕ್ಷಕ್ಕೂ ಅಧಿಕ ಜನರು ಇದರಿಂದ ಬಳಲುತ್ತಿದ್ದಾರೆ. ಅದೇ ರೀತಿಯಲ್ಲಿ ಅಧಿಕತೂಕ ಮತ್ತು ಅತಿಬೋಜ್ಜಿನ ಸಮಸ್ಯೆಗಳೂ ಕಳೆದ ಒಂದೆರಡು ದಶಕಗಳಿಂದ ಸಾಂಕ್ರಾಮಿಕ ಕಾಯಿಲೆಗಳಂತೆ ಹೆಚ್ಚುತ್ತಲೇ ಇವೆ.

೨೦೦೫ ರಿಂದ ೨೦೧೩ ರ ಅವಧಿಯಲ್ಲಿ ನಡೆಸಿದ್ದ ವೈದ್ಯಕೀಯ ಅಧ್ಯಯನಗಳ ವರದಿಗಳಂತೆ, ನಮ್ಮ ದೇಶದಲ್ಲಿ ಅತಿಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯು ಶೇ. ೧೦ ರಿಂದ ೬೫ ರಷ್ಟು ವೃದ್ಧಿಸಿದೆ.ಮತ್ತೊಂದು ಅಧ್ಯಯನದ ವರದಿಯಂತೆ ಭಾರತದಲ್ಲಿ  ಉತ್ಪಾದನೆಯಾಗುತ್ತಿರುವ ಲಘುಪಾನೀಯಗಳ ಪ್ರಮಾಣವು ೨೦೦೮ ರಿಂದ ೨೦೧೩ ರ ಅವಧಿಯಲ್ಲಿ ದುಪ್ಪಟ್ಟಾಗಿತ್ತು!.

ಸಕ್ಕರೆಯನ್ನು ಬಳಸಿ ಸಿದ್ಧಪಡಿಸುವ ಲಘುಪಾನೀಯಗಳ ಅತಿಸೇವನೆಯಿಂದ ಉದ್ಭವಿಸುತ್ತಿರುವ ಅನಾರೋಗ್ಯದ ಸಮಸ್ಯೆಗಳ ಬಗ್ಗೆ ಅರಿವಿರುವ ಇವುಗಳ ಉತ್ಪಾದಕರು, ತಮ್ಮ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವ  ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕೆಲವೊಂದು ಸಣ್ಣಪುಟ್ಟ ತಯಾರಕರು ತಮ್ಮ ಉತ್ಪನ್ನಗಳಲ್ಲಿ ಸಕ್ಕರೆಯ ಬದಲಾಗಿ “ ಕೃತಕ ಮಾಧುರ್ಯಕಾರಕ ರಾಸಾಯನಿಕ ದ್ರವ್ಯ “ ಗಳನ್ನು ಬಳಸುತ್ತಿದ್ದು, ಇವುಗಳು ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವುದರಿಂದ, ಇನ್ನಷ್ಟು ಅಪಾಯಕಾರಿ ಎನಿಸುತ್ತವೆ. ಲಘುಪಾನೀಯಗಳ ಉತ್ಪಾದಕರ ಬಳಿ ಇವುಗಳಲ್ಲಿನ “ ಪೋಷಕಾಂಶ ಮೌಲ್ಯ “ ಗಳ ಬಗ್ಗೆ ಪ್ರಶ್ನಿಸಿದಾಗ, “ ಸಮತೋಲಿತ ಆಹಾರ ಸೇವನೆ “ ಯತ್ತ ತಾವು ಗಮನ ಹರಿಸುವುದಾಗಿ ಉತ್ತರಿಸುವ ಸಂಸ್ಥೆಗಳು, ಅತಿಯಾದ ಸಕ್ಕರೆಯ ಅಂಶಗಳಿರುವ ಲಘುಪಾನೀಯಗಳಿಗೆ ಮತ್ತು ಸಮತೋಲಿತ ಆಹಾರ ಸೇವನೆಗೆ ಏನು ಸಂಬಂಧವಿದೆ ಎನ್ನುವ ವಿಚಾರವನ್ನೇ ಅರ್ಥೈಸಿಕೊಂಡಿಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ.
                                  
ಅದೇನೇ ಇರಲಿ, ಜಂಕ್ ಫುಡ್ ಗಳು, ಲಘುಪಾನೀಯಗಳು ಮತ್ತು ವೈವಿಧ್ಯಮಯ ಸ್ವಾದಿಷ್ಟ ಸಿಹಿತಿಂಡಿಗಳ ತಯಾರಕರು ತಮ್ಮ ಉತ್ಪನ್ನಗಳ ಬಗ್ಗೆ ಏನನ್ನೇ ಹೇಳಿದರೂ, ಇಂತಹ ಆಹಾರಗಳ ಸೇವನೆಯನ್ನು ವರ್ಜಿಸುವುದು ಅಥವಾ ಕನಿಷ್ಠಪಕ್ಷ ನಿಯಂತ್ರಿಸುವುದು ನಿಮ್ಮ ಆರೋಗ್ಯದ ಹಿತದೃಷ್ಠಿಯಿಂದ ಅತ್ಯಂತ ಉಪಯುಕ್ತವೆನಿಸಲಿರುವುದು. ಅಂತೆಯೇ ವೈದ್ಯಕೀಯ ತಜ್ಞರು ಮತ್ತು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆಯನ್ನು ಅರ್ಥಿಸಿಕೊಂಡು, ಇವರ ಸಲಹೆಯನ್ನು ಪರಿಪಾಲಿಸುವುದು ನಿಸ್ಸಂದೇಹವಾಗಿಯೂ ಆರೋಗ್ಯಕರ ಎನಿಸುವುದು.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು. 






Wednesday, May 6, 2015

SWACH BHAARATH ABHIYAAN



-

       ಸ್ವಚ್ಛ ಭಾರತ ಅಭಿಯಾನ ಮುಗಿದುಹೋಯಿತು ನೇತಾರರ ಪ್ರಹಸನ !

ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನವನ್ನು ಸ್ವತಃ ಕಸವನ್ನು ಗುಡಿಸುವ ಮೂಲಕ ಉದ್ಘಾಟಿಸಿ ಏಳು ತಿಂಗಳುಗಳೇ ಕಳೆದಿವೆ. ಗತವರ್ಷದ ಗಾಂಧೀ ಜಯಂತಿಯಂದು ದೇಶದಾದ್ಯಂತ ಆರಂಭವಾಗಿದ್ದ ಈ ಅಭಿಯಾನವನ್ನು ವಿವಿಧ ರಾಜ್ಯಗಳಲ್ಲಿ ಉದ್ಘಾಟಿಸಿದ್ದ ರಾಜಕೀಯ ನೇತಾರರು, ಇದೀಗ ಕಣ್ಮರೆಯಾಗಿದ್ದಾರೆ. ಕೇವಲ ಪ್ರಚಾರಕ್ಕಾಗಿ ಪೊರಕೆಯನ್ನು ಹಿಡಿದು " ಕಸವನ್ನು ಗುಡಿಸಿದಂತೆ " ನಟಿಸಿದ್ದ ಈ ನೇತಾರರಿಗೆ, ಅಭಿಯಾನದ ಯಶಸ್ಸಿಗಿಂತಲೂ, ವೈಯುಕ್ತಿಕ ಪ್ರಚಾರವೇ ಪ್ರಮುಖವಾಗಿತ್ತು. ಅಂತೆಯೇ ಕಾರ್ಯಕ್ರಮವನ್ನು ಉದ್ಘಾಟಿಸುವ ಸಂದರ್ಭದಲ್ಲಿ ಘೋಷಿಸಿದ್ದಂತೆ ಇನ್ನು ಮುಂದೆ ವಾರದಲ್ಲೊಮ್ಮೆ ಅಥವಾ ತಿಂಗಳಲ್ಲಿ ಒಂದುಬಾರಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಾವು ಸ್ವತಃ ಭಾಗಿಯಾಗುವ ಮೂಲಕ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಗೊಳಿಸಲು ಶ್ರಮಿಸುವುದಾಗಿ ಘೋಷಿಸಿದ್ದ ನೇತಾರರೆಲ್ಲರೂ, ಕಳೆದ ಹಲವಾರು ತಿಂಗಳುಗಳಿಂದ ಕಣ್ಮರೆಯಾಗಿದ್ದಾರೆ. ಇದರೊಂದಿಗೆ ಅಭಿಯಾನಕ್ಕೆ ಬೆಂಬಲವನ್ನು ಸೂಚಿಸಿದ್ದ ಅನೇಕ ಸಂಘಟನೆಗಳು ಮತ್ತು ವ್ಯಕ್ತಿಗಳೂ ಇದನ್ನು ನಿರ್ಲಕ್ಷಿಸಿದ್ದಾರೆ. ಅಭಿಯಾನ ಪ್ರಾರಂಭವಾದ ಬಳಿಕ ಸುಮಾರು ಒಂದೆರಡು ತಿಂಗಳುಗಳ ಕಾಲ ಮಾಧ್ಯಮಗಳಲ್ಲಿ ಪದೇಪದೇ ಪ್ರಕಟವಾಗುತ್ತಿದ್ದ ಸ್ವಚ್ಛತಾ ಕಾರ್ಯಕ್ರಮಗಳ ಫೋಟೋಗಳು ಮತ್ತು ವಿಡಿಯೋಗಳೂ ಕಣ್ಮರೆಯಾಗಿವೆ. ಭಾರತೀಯರ " ಆರಂಭಶೂರತ್ವ "  ಹಾಗೂ ಪ್ರಚಾರಪ್ರಿಯತೆಗೆ ಇದೊಂದು ಉತ್ತಮ ಉದಾಹರಣೆಯೂ ಹೌದು!.

ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು, ಬೆರಳೆಣಿಕೆಯಷ್ಟು ಸ್ವಯಂ ಸೇವಾ ಸಂಘಟನೆಗಳು ಮತ್ತು ವೈಯುಕ್ತಿಕವಾಗಿ ಹಾಗೂ ಸ್ವಯಂಪ್ರೇರಿತವಾಗಿ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳನ್ನು ಹೊರತುಪಡಿಸಿ, ಯಾರೊಬ್ಬರೂ ಇದರಲ್ಲಿ ಭಾಗವಹಿಸುತ್ತಿಲ್ಲ. ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರೆದಲ್ಲಿ, ಮುಂದಿನ ಕೆಲವೇ ತಿಂಗಳುಗಳಲ್ಲಿ ಸ್ವಚ್ಛ ಭಾರತ ಅಭಿಯಾನವು ಸ್ಥಗಿತಗೊಳ್ಳಲಿದೆ.

ಪ್ರಚಾರದ  ಪ್ರಹಸನ

ಸ್ವಚ್ಛ ಭಾರತ ಅಭಿಯಾನಕ್ಕೆ ಮುನ್ನ ತಮ್ಮ ಜೀವಿತಾವಧಿಯಲ್ಲೇ ಪೊರಕೆಯನ್ನು ಕೈಯ್ಯಲ್ಲಿ ಹಿಡಿದು ಕಸವನ್ನು ಗುಡಿಸಿರದ ಕೆಲ ರಾಜಕೀಯ ನೇತಾರರು, ಕೇವಲ ಮಾಧ್ಯಮಗಳ ಮೂಲಕ ಪುಕ್ಕಟೆ ಪ್ರಚಾರವನ್ನು ಗಳಿಸುವ ಸಲುವಾಗಿಯೇ ಇದರಲ್ಲಿ ಭಾಗವಹಿಸಿದ್ದುದು ಸುಳ್ಳೇನಲ್ಲ. ಈ ಸಂದರ್ಭದಲ್ಲಿ ಕೆಲವರು ಮೂಗುಬಾಯಿಗಳನ್ನು ಮುಚ್ಚುವ ಗವುಸು ಹಾಗೂ ಕೈಗವುಸುಗಳನ್ನು ಧರಿಸಿದ್ದಲ್ಲಿ, ಇನ್ನು ಕೆಲವರು ಘೋಷಣೆಗಳನ್ನು ಮುದ್ರಿಸಿದ್ದ ಟೋಪಿಗಳುಟೀ ಶರ್ಟ್ ಮತ್ತು ಬಣ್ಣಬಣ್ಣದ ಬ್ಯಾಡ್ಜ್ ಧರಿಸಿ ಪೊರಕೆಯನ್ನು ಹಿಡಿದಿದ್ದರು. ಮಾಧ್ಯಮದ ಪ್ರತಿನಿಧಿಗಳ ಕ್ಯಾಮರಾಗಳತ್ತ ಗಮನವಿರಿಸಿದ್ದ ಅನೇಕ ನೇತಾರರು, ಕಸವೇ ಇಲ್ಲದ ಜಾಗಗಳಲ್ಲಿ ಹಾಗೂ ನೆಲದಿಂದ ತುಸು ಎತ್ತರದಲ್ಲಿ ಪೊರಕೆಯನ್ನು ಆಡಿಸುತ್ತಿದ್ದುದು ಇವರ ಪ್ರಹಸನಕ್ಕೆ ಸಾಕ್ಷಿಯಾಗಿತ್ತು!. ಈ ದೃಶ್ಯಗಳನ್ನು ಕಿರುಪರದೆಯ ಮೇಲೆ ಕಂಡಿದ್ದ ವೀಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು.

ವಿಶೇಷವೆಂದರೆ ಉದ್ಘಾಟನಾ ಸಮಾರಂಭ ಮುಗಿದೊಡನೆ ಸ್ಥಳದಿಂದ ನಿರ್ಗಮಿಸಿದ್ದ ನೇತಾರರು, ಮತ್ತೆಂದೂ ಅತ್ತ ತಲೆಹಾಕಿರಲೇ ಇಲ್ಲ. ಮೋದಿಯವರು ಅಪೇಕ್ಷಿಸಿದ್ದಂತೆ ವಾರದಲ್ಲಿ ಎರಡು ಘಂಟೆಗಳಂತೆ, ವರ್ಷದಲ್ಲಿ ನೂರು ಘಂಟೆಗಳ ಸಮಯವನ್ನು ಸ್ವಚ್ಛತೆಗಾಗಿ ಮೀಸಲಿಡುವಷ್ಟು ವ್ಯವಧಾನವೂ ಇವರಲ್ಲಿಲ್ಲ. ಆದರೆ ದೇಶದ ಜನತೆ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಶ್ರಮಿಸುವಂತೆ ಭಾಷಣ ಬಿಗಿಯಲು ನಮ್ಮ ನೇತಾರರು ಮರೆತಿರಲಿಲ್ಲ!.

ಪ್ರಾರಂಭಿಕ ಹಂತದಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿನ ಸ್ಥಳೀಯ ಸಂಸ್ಥೆಗಳು ಮತ್ತು ಜನಸಾಮಾನ್ಯರು ಅಭಿಯಾನದ ಅಂಗವಾಗಿ ಸ್ವಚ್ಛತೆಯತ್ತ ಗಮನವನ್ನು ಹರಿಸಿದ್ದ ಪರಿಣಾಮವಾಗಿ ಅಲ್ಲಲ್ಲಿ ಕಾಣಿಸುತ್ತಿದ್ದ ಕಸದ ರಾಶಿಗಳು ಕಣ್ಮರೆಯಾಗಿದ್ದವು. ಆದರೆ ಒಂದೆರಡು ತಿಂಗಳುಗಳು ಕಳೆಯುವಷ್ಟರಲ್ಲೇ, ಕಣ್ಣು ಹಾಯಿಸಿದಲ್ಲೆಲ್ಲಾ ತ್ಯಾಜ್ಯಗಳ ರಾಶಿಗಳು ಕಾಣಸಿಗುತ್ತಿರುವುದು ಸತ್ಯ. ಈ ತ್ಯಾಜ್ಯಗಳಿಂದಾಗಿ ಸುತ್ತಮುತ್ತಲ ಪರಿಸರದೊಂದಿಗೆ ತಮ್ಮ ಆರೋಗ್ಯವೂ ಕೆಡುತ್ತಿರುವುದು ಜನಸಾಮಾನ್ಯರಿಗೆ ತಿಳಿಯದ ವಿಚಾರವೇನಲ್ಲ. ಆದರೂ ತಮ್ಮ ಮನೆಮಂದಿಯ ಮತ್ತು ದೇಶದ ಪ್ರಜೆಗಳ ಆರೋಗ್ಯದ ಹಿತದೃಷ್ಠಿಯಿಂದ ಸ್ವಚ್ಛತೆಯನ್ನು ಕಾಪಾಡಲು ಕಿಂಚಿತ್ ಸಮಯವನ್ನು ವಿನಿಯೋಗಿಸಲು ಅಧಿಕತಮ ಜನರು ಸಿದ್ಧರಿಲ್ಲ!.

ಅಪಾಯಗಳಿಗೆ ಆಹ್ವಾನ

ಸ್ವಚ್ಛತೆ ಮತ್ತು ಮನುಷ್ಯನ ಆರೋಗ್ಯಗಳಿಗೆ ಅವಿನಾಭಾವ ಸಂಬಂಧವಿದೆ. ನಮ್ಮ ವೈಯುಕ್ತಿಕ ಮತ್ತು ಸುತ್ತಮುತ್ತಲ ಪರಿಸರದ ಸ್ವಚ್ಛತೆಗಳಿಗೆ ಅನುಗುಣವಾಗಿ ನಮ್ಮ ಆರೋಗ್ಯ ಅಥವಾ ಅನಾರೋಗ್ಯಗಳ ಸ್ಥಿತಿಗತಿಗಳು ಬದಲಾಗುತ್ತಲೇ ಇರುತ್ತವೆ. ಅಂತೆಯೇ ನಾವಿಂದು ಅತಿಯಾಗಿ ಉತ್ಪಾದಿಸಿ ಅವೈಜ್ಞಾನಿಕವಾಗಿ ಎಸೆದುಬಿಡುವ ಅಗಾಧ ಪ್ರಮಾಣದ ತ್ಯಾಜ್ಯಗಳು ಪರಿಸರದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿವೆ. ತತ್ಪರಿಣಾಮವಾಗಿ ಜಾಗತಿಕ ತಾಪಮಾನದ ಹೆಚ್ಚಳ, ಹವಾಮಾನದ ವ್ಯತ್ಯಯಗಳೊಂದಿಗೆ, ವೈವಿಧ್ಯಮಯ ಸಾಂಕ್ರಾಮಿಕ ಮತ್ತು ಮಾರಕ ಕಾಯಿಲೆಗಳ ಹಾವಳಿ ಇನ್ನಷ್ಟು ಹೆಚ್ಚುತ್ತಿದೆ. ಇದೇ ವರ್ಷದ ಮಾರ್ಚ್ ತಿಂಗಳಿನ ಮಧ್ಯಭಾಗದ ತನಕ ಚಳಿಗಾಲ ಮುಂದುವರೆದಿದ್ದು, ಹಠಾತ್ ಬೇಸಗೆಯ ಧಗೆ ಆರಂಭವಾಗಿರುವುದು ಮತ್ತು ಇದೀಗ ಬೇಸಗೆಯ ದಿನಗಳಲ್ಲಿ ಅಕಾಲಿಕ ಮಳೆ ಸುರಿಯುತ್ತಿರಲು ಅಪರಿಮಿತ ತ್ಯಾಜ್ಯಗಳ ಉತ್ಪಾದನೆಯೂ ಒಂದು ಪ್ರಧಾನ ಕಾರಣವೆನಿಸುತ್ತಿದೆ. ಅಂತೆಯೇ ಒಂದೆಡೆ ಕುಂಭದ್ರೋಣ ಮಳೆ ಸುರಿಯುತ್ತಿದ್ದಲ್ಲಿ, ಮತ್ತೊಂದೆಡೆ ಬರದ ಬಾಧೆಯಿಂದಾಗಿ ಕುಡಿಯುವ ನೀರಿಗೂ ತತ್ವಾರವಾಗುತ್ತಿದೆ. ಇವೆಲ್ಲವನ್ನೂ ಕಣ್ಣಾರೆ ಕಂಡು ಅನುಭವಿಸಿದರೂ, ಸಮಸ್ಯೆಯ ಮೂಲ ಕಾರಣವನ್ನು ಪರಿಹರಿಸುವ ನಿಟ್ಟಿನಲ್ಲಿ ಜನಸಾಮಾನ್ಯರು ಸಹಕರಿಸದೇ ಇರುವುದರಿಂದಾಗಿ, ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತಿದೆ.

ಪರಿಹಾರವೇನು?

ನಾವಿಂದು ಅನಾವಶ್ಯಕವಾಗಿ ಹಾಗೂ ಅತಿಯಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣ, ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಜನ ಹಾಗೂ ವಾಹನಗಳ ಸಂಖ್ಯೆ, ಪೋಲು ಮಾಡುತ್ತಿರುವ ಅಗಾಧ ಪ್ರಮಾಣದ ನೀರು ಮತ್ತು  ವಾತಾವರಣದಲ್ಲಿ ಬಿಡುಗಡೆ ಮಾಡುತ್ತಿರುವ ಹಸಿರು ಮನೆ ಅನಿಲಗಳ ಪ್ರಮಾಣಗಳನ್ನು ನಿಯಂತ್ರಿಸದೇ ಇದ್ದಲ್ಲಿ, ದೇಶದ ಜನತೆಗೆ ಇನ್ನಷ್ಟು ಸಂಕಷ್ಟಗಳು ಬಾಧಿಸುವುದರಲ್ಲಿ ಸಂದೇಹವಿಲ್ಲ. ಇವೆಲ್ಲಾ ಕಾರಣಗಳಿಂದಾಗಿ, ಕನಿಷ್ಠ ಪಕ್ಷ ನಿಮ್ಮ ಮುಂದಿನ ಸಂತತಿಯ ಹಿತದೃಷ್ಠಿಯಿಂದ  ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗಾಗಿ ಒಂದಿಷ್ಟು ಸಮಯವನ್ನು ವಿನಿಯೋಗಿಸಿ. ನಮ್ಮ ನೇತಾರರಂತೆ “ ಆಡುವುದು ಒಂದು, ಮಾಡುವುದು ಮತ್ತೊಂದು “ ಎನ್ನುವ ನಡವಳಿಕೆಯನ್ನು ತ್ಯಜಿಸಿರಿ. ಕೊನೆಯದಾಗಿ ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಆಗದೇ ಇದ್ದಲ್ಲಿ, ತ್ಯಾಜ್ಯಗಳ ಉತ್ಪಾದನೆಯನ್ನು ನಿಯಂತ್ರಿಸಿ ಮತ್ತು ಕಂಡಲ್ಲಿ ಕಸವನ್ನು ಎಸೆಯುವ ಕೆಟ್ಟ ಹವ್ಯಾಸವನ್ನು ಅಂತ್ಯಗೊಳಿಸಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು.