Monday, November 9, 2015

NOV 14 - WORLD DIABETES DAY



                    ನವೆಂಬರ್ ೧೪ : ವಿಶ್ವ ಮಧುಮೇಹ ದಿನ

          ಮಧುಮೇಹದ ಪಿಡುಗನ್ನು ತಡೆಗಟ್ಟಲು ಪ್ರಯತ್ನಿಸಿ

ಮಧುಮೇಹ ಎನ್ನುವ ಸುಂದರ ನಾಮಧೇಯದ ಗಂಭೀರ ವ್ಯಾಧಿಯು ಪ್ರಪಂಚದ ಪ್ರತಿಯೊಂದು ದೇಶಗಳಲ್ಲಿ ವ್ಯಾಪಕವಾಗಿ ಪತ್ತೆಯಾಗುತ್ತಿದ್ದು, ಆಧುನಿಕ ಹಾಗೂ ನಿಷ್ಕ್ರಿಯ ಜೀವನ ಶೈಲಿ ಮತ್ತು ಆಹಾರವಿಹಾರಗಳೂ ಇದಕ್ಕೆ ಕಾರಣವೆನಿಸಿವೆ. ಪರಸ್ಪರ ಹರಡದ ಆದರೆ ವರ್ಷಂಪ್ರತಿ ಜಗತ್ತಿನಾದ್ಯಂತ ಸಹಸ್ರಾರು ಜನರನ್ನು ಬಲಿಪಡೆಯುವ ಕೆಲವೇ ಕಾಯಿಲೆಗಳಲ್ಲಿ ಮಧುಮೇಹವೂ ಒಂದಾಗಿದೆ. ಈ ಅಪಾಯಕಾರಿ ಹಾಗೂ ಮಾರಕವೆನಿಸಬಲ್ಲ ಕಾಯಿಲೆಯ ಪಿಡುಗನ್ನು ತಡೆಗಟ್ಟುವ ಉದ್ದೇಶದಿಂದ ಮತ್ತು ಜನಸಾಮಾನ್ಯರಲ್ಲಿ ಇದರ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ, ವರ್ಷಂಪ್ರತಿ ನವೆಂಬರ್ ೧೪ ರಂದು ವಿಶ್ವ ಮಧುಮೇಹ ದಿನವನ್ನು ಜಾಗತಿಕ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಗುತ್ತಿದೆ.

ವಿಶ್ವ ಮಧುಮೇಹ ದಿನ

ಸಹ ವಿಜ್ಞಾನಿ ಚಾರ್ಲ್ಸ್ ಬೆಸ್ಟ್ ಇವರ ಜೊತೆಯಲ್ಲಿ ಹಗಲಿರುಳು ಶ್ರಮಿಸಿ, ವಿಶ್ವದ ಮಧುಮೇಹಿಗಳ ಪಾಲಿಗೆ ಅಕ್ಷರಶಃ " ಸಂಜೀವಿನಿ " ಎನಿಸಿರುವ " ಇನ್ಸುಲಿನ್ " ಔಷದವನ್ನು ಆವಿಷ್ಕರಿಸಿದ್ದ ಫ್ರೆಡರಿಕ್ ಬಾಂಟಿಂಗ್ ಎನ್ನುವ ವಿಜ್ಞಾನಿಯ ಜನ್ಮದಿನವನ್ನು, ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರೊಂದಿಗೆ ಈ ವ್ಯಾಧಿಯ ಸಂಭಾವ್ಯತೆ, ತಡೆಗಟ್ಟುವಿಕೆ, ಅನಪೇಕ್ಷಿತ ಹಾಗೂ ಗಂಭೀರ ದುಷ್ಪರಿಣಾಮಗಳು ಮತ್ತು ಸಮರ್ಪಕ ಚಿಕಿತ್ಸೆಗಳ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು, ವಿಶ್ವ ಮಧುಮೇಹ ಒಕ್ಕೂಟ, ಸಂಯುಕ್ತ ರಾಷ್ಟ್ರಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ನವೆಂಬರ್ ೧೪ ರಂದು ಆಯೋಜಿಸಲಾಗುತ್ತದೆ.

ಪ್ರಸ್ತುತ ಜಗತ್ತಿನಾದ್ಯಂತ ೩೮೭ ದಶಲಕ್ಷ  ಮಧುಮೇಹ ಪೀಡಿತರಿದ್ದು, ಈ ಸಂಖ್ಯೆಯು ೨೦೩೫ ರಲ್ಲಿ ೬೦೦ ದಶಲಕ್ಷವನ್ನು ಮೀರಲಿದೆ ಎಂದು  ಅಂದಾಜಿಸಲಾಗಿದೆ. ಭಾರತದಲ್ಲಿ ೨೦೧೧ ರಲ್ಲಿ ಈ ಸಂಖ್ಯೆಯು ೬೧ ದಶಲಕ್ಷವಾಗಿದ್ದು, ೨೦೩೦ ರಲ್ಲಿ ೧೦೧ ದಶಲಕ್ಷವನ್ನು ಮೀರಲಿದೆ!. ಆದರೆ ಚೀನಾ ದೇಶದಲ್ಲಿ ೯೩ ದಶಲಕ್ಷ ಮಧುಮೇಹಿಗಳಿದ್ದು, ವಿಶ್ವದ ಮಧುಮೇಹಿಗಳ ರಾಜಧಾನಿ ಎಂದೇ ಕರೆಯಲ್ಪಡುತ್ತಿದೆ. 

ಮಧುಮೇಹ ಎಂದರೇನು?

ಮನುಷ್ಯನ ಶರೀರದ ಮೇದೋಜೀರಕ ಗ್ರಂಥಿಗಳಲ್ಲಿನ ಬೀಟಾ ಜೀವಕಣಗಳಲ್ಲಿ ಉತ್ಪನ್ನವಾಗುವ ಇನ್ಸುಲಿನ್ ಚೋದನಿಯ ಪ್ರಮಾಣ ಕುಂಠಿತಗೊಂಡಾಗ ಅಥವಾ ಉತ್ಪನ್ನವಾದ ಇನ್ಸುಲಿನ್ ಚೋದನಿಯನ್ನು ಶರೀರವು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾದಾಗ ಅಥವಾ ಇನ್ಸುಲಿನ್ ನ ಉತ್ಪಾದನೆ ಸಂಪೂರ್ಣವಾಗಿ ನಶಿದಾಗ ಮಧುಮೇಹ ವ್ಯಾಧಿ ಉದ್ಭವಿಸುತ್ತದೆ. ತತ್ಪರಿಣಾಮವಾಗಿ ರೋಗಿಯ ರಕ್ತದಲ್ಲಿನ ಸಕ್ಕರೆಯ ( ಗ್ಲೂಕೋಸ್ ) ಪ್ರಮಾಣವು ಅನಿಯಂತ್ರಿತವಾಗಿ ವೃದ್ಧಿಸುತ್ತದೆ. ಈ ವ್ಯಾಧಿಯನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ಪಡೆಯದಿದ್ದಲ್ಲಿ, ರೋಗಿಯ ಶರೀರ ಮತ್ತು ಪ್ರಮುಖ ಅಂಗಾಂಗಗಳಿಗೆ ಹಾನಿ ಸಂಭವಿಸುವ ಅಥವಾ ಇವುಗಳ ವೈಫಲ್ಯಕ್ಕೆ ಕಾರಣವೆನಿಸುವ ಸಾಧ್ಯತೆಗಳಿವೆ.

ಪ್ರಭೇದಗಳು

ಮಧುಮೇಹ ವ್ಯಾಧಿಯನ್ನು ಸ್ಥೂಲವಾಗಿ ಎರಡು ಪ್ರಭೇದಗಳನ್ನಾಗಿ ವಿಂಗಡಿಸಿದ್ದು, ಪ್ರಭೇದ ೧ ನ್ನು ಇನ್ಸುಲಿನ್ ಅವಲಂಬಿತ ಮತ್ತು ಪ್ರಭೇದ ೨ ನ್ನು ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ ಎಂದು ವರ್ಗೀಕರಿಸಲಾಗಿದೆ. ಇದಲ್ಲದೇ ಮಹಿಳೆಯರು ಗರ್ಭವತಿಯರಾದಾಗ ಪ್ರತ್ಯಕ್ಷವಾಗುವ ಜೆಸ್ಟೇಶನಲ್ ಡಯಾಬೆಟೆಸ್ ಎಂದು ಕರೆಯಲ್ಪಡುವ ಪ್ರಭೇದವು, ತಾಯಿ ಮತ್ತು ಗರ್ಭಸ್ಥ ಶಿಶುವಿಗೆ ಅಸಾಮಾನ್ಯ ತೊಂದರೆಗಳಿಗೆ ಕಾರಣವೆನಿಸಬಲ್ಲದು. ಬಹುತೇಕ ಮಹಿಳೆಯರಲ್ಲಿ ಹೆರಿಗೆಯ ಬಳಿಕ ಇದು ಕಣ್ಮರೆಯಾಗುವುದು. ಆದರೆ ಈ ಸಮಸ್ಯಾ ಪೀಡಿತ ಮಹಿಳೆಯರಲ್ಲಿ ಶೇ. ೫೦ ರಷ್ಟು ಮಹಿಳೆಯರು ಮುಂದಿನ ೫ ರಿಂದ ೧೦ ವರ್ಷಗಳಲ್ಲಿ ಮಧುಮೇಹ ( ಪ್ರಭೇದ -೨ ) ವ್ಯಾಧಿಗೆ ಈಡಾಗುತ್ತಾರೆ.

ಇನ್ಸುಲಿನ್ ಅವಲಂಬಿತ ಮಧುಮೇಹವು ಸಾಮಾನ್ಯವಾಗಿ ಸ್ವಯಂ ಪ್ರತಿರೋಧಕ ಪ್ರತಿಕ್ರಿಯೆಯ ಪರಿಣಾಮವಾಗಿ ಉದ್ಭವಿಸುವುದಾಗಿದ್ದು, ಇದರಲ್ಲಿ ಶರೀರದ ರಕ್ಷಣಾ ವ್ಯವಸ್ಥೆಯೇ ಇನ್ಸುಲಿನ್ ಉತ್ಪಾದಿಸುವ ಬೀಟಾ ಕಣಗಳ ಮೇಲೆ ದಾಳಿ ನಡೆಸುತ್ತದೆ. ಈ ಪ್ರಭೇದವು ಹೆಚ್ಚಾಗಿ ನವಜಾತ ಶಿಶುಗಳು ಮತ್ತು ಹದಿಹರೆಯದವರನ್ನೇ ಕಾಡುವುದಾದರೂ, ಯಾವುದೇ ವಯಸ್ಸಿನಲ್ಲೂ  ತಲೆದೋರಬಹುದು. ಹಾಗೂ ಈ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಪ್ರತಿನಿತ್ಯ ಇನ್ಸುಲಿನ್ ಚುಚ್ಚು ಮದ್ದನ್ನು ಪಡೆದುಕೊಳ್ಳಬೇಕಾಗುವುದು. ಆದರೆ ಪ್ರಭೇದ ೨ ಮಧುಮೇಹವು ಹೆಚ್ಚಾಗಿ ಮಧ್ಯ ಅಥವಾ ಇಳಿ ವಯಸ್ಸಿನಲ್ಲಿ ಉದ್ಭವಿಸುವುದಾದರೂ, ಇತ್ತೀಚಿನ ಕೆಲವರ್ಷಗಳಿಂದ ಹದಿಹರೆಯದವರಲ್ಲೂ ಪತ್ತೆಯಾಗುತ್ತಿದೆ. ಪಾಶ್ಚಾತ್ಯರ ಜೀವನಶೈಲಿಯ ಅಂಧಾನುಕರಣೆ, ನಿರುಪಯುಕ್ತ ಹಾಗೂ ಅತಿಯಾದ ಕೊಬ್ಬಿನ ಅಂಶಗಳಿರುವ ( ಜಂಕ್ ಫುಡ್ ) ಆಹಾರಗಳ ಅತಿಸೇವನೆ, ನಿಷ್ಕ್ರಿಯತೆ, ತೀವ್ರ ಮಾನಸಿಕ ಒತ್ತಡ, ಅತಿಬೊಜ್ಜು, ಅಧಿಕ ತೂಕ, ಪ್ರದೂಷಿತ ಪರಿಸರ ಮತ್ತು ಅನುವಂಶಿಕತೆ ಇತ್ಯಾದಿ ಕಾರಣಗಳಿಂದ ಉದ್ಭವಿಸುವ " ಡಯಾಬೆಟೆಸ್ ಮೆಲೈಟಸ್ " ಅರ್ಥಾತ್ ಮಧುಮೇಹ ವ್ಯಾಧಿಯ ಸಂಭಾವ್ಯತೆಯ ಪ್ರಮಾಣವು ದಿನೇದಿನೇ ಹೆಚ್ಚುತ್ತಿದೆ.

ಅಪಾಯಕಾರಿ ಅಂಶಗಳು

ಮಧುಮೇಹದ ಪ್ರಭೇದ ೧ ರ ಅಪಾಯಕಾರಿ ಅಂಶಗಳ ಬಗ್ಗೆ ಸಂಶೋಧನೆ ನಡೆಯುತ್ತಲೇ ಇದೆ. ಆದರೆ ಕುಟುಂಬದ ಹಿರಿಯರಲ್ಲಿ ಈ ವಿಧದ ಮಧುಮೇಹವಿದ್ದಲ್ಲಿ, ಇದರ ಸಂಭಾವ್ಯತೆಯ ಅಪಾಯವು ತುಸು ಹೆಚ್ಚುತ್ತದೆ. ಪರಿಸರಕ್ಕೆ ಸಂಬಂಧಿಸಿದ ಅಂಶಗಳು ಮತ್ತು ಕೆಲ ವಿಧದ ವೈರಸ್ ಗಳ ಸೋಂಕುಗಳೂ ಇದಕ್ಕೆ ಕಾರಣವೆನಿಸುತ್ತವೆ.

ಪ್ರಭೇದ ೨ ಕ್ಕೆ ಕಾರಣವೆನಿಸಬಲ್ಲ ಅಪಾಯಕಾರಿ ಅಂಶಗಳಲ್ಲಿ ಅನುವಂಶಿಕತೆ, ಅಧಿಕತೂಕ ಹಾಗೂ ಅತಿಬೊಜ್ಜು, ಅನಾರೋಗ್ಯಕರ ಆಹಾರ ಸೇವನೆ, ನಿಷ್ಕ್ರಿಯತೆ, ಹೆಚ್ಚುತ್ತಿರುವ ವಯಸ್ಸು, ಜನಾಂಗ, ಗ್ಲುಕೋಸ್ ನ ಅಸಹಿಷ್ಣುತೆ, ಗರ್ಭಾವಸ್ಥೆಯಲ್ಲಿ ಪೌಷ್ಠಿಕ ಆಹಾರದ ಕೊರತೆ ಮತ್ತು ಮಧುಮೇಹದ ಇರುವಿಕೆಗಳು ಪ್ರಮುಖವಾಗಿವೆ.

ಪೂರ್ವಸೂಚನೆಗಳು

ಪದೇ ಪದೇ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ ಹಾಗೂ ಹಸಿವೆ, ಅತಿಆಯಾಸ, ಶರೀರದ ತೂಕ ಕಡಿಮೆಯಾಗುವುದು, ಕಣ್ಣಿನ ದೃಷ್ಟಿ ಮಸುಕಾಗುವುದು, ಮೂತ್ರ ವಿಸರ್ಜನಾಂಗಗಳಲ್ಲಿ ತುರಿಕೆ ಉಂಟಾಗುವುದು, ಗಾಯವಾದಾಗ ಹಾಗೂ ಅನ್ಯ ಕಾಯಿಲೆಗಳು ಬಾಧಿಸಿದಾಗ ಸೂಕ್ತ ಚಿಕಿತ್ಸೆ ಪಡೆದರೂ ವಾಸಿಯಾಗದಿರುವುದು ಅಥವಾ ಉಲ್ಬಣಿಸುವುದೇ ಮುಂತಾದ ಪೂರ್ವಸೂಚನೆಗಳು ಮಧುಮೇಹ ಪೀಡಿತರಲ್ಲಿ ಕಂಡುಬರುತ್ತದೆ. ವಿಶೇಷವೆಂದರೆ ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸುವ ಜನರು ಮುಂದೆ ಗಂಭೀರ ಸಮಸ್ಯೆಗಳಿಗೆ ಈಡಾಗಿ ಆಸ್ಪತ್ರೆ ಸೇರಿದ ಬಳಿಕವೇ ಮಧುಮೇಹದ ಇರುವಿಕೆ ಪತ್ತೆಯಾಗುವುದು!.

ಚಿಕಿತ್ಸೆ

ಮಧುಮೇಹ ಪೀಡಿತ ವ್ಯಕ್ತಿಗಳು ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರೊಂದಿಗೆ ಆಹಾರ ಸೇವನೆಯಲ್ಲಿ ಪಥ್ಯ, ಸಮತೋಲಿತ ಹಾಗೂ ಪೌಷ್ಠಿಕ ಅಂಶಗಳಿರುವ ಆಹಾರ ಸೇವನೆ, ಪ್ರತಿನಿತ್ಯ ನಡಿಗೆ, ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವುದು, ಅಧಿಕತೂಕ – ಅತಿಬೊಜ್ಜು ಇದ್ದಲ್ಲಿ ಇದನ್ನು ಇಳಿಸಿಕೊಳ್ಳುವುದು, ಮಾನಸಿಕ ಒತ್ತಡದ ನಿವಾರಣೆಗೆ ಓದು, ಸಂಗೀತ ಅಥವಾ ಯೋಗಾಭ್ಯಾಸ, ಪ್ರಾಣಾಯಾಮ ಅಥವಾ ಧ್ಯಾನದಲ್ಲಿ ತೊಡಗಿಸಿಕೊಳ್ಳುವುದು ಹಿತಕರವೆನಿಸುವುದು. ಇದರೊಂದಿಗೆ ವೈದ್ಯರು ಸೂಚಿಸಿದ ಔಷದಗಳನ್ನು ನಿಗದಿತ ಸಮಯದಲ್ಲಿ ಹಾಗೂ ನಿಗದಿತ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಸೇವಿಸುವ ಮೂಲಕ ಈ ವ್ಯಾಧಿಯನ್ನು ನಿಯಂತ್ರಿಸಬಹುದು ಮತ್ತು ಇದು ಉಲ್ಬಣಿಸಿದಲ್ಲಿ ಉದ್ಭವಿಸಬಲ್ಲ ಸಮಸ್ಯೆಗಳನ್ನು ತಡೆಗಟ್ಟಬಹುದು.

ಮಧುಮೇಹ ವ್ಯಾಧಿಯು ಕಾರಣಾಂತರಗಳಿಂದ ಉಲ್ಬಣಿಸಿದಲ್ಲಿ ಅಧಿಕ ರಕ್ತದೊತ್ತಡ, ಹ್ರದ್ರೋಗಗಳು,ದೃಷ್ಟಿನಾಶ, ಮೂತ್ರಪಿಂಡಗಳ ವೈಫಲ್ಯ ಹಾಗೂ ಕೆಲ ಸಂದರ್ಭಗಳಲ್ಲಿ ಅಂಗ ವಿಚ್ಛೇದನದಂತಹ ಗಂಭೀರ ಸಮಸ್ಯೆಗಳಿಗೆ ಮತ್ತು ರೋಗಿಯ ಅಕಾಲಿಕ ಮರಣಕ್ಕೂ ಕಾರಣವೆನಿಸಬಲ್ಲದು.

ತಪ್ಪುಕಲ್ಪನೆಗಳು

ಅನೇಕ ಮಧುಮೇಹ ಪೀಡಿತ ವ್ಯಕ್ತಿಗಳು ನಂಬಿರುವಂತೆ ಸಕ್ಕರೆಯ ಸೇವನೆಗೆ ಬದಲಾಗಿ ಬೆಲ್ಲ, ಕಲ್ಲುಸಕ್ಕರೆ ಮತ್ತು ಜೇನುತುಪ್ಪಗಳನ್ನು ಧಾರಾಳವಾಗಿ ಸೇವಿಸುವುದು ನಿಶ್ಚಿತವಾಗಿಯೂ ಸುರಕ್ಷಿತ ಮತ್ತು ನಿಜವಲ್ಲ. ಅಂತೆಯೇ ಜಗತ್ತಿನ ವಿವಿಧ ದೇಶಗಳಲ್ಲಿರುವ ವೈವಿಧ್ಯಮಯ ವೈದ್ಯಕೀಯ ಪದ್ದತಿಗಳಲ್ಲಿ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ಇದಕ್ಕೂ ಮಿಗಿಲಾಗಿ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಸಂಶೋಧಿಸಿದವರಿಗೆ “ ನೊಬೆಲ್ ಪ್ರಶಸ್ತಿ “ ಯೊಂದಿಗೆ ಕೋಟ್ಯಂತರ ಡಾಲರ್ ಬಹುಮಾನ ದೊರೆಯುವುದರಲ್ಲಿ ಸಂದೇಹವಿಲ್ಲ. ಆದರೆ ನಮ್ಮ ದೇಶದ ಮೂಲೆಮೂಲೆಗಳಲ್ಲಿ ಕಾಣಸಿಗುವ “ ನಕಲಿ ವೈದ್ಯರು “ , ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸುವ ಭರವಸೆಯೊಂದಿಗೆ ನೀಡಿದ ಔಷದಗಳನ್ನು ಸೇವಿಸಿ, ತಜ್ಞ ವೈದ್ಯರು ತಮಗೆ ನೀಡಿದ್ದ ಔಷದಗಳ ಸೇವನೆಯನ್ನು ನಿಲ್ಲಿಸಿದ್ದ ಅಸಂಖ್ಯ ವ್ಯಕ್ತಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡ ಘಟನೆಗಳು ಸಾಕಷ್ಟಿವೆ. ಇದೇ ಕಾರಣದಿಂದಾಗಿ ನಕಲಿ ವೈದ್ಯರ ಪೊಳ್ಳು ಭರವಸೆಗಳಿಗೆ ಬಲಿಯಾಗಿ, ನೀವು ಕಷ್ಟಪಟ್ಟು ಸಂಪಾದಿಸಿದ್ದ ಸಹಸ್ರಾರು ರೂಪಾಯಿಗಳೊಂದಿಗೆ ನಿಮ್ಮ ಪ್ರಾಣವನ್ನೂ ಕಳೆದುಕೊಳ್ಳದಿರಿ!.


ಕೊನೆಯ ಮಾತು

ಮಧುಮೇಹ ಪೀಡಿತರಾದ ಪ್ರತಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಿಗೆ, ಈ ವ್ಯಾಧಿಯ ಇರುವಿಕೆ ತಿಳಿದಿರುವುದೇ ಇಲ್ಲ. ಆದುದರಿಂದ ನಿಮ್ಮ ಮಾತಾಪಿತರ ಕುಟುಂಬಗಳ ಸದಸ್ಯರಲ್ಲಿ ಮಧುಮೇಹ ಪೀಡಿತರು ಇದ್ದಲ್ಲಿ, ನಿಮ್ಮ ಕುಟುಂಬ ವೈದ್ಯರ ಸಲಹೆಯನ್ನು ಪಡೆದು ರಕ್ತದ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ತನ್ಮೂಲಕ ಈ ವ್ಯಾಧಿ ಇರುವುದನ್ನು ಅಥವಾ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು











Tuesday, November 3, 2015

CONJESTION CHARGES AND TRAFFIC JAM



  ವಾಹನ ದಟ್ಟಣೆಯನ್ನು ನಿಶ್ಚಿತವಾಗಿ ನಿಯಂತ್ರಿಸಬಲ್ಲ ವಿಶಿಷ್ಟ ಶುಲ್ಕ!

ಭಾರತದ ಪ್ರತಿಯೊಂದು ಪಟ್ಟಣ, ನಗರ ಮತ್ತು ಮಹಾನಗರಗಳ ರಸ್ತೆಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು, ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು ಕಾರುಗಳ ಮೇಲೆ " ದಟ್ಟಣೆ ಶುಲ್ಕ " ವನ್ನು ವಿಧಿಸುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ಚಿಂತನೆಯನ್ನು ನಡೆಸಿತ್ತು. ಈ ಶುಲ್ಕವನ್ನು ವಿಧಿಸುವ ಮೂಲಕ ನಿರ್ದಿಷ್ಟ ಪ್ರದೇಶಗಳಲ್ಲಿ ಹಾಗೂ ನಿರ್ದಿಷ್ಟ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸುವುದರೊಂದಿಗೆ, ವಾಹನ ದಟ್ಟಣೆಯಿಂದಾಗಿ ಸಂಭವಿಸುವ ವಾಯು ಮಾಲಿನ್ಯ ಮತ್ತು ಪರಿಸರ ಪ್ರದೂಷಣೆಯನ್ನೂ ಸುಲಭದಲ್ಲೇ ನಿಯಂತ್ರಿಸಬಹುದಾಗಿತ್ತು. ಆದರೆ ಈ ಚಿಂತನೆಯು ಇಂದಿನ ತನಕ ಕಾರ್ಯರೂಪಕ್ಕೆ ಬರದಿರಲು ಕಾರಣವೇನೆಂದು ನಮಗೂ ತಿಳಿದಿಲ್ಲ.

ಭಾರತದ ಬಹುತೇಕ ರಸ್ತೆಗಳ ಬಹುದೊಡ್ಡ ಭಾಗವನ್ನು ಮೋಟಾರು ಕಾರುಗಳೇ ಬಳಸುತ್ತವೆ. ಈ " ಕಾರುಬಾರನ್ನು " ನಿಯಂತ್ರಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದು, ಇದರ ಸಾಧಕ - ಬಾಧಕಗಳ ಅಧ್ಯಯನವನ್ನು ನಡೆಸಿದ ಬಳಿಕ ಅನುಷ್ಠಾನಿಸುವಂತೆ ಆದೇಶಿಸಿದೆ. ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯದ ಸ್ವಾಯತ್ತ ಸಂಸ್ಥೆಯಾಗಿರುವ ಇನ್ಸ್ ಸ್ಟಿಟ್ಯೂಟ್ ಆಫ್ ಅರ್ಬನ್ ಟ್ರಾನ್ಸ್ ಪೋರ್ಟ್, ಕಾರುಗಳ ಮೇಲೆ ಈ ಶುಲ್ಕವನ್ನು ವಿಧಿಸುವ ಪ್ರಸ್ತಾವನೆಯನ್ನು ಶಿಫಾರಸು ಮಾಡಿತ್ತು.

ಏನಿದು ದಟ್ಟಣೆ ಶುಲ್ಕ?

ಕಾನೂನುಬದ್ಧವಾಗಿ ಘೋಷಿಸಿರುವ ಹಾಗೂ ಅತಿಯಾದ ವಾಹನ ದಟ್ಟಣೆಯಿರುವ ನಿರ್ದಿಷ್ಟ ಪ್ರದೇಶವನ್ನು ಪ್ರವೇಶಿಸುವ ವಾಹನಗಳಿಗೆ ಪೂರ್ವ ನಿರ್ಧಾರಿತ ಶುಲ್ಕವನ್ನು ವಿಧಿಸುವ ಪರಿಣಾಮಕಾರಿ ವಿಧಾನವೇ " ದಟ್ಟಣೆ ಶುಲ್ಕ " ಅರ್ಥಾತ್ ಕಂಜೆಶನ್ ಚಾರ್ಜ್. ಸುಗಮ ಸಂಚಾರಕ್ಕೆ ಸಂಭವಿಸುವ ಅಡ್ಡಿ ಆತಂಕಗಳು, ವಿಳಂಬ, ಸಮಯ ಹಾಗೂ ಇಂಧನದ ಅಪವ್ಯಯ, ವಾಯುಮಾಲಿನ್ಯ, ಪರಿಸರ ಪ್ರದೂಷಣೆ ಇವೇ ಮುಂತಾದ ಸಮಸ್ಯೆಗಳನ್ನು ತಡೆಗಟ್ಟಲು ಈ ಶುಲ್ಕವನ್ನು ವಿಧಿಸುವುದು ಉಪಯುಕ್ತವೆನಿಸಲಿದೆ.

ದಟ್ಟಣೆ ಶುಲ್ಕವನ್ನು ವಿಧಿಸಿದಲ್ಲಿ ಇಂತಹ ಪ್ರದೇಶಗಳನ್ನು ಸದಾ ಅನಿಯಂತ್ರಿತವಾಗಿ ಪ್ರವೇಶಿಸುವ ವಾಹನಗಳು ಅನ್ಯ ಪರ್ಯಾಯ ರಸ್ತೆಗಳ ಮೂಲಕ ಸಂಚರಿಸುವುದರಿಂದ, ಜನಸಾಮಾನ್ಯರು ಸ್ವಂತ ವಾಹನಗಳ ಬದಲಾಗಿ ಸಾರ್ವಜನಿಕ ಸಾರಿಗೆ ವಾಹನಗಳನ್ನು ಬಳಸುವುದರಿಂದ ಮತ್ತು ತತ್ಪರಿಣಾಮವಾಗಿ ಈ ಪ್ರದೇಶ ಹಾಗೂ ನಿರ್ದಿಷ್ಟ ರಸ್ತೆಗಳಲ್ಲಿ ತಂಗುವ  ವಾಹನಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುವುದು. ಈ ಬಗ್ಗೆ ಅಧ್ಯಯನವನ್ನು ನಡೆಸಿದ್ದ ದಿಲ್ಲಿಯ ಸ್ಕೂಲ್ ಆಫ್ ಪ್ಲಾನಿಂಗ್ ಎಂಡ್ ಆರ್ಕಿಟೆಕ್ಚರ್ ಸಂಸ್ಥೆಯು ಹೇಳುವಂತೆ, ವಾಹನವೊಂದಕ್ಕೆ ಕೇವಲ ೧೦ ರೂ. ದಟ್ಟಣೆ ಶುಲ್ಕವನ್ನು ವಿಧಿಸಿದಲ್ಲಿ ಇಂತಹ ಪ್ರದೇಶಗಳಲ್ಲಿನ ವಾಹನ ದಟ್ಟಣೆಯ ಪ್ರಮಾಣವು ಶೇ. ೨೦ ರಿಂದ ೨೫ ರಷ್ಟು ಕಡಿಮೆಯಾಗುವುದು. ಸಿಂಗಾಪುರ, ಸ್ಟಾಕ್ ಹೋಮ್ ಹಾಗೂ ಲಂಡನ್ ಮುಂತಾದಲ್ಲಿ ಈ ಶುಲ್ಕವನ್ನು ಕೆಲವರ್ಷಗಳಿಂದ ವಿಧಿಸಲಾಗುತ್ತಿದ್ದು, ಈ ಪ್ರಯೋಗವು ಅಪೇಕ್ಷಿತ ಪರಿಣಾಮವನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಕಡತಗಳಲ್ಲಿ ಉಳಿದ ಪ್ರಸ್ತಾವನೆ

ನಮ್ಮ ದೇಶದಲ್ಲಿ ಮೊಟ್ಟಮೊದಲಬಾರಿಗೆ ದಟ್ಟಣೆ ಶುಲ್ಕ ವಿಧಿಸುವ ವಿಚಾರವನ್ನು ರಾಷ್ಟ್ರೀಯ ಸಾರಿಗೆ ಧೋರಣೆ - ೨೦೦೬ ರಲ್ಲಿ ಪ್ರಸ್ತಾವಿಸಲಾಗಿದ್ದರೂ, ಸಂಬಂಧಿತ ಸಚಿವಾಲಯವು ಇದನ್ನು ಪರಿಗಣಿಸಿರಲಿಲ್ಲ. ತದನಂತರ ೧೨ ನೆ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ದಟ್ಟಣೆ ಶುಲ್ಕವನ್ನು ವಿಧಿಸುವ ಮತ್ತು ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸುವ ಮೂಲಕ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆಮಾಡಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದ್ದಿತು. ಜೊತೆಗೆ ಯೋಜನಾ ಆಯೋಗವು ಜಾಗತಿಕ ಮಟ್ಟದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ದಟ್ಟಣೆ ಶುಲ್ಕವನ್ನು ನಿರ್ಧರಿಸುವ ವಿಧಾನವನ್ನು ಅಧ್ಯಯನ ಮಾಡಿ ವಿಶ್ಲೇಷಿಸಲು ಸೂಚಿಸಿತ್ತು. ಆದರೆ ನಮ್ಮ ದೇಶದಲ್ಲಿ " ತುಕ್ಕು ಹಿಡಿದಿರುವ ಸರ್ಕಾರಿ ಯಂತ್ರ " ವು ಚಲಿಸುವುದು ಅತ್ಯಂತ ನಿಧಾನವಾಗಿರುವುದರಿಂದ, ಪ್ರಸ್ತಾವನೆಗಳು ಮತ್ತು ಆದೇಶಗಳು ಅನುಷ್ಠಾನಗೊಳ್ಳುವುದಕ್ಕಿಂತಲೂ ಕಸದ ಬುಟ್ಟಿಯನ್ನು ಸೇರುವ ಸಾಧ್ಯತೆಗಳೇ ಅಧಿಕ.

೨೦೦೮ ರಲ್ಲಿ ನಗರ ಮೂಲಸೌಕರ್ಯಗಳ ಸಲಹಾ ಸಂಸ್ಥೆಯೊಂದು ನಡೆಸಿದ್ದ ಅಧ್ಯಯನದಂತೆ, ೨೦೩೦ ರಲ್ಲಿ ದೇಶದ ಮಹಾನಗರಗಳಲ್ಲಿ ಗರಿಷ್ಠ ಸಂಖ್ಯೆಯ ವಾಹನಗಳು ಓಡಾಡುವ ಸಮಯ ( ಪೀಕ್ ಅವರ್ ) ದಲ್ಲಿ ಇವುಗಳ ವೇಗವು ಗಂಟೆಗೆ ಕೇವಲ ೬ ಕಿ.ಮೀ. ಗೆ ಕುಸಿಯಲಿದೆ ಎಂದು ತಿಳಿದುಬಂದಿತ್ತು. (ಆದರೆ ವಾಸ್ತವದಲ್ಲಿ ೨೦೧೫ ಕ್ಕೆ ಮುನ್ನವೇ ಈ ಪರಿಸ್ಥಿತಿ ಉದ್ಭವಿಸಿದೆ.) ಅರ್ಥಾತ್ ವಾಹನಗಳ ಸಂಚಾರವು ಅಕ್ಷರಶಃ ಸ್ಥಗಿತಗೊಳ್ಳಲಿದೆ ಎಂದು ಭವಿಷ್ಯವನ್ನು ನುಡಿದಿತ್ತು!.

ಸಾರ್ವಜನಿಕ ಸಾರಿಗೆ ಅಭಿವೃದ್ಧಿ

ತಜ್ಞರ ಅಭಿಪ್ರಾಯದಂತೆ ನಮ್ಮ ದೇಶದಲ್ಲಿ ದಟ್ಟಣೆ ಶುಲ್ಕವನ್ನು ವಿಧಿಸುವುದು ಉಪಯುಕ್ತವೆನಿಸುವುದಾದರೂ, ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಸುಲಭಸಾಧ್ಯವೇನಲ್ಲ. ಏಕೆಂದರೆ ನಮ್ಮ ದೇಶದ ವಿವಿಧ ನಗರಗಳ ಗಾತ್ರ, ಜನಸಂಖ್ಯೆ ಮತ್ತು ಸಾರಿಗೆ ವ್ಯವಸ್ಥೆಗಳಲ್ಲಿನ ವ್ಯತ್ಯಾಸಗಳು ಅನೇಕ ಗೊಂದಲಗಳಿಗೆ ಕಾರಣವೆನಿಸುವ ಸಾಧ್ಯತೆಗಳಿವೆ. ಇದಕ್ಕಾಗಿ ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದರೊಂದಿಗೆ, ದಟ್ಟಣೆ ಶುಲ್ಕವನ್ನು ವಿಧಿಸುವ ಮೂಲಕ ಕಡಿಮೆಯಾಗಲಿರುವ ವಾಹನಗಳ ಸಂಖ್ಯೆಗಳ ವೈಜ್ಞಾನಿಕ ಲೆಕ್ಕಾಚಾರವನ್ನು ಮಾಡಬೇಕಿದೆ.

ಇವೆಲ್ಲಕ್ಕೂ ಮಿಗಿಲಾಗಿ ದಟ್ಟಣೆ ಶುಲ್ಕವನ್ನು ವಿಧಿಸುವ ಮುನ್ನ ಸಮರ್ಪಕವಾದ ಹಾಗೂ ಸುಗಮ ವಾಹನ ಸಂಚಾರಕ್ಕೆ ಅತ್ಯವಶ್ಯಕವೆನಿಸುವ ಉತ್ತಮ ರಸ್ತೆಗಳು, ಪಾದಚಾರಿಗಳಿಗಾಗಿ ಸುರಕ್ಷಿತ ಕಾಲುದಾರಿಗಳೇ ಮುಂತಾದ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಲು ಅವಶ್ಯಕ ಅತ್ಯಾಧುನಿಕ ತಂತ್ರಜ್ಞಾನ ಮತ್ತಿತರ ವ್ಯವಸ್ಥೆಗಳಿಗಾಗಿ ಸಹಸ್ರಾರು ಕೋಟಿ ರೂಪಾಯಿಗಳ ಹೂಡಿಕೆಯ ಅವಶ್ಯಕತೆಯಿದೆ. ಆದರೆ ತತ್ಪರಿಣಾಮವಾಗಿ ಜನಸಾಮಾನ್ಯರಿಗೆ ಲಭಿಸಲಿರುವ ಪ್ರಯೋಜನಗಳನ್ನು, ಅಂದರೆ ವಾಹನಗಳ ದಟ್ಟಣೆಯ ಪ್ರಮಾಣದಲ್ಲಿ ಇಳಿಕೆ, ಸುಗಮ ವಾಹನ ಸಂಚಾರಕ್ಕೆ ಆಸ್ಪದ, ಸಮಯ ಮತ್ತು ಇಂಧನಗಳ  ಉಳಿತಾಯ, ಕಡಿಮೆಯಾಗಲಿರುವ ವಾಯುಮಾಲಿನ್ಯ ಹಾಗೂ ಪರಿಸರ ಪ್ರದೂಷಣೆಯ ಪ್ರಮಾಣ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಂದ ಗಳಿಸಬಹುದಾದ ಹೆಚ್ಚುವರಿ ಆದಾಯಗಳನ್ನು ಪರಿಗಣಿಸಿದಾಗ, ಇದು ನಿಸ್ಸಂದೇಹವಾಗಿಯೂ ಅತ್ಯಂತ ಲಾಭದಾಯಕವೆನಿಸಲಿದೆ.

ಪ್ರಸ್ತುತ ನಮ್ಮ ದೇಶದ ಪ್ರತಿಯೊಂದು ನಗರ - ಮಹಾನಗರಗಳಲ್ಲಿನ ವಾಹನ ದಟ್ಟಣೆ ಹಾಗೂ ತತ್ಸಂಬಂಧಿತ ಅನ್ಯ ಸಮಸ್ಯೆಗಳನ್ನು ಗಮನಿಸಿದಾಗ, ದಟ್ಟಣೆ ಶುಲ್ಕವನ್ನು ತ್ವರಿತಗತಿಯಲ್ಲಿ ಜಾರಿಗೆ ತರುವುದು ಅನಿವಾರ್ಯವೆನಿಸುತ್ತಿದೆ.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು