Thursday, July 31, 2014

HEART ATTACK



  ಹೃದಯಾಘಾತಕ್ಕಿಲ್ಲ ಪಕ್ಷಪಾತ !

ಬಡವ- ಬಲ್ಲಿದ, ಸ್ತ್ರೀ- ಪುರುಷ, ಹದಿಹರೆಯದ- ಇಳಿವಯಸ್ಸಿನವರೆನ್ನುವ ಪಕ್ಷಪಾತ ತೋರದೇ ಪೀಡಿ ಸಬಲ್ಲ ಹಾಗೂ ಯಾವುದೇ ಪೂರ್ವಸೂಚನೆಯನ್ನು ನೀಡದೇ ಬರಸಿಡಿಲಿನಂತೆ ಬಂದೆರಗಬಲ್ಲ " ಹೃದಯಾಘಾತ " ದ ಬಗ್ಗೆ ನೀವು ತಿಳಿದಿರಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ.
-------------               -------------              --------------                --------------               -----

ಇಳಿವಯಸ್ಸಿನ ವಾಮನರಾಯರಿಗೆ ಕಳೆದ ಆರೇಳು ತಿಂಗಳಿನಿಂದ ಒಂದಿಷ್ಟು ಶಾರೀರಿಕ ಶ್ರಮದ ಕೆಲಸವನ್ನು ಮಾಡಿದೊಡನೆ ಸಣ್ಣಗೆ ಎದೆನೋವು ಆರಂಭವಾಗುತ್ತಿತ್ತು. ಆಶ್ಚರ್ಯವೆಂದರೆ ಒಂದೆರಡು ವಾಯುಮಾತ್ರೆ ನುಂಗಿ ವಿಶ್ರಾಂತಿ ಪಡೆದೊಡನೆ ನೋವು ಮಾಯವಾಗುತ್ತಿತ್ತು. 

ಆದರೆ ಅಷ್ಟಮಿಯಂದು ಎಂದಿನಂತೆ ಬೆಳಗಿನ ಜಾವ ಎದ್ದ ರಾಯರು ಬಹಿರ್ದೆಶೆಗೆ ತೆರಳಿದಾಗ ಎದೆನೋವು ಪ್ರತ್ಯಕ್ಷವಾಗಿತ್ತು. ಎಂದಿಗಿಂತಲೂ ತುಸು ತೀವ್ರವಾದ ಎದೆನೋವಿನೊಂದಿಗೆ ಈ ಬಾರಿ ಅತಿಅಯಾಸ, ವಾಕರಿಕೆ ಹಾಗೂ ಉಸಿರುಕಟ್ಟಿದ ಅನುಭವವಾಗಿತ್ತು. ಪ್ರಯಾಸದಿಂದ ಮುಖಮಾರ್ಜನ ಮುಗಿಸಿ ಬಂದ ರಾಯರ ಮೈಯ್ಯಿಂದ, ಧಾರಾಕಾರವಾಗಿ ಬೆವರು ಹರಿಯಲು ಆರಂಭಿಸಿತ್ತು. ಏಕೋ ಇಂದು ವಾಯುಬಾಧೆ ತೀವ್ರವಾಗಿದೆ ಎಂದು ಭ್ರಮಿಸಿದ ರಾಯರು, ವಾಯುಮಾತ್ರೆ ನುಂಗಿ ಹಾಸಿಗೆಯಲ್ಲಿ ಮಲಗಿದರು. 

ಏಳು ಗಂಟೆಯಾದರೂ ಏಳದಿದ್ದ ಪತಿಯ ಬಗ್ಗೆ ಚಿಂತಿತರಾದ ಪಾರ್ವತಮ್ಮನು ರಾಯರನ್ನು ಎಬ್ಬಿಸಲು ಬಂದಾಗ ರಾಯರ ದೇಹ ತಣ್ಣಗಾಗಿತ್ತು. ಗಾಬರಿಯಿಂದ ಸಮೀಪದ ವೈದ್ಯರನ್ನು ಕರೆಸಿ ಪರೀಕ್ಷಿಸಿದ ಬಳಿಕ, ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವರೆಂದು ತಿಳಿದುಬಂತು. 
ಅನೇಕ ವಿದ್ಯಾವಂತರು ಇಂದಿಗೂ ರಾಯರಲ್ಲಿ ಕಂಡುಬಂದಂತಹ ಲಕ್ಷಣಗಳನ್ನು " ಗ್ಯಾಸ್ ಟ್ರಬಲ್ " ಎಂದು ನಂಬಿ, ವಾಯುಮಾತ್ರೆ, ಜೀರಿಗೆಯ ಕಷಾಯ ಇತ್ಯಾದಿಗಳನ್ನು ಸೇವಿಸುವುದು ಸುಳ್ಳೇನಲ್ಲ. ವಾಸ್ತವವಾಗಿ ಇಂತಹ ರೋಗಿಗಳನ್ನು ತುರ್ತಾಗಿ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಿ ಕ್ಷಿಪ್ರಗತಿಯಲ್ಲಿ ಚಿಕಿತ್ಸೆ ನೀಡುವುದರಿಂದ, ರೋಗಿಯ ಪ್ರಾಣ ಉಳಿಯುವ ಸಾಧ್ಯತೆಗಳು ಹೆಚ್ಚುತ್ತವೆ. 

ಮಾರಕವೆನಿಸಬಲ್ಲ ಸಮಸ್ಯೆ 
ಗತಶತಮಾನದ ಆದಿಯಲ್ಲಿ ಅಪರೂಪದಲ್ಲಿ ಹಾಗೂ ಹೆಚ್ಚಾಗಿ ಶ್ರೀಮಂತರಲ್ಲಿ ಪತ್ತೆಯಾಗುತ್ತಿದ್ದ ಹೃದಯಾಘಾತವು, ನೂತನ ಸಹಸ್ರಮಾನದ ಆದಿಯಲ್ಲಿ ಎಲ್ಲಾ ವರ್ಗದ ಜನರಲ್ಲೂ ವ್ಯಾಪಕವಾಗಿ ಕಂಡುಬರುತ್ತಿದೆ. ಉದಾಹರಣೆಗೆ ದಿನಪತ್ರಿಕೆಗಳಲ್ಲಿ ನೀವು ಓದಿರಬಹುದಾದ " ಆಟದ ಮೈದಾನದಲ್ಲಿ ಕುಸಿದು ಶಾಲಾಬಾಲಕನ ಮೃತ್ಯು", ೩೮ ರ ಹರೆಯದ ತರುಣ ಬಸ್ಸಿನಲ್ಲಿ ಕುಳಿತಲ್ಲೇ ಮೃತಪಟ್ಟ ಹಾಗೂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿ ಹಠಾತ್ತಾಗಿ ಸಾವನ್ನಪ್ಪಿದ ಘಟನೆಗಳಲ್ಲಿ, ಸಾಮಾನ್ಯವಾಗಿ ತೀವ್ರ ಹೃದಯಾಘಾತವೇ ಕಾರಣವಾಗಿರುತ್ತದೆ. ಕೆಲ ವರ್ಷಗಳ ಹಿಂದೆ ಅಮೆರಿಕದ ಈಜು ಚಾಂಪಿಯನ್ ಬಾಲಕಿಯೊಬ್ಬಳು ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಳು. ಸಂದೇಹಾಸ್ಪದ ಮತ್ತು ಅಕಾಲಿಕ ಮರಣದ ಕಾರಣವನ್ನರಿಯಲು ಶವಪರೀಕ್ಷೆ ನಡೆಸಿದ ಬಳಿಕ, ತೀವ್ರ ಹೃದಯಾಘಾತವೇ ಆಕೆಯ ಮರಣಕ್ಕೆ ಕಾರಣವೆಂದು ತಿಳಿದುಬಂದಿತ್ತು. ಹದಿಹರೆಯದಲ್ಲಿ ಮತ್ತು ತಾರುಣ್ಯದಲ್ಲಿ, ಯಾವುದೇ ರೀತಿಯ ದುಶ್ಚಟಗಳಿಲ್ಲದ ಆರೋಗ್ಯವಂತರನ್ನೂ ಬಲಿತೆಗೆದುಕೊಳ್ಳುವ ಈ ಗಂಭೀರ - ಮಾರಕ ಸಮಸ್ಯೆಗೆ ಅನುವಂಶೀಯತೆ ಮತ್ತು ಅಪರೂಪದಲ್ಲಿ ಇತರ ಕೆಲ ಕಾರಣಗಳಿರುವುದುಂಟು. 

ಹೃದಯಾಘಾತ ಎಂದರೇನು?

ಸುಧೃಢವಾದ ಮಾಂಸಪೇಶಿಗಳಿಂದ ನಿರ್ಮಿತವಾದ, ದಿನವೊಂದರಲ್ಲಿ ಲಕ್ಷಕ್ಕೂ ಹೆಚ್ಚುಬಾರಿ ಮಿಡಿಯುವ, ನಿಮ್ಮ ಹಿಡಿಗಾತ್ರದ " ಹೃದಯ " ಎನ್ನುವ ಅದ್ಭುತ ಯಂತ್ರವು, ಹಗಲಿರುಳು ನಿರಂತರವಾಗಿ ಕಾರ್ಯಾಚರಿಸುತ್ತದೆ. ಇತರ ಯಾವುದೇ ಯಂತ್ರದಂತೆಯೇ ನಿಮ್ಮ ಹೃದಯದ ಕಾರ್ಯಾಚರಣೆಗೂ "ಶುದ್ಧ ರಕ್ತ " ಎನ್ನುವ ಇಂಧನದ ಅವಶ್ಯಕತೆಯಿದೆ. ಸಮಗ್ರ ಶರೀರದ ವಿವಿಧ ಅಂಗಾಂಗಗಳಿಗೆ ರಕ್ತವನ್ನು ಪೂರೈಸುವ ಹೃದಯದಲ್ಲಿ ಸಾಕಷ್ಟು ಪ್ರಮಾಣದ ರಕ್ತವಿದ್ದರೂ, ನಿಮ್ಮ ಹೃದಯಕ್ಕೆ ಇದರಿಂದ ಕಿಂಚಿತ್ ಪ್ರಯೋಜನವೂ ಇಲ್ಲವೆಂದಲ್ಲಿ ನಿಮಗೂ ಆಶ್ಚರ್ಯವೆನಿಸೀತು. ಮನುಷ್ಯನ ಹೃದಯಕ್ಕೆ ಶುದ್ಧ ರಕ್ತವನ್ನು ಪೂರೈಸುವ ಮಹತ್ತರವಾದ ಜವಾಬ್ದಾರಿಯನ್ನು " ಕೊರೋನರಿ ಆರ್ಟರಿ " ಎಂದು ಕರೆಯಲ್ಪಡುವ ರಕ್ತನಾಳಗಳು ನಿರ್ವಹಿಸುತ್ತವೆ. 

ಮಾನವನ ಶರೀರದ ಇತರ ಯಾವುದೇ ರಕ್ತನಾಳಗಳಂತೆಯೇ, ಈ ಕೊರೋನರಿ ರಕ್ತನಾಳಗಳ ಒಳಮೈಯ್ಯಲ್ಲಿ ಕೊಬ್ಬಿನ ಅಂಶ ಹಾಗೂ ಕೊಲೆಸ್ಟರಾಲ್ ಗಳ ಸಂಗ್ರಹದಿಂದಾಗಿ ಉದ್ಭವಿಸಬಲ್ಲ ಅಡಚಣೆಯಿಂದ ಹಾಗೂ ವಯಸ್ಸಾದಂತೆಯೇ ಅಥವಾ ಇತರ ಕಾರಣಗಳಿಂದ ರಕ್ತನಾಳಗಳು ಪೆಡಸಾದಾಗ, ಹೃದಯಕ್ಕೆ ಪೂರೈಕೆಯಾಗುವ ರಕ್ತದ ಪ್ರಮಾಣವು ಕುಂಠಿತಗೊಳ್ಳುತ್ತದೆ. ತತ್ಪರಿಣಾಮವಾಗಿ ಕಿಂಚಿತ್ ಶಾರೀರಿಕ ಶ್ರಮದ ಕೆಲಸ ಮಾಡಿದೊಡನೆ " ಎಂಜೈನಾ " ಎಂದು ಕರೆಯಲ್ಪಡುವ ಎದೆನೋವು ಪ್ರಾರಂಭವಾಗುವುದು. ಎಂಜೈನಾದ ಅವಧಿ ಮತ್ತು ತೀವ್ರತೆಯು ಕೊರೋನರಿ ರಕ್ತನಾಳಗಳಲ್ಲಿನ ಅಡಚಣೆಯ ಮತ್ತು ಶಾರೀರಿಕ ಶ್ರಮದ ತೀವ್ರತೆಯ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚು ಅಥವಾ ಕಡಿಮೆಯಾಗುವುದು. ಅಂತೆಯೇ ರೋಗಿ ವಿರಮಿಸುತ್ತಿರುವಾಗ ಹೃದಯಕ್ಕೆ ಹೆಚ್ಚಿನ ರಕ್ತದ ಪೂರೈಕೆಯ ಅವಶ್ಯಕತೆ ಇಲ್ಲದಿರುವುದರಿಂದ, ಸಾಮಾನ್ಯವಾಗಿ ಎಂಜೈನಾ ಪೀಡಿಸುವುದಿಲ್ಲ. 

ಹೆಪ್ಪುಗಟ್ಟಿದ ರಕ್ತದ ತುಣುಕು ಅಥವಾ ಕೊಬ್ಬಿನಿಂದಾಗಿ ಯಾವುದೇ ಒಂದು ಕೊರೋನರಿ ರಕ್ತನಾಳದಲ್ಲಿ ಸಂಪೂರ್ಣ ಅಡಚಣೆ ಉದ್ಭವಿಸಿದಾಗ, ಹೃದಯದ ಒಂದು ಭಾಗಕ್ಕೆ ರಕ್ತದ ಪೂರೈಕೆಯೂ ಸ್ಥಗಿತಗೊಳ್ಳುತ್ತದೆ. ಇಂತಹ ಅಡಚಣೆಯ ಅವಧಿ ೨೦ ನಿಮಿಷಗಳನ್ನು ಮೀರಿದಲ್ಲಿ, ಆ ಭಾಗದ ಮಾಂಸಪೇಶಿಗಳು ಮೃತಪಡುತ್ತವೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು " ಮಯೋಕಾರ್ಡಿಯಲ್ ಇನ್ಫಾರ್ಕ್ಶನ್ " ಎನ್ನುತ್ತಾರೆ. ಜನಸಾಮಾನ್ಯರು ಮಾತ್ರ ಇದನ್ನು ಹಾರ್ಟ್ ಅಟಾಕ್ ಎಂದೇ ಕರೆಯುವುದು ವಾಡಿಕೆಯಾಗಿದೆ. 

ಹೃದಯಾಘಾತದ ಪ್ರಕ್ರಿಯೆಗಳಿಗೆ ನಿಖರವಾಗಿ ಹಾಗೂ ನಿರ್ದಿಷ್ಟವಾಗಿ ಕಾರಣೀಭೂತವೆನಿಸುವ ಅಂಶಗಳನ್ನು ಅರಿತುಕೊಳ್ಳಲು ಇಂದಿಗೂ ಸಂಶೋಧನೆಗಳು ನಡೆಯುತ್ತಿವೆ. 

ಹೃದಯಾಘಾತದ ಲಕ್ಷಣಗಳು 

ಎದೆಯ ಮಧ್ಯಭಾಗದಲ್ಲಿ ತೀವ್ರ ನೋವು, ಕುತ್ತಿಗೆ,ಹೆಗಲು ಹಾಗೂ ಕೈಗಳಿಗೆ ನೋವು ಹರಿದಾಡಿದಂತಹ ಅನುಭವ, ಉಸಿರಾಡಲು ಕಷ್ಟವೆನಿಸುವುದು, ತಲೆತಿರುಗಿದಂತಾಗುದು, ಕಣ್ಣು ಕತ್ತಲಾವರಿಸಿದಂತಾಗುವುದು, ತೀವ್ರ ಎದೆಬಡಿತ, ಅಸಹಜ ಆಯಾಸ, ಅತಿಯಾಗಿ ಬೆವರುವುದು, ವಾಕರಿಕೆ ಅಥವಾ ವಾಂತಿ ಮತ್ತು ಹೊಟ್ಟೆ ತೊಳಸಿದಂತಾಗುವುದೇ ಮುಂತಾದ ಲಕ್ಷಣಗಳು ಸಾಮಾನ್ಯವಾಗಿ ಹೃದಯಾಘಾತ ಸಂಭವಿಸಿದಾಗ ಕಂಡುಬರುತ್ತವೆ. ಆದರೆ ಅಪರೂಪದಲ್ಲಿ ಮಧುಮೇಹ ಪೀಡಿತರಲ್ಲಿ ಎದೆನೋವು ಕಾಣಿಸಿಕೊಳ್ಳದೇ ಹೃದಯಾಘಾತ ಸಂಭವಿಸುವುದುಂಟು. ಇದನ್ನು ಸೈಲೆಂಟ್ ಅಟಾಕ್ ಎನ್ನುವರು. 

ಕಾರಣವೆನಿಸಬಲ್ಲ ಅಂಶಗಳು 

ಸುಖ ವೈಭೋಗದ ಜೀವನಶೈಲಿ, ನಿಷ್ಕ್ರಿಯತೆ, ಕೊಬ್ಬು ಇತ್ಯಾದಿಗಳಿಂದ ಸಮೃದ್ಧವಾದ ಹಾಗೂ ಅತಿಆಹಾರ ಸೇವನೆ, ಧೂಮ- ಮದ್ಯಪಾನ, ಅಧಿಕ ರಕ್ತದೊತ್ತಡ, ಅಧಿಕತೂಕ, ಅತಿಬೊಜ್ಜು, ಮಧುಮೇಹ, ತೀವ್ರ ರಕ್ತಹೀನತೆ, ತೀವ್ರ ಮಾನಸಿಕ ಒತ್ತಡ- ಖಿನ್ನತೆ,ರಕ್ತದಲ್ಲಿ ಅತಿಯಾಗಿರುವ ಕೊಲೆಸ್ಟರಾಲ್- ಟ್ರೈಗ್ಲಿಸರೈಡ್ ಗಳು, ತೀವ್ರ ಭಯ-ಸಂತೋಷ ಅಥವಾ ದುಃಖ, ಅನುವಂಶೀಯತೆ ಮತ್ತು ಕೆಲವೊಂದು ವೈದ್ಯಕೀಯ ಕಾರಣಗಳು ಹಾಗೂ ಸನ್ನಿವೇಶಗಳು ಹೃದಯಾಘಾತಕ್ಕೆ ಕಾರಣವೆನಿಸುವ ಸಾಧ್ಯತೆಗಳಿವೆ. 

ಹೃದಯಾಘಾತವಾದಾಗ ಏನುಮಾಡಬೇಕು?

ಯಾವುದೇ ವ್ಯಕ್ತಿಗೆ ಹೃದಯಾಘಾತವಾಗಿದೆ ಎನ್ನುವ ಸಂದೇಹ ಮೂಡಿದಲ್ಲಿ ರೋಗಿಗೆ ಶಾರೀರಿಕ ಶ್ರಮವಾಗದಂತೆ ಮುನ್ನೆಚ್ಚರಿಕೆ ವಹಿಸಿ, ಆತನನ್ನು ಕ್ಷಿಪ್ರಗತಿಯಲ್ಲಿ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಿ ತುರ್ತುಚಿಕಿತ್ಸೆ ನೀಡಬೇಕು. ಹ್ರುದ್ರೋಗವಿರುವ ಅಥವಾ ಹಿಂದೊಮ್ಮೆ ಹೃದಯಾಘಾತಕ್ಕೆ ಈಡಾಗಿದ್ದ ವ್ಯಕ್ತಿಗಳಿಗೆ, ಅವರ ವೈದ್ಯರು ಇಂತಹ ಸ್ಥಿತಿಯಲ್ಲಿ ಬಳಸುವಂತೆ ಸೂಚಿಸಿದ್ದ ಗುಳಿಗೆಯನ್ನು ನಾಲಗೆಯ ಕೆಳಗೆ ಇರಿಸುವುದು ಪ್ರಾಣರಕ್ಷಕವೆನಿಸಬಲ್ಲದು. ಹಿಂದೆ ಹೃದ್ರೋಗದ ಸಮಸ್ಯೆ ಇದ್ದಿಲ್ಲದ ವ್ಯಕ್ತಿಗಳಿಗೆ ಒಂದು " ಆಸ್ಪಿರಿನ್ " ಮಾತ್ರೆಯನ್ನು ಇಂತಹ ಸಂದರ್ಭದಲ್ಲಿ ನೀಡಬಹುದು. ಆದರೆ ವೃಥಾ ಕಾಲಹರಣ ಮಾಡುವುದು ರೋಗಿಯ ಜೀವರಕ್ಷಣೆಯ ದೃಷ್ಟಿಯಿಂದ ಹಿತಕರವಲ್ಲ. 



ಚಿಕಿತ್ಸೆ: ಎಂತು- ಏನು ?

ಹೃದಯಾಘಾತಕ್ಕೆ ಈಡಾದ ವ್ಯಕ್ತಿಯನ್ನು ಹೃದ್ರೋಗ ಚಿಕಿತ್ಸಾ ಸೌಲಭ್ಯವಿರುವ ಸುಸಜ್ಜಿತ ಆಸ್ಪತ್ರೆಯಲ್ಲಿ ದಾಖಲಿಸುವುದು ಹಿತಕರ. ಚಿಕಿತ್ಸೆಯ ಮೂಲ ಉದ್ದೇಶವೇ ರೋಗಿಯನ್ನು ಪೀಡಿಸುತ್ತಿರುವ ತೀವ್ರ ಎದೆನೋವನ್ನು ಶಮನಗೊಳಿಸುವ, ಶಾಕ್ ಮತ್ತು ಹೃದಯ ವೈಫಾಲ್ಯಗಳನ್ನು ಸರಿಪಡಿಸುವ ಮತ್ತು ಹೃದಯದ ಕಾರ್ಯಾಚರಣೆಯ ಒತ್ತಡವನ್ನು ಕಡಿಮೆ ಮಾಡುವುದೇ ಆಗಿದೆ. ಇದರೊಂದಿಗೆ ಕೊರೋನರಿ ರಕ್ತನಾಳಗಳಲ್ಲಿನ ಅಡಚಣೆಗಳನ್ನು ನಿವಾರಿಸಿ, ಹೃದಯಕ್ಕೆ ಸಮರ್ಪಕವಾಗಿ ರಕ್ತದ ಸರಬರಾಜಾಗುವಂತೆ ತುರ್ತು ಚಿಕಿತ್ಸೆ ನೀಡಬೇಕಾಗುವುದು. ಹೃದಯಾಘಾತಕ್ಕೆ ಈಡಾದ ಕೆಲ ರೋಗಿಗಳಲ್ಲಿ ಈ ಸಂದರ್ಬ್ಜದಲ್ಲಿ ಉದ್ಭವಿಸಬಲ್ಲ ಕೆಲವೊಂದು ಗಂಭೀರ - ಮಾರಕ ಸಮಸ್ಯೆಗಳಿಂದ ಆತನನ್ನು ರಕ್ಷಿಸಲು ವೈದ್ಯಕೀಯ ಸಿಬಂದಿ ಸಜ್ಜಾಗಿರಬೇಕಾಗುವುದು. ಹೃದಯಾಘಾತದ ತೀವ್ರತೆ, ರೋಗಿಯ ವಯಸ್ಸು, ಆತನಲ್ಲಿರಬಹುದಾದ ಅನ್ಯ ಕಾಯಿಲೆಗಳು ಹಾಗೂ ವೈದ್ಯಕೀಯ ಚಿಕಿತ್ಸೆಯನ್ನು ಆರಂಭಿಸಲು ತಗಲಿದ ಅವಧಿಗಳನ್ನು ಹೊಂದಿಕೊಂಡು ಚಿಕಿತ್ಸೆಯ ಫಲಿತಾಂಶದ ಗತಿ ಬದಲಾಗುವ ಸಾಧ್ಯತೆಗಳಿವೆ. 

ಆಸ್ಪತ್ರೆಗೆ ಕರೆತಂದ ರೋಗಿಯ ನಾಡಿ - ಹೃದಯ ಬಡಿತ, ರಕ್ತದೊತ್ತಡ ಹಾಗೂ ಇ.ಸಿ.ಜಿ ಮತ್ತಿತರ ಪರೀಕ್ಷೆಗಳನ್ನು ನಡೆಸುವ ಮೂಲಕ ಹೃದಯಾಘಾತ ಆಗಿರುವುದನ್ನು ಖಚಿತಪಡಿಸಿಕೊಂಡ ವೈದ್ಯರು, ರೋಗಿಯನ್ನು ಇಂಟೆನ್ಸಿವ್ ಕೊರೋನರಿ ಕೇರ್ ಯೂನಿಟ್ ಅಥವಾ ಇಂಟೆನ್ಸಿವ್ ಕೇರ್ ಯೂನಿಟ್ ನಲ್ಲಿ ದಾಖಲಿಸಿ ಚಿಕಿತ್ಸೆಯನ್ನು ಆರಂಭಿಸುವರು. ರೋಗಿಯ ಸ್ಥಿತಿಗತಿಗಳಿಗೆ ಅನುಗುಣವಾಗಿ ಶ್ವಾಸೋಚ್ಛ್ವಾಸ ಸುಲಭವಾಗುವಂತೆ ಆಮ್ಲಜನಕ ಹಾಗೂ ತೀವ್ರ ಎದೆನೋವು ಮತ್ತು ಇತರ ಸಮಸ್ಯೆಗಳಿಗೆ ಸೂಕ್ತ ಔಷದೋಪಚಾರಗಳನ್ನು ನೀಡುವರು. ಸಾಮಾನ್ಯವಾಗಿ ಕೊರೋನರಿ ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದ ರಕ್ತದಿಂದ ಉದ್ಭವಿಸಿದ ಅಡಚಣೆಯೇ ಹೃದಯಾಘಾತಕ್ಕೆ ಕಾರಣವಾಗಿರುವುದರಿಂದ, ಇದರ ನಿವಾರಣೆಗೆ ಕ್ಷಿಪ್ರ ಚಿಕಿತ್ಸೆ ಅತ್ಯವಶ್ಯಕ ಎನಿಸುವುದು. ಹೆಪ್ಪುಗಟ್ಟಿದ ರಕ್ತವನ್ನು ಮತ್ತೆ ತೆಳ್ಳಗಾಗಿಸಬಲ್ಲ ಔಷದಗಳನ್ನು ಹೃದಯಾಘಾತವಾದ ೬ ರಿಂದ ೧೨ ಗಂಟೆಗಳ ಒಳಗಾಗಿ ನೀಡಬೇಕಾಗುವುದು. 

ಆಕಸ್ಮಿಕವಾಗಿ ತಲೆದೋರುವ ಹೃದಯ ಸಂಬಂಧಿ ಅನ್ಯ ಸಮಸ್ಯೆಗಳನ್ನು ಅರಿತುಕೊಳ್ಳಲು, ಹೃದಯ ಬಡಿತದ ಗತಿ- ಲಯಗಳನ್ನು ನಿರಂತರವಾಗಿ ತೋರಿಸಬಲ್ಲ ಕಾರ್ಡಿಯಾಕ್ ಮಾನಿಟರ್ ಣ ಅಳವಡಿಕೆ ಅತ್ಯವಶ್ಯಕವೂ ಹೌದು. ಕಾರ್ಡಿಯಾಕ್ ಅರಿಥ್ಮಿಯಾಸ್ ಎನ್ನುವ ಹೃದಯದ ಗತಿ- ಲಯಗಳಲ್ಲಿ  ಕಾಣಿಸಿಕೊಳ್ಳುವ ವೈಪರೀತ್ಯಗಳಿಂದಾಗಿ ಹೃದಯದ ವೈಫಲ್ಯ ಹಾಗೂ ರಕ್ತದೊತ್ತಡ ಕುಸಿಯುವ ಸಂಭವವಿದ್ದು, ಇದನ್ನು ತುರ್ತುಚಿಕಿತ್ಸೆ ನೀಡಿ ಸರಿಪಡಿಸದೆ ಇದ್ದಲ್ಲಿ ಪ್ರಾಣಾಂತಿಕವೆನಿಸಬಲ್ಲದು. 

ಹೃದಯ ರೋಗಗಳನ್ನು ಚಿಕಿತ್ಸಿಸುವ ಸೌಲಭ್ಯಗಳಿರುವ ಆಸ್ಪತ್ರೆಗಳಲ್ಲಿ ಹೃದಯಾಘಾತಕ್ಕೆ ಒಳಗಾದ ರೋಗಿಗಳಿಗೆ ತುರ್ತು ಚಿಕಿತ್ಸೆಯ ಅಂಗವಾಗಿ ಎಂಜಿಯೋ ಗ್ರಾಂ ಪರೀಕ್ಷೆಯನ್ನು ನಡೆಸಿ, ಕೊರೋನರಿ ರಕ್ತನಾಳಗಳಲ್ಲಿನ ಅಡಚಣೆಯ ಪ್ರಮಾಣವನ್ನು ಅರಿತುಕೊಳ್ಳಬಹುದಾಗಿದೆ. ಈ ಅಡಚಣೆಯನ್ನು ಎಂಜಿಯೋ ಪ್ಲಾಸ್ಟಿಯ ಮೂಲಕ ನಿವಾರಿಸುವ ಹಾಗೂ ಅವಶ್ಯಕತೆಯಿದ್ದಲ್ಲಿ " ಸ್ಟೆಂಟ್ " ಅಳವಡಿಸುವ ಚಿಕಿತ್ಸೆಯನ್ನು ತಕ್ಷಣ ನೀಡಬಹುದಾಗಿದೆ. ಇದರಿಂದಾಗಿ ಹೃದಯಕ್ಕೆ ಸರಾಗವಾಗಿ ರಕ್ತದ ಪೂರೈಕೆಯು ಸಾಧ್ಯವಾಗುವುದು. ಆದರೆ ಈ ಚಿಕಿತ್ಸೆಯನು ಹೃದಯಾಘಾತವಾದ ೬ ಗಂಟೆಗಳ ಒಳಗೆ ನಡೆಸಬೇಕಾಗುತ್ತದೆ. ತೀವ್ರ ಸ್ವರೂಪದ ಅದಚನೆಗಲಿರುವ ರೋಗಿಗಳಿಗೆ " ಬೈಪಾಸ್ " ಶಸ್ತ್ರಚಿಕಿತ್ಸೆ ಅನಿವಾರ್ಯವೆನಿಸುತ್ತದೆ. 

ಕೊರೋನರಿ ರಕ್ತನಾಳಗಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ನೀಡುವ ಔಷದಗಳಿಗಿಂತ ಈ ಚಿಕಿತ್ಸೆ ಪರಿಣಾಮಕಾರಿ ಎನಿಸುವುದಾದರೂ, ಇದರಲ್ಲೂ ಕೆಲ ಅನಪೇಕ್ಷಿತ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಆದರೆ ರೋಗಿಯ ಪ್ರಾಣರಕ್ಷಣೆಯ ದೃಷ್ಟಿಯಿಂದ ಇದರ ಸಾಧಕ- ಬಾಧಕಗಳನ್ನು ತುಲನೆ ಮಾಡಿದಾಗ ಸಾಧಕಗಳೇ ಮೇಲೆನಿಸುವುದು ಸತ್ಯ. 

ಸಾಮಾನ್ಯವಾಗಿ ಹೃದಯಕ್ಕೆ ಸಂಭವಿಸಿದ ಆಘಾತವು ೪ ರಿಂದ ೬ ವಾರಗಳ ಅವಧಿಯಲ್ಲಿ " ದುರಸ್ತಿ " ಯಾಗುವುದು. ಈ ಅವಧಿಯಲ್ಲಿ ರೋಗಿಗೆ ಸಂಪೂರ್ಣ ವಿಶ್ರಾಂತಿಯನ್ನು ನೀಡಲೇಬೇಕು. ಗಂಭೀರ ಸಮಸ್ಯೆಗಳಿರದ ಹಾಗೂ ಲಘು ಹ್ರುದಯಾಘಾತವಾಗಿರುವ ವ್ಯಕ್ತಿಗಳು ಕೆಲವೇ ದಿನಗಳಲ್ಲಿ ಎದ್ದು ಕುಳಿತುಕೊಳ್ಳುವುದು ಹಾಗೂ ವಾರ ಕಳೆದೊಡನೆ ನಡೆದಾಡಬಹುದಾಗಿದೆ. ಅಂತೆಯೇ ತೃಪ್ತಿಕರ ಫಲಿತಾಂಶ ಕಂಡುಬಂದ ರೋಗಿಗಳು ಹತ್ತು ದಿನಗಳು ಕಳೆದೊಡನೆ ಮನೆಗೆ ಮರಳಬಹುದಾಗಿದೆ. ಆರು ವಾರಗಳ ಬಳಿಕ ಮತ್ತೆ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶಗಳನ್ನು ಹೊಂದಿಕೊಂಡು, ರೋಗಿಯು ತನ್ನ ದೈನಂದಿನ ಕೆಲಸಕಾರ್ಯಗಳನ್ನು ನಿಧಾನವಾಗಿ ಆರಂಭಿಸಬಹುದು. 

ನಕಲಿ ವೈದ್ಯರ ಬಗ್ಗೆ ಎಚ್ಚರವಿರಲಿ 

ಮಾನವ ಶರೀರದ ಅಂಗ ರಚನೆ, ಶಾರೀರಿಕ ಕ್ರಿಯೆಗಳು, ವಿವಿಧ ರೀತಿಯ ರೋಗ ಪತ್ತೆಹಚ್ಚುವ ವಿಧಾನಗಳು- ಪರೀಕ್ಷೆಗಳು, ಸಹಸ್ರಾರು ವಿಧದ ವ್ಯಾಧಿಗಳು ಮತ್ತು ಇವುಗಳ ಚಿಕಿತ್ಸೆಗಳ ಬಗ್ಗೆ ಪ್ರಾಥಮಿಕ ಮಾಹಿತಿಯನ್ನೇ ತಿಳಿದಿರದ " ಪದವಿಹೀನ " ನಕಲಿ ವೈದ್ಯರು, ಅನೇಕ ಅಮಾಯಕರನ್ನು ಮರುಳುಮಾಡಿ ಹೃದ್ರೋಗಗಳಿಗೂಚಿಕಿತ್ಸೆ ನೀಡುವುದುಂಟು. 

ತನ್ನಲ್ಲಿ ಬಂದಿರುವ ರೋಗಿಯ ಅಜ್ಞಾನ ಹಾಗೂ ಆತನ ಹಣದ ಥೈಲಿಯನ್ನು ಹೊಂದಿಕೊಂಡು, ಸಹಸ್ರಾರು ರೂಪಾಯಿಗಳನ್ನು ದೋಚುವ ಇಂತಹ ವಂಚಕ ಶಿಖಾಮಣಿಗಳಿಂದಾಗಿ ಬಹಳಷ್ಟು ರೋಗಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವುದು ಸತ್ಯ. ಅತ್ಯಂತ ಗಂಭೀರ ಸಮಸ್ಯೆಗಳಿರುವ ರೋಗಿಗಳಿಗೂ ತಾನು ನೀಡುವ ಚಿಕಿತ್ಸೆಯಿಂದ ಕೆಲವಾರಗಳಲ್ಲೇ ಅದ್ಭುತ ಪರಿಣಾಮ ದೊರೆಯುವುದೆಂದು ಹೇಳಿ, ಬಳಿಕ ರೋಗಿ ಅದಾಗಲೇ ಸೇವಿಸುತ್ತಿದ್ದ ಔಷದಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಹೇಳುವುದು ಅಪರೂಪವೇನಲ್ಲ. ಈತನ ಔಷದಗಳನ್ನು ಸೇವಿಸುತ್ತಾ, ತಜ್ಞ ವೈದ್ಯರು ನೀಡಿದ್ದ ಔಷದಗಳ ಸೇವನೆಯನ್ನು ನಿಲ್ಲಿಸಿದ ಅನೇಕ ಅಮಾಯಕರು, ಕೆಲವೇ ದಿನಗಳಲ್ಲಿ ಉಸಿರಾಡುವುದನ್ನೇ ನಿಲ್ಲಿಸಿದ ಘಟನೆಗಳು ಸಾಕಷ್ಟಿವೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ.೧೫-೦೧-೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 




Monday, July 28, 2014

AKRAMA - SAKRAMA AND CORRUPTION




 ಅಕ್ರಮ ಎಸಗಿದವರು ನಿರಾಳ : ಕಾನೂನು ಪರಿಪಾಲಿಸಿದವರಿಗೆ ಕಿರುಕುಳ !

ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ, ವಾಣಿಜ್ಯ ಅಥವಾ ಅನ್ಯ ಉದ್ದೇಶಕ್ಕಾಗಿ ನೂತನ ಕಟ್ಟಡಗಳನ್ನು ನಿರ್ಮಿಸುವಾಗ, ರಸ್ತೆಯಿಂದ ಇಂತಿಷ್ಟು ಅಂತರವನ್ನು ಇರಿಸಿಕೊಳ್ಳಲೇಬೇಕೆನ್ನುವ ನಿಯಮವನ್ನು ಪರಿಪಾಲಿಸಬೇಕಾಗುತ್ತದೆ. ಈ ಅಂತರವು ನಗರದ ಪ್ರಧಾನರಸ್ತೆ, ಉಪರಸ್ತೆ ಮತ್ತು ಒಳರಸ್ತೆಗಳಿಗೆ ಅನುಗುಣವಾಗಿ ಒಂದಿಷ್ಟು ವ್ಯತ್ಯಯವಾಗುತ್ತದೆ. ಇದಲ್ಲದೇ ವಸತಿ ಸಮುಚ್ಚಯಗಳು, ಬಹುಮಹಡಿ ಕಟ್ಟಡಗಳು ಮತ್ತು ಹಲವಾರು ವಾಣಿಜ್ಯ ಮಳಿಗೆಗಳಿರುವ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವಾಗ, ಈ ಕಟ್ಟಡಗಳಲ್ಲಿರುವ ಅಂತಸ್ತುಗಳ ಸಂಖ್ಯೆ, ವಸತಿಗಳ ಸಂಖ್ಯೆ ಅಥವಾ ವಾಣಿಜ್ಯ ಮಳಿಗೆಗಳ ಸಂಖ್ಯೆಗಳಿಗೆ ಅನುಗುಣವಾಗಿ ಇಲ್ಲಿನ ನಿವಾಸಿಗಳ ಮತ್ತು ಇಲ್ಲಿಗೆ ಭೇಟಿ ನೀಡಬಹುದಾದ ಗ್ರಾಹಕರ ವಾಹನಗಳ ಸಂಖ್ಯೆಗಳ ಆಧಾರದ ಮೇಲೆ ವಾಹನಗಳ ನಿಲುಗಡೆಗೆ ಸ್ಥಳಾವಕಾಶವನ್ನು ಒದಗಿಸಲೇಬೇಕಾವುದು. ಕಟ್ಟಡದ ನಕ್ಷೆಯಲ್ಲಿ ಈ ಪ್ರಮುಖ ಅಂಶಗಳು ಇಲ್ಲದೆ ಇದ್ದಲ್ಲಿ, ನೂತನ ಕಟ್ಟಡದ ನಿರ್ಮಾಣಕ್ಕೆ ಪರವಾನಿಗೆಯನ್ನು ನಿರಾಕರಿಸಲಾಗುವುದು. ಇದು ರಾಜ್ಯ ಸರ್ಕಾರ ರೂಪಿಸಿರುವ ಹಾಗೂ ಕಾಲಕಾಲಕ್ಕೆ ತಕ್ಕಂತೆ ಪರಿಷ್ಕರಿಸಲ್ಪಡುವ ನಿಯಮವಾಗಿದ್ದು, ಬಹುತೇಕ ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಾರೆ. ಅಂತೆಯೇ ಅಧಿಕತಮ ಜನರೂ ಈ ನೀತಿನಿಯಮಗಳನ್ನು ತಪ್ಪದೇ ಪರಿಪಾಲಿಸುತ್ತಾರೆ. 

ಆದರೆ ಇತ್ತೀಚಿನ ಕೆಲವರ್ಷಗಳಿಂದ ಇಂತಹ ನೀತಿನಿಯಮಗಳನ್ನು ಪರಿಪಾಲಿಸುವ ವ್ಯಕ್ತಿಗಳಿಗೆ ಕಿರುಕುಳ ನೀಡುವ ಮತ್ತು ಇವುಗಳನ್ನು ಉಲ್ಲಂಘಿಸುವ ವ್ಯಕ್ತಿಗಳಿಗೆ " ರಾಜ ಮರ್ಯಾದೆ" ಯನ್ನು ನೀಡುವ ಪರಿಪಾಠ ಆರಂಭವಾಗಿದ್ದು, ಇದಕ್ಕೆ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ಮತ್ತು  ರಾಜಕೀಯ ಪಕ್ಷಗಳ ಪ್ರಭಾವಶಾಲಿ ಕಾರ್ಯಕರ್ತರೂ ಕಾರಣವೆನಿಸಿದ್ದಾರೆ. ಇದರೊಂದಿಗೆ ನಿಗದಿತ ಕಾನೂನುಗಳನ್ನು ಪರಿಪಾಲಿಸಿದರೂ ಕಿರುಕುಳ ನೀಡುವ ಅಧಿಕಾರಿಗಳ ಕೆಟ್ಟ ಹವ್ಯಾಸದಿಂದ ನೊಂದ ಕೆಲ ಜನರು, ಅನ್ಯಮಾರ್ಗವಿಲ್ಲದೇ ತತ್ಸಂಬಂಧಿತ ಅಧಿಕಾರಿಗಳಿಗೆ ಕಪ್ಪ- ಕಾಣಿಕೆಗಳನ್ನು ಸಲ್ಲಿಸುವ ಮೂಲಕ ತಮ್ಮ ಕಟ್ಟಡದ ನಿರ್ಮಾಣಕ್ಕೆ ಪರವಾನಿಗೆಯನ್ನು ಪಡೆದುಕೊಳ್ಳುತ್ತಾರೆ. ಈ ರೀತಿಯಲ್ಲಿ ಸರ್ಕಾರವೇ ರೂಪಿಸಿರುವ ನೀತಿನಿಯಮಗಳನ್ನು ಉಲ್ಲಂಘಿಸುವುದರಿಂದ, ಅಧಿಕತಮ ನಗರ- ಪಟ್ಟಣಗಳ ರಸ್ತೆಗಳು ವಿಸ್ತರಿತಗೊಳ್ಳದೇ ಯಥಾಸ್ಥಿತಿಯಲ್ಲಿ ಉಳಿದುಕೊಳ್ಳುತ್ತವೆ. ತತ್ಪರಿಣಾಮವಾಗಿ ಆಯಾ ನಗರ- ಪಟ್ಟಣಗಳಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಲಭಿಸದ ಕಾರಣದಿಂದಾಗಿ ವಾಹನಗಳು ರಸ್ತೆಯ ಅಂಚಿನಲ್ಲೇ ತಂಗುತ್ತವೆ. ಹಾಗೂ ಇದೇ ಕಾರಣದಿಂದಾಗಿ ಸ್ಥಳೀಯ ರಸ್ತೆಗಳಲ್ಲಿ ಜನ- ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವುದರಿಂದ, ದಿನನಿತ್ಯ ಟ್ರಾಫಿಕ್ ಜಾಮ್ ಉದ್ಭವಿಸುತ್ತದೆ. ದ.ಕ ಜಿಲ್ಲೆಯ ಪುತ್ತೂರು ನಗರವೂ ಈ ಸಮಸ್ಯೆಗೆ ಅಪವಾದವೆನಿಸಿಲ್ಲ. 

ಅಕ್ರಮ ಕಟ್ಟಡಗಳು 

ಪುತ್ತೂರಿನ ಪ್ರಧಾನ ರಸ್ತೆಯೂ ಸೇರಿದಂತೆ, ನಗರದ ವಿವಿಧಭಾಗಗಳಲ್ಲಿರುವ ಅನೇಕ ರಸ್ತೆಗಳ ಅಂಚಿನಲ್ಲೇ ನೂತನ ಕಟ್ಟಡಗಳನ್ನು ನಿರ್ಮಿಸಿರುವುದನ್ನು ನೀವೂ ಗಮನಿಸಿರಲೇಬೇಕು. ಅದೇ ರೀತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿದ್ದ ಅನೇಕ ಬಹುಮಹಡಿ ವಾಣಿಜ್ಯ ಸಂಕೀರ್ಣ ಮತ್ತು ಅನ್ಯ ಕಟ್ಟಡಗಳ ನೆಲ ಅಂತಸ್ತಿನಲ್ಲಿ ವಾಹನಗಳ ಪಾರ್ಕಿಂಗ್ ಎಂದು ನಕ್ಷೆಯಲ್ಲಿ ತೋರಿಸಿ, ಬಳಿಕ ವಾಣಿಜ್ಯ ಮಳಿಗೆಗಳನ್ನು ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ವಿಶೇಷವೆಂದರೆ ಇಂತಹ ಕಟ್ಟಡಗಳ ಮಾಲೀಕರು ಇದೀಗ ಮತ್ತೊಮ್ಮೆ ಕಾನೂನು ಬಾಹಿರವಾಗಿ ತಮ್ಮ ಬಹುಮಹಡಿ ಕಟ್ಟಡಗಳ ಮೇಲೆ ಮತ್ತೊಂದು ಅಂತಸ್ತನ್ನು ನಿರ್ಮಿಸಲು ಪುರಸಭೆಯ ಅಧಿಕಾರಿಗಳು ಅನುಮತಿಯನ್ನು ನೀಡಿರುವುದಾದರೂ ಹೇಗೆ?, ಎನ್ನುವ ಸಂದೇಹ ನಿಮ್ಮನ್ನೂ ಕಾಡುತ್ತಿರಬಹುದು.ಈ ಬಗ್ಗೆ ವಿಚಾರಿಸಿದಾಗ, ಕಟ್ಟಡದ ಮಾಲಕರಿಗೆ ನೋಟೀಸ್ ಜಾರಿಮಾಡಲಾಗಿದೆ ಎನ್ನುವ ಉತ್ತರ ದೊರೆಯುತ್ತದೆ. ಆದರೆ ಇಂದಿನ ತನಕ ಇಂತಹ ಅಕ್ರಮ ಕಟ್ಟಡಗಳನ್ನು ಕೆಡವಿದ ಒಂದೇ ಒಂದು ಉದಾಹರಣೆ ಪುತ್ತೂರಿನಲ್ಲಿ ನಡೆದಿಲ್ಲ.ಅಂತೆಯೇ ಬಹುಮಹಡಿ ಕಟ್ಟಡಗಳ ನೆಲ ಅಂತಸ್ತಿನಲ್ಲಿ ವಾಹನಗಳ ಪಾರ್ಕಿಂಗ್ ಎಂದು ನಕ್ಷೆಯಲ್ಲಿ ನಮೂದಿಸಿ, ಬಳಿಕ ಅಕ್ರಮವಾಗಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಿ ಪಾರ್ಕಿಂಗ್ ಸ್ಥಳಾವಕಾಶವನ್ನು ಕಲ್ಪಿಸಿರುವ ಒಂದೇ ಒಂದು ಉದಾಹರಣೆಯೂ ಕಾಣಸಿಕ್ಕಿಲ್ಲ. ಇದನ್ನು  ಒಂದು ಕಣ್ಣಿಗೆ ಬೆಣ್ಣೆ ಎನ್ನುವುದಾದಲ್ಲಿ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವ ಪ್ರವರ ಇಂತಿದೆ. 

ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸುವ ಮುನ್ನ ಅವಶ್ಯಕ ದಾಖಲೆಗಳು ಮತ್ತು ಕಟ್ಟಡದ ನಕ್ಷೆ ಇತ್ಯಾದಿಗಳನ್ನು ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿ, ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ತದನಂತರ ಈ ದಾಖಲೆಗಳು, ನಕ್ಷೆಗಳು ಮತ್ತು ಪುಡಾ ನೀಡಿದ ಅನುಮತಿ ಪತ್ರಗಳನ್ನು ಪುರಸಭೆಗೆ ನೀಡಿ, ನಿಗದಿತ ಅಭಿವೃದ್ಧಿ ಶುಲ್ಕ ಹಾಗೂ ಅನ್ನಿತರ ಶುಲ್ಕಗಳನ್ನು ಪಾವತಿಸಿ ಕಟ್ಟಡ ನಿರ್ಮಾಣ ಪರವಾನಿಗೆಯನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಕೆಲ ಪ್ರಕರಣಗಳಲ್ಲಿ ಕಟ್ಟಡದ ನಕ್ಷೆಯಲ್ಲಿರುವ ಸೆಟ್ ಬ್ಯಾಕ್, ವಾಹನಗಳ ಪಾರ್ಕಿಂಗ್ ಇತ್ಯಾದಿಗಳು ನಿಯಮದಂತೆ ಇವೆ ಎಂದು ಪುಡಾ ಅಧಿಕಾರಿಗಳು ಅನುಮೋದಿಸಿ ಅನುಮತಿಯನ್ನು ನೀಡಿದ್ದರೂ, ಪಾದಚಾರಿಗಳು ನಡೆದಾಡಲು ಇರುವಂತಹ ಕಾಲುದಾರಿಯನ್ನು ಪಾರ್ಕಿಂಗ್ ಪ್ರದೇಶವೆಂದು ತೋರಿಸಿರುವುದಾಗಿ ನೆಪವನ್ನು ಒಡ್ಡುವ ಮೂಲಕ, ಅರ್ಜಿದಾರರನ್ನು ಅನಾವಶ್ಯಕವಾಗಿ ಸತಾಯಿಸಿ ಕಿರುಕುಳವನ್ನು ನೀಡುತ್ತಿರುವ ಪ್ರಕರಣಗಳು  ಇತ್ತೀಚೆಗೆ ನಡೆದಿದೆ. ಪ್ರಾಯಶಃ ಇದೇ ರೀತಿಯಲ್ಲಿ ಇಲ್ಲಸಲ್ಲದ ನೆಪವನ್ನು ಮುಂದೊಡ್ಡಿ, ಕಾನೂನಿನಂತೆ ಕಟ್ಟಡಗಳನ್ನು ನಿರ್ಮಿಸಲು ಅರ್ಜಿಸಲ್ಲಿಸಿದ ಪ್ರಾಮಾಣಿಕ ಜನರಿಗೆ ತೊಂದರೆ ನೀಡುವ ಘಟನೆಗಳ ಸಂಖ್ಯೆಯೂ ಹೆಚ್ಚುತ್ತಿರುವ ಸಾಧ್ಯತೆಗಳೂ ಇವೆ. ಜನಸಾಮಾನ್ಯರು ದೂರುವಂತೆ ಇಂತಹ ಕೆಲಸಕಾರ್ಯಗಳನ್ನು ಕ್ಷಿಪ್ರಗತಿಯಲ್ಲಿ ಮಾಡಿಸಿ ಕೊಡುವ ಮಧ್ಯವರ್ತಿಗಳ ಮೂಲಕ ವ್ಯವಹಾರವನ್ನು ನಡೆಸಿದಲ್ಲಿ, ರಾಜಕೀಯ ಪ್ರಭಾವವನ್ನು ಬಳಸಿದಲ್ಲಿ ಅಥವಾ ಅನಧಿಕೃತವಾಗಿ ಕಪ್ಪ-ಕಾಣಿಕೆಗಳನ್ನು ಸಲ್ಲಿಸಿದಲ್ಲಿ, ಯಾವುದೇ ರೀತಿಯ ಅಡೆತಡೆಗಳಿಲ್ಲದೇ ಪರವಾನಿಗೆಯನ್ನು ಪಡೆದುಕೊಳ್ಳಬಹುದಾಗಿದೆ!. 

ಕಾನೂನುಗಳನ್ನು ರೂಪಿಸಿವುದೇಕೆ?

ನಮ್ಮ ದೇಶದ ಜನತೆ ನೆಮ್ಮದಿಯಿಂದ ಜೀವಿಸಲು ಅನುಕೂಲವಾಗುವಂತೆ ಅನೇಕ ಕಾನೂನುಗಳನ್ನು ರೂಪಿಸಲಾಗಿದೆ. ಆದರೆ ಇವೆಲ್ಲಾ ಕಾನೂನುಗಳನ್ನು ಅನುಷ್ಠಾನಗೊಳಿಸಲು ಬೇಕಾದ ಇಚ್ಚಾಶಕ್ತಿ ನಮ್ಮನ್ನಾಳುವವರಲ್ಲಿ ಇಲ್ಲದಾಗಿದೆ. ಇದರೊಂದಿಗೆ ಭ್ರಷ್ಟಾಚಾರದ ಕಬಂಧಬಾಹುಗಳು ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಕವಾಗಿ ಹರಡಿದ್ದು, ಕಾನೂನುಗಳನ್ನು ಉಲ್ಲಂಘಿಸುವ ವ್ಯಕ್ತಿಗಳಿಗೆ ಶ್ರೀರಕ್ಷೆಯಾಗಿ ಪರಿಣಮಿಸಿದೆ. 

ಇಷ್ಟು ಮಾತ್ರವಲ್ಲ, ಸರ್ಕಾರವೇ ಅನೇಕ ಸಂದರ್ಭಗಳಲ್ಲಿ " ಅಕ್ರಮ " ಗಳನ್ನು " ಸಕ್ರಮ " ಗೊಳಿಸುವ ಕಾಯಿದೆಗಳನ್ನು ರೂಪಿಸಿ ಜಾರಿಗೊಳಿಸುವ ಮೂಲಕ, ನಿರಂತರವಾಗಿ ನಡೆಯುತ್ತಿರುವ ಅಕ್ರಮಗಳಿಗೆ ಪರೋಕ್ಷವಾಗಿ ಬೆಂಬಲವನ್ನು ನೀಡುತ್ತಿದೆ. ತತ್ಪರಿಣಾಮವಾಗಿ ದೇಶದ ಪ್ರಾಮಾಣಿಕ ಪ್ರಜೆಗಳು ಅಯಾಚಿತ ಸಮಸ್ಯೆಗಳಿಗೆ ಒಳಗಾಗುವಂತಹ ಸನ್ನಿವೇಶಗಳು ಸೃಷ್ಠಿಸಲ್ಪಡುತ್ತಿವೆ. ವಿಶೇಷವೆಂದರೆ ಸರ್ಕಾರಕ್ಕೆ ಈ ವಿಚಾರದ ಅರಿವಿದ್ದರೂ, ಅಧಿಕಾರದ ಗದ್ದುಗೆಯನ್ನು ಏರಿರುವ ರಾಜಕೀಯ ಪಕ್ಷಗಳ ನೇತಾರರು, ತಮ್ಮ " ಮತ ನಿಧಿ " ಗಳನ್ನು ಕಾಯ್ದುಕೊಳ್ಳಲು ಹಾಗೂ ಇನ್ನಷ್ಟು ವೃದ್ಧಿಸುವ ಸಲುವಾಗಿ ಇವೆಲ್ಲವನ್ನೂ ಕಂಡೂ ಕಾಣದಂತೆ ವರ್ತಿಸುತ್ತಾರೆ!. 

ಕೊನೆಯ ಮಾತು 

ಅಣ್ಣಾ ಹಜಾರೆಯವರ " ಭ್ರಷ್ಟಾಚಾರದ ವಿರುದ್ಧ ಹೋರಾಟ " ಕ್ಕೆ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಬೆಂಬಲವನ್ನು ನೀಡಿದ್ದ ದೇಶದ ಯುವಜನತೆ ಮತ್ತು ಮಧ್ಯಮ ವರ್ಗದ ಜನರು, ತಮ್ಮದೇ ಊರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಈ ರೀತಿಯ ಶೋಷಣೆಗಳ ವಿರುದ್ಧ ಹೋರಾಡಲು ಸಿದ್ಧರಿರುವುದಿಲ್ಲ. ಆದರೆ ಇಂತಹ ಘಟನೆಗಳು ಸಂಭವಿಸಿದಾಗ, ಇವುಗಳ ವಿರುದ್ಧ ಹೋರಾಡುತ್ತಿರುವ ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರನ್ನು ಸಂಪರ್ಕಿಸಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸುತ್ತಾರೆ. ಸಂಘಟನೆಗಳ ಕಾರ್ಯಕರ್ತರು ಈ ಬಗ್ಗೆ ಲಿಖಿತ ದೂರನ್ನು ನೀಡುವಂತೆ ಸೂಚಿಸಿದೊಡನೆ, ಅದೃಶ್ಯರಾಗುವ ದೂರುದಾರರು ಮತ್ತೆಂದೂ ಈ ಕಾರ್ಯಕರ್ತರನ್ನು ಸಂಪರ್ಕಿಸುವುದೇ ಇಲ್ಲ!.ಇದನ್ನು ಗಮನಿಸಿದಾಗ  ಆಂಗ್ಲ ಭಾಷೆಯಲ್ಲಿ ಹೇಳುವಂತೆ " ಮತ್ತೊಬ್ಬರ ಹೆಗಲಿನ ಮೇಲೆ ಬಂದೂಕನ್ನು ಇರಿಸಿ ಗುಂಡು ಹಾರಿಸುವ ಪ್ರವೃತ್ತಿ " ಯು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎನ್ನುವುದರಲ್ಲಿ ಮಾತ್ರ ಸಂದೇಹವಿಲ್ಲ. 

ನಿಜ ಹೇಳಬೇಕಿದ್ದಲ್ಲಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಂಘಟಿತ ಹೋರಾಟವನ್ನು ನಡೆಸಲು ಸಿದ್ಧರಿರುವ ಜನರಿಗೆ ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲಗಳನ್ನು ನೀಡಲು ಸಿದ್ಧರಿರುತ್ತಾರೆ. ಆದರೆ ಈ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ತಮ್ಮ ಬಗ್ಗೆ ಅವಶ್ಯಕ ಮಾಹಿತಿಗಳು ತಿಳಿಯುವ ಸಾಧ್ಯತೆಗಳಿರುವುದರಿಂದ, ಇನ್ನಷ್ಟು ಕಿರುಕುಳಕ್ಕೆ ಒಳಗಾಗಬಹುದೆನ್ನುವ ಭೀತಿಯಿಂದ ಸಂತ್ರಸ್ತರು ದೂರು ನೀಡಲು ಹಿಂಜರಿಯುತ್ತಾರೆ. ಅರ್ಥಾತ್ "ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? " ಎನ್ನುವಂತಹ ಈ ಸಮಸ್ಯೆಯನ್ನು ಪರಿಹರಿಸುವವರು ಯಾರು?, ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆಗಳೇ ಇಲ್ಲ. 


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 



  

Tuesday, July 22, 2014

FAKE DOCTORS !





 ನಕಲಿ ವೈದ್ಯರಿದ್ದಾರೆ ಜೋಕೆ !

ನಾಳೆ ವಿಶ್ವ ವೈದ್ಯರ ದಿನಾಚರಣೆ. ಜನರು ತಮ್ಮ ಆರೋಗ್ಯದ ರಕ್ಷಣೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ವೈದ್ಯ ಸಮುದಾಯಕ್ಕೆ ಕೃತಜ್ಞತೆಗಳನ್ನು ಸಲ್ಲಿಸುವ ದಿನ. ಈ ಸಂದರ್ಭದಲ್ಲಿ ಯಾವುದೇ ವೈದ್ಯಕೀಯ ಅರ್ಹತೆಗಳೇ ಇಲ್ಲದಿದ್ದರೂ, ತಜ್ಞ ವೈದ್ಯರಂತೆ ಸೋಗು ಹಾಕಿ, ಜನಸಾಮಾನ್ಯರನ್ನು ವಂಚಿಸಿ ಸುಲಿಗೆ ಮಾಡುವ ನಕಲಿ ವೈದ್ಯರ ಬಗ್ಗೆ ಅರಿವನ್ನು ಉಂಟುಮಾಡುವ ಪ್ರಯತ್ನವೇ ಈ ಲೇಖನ. 
-----------           ------------           ------------         ------------

ಶಾಶ್ವತ ಪರಿಹಾರವೇ ಇಲ್ಲದ ಅನೇಕ ವ್ಯಾಧಿಗಳನ್ನು ಗುಣಪಡಿಸುವ ಆಶ್ವಾಸನೆಗಳಿರುವ ಹಲವಾರು ಜಾಹೀರಾತುಗಳನ್ನು ನೀವು ಕಂಡಿರಲೇಬೇಕು. ದಾಂಪತ್ಯ ಸಮಸ್ಯೆಗಳಿಗೆ ಯಶಸ್ವೀ ಚಿಕಿತ್ಸೆ, ಮಧುಮೇಹ ರೋಗಿಗಳಿಗೆ ಇನ್ನು ನಿಶ್ಚಿಂತೆ, ಆಸ್ತಮಾ ಗುಣವಾಗುವುದು ಹಾಗೂ ಬೈಪಾಸ್ ಸರ್ಜರಿ ತಡೆಗಟ್ಟಿರಿ ಎನ್ನುವ ಆಕರ್ಷಕ ತಲೆಬರಹಗಳ ಆಹೀರಾತುಗಳು, ದುರ್ಬಲ ಮನಸ್ಸಿನ ವ್ಯಕ್ತಿಗಳನ್ನು ಆಯಸ್ಕಾಂತದಂತೆ ಆಕರ್ಷಿಸುತ್ತವೆ. 

ಪದವಿ ಹೀನ ವೈದ್ಯರು 

ಮಾಧ್ಯಮಗಳಲ್ಲಿ ಪ್ರಕಟವಾಗುವ ಇಂತಹ ಜಾಹೀರಾತುಗಳಲ್ಲಿ ನಮೂದಿಸಿರುವ ವೈದ್ಯರ ಹೆಸರಿನ ಹಿಂದೆ "ಡಾ " ಎನ್ನುವ ಪದ ಇದ್ದರೂ, ಇವರ ಹೆಸರಿನ ಮುಂದೆ ನಮೂದಿಸಲೇ ಬೇಕಾದ ಪದವಿ ಹಾಗೂ ಸ್ನಾತಕೋತ್ತರ ಪದವಿಗಳು ಮತ್ತು ನೋಂದಣಿ ಸಂಖ್ಯೆಯನ್ನು ನೀವೆಂದಾದರೂ ಕಂಡಿದ್ದೀರಾ?. ಅಸಲಿ ಪದವಿಯನ್ನೇ ಗಳಿಸಿರದ ಈ ನಕಲಿ ವೈದ್ಯರು, ವೈದ್ಯಕೀಯ ಮಂಡಳಿಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಸಾಧ್ಯವಿಲ್ಲ. ಇದೇ ಕಾರಣದಿಂದಾಗಿ ಇವರ ಹೆಸರಿನ ಮುಂದೆ ಪದವಿಗಳಾಗಲೀ, ನೋಂದಣಿ ಸಂಖ್ಯೆಯಾಗಲೀ ಇರುವುದಿಲ್ಲ. 

ತಾವು ಚಿಕಿತ್ಸೆ ನೀಡುವ ವ್ಯಾಧಿಗಳಿಗೆ ಅನುಗುಣವಾಗಿ ಲೈಂಗಿಕ ತಜ್ಞ, ಆಸ್ತಮಾ ತಜ್ಞ ಎಂದು ಸ್ವಯಂ ಘೋಷಿಸಿಕೊಳ್ಳುವ ಖದೀಮರು, ನಿಜಕ್ಕೂ ವೈದ್ಯಕೀಯ ಪದವೀಧರರೇ ಆಲ್ಲ. ಆದರೂ ಇಂತಹ ನಕಲಿ ವೈದ್ಯರು ತಮ್ಮ ಹೆಸರಿನ ಮುಂದೆ ಆರ್. ಎಂ. ಪಿ ಅಥವಾ ಗವರ್ಮೆಂಟ್ ರೆಜಿಸ್ಟರ್ಡ್ ಎಂದು ತಪ್ಪದೆ ನಮೂದಿಸುತ್ತಾರೆ. ನಿಜ ಹೇಳಬೇಕಿದ್ದಲ್ಲಿ ಆರ್.ಎಂ.ಪಿ ಎಂದರೆ ರೆಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟಿಶನರ್ ಅರ್ಥಾತ್, ತನ್ನ ವೃತ್ತಿಯನ್ನು ನಡೆಸಲು ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿರುವ ಪದವೀಧರ ವೈದ್ಯ!. 

ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ರಾಜಾರೋಷವಾಗಿ ತಮ್ಮ ಧಂದೆಯನ್ನು ನಡೆಸುವ ಈ ಮಂದಿ, ಕೇಂದ್ರ ಸರ್ಕಾರದ ಗದ್ದುಗೆಯಿರುವ ದೆಹಲಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವುದು ಸತ್ಯ. ಅದೇ ರೀತಿಯಲ್ಲಿ ಯಾವುದೇ ಪ್ರಾಥಮಿಕ ಅರ್ಹತೆಗಳಿಲ್ಲದ ವ್ಯಕ್ತಿಗಳಿಗೂ ( ನಕಲಿ ) ವೈದ್ಯಕೀಯ ಪದವಿಗಳನ್ನು ನೀಡುವ ನಕಲಿ ವಿಶ್ವವಿದ್ಯಾಲಯಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ. ಇಂತಹ ವಿಶ್ವವಿದ್ಯಾಲಯಗಳು ನೀಡುವ ಕೇವಲ ಒಂದು ಪುಟದ "ಪದವಿ ಪ್ರಮಾಣ ಪತ್ರ " ದಲ್ಲಿ ಹಲವಾರು ಪದವಿಗಳನ್ನು ನಮೂದಿಸುವ ಭಂಡತನ ಮಾತ್ರ, ಭಾರತದ ಯಾವುದೇ ಅಸಲಿ ವಿಶ್ವವಿದ್ಯಾಲಯಗಳಿಗೆ ಇಲ್ಲ!. 

ಜನಸಾಮಾನ್ಯರ ಅಜ್ನಾನವನ್ನೇ ಬಂಡವಾಳವನ್ನಾಗಿಸಿ ತಮ್ಮ ಧಂದೆಯನ್ನು ನಡೆಸುವ ನಕಲಿ ವೈದ್ಯರು, ಸಾಮಾನ್ಯವಾಗಿ ಆಯ್ದುಕೊಳ್ಳುವುದು ಶಾಶ್ವತ ಪರಿಹಾರವೇ ಇಲ್ಲದ ವ್ಯಾಧಿಗಳನ್ನೇ ಎನ್ನುವುದು ಗಮನಾರ್ಹ. 

ಬಹುತೇಕ ವಿದ್ಯಾವಂತರಿಗೆ ತಿಳಿದಿರುವಂತೆ ಮಧುಮೇಹ (ಡಯಾಬೆಟೆಸ್) , ಅಧಿಕ ರಕ್ತದ ಒತ್ತಡ, ಆಸ್ತಮಾ, ಕೆಲ ವಿಧದ ಕ್ಯಾನ್ಸರ್ ಹಾಗೂ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ವೈದ್ಯಕೀಯ ಸಂಶೋಧಕರು ಇಂದಿನ ತನಕ ಪತ್ತೆಹಚ್ಚಿಲ್ಲ. ಆದರೂ ನಕಲಿ ವೈದ್ಯರು ಇಂತಹ ಕಾಯಿಲೆಗಳನ್ನು ನಿಶ್ಚಿತವಾಗಿ ಗುಣಪಡಿಸುವ " ಆಶ್ವಾಸನೆ" ಯನ್ನು ನೀಡುತ್ತಾರೆ. 

ಉದಾಹರಣೆಗೆ ನಮ್ಮ ಶರೀರದಲ್ಲಿರುವ ಮೇದೋಜೀರಕ ಗ್ರಂಥಿಯು ಸ್ವಾಭಾವಿಕವಾಗಿ ಸ್ರವಿಸುವ "ಇನ್ಸುಲಿನ್" ಚೋದನಿಯ ಪ್ರಮಾಣವು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ನಶಿಸಿದಾಗ ಮಧುಮೇಹ ವ್ಯಾಧಿ ಉದ್ಭವಿಸುವುದು. ಈ ರೀತಿಯಲ್ಲಿ ಕುಂಠಿತವಾಗಿರುವ ಅಥವಾ ಸಂಪೂರ್ಣವಾಗಿ ನಶಿಸಿರುವ ಇನ್ಸುಲಿನ್ ನ ಉತ್ಪಾದನೆಯನ್ನು ಮತ್ತೆ ಪುನಶ್ಚೇತನಗೊಳಿಸಬಲ್ಲ ಔಷದಗಳೇ ಇಲ್ಲ. ಹಾಗೂ ಇದೇ ಕಾರಣದಿಂದಾಗಿ ಮಧುಮೇಹ ವ್ಯಾಧಿಗೆ ಶಾಶ್ವತ ಪರಿಹಾರವೇ ಇಲ್ಲ. 

ಆದರೆ ನಕಲಿ ವೈದ್ಯರು ಮಾತ್ರ ಈ ವ್ಯಾಧಿಯನ್ನು ಖಚಿತವಾಗಿ ಗುಣಪಡಿಸುವುದಾಗಿ ಭರವಸೆಯನ್ನು ನೀಡುತ್ತಾರೆ. ಇಂತಹ ಚಿಕಿತ್ಸೆಯನ್ನು ನೀಡುವ ನಕಲಿ ವೈದ್ಯನೊಬ್ಬ ಹೇಳುವಂತೆ ಆತನ ಚಿಕಿತ್ಸೆಯನ್ನು ಪ್ರಾರಂಭಿಸಿದಂತೆಯೇ, ನೀವು ಈಗಾಗಲೇ ಸೇವಿಸುತ್ತಿರುವ ಮಾತ್ರೆಗಳು ಅಥವಾ ಚುಚ್ಚಿಸಿಕೊಳ್ಳುತ್ತಿರುವ ಇನ್ಸುಲಿನ್ ನ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬಂದು, ಅಂತಿಮವಾಗಿ ಇವುಗಳನ್ನು ಸಂಪೂರ್ಣವಾಗಿ ನಿಲ್ಲಿಸಬಹುದಾಗಿದೆ. ಆದರೆ ಇಂತಹ ಪ್ರಯೋಗಗಳನ್ನು ನೀವು ಪ್ರಯತ್ನಿಸಿದಲ್ಲಿ, ಅಂತಿಮವಾಗಿ ನೀವು ಉಸಿರಾಡುವುದನ್ನೇ ನಿಲ್ಲಿಸುವ ಸಾಧ್ಯತೆಗಳಿವೆ!. 

ಕೆಲವರ್ಷಗಳ ಹಿಂದೆ " ಬೈಪಾಸ್ ಸರ್ಜರಿ ತಡೆಗಟ್ಟಿರಿ " ಎನ್ನುವ ಜಾಹೀರಾತಿನಲ್ಲಿ ಎಂಜಿಯೋಗ್ರಫಿ, ಎಂಜಿಯೋಪ್ಲಾಸ್ಟಿ, ಸ್ಟೆಂಟ್ ಮತ್ತು ಬೈಪಾಸ್ ಸರ್ಜರಿಗಳನ್ನು ತಡೆಗಟ್ಟಲು ಮತ್ತು ನಿಮ್ಮ ಹೃದಯದಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಡಾ. ........ ಇವರ ಚಿಕಿತ್ಸೆಯನ್ನು ಪಡೆಯಿರಿ ಎಂದು ಪ್ರಕಟಿಸಲಾಗುತ್ತಿತ್ತು. ಜೊತೆಗೆ ಚಿಕಿತ್ಸೆಗೆ ಮುನ್ನ ಮತ್ತು ಅನಂತರ ಎನ್ನುವ ತಲೆಬರಹದೊಂದಿಗೆ ಎರಡು ಹೃದಯಗಳ ಚಿತ್ರವನ್ನೂ ಪ್ರಕಟಿಸಲಾಗುತ್ತಿತ್ತು. ಮೊದಲ ಚಿತ್ರದಲ್ಲಿ (ಚಿಕಿತ್ಸೆಗೆ ಮುನ್ನ) ಹೃದಯದ ಗಾತ್ರ ತುಸು ದೊಡ್ಡದಾಗಿದ್ದು, ಎರಡನೆಯ ಚಿತ್ರದಲ್ಲಿ (ಚಿಕಿತ್ಸೆಯ ಬಳಿಕ) ಹೃದಯದ ಗಾತ್ರ ಒಂದಿಷ್ಟು ಚಿಕ್ಕದಾಗಿರುತ್ತಿತ್ತು. ಈ ಜಾಹೀರಾತನ್ನು ನೀಡಿದ್ದ ನಕಲಿ ವೈದ್ಯನಿಗೆ ಹೃದ್ರೋಗಗಳ ಪ್ರಾಥಮಿಕ ಜ್ಞಾನವೇ ಇಲ್ಲದಿರುವುದನ್ನು ಈ ಚಿತ್ರಗಳೇ ಸ್ಪಷ್ಟಪಡಿಸುತ್ತಿದ್ದವು. ಜೊತೆಗೆ ಎಂಜಿಯೋಗ್ರಾಂ ಪರೀಕ್ಷೆಯನ್ನು ರಕ್ತನಾಳಗಲ್ಲಿನ ಅಡಚಣೆ ಅಥವಾ ಇತರ ಸಮಸ್ಯೆಗಳನ್ನು ಪತ್ತೆಹಚ್ಚುವ ಸಲುವಾಗಿ ನಡೆಸುವುದಾಗಿದ್ದು, ಇದನ್ನು "ತಡೆಗಟ್ಟುವ" ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದೇ  ರೀತಿಯಲ್ಲಿ ಹೃದಯಕ್ಕೆ ರಕ್ತವನ್ನು ಸರಬರಾಜು ಮಾಡುವ ಕೊರೋನರಿ ರಕ್ತನಾಳಗಳಲ್ಲಿನ ಅಡಚನೆಯಿಂದಾಗಿ ಹೃದಯದ ಗಾತ್ರ ಹಿಗ್ಗುವುದಿಲ್ಲ. ಅಂತೆಯೇ ಈ ಸಮಸ್ಯೆಯ ನಿವಾರಣೆಯ ಬಳಿಕ ಹೃದಯದ ಗಾತ್ರವು ಕುಗ್ಗುವುದೂ ಇಲ್ಲ!. ಆದರೆ ಶಸ್ತ್ರಚಿಕಿತ್ಸೆಯ ಭಯವಿರುವ ಮತ್ತು ಬೈಪಾಸ್ ಸರ್ಜರಿ ಅಥವಾ ಎಂಜಿಯೋಪ್ಲಾಸ್ಟಿ ಚಿಕಿತ್ಸೆಯ ವೆಚ್ಚಗಳನ್ನು ಭರಿಸಲಾರದ ವಿದ್ಯಾವಂತರೂ, ಇಂತಹ ನಕಲಿ ವೈದ್ಯರ ಬಲೆಗೆ ಸುಲಭದಲ್ಲೇ ಬೀಳುತ್ತಾರೆ. 

ಇನ್ನು ಆಸ್ತಮಾ ಗುಣವಾಗದು ಎನ್ನುವುದನ್ನೇ ಒಪ್ಪದ ಸ್ವಯಂಘೋಷಿತ ಆಸ್ತಮಾ ತಜ್ಞನು ಒಂದೆರಡು ದಶಕಗಳ ಹಿಂದೆ ಸ್ವಯಂಸೇವಾ ಸಂಘಟನೆಗಳ ನೆರವಿನಿಂದ ರಾಜ್ಯಾದ್ಯಂತ ಅನೇಕ ನಗರಗಳಲ್ಲಿ  ನೂರಾರು ಚಿಕಿತ್ಸಾ ಶಿಬಿರಗಳನ್ನು ನಡೆಸಿದ್ದನು. ಅನೇಕ ವರ್ಷಗಳ ಹಿಂದೆ ಹೈಸ್ಕೂಲ್ ನಲ್ಲೇ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ್ದ ಈ ತಜ್ಞನು, ಅಲ್ಪಾವಧಿಯಲ್ಲೇ ಆಸ್ತಮಾ ತಜ್ಞನಾಗಿ ಪ್ರಖ್ಯಾತನಾಗಿದ್ದನು!. ವಿಶೇಷವೆಂದರೆ ಈತನ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿದ್ದ ಸ್ವಯಂಸೇವಾ ಸಂಘಟನೆಯಲ್ಲಿ ಸುಪ್ರಸಿದ್ಧ ವೈದ್ಯರೂ ಸದಸ್ಯರಾಗಿದ್ದರೂ, ಯಾರೊಬ್ಬರೂ ಈತನ ವಿದ್ಯಾರ್ಹತೆಗಳನ್ನು ಅರಿಯುವ ಪ್ರಯತ್ನವನ್ನೇ ಮಾಡದಿದ್ದುದು ಮಾತ್ರ ನಂಬಲು ಅಸಾಧ್ಯವೆನಿಸಿತ್ತು. 

ಅಮಾಯಕ ಜನರ ಅಜ್ಞಾನವನ್ನು ದುರುಪಯೋಗಪಡಿಸಿ ಮಾನವ ಶರೀರದ ಸ್ವಾಭಾವಿಕ ಕ್ರಿಯೆಗಳನ್ನೇ ಗಂಭೀರ ಸಮಸ್ಯೆಗಳೆಂದು ಚಿತ್ರಿಸಿ, ಸಹಸ್ರಾರು ರೂಪಾಯಿಗಳನ್ನು ದೋಚುವ ನಕಲಿ " ಲೈಂಗಿಕ ತಜ್ಞರು" ನಮ್ಮ ದೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿದ್ದಾರೆ. ಹದಿಹರೆಯದಲ್ಲಿ ಸಹಜವೆನಿಸುವ ಹಸ್ತಮೈಥುನದಂತಹ ಹವ್ಯಾಸದಿಂದ ನಿಮ್ಮ ದಾಂಪತ್ಯ ಜೀವನವೇ ವಿಫಲವಾಗುವುದೆಂದು ಹೆದರಿಸುವ ನಕಲಿ ಲೈಂಗಿಕ ತಜ್ಞರು, ೧೦ ರಿಂದ ೨೦ ಸಾವಿರ ರೂ. ಗಳನ್ನು ವಸೂಲು ಮಾಡಿ ನೀಡುವ ಔಷದಗಳು ನಿಶ್ಚಿತವಾಗಿಯೂ ಅಸಲಿಯಲ್ಲ!. 

ಪ್ರಾಯಶಃ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೊಳಿಸದೇ ಇರುವುದು, ವಿದ್ಯಾವಂತರೂ ಲೈಂಗಿಕ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ನಾಚುವುದು, ಯುವಜನರಿಗೆ ಈ ಬಗ್ಗೆ ಇರುವ ತಪ್ಪುಕಲ್ಪನೆಗಳು ಅಥವಾ ಅಜ್ಞಾನಗಳೇ ಇಂತಹ ನಕಲಿ ವೈದ್ಯರ ಧಂಧೆಗೆ ಪ್ರೋತ್ಸಾಹವನ್ನು ನೀಡುತ್ತದೆ.ಜಗತ್ಪ್ರಸಿದ್ಧ "ಕಾಮಸೂತ್ರ" ದ ಲೇಖಕನಾದ ವಾತ್ಸಾಯನನ ತವರಾದ ಭಾರತದಲ್ಲಿ, ಅದರಲ್ಲೂ ಈ ವೈಜ್ಞಾನಿಕ ಯುಗದಲ್ಲೂ ಇಂತಹ ಸಮಸ್ಯೆಗಳಿರುವುದು ನಂಬಲು ಅಸಾಧ್ಯವೆನಿಸುತ್ತದೆ. 

ಇವೆಲ್ಲಕ್ಕೂ ಮಿಗಿಲಾಗಿ ಸಂತಾನಹೀನ ದಂಪತಿಗಳಿಗೆ ಸಂತಾನ ಭಾಗ್ಯವನ್ನು ಕರುಣಿಸುವುದಾಗಿ ಭರವಸೆ ನೀಡುವ ನಕಲಿ "ಸಂತತಿ ತಜ್ಞ" ರು, ಈ ದಂಪತಿಗಳನ್ನು ಯಾವುದೇ ರೀತಿಯ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸದೇ ಹಾಗೂ ಯಾರಲ್ಲಿ ದೋಷವಿದೆ ಎಂದು ಪತ್ತೆಹಚ್ಚದೆ ಚಿಕಿತ್ಸೆಯನ್ನು ನೀಡುವುದರಲ್ಲಿ ಸಿದ್ಧಹಸ್ತರು. ಇನ್ನು ಕೆಲವರಂತೂ ಕೇವಲ ಹೆಂಗಸರನ್ನು ಮಾತ್ರ ತಪಾಸಣೆಗೆ ಒಳಪಡಿಸುವ ನಾಟಕವನ್ನು ಆಡುವುದರಲ್ಲಿ ನಿಸ್ಸೀಮರು!. 

ಅದೇನೇ ಇರಲಿ, ನಿಮ್ಮ ನಂಬಿಗಸ್ಥ ಕುಟುಂಬ ವೈದ್ಯರು ಅಥವಾ ನಿಮ್ಮದೇ ಊರಿನ ತಜ್ಞವೈದ್ಯರು ಶಾಶ್ವತವಾಗಿ ಗುಣಪಡಿಸಲಾಗದ ಕಾಯಿಲೆಗಳನ್ನು, ನಕಲಿ ವೈದ್ಯರು ಗುಣಪಡಿಸುವುದು ಅಸಾಧ್ಯವೆಂದು ಅರಿತಿರಿ. ಕೇವಲ ನಾಲ್ಕಾರು ರೂಪಾಯಿ ಬೆಲೆಬಾಳುವ ಔಷದವನ್ನು ದಿನದಲ್ಲಿ ಒಂದು ಅಥವಾ ಎರಡುಬಾರಿ ಸೇವಿಸಿ, ಆಹಾರ ಸೇವನೆಯಲ್ಲಿ ಒಂದಿಷ್ಟು ಪಥ್ಯ ಮತ್ತು ದಿನನಿತ್ಯ ವ್ಯಾಯಾಮ, ಕ್ರೀಡೆ ಅಥವಾ  ನಡಿಗೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ, ನಿಮ್ಮನ್ನು ಬಾಧಿಸುತ್ತಿರುವ ಮಧುಮೇಹ, ಅಧಿಕ ರಕ್ತದ ಒತ್ತಡ, ಅಧಿಕ ತೂಕ, ಅತಿ ಬೊಜ್ಜು ಇತ್ಯಾದಿ ಆರೋಗ್ಯದ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇರಿಸುವುದು ಸುಲಭಸಾಧ್ಯ. ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಚಿಕಿತ್ಸಾ ವಿಧಾನಗಳನ್ನು ಕೈಬಿಟ್ಟು, ನಕಲಿ ವೈದ್ಯರ ಚಿಕಿತ್ಸೆಯನ್ನು ಪ್ರಯೋಗಿಸದಿರಿ.

ವೈದ್ಯಕೀಯ ಕ್ಷೇತ್ರದಲ್ಲಿ ಶಾಶ್ವತ ಪರಿಹಾರವಿಲ್ಲದ ವ್ಯಾಧಿಗಳನ್ನು ನಿಶ್ಚಿತವಾಗಿ ಮತ್ತು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಸಂಶೋಧಿಸಿದವರಿಗೆ " ನೊಬೆಲ್ ಪ್ರಶಸ್ತಿ" ಕಟ್ಟಿಟ್ಟ ಬುತ್ತಿ. ಆದರೆ ನಮ್ಮ ದೇಶದ ನಕಲಿ ವೈದ್ಯರು ಕೋಟ್ಯಂತರ ಡಾಲರ್ ಬಹುಮಾನದೊಂದಿಗೆ, ವಿಶ್ವವಿಖ್ಯಾತರಾಗುವ ಇಂತಹ ಸುವರ್ಣಾವಕಾಶವನ್ನು ಸದುಪಯೋಗಪಡಿಸುತ್ತಿಲ್ಲವೇಕೆ?, ಎನ್ನುವ ಬಗ್ಗೆ ಒಂದಿಷ್ಟು ಚಿಂತನ ಮಂಥನ ಮಾಡಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಡಿ. ೩೦-೦೬-೨೦೦೯ ರ ಉದಯವಾಣಿ ಪತ್ರಿಕೆಯ ಅಂಕಣದಲ್ಲಿ ವೈದ್ಯರ ದಿನಾಚರಣೆಯ ಸಲುವಾಗಿ ಪ್ರಕಟಿತ ಲೇಖನ.  



Saturday, July 19, 2014

LED SREETLIGHTS






 ಅಲ್ಪಾವಧಿಯಲ್ಲೇ ಅಸುನೀಗುತ್ತಿರುವ  ಎಲ್ ಇ ಡಿ ದಾರಿದೀಪಗಳು !

ರಾಜ್ಯದ ವಿದ್ಯುತ್ ಕೊರತೆಯನ್ನು ಒಂದಿಷ್ಟು ಕಡಿಮೆಮಾಡಬಲ್ಲ ಉಪಕ್ರಮಗಳಲ್ಲಿ ಅತ್ಯಲ್ಪ ಪ್ರಮಾಣದ ವಿದ್ಯುತ್ ಶಕ್ತಿಯನ್ನು ಬಳಸಿ, ಪ್ರಖರವಾದ ಬೆಳಕನ್ನು ನೀಡುವ ಎಲ್ ಇ ಡಿ ದೀಪಗಳ ಅಳವಡಿಕೆಯೂ ಒಂದಾಗಿದೆ. ರಾಜ್ಯದ ಅನೇಕ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಬಳಕೆಯಲ್ಲಿದ್ದ ಹಾಗೂ ಅಗಾಧ ಪ್ರಮಾಣದ ವಿದ್ಯುತ್ ಶಕ್ತಿಯನ್ನು ಬಳಸುವುದರೊಂದಿಗೆ ಸಾಕಷ್ಟು ಉಷ್ಣತೆಯನ್ನೂ ಉತ್ಪಾದಿಸುವ ಮೂಲಕ ಪರಿಸರಕ್ಕೆ ಹಾನಿಯನ್ನು ಎಸಗುತ್ತಿದ್ದ " ಸೋಡಿಯಂ ಭಾಷ್ಪ ದೀಪ " ಗಳಿಗೆ ಬದಲಾಗಿ, ಇತ್ತೀಚಿನ ಒಂದೆರಡು ವರ್ಷಗಳಿಂದ ಎಲ್ ಇ ಡಿ ದಾರಿದೀಪಗಳನ್ನು ಬಳಸಲಾಗುತ್ತಿದೆ. ಅನ್ಯ ವಿಧದ ದಾರಿದೀಪಗಳಿಗಿಂತ ಸಾಕಷ್ಟು ದುಬಾರಿ ಎನಿಸುವ ಈ ದೀಪಗಳು, ಸುದೀರ್ಘಕಾಲ ಬಾಳ್ವಿಕೆ ಬರುವುದರಿಂದ ಇವುಗಳು ಉಳಿತಾಯ ಮಾಡಬಲ್ಲ ವಿದ್ಯುತ್ ಶಕ್ತಿಯ ಪ್ರಮಾಣವೂ ಗಣನೀಯವಾಗಿರುತ್ತದೆ. ಹಾಗೂ ಇದೇ ಕಾರಣದಿಂದಾಗಿ ರಾಜ್ಯದಲ್ಲಿ ವಿದ್ಯುತ್ ಶಕ್ತಿಯ ಬೇಡಿಕೆಯ ಪ್ರಮಾಣವೂ ಇಳಿಯುತ್ತದೆ. ಪ್ರಾಯಶಃ ಇದೇ ಉದ್ದೇಶದಿಂದ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ- ಕೇಂದ್ರ ಸರ್ಕಾರಗಳು ನೀಡುವ ಅನುದಾನಗಳ ಹಣವನ್ನು ಬಳಸಿ, ಎಲ್ ಇ ಡಿ ದಾರಿದೀಪಗಳನ್ನು ಅಳವಡಿಸಲು ಸೂಚನೆಯನ್ನು ನೀಡಲಾಗಿತ್ತು. ಈ ಸೂಚನೆಯನ್ನು ಬಹುತೇಕ ಸ್ಥಳೀಯ ಸಂಸ್ಥೆಗಳು ಈಗಾಗಲೇ ಪರಿಪಾಲಿಸಿದ್ದು, ಮುಂದಿನ ದಿನಗಳಲ್ಲಿ ಹಳೆಯ ದಾರಿದೀಪಗಳನ್ನು ತೆಗೆದುಹಾಕಿ, ಕೇವಲ ಎಲ್ ಇ ಡಿ ದಾರಿದೀಪಗಳನ್ನು ಅಳವಡಿಸಲಾಗುತ್ತದೆ. ಎಲ್ ಇ ಡಿ ದಾರಿದೀಪಗಳನ್ನು ಅಳವಡಿಸುತ್ತಿರುವ ಸ್ಥಳೀಯ ಸಂಸ್ಥೆಗಳಲ್ಲಿ ದ.ಕ ಜಿಲ್ಲೆಯ ಪುತ್ತೂರು ನಗರವೂ ಒಂದಾಗಿದೆ. 

ಅಸುನೀಗುತ್ತಿರುವ ದಾರಿದೀಪಗಳು 

ಪುತ್ತೂರು ಪುರಸಭೆಗೆ ಲಭಿಸಿದ್ದ ಅನುದಾನದ ಹಣದಿಂದ ಎಲ್ ಇ ಡಿ ದಾರಿದೀಪಗಳನ್ನು ಅಳವಡಿಸುವ ಕಾರ್ಯವು ಗತವರ್ಷದಲ್ಲೇ ಆರಂಭವಾಗಿತ್ತು. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ನಗರದ ಪ್ರಧಾನ ರಸ್ತೆಯಲ್ಲಿದ್ದ ಸೋಡಿಯಂ ಭಾಷ್ಪ ದೀಪಗಳನ್ನು ತೆಗೆದು, ೬೮ ಎಲ್ ಇ ಡಿ ದೀಪಗಳನ್ನು ಅಳವಡಿಸಲು ೧೦ ಲಕ್ಷ ರೂಪಾಯಿಗಳನ್ನು ವ್ಯಯಿಸಲಾಗಿತ್ತು. ತದನಂತರ ಜೂನ್ ನಲ್ಲಿ ಮತ್ತೆ ೧೫.೪೫ ಲಕ್ಷ ರೂ. ಗಳನ್ನು ವ್ಯಯಿಸಿ, ೭೩ ದೀಪಗಳನ್ನು ಅಳವಡಿಸಲಾಗಿತ್ತು. ಇವೆರಡೂ ಕಾಮಗಾರಿಗಳನ್ನು ಬೆಳ್ತಂಗಡಿಯ ಸ್ವಸ್ತಿಕ್ ಲುಮಿನರೀಸ್ ಸಂಸ್ಥೆ ನಡೆಸಿತ್ತು. ಬಳಿಕ ಡಿಸೆಂಬರ್ ೨೦೧೩ ಮತ್ತು ಜನವರಿ ೨೦೧೪ ರಲ್ಲಿ " ಕ್ರೆಡಲ್ " ಸಂಸ್ಥೆಯಿಂದ ಪುರಸಭೆಗೆ ಉಚಿತವಾಗಿ ಲಭಿಸಿದ್ದ ೧೨೦ ದೀಪಗಳನ್ನು ತಯಾರಿಸಿದ್ದ ಕೃಪಾ ಎಲೆಕ್ಟ್ರಿಕಲ್ಸ್ ಸಂಸ್ಥೆಯೇ ಅಳವಡಿಸಿತ್ತು. ಇದಾದ ನಂತರ ಮಾರ್ಚ್ ೨೦೧೪ ರಲ್ಲಿ ಮತ್ತೆ ೫೪ ದೀಪಗಳನ್ನು ಮಂಗಳೂರಿನ ಸನ್ ಲೈಟ್ ಸಂಸ್ಥೆಯ ವತಿಯಿಂದ ಅಳವಡಿಸುವ ಮೂಲಕ, ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿನ ೩೧೫ ದಾರಿದೀಪಗಳನ್ನು ( ಶೇ.೧೨ ರಷ್ಟು ) ಬದಲಾಯಿಸಿ, ಎಲ್ ಇ ಡಿ ದೀಪಗಳನ್ನು ಹಾಕಲಾಗಿತ್ತು. ಈ ಸಂದರ್ಭದಲ್ಲಿ ತೆರವುಗೊಳಿಸಿದ್ದ ದೀಪಗಳೆಲ್ಲವೂ ಸೋಡಿಯಂ ಭಾಷ್ಪ ದೀಪಗಳೇ ಆಗಿದ್ದುದರಿಂದ, ವಿದ್ಯುತ್ ಶಕ್ತಿಯ ಬಳಕೆಯ ಪ್ರಮಾಣವೂ ಸ್ವಾಭಾವಿಕವಾಗಿಯೇ ಕಡಿಮೆಯಾಗುವ ನಿರೀಕ್ಷೆ ಇದ್ದಿತು. ಆದರೆ " ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು " ಎನ್ನುವ ಆಡುಮಾತಿನಂತೆಯೇ, ಹೊಸದಾಗಿ ಅಳವಡಿಸಿದ್ದ ಎಲ್ ಇ ಡಿ ದೀಪಗಳು ಅಲ್ಪಾವಧಿಯಲ್ಲೇ ಅಸುನೀಗಲು ಆರಂಭಿಸಿದ್ದವು!. 

ಖಾತರಿ ನೀಡುವವರು ಯಾರು ?

ಸಾಮಾನ್ಯವಾಗಿ ಇಂತಹ ವಸ್ತುಗಳನ್ನು ಖರೀದಿಸಿದಾಗ ಇವುಗಳ ತಯಾರಕರು ನಿಗದಿತ ಅವಧಿಗೆ ಖಾತರಿಯನ್ನು ನೀಡುತ್ತಾರೆ. ಈ ಅವಧಿಯಲ್ಲಿ ಈ ದೀಪಗಳು ಕೆಟ್ಟುಹೋದಲ್ಲಿ ಇವುಗಳನ್ನು ಪೂರೈಕೆ ಮಾಡಿದ್ದ ಸಂಸ್ಥೆಗಳು ಇವುಗಳಿಗೆ ಬದಲಾಗಿ ಹೊಸ ದೀಪಗಳನ್ನು ನೀಡಬೇಕಾಗುತ್ತದೆ. ಉದಾಹರಣೆಗೆ ನೀವು ಖರೀದಿಸುವ ಸಿ ಎಫ್ ಎಲ್ ದೀಪಗಳಿಗೆ ಕನಿಷ್ಠ ಒಂದು ವರ್ಷದ ಖಾತರಿಯನ್ನು ಇವುಗಳ ತಯಾರಕರು ನೀಡುತ್ತಾರೆ. ಈ ಅವಧಿಯಲ್ಲಿ ಇದು ಕೆಟ್ಟು ಹೋದಲ್ಲಿ, ತಕ್ಷಣ ಇದಕ್ಕೆ ಬದಲಾಗಿ ಹೊಸ ದೀಪವನ್ನು ನೀಡುತ್ತಾರೆ. ಕೇವಲ ನೂರಾರು ರೂಪಾಯಿ ಬೆಲೆಬಾಳುವ ಸಿ ಎಫ್ ಎಲ್ ಬಲ್ಬ್ ಗಳಿಗೆ ಒಂದುವರ್ಷದ ಖಾತರಿ ನೀಡುವುದಾದಲ್ಲಿ ಸಹಸ್ರಾರು ರೂಪಾಯಿ ಬೆಲೆಯ ಈ ಎಲ್ ಇ ಡಿ ದೀಪಗಳಿಗೆ ( ಇವುಗಳ ಬೆಲೆ,ಅಳವಡಿಸುವ ವೆಚ್ಚ ಇತ್ಯಾದಿಗಳನ್ನು ಸೇರಿಸಿದಲ್ಲಿ ಸುಮಾರು ೨೦.೦೦೦ ರೂ.) ನಿಗದಿತ ಅವಧಿಗೆ ಖಾತರಿಯನ್ನು ನೀಡಲೇಬೇಕು.ಹಾಗೂ ಈ ಅವಧಿಯಲ್ಲಿ ಇವು ಕೆಟ್ಟು ಹೋದಲ್ಲಿ, ಹೊಸ ದೀಪಗಳನ್ನು ನೀಡಲೇಬೇಕು.ತಾನು ನೀಡಿದ್ದ ಅನುದಾನದ ಹಣವು ಪೋಲಾಗದಂತೆ ರಾಜ್ಯ ಸರ್ಕಾರವು ಈ ಬಗ್ಗೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. 

ಆದರೆ ಪುತ್ತೂರಿನ ಎಲ್ ಇ ಡಿ ದಾರಿದೀಪಗಳು ಕೆಟ್ಟುಹೋಗಲಾರಂಭಿಸಿ ಹಲವಾರು ತಿಂಗಳುಗಳೇ ಕಳೆದಿದ್ದು, ಇವುಗಳನ್ನು ಅಳವಡಿಸಿದ್ದ ಸಂಸ್ಥೆಗಳಿಗೆ ಈ ಬಗ್ಗೆ ದೂರನ್ನು ನೀಡಲಾಗಿದೆ. ಈ ಸಂಸ್ಥೆಗಳು ಕೆಟ್ಟು ಹೋಗಿರುವ ದೀಪಗಳನ್ನು ದುರಸ್ತಿಪಡಿಸಲು ಆರಂಭಿಸಿದ್ದರೂ, ಕೆಟ್ಟುಹೋಗುತ್ತಿರುವ ದೀಪಗಳ ಸಂಖ್ಯೆ ಇನ್ನಷ್ಟು ಹೆಚ್ಚಿದಂತೆಯೇ ಮೆಸ್ಕಾಂ ನವರ ವಯರಿಂಗ್ ನಲ್ಲಿರುವ ದೋಷವೇ ಇದಕ್ಕೆ ಕಾರಣವೆಂದು ದೂರಲು ಆರಂಭಿಸಿದ್ದಾರೆ!. ಜೊತೆಗೆ ಕೆಟ್ಟು ಹೋಗಿರುವ ದೀಪಗಳನ್ನು ದುರಸ್ತಿಪಡಿಸಲು ಸಾಕಷ್ಟು ಸಮಯವನ್ನೂ ತೆಗೆದುಕೊಳ್ಳಲು ಆರಂಭಿಸಿದ್ದಾರೆ.ಈ ವಿಚಾರದಲ್ಲಿ ೧೨೦ ದೀಪಗಳನ್ನು ಉಚಿತವಾಗಿ ನೀಡಿದ್ದ ಮತ್ತು ಸರ್ಕಾರದ ಅಂಗ ಸಂಸ್ಥೆಯಾಗಿರುವ ಕ್ರೆಡಲ್ ಕೂಡಾ ಅಪವಾದವೆನಿಸಿಲ್ಲ.

ಇದಕ್ಕೂ ಮಿಗಿಲಾಗಿ ಪುರಸಭೆಯು ಅನುದಾನದ ಹಣವನ್ನು ಬಳಸಿ ಅಳವಡಿಸಿದ್ದ ೧೯೫ ಎಲ್ ಇ ಡಿ ದೀಪಗಳಿಗಾಗಿ ಒಟ್ಟು ೩೮.೩೫ ಲಕ್ಷ ರೂ.ಗಳನ್ನೂ ವ್ಯಯಿಸಿದ್ದು, ಒಂದು ದೀಪದ ಬೆಲೆಯು ಸುಮಾರು ೧೯,೬೬೬ ರೂ.ಗಳಾಗುತ್ತದೆ!. ಇಷ್ಟೊಂದು ದುಬಾರಿ ಮೊತ್ತದ ದೀಪಗಳು ವರ್ಷ ಕಳೆಯುವಷ್ಟರಲ್ಲೇ ಕೆಟ್ಟುಹೋಗುವುದಾದಲ್ಲಿ, ಒಂದು ವರ್ಷದ ಖಾತರಿ ಇರುವ ಹಾಗೂ ಕೆಟ್ಟುಹೋದಲ್ಲಿ ಹೊಸ ದೀಪಗಳು ದೊರೆಯುವ ಮತ್ತು ಈ ದೀಪಗಳಿಗಿಂತ ಸಾಕಷ್ಟು ಕಡಿಮೆ ಬೆಲೆಗೆ ಲಭಿಸುವ ಸಿ ಎಫ್ ಎಲ್ ದಾರಿದೀಪಗಳನ್ನು ಖರೀದಿಸುವುದು ನಿಸ್ಸಂದೇಹವಾಗಿಯೂ ಸಮಂಜಸವೆನಿಸುವುದು. ಜೊತೆಗೆ ಈ ಎಲ್ ಇ ಡಿ ದಾರಿದೀಪಗಳ ಖರೀದಿ ಮತ್ತು ಅಳವಡಿಕೆಗಳ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿದಲ್ಲಿ, ಇವುಗಳ ಗುಣಮಟ್ಟದ ಮತ್ತು ಬೆಲೆಗಳ ಬಗ್ಗೆ ಸತ್ಯಸಂಗತಿ ಬಯಲಿಗೆ ಬರುವುದರಲ್ಲಿ ಸಂದೇಹವಿಲ್ಲ. 

ಕೊನೆಯ ಮಾತು 

 ರಾಜ್ಯದಲ್ಲಿ ಸಕಾಲ ಯೋಜನೆ ಜಾರಿಗೆ ಬಂದ ಬಳಿಕ ಕೆಟ್ಟು ಹೋದ ದಾರಿದೀಪಗಳನ್ನು ದುರಸ್ತಿಪಡಿಸಲು ೭ ದಿನಗಳ ಅವಧಿಯನ್ನು ನಿಗದಿಸಲಾಗಿದೆ. ಆದರೆ ಕೆಟ್ಟು ಹೋಗಿರುವ ಎಲ್ ಇ ಡಿ ದೀಪಗಳನ್ನು ದುರಸ್ತಿ ಪಡಿಸಲು ಇದಕ್ಕೊ ಹೆಚ್ಚಿನ ಅವಧಿಯನ್ನು ಬಳಸುತ್ತಿರುವ ಸಂಸ್ಥೆಗಳಿಂದಾಗಿ, ಪುತ್ತೂರು ಪುರಸಭೆಯ ಅಧಿಕಾರಿಗಳು ಕೆಟ್ಟು ಹೋಗಿರುವ ಎಲ್ ಇ ಡಿ ದಾರಿದೀಪಗಳ ಜಾಗದಲ್ಲಿ T 5 ಸಿ ಎಫ್ ಎಲ್ ದೀಪಗಳನ್ನು ಖರೀದಿಸಿ ಅಳವಡಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಸಮರ್ಪಕವಾಗಿ ಬಗೆಹರಿಸಲು ಚುನಾಯಿತ ಜನ ಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನವನ್ನು ಮಾಡುವರೇ ಎನ್ನುವುದನ್ನು ಕಾದುನೋಡಬೇಕಷ್ಟೇ!. 


ಸಾಮಾನ್ಯ ವಿದ್ಯುತ್ ಬಲ್ಬ್ ಗಳು ಕನಿಷ್ಠ ೧೦೦೦ ಗಂಟೆಗಳ ಕಾಲ ಬೆಳಗುತ್ತವೆ. ಆದರೆ ಸಿ ಎಫ್ ಎಲ್ ಬಲ್ಬ್ ಗಳು ಕನಿಷ್ಠ ೧೦,೦೦೦ ಗಂಟೆ ಮತ್ತು ಎಲ್ ಇ ಡಿ ಗಳು ೫೦,೦೦೦ ಗಂಟೆಗಳ ಕಾಲ ಬೆಳಗಲೇ ಬೇಕು. ಒಂದು ರಾತ್ರಿಯಲ್ಲಿ ಎಲ್ ಇ ಡಿ ದೀಪವು ಸರಾಸರಿ ೧೨ ಗಂಟೆಗಳ ಉರಿದಲ್ಲಿ, ಒಂದು ವರ್ಷದಲ್ಲಿ ೪೩೮೦ ಗಂಟೆ, ೧೩  ಗಂಟೆ ಉರಿದಲ್ಲಿ ೪೭೪೫ ಗಂಟೆ ಮತ್ತು ೧೪ ಗಂಟೆ ಉರಿದಲ್ಲಿ ೫೧೧೦ ಗಂಟೆಗಳ ಕಾಲ ಉರಿಯುತ್ತವೆ. ಇದೀಗ ೧೩ ಗಂಟೆಗಳ ಸರಾಸರಿಯನ್ನೇ ಹಿಡಿದಲ್ಲಿ, ಈ ದೀಪಗಳು ೧೦ ವರ್ಷಗಳ ಕಾಲ ಬಾಳ್ವಿಕೆ ಬರಲೇಬೇಕು. ಆದರೆ ಪುತ್ತೂರಿನಲ್ಲಿ ಅಳವಡಿಸಿರುವ ಎಲ್ ಇ ಡಿ ದೀಪಗಳು ವರ್ಷ ಕಳೆಯುವ ಮುನ್ನ ಹಾಗೂ ಕೆಲ ದೀಪಗಳು ವರ್ಷ ಕಳೆಯುವಷ್ಟರಲ್ಲೇ ಕೆಟ್ಟುಹೋಗುತ್ತಿರಲು ಕಾರಣವೇನು ?, ಎನ್ನುವುದು ಗುಟ್ಟಾಗಿಯೇ ಉಳಿಯಬಾರದು ಎನ್ನುವುದೇ ನಮ್ಮ ಆಶಯವಾಗಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 








Thursday, July 10, 2014

JUNK FOOD- BAN THE PLASTIC PACKAGING





 ಜಂಕ್ ಫುಡ್ : ಪ್ಲಾಸ್ಟಿಕ್ ಕವಚಗಳನ್ನು ನಿಷೇಧಿಸಿ !

ನಮ್ಮ ದೇಶದ ಯುವಜನರು ಮತ್ತು ಪುಟ್ಟ ಮಕ್ಕಳು ಮೆಚ್ಚಿ ಸವಿಯುವ ನಿರುಪಯುಕ್ತ ಖಾದ್ಯ (ಜಂಕ್ ಫುಡ್ ) ಗಳನ್ನು ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿರುವ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ತುಂಬಿಸಿ ಮಾರಾಟ ಮಾಡುವುದನ್ನು ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು ಗತವರ್ಷದಲ್ಲೇ ನಿಷೇಧಿಸಿತ್ತು. ಜೊತೆಗೆ ಇಂತಹ ಅನಾರೋಗ್ಯಕರ ಖಾದ್ಯಗಳನ್ನು ಮಣ್ಣಿನಲ್ಲಿ ಕರಗಿ ಬೇರೆಯಬಲ್ಲ ಹಾಗೂ ನಿರಪಾಯಕರ ಕವಚಗಳಲ್ಲೇ ತುಂಬಿಸಿ ಮಾರಾಟ ಮಾಡುವಂತೆ ಆದೇಶಿಸಿತ್ತು. ನ್ಯಾಯಾಲಯದ ಈ ಆದೇಶವನ್ನು ಅಲ್ಲಿನ ಸರ್ಕಾರವು ಕಳೆದ ವರ್ಷದ ಎಪ್ರಿಲ್ ೧ ರಿಂದಲೇ ಅನುಷ್ಠಾನಗೊಳಿಸಿದೆ. 

ನಿಷೇಧಕ್ಕೆ ಮನವಿ 

ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠಕ್ಕೆ ೨೦೧೦ರಲ್ಲಿ ಸಲ್ಲಿಸಿದ್ದ ಮೂರು ಮನವಿಗಳ ವಿಚಾರಣೆಯನ್ನು ನಡೆಸಿದ್ದ ನ್ಯಾಯಾಲಯವು  ಗತವರ್ಷದ ಜನವರಿ ೧೦ ರಂದು ಪ್ರಕಟಿಸಿದ್ದ ತೀರ್ಪಿನಲ್ಲಿ, ಪ್ಲಾಸ್ಟಿಕ್ ಕವಚಗಳಲ್ಲಿ ತುಂಬಿಸಿ ಮಾರುತ್ತಿರುವ  ನಿರುಪಯುಕ್ತ ಖಾದ್ಯಪೇಯಗಳನ್ನೇ ನಿಷೇಧಿಸುವ ವಿಚಾರವು ತನ್ನ ಮುಂದೆ ಇಲ್ಲದಿರುವುದರಿಂದ ಈ ಬಗ್ಗೆ ಎನೆನ್ನೂ ಹೇಳಬಯಸುವುದಿಲ್ಲ. ಆದರೆ ಹಿಮಾಚಲ ಪ್ರದೇಶ್ ನಾನ್ ಬಯೋ ಡಿಗ್ರೆಡೆಬಲ್( ಕಂಟ್ರೋಲ್) ಏಕ್ಟ್ ೧೯೯೫ ರನ್ವಯ, ಇಂತಹ ಅಪಾಯಕಾರಿ ಹಾಗೂ ಅನಾರೋಗ್ಯಕರ ಉತ್ಪನ್ನಗಳನ್ನು ಮಣ್ಣಿನಲ್ಲಿ ಸುಲಭವಾಗಿ ಕರಗಿ ಬೆರೆಯಬಲ್ಲ ಕವಚಗಳಲ್ಲೇ ತುಂಬಿ ಮಾರಾಟ ಮಾಡಬೇಕು ಎಂದು ಆದೇಶಿಸಿತ್ತು. ಈ ರೀತಿಯ ಕವಚಗಳ ಬಳಕೆಯಿಂದ ಇಂತಹ ಉತ್ಪನ್ನಗಳ ಬೆಲೆ ಹೆಚ್ಚುವುದಾದರೂ, ಮಕ್ಕಳ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ಇದು ಸಮರ್ಥನೀಯವೂ ಹೌದು ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು. 

ಸಮಿತಿಯ ರಚನೆ 

ಮನುಷ್ಯನ ಆರೋಗ್ಯಕ್ಕೆ ಮಾರಕವೆನಿಸಬಲ್ಲ ಪ್ಲಾಸ್ಟಿಕ್ ನ ಅತಿಬಳಕೆಯನ್ನು ನಿಯಂತ್ರಿಸುವಂತೆ ೨೦೧೦ರಲ್ಲಿ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ, ಉಚ್ಚ ನ್ಯಾಯಾಲಯವು ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು ಖಾದ್ಯ ಉತ್ಪನ್ನಗಳ ಪ್ಯಾಕೇಜಿಂಗ್ ನಲ್ಲಿ ಪ್ಲಾಸ್ಟಿಕ್ ನ ಅನುಚಿತ ಮತ್ತು ಅತಿಯಾದ ಬಳಕೆಯನ್ನು ಕಡಿಮೆಮಾಡಬಲ್ಲ ವಿಧಾನಗಳು ಮತ್ತು ತತ್ಸಂಬಂಧಿತ ಅನ್ಯ ಸಲಹೆ ಸೂಚನೆಗಳನ್ನು ಶಿಫಾರಸು ಮಾಡುವಂತೆ ಆದೇಶಿಸಿತ್ತು. ಆದರೆ ಈ ಸಮಿತಿಯು ನ್ಯಾಯಾಲಯದ ಆದೇಶವನ್ನು ಪಾಲಿಸಲು ವಿಫಲವಾಗಿತ್ತು. ತದನಂತರ ನೇಮಕಗೊಂಡಿದ್ದ ಮತ್ತೊಂದು ಸಮಿತಿಯು ಸುದೀರ್ಘಕಾಲ ಮೀನಮೇಷ ಎಣಿಸಿದ ಬಳಿಕ, ಗತವರ್ಷದ ಆದಿಯಲ್ಲಿ ತನ್ನ ಶಿಫಾರಸುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. 

ಸಮಿತಿಯ ಶಿಫಾರಸುಗಳ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತಗೊಂಡಿದ್ದು, ಬಯೋ ಡಿಗ್ರೆಡೆಬಲ್ ಕವಚಗಳು ದುಬಾರಿ ಎನಿಸುವುದರೊಂದಿಗೆ ಇವುಗಳಲ್ಲಿ ತುಂಬಿದ ಖಾದ್ಯಗಳು ಸುದೀರ್ಘಕಾಲ ತಮ್ಮ ತಾಜಾತನವನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿಲ್ಲ. ಇದರಿಂದಾಗಿ ತಯಾರಕರಿಗೆ ಸಾಕಷ್ಟು ಕಷ್ಟ ನಷ್ಟಗಳು ಸಂಭವಿಸಲಿದೆ ಎಂದು ವಾದಿಸಲಾಗಿತ್ತು. ಆದರೆ ಜನಸಾಮಾನ್ಯರ ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯ ಮತ್ತು ಪರಿಸರದ ಮೇಲೆ ಬಳಸಿ ಎಸೆದ ಪ್ಲಾಸ್ಟಿಕ್ ಕವಚಗಳು ಬೀರುವ ದುಷ್ಪರಿಣಾಮಗಳನ್ನು ಪರಿಗಣಿಸಿದಲ್ಲಿ, ಇವುಗಳನ್ನು ನಿಷೇಧಿಸುವುದು ಅನಿವಾರ್ಯ ಎನಿಸಲಿದೆ ಎಂದು ನ್ಯಾಯಾಲಯ ಹೇಳಿತ್ತು. 

ಸಮಿತಿಯ ಅಭಿಪ್ರಾಯ 

ನ್ಯಾಯಾಲಯ ನೇಮಿಸಿದ್ದ ಸಮಿತಿಯ ಅಭಿಪ್ರಾಯದಂತೆ ನಿರುಪಯುಕ್ತ ಆಹಾರವೆಂದು ಗುರುತಿಸಲ್ಪಟ್ಟಿರುವ ಆಲೂಗೆಡ್ಡೆಯ ಚಿಪ್ಸ್ ಮತ್ತಿತರ ಕುರುಕಲು ತಿಂಡಿಗಳು, ಬಿಸ್ಕೆಟ್, ಚಾಕೊಲೆಟ್, ಕ್ಯಾಂಡಿ, ವೇಫರ್ಸ್, ಚ್ಯೂಯಿಂಗ್ ಗಮ್, ನೂಡಲ್ಸ್, ಕಾರ್ನ್ ಫ್ಲೇಕ್ಸ್, ಪಿಜ್ಜಾ, ಬರ್ಗರ್, ಕೇಕ್, ಲಘು ಪಾನೀಯಗಳು ಮತ್ತು ಸಿದ್ಧ ಹಣ್ಣಿನ ರಸ ಮುಂತಾದವುಗಳ ಅತಿಸೇವನೆಯಿಂದ ಅಧಿಕತೂಕ, ಅತಿಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಕರುಳಿನ ಕ್ಯಾನ್ಸರ್ ಮತ್ತಿತರ ಅನೇಕ ಗಂಭೀರ- ಮಾರಕ ವ್ಯಾಧಿಗಳು ಉದ್ಭವಿಸುವ ಸಾಧ್ಯತೆಗಳಿವೆ. ಜಂಕ್ ಫುಡ್ ಗಳನ್ನೂ ಪ್ಲಾಸ್ಟಿಕ್ ಕವಚಗಳಲ್ಲಿ ತುಂಬಿಸಿ ಮಾರಾಟ ಮಾಡುವುದರಿಂದ ಇನ್ನಷ್ಟು ಕಾಯಿಲೆಗಳು ಬಂದೆರಗುವ ಸಾಧ್ಯತೆಗಳಿವೆ. ಆದುದರಿಂದ ಇಂತಹ ಉತ್ಪನ್ನಗಳನ್ನು ಮಣ್ಣಿನಲ್ಲಿ ಕರಗಿ ಬೇರೆಯಬಲ್ಲ ಬಯೋ ಡಿಗ್ರೆಡೆಬಲ್  ಕವಚಗಳಲ್ಲೇ ತುಂಬಿಸಿ ಮಾರಾಟ ಮಾಡುವಂತೆ ಸಮಿತಿಯು ಸಮಿತಿಯು ಶಿಫಾರಸು ಮಾಡಿತ್ತು. 

ಅಂತಿಮವಾಗಿ ಹೇಳುವುದಾದಲ್ಲಿ ಖಾದ್ಯ ಅಥವಾ ಇನ್ನಿತರ ಯಾವುದೇ ಉತ್ಪನ್ನಗಳ ಪ್ಯಾಕೇಜಿಂಗ್ ನಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿರುವ ಪ್ಲಾಸ್ಟಿಕ್ ಕವಚಗಳು, ದೇಶದ ಪ್ರತಿಯೊಂದು ನಗರ-ಪಟ್ಟಣಗಳಲ್ಲಿ ಪ್ರತಿನಿತ್ಯ ಉತ್ಪನ್ನವಾಗುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ತತ್ಪರಿಣಾಮವಾಗಿ ಜನಸಾಮಾನ್ಯರ ಆರೋಗ್ಯ ಮತ್ತು ಪರಿಸರಗಳ ಮೇಲೆ ತೀವ್ರ ಸ್ವರೂಪದ ದುಷ್ಪರಿಣಾಮಗಳನ್ನು ಬೀರುತ್ತಿದೆ. ಇದೇ ಕಾರಣದಿಂದಾಗಿ ದೇಶದ ಪ್ರತಿಯೊಂದು ರಾಜ್ಯಗಳೂ ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ಆದೇಶವನ್ನು ಅನುಕರಿಸಬೇಕಿದೆ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


Wednesday, July 9, 2014

RAILWAYS AND CLEANLINESS



 ರೈಲ್ವೇ : ಗತವೈಭವವನ್ನು ಮರಳಿಗಳಿಸುವ ಯತ್ನ !

ನಮ್ಮ ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಅಧಿಕತಮ ಜನರು ರೈಲು ಪ್ರಯಾಣವನ್ನೇ ಆಯ್ಕೆ ಮಾಡುತ್ತಾರೆ. ಅದರಲ್ಲೂ ದೂರಪ್ರಯಾಣದ ಹಾಗೂ ತುಸು ದೀರ್ಘಾವಧಿಯ ಪ್ರಯಾಣಕ್ಕೆ " ಮಲಗಿ ಪಯಣಿಸುವ" ಸೌಕರ್ಯವಿರುವ ಸ್ಲೀಪರ್ ಕೋಚ್ ಗಳನ್ನೇ ಆಯ್ದುಕೊಳ್ಳುತ್ತಾರೆ. ಅನ್ಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗಿಂತ ಸಾಕಷ್ಟು ಕಡಿಮೆ ವೆಚ್ಚದಲ್ಲಿ ಪಯಣಿಸಬಹುದಾದ ರೈಲುಗಳಲ್ಲಿ ಶೌಚಾಲಯ ಮತ್ತು ದೀರ್ಘ ಪ್ರಯಾಣದ ರೈಲುಗಳಲ್ಲಿ ಪ್ಯಾಂಟ್ರಿ ಕಾರ್ ಲಭ್ಯವಿರುವುದರಿಂದ, ವಿಶೇಷವಾಗಿ ವಯೋವೃದ್ಧರು, ಮಹಿಳೆಯರು ಮತ್ತು ಕುಟುಂಬ ಸಹಿತ ಪ್ರಯಾಣ ಮಾಡುವವರು ರೈಲುಗಳಿಗೆ ಮೊದಲ ಆದ್ಯತೆಯನ್ನು ನೀಡುತ್ತಾರೆ. ಆದರೆ ಕಳೆದ ಕೆಲವರ್ಷಗಳಿಂದ ರೈಲ್ವೆ ಇಲಾಖೆಯ ನಿರ್ಲಕ್ಷ್ಯ, ಹೆಚ್ಚುತ್ತಿರುವ ಅಪಘಾತಗಳು ಹಾಗೂ ಆರ್ಥಿಕ ಸಮಸ್ಯೆಗಳಿಂದ ಬಸವಳಿದ ಇಲಾಖೆಯು, ದೇಶದ ಉದ್ದಗಲಕ್ಕೆ ಸಂಚರಿಸುವ ಅಸಂಖ್ಯ ರೈಲುಗಳಲ್ಲಿ ಪ್ರಯಾಣಿಕರ ಸೌಕರ್ಯ, ಸುರಕ್ಷತೆ, ಸ್ವಚ್ಚತೆ ಮತ್ತಿತರ ವಿಚಾರಗಳ ಬಗ್ಗೆ ಗಮನಹರಿಸಲು ಮರೆತುಬಿಟ್ಟಿತ್ತು. ತತ್ಪರಿಣಾಮವಾಗಿ ರೈಲು ಪ್ರಯಾಣಿಕರಿಂದ ದೂರುಗಳ ಮಹಾಪೂರವೇ ಹರಿದುಬರಲಾರಂಭಿಸಿತ್ತು !. 

ಸ್ವಚ್ಚತೆಯತ್ತ ಇಲಾಖೆಯ ಚಿತ್ತ 

ಆದರೆ ನೂತನ ಸರ್ಕಾರದ ಮೊದಲ ರೈಲ್ವೆ ಬಜೆಟ್ ನಲ್ಲಿ ಪ್ರಯಾಣದ ದರಗಳನ್ನು ಹೆಚ್ಚಿಸದೇ ಪ್ರಯಾಣಿಕರನ್ನು ಓಲೈಸುವ ತಂತ್ರಕ್ಕೆ ಹೊರತಾಗಿ, ಬಜೆಟ್ ಗೆ ಮುನ್ನ ಹೆಚ್ಚಿಸಿದ್ದ ದರಗಳನ್ನು ಇಳಿಸದೇ, ಪ್ರಯಾಣಿಕರಿಗೆ ಒದಗಿಸುವ ಸೌಲಭ್ಯ, ಸ್ವಚ್ಚತೆ ಇತ್ಯಾದಿಗಳನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ರೈಲ್ವೆ ಸಚಿವರು ಮಂಡಿಸಿದ್ದಾರೆ. ಸಚಿವರೇ ಹೇಳಿದಂತೆ ರೈಲು ನಿಲ್ದಾಣಗಳು, ಬೋಗಿಗಳು ಮತ್ತು ಶೌಚಾಲಯಗಳ ನೈರ್ಮಲ್ಯವನ್ನು ಕಾಪಾಡುವುದು ಇಲಾಖೆಗೆ ಒಂದು ಸವಾಲಾಗಿ ಪರಿಣಮಿಸಿದೆ. ಇದೇ ಕಾರಣದಿಂದಾಗಿ ಶುಚಿತ್ವವನ್ನು ಕಾಪಾಡಲು ಈ ಬಜೆಟ್ ನಲ್ಲಿ ಹಲವು ಕ್ರಮಗಳನ್ನು ಘೋಷಿಸಿದ್ದು, ಗತವರ್ಷಕ್ಕಿಂತ ಶೇ.೪೦ ರಷ್ಟು ಅಧಿಕ ಮೊತ್ತವನ್ನು ಇದಕ್ಕಾಗಿಯೇ ತಗೆದಿರಿಸಲಾಗಿದೆ. ಜೊತೆಗೆ ಪ್ರಮುಖ ೫೦ ನಿಲ್ದಾಣಗಳಲ್ಲಿ ಸ್ವಚ್ಚತೆಯ ಹೊಣೆಗಾರಿಕೆಯನ್ನು ವೃತ್ತಿಪರ ಖಾಸಗಿ ಸಂಸ್ಥೆಗಳಿಗೆ ಹೊರಗುತ್ತಿಗೆಯ ರೂಪದಲ್ಲಿ ನೀಡಲಾಗುತ್ತದೆ. ರೈಲುಗಳು ಮತ್ತು ನಿಲ್ದಾಣಗಳಲ್ಲಿ ಸ್ವಚ್ಚತೆಯನ್ನು ಪರಿಪಾಲಿಸಲು ಪ್ರತ್ಯೇಕ ಹೌಸ್ ಕೀಪಿಂಗ್ ವಿಂಗ್ ಸ್ಥಾಪನೆ, ಸ್ವಚ್ಚತೆಯ ನಿರ್ವಹಣೆ ಮತ್ತು ಯಂತ್ರಗಳ ದುರಸ್ತಿಗೆ ಪ್ರತಿ ನಿಲ್ದಾಣದಲ್ಲೂ ಪ್ರತ್ಯೇಕ ನಿಧಿ ಸ್ಥಾಪನೆ, ಸಿ. ಸಿ ಟಿವಿ ಯ ಮೂಲಕ ಪರಿಶೀಲನೆ, ರೈಲುಗಳಲ್ಲಿ ಜೈವಿಕ ಶೌಚಾಲಯಗಳ ವ್ಯವಸ್ಥೆ, ಎ.ಸಿ ಬೋಗಿಗಳಲ್ಲಿ ಹಾಸಿಗೆ- ಹೊದಿಕೆಗಳ ಸ್ವಚ್ಚತೆಗೆ ಆದ್ಯತೆ, ಲಾಂಡ್ರಿಗಳ ಸಂಖ್ಯೆಯಲ್ಲಿ ಹೆಚ್ಚಳ, ಸ್ವಚ್ಚತೆಯನ್ನು ಪರಿಶೀಲಿಸಲು ವಿಶೇಷ ಅಧಿಕಾರಿಗಳ ತಂಡದ ನಿಯೋಜನೆ ಇತ್ಯಾದಿ ಅನೇಕ ಉಪಕ್ರಮಗಳನ್ನು ಸಚಿವರು ಈ ಬಾರಿಯ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಪ್ರಯಾಣಿಕರ ಊಟೋಪಚಾರಗಳ ಬಗ್ಗೆ ಅನುಷ್ಠಾನಗೊಳಿಸಲಿರುವ ಉಪಕ್ರಮಗಳು, ಪ್ರಯಾಣಿಕರು ಉತ್ಪಾದಿಸಲಿರುವ ತ್ಯಾಜ್ಯಗಳ ಪ್ರಮಾಣಗಳನ್ನು ಹೆಚ್ಚಿಸಲಿರುವುದರಿಂದ, ಬೋಗಿಗಳು, ರೈಲು ನಿಲ್ದಾಣಗಳು ಹಾಗೂ ಹಳಿಗಳು ಮತ್ತು ಶೌಚಾಲಯಗಳ ಸ್ವಚ್ಚತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಲಿವೆ. 

ಖಾದ್ಯಪೇಯಗಳಿಂದ ತ್ಯಾಜ್ಯ 

ದೂರಪ್ರಯಾಣದ ರೈಲುಗಳಲ್ಲಿ ಪ್ರಯಾಣಿಕರಿಗೆ ಖಾದ್ಯಪೇಯಗಳನ್ನು ಒದಗಿಸುವ ಪ್ಯಾಂಟ್ರಿ ಕಾರ್ ನಲ್ಲಿ ಲಭ್ಯ ಆಹಾರಪದಾರ್ಥಗಳ ಗುಣಮಟ್ಟಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಖ್ಯಾತನಾಮ ಸಂಸ್ಥೆಗಳ " ರೆಡಿ ಟು ಈಟ್ " ಖಾದ್ಯಗಳ ಸರಬರಾಜು ವ್ಯವಸ್ಥೆ, ಪ್ರಮುಖ ನಿಲ್ದಾಣಗಳಲ್ಲಿ ಫುಡ್ ಕೋರ್ಟ್ ಗಳ ಸ್ಥಾಪನೆ ಹಾಗೂ ಇ-ಮೇಲ್ ಮತ್ತು ಎಸ್.ಎಂ.ಎಸ್ ಮೂಲಕ ಬೇಕಾದ ಆಹಾರವನ್ನು ತರಿಸಿಕೊಳ್ಳುವ ವ್ಯವಸ್ಥೆ ಇತ್ಯಾದಿಗಳನ್ನೂ ಬಜೆಟ್ ನಲ್ಲಿ ಘೋಷಿಸಲಾಗಿದೆ. ಆದರೆ ಇಂತಹ ವ್ಯವಸ್ಥೆಗಳ ಮೂಲಕ ಸರಬರಾಜಾಗುವ ಆಹಾರಪದಾರ್ಥಗಳನ್ನು, ಪ್ಲಾಸ್ಟಿಕ್ ನಿರ್ಮಿತ ಕರಡಿಗೆ, ತಟ್ಟೆ, ಲೋಟ, ಚಮಚಗಳೊಂದಿಗೆ ಕೈಚೀಲಗಳಲ್ಲಿ ಸರಬರಾಜು ಮಾಡುವುದರಿಂದ, ರೈಲು ಪ್ರಯಾಣಿಕರು ಉತ್ಪಾದಿಸಲಿರುವ ತ್ಯಾಜ್ಯಗಳ ಪ್ರಮಾಣವೂ ಸ್ವಾಭಾವಿಕವಾಗಿಯೇ ಇನ್ನಷ್ಟು ಹೆಚ್ಚಲಿದೆ. ಜೊತೆಗೆ ಆಹಾರ ಸೇವನೆಯ ಬಳಿಕ ಬಹುತೇಕ ಪ್ರಯಾಣಿಕರು ರೈಲಿನಿಂದ ಹೊರಕ್ಕೆ ಎಸೆಯುವ ತ್ಯಾಜ್ಯಗಳು ಹಳಿಗಳ ಇಕ್ಕೆಲಗಳಲ್ಲಿ ರಾಶಿ ಬೀಳಲಿವೆ. 

ಈ ಸಮಸ್ಯೆಯನ್ನು ಬಗೆಹರಿಸಲು ಪ್ರತಿಯೊಂದು ಬೋಗಿಗಳಲ್ಲಿ ಸೂಕ್ತ ಗಾತ್ರದ ಕಸದ ಡಬ್ಬಿಗಳನ್ನು ಇರಿಸುವುದರೊಂದಿಗೆ, ಸಂಗ್ರಹಿತ ತ್ಯಾಜ್ಯಗಳನ್ನು ನಿಗದಿತ ನಿಲ್ದಾಣಗಳಲ್ಲಿ ತೆರವುಗೊಳಿಸಬೇಕಾಗುವುದು.ಇದಲ್ಲದೇ ಬೋಗಿಗಳಲ್ಲಿ ಅಲ್ಲಲ್ಲಿ ಎಸೆದಿರಬಹುದಾದ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಮತ್ತಷ್ಟು ಸಿಬಂದಿಗಳನ್ನು ನೇಮಿಸಬೇಕಾಗುವುದು. ಜೊತೆಗೆ ಸ್ವಚ್ಚತೆಯನ್ನು ಪರಿಶೀಲಿಸಲು ಇಲಾಖೆಯು ನಿಯೋಜಿಸಲಿರುವ ವಿಶೇಷ ಅಧಿಕಾರಿಗಳು, ಹದ್ದಿನ ಕಣ್ಣುಗಳಿಂದ ಇದರ ಮೇಲ್ವಿಚಾರಣೆಯನ್ನು ನಡೆಸಬೇಕಾಗುವುದು. ಇದಕ್ಕೂ ಮಿಗಿಲಾಗಿ ತ್ಯಾಜ್ಯಗಳನ್ನು ಕಿಟಕಿಗಳಿಂದ ಹೊರಕ್ಕೆ ಎಸೆಯದಂತೆ ಅವಶ್ಯಕ ಕ್ರಮಗಳನ್ನೂ ಜಾರಿಗೊಳಿಸಲೇಬೇಕಾಗುವುದು.ಇದರೊಂದಿಗೆ  ಪ್ರಯಾಣಿಕರು ನಿರಂತರವಾಗಿ ಬಳಸುವ ಶೌಚಾಲಯಗಳ ನೈರ್ಮಲ್ಯವನ್ನು ಕಾಪಾಡಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ರೈಲ್ವೆ ಇಲಾಖೆಯು ಸ್ವಚ್ಚತೆಯ ಬಗ್ಗೆ ಹಮ್ಮಿಕೊಂಡಿರುವ ಉಪಕ್ರಮಗಳು ಅರ್ಥಹೀನವೆನಿಸಲಿವೆ. 
 
ಕೊನೆಯ ಮಾತು 

ಕಳೆದ ಹತ್ತುವರ್ಷಗಳಲ್ಲಿ ಹಿಂದಿನ ರೈಲ್ವೇ ಸಚಿವರುಗಳು ೯೯ ಹೊಸ ರೈಲು ಮಾರ್ಗಗಳನ್ನು ಘೋಷಿಸಿದ್ದು, ಇದುವರೆಗೆ ಕೇವಲ ಒಂದು ಮಾರ್ಗದ ಕಾಮಗಾರಿಗಳು ಮಾತ್ರ ಪರಿಪೂರ್ಣಗೊಂಡಿವೆ. ಅಂತೆಯೇ ಈ ಬಾರಿಯ ರೈಲ್ವೇ ಬಜೆಟ್ ನಲ್ಲಿ ರೈಲು ನಿಲ್ದಾಣಗಳು ಮತ್ತು ಬೋಗಿಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವ ಸಲುವಾಗಿ ಘೋಷಿಸಿರುವ ಹತ್ತು ಹಲವು ಉಪಕ್ರಮಗಳು, ಹಿಂದಿನ ರೈಲ್ವೇ ಸಚಿವರ ಘೋಷಣೆಗಳಂತೆ ನಿರರ್ಥಕವೆನಿಸದಿರಲಿ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 





Saturday, July 5, 2014

ILLEGAL MOBILE TOWERS MUST BE SHIFTED





 ಕಾನೂನುಬಾಹಿರ ಮೊಬೈಲ್ ಟವರ್ ಗಳನ್ನು ಸ್ಥಳಾಂತರಿಸಿ 

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಕಾನೂನುಬಾಹಿರವಾಗಿ ಮೊಬೈಲ್ ಗೋಪುರಗಳನ್ನು ನಿರ್ಮಿಸಿರುವ ಸಂಸ್ಥೆಗಳ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳದ ರಾಜ್ಯ ಸರ್ಕಾರದ ವಿರುದ್ಧ, ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರ ಆರೋಗ್ಯಕ್ಕೆ ಹಾನಿಕರ ಎಣಿಸುತ್ತಿರುವ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅವಶ್ಯಕತೆ ಇದ್ದಲ್ಲಿ ಕರ್ನಾಟಕ ಪೌರಸಂಸ್ಥೆ ಮತ್ತು ಪಂಚಾಯತಿ ಕಾಯಿದೆಗಳಿಗೆ ತಿದ್ದುಪಡಿ ಮಾಡುವ ಅಥವಾ ನೂತನ ಕಾಯಿದೆಗಳನ್ನು ರೂಪಿಸುವಂತೆ ನ್ಯಾಯಾಲಯವು ಜುಲೈ ೪ ರಂದು ಆದೇಶಿಸಿದೆ.

೨೦೧೦ ರ ತೀರ್ಪು 

ರಾಜ್ಯದ ಪ್ರತಿಯೊಂದು ನಗರ- ಪಟ್ಟಣಗಳಲ್ಲಿ ವ್ಯಾಪಕವಾಗಿ ಕಂಡುಬರುವ ಮೊಬೈಲ್ ಗೋಪುರಗಳ ಅಳವಡಿಕೆಯ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯವು ೨೦೧೦ ರಲ್ಲೇ ನೀಡಿದ್ದ ತೀರ್ಪನ್ನು ಸರ್ಕಾರ ಅನುಷ್ಠಾನಗೊಳಿಸಿಲ್ಲ. ಈ ತೀರ್ಪಿನಂತೆ ರಾಜ್ಯದ ಯಾವುದೇ ಸ್ಥಳೀಯ ಸಂಸ್ಥೆಯ ಅನುಮತಿಯನ್ನು ಪಡೆಯದೇ ಮೊಬೈಲ್ ಗೋಪುರಗಳನ್ನು ನಿರ್ಮಿಸುವಂತಿಲ್ಲ. ಅದೇ ರೀತಿಯಲ್ಲಿ ಈ ಗೋಪುರಗಳು ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ತೆರಿಗೆಯನ್ನು ಪಾವತಿಸದೇ ಇರುವಂತಿಲ್ಲ. ನ್ಯಾಯಾಲಯ ನೀಡಿದ್ದ ಈ ತೀರ್ಪನ್ನು ಸರ್ಕಾರವು ಕಟ್ಟುನಿಟ್ಟಾಗಿ ಅನುಷ್ಠಾನಿಸಿದ್ದಲ್ಲಿ, ಕಾನೂನುಬಾಹಿರವಾಗಿ ಮೊಬೈಲ್ ಗೋಪುರಗಳನ್ನು ನಿರ್ಮಿಸುವ ಸಾಧ್ಯತೆಗಳೇ ಇರಲಿಲ್ಲ!. 
ನಿಜ ಸ್ಥಿತಿ ಹೀಗಿದ್ದರೂ ಕಾನೂನುಬಾಹಿರವಾಗಿ ಮೊಬೈಲ್ ಗೋಪುರಗಳನ್ನು ನಿರ್ಮಿಸಿರಲು, ತತ್ಸಂಬಂಧಿತ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಅಥವಾ ರಾಜಕೀಯ ನೇತಾರರ ಭ್ರಷ್ಟಾಚಾರವೇ ಕಾರಣ ಈನುವುದರಲ್ಲಿ ಸಂದೇಹವಿಲ್ಲ. 

ಸಮಿತಿಯ ಸಲಹೆಗಳು 

ಮೊಬೈಲ್ ದೂರವಾಣಿಗಳು ಮತ್ತು ಇವುಗಳ ಸಂಪರ್ಕ ಗೋಪುರಗಳು ಹೊರಸೂಸುವ ಅತಿಯಾದ ಪ್ರಮಾಣದ ವಿದ್ಯುತ್ ಆಯಸ್ಕಾಂತೀಯ ಅಲೆಗಳು ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ತತ್ಪರಿಣಾಮವಾಗಿ ಉದ್ಭವಿಸುವ ಅನೆಕವಿಧದ ಗಂಭೀರ ಹಾಗೂ ಮಾರಕ ಕಾಯಿಲೆಗಳ ಸಾಧ್ಯತೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಸರ್ಕಾರವೇ ನೇಮಿಸಿದ್ದ ಸಮಿತಿಯೊಂದು, ಈ ಬಗ್ಗೆ ಕೆಲ ಸಲಹೆ ಸೂಚನೆಗಳನ್ನು ನೀಡಿತ್ತು. ಸಮಿತಿಯು ಮೊಬೈಲ್ ದೂರವಾಣಿಗಳನ್ನು ಅತಿಯಾಗಿ ಬಳಸುವ ವ್ಯಕ್ತಿಗಳು, ಎಳೆಯ ಮಕ್ಕಳು, ಹದಿಹರೆಯದವರು ಮತ್ತು ಗರ್ಭಿಣಿಯರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವಂತೆ ಎಚ್ಚರಿಕೆಯನ್ನು ನೀಡಿತ್ತು. ಅದೇ ರೀತಿಯಲ್ಲಿ ಮೊಬೈಲ್ ಗೋಪುರಗಳ ಆಸುಪಾಸಿನಲ್ಲಿ ವಾಸಿಸುವವರು, ಇದರ ಹಾನಿಕಾರಕ ಪರಿಣಾಮಗಳನ್ನು ಅರಿತುಕೊಂಡು ಮುಂಜಾಗರೂಕತೆ ವಹಿಸಲು ಸಲಹೆಯನ್ನು ನೀಡಿತ್ತು. 

ಕೇಂದ್ರ ಸರ್ಕಾರವು ಈ ಸಮಸ್ಯೆಯ ಬಗ್ಗೆ ಅಧ್ಯಯನವನ್ನು ನಡೆಸಲು ಮತ್ತು ಸೂಕ್ತ ಪರಿಹಾರವನ್ನು ಸೂಚಿಸಲು ನಿಯೋಜಿಸಿದ್ದ ಅಂತರ್ ಸಚಿವಾಲಯಗಳ ಸಮಿತಿಯ ಅಧ್ಯಕ್ಷ ಹಾಗೂ ದೂರಸಂಪರ್ಕ ಇಲಾಖೆಯ ತಾಂತ್ರಿಕ ಸಲಹೆಗಾರರೂ ಆಗಿದ್ದ ರಾಮ್ ಕುಮಾರ್ ನೇತ್ರತ್ವದ ಸಮಿತಿಯು, ಮೊಬೈಲ್ ಗೋಪುರಗಳನ್ನು ಜನದಟ್ಟಣೆ ಹೆಚ್ಚಿರುವಲ್ಲಿ, ವಸತಿ ಪ್ರದೇಶಗಳಲ್ಲಿ, ಶಾಲೆ- ಕಾಲೇಜುಗಳು ಹಾಗೂ ಆಟದ ಮೈದಾನಗಳ ಆಸುಪಾಸಿನಲ್ಲಿ, ಮತ್ತು ಆಸ್ಪತ್ರೆಗಳ ಸಮೀಪದಲ್ಲಿ ನಿರ್ಮಿಸದಂತೆ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ೨೦೧೦ ರಲ್ಲೇ ಸೂಚಿಸಿತ್ತು. ಇದರೊಂದಿಗೆ ಈ ಗೋಪುರಗಳು ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳ ವಿಕಿರಣದ ಇತಿಮಿತಿಗಳನ್ನು ಪುನರ್ ವಿಮರ್ಶಿಸಿ, ನಮ್ಮ ದೇಶದ ಪರಿಸರ ಮತ್ತು ಇತರ ಸ್ಥಿತಿಗತಿಗಳಿಗೆ ಅನುಗುಣವಾಗಿರುವಂತೆ ನೂತನ ನೀತಿಯೊಂದನ್ನು ರೂಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. 

ಮೊಬೈಲ್ ಗೋಪುರ ಮತ್ತು ದೂರವಾಣಿಗಳು ಹೊರಸೂಸುವ ವಿಕಿರಣದ ಅಪಾಯಗಳು ಮತ್ತು ಇವುಗಳಿಂದ ಉದ್ಭವಿಸಬಲ್ಲ ವಿವಿಧ ರೀತಿಯ ಕ್ಯಾನ್ಸರ್ ಮತ್ತಿತರ ಗಂಭೀರ ವ್ಯಾಧಿಗಳ ಬಗ್ಗೆ ಅದಾಗಲೇ ಪ್ರಕಟಗೊಂಡಿದ್ದ ಹಲವಾರು ಅಧ್ಯಯನಗಳ ವರದಿಗಳನ್ನು ಉಲ್ಲೇಖಿಸಿದ್ದ ಸಮಿತಿಯ ಅಧ್ಯಕ್ಷರು, ಮೊಬೈಲ್ ದೂರವಾಣಿಗಳನ್ನು ಅತಿಯಾಗಿ ಬಳಸುವ ಜನರು ಇಯರ್ ಫೋನ್ ಅಥವಾ ಹ್ಯಾಂಡ್ಸ್ ಫ್ರೀ ಉಪಕರಣಗಳನ್ನು ಬಳಸುವಂತೆ ಸಲಹೆಯನ್ನು ನೀಡಿದ್ದರು. ಇದಕ್ಕೂ ಮಿಗಿಲಾಗಿ ಸೆಲ್ಯುಲರ್ ಸೇವಾ ಸಂಸ್ಥೆಗಳು ತಮ್ಮ ಸಂಪರ್ಕ ಜಾಲವನ್ನು ವಿಸ್ತರಿಸುವ ಸಂದರ್ಭದಲ್ಲಿ, ಗಗನಚುಂಬಿ ಕಟ್ಟಡಗಳ ಮೇಲೆ ಅಳವಡಿಸುತ್ತಿರುವ ಅಧಿಕ ಶಕ್ತಿಯ ಪ್ರಸಾರಕಗಳಿಗೆ ಬದಲಾಗಿ ಕಡಿಮೆ ಶಕ್ತಿಯ ಮೈಕ್ರೋ ಸೆಲ್ ಪ್ರಸಾರಕಗಳನ್ನು ಬಳಸುವಂತೆ ಸಮಿತಿ ಸೂಚಿಸಿತ್ತು. ಇದಲ್ಲದೇ ವಿಕಿರಣದ ಸುರಕ್ಷತೆಯ ಮಾನದಂಡಗಳಿಗೆ ಅನುಗುಣವಾದ ಮೊಬೈಲ್ ದೂರವಾಣಿಗಳನ್ನು ಮಾತ್ರ ಆಮದು ಮಾಡುವ ಹಾಗೂ ದೇಶದಲ್ಲಿ ತಯಾರಿಸಿ ಮಾರಾಟ ಮಾಡುವಂತೆ ಇಂಡಿಯನ್ ಟೆಲಿಗ್ರಾಫ್ ಆಕ್ಟ್ ೧೯೮೫ ಕ್ಕೆ ಸೂಕ್ತ ತಿದ್ದುಪಡಿಯನ್ನು ಜಾರಿಗೆ ತರಬೇಕೆಂದು ಸರ್ಕಾರಕ್ಕೆ ಸಲಹೆಯನ್ನು ನೀಡಿತ್ತು. ಸಮಿತಿಯ ಶಿಫಾರಸುಗಳನ್ನು ಅವಲೋಕಿಸಿದಾಗ ಮೊಬೈಲ್ ದೂರವಾಣಿಗಳು ಮತ್ತು ಇವುಗಳ ಸಂಪರ್ಕ ಗೋಪುರಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಸಾಕಷ್ಟು ಮುನ್ನೆಚರಿಕೆಯನ್ನು ವಹಿಸಬೇಕಾದ ಹೊಣೆಗಾರಿಕೆಯನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಿಸಬೇಕಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮೊಬೈಲ್ ಸೇವಾ ಸಂಸ್ಥೆಗಳಿಗೆ ಕಡಿವಾಣವನ್ನು ತೊಡಿಸದ ಸರ್ಕಾರದ ಬೇಜವಾಬ್ದಾರಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಹತ್ತಾರು ವರ್ಷಗಳ ಹಿಂದೆ ಮೊಬೈಲ್ ಸೇವಾ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಗೋಪುರಗಳ ನಿರ್ಮಾಣಕ್ಕೆ ಅಡ್ಡಿ ಆತಂಕಗಳನ್ನು ಓಡ್ದದಿರುವಂತೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ನೀಡಿದ್ದ ಪರೋಕ್ಷ ಸೂಚನೆಯಿಂದಾಗಿ, ದೇಶದ ಉದ್ದಗಲಕ್ಕೂ ಮೊಬೈಲ್ ಗೋಪುರಗಳು ನಾಯಿಕೊಡೆಗಳಂತೆ ತಲೆಎತ್ತಿದ್ದವು. ಈ ಸಂದರ್ಭದಲ್ಲಿ ಕಾನೂನುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದ ಸೇವಾ ಸಂಸ್ಥೆಗಳು, ವಸತಿ ಕಟ್ಟಡಗಳು, ಹೋಟೆಲ್ ಗಳು, ಕಾಲೇಜುಗಳು, ಜನದಟ್ಟನೆಯ ಪ್ರದೇಶಗಳು ಮತ್ತು ಆಸ್ಪತ್ರೆಗಳ ಕಟ್ಟಡಗಳ ಮೇಲೂ ತಮ್ಮ ಗೋಪುರಗಳನ್ನು ನಿರ್ಮಿಸಿದ್ದರು. ಸೇವಾ ಸಂಸ್ಥೆಗಳು ನೀಡಲಿರುವ ಸಹಸ್ರಾರು ರೂಪಾಯಿ ಮಾಸಿಕ ಬಾಡಿಗೆಯ ಆಸೆಗೆ ಮರುಳಾದ ಅನೇಕ ಜನರು ತಮ್ಮ ಕಟ್ಟಡಗಳ ಮೇಲೆ ಗೋಪುರಗಳನ್ನು ನಿರ್ಮಿಸಲು ಅನುಮತಿಯನ್ನು ನೀಡಿದ್ದರು.ವಿಶೇಷವೆಂದರೆ ಮೊಬೈಲ್ ಸೇವಾ ಸಂಸ್ಥೆಗಳು ಕೇಂದ್ರ ಸರ್ಕಾರದ ಔದಾರ್ಯವನ್ನು ದುರುಪಯೋಗಿಸುವ ಮೂಲಕ ಇಂದಿಗೂ ತಮಗೆ ಬೇಕಾದಲ್ಲಿ ಕಾನೂನುಬಾಹಿರವಾಗಿ ಸಂಪರ್ಕ ಗೋಪುರಗಳನ್ನು ನಿರ್ಮಿಸುತ್ತಿವೆ. ಹಾಗೂ ಇದೇ ಕಾರಣದಿಂದಾಗಿ ಇತ್ತೀಚಿಗೆ ಬೆಂಗಳೂರಿನ ವ್ಯಕ್ತಿಯೊಬ್ಬರು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ದಾವೆಯ ಪರಿಣಾಮವಾಗಿ, ನ್ಯಾಯಾಲಯವು ಸರ್ಕಾರಕ್ಕೆ ಚಾಟಿ ಬೀಸಿದೆ!. 

ಅದೇನೇ ಇರಲಿ, ಇದೀಗ ರಾಜ್ಯ ಸರ್ಕಾರವು ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿದ್ದ ಸಂಪರ್ಕ ಗೋಪುರಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಜೊತೆಗೆ ನೂತನ ಗೋಪುರಗಳನ್ನು ನಿರ್ಮಿಸುವ ಮುನ್ನ ಸೇವಾ ಸಂಸ್ಥೆಗಳು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಪರಿಪಾಲಿಸುವ, ಸ್ಥಳೀಯ ಸಂಸ್ಥೆಗಳಿಂದ ಅನುಮತಿಯನ್ನು ಪಡೆಯಲೇಬೇಕೆನ್ನುವ ಮತ್ತು ವರ್ಷಂಪ್ರತಿ ತೆರಿಗೆಯನ್ನು ಪಾವತಿಸುವಂತೆ ಮೊಬೈಲ್ ಸೇವಾ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಬೇಕಿದೆ. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



Friday, July 4, 2014

NON COMMUNICABLE DISEASES






 

 ಪರಸ್ಪರ  ಹರಡದ ಗಂಭೀರ ಕಾಯಿಲೆಗಳು 

ನಮ್ಮನ್ನು ಪೀಡಿಸುವ ಸಹಸ್ರಾರು ಕಾಯಿಲೆಗಳಲ್ಲಿ ಕಾಯಿಲೆಗಳಲ್ಲಿ, ಪರಸ್ಪರ ಒಬ್ಬರಿಂದ ಮತ್ತೊಬ್ಬರಿಗೆ ಹರಡದ ಹಲವಾರು ಕಾಯಿಲೆಗಳೂ ಸೇರಿವೆ. ಆದರೆ ಅನೇಕ ವಿದ್ಯಾವಂತರೂ ನಂಬಿರುವಂತೆ ಸಾಂಕ್ರಾಮಿಕವಾಗಿ ಹರಡಬಲ್ಲ ಅನೇಕ ಕಾಯಿಲೆಗಳಂತೆಯೇ, ಪರಸ್ಪರ ಹರಡದ ಕಾಯಿಲೆಗಳೂ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಜಾಗತಿಕ ಮಟ್ಟದಲ್ಲಿ ಇಂತಹ ಕಾಯಿಲೆಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯು ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಮನುಷ್ಯನನ್ನು ಬಾಧಿಸುವ ವೈವಿಧ್ಯಮಯ ವ್ಯಾಧಿಗಳಿಗೆ ಅನೇಕ ಕಾರಣಗಳಿವೆ. ಇವುಗಳಲ್ಲಿ ಅನುವಂಶಿಕತೆ, ಜನ್ಮದತ್ತ ಕಾಯಿಲೆಗಳು, ಸೂಕ್ಷ್ಮಾಣು ಜೀವಿಗಳ ಸೋಂಕು,ನಾವು ಸೇವಿಸುವ ನೀರು,ಗಾಳಿ ಹಾಗೂ ಆಹಾರ, ಮಾನಸಿಕ ಒತ್ತಡ, ಪ್ರದೂಷಿತ ಪರಿಸರ ಮತ್ತು ದುಶ್ಚಟಗಳು ಪ್ರಮುಖವಾಗಿವೆ. ಆದರೆ ಇತ್ತೀಚಿನ ಕೆಲ ವರ್ಷಗಳಿಂದ " ಒಬ್ಬರಿಂದ ಮತ್ತೊಬ್ಬರಿಗೆ ಹರಡದ ಕಾಯಿಲೆ" ಗಳ ಪ್ರಮಾಣ ದಿನೇದಿನೇ ಹೆಚ್ಚುತ್ತಿದೆ. ಅರ್ಥಾತ್, ಭಾರತೀಯರು ಅನುಸರಿಸುತ್ತಿರುವ ಪಾಶ್ಚಾತ್ಯ ಹಾಗೂ ಅಧುನಿಕ ಜೀವನಶೈಲಿಗಳ ಪರಿಣಾಮವಾಗಿ, ಒಬ್ಬರಿಂದ ಮತ್ತೊಬ್ಬರಿಗೆ ಹರಡದ ಗಂಭೀರ ಮತ್ತು ಮಾರಕ ಕಾಯಿಲೆಗಳ ಪ್ರಮಾಣ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ.  ಜೊತೆಗೆ ಕೆಲ ದಶಕಗಳ ಹಿಂದೆ ಮಧ್ಯ ವಯಸ್ಸು ಮೀರಿದ ಬಳಿಕ ಪ್ರತ್ಯಕ್ಷವಾಗುತ್ತಿದ್ದ ಇಂತಹ ಕಾಯಿಲೆಗಳು, ಇದೀಗ ಎಳೆಯ ವಯಸ್ಸಿನ ಮಕ್ಕಳು ಮತ್ತು ಯುವಜನರನ್ನು ಕಾಡಲಾರಂಭಿಸಿವೆ. ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿರುವ ಈ ಸಮಸ್ಯೆಯನ್ನು ಕೇವಲ ಔಷದ ಸೇವನೆಯ ಮೂಲಕ ಗುಣಪಡಿಸಲು ಅಸಾಧ್ಯವೆನಿಸುತ್ತಿದೆ. 

ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ ಆಸ್ತಮಾ,ವಿವಿಧ ರೀತಿಯ ಕ್ಯಾನ್ಸರ್, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ದೀರ್ಘಕಾಲೀನ ಶ್ವಾಸಾಂಗಗಳ ಅಡಚಣೆಯ ಕಾಯಿಲೆ, ಜನ್ಮದತ್ತ ಆರೋಗ್ಯದ ಸಮಸ್ಯೆಗಳು, ಮಧುಮೇಹ, ಜೀರ್ಣಾಂಗಗಳ ಕಾಯಿಲೆಗಳು ( ಜಠರದ ಹುಣ್ಣು ಇತ್ಯಾದಿ), ಮಾತ್ರ- ಪ್ರಜನನಾಂಗಗಳ ವ್ಯಾಧಿಗಳು(ಉದಾ- ಪ್ರಾಸ್ಟೇಟ್ ಮತ್ತು ಮೂತ್ರಪಿಂಡಗಳ ಕಾಯಿಲೆಗಳು), ನಾರಾ ಮಾನಸಿಕ ಸಮಸ್ಯೆಗಳು ( ಉದಾ-ಮಾನಸಿಕವ್ಯಾಧಿಗಳು, ಅಪಸ್ಮಾರ, ಅಲ್ಜೀಮರ್ಸ್ ಇತ್ಯಾದಿ), ಚರ್ಮರೋಗಗಳು, ಮಾಂಸಪೇಶಿ- ಎಲುಬುಗಳ ಕಾಯಿಲೆಗಳು (ಉದಾ-ಆರ್ಥ್ರೈಟಿಸ್ ), ಕಣ್ಣಿಗೆ ಸಂಬಂಧಿಸಿದ ವ್ಯಾಧಿಗಳು ( ಉದಾ-ಗ್ಲಕೋಮ) ಸಾಂಕ್ರಾಮಿಕವಾಗಿ ಹರಡದ ಕಾಯಿಲೆಗಳ ಪಟ್ಟಿಯಲ್ಲಿ ಸೇರಿವೆ. 

ಸಮಸ್ಯೆಗೆ ಕಾರಣವೇನು?

ಪಾಶ್ಚಾತ್ಯರ ಜೀವನಶೈಲಿಯಿಂದ ಪ್ರಭಾವಿತರಾಗಿರುವ ಗಣನೀಯ ಪ್ರಮಾಣದ ಭಾರತೀಯರು, ಸುಖಲೋಲುಪತೆಗೆ ಶರಣಾಗಿರುವುದು ಆರೋಗ್ಯದ ದೃಷ್ಟಿಯಿಂದ ಹಿತಕರವಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ. ಆರಾಮದಾಯಕ ಜೀವನಕ್ಕಾಗಿ ನಾವಿಂದು ಆವಿಷ್ಕರಿಸಿರುವ ಅನೇಕ ಸೌಕರ್ಯಗಳು ಮತ್ತು ಯಂತ್ರಗಳಿಂದಾಗಿ, ನಮ್ಮ ಶಾರೀರಿಕ ಕ್ಷಮತೆಯ ಮಟ್ಟದೊಂದಿಗೆ, ರೋಗನಿರೋಧಕ ಶಕ್ತಿಯೂ ಪಾತಾಳಕ್ಕೆ ಕುಸಿದಿದೆ. ತತ್ ಪರಿಣಾಮವಾಗಿ ಈ ವರ್ಗಕ್ಕೆ ಸೇರಿದ ಅನೇಕ ಕಾಯಿಲೆಗಳು ಅಧಿಕತಮ ಜನರನ್ನು ಬಾಧಿಸುತ್ತಿವೆ. ಇದರೊಂದಿಗೆ ಇಂತಹ ಕೆಲವು ಕಾಯಿಲೆಗಳು ಅನುವಂಶಿಕವಾಗಿ ಮುಂದಿನ ಪೀಳಿಗೆಯಲ್ಲಿ ಕಾಣಿಸಿಕೊಂಡಲ್ಲಿ, ಮತ್ತೆ ಕೆಲವು ಕಾಯಿಲೆಗಳು ನಮ್ಮ ಸುತ್ತಮುತ್ತಲ ಪರಿಸರ, ನಾವು ಸೇವಿಸುವ ಕಲುಷಿತ ಗಾಳಿ ಹಾಗೂ ನೀರು ಮತ್ತು ಕೀಟನಾಶಕಗಳಿಂದ ಸಮೃದ್ಧವಾಗಿರುವ ಆಹಾರ, ಪೋಷಕಾಂಶಗಳೇ ಇಲ್ಲದ ನಿರುಪಯುಕ್ತ ಆಹಾರ (ಜಂಕ್ ಫುಡ್) ಗಳ ಸೇವನೆ, ಆರಾಮದಾಯಕ ಹಾಗೂ ನಿಷ್ಕ್ರಿಯ ಜೀವನ ಶೈಲಿ, ಅತಿಯಾದ ಧೂಮಪಾನ-ಮದ್ಯಪಾನ ಹಾಗೂ ಮಾದಕ ದ್ರವ್ಯಗಳ ಸೇವನೆ, ತೀವ್ರ ಮಾನಸಿಕ ಒತ್ತಡವೇ ಮುಂತಾದ ಕಾರಣಗಳಿಂದ ಸಾಂಕ್ರಾಮಿಕವಾಗಿ ಹರಡದ ವ್ಯಾಧಿಗಳು ಉದ್ಭವಿಸುವ ಸಾಧ್ಯತೆಗಳಿವೆ. 

ಅಪಾಯಕಾರಿ ಅಂಶಗಳು 

ಶಾರೀರಿಕ ನಿಷ್ಕ್ರಿಯತೆ, ತಂಬಾಕಿನ ಬಳಕೆ, ಅಧಿಕ ತೂಕ- ಅತಿ ಬೊಜ್ಜು, ಅಧಿಕ ರಕ್ತದ ಒತ್ತಡ, ರಕ್ತದಲ್ಲಿ ಕೊಲೆಸ್ಟರಾಲ್ ಮತ್ತು ಸಕ್ಕರೆಯ (ಗ್ಲುಕೋಸ್) ಅಂಶಗಳು ಅಧಿಕವಾಗಿರುವುದು, ಇಂತಹ ವ್ಯಾಧಿಪೀಡಿತರ ಮರಣಕ್ಕೆ ಕಾರಣವೆನಿಸುವ ಅಪಾಯಕಾರಿ ಅಂಶಗಳಾಗಿವೆ. ಸಾಂಕ್ರಾಮಿಕವಾಗಿ ಹರಡದ ಕಾಯಿಲೆಗಳ ಮಾರಕತೆಯ ಅಂಕಿ ಅಂಶಗಳು ಈ ಕೆಳಗಿನಂತಿವೆ.  

ಜಾಗತಿಕ ಮಟ್ಟದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡದ ಕಾಯಿಲೆಗಳಿಗೆ ಶೇ.೬೩ ರಷ್ಟು ಮಂದಿ ಈಡಾಗುತ್ತಿದ್ದಾರೆ. ಅಂತೆಯೇ ವರ್ಷದಲ್ಲಿ ೩೬ ದಶಲಕ್ಷ ಜನರು ಇಂತಹ ವ್ಯಾಧಿಗಳಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೂ ಮಿಗಿಲಾಗಿ ಸುಮಾರು ೯ ದಶಲಕ್ಷ ಜನರು ೬೦ ವರ್ಷ ವಯಸ್ಸಿಗೆ ಮುನ್ನವೇ ಅಕಾಲಿಕ ಮರಣಕ್ಕೆ ಈಡಾಗುತ್ತಿದ್ದಾರೆ. 

ಈ ಸಮಸ್ಯೆಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಜೆಗಳೇ ಹೆಚ್ಚಾಗಿ ಈಡಾಗುತ್ತಿದ್ದು, ೬೦ ವರ್ಷ ವಯಸ್ಸಿಗೆ ಮುನ್ನವೇ ಮೃತಪಡುತ್ತಿರುವ  ಜನರು ಮಧ್ಯಮ ಮತ್ತು ಅಲ್ಪ ಆದಾಯದ ದೇಶಗಳ ಪ್ರಜೆಗಳೇ ಆಗಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ತಡೆಗಟ್ಟದೇ ಇದ್ದಲ್ಲಿ, ೨೦೩೦ ನೆ ಇಸವಿಯಲ್ಲಿ ೫೩ ದಶಲಕ್ಷ ಜನರು ಇದಕ್ಕೆ ಬಲಿಯಾಗಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಿಸಿದೆ. ಇಷ್ಟು ಮಾತ್ರವಲ್ಲ, ಇದರಿಂದಾಗಿ ದೇಶದ ಪ್ರಜೆಗಳು ಮಾತ್ರವಲ್ಲ. ದೇಶದ ಆರ್ಥಿಕತೆಯ ಮೇಲೂ ಇದು ಪರಿಣಾಮ ಬೀರಲಿದೆ. ೨೦೦೫ ರಿಂದ  ೨೦೧೫ ರ ಅವಧಿಯಲ್ಲಿ ಹೆಚ್ಚಲಿರುವ ಈ ಸಮಸ್ಯೆಯಿಂದಾಗಿ,ನಮ್ಮ ದೇಶದ ಬೊಕ್ಕಸಕ್ಕೆ ೨೩೬ ಬಿಲಿಯನ್ ಡಾಲರ್ ನಷ್ಟು ನಷ್ಟಕ್ಕೆ ಕಾರಣವೆನಿಸಲಿದೆ ಎಂದು ವಿಶ್ವ ಆರೋಗ್ಯಸಂಸ್ಥೆ ಹೇಳಿದೆ. 

ಪರಿಹಾರವೇನು?

ಸಾಮಾನ್ಯವಾಗಿ ನಮ್ಮನ್ನು ಪೀಡಿಸುವ ಇತರ ಕಾಯಿಲೆಗಳ ಚಿಕಿತ್ಸೆಗಿಂತ ಸಾಂಕ್ರಾಮಿಕವಾಗಿ ಹರಡದ ಹಾಗೂ ಸುದೀರ್ಘಕಾಲ ಬಾಧಿಸುವ ವ್ಯಾಧಿಗಳ ಚಿಕಿತ್ಸಾ ವೆಚ್ಚವು ಸಾಕಷ್ಟು ಅಧಿಕವಾಗಿರುತ್ತದೆ. ಸರಕಾರವು ಈ ಸಮಸ್ಯೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ, ಈ ವ್ಯಾಧಿಗಳು ಮತ್ತು ತತ್ಸಂಬಂಧಿತ ಮರಣದ ಪ್ರಮಾಣಗಳು ಇನ್ನಷ್ಟು ಹೆಚ್ಚಲಿವೆ. ಕೇಂದ್ರ ಸರಕಾರವು ಇದೇ ಉದ್ದೇಶದಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಮಧುಮೇಹ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಪಕ್ಷವಾತ ಹಾಗೂ ಕ್ಯಾನ್ಸರ್ ವ್ಯಾಧಿಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮಗಳನ್ನು ಅನುಷ್ಠಾನಿಸಿದೆ. ಆದರೂ ಸಮಗ್ರ ಕಾರ್ಯಕ್ರಮವನ್ನು ಹದ್ದಿನ ಕಣ್ಣಿನಿಂದ ವೀಕ್ಷಿಸಿ, ಅವಶ್ಯಕ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವೆನಿಸುತ್ತದೆ. ಜೊತೆಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಾದ ಅವಶ್ಯಕತೆಯೂ ಇದೆ. ಜೊತೆಗೆ ಇಂತಹ ವ್ಯಾಧಿಗಳನ್ನು ತ್ವರಿತಗತಿಯಲ್ಲಿ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ ಜನಸಾಮಾನ್ಯರಿಗೆ ಈ ಸಮಸ್ಯೆಯ ಬಗ್ಗೆ ವಿಶದವಾದ ಮಾಹಿತಿಗಳನ್ನು ನೀಡುವ ಮೂಲಕ ಇದನ್ನು ಸಮರ್ಪಕವಾಗಿ ನಿಯಂತ್ರಿಸಬಹುದಾಗಿದೆ. 

ದೇಶದ ಪ್ರಜೆಗಳ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುವ ಮತ್ತು ದೇಶದ ಬೊಕ್ಕಸಕ್ಕೆ ಕನ್ನವನ್ನು ಕೊರೆಯಬಲ್ಲ ಈ ಗಂಭೀರ ಹಾಗೂ ಮಾರಕ ಸಮಸ್ಯೆಯನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ವಿಚಾರದಲ್ಲಿ ಜನಸಾಮಾನ್ಯರು ಸರಕಾರದೊಂದಿಗೆ ಕೈಜೋಡಿಸಬೇಕಾಗಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 




Thursday, July 3, 2014

Disposable blankets for railway travellers!





 ತ್ಯಾಜ್ಯಗಳ ಉತ್ಪಾದನೆಯನ್ನು ಹೆಚ್ಚಿಸಲಿರುವ ರೈಲ್ವೇ ಇಲಾಖೆ !

ಭವ್ಯ ಭಾರತದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು, ತಮ್ಮ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಉತ್ಪನ್ನವಾಗುತ್ತಿರುವ ವೈವಿಧ್ಯಮಯ ತ್ಯಾಜ್ಯಗಳನ್ನು ಸಂಗ್ರಹಿಸಿ, ವೈಜ್ನಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ಹೆಣಗಾಡುತ್ತಿವೆ. ಆದರೆ ಸ್ಥಳೀಯ ಜನರ ಅಸಹಕಾರ, ನಿರ್ಲಕ್ಷ್ಯ ಮತ್ತು ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗಳಿಗೆ ಬೇಕಾಗುವ ಅವಶ್ಯಕ ಸಂಖ್ಯೆಯ ವಾಹನಗಳು, ಸಿಬಂದಿ ಮತ್ತು ತ್ಯಾಜ್ಯ ವಿಲೇವಾರಿ ಘಟಕಗಳ ಅಭಾವದಿಂದಾಗಿ ಸೋತುಹೋಗಿವೆ. ಈ ಸಮಸ್ಯೆಯನ್ನು ಸಮರ್ಥವಾಗಿ ಪರಿಹರಿಸಲು ತ್ಯಾಜ್ಯಗಳ ಉತ್ಪಾದನೆಯನ್ನು ತಕ್ಷಣದಿಂದಲೇ ಕಡಿಮೆ ಮಾಡಬೇಕಾದ ಅನಿವಾರ್ಯತೆಯೂ ಇದೆ. ಏಕೆಂದರೆ ತ್ಯಾಜ್ಯಗಳ ಉತ್ಪಾದನೆ ಹೆಚ್ಚಿದಷ್ಟು, ಇವುಗಳ ಸಂಗ್ರಹ ಮತ್ತು ವಿಲೆವಾರಿಗಳು ಇನ್ನಷ್ಟು ಜಟಿಲವಾಗುತ್ತವೆ. ಆದರೆ ಭಾರತೀಯ ರೈಲ್ವೇ ಇಲಾಖೆಯು ಇದಕ್ಕೆ ತದ್ವಿರುದ್ಧವಾಗಿ, ತ್ಯಾಜ್ಯಗಳ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುವ ಯೋಜನೆಯೊಂದನ್ನು ಸದ್ಯೋಭವಿಷ್ಯದಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ!. 

ಬಳಸಿ ಎಸೆಯುವ ಹಾಸಿಗೆ!

ಇದೇ ತಿಂಗಳಿನ ಮೊದಲ ವಾರದಲ್ಲಿ ರೈಲ್ವೇ ಇಲಾಖೆಯ ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆಯಂತೆ, ಈಗ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ನೀಡುತ್ತಿರುವ ಹೊದಿಕೆಗಳು ಶುಚಿಯಾಗಿಲ್ಲ ಎಂದು ವ್ಯಾಪಕವಾದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪಾಲಿಯೆಸ್ಟರ್ ನಿರ್ಮಿತ ಹೊದಿಕೆಗಳನ್ನು ನೀಡಲು ಚಿಂತನೆ ನಡೆದಿದೆ. ಇದೇ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿದ್ದ ವರದಿಯ ತಲೆಬರಹದಲ್ಲಿ " ಹೊದಿಕೆ" ಎನ್ನುವ ಪದವನ್ನು ಬಳಸಲಾಗಿದ್ದರೂ, ವರದಿಯಲ್ಲಿ ಬಳಸಿ ಎಸೆಯುವ ಹಾಸಿಗೆಯನ್ನು ನೀಡಲಾಗುವುದು ಎಂದು ನಮೂದಿಸಲಾಗಿತ್ತು. ದೂರಪ್ರಯಾಣದ ರೈಲುಗಳಲ್ಲಿ ಸ್ಲೀಪರ್ ಕೋಚ್ ಬಳಸುವ ಪ್ರಯಾಣಿಕರಿಗಾಗಿ ನೀಡಲಿರುವ ಬಳಸಿ ಎಸೆಯುವ ಹೊದಿಕೆ ಅಥವಾ ಹಾಸಿಗೆಗಳು, ರೈಲುಗಳಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಲು ಕಾರಣವೆನಿಸಲಿದೆ. ಜೊತೆಗೆ ಈ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ವ್ಯವಸ್ಥೆಗಾಗಿ, ಇಲಾಖೆಯು ಇನ್ನಷ್ಟು ಹಣವನ್ನು ವ್ಯಯಿಸಬೇಕಾಗುತ್ತದೆ. ಬೆಂಗಳೂರು- ದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬಳಸಿ ಎಸೆಯುವ ಹೊದಿಕೆಗಳನ್ನು ಪ್ರಾಯೋಗಿಕವಾಗಿ ಒದಗಿಸಲಿರುವ ಇಲಾಖೆಯು, ಮುಂದೆ ಇತರ ರೈಲುಗಳಲ್ಲೂ ಇದನ್ನು ಅನುಷ್ಠಾನಿಸುವ ಸೂಚನೆಯನ್ನು ನೀಡಿದೆ.  ಈ ಬಾರಿಯ ರೈಲ್ವೇ ಬಜೆಟ್ ನಲ್ಲಿ ಈ ಪ್ರಸ್ಥಾವನೆಯು ಘೋಷಣೆಯಾಗಲಿದೆ. 

ಸ್ವಚ್ಚತೆಯ ಕಾಳಜಿ 

ನಿಜ ಹೇಳಬೇಕಿದ್ದಲ್ಲಿ ಪ್ರಯಾಣಿಕರಿಗೆ ಒದಗಿಸುತ್ತಿರುವ ಹೊದಿಕೆಗಳು ಸ್ವಚ್ಚವಾಗಿಲ್ಲ ಎನ್ನುವ ದೂರುಗಳ ಆಧಾರದ ಮೇಲೆ ಇಂತಹ  ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಇಲಾಖೆಯು, ಅಧಿಕತಮ ರೈಲು ಬೋಗಿಗಳಲ್ಲಿ ಸದಾ ತುಂಬಿರುವ ಕಸ ಮತ್ತಿತರ ತ್ಯಾಜ್ಯಗಳು,ಆಗಾಗ  ಸ್ವಚ್ಛಗೊಳಿಸದ ಕಾರಣದಿಂದಾಗಿ ಹೊಲಸಾಗಿ ದುರ್ವಾಸನೆಯನ್ನು ಬೀರುವ ಶೌಚಾಲಯಗಳು ಮತ್ತು ರೈಲು ಬೋಗಿಗಳಲ್ಲಿರುವ ಪುಟ್ಟ ಕಸದ ಡಬ್ಬಿಗಳನ್ನು ತೆರವು- ಸ್ವಚ್ಚಗೊಳಿಸುವ ವಿಚಾರದ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇರಲು ಕಾರಣವೇನೆಂದು ನಮಗೂ ತಿಳಿದಿಲ್ಲ. ಇಲಾಖೆ ನಿಗದಿಸಿದ ಪ್ರಯಾಣ ದರವನ್ನು ಪಾವತಿಸಿ ಪಯಣಿಸುವ ಜನರ ಪ್ರತಿಯೊಂದು ದೂರನ್ನು ಪರಿಹರಿಸಬೇಕಾದ ಹೊಣೆಗಾರಿಕೆ ಇಲಾಖೆಯ ಅಧಿಕಾರಿಗಳ ಮೇಲಿದೆ. ಇದಕ್ಕೆ ವ್ಯತಿರಿಕ್ತವಾಗಿ ಸ್ಲೀಪರ್ ಕೋಚ್ ಗಳಲ್ಲಿ ಪಯಣಿಸುವ ಪ್ರಯಾಣಿಕರ ದೂರುಗಳನ್ನು ಮಾತ್ರ ಗಂಭೀರವಾಗಿ ಪರಿಗಣಿಸಿ, ಇದನ್ನು ಪರಿಹರಿಸುವ ಸಲುವಾಗಿ ಇನ್ನಷ್ಟು ತ್ಯಾಜ್ಯಗಳನ್ನು ಉತ್ಪಾದಿಸುವುದು ನಿಜಕ್ಕೂ ಸಮರ್ಥನೀಯವಲ್ಲ.ಈಗಾಗಲೇ ದೂರ ಪ್ರಯಾಣ ಮಾಡುವ ರೈಲು ಪ್ರಯಾಣಿಕರು ತಮ್ಮೊಂದಿಗೆ ಕೊಂಡೊಯ್ಯುವ ಖಾದ್ಯಪೇಯಗಳನ್ನು ಆಸ್ವಾದಿಸಿದ ಬಳಿಕ, ಬಳಸಿ ಎಸೆಯುವ ಪ್ಲಾಸ್ಟಿಕ್ ತಟ್ಟೆ,ಲೋಟ, ಚಮಚ, ಕೈಚೀಲ ಮತ್ತು ಬಾಟಲಿ ಮತ್ತಿತರ ತ್ಯಾಜ್ಯಗಳಿಂದಾಗಿ ರೈಲು ಹಳಿಗಳ ಇಕ್ಕೆಲಗಳಲ್ಲೂ ಇವುಗಳ ರಾಶಿಗಳು ರಾರಾಜಿಸುತ್ತಿವೆ. ರೈಲು ಬೋಗಿಗಳಲ್ಲಿನ ತ್ಯಾಜ್ಯಗಳನ್ನೇ ತೆರವುಗೊಳಿಸದ ಇಲಾಖೆಯು, ಹಳಿಗಳ ಇಕ್ಕೆಲಗಳಲ್ಲಿ ಎಸೆದಿರುವ ತ್ಯಾಜ್ಯಗಳನ್ನು ತೆರವುಗೊಳಿಸುವ ಸಾಧ್ಯತೆಗಳೇ ಇಲ್ಲ. ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವೆನಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡುವ ಹೊರತಾಗಿ, ಇದೀಗ ರೈಲ್ವೇ ಇಲಾಖೆಯು ಸ್ಲೀಪರ್ ಕೋಚ್ ಬಳಸುವ ಪ್ರಯಾಣಿಕರಿಗೆ ಬಳಸಿ ಎಸೆಯುವ ಹಾಸಿಗೆ ಅಥವಾ ಹೊದಿಕೆಗಳನ್ನು ನೀಡಲಿರುವುದು ಎಷ್ಟು ಸಮಂಜಸ ಎನ್ನುವ ನಿರ್ಧಾರವನ್ನು  ಪರಾಮರ್ಶೆ ಮಾಡಬೇಕಾಗಿದೆ. ನಮ್ಮ ರಾಜ್ಯದವರೇ ಆಗಿರುವ ರೈಲ್ವೇ ಸಚಿವರು ಇಂತಹ ಯೋಜನೆಗಳ ಸಾಧಕ- ಬಾಧಕಗಳನ್ನು ಅರಿತುಕೊಳ್ಳದೇ ಅನುಷ್ಠಾನಿಸುವುದು ನಿಶ್ಚಿತವಾಗಿಯೂ ಹಿತಕರವಲ್ಲ ಎನ್ನುವುದು ನಮ್ಮ ಅನಿಸಿಕೆ. 

ಕೊನೆಯ ಮಾತು 

ನಮ್ಮ ದೇಶದ ಉದ್ದಗಲಕ್ಕೂ ದಿನನಿತ್ಯ ನೂರಾರು ದೂರ ಪ್ರಯಾಣದ ರೈಲುಗಳು ಸಂಚರಿಸುತ್ತಿದ್ದು, ಸಹಸ್ರಾರು ಪ್ರಯಾಣಿಕರು ಸ್ಲೀಪರ್ ಕೋಚ್ ಬಳಸುತ್ತಿದ್ದಾರೆ. ಇವರೆಲ್ಲರೂ ಬಳಸಿ ಎಸೆಯುವ ಹೊದಿಕೆಗಳನ್ನು ( ರಾಶಿಯನ್ನು) ಸಂಗ್ರಹಿಸಿ, ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಾಗಿಸಿ ವಿಲೇವಾರಿ ಮಾಡುವ ವ್ಯವಸ್ಥೆಯು ರೈಲ್ವೇ ಇಲಾಖೆಯ ಬಳಿ ಇಲ್ಲವೆನ್ನುವುದು ಸಚಿವರಿಗೂ ತಿಳಿದಿರಲೇಬೇಕು. ಆದುದರಿಂದ ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಈ ನಿರ್ಧಾರವನ್ನು ರದ್ದುಪಡಿಸಿ, ರೈಲು ಬೋಗಿಗಳ ಮತ್ತು ಅವುಗಳಲ್ಲಿನ ಶೌಚಾಲಯಗಳ ಸ್ವಚ್ಚತೆಯತ್ತ ಗಮನಹರಿಸುವುದು ಉಪಯುಕ್ತವೆನಿಸೀತು!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


Tuesday, July 1, 2014

ROAD ACCIDENTS AND PREVENTION





 

 ರಸ್ತೆ ಅಪಘಾತಗಳನ್ನು ತಡೆಗಟ್ಟುವತ್ತ ಗಮನಹರಿಸಿ 

ಅಭಿವೃದ್ಧಿಪಥದಲ್ಲಿ ದಾಪುಗಾಲು ಹಾಕುತ್ತಿರುವ ನಮ್ಮ ದೇಶದಲ್ಲಿ ಅಸಂಖ್ಯ ಪ್ರಜೆಗಳ ಅಕಾಲಿಕ ಮರಣಕ್ಕೆ ಕಾರಣಗಳೂ ಹಲವಾರು. ಅದರಲ್ಲೂ ಗಂಭೀರ ಹಾಗೂ ಮಾರಕ ಆರೋಗ್ಯದ ಸಮಸ್ಯೆಗಳು ಸಹಸ್ರಾರು ಜನರ ಮರಣಕ್ಕೆ ಕಾರಣವೆನಿಸುತ್ತಿವೆ. ಅದರಲ್ಲೂ ಸಾಂಕ್ರಾಮಿಕವಾಗಿ ಹರಡುವ ಮತ್ತು ಹರಡದ ಅನೇಕ ವಿಧದ ಕಾಯಿಲೆಗಳಿಗೆ ಅನೇಕ ಜನರು ಬಲಿಯಾಗುತ್ತಿದ್ದಾರೆ. ಅದೇ ರೀತಿಯಲ್ಲಿ ನಮ್ಮ ದೇಶದಲ್ಲಿ ಪ್ರತಿನಿತ್ಯ ಸಂಭವಿಸುತ್ತಿರುವ ರಸ್ತೆ ಅಪಘಾತಗಳಿಂದಾಗಿಯೂ ಸಹಸ್ರಾರು ಜನರು ಅಸುನೀಗುವುದರೊಂದಿಗೆ, ಮತ್ತಷ್ಟು ಜನರು ಶಾಶ್ವತ ಅಂಗವೈಕಲ್ಯಕ್ಕೆ ಈಡಾಗುತ್ತಿದ್ದಾರೆ. ಆದರೆ ಅತ್ಯಂತ ಗಂಭೀರವೆಂದು ಪರಿಗಣಿಸಬಹುದಾದ ಈ ಸಮಸ್ಯೆಯನ್ನು ದೇಶದ "ಆರೋಗ್ಯ ಕಾರ್ಯಸೂಚಿ" ಯಲ್ಲಿ ನಮೂದಿಸದೇ ಇರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತದೆ. 

ಇತ್ತೀಚಿಗೆ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಗೋಪಿನಾಥ ಮುಂಡೆಯವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ಒಂದಿಷ್ಟು ಚರ್ಚೆ ನಡೆದಿದ್ದರೂ, ಅವರು ಹಿರಿಯ ರಾಜಕಾರಣಿ ಮತ್ತು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದುದೇ ಇದಕ್ಕೆ ಕಾರಣವೆನಿಸಿತ್ತು. ಅಪರೂಪದಲ್ಲಿ ಇಂತಹ ಘಟನೆಗಳ ಬಗ್ಗೆ ಮಾಧ್ಯಮಗಳು ಗಮನ ಸೆಳೆದರೂ, ಸರ್ಕಾರದ ಮಟ್ಟದಲ್ಲಿ ರಸ್ತೆ ಅಪಘಾತಗಳು ಮತ್ತು ಇವುಗಳಿಗೆ ಬಲಿಯಾಗುತ್ತಿರುವವರ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಲ್ಲಿ ತಪ್ಪೆನಿಸಲಾರದು. 

ಗಂಭೀರ ಸಮಸ್ಯೆ 

ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಮಟ್ಟದ " ಆರೋಗ್ಯ ಕಾರ್ಯಸೂಚಿ"ಯಲ್ಲಿ ರಸ್ತೆ ಅಪಘಾತಗಳಿಗೆ ಆಗ್ರ ಸ್ಥಾನವನ್ನು ನೀಡಿದೆ. ಸಂಸ್ಥೆಯು ಹೇಳುವಂತೆ ವಿಶ್ವಾದ್ಯಂತ ಸಂಭವಿಸುತ್ತಿರುವ ರಸ್ತೆ ಅಪಘಾತಗಳು, ೧೫ ರಿಂದ ೨೯ ವರ್ಷ ವಯಸ್ಸಿನ ಯುವಜನರ ಮರಣಕ್ಕೆ ಕಾರಣವೆನಿಸುತ್ತಿದೆ. ವಿಶೇಷವೆಂದರೆ ಈ ಸಮಸ್ಯೆಯು ಅತ್ಯಲ್ಪ ಅಥವಾ ಮಧ್ಯಮ ಆದಾಯವಿರುವ ಮತ್ತು ಅಲ್ಪ ಪ್ರಮಾಣದ ವಾಹನಗಳು ಇರುವ ದೇಶಗಳಲ್ಲೇ ಸಂಭವಿಸುತ್ತಿದ್ದು, ಇದರ ಪ್ರಮಾಣವು ಶೇ.೯೦ ರಷ್ಟಿದೆ!. ಅರ್ಥಾತ್, ನಾವಿಂದು ಸುರಕ್ಷಿತ ಹಾಗೂ ನಿರಾತಂಕವಾಗಿ ವಾಹನಗಳನ್ನು ಚಲಾಯಿಸಬಲ್ಲ ಸಮರ್ಪಕ ರಸ್ತೆಗಳು ಮತ್ತು ಕಾನೂನುಗಳು ಇಲ್ಲದಿದ್ದರೂ, ವಾಹನಗಳನ್ನು ಚಲಾಯಿಸುತ್ತಿರುವುದೇ ಇದಕ್ಕೆ ಮೂಲ ಕಾರಣವೆನಿಸಿದೆ. ಹಾಗೂ ಈ ವಿಲಕ್ಷಣ ಸಮಸ್ಯೆಗೆ ಬಲಿಯಾಗುತ್ತಿರುವವರಲ್ಲಿ ಶೇ.೫೦ ರಷ್ಟು ಮಂದಿ ಪಾದಚಾರಿಗಳು, ದ್ವಿಚಕ್ರ ವಾಹನ ಚಾಲಕರು ಮತ್ತು ಸೈಕಲ್ ಸವಾರರೇ ಆಗಿದ್ದಾರೆ!. 

ನಮ್ಮ ದೇಶದ ರಸ್ತೆಗಳಲ್ಲಂತೂ ಪಾದಚಾರಿಗಳು ನಿರಾತಂಕವಾಗಿ ನಡೆದಾಡುವ ಹಾಗೂ ಸೈಕಲ್ ಸವಾರರು ನಿರ್ಭೀತಿಯಿಂದ ಸವಾರಿ ಮಾಡುವ ಸಾಧ್ಯತೆಗಳೇ ಇಲ್ಲ. ಏಕೆಂದರೆ ನಾವಿಂದು ನಿರ್ಮಿಸುತ್ತಿರುವ ನೂತನ ರಸ್ತೆಗಳು ಇದಕ್ಕೆ ಆಸ್ಪದವನ್ನೇ ನೀಡುವುದಿಲ್ಲ. ಅದೇ ರೀತಿಯಲ್ಲಿ ಪಾದಚಾರಿಗಳು, ಅದರಲ್ಲೂ ಪುಟ್ಟ ಮಕ್ಕಳು, ಮಹಿಳೆಯರು ಮತ್ತು ವಯೋವೃದ್ಧರು, ಯಾವುದೇ ರಸ್ತೆಗಳನ್ನು ಸುರಕ್ಷಿತವಾಗಿ ದಾಟಲು ಆಗುತ್ತಿಲ್ಲ. ನಮ್ಮ ರಸ್ತೆಗಳ ಸ್ಥಿತಿಗತಿಗಳು ಮತ್ತು ಅತಿಯಾದ ವಾಹನ ದಟ್ಟಣೆಗಳೊಂದಿಗೆ, ವಾಹನ ಚಾಲಕರು ಪಾದಚಾರಿಗಳನ್ನು ಉಪೇಕ್ಷಿಸುತ್ತಿರುವುದು ಈ ಸಮಸ್ಯೆಗೆ ಕಾರಣವೆನಿಸಿದೆ. 

ಪರಿಹಾರವೇನು?

ನಮ್ಮ ದೇಶದಲ್ಲಿ ವರ್ಷಂಪ್ರತಿ ನಿಯಮಿತವಾಗಿ " ವಾಹನಗಳ ಗಣತಿ" ಯನ್ನು ನಡೆಸಲಾಗುತ್ತಿದ್ದರೂ, ಇವುಗಳ ವರದಿಯನ್ನು ಆಧರಿಸಿ, ವಾಹನಗಳ ಸಂಖ್ಯೆ ಮತ್ತು ತೂಕಗಳಿಗೆ ಅನುಗುಣವಾಗಿ ಸೂಕ್ತ ಧಾರಣಾ ಸಾಮರ್ಥ್ಯವಿರುವ ರಸ್ತೆಗಳನ್ನು ನಿರ್ಮಿಸುವ ಅಥವಾ ಅಸ್ತಿತ್ವದಲ್ಲಿರುವ ರಸ್ತೆಗಳನ್ನು ಪುನರ್ ನವೀಕರಿಸುವತ್ತ ಕೇಂದ್ರ-ರಾಜ್ಯ ಸರಕಾರಗಳು ಗಮನಹರಿಸಬೇಕು.ಜೊತೆಗೆ ಪ್ರತಿಯೊಂದು ರಸ್ತೆಗಳನ್ನು ವರ್ಷಂಪ್ರತಿ ಸಮರ್ಪಕವಾಗಿ ಸುಸ್ಥಿತಿಯಲ್ಲಿ ಇರುವಂತೆ ನಿರ್ವಹಿಸಬೇಕು. ಅಂತೆಯೇ ಯಾವುದೇ ವಾಹನ ಅಪಘಾತದಲ್ಲಿ ಸಾಕಷ್ಟು ಜನರು ಬಲಿಯಾದ ಸಂದರ್ಭದಲ್ಲಿ,  ಈ ಅಪಘಾತದ ಕಾರಣವನ್ನು ಪತ್ತೆಹಚ್ಚುವ ಮೂಲಕ ಇದರ ಪುನರಾವರ್ತನೆ ಆಗದಂತೆ ಅವಶ್ಯಕ ಕ್ರಮಗಳನ್ನು  ಕೈಗೊಳ್ಳಬೇಕು. ಜೊತೆಗೆ ರಸ್ತೆ ಅಪಘಾತಗ ಸಂಖ್ಯೆಯನ್ನು ನಿಯಂತ್ರಿಸಬಲ್ಲ ಮತ್ತು ಇವುಗಳಿಗೆ ಬಲಿಯಾಗುತ್ತಿರುವ ಅಮಾಯಕರ ಸಂಖ್ಯೆಯನ್ನು ಕಡಿಮೆಮಾಡಬಲ್ಲ ಇನ್ನಿತರ ಕಟ್ಟುನಿಟ್ಟಿನ ಕ್ರಮಗಳನ್ನು ಕೇಂದ್ರ- ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಬೇಕು. 

ಇದಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿನ ಪ್ರತಿಯೊಂದು ನಗರ- ಪಟ್ಟಣಗಳಲ್ಲಿನ ರಸ್ತೆಗಳ ಇಕ್ಕೆಲಗಳಲ್ಲಿ ಸೈಕಲ್ ಸವಾರರಿಗೆ ಮತ್ತು ಪಾದಚಾರಿಗಳಿಗೆ ಪ್ರತ್ಯೇಕವಾದ " ಹಕ್ಕಿನ ಹಾದಿ " ಯನ್ನು ನಿರ್ಮಿಸುವತ್ತ ತತ್ಸಂಬಂಧಿತ ಇಲಾಖೆಗಳು ಗಮನಹರಿಸಬೇಕಾಗಿದೆ. ಅದೇ ರೀತಿಯಲ್ಲಿ ಮೋಟಾರು ವಾಹನಗಳಿಗೆ ವೇಗದ ಮಿತಿಯನ್ನು ನಿಗದಿಸಿ, ಇದನ್ನು ಹಾಗೂ ಅನ್ಯ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಚಾಲಕರಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಬೇಕು. ಅತಿವೇಗದ, ನಿರ್ಲಕ್ಷ್ಯದ ಮತ್ತು ಮದ್ಯಸೇವಿಸಿ ವಾಹನಗಳನ್ನು ಚಲಾಯಿಸಿ ಅಪಘಾತವೆಸಗಿದ ಚಾಲಕರ ವಾಹನ ಚಾಲನಾ ಪರವಾನಿಗೆಯನ್ನೇ ರದ್ದುಪಡಿಸುವ ಮತ್ತು ದೊಡ್ಡ ಮೊತ್ತದ ದಂಡವನ್ನು ವಿಧಿಸುವಂತೆ, ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿಯನ್ನು ಮಾಡಬೇಕು. ಚಾಲಕರ ತಪ್ಪಿನಿಂದಾಗಿ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಅಪಘಾತಕ್ಕೆ ಕಾರಣವೆನಿಸಿದ ಚಾಲಕರೇ ನೀಡಬೇಕೆನ್ನುವ ಕಾನೂನನ್ನು ಜಾರಿಗೊಳಿಸಬೇಕು. ಈ ರೀತಿಯ ಉಪಕ್ರಮಗಳನ್ನು ಕೈಗೊಂಡಲ್ಲಿ ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳ ಮತ್ತು ಇವುಗಳಿಗೆ ಬಲಿಯಾಗುವವರ ಸಂಖ್ಯೆಗಳು ತಕ್ಕ ಮಟ್ಟಿಗೆ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ. ಆದರೆ ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವ ಇಚ್ಛಾಶಕ್ತಿ ನಮ್ಮನ್ನಾಳುವವರಲ್ಲಿ ಇದೆಯೇ ಎನ್ನುವುದೇ " ಮಿಲಯನ್ ಡಾಲರ್ 'ಪ್ರಶ್ನೆಯಾಗಿದೆ!.

ಡಾ,ಸಿ.ನಿತ್ಯಾನಂದ ಪೈ,ಪುತ್ತೂರು