Saturday, April 7, 2018

SAVE WATER



               ಜೀವಜಲವನ್ನು ಸಂರಕ್ಷಿಸಲು ಸನ್ನದ್ಧರಾಗಿ

ನಿರಂತರವಾಗಿ ಹೆಚ್ಚುತ್ತಿರುವ ಜಗತ್ತಿನ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಹಾಗೂ ಅನಿಯಂತ್ರಿತವಾಗಿ ಸಂಭವಿಸುತ್ತಿರುವ ಜಲ – ವಾಯು ಮಾಲಿನ್ಯ ಹಾಗೂ ಪರಿಸರ ಪ್ರದೂಷಣೆಗಳ ಪರಿಣಾಮವಾಗಿ  ವೃದ್ಧಿಸುತ್ತಿರುವ ಜಾಗತಿಕ ತಾಪಮಾನದ ಹೆಚ್ಚಳವು, ಮನುಕುಲಕ್ಕೆ ಮಾರಕವೆನಿಸಬಲ್ಲ ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುತ್ತಿದೆ.  ಇಂತಹ ಸಮಸ್ಯೆಗಳಲ್ಲಿ “ ಜಲಕ್ಷಾಮ “ ವು ಪ್ರಮುಖವಾಗಿದೆ. ಇದಕ್ಕೆ ಅನ್ಯ ಕಾರಣಗಳೂ ಇವೆ. ಈ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.
ಮನುಷ್ಯನು ಈ ಭೂಮಿಯ ಮೇಲೆ ಜೀವಿಸಲು ಸ್ವಚ್ಚವಾದ ಗಾಳಿ, ಶುದ್ಧವಾದ ನೀರು ಮತ್ತು ಸಮತೋಲಿತ ಆಹಾರಗಳು ಅತ್ಯವಶ್ಯಕ ಎನಿಸುತ್ತವೆ. ಆದರೆ ಕಳೆದ ಕೆಲವರ್ಷಗಳಿಂದ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ “ ಜಲಕ್ಷಾಮ “ ದ ಸಮಸ್ಯೆ ಉದ್ಭವಿಸಿ ಉಲ್ಬಣಿಸುತ್ತಿದೆ. ಈ ಸಮಸ್ಯೆಗೆ ಭಾರತವೂ ಅಪವಾದವೆನಿಸಿಲ್ಲ. ನಮ್ಮ ದೇಶದ ಹಲವಾರು ರಾಜ್ಯಗಳಲ್ಲಿ ಬೇಸಗೆಯ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರವಿದೆ. ಇತ್ತೀಚಿನ ಮಾಹಿತಿಯಂತೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ, ಸದ್ಯೋಭವಿಷ್ಯದಲ್ಲಿ ಸಂಪೂರ್ಣ ಶುಷ್ಕವಾಗಲಿರುವ ಹದಿನೊಂದು ಸಂಭಾವ್ಯ  ಮಹಾನಗರಗಳಲ್ಲಿ ನಮ್ಮ ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ. ಪ್ರಥಮ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಮಹಾನಗರವು ಇದೇ  ವರ್ಷದ ಜುಲೈ 15 ರಂದು ಸಂಪೂರ್ಣವಾಗಿ ಶುಷ್ಕವಾಗಲಿದೆ!.

ಕ್ಷಯಿಸುತ್ತಿರುವ ಮುಂಗಾರು ಮಳೆ
ಕೆಲವೇ ದಶಕಗಳ ಹಿಂದೆ ದೇಶದ ಬಹುತೇಕ ಭಾಗಗಳಲ್ಲಿ ಹಗಲಿರುಳು ಸುರಿಯುತ್ತಿದ್ದ ಮುಂಗಾರು ಮಳೆಯು ಕಾಲಕ್ರಮೇಣ ಕಡಿಮೆಯಾಗಿ ವರುಷಗಳೇ ಸಂದಿವೆ. ಥಟ್ಟನೆ ಆರಂಭವಾಗಿ ಅಷ್ಟೇ ವೇಗದಲ್ಲಿ ಮಾಯವಾಗುವ ಇಂದಿನ ಮಳೆ ಮತ್ತು ಹಿಂದೆ ಧೋ ಎಂದು ಎಡೆಬಿಡದೆ  ಸುರಿಯುತ್ತಿದ್ದ ಜಡಿಮಳೆಗೆ ಅಜಗಜಾಂತರ ವ್ಯತ್ಯಾಸವಿದೆ. ಬೆಳಗಿನ ಜಾವ ಸೂರಿನ ಮೇಲೆ ಬೀಳುತ್ತಿದ್ದ ಮಳೆಯ ಸದ್ದಿಗೆ ಎಚ್ಚರವಾಗುತಿದ್ದ ಮತ್ತು ಮಳೆಯ ಸದ್ದನ್ನು ಆಲಿಸುತ್ತಾ ನಿದ್ದೆಗೆ ಜಾರುತ್ತಿದ್ದ ದಿನಗಳು ಇದೀಗ ಕೇವಲ ನೆನಪುಗಳಾಗಿರುವುದು ಸತ್ಯ.
 ನಾವು ಕೃಷಿ ಮತ್ತು ಅನ್ಯ ಉದ್ದೇಶಗಳಿಗಾಗಿ ಮಳೆನೀರನ್ನೇ ಅವಲಂಬಿಸಿರುವುದರಿಂದಾಗಿ, ಕ್ಷಯಿಸುತ್ತಿರುವ ಮುಂಗಾರು ಮಳೆಯೊಂದಿಗೆ ನಾವಿಂದು ವ್ಯಯಿಸುತ್ತಿರುವ ಅಗಾಧ ಪ್ರಮಾಣದ ನೀರಿನಿಂದಾಗಿ,ಸದ್ಯೋಭವಿಷ್ಯದಲ್ಲಿ  ತೀವ್ರ ಸ್ವರೂಪದ ಜಲಕ್ಷಾಮದ ಸಮಸ್ಯೆಯನ್ನು ಎದುರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಇತ್ತೀಚಿನ ಕೆಲವರ್ಷಗಳಿಂದ ನಮ್ಮ ರಾಜ್ಯದ ( ಮತ್ತು ಅನ್ಯ ರಾಜ್ಯಗಳ ) ಬಹುತೇಕ ತಾಲೂಕುಗಳಲ್ಲಿ ಕಂಡುಬರುತ್ತಿರುವ “ ಬರ “ ವು, ಮುಂದೆ ಸಂಭವಿಸಲಿರುವ ತೀವ್ರ ಸ್ವರೂಪದ ಜಲಕ್ಷಾಮದ ಮುನ್ಸೂಚನೆಯೇ ಆಗಿದೆ.
ಬೇಡಿಕೆ – ಲಭ್ಯತೆ
ಸುಮಾರು ನಾಲ್ಕು ವರ್ಷಗಳ ಹಿಂದೆ ನಮ್ಮ ದೇಶದ ನೀರಿನ ಬೇಡಿಕೆಯ ಪ್ರಮಾಣವು 718 ಬಿಲಿಯನ್ ( ಲಕ್ಷ ಕೋಟಿ ) ಕ್ಯುಬಿಕ್ ಮೀಟರ್ ಆಗಿದ್ದು, 2025 ರಲ್ಲಿ ಈ ಪ್ರಮಾಣವು 833 ಬಿಲಿಯನ್ ಕ್ಯು. ಮೀ. ತಲುಪಲಿದೆ. ಇದರಲ್ಲಿ ಕೃಷಿ ನೀರಾವರಿಗಾಗಿ ಬಳಸಲ್ಪಡುತ್ತಿದ್ದ ನೀರಿನ ಪ್ರಮಾಣವು 2010 ರಲ್ಲಿ 557 ಬಿ.ಕ್ಯು.ಮೀ. ಆಗಿದ್ದು, 2050 ರಲ್ಲಿ ಇದು 807 ಬಿ.ಕ್ಯು.ಮೀ. ತಲುಪಲಿದೆ. ದೇಶದ ಜನರ ಗೃಹಬಳಕೆಯ ನೀರಿನ ಪ್ರಮಾಣವು 2010 ರಲ್ಲಿ ಕೇವಲ 43 ಬಿ.ಕ್ಯು.ಮೀ. ಆಗಿದ್ದು, 2015 ರಲ್ಲಿ 62 ಹಾಗೂ 2050 ರಲ್ಲಿ 110 ಬಿ.ಕ್ಯು.ಮೀ. ಆಗಲಿದೆ!.
ಉದ್ದಿಮೆಗಳು ಬಳಸುತ್ತಿದ್ದ ನೀರಿನ ಪ್ರಮಾಣವು 2010 ರಲ್ಲಿ ಕೇವಲ 37 ಬಿ.ಕ್ಯು.ಮೀ. ಆಗಿದ್ದು, 2025 ರಲ್ಲಿ 62 ಹಾಗೂ 2050 ರಲ್ಲಿ 81 ಬಿ.ಕ್ಯು.ಮೀ. ತಲುಪಲಿದೆ. ಅದೇ ರೀತಿಯಲ್ಲಿ ವಿದ್ಯುತ್ ಉತ್ಪಾದನೆಗಾಗಿ 2010 ರಲ್ಲಿ 19 ಬಿ.ಕ್ಯು.ಮೀ. ಬಳಸಲಾಗಿದ್ದು, 2025 ರಲ್ಲಿ ಇದು 30 ಮತ್ತು 2050 ರಲ್ಲಿ 70 ಬಿ.ಕ್ಯು.ಮೀ. ಆಗಲಿದೆ. ಈ ರೀತಿಯಲ್ಲಿ ವಿವಿಧ ಉದ್ದೇಶಗಳಿಗಾಗಿ ನಮಗಿಂದು ಅಗಾಧ ಪ್ರಮಾಣದ ನೀರಿನ ಅವಶ್ಯಕತೆ ಇದ್ದರೂ, ದೇಶದ ಅನೇಕ ಭಾಗಗಳಲ್ಲಿ ಕಂಡುಬರುತ್ತಿರುವ ಜಲಕ್ಷಾಮದ ಸಮಸ್ಯೆ ವರ್ಷಂಪ್ರತಿ ಹೆಚ್ಚುತ್ತಿದೆ. ವಿಶೇಷವೆಂದರೆ ನಮ್ಮ ದೇಶದಲ್ಲಿ ಸುರಿಯುವ ಮಳೆಯ ನೀರಿನ ಶೇ. 65 ರಷ್ಟು ಪಾಲು ನದಿಗಳ ಮೂಲಕ ಸಮುದ್ರವನ್ನು ಸೇರುತ್ತಿದೆ. ಅದೇ ರೀತಿಯಲ್ಲಿ ನಾವು ದಿನನಿತ್ಯ ಬಳಸುವ ನೀರಿನ ಶೇಕಡಾ 80 ರಷ್ಟನ್ನು ಚರಂಡಿಗಳಿಗೆ ವಿಸರ್ಜಿಸಲಾಗುತ್ತಿದೆ.  
ಭಾರತವು ಒಂದು ವರ್ಷದಲ್ಲಿ ಸುಮಾರು 210 ಬಿ. ಕ್ಯು.ಮೀ. ಗಿಂತಲೂ ಅಧಿಕ ಪ್ರಮಾಣದ ಅಂತರ್ಜಲವನ್ನು ಬಳಸುತ್ತಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕ ಎನ್ನಲಾಗಿದೆ. ನಮ್ಮ ದೇಶದಲ್ಲಿನ ಶೇ. 60 ರಷ್ಟು ನೀರಾವರಿ ಜಮೀನಿಗೂ ಇದೇ ಅಂತರ್ಜಲವನ್ನು ಬಳಸಲಾಗುತ್ತಿದೆ. ತತ್ಪರಿಣಾಮವಾಗಿ ದೇಶದ ಶೇ. 60 ಕ್ಕೂ ಅಧಿಕ ಜಿಲ್ಲೆಗಳಲ್ಲಿ ನೀರಿನ ಕೊರತೆ ಕಂಡುಬರುತ್ತಿದೆ.
2010 ರಲ್ಲಿ ದೇಶದ ಜನಸಂಖ್ಯೆಯು 1029 ದಶಲಕ್ಷವಾಗಿದ್ದು, ಅಂದಿನ ನೀರಿನ ಲಭ್ಯತೆಯ ಪ್ರಮಾಣವು ಒಂದು ವರ್ಷದಲ್ಲಿ ತಲಾ 1806 ಕ್ಯು. ಮೀ. ಆಗಿತ್ತು. 2011 ರಲ್ಲಿ ಜನಸಂಖ್ಯೆ 1210 ದಶಲಕ್ಷ ಹಾಗೂ ನೀರಿನ ಲಭ್ಯತೆಯ ಪ್ರಮಾಣವು 1545 ಕ್ಯು.ಮೀ. ಹಾಗೂ 2025 ರಲ್ಲಿ ಜನಸಂಖ್ಯೆ 1394 ( ಅಂದಾಜು ) ದ.ಲ. ಮತ್ತು ಲಭ್ಯತೆ 1340 ಕ್ಯು.ಮೀ. ಮತ್ತು 2050 ರಲ್ಲಿ ಜನಸಂಖ್ಯೆ 1640 ( ಅಂದಾಜು ) ದ.ಲ. ಮತ್ತು ಲಭ್ಯತೆಯ ಪ್ರಮಾಣವು 1140 ಕ್ಯು.ಮೀ. ತಲುಪಲಿದೆ. ಅರ್ಥಾತ್, ನೀರಿನ ಲಭ್ಯತೆಯ ಪ್ರಮಾಣವು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಕಡಿಮೆಯಾಗುತ್ತಾ ಹೋಗಲಿದೆ.
ನೀರಿನ ಮರುಬಳಕೆ
ದೇಶದಲ್ಲಿನ ಉದ್ದಿಮೆಗಳು ತಾವು ಬಳಸಿ ವಿಸರ್ಜಿಸುವ ಶೇ. 90 ರಷ್ಟು ಕಲುಷಿತ ನೀರನ್ನು ಶುದ್ಧೀಕರಿಸಿ ನದಿಗಳಿಗೆ ವಿಸರ್ಜಿಸುತ್ತಿವೆ. ಆದರೆ ಈ ಶುದ್ಧೀಕರಿಸಿದ ನೀರು ಪರಿಸರಸ್ನೇಹಿ ಮಾನದಂಡಗಳಿಗೆ ಅನುಗುಣವಾಗಿಲ್ಲ. ಅಂತೆಯೇ ದೇಶದ ಅಧಿಕತಮ ನಗರ – ಮಹಾನಗರಗಳಲ್ಲಿನ ಬೃಹತ್ ವಸತಿ – ವಾಣಿಜ್ಯ ಸಂಕೀರ್ಣಗಳು ವಿಸರ್ಜಿಸುತ್ತಿರುವ ಕಲುಷಿತ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುತ್ತಿಲ್ಲ. ಇದಕ್ಕಾಗಿ ಸೂಕ್ತ ಕಾನೂನುಗಳನ್ನು ಸರ್ಕಾರ ರೂಪಿಸಿದರೂ, ಇದನ್ನು ಸ್ಥಳೀಯ ಸಂಸ್ಥೆಗಳು  ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತಿಲ್ಲ. ಮಂದಿನ ಒಂದೆರಡು ದಶಕಗಳಲ್ಲಿ ನಾವು ಬಳಸಿ ವಿಸರ್ಜಿಸಿದ ಕಲುಷಿತ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡಬೇಕಗುವುದು ಎನ್ನುವದರ ಅರಿವು ಜನಸಾಮಾನ್ಯರಲ್ಲಿಲ್ಲ.
ಪರಿಹಾರವೇನು?
ದೇಶದ ಪ್ರತಿಯೊಂದು ರಾಜ್ಯದ ಪ್ರತಿಯೊಂದು ನಗರ – ಪಟ್ಟಣಗಳಲ್ಲಿನ ಪ್ರತಿಯೊಂದು ಕಟ್ಟಡಗಳಲ್ಲೂ, ಮಳೆನೀರಿನ ಕೊಯ್ಲನ್ನು ಕಡ್ಡಾಯವಾಗಿಸಬೇಕು. ಈ ವಿಧಾನದಿಂದ ನಾವಿಂದು ಬಳಸದಿರುವ ಶೇ. 65 ರಷ್ಟು ಮಳೆನೀರನ್ನು ಉಳಿಸಿ ಬಳಸಬಹುದಾಗಿದೆ. ಇದಲ್ಲದೇ ಪ್ರತಿಯೊಂದು ವಸತಿ – ವಾಣಿಜ್ಯ ಸಂಕೀರ್ಣಗಳಲ್ಲಿ ಜಲ ಶುದ್ಧೀಕರಣ ಸ್ಥಾವರಗಳ ನಿರ್ಮಾಣವನ್ನು ಕಡ್ಡಾಯಗೊಳಿಸಬೇಕು. ಪ್ರತಿಯೊಂದು ಕೊಳವೆ ಬಾವಿಗೂ ಜಲಮರುಪೂರಣ ವ್ಯವಸ್ಥೆಯನ್ನು ಕಡ್ಡಾಯ ಮಾಡಬೇಕು. ಸಿಹಿನೀರಿನ ಬಾವಿ ಹಾಗೂ ಕೆರೆ – ಕುಂಟೆಗಳನ್ನು  ಸಂರಕ್ಷಿಸಬೇಕು.  ಅದೇ ರೀತಿಯಲ್ಲಿ ಧಾರಾಳ ನೀರು ಲಭ್ಯವಿರುವಲ್ಲಿ ಅನಾವಶ್ಯಕವಾಗಿ ನೀರನ್ನು ಪೋಲುಮಾಡುವ ಕೆಟ್ಟ ಹವ್ಯಾಸಕ್ಕೆ ಕಡಿವಾಣ ತೊಡಿಸಲೇಬೇಕು. ಸಣ್ಣಪುಟ್ಟ ವಸತಿ ಕಟ್ಟಡಗಳಲ್ಲಿ ಉತ್ಪನ್ನವಾಗುವ ಕಲುಷಿತ ನೀರನ್ನು ಶುದ್ಧೀಕರಿಸಲು ಅಸಾಧ್ಯವೆನಿಸಿದಲ್ಲಿ, ಕನಿಷ್ಠ ಪಕ್ಷ  ಕೈತೋಟ ಅಥವಾ ಗಿಡಮರಗಳಿಗೆ ಉಣಿಸುವ ಹವ್ಯಾಸವನ್ನು ಪ್ರೋತ್ಸಾಹಿಸಬೇಕು. ಇವೆಲ್ಲಕ್ಕೂ ಮಿಗಿಲಾಗಿ ಸ್ಥಳೀಯ ಸಂಸ್ಥೆಗಳು ಸರಬರಾಜು ಮಾಡುವ ಶುದ್ಧೀಕರಿಸಿದ ಕುಡಿಯುವ ನೀರನ್ನು ಪೂರೈಸಲು ವ್ಯಯಿಸುವಷ್ಟು ಹಣವನ್ನು ಸ್ಥಳೀಯ ನಿವಾಸಿಗಳಿಂದ ವಸೂಲು ಮಾಡಬೇಕು. ಅಂತಿಮವಾಗಿ ನಾವು ನೀವೆಲ್ಲರೂ ನಮ್ಮ ಮುಂದಿನ ಸಂತತಿಯ ಹಿತದೃಷ್ಟಿಯಿಂದ “ ಜಲ ಸಂರಕ್ಷಣೆ “ ಮಾಡದೇ ಇದ್ದಲ್ಲಿ, ಈ ಭೂಮಿಯು ಮರುಭೂಮಿ ಆಗಲಿದೆ ಎನ್ನುವುದನ್ನು ಅರಿತುಕೊಳ್ಳಬೇಕಿದೆ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು, ದ. ಕ





Wednesday, February 28, 2018

scorching summer ............


                      ಧಗಧಗಿಸಲಿದೆ ಈ ಬಾರಿಯ ಬೇಸಗೆ

ಸಾಮಾನ್ಯವಾಗಿ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಗೆಯ ಧಗೆಯು ಮಾರ್ಚ್ ತಿಂಗಳಿನ ಮಧ್ಯಭಾಗದಲ್ಲಿ ಆರಂಭವಾಗುತ್ತದೆ. ಬಳಿಕ ಧಗೆಯ ತೀವ್ರತೆ ಹೆಚ್ಚುತ್ತ , ಎಪ್ರಿಲ್ ತಿಂಗಳಿನಲ್ಲಿ ಪ್ರತ್ಯಕ್ಷವಾಗುವ “ ಎಪ್ರಿಲ್ ಶವರ್ಸ್ “ ಎಂದು ಕರೆಯಲ್ಪಡುವ ಮಳೆ ಸುರಿದಂತೆಯೇ ತುಸು ಕಡಿಮೆಯಾಗುತ್ತದೆ. ತದನಂತರ ಮೇ ತಿಂಗಳಿನ ಅಂತ್ಯದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗುವ ತನಕ, ಬೇಸಗೆಯ ಧಗೆಯು ಮತ್ತಷ್ಟು ಹೆಚ್ಚುತ್ತಾ ಹೋಗುತ್ತದೆ.

2015 ರಲ್ಲಿ  ದೇಶದ ಬಹುತೇಕ ರಾಜ್ಯಗಳಲ್ಲಿ ಬೇಸಗೆಯ ಸಂದರ್ಭದಲ್ಲಿ ಕಂಡುಬಂದಿದ್ದ ತಾಪಮಾನದ ಮಟ್ಟವು ನೂತನ ದಾಖಲೆಯನ್ನೇ ಸೃಷ್ಠಿಸಿತ್ತು. ಆದರೆ 2016 ರ ಬೇಸಗೆಯಲ್ಲಿ ಈ ದಾಖಲೆಯು ಮುರಿಯಲ್ಪಟ್ಟಿತ್ತು. ಬಳಿಕ 2017 ರಲ್ಲಿ ಈ ದಾಖಲೆಯೂ ಮುರಿಯಲ್ಪಟ್ಟಿದ್ದು, 2018 ರಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು, ಹೊಸ  ದಾಖಲೆಯನ್ನು ಸ್ಥಾಪಿಸುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಇದಕ್ಕೆ ಪೂರಕವಾಗಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮವಾಗಿ  2016 ರಲ್ಲಿ ರಾಜ್ಯದ 177 ತಾಲೂಕುಗಳಲ್ಲಿ 136 ತಾಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದ್ದು, 2017 ರಲ್ಲಿ ಈ ಸಂಖ್ಯೆಯು 160 ಕ್ಕೆ ಏರಿತ್ತು. ಈ ವರ್ಷ ಬರಪೀಡಿತ ತಾಲೂಕುಗಳ ಸಂಖ್ಯೆ ಮತ್ತಷ್ಟು ಹೆಚ್ಚುವುದೇ ಎನ್ನುವುದನ್ನು ಕಾದುನೋಡಬೇಕಷ್ಟೇ.

ಆದರೆ ಈ ವರ್ಷ ಫೆಬ್ರವರಿ ತಿಂಗಳಿನ ಮಧ್ಯಭಾಗದಲ್ಲೇ ಉದ್ಭವಿಸಿರುವ ಬೇಸಗೆಯ ಧಗೆಯು, ಇದಕ್ಕೂ ಮುನ್ನ ಮೇ ತಿಂಗಳಿನಲ್ಲಿ ಕಂಡುಬರುತ್ತಿದ್ದ ತಾಪಮಾನದಷ್ಟೇ ಆಗಿರುವುದು ವಿಶೇಷ . ಪ್ರಸ್ತುತ ಬೆಳಿಗ್ಗೆ ಸುಮಾರು 30 ಡಿಗ್ರಿ ಸೆಲ್ಸಿಯಸ್ ನಿಂದ ಆರಂಭಿಸಿ, ಮಧ್ಯಾಹ್ನದ ವೇಳೆ 41 ಡಿಗ್ರಿಯ ತನಕ ಏರುತ್ತಿರುವ ತಾಪಮಾನವನ್ನು, ಇದುವರೆಗೆ ದಕ್ಷಿಣ ಕನ್ನಡದ ಜನತೆ ಅನುಭವಿಸಿರಲಿಲ್ಲ ಎಂದಲ್ಲಿ ತಪ್ಪೆನಿಸಲಾರದು. ಇದೇ ಸಂದರ್ಭದಲ್ಲಿ ಮಧ್ಯರಾತ್ರಿಯ ಬಳಿಕ ಬೆಳಗಿನ ಜಾವದ ತನಕ ವಾತಾವರಣದ ಉಷ್ಣತೆಯು ಸುಮಾರು 21 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದು, ಚುಮುಚುಮು ಚಳಿಯೂ ಇರುತ್ತದೆ. ದೇಶದ ಉದ್ದಗಲಕ್ಕೂ ಕಂಡುಬರುತ್ತಿರುವ ಹವಾಮಾನದ ವೈಪರೀತ್ಯಕ್ಕೆ ಇದೂ ಒಂದು ಉದಾಹರಣೆಯಾಗಿದೆ.

ಕಾರಣವೇನು?

ಪ್ರಾಯಶಃ ನಿರಂತರವಾಗಿ ಹೆಚ್ಚುತ್ತಿರುವ ದೇಶದ ಜನಸಂಖ್ಯೆ, ವಾಹನಗಳ ಸಂಖ್ಯೆ, ವಾಯು ಹಾಗೂ ಜಲಮಾಲಿನ್ಯ, ಪರಿಸರ ಮಾಲಿನ್ಯ,ಅತಿಯಾದ ತ್ಯಾಜ್ಯಗಳ ಉತ್ಪಾದನೆ ಮತ್ತು  ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಮಿತಿಮೀರಿದ ನಗರೀಕರಣ - ಕಾಂಕ್ರೀಟ್ ಕಾಡುಗಳ ನಿರ್ಮಾಣ, ಅರಣ್ಯ – ಕೃಷಿ ಭೂಮಿಗಳನ್ನು ನಾಶಪಡಿಸಿ ತಲೆ ಎತ್ತುತ್ತಿರುವ ಉದ್ದಿಮೆ, ಕೈಗಾರಿಕೆ, ವಿದ್ಯುತ್ ಉತ್ಪಾದನಾ ಘಟಕಗಳು ಹಾಗೂ ವಿಶೇಷ ವಿತ್ತವಲಯಗಳು, ಜಲಸಂರಕ್ಷಣೆಯ ಬಗ್ಗೆ ನಿರ್ಲಕ್ಷ್ಯ, ಕೃಷಿಗಾಗಿ ಕೃತಕ ರಾಸಾಯನಿಕಗಳ ಅತಿಬಳಕೆ, ಸಾಂಪ್ರದಾಯಿಕ ಉರುವಲುಗಳ ಬಳಕೆ ಇತ್ಯಾದಿಗಳ ಪರಿಣಾಮವಾಗಿ ವೃದ್ಧಿಸುತ್ತಿರುವ  ಜಾಗತಿಕ ತಾಪಮಾನ ಮತ್ತು ಹವಾಮಾನದ ವ್ಯತ್ಯಯಗಳೇ ಈ ಬದಲಾವಣೆಗೆ ಕಾರಣವಾಗಿರಬಹುದು. ಅಂತೆಯೇ ಈ ವಿಲಕ್ಷಣ ಸಮಸ್ಯೆಯು ಹೆಚ್ಚುತ್ತಿರಲು, ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಜನಸಸಂಖ್ಯೆಯನ್ನು ನಿಯಂತ್ರಿಸಲು ಬೇಕಾದ ಕಾನೂನುಗಳನ್ನು ರೂಪಿಸಲು ನಮ್ಮನ್ನಾಳುವವರು ಹಿಂಜರಿಯುತ್ತಿರುವುದು ಮಗದೊಂದು ಕಾರಣ ಎನ್ನುವುದರಲ್ಲಿ ಸಂದೇಹವಿಲ್ಲ.

ಹವಾಮಾನದ ವ್ಯತ್ಯಯ

 ಹವಾಮಾನದ ವ್ಯತ್ಯಯದ ಭಯಾನಕ ದುಷ್ಪರಿಣಾಮಗಳಲ್ಲಿ  ಜಾಗತಿಕ ತಾಪಮಾನದ  ಮತ್ತು ಉಷ್ಣ ಅಲೆಗಳ ಹೆಚ್ಚಳಗಳು ಪ್ರಮುಖವಾಗಿವೆ. ಈ ಸಮಸ್ಯೆಯ ಸಂಭಾವ್ಯತೆ ಮತ್ತು ತೀವ್ರತೆಗಳು, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ.

ಈಗಾಗಲೇ ಸಾಕಷ್ಟು ವಾದವಿವಾದಗಳಿಗೆ ಗ್ರಾಸವಾಗಿರುವ ಜಾಗತಿಕ ತಾಪಮಾನದ ಹೆಚ್ಚಳವು, ಬೇಸಗೆಯ ಧಗೆಯನ್ನು ಹೆಚ್ಚಿಸುವುದರೊಂದಿಗೆ ಹವಾಮಾನದ ವೈಪರೀತ್ಯಗಳಿಗೂ ಕಾರಣವೆನಿಸುತ್ತಿದೆ. ತತ್ಪರಿಣಾಮವಾಗಿ ಕಡುಬೇಸಗೆಯ ದಿನಗಳಲ್ಲೂ ಗುಡುಗು ಮಿಂಚುಗಳೊಂದಿಗೆ ಧಾರಾಕಾರ ಮಳೆಸುರಿಯುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯೂ  ಸುರಿಯುತ್ತದೆ.

ಒಂದೆಡೆ ಅತಿವೃಷ್ಠಿ ಮತ್ತೊಂದೆಡೆ ಅನಾವೃಷ್ಠಿ, ಮತ್ತೆ ಕೆಲವೆಡೆ ಅತಿಯಾದ ಸೆಕೆ ಅಥವಾ ಅತಿಯಾದ ಚಳಿ ಇತ್ಯಾದಿ ವೈಪರೀತ್ಯಗಳಿಗೆ ಮೇಲೆ ನಮೂದಿಸಿದ ಕಾರಣಗಳಲ್ಲದೇ ಅನ್ಯ ಕಾರಣಗಳೂ ಇರುವ ಸಾಧ್ಯತೆಗಳಿವೆ. ಪ್ರಾಕೃತಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಹವಾಮಾನ ತಜ್ಞರು – ವಿಜ್ಞಾನಿಗಳು ಸೂಕ್ತ ಪರಿಹಾರವನ್ನು ಪತ್ತೆಹಚ್ಚಲು ಶ್ರಮಿಸುತ್ತಿದ್ದರೂ, ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ.ಇದೇ ಕಾರಣದಿಂದಾಗಿ  ಮನುಷ್ಯರ ಆರೋಗ್ಯಕ್ಕೆ  ಅತ್ಯಂತ ಅಪಾಯಕಾರಿ ಎನಿಸುತ್ತಿರುವ ಈ ಸಮಸ್ಯೆಯನ್ನು  ಕನಿಷ್ಠ ಪಕ್ಷ ನಿಯಂತ್ರಿಸುವ ನಿಟ್ಟಿನಲ್ಲಿ ನಾವಿಂದು ಕಾರ್ಯಪ್ರವೃತ್ತರಾಗಬೇಕಿದೆ. ಏಕೆಂದರೆ ಮುಂದಿನ ಒಂದೆರಡು ದಶಕಗಳಲ್ಲಿ ಜಗತ್ತಿನ ಸರಾಸರಿ ತಾಪಮಾನದ ಮಟ್ಟವು ಎರಡರಿಂದ ಆರು ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಲಿದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ಆದರೆ ಪ್ರಸ್ತುತ ಶರವೇಗದಲ್ಲಿ ಏರುತ್ತಿರುವ ತಾಪಮಾನವನ್ನು ಗಮನಿಸಿದಾಗ, ಮಂದಿನ ಒಂದೆರಡು ವರ್ಷಗಳಲ್ಲೇ ಎರಡರಿಂದ ಆರು ಡಿಗ್ರಿಗಳಷ್ಟು ತಾಪಮಾನ ಹೆಚ್ಚುವುದೇ ಎನ್ನುವ ಸಂದೇಹ ಜನಸಾಮಾನ್ಯರ ಮನದಲ್ಲಿ ಮೂಡುವುದರಲ್ಲಿ ಸಂದೇಹವಿಲ್ಲ.

ಉಷ್ಣ ಅಲೆ

ವಾತಾವರಣದ ತಾಪಮಾನವು ಅತಿಯಾದ ಸಂದರ್ಭದಲ್ಲಿ ಉದ್ಭವಿಸುವ ಉಷ್ಣ  ಸಂದರ್ಭದಲ್ಲಿ ಅಲೆಯು ಎರಡು ವಿಧಗಳಲ್ಲಿ ತನ್ನ ಮಾರಕತೆಯನ್ನು ತೋರ್ಪಡಿಸುತ್ತದೆ. ಇವುಗಳಲ್ಲಿ “ ಉಷ್ಣ ಆಘಾತ “ ( Heat stroke) ಕ್ಕೆ ಒಳಗಾದ ವ್ಯಕ್ತಿಯ ಶರೀರದ ಉಷ್ಣತೆಯು ವಿಪರೀತ ಹೆಚ್ಚುವುದರಿಂದ ಉದ್ಭವಿಸುವ “ ನಿರ್ಜಲೀಕೃತ ಸ್ಥಿತಿ “ ಮತ್ತು ಆತನ ಮೆದುಳಿಗೆ ಸಂಭವಿಸುವ ಹಾನಿಯೂ ಆತನ  ಆಕಸ್ಮಿಕ ಮರಣಕ್ಕೆ ಕಾರಣವೆನಿಸಬಲ್ಲದು. ಎರಡನೆಯ ವಿಧದಲ್ಲಿ ವಯೋವೃದ್ಧರು ಹಾಗೂ ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳಿಗೆ ಸಂಬಂಧಿಸಿದ ಮತ್ತು ಅನ್ಯ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ರಕ್ತ ಸಂಚಲನ ವ್ಯವಸ್ಥೆಯ ವೈಫಲ್ಯದಿಂದ ಮರಣ ಸಂಭವಿಸುವ ಸಾಧ್ಯತೆಗಳಿವೆ. ಇದಲ್ಲದೇ ಹಸುಗೂಸುಗಳು ಮತ್ತು ಪುಟ್ಟ ಮಕ್ಕಳ ಆರೋಗ್ಯದ ಮೇಲೂ ಉಷ್ಣ ಅಲೆಯು ದುಷ್ಪರಿಣಾಮವನ್ನು ಬೀರುತ್ತದೆ.

ಬಲಿಯಾಗುತ್ತಿರುವ ಬಡವರು

ಯಾವುದೇ ದೇಶದಲ್ಲಿ ಉಷ್ಣ ಅಲೆಗೆ ಬಲಿಯಾಗುವವರಲ್ಲಿ ಬಡವರ ಸಂಖ್ಯೆಯೇ ಅಧಿಕವಾಗಿದೆ. ಅದರಲ್ಲೂ ಹೊರಾಂಗಣದಲ್ಲಿ ದುಡಿಯುವ ಕೃಷಿಕರು, ಕೂಲಿಕಾರ್ಮಿಕರು ರಸ್ತೆ ಮತ್ತು ಕಟ್ಟಡಗಳ ನಿರ್ಮಾಣ ಕಾಮಗಾರಿಗಳಲ್ಲಿ ದುಡಿಯುವ ಜನರು, ನೆರಳಿನ ಆಸರೆಯಿಲ್ಲದೇ ಸೂರ್ಯನ ಬಿಸಿಲಿಗೆ ಮೈ ಒಡ್ಡುವುದರಿಂದ ಉಷ್ಣ ಅಲೆಯ ಹಾವಳಿಗೆ ಸುಲಭದಲ್ಲೇ ಬಲಿಯಾಗುತ್ತಾರೆ. ಅಂತೆಯೇ ಕೆಲವೊಂದು ಗಂಭೀರ - ಮಾರಕ ವ್ಯಾಧಿಗಳಿಂದ ಬಳಲುತಿರುವವರು, ವಾತಾವರಣದ ಉಷ್ಣತೆ ಅತಿಯಾಗಿ ಹೆಚ್ಚಿದ ಸಂದರ್ಭಗಳಲ್ಲಿ ಮೂತ್ರಪಿಂಡಗಳ ವೈಫಲ್ಯ ಹಾಗೂ ಹೃದಯಾಘಾತ ಇತ್ಯಾದಿಗಳಿಂದ ಮೃತಪಡುತ್ತಾರೆ.

ಮುಂಜಾಗ್ರತೆ

ವಾತಾವರಣದ ತಾಪಮಾನವು ಅತಿಯಾಗಿ ಹೆಚ್ಚಿದ ಸಂದರ್ಭದಲ್ಲಿ ಸೂರ್ಯನ ಬಿಸಿಲಿಗೆ ನೇರವಾಗಿ ಮೈಯ್ಯೊಡ್ಡದಿರಿ. ಅನಿವಾರ್ಯ ಸಂದರ್ಭದಲ್ಲಿ ಛತ್ರಿಯನ್ನು ಬಳಸಿ. ಧಾರಾಳವಾಗಿ ನೀರು, ಪಾನಕ ಹಾಗೂ ಹಣ್ಣಿನ ರಸ ಇತ್ಯಾದಿ ದ್ರವಗಳನ್ನು ಸೇವಿಸಿ. ಗಂಭೀರ ವ್ಯಾಧಿಗಳಿಂದ ಬಳಲುತ್ತಿರುವ ರೋಗಿಗಳ ಶರೀರದ ಉಷ್ಣತೆಯು ಹೆಚ್ಚದಂತೆ ಹವಾನಿಯಂತ್ರಕ ಅಥವಾ ಕೂಲರ್ ಬಳಸಿ. ಈ ಸೌಲಭ್ಯ ಇಲ್ಲದಲ್ಲಿ ತಣ್ಣೀರಿನಲ್ಲಿ ಅದ್ದಿದ  ಒದ್ದೆ ಬಟ್ಟೆಯಿಂದ ರೋಗಿಯ ಶರೀರವನ್ನು ಆಗಾಗ ಒರೆಸುತ್ತಿರಿ. ಇಂತಹವರ ಆರೋಗ್ಯದಲ್ಲಿ ಕೊಂಚ ಏರುಪೇರು ಸಂಭವಿಸಿದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಉಷ್ಣ ಅಲೆಯ ಸಂದರ್ಭದಲ್ಲಿ ಜ್ವರ, ವಾಂತಿ ಹಾಗೂ ಭೇದಿಗಳಂತಹ ಸಮಸ್ಯೆಗಳು ಬಾಧಿಸಿದಲ್ಲಿ, ಇದನ್ನು ನಿರ್ಲಕ್ಷಿಸದೇ ವೈದ್ಯರ ಸಲಹೆ ಮತ್ತು ಚಿಕಿತ್ಸೆಯನ್ನು  ಪಡೆದುಕೊಳ್ಳಿ.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು  



Wednesday, February 21, 2018

Burning trash is dangerous................


          ತ್ಯಾಜ್ಯಗಳ ಮುಕ್ತ ದಹನ : ಅನಾರೋಗ್ಯಕ್ಕೆ ಆಹ್ವಾನ

ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ಅಗಾಧ ಪ್ರಮಾಣದ ವೈವಿಧ್ಯಮಯ ತ್ಯಾಜ್ಯಗಳಲ್ಲಿ ಶೇ. 40 ರಷ್ಟನ್ನು ಅನಿಯಂತ್ರಿತ ಹಾಗೂ ಮುಕ್ತವಾಗಿ ದಹಿಸಲಾಗುತ್ತಿದೆ. ಈ ಅಪಾಯಕಾರಿ ಸಮಸ್ಯೆಗೆ ನಮ್ಮ ದೇಶವೂ ಅಪವಾದವೆನಿಸಿಲ್ಲ ಎಂದು ಇತ್ತೀಚಿಗೆ ನಡೆಸಿದ್ದ ಅಧ್ಯಯನದ ವರದಿಯಿಂದ ಬಹಿರಂಗಗೊಂಡಿದೆ. ಈ ರೀತಿಯಲ್ಲಿ ದಹಿಸಲ್ಪಡುವ ತ್ಯಾಜ್ಯಗಳು ಹೊರಸೂಸುವ ಪ್ರದೂಷಕಗಳ ಪ್ರಮಾಣವು, ಪರಿಸರದಲ್ಲಿ ಬಿಡುಗಡೆಯಾಗುತ್ತಿರುವ ಮಾನವಜನ್ಯ ಜಾಗತಿಕ ಪ್ರದೂಷಕಗಳ ಶೇ. 29 ರಷ್ಟಿದೆ!.

ತ್ಯಾಜ್ಯಗಳ ಅನಿಯಂತ್ರಿತ ಹಾಗೂ ಮುಕ್ತ ದಹನವನ್ನು “ ವಾಣಿಜ್ಯ ದಹನ ವ್ಯವಸ್ಥೆ “ ಯಂತೆ ( ಕಮರ್ಷಿಯಲ್ ಇನ್ಸಿನರೇಶನ್ ) ನಿಯಂತ್ರಿಸುವುದು ಅಸಾಧ್ಯವೆನಿಸುತ್ತದೆ. ಹಾಗೂ ಇದೇ ಕಾರಣದಿಂದಾಗಿ ಇದು ಮನುಕುಲಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಈ ಬಗ್ಗೆ ಅಧ್ಯಯನವನ್ನು ನಡೆಸಿದ್ದ ಅಮೆರಿಕ ಮೂಲದ ನ್ಯಾಷನಲ್ ಸೆಂಟರ್ ಫಾರ್ ಅಟ್ಮೋಸ್ಫೆರಿಕ್ ರಿಸರ್ಚ್ ಸಂಸ್ಥೆಯ ಹೇಳಿಕೆಯಂತೆ, ತ್ಯಾಜ್ಯಗಳ ಅನಿಯಂತ್ರಿತ ಹಾಗೂ ಮುಕ್ತ ದಹಿಸುವಿಕೆಯಿಂದ ಹೊರಸೂಸುವ ಪ್ರದೂಷಕಗಳ ಪ್ರಮಾಣವು, ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಾದ ಭಾರತ,ಚೀನಾ, ಬ್ರೆಜಿಲ್, ಮೆಕ್ಸಿಕೋ, ಪಾಕಿಸ್ತಾನ ಮತ್ತು ಟರ್ಕಿಗಳಲ್ಲಿ ಅಪಾಯಕಾರಿ ಮಟ್ಟವನ್ನು ತಲುಪಿದೆ. ಈ ಅನಾರೋಗ್ಯಕರ ಮತ್ತು ಅಪಾಯಕಾರಿ ಸಮಸ್ಯೆಯ ಬಗ್ಗೆ ಇಂದಿಷ್ಟು ಮಾಹಿತಿ ಇಲ್ಲಿದೆ.

ತ್ಯಾಜ್ಯಗಳ ದಹನ

ನಮ್ಮಲ್ಲಿ ದಿನನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳಾದ ವೈವಿದ್ಯಮಯ ನಿರುಪಯುಕ್ತ ವಸ್ತುಗಳು, ಕಾಗದ, ಪ್ಲಾಸ್ಟಿಕ್ ಕೈಚೀಲ ಮತ್ತಿತರ ಉತ್ಪನ್ನಗಳು, ನಿಷ್ಪ್ರಯೋಜಕ ಬ್ಯಾಟರಿಗಳು, ಎಣ್ಣೆ, ಪೈಂಟ್, ವಿದ್ಯುತ್ ಬಲ್ಬ್ ಹಾಗೂ ಬಟ್ಟೆಬರೆಗಳೇ ಮುಂತಾದ ನಿಷ್ಪ್ರಯೋಜಕ  ವಸ್ತುಗಳನ್ನು ಬೆಂಕಿಹಚ್ಚಿ ಸುಡುವ ಮೂಲಕ ಸುಲಭದಲ್ಲೇ ವಿಲೇವಾರಿ ಮಾಡುವ ಹವ್ಯಾಸವಿದ್ದಲ್ಲಿ, ನಿಮ್ಮ ಹಾಗೂ ನಿಮ್ಮ ಮನೆಯೊಂದಿಗೆ, ನೆರೆಕರೆಯ ನಿವಾಸಿಗಳ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದೆಂದು ಪ್ರಾಯಶಃ ನಿಮಗೂ ತಿಳಿದಿರಲಾರದು. ಅದರಲ್ಲೂ ವಿಶೇಷವಾಗಿ ಹಸುಗೂಸುಗಳು, ಪುಟ್ಟ ಮಕ್ಕಳು, ವಯೋವೃದ್ಧರು ಮತ್ತು ಗರ್ಭಿಣಿಯರ ಪಾಲಿಗೆ  “ ಧೂಮಕೇತು”  ವಿನಂತೆ ಕಾಡಬಲ್ಲ ಈ ದಹನಕ್ರಿಯೆಯಿಂದ ಉದ್ಭವಿಸುವ ಅಪಾಯಕಾರಿ ಅನಿಲಗಳು, ಅನೇಕ ವಿಧದ ಗಂಭೀರ ಮತ್ತು ಮಾರಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುವುದು.

ಈ ಧೂಮದಲ್ಲೇನಿದೆ?

ನೀವು ತ್ಯಾಜ್ಯಗಳನ್ನು ಬೆಂಕಿಹಚ್ಚಿ ಸುಡುವಾಗ ಫಾರ್ಮಲ್ ಡಿಹೈಡ್, ಹೈಡ್ರೋಜನ್ ಕ್ಲೋರೈಡ್, ಸಲ್ಫರ್ ಡೈಆಕ್ಸೈಡ್ ಮತ್ತು ಫ್ಯೂರಾನ್ ಮತ್ತಿತರ ಅನಿಲಗಳು ಬಿಡುಗಡೆಯಾಗುತ್ತವೆ. ಇವುಗಳಲ್ಲಿ ಡೈಆಕ್ಸಿನ್ ಮತ್ತು ಫ್ಯೂರಾನ್ ಅನಿಲಗಳು ಕ್ಯಾನ್ಸರ್ ಕಾರಕಗಳೆಂದು ಗುರುತಿಸಲ್ಪಟ್ಟಿವೆ. ಸುಮಾರು ಎರಡರಿಂದ ನಲವತ್ತು ಮನೆಗಳಲ್ಲಿ ತ್ಯಾಜ್ಯಗಳನ್ನು ಮುಕ್ತವಾಗಿ ದಹಿಸುವಾಗ ಉತ್ಪನ್ನವಾಗುವ ಡೈಆಕ್ಸಿನ್ ಮತ್ತು ಫ್ಯೂರಾನ್ ಗಳ ಪ್ರಮಾಣವು, ಆಧುನಿಕ ಇನ್ಸಿನರೇಟರ್ ಒಂದರಲ್ಲಿ ವೈಜ್ಞಾನಿಕ ಹಾಗೂ ಸುರಕ್ಷಿತ ವಿಧಾನಗಳಿಂದ ಸುಮಾರು 200 ಟನ್ ತ್ಯಾಜ್ಯಗಳನ್ನು ದಹಿಸಿದಾಗ ಉತ್ಪನ್ನವಾಗುವ ಪ್ರಮಾಣದಷ್ಟೇ  ಆಗಿರುತ್ತದೆ!. ಏಕೆಂದರೆ ಇನ್ಸಿನರೇಟರ್ ಗಳಲ್ಲಿ ತ್ಯಾಜ್ಯಗಳನ್ನು ಗರಿಷ್ಠ ಉಷ್ಣತೆಯಲ್ಲಿ ದಹಿಸಲಾಗುತ್ತದೆ. ಆದರೆ ತ್ಯಾಜ್ಯಗಳನ್ನು ಮುಕ್ತವಾಗಿ ದಹಿಸುವಾಗ ಉಷ್ಣತೆಯ ಪ್ರಮಾಣವು ಸಾಕಷ್ಟು ಕಡಿಮೆಯಿರುತ್ತದೆ. ಇದೇ ಕಾರಣದಿಂದಾಗಿ ಇದು ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ.ನಿಜಸ್ಥಿತಿ ಹೀಗಿರುವಾಗ ದೇಶದ ಅನೇಕ ರಾಜ್ಯಗಳಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ರಾಶಿಬಿದ್ದಿರುವ ತ್ಯಾಜ್ಯಗಳಿಗೆ ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಬೆಂಕಿ ತಗಲಿದಾಗ ಉತ್ಪನ್ನವಾಗುವ ಪ್ರದೂಷಕಗಳ ಪ್ರಮಾಣ ಮತ್ತು ಇವುಗಳ ದುಷ್ಪರಿಣಾಮಗಳನ್ನು ಊಹಿಸುವುದು ಅಸಾಧ್ಯವೂ ಹೌದು.

ಕ್ಯಾನ್ಸರ್ ಕಾರಕ

ನಿರುಪಯುಕ್ತ ತ್ಯಾಜ್ಯಗಳನ್ನು ಮುಕ್ತವಾಗಿ ದಹಿಸುವಾಗ ಅತ್ಯಧಿಕ ಉಷ್ಣತೆಯಲ್ಲಿ ದಹನಕ್ರಿಯೆ ಜರಗದ ಕಾರಣದಿಂದಾಗಿ, ಇದರಿಂದ ಉತ್ಪನ್ನವಾಗುವ “ ಸೂಕ್ಷ್ಮಾತಿಸೂಕ್ಷ್ಮ ಕಣ “ ಗಳು ( ಪಾರ್ಟಿಕ್ಯುಲೇಟ್ ಮ್ಯಾಟರ್ ) ಮನುಷ್ಯನ ಶ್ವಾಸದೊಂದಿಗೆ ಸೇವಿಸಲು ಸೂಕ್ತವಲ್ಲದ ಹಾಗೂ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಅಮೆರಿಕದಲ್ಲಿ ನಡೆಸಿದ್ದ ಅಧ್ಯಯನವೊಂದರ ವರದಿಯಂತೆ, ಮನುಷ್ಯನ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸುವ ಹಾಗೂ ವಾಯುಮಾಲಿನ್ಯಕ್ಕೆ ಮೂಲವೆನಿಸುವ ವಿಷಕಾರಕ ದ್ರವ್ಯಗಳಲ್ಲಿ “ ಅಪರಿಪೂರ್ಣ ದಹನಕ್ರಿಯೆ “ ಯಿಂದ ಉದ್ಭವಿಸುವ ದ್ರವ್ಯ – ಅನಿಲಗಳು ಕ್ಯಾನ್ಸರ್ ಕಾರಕವೆಂದು ತಿಳಿದುಬಂದಿದೆ. ಇದಲ್ಲದೇ ಈ ಸೂಕ್ಷ್ಮಾತಿಸೂಕ್ಷ್ಮ ಕಣಗಳು  ಕ್ಯಾನ್ಸರ್, ದೀರ್ಘಕಾಲೀನ ಶ್ವಾಸಕೋಶಗಳ ಉರಿಯೂತಗಳಂತಹ ಸಮಸ್ಯೆಗಳೊಂದಿಗೆ ಕಣ್ಣು, ಕಿವಿ, ಮೊಗು ಮತ್ತು ಗಂಟಲು ಮುಂತಾದ ಅಂಗಗಳಿಗೆ ಸಂಬಂಧಿಸಿದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ. ನಿಮ್ಮ ಶ್ವಾಸಕೋಶಗಳನ್ನು ಪ್ರವೇಶಿಸಿದ ತುಸು ದೊಡ್ಡ ಗಾತ್ರದ ಕಣಗಳು ನೀವು ಕೆಮ್ಮಿದಾಗ ಅಥವಾ ಶೀನಿದಾಗ ಹೊರಬೀಳಬಹುದಾದರೂ, ಸಣ್ಣ ಗಾತ್ರದ ಕಣಗಳು ಶರೀರದಲ್ಲೇ ಉಳಿದುಕೊಳ್ಳುವುದರಿಂದ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತವೆ.

ಇಷ್ಟು ಮಾತ್ರವಲ್ಲ, ಮುಕ್ತವಾಗಿ ತ್ಯಾಜ್ಯಗಳನ್ನು ಸುಡುವಾಗ ಉತ್ಪನ್ನವಾಗುವ ಅನಿಲ ಹಾಗೂ ಸೂಕ್ಷ್ಮಾತಿಸೂಕ್ಷ್ಮ ಕಣಗಳ ರೂಪದಲ್ಲಿ ಹೊರಬೀಳುವ ಅಪಾಯಕಾರಿ ದ್ರವ್ಯಗಳು ಬೂದಿಯಲ್ಲೂ ಉಳಿದುಕೊಳ್ಳುವುದರಿಂದ, ಈ ಬೂದಿಯೂ ಮನುಷ್ಯರ ಅನಾರೋಗ್ಯಕ್ಕೆ ಕಾರಣವೆನಿಸುತ್ತದೆ. ಈ ಬೂದಿಯಿಂದಾಗಿ ಸಮೀಪದಲ್ಲಿನ ಬಾವಿ ಅಥವಾ ಅನ್ಯ ಜಲಮೂಲಗಳು ಕಲುಷಿತಗೊಳ್ಳುವುದರಿಂದ, ಈ ನೀರನ್ನು ಕುಡಿದ ಮನುಷ್ಯರು ಮತ್ತು ಇವುಗಳಲ್ಲಿರುವ ಜಲಚರಗಳಿಗೆ  ಅಪಾಯಕಾರಿಯಾಗಿ ಪರಿಣಮಿಸುತ್ತದೆ.

ಕೊನೆಯ ಮಾತು

ನಿಮ್ಮ ವಸತಿ ಅಥವಾ ವಾಣಿಜ್ಯ ಕಟ್ಟಡಗಳಲ್ಲಿ ದಿನನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳನ್ನು ಕ್ಷಣಮಾತ್ರದಲ್ಲಿ ಬೆಂಕಿಹಚ್ಚಿ ಸುಡಬಹುದಾದರೂ, ಇದರಿಂದ ಸಂಭವಿಸಬಲ್ಲ ಅನಾಹುತಗಳನ್ನು ತಡೆಗಟ್ಟುವುದು ಅಸಾಧ್ಯವೂ ಹೌದು. ಈ ಸಮಸ್ಯೆಯನ್ನು ಬಗೆಹರಿಸಲು ನೀವು ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಸಾಧ್ಯವಿರುವಷ್ಟು ಕಡಿಮೆಮಾಡಿ. ಅದರಲ್ಲೂ ಪ್ಲಾಸ್ಟಿಕ್ ಕೈಚೀಲಗಳು ಮತ್ತು ಅನ್ಯ ಉತ್ಪನ್ನಗಳ ಬಳಕೆಯನ್ನೇ ನಿಲ್ಲಿಸಿ. ನಿರ್ದಿಷ್ಟ ಗುಣಮಟ್ಟದ ಸ್ವಚ್ಛ ಪ್ಲಾಸ್ಟಿಕ್ ಉತ್ಪನ್ನಗಳನ್ನು ಪುನರ್ ಬಳಕೆ, ಪುನರ್ ಆವರ್ತನ ಅಥವಾ ರಸ್ತೆಗಳ ನಿರ್ಮಾಣದಲ್ಲಿ ಬಳಸಬಹುದಾದರೂ, ನಮ್ಮ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಅವಶ್ಯಕ ಕಾನೂನುಗಳನ್ನು ಇಂದಿನ ತನಕ ರೂಪಿಸಿಲ್ಲ. ಪ್ಲಾಸ್ಟಿಕ್ ನಿಷೇಧ ರಾಜ್ಯದಲ್ಲಿ ಜಾರಿಗೆ ಬಂದಿದ್ದರೂ, ಮಾರುಕಟ್ಟೆಯಲ್ಲಿ ಇವುಗಳ ಮಾರಾಟ ಮತ್ತು ಬಳಕೆ ಇಂದಿಗೂ ನಿಂತಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ಜನಸಾಮಾನ್ಯರು ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ನಿಲ್ಲಿಸಲು ಸಿದ್ಧರಿಲ್ಲ. ಅಂತೆಯೇ ತಮ್ಮಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಸ್ಥಳೀಯ ಸಂಸ್ಥೆಗಳು ನಿಯೋಜಿಸಿರುವ ಕಾರ್ಯಕರ್ತರಿಗೆ (ನಿಗದಿತ ಮಾಸಿಕ ಶುಲ್ಕವನ್ನು ಉಳಿಸಲು ) ನೀಡುವುದಿಲ್ಲ.ತತ್ಪರಿಣಾಮವಾಗಿ ಪ್ಲಾಸ್ಟಿಕ್ ಮತ್ತು ಅನ್ಯವಿಧದ ತ್ಯಾಜ್ಯಗಳ ಸಮಸ್ಯೆ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ. ಈ ಸಮಸ್ಯೆಯನ್ನು ಸಮರೋಪಾದಿಯಲ್ಲಿ ನಿಯಂತ್ರಿಸದೇ ಇದ್ದಲ್ಲಿ, ನಮ್ಮ ಮುಂದಿನ ಸಂತತಿಯನ್ನು ಇದು ಶಾಪದೋಪಾದಿಯಲ್ಲಿ ಪೀಡಿಸಲಿದೆ.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು



Saturday, January 27, 2018

BEWARE OF LIFESTYLE DISEASES


                ಜೀವನಶೈಲಿಯ ಕಾಯಿಲೆಗಳು ಹೆಚ್ಚುತ್ತಿವೆ, ಜೋಕೆ

ಅತ್ಯಧಿಕ ಭಾರತೀಯರ ಮರಣಕ್ಕೆ ಕಾರಣವೆನಿಸುತ್ತಿರುವ ಕಾಯಿಲೆಗಳಲ್ಲಿ ಇದೀಗ “ ಪರಸ್ಪರ ಹರಡದ ಕಾಯಿಲೆಗಳು “ ಅಗ್ರಸ್ಥಾನದಲ್ಲಿವೆ. ಜೀವನಶೈಲಿಯ ಕಾಯಿಲೆಗಳು ಎಂದೂ ಕರೆಯಲ್ಪಡುವ ಈ ಗಂಭೀರ ವ್ಯಾಧಿಗಳು ಅನಿಯಂತ್ರಿತವಾಗಿ ವೃದ್ಧಿಸುತ್ತಿರಲು, ನಾವಿಂದು ಅನುಸರಿಸುತ್ತಿರುವ ಆರಾಮದಾಯಕ ಮತ್ತು ನಿಷ್ಕ್ರಿಯ ಜೀವನಶೈಲಿಗಳೊಂದಿಗೆ, ಪರಿಸರ ಸಂಬಂಧಿ ಅಪಾಯಕಾರಿ ಅಂಶಗಳೂ  ಪ್ರಮುಖ ಕಾರಣವೆನಿಸಿವೆ. ಸೆಂಟರ್ ಫಾರ್ ಸಯನ್ಸ್ ಎಂಡ್ ಎನ್ವಿರಾನ್ಮೆಂಟ್ ( ಸಿ ಎಸ್ ಇ ) ಸಂಸ್ಥೆಯು  ಇತ್ತೀಚಿಗೆ ನಡೆಸಿದ್ದ  ಅಧ್ಯಯನದಿಂದ  ಲಭಿಸಿರುವ  ಈ ಮಾಹಿತಿಯು ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ.

ಪ್ರಸ್ತುತ ಭಾರತದಲ್ಲಿ ಸಂಭವಿಸುತ್ತಿರುವ ಮರಣಗಳಲ್ಲಿ ಶೇ. 61 ರಷ್ಟು ಮರಣಗಳು ಜೀವನಶೈಲಿಯ  ಕಾಯಿಲೆಗಳಿಂದ ಸಂಭವಿಸುತ್ತಿವೆ ಎಂದು ಸಿ ಎಸ್ ಇ ಪ್ರಕಟಿಸಿರುವ ವರದಿಯಿಂದ  ಬಹಿರಂಗಗೊಂಡಿದೆ.ಅಂತೆಯೇ  ಪರಿಸರ ಸಂಬಂಧಿ ಅಪಾಯಕಾರಿ ಅಂಶಗಳಿಗೆ ಮತ್ತು  ಏಳು ವಿಧದ ಜೀವನಶೈಲಿಯ ಕಾಯಿಲೆಗಳಿಗೆ ಇರಬಹುದಾದ ಸಂಬಂಧದ ಸಂಭಾವ್ಯತೆಯನ್ನು  ಈ ವರದಿಯಲ್ಲಿ  ಉಲ್ಲೇಖಿಸಲಾಗಿದೆ.

ಅಪಾಯಕಾರಿ ಕಾಯಿಲೆಗಳು/ ಸಮಸ್ಯೆಗಳು 

ಸಿ ಎಸ್ ಇ ವರದಿಯಂತೆ ಸ್ಥೂಲಕಾಯ, ಕ್ಯಾನ್ಸರ್, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಮಧುಮೇಹ ( ಡಯಾಬೆಟೆಸ್ ),   ಶ್ವಾಸಾಂಗಗಳ ವ್ಯಾಧಿಗಳು ( ದೀರ್ಘಕಾಲೀನ ಶ್ವಾಸಕೋಶಗಳ ಅಡಚಣೆಯ ತೊಂದರೆ ), ಚೋದನಿಗಳ ( ಹೋ ರ್ಮೋನ್ ) ಅಸಮತೋಲನ, ಆಹಾರದ ಒಗ್ಗದಿರುವಿಕೆ ( ಅಲರ್ಜಿ ) ಮತ್ತು ಮಾನಸಿಕ ವ್ಯಾಧಿಗಳು ಜೀವನಶೈಲಿಯ ವ್ಯಾಧಿ – ಸಮಸ್ಯೆಗಳಲ್ಲಿ ಪ್ರಮುಖವಾಗಿವೆ.

ಪರಿಹಾರವೇನು?

ಪ್ರಸ್ತುತ ಕ್ಯಾನ್ಸರ್ ಕಾಯಿಲೆಯನ್ನು ಉದಾಹರಣೆಯಾಗಿಸಿದಲ್ಲಿ, 2020 ಕ್ಕೆ ಮುನ್ನ ನಮ್ಮ ದೇಶದಲ್ಲಿ ವರ್ಷಂಪ್ರತಿ 1.73 ದಶಲಕ್ಷಕ್ಕೂ ಅಧಿಕ ಜನರು ಈ ಮಾರಕ ಕಾಯಿಲೆಗೆ ಈಡಾಗಲಿರುವರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಾಯುಮಾಲಿನ್ಯ, ತಂಬಾಕಿನ ಬಳಕೆ, ಮದ್ಯಪಾನ, ಆಹಾರಸೇವನಾ ಪದ್ದತಿಯಲ್ಲಿ ಬದಲಾವಣೆಗಳು ಕ್ಯಾನ್ಸರ್ ಉದ್ಭವಿಸುವಲ್ಲಿ ಕಾರಣವೆನಿಸಿದರೂ, ಶೇ. 20 ರಷ್ಟು ಕ್ಯಾನ್ಸರ್ ಪ್ರಕರಣಗಳು ಪರಿಸರದಲ್ಲಿನ ವಿಷಕಾರಕ ಅಂಶಗಳಿಂದಾಗಿ ಉದ್ಭವಿಸುತ್ತವೆ. ಇದೇ ಕಾರಣದಿಂದಾಗಿ ಪರಿಸರ ಸಂಬಂಧಿತ ಅಪಾಯಕಾರಿ ಅಂಶಗಳನ್ನು ಕ್ಷಿಪ್ರಗತಿಯಲ್ಲಿ ನಿವಾರಿಸುವ ಮೂಲಕ, ಶೇ. 61 ರಷ್ಟು  ಮರಣಗಳಿಗೆ ಕಾರಣವೆನಿಸುತ್ತಿರುವ ಜೀವನಶೈಲಿಯ ಕಾಯಿಲೆಗಳನ್ನು ನಿಯಂತ್ರಿಸಬೇಕೆಂದು ಈ ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.

ಲಭ್ಯ ಮಾಹಿತಿಯಂತೆ ಕಳೆದ ಎರಡು ದಶಕಗಳಲ್ಲಿ ಅಧಿಕ ರಕ್ತದ ಒತ್ತಡ, ಮಧುಮೇಹ, ಅಧಿಕತೂಕ – ಅತಿಬೊಜ್ಜು, ಖಿನ್ನತೆ ಮತ್ತಿತರ  ಮಾನಸಿಕ ವ್ಯಾಧಿಗಳು ಭಾರತೀಯರಲ್ಲಿ ಸಾಮಾನ್ಯ ಹಾಗೂ ವ್ಯಾಪಕವಾಗಿ ಕಂಡುಬರುತ್ತಿವೆ. ಅನಿಯಂತ್ರಿತವಾಗಿ ವೃದ್ಧಿಸುತ್ತಿರುವ ವಾಯುಮಾಲಿನ್ಯದ ಪರಿಣಾಮವಾಗಿ ಮನುಷ್ಯನ ಹೃದಯ, ಶ್ವಾಸಾಂಗಗಳು ಮತ್ತು ಮೂತ್ರಪಿಂಡಗಳು ಹಾನಿಗೀಡಾಗುತ್ತಿವೆ. ಇದಲ್ಲದೇ ಗಾಳಿಯಲ್ಲಿರುವ ವಿಷಕಾರಕ ಅಂಶಗಳಿಂದಾಗಿ ಸಂತಾನಹೀನತೆ, ಮತ್ತು ಇನ್ಸುಲಿನ್ ಪ್ರತಿರೋಧವೇ ಮುಂತಾದ ಗಂಭೀರ ಸಮಸ್ಯೆಗಳು ಭಾರತೀಯರನ್ನು ಕಾಡುತ್ತಿವೆ. ಈ ಸಮಸ್ಯೆಯನ್ನು ಸಮರೋಪಾದಿಯಲ್ಲಿ ಪರಿಹರಿಸದೇ ಇದ್ದಲ್ಲಿ, ನಮ್ಮ ಮುಂದಿನ ಸಂತತಿಯನ್ನು ಇದು ಶಾಪದೋಪಾದಿಯಲ್ಲಿ ಪೀಡಿಸಲಿದೆ.

ನಾಲ್ಕು ಅಂಶಗಳು

ವಿಶ್ವ ಆರೋಗ್ಯ ಸಂಸ್ಥೆಯು ಮದ್ಯಪಾನ, ತಂಬಾಕಿನ ಉತ್ಪನ್ನಗಳ ಬಳಕೆ, ಅಪೌಷ್ಟಿಕ – ನಿರುಪಯುಕ್ತ ಆಹಾರ ( ಜಂಕ್ ಫುಡ್ ) ಸೇವನೆ ಮತ್ತು ನಿಷ್ಕ್ರಿಯ ಜೀವನಶೈಲಿಗಳು ಜೀವನಶೈಲಿಯ ಅರ್ಥಾತ್ ಪರಸ್ಪರ ಒಬ್ಬರಿಂದ ಮತ್ತೊಬ್ಬರಿಗೆ ಹರಡದ ಕಾಯಿಲೆಗಳಿಗೆ ಕಾರಣವೆಂದು ಗುರುತಿಸಿದೆ. ಸಂಸ್ಥೆಯ ಅಭಿಪ್ರಾಯದಂತೆ ಜಗತ್ತಿನ ವಿವಿಧ ರಾಷ್ಟ್ರಗಳು ಕಿಂಚಿತ್ ಹಣವನ್ನು ವಿನಿಯೋಗಿಸುವ ಮೂಲಕ, ಈ ಗಂಭೀರ ಸಮಸ್ಯೆಯನ್ನು ಮತ್ತು ಇದರಿಂದಾಗಿ ಸಂಭವಿಸುವ ಮರಣದ ಪ್ರಮಾಣವನ್ನು ನಿಶ್ಚಿತವಾಗಿ ನಿಯಂತ್ರಿಸಬಹುದಾಗಿದೆ.

ಸರಕಾರ- ಪ್ರಜೆಗಳ  ಹೊಣೆಗಾರಿಕೆ  

ದೇಶದ ಪ್ರಜೆಗಳ ಆರೋಗ್ಯ ರಕ್ಷಣೆಯ ಮಹತ್ತರವಾದ ಹೊಣೆಗಾರಿಕೆಯು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲಿದೆ. ಆದರೆ ಮಾನವಜನ್ಯ ಜಲ – ವಾಯು ಮಾಲಿನ್ಯ, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಪರಿಸರ ಪ್ರದೂಷಣೆಯ ಸಮಸ್ಯೆಯನ್ನು ನಿವಾರಿಸಲು ಮತ್ತು ಜೀವನಶೈಲಿಯ ಕಾಯಿಲೆಗಳನ್ನು ನಿಶ್ಚಿತವಾಗಿ ನಿಯಂತ್ರಿಸಲು, ದೇಶದ ಪ್ರತಿಯೊಬ್ಬ ಪ್ರಜೆಯ ಮನಸ್ಪೂರ್ವಕ ಸಹಕಾರದ ಅವಶ್ಯಕತೆಯಿದೆ. ಈ ಸಮಸ್ಯೆಯನ್ನು ನಿರ್ಲಕ್ಷಿಸಿದಲ್ಲಿ, ಮುಂದಿನ ಕೆಲವೇ ವರ್ಷಗಳಲ್ಲಿ ಜೀವನಶೈಲಿಯ ಕಾಯಿಲೆಗಳಿಗೆ ಬಲಿಯಾಗುವ ಭಾರತೀಯರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ.

ಕೊನೆಯ ಮಾತು

ನಿಷ್ಕ್ರಿಯ ಜೀವನಶೈಲಿ, ನಿರುಪಯುಕ್ತ ಆಹಾರ ಸೇವನೆ ಮತ್ತು ಸುಖಲೋಲುಪ ಜೀವನಕ್ಕೆ ಒಗ್ಗಿಹೋಗಿರುವ ಬಹುತೇಕ ಶ್ರೀಮಂತರು, ಲಕ್ಷಾಂತರ ರೂಪಾಯಿಗಳ ಆರೋಗ್ಯ ವಿಮೆಯನ್ನು ಮಾಡಿಸಿಕೊಂಡು ನಿಶ್ಚಿಂತರಾಗಿದ್ದೇವೆ ಎನ್ನುತ್ತಾರೆ. ಆದರೆ ಈ ಆರೋಗ್ಯ ವಿಮೆಯು ವ್ಯಾಧಿಪೀಡಿತರ ಚಿಕಿತ್ಸೆಯ ಖರ್ಚುವೆಚ್ಚಗಳನ್ನು ಪಡೆದುಕೊಳ್ಳಲು ನೆರವಾಗಬಹುದೇ ಹೊರತು, ಯಾವುದೇ ಕಾಯಿಲೆಗಳಿಂದ ರಕ್ಷಣೆ ನೀಡಲು ಸಫಲವಾಗದು ಎನ್ನುವ ಸತ್ಯವನ್ನು ಮರೆತುಬಿಡುತ್ತಾರೆ!.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು




  

Tuesday, December 26, 2017

CONSTRUCTION WASTE ................


         ಕಟ್ಟಡಗಳ ಭಗ್ನಾವಶೇಷ : ಮರುಬಳಕೆಗೆ ಅವಕಾಶ


ಬೆಂಗಳೂರು ಮಹಾನಗರದಲ್ಲಿ ಪ್ರತಿನಿತ್ಯ ೩೬೦೦ ಟನ್ ಗಳಿಗಿಂತ ಅಧಿಕ ಪ್ರಮಾಣದ “ ಕಟ್ಟಡಗಳ ಭಗ್ನಾವಶೇಷ “ ಉತ್ಪನ್ನವಾಗುತ್ತಿದ್ದು, ಇವುಗಳನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುತ್ತಿರುವುದು ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುತ್ತಿದೆ. ಈ ಸಮಸ್ಯೆಗೆ ದೇಶದ ಅನ್ಯ ಪಟ್ಟಣ – ನಗರಗಳೂ ಅಪವಾದವೆನಿಸಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಬಿ ಬಿ ಎಂ ಪಿ ಅವಶ್ಯಕ ಕಾನೂನುಗಳನ್ನು ರೂಪಿಸಲು ಸಜ್ಜಾಗಿದೆ. ಕಂಡಕಂಡಲ್ಲಿ ಇಂತಹ ತ್ಯಾಜ್ಯಗಳನ್ನು ಸುರಿಯುವವರಿಗೆ ೧ ರಿಂದ ೫ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲು ನೂತನ ಕಾನೂನಿನಲ್ಲಿ ಅವಕಾಶವನ್ನು ಕಲ್ಪಿಸಲಾಗುತ್ತದೆ. ಜೊತೆಗೆ ಕದ್ದುಮುಚ್ಚಿ ತ್ಯಾಜ್ಯಗಳನ್ನು ಸುರಿಯುವವರನ್ನು ಗುರುತಿಸಲು ಸಾಕಷ್ಟು ಸಿ ಸಿ ಕ್ಯಾಮರಾಗಳನ್ನು ಅಳವಡಿಸಲಿದೆ. ತನ್ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಬಿ ಬಿ ಎಂ ಪಿ ನಿರ್ಧರಿಸಿದೆ. ಆದರೆ ಇದೇ ಸಂದರ್ಭದಲ್ಲಿ ಈ ತ್ಯಾಜ್ಯಗಳನ್ನು ಮರುಬಳಕೆ ಮಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸುವ ಮತ್ತು ಬಿ ಬಿ ಎಂ ಸಿ ಯ ಬೊಕ್ಕಸಕ್ಕೆ ಒಂದಿಷ್ಟು ಹಣವನ್ನು ಉಳಿಸಬಲ್ಲ ವಿಧಾನಗಳನ್ನು ಅಳವಡಿಸಿಕೊಳ್ಳುವ ವಿಚಾರವನ್ನು ಮಾತ್ರ  ಮರೆತುಬಿಟ್ಟಿದೆ!.

ಸಮಸ್ಯೆಯ ಮೂಲ

ನಿರಂತರ ಹಾಗೂ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ, ನಾವು ನಿರ್ಮಿಸುತ್ತಿರುವ ವಸತಿ – ವಾಣಿಜ್ಯ ಕಟ್ಟಡಗಳು, ರಸ್ತೆಗಳು, ಫ್ಲೈ ಓವರ್, ಸಬ್ ವೇ ಇತ್ಯಾದಿಗಳ ನಿರ್ಮಾಣಗಳು ಶರವೇಗದಲ್ಲಿ ಸಾಗುತ್ತಿವೆ. ಜನಸಂಖ್ಯೆ ಇನ್ನಷ್ಟು ಹೆಚ್ಚಿದಂತೆ ಇವುಗಳ ಬೇಡಿಕೆಯೂ ಇನ್ನಷ್ಟು ಹೆಚ್ಚಲಿದೆ. ಇದರೊಂದಿಗೆ ಹಳೆಯ ಕಟ್ಟಡಗಳ ದುರಸ್ತಿ, ನವೀಕರಣ ಮತ್ತು ಹಳೆಯ ಕಟ್ಟಡಗಳನ್ನು ಭಗ್ನಗೊಳಿಸಿ ಹೊಸ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭಗಳಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳ ಪ್ರಮಾಣವೂ ಅತಿಯಾಗಿದೆ. ಬೆಂಗಳೂರು ನಗರದಲ್ಲಿ ದಿನನಿತ್ಯ ಉತ್ಪನ್ನವಾಗುವ ಇಂತಹ ತ್ಯಾಜ್ಯಗಳ ಪ್ರಮಾಣವು ೩೬೦೦ ಟನ್ ಗಳಾಗಿದ್ದು, ದೇಶದಲ್ಲಿ ಉತ್ಪನ್ನವಾಗುತ್ತಿರುವ ಇಂತಹ ತ್ಯಾಜ್ಯಗಳ ಪ್ರಮಾಣವು ೧೨ ರಿಂದ ೧೫ ಮಿಲಿಯನ್ ಟನ್ ಗಳಾಗಿದೆ. ವಿಶೇಷವೆಂದರೆ ಈ ತ್ಯಾಜ್ಯಗಳ ಸಮಸ್ಯೆಯು “ ರಕ್ತಬೀಜಾಸುರ “ ನಂತೆ ವೃದ್ಧಿಸುತ್ತಿದೆ. ಇದನ್ನು ಪರಿಹರಿಸಬಲ್ಲ ಮಾರ್ಗೋಪಾಯಗಳನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸದೇ ಇದ್ದಲ್ಲಿ, ಜನಸಾಮಾನ್ಯರ ಆರೋಗ್ಯಕ್ಕೆ ಮತ್ತು ದೇಶದ ಪ್ರಗತಿಗೆ ಕಂಟಕವಾಗಿ ಪರಿಣಮಿಸಲಿದೆ.

ಪರಿಹಾರವೇನು?

ಮನಸ್ಸಿದ್ದಲ್ಲಿ ಮಾರ್ಗವಿದೆ ಎನ್ನುವ ಮಾತಿನಂತೆ, ಈ ಸಮಸ್ಯೆಯನ್ನು ಬಗೆಹರಿಸಲು ಸುಲಭ ಮತ್ತು ಉಪಯುಕ್ತ ವಿಧಾನಗಳು ಸಾಕಷ್ಟಿವೆ. ಆದರೆ ಇವುಗಳನ್ನು ಕಟ್ಟುನಿಟ್ಟಾಗಿ  ಅನುಷ್ಠಾನಿಸುವ ಇಚ್ಛಾಶಕ್ತಿ ಸರಕಾರ ಮತ್ತು ಪ್ರಜೆಗಳಲ್ಲಿ ಇರಲೇಬೇಕಾಗುತ್ತದೆ.
ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಯಾದಿಯಲ್ಲಿರುವ ಅಮೆರಿಕ, ಇಂಗ್ಲೆಂಡ್, ಜಪಾನ್, ಜರ್ಮನಿ, ಡೆನ್ಮಾರ್ಕ್ ಮತ್ತಿತರ ದೇಶಗಳು ಈಗಾಗಲೇ ಇಂತಹ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಿ ಬಳಸುವ ಸಲುವಾಗಿ ಅನೇಕ ನಿಯಮಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಅನುಷ್ಠಾನಿಸಿವೆ. ಕಟ್ಟಡಗಳನ್ನು ಭಗ್ನಗೊಳಿಸುವಾಗ ಲಭಿಸುವ ಇಟ್ಟಿಗೆ, ಕಲ್ಲುಗಳು ಮತ್ತು ಕಾಂಕ್ರೀಟ್ ತುಂಡುಗಳನ್ನು ಹುಡಿಮಾಡಿದ ಬಳಿಕ, ಇದನ್ನು ನೂತನ ರಸ್ತೆಗಳ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಈ ದೇಶಗಳು ತ್ಯಾಜ್ಯಗಳನ್ನು ಬಳಸಿ ನೂತನ ರಸ್ತೆಗಳನ್ನು ನಿರ್ಮಿಸುವುದಾದಲ್ಲಿ, ಈ ವಿಧಾನವನ್ನು ನಾವೂ ಅನುಷ್ಠಾನಿಸುವುದು ಅಸಾಧ್ಯವೇನಲ್ಲ.ತತ್ಪರಿಣಾಮವಾಗಿ ನಿರ್ಮಾಣ ಕಾಮಗಾರಿಗಳ ವೆಚ್ಚ ಕಡಿಮೆಯಾಗುವುದರೊಂದಿಗೆ, ನಿರುಪಯುಕ್ತ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಸುಲಭಸಾಧ್ಯವೆನಿಸಲಿದೆ. ಇದಕ್ಕೂ ಮಿಗಿಲಾಗಿ ಮುನಿಸಿಪಲ್ ಕಾಯಿದೆಯಂತೆ “ ಲ್ಯಾಂಡ್ ಫಿಲ್ ಸೈಟ್ “ ಗಳಲ್ಲಿ ಸುರಿಯಬೇಕಾದ ತ್ಯಾಜ್ಯಗಳನ್ನು ಈ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ, ಇರುವ ಲ್ಯಾಂಡ್ ಫಿಲ್ ಸೈಟ್ ಗಳ ಆಯುಷ್ಯವನ್ನು ಹೆಚ್ಚಿಸಬಹುದಾಗಿದೆ.

ಕೊನೆಯ ಮಾತು

ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿರುವ ನಮ್ಮ ದೇಶದಲ್ಲಿ  ರಸ್ತೆಗಳ ದುರಸ್ತಿ, ಪುನರ್ ನವೀಕರಣ ಮತ್ತು ನೂತನ ರಸ್ತೆಗಳ ನಿರ್ಮಾಣ ನಿರಂತರವಾಗಿ ನಡೆಯುತ್ತಿದೆ. ಅಂತೆಯೇ ನಮ್ಮಲ್ಲಿ ಉತ್ಪನ್ನವಾಗುತ್ತಿರುವ ಕಟ್ಟಡ ತ್ಯಾಜ್ಯಗಳ ಪ್ರಮಾಣವೂ ದಿನೇದಿನೇ ಹೆಚ್ಚುತ್ತಿದೆ. ಈ ತ್ಯಾಜ್ಯಗಳನ್ನು ಬಳಸಿ ನೂತನ ರಸ್ತೆಗಳನ್ನು ನಿರ್ಮಿಸುವ ಮೂಲಕ ಉಳಿತಾಯವಾಗುವ ಹಣವನ್ನು ಬಳಸುವ ಮೂಲಕ ಇನ್ನಷ್ಟು ಹೊಸ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಇದಕ್ಕೂ ಮಿಗಿಲಾಗಿ ನೂತನ ರಸ್ತೆಗಳ ನಿರ್ಮಾಣದಲ್ಲಿ ತ್ಯಾಜ್ಯ ಪ್ಲಾಸ್ಟಿಕ್ ಬಳಸಿದಲ್ಲಿ, ಈ ರಸ್ತೆಗಳು ಸುದೀರ್ಘಕಾಲ ಬಾಳ್ವಿಕೆ ಬರುವುದಲ್ಲದೆ, ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬಹುದಾಗಿದೆ. ಆದರೆ ನಮ್ಮನ್ನಾಳುವವರು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧರಿರುವರೇ ಎನ್ನುವುದು “ ಮಿಲಿಯನ್ ಡಾಲರ್ “ ಪ್ರಶ್ನೆಯಾಗಿದೆ!.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು


Monday, October 30, 2017

BREAST CANCER - CONSULT A SPECIALIST DOCTOR


 ಸ್ತನ ಕ್ಯಾನ್ಸರ್ : ಅರಿವು ಮೂಡಿಸುವ ಮಾಸ ಅಕ್ಟೋಬರ್ 

ಕೇವಲ ಮಧ್ಯವಯಸ್ಸನ್ನು ಮೀರಿದ ಮಹಿಳೆಯರನ್ನು ಮಾತ್ರ ಬಾಧಿಸುವ ವ್ಯಾಧಿಯೆಂದು ಅನೇಕ ಭಾರತೀಯರು ಇಂದಿಗೂ ನಂಬಿರುವ ಸ್ತನಕ್ಯಾನ್ಸರ್ ವ್ಯಾಧಿಯು, ಹದಿಹರೆಯದ ಹುಡುಗಿಯರು ಮತ್ತು ತರುಣಿಯರನ್ನೂ ಪೀಡಿಸಬಲ್ಲದು. ವಿಶೇಷವೆಂದರೆ ಈ ವ್ಯಾಧಿಯು ಕೇವಲ ಮಹಿಳೆಯರನ್ನು ಮಾತ್ರವಲ್ಲ, ಅತ್ಯಲ್ಪ ಪ್ರಮಾಣದ ಪುರುಷರನ್ನೂ ಬಾಧಿಸಬಲ್ಲದು ಎಂದು ನಿಮಗೂ ತಿಳಿದಿರಲಾರದು. ಈ ವಿಶಿಷ್ಟ ವ್ಯಾಧಿಯ ಬಗ್ಗೆ ನೀವು ತಿಳಿದಿರಲೇಬೇಕಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಗ್ರಸ್ಥಾನ 

ಜಾಗತಿಕ ಮಟ್ಟದಲ್ಲಿ ಮಹಿಳೆಯರಲ್ಲಿ ಪತ್ತೆಯಾಗುತ್ತಿರುವ ವೈವಿಧ್ಯಮಯ ಕ್ಯಾನ್ಸರ್ ಗಳಲ್ಲಿ ಸ್ತನ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ಈ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚುವುದರೊಂದಿಗೆ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ಇದರ ಮಾರಕತೆಯನ್ನು ನಿಶ್ಚಿತವಾಗಿಯೂ ನಿಯಂತ್ರಿಸಬಹುದಾಗಿದೆ. ಈ ಸಂದೇಶದೊಂದಿಗೆ, ಈ ವ್ಯಾಧಿಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇನ್ನಿತರ ಸಂಘಟನೆಗಳು ಜೊತೆಗೂಡಿ, ವರ್ಷಂಪ್ರತಿ ಅಕ್ಟೋಬರ್ ತಿಂಗಳನ್ನು " ಗುಲಾಬಿ ಮಾಸ " ವನ್ನಾಗಿ ಆಚರಿಸುತ್ತವೆ. ಹಾಗೂ ಇದಕ್ಕಾಗಿ ಗುಲಾಬಿ ವರ್ಣದ ರಿಬ್ಬನನ್ನು ಲಾಂಛನವನ್ನಾಗಿ ಬಳಸಲಾಗುತ್ತಿದೆ.  

ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಬಗ್ಗೆ ನಿಖರವಾದ ಅಂಕಿಅಂಶಗಳು ಲಭ್ಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿರುವ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಇಂತಹ ಮಾಹಿತಿಯನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ಅವಶ್ಯಕ ವಿವರಗಳನ್ನು ದಾಖಲಿಸಿಕೊಳ್ಳುವ ಪದ್ದತಿಯು ಸಮರ್ಪಕವಾಗಿ  ಅನುಷ್ಠಾನಗೊಂಡಿಲ್ಲ. ಆದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ಅಭಿಪ್ರಾಯದಂತೆ, ಭಾರತದ ಪ್ರತಿ ೨೨ ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ ನಿಂದ ಪೀಡಿತರಾಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬಾಕೆಯು, ತನ್ನ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ ಗೆ ಈಡಾಗುವ ಸಾಧ್ಯತೆಗಳಿವೆ.  ಮಹಿಳೆಯರ ವಯಸ್ಸು ಹೆಚ್ಚಾದಂತೆಯೇ, ಇದರ ಸಂಭಾವ್ಯತೆಯೂ ಹೆಚ್ಚುತ್ತದೆ.

ಕೆಲವೇ ದಶಕಗಳ ಹಿಂದೆ ೫೦ ವರ್ಷ ಮೀರಿದ ಮಹಿಳೆಯರನ್ನು ಮಾತ್ರ ಬಾಧಿಸುತ್ತಿದ್ದ ಸ್ತನ ಕ್ಯಾನ್ಸರ್, ಇತ್ತೀಚಿನ ಕೆಲವರ್ಷಗಳಿಂದ ೨೫ ರಿಂದ ೫೦ ವರ್ಷ ವಯೋಮಾನದವರಲ್ಲೂ ಪತ್ತೆಯಾಗುತ್ತಿದೆ. ಪ್ರಸ್ತುತ ಪತ್ತೆಯಾಗುತ್ತಿರುವ ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. ೬೫ ರಿಂದ ೭೦ ರಷ್ಟು ೫೦ ವರ್ಷ ಕಳೆದ ಮತ್ತು ಶೇ. ೩೦ ರಿಂದ ೩೫ ರಷ್ಟು ಪ್ರಕರಣಗಳು ೫೦ ವರ್ಷಕ್ಕಿಂತ ಕೆಳಗಿನವರಲ್ಲಿ ಪತ್ತೆಯಾಗುತ್ತಿವೆ.

ವಿಶೇಷವೆಂದರೆ ಶೇ. ೭೦ ಕ್ಕೂ ಅಧಿಕ ಪ್ರಕರಣಗಳು ಉಲ್ಬಣಿಸಿದ ಸ್ಥಿತಿಯಲ್ಲಿ ಪತ್ತೆಯಾಗುತ್ತಿರುವುದರಿಂದ, ಈ ರೋಗಿಗಳು ಬದುಕಿ ಉಳಿಯುವ ಸಾಧ್ಯತೆ ಕಡಿಮೆಯಾಗುವುದರೊಂದಿಗೆ  ಅಕಾಲಿಕ ಮರಣದ ಪ್ರಮಾಣವೂ ಹೆಚ್ಚುತ್ತಿದೆ.  

ಕಾರಣವೇನು?

ಸ್ತನಗಳ ಕ್ಯಾನ್ಸರ್ ಉದ್ಭವಿಸಲು ನಿಖರವಾದ ಹಾಗೂ ನಿರ್ದಿಷ್ಟವಾದ ಕಾರಣಗಳು ಏನೆಂದು ಹೇಳಲಾಗದು. ಆದರೆ ಈ ವ್ಯಾಧಿಯ ಸಂಭಾವ್ಯತೆಗೆ ಸಂಬಂಧಿಸಿದಂತೆ ಕೆಲವೊಂದು ಅಪಾಯಕಾರಿ ಅಂಶಗಳು ಇಂತಿವೆ. ಇವುಗಳಲ್ಲಿ ಮೇಲೆ ನಮೂದಿಸಿದಂತೆ ಲಿಂಗ ಮತ್ತು ವಯಸ್ಸು, ೧೨ ವರ್ಷ ವಯಸ್ಸಿಗೆ ಮುನ್ನ ಪುಷ್ಪವತಿಯರಾಗಿದ್ದ ಬಾಲಕಿಯರು, ೫೫ ವರ್ಷ ವಯಸ್ಸಿನ ಬಳಿಕ ಋತುಬಂಧವಾದ ಸ್ತ್ರೀಯರು, ಅವಿವಾಹಿತರು, ಸಂತಾನ ಪ್ರಾಪ್ತಿಯಾಗದವರು, ೪೦ ವರ್ಷ ವಯಸ್ಸಿನ ಬಳಿಕ ಮಕ್ಕಳನ್ನು ಹೆತ್ತವರು, ಕಂದನಿಗೆ ತನ್ನ ಮೊಲೆಹಾಲನ್ನು ಊಡಿಸದವರು, ಗರ್ಭನಿರೋಧಕ ಔಷದಗಳನ್ನು ಸೇವಿಸುತ್ತಿದ್ದ ಮತ್ತು ಸೇವಿಸುತ್ತಿರುವವರು, ಅನ್ಯ ಕಾರಣಗಳಿಗಾಗಿ ಹಾರ್ಮೋನ್ ಯುಕ್ತ ಔಷದಗಳನ್ನು ಸೇವಿಸುವ ಮಹಿಳೆಯರು ಮತ್ತು ಸ್ತನ ಕ್ಯಾನ್ಸರ್ ಪೀಡಿತರ ಸಮೀಪದ ಸಂಬಂಧಿಗಳು ಈ ವ್ಯಾಧಿಗೆ ತುತ್ತಾಗುವ ಸಾಧ್ಯತೆಗಳಿವೆ. ಇದಲ್ಲದೆ ಅನುವಂಶಿಕತೆ ಮತ್ತು ಪರಿವರ್ತಿತ ಹಾಗೂ ಅಸಾಮಾನ್ಯ ವಂಶವಾಹಿನಿಗಳ ಇರುವಿಕೆ, ಅಧಿಕ ತೂಕ ಹಾಗೂ ಅತಿ ಬೊಜ್ಜು, ಅತಿಯಾದ ಧೂಮ ಹಾಗೂ ಮದ್ಯಪಾನ ಮತ್ತು ನಿರುಪಯುಕ್ತ ಆಹಾರಗಳನ್ನು ( ಜಂಕ್ ಫುಡ್ ) ಅತಿಯಾಗಿ ಸೇವಿಸುವ ಹವ್ಯಾಸ ಇರುವವರಲ್ಲೂ, ಈ ವ್ಯಾಧಿ ತಲೆದೋರುವ ಸಾಧ್ಯತೆಗಳು ಹೆಚ್ಚಿವೆ. 

ಜಾಗತಿಕ ಮಟ್ಟದಲ್ಲಿ ವರ್ಷಂಪ್ರತಿ ೧.೩೮ ದಶಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ,೫೮,೦೦೦ ರೋಗಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ಸಮಸ್ಯೆಗೆ ಅಭಿವೃದ್ಧಿ ಹೊಂದಿರುವ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ದೇಶಗಳೂ ಅಪವಾದವೆನಿಸಿಲ್ಲ. ಆದರೆ ಮಧ್ಯಮ ಮತ್ತು ಅಲ್ಪ ಆದಾಯವಿರುವ ದೇಶಗಳಲ್ಲಿ ಸ್ತನ ಕ್ಯಾನ್ಸರ್ ವ್ಯಾಧಿಗೆ ಬಲಿಯಾಗುತ್ತಿರುವವರ ಪ್ರಮಾಣವು ೨,೬೯,೦೦೦ ಕ್ಕೂ ಹೆಚ್ಚಿದೆ. 

ಸ್ತನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯು ವರ್ಷಂಪ್ರತಿ ನಿಧಾನವಾಗಿ ಆದರೆ ನಿಶ್ಚಿತವಾಗಿ ಹೆಚ್ಚುತ್ತಲೇ ಇದ್ದು, ಇದಕ್ಕೆ ಅನುಗುಣವಾಗಿ ವ್ಯಾಧಿಪೀಡಿತರ ಮರಣದ ಪ್ರಮಾಣವೂ ವೃದ್ಧಿಸುತ್ತಿದೆ. ಆದರೆ ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಇದನ್ನು ಗುಣಪಡಿಸುವ ಸಾಧ್ಯತೆಗಳು ಶೇ.೯೮ ರಷ್ಟಿದ್ದು, ವಿಳಂಬವಾದಲ್ಲಿ ಇದರ ಪ್ರಮಾಣವು ಕೇವಲ ಶೇ. ೨೭ ರಷ್ಟಿರುತ್ತದೆ.  

ಪ್ರಸ್ತುತ ಭಾರತದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಅಧಿಕ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಗ್ರಾಮೀಣ ಜನರ ಅಜ್ಞಾನ, ವಿದ್ಯಾವಂತರ ಲಜ್ಜೆ ಮತ್ತು ತಮ್ಮ ಶಾರೀರಿಕ ಆರೋಗ್ಯದ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಥವಾ ಮುಚ್ಚಿಡುವ ಹವ್ಯಾಸಗಳಿಂದಾಗಿ, ಗಣನೀಯ ಪ್ರಮಾಣದ ಪ್ರಕರಣಗಳು ವೈದ್ಯರ ಗಮನಕ್ಕೆ ಬರುವುದೇ ಇಲ್ಲ!. 

ಪ್ರಾಯಶಃ ಇಂತಹ ಕಾರಣಗಳಿಂದಾಗಿಯೇ ಬಹುತೇಕ ಮಹಿಳೆಯರು ತಮ್ಮ ಸ್ತನಗಳಲ್ಲಿ ಪುಟ್ಟ ಹುಣಸೆ ಬೀಜದಷ್ಟು ಗಾತ್ರದ ಗೆಡ್ಡೆಯೊಂದು ಇರುವುದನ್ನು ( ಪ್ರಾಥಮಿಕ ಹಂತ ) ಅರಿತರೂ, ವೈದ್ಯರನ್ನು ಸಂದರ್ಶಿಸುವುದಿಲ್ಲ. ಈ ಗೆಡ್ಡೆಯು ತುಸು ದೊಡ್ಡದಾದ ಬಳಿಕ ( ತುಸು ವೃದ್ಧಿಸಿದ ಹಂತ ) ಮತ್ತು ಇನ್ನು ಕೆಲವರು ಈ ಗೆಡ್ಡೆಯಲ್ಲಿ ತೀವ್ರ ನೋವು ಆರಂಭಗೊಂಡ ಬಳಿಕ ( ಮೂರನೇ ಹಂತ ) ವೈದ್ಯರನ್ನು ಭೇಟಿಯಾಗುತ್ತಾರೆ. ತತ್ಪರಿಣಾಮವಾಗಿ ಈ ರೋಗಿಗಳು ಸಾಕಷ್ಟು ಶಾರೀರಿಕ ಹಾಗೂ ಮಾನಸಿಕ ಯಾತನೆಗಳೊಂದಿಗೆ, ಆರ್ಥಿಕ ಸಂಕಷ್ಟಗಳಿಗೂ ಒಳಗಾಗುತ್ತಾರೆ. 

ಎಲ್ಲವೂ ಕ್ಯಾನ್ಸರ್ ಅಲ್ಲ 

ಅನೇಕ ವಿದ್ಯಾವಂತರೂ ಸ್ತನಗಳಲ್ಲಿ ಉದ್ಭವಿಸುವ ಗೆಡ್ಡೆಗಳೆಲ್ಲವೂ ಕ್ಯಾನ್ಸರ್ ಎಂದೇ ನಂಬುತ್ತಾರೆ. ಆದರೆ ನಿಜ ಹೇಳಬೇಕಿದ್ದಲ್ಲಿ, ಇವುಗಳಲ್ಲಿ ಶೇ. ೭೫ ರಷ್ಟು ಗೆಡ್ಡೆಗಳು ನಿರಪಾಯಕಾರಿಗಳೇ ಆಗಿರುತ್ತವೆ. ಆದುದರಿಂದ ಯಾವುದೇ ಕಾರಣಕ್ಕೂ ಇಂತಹ ಗೆಡ್ಡೆಗಳು ಉದ್ಭವಿಸಿದಲ್ಲಿ, ಇದನ್ನು ನಿರಪಾಯಕಾರಿ ಎಂದು ನೀವಾಗಿ ನಿರ್ಧರಿಸಿ ಮುಚ್ಚಿಡುವ ಪ್ರಯತ್ನವು " ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ " ದಂತಾಗುವುದು ಎನ್ನುವುದನ್ನು ಮರೆಯದಿರಿ. ಈ ಮಾಹಿತಿಯನ್ನು ನಿಮ್ಮ ಬಂಧುಮಿತ್ರರೊಂದಿಗೆ ಹಂಚಿಕೊಳ್ಳುವ ಮೂಲಕ " ಗುಲಾಬಿ ಮಾಸ " ದ ಆಚರಣೆಯಲ್ಲಿ ನೀವೂ ಸಕ್ರಿಯವಾಗಿ ಪಾಲ್ಗೊಳ್ಳಿರಿ. ತನ್ಮೂಲಕ ಸ್ತನ ಕ್ಯಾನ್ಸರ್ ನ ಮಾರಕತೆಯನ್ನು ತಡೆಗಟ್ಟಲು ಸಹಕರಿಸಿ. 

ಸ್ವಯಂ ಸ್ತನ ಪರೀಕ್ಷೆ 

ಮಾರಕವೆನಿಸಬಲ್ಲ ಸ್ತನ ಕ್ಯಾನ್ಸರ್ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸ್ವಯಂ ಸ್ತನ ಪರೀಕ್ಷೆಯು ಅತ್ಯಂತ ಸರಳ ಹಾಗೂ ಸುಲಭ ವಿಧಾನವೂ ಹೌದು. ಹದಿಹರೆಯದ ಹುಡುಗಿಯರಿಂದ ಆರಂಭಿಸಿ, ವಯೋವೃದ್ಧ ಮಹಿಳೆಯರ ತನಕ ಪ್ರತಿಯೊಬ್ಬರೂ ಈ ಸರಳ ವಿದಾನವನ್ನು ತಮ್ಮ ಪರಿಚಿತ ವೈದ್ಯರಿಂದ ಕೇಳಿ ತಿಳಿದುಕೊಳ್ಳಬಹುದಾಗಿದೆ. ಬಳಿಕ ಪ್ರತಿ ತಿಂಗಳಲ್ಲೂ ಸ್ವಯಂ ಸ್ತನ ಪರೀಕ್ಷೆಯನ್ನು ನಡೆಸುತ್ತಿದ್ದಲ್ಲಿ, ಅಸಾಮಾನ್ಯ ಬದಲಾವಣೆಗಳನ್ನು ಸುಲಭದಲ್ಲೇ ಪತ್ತೆಹಚ್ಚಬಹುದಾಗಿದೆ. ಜೊತೆಗೆ ಸ್ತನಗಳಲ್ಲಿ ನೋವು, ಜ್ವರ, ಸ್ತನ ಹಾಗೂ ಕಂಕುಳಿನಲ್ಲಿ ಇರುವ ಲಿಂಫ್ ಗ್ರಂಥಿಗಳಲ್ಲಿ ಬಾವು, ಸ್ತನಗಳಲ್ಲಿ ಉದ್ಭವಿಸಿರುವ ಚಿಕ್ಕಪುಟ್ಟ ಗೆಡ್ಡೆಗಳು ಅಥವಾ ಯಾವುದೇ ರೀತಿಯ ಅಸಾಮಾನ್ಯ ಬದಲಾವಣೆಗಳನ್ನು ಗಮನಿಸಿದೊಡನೆ, ತಜ್ಞ ವೈದ್ಯರನ್ನು ಸಂದರ್ಶಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಅಯಾಚಿತ ಸಮಸ್ಯೆಗಳನ್ನು ನಿಶ್ಚಿತವಾಗಿ ತಡೆಗಟ್ಟಬಹುದು. 

ಅಂತಿಮವಾಗಿ ಹೇಳುವುದಾದಲ್ಲಿ ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಪ್ರಾಥಮಿಕ ಹಂತದಲ್ಲೇ ಪತ್ತೆಯಾಗುತ್ತಿರುವ ಪ್ರಮಾಣವು ಅತ್ಯಲ್ಪವಾಗಿದೆ. ಈ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಜನಜಾಗೃತಿಯನ್ನು ಮೂಡಿಸಬೇಕಾಗಿದೆ. ತನ್ಮೂಲಕ ಇದಕ್ಕೆ ಬಲಿಯಾಗುವ ರೋಗಿಗಳ ಪ್ರಮಾಣವನ್ನೂ ಕನಿಷ್ಠ ಶೇ.೩೦ ರಷ್ಟು ಕಡಿಮೆ ಮಾಡಬಹುದಾಗಿದೆ. 

ನಿಮಗಿದು ಗೊತ್ತೇ?

ಇತ್ತೀಚೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆ ಬಿಡುಗಡೆ ಮಾಡಿದ ವರದಿಯಂತೆ, ಬೆಂಗಳೂರಿನಲ್ಲಿ ಪತ್ತೆಯಾಗುತ್ತಿರುವ ವೈವಿಧ್ಯಮಯ ಕ್ಯಾನ್ಸರ್ ಪ್ರಕರಣಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಸ್ತನ ಕ್ಯಾನ್ಸರ್ ಪ್ರಕರಣಗಳ ಪ್ರಮಾಣವು ಶೇ. ೨೭ ರಷ್ಟಿದೆ!. ವಿಶೇಷವೆಂದರೆ  ದೆಹಲಿಯಲ್ಲಿ  ಈ ಪ್ರಮಾಣವು ಶೇ. ೪೧ ರಷ್ಟಿದ್ದು, ಸ್ತನ ಕ್ಯಾನ್ಸರ್ ನ ರಾಜಧಾನಿ ಎನಿಸಿದೆ!.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು



Sunday, June 25, 2017

SAY NO TO DRUGS


                                ಜೂನ್ 26 – ವಿಶ್ವ ಮಾದಕದ್ರವ್ಯ ವಿರೋಧಿ ದಿನ
       ಮಾದಕ ದ್ರವ್ಯಗಳ ವ್ಯಸನ : ನಿರರ್ಥಕವೆನಿಸುವುದು ಜೀವನ

ಕಳೆದ ಹಲವಾರು ದಶಕಗಳಿಂದ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಮಾದಕ ದ್ರವ್ಯಗಳ ಸೇವನೆಯ ಚಟ ದಿನೇದಿನೇ ಹೆಚ್ಚುತ್ತಿದೆ. ಈ ಅಪಾಯಕಾರಿ ವ್ಯಸನಕ್ಕೆ ಯುವಜನರೊಂದಿಗೆ ಪುಟ್ಟ ಮಕ್ಕಳೂ ಬಲಿಯಾಗುತ್ತಿರುವುದು ಗಾಬರಿ ಹುಟ್ಟಿಸುವಂತಿದೆ. ಈ ವಿಶ್ವವ್ಯಾಪಿ ಸಮಸ್ಯೆಗೆ ನಮ್ಮ ದೇಶವೂ ಅಪವಾದವೆನಿಸಿಲ್ಲ. ಅಂತೆಯೇ ಈ ಸಮಸ್ಯೆಗೆ ಬಡ, ಮಧ್ಯಮ ಆದಾಯದ ಮತ್ತು ಶ್ರೀಮಂತ ರಾಷ್ಟ್ರಗಳೆನ್ನುವ ಭೇದವೂ ಇಲ್ಲವೆಂದಲ್ಲಿ ನೀವೂ ನಂಬಲಾರಿರಿ.

ಮಾದಕ ದ್ರವ್ಯಗಳ ಸೇವನೆಯ ಪರಿಣಾಮವಾಗಿ ಉದ್ಭವಿಸುತ್ತಿರುವ ವೈವಿಧ್ಯಮಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಯುನೈಟೆಡ್ ನೇಶನ್ಸ್ ಸಂಸ್ಥೆಯು, 1987 ರ ಡಿಸೆಂಬರ್ 7 ರಂದು ಆಯೋಜಿಸಿದ್ದ ಅಧಿವೇಶನದಲ್ಲಿ ಪ್ರತಿವರ್ಷ ಜೂನ್ 26 ರಂದು “ ವಿಶ್ವ ಮಾದಕ ದ್ರವ್ಯ ವಿರೋಧಿ ದಿನ “ ವನ್ನಾಗಿ ಆಚರಿಸುವ ನಿರ್ಣಯವನ್ನು ಅಂಗೀಕರಿಸಿತ್ತು. ತನ್ಮೂಲಕ ಈ ಸಮಸ್ಯೆಯ ವಿರುದ್ಧ ಹೋರಾಟವನ್ನು ನಡೆಸುವ ನಿಟ್ಟಿನಲ್ಲಿ, ವಿವಿಧ ದೇಶಗಳ ಸಹಕಾರದೊಂದಿಗೆ “ ಮಾದಕ ದ್ರವ್ಯ ಮುಕ್ತ ಜಗತ್ತು “ ಎನ್ನುವ ಧ್ಯೇಯವನ್ನು ಅನುಷ್ಠಾನಗೊಳಿಸಲು ನಿರ್ಧರಿಸಿತ್ತು. 1988 ರಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಾದಕ ದ್ರವ್ಯ ವಿರೋಧಿ ದಿನವನ್ನು ಆಚರಿಸಲಾಗುತ್ತಿದ್ದು, ಈ ವರ್ಷ “ ಮಕ್ಕಳ ಮತ್ತು ಯುವಜನರ ಮಾತುಗಳನ್ನು ಆಲಿಸುವುದು, ಅವರ ಆರೋಗ್ಯಪೂರ್ಣ ಮತ್ತು ಸುರಕ್ಷಿತ ಬೆಳವಣಿಗೆಯ ಮೊದಲ ಹೆಜ್ಜೆ “ ಎನ್ನುವ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ವಿಶೇಷವಾಗಿ ಯುವಜನರ ಜೀವನವನ್ನೇ ನಾಶಪಡಿಸುತ್ತಿರುವ ಮಾದಕದ್ರವ್ಯಗಳ ವಿರುದ್ಧ ನಡೆಯುತ್ತಿರುವ ಈ ಹೋರಾಟ ಯಶಸ್ವಿಯಾಗಬೇಕಿದ್ದಲ್ಲಿ, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಸರ್ಕಾರಗಳು ಮತ್ತು ಪ್ರತಿಯೊಬ್ಬ ಪ್ರಜೆಯ ಮನಸ್ಪೂರ್ವಕ ಸಹಕಾರ ಅತ್ಯವಶ್ಯಕವೆನಿಸುವುದು.

ಸಂಘಟಿತ ಪ್ರಯತ್ನ

ಮಾದಕದ್ರವ್ಯಗಳ ವಿರುದ್ಧ ಹೋರಾಟದಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತ ಪ್ರಯತ್ನಗಳು ನಡೆಯುತ್ತಿದ್ದರೂ, ಈ ಭಯಾನಕ ಮತ್ತು ಅಪಾಯಕಾರಿ ಸಮಸ್ಯೆಯು ಅನಿಯಂತ್ರಿತವಾಗಿ ಮುಂದುವರೆಯುತ್ತಿದೆ. ತತ್ಪರಿಣಾಮವಾಗಿ ಸಾರ್ವಜನಿಕ ಆರೋಗ್ಯ, ಸುರಕ್ಷತೆ ಮತ್ತು ನೆಮ್ಮದಿಗಳೊಂದಿಗೆ, ವಿವಿಧ ದೇಶಗಳ ಸುರಕ್ಷತೆ ಮತ್ತು ಸ್ವಾಯತ್ತತೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಅಧಿಕತಮ ದೇಶಗಳ ಯುವಜನತೆಯನ್ನು ಶಾಪದೋಪಾದಿಯಲ್ಲಿ ಪೀಡಿಸುತ್ತಿರುವ ಈ ಗಂಭೀರ ಸಮಸ್ಯೆಯ ವಿರುದ್ಧ ಹೋರಾಡಲು, ಜಗತ್ತಿನ ಪ್ರತಿಯೊಂದು ದೇಶಗಳ ಸರ್ಕಾರಗಳು ಆರ್ಥಿಕ ಮತ್ತು ಸಾಮಾಜಿಕ ಬೆಂಬಲಗಳನ್ನು ನೀಡುವ ಮೂಲಕ ಸಹಕರಿಸುವಂತೆ ಯುನೈಟೆಡ್ ನೇಶನ್ಸ್ ಸಂಸ್ಥೆ ಮನವಿ ಮಾಡುತ್ತಿದೆ.

ಕಳ್ಳ ಸಾಗಾಣಿಕೆ

ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸರಬರಾಜಾಗುವ ಮಾದಕದ್ರವ್ಯಗಳ ಕಳ್ಳ ಸಾಗಾಣಿಕೆಯು ನಮ್ಮ ನೆರೆಯ ಅಫ್ಘಾನಿಸ್ಥಾನ, ಪಾಕಿಸ್ತಾನ, ನೇಪಾಳ, ಬಾಂಗ್ಲಾ ದೇಶ, ಭೂತಾನ ಮತ್ತು ಶ್ರೀಲಂಕಾ ದೇಶಗಳ ಮೂಲಕ ನಡೆಯುತ್ತದೆ. ಇಂತಹ ದ್ರವ್ಯಗಳಲ್ಲಿ ಆಫೀಮು, ಗಾಂಜಾ, ಚರಸ್, ಕೊಕೇನ್ ಗಳಂತಹ ದ್ರವ್ಯಗಳಲ್ಲದೇ, ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ಕೆಲವಿಧದ ಮತ್ತೇರಿಸಬಲ್ಲ ಔಷದಗಳನ್ನೂ ಕಳ್ಳಸಾಗಾಣಿಕೆ ಮಾಡಲಾಗುತ್ತದೆ. 

ಹೆಚ್ಚುತ್ತಿರುವ ವ್ಯಸನಿಗಳು

ಲಭ್ಯ ಮಾಹಿತಿಯಂತೆ ಜಾಗತಿಕ ಮಟ್ಟದಲ್ಲಿ ಸುಮಾರು 200 ದಶಲಕ್ಷಕ್ಕೂ ಅಧಿಕ ಜನರು ವಿವಿಧ ರೀತಿಯ ಮಾದಕ ದ್ರವ್ಯಗಳ ದಾಸಾನುದಾಸರಾಗಿದ್ದಾರೆ. ಇವರಲ್ಲಿ 162 ದಶಲಕ್ಷ ಜನರು ಕೆನಬಿಸ್, ಮರಿಹುವಾನ, ಹಶೀಶ್ ಹಾಗೂ ಟಿ. ಸಿ. ಎಚ್, 35 ದಶಲಕ್ಷ ಜನರು ಎ. ಟಿ. ಎಸ್, ಎಕ್ಸ್ಟಸಿ ಹಾಗೂ ಮೆಥ ಆಮ್ಫಿಟಮೈನ್, 16 ದಶಲಕ್ಷ ವ್ಯಸನಿಗಳು ಓಪಿಯಂ, ಮೊರ್ಫಿನ್ ಮತ್ತು ಅಫೀಮಿನ ಕೃತಕ ಉತ್ಪನ್ನಗಳು ಮತ್ತು 13 ದಶಲಕ್ಷ ವ್ಯಸನಿಗಳು ಕೊಕೇನ್ ನಂತಹ ಮಾದಕದ್ರವ್ಯಗಳನ್ನು ಸೇವಿಸುತ್ತಿದ್ದಾರೆ. ಈ ಮಾದಕ ವ್ಯಸನಿಗಳು ತಮ್ಮ ದೈನಂದಿನ ಸೇವನೆಯ ಮಾದಕದ್ರವ್ಯಗಳನ್ನು ಖರೀದಿಸಲು ಹಣದ ಅಭಾವವಿದ್ದಲ್ಲಿ, ಅಮಾಯಕರ ಮೇಲೆ ಹಲ್ಲೆನಡೆಸುವ, ಸುಲಿಗೆ ಮಾಡುವ ಮತ್ತು ಅನೇಕ ಸಂದರ್ಭಗಳಲ್ಲಿ ಕೊಲೆಯಂತಹ ಪಾತಕಗಳನ್ನು ನಡೆಸಿರುವ ಉದಾಹರಣೆಗಳು ಸಾಕಷ್ಟಿವೆ.

ಬಹುತೇಕ ವ್ಯಸನಿಗಳು ತಮ್ಮ ಸ್ನೇಹಿತರ ಒತ್ತಾಯಕ್ಕೆ ಮಣಿದು ಅಥವಾ ಅನ್ಯ ಕಾರಣಗಳಿಂದ ಮಾದಕದ್ರವ್ಯಗಳ ಸೇವನೆಯನ್ನು ಆರಂಭಿಸುತ್ತಾರೆ. ಕಾಲಕ್ರಮೇಣ ಇವುಗಳ ಸೇವನೆಯ ವ್ಯಸನಕ್ಕೆ ಈಡಾಗಿ, ತಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಗಳೊಂದಿಗೆ, ಸಾಕಷ್ಟು ಹಣದೊಂದಿಗೆ, ತಮ್ಮ ಮರ್ಯಾದೆಯನ್ನೂ ಕಳೆದುಕೊಳ್ಳುತ್ತಾರೆ. ಜೊತೆಗೆ ತಮ್ಮ ಕುಟುಂಬದ ಅನ್ಯ ಸದಸ್ಯರ ನೆಮ್ಮದಿಯನ್ನು ಕೆಡಿಸುವುದರೊಂದಿಗೆ, ಅವರ ಸಾಮಾಜಿಕ ಜೀವನಕ್ಕೂ ಅಡ್ಡಿ ಆತಂಕಗಳನ್ನು ತಂದೊಡ್ಡುತ್ತಾರೆ. ಅನೇಕ ವ್ಯಸನಿಗಳು ಗಂಭೀರ ಸ್ವರೂಪದ ಶಾರೀರಿಕ ಹಾಗೂ ಮಾನಸಿಕ ಕಾಯಿಲೆಗಳಿಗೆ ಈಡಾಗುತ್ತಾರೆ. ದೀರ್ಘಕಾಲೀನ ವ್ಯಸನಿಗಳು ಕಾರಣಾಂತರಗಳಿಂದ ಆತ್ಮಹತ್ಯೆಗೆ ಶರಣಾಗುವುದು ಕೂಡಾ ಅಪರೂಪವೇನಲ್ಲ.

ನಮ್ಮ ದೇಶದಲ್ಲಿ ಯುವಜನರು, ಹದಿಹರೆಯದವರಲ್ಲದೇ, ಶಾಲಾ ವಿದ್ಯಾರ್ಥಿಗಳೂ ಮಾದಕದ್ರವ್ಯ ಸೇವನೆಯ ಚಟವನ್ನು ಹೊಂದಿದ್ದಾರೆ. ಈ ವಿಚಾರದಲ್ಲಿ ದೇಶದ ಅನ್ಯ ರಾಜ್ಯಗಳಿಗೆ ಹೋಲಿಸಿದಾಗ, ಕರ್ನಾಟಕವೂ ಉನ್ನತ ಸ್ಥಾನದಲ್ಲಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಸುಮಾರು ಎರಡು ವರ್ಷಗಳ ಹಿಂದೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿಗಳು ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬನನ್ನು ಬಂಧಿಸಿದ್ದು, ಈತನು “ ರೇವ್ ಪಾರ್ಟಿ “ ಗಳಿಗೆ ಮಾದಕದ್ರವ್ಯಗಳನ್ನು ಸರಬರಾಜು ಮಾಡುವುದರೊಂದಿಗೆ, ಸ್ವಯಂ ವ್ಯಸನಿಯೂ ಆಗಿದ್ದ ವಿಚಾರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಈತನು ಸರಬರಾಜು ಮಾಡುತ್ತಿದ್ದ ದ್ರವ್ಯಗಳಲ್ಲಿ ಎಲ್ ಎಸ್ ಡಿ ಮತ್ತು ಎಂ ಡಿ ಎಂ ಎ ಎನ್ನುವ ಚಿತ್ತ ವಿಭ್ರಮೆ ಅಥವಾ ಭ್ರಾಂತಿಯನ್ನು ಮೂಡಿಸಬಲ್ಲ ಅಪಾಯಕಾರಿ ದ್ರವ್ಯಗಳು ಸೇರಿದ್ದವು. ಕೇಂದ್ರ ನರಮಂಡಲದ ಮೇಲೆ ತೀವ್ರಸ್ವರೂಪದ ದುಷ್ಪರಿಣಾಮಗಳನ್ನು ಬೀರಬಲ್ಲ ಈ ದ್ರವ್ಯಗಳು, ಸಿಜೋಫ್ರೆನಿಯಾದಂತಹ ಗಂಭೀರ ಮಾನಸಿಕ ವ್ಯಾಧಿಯಲ್ಲದೇ, ಹೃದಯಸ್ಥಂಭನ ಮತ್ತು ಮರಣಕ್ಕೂ ಕಾರಣವೆನಿಸಬಲ್ಲದು. ಇವೆಲ್ಲಾ ಮಾಹಿತಿಗಳನ್ನು ಅರಿತ ಬಳಿಕ ಮಾದಕದ್ರವ್ಯಗಳ ಸೇವನೆ ಅತ್ಯಂತ ಅಪಾಯಕಾರಿ ಎನ್ನುವುದು ಇದೀಗ ನಿಮಗೂ ಅರಿವಾಗಿರಲೇಬೇಕು. ಇದೇ ಕಾರಣದಿಂದಾಗಿ ಮಾದಕದ್ರವ್ಯಗಳ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ನೀವೂ ಕೈಜೋಡಿಸಲೇಬೇಕು.

ಕೊನೆಯ ಮಾತು

ಅಂತರ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಮಾದಕದ್ರವ್ಯ ಸೇವನೆಯ ಚಟವನ್ನು ತಡೆಗಟ್ಟಲು ಯುನೈಟೆಡ್ ನೇಶನ್ಸ್ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾಗುವ ಮೂಲಕ ನಮ್ಮ ದೇಶದಲ್ಲೂ ವೃದ್ಧಿಸುತ್ತಿರುವ ಈ ಸಮಸ್ಯೆಯನ್ನು ತೊಡೆದುಹಾಕಲು ಪ್ರಯತ್ನಿಸಬೇಕಾಗಿದೆ. ಅಂತೆಯೇ ದೇಶದ ಯುವಜನತೆ ಇಂತಹ ವ್ಯಸನಗಳಿಗೆ ಬಲಿಯಾಗದಂತೆ ತಡೆಗಟ್ಟುವ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರ ಮೇಲಿದೆ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು