Friday, February 28, 2014

DNA TEST





  ಡಿ.ಎನ್.ಎ ಪರೀಕ್ಷೆ: ಬಗೆಹರಿಸಬಹುದು ಸಮಸ್ಯೆ 

ಕೆಲ ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸಂಭವಿಸಿದ್ದ ವಿಮಾನ ದುರಂತದಲ್ಲಿ ಅನೇಕ ನತದೃಷ್ಟ ಪ್ರಯಾಣಿಕರು ಮೃತಪಡುವುದರೊಂದಿಗೆ, ಅನೇಕ ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದವು. ಇಂತಹ ಮೃತದೇಹಗಳ ಗುರುತನ್ನು ಪತ್ತೆಹಚ್ಚಲು ಇವರ ಸಮೀಪದ ಸಂಬಂಧಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಡಿ ಎನ್ ಎ ಪರೀಕ್ಷೆಯನ್ನು ನಡೆಸಲಾಗಿತ್ತು. ಶೇ. ೫೦ ರಷ್ಟು ಮೃತದೇಹಗಳನ್ನು ಈ ಪರೀಕ್ಷೆಯ ಮೂಲಕ ಗುರುತಿಸಿದ್ದರೂ, ಉಳಿದ ದೇಹಗಳ ಗುರುತನ್ನು ಪತ್ತೆಹಚ್ಚಲು ಇದು ವಿಫಲವಾಗಿತ್ತು. ಆದರೆ ಈ ವೈಫಲ್ಯಕ್ಕೆ ಪರೀಕ್ಷೆಯಲ್ಲಿನ ಲೋಪದೋಷಗಳು ಕಾರಣವಾಗಿರಲಿಲ್ಲ. ಅಪಘಾತ ಸಂಭವಿಸಿದ ಒಂದೆರಡು ದಿನಗಳಲ್ಲೇ ಸುಟ್ಟು  ಕರಕಲಾಗಿದ್ದ ಮೃತ ದೇಹಗಳನ್ನು ಬಂಧುಮಿತ್ರರು ನಿಖರವಾಗಿ ಗುರುತಿಸಲಾಗದಿದ್ದರೂ, ತಮ್ಮದೇ ಸಂಬಂಧಿಗಳ ದೇಹವೆಂದು ಭಾವಿಸಿ ಬೇರೊಂದು ಶವವನ್ನು ಕೊಂಡೊಯ್ದಿರುವುದೇ ಇದಕ್ಕೆ ಕಾರಣವೆನಿಸಿತ್ತು. ಸಾಮಾನ್ಯವಾಗಿ ಡಿ ಎನ್ ಎ ಪರೀಕ್ಷೆಯ ಯಶಸ್ಸಿನ ಪ್ರಮಾಣವು ಅತ್ಯಧಿಕವಾಗಿದ್ದು, ವೈಫಲ್ಯದ ಪ್ರಮಾಣವು ಅತ್ಯಲ್ಪವಾಗಿರುತ್ತದೆ. ಈ ರೀತಿಯಲ್ಲಿ ಜನಸಾಮಾನ್ಯರ ಮನಸ್ಸಿನಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿರುವ "ಡಿ ಎನ್ ಎ ಪರೀಕ್ಷೆ" ಯು, ಇದೇ ಕಾರಣದಿಂದಾಗಿ ಸಾಕಷ್ಟು ಪ್ರಚಾರವನ್ನು ಗಳಿಸಿದೆ. 

ಸಾಮಾನ್ಯವಾಗಿ ಕೊಲೆ, ದರೋಡೆ, ಹಲ್ಲೆ ಮತ್ತು ಅತ್ಯಾಚಾರದಂತಹ ಪ್ರಕರಣಗಳು ನಡೆದಿರುವ ಸ್ಥಳಗಳಲ್ಲಿ ದೊರೆಯಬಹುದಾದ, ಅಪರಾಧಿಗಳ ರಕ್ತ, ಚರ್ಮದ ತುಣುಕುಗಳು, ತಲೆಗೂದಲು, ವೀರ್ಯ ಇತ್ಯಾದಿಗಳು ನೈಜ ಅಪರಾಧಿಗಳನ್ನು ಪತ್ತೆಹಚ್ಚಲು ನೆರವಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಶಂಕಿತ ಅಪರಾಧಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ, ಇವುಗಳಲ್ಲಿರುವ ಜೀವಕೊಶಗಳಿಂದ ಪ್ರತ್ಯೇಕಿಸಿದ ಡಿ ಎನ್ ಎ ಅಂಶಗಳನ್ನು ಘಟನೆ ನಡೆದ ಸ್ಥಳದಲ್ಲಿ ಲಭಿಸಿದ್ದ ಮಾದರಿಗಳಲ್ಲಿರುವ ಡಿ ಎನ್ ಎ ಅಂಶಗಳೊಂದಿಗೆ ಹೋಲಿಸಿ ನೋಡುವ ಪರೀಕ್ಷಾ ವಿಧಾನವನ್ನು " ಡಿ ಎನ್ ಎ ಬೆರಳಚ್ಚು ಪರೀಕ್ಷೆ" ಎನ್ನುತ್ತಾರೆ. DNA fingerprinting ಅಥವಾ DNA profiling ಎಂದು ಕರೆಯಲ್ಪಡುವ ಈ ವೈಜ್ಞಾನಿಕ ಪರೀಕ್ಷೆಯು ಬಹುತೇಕ ಸಂದರ್ಭಗಳಲ್ಲಿ ನಿಖರವಾದ ಫಲಿತಾಂಶವನ್ನು ನೀಡುವುದಾದರೂ, ಅಪರೂಪದಲ್ಲಿ ಹಾಗೂ ಅಲ್ಪಪ್ರಮಾಣದಲ್ಲಿ ವಿಫಲವಾಗುವ ಸಾಧ್ಯತೆಗಳೂ ಇವೆ. 


  ಡಿ ಎನ್ ಎ ಎಂದರೇನು?

ಡಿಆಕ್ಸಿರೈಬೋ ನ್ಯೂಕ್ಲಿಕ್ ಎಸಿಡ್ ಅರ್ಥಾತ್ ಡಿ ಎನ್ ಎ, ಮನುಷ್ಯರು ಮತ್ತು ಅನ್ಯಜೀವಿಗಳಲ್ಲ್ಲಿರುವ ಅನುವಂಶಿಕ ದ್ರವ್ಯವಾಗಿದೆ. ಮನುಷ್ಯನ ಶರೀರದ ಬಹುತೇಕ ಜೀವಕೋಶಗಳಲ್ಲಿ ಡಿ ಎನ್ ಎ ಇದ್ದು, ಇವುಗಳಲ್ಲಿ ಅಧಿಕತಮ ಜೀವಕೋಶಗಳಲ್ಲಿರುವ ಡಿ ಎನ್ ಎ ಗಳು ಒಂದೇ ರೀತಿಯಾಗಿರುತ್ತದೆ. ಜೀವಕೋಶಗಳ ಕೋಶಕಕೇಂದ್ರಗಳಲ್ಲಿ ತುಸು ಅಧಿಕ ಪ್ರಮಾಣದಲ್ಲಿ ಮತ್ತು ಉಳಿದ ಭಾಗಗಳಲ್ಲಿ ಅಲ್ಪ ಪ್ರಮಾಣದಲ್ಲಿ ಡಿ ಎನ್ ಎ ಇರುತ್ತದೆ. ಪುರುಷರ ವೀರ್ಯ ಮತ್ತು ಸ್ತ್ರೀಯರಲ್ಲಿನ ಅಂಡಾಣುಗಳ ಮೂಲಕ ಈ ಡಿ ಎನ್ ಎ ಗಳು ಮುಂದಿನ ಸಂತತಿಗೆ ರವಾನೆಯಾಗುತ್ತವೆ. ಡಿ ಎನ್ ಎ ಗಳಲ್ಲಿ ಅಡಕವಾಗಿರುವ ಅನುವಂಶಿಕ ಮಾಹಿತಿಗಳು ಸಂಕೇತ ರೂಪದಲ್ಲಿ ಇರುತ್ತವೆ. ಡಿ ಎನ್ ಎ ಗಳ ಬಗ್ಗೆ ಇನ್ನಷ್ಟು ವಿವರಗಳನ್ನು ಅರಿತುಕೊಳ್ಳಬೇಕಿದ್ದಲ್ಲಿ, ಅನುವಂಶಿಕತೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದಿರಬೇಕಾಗುತ್ತದೆ. 

ಅನುವಂಶಿಕತೆ- ಅನುವಂಶೀಯತೆ 

ನಿಮ್ಮ ಮನೆಯಲ್ಲೊಂದು ಪುಟ್ಟ ಕಂದ ಜನಿಸಿದಾಗ ನೋಡಬಂದ ಬಂಧುಮಿತ್ರರು "ಮಗು ಥೇಟ್ ಅಪ್ಪನಂತೆ" ಅಥವಾ " ತಾಯಿಯ ಪಡಿಯಚ್ಚು" ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಸ್ವಾಭಾವಿಕ. ಈ ಕಂದನ ಕಣ್ಣು, ಕಿವಿ, ಬಾಯಿ, ತುಟಿ, ಮೂಗು, ತಲೆಗೂದಲು, ಶರೀರದ ಆಕಾರ, ಗಾತ್ರ, ಬಣ್ಣ ಮತ್ತಿತರ ಗುಣಲಕ್ಷಣಗಳು ತಂದೆತಾಯಂದಿರ ವಂಶವಾಹಿನಿಗಳ ಮೂಲಕ ಪೂರ್ವನಿರ್ಧಾರಿತವಾಗಿ ಬರುತ್ತವೆ ಹಾಗೂ ಇವುಗಳಲ್ಲಿನ ಡಿ ಎನ್ ಎ ಗಳು, ಈ ವಿಚಾರಗಳಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತವೆ. ಅದೇ ರೀತಿಯಲ್ಲಿ ಮಗುವಿನ ಶಾರೀರಿಕ ಮತ್ತು ಮಾನಸಿಕ ಆರೋಗ್ಯ, ಬೆಳವಣಿಗೆ, ಬುದ್ಧಿವಂತಿಕೆ ಇತ್ಯಾದಿಗಳು, ಮಾತಾಪಿತರ ವಂಶವಾಹಿನಿಗಳಲ್ಲಿರುವ ಗುಣಾವಗುಣಗಳನ್ನು ಹೊಂದಿಕೊಂಡು ವ್ಯತ್ಯಯಗೊಳ್ಳುತ್ತವೆ. ಇದನ್ನು ಅನುವಂಶಿಕತೆ ಅಥವಾ ಅನುವಂಶೀಯತೆ ಎನ್ನುತ್ತಾರೆ. 

ಮನುಷ್ಯನ ಶರೀರದಲ್ಲಿನ ಜೀವಕಣಗಳಲ್ಲಿ ತಂದೆಯಿಂದ ಪಡೆದ ೨೩ ಮತ್ತು ತಾಯಿಯಿಂದ ಪಡೆದ ೨೩ ವರ್ಣತಂತುಗಳು ಸೇರಿದಂತೆ ಒಟ್ಟು ೪೬ ವರ್ಣತಂತು (Chromosomes) ಗಳಿದ್ದು, ಇವುಗಳು ೨೩ ಜೊತೆಗಳಾಗಿ ಇರುತ್ತವೆ. ಇವುಗಳಲ್ಲಿ ಒಂದು ಜೊತೆ ಲಿಂಗ ನಿರ್ಧಾರಕ (sex chromosomes) ಗಳಾಗಿವೆ. ಇವುಗಳು ಪುರುಷರಲ್ಲಿ XY ಮತ್ತು ಸ್ತ್ರೀಯರಲ್ಲಿ XX ಎಂದು ಗುರುತಿಸಲ್ಪಟ್ಟಿವೆ. ಈ ಎರಡು ವರ್ಣತಂತುಗಳನ್ನು ಹೊರತುಪಡಿಸಿ ಉಳಿದ ೨೨ ಜೊತೆ ವರ್ಣತಂತುಗಳನ್ನು ಅಟೋಸೋಮ್ಸ್ (Autosomes) ಎಂದು ಕರೆಯುತ್ತಾರೆ.  

ಪ್ರತಿಯೊಂದು ವರ್ಣತಂತುವಿನಲ್ಲೂ ಸಾವಿರಕ್ಕೂ ಅಧಿಕ ವಂಶವಾಹಿನಿಗಳು (Genes) ಇರುತ್ತವೆ. ಈ ವಂಶವಾಹಿನಿಗಳ ಮೂಟೆಯೇ "ಡಿ ಎನ್ ಎ " ಎಂದು ಗುರುತಿಸಲ್ಪಟ್ಟಿದೆ. ಇವುಗಳಲ್ಲಿ ವ್ಯಕ್ತಿಯ ಶಾರೀರಿಕ - ಮಾನಸಿಕ ಗುಣಲಕ್ಷಣಗಳು, ಅನುವಂಶಿಕ ಕಾಯಿಲೆಗಳ ಮಾಹಿತಿಗಳು ಮತ್ತು ಇತರ ಕೆಲ ಸಂಕೇತಗಳು ಅಡಕವಾಗಿರುತ್ತವೆ. ಈ ವಂಶವಾಹಿನಿಗಳು ಡಿಆಕ್ಸಿರೈಬೋನ್ಯೂಕ್ಲಿಕ್ ಎಸಿಡ್ ಅರ್ಥಾತ್ ಡಿ ಎನ್ ಎ ಗಳಿಂದ ನಿರ್ಮಿತವಾಗಿರುತ್ತವೆ. ಬಹುತೇಕ ಮನುಷ್ಯರಲ್ಲಿರುವ ಅಧಿಕತಮ ವಂಶವಾಹಿನಿಗಳು ಒಂದೇ ರೀತಿಯಲ್ಲಿದ್ದು, ಶೇ. ೧ ಕ್ಕೂ ಕಡಿಮೆ ಪ್ರಮಾಣದ ವಂಶವಾಹಿನಿಗಳು ಮಾತ್ರ ವಿಭಿನ್ನವಾಗಿ ಇರುತ್ತವೆ. 

ಮನುಷ್ಯನ ಶರೀರದಲ್ಲಿರುವ ರಕ್ತ, ಮಾಂಸಪೇಶಿಗಳು, ಮೆದುಳು, ಯಕೃತ್, ವೀರ್ಯಾಣು ಇತ್ಯಾದಿಗಳ ಜೀವಕೋಶಗಳಲ್ಲಿರುವ ಕೋಶಕೇಂದ್ರಗಳಲ್ಲಿ (Nucleus) ಡಿ ಎನ್ ಎ ಗಳು ಸಮೃದ್ಧವಾಗಿ ಇರುತ್ತವೆ. ಆದರೆ ರಕ್ತದಲ್ಲಿರುವ ಕೆಂಪು ರಕ್ತಕಣಗಳಲ್ಲಿ ಕೋಶಕೇಂದ್ರಗಳು ಇಲ್ಲದಿರುವುದರಿಂದ, ಡಿ ಎನ್ ಎ ಪರೀಕ್ಷೆಗಾಗಿ ಬಿಳಿ ರಕ್ತಕಣಗಳನ್ನು ಬಳಸಲಾಗುತ್ತದೆ. 

ಡಿ ಎನ್ ಎ ಅರ್ಥಾತ್ ಡಿಆಕ್ಸಿರೈಬೋನ್ಯೂಕ್ಲಿಕ್ ಎಸಿಡ್ ಪ್ರತಿಯೊಂದು ಮನುಷ್ಯ ಮತ್ತು ಜೀವಿಗಳಲ್ಲಿ ಇರುವಂತಹ ದ್ರವ್ಯವಾಗಿದೆ. ಅದೇ ರೀತಿಯಲ್ಲಿ ಒಬ್ಬ ವ್ಯಕ್ತಿಯ ಶರೀರದಲ್ಲಿನ ಬಹುತೇಕ ಜೀವಕೋಶಗಳಲ್ಲಿರುವ ಡಿ ಎನ್ ಎ ಗಳು ಒಂದೇ ರೀತಿಯದ್ದಾಗಿರುತ್ತವೆ. ಇವುಗಳಲ್ಲಿ ಅಡಕವಾಗಿರುವ ವೈವಿಧ್ಯಮಯ ಮಾಹಿತಿಗಳು- ಸಂಕೇತಗಳು ನಾಲ್ಕು ವಿಧದ ರಾಸಾಯನಿಕ ಮೂಲಗಳನ್ನು ಹೊಂದಿರುತ್ತವೆ. ಮನುಷ್ಯರ ಡಿ ಎನ್ ಎ ಮೂರು ಬಿಲಿಯನ್ ಮೂಲ (Base) ಗಳನ್ನು ಹೊಂದಿದ್ದು, ಶೇ. ೯೯ ರಷ್ಟು ಮೂಲಗಳು ಎಲ್ಲರಲ್ಲೂ ಏಕರೀತಿಯದ್ದಾಗಿರುತ್ತವೆ. ಸಂದೇಹಾಸ್ಪದ ಸಂದರ್ಭಗಳು ಅಥವಾ ಪ್ರಕರಣಗಳಲ್ಲಿ ನಿರ್ದಿಷ್ಟ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲು ಉಳಿದ ಶೇ. ೧ ರಷ್ಟು ಡಿ ಎನ್ ಎ ಗಳನ್ನು ಪರೀಕ್ಷಿಸುವ - ತಾಳೆಹೊಂದಿಸುವ ವಿಧಾನವನ್ನು ಅನುಸರಿಸಲಾಗುತ್ತದೆ. 

ನಿರ್ದಿಷ್ಟ ವ್ಯಕ್ತಿಯೊಬ್ಬನನ್ನು ಗುರುತಿಸಲು, ಕೊಲೆ,ದರೋಡೆ ಹಾಗೂ ಅತ್ಯಾಚಾರದ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಲು, ಒಂದು ಮಗುವಿನ ತಂದೆ ಅಥವಾ ತಾಯಿ ಯಾರೆಂದು ನಿರ್ಧರಿಸಲು ಮತ್ತು ಅಪಘಾತ- ಅಕಸ್ಮಿಕಗಳಲ್ಲಿ ಮೃತಪಟ್ಟವರ ಶವಗಳನ್ನು ಬಂಧುಮಿತ್ರರು ಗುರುತಿಸಲು ಆಗದಂತಹ ಸನ್ನಿವೇಶಗಳಲ್ಲಿ ಡಿ ಎನ್ ಎ ಪರೀಕ್ಷೆ( DNA Finger printing or DNA Profiling) ಉಪಯುಕ್ತವೆನಿಸಬಲ್ಲದು. ೧೯೮೪-೮೫ ರಲ್ಲಿ ಸರ್ ಅಲೆಕ್ ಜೆಫ್ರೀಸ್ ಎನ್ನುವ ವಿಜ್ಞಾನಿಯೊಬ್ಬರು ಆವಿಷ್ಕರಿಸಿದ್ದ ಈ ಪರೀಕ್ಷೆಯು, ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. 

ಸಾಮಾನ್ಯವಾಗಿ ಮನುಷ್ಯರ ಶರೀರದಲ್ಲಿರುವ ಅಧಿಕತಮ ಡಿ ಎನ್ ಎ ಗಳು ಯಾವುದೇ ಅನ್ಯವ್ಯಕ್ತಿಗಳ ಡಿ ಎನ್ ಎ ಗಳೊಂದಿಗೆ ತಾಳೆಯಾಗುತ್ತವೆ. ಇದೇ ಕಾರಣದಿಂದಾಗಿ ಇವುಗಳನ್ನು ಪ್ರತ್ಯೇಕವಾಗಿ ಗುರುತಿಸುವುದು ಸುಲಭವೇನಲ್ಲ. ಆದರೆ ಡಿ ಎನ್ ಎ ಬೆರಳಚ್ಚು ವಿಧಾನದಲ್ಲಿ ಒಂದು ನಿರ್ದಿಷ್ಟ ವಿಧದ ಡಿ ಎನ್ ಎ ಅನುಕ್ರಮ( Sequence) ವಿಧಾನವನ್ನು ಅನುಸರಿಸಲಾಗುತ್ತಿದ್ದು (ಇದನ್ನು Micro satellite ಎನ್ನುತ್ತಾರೆ.) ಇದರಿಂದಾಗಿ ಇವುಗಳನ್ನು ಗುರುತಿಸುವುದು ಸುಲಭಸಾಧ್ಯವೆನಿಸುತ್ತದೆ. 

ಮನುಷ್ಯರ ಜೀವಕೊಶದಲ್ಲಿರುವ ಡಿ ಎನ್ ಎ ಗಳು ತಂದೆ ತಾಯಂದಿರಿಂದ ಅನುವಂಶಿಕವಾಗಿ ಬಂದಿರುವುದರಿಂದಾಗಿ, ಯಾವುದೇ ವ್ಯಕ್ತಿಯಲ್ಲೂ ತನ್ನ ತಂದೆ ತಾಯಂದಿರಲ್ಲಿ ಇರದಂತಹ ಡಿ ಎನ್ ಎ ಗಳು ಇರುವ ಸಾಧ್ಯತೆಗಳೇ ಇಲ್ಲ. ಇದರಿಂದಾಗಿ ಒಬ್ಬ ವ್ಯಕ್ತಿಯ ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಮಕ್ಕಳಲ್ಲಿರುವ ಡಿ ಎನ್ ಎ ಗಳಲ್ಲಿ ಸಾಮ್ಯತೆ ಇರುವುದರಿಂದ, ಈ ವ್ಯಕ್ತಿಯ ಡಿ ಎನ್ ಎ ಗಳೊಂದಿಗೆ ಇವರೆಲ್ಲರ ಡಿ ಎನ್ ಎ ಗಳು ತಾಳೆಯಾಗಲೇಬೇಕು. ಈ ಪರೀಕ್ಷೆಯ ಪರಿಣಾಮಗಳು ಇಷ್ಟೊಂದು ನಿಖರವಾಗಿರುವುದರಿಂದಾಗಿ ತನ್ನ ಪತ್ನಿ ಹೆತ್ತಿರುವ ಮಗುವಿನ ತಂದೆ ತಾನಲ್ಲ ಅಥವಾ ತಾನು ಇಂತಹ ವ್ಯಕ್ತಿಯೊಬ್ಬರ ಮಗನೆಂದು ( ಎನ್. ಡಿ . ತಿವಾರಿಯವರ ಪ್ರಕರಣ) ನ್ಯಾಯಾಲಯದಲ್ಲಿ ಯಾರಾದರೂ ದಾವೆಯನ್ನು ಹೂಡಿದಾಗ, ಡಿ ಎನ್ ಎ ಪರೀಕ್ಷೆ ನಡೆಸುವ ಮೂಲಕವೇ ಇಂತಹ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲಾಗುತ್ತದೆ!. 

ಡಿ ಎನ್ ಎ ಪರೀಕ್ಷ್ಗಳಲ್ಲಿ ಎರಡು ವಿಧಗಳಿದ್ದು, RFLP ವಿಧಾನದ ಪರೀಕ್ಷೆಗೆ ತುಸು ಅಧಿಕಪ್ರಮಾಣದ ಡಿ ಎನ್ ಎ ಗಳ ಅವಶ್ಯಕತೆ ಇರುತ್ತದೆ. ಆದರೆ PCR ವಿಧದ ಪರೀಕ್ಷೆಗೆ ಅತ್ಯಲ್ಪ ಪ್ರಮಾಣದ ಡಿ ಎನ್ ಎ ಸಾಕಾಗುತ್ತದೆ. PCR ಪರೀಕ್ಷಾ ವಿಧಾನದಲ್ಲಿ ಒಂದಿಷ್ಟು ತಪ್ಪುಗಳು ಸಂಭವಿಸುವ ಸಾಧ್ಯತೆಗಳಿದ್ದರೂ, ಕ್ಷಿಪ್ರಗತಿಯಲ್ಲಿ ಪರಿಣಾಮಗಳು ದೊರೆಯುವುದರಿಂದಾಗಿ ಇದು ವ್ಯಾಪಕವಾಗಿ ಬಳಸಲ್ಪಡುತ್ತಿದೆ. 

ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಬಳಸಲ್ಪಡುವ ಡಿ ಎನ್ ಎ ಫಿಂಗರ್ ಪ್ರಿಂಟಿಂಗ್ ಪರೀಕ್ಷೆಯಲ್ಲಿ ಬೆರಳಚ್ಚನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಮನುಷ್ಯನ ಶರೀರದಲ್ಲಿನ ಪ್ರತಿಯೊಂದು ಜೀವಕೋಶಗಳಲ್ಲಿ ಡಿ ಎನ್ ಎ ಗಳು ಇರುವುದರಿಂದ, ಶರೀರದ ಯಾವುದೇ ಭಾಗದ ತುಣುಕು, ತಲೆಗೂದಲು, ಚರ್ಮದ ತುಣುಕು ಅಥವಾ ಕೇವಲ ಒಂದು ತೊಟ್ಟು ರಕ್ತದ ಮೂಲಕ ಈ ಪರೀಕ್ಷೆಯನ್ನು ನಡೆಸಿ ನಿರ್ದಿಷ್ಟ ವ್ಯಕ್ತಿಯ ಅಥವಾ ವ್ಯಕ್ತಿಗಳ ಗುರುತನ್ನು ಪತ್ತೆ ಹಚ್ಚಬಹುದಾಗಿದೆ. ಇದೇ ಕಾರಣದಿಂದಾಗಿ ಅಪರಾಧಿಗಳ ಪತ್ತೆಗಾಗಿ ಈ ಪರೀಕ್ಷೆಯನ್ನು ವಿಶ್ವಾದ್ಯಂತ ಬಳಸಲಾಗುತ್ತಿದೆ. ಈ ಪರೀಕ್ಷಾ ವಿಧಾನದ ನಿಖರತೆಯ ಬಗ್ಗೆ ಕಾನೂನು ಪಂಡಿತರು ಸಂದೇಹಗಳನ್ನು ವ್ಯಕ್ತಪಡಿಸುತ್ತಿದ್ದರೂ, ಇದರ ಉಪಯುಕ್ತತೆಯು ಅನೇಕ ಸಂದರ್ಭಗಳಲ್ಲಿ ಅತ್ಯಂತ ಮಹತ್ವಪೂರ್ಣ ಫಲಿತಾಂಶಗಳನ್ನು ನೀಡಿರುವುದು ಮಾತ್ರ ಸುಳ್ಳೇನಲ್ಲ!. 

ಡಾ. ಸಿ . ನಿತ್ಯಾನಂದ ಪೈ, ಪುತ್ತೂರು 

ಮಂಗಳೂರಿನಲ್ಲಿ ಸಂಭವಿಸಿದ್ದ ವಿಮಾನ ಅಪಘಾತದ ಸಂದರ್ಭದಲ್ಲಿ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ. 


Tuesday, February 25, 2014

MINISTERS BUNGALOW'S RENOVATION COSTS 7 CRORES.





     ಆನೆ ನಡೆದಿದ್ದೇ ದಾರಿ: ರಾಜಕಾರಣಿಗಳು ಮಾಡಿದ್ದೇ ಸರಿ!

ಪ್ರತೀಬಾರಿ ರಾಜ್ಯದ ವಿಧಾನಸಭಾ ಚುನಾವಣೆಗಳು ನಡೆದು ನೂತನ ಸರಕಾರ ಅಸ್ತಿತ್ವಕ್ಕೆ ಬಂದೊಡನೆ, ವಿಧಾನಸೌಧದಲ್ಲಿನ ಮಂತ್ರಿವರ್ಯರ ಕೊಠಡಿಗಳ ಪುನರ್ನವೀಕರಣದ ಕಾಮಗಾರಿಗಳನ್ನು ನಡೆಸಲಾಗುತ್ತದೆ. ಅದೇ ರೀತಿಯಲ್ಲಿ ಈ ಮಂತ್ರಿ ಮಹೋದಯರಿಗೆ ಸರಕಾರ ನೀಡುವ ವಿಲಾಸೀ ವಸತಿಗೃಹಗಳ ನವೀಕರಣದ ಕಾಮಗಾರಿಗಳೂ ನಡೆಯುತ್ತವೆ. ಇದಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಸರಕಾರದ ಬೊಕ್ಕಸದಿಂದ ವ್ಯಯಿಸಲಾಗುತ್ತಿದೆ. ವಿಶೇಷವೆಂದರೆ ಇಂತಹ ಕಾಮಗಾರಿಗಳಿಗೆ ಇಂತಿಷ್ಟೇ ಹಣವನ್ನು ವ್ಯಯಿಸಬೇಕೆನ್ನುವ ನಿಯಮಗಳಿಲ್ಲದ ಕಾರಣದಿಂದಾಗಿ, ಪ್ರತಿಯೊಬ್ಬ ಮಂತ್ರಿಯು ಬಯಸಿದಂತೆ ನವೀಕರಣದ ಕಾಮಗಾರಿಗಳನ್ನು ನಡೆಸಲಾಗುತ್ತದೆ. 

ಗತವರ್ಷದಲ್ಲಿ ಬಹುಮತವನ್ನು ಗಳಿಸಿದ್ದ ಕಾಂಗ್ರೆಸ್ ಸರಕಾರ ಅಧಿಕಾರದ ಗದ್ದುಗೆಯನ್ನು ಏರಿದ ಬಳಿಕ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸದಸ್ಯರಿಗೆ ನೀಡಿದ್ದ ಸರಕಾರಿ ನಿವಾಸಗಳ ಪುನರ್ನವೀಕರಣ ಮತ್ತು ನೂತನ ಪೀಠ-ಉಪಕರಣಗಳನ್ನು ಖರೀದಿಸಲು ಬರೋಬರಿ ೭.೧೭ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ!. 
ಇದರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರಕಾರಿ ನಿವಾಸಗಳ ಪುನರ್ನವೀಕರಣಕ್ಕಾಗಿಯೇ ೧.೯೨ ಕೋಟಿ ರೂ. ಗಳನ್ನೂ ವ್ಯಯಿಸಲಾಗಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿರುವ "ಕಾವೇರಿ" ಯ ನವೀಕರಣಕ್ಕೆ ೧.೭೨ ಕೋಟಿ ರೂ., ಹಾಗೂ ಮೊದಲು ವಾಸ್ತವ್ಯವಿದ್ದ " ಕುಮಾರ ಕೃಪಾ- ೧ ಸೌತ್" ನಿವಾಸದ ನವೀಕರಣಕ್ಕೆ ೯.೯ ಲಕ್ಷ ರೂ. ಮತ್ತು ಗೃಹಕಚೇರಿ "ಕೃಷ್ಣಾ" ದ ನವೀಕರಣಕ್ಕಾಗಿ ೯.೮ ಲಕ್ಷ ರೂ. ಗಳನ್ನು ಸರಕಾರದ ಬೊಕ್ಕಸದಿಂದ ಖರ್ಚುಮಾಡಲಾಗಿದೆ.

ಕರ್ನಾಟಕ ರಾಜ್ಯ ಸರಕಾರವು ಜೂನ್ ೨೦೧೩ ರಿಂದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸದಸ್ಯರ ಅಧಿಕೃತ ನಿವಾಸಗಳು ಮತ್ತು ಕಚೇರಿಗಳ ನವೀಕರಣಕ್ಕಾಗಿ ಮತ್ತು ಪೀಠ - ಉಪಕರಣಗಳಿಗಾಗಿ ಒಟ್ಟು ೭. ೧೭  ಕೋಟಿ ರೂ. ಗಳನ್ನು ವ್ಯಯಿಸಿದೆ. ಇದಲ್ಲದೆ ೪೦ ಲಕ್ಷ ರೂ. ಗಳನ್ನು ಸಚಿವರ ನಿವಾಸಗಳಿಗೆ ಪೀಠ - ಉಪಕರಣಗಳನ್ನು ಖರೀದಿಸಲು ಬಳಸಲಾಗಿದೆ.ಆದರೆ ಪುನರ್ನವೀಕರಣದ ಕಾಮಗಾರಿಗಳನ್ನು ನಡೆಸಲು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಲು ಕಾರಣವೇನೆಂದು ಮಾತ್ರ ತಿಳಿಸಿಲ್ಲ!.

ಸಚಿವರ ನಿವಾಸಗಳಲ್ಲಿ ಆರ್. ವಿ. ದೇಶಪಾಂಡೆ- ೩೧.೨ ಲಕ್ಷ, ರಮಾನಾಥ ರೈ - ೧೦.೮೫, ಕೆ. ಎಚ್. ಪಾಟೀಲ್ - ೩೮.೪, ಕಮರುಲ್ ಇಸ್ಲಾಂ - ೨೧, ಮಹಾದೇವ ಪ್ರಸಾದ್ - ೯.೬, ಸತೀಶ್ ಜಾರಕಿಹೊಳಿ - ೯.೫, ಎಚ್. ಆಂಜನೇಯ- ೨೪.೩, ಶರಣಪ್ಪ ಪಾಟೀಲ್ - ೧೫.೯, ವಿನಯ ಕುಮಾರ್ ಸೊರಕೆ - ೨೬.೮, ಯು. ಟಿ. ಖಾದರ್ - ೧೮, ಕಿಮ್ಮನೆ ರತ್ನಾಕರ್ - ೧೩,೩, ವಿ. ಶ್ರೀನಿವಾಸ ಪ್ರಸಾದ್ - ೯ ಮತ್ತು ಪ್ರಕಾಶ್ ಹುಕ್ಕೇರಿ - ೯.೫ ಲಕ್ಷ ರೂ.ಗಳನ್ನು ತಮ್ಮ ನಿವಾಸಗಳ ನವೀಕರಣಕ್ಕಾಗಿ ವ್ಯಯಿಸಿದ್ದಾರೆ!. 

 
ಇನ್ನು, ವಿಧಾನಸೌಧ ಮತ್ತು ವಿಕಾಸ ಸೌಧಗಳಲ್ಲಿನ ಸಚಿವರುಗಳ ಕಛೇರಿಗಳ ನವೀಕರಣಕ್ಕಾಗಿ ೨,೨೩ ಕೋಟಿ ರೂ. ಗಳನ್ನು ಖರ್ಚುಮಾಡಿದ್ದು, ಇದರಲ್ಲಿ ಮಹಾದೇವಪ್ಪನವರ ಕಚೇರಿಗೆ ೧೩.೩೯ ಲಕ್ಷ ರೂ., ಎಂ. ಬಿ. ಪಾಟೀಲರ ಕಚೇರಿಗೆ ೧೨,೧೪ ಲಕ್ಷ, ಟಿ. ಬಿ. ಜಯಚಂದ್ರರ ಕಚೇರಿಗೆ ೧೧,೫ ಲಕ್ಷ, ವೆಚ್ಚ ಮಾಡಲಾಗಿದೆ!.



ಕಳೆದಬಾರಿ ಬಿ.ಜೆ,ಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ರೀತಿಯಲ್ಲಿ ಸಚಿವರ ಸರಕಾರಿ ನಿವಾಸಗಳ ಪುನರ್ನವೀಕರಣಕ್ಕಾಗಿ ಸರಕಾರದ ಬೊಕ್ಕಸದಿಂದ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿತ್ತು. ಈ ಬಗ್ಗೆ ವಿಧಾನಸಭೆಯಲ್ಲಿ ಖರ್ಚುವೆಚ್ಚಗಳ ಮಾಹಿತಿಯನ್ನು ನೀಡುತ್ತಿದ್ದ ಲೋಕೋಪಯೋಗಿ ಸಚಿವರ ಹೇಳಿಕೆಯನ್ನು ಕೇಳಿದ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಅಚ್ಚರಿಯಾಗಿತ್ತು. ಏಕೆಂದರೆ ಅವರ ಸರಕಾರಿ ನಿವಾಸಕ್ಕೆ ಕೇವಲ ಸುಣ್ಣ ಬಣ್ಣಗಳನ್ನು ಮಾತ್ರ ಬಳಿಸಿದ್ದರೂ, ಇದಕ್ಕಾಗಿ ಸುಮಾರು ೩೦ ಲಕ್ಷಕ್ಕೂ ಅಧಿಕ ಮೊತ್ತವನ್ನು ವ್ಯಯಿಸಿರುವುದಾಗಿ ಲೋಕೋಪಯೋಗಿ ಇಲಾಖೆಯು ಮಾಹಿತಿ ನೀಡಿತ್ತು!. ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವೆ ಶೋಭಾರವರು, ಇಷ್ಟೊಂದು ಹಣವನ್ನು ತನ್ನ ಮನೆಗೆ ಯಾವ ಕಾಮಗಾರಿಗಳ ಸಲುವಾಗಿ ವ್ಯಯಿಸಲಾಗಿತ್ತು?, ಎಂದು ಸಂಬಂಧಿತ ಸಚಿವರನ್ನು ಪ್ರಶ್ನಿಸಿದ್ದರು. ವಿಶೇಷವೆಂದರೆ ಸಚಿವೆಯ ಪ್ರಶ್ನೆಗೆ ಉತ್ತರ ದೊರೆಯದಿರುವುದರೊಂದಿಗೆ, ಈ ಬಗ್ಗೆ ಸತ್ಯವನ್ನು ಅರಿಯಲು ಯಾವುದೇ ತನಿಖೆಯೂ ನಡೆಸಲಾಗಿರಲಿಲ್ಲ!. ಐದು ವರ್ಷಗಳ ಹಿಂದೆ ನಡೆದಿದ್ದ ಈ ಘಟನೆಯ ಪುನರಾವರ್ತನೆ ಈ ಬಾರಿಯೂ ಆಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ತಮ್ಮ ಮನೆಯ ನವೀಕರಣದ ಕಾಮಗಾರಿಗಳಿಗೆ ಎಷ್ಟು ವೆಚ್ಚವಾಗಬಹುದೆನ್ನುವ ವಿಚಾರ ನಮ್ಮ ಸಚಿವರಿಗೆ ತಿಳಿದಿರುವ ಸಾಧ್ಯತೆಗಳೇ ಇಲ್ಲ!.


ರಾಜ್ಯದ ಸಚಿವ ಸಂಪುಟದಲ್ಲಿದ್ದರೂ, ಡಿ.ಕೆ.ಶಿವಕುಮಾರ್, ಉಮಾಶ್ರೀ, ರೋಶನ್ ಬೇಗ್ ಮತ್ತು ರಾಮಲಿಂಗ ರೆಡ್ಡಿಯವರು  ತಮ್ಮ ಸ್ವಂತ ಮನೆಗಳಲ್ಲೇ ವಾಸಮಾಡುತ್ತಿದ್ದಾರೆ. ವಿಶೇಷವೆಂದರೆ ಈ ನಾಲ್ವರು ಸಚಿವರಿಗೂ ಮನೆ ಬಾಡಿಗೆಯೆಂದು ಮಾಸಿಕ ೫೦,೦೦೦ ರೂ. ಗಳನ್ನು ಸರಕಾರ ಪಾವತಿಸುತ್ತಿದೆ!. ಇನ್ನು ಸಚಿವ ಅಭಯಚಂದ್ರ ಮತ್ತು ಬಾಬು ರಾವ್ ಚಿಂಚಸನೂರ್ ಶಾಸಕರ ಭವನದಲ್ಲೇ ವಾಸ್ತವ್ಯ ಹೂಡಿದ್ದಾರೆ. 

ಬಾಯಿ ಬಿಟ್ಟರೆ ಅಲ್ಪ ಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಏಳಿಗೆಯ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುವ ನಮ್ಮ ಸಚಿವರು, ಸರಕಾರದ ಬೊಕ್ಕಸದ ಹಣವನ್ನು ಯಾವ ರೀತಿಯಲ್ಲಿ ತಮ್ಮ ಸುಖ ವೈಭೋಗಗಳಿಗಾಗಿ ವ್ಯಯಿಸುತ್ತಾರೆ ಎನ್ನುವುದನ್ನು ಅರಿತಾಗ ನಿಜಕ್ಕೂ ನಂಬಲಸಾಧ್ಯವೆನಿಸುತ್ತದೆ. ಆದರೆ ಲೋಕೋಪಯೋಗಿ ಇಲಾಖೆಯ ಸಚಿವ ಮಹಾದೇವಪ್ಪನವರು ದಿ. ೨೧-೦೨-೨೦೧೪ ರಂದು ಸದನದಲ್ಲಿ ನೀಡಿದ್ದ ಈ ಮಾಹಿತಿಯು ಶತ ಪ್ರತಿಶತ ಅಧಿಕೃತವಾಗಿದೆ!.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

 

Thursday, February 20, 2014

G-category sites




    "ಜಿ" ಪ್ರವರ್ಗದ ನಿವೇಶನಗಳ ಹಂಚಿಕೆ: ನಿಮಗಿದು ಗೊತ್ತೇ?

ರಾಜ್ಯದ ಬಹುತೇಕ ಶಾಸಕರು, ಸಂಸದರು ಮತ್ತು ಇವರ ಬಂಧುಮಿತ್ರರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಪಡೆದುಕೊಂಡಿರುವ ಜಿ ಕೆಟಗರಿ ನಿವೇಶನಗಳ ಬಗ್ಗೆ ಸಾಕಷ್ಟು ವಾದವಿವಾದಗಳು ನಡೆದಿವೆ. ಸಾಮಾನ್ಯವಾಗಿ ಮುಖ್ಯಮಂತ್ರಿಗಳ ಇಚ್ಛಾನುಸಾರ, ಸರ್ಕಾರಿ ಭಾಷೆಯಲ್ಲಿ ಹೇಳುವುದಾದಲ್ಲಿ "ವಿವೇಚನಾ ಕೋಟಾ" ದಲ್ಲಿ ನಿವೇಶನಗಳನ್ನು ಅಲ್ಪಬೆಲೆಗೆ ಪಡೆದುಕೊಳ್ಳುವ ಫಲಾನುಭವಿಗಳು, ಇದರಲ್ಲಿ ಸ್ವಂತ ಉಪಯೋಗಕ್ಕೆ ಕೇವಲ ಒಂದು ಮನೆಯನ್ನು ಮಾತ್ರ ನಿರ್ಮಿಸಬಹುದಾಗಿದೆ. ಅದೇ ರೀತಿಯಲ್ಲಿ ತಮಗೆ ಮಂಜೂರಾಗಿರುವ ನಿವೇಶನವನ್ನು ತಮ್ಮ ಹೆಸರಿಗೆ ವರ್ಗಾಯಿಸಬೇಕಾದಲ್ಲಿ, ಹತ್ತು ವರ್ಷಗಳ ಕಾಲ ಕಾಯಬೇಕಾಗುವುದು ಅನಿವಾರ್ಯ. ಆದರೆ ತಾವು  ಕನಿಷ್ಠ ಬೆಲೆಗೆ ಪಡೆದುಕೊಂಡಿರುವ ನಿವೇಶನವನ್ನು ಅನ್ಯರಿಗೆ ಮಾರಾಟ ಮಾಡುವ ಮತ್ತು ಸ್ವಂತ ಮನೆಯನ್ನು ನಿರ್ಮಿಸದೇ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿರುವ ರಾಜ್ಯದ ರಾಜಕಾರಣಿಗಳ ಸಂಖ್ಯೆ ಕಡಿಮೆಯೇನಿಲ್ಲ. ಈ ವಿಚಾರ ರಾಜ್ಯದ ಅಧಿಕತಮ ಪ್ರಜೆಗಳಿಗೆ ತಿಳಿದಿಲ್ಲ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಜಿ ಕೆಟಗರಿ - ಅರ್ಹರು ಯಾರು?

ಅನೇಕ ವರ್ಷಗಳಿಂದ ವೈವಿಧ್ಯಮಯ ವಾದವಿವಾದಗಳಿಗೆ ಗ್ರಾಸವೆನಿಸಿರುವ "ಜಿ" ಪ್ರವರ್ಗ ನಿವೇಶನಗಳ ಬಗ್ಗೆ ನೈಜ ಮಾಹಿತಿಯನ್ನು ಅರಿತುಕೊಳ್ಳುವ ಸಲುವಾಗಿ , ಬಳಕೆದಾರರ ಹಿತರಕ್ಷಣಾ ವೇದಿಕೆಯ ಸಂಚಾಲಕರು ದಿ. ೦೧-೧೨-೨೦೦೯ ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸಿ, ಜಿ ಕೆಟಗರಿ ನಿವೇಶನಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ನೀಡುವಂತೆ ಕೋರಿದ್ದರು. ೧೦- ೧೨- ೨೦೦೯ ರಂದು ಪತ್ರಮುಖೇನ ಲಭಿಸಿದ್ದ ಮಾಹಿತಿಯು ನಮ್ಮ ಪಾಲಿಗೆ ನಂಬಲು ಅಸಾಧ್ಯವೆನಿಸುವಂತಿತ್ತು. ಈ ಪತ್ರದಲ್ಲಿ " ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ನಿಯಮಾವಳಿ ೧೯೮೪ ರನ್ವಯ ಮುಖ್ಯಮಂತ್ರಿಯವರ ವಿವೇಚನಾ ಕೋಟಾದಲ್ಲಿ ನಿವೇಶನ ಹಂಚಿಕೆ ಮಾಡಲು ಅವಕಾಶವಿರುವುದಿಲ್ಲ. ಆದಾಗ್ಯೂ ದಿ. ೦೬-೦೮-೧೯೯೭ ರ ಸರ್ಕಾರದ ಮಾರ್ಗಸೂಚಿಯನುಸಾರ ಪ್ರಾಧಿಕಾರವು ಬಿಡಿ ನಿವೇಶನಗಳನ್ನು ವಿಲೇವಾರಿ ಮಾಡಬೇಕಾಗಿರುತ್ತದೆ. ಸದರಿ ಮಾರ್ಗಸೂಚಿಯನ್ವಯ ಸರ್ಕಾರ ನಿರ್ದೇಶನ ನೀಡುವ ಸಾರ್ವಜನಿಕ ಜೀವನದಲ್ಲಿನ  ವ್ಯಕ್ತಿಗಳಿಗೆ(ಪ್ರಾಯಶಃ ಸಾರ್ವಜನಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ - ಸೇವೆಯನ್ನು ಸಲ್ಲಿಸಿದ್ದ , ಎನ್ನುವ ಅರ್ಥದಲ್ಲಿ) "ಜಿ" ಪ್ರವರ್ಗದಡಿ ಬಿಡಿ ನಿವೇಶನ ಹಂಚಿಕೆ ಮಾಡಲು ಅವಕಾಶವಿರುತ್ತದೆ" ಎಂದು ಉಲ್ಲೇಖಿಸಲಾಗಿತ್ತು. ಅಂತೆಯೇ ಪ್ರಾಧಿಕಾರದ ನಿವೇಶನ ಹಂಚಿಕೆ ನಿಯಮಾವಳಿ ೧೯೮೪ ರ ನಿಯಮ ೧೦ (೩) ರನ್ವಯ, ಯಾವುದೇ ವ್ಯಕ್ತಿ ಒಮ್ಮೆ ಪ್ರಾಧಿಕಾರದ ವತಿಯಿಂದ ನಿವೇಶನ ಹಂಚಿಕೆ ಪಡೆದಿದ್ದಲ್ಲಿ, ಅಂತಹ ವ್ಯಕ್ತಿ ಮತ್ತೊಮ್ಮೆ ನಿವೇಶನ ಹಂಚಿಕೆಗೆ ಅರ್ಹರಲ್ಲವೆಂದು ಈ ಮೂಲಕ ತಿಳಿಸಲಾಗಿದೆ ಎನ್ನುವ ವಿಚಾರವನ್ನೂ ಈ ಪತ್ರದಲ್ಲಿ ನಮೂದಿಸಲಾಗಿತ್ತು. 

ಇತ್ತೀಚೆಗೆ ಖಾಸಗಿ ಟೆಲಿವಿಷನ್ ವಾಹಿನಿಯೊಂದು ಜಿ ಕೆಟಗರಿ ನಿವೇಶನಗಳನ್ನು ಪಡೆದುಕೊಂಡು ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ್ದ ಆಸ್ತಿವಿವರಗಳ ಪಟ್ಟಿಯಲ್ಲಿ ಇದನ್ನು ನಮೂದಿಸದ ರಾಜ್ಯದ ರಾಜಕಾರಣಿಗಳ ಬಗ್ಗೆ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳ ಶಾಸಕರು ಇದರಲ್ಲಿ ಭಾಗಿಯಾಗಿದ್ದ ವಿಚಾರವನ್ನು ಬಹಿರಂಗಪಡಿಸಲಾಗಿತ್ತು.ನಿವೇಶನಗಳನ್ನು ಪಡೆದುಕೊಂಡಿರುವ ರಾಜಕಾರಣಿಗಳು ಇದನ್ನು ಮಾರಾಟ ಮಾಡಿರುವ ಕಾರಣದಿಂದಾಗಿ, ಈ ಮಾಹಿತಿಯನ್ನು ಘೋಷಣಾ ಪತ್ರದಲ್ಲಿ ನಮೂದಿಸಿಲ್ಲ ಎನ್ನುವ ಸಂದೆಹವನ್ನೂ ವ್ಯಕ್ತಪಡಿಸಲಾಗಿತ್ತು. ಕಾರ್ಯಕ್ರಮ ಪ್ರಸಾರವಾದ ಮರುದಿನ ರಾಜ್ಯದ ಮಾಜಿ  ಮುಖ್ಯಮಂತ್ರಿ ಕುಮಾರಸ್ವಾಮಿಯವರಲ್ಲಿ  ಪತ್ರಕರ್ತರು ಈ ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿದಾಗ ನೀಡಿದ್ದ ಉತ್ತರ ಇಂತಿದೆ. ರಾಜ್ಯದ ಶಾಸಕರಿಗೆ ಮುಖ್ಯಮಂತ್ರಿಗಳ ವಿವೇಚನಾ ಕೋಟಾ( ಜಿ ಕೆಟಗರಿ) ದಲ್ಲಿ ಗೃಹ ನಿರ್ಮಾಣಕ್ಕಾಗಿ ( ಅಲ್ಪಬೆಲೆಗೆ) ನಿವೇಶನವನ್ನು ಪಡೆಯಬಹುದಾಗಿದೆ. ಆದರೆ ಯಾವುದೇ ಶಾಸಕರು ಸ್ವಂತಕ್ಕೆ ಆಸ್ತಿಯನ್ನು ಮಾಡಿಕೊಳ್ಳಲು ಇದನ್ನು ಬಳಸುವುದಿಲ್ಲ. ಈ ನಿವೇಶನವನ್ನು ಚುನಾವಣೆಯಲ್ಲಿ ಸ್ಪರ್ದಿಸುವ ಸಂದರ್ಭದಲ್ಲಿ ( ಮಾರುಕಟ್ಟೆಯ ಬೆಲೆಗೆ) ಮಾರಾಟ ಮಾಡುತ್ತಾರೆ. ಕೆಲ ಶಾಸಕರು ಇದಕ್ಕೆ ಅಪವಾದವೆನಿಸಬಹುದು. ಅಂತೆಯೇ ಕೆಲವರು ೨- ೩ ನಿವೇಶನಗಳನ್ನು ಪಡೆದುಕೊಂಡಿರಬಹುದು ಎಂದು ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಹೇಳಿದ್ದರು.( ೨೦೧೨ ರಲ್ಲಿ ಬಿ.ಡಿ.ಎ ಕಾರ್ಯದರ್ಶಿಯವರು ನಾವು ಮಾಹಿತಿ ಹಕ್ಕು ಕಾಯಿದೆಯನ್ವಯ ಸಲ್ಲಿಸಿದ್ದ ಅರ್ಜಿಗೆ ನೀಡಿದ್ದ ಮಾಹಿತಿಯಂತೆ ರಾಜ್ಯದ ಯಾವುದೇ ಶಾಸಕರು ಹಾಗೂ ಸಂಸದರು ಜಿ ಕೆಟಗರಿಯಲ್ಲಿ ಒಂದಕ್ಕೂ ಅಧಿಕ ನಿವೇಶನಗಳನ್ನು ಪಡೆದಿಲ್ಲ ಎಂದು ತಿಳಿಸಿದ್ದರು.) 

ತದನಂತರ ಕನ್ನಡ  ಪತ್ರಿಕೆಯೊಂದರಲ್ಲಿ ಬೆಂಗಳೂರಿನ(ಸ್ಥಳಾಂತರಿತ) ಕೊಳೆಗೇರಿ ನಿವಾಸಿಗಳ ಹೆಸರಿನಲ್ಲಿ ನೂರಾರು ನಿವೇಶನಗಳನ್ನು ಅನರ್ಹರಿಗೆ ವಿತರಿಸಿದ್ದ ಹಗರಣವನ್ನು ಬಯಲಿಗೆಳೆಯಲಾಗಿತ್ತು. ಬಿ. ಡಿ . ಎ ಹಂಚಿದ್ದ ಈ ನಿವೇಶನಗಳೆಲ್ಲವೂ, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಇದ್ದವು. ಅಲ್ಪ ಬೆಲೆಗೆ ಲಭಿಸಿದ್ದ ಇಂತಹ ನಿವೇಶನಗಳ ಫಲಾನುಭವಿಗಳ ಪಟ್ಟಿಯಲ್ಲಿ, ಒಂದೇ ಕುಟುಂಬಕ್ಕೆ ಸೇರಿದ ಒಂದಕ್ಕೂ ಅಧಿಕ ಸದಸ್ಯರ ಹೆಸರುಗಳು ಸಾಕಷ್ಟು ಸಂಖ್ಯೆಯಲ್ಲಿದ್ದವು!. ಇವರಲ್ಲಿ ಯಾರೊಬ್ಬರೂ ಕೊಳೆಗೇರಿಗಳ ನಿವಾಸಿಗಳೇ ಆಗಿರಲಿಲ್ಲ ಎನ್ನುವ ವಿಚಾರವನ್ನು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಪ್ರಕಟಿಸಲಾಗಿತ್ತು. 

ಅನೇಕ ವರ್ಷಗಳಿಂದ ಜಿ ಪ್ರವರ್ಗದಲ್ಲಿ ಅನರ್ಹರಿಗೆ ನಿವೇಶನಗಳನ್ನು ವಿತರಿಸುತ್ತಿರುವ ಬಗ್ಗೆ ನಡೆದಿದ್ದ ದಾವೆಯೊಂದರಲ್ಲಿ, ರಾಜ್ಯದ ಉಚ್ಛ ನ್ಯಾಯಾಲಯವು ೨೦೧೦ ರಲ್ಲಿ ನೀಡಿದ್ದ ತೀರ್ಪಿನಲ್ಲಿ ಈ ರೀತಿಯಲ್ಲಿ ನಿವೇಶನಗಳನ್ನು ಹಂಚದಂತೆ ಆದೇಶಿಸಿತ್ತು. ಆದರೆ ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕವೂ, ಬಿ . ಡಿ . ಎ ವತಿಯಿಂದ ಜಿ ಪ್ರವರ್ಗದನ್ವಯ ಶಾಸಕರಿಗೆ ನಿವೇಶನಗಳನ್ನು ಹಂಚಿದ್ದ ವಿಚಾರವನ್ನು ಖಾಸಗಿ ಕನ್ನಡ ವಾಹಿನಿ ಪ್ರಸಾರ ಮಾಡಿದ್ದ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಲಾಗಿತ್ತು!. 

ಸಾಮಾನ್ಯವಾಗಿ ಬಿ.ಡಿ.ಎ ನಿಯಮಗಳಂತೆ ಜಿ ಕೆಟಗರಿಯಲ್ಲಿ  ಒಂದಕ್ಕೂ ಅಧಿಕ ನಿವೇಶನಗಳನ್ನು ಯಾರೂ ಪಡೆಯುವಂತಿಲ್ಲ. ಅದೇ ರೀತಿಯಲ್ಲಿ ಸ್ವಂತ ವಾಸ್ತವ್ಯಕ್ಕೆಂದು ಪಡೆದುಕೊಂಡ ನಿವೇಶನವನ್ನು ಮುಂದಿನ ೧೦ ವರ್ಷಗಳ ಕಾಲ ಮಾರಾಟ ಮಾಡುವಂತಿಲ್ಲ. ಏಕೆಂದರೆ ನಿವೇಶನವನ್ನು ಮಂಜೂರು ಮಾಡಿದರೂ, ಇದನ್ನು ಫಲಾನುಭವಿಯ ಹೆಸರಿಗೆ ವರ್ಗಾಯಿಸಬೇಕಿದ್ದಲ್ಲಿ, ೧೦ ವರ್ಷಗಳ ಕಾಲ ಕಾಯಲೇಬೇಕು. ಆದರೂ ನಮ್ಮ ಶಾಸಕರು ಇವುಗಳನ್ನು ಕಾನೂನು ಬಾಹಿರವಾಗಿ ಹೇಗೆ ಮಾರಾಟ ಮಾಡುತ್ತಾರೆ?, ಹಾಗೂ ಸ್ವಂತ ಮನೆಯನ್ನು ನಿರ್ಮಿಸುವುದಾಗಿ ಘೋಷಿಸಿದರೂ ವಾಣಿಜ್ಯ ಕಟ್ಟಡಗಳನ್ನು ಹೇಗೆ ನಿರ್ಮಿಸುತ್ತಾರೆ? ಎನ್ನುವ ಪ್ರಶ್ನೆಗಳಿಗೆ ಉತ್ತರವೇನೆಂದು ನಮಗೂ ತಿಳಿದಿಲ್ಲ. ಪ್ರಾಯಶಃ " ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಆದರೆ ಕೆಲವರು ಮಾತ್ರ ಹೆಚ್ಚು ಸಮಾನರು" ಎನ್ನುವುದೇ ಇದಕ್ಕೆ ಕಾರಣವಾಗಿರಬಹುದು. 

ಶರತ್ತುಗಳ ಉಲ್ಲಂಘನೆ 

ಜಿ ಪ್ರವರ್ಗದನ್ವಯ ಬಿ.ಡಿ.ಎ ನಿವೇಶನವನ್ನು ಅಲ್ಪಬೆಲೆಗೆ ಮಂಜೂರು ಮಾಡುವಾಗ ಕೆಲವೊಂದು ಷರತ್ತುಗಳನ್ನು ವಿಧಿಸಲಾಗುತ್ತದೆ. ಇವುಗಳಲ್ಲಿ ನಿವೇಶನ ಪಡೆದವರು ಹತ್ತು ವರ್ಷಗಳ ಕಾಲ ವಾರ್ಷಿಕ ೧೦/- ರೂ. ಬಾಡಿಗೆಯನ್ನು ಸಂದಾಯ ಮಾಡಬೇಕು. ಜೊತೆಗೆ ಐದು ವರ್ಷಗಳಲ್ಲಿ ಈ ನಿವೇಶನದಲ್ಲಿ ಒಂದು ಕಟ್ಟಡವನ್ನು ನಿರ್ಮಿಸಬೇಕು. ಇದರಲ್ಲಿ ಸ್ವಂತಕ್ಕಾಗಿ ಒಂದು ವಾಸ್ತವ್ಯದ ಮನೆಯನ್ನು ಮಾತ್ರ ನಿರ್ಮಿಸಬಹುದೇ ಹೊರತು ಬೇರೆ ಯಾವುದೇ ರೀತಿಯ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಈ ನಿವೇಶನವನ್ನು ಹಾಗೂ ಇದರಲ್ಲಿ ನಿರ್ಮಿಸಿದ ಕಟ್ಟಡವನ್ನು ಪರಭಾರೆ ಮಾಡುವಂತಿಲ್ಲ. ಬಿ.ಡಿ.ಎ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಅಥವಾ ೧೯೮೪ ನೆ ಸಾಲಿನ ನಿವೇಶನ ಹಂಚಿಕೆ ನಿಯಮಗಳ ಉಪಬಂಧಗಳನ್ನು ಉಲ್ಲಂಘಿಸಿದಲ್ಲಿ, ಬಿ.ಡಿ.ಎ ೧೫ ದಿನಗಳ ನೋಟೀಸು ನೀಡಿ, ಯಾವುದೇ ಪರಿಹಾರವನ್ನು ನೀಡದೆ ಈ ಸ್ವತ್ತಿನ ಸ್ವಾಧೀನವನ್ನು ತೆಗೆದುಕೊಳ್ಳಬಹುದು. ಜೊತೆಗೆ ನಿವೇಶನದ ಸಲುವಾಗಿ ಪಾವತಿಸಿದ್ದ ಮೊತ್ತದ ಶೇ.೧೨.೫ ನ್ನು ಮುಟ್ಟುಗೋಲು ಹಾಕಬಹುದು. ಇದಲ್ಲದೆ ಇನ್ನೂ ಅನೇಕ ಷರತ್ತುಗಳಿದ್ದು, ಇವುಗಳನ್ನು ನಿವೇಶನವನ್ನು ಪಡೆದುಕೊಂಡವರು ಪರಿಪಾಲಿಸಬೇಕಾಗುವುದು. ವಿಶೇಷವೆಂದರೆ ಅಧಿಕತಮ ಫಲಾನುಭವಿಗಳು( ನಮ್ಮನ್ನಾಳುವವರು) ಈ ಷರತ್ತುಗಳನ್ನು ರಾಜಾರೋಷವಾಗಿ ಉಲ್ಲಂಘಿಸುತ್ತಿದ್ದಾರೆ. ಆದರೆ ಬಿ.ಡಿ.ಎ ಇವೆಲ್ಲವನ್ನೂ ಕಂಡೂ ಕಾಣದಂತೆ ವರ್ತಿಸುತ್ತಿದೆ ಅನ್ನುವುದರಲ್ಲಿ ಸಂದೇಹವಿಲ್ಲ. 

ಕೊನೆಯ ಮಾತು 

ನಮ್ಮ ಶಾಸಕರಿಗೆ ಅವರು ಆಯ್ಕೆಯಾಗಿರುವ ಕ್ಷೇತ್ರದಲ್ಲೇ ಒಂದು ನಿವೇಶನವನ್ನು ಪಡೆದುಕೊಳ್ಳಬಹುದೇ ಹೊರತು, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಅಲ್ಲ ಎನ್ನುವ ನಿಯಮವಿದ್ದಿದ್ದಲ್ಲಿ ಇವರು ನಿವೇಶನವನ್ನು ಪಡೆದುಕೊಳ್ಳಲು ಹಾತೊರೆಯುತ್ತಿರಲಿಲ್ಲ. ಹಾಗೂ ಇದೇ ಕಾರಣದಿಂದಾಗಿ ಜಿ ಪ್ರವರ್ಗದ ನಿವೇಶನಗಳ ಹಗರಣವೂ ನಡೆಯುತ್ತಿರಲಿಲ್ಲ!. 

ನಮ್ಮ ದೇಶದಲ್ಲಿ ಕಾನೂನುಗಳನ್ನು ರೂಪಿಸುವುದೇ ಇವುಗಳನ್ನು ಉಲ್ಲಂಘಿಸುವುದಕ್ಕಾಗಿ ಎಂದು ವಯೋವೃದ್ಧರೊಬ್ಬರು ಅನೇಕ ವರ್ಷಗಳ ಹಿಂದೆ ಆಡಿದ್ದ ಮಾತುಗಳು ಇದೀಗ ನಿಜವೆನಿಸುತ್ತಿವೆ. ದೇಶದ ಸಾಮಾನ್ಯ ಪ್ರಜೆಯು ಸಣ್ಣದೊಂದು ತಪ್ಪನ್ನು ಎಸಗಿದರೂ, ಆತನಿಗೆ ಕಾನೂನಿನಿಂದ ತಪ್ಪಿಸಿಕೊಳ್ಳುವ ಅವಕಾಶ ಇರುವುದಿಲ್ಲ. ಆದರೆ ನಮ್ಮನ್ನಾಳುವವರು ಏನೇ ಮಾಡಿದರೂ ಅವರಿಗೆ ಯಾವುದೇ ರೀತಿಯ ಶಿಕ್ಷೆಯೇ ಆಗುವುದಿಲ್ಲ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು.


Tuesday, February 18, 2014

MAAHITIHAKKU KAAYIDE: HEEGOO UNTE?




           ಮಾಹಿತಿ ಹಕ್ಕು ಕಾಯಿದೆ: ಹೀಗೂ ಉಂಟೇ?

ದೇಶಾದ್ಯಂತ ಮಾಹಿತಿ ಪಡೆಯುವ ಹಕ್ಕು ಕಾಯಿದೆ ೨೦೦೫, ಜಾರಿಗೆ ಬಂದು ಎಂಟು ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ಅನೇಕ ಪ್ರಜ್ಞಾವಂತ ನಾಗರಿಕರು ಮತ್ತು ಸ್ವಯಂ ಸೇವಾ ಸಂಘಟನೆಗಳು ಈ ಕಾಯಿದೆಯನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಇನ್ನು ಕೆಲವರಂತೂ ಭಾರೀ ಹಗರಣಗಳನ್ನು ಬಯಲಿಗೆಳೆಯಲು ಯಶಸ್ವಿಯಾಗಿದ್ದಾರೆ. ಪುತ್ತೂರಿನ ಬಳಕೆದಾರರ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಕೂಡಾ ಇದಕ್ಕೆ ಅಪವಾದವೆನಿಸಿಲ್ಲ. ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಅವಶ್ಯಕ ಮಾಹಿತಿಗಳನ್ನು ಪಡೆದುಕೊಳ್ಳಲು ವೇದಿಕೆಯ ಕಾರ್ಯಕರ್ತರು ಮಾಹಿತಿಹಕ್ಕು ಕಾಯಿದೆಯನ್ನು ಬಳಸುವ ಮೂಲಕ ಸಹಸ್ರಾರು ಪ್ರಕರಣಗಳನ್ನು ಸಮರ್ಪಕವಾಗಿ ಪರಿಹರಿಸಿದ್ದಾರೆ.

ಶಾಸಕರ ವಿದೇಶಯಾತ್ರೆಯ ಮಾಹಿತಿ 

ಗತವರ್ಷದಲ್ಲಿ ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿದ್ದ ನಮ್ಮ ರಾಜ್ಯದ ಶಾಸಕರ ವಿದೇಶ ಯಾತ್ರೆಯ ಬಗ್ಗೆ ಒಂದಿಷ್ಟು ನೈಜ ಮಾಹಿತಿಗಳನ್ನು ಪಡೆದುಕೊಳ್ಳುವ ಸಲುವಾಗಿ, ವೇದಿಕೆಯ ಸಂಚಾಲಕರು ಮಾ. ಹ. ಕಾಯಿದೆಯನ್ವಯ ವಿಧಾನಸಭೆಯ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ೨೮-೧೨-೨೦೧ ರಂದು ಅರ್ಜಿಯನ್ನು ಸಲ್ಲಿಸಿದ್ದರು. ಇದರಲ್ಲಿ ಬಿ.ಜೆ.ಪಿ ಸರ್ಕಾರದ ಆದಲ್ತದ ಅವಧಿಯಲ್ಲಿ ವಿಧಾನಸಭೆ ಮತ್ತು ಪರಿಷತ್ತುಗಳ ವಿವಿಧ ಸದನ ಸಮಿತಿಗಳು ಅಧ್ಯಯನದ ಉದ್ದೇಶದಿಂದ ಕೈಗೊಂಡಿದ್ದ ವಿದೇಶ ಪ್ರವಾಸಗಳ ಸಂಖ್ಯೆ, ಇದಕ್ಕಾಗಿ ರಾಜ್ಯ ಸರ್ಕಾರ ವ್ಯಯಿಸಿರುವ ಒಟ್ಟು ಮೊತ್ತ, ಈ ಪ್ರವಾಸಗಳಲ್ಲಿ ಭಾಗವಹಿಸಿದ್ದ ಶಾಸಕರ ಸಂಖ್ಯೆ ಮತ್ತು ಭೇಟಿ ನೀಡಿದ್ದ ದೇಶಗಳ ಹೆಸರುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಗಳನ್ನು ಒದಗಿಸಲು ಕೋರಲಾಗಿತ್ತು. ಜೊತೆಗೆ ಈ ಸಮಿತಿಗಳ ಸದಸ್ಯರು ಸರ್ಕಾರಕ್ಕೆ ಸಲ್ಲಿಸಿದ್ದ ಅಧ್ಯಯನದ ವರದಿಗಳ ಯಥಾಪ್ರತಿಗಳು ಹಾಗೂ ಇವುಗಳ ಆಧಾರದ ಮೇಲೆ ರಾಜ್ಯದಲ್ಲಿ ಅನುಷ್ಠಾನಿಸಿರುವ ಯೋಜನೆಗಳ ವಿವರಗಳು ಹಾಗೂ ಇದರಿಂದ ಲಭಿಸಿರುವ ಪ್ರಯೋಜನ ಮತ್ತು ಪರಿಣಾಮಗಳ ಸಂಕ್ಷಿಪ್ತ ಮಾಹಿತಿಗಳನ್ನು ನೀಡುವಂತೆ ಕೇಳಲಾಗಿತ್ತು. 

 ಈ ಅರ್ಜಿಯನ್ನು ಸ್ವೀಕರಿಸಿದ್ದ ಸಾ. ಮಾ. ಅಧಿಕಾರಿಯು ಇದನ್ನು ವಿಧಾನಸಭೆ, ವಿಧಾನ ಪರಿಷತ್ತು ಮತ್ತು ವಿವಿಧ ಸದನ ಸಮಿತಿಗಳ ತತ್ಸಂಬಂಧಿತ ಅಧಿಕಾರಿಗಳಿಗೆ ರವಾನಿಸಿ ಅರ್ಜಿದಾರರಿಗೆ ಅಪೇಕ್ಷಿತ ಮಾಹಿತಿಗಳನ್ನು ನೇರವಾಗಿ ಕಳುಹಿಸಲು ಸೂಚಿಸಿದ್ದರು. ೦೭-೦೧-೨೦೧೪ ರಂದು ವಿಧಾನ ಸಭೆಯ ಅಧೀನ ಕಾರ್ಯದರ್ಶಿಯವರು ಬರೆದಿದ್ದ ನಾಲ್ಕು ಪತ್ರಗಳ ಯಥಾಪ್ರತಿಗಳನ್ನು ವೇದಿಕೆಯ ಸಂಚಾಲಕರಿಗೆ ಪ್ರತ್ಯೇಕ ಲಕೋಟೆಗಳಲ್ಲಿ ಹಾಕಿ ನೊಂದಾಯಿತ ಅಂಚೆಯ ಮೂಲಕ ಕಳುಹಿಸಲಾಗಿತ್ತು!. ಈ ನಾಲ್ಕೂ ಪತ್ರಗಳನ್ನು ಒಂದೇ ಲಕೋಟೆಯಲ್ಲಿ ಹಾಕಿ ಕಳುಹಿಸಿದ್ದಲ್ಲಿ ಇದರ ಅಂಚೆವೆಚ್ಚವು ಕೇವಲ ೨೫/- ರೂ.ಗಲಾಗುತ್ತಿದ್ದು, ಪ್ರತ್ಯೇಕ ಲಕೋಟೆಗಳಲ್ಲಿ ಕಳುಹಿಸಿದ್ದುದರಿಂದ ಅಂಚೆ ವೆಚ್ಚವು ೧೦೦/- ರೂ. ಗಳಾಗಿತ್ತು. ಸರಕಾರದ ಹಣವನ್ನು ಅಧಿಕಾರಿಗಳು ಪೋಲು ಮಾಡುವುದಕ್ಕೆ ಇದೊಂದು ಉತ್ತಮ ಉದಾಹರಣೆಯೂ ಹೌದು.

ಅಧೀನ ಕಾರ್ಯದರ್ಶಿಯವರ ಪತ್ರ ತಲುಪಿದಂತೆಯೇ ಸದನದ ೧೪ ಸಮಿತಿಗಳ ಅಧಿಕಾರಿಗಳ ಪತ್ರಗಳು ಅರ್ಜಿದಾರರಿಗೆ ಬರಲಾರಂಭಿಸಿದ್ದವು. ಇವುಗಳಲ್ಲಿ ಮೂರು ಸದನ ಸಮಿತಿಗಳ ಸದಸ್ಯರು ವಿದೇಶ ಪ್ರವಾಸಕ್ಕೆ ಹೋಗಿರಲಿಲ್ಲ ಎನ್ನುವ ಮಾಹಿತಿಯಲ್ಲದೇ, ಕೆಲ ಸಮಿತಿಗಳ ವಿದೇಶ ಪ್ರವಾಸದ ಮಾಹಿತಿ ಮತ್ತು ಅಧ್ಯಯನದ  ವರದಿಗಳನ್ನು ನೀಡಲು ಇಂತಿಷ್ಟು ಶುಲ್ಕವನ್ನು ನೀಡಬೇಕೆಂದು ಸೂಚಿಸಲಾಗಿತ್ತು. ಇನ್ನು ಕೆಲ ಸಮಿತಿಗಳ ಬಗ್ಗೆ ಒಂದೆರಡು ಪುಟಗಳ ಮಾಹಿತಿಯನ್ನು ಉಚಿತವಾಗಿ ಒದಗಿಸಲಾಗಿತ್ತು.ಆದರೆ ಕೆಲ ಸಮಿತಿಗಳ ವರದಿಗಳನ್ನು ನೀಡಲು ನಿಗದಿತ ಶುಲ್ಕದೊಂದಿಗೆ ಅಂಚೆ ವೆಚ್ಚವನ್ನು ಪಾವತಿಸಲು ಸೂಚಿಸಲಾಗಿತ್ತು.  

ಶುಲ್ಕ ಪಾವತಿಸಲು ಸೂಚಿಸಿದ್ದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ೪೫ ಪುಟಗಳ ಮಾಹಿತಿಗೆ ೯೦/- ರೂ, ಸಾರ್ವಜನಿಕ ಉದ್ಯಮಗಳ ಸಮಿತಿಯ ೨೨ ಪುಟಗಳಿಗೆ ೪೪/- ರೂ, ಶಾಸಕರ ಭವನದ ವಸತಿ ಸೌಕರ್ಯಗಳ ಸಮಿತಿಯ ೧೦೩ ಪುಟಗಳಿಗೆ ೨೦೬/- ರೂ. ಶುಲ್ಕವನ್ನು ನೀಡುವಂತೆ ಸೂಚಿಸಲಾಗಿತ್ತು. ಈ ಮೂರೂ ಸಮಿತಿಗಳ ವರದಿಗಳನ್ನು ನೀಡಲು ಅಂಚೆವೆಚ್ಚವನ್ನು ಕೇಳಿರಲೇ ಇಲ್ಲ.ಕೇವಲ ವರದಿಗಳ ಪುಟಗಳ ಸಂಖ್ಯೆಗೆ ಅನುಗುಣವಾಗಿ ನಿಗದಿತ ಮೊತ್ತವನ್ನು ಪಾವತಿಸಿದ ಬಳಿಕ ಈ ಮಾಹಿತಿಗಳನ್ನು ಕಳುಹಿಸಲಾಯಿತು.

ಅಂಚೆವೆಚ್ಚ ಪಾವತಿಸಿ!

ಆದರೆ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯ ೧೭ ಪುಟಗಳ ಮಾಹಿತಿಗೆ ೩೪/- ರೂ. ಶುಲ್ಕದೊಂದಿಗೆ, ಇದೇ ಮೊದಲಬಾರಿಗೆ  ೩೦/- ರೂ. ಅಂಚೆ ವೆಚ್ಚವನ್ನು ಪಾವತಿಸಲು ನಿರ್ದೇಶಿಸಲಾಗಿತ್ತು. ಅದೇ ರೀತಿಯಲ್ಲಿ ಭರವಸೆಗಳ ಸಮಿತಿಯ ೩೫ ಪುಟಗಳಿಗೆ ೭೦/- ರೂ.  ಶುಲ್ಕದೊಂದಿಗೆ ಅಂಚೆವೆಚ್ಚ ೪೫/- ರೂ. , ವಿಧಾನಸಭೆಯ ಅರ್ಜಿಗಳ ಸಮಿತಿಯ ೭೫ ಪುಟಗಳಿಗೆ ೧೫೦/- ರೂ. ಶುಲ್ಕ ಹಾಗೂ ಅಂಚೆವೆಚ್ಚ ೧೩೦/- ರೂ. ಮತ್ತು ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿಯ ೨೦ ಪುಟಗಳಿಗೆ ೪೦/- ರೂ. ಶುಲ್ಕದೊಂದಿಗೆ ಅಂಚೆವೆಚ್ಚ ೫೦/- ರೂ. ಗಳನ್ನೂ ಪಾವತಿಸಲು ಸೂಚಿಸಲಾಗಿತ್ತು. ಮಾಹಿತಿಹಕ್ಕು ಕಾಯಿದೆಯನ್ವಯ ಅಂಚೆಯ ಮೂಲಕ ಮಾಹಿತಿಯನ್ನು ಕಳುಹಿಸಬೇಕಾದರೆ ಅದಕ್ಕೆ ತಗಲುವ ವೆಚ್ಚವನ್ನು ಶುಲ್ಕದೊಂದಿಗೆ ಸೇರಿಸಬಾರದೆನ್ನುವ ನಿಯಮವಿಲ್ಲ. ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿರುವ ನಿಯಮದಲ್ಲಿ ಅಂಚೆಗೆ ತಗಲುವ ವೆಚ್ಚವನ್ನು ಅರ್ಜಿದಾರರಿಂದ ಪಡೆಯಬಹುದೆಂದು ಹೇಳಲಾಗಿದೆ. (ಸೆಕ್ಷನ್ ೪, ಮಾಹಿತಿಹಕ್ಕು ನಿಯಮ-೨೦೦೫).

ಕರ್ನಾಟಕ ರಾಜ್ಯ ಸರ್ಕಾರದ ನಿಯಮಗಳಲ್ಲಿ ಅಂಚೆವೆಚ್ಚವನ್ನು ಅರ್ಜಿದಾರರಿಂದ ಪಡೆಯುವ ಬಗ್ಗೆ ನಿಯಮಗಳಿವೆಯೇ ಎನ್ನುವ ಸ್ಪಷ್ಟ ಮಾಹಿತಿ ನಮಗೂ ತಿಳಿದಿಲ್ಲ. ಆದರೆ ಇದಕ್ಕೂ ಮುನ್ನ ಸರ್ಕಾರದಿಂದ ಪಡೆದುಕೊಂಡಿದ್ದ ನೂರಾರು ಮಾಹಿತಿಗಳನ್ನು ಒದಗಿಸುವಾಗ ಅಂಚೆವೆಚ್ಚವನ್ನು ಶುಲ್ಕದೊಂದಿಗೆ ಸೇರಿಸುವ ಪದ್ದತಿಯೇ ಇರಲಿಲ್ಲ. ಮಾತ್ರವಲ್ಲ. ಈ ಬಾರಿಯೂ ೧೪ ಸದನ ಸಮಿತಿಗಳಲ್ಲಿ ಕೇವಲ ನಾಲ್ಕು ಸಮಿತಿಗಳ ಅಧಿಕಾರಿಗಳು ಮಾತ್ರ ಅಂಚೆ ವೆಚ್ಚವನ್ನು ನೀಡುವಂತೆ ಸೂಚಿಸಿದ್ದು, ಇನ್ನುಳಿದ ಸಮಿತಿಗಳ ಅಧಿಕಾರಿಗಳು ಅಂಚೆವೆಚ್ಚ ಪಡೆದುಕೊಳ್ಳದೆ ಅಪೇಕ್ಷಿತ ಮಾಹಿತಿಗಳನ್ನು ನೀಡಿದ್ದರು. ಒಂದೇ ಸರ್ಕಾರದ ವಿಭಿನ್ನ ಇಲಾಖೆಗಳ ಅಧಿಕಾರಿಗಳ ಧೋರಣೆಗಳಲ್ಲಿ ಈ ರೀತಿಯ ವ್ಯತ್ಯಾಸ ಏಕೆಂದು ನಮಗೂ ಅರ್ಥವಾಗಿಲ್ಲ. ಪ್ರಾಯಶಃ ಮಾಹಿತಿಹಕ್ಕು ಕಾಯಿದೆಯನ್ನು ಬಳಸಿಕೊಂಡು ಅನೇಕ ಹಗರಣಗಳನ್ನು ಬಯಲು ಮಾಡಿರುವ ಪ್ರಜ್ಞಾವಂತ ನಾಗರಿಕರು ಅಥವಾ ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರನ್ನು "ಸತಾಯಿಸುವ " ವಿಧಾನ ಇದಾಗಿರಬಹುದೆನ್ನುವ ಸಂದೇಹ ನಮ್ಮಲ್ಲಿ ಮೂಡುತ್ತಿರುವುದು ಸುಳ್ಳೇನಲ್ಲ. 

ಕೊನೆಯ ಮಾತು 

ಬಿ.ಜೆ.ಪಿ ಸರ್ಕಾರ ಅಧಿಕಾರದ ಗದ್ದುಗೆಯನ್ನು ಏರುವ ಮುನ್ನ ವಿಧಾನಸಭೆ- ಪರಿಷತ್ತುಗಳ ವಿವಿಧ ಸದನ ಸಮಿತಿಗಳ ಸದಸ್ಯರು ತಮ್ಮ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ಕೇವಲ ಒಂದುಬಾರಿ ವಿದೇಶ ಪ್ರವಾಸ ಮಾಡುವ ಅವಕಾಶವಿತ್ತು. ಆದರೆ ಬಿ.ಜೆ.ಪಿ ಸರ್ಕಾರವು ಸದನ ಸಮಿತಿಗಳ ಸದಸ್ಯರಿಗೆ ಎರಡುಬಾರಿ ವಿದೇಶ ಪ್ರವಾಸ ಮಾಡಲು ಅವಕಾಶವನ್ನು ಕಲ್ಪಿಸಿತ್ತು!. ಈ ಬಗ್ಗೆ ಸಾಕಷ್ಟು ವಾದವಿವಾದಗಳು ನಡೆದಿದ್ದುದರಿಂದ, ಇದನ್ನು ಅಧ್ಯಯನ ಪ್ರವಾಸ ಎಂದು ನಾಮಕರಣ ಮಾಡಲಾಗಿತ್ತು. ಹಾಗೂ ಪ್ರವಾಸದಿಂದ ಮರಳಿದ ಬಳಿಕ ಇವೆಲ್ಲ ಸಮಿತಿಗಳು ತಮ್ಮ "ಅಧ್ಯಯನ" ದ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿತ್ತು. 

ಆದರೆ ನಮಗೆ ಲಭಿಸಿದ್ದ ಮಾಹಿತಿಯಂತೆ ಅನೇಕ ಸಮಿತಿಗಳು ಅಧ್ಯಯನದ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಏಕೆಂದರೆ ಇಂತಹ ವರದಿಗಳನ್ನೇ ಸಮಿತಿಗಳು ಸಿದ್ಧಪಡಿಸಿರಲಿಲ್ಲ!.

ಅದೇನೇ ಇರಲಿ,ಮಾಹಿತಿಹಕ್ಕು ಕಾಯಿದೆಯನ್ವಯ ಲಭ್ಯ ಮಾಹಿತಿಯಂತೆ, ಬಿ.ಜೆ.ಪಿ ಸರ್ಕಾರದ ಐದು ವರ್ಷಗಳ ಆಡಳಿತದ ಅವಧಿಯಲ್ಲಿ ಸದನ ಸಮಿತಿಗಳ ವಿದೇಶ ಪ್ರವಾಸಕ್ಕಾಗಿ ೭,೦೩,೪೮,೫೮೫/- ರೂ.ಗಳನ್ನುವ್ಯಯಿಸಲಾಗಿದೆ. ಈ ಸಮಿತಿಗಳ ಸದಸ್ಯರೊಂದಿಗೆ ಪ್ರವಾಸದಲ್ಲಿ ಭಾಗವಹಿಸಿದ್ದ ಸರ್ಕಾರಿ ಅಧಿಕಾರಿಗಳ ಪ್ರವಾಸದ ವೆಚ್ಚವು ೧,೯೯,೮೨,೬೫೮/- ರೂ. ಗಳಾಗಿವೆ. ಅರ್ಥಾತ್ ಶಾಸಕರು ಮತ್ತು ಅಧಿಕಾರಿಗಳ ವಿದೇಶ ಪ್ರವಾಸಕ್ಕಾಗಿ ಸರ್ಕಾರವು ಸುಮಾರು ೯ ಕೋಟಿ ರೂ. ಗಳನ್ನು ವ್ಯಯಿಸಿದೆ!. ಇವೆಲ್ಲಕ್ಕೂ ಮಿಗಿಲಾಗಿ ಈ ಸಮಿತಿಗಳು ನೀಡಿದ್ದ ಅಧ್ಯಯನದ ವರದಿಗಳ ಆಧಾರದ ಮೇಲೆ ರಾಜ್ಯದಲ್ಲಿ ಯಾವುದೇ ಯೋಜನೆಗಳನ್ನು ಇಂದಿನ ತನಕ ಅನುಷ್ಥಾನಗೊಳಿಸಿಲ್ಲ!.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು. 




Monday, February 17, 2014

NAIJA ENDO SANTRASTARANNU PATTE HACHCHUVUDENTU?


 ನೈಜ ಎಂಡೋ ಸಂತ್ರಸ್ತರನ್ನು ಪತ್ತೆಹಚ್ಚುವುದೆಂತು?

ಎಂಡೋಸಲ್ಫಾನ್ ಕೀಟನಾಶಕದ ದುಷ್ಪರಿಣಾಮಗಳಿಂದಾಗಿ ಅಯಾಚಿತ ಹಾಗೂ ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ಈಡಾದವರ ನಿಖರವಾದ ವಿವರಗಳು ಇಂದಿಗೂ ಲಭ್ಯವಿಲ್ಲ. ಏಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಂತ್ರಸ್ತರನ್ನು ಗುರುತಿಸುವ ಸಲುವಾಗಿ ನಡೆಸಿದ್ದ ವಿಶೇಷ ವೈದ್ಯಕೀಯ ಶಿಬಿರಗಳಲ್ಲಿ, ಶಂಕಿತ ಸಂತ್ರಸ್ತರ ತಪಾಸಣೆಯ ಕಾರ್ಯದಲ್ಲಿ ಸಂಭವಿಸಿದ್ದ ಲೋಪದೊಷಗಳೇ ಇದಕ್ಕೆ ಕಾರಣವೆನಿಸಿವೆ. ತತ್ಪರಿಣಾಮವಾಗಿ ಸಂತ್ರಸ್ತರ ಪಟ್ಟಿಯಲ್ಲಿ ಅನೇಕ ಅನರ್ಹರ ಹೆಸರು ಸೇರ್ಪಡೆಗೊಂಡಿದ್ದು, ನೈಜ ಮತ್ತು ಅರ್ಹ ಸಂತ್ರಸ್ತರ ಹೆಸರುಗಳನ್ನೇ ಕೈಬಿಡಲಾಗಿದೆ.

ತಪ್ಪು ಯಾರದೋ, ಶಿಕ್ಷೆ ಯಾರಿಗೋ!

ಸರ್ಕಾರಿ ವೈದ್ಯಾಧಿಕಾರಿಯೊಬ್ಬರು ಹೇಳುವಂತೆ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಿದ್ಧಪಡಿಸಿರುವ ಸಂತ್ರಸ್ತರ ಪಟ್ಟಿಯಲ್ಲಿನ ನೈಜ ಸಂತ್ರಸ್ತರ ಪ್ರಮಾಣ ಕೇವಲ ಶೇ.೨೫ ರಷ್ಟಿದ್ದು, ಇನ್ನುಳಿದ ಶೇ. ೭೫ ರಷ್ಟು ಮಂದಿ ವಿಕಲಚೇತನರು, ಪೋಲಿಯೋ ಮತ್ತು ಇನ್ನಿತರ ಅನ್ಯ ವ್ಯಾಧಿಗಳಿಂದ ಬಳಲುತ್ತಿರುವವರೇ ಆಗಿದ್ದಾರೆ. ವಿಶೇಷ ವೈದ್ಯಕೀಯ ಶಿಬಿರಗಳಲ್ಲಿ ಸಂಭವಿಸಿದ್ದ ಪ್ರಮಾದಗಳೇ ಇದಕ್ಕೆ ಕಾರಣವೆನಿಸಿವೆ.ಅನೇಕ ವರ್ಷಗಳಿಂದ ಎಂಡೋ ಪೀಡಿತರನ್ನು ನಿರ್ಲಕ್ಷಿಸಿದ್ದ ಸರ್ಕಾರವು ಇದೀಗ ಎಂಡೋ ಪೀಡಿತರ ಮತ್ತು ಇವರನ್ನು ಬೆಂಬಲಿಸುವ ಸ್ವಯಂ ಸೇವಾ ಸಂಘಟನೆಗಳ ನಿರಂತರ ಹೋರಾಟದಿಂದಾಗಿ ಮತ್ತು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯ ಪರಿಣಾಮವಾಗಿ ಎಚ್ಚೆತ್ತಿದೆ. ಅಂತೆಯೇ ಇದೀಗ ತುಕ್ಕು ಹಿಡಿದಿರುವ ಸರ್ಕಾರಿ ಯಂತ್ರವು ಚಲಿಸಲಾರಂಭಿಸಿದೆ. ತತ್ಪರಿಣಾಮವಾಗಿ ಈ ಸಂತ್ರಸ್ತರಿಗೆ ನೀಡುತ್ತಿರುವ ಮಾಸಾಶನದ ಪ್ರಮಾಣವನ್ನು ಹೆಚ್ಚಿಸುವುದರೊಂದಿಗೆ, ದೊಡ್ಡ ಮೊತ್ತದ ಶಾಶ್ವತ ಪರಿಹಾರ ದೊರೆಯಲಿದೆ ಎನ್ನುವ ಸುದ್ದಿಯಿಂದಾಗಿ, ಸಂತ್ರಸ್ತರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಲು ಪ್ರಯತ್ನಿಸುವವರ ಸಂಖ್ಯೆಯೂ ಹೆಚ್ಚಿದೆ. ಇವರಲ್ಲಿ ನೈಜ ಸಂತ್ರಸ್ತರ ಸಂಖ್ಯೆಯೂ ಸಾಕಷ್ಟಿದೆ. 

ಎಂಡೋ ಸಂತ್ರಸ್ತರನ್ನು ಪತ್ತೆಹಚ್ಚಲು ನಡೆಸಿದ್ದ ವಿಶೇಷ ವೈದ್ಯಕೀಯ ಶಿಬಿರಗಳಿಗೆ ಸಂತ್ರಸ್ತರೆಲ್ಲರೂ ಹಾಜರಾಗುವಂತೆ ಮಾಡುವ ಹೊಣೆಗಾರಿಕೆಯನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಲಾಗಿತ್ತು. ಈ ಕಾರ್ಯಕರ್ತೆಯರಿಗೆ ಸಂತ್ರಸ್ತರನ್ನು ಗುರುತಿಸುವ ವಿಧಾನ- ಮಾನದಂಡಗಳ ಅರಿವಿಲ್ಲದಿದ್ದುದರಿಂದ, ಶಾರೀರಿಕ - ಮಾನಸಿಕ ವೈಕಲ್ಯಗಳಿಂದ ಬಳಲುತ್ತಿರುವ ಮತ್ತು ಅಂಗವಿಕಲರ ಮಾಸಾಶನವನ್ನು ಪಡೆಯುತ್ತಿರುವ ಪ್ರತಿಯೊಬ್ಬರನ್ನು ಶಿಬಿರಗಳಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದರಿಂದಾಗಿ ಅನೇಕ ಅನರ್ಹರು ಶಿಬಿರಗಳಲ್ಲಿ ಭಾಗವಹಿಸಿದ್ದುದರಿಂದ, ಇವರಲ್ಲಿ ಹಲವಾರು ಮಂದಿಗೆ ಸಂತ್ರಸ್ತರ ಪಟ್ಟಿಯಲ್ಲಿ ಸೇರುವ ಅವಕಾಶ ದೊರೆತಿತ್ತು. ಇನ್ನು ಕೆಲವರು ತಮ್ಮ "ಪ್ರಭಾವ" ವನ್ನು ಬಳಸಿಕೊಂಡು ಈ ಪಟ್ಟಿಯಲ್ಲಿ ಸ್ಥಾನವನ್ನು ಗಳಿಸಿಕೊಂಡ ಆರೋಪಗಳೂ ಕೇಳಿಬರುತ್ತಿವೆ. 

ಇವೆಲ್ಲಕ್ಕೂ ಮಿಗಿಲಾಗಿ ವಿಶೇಷ ವೈದ್ಯಕೀಯ ಶಿಬಿರಗಳಲ್ಲಿ ಭಾಗವಹಿಸಿದ್ದ ಬೆರಳೆಣಿಕೆಯಷ್ಟು ತಜ್ಞವೈದ್ಯರೊಂದಿಗೆ, ಸ್ನಾತಕೋತ್ತರ ಪದವಿಗಳ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿದ್ದು, ಇವರಿಗೆ "ಎಂಡೋ ಸಂತ್ರಸ್ತ" ರನ್ನು ಗುರುತಿಸಲು ಅವಶ್ಯಕ ಪರೀಕ್ಷೆಗಳು- ಮಾನದಂಡಗಳ ಬಗ್ಗೆ ಯಾವುದೇ ಮಾಹಿತಿ ತಿಳಿದಿರಲಿಲ್ಲ. ಆರೋಗ್ಯ ಇಲಾಖೆಯ ವತಿಯಿಂದಲೂ ಇಂತಹ ಮಾಹಿತಿಗಳನ್ನು ಒದಗಿಸಿರಲಿಲ್ಲ. ಇದಲ್ಲದೆ ಆರೋಗ್ಯ ಇಲಾಖೆಯು ಒಂದಿಷ್ಟು ಮಾಹಿತಿಯನ್ನು ನೀಡಲು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಆಹ್ವಾನಿತ ತಜ್ಞರೇ ಭಾಗವಹಿಸಿರಲಿಲ್ಲ. ಇದೇ ಕಾರಣದಿಂದಾಗಿ ತಮಗೆ ತಿಳಿದಿರುವ ಸಾಕಷ್ಟು ಮಾಹಿತಿಗಳನ್ನು ನೀಡಲು ನಿಯೋಜಿತರಾಗಿದ್ದ ಖಾಸಗಿ ವೈದ್ಯರ ಕಾರ್ಯಾಗಾರದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಪ್ರತಿನಿಧಿಗಳು ಮಾತ್ರ ಭಾಗವಹಿಸಿದ್ದು, ಈ ಮಾಹಿತಿಗಳನ್ನು ಶಿಬಿರದಲ್ಲಿ ಭಾಗವಹಿಸಲಿದ್ದ ವೈದ್ಯರಿಗೆ ನೀಡಿರಲಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಶಿಬಿರಗಳಲ್ಲಿ ಭಾಗವಹಿಸಿದ್ದ ಅನೇಕ ತಜ್ಞರು ಮತ್ತು ಅನ್ಯ ವೈದ್ಯರು, ಎಂಡೋ ಸಂತ್ರಸ್ತರಲ್ಲದವರನ್ನು ಸಂತ್ರಸ್ತರೆಂದು ಮತ್ತು ನೈಜ ಸಂತ್ರಸ್ತರನ್ನು ಸಂತ್ರಸ್ತರಲ್ಲವೆಂದು ನಿರ್ಧರಿಸಿದ್ದರು. 

ಮಾಹಿತಿ ಹಕ್ಕಿನಿಂದ ದೊರೆತ ಮಾಹಿತಿ 

ಎಂಡೋ ಸಂತ್ರಸ್ತರನ್ನು ಗುರುತಿಸುವ ಶಿಬಿರಗಳಲ್ಲಿ ಸಂಭವಿಸಿದ್ದ ಲೋಪದೋಷಗಳನ್ನು ಕಂಡು, ಇದಕ್ಕೆ ಕಾರಣವೇನೆಂದು ಅರಿತು ಕೊಳ್ಳುವ ಕುತೂಹಲದಿಂದ ದ.ಕ. ಆರೋಗ್ಯಾಧಿಕಾರಿಯವರ ಕಚೇರಿಗೆ ಮಾಹಿತಿ ಹಕ್ಕು ಕಾಯಿದೆಯಂತೆ ಅರ್ಜಿಯೊಂದನ್ನು ಸಲ್ಲಿಸಲಾಯಿತು. ಇದರಲ್ಲಿ ಎಂಡೋ ಸಂತ್ರಸ್ತರನ್ನು ನಿಖರವಾಗಿ ಗುರುತಿಸಲು ಬಳಸಿದ್ದ "ಬಯೋ ಮಾರ್ಕರ್ಸ್" ಮತ್ತು ಅನ್ಯ ಮಾನದಂಡಗಳ ವಿವರಗಳನ್ನು ಕೇಳಿದ್ದು, ಇದಕ್ಕೆ ಸಂಬಂಧಿತ ಅಧಿಕಾರಿಗಳು ನೀಡಿದ್ದ ಉತ್ತರ ಇಂತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ನೀಡಿದ್ದ ಮಾಹಿತಿಯಂತೆ ಜನ್ಮದತ್ತ ಶಾರೀರಿಕ ವೈಕಲ್ಯಗಳು, ಮಾನಸಿಕ ಬೆಳವಣಿಗೆ ಕುಂಠಿತವಾಗಿರುವುದು, ಇತರ ಮಾನಸಿಕ ಅಸಾಮಾನ್ಯತೆಗಳು, ಇತರ ಜನ್ಮದತ್ತ ಕಾಯಿಲೆಗಳು, ಅಪಸ್ಮಾರ, ಪಕ್ಷವಾತ, ಕುರುಡುತನ, ಕಿವುಡುತನ, ವಿವಿಧ ರೀತಿಯ ಕ್ಯಾನ್ಸರ್, ಬಂಜೆತನ ಮತ್ತು ಅಸಾಮಾನ್ಯ ಕಾರಣಗಳಿಂದ ಸಂಭವಿಸಿದ್ದ ಮರಣಗಳಿಗೆ ಈಡಾಗಿರುವವರನ್ನು ಎಂಡೋ ಸಂತ್ರಸ್ತರೆಂದು ಗುರುತಿಸಬಹುದಾಗಿದೆ. ನಿಜ ಹೇಳಬೇಕಿದ್ದಲ್ಲಿ ಮೇಲೆ ನಮೂದಿಸಿರುವ ಆರೋಗ್ಯದ ಸಮಸ್ಯೆಗಳು- ಲಕ್ಷಣಗಳು ಅನ್ಯ ಕಾರಣಗಳಿಂದಲೂ ಸಂಭವಿಸಬಹುದು. ಅದೇ ರೀತಿಯಲ್ಲಿ ಅಧಿಕಾರಿಗಳು ನೀಡಿರುವ ಮಾಹಿತಿಯಲ್ಲಿ ನಮೂದಿಸಿರದ ಅನೇಕ ಲಕ್ಷಣಗಳು- ವ್ಯಾಧಿಗಳು ಎಂಡೋ ಸಂತ್ರಸ್ತರಲ್ಲಿ ಕಂಡುಬಂದಿವೆ. ಇವುಗಳಲ್ಲಿ ಹೈಡ್ರೋ ಸೆಫಾಲಸ್, ಸೆರೆಬ್ರಲ್ ಪಾಲ್ಸಿ, ಆಸ್ತಮಾ, ಕೆಲವಿಧದ ಚರ್ಮರೋಗಗಳು, ಕೈಕಾಲುಗಳಲ್ಲಿ ನಡುಕ, ಬಾಯಿಯಿಂದ ಜೊಲ್ಲು ಹರಿಯುತ್ತಲೇ ಇರುವುದು, ನಪುಂಸಕತೆ, ವೀರ್ಯಾಣುಗಳ ಸಂಖ್ಯೆ ಕ್ಷಯಿಸುವುದು, ಕೇಂದ್ರ ನರಮಂಡಲಕ್ಕೆ ಸಂಬಂಧಿಸಿದ ಗಂಭೀರ ವ್ಯಾಧಿಗಳು, ಹಾರ್ಮೋನ್ ಗಳ ವ್ಯತ್ಯಯ, ಮೂಕತನವೇ ಮುಂತಾದ ಕಾಯಿಲೆಗಳು ಪ್ರಧಾನವಾಗಿವೆ. ಅಧಿಕಾರಿಗಳ ಪಟ್ಟಿಗೆ ಈ ವ್ಯಾಧಿಗಳನ್ನು ಸೇರಿಸಬಹುದಾದರೂ, ಇವೆಲ್ಲಾ ವ್ಯಾಧಿಗಳು ಅನ್ಯ ಕಾರಣಗಳಿಂದಲೂ ಉದ್ಭವಿಸುತ್ತವೆ. ಇವೆಲ್ಲಾ ಕಾರಣಗಳಿಂದ ಕೇವಲ ನಿರ್ದಿಷ್ಟ ಕಾಯಿಲೆ- ಲಕ್ಷಣಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಎಂಡೋ ಸಂತ್ರಸ್ತನೆಂದು ಖಚಿತವಾಗಿ ನಿರ್ಧರಿಸುವುದು ಅಸಾಧ್ಯವೆನಿಸುವುದು. ಹಾಗೂ ಇದೇ ಕಾರಣದಿಂದಾಗಿ ಎಂಡೋ ಸಂತ್ರಸ್ತರ ಹಿತರಕ್ಷಣಾ ಪ್ರತಿಷ್ಠಾನವು ಸಂತ್ರಸ್ತರನ್ನು ನಿಖರವಾಗಿ ಪತ್ತೆಹಚ್ಚಬಲ್ಲ " ಬಯೋ ಮಾರ್ಕರ್ಸ್' ಪತ್ತೆಹಚ್ಚುವ ಸಲುವಾಗಿ ಸಂಶೋಧನೆಯನ್ನು ನಡೆಸುವಂತೆ ಐ.ಸಿ.ಎಂ.ಆರ್ ಸಂಸ್ಥೆಯನ್ನು ಆಗ್ರಹಿಸಿದೆ. ಈ ಸಂಶೋಧನೆಗೆ ಲಕ್ಷಾಂತರ ರೂಪಾಯಿಗಳು ವೆಚ್ಚವಾಗಲಿದ್ದು, ಸರ್ಕಾರವು ಈ ಸಂಸ್ಥೆಗೆ ನೀಡುತ್ತಿರುವ ವಾರ್ಷಿಕ ಅನುದಾನವನ್ನು ಇದಕ್ಕೆ ಬಳಸಬಹುದಾಗಿದೆ. ಆದರೆ ಈ ಸಂಸ್ಥೆಯು ಎಂಡೋ ಸಿಂಪಡಿತ ಪ್ರದೇಶಗಳ ಸಮೀಪವಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳು ಜಂಟಿಯಾಗಿ ಇದನ್ನು ನಡೆಸಬಹುದೆನ್ನುವ ಉದಾರ ಸಲಹೆಯನ್ನು ನೀಡಿದೆ!. 

ಅದೇನೇ ಇರಲಿ, ರಾಜ್ಯ ಸರ್ಕಾರದಿಂದ ಲಭಿಸುವ ಮಾಸಾಶನ ಮತ್ತು ಆರ್ಥಿಕ ಪರಿಹಾರಗಳು ನೈಜ ಸಂತ್ರಸ್ತರಿಗೆ ಮಾತ್ರ ಲಭಿಸಬೇಕಿದ್ದಲ್ಲಿ, ಇವರನ್ನು ನಿಖರವಾಗಿ ಗುರುತಿಸಬಲ್ಲ ಬಯೋ ಮಾರ್ಕರ್ಸ್ ಸಂಶೋಧಿಸುವುದು ಅತ್ಯವಶ್ಯಕ ಎನಿಸುವುದು. ಆದರೆ ದುರದೃಷ್ಟವಶಾತ್ ಇದನ್ನು ನಡೆಸದೆ ಇದ್ದಲ್ಲಿ, ಅಸಂಖ್ಯ ಅನರ್ಹರೂ ಇದರ ಲಾಭವನ್ನು ಪಡೆಯುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ. ಪುತ್ತೂರು  



Wednesday, February 12, 2014

ANAVASHYAKA OUSHADA SEVANE AAROGYAKKE HANIKARA



 
 ಅನಾವಶ್ಯಕ ಔಷದ ಸೇವನೆ ಆರೋಗ್ಯಕ್ಕೆ ಹಾನಿಕರ 

ಬಹುತೇಕ ಜನರು ನಂಬಿರುವಂತೆ ವೈದ್ಯರು ಅತಿಯಾದ ಹಾಗೂ ಅನಾವಶ್ಯಕವೆನಿಸುವ ಔಷದಗಳನ್ನು ತಮ್ಮ ರೋಗಿಗಳಿಗೆ ಸೂಚಿಸಲು, ಔಷದ ತಯಾರಿಕಾ ಸಂಸ್ಥೆಗಳ ಪ್ರಲೋಭನೆಗಳು ಮಾತ್ರ ಕಾರಣವಲ್ಲ. ಕೆಲ ಸಂದರ್ಭಗಳಲ್ಲಿ ರೋಗಿಗಳೇ ಇದಕ್ಕೆ ಕಾರಣಕರ್ತರೆನಿಸುತ್ತಾರೆ. ಈ ಬಗ್ಗೆ ನೀವು ತಿಳಿದಿರಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ. 
------------              -------------             -------------                -----------------               ---------------                

ಜನಸಾಮಾನ್ಯರ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅವರ ಆರೋಗ್ಯ ರಕ್ಷಣೆಯ ಹೊಣೆಯನ್ನು ಹೊತ್ತಿರುವ ವೈದ್ಯರೇ, ಅತಿಯಾದ ಹಾಗೂ ಅನಾವಶ್ಯಕವೆನಿಸುವ ಔಷದಗಳನ್ನು ಸೂಚಿಸುವ ಪ್ರವೃತ್ತಿ ಇತ್ತೀಚಿನ ಹೆಚ್ಚುತ್ತಿದೆ. ವಿಶ್ವಾದ್ಯಂತ ವ್ಯಾಪಕವಾಗಿ ಕಂಡುಬರುತ್ತಿರುವ ಈ ಸಮಸ್ಯೆಗೆ ಭಾರತವೂ ಅಪವಾದವೆನಿಸಿಲ್ಲ. ಈ ರೀತಿಯಲ್ಲಿ ಔಷದಗಳನ್ನು ಪ್ರಯೋಗಿಸುವುದು ರೋಗಿಗಳಿಗೆ ದುಬಾರಿ ಎನಿಸುವುದರೊಂದಿಗೆ, ಇಂತಹ ಔಷದಗಳ ಅಡ್ಡ ಪರಿಣಾಮಗಳು ಆರೋಗ್ಯಕ್ಕೆ ಹಾನಿಕರ ಎನಿಸುವುದರಲ್ಲಿ ಸಂದೇಹವಿಲ್ಲ. 



ಅಸಮಂಜಸ ಚಿಕಿತ್ಸೆ 

ವಿಶ್ವ ಆರೋಗ್ಯ ಸಂಸ್ಥೆ ವರ್ಣಿಸಿರುವಂತೆ, ಔಷದೀಯ ಗುಣವುಳ್ಳ ದ್ರವ್ಯವೊಂದರ ಬಳಕೆಯಿಂದ ರೋಗಿಗೆ ಲಭಿಸಬಲ್ಲ ಪರಿಹಾರವು ತೀರಾ ನಗಣ್ಯ ಅಥವಾ ಶೂನ್ಯವೆನಿಸುವ ಹಾಗೂ ಇವುಗಳ ಬೆಲೆ ಮತ್ತು ದುಷ್ಪರಿಣಾಮಗಳನ್ನು ತುಲನೆ ಮಾಡಿದಾಗ, ನಿಷ್ಪ್ರಯೋಜಕ ಅಥವಾ ಹಾನಿಕಾರಕ ಎನಿಸುವ ಚಿಕಿತ್ಸಾ ಕ್ರಮವನ್ನು "ಅಸಂಜಸ ಚಿಕಿತ್ಸೆ' ಎಂದಿದೆ. 

ಅಖಲ ಭಾರತ ಮಟ್ಟದಲ್ಲಿ ಸ್ವಯಂ ಸೇವಾ ಸಂಘಟನೆಗಳು ನಡೆಸಿದ್ದ ಸಮೀಕ್ಷೆಯೊಂದರ ವರದಿಯಂತೆ ಅನೇಕ ವೈದ್ಯರು ಅತಿಯಾದ ಹಾಗೂ ಅನಾವಶ್ಯಕ  ಔಷದಗಳನ್ನು, ಅಂದರೆ ಟಾನಿಕ್ ಗಳು, ಶಕ್ತಿವರ್ಧಕಗಳು, ವಿಟಮಿನ್ ಗಳು ಮತ್ತು ಇನ್ನಿತರ ವೈವಿಧ್ಯಮಯ ಔಷದಗಳನ್ನು ತಮ್ಮ ರೋಗಿಗಳಿಗೆ ಅನಾವಶ್ಯಕವಾಗಿ ಸೂಚಿಸುತ್ತಿರುವುದು ತಿಳಿದುಬಂದಿದೆ. ಆದರೆ ಖಾಸಗಿ ವೈದ್ಯರಲ್ಲಿ ಒಂದಿಷ್ಟು ಹೆಚ್ಚೆನಿಸುವ ಈ ಪ್ರವೃತ್ತಿಯು ಸರಕಾರಿ ವೈದ್ಯರಲ್ಲಿ ಅತ್ಯಂತ ವಿರಳವಾಗಿದೆ. ಭಾರತದ ಇತರ ಎಲ್ಲ ರಾಜ್ಯಗಳಿಗಿಂತ ಪಶ್ಚಿಮ ಬಂಗಾಳದಲ್ಲಿ ಈ ಸಮಸ್ಯೆ ಅತ್ಯಂತ ವ್ಯಾಪಕವಾಗಿರುವುದು ಇದೇ ಸಮೀಕ್ಷೆಯಿಂದ ತಿಳಿದುಬಂದಿದೆ. 

ಭಾರತದ ಅನೇಕ ಅನುಭವಿ ವೈದ್ಯರೇ ಹೇಳುವಂತೆ ಸರ್ವೋಚ್ಚ  ನ್ಯಾಯಾಲಯದ ತೀರ್ಪಿನಿಂದಾಗಿ ವೈದ್ಯರನ್ನು ಗ್ರಾಹಕ ಸಂರಕ್ಷಣಾ ಕಾಯಿದೆಯ ವ್ಯಾಪ್ತಿಗೆ ಒಳಪಡಿಸಿದ ಬಳಿಕ, ಅತಿಯಾಗಿ ಔಷದಗಳನ್ನು ಸೂಚಿಸುವ ವೈದ್ಯರ ಸಂಖ್ಯೆ ಹೆಚ್ಚಿದೆ. ಈ ಹಿಂದೆ ಒಂದು ನಿರ್ದಿಷ್ಟ ಕಾಯಿಲೆಯನ್ನು ಪತ್ತೆ ಹಚ್ಚಲು ಸೂಚಿಸುತ್ತಿದ್ದ ಪರೀಕ್ಷೆಗಳು ಅಥವಾ ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸಲು ನೀಡುತ್ತಿದ್ದ ಔಷದಗಳನ್ನು, ಇದೀಗ ತಮ್ಮ ಹಿತರಕ್ಷಣೆಗಾಗಿ ವೈದ್ಯರು ಬಳಸುತ್ತಿರುವುದು ಸುಳ್ಳೇನಲ್ಲ. 

ಅತಿಯಾಗಿ ಔಷದವನ್ನು ನೀಡುವ ವೈದ್ಯರುಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ನಡೆಸಿದ್ದ ಸಮೀಕ್ಷೆಯೊಂದರಂತೆ, "ಜೀವ ನಿರೋಧಕ" (ಎಂಟಿ ಬಯಾಟಿಕ್ ) ಗಳ ಬಳಕೆ ಇದೀಗ ಅತಿಯಾಗಿರುವುದು ತಿಳಿದುಬಂದಿದೆ. ಅಂತೆಯೇ ಜಪಾನ್ ದೇಶದ ವೈದ್ಯರು ಪಾಶ್ಚಿಮಾತ್ಯ ದೇಶಗಳ ವೈದ್ಯರಿಗಿಂತ ಮೂರು ಪಟ್ಟು ಹೆಚ್ಚು ಔಷದಗಳನ್ನು ನೀಡುತ್ತಿರುವುದು ಬೆಳಕಿಗೆ ಬಂದಿದೆ. 

ಈ ಪ್ರವೃತ್ತಿಗೆ ಕಾರಣವೇನು?

ಸಾಮಾನ್ಯವಾಗಿ ವೈದ್ಯರು ತನ್ನ ರೋಗಿಯನ್ನು ಬಾಧಿಸುತ್ತಿರುವ ಕಾಯಿಲೆಯನ್ನು ಪತ್ತೆಹಚ್ಚಲು ವಿಫಲರಾದಾಗ, ಒಂದಕ್ಕೂ ಹೆಹ್ಚು ವಿಧದ ವ್ಯಾಧಿಗಳು ತನ್ನ ರೋಗಿಯನ್ನು ಬಾಧಿಸುತ್ತಿವೆ ಎನ್ನುವ ಸಂದೇಹ ಮೂಡಿದಾಗ ಮತ್ತು ರೋಗಿಯ ಕಾಯಿಲೆ ಯಾವುದೆಂದು ತಿಳಿಯದಿರುವ ಸಂದರ್ಭಗಳಲ್ಲಿ ಅತಿ - ಅನಾವಶ್ಯಕ ಔಷದಗಳನ್ನು ಸೂಚಿಸುವರು. ಅದೇ ರೀತಿಯಲ್ಲಿ ನಿರ್ದಿಷ್ಟ ಕಾಯಿಲೆಯೊಂದರ ಚಿಕಿತ್ಸೆಗೆ ಕನಿಷ್ಠ ಬೆಲೆಯ ಔಷದವೊಂದು ನಿಶ್ಚಿತವಾಗಿ ಪರಿಣಾಮಕಾರಿ ಎಂದು ಅರಿತಿದ್ದರೂ, ದುಬಾರಿ ಬೆಲೆಯ ಔಷದಗಳನ್ನೇ ಸೂಚಿಸುವುದನ್ನು ಅನಾವಶ್ಯಕ ಚಿಕಿತ್ಸೆ ಎಂದೇ ಪರಿಗಣಿಸಲಾಗುತ್ತದೆ. ಅಂತೆಯೇ ತಾನು ನೀಡುವ ಔಷದಗಳ  ತೀವ್ರ ದುಷ್ಪರಿಣಾಮಗಳ ಬಗ್ಗೆ ಅರಿವಿದ್ದರೂ, ಇವುಗಳನ್ನು ತನ್ನ ರೋಗಿಗಳಿಗೆ ಸೂಚಿಸುವುದು ಕೂಡಾ ಅನಾವಶ್ಯಕ ಚಿಕಿತ್ಸೆಯೇ ಹೊರತು ಬೇರೇನೂ ಅಲ್ಲ!. 

ಆದರೆ ಇವೆಲ್ಲವುಗಳಿಗಿಂತ ಮಹತ್ವಪೂರ್ಣವೆನಿಸುವ, ಔಷದ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ಅನುಸರಿಸುವ ತಂತ್ರಗಳು ಇಂತಹ ಸಮಸ್ಯೆಗಳನ್ನು ವೃದ್ಧಿಸುವುದರಲ್ಲಿ ಪ್ರಮುಖ ಸ್ಥಾನವನ್ನು ಗಳಿಸುತ್ತವೆ. ನಾಲ್ಕಾರು ದಶಕಗಳ ಹಿಂದಿನ ತನಕ ಒಂದಿಷ್ಟು ಉಚಿತ ಔಷದಗಳು, ಪೆನ್, ಕೀ ಚೈನ್ ಮತ್ತು ಪರ್ಸ್ ಗಳಂತಹ ಚಿಕ್ಕಪುಟ್ಟ ಕೊಡುಗೆಗಳನ್ನು ಔಷದ ಕಂಪೆನಿಗಳು ವೈದ್ಯರಿಗೆ ನೀಡುತ್ತಿದ್ದವು. ಆದರೆ ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ವೈದ್ಯರ ವಿದ್ಯಾರ್ಹತೆ ಮತ್ತು ಅವರಲ್ಲಿ ಹೋಗುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಸೆಲ್ ಫೋನ್, ರೆಫ್ರಿಜಿರೇಟರ್, ಟಿ. ವಿ, ಏರ್ ಕಂಡಿಷನರ್, ಕಾರುಗಳು ಮತ್ತು ವಿದೇಶ ಯಾತ್ರೆಯಂತಹ ಕೊಡುಗೆಗಳನ್ನು ನೀಡುವುದು ನಿಸ್ಸಂದೇಹವಾಗಿಯೂ ಅತಿಯಾದ ಹಾಗೂ ಅನಾವಶ್ಯಕ ಔಷದಗಳನ್ನು ಸೂಚಿಸುವ ಪರಿಪಾಠಕ್ಕೆ ಮೂಲವೆನಿಸುತ್ತದೆ. 

ಅನೇಕ ಔಷದ ತಯಾರಿಕಾ ಸಂಸ್ಥೆಗಳು ಪಂಚತಾರಾ ಹೊಟೇಲುಗಳಲ್ಲಿ ನಡೆಸುವ ವೈದ್ಯಕೀಯ ಸಮ್ಮೇಳನಗಳಿಗೆ ಹೋಗಿಬರಲು ವಿಮಾನದ ಟಿಕೆಟ್, ತಂಗಲು ಪಂಚತಾರಾ ಹೋಟೆಲ್ ಗಳಲ್ಲಿ ವ್ಯವಸ್ಥೆ, ವಿದೇಶಗಳಲ್ಲಿ ನಡೆಸುವ ಇದೇ ರೀತಿಯ ಸಮ್ಮೇಳನಗಳಲ್ಲಿ ಭಾಗವಹಿಸಲು ಇದೇ ರೀತಿಯ ವ್ಯವಸ್ಥೆ, ವಿಹಾರಕ್ಕಾಗಿ ವಿದೇಶಿ ಪ್ರವಾಸ ಮತ್ತು ಕೆಲವೊಮ್ಮೆ ವೈದ್ಯರ ಕುಟುಂಬದ ಸದಸ್ಯರ ವಿವಾಹ ಸಮಾರಂಭಗಳನ್ನೇ  ಅದ್ಧೂರಿಯಾಗಿ ನಡೆಸಿಕೊಡುವುದು  ಕೂಡಾ ಅಪರೂಪವೇನಲ್ಲ!.


ಔಷದ ತಯಾರಿಕಾ ಸಂಸ್ಥೆಗಳ "ಮಾರಾಟದ ತಂತ್ರ" ಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ವೈದ್ಯಕೀಯ ನೀತಿ ಸಂಹಿತೆಯ ವೇದಿಕೆ, ಕೇಂದ್ರ ಸರ್ಕಾರದ ಔಷದ ನಿಯಂತ್ರಣ ಅಧಿಕಾರಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು, ಆರು ತಿಂಗಳುಗಳ ಕಾಲ ನಡೆಸಿದ್ದ ಅಧ್ಯಯನದ ವರದಿಯಲ್ಲಿ ಈ ಮೇಲಿನ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಈ ಅಧ್ಯಯನದ ಅಂಗವಾಗಿ ಭಾರತದ ಪ್ರಮುಖ ನಗರಗಳ ನೂರಾರು ಔಷದ ತಯಾರಿಕಾ ಸಂಸ್ಥೆಗಳು, ಔಷದ ಮಾರಾಟಗಾರರು, ಔಷದ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ವೈದ್ಯರನ್ನು ಅಧಿಕೃತವಾಗಿ ಸಂದರ್ಶಿಸಲಾಗಿತ್ತು. 

ಇದರೊಂದಿಗೆ ಭಾರತದ ಉದ್ದಗಲಕ್ಕೂ ತುಂಬಿರುವ ವೈದ್ಯಕೀಯ ವಿಜ್ಞಾನದ ಪ್ರಾಥಮಿಕ ಜ್ಞಾನವೂ ಇರದ " ನಕಲಿ ವೈದ್ಯ" ರು ರಾಜಾರೋಷವಾಗಿ ಸೂಚಿಸುವ ಔಷದಗಳನ್ನು ನೀಡುವ ಔಷದ ಅಂಗಡಿಯವರು ಹಾಗೂ ಇವುಗಳನ್ನು ಸೇವಿಸುವ ಅಮಾಯಕ ರೋಗಿಗಳೂ, ಈ ಸಮಸ್ಯೆ ವೃದ್ಧಿಸಲು ಕಾರಣರಾಗುತ್ತಾರೆ. 

ಇವೆಲ್ಲವುಗಳಿಗಿಂತ ಮಿಗಿಲಾಗಿ ತಮ್ಮ ವೈದ್ಯರ ಬಳಿ  ಒತ್ತಾಯಪೂರ್ವಕವಾಗಿ ಇಂಜೆಕ್ಷನ್, ಟಾನಿಕ್, ವಿಟಮಿನ್, ಪ್ರಬಲ ಔಷದಗಳು ಮತ್ತು ಶಕ್ತಿವರ್ಧಕಗಳನ್ನು ಕೇಳಿ ಪಡೆದುಕೊಳ್ಳುವ ರೋಗಿಗಳು ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣಕರ್ತರೆನಿಸುತ್ತಾರೆ. ಮಾತ್ರವಲ್ಲ, ಕ್ಷುಲ್ಲಕ ಆರೋಗ್ಯದ ಸಮಸ್ಯೆಗಳಿಗೆ ಔಷದ ಸೇವನೆ ಅನಿವಾರ್ಯವಲ್ಲ ಎನ್ನುವ ವೈದ್ಯರನ್ನು ತೆಗಳುವ ಮತ್ತು ಎಲ್ಲ ಆರೋಗ್ಯದ ಸಮಸ್ಯೆಗಳಿಗೂ ಧಾರಾಳವಾಗಿ ಔಷದಗಳನ್ನು ನೀಡುವ ವೈದ್ಯರನ್ನು ಹೊಗಳುವ ರೋಗಿಗಳು ನಿಶ್ಚಿತವಾಗಿಯೂ ಅತಿಯಾದ ಮತ್ತು ಅನಾವಶ್ಯಕ ಔಷದಗಳ ಬಳಕೆಗೆ ನೇರವಾಗಿ ಹೊಣೆಗಾರರಾಗುತ್ತಾರೆ. 

ದುಷ್ಪರಿಣಾಮಗಳು 

ಸಾಮಾನ್ಯವಾಗಿ ನಿಮ್ಮನ್ನು ಕಾಡುವ ಶೀತ, ತಲೆನೋವು, ವಾಂತಿ, ಭೇದಿ ಹಾಗೂ ವೈರಸ್ ಗಳಿಂದ ಉದ್ಭವಿಸುವ ಅನೇಕ ಕಾಯಿಲೆಗಳಿಗೆ, ಅತ್ಯಂತ ಶಕ್ತಿಯುತ ಹಾಗೂ ಪ್ರಭಾವಶಾಲಿ ಔಷದಗಳನ್ನು ಸೇವಿಸುವ ಅವಶ್ಯಕತೆಯೇ ಇರುವುದಿಲ್ಲ. ಮಾತ್ರವಲ್ಲ, ಇವುಗಳ ಸೇವನೆಯಿಂದ ನಿಶ್ಶಕ್ತಿ, ವಾಕರಿಕೆಯಂತಹ ತೊಂದರೆಗಳೊಂದಿಗೆ, ಮೂತ್ರಪಿಂಡ ಮತ್ತು ಯಕೃತ್ತಿನ ಕಾರ್ಯಕ್ಷಮತೆಗಳ ಮೇಲೆ ತೀವ್ರ ದುಷ್ಪರಿಣಾಮಗಳೂ ಉಂಟಾಗುತ್ತವೆ. ಇಂತಹ ಪ್ರಬಲ ಔಷದಗಳು ಕೆಲವೊಂದು ಕಾಯಿಲೆಗಳಲ್ಲಿ ಅನಿವಾರ್ಯ ಹಾಗೂ ಪ್ರಾಣರಕ್ಷಕ ಎನಿಸಬಹುದಾದರೂ, ಇವುಗಳ ಅನಾವಶ್ಯಕ ಸೇವನೆಯಿಂದ ರೋಗಿಯು ಇವುಗಳಿಗೆ ಪ್ರತಿರೋಧಶಕ್ತಿಯನ್ನು ಗಳಿಸುವುದು ಅಪರೂಪವೇನಲ್ಲ. ಇದಕ್ಕೂ ಮಿಗಿಲಾಗಿ ರೋಗಕಾರಕ ರೋಗಾಣುಗಳು ಈ ಔಷದಗಳಿಗೆ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಲ್ಲಿ, ಇಂತಹ ರೋಗಾಣುಗಳು ಮನುಕುಲಕ್ಕೆ ಮಾರಕವೆನಿಸುವುದರಲ್ಲಿ ಸಂದೇಹವಿಲ್ಲ. ಜಗತ್ತಿನ ಅನೇಕ ದೇಶಗಳಲ್ಲಿ ಇತ್ತೀಚಿನ ಕೆಲವರ್ಷಗಳಲ್ಲಿ ಆಕಸ್ಮಿಕವಾಗಿ ಉದ್ಭವಿಸಿ, ಕಾಡ್ಗಿಚ್ಚಿನಂತೆ ಹರಡುತ್ತಿರುವ ಸೋಂಕುಗಳು ಹಾಗೂ ಸಾಂಕ್ರಾಮಿಕ ಕಾಯಿಲೆಗಳಿಗೆ ಕಾರಣವೆನಿಸಬಲ್ಲ ಈ ಸಮಸ್ಯೆ ನಿಜಕ್ಕೂ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ. 

ಪ್ರಸ್ತುತ ಭಾರತದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ "ಮಲೇರಿಯ" ಕಾಯಿಲೆಯ ರೋಗಾಣುಗಳು, ಅನೇಕ ಔಷದಗಳಿಗೆ ಈಗಾಗಲೇ ಪ್ರತಿರೋಧ ಶಕ್ತಿಯನ್ನು ಗಳಿಸಿಕೊಂಡಿರುವುದು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. 

ಇದೇ ರೀತಿಯಲ್ಲಿ ಇನ್ನೂ ಅನೇಕ ಸಾಮಾನ್ಯ ಹಾಗೂ ಗಂಭೀರ ದುಷ್ಪರಿಣಾಮಗಳಿಗೆ ಕಾರಣವೆನಿಸಬಲ್ಲ ಅತಿಯಾದ ಮತ್ತು ಅನಾವಶ್ಯಕ ಔಷದಗಳ ಸೇವನೆಯು ನಿಶ್ಚಿತವಾಗಿಯೂ ನಿಮ್ಮ ಆರೋಗ್ಯಕ್ಕೆ ಹಾನಿಕರ ಎನ್ನುವುದನ್ನು ಮರೆಯದಿರಿ. 

ಪರಿಹಾರವೇನು? 

ಬಹುತೇಕ ಔಷದ ತಯಾರಿಕಾ ಸಂಸ್ಥೆಗಳು ಅನುಸರಿಸುವ ವಿವಿಧ ರೀತಿಯ " ಮಾರಾಟ ತಂತ್ರ" ಗಳಿಗೆ ಕಡಿವಾಣ ತೊಡಿಸುವುದು, ಈ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಅತ್ಯಂತ ಉಪಯುಕ್ತವೆನಿಸುವುದು. ಇದಲ್ಲದೆ ಔಷದ ತಯಾರಿಕ ಸಂಸ್ಥೆಗಳ ಒಂದು ವರ್ಷದ ವ್ಯವಹಾರದ ಸಣ್ಣದೊಂದು ಅಂಶವನ್ನು ಮಾತ್ರ " ವೈದ್ಯರಿಗೆ ನೀಡುವ ಕೊಡುಗೆ' ಗಳಿಗೆ ವಿನಿಯೋಗಿಸುವಂತೆ ಸರ್ಕಾರವೇ ಕಾನೂನನ್ನು ಜಾರಿಗೆ ತಂದಲ್ಲಿ, ಈ ಸಮಸ್ಯೆಯನ್ನು ಆಂಶಿಕವಾಗಿ ನಿಯಂತ್ರಿಸುವುದು ಸುಲಭಸಾಧ್ಯವೆನಿಸುವುದು. 

ಜನಸಾಮಾನ್ಯರಿಗೆ ಅತಿಯಾದ- ಅನಾವಶ್ಯಕ ಔಷದ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿಯನ್ನು ನೀಡುವುದು, ಪ್ರತಿಯೊಂದು ಔಷದವನ್ನು ಮಾರಾಟ ಮಾಡುವಾಗ ಇದರೊಂದಿಗೆ ಇದರ ಸೇವನಾ ಪ್ರಮಾಣ, ಸೇವನಾ ಕ್ರಮ, ಉದ್ಭವಿಸಬಲ್ಲ ಅಡ್ಡ- ದುಷ್ಪರಿಣಾಮಗಳು, ಮತ್ತು ಇತರ ಔಷದಗಳನ್ನು ಇದರೊಂದಿಗೆ ಸೇವಿಸಿದಲ್ಲಿ ಉದ್ಭವಿಸಬಲ್ಲ ಸಮಸ್ಯೆಗಳೇ ಮುಂತಾದ ಮಾಹಿತಿಗಳಿರುವ ಪುಟ್ಟ ಕರಪತ್ರವೊಂದನ್ನು ನೀಡುವುದು ನಿಸ್ಸಂದೇಹವಾಗಿಯೂ ಈ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎನಿಸುವುದು. 

ಅಂತೆಯೇ ಅನಾವಶ್ಯಕ ಹಾಗೂ ಅಸಂಬದ್ಧ ಔಷದಗಳ ಸಮ್ಮಿಶ್ರಣಗಳ ಉತ್ಪನ್ನಗಳನ್ನು ನಿಷೇಧಿಸುವುದು, ವೈದ್ಯರು ಸೂಚಿಸದೇ ಅಥವಾ ನಕಲಿ ವೈದ್ಯರು ಸೂಚಿಸಿದ ಔಷದಗಳನ್ನು ಔಷದ ಅಂಗಡಿಯವರು ನೀಡುವುದು, ಅತಿಯಾದ ಔಷದಗಳನ್ನು ವೈದ್ಯರು ಸೂಚಿಸಿದಲ್ಲಿ ತತ್ಸಂಬಂಧಿತ ವೈದ್ಯಕೀಯ ಸಂಘಟನೆಗಳ ಅಥವಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವುದೇ ಮುಂತಾದ ಅವಶ್ಯಕ ಆದರೆ ಅನಿವಾರ್ಯ ಕ್ರಮಗಳನ್ನು ಸರಕಾರವೇ ನಿರ್ದಾಕ್ಷಿಣ್ಯವಾಗಿ ಜಾರಿಗೆ ತರುವುದರೊಂದಿಗೆ, ಜನಸಾಮಾನ್ಯರೂ ಜಾಗರೂಕರಾದಲ್ಲಿ ಇಂತಹ ಸಮಸ್ಯೆಗಳನ್ನು ನಿರ್ಮೂಲನಗೊಳಿಸುವುದು ಖಚಿತವಾಗಿಯೂ ಅಸಾಧ್ಯವೆನಿಸದು. 

ನೀವೇನು ಮಾಡಬಹುದು?

 ನಿಮ್ಮ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಸಂದರ್ಶಿಸಿದ ವೈದ್ಯರು, ತಮ್ಮಿಂದಲೇ ಚಿಕಿತ್ಸೆಯನ್ನು ಚಿಕಿತ್ಸೆಯನ್ನು ಪಡೆದುಕೊಳ್ಳುವಂತೆ ನಿಮ್ಮನ್ನು ಒತ್ತಾಯಿಸುವಂತಿಲ್ಲ. ಜೊತೆಗೆ ಯಾವುದೇ ವೈದ್ಯರ ಚಿಕಿತ್ಸೆಯನ್ನು ನಿರಾಕರಿಸುವ ಹಾಗೂ ಅವಶ್ಯವೆನಿಸಿದಲ್ಲಿ ಮತ್ತೊಬ್ಬ ವೈದ್ಯರ ಸಲಹೆ ಪಡೆಯುವ ಹಕ್ಕು ನಿಮಗಿದೆ. ಅದೇ ರೀತಿಯಲ್ಲಿ ವೈದ್ಯರು ಸೂಚಿಸಿದ ಪ್ರತಿಯೋಂದು ಔಷದದ ಅವಶ್ಯಕತೆ, ಸೇವನಾ ಪ್ರಮಾಣ, ಇವುಗಳ ಒಳ್ಳೆಯ- ಕೆಟ್ಟ ಪರಿಣಾಮಗಳನ್ನು ಕೇಳಿ ತಿಳಿದುಕೊಳ್ಳುವ ಹಕ್ಕು ನಿಮಗಿದೆ. 

ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳು ಬಾಧಿಸಿದಾಗ ನಿಮ್ಮಲ್ಲಿ ಕಂಡುಬರುವ ವಿವಿಧ ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡುವಂತೆ ವೈದ್ಯರನ್ನು ಒತ್ತಾಯಿಸದಿರಿ. ಉದಾಹರಣೆಗೆ "ಫ್ಲೂ' ಜ್ವರ ಬಾಧಿಸಿದಾಗ ಜ್ವರ, ತಲೆನೋವು, ಮೈಕೈ ನೋವು, ಗಂಟಲುನೋವು, ಶೀನು, ಕೆಮ್ಮು, ಬಾಯಿ ರುಚಿ ಮತ್ತು ಹಸಿವಿಲ್ಲದಿರುವುದು, ನಿಶ್ಶಕ್ತಿ ಮತ್ತು ನಿದ್ರಾಹೀನತೆಗಳಂತಹ ಲಕ್ಷಣಗಳು ಕಂಡುಬರುತ್ತವೆ. ಇವೆಲ್ಲಾ ಲಕ್ಷಣಗಳಿಗೂ ಒಂದೊಂದು ಔಷದವನ್ನು ನೀಡಿದಲ್ಲಿ, ನೀವು ಸೇವಿಸಬೇಕಾಗುವ ಒಟ್ಟು ಔಷದಗಳ ಸಂಖ್ಯೆ ಒಂದು ಡಜನ್ ಮೀರುತ್ತದೆ!. ನಿಜ ಹೇಳಬೇಕಿದ್ದಲ್ಲಿ ಸಂಪೂರ್ಣ ವಿಶ್ರಾಂತಿಯೊಂದಿಗೆ ಕೇವಲ ಒಂದೆರಡು ವಿಧದ ಸಾಮಾನ್ಯ ಔಷದಗಳನ್ನು ನಾಲ್ಕಾರು ದಿನಗಳ ಕಾಲ ಸೇವಿಸಿದಲ್ಲಿ, ಫ್ಲೂ ಜ್ವರವು ಸಂಪೂರ್ಣವಾಗಿ ಶಮನಗೊಳ್ಳುತ್ತದೆ. 

ಯಾವುದೇ ಸಂದರ್ಭದಲ್ಲೂ ನೀವು ಅಪೇಕ್ಷಿಸಿದ ಚಿಕಿತ್ಸೆಯನ್ನೇ, ಅಂದರೆ ಇಂಜೆಕ್ಷನ್, ಮಾತ್ರೆ, ಕ್ಯಾಪ್ಸೂಲ್, ಸಿರಪ್ ಹಾಗೂ ಟಾನಿಕ್ ಇತ್ಯಾದಿಗಳನ್ನೇ ನೀಡುವಂತೆ ವೈದ್ಯರನ್ನು ಒತ್ತಾಯಿಸದಿರಿ. 

ಅಂತಿಮವಾಗಿ ಹೇಳುವುದಾದಲ್ಲಿ ಇಂತಹ ಉಪಕ್ರಮಗಳನ್ನು ಪ್ರತಿಯೊಬ್ಬ ರೋಗಿಯು ಅನುಸರಿಸಿದಲ್ಲಿ, ಅನಾವಶ್ಯಕ ಔಷದಗಳನ್ನು ಸೂಚಿಸುವ ವೈದ್ಯರ ಪ್ರವೃತ್ತಿ ಹಾಗೂ ಇವುಗಳನ್ನು ಸೇವಿಸುವುದರಿಂದ ರೋಗಿಗಳು ಅನುಭವಿಸಬೇಕಾದ ತೊಂದರೆಗಳನ್ನು ನಿವಾರಿಸುವಲ್ಲಿ ನಿಮ್ಮ ಪಾತ್ರವೂ ಮಹತ್ವಪೂರ್ಣ ಎನಿಸಬಲ್ಲದು.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು.

ಉದಯವಾಣಿ ಪತ್ರಿಕೆಯ ದಿ. ೦೯-೧೨-೨೦೦೪ ರ ಸಂಚಿಕೆಯ ಬಳಕೆದಾರ; ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.


Wednesday, February 5, 2014

SHASTRACHIKITSE ANTIMA ASTRAVE?



               ಶಸ್ತ್ರಚಿಕಿತ್ಸೆ ಅಂತಿಮ ಅಸ್ತ್ರವೇ?

ನಿಮ್ಮನ್ನು ಪೀಡಿಸುತ್ತಿರುವ ಆರೋಗ್ಯದ ಸಮಸ್ಯೆಯೊಂದಕ್ಕೆ ಶಸ್ತ್ರಚಿಕಿತ್ಸೆಯೇ ಏಕಮಾತ್ರ ಪರಿಹಾರವೆಂದು ವೈದ್ಯರು ಸೂಚಿಸಿದಾಗ,  "ಶುಭಸ್ಯ ಶೀಘ್ರಂ" ಎಂದು ಚಿಕಿತ್ಸೆ ಪಡೆದುಕೊಂಡಲ್ಲಿ ನಿಮ್ಮ ಶಾರೀರಿಕ ಸಮಸ್ಯೆಯ ಪರಿಹಾರದೊಂದಿಗೆ ಮಾನಸಿಕ ನೆಮ್ಮದಿಯೂ ಲಭಿಸುವುದರಲ್ಲಿ ಸಂದೇಹವಿಲ್ಲ. 
-------------               --------------                  --------------                 ----------------         --------------

ಮಾನವನನ್ನು ಪೀಡಿಸುವ ಪ್ರತಿಯೊಂದು ಕಾಯಿಲೆಗಳನ್ನು " ಔಷದ ಚಿಕಿತ್ಸೆ" ಯ ಮೂಲಕ ಗುಣಪಡಿಸುವುದು ಅಸಾಧ್ಯ ಎನ್ನುವುದು ನಿಮಗೂ ತಿಳಿದಿರಲೇಬೇಕು. ಶಸ್ತ್ರಚಿಕಿತ್ಸೆಯ ಹೊರತು ಅನ್ಯ ಚಿಕಿತ್ಸೆಗಳಿಂದ ಗುಣಪಡಿಸಲು ಅಸಾಧ್ಯವೆನಿಸುವ ಕೆಲವೊಂದು ವೈದ್ಯಕೀಯ ಸಮಸ್ಯೆಗಳಲ್ಲಿ, ಇತರ ಯಾವುದೇ ಪದ್ದತಿಯ ಚಿಕಿತ್ಸೆಗಳು ನಿಷ್ಪ್ರಯೋಜಕ ಎನಿಸುತ್ತವೆ. ಆದರೆ ಶಸ್ತ್ರಚಿಕಿತ್ಸೆಯ ಬಗ್ಗೆ ಅನಾವಶ್ಯಕವಾಗಿ ಭಯಪಡುವ ಜನಸಾಮಾನ್ಯರು, ಇಂತಹ ಪ್ರಯೋಗಗಳನ್ನು ಕೈಗೊಳ್ಳುವುದು ಅಪರೂಪವೇನಲ್ಲ. ಆದರೆ ಇಂತಹ ಪ್ರಯೋಗಗಳಿಂದಾಗಿ ಸಾಕಷ್ಟು ಹಣದೊಂದಿಗೆ ತಮ್ಮ ಆರೋಗ್ಯವನ್ನೂ ಕಳೆದುಕೊಂಡು, ಪ್ರಾಣಾಪಾಯದ ಸಾಧ್ಯತೆಗಳು ಕಂಡುಬಂದಾಗ ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಗೆ ಶರಣಾದ ಪ್ರಕರಣಗಳು ಸಾಕಷ್ಟಿವೆ. 

ಲಂಗೋಟಿ ಚಿಕಿತ್ಸೆ!

ಅವಿದ್ಯಾವಂತ ಮಂಕು ಹುಟ್ಟಿದಾರಭ್ಯ ಯಾವುದೇ ಕಾರಣಕ್ಕೂ ವೈದ್ಯರ ಬಳಿ ಹೋಗಿರಲೇ ಇಲ್ಲ. ಮುಂಜಾನೆಯಿಂದ ಮುಸ್ಸಂಜೆಯ ತನಕ ಮೈಮುರಿದು ದುಡಿಯುತ್ತಿದ್ದ ಆತನ ಆರೋಗ್ಯದ ಮಟ್ಟವು ಉತ್ತಮವಾಗಿದ್ದುದೇ ಇದಕ್ಕೆ ಕಾರಣವೆನಿಸಿತ್ತು. ಜೊತೆಗೆ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಆತನ ತಾಯಿ ಅಥವಾ ಪತ್ನಿ ತಯಾರಿಸಿ ನೀಡುತ್ತಿದ್ದ ಮನೆಮದ್ದು ಆತನ ಸಮಸ್ಯೆಯನ್ನು ಪರಿಹರಿಸುವಲ್ಲಿ ಉಪಯುಕ್ತವೆನಿಸುತ್ತಿತ್ತು. ಪ್ರಾಯಶಃ ಇದೇ ಕಾರಣದಿಂದಾಗಿ ವೈದ್ಯರು ಮತ್ತು ಆಸ್ಪತ್ರೆಗಳನ್ನು ಕಂಡರೆ ಆತನಿಗೆ ಅವ್ಯಕ್ತ ಭಯವೊಂದು ಕಾಡುತ್ತಿತ್ತು. 

ಇದೀಗ ೬೦ ರ ಅಂಚಿನಲ್ಲಿದ್ದ ಮಾಂಕುವಿಗೆ ಒಂದೆರಡು ತಿಂಗಳುಗಳ ಹಿಂದೆ ಕಿಬ್ಬೊಟ್ಟೆಯ ಎಡಬದಿಯಲ್ಲಿ ನೆಲ್ಲಿಕಾಯಿ ಗಾತ್ರದ ಮೆತ್ತಗಿನ ಗುಳ್ಳೆಯೊಂದು ಕಂಡುಬಂದಿತ್ತು. ಆಶ್ಚರ್ಯವೆಂದರೆ ರಾತ್ರಿ ಆಟ ಮಲಗಿದ ಸ್ವಲ್ಪ ಹೊತ್ತಿನಲ್ಲಿ ಮಾಯವಾಗುತ್ತಿದ್ದ ಈ ಗುಳ್ಳೆ, ಬೆಳಿಗ್ಗೆ ಎದ್ದು ಬಹಿರ್ದೆಶೆಗೆ ಹೋಗಿ ಬರುವಷ್ಟರಲ್ಲೇ ಮತ್ತೆ ಪ್ರತ್ಯಕ್ಷವಾಗುತ್ತಿತ್ತು!. ಆರು ತಿಂಗಳುಗಳು ಕಳೆಯುವಷ್ಟರಲ್ಲಿ ನೆಲ್ಲಿಕಾಯಿ ಗಾತ್ರದ ಗುಳ್ಳೆಯು ನಿಂಬೆ ಹಣ್ಣಿನಷ್ಟು ದೊಡ್ಡದಾಗಿ ಬೆಳೆದಿತ್ತು. ಈ ಗುಳ್ಳೆಯ ಬಗ್ಗೆ ಏನೇನೂ ಅರಿತಿರದ ಈ ಮಂದಮತಿಗೆ, ಇದನ್ನು ವೈದ್ಯರಿಗೆ ತೋರಿಸಬೇಕೆನ್ನುವುದು ಮನಸ್ಸಿಗೆ ಹೊಳೆದಿರಲಿಲ್ಲ. 

ಹೀಗಿರುವಾಗ ವಾಡಿಕೆಯಂತೆ ರಾಮಭಟ್ಟರ ತೋಟಕ್ಕೆ ಗೊಬ್ಬರ ಹಾಕಲು ಹೋಗುತ್ತಿದ್ದ ಮಾಂಕುವಿಗೆ, ನಾಲ್ಕಾರು ದಿನಗಳ ಶಾರೀರಿಕ ಶ್ರಮದ ಕೆಲಸದ ಪರಿಣಾಮವಾಗಿ ಗುಳ್ಳೆ ಇರುವ ಜಾಗದಲ್ಲಿ ಅತಿಯಾದ ನೋವು ಆರಂಭವಾಗಿತ್ತು. ಇದೇ ಕಾರಣದಿಂದಾಗಿ ಕೆಲಸ ಮಾಡಲು ಅಸಮರ್ಥನಾದ ಮಾಂಕುವಿನಿಂದ ವಿಷಯವನ್ನರಿತ ಭಟ್ಟರು, ವೃತ್ತಿಯಲ್ಲಿ ವೈದ್ಯನಾಗಿದ್ದ ತಮ್ಮ ಮಗನನ್ನು ಕರೆಸಿ ಮಾನ್ಕುವನ್ನು ಪರೀಕ್ಷಿಸಿ ಔಷದವನ್ನು ನೀಡುವಂತೆ ಹೇಳಿದರು. 

ಮಾಂಕುವನ್ನು ಪರೀಕ್ಷಿಸಿದ ವೈದ್ಯರಿಗೆ ಆತನ ನೋವಿಗೆ "ಹರ್ನಿಯಾ" ಕಾರಣವೆಂದು ತಿಳಿದುಬಂದಿತ್ತು. ಈಗಾಗಲೇ ತುಸು ಉಲ್ಬಣಿಸಿದ್ದ ಈ ಹರ್ನಿಯಾ ಇನ್ನಷ್ಟು ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುವ ಮುನ್ನ, ಇದನ್ನು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬೇಕು ಎಂದು ವೈದ್ಯರು ಸೂಚಿಸಿದ್ದರು. ಆದರೆ ಆಪರೇಶನ್ ಎನ್ನುವ ಪದವನ್ನು ಕೇಳಿದ ಮಾಂಕುವೀಣೆ ಮನಸ್ಸಿಗೆ ಮಂಕು ಕವಿದಂತಾಗಿತ್ತು. ತನಗಿಂತ ಕಿರಿಯ ವಯಸ್ಸಿನ ವೈದ್ಯರ ಕಾಲಿಗೆ ಬಿದ್ದು, ಏನಾದರೂ ಮದ್ದು ಕೊಟ್ಟು ಗುಣಪಡಿಸಿ, ಆದರೆ ಆಪರೇಶನ್ ಮಾತ್ರ ಬೇಡವೆಂದು ಗೋಗರೆದ ಮಾಂಕುವಿಗೆ ಆಪರೇಶನ್ ಹೊರತು ಅನ್ಯ ಚಿಕಿತ್ಸೆಯೇ ಇಲ್ಲವೆಂದು ವೈದ್ಯರು ತಿಳಿಸಿದ್ದರು. 

ಮರುದಿನದಿಂದಲೇ ಮಾಂಕು ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದನು. ತನಗೆ ಆಪರೇಶನ್ ಆದಲ್ಲಿ ತಾನು ಬದುಕಿ ಉಳಿಯುವ ಸಾಧ್ಯತೆಗಳೇ ಇಲ್ಲವೆನ್ನುವ ' ಸಂಶಯ ಪಿಶಾಚಿ' ಆತನ ಮನವನ್ನು ಹೊಕ್ಕಿತ್ತು. ಇದೇ ಸಂದರ್ಭದಲ್ಲಿ ಮಾಂಕುವಿನ ಮನೆಗೆ ಬಂದಿದ್ದ ಸಂಬಂಧಿಯೊಬ್ಬರು ಆತನ ವಿಹಿತ್ರ ವರ್ತನೆಗಳಿಗೆ ಕಾರಣವೇನೆಂದು ಕೇಳಿದಾಗ, ತನ್ನ ಮನದಳಲನ್ನು ಆತನಲ್ಲಿ ತೋಡಿಕೊಂಡ ಮಾಂಕು ಮಕ್ಕಳಂತೆ ಬಿಕ್ಕಿಬಿಕ್ಕಿ ಅತ್ತಿದ್ದನು. ಮಾಂಕುವಿನ ಕಣ್ಣೀರನ್ನು ಕಂಡರೂ ವಿಚಲಿತನಾಗದ ಈ ಬಂಧುವು ಆತನ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆಯನ್ನು ನೀಡಿ ಮುಗುಳ್ನಕ್ಕನು. ತನ್ನ ಊರಿನಲ್ಲಿ ಕೇವಲ ಔಷದವನ್ನು ಪ್ರಯೋಗಿಸಿ ಹರ್ನಿಯಾ ಗುಣಪಡಿಸುವ ಪಂಡಿತರೊಬ್ಬರು ಇದ್ದಾರೆ ಎಂದು ಹೇಳಿದಾಗ, ಮಾಂಕುವಿನ ಮುಖದಲ್ಲಿನ ಪ್ರೇತಕಳೆ ಮಾಯವಾಗಿ ಮಂದಹಾಸ ಮೂಡಿತ್ತು. ಆಪರೇಶನ್ ಮಾಡದೇ ತನ್ನ ಸಮಸ್ಯೆ ಪರಿಹಾರವಾಗುವುದರೊಂದಿಗೆ ತಾನು ಜೀವ ಸಹಿತ ಪಾರಾಗಲಿರುವೆನೆಂದು ಅರಿತ ಮಾಂಕುವು, ಅಂದು ರಾತ್ರಿ ನಿರಾಳವಾಗಿ ನಿದ್ರಿಸಿದ್ದನು. 

ಮರುದಿನ ಬಂಧುವಿನೊಂದಿಗೆ ಆತನ ಊರಿಗೆ ತೆರಳಿದ ಮಾಂಕು ಪಂಡಿತರನ್ನು ಭೇಟಿಯಾದನು. ರೋಗಿಯನ್ನು ಕೂಲಂಕುಶವಾಗಿ ಪರೀಕ್ಷಿಸಿದ ವೈದ್ಯ ಶಿಖಾಮಣಿಯು,ತನ್ನ ಚಿಕಿತ್ಸೆಯಿಂದ ಹರ್ನಿಯಾ "ಮಂಗಮಾಯ" ವಾಗುವುದೆನ್ನುವ ಭರವಸೆಯನ್ನು ನೀಡಿದ್ದನು!. ಬಳಿಕ ಚಿಕಿತ್ಸೆಯ ಅಂಗವಾಗಿ ಸಾಕಷ್ಟು ಉದ್ದ ಮತ್ತು ಅಗಲವಿರುವ ಒಣ ಹೊಗೆಸೊಪ್ಪಿನ ಎಲೆಯೊಂದನ್ನು ಬಿಡಿಸಿ, ಅದರ ಮೇಲೆ ದಪ್ಪನೆಯ ಔಷದಯುಕ್ತ ಲೇಪವನ್ನು ಹಚ್ಚಿ, ಈ ಹೊಗೆಸೊಪ್ಪಿನ ಎಲೆಯನ್ನು "ಲಂಗೋಟಿ"ಯಂತೆ ದಿನವಿಡೀ ಧರಿಸುವಂತೆ ಆದೆಶಿಸಿದ್ದನು!. ಪ್ರತಿನಿತ್ಯ ಹೊಸದೊಂದು ಹೊಗೆಸೊಪ್ಪಿನ ಎಲೆಗೆ ಲೇಪವನ್ನು ಬಳಿದು ಸುಮಾರು ನಾಲ್ಕಾರು ವಾರಗಳ ಕಾಲ ಧರಿಸಿದಲ್ಲಿ ನಿಶ್ಚಿತವಾಗಿಯೂ ಹರ್ನಿಯಾ ಮಾಯವಾಗುವುದು ಎಂದು ಪಂಡಿತನು ಹೇಳಿದ್ದನು. 

ಎರಡು ವಾರಗಳ ಚಿಕಿತ್ಸೆಯ ಬಳಿಕ ಮಾಂಕುವಿನ ಹರ್ನಿಯಾ ಕಿಂಚಿತ್ ಕೂಡಾ ಕಡಿಮೆಯಾಗದಿದ್ದರೂ, ಆತನ ತೊಡೆಯಾ ಸಂದಿ ಮತ್ತು ಮರ್ಮಾಂಗಗಳಲ್ಲಿ ಚರ್ಮದ ಉರಿಯೂತ ಮತ್ತು ಸಣ್ಣಪುಟ್ಟ ಹುಣ್ಣುಗಳು ಕಾಣಿಸಿಕೊಂಡಿದ್ದವು. ತತ್ಪರಿಣಾಮವಾಗಿ ಅತ್ತಿತ್ತ ನಡೆದಾಡಲೂ ಅಸಾಧ್ಯವೆನಿಸಿದಾಗ ಅನ್ಯಮಾರ್ಗವಿಲ್ಲದೆ ರಾಮಭಟ್ಟರ ಮಗನ ಬಳಿಗೆ ತೆರಳಿದ್ದನು. ಮಾಂಕುವಿನ ಸ್ಥಿತಿಯನ್ನು ಕಂಡು ವೈದ್ಯರಿಗೆ ಮರುಕ ಹುಟ್ಟಿದರೂ, ತಾನು ಹೇಳಿದ ಮಾತನ್ನು ಕೇಳದೇ ಇಂತಹ ಅವೈಜ್ಞಾನಿಕ ಚಿಕಿತ್ಸೆಯನ್ನು ಪಡೆದ ಆತನಿಗೆ ಛೀಮಾರಿ ಹಾಕಿದ್ದರು. 

ವೈದ್ಯರ ಚಿಕಿತ್ಸೆಯಿಂದ ಚರ್ಮದ ಉರಿಯೂತ ಕಡಿಮೆಯಾದ ಬಳಿಕ ಒತ್ತಾಯಪೂರ್ವಕವಾಗಿ ಮಾಂಕುವಿನ ಹರ್ನಿಯಾ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಸ್ ವಾರ ಕಳೆಯುವಷ್ಟರಲ್ಲಿ ಚೇತರಿಸಿಕೊಂಡಿದ್ದ ಮಾಂಕುವಿಗೆ ತನ್ನ ಸಮಸ್ಯೆ ಪರಿಹಾರಗೊಂಡಿರುವುದರೊಂದಿಗೆ, ತಾನು ಬದುಕಿ ಉಳಿದಿರುವುದಕ್ಕಾಗಿ ಗ್ರಾಮದೇವತೆಗೆ ಕೈಮುಗಿದದ್ದು ಮಾತ್ರ ಸುಳ್ಳೇನಲ್ಲ!. 

ಸಹಸ್ರಾರು ವರ್ಷಗಳ ಹಿಂದೆ ಆಯುರ್ವೇದ ವೈದ್ಯ ಪದ್ದತಿಯಲ್ಲಿ ವಿವಿಧ ರೀತಿಯ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದವು. ಶಸ್ತ್ರಚಿಕಿತ್ಸೆಯ ಪಿತಾಮಹ ಎನಿಸಿರುವ ಸುಶ್ರುತ ಆಚಾರ್ಯ ವಿರಚಿತ "ಸುಶ್ರುತ ಸಂಹಿತೆ' ಯಲ್ಲಿ ಈ ಬಗ್ಗೆ ವಿಶದವಾದ ಮಾಹಿತಿಗಳೂ ಇವೆ. ಆದರೆ ಇಂದು ಮಿಡಿಯುತ್ತಿರುವ ಹೃದಯದ ಬಡಿತವನ್ನು ನಿಲ್ಲಿಸದೇ ಶಸ್ತ್ರಚಿಕಿತ್ಸೆಯನ್ನು ನಡೆಸುವ ಈ ಆಧುನಿಕ ಯುಗದಲ್ಲೂ, ಅನೇಕ ವಿದ್ಯಾವಂತರೂ ಮಾಂಕುವಿನಂತೆಯೇ ವಿವಿಧ ರೀತಿಯ ಅವೈಜ್ಞಾನಿಕ ಚಿಕಿತ್ಸೆಗಳನ್ನು ಶಸ್ತ್ರಚಿಕಿತ್ಸೆಗೆ ಪರ್ಯಾಯವಾಗಿ ಪ್ರಯತ್ನಿಸುವುದು ನಿಜಕ್ಕೂ ವಿಷಾದನೀಯ. ಇಂತಹ ಪ್ರಯೋಗಗಳನ್ನು ಪ್ರಯತ್ನಿಸಿ ಪ್ರಾಣವನ್ನೇ ತೆತ್ತವರ ಸಂಖ್ಯೆಯೂ ಕಡಿಮೆಯೇನಿಲ್ಲ. 
ನಿಮ್ಮ ನಂಬಿಗಸ್ಥ ವೈದ್ಯರು ನಿಮ್ಮನ್ನು ಕಾಡುವ ವ್ಯಾಧಿಯೊಂದನ್ನು ಗುಣಪಡಿಸಲು ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದಾಗ, ನಿಮ್ಮ ವೈದ್ಯರ "ರೋಗ ನಿದಾನ" (Diagnosis) ನ ಬಗ್ಗೆ ಸಂದೇಹವಿದ್ದಲ್ಲಿಮತ್ತೊಬ್ಬ ತಜ್ಞರ ಸಲಹೆ ಪಡೆಯುವ ಹಕ್ಕು ನಿಮಗಿದೆ. ಆದರೆ ಎರಡಕ್ಕೂ ಹೆಚ್ಚು ತಜ್ಞರ ರೋಗ ನಿದಾನ ಏಕರೀತಿಯದಾಗಿದ್ದು, ಶಸ್ತ್ರಚಿಕಿತ್ಸೆಯ ಹೊರತು ಅನ್ಯಮಾರ್ಗವಿಲ್ಲ ಎಂದಾದಲ್ಲಿ, ವಿಳಂಬಿಸದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಹಿತಕರವೆನಿಸೀತು. ಅನಾವಶ್ಯಕವಾಗಿ ಮೀನಮೇಷ ಎಣಿಸುತ್ತಾ ಕಾಲಹರಣ ಮಾಡುವುದರಿಂದ ನಿಮ್ಮ ಕಾಯಿಲೆ ಉಲ್ಬಣಿಸಿ ನಿಮ್ಮ ಸಾಮಾನ್ಯ ಆರೋಗ್ಯದ ಮೇಲೆ ವಿವಿಧ ರೀತಿಯ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೧-೧೦-೨೦೦೪ ರ ಸಂಚಿಕೆಯ ಬಳಕೆದಾರ; ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 



Monday, February 3, 2014

Chikungunya





                             ಚಿಂತಾಜನಕ ಚಿಕುನ್ ಗುನ್ಯಾ 

ಅಪರೂಪದ ಆಲ್ಫಾ ವೈರಸ್ ಗಳಿಂದ ಉದ್ಭವಿಸಿ, ಸಾಂಕ್ರಾಮಿಕವಾಗಿ ಹರಡಬಲ್ಲ ಚಿಕುನ್ ಗುನ್ಯಾ ಕಾಯಿಲೆಯ ವಿಚಿತ್ರ ನಾಮಧೇಯದಿಂದಾಗಿ ಜನಸಾಮಾನ್ಯರು ಇದನ್ನು "ಕುಕ್ಕುಟ ಜ್ವರ" ದ ಮತ್ತೊಂದು ಅವತಾರವೆಂದು ಭಾವಿಸಿದ್ದರು. ನಾಲ್ಕಾರು ವಾರಗಳಿಂದ ಹಿಡಿದು ನಾಲ್ಕಾರು ತಿಂಗಳುಗಳ ಕಾಲ ಪೀದಿಸಬಲ್ಲ ಈ ವ್ಯಾಧಿಯ ಉಪಟಳವನ್ನು ಕ್ಷಿಪ್ರಗತಿಯಲ್ಲಿ ಗುಣಪಡಿಸಬಲ್ಲ ಔಷದಗಳು ಇಂದಿಗೂ ಲಭ್ಯವಿಲ್ಲ. ಈ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.
---------              ------------               -------------                 -----------               --------------            

 ಅರುವತ್ತು ವರ್ಷ ವಯಸ್ಸಿನ ಅನಂತಮೂರ್ತಿಯವರಿಗೆ ಅಪರಾತ್ರಿಯಲ್ಲಿ ಆಕಸ್ಮಿಕವಾಗಿ ತೀವ್ರಜ್ವರ, ಚಳಿ ಮತ್ತು ನಡುಕಗಳು ಆರಂಭವಾಗಿದ್ದವು. ಎಂದಿನಂತೆ ಸಜೆಯ ವಾಕಿಂಗ್ ಮುಗಿಸಿ ಮನೆಗೆ ಮರಳಿದ ಬಳಿಕ ರಾತ್ರಿಯ ಊಟ ಮುಗಿಸುವ ತನಕ ಆರಾಮವಾಗಿದ್ದ ಮೂರ್ತಿಯವರಿಗೆ, ಜ್ವರ ಬಾಧಿಸಬಹುದಾಗಿದ್ದ ಯಾವುದೇ ಪೂರ್ವಸೂಚನೆಗಳೇ ಕಂಡುಬಂದಿರಲಿಲ್ಲ. ಆದರೆ ನಡುರಾತ್ರಿಯಲ್ಲಿ ಪ್ರತ್ಯಕ್ಶವಾಗಿದ್ದ ತೀವ್ರ ಜ್ವರವು, ನಾಲ್ಕಾರು ಕಂಬಳಿಗಳನ್ನು ಹೊದ್ದರೂ ಕಡಿಮೆಯಾಗದ ಕಾರಣದಿಂದಾಗಿ ಸೇವಿಸಿದ್ದ ಪಾರಾಸಿಟಮಾಲ್ ಮಾತ್ರೆಯ ಪರಿಣಾಮದಿಂದ ತುಸು ಕಡಿಮೆಯಾಗಿತ್ತು. 

ಮರುದಿನ ಬೆಳಿಗ್ಗೆ ಎಚ್ಚರವಾದೊಡನೆ ಬಚ್ಚಲು ಮನೆಗೆ ಹೋಗಲೆಂದು ಎದ್ದ ಮೂರ್ತಿಯವರಿಗೆ, ಎರಡೂ ಕಾಲುಗಳ ಮಂಡಿ ಮತ್ತು ಪಾದಗಳಲ್ಲಿ  ಸಹಿಸಲು ಅಸಾಧ್ಯವಾದ ನೋವು ಕಾಣಿಸಿಕೊಂಡಿತ್ತು. ನೋವಿನ ತೀವ್ರತೆಯನ್ನು ತಡೆಯಲಾರದೇ ಹಾಸಿಗೆಯ ಮೇಲೆ ಕುಳಿತಿದ್ದ ಪತಿಯನ್ನು ಕಂಡ ಮಾಲತಿಗೆ, ವಿಷಯವನ್ನರಿತು ಗಾಬರಿಯಾಗಿತ್ತು. ಮಾಲತಿಯ ಕರೆಗೆ ಓಗೊಟ್ಟು ಮನೆಗೆ ಧಾವಿಸಿದ ಕುಟುಂಬ ವೈದ್ಯರು ಮೂರ್ತಿಯವರನ್ನು ಪರೀಕ್ಷಿಸಿದ ಬಳಿಕ ಇದು ಚಿಕುನ್ ಗುನ್ಯಾ ಕಾಯಿಲೆಯೆಂದು ಸಂದೇಹಿಸಿದ್ದರು. 

ವೈದ್ಯರ ಹೇಳಿಕೆಯಂತೆ ಸೊಳ್ಳೆಗಳ ಕಡಿತದಿಂದ ಹರಡುವ ಚಿಕುನ್ ಗುನ್ಯಾ ವ್ಯಾಧಿಗೆ ಆಲ್ಫಾ ವೈರಸ್ ಗಳು ಕಾರಣವಾಗಿದ್ದು, ಮಧ್ಯವಯಸ್ಸನ್ನು ದಾಟಿದ ವ್ಯಕ್ತಿಗಳಲ್ಲಿ ಇದರ ಹಾವಳಿಯು ಸುಮಾರು ಮೂರು ತಿಂಗಳುಗಳ ಕಾಲ ಬಾಧಿಸುವ ಸಾಧ್ಯತೆಗಳಿತ್ತು. ಈ ವ್ಯಾಧಿಯನ್ನು ಗುಣಪಡಿಸಬಲ್ಲ ಔಷದಗಳನ್ನು ಇದುವರೆಗೆ ಪತ್ತೆ ಹಚ್ಚದೇ ಇರುವುದರಿಂದ , ರೋಗಿಯಲ್ಲಿ ಕಂಡುಬರುವ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಬೇಕಾಗಿತ್ತು. 

ಸಂಪೂರ್ಣ ವಿಶ್ರಾಂತಿಯೊಂದಿಗೆ ವೈದ್ಯರು ನೀಡಿದ್ದ ಔಷದಗಳನ್ನು ಕ್ರಮಬದ್ಧವಾಗಿ ಸೇವಿಸಿದ ಮೂರ್ತಿಯವರ ಜ್ವರವು ನಾಲ್ಕು ದಿನಗಳಲ್ಲೇ ಮಾಯವಾಗಿದ್ದರೂ, ಮಂದಿ ಮತ್ತು ಪಾದಗಲ್ಲಿನ ನೋವು ಮತ್ತು ಬಾವುಗಳು ಸಂಪೂರ್ಣವಾಗಿ ಶಮನಗೊಳ್ಳಲು ಮೂರು ತಿಂಗಳುಗಳೇ ಕಳೆದಿದ್ದವು!. 

ಚಿಕುನ್ ಗುನ್ಯಾದ ಚರಿತ್ರೆ 

೧೯೫ ರಲ್ಲಿ ಪೂರ್ವ ಆಫ್ರಿಕಾದಲ್ಲಿ ಸಾಂಕ್ರಾಮಿಕವಾಗಿ ಕಂಡುಬಂದಿದ್ದ "ಡೆಂಗೆ ಜ್ವರ' ದಂತಹ ವ್ಯಾಧಿಪೀಡಿತರಲ್ಲಿ ಪತ್ತೆಯಾಗಿದ್ದ " ಚಿಕುನ್ ಗುನ್ಯಾ ವೈರಸ್" ಗಳು, ಬಳಿಕ ದಕ್ಷಿಣ ಭಾರತ ಮತ್ತು ದಕ್ಷಿಣ ಪೂರ್ವ ಆಫ್ರಿಕಾಗಳಲ್ಲಿ ಡೆಂಗೆ ಮತ್ತು ರಕ್ತಸ್ರಾವಕ ಜ್ವರಗಳು ಸಾಂಕ್ರಾಮಿಕವಾಗಿ ಕಾಣಿಸಿಕೊಂಡಾಗ ಮತ್ತೊಮ್ಮೆ ಪ್ರತ್ಯಕ್ಷವಾಗಿದ್ದವು. ಎಡೆಸ್ ಈಜಿಪ್ತೈ ಮತ್ತು ಎಡೆಸ್ ಆಫ್ರಿಕಾನ್ಸ್ ಎನ್ನುವ ಎರಡು ವಿಧದ ಸೊಳ್ಳೆಗಳು ಈ ವೈರಸ್ ಗಳ ಹರಡುವಿಕೆಗೆ ಕಾರಣವಾಗಿವೆ. 

೨ ವರ್ಷಗಳ ಬಳಿಕ ೨೦೦೫ ರಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದ ಚಿಕುನ್ ಗುನ್ಯಾ ವೈರಸ್ ಗಳ ಹಾವಳಿಯೂ ವೈದ್ಯಕೀಯ ಕ್ಷೇತ್ರವನ್ನು ತಲ್ಲಣಗೊಳಿಸಿತ್ತು. ಏಕೆಂದರೆ ಈ ವೈರಸ್ ಗಳ ತಳಿಗಳು ಆಫ್ರಿಕನ್ ಮೂಲದವಾಗಿದ್ದು, ೨೦೦೦ ನೆ ಇಸವಿಗೆ ಮುನ್ನ ಭಾರತದಲ್ಲಿ ಪತ್ತೆಯಾಗಿರಲಿಲ್ಲ. ಇಷ್ಟು ಮಾತ್ರವಲ್ಲ,ಈ ವೈರಸ್ ಗಳ ತಳಿಗಳು ೨೦೦೬ ಮತ್ತು ೨೦೦೭ ರ ನಡುವೆ ಪರಿವರ್ತನೆಗೊಂಡಿದ್ದ ಪುರಾವೆಗಳು ವೈದ್ಯಕೀಯ ವಿಜ್ಞಾನಿಗಳಿಗೆ ಲಭಿಸಿದ್ದವು. 

೧೯೭೩ ರಲ್ಲಿ ನಮ್ಮ ಉಪಖಂಡದಲ್ಲಿ ಉದ್ಭವಿಸಿದ್ದ ಚಿಕುನ್ ಗುನ್ಯಾ ವ್ಯಾಧಿಯು ಮಹಾರಾಷ್ಟ್ರದ ಬಾರ್ಸಿಯಲ್ಲಿ ವ್ಯಾಪಕವಾಗಿ ಕಂಡುಬಂದಿದ್ದು, ೨೦೦೫ ರಲ್ಲಿ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳಗಳಲ್ಲಿ ಉದ್ಭವಿಸಿ ಸಾಂಕ್ರಾಮಿಕವಾಗಿ ಹರಡಿತ್ತು. ತದನಂತರ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳಗಳಿಗೆ ಲಗ್ಗೆ ಹಾಕಿದ ಈ ವೈರಸ್ ಗಳು, ಆಕಸ್ಮಿಕವಾಗಿ ಪ್ರತ್ಯಕ್ಷವಾಗಲು ಕಾರಣವೇನೆಂದು ತಿಳಿದುಬಂದಿಲ್ಲ. 

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ೨೦೦೬ ರಿಂದ ೨೦೦೭ ರ ಅವಧಿಯಲ್ಲಿ ಭಾರತದಲ್ಲಿ ೧.೪ ಮಿಲಿಯನ್ ಚಿಕುನ್ ಗುನ್ಯಾ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ವೈರಸ್ ಗಳ "ವಂಶವಾಹಿನಿಗಳ ನಕ್ಷೆ" ಯನ್ನು ಅಧ್ಯಯನ ಮಾಡಿದಾಗ, ಇದಕ್ಕೂ ಮುನ್ನ ಭಾರತದಲ್ಲಿ ಪತ್ತೆಯಾಗಿದ್ದ ಏಷಿಯನ್ ತಳಿಯ ವೈರಸ್ ಗಳಿಗೆ ಬದಲಾಗಿ "ಈಸ್ಟ್ ಸೆಂಟ್ರಲ್ ಸೌತ್ ಆಫ್ರಿಕನ್" ತಳಿಗಳೇ ಇದಕ್ಕೆ ಕಾರಣವೆಂದು ತಿಳಿದುಬಂದಿದೆ. 

ಪುದುಚೇರಿ, ತಮಿಳುನಾಡು ಮತ್ತು ಕೇರಳದ ವೈದ್ಯಕೀಯ ಸಂಶೋಧನಾ ಸಂಸ್ಥೆಗಳ ತಂಡವೊಂದು ೧೩ ಶಂಕಿತ ಚಿಕುನ್ ಗುನ್ಯಾ ಪೀಡಿತ ರೋಗಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಪರಿಶೀಲನೆ ಮತ್ತು ಅಧ್ಯಯನಗಳನ್ನು ನಡೆಸಿತ್ತು. ಈ ಸಂದರ್ಭದಲ್ಲಿ ೯ ರೋಗಿಗಳ ರಕ್ತದಲ್ಲಿ ಚಿಕುನ್ ಗುನ್ಯಾ ವೈರಸ್ ಗಳು ಪತ್ತೆಯಾಗಿದ್ದು, ಇವುಗಳಲ್ಲಿ ೮ ಆಫ್ರಿಕನ್ ಮತ್ತು ಕೇವಲ ೧ ಏಷಿಯನ್ ತಳಿ ಪತ್ತೆಯಾಗಿದ್ದವು. ಇದಕ್ಕೂ ಮಿಗಿಲಾಗಿ ಸ್ಥಳೀಯ ಪರಿಸರ- ವಾತಾವರಣಗಳಿಗೆಬೇಕಾದಂತೆ ಪರಿವರ್ತನೆಗೊಳ್ಳುವ ಈ ವೈರಸ್ ತಳಿಗಳು, ಇದೀಗ ಎಡೆಸ್ ಈಜಿಪ್ತೈ ಸೊಳ್ಳೆಗಳಲ್ಲದೇ ಇತರ ಸೊಳ್ಳೆಗಳ ಮೂಲಕವೂ ಹರಡುವ ಸಾಮರ್ಥ್ಯವನ್ನು ಗಳಿಸಿಕೊಂಡಿವೆ ಎಂದು ತಿಳಿದುಬಂದಿದೆ. ಪ್ರಸ್ತುತ ವ್ಯಾಪಕವಾಗಿ ಹರಡುತ್ತಿರುವ ಚಿಕುನ್ ಗುನ್ಯಾ ವೈರಸ್ ಗಳ ಹಾವಳಿಯು, ಹವಾಮಾನದ ವ್ಯತ್ಯಯದಿಂದಾಗಿ ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸಲಿದೆ. 

ಲಕ್ಷಣಗಳು 

ತೀವ್ರ ಜ್ವರ, ತಲೆನೋವು, ವಿಪರೀತ ಚಳಿ- ನಡುಕ, ಅಸ್ತಿ ಸಂದಿಗಳಲ್ಲಿ ನೋವು- ಬಾವು, ಮಾಮ್ಸಪೇಶಿ- ಸ್ನಾಯುಗಳಲ್ಲಿ ಸೆಳೆತ, ಬಾಯಿ ಹುಣ್ಣುಗಳು ಮತ್ತು ಶರೀರದ ಕೆಲ ಭಾಗಗಳಲ್ಲಿ ಬೆವರುಸಾಲೆಯಂತಹ ಕೆಂಪು ಬಣ್ಣದ ದದ್ದುಗಳು ಕಾಣಿಸಿಕೊಳ್ಳುವುಡು, ವಿಪರೀತ ಆಯಾಸ ಮತ್ತು ಹಸಿವಿಲ್ಲದಿರುವುದೇ ಮುಂತಾದ ಲಕ್ಷಣಗಳು ಈ ವ್ಯಾಧಿಪೀಡಿತರಲ್ಲಿ ಕಂಡುಬರುತ್ತವೆ. ಕೆಲ ರೋಗಿಗಳಲ್ಲಿ ಅಂಗೈ ಮತ್ತು ಅಂಗಾಲುಗಳ ಚರ್ಮವು ಶುಷ್ಕವಾಗಿ ಎದ್ದುಬರುವುದು ಅಪರೂಪವೇನಲ್ಲ. ಮಧ್ಯ ವಯಸ್ಸನ್ನು ನ್ದಾತಿದ ರೋಗಿಗಳಲ್ಲಿ ಕೈಕಾಲುಗಳ ಅಸ್ತಿ- ಮಾಂಸಪೇಶಿಗಳಲ್ಲಿನ ನೋವಿನ ತೀವ್ರತೆಯಿಂದಾಗಿ, ರೋಗಿಯು ಕುಳಿತುಕೊಳ್ಳಲು ಅಥವಾ ಎದ್ದೇಳಲು ಸಾಧ್ಯವಿಲ್ಲದೇ ಅಸಹಾಯಕರಾಗುವುದು ಮತ್ತು ವ್ಯಾಧಿಮುಕ್ತರಾದ ಬಳಿಕವೂ ಸುದೀರ್ಘ ಕಾಲ ಇಂತಹ ನೋವಿನಿಂದ ಬಳಲುವುದು ಈ ವ್ಯಾಧಿಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. 

ಚಿಕಿತ್ಸೆ 

ಚಿಕುನ್ ಗುನ್ಯಾ ವ್ಯಾಧ್ಯು ಸಾಮಾನ್ಯವಾಗಿ ಮೂರು ವಾರಗಳಿಂದ ಹಿಡಿದು ಮೂರು ತಿಂಗಳುಗಳ ಕಾಲ ಬಾಧಿಸಬಲ್ಲದು. ರೋಗಿಗಳನ್ನು ಕಾಡುವ ಚಳಿ- ಜ್ವರಗಳು ನಾಲ್ಕಾರು ದಿನಗಳಲ್ಲೇ ಕಡಿಮೆಯಾಗುವುದಾದರೂ, ಅಸ್ತಿಸಂದಿಗಳ ನೋವು ಮತ್ತು ಬಾವುಗಳು ಕೆಲವಾರು ತಿಂಗಳುಗಳ ಕಾಲ ಪೀಡಿಸುತ್ತವೆ. ಸ್ವಾಭಾವಿಕ ಚಲನವಲನಗಳಿಗೆ ಅಡ್ಡಿಪಡಿಸುವ ಈ ತೀವ್ರ ನೋವು, ಔಷದಗಳನ್ನು ಸೇವಿಸುತ್ತಿರುವಾಗ ಕಡಿಮೆಯಾಗುವುದಾದರೂ ಔಷದ ಸೇವನೆಯನ್ನು ನಿಲ್ಲಿಸಿದೊಡನೆ ಮತ್ತೆ ಮರುಕಳಿಸುವುದು. ಪ್ರಾಯಶಃ ಇದೇ ಕಾರಣದಿಂದಾಗಿ ಈ ವ್ಯಾಧಿಪೀದಿತರು ಪದೇಪದೇ ವೈದ್ಯರನ್ನು ಬದಲಾಯಿಸುವುದು ಅಥವಾ ವಿವಿಧ ಪದ್ಧತಿಯ ಚಿಕಿತ್ಸೆಗಳನ್ನು ಪ್ರಯೋಗಿಸುವುದು ಸ್ವಾಭಾವಿಕವೂ ಹೌದು. ಕೆಲ ರೋಗಿಗಳು ನೋವಿನ ತೀವ್ರತೆಯನ್ನು ಸಹಿಸಲಾರದೇ ವೈದ್ಯರ ಬಳಿ ಕಾಡಿ ಬೇಡಿ ಸೂಜಿಮದ್ದನ್ನು ಪಡೆದುಕೊಂಡರೂ, ಇದರ ಪ್ರಭಾವ ಕೆಲವೇ ತಾಸುಗಳಿಗೆ ಸೀಮಿತವಾಗಿರುವುದರಿಂದ ನೋವು ಮತ್ತೆ ಮರುಕಳಿಸುವುದು. 

ಸ್ವಯಂ ಶಮನಗೊಳ್ಳುವ ಈ ವ್ಯಾಧಿಯನ್ನು ಖಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇದುವರೆಗೆ ಯಾವುದೇ ವೈದ್ಯಕೀಯ ಸಂಶೋಧಕರು ಪತ್ತೆಹಚ್ಚಲು ಯಶಸ್ವಿಯಾಗಿಲ್ಲ. ಆದರೆ ವಿಶೇಷವಾಗಿ ಮಧ್ಯವಯಸ್ಸನ್ನು ಮೀರಿದ ರೋಗಿಗಳನ್ನು ಪರಾವಲಂಬಿಗಳನ್ನಾಗಿಸುವ ಅಥವಾ ಹಾಸಿಗೆ ಹಿಡಿಸಬಲ್ಲ ಅಸ್ತಿಸಂದಿಗಳ ನೋವನ್ನು, ಉರಿಯೂತ ನಿರೋಧಕ ಹಾಗೂ ವೇದನಾ ಶಾಮಕ ಔಷದಗಳಿಂದ ನಿಯಂತ್ರಿಸಬಹುದಾಗಿದೆ. 

ಸಾಮಾನ್ಯವಾಗಿ ಜ್ವರದ ನಿಯಂತ್ರಣಕ್ಕಾಗಿ ಪಾರಾಸಿಟಮಾಲ್ ಮತ್ತು ಅಸ್ತಿಸಂದಿಗಳ ನೋವು ಮತ್ತು ಬಾವುಗಳ ಶಮನಕ್ಕಾಗಿ ಇಬುಪ್ರೊಫೇನ್, ಡೈಕ್ಲೋಫೆನಾಕ್, ನಾಪ್ರೊಕ್ಸೇನ್,ಆಸ್ಪಿರಿನ್ ಇತ್ಯಾದಿ ಔಷದಗಳನ್ನು ವೈದ್ಯರು ಬಳಸುತ್ತಾರೆ. ಆದರೆ ಈ ಔಷದಗಳ ಅಡ್ಡಪರಿಣಾಮ ಹಾಗೂ ಸುದೀರ್ಘಕಾಲ ಸೇವಿಸಿದಲ್ಲಿ ಬಾಧಿಸುವ ದುಷ್ಪರಿಣಾಮಗಳಿಂದಾಗಿ, ವೈದ್ಯರ ಸಲಹೆ- ಸೂಚನೆಗಳನ್ನು ಪಡೆಯದೇ ಇವುಗಳನ್ನು ಸೇವಿಸುವುದು ಅಯಾಚಿತ ಸಮಸ್ಯೆಗಳಿಗೆ ಕಾರಣವೆನಿಸಬಲ್ಲದು. ಉದಾಹರಣೆಗ ೧೨ ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಸ್ಪಿರಿನ್ ನೀಡುವಂತಿಲ್ಲ. ಅದೇ ರೀತಿಯಲ್ಲಿ ಅತಿಆಮ್ಲದ ತೊಂದರೆ, ಜಠರದ ಹುಣ್ಣುಗಳು ಮತ್ತು ಆಸ್ತಮಾ ವ್ಯಾಧಿಪೀಡಿತರು ಇಬುಪ್ರೊಫೇನ್ ಸೇವಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎನಿಸುವುದು. 

ಕೆಲ ವೈದ್ಯರು ಒಂದೆರಡು ವಿಧದ ಜೀವನಿರೋಧಕ ಔಷದಗಳನ್ನು ೫ ರಿಂದ ೭ ದಿನಗಳ ಅವಧಿಗೆ ನೀಡುವ ಮೂಲಕ ಈ ವೈರಸ್ ನ ಹಾವಳಿಯನ್ನು ತಡೆಗಟ್ಟಬಹುದು ಎನ್ನುವರಾದರೂ, ಇದರ ಉಪಯುಕ್ತತೆಯ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಸುದೀರ್ಘಕಾಲ ಬಾಧಿಸಬಲ್ಲ ಹಾಗೂ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ವ್ಯಾಧಯಾಗಳಿಂದ ಬಳಲುತ್ತಿರುವ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ವೈದ್ಯರ ಸಲಹೆ ಸೂಚನೆಗಳಿಗಿಂತ ಹೆಚ್ಚಾಗಿ, ತಮ್ಮ ಬಂಧುಮಿತ್ರರ ಅಥವಾ ನೆರೆಕೆರೆಯ ವ್ಯಕ್ತಿಗಳ "ಉಚಿತ ಸಲಹೆ" ಗಳಿಗೆ ಹೆಚ್ಚು ಮಹತ್ವವನ್ನು ನೀಡುವ ಮೂಲಕ ತಮ್ಮ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿಕೊಳ್ಳುತ್ತಾರೆ!. 


 ಆದರೆ ನಿಮ್ಮ ವೈದ್ಯರು ಯಾವುದೇ ಕಾಯಿಲೆಯನ್ನು ನಿಖರವಾಗಿ ಪತ್ತೆ ಹಚ್ಚಿದ ಬಳಿಕ, ವ್ಯಾಧಿಪೀಡಿತರ ವಯಸ್ಸು, ಸಾಮಾನ್ಯ ಆರೋಗ್ಯದ ಮಟ್ಟ, ಇವರಲ್ಲಿ ಇರಬಹುದಾದ ಇತರ ಕಾಯಿಲೆಗಳು ಮತ್ತಿತರ ಅನೇಕ ವಿಚಾರಗಳನ್ನು ಪರಿಗಣಿಸಿದ ಬಳಿಕವೇ ಚಿಕಿತ್ಸೆಯನ್ನು ಸೂಚಿಸುತ್ತಾರೆ. ಜೊತೆಗೆ ಇದೇ ಆಧಾರದ ಮೇಲೆ ತಾವು ನೀಡಬೇಕಾದ ಔಷದಗಳು, ಇವುಗಳ ಪ್ರಮಾಣ ಮತ್ತು  ಸೇವಿಸಬೇಕಾದ ಅವಧಿಗಳನ್ನೂ ನಿರ್ಧರಿಸುತ್ತಾರೆ. ಇಷ್ಟು ಮಾತ್ರವಲ್ಲ, ಚಿಕಿತ್ಸೆಯನ್ನು ಆರಂಭಿಸಿದ ಬಳಿಕ ಅನಿರೀಕ್ಷಿತವಾಗಿ ಅದ್ದಪರಿನಾಮಗಳು ತಲೆದೊರಿದಲ್ಲಿ, ಇವುಗಳನ್ನು ಪರಿಹರಿಸಿದ ಬಳಿಕ ಔಷದಗಳನ್ನು ಬದಲಾಯಿಸುತ್ತಾರೆ. 

ಮುಂಜಾಗರೂಕತೆ 

ಚಿಕುನ್ ಗುನ್ಯಾ ವ್ಯಾಧಿಯು ನಿಶ್ಚಿತವಾಗಿಯೂ ಮಾರಕವಲ್ಲ. ಆದರೆ ಭಾರತದ ವಿವಿಧ ರಾಜ್ಯಗಳಲ್ಲಿ ಈ ವ್ಯಾಧಿಪೀಡಿತರು ಮೃತಪಟ್ಟ ಉದಾಹರಣೆಗಳಿವೆ. ಇದಕ್ಕೆ ಅವರಲ್ಲಿದ್ದ ಅನ್ಯ ಗಂಭೀರ ಕಾಯಿಲೆಗಳು ಅಥವಾ ಅವರು ಪಡೆದುಕೊಂಡಿದ್ದ ಚಿಕಿತ್ಸೆ- ಔಷದಗಳೂ ಕಾರಣವಾಗಿರಬಹುದು. 

ತೀವ್ರ ಸಾಂಕ್ರಾಮಿಕವಾಗಿ ಹರಡಿ ರೋಗಿಗಳನ್ನು ಅಸಹಾಯಕರನ್ನಾಗಿಸಬಲ್ಲ ಈ ವ್ಯಾಧಿಯನ್ನು ತಡೆಗಟ್ಟುವುದೇ ಇದರಿಂದ ಪಾರಾಗಲು ಇರುವ ಏಕೈಕ ವಿಧಾನವಾಗಿದೆ. ಆದರೆ ಈ ವ್ಯಾಧಿಯನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಯನ್ನು ಇಂದಿನ ತನಕ ಕಂಡುಹಿಡಿದಿಲ್ಲ. ಈ ನಿಟ್ಟಿನಲ್ಲಿ ಅವಿರತ ಪ್ರಯತ್ನಗಳು ನಡೆಯುತ್ತಿದ್ದು, ಸದ್ಯೋಭವಿಷ್ಯದಲ್ಲಿ ಇಂತಹ ಲಸಿಕೆಗಳು ಮಾರುಕಟ್ಟೆಯನ್ನು ಪ್ರವೇಶಿಸುವುದರಲ್ಲಿ ಸಂದೇಹವಿಲ್ಲ. ಅಲ್ಲಿಯ ತನಕ ನಮ್ಮ ವಸತಿ- ವಾಣಿಜ್ಯ ಕಟ್ಟಡಗಳು, ಬಡಾವಣೆಗಳು, ನಗರಗಳ ಬೀದಿಬದಿಯಲ್ಲಿನ ಚರಂಡಿಗಳೇ ಮುಂತಾದ ತಾಣಗಳನ್ನು ಸ್ವಚ್ಚವಾಗಿರಿಸುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟುವ ಮೂಲಕ ಈ ವ್ಯಾಧಿಯ ಹರಡುವಿಕೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸಬಹುದಾಗಿದೆ. ಇದರೊಂದಿಗೆ ಕೆಲವಿಧದ ಕೀಟನಾಶಕಗಳನ್ನು ಸೂಕ್ತ ಮುಂಜಾಗರೂಕತೆಯೊಂದಿಗೆ ಬಳಸುವುದು ಮತ್ತು ವ್ಯಾಧಿಪೀದಿತ ಪ್ರದೇಶಗಳಲ್ಲಿನ ನಿವಾಸಿಗಳು ಸೊಳ್ಳೆಪರದೆಯನ್ನು ಕಡ್ಡಾಯವಾಗಿ ಬಳಸುವುದೇ ಇದಕ್ಕೊಂದು ಸರಳ ಮತ್ತು ಸುರಕ್ಷಿತ ವಿಧಾನವಾಗಿದೆ.  

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೭-೦೪-೨೦೦೮ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.