Tuesday, December 30, 2014

VACCINE TO PREVENT EBOLA READY


ಸಿದ್ದಗೊಂಡಿವೆ : ಎಬೊಲ ವೈರಸ್ ತಡೆಗಟ್ಟಬಲ್ಲ ಲಸಿಕೆಗಳು 

ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ  ಭೀಭತ್ಸ ಕೃತ್ಯಗಳನ್ನು ಎಸಗುತ್ತಿರುವ ಉಗ್ರಗಾಮಿಗಳಿಗಿಂತಲೂ ಭಯಾನಕವೆನಿಸಿರುವ ಹಾಗೂ ಸೂಕ್ತ ಚಿಕಿತ್ಸೆಯೇ ಲಭ್ಯವಿಲ್ಲದಿದ್ದ ಎಬೊಲ ವೈರಸ್ ಗಳ ಹಾವಳಿಯಿಂದ ರಕ್ಷಣೆಯನ್ನು ನೀಡಬಲ್ಲ ಲಸಿಕೆಗಳನ್ನು ವೈದ್ಯಕೀಯ ಸಂಶೋಧಕರು ಪತ್ತೆಹಚ್ಚಿದ್ದಾರೆ. ಈ ಲಸಿಕೆಗಳನ್ನು ಅವಶ್ಯಕ ಪರೀಕ್ಷೆಗಳಿಗೆ ಒಳಪಡಿಸುವ ಪ್ರಕ್ರಿಯೆಗಳು ಮುಂದಿನ ಮೂರು ತಿಂಗಳುಗಳಲ್ಲಿ ಪರಿಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ತದನಂತರ ಇವುಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. 

ವೈದ್ಯಕೀಯ ಸಂಶೋಧಕರು ಅತ್ಯಂತ ಅಪಾಯಕಾರಿ ಹಾಗೂ ಮಾರಕ ಎಂದು ಗುರುತಿಸಿರುವ ವೈರಸ್ ಗಳಲ್ಲಿ " ಎಬೊಲ " ವೈರಸ್ ಗಳೂ ಸೇರಿವೆ. ಈ ವೈರಸ್ ಗಳ ಐದು ತಳಿಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಮೂರು ತಳಿಗಳು ಅತ್ಯಂತ ಮಾರಕವೆಂದು ಪರಿಗಣಿಸಲ್ಪಟ್ಟಿವೆ. ಅತ್ಯಂತ ಪ್ರಬಲ ತಳಿಯೊಂದರ ಮಾರಕತೆಯ ಪ್ರಮಾಣವು ಶೇ.೯೦ ರಷ್ಟಿದೆ. ಇದಕ್ಕೂ ಮಿಗಿಲಾಗಿ ಈ ವೈರಸ್ ಗಳ ಹಾವಳಿಯನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಗಳು ಅಥವಾ ಖಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ಹಾಗೂ ಇದೇ ಕಾರಣದಿಂದಾಗಿ ಇದರ ಸಾಂಕ್ರಾಮಿಕತೆ ಮತ್ತು ಮಾರಕತೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಎಬೊಲದ ಮೂಲ 

ಎಬೊಲ ವೈರಸ್ ಕಾಯಿಲೆ ಅಥವಾ ಎಬೊಲ ರಕ್ತಸ್ರಾವಕ ಜ್ವರ ಎಂದು ಕರೆಯಲ್ಪಡುವ ಗಂಭೀರ ಹಾಗೂ ಮಾರಕ ಸಮಸ್ಯೆಗೆ ಕಾರಣವೆನಿಸಿರುವ ಎಬೊಲ ವೈರಸ್ ಗಳು, ೧೯೭೬ ರಲ್ಲಿ ಮೊತ್ತ ಮೊದಲಬಾರಿಗೆ ಕಾಂಗೊ ಮತ್ತು ಸೂಡಾನ್ ದೇಶಗಳಲ್ಲಿ ಏಕಕಾಲದಲ್ಲಿ ಉದ್ಭವಿಸಿ ಸಾಂಕ್ರಾಮಿಕವಾಗಿ ಹರಡಿದ್ದವು. ಕಾಂಗೊ ದೇಶದ ಎಬೊಲ ನದಿ ಪ್ರಾಂತ್ಯದಲ್ಲಿ ಇದು ಪ್ರತ್ಯಕ್ಷವಾಗಿದ್ದುದರಿಂದ, ಈ ವೈರಸ್ ಗಳನ್ನು ಎಬೊಲ ಎಂದು ಹೆಸರಿಸಲಾಗಿತ್ತು. 

೧೯೭೬ ರಿಂದ ೨೦೧೨ ಅವಧಿಯಲ್ಲಿ ೧೨ ಬಾರಿ ವಿವಿಧ ದೇಶಗಳಲ್ಲಿ ಪ್ರತ್ಯಕ್ಶವಾಗಿದ್ದ ಈ ವೈರಸ್ ಗಳು, ಕೇವಲ ೧೦೦೦ ಕ್ಕೂ ಕಡಿಮೆ ಜನರನ್ನು ಪೀಡಿಸಿದ್ದವು. ಆದರೆ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಗಿನಿ ದೇಶದಲ್ಲಿ ಉದ್ಭವಿಸಿ, ತ್ವರಿತಗತಿಯಲ್ಲಿ ಲೈಬೀರಿಯ, ಸಿಯೆರಾ ಲಿಯೋನ್ ಮತ್ತು ನೈಜೀರಿಯ ದೇಶಗಳಲ್ಲಿ ಹರಡುತ್ತಾ, ಈಗಾಗಲೇ ಸರಿಸುಮಾರು ೧೯,೬೯೫ ಜನರಿಗೆ ಹರಡಿ ೭,೬೯  ಜನರನ್ನು ಬಲಿಪಡೆದಿರುವ ಈ ವೈರಸ್ ಗಳ ಸಾಂಕ್ರಾಮಿಕತೆ, ತೀವ್ರತೆ ಮತ್ತು ಮಾರಕತೆಗಳು, ಕಳೆದ ನಾಲ್ಕು ದಶಕಗಳಲ್ಲೇ ಸರ್ವಾಧಿಕವೆನಿಸಿದೆ. ಇದೇ ಕಾರಣದಿಂದಾಗಿ ವಿಶ್ವ ಆರೋಗ್ಯ ಸಂಸ್ಥೆಯು ಎಬೊಲ ವೈರಸ್ ಗಳ ಹಾವಳಿಯನ್ನು " ಅಂತಾರಾಷ್ಟ್ರೀಯ ಅರೋಗ್ಯ ತುರ್ತುಸ್ಥಿತಿ " ಎಂದು ಘೋಷಿಸಿತ್ತು. ಇಷ್ಟು ಮಾತ್ರವಲ್ಲ, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳೂ, ಈ ವ್ಯಾಧಿಯ ಹರಡುವಿಕೆಯ ಸಂಭಾವ್ಯತೆಯ ಬಗ್ಗೆ ಕಟ್ಟೆಚ್ಚರವಹಿಸುವಂತೆ ಸೂಚಿಸಿತ್ತು. 

ಚಿಕಿತ್ಸೆ 

ಈಗಾಗಲೇ ಹೇಳಿರುವಂತೆ ಎಬೊಲ ವೈರಸ್ ವ್ಯಾಧಿಯನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ರೋಗಿಯಲ್ಲಿ ಕಂಡುಬರುವ ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ತೀವ್ರ ಅಸ್ವಸ್ಥರಾಗಿರುವ ಅಥವಾ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ವಿಶೇಷ ತೀವ್ರ ನಿಗಾ ಘಟಕಗಳಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಬೇಕಾಗುವುದು. 

 ಈ ಬಾರಿ ಉದ್ಭವಿಸಿದ್ದೆಲ್ಲಿ ?

ಇತ್ತೀಚಿನ ವರದಿಗಳಂತೆ ಗಿನಿ ದೇಶದ ಹಳ್ಳಿಯೊಂದರಲ್ಲಿ ಎರಡು ವರ್ಷ ವಯಸ್ಸಿನ ಬಾಲಕನೊಬ್ಬನು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದನು. ಬಾಲಕನು ಮೃತಪಟ್ಟು ವಾರ ಕಳೆಯುವಷ್ಟರಲ್ಲಿ ಆತನ ತಾಯಿಯೂ ಮೃತಪಟ್ಟಿದ್ದಳು. ತದನಂತರ ಆತನ ಮೂರು ವರ್ಷದ ಸೋದರಿ ಮತ್ತು ಆತನ ಅಜ್ಜಿ ನಿಧನರಾಗಿದ್ದರು. ಆದರೆ ಈ ನಾಲ್ವರ ಮರಣಕ್ಕೆ ಕಾರಣವೇನೆಂದು ಯಾರಿಗೂ ತಿಳಿದಿರಲೇ ಇಲ್ಲ. ಅಜ್ಜಿಯ ಶವಸಂಸ್ಕಾರದಲ್ಲಿ ಭಾಗವಹಿಸಿದ್ದ ಇಬ್ಬರು ಸಂಬಂಧಿಗಳು ಈ ನಿಗೂಢ ಕಾಯಿಲೆಯನ್ನು ತಮ್ಮ ಹಳ್ಳಿಗೆ ಕೊಂಡೊಯ್ದಿದ್ದರು. ಬಳಿಕ ಆರೋಗ್ಯ ಕಾರ್ಯಕರ್ತನೊಬ್ಬನು ಈ ವ್ಯಾಧಿಯನ್ನು ಮತ್ತೊಬ್ಬರಿಗೆ ಹರಡಿದಂತೆಯೇ ಮೃತಪಟ್ಟಿದ್ದನು. ಹಾಗೂ ಆತನಿಗೆ ಚಿಕಿತ್ಸೆಯನ್ನು ನೀಡಿದ್ದ ವೈದ್ಯರೂ ಇದಕ್ಕೆ ಬಲಿಯಾಗಿದ್ದರು. ಇವರಿಬ್ಬರೂ ಅದಾಗಲೇ ಈ ಕಾಯಿಲೆಯನ್ನು ತಮ್ಮ ಪರಿಚಿತರು ಮತ್ತು ಸಂಬಂಧಿಗಳಿಗೆ ಹರಡಿದ್ದರು. ಅಂತಿಮವಾಗಿ ಇದೇ ವರ್ಷದ ಮಾರ್ಚ್  ತಿಂಗಳಿನಲ್ಲಿ ಈ ಮಾರಕ ವ್ಯಾಧಿಯು ಎಬೊಲ ಎಂದು ಪತ್ತೆಹಚ್ಚುವಷ್ಟರಲ್ಲಿ , ಅನೇಕ ಅಮಾಯಕರು ಇದಕ್ಕೆ ಬಲಿಯಾಗಿದ್ದರು. ಜೊತೆಗೆ ಗಡಿಯ ಸಮೀಪದಲ್ಲಿನ ಲೈಬೀರಿಯ ಮತ್ತು ಸಿಯೆರಾ ಲಿಯೋನ್ ದೇಶಗಳಲ್ಲೂ ಅನೇಕ ಪ್ರಕರಣಗಳು ಉದ್ಭವಿಸಲಾರಂಭಿಸಿದ್ದವು. 

ನಾಲ್ವರು ಬಲಿಯಾಗಿದ್ದ  ಹಳ್ಳಿಯು ಗಿನಿ ದೇಶದ ಗಡಿಭಾಗದಲ್ಲಿದ್ದು, ಇದಕ್ಕೆ ಹೊಂದಿಕೊಂಡಂತೆ ಸಿಯೇರ ಲಿಯೋನ್ ಮತ್ತು ಲೈಬೀರಿಯಾ ದೇಶಗಳಿವೆ. ಈ ಹಿಂದುಳಿದ ಹಾಗೂ ಬಡ ದೇಶಗಳ ನಡುವಿನ ಗಡಿಭಾಗದ ರಸ್ತೆಗಳು ಹಿಂದಿಗಿಂತಲೂ ಉತ್ತಮ ಸ್ಥಿತಿಯಲ್ಲಿ ಇರುವುದರಿಂದ, ಪ್ರತಿನಿತ್ಯ ನೂರಾರು ಜನರು ಈ ಮೂರು ದೇಶಗಳ ನಡುವೆ ಸಂಚರಿಸುತ್ತಾರೆ. ಪ್ರಾಯಶಃ ಇದೇ ಕಾರಣದಿಂದಾಗಿ, ಗಿನಿಯ ಹಳ್ಳಿಯಲ್ಲಿ ಉದ್ಭವಿಸಿದ್ದ ಎಬೊಲ ವೈರಸ್ ಗಳು, ಸುಲಭದಲ್ಲೇ ಸಮೀಪದ ದೇಶಗಳಿಗೆ ಹರಡಿದ್ದವು. 

ಆದರೆ ಈ ಬಾರಿ ಈ ವ್ಯಾಧಿಗೆ ಮೊದಲು ಬಲಿಯಾದ ಬಾಲಕನಿಗೆ ಈ ವೈರಸ್ ಗಳ ಸೋಂಕು ಎಲ್ಲಿಂದ ಬಂದಿತ್ತ್ತು ಎನ್ನುವ ಮಾಹಿತಿ ಯಾರಿಗೂ ತಿಳಿದಿಲ್ಲ. ಇದಕ್ಕೂ ಮುನ್ನ ಸಂಭವಿಸಿದ್ದ ಎಬೊಲ ಸಾಂಕ್ರಾಮಿಕತೆಯಂತೆಯೇ, ಸೋಂಕು ಪೀಡಿತ ಕಾಡುಪ್ರಾಣಿಗಳಿಂದ ಇದು ಬಂದಿರಬೇಕು ಎಂದು ವೈದ್ಯಕೀಯ ವಿಜ್ಞಾನಿಗಳು ಊಹಿಸಿದ್ದಾರೆ. ಆಫ್ರಿಕನ್ ಜನರು ಮಾಂಸಕ್ಕಾಗಿ ಕೊಲ್ಲುವ  ಮಂಗ ಹಾಗೂ ಹಣ್ಣುಗಳನ್ನು ತಿನ್ನುವ ಬಾವಲಿಗಳನ್ನು ಸಂಹರಿಸುವಾಗ, ಇವುಗಳ ರಕ್ತದಲ್ಲಿರಬಹುದಾದ ವೈರಸ್ ಗಳು ಮನುಷ್ಯನ ಶರೀರದಲ್ಲಿ ಪ್ರವೇಶವನ್ನು ಗಳಿಸಿರಬೇಕು. ಈ ಮಾಂಸವನ್ನು ಬೇಯಿಸಿದಾಗ ವೈರಸ್ ಗಳು ನಾಶವಾಗುವುದಾದರೂ, ಇವುಗಳನ್ನು ಕಡಿಯುವ ವ್ಯಕ್ತಿಗಳಿಗೆ ಸೋಂಕು ಬಾಧಿಸುವ ಸಾಧ್ಯತೆಗಳಿವೆ. ಅದೇ ರೀತಿಯಲ್ಲಿ ಬಾವಲಿಗಳು ತಿಂದು ಹಾಕಿದ ಹಾಗೂ ಇವುಗಳ ಮಲಮೂತ್ರಗಳಿಂದ ಕಲುಷಿತ  ಹಣ್ಣುಗಳನ್ನು ಸೇವಿಸಿದ ವ್ಯಕ್ತಿಗಳಿಗೂ ಈ ಸೋಂಕು ಸುಲಭದಲ್ಲೇ ಬಾಧಿಸುವ ಸಾಧ್ಯತೆಗಳಿವೆ. 

ಪ್ರಸ್ತುತ ಈ ಬಾರಿಯ ಎಬೊಲ ಹಾವಳಿಯ ಮೂಲವನ್ನು ಪತ್ತೆಹಚ್ಚಿದ್ದರೂ, ಈಗಾಗಲೇ ಸಹಸ್ರಾರು ಜನರಿಗೆ ಮತ್ತು ಹಲವಾರು ದೇಶಗಳಿಗೆ ಹರಡಿರುವ ಈ ವ್ಯಾಧಿಯನ್ನು ನಿಯಂತ್ರಿಸಲು, ಹಲವಾರು ತಿಂಗಳುಗಳೇ ಬೇಕಾಗುವುದೆಂದು ತಜ್ಞ ವೈದ್ಯರು ಅಭಿಪ್ರಾಯಿಸಿದ್ದಾರೆ. 

ಲಸಿಕೆಗಳು ಸಿದ್ಧ 

ರಷ್ಯಾ ದೇಶದ ವೈದ್ಯಕೀಯ ವಿಜ್ಞಾನಿಗಳು ಎಬೊಲ ವೈರಸ್ ಗಳನ್ನು ತಡೆಗಟ್ಟಬಲ್ಲ ಲಸಿಕೆಯನ್ನು ಸಂಶೋಧಿಸಿದ್ದು, ಸದ್ಯೋಭವಿಷ್ಯದಲ್ಲಿ ಮನುಷ್ಯರ ಮೇಲೆ ಪ್ರಯೋಗಿಸಲಾಗುವುದು. ಸೈಂಟ್  ಪೀಟರ್ಸ್ ಬರ್ಗ್ ನಲ್ಲಿರುವ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಇನ್ಫ್ಲೂಯೆಂಜಾ ಸಂಸ್ಥೆಯ ಯುವ ವಿಜ್ಞಾನಿಗಳು ಆವಿಷ್ಕರಿಸಿರುವ ಈ ಲಸಿಕೆಯನ್ನು " ವಂಶವಾಹಿನಿಗಳ ಸ್ಥಿರತೆ " ಗಾಗಿ ಪರೀಕ್ಷಿಸಲಾಗುತ್ತಿದ್ದು, ತದನಂತರ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುತ್ತದೆ. ಇವುಗಳ ಪರಿಣಾಮಗಳು ಧನಾತ್ಮಕವಾಗಿದ್ದಲ್ಲಿ,ಮುಂದೆ ಆಫ್ರಿಕಾ ದೇಶದಲ್ಲಿ ಪ್ರಾಯೋಗಿಕವಾಗಿ ಮನುಷ್ಯರ ಮೇಲೆ ಪ್ರಯೋಗಿಸುವ ಪರೀಕ್ಷೆಗಳಿಗೆ ಒಳಪಡಿಸುವ ಪ್ರಕ್ರಿಯೆಗಳು ೨೦೧೪ ರ ಫೆಬ್ರವರಿ ತಿಂಗಳಿನಲ್ಲಿ ಪರಿಪೂರ್ಣಗೊಳ್ಳಲಿದೆ.

ಇದಲ್ಲದೇ ಕೆಲದಿನಗಳ ಹಿಂದೆ ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲೆರ್ಜಿ ಎಂಡ್ ಇನ್ಫೆಕ್ಷಿಯಸ್ ಡಿಸೀಸಸ್ ಸಂಸ್ಥೆಯು ಸಿದ್ಧಪಡಿಸಿದ್ದ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್ ಗಳ ಪರಿಣಾಮವಾಗಿ, ಇದರ ಸುರಕ್ಷತೆಯು ಸಾಬೀತಾಗಿದೆ. ತತ್ಪರಿಣಾಮವಾಗಿ ಈ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಯೋಗ್ಯವೆಂದು ತಿಳಿದುಬಂದಿದೆ. 

ತನ್ಮಧ್ಯೆ ಚೀನಾ ದೇಶದ ಸಂಶೋಧಕರು ಎಬೊಲ ವೈರಸ್ ಗಳನ್ನು ತಡೆಗಟ್ಟಬಲ್ಲ ಲಸಿಕೆಯೊಂದನ್ನು ಸಂಶೋಧಿಸಿದ್ದು, ಇದನ್ನು ಮನುಷ್ಯರ ಮೇಲೆ ಪ್ರಯೋಗಿಸುವ ಸಿದ್ಧತೆಗಳು ನಡೆದಿವೆ. ಈ ರೀತಿಯಲ್ಲಿ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳ ವೈದ್ಯಕೀಯ ಸಂಶೋಧಕರು ಪತ್ತೆ ಹಚ್ಚಿರುವ ಲಸಿಕೆಗಳು ಪ್ರಾಥಮಿಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು, ಮುಂದಿನ ಹಂತದ ಪರೀಕ್ಷೆಗಳಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾದಲ್ಲಿ, ಕೆಲವೇ ತಿಂಗಳುಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ತತ್ಪರಿಣಾಮವಾಗಿ ಭಯಾನಕ ಹಾಗೂ ಅತ್ಯಂತ ಮಾರಕವೆನಿಸಿರುವ ಎಬೊಲ ವೈರಸ್ ಗಳ ಹರಡುವಿಕೆಯನ್ನು ನಿಶ್ಚಿತವಾಗಿ ತಡೆಗಟ್ಟಬಹುದಾಗಿದೆ. 


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 






Monday, December 29, 2014

ROAD ACCIDENTS



ರಸ್ತೆ ಅಪಘಾತಗಳಿಂದ ಮರಣ ಬೆಂಗಳೂರಿಗೆ ತೃತೀಯ ಸ್ಥಾನ
ನಮ್ಮ ದೇಶದಲ್ಲಿ ಪ್ರತಿನಿತ್ಯ ಸಂಭವಿಸುತ್ತಿರುವ ಅಸಂಖ್ಯ ರಸ್ತೆ ಅಪಘಾತಗಳಲ್ಲಿ ಲಕ್ಷಾಂತರ ಜನರು ಮೃತಪಡುತ್ತಾರೆಅತಿ ಹೆಚ್ಚು ಜನರು ಬಲಿಯಾಗುತ್ತಿರುವ ನಗರಗಳ ಪಟ್ಟಿಯಲ್ಲಿ  ಬೆಂಗಳೂರು ಮಹಾನಗರವು ತೃತೀಯ ಸ್ಥಾನದಲ್ಲಿದೆಆದರೆ ಅತ್ಯಧಿಕ ರಸ್ತೆ ಅಪಘಾತಗಳು ಸಂಭವಿಸುವ ನಗರಗಳ ಯಾದಿಯಲ್ಲಿ ಬೆಂಗಳೂರು ನಾಲ್ಕನೆಯ ಸ್ಥಾನದಲ್ಲಿದೆ.

ರಸ್ತೆ ಅಪಘಾತಗಳನ್ನು ಸಂಪೂರ್ಣವಾಗಿ ತಡೆಗಟ್ಟುವುದು ಅಸಾಧ್ಯವೆನಿಸಿದರೂ, ಇವುಗಳ ಸಂಖ್ಯೆ ಮತ್ತು ಮರಣಗಳ ಪ್ರಮಾಣವನ್ನು ಕಡಿಮೆಮಾಡುವುದು ಅಸಾಧ್ಯವೇನಲ್ಲಆದರೆ ಇದಕ್ಕೆ ಬೇಕಾಗುವ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಗಂಭೀರ ಸಮಸ್ಯೆಯನ್ನು ನಿಯಂತ್ರಿಸಲು ನಾವಿಂದು ವಿಫಲರಾಗಿರುವುದು ಮಾತ್ರ ಸುಳ್ಳೇನಲ್ಲ.

ವಿಶ್ವದ  ರಸ್ತೆ ಅಪಘಾತಗಳ ರಾಜಧಾನಿ

ಭಾರತವು ವಿಶ್ವದ ರಸ್ತೆ ಅಪಘಾತಗಳ ರಾಜಧಾನಿಯೆಂದೇ ಕುಪ್ರಸಿದ್ಧವಾಗಿದೆ. ಏಕೆಂದರೆ ನಮ್ಮ ದೇಶದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೆ ಒಬ್ಬರಂತೆಒಂದುದಿನದಲ್ಲಿ ಸುಮಾರು ೩೮೦ ಜನರು ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆನೇಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ವರದಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದ್ದು೨೦೦೧ ರಿಂದ ೨೦೧೦ ರ ಅವಧಿಯಲ್ಲಿ ೧೦ ಲಕ್ಷಕ್ಕೂ ಅಧಿಕ ಭಾರತೀಯರು ರಸ್ತೆ ಅಪಘಾತಗಳಿಂದ ಮೃತಪಟ್ಟಿದ್ದಾರೆತತ್ಪರಿಣಾಮವಾಗಿ ದೇಶಕ್ಕೆ ಸುಮಾರು ನೂರಾರು  ಕೋಟಿ ರೂ.ಗಳಷ್ಟು ನಷ್ಟವೂ ಸಂಭವಿಸಿದೆ.

೨೦೧೨ ನೇ ಇಸವಿಯ ಅಂಕಿ ಅಂಶಗಳೊಂದಿಗೆ ತುಲನೆಮಾಡಿದಾಗ ೨೦೧೪ ರಲ್ಲಿ ಕರ್ನಾಟಕದಲ್ಲಿ ಸಂಭವಿಸಿದ್ದ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದ್ದರೂಇವುಗಳಿಗೆ ಬಲಿಯಾದವರ ಸಂಖ್ಯೆ ಮಾತ್ರ ಹೆಚ್ಚಿತ್ತುಅಂತೆಯೇ ಅತ್ಯಧಿಕ ಜನರು ಬಲಿಯಾಗಿದ್ದ ನಗರಗಳ ಯಾದಿಯಲ್ಲಿಬೆಂಗಳೂರು ಮಹಾನಗರವು ಮೂರನೆಯ ಸ್ಥಾನದಲ್ಲಿತ್ತು೨೦೧೩ ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ್ದ ೫೨೧೫ ರಸ್ತೆ ಅಪಘಾತಗಳಲ್ಲಿ ೭೫೨ ಜನರು ಬಲಿಯಾಗಿದ್ದರು.

ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ೨೦೧೩ ರ ವರದಿಯಂತೆ ಕರ್ನಾಟಕ ರಾಜ್ಯವು ಭಾರತದಲ್ಲೇ ಅತ್ಯಧಿಕ ರಸ್ತೆ ಅಪಘಾತಗಳು ಸಂಭವಿಸುವ ರಾಜ್ಯಗಳ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ. ಗತವರ್ಷದಲ್ಲಿ ಕರ್ನಾಟಕದಲ್ಲಿ ೪೪,೦೨೦ ರಸ್ತೆ ಅಪಘಾತಗಳು ಸಂಭವಿಸಿದ್ದು೨೦೧೨ ರಲ್ಲಿ ಸಂಭವಿಸಿದ್ದ ೪೪,೪೪೮ ಅಪಘಾತಗಳಿಗಿಂತಲೂ ಕಡಿಮೆಯಾಗಿದೆಆದರೆ ಇದೇ  ಅವಧಿಯಲ್ಲಿ ಅಪಘಾತಗಳಿಗೆ ಬಲಿಯಾಗಿದ್ದವರ ಸಂಖ್ಯೆಯು ೯೯೪೮ ಆಗಿದ್ದು೨೦೧೩ ರಲ್ಲಿ ಈ ಸಂಖ್ಯೆಯು ೧೦,೦೪೬ ಕ್ಕೆ ತಲುಪಿತ್ತು!.

ಇದೇ ವರದಿಯಲ್ಲಿ ನಮೂದಿಸಿರುವಂತೆ ೨೦೧೨ ನೆ ಇಸವಿಯಲ್ಲಿ ಭಾರತದಲ್ಲಿ ೪.೯೦ ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದ್ದು.೩೭ ಲಕ್ಷ ಜನರು ಇದರಲ್ಲಿ ಅಸುನೀಗಿದ್ದರುಆದರೆ ೨೦೧೩ ರಲ್ಲಿ ಅಪಘಾತಗಳ ಸಂಖ್ಯೆ ೪.೮೬ಲಕ್ಷಕ್ಕೆ ಇಳಿದಿದ್ದರೂ.೩೮ ಲಕ್ಷ ಜನರು ಇವುಗಳಿಗೆ ಬಲಿಯಾಗಿದ್ದರು.

ನಮ್ಮ ದೇಶದಲ್ಲೇ ಅತ್ಯಧಿಕ ರಸ್ತೆ ಅಪಘಾತಗಳು ನಮ್ಮ ನೆರೆಯ ತಮಿಳುನಾಡಿನಲ್ಲಿ ಸಂಭವಿಸುತ್ತವೆ. ೨೦೧೩ ರಲ್ಲಿ ತಮಿಳುನಾಡಿನಲ್ಲಿ ೬೬,೨೩೮ ರಸ್ತೆ ಅಪಘಾತಗಳು ಸಂಭವಿಸಿದ್ದಲ್ಲಿಮಹಾರಾಷ್ಟ್ರದಲ್ಲಿ ೬೩,೦೧೯ಮಧ್ಯಪ್ರದೇಶದಲ್ಲಿ ೫೧,೮೧೦ಕರ್ನಾಟಕದಲ್ಲಿ ೪೪,೦೨೦ ಮತ್ತು ಆಂಧ್ರಪ್ರದೇಶದಲ್ಲಿ ೪೩,೪೮೨ ರಸ್ತೆ ಅಪಘಾತಗಳು ಸಂಭವಿಸಿದ್ದವುವಿಶೇಷವೆಂದರೆ ದೇಶದಲ್ಲೇ ಅತ್ಯಧಿಕ ಜನರನ್ನು ಬಲಿತೆಗೆದುಕೊಂಡಿರುವ ರಸ್ತೆ ಅಪಘಾತಗಳಲ್ಲಿ ದೇಶದ ರಾಜಧಾನಿಯಾಗಿರುವ ದೆಹಲಿಯು ಅಗ್ರಸ್ಥಾನದಲ್ಲಿದೆದೆಹಲಿಯಲ್ಲಿ ಸಂಭವಿಸಿದ್ದ ೭೫೫೬ ರಸ್ತೆ ಅಪಘಾತಗಳಲ್ಲಿ ೧೮೨೦ ಜನರು ಬಲಿಯಾಗಿದ್ದಲ್ಲಿಚೆನ್ನೈ ನಗರದಲ್ಲಿ ಸಂಭವಿಸಿದ್ದ ೯೭೦೫ ಅಪಘಾತಗಳಲ್ಲಿ ೧೨೪೭ ಜನರು ಮೃತಪಟ್ಟಿದ್ದರುಬೆಂಗಳೂರು ನಗರವು ತದನಂತರದ ಸ್ಥಾನದಲ್ಲಿದೆ.
ದ್ವಿಚಕ್ರ ವಾಹನಗಳು, ಕಾರುಗಳು ಮತ್ತು ಟ್ಯಾಕ್ಸಿಗಳು ಶೇ.೪೫ ರಷ್ಟು ಮರಣಗಳಿಗೆ ಕಾರಣವೆನಿಸಿದ್ದು, ಮೃತಪಟ್ಟವರಲ್ಲಿ ಅತ್ಯಧಿಕ ಜನರು ೩೦ ರಿಂದ ೪೪ ವರ್ಷ ವಯಸ್ಸಿನವರೇ ಆಗಿದ್ದಾರೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ವರದಿಯಂತೆ, ನಮ್ಮ ದೇಶದಲ್ಲಿ ೧೪ ವರ್ಷಕ್ಕಿಂತ ಕೆಳಗಿನ ೨೦ ಮಕ್ಕಳು ಪ್ರತಿನಿತ್ಯ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ.

ಜಾಗತಿಕ ಸಮಸ್ಯೆ

ರಸ್ತೆ ಅಪಘಾತಗಳಿಂದ  ಸಂಭವಿಸುತ್ತಿರುವ ಪ್ರಾಣಹಾನಿಯು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಯುನೈಟೆಡ್ ನೇಷನ್ಸ್ ಸಂಸ್ಥೆಯು ಹಮ್ಮಿಕೊಂಡಿದ್ದ " ರಸ್ತೆ ಸುರಕ್ಷಾ ದಶಕ " ( ೨೦೧೦- ೨೦೨೦ ) ಕಾರ್ಯಕ್ರಮದಲ್ಲಿ, ಈ ಗಂಭೀರ ಸಮಸ್ಯೆಯನ್ನು ಖಚಿತವಾಗಿ ನಿಯಂತ್ರಿಸಲು ನಿರ್ದಿಷ್ಟ ಗುರಿಯನ್ನು ನಿಗದಿಸಲಾಗಿತ್ತು. ಇದನ್ನು ಸಾಧಿಸಲು ಸೂಕ್ತ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಸದಸ್ಯ ರಾಷ್ಟ್ರಗಳು ರಸ್ತೆ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ವೃದ್ಧಿಸಲು, ಸುರಕ್ಷಿತ ರಸ್ತೆಗಳನ್ನು ನಿರ್ಮಿಸಲು ಹಾಗೂ ಸುಗಮ ಸಂಚಾರಕ್ಕೆ ಅವಶ್ಯಕ ಸೌಲಭ್ಯಗಳನ್ನು ಒದಗಿಸಲುಸುರಕ್ಷಿತ ವಾಹನಗಳ ನಿರ್ಮಾಣಕ್ಕೆ ಆದ್ಯತೆಯನ್ನು ನೀಡಲು ಮತ್ತು ಅಪಘಾತಗಳು ಸಂಭವಿಸಿದೊಡನೆ ಕೈಗೊಳ್ಳಬೇಕಾದ ತುರ್ತುಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿತ್ತು. ಜೊತೆಗೆ ಅಮೇರಿಕಾದಲ್ಲಿ ೨೦೧೨ ರಲ್ಲಿ ಜರಗಿದ್ದ ಯುನೈಟೆಡ್ ನೇಷನ್ಸ್ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ರಸ್ತೆ ಸುರಕ್ಷಾ ದಶಕದ ಅವಧಿಯಲ್ಲಿ ೫ ದಶಲಕ್ಷ ಜನರ ಪ್ರಾಣಗಳನ್ನು ಉಳಿಸಲು ಮತ್ತು ೫೦ ಲಕ್ಷ ಜನರನ್ನು ಗಂಭೀರ ಗಾಯಗಳಿಂದ ರಕ್ಷಿಸಲು ಸಮರೋಪಾದಿಯಲ್ಲಿ ಕಾರ್ಯೋನ್ಮುಖರಾಗಬೇಕೆಂದು ಕರೆನೀಡಲಾಗಿತ್ತು.

ಭಾರತದಲ್ಲಿ ಹೆಚ್ಚುತ್ತಿರುವ ಅಪಘಾತಗಳು

ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳು  ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ತುರ್ತುಪರಿಸ್ಥಿತಿಗಳಿಗೆ  ಕಾರಣವೆನಿಸುತ್ತಿರಲುನೂತನವಾಗಿ ನಿರ್ಮಿಸಲ್ಪಡುತ್ತಿರುವ  ಅತ್ಯಾಧುನಿಕ ಸುಸಜ್ಜಿತ ರಸ್ತೆಗಳು ಹಾಗೂ ಪುನರ್ ನವೀಕರನಗೊಳ್ಳುತ್ತಿರುವ ಅನ್ಯ ರಸ್ತೆಗಳೊಂದಿಗೆ, ಅನಿಯಂತ್ರಿತವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗಳೂ ಕಾರಣವೆನಿಸುತ್ತಿವೆ. ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿರುವ ರಸ್ತೆಗಳ ಪ್ರಮಾಣವು ಮೂರು ಪಟ್ಟು ಹೆಚ್ಚಿದೆ. ಇದರೊಂದಿಗೆ ರಸ್ತೆ ಅಪಘಾತಗಳ ಪ್ರಮಾಣವು ಶೇ..೪ ರಷ್ಟು ಹೆಚ್ಚಿದೆ.  ಅಂತೆಯೇ ಇವುಗಳಿಗೆ ಬಲಿಯಾಗುವವರ ಸಂಖ್ಯೆಯು ಶೇ..೩ ರಷ್ಟು ಹೆಚ್ಚಿದೆ.

ಸರ್ಕಾರದ ವೈಫಲ್ಯ

ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರ ಪ್ರಾಣರಕ್ಷಣೆಗೆ- ಚಿಕಿತ್ಸೆಗಳಿಗೆ ಅತ್ಯವಶ್ಯಕವೆನಿಸುವ ಅಂಬುಲೆನ್ಸ್, ತುರ್ತು ಸಹಾಯ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ವಿಶೇಷ ಚಿಕಿತ್ಸೆಯನ್ನು ನೀಡಬಲ್ಲ ಸುಸಜ್ಜಿತ ಆಸ್ಪತ್ರೆಗಳೇ ಮುಂತಾದ ಸೌಲಭ್ಯಗಳು ಮಾತ್ರ ಅಪೇಕ್ಷಿತ ಮಟ್ಟದಲ್ಲಿ ವೃದ್ಧಿಸಿಲ್ಲ. ಸೊಸೈಟಿ ಫಾರ್ ಎಮರ್ಜೆನ್ಸಿ ಮೆಡಿಸಿನ್ ಸಂಸ್ಥೆಯ ಅಭಿಪ್ರಾಯದಂತೆ, ಗಂಭೀರವಾಗಿ ಗಾಯಗೊಂಡವರಿಗೆ ತುರ್ತುಚಿಕಿತ್ಸೆ ನೀಡಬಲ್ಲ ಟ್ರೋಮಾ ಸೆಂಟರ್ ಗಳಂತಹ ವ್ಯವಸ್ಥೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಯೋಜನೆಗಳನ್ನು ಹಮ್ಮಿಕೊಂಡಿದ್ದರೂ, ಇವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಹಾಗೂ ಇದೇ ರೀತಿಯ ಅನ್ಯ ಕಾರಣಗಳಿಂದಾಗಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯನ್ನು ನಿಯಂತ್ರಿಸಲು ಆಗುತ್ತಿಲ್ಲ. ಇವೆಲ್ಲವನ್ನೂ ಮಾಡಬೇಕಾಗಿರುವ ಸರ್ಕಾರವೇ ಕೈಕಟ್ಟಿ ಕುಳಿತಲ್ಲಿ ಇಂತಹ ಗಂಭೀರ ಸಮಸ್ಯೆಗೆ ಪರಿಹಾರ ದೊರೆಯುವ ಸಾಧ್ಯತೆಗಳೇ ಇಲ್ಲ.

ನೀವೇನು ಮಾಡಬಹುದು

ವಾಹನಗಳನ್ನು ಚಲಾಯಿಸುವಾಗ ಅಥವಾ ರಸ್ತೆ- ಕಾಲುದಾರಿಗಳಲ್ಲಿ ನಡೆಯುವಾಗ ಮತ್ತು ರಸ್ತೆಗಳನ್ನು ದಾಟುವಾಗರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೆ ಪರಿಪಾಲಿಸಿ. ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸುವುದರಿಂದ ಅನುಕ್ರಮವಾಗಿ ಶೇ. ೪೦ ರಷ್ಟು ಮತ್ತು ಶೇ.೫೦ ರಷ್ಟು ಗಂಭೀರ ಗಾಯಗಳನ್ನು ತಡೆಗಟ್ಟಬಹುದು ಎನ್ನುವುದನ್ನು ಮರೆಯದಿರಿ. ಮಾದಕ ವಸ್ತುಗಳನ್ನು ಸೇವಿಸಿ ಅಥವಾ ಮೊಬೈಲ್ ದೂರವಾಣಿಯಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದು ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ ಎನ್ನುವುದು ನೆನಪಿರಲಿ. ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಅತಿವೇಗದಲ್ಲಿ ವಾಹನಗಳನ್ನು ಚಲಾಯಿಸುವುದು ನಿಮ್ಮ ಪ್ರಾಣಕ್ಕೆ ಮಾತ್ರವಲ್ಲ, ರಸ್ತೆಯನ್ನು ಬಳಸುವ ಇತರರ ಪ್ರಾಣಕ್ಕೂ ಎರವಾಗಬಲ್ಲದು ಎನ್ನುವುದನ್ನು ಮರೆಯದಿರಿ. ಅಂತಿಮವಾಗಿ " ನಿಧಾನವೇ ಪ್ರಧಾನ " ಎನ್ನುವುದು ನಿಮ್ಮ ಧ್ಯೇಯಗಳಲ್ಲಿ ಪ್ರಮುಖವಾಗಿರಲಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 






Tuesday, December 23, 2014

IDOLS LYING IN POLLUTED WATER



ತ್ಯಾಜ್ಯನೀರಿನಲ್ಲಿ ಬಿದ್ದಿರುವ ಪೂಜಿಸಿದ ವಿಗ್ರಹಗಳು 

ಶುಭ ಸಮಾರಂಭವೊಂದರ ಸಲುವಾಗಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದ ಸಭಾಂಗಣಕ್ಕೆ ಭೇಟಿ ನೀಡಿದಾಗ, ವಾಹನವನ್ನು ನಿಲ್ಲಿಸಲು ಬಾಕಿಮಾರು ಗದ್ದೆಯತ್ತ ತೆರಳಿದ್ದೆನು. ಸಮೀಪದಲ್ಲಿದ್ದ ಬಾವಿಯಲ್ಲಿ ಮನುಷ್ಯನ ಆಕಾರದಂತೆ ಕಂಡುಬಂದ ವಸ್ತು ಯಾವುದೆಂದು ಕುತೂಹಲದಿಂದ ವೀಕ್ಸಿಸಿದಾಗ, ಇವೆಲ್ಲವೂ ಐದಾರು ವಿಗ್ರಹಗಳ ಪಳೆಯುಳಿಕೆಗಳೇ ಹೊರತು ಬೇರೇನೂ ಅಲ್ಲವೆಂದು ಖಚಿತವಾಗಿತ್ತು. ಜೊತೆಗೆ ಈ ಕೆರೆ - ಬಾವಿಯ ಬಗ್ಗೆ ಹಿಂದೆ ಎರಡುಬಾರಿ ಬರೆದಿದ್ದ ಬರಹಗಳ ನೆನಪೂ ಸ್ವಾಭಾವಿಕವಾಗಿಯೇ ಆಗಿತ್ತು. 

ಹಿನ್ನೆಲೆ  

ಸ್ಥಳೀಯ ಶ್ರೀ ಮಹಾಲಿಂಗೇಶ್ವರ ದೇವಳದ ಮುಂದಿರುವ ಬಾಕಿಮಾರು ಗದ್ದೆಯ ಒಂದು ಮೂಲೆಯಲ್ಲಿ ಪುಟ್ಟ ಕೆರೆಯೊಂದು ಇದ್ದಿದ್ದುದನ್ನು ಸ್ಥಳೀಯರು ಮರೆತಿರಲಾರರು. ಗತ ಶತಮಾನದ ಆದಿಯಲ್ಲಿ ಇಲ್ಲಿದ್ದ ಪುಟ್ಟ ಹೊಂಡವೊಂದರಲ್ಲಿ ಕಡುಬೇಸಗೆಯ ದಿನಗಳಲ್ಲೂ  ನೀರು ತುಂಬಿರುವುದನ್ನು ಬಹಳಷ್ಟು ಜನರು ಕಂಡಿದ್ದಾರೆ. ಹತ್ತಾರು ವರ್ಷಗಳ ಹಿಂದೆ ಶ್ರೀ ದೇವರ ಬಾಕಿಮಾರು ಗದ್ದೆಯಲ್ಲಿ " ಜೋಡುಕರೆ ಕಂಬಳ " ವನ್ನು ಆರಂಭಿಸಿದ್ದ ಸಂದರ್ಭದಲ್ಲಿ, ಕಂಬಳದ ಗದ್ದೆಯನ್ನು ಸಿದ್ದಪಡಿಸಲು ಅಗಾಧ ಪ್ರಮಾಣದ ನೀರಿನ ಅವಶ್ಯಕತೆ ಇದ್ದಿತು. ಪಕ್ಕದಲ್ಲೇ ಇದ್ದ ಈ ನೀರು ತುಂಬಿದ ಹೊಂಡವನ್ನು ಕೆರೆಯನ್ನಾಗಿ ಪರಿವರ್ತಿಸಿದಲ್ಲಿ, ಕಂಬಳದ ಗದ್ದೆಗೆ ಬೇಕಾದಷ್ಟು ನೀರು ಸ್ಥಳದಲ್ಲೇ ಲಭಿಸಬಹುದು ಎನ್ನುವ ಊಹೆ ನಿಜವಾಗಿತ್ತು. ಆದರೆ ಒಂದಿಷ್ಟು ಆಳಕ್ಕೆ ಅಗೆದೊಡನೆ ಕಲ್ಲು ಸಿಕ್ಕಿದ್ದರಿಂದ, ಕೆರೆಯ ಕಾಮಗಾರಿಯು ಅಷ್ಟಕ್ಕೇ ಸ್ಥಗಿತಗೊಂಡಿತ್ತು. ಆದರೆ ಕಂಬಳದ ಕ್ರೀಡಾಂಗಣದ ಸಿದ್ಧತೆಗೆ ಬೇಕಾಗುವಷ್ಟು ನೀರನ್ನು ಈ ಪುಟ್ಟಕೆರೆಯೇ ಪೂರೈಸುತ್ತಿತ್ತು.
 
ಇದಲ್ಲದೇ ಕಡುಬೇಸಗೆಯ ದಿನಗಳಲ್ಲಿ ನೀರಿನ ಕೊರತೆ ಉದ್ಭವಿಸಿದಲ್ಲಿ, ಅನೇಕ ನಿರ್ಮಾಣ ಕಾಮಗಾರಿಗಳ ಗುತ್ತಿಗೆದಾರರು ಇದೇ ಕೆರೆಯ ನೀರನ್ನು ಅನಿವಾರ್ಯವಾಗಿ ಬಳಸುತ್ತಿದ್ದರು. ಆದರೆ ಈ ಕೆರೆಯ ನೀರು ಅತ್ಯಂತ ಕಲುಷಿತವಾಗಿದ್ದುದರಿಂದ ಯಾರೊಬ್ಬರೂ ಇದನ್ನು ಅನ್ಯ ಉದ್ದೇಶಗಳಿಗಾಗಿ ಬಳಸುತ್ತಿರಲಿಲ್ಲ. ಹಾಗೂ ಇದೇ ಕಾರಣದಿಂದಾಗಿ ಇದರಲ್ಲಿ ಬಂದುಬೀಳುತ್ತಿದ್ದ ತ್ಯಾಜ್ಯಗಳಿಗೆ ಇತಿಮಿತಿಗಳೇ ಇರಲಿಲ್ಲ. ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಂತೂ, ಈ ಕೆರೆಯು ತ್ಯಾಜ್ಯಗಳಿಂದ ತುಂಬಿ ತುಳುಕುತ್ತಾ ತ್ಯಾಜ್ಯವಿಲೇವಾರಿ ಘಟಕದಂತೆ ಕಾಣಿಸುತ್ತಿತ್ತು. ಇಷ್ಟೆಲ್ಲಾ ಸಾಲದೆನ್ನುವಂತೆ, ಆವರಣದ ಗೋಡೆಯೇ ಇಲ್ಲದಿದ್ದ ಈ ಕೆರೆಯಲ್ಲಿ ಕೆಲ ಜಾನುವಾರುಗಳೊಂದಿಗೆ ಒಂದಿಬ್ಬರು ನತದೃಷ್ಟರೂ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಪ್ರಾಯಶಃ ಇವೆಲ್ಲಾ ಕಾರಣಗಳಿಂದಾಗಿ ಸದಾ ತ್ಯಾಜ್ಯಗಳಿಂದ ತುಂಬಿ ದುರ್ವಾಸನೆಯನ್ನು ಬೀರುತ್ತಿದ್ದ ಮತ್ತು ದಾರಿಹೋಕರಿಗೆ ಅಸಹ್ಯವೆನಿಸುತ್ತಿದ್ದ ಕೆರೆಗೆ ಮೋಕ್ಷವನ್ನು ನೀಡುವ ನಿರ್ಧಾರವೊಂದು ೨೦೦೮-೦೯ ರಲ್ಲಿ ಅನುಷ್ಠಾನಗೊಂಡಿತ್ತು. ಹಾಗೂ ಇದಕ್ಕಾಗಿ ಮಂಜೂರಾಗಿದ್ದ ೧.೩೦ ಲಕ್ಷ ರೂ.ಗಳನ್ನು ವ್ಯಯಿಸಿ, ಕಾಂಕ್ರೀಟ್ ರಿಂಗ್ ಗಳನ್ನು ಅಳವಡಿಸುವ ಮೂಲಕ ಎರಡು ಬಾವಿಗಳನ್ನು ನಿರ್ಮಿಸಲಾಗಿತ್ತು. ಬಳಿಕ ಇವುಗಳಿಗೆ ಕಬ್ಬಿಣದ ಜಾಲರಿಯ ಮುಚ್ಚಳಗಳನ್ನು ಅಳವಡಿಸಲಾಗಿತ್ತು.

 ವಿಗ್ರಹಗಳ ವಿಸರ್ಜನೆ 

ಪುತ್ತೂರಿನಲ್ಲಿ ಜರಗುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಮತ್ತು ನವರಾತ್ರಿಗಳ ಸಂದರ್ಭಗಳಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಿಸಿದ ದೇವರ ವಿಗ್ರಹಗಳನ್ನು ಕಳೆದ ಅನೇಕ ವರ್ಷಗಳಿಂದ ಶ್ರೀ ಲಕ್ಷ್ಮಿ ವೆಂಕಟ್ರಮಣ ದೇವಳದ ಮುಂದಿದ್ದ ಸರ್ಕಾರಿ ಬಾವಿಯಲ್ಲಿ ಜಲಸ್ಥಂಭನಗೊಳಿಸಲಾಗುತ್ತಿತ್ತು. ಆದರೆ ಸುಮಾರು ಏಳು ವರ್ಷಗಳ ಹಿಂದೆ ಈ ನಿರುಪಯುಕ್ತ ಬಾವಿಯಲ್ಲಿ ಜನರು ಎಸೆಯುತ್ತಿದ್ದ ತ್ಯಾಜ್ಯಗಳಿಂದ ಉದ್ಭವಿಸುತ್ತಿದ್ದ ಸಮಸ್ಯೆಗಳಿಂದಾಗಿ, ಈ ಬಾವಿಯನ್ನು ಅನಿವಾರ್ಯವಾಗಿ ಮುಚ್ಚಲಾಗಿತ್ತು. ತದನಂತರ ಗಣಪತಿ, ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳನ್ನು ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿನ ಬಾವಿಯಲ್ಲಿ ವಿಸರ್ಜಿಸುವ ಪದ್ಧತಿ ಆರಂಭವಾಗಿತ್ತು. ಈ ಪದ್ದತಿಯು ಇಂದಿಗೂ ಮುಂದುವರೆದಿದ್ದು, ಇದೇ ವರ್ಷದ ನವರಾತ್ರಿಯ ಬಳಿಕ ಇದರಲ್ಲಿ ವಿಸರ್ಜಿಸಿದ್ದ ವಿಗ್ರಹಗಳ ಪಳೆಯುಳಿಕೆಗಳು ದಾರಿಹೋಕರಿಗೆ ಕಾಣಸಿಗುತ್ತವೆ. ಇದರೊಂದಿಗೆ ವೈವಿಧ್ಯಮಯ ತ್ಯಾಜ್ಯಗಳು ಇದರಲ್ಲಿ ಬಂದು ಬಿದ್ದಿರುವುದರಿಂದ, ಬಾವಿಯ ನೀರು ಕಲುಷಿತಗೊಂಡು ದುರ್ವಾಸನೆಯನ್ನು ಬೀರುತ್ತಿದೆ. ಒಂದು ಬಾವಿಯ ಜಾಲರಿಯ ಮುಚ್ಚಳ ಮುರಿದುಹೊಗಿದ್ದಲ್ಲಿ, ಮತ್ತೊಂದು ಕಾಣೆಯಾಗಿದೆ. ಇವೆಲ್ಲವನ್ನೂ ಕಾಣುವಾಗ ಮನಸ್ಸು ಮಮ್ಮಲ ಮರುಗುತ್ತದೆ. ವೈಭವದಿಂದ ನಾವೇ ಪೂಜಿಸಿದ್ದ ದೇವರ ವಿಗ್ರಹಗಳು ಇಂದು ಕಲುಷಿತ ನೀರಿನಲ್ಲಿ ಬಿದ್ದಿರುವುದು ಪುತ್ತೂರಿನ ಜನರಿಗೆ ಹೆಮ್ಮೆತರುವ ವಿಚಾರವೇನಲ್ಲ. ಆದರೆ ಇಂತಹ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಘಟನೆಗಳು, ಈ ರೀತಿಯ ಸಮಸ್ಯೆಗಳು ಉದ್ಭವಿಸದಂತೆ ಒಂದಿಷ್ಟು ಮುನ್ನೆಚ್ಚರಿಕೆಯನ್ನು ವಹಿಸಿದಲ್ಲಿ ಲೇಸು ಎನ್ನುವುದು ಸ್ಥಳೀಯರ ಅಭಿಪ್ರಾಯವೂ ಹೌದು. 

ಪ್ರಸ್ತುತ ಈ ಕಲುಷಿತ ಬಾವಿಯನ್ನು ಸ್ವಚ್ಚಗೊಳಿಸಿ, ಮತ್ತೆ ಇವುಗಳಿಗೆ ಜಾಲರಿಯ ಮುಚ್ಚಳಗಳನ್ನು ಮುಚ್ಚಿದಲ್ಲಿ " ಸ್ವಚ್ಚ ಭಾರತ ಅಭಿಯಾನ " ದ ಸಂದರ್ಭದಲ್ಲಿ ಸಾರ್ಥಕವೆನಿಸೀತು. ಇದಕ್ಕೆ ತಪ್ಪಿದಲ್ಲಿ, ಈಗಾಗಲೇ ಮುಚ್ಚಿರುವ ಇತರ ಬಾವಿಗಳಂತೆ ಈ ಬಾವಿಯೂ ಕಣ್ಮರೆಯಾಗುವುದರಲ್ಲಿ ಸಂದೇಹವಿಲ್ಲ!.   

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 





Monday, December 22, 2014

KARNATAKA MLA'S FOREIGN STUDY TOUR GETS GREEN SIGNAL


 ರಾಜ್ಯದ ಶಾಸಕರಿಗೆ ಮತ್ತೆ ವಿದೇಶ ಅಧ್ಯಯನ ಪ್ರವಾಸ ಭಾಗ್ಯ 
ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿದ್ದ ಕರ್ನಾಟಕದ ಶಾಸಕರ ವಿದೇಶ ಅಧ್ಯಯನ ಪ್ರವಾಸಕ್ಕೆ ಬ್ರೇಕ್ ಹಾಕಿದ್ದ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪನವರು, ಈ ಬಗ್ಗೆ ಸೂಕ್ತ ನಿಯಮಗಳನ್ನು ರೂಪಿಸಲು ಉಭಯ ಸದನಗಳ ಕಾರ್ಯದರ್ಶಿಗಳ ಸಮಿತಿಯೊಂದನ್ನು ನೇಮಕ ಮಾಡಿದ್ದರು. ಈ ಸಮಿತಿಯ ವರದಿಯನ್ನು ಸರ್ಕಾರವು ಇದೀಗ ಅಂಗೀಕರಿಸಿದೆ. ತತ್ಪರಿಣಾಮವಾಗಿ ರಾಜ್ಯದ ಶಾಸಕರ ವಿದೇಶ ಅಧ್ಯಯನ ಪ್ರವಾಸವು ಹೊಸವರ್ಷ ಆರಂಭವಾಗುತ್ತಲೇ, ನಿರಾತಂಕವಾಗಿ ಮತ್ತೆ ಆರಂಭಗೊಳ್ಳಲಿದೆ. ಈ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ. 

ಚುನಾವಣೆಗಳ ಸಂದರ್ಭದಲ್ಲಿ ಮತದಾರರನ್ನು ಓಲೈಸುವ ಸಲುವಾಗಿ ಮತ್ತು ತದನಂತರ ತಮ್ಮ "ಮತನಿಧಿ " ಗಳನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವ ಸಲುವಾಗಿ, ಪ್ರತಿಯೊಂದು ರಾಜಕೀಯ ಪಕ್ಷಗಳು ಹಲವಾರು ಯೋಜನೆಗಳನ್ನು ಘೋಷಿಸಿ ಅನುಷ್ಠಾನಿಸುತ್ತವೆ. ಇವುಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಭಾಗ್ಯ, ಅನ್ನಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯಗಳಂತಹ ಅನೇಕ " ಉಚಿತ ಭಾಗ್ಯ " ಗಳು ಸೇರಿವೆ. ಆದರೆ ಇದೇ ರಾಜಕಾರಣಿಗಳು ತಮ್ಮ ಸುಖ ಸೌಲಭ್ಯಗಳಿಗಾಗಿ ತಾವೇ ರೂಪಿಸಿ ಪಡೆದುಕೊಳ್ಳುವ " ಉಚಿತ ಭಾಗ್ಯ " ಗಳ ಸಂಖ್ಯೆಯೂ ಸಾಕಷ್ಟಿದೆ. ಇವುಗಳಲ್ಲಿ ಶಾಸಕರ ವಿದೇಶ ಅಧ್ಯಯನ ಪ್ರವಾಸವೂ ಒಂದಾಗಿದೆ. 

ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿದ್ದ ಈ ವಿಶೇಷ ಸೌಲಭ್ಯದ ಲೋಪದೋಷಗಳನ್ನು ಸರಿಪಡಿಸಲು ಮತ್ತು ದುರುಪಯೋಗವನ್ನು ತಡೆಗಟ್ಟಲು, ವಿಧಾನಸಭೆಯ ಅಧ್ಯಕ್ಷರು ನೇಮಿಸಿದ್ದ ಅಧಿಕಾರಿಗಳ ಸಮಿತಿಯೊಂದು, ತನ್ನ ಸಲಹೆ ಸೂಚನೆಗಳು ಮತ್ತು ಶಿಫಾರಸುಗಳ ವರದಿಯನ್ನು ಅಧ್ಯಕ್ಷರಿಗೆ ಸಲ್ಲಿಸಿದೆ. ಅನೇಕ ವರ್ಷಗಳಿಂದ ಶಾಸಕರ ಮೋಜು ಮಸ್ತಿಗಳಿಗೆ ಆಸ್ಪದವನ್ನು ನೀಡುತ್ತಿದ್ದ ಈ ಸೌಲಭ್ಯವು ರದ್ದಾಗುತ್ತದೆ ಎಂದು ನಂಬಿದ್ದ ಜನಸಾಮಾನ್ಯರಿಗೆ, ಸಮಿತಿಯ ವರದಿಯಿಂದ ನಿಜಕ್ಕೂ ಭ್ರಮನಿರಸನವಾಗಿದೆ.

ಹಿನ್ನೆಲೆ  

ಕರ್ನಾಟಕದ ಶಾಸಕರಿಗೆ ಲಭಿಸುವ ಅನೇಕ ಸೌಲಭ್ಯಗಳಲ್ಲಿ, ವಿವಿಧ ಸದನ ಸಮಿತಿಗಳ ಸದಸ್ಯರಾಗಿರುವ ಶಾಸಕರು ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಕನಿಷ್ಠ ಒಂದುಬಾರಿ ವಿದೇಶ ಅಧ್ಯಯನ ಪ್ರವಾಸವನ್ನು ಕೈಗೊಳ್ಳುವ ಅವಕಾಶವಿತ್ತು. ಆದರೆ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಎರಡುಬಾರಿ ವಿದೇಶ ಪ್ರವಾಸಕ್ಕೆ ಅವಕಾಶ ನೀಡುವ ನಿರ್ಧಾರವನ್ನು ತಳೆಯಲಾಗಿತ್ತು. ಇಷ್ಟು ಮಾತ್ರವಲ್ಲ, ಇದೇ ಅವಧಿಯಲ್ಲಿ ಎರಡು ಬಾರಿ ಉಚಿತವಾಗಿ ಸ್ವದೇಶದಲ್ಲಿ ಪ್ರವಾಸ ಮಾಡಬಹುದಾದ ಸೌಲಭ್ಯವನ್ನೂ ಶಾಸಕರಿಗೆ ನೀಡಲಾಗಿತ್ತು.

ರಾಜ್ಯದ ವಿಧಾನ ಮಂಡಲಗಳ ವಿವಿಧ ಸಮಿತಿಗಳ ಸದಸ್ಯರಾಗಿರುವ ಶಾಸಕರು ಕಳೆದ ಹಲವಾರು ವರ್ಷಗಳಿಂದ ಸುಪ್ರಸಿದ್ಧ ಪ್ರವಾಸಿತಾಣಗಳಿರುವ ದೇಶಗಳಿಗೆ ಭೇಟಿನೀಡಿ, ಮೋಜು-ಮಸ್ತಿ ಮಾಡುತ್ತಿರುವ ಬಗ್ಗೆ ವ್ಯಾಪಕವಾದ ಪ್ರತಿಭಟನೆ ಜನರಿಂದ ವ್ಯಕ್ತವಾಗಿತ್ತು. ಹಾಗೂ ಇದೇ ಕಾರಣದಿಂದಾಗಿ ಈ ಪ್ರವಾಸವನ್ನು " ವಿದೇಶ ಅಧ್ಯಯನ ಪ್ರವಾಸ " ಎಂದು ಪುನರ್ ನಾಮಕರಣ ಮಾಡಲಾಗಿತ್ತು. ಆದರೆ ಶಾಸಕರ ಮೋಜು- ಮಸ್ತಿಗಳು ಮತ್ತು ಸುಪ್ರಸಿದ್ಧ ಪ್ರವಾಸಿತಾಣಗಳಿಗೆ ಭೇಟಿನೀಡುವ ಪದ್ಧತಿಯು ಎಂದಿನಂತೆಯೇ ಅಬಾಧಿತವಾಗಿ ಮುಂದುವರೆದಿತ್ತು!. 

ಅಸಂಬದ್ಧ ವರದಿಗಳು 

ವಿದೇಶ ಪ್ರವಾಸದಿಂದ ಮರಳಿದ ಬಳಿಕ ಅನೇಕ ಸಮಿತಿಗಳು ತಮ್ಮ ಅಧ್ಯಯನದ ವರದಿಗಳನ್ನೇ ಸಭಾಧ್ಯಕ್ಷರಿಗೆ ಸಲ್ಲಿಸಿಲ್ಲ. ಕೆಲ ಸಮಿತಿಗಳು ಸಲ್ಲಿಸಿರುವ ವರದಿಗಳನ್ನು ನೀವು ಓದಿದಲ್ಲಿ ಹೊಟ್ಟೆ ಹುಣ್ಣಾಗುವಂತೆ ನಗುವುದರಲ್ಲಿ ಸಂದೇಹವಿಲ್ಲ. ಉದಾಹರಣೆಗೆ ಜಗತ್ಪ್ರಸಿದ್ಧ ಪೀಸಾ ವಾಲು ಗೋಪುರದ ಬಗ್ಗೆ ನಮೂದಿಸಿರುವಂತೆ, ಇದರ ಮೂಲ ಅಸ್ತಿಭಾರದಲ್ಲೇ ದೋಷವಿದೆ. ವರ್ಷದಿಂದ ವರ್ಷಕ್ಕೆ ಈ ಗೋಪುರವು ೦.೦೪ ಡಿಗ್ರಿಯಷ್ಟು ವಾಲುವ ಚಾಲನೆಯಲ್ಲಿದ್ದು, ಕೊನೆಗೆ ಭೂಮಿಗೆ ಬೀಳುವ ಸಂಭವ ಇರುವುದಾಗಿ ಸಮಿತಿಗೆ ತಿಳಿದುಬಂತು!. 

ಇದಕ್ಕೂ ಮಿಗಿಲಾಗಿ ಯುರೋಪ್ ನ ಅತಿ ಎತ್ತರದ ಪರ್ವತ ಶಿಖರವಾಗಿರುವ ಯಂಗ್ ಫ್ರಾವ್ ಯೋಕ್ ಗೆ ಭೇಟಿ ನೀಡಿದ್ದ ಸರ್ಕಾರಿ ಭರವಸೆಗಳ ಸಮಿತಿಯು, ಈ ಹಿಮಾಚ್ಛಾದಿತ ಶಿಖರವನ್ನೇರಲು ಸುಮಾರು ನೂರಾರು ವರ್ಷಗಳ ಹಿಂದೆ ನಿರ್ಮಿಸಿದ್ದ ಸುರಂಗ ರೈಲು ಮಾರ್ಗವನ್ನು ವೀಕ್ಷಿಸಿತ್ತು. ಇದನ್ನು ಏರಲು ಪುಟ್ಟ ರೈಲೊಂದು ಸಂಚರಿಸುತ್ತಿದ್ದು, ಇದರಲ್ಲಿ ಪ್ರಯಾಣಿಸಿದ್ದ ಶಾಸಕರಿಗೆ ಅತ್ಯಾಶ್ಚರ್ಯವಾಗಿತ್ತು. ಈ ಬಗ್ಗೆ ತಮ್ಮ ವರದಿಯಲ್ಲಿ ಶಾಸಕರು ನೀಡಿದ್ದ ಸಲಹೆಯೊಂದು ಈ ರೀತಿ ಇದ್ದಿತು. ನಮ್ಮ ದೇಶದಲ್ಲಿರುವ ಹಿಮಾಲಯ ಪ್ರದೇಶದಲ್ಲಿ ಅನೇಕ ಪರ್ವತ ಶಿಖರಗಳಿದ್ದು, ಇದೇ ರೀತಿಯ ಸೌಲಭ್ಯವನ್ನು ಅಲ್ಲಿಯೂ ಕಲ್ಪಿಸಿಕೊಟ್ಟರೆ ಹೆಚ್ಚುಹೆಚ್ಚ್ಚು ಪ್ರವಾಸಿಗಳನ್ನು ಅಕರ್ಷಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿತು. ಇದು ಅಕ್ಷರಶಃ ಈ ವರದಿಯಲ್ಲಿನ ವಾಕ್ಯವೇ ಹೊರತು ಲೇಖಕರದ್ದಲ್ಲ್ಲ. ಇಂತಹ ವರದಿಗಳನ್ನು ಓದಿದಲ್ಲಿ ಕೇವಲ ಕಾಟಾಚಾರಕ್ಕಾಗಿ ಈ ವರದಿಗಳನ್ನು ಸಲ್ಲಿಸಿರುವುದು ಸ್ಪಷ್ಟವಾಗುತ್ತದೆ.

ಪ್ರವಾಸಕ್ಕೆ ಬ್ರೇಕ್   

 ಕಳೆದ ವರ್ಷದ  ಬೇಸಗೆಯ ಸಂದರ್ಭದಲ್ಲಿ ರಾಜ್ಯದ ಅನೇಕ ತಾಲೂಕುಗಳ ಜನರು ಕುಡಿಯಲು ನೀರಿಲ್ಲದೇ ಬಳಲುತ್ತಿದ್ದರೂ, ಈ ಬರಪೀಡಿತ ಪ್ರದೇಶಗಳ ಸಮಸ್ಯೆಯನ್ನು ಬಗೆಹರಿಸಬೇಕಾದ ತಮ್ಮ ಹೊಣೆಗಾರಿಕೆಯನ್ನು ಮರೆತ ಕೆಲ ಶಾಸಕರು, ವಿದೇಶ ಅಧ್ಯಯನ ಪ್ರವಾಸಕ್ಕೆ ಸಜ್ಜಾಗಿದ್ದರು. ರಾಜ್ಯದ ಪ್ರಜೆಗಳ ಸಮಸ್ಯೆಯನ್ನು ನಿರ್ಲಕ್ಷಿಸಿ, ಪ್ರಜೆಗೆಳು ತೆತ್ತ ತೆರಿಗೆಯ ಹಣವನ್ನು ಬಳಸಿ ವಿದೇಶ ಪ್ರವಾಸಕ್ಕೆ ಹೊರಟಿದ್ದ ಶಾಸಕರ ವರ್ತನೆಗಳ ಬಗ್ಗೆ ಮಾಧ್ಯಮಗಳಲ್ಲಿ ವಿಸೃತ ವರದಿಗಳು ಪ್ರಕಟವಾದಂತೆಯೇ, ವಿಧಾನಸಭಾಧ್ಯಕ್ಷರು ಇದಕ್ಕೆ ಬ್ರೇಕ್ ಹಾಕಿದ್ದರು. ಜೊತೆಗೆ ಶಾಸಕರ ವಿದೇಶ ಪ್ರವಾಸದ ವಿಚಾರದಲ್ಲಿ ೨೦೦೯ ರಲ್ಲಿ ರೂಪಿಸಿದ್ದ ಮಾರ್ಗದರ್ಶಿ ನೀತಿನಿಯಮಗಳಿದ್ದರೂ, ಇವುಗಳನ್ನು ಅವಶ್ಯಕತೆಯಿದ್ದಲ್ಲಿ ಬದಲಿಸಲು ಹೊಸದಾಗಿ ಮತ್ತೊಂದು ಸಮಿತಿಯನ್ನು ನೇಮಿಸಿದ್ದರು. ಈ ಸಮಿತಿಯ ವರದಿ ತಮ್ಮ ಕೈಸೇರಿದ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದಾಗಿ ಹೇಳಿದ್ದರು. 

ಖಡಕ್ ರಾಜಕಾರಣಿ ಎಂದೇ ಪ್ರಸಿದ್ಧರಾಗಿದ್ದ ವಿಧಾನಸಭಾಧ್ಯಕ್ಷರು, ರಾಜ್ಯದ ಶಾಸಕರ ವಿದೇಶ ಪ್ರವಾಸದ ಸೌಲಭ್ಯವನ್ನು ನಿಶ್ಚಿತವಾಗಿಯೂ ರದ್ದುಪಡಿಸುತ್ತಾರೆಂದು ಅನೇಕರು ಭಾವಿಸಿದ್ದರೂ, ಇವರ ಆದೇಶವನ್ನು ಗಮನಿಸಿದಾಗ ಶಾಸಕರ ವಿದೇಶ ಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆಯೇ ಹೊರತು, ರದ್ದುಪಡಿಸಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ವಿಧಾನಸಭಾಧ್ಯಕ್ಷರು ೨೦೦೯ ರಲ್ಲಿ ಶಾಸಕರ ವಿದೇಶ ಪ್ರವಾಸದ ಬಗ್ಗೆ ರೂಪಿಸಿದ್ದ ಪ್ರಮುಖ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಥಾನಗೊಳಿಸುವ ಮೂಲಕ ಶಾಸಕರ ಸ್ವೇಚ್ಛಾಚಾರಗಳಿಗೆ ಕಡಿವಾಣವನ್ನು ತೊಡಿಸಬಹುದಾಗಿದ್ದರೂ, ನೂತನ ಸಮಿತಿಯೊಂದನ್ನು ನೇಮಕಗೊಳಿಸಿದ್ದುದು ಏಕೆಂದು ನಮಗೂ ತಿಳಿದಿಲ್ಲ. ಪ್ರಾಯಶಃ ಕಳೆದ ಬಾರಿಯ ವಿದೇಶ ಪ್ರವಾಸದ ಬಗ್ಗೆ ಜನಸಾಮಾನ್ಯರು ಮತ್ತು ಮಾಧ್ಯಮಗಳು ತೋರಿದ್ದ ವ್ಯಾಪಕ ಆಕ್ರೋಶವನ್ನು ತುಸು ತಣ್ಣಗಾಗಿಸಲು ಹಾಗೂ ಒಂದಿಷ್ಟು ಸಮಯಾವಕಾಶವನ್ನು ಪಡೆದುಕೊಳ್ಳುವ ಸಲುವಾಗಿ ಈ ನಿರ್ಧಾರವನ್ನು ಅವರು ತಳೆದಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 

ಸಮಿತಿಯ ವರದಿಯಲ್ಲೇನಿದೆ?

ಪ್ರಸ್ತುತ ಉಭಯ ಸದನಗಳ ಕಾರ್ಯದರ್ಶಿಗಳ ಸಮಿತಿಯು ಸಭಾಪತಿಗಳಿಗೆ ಸಲ್ಲಿಸಿದ್ದ  ವರದಿಯನ್ನು ೧೭-೧೨-೨೦೧೪ ರಂದು ಅಂಗೀಕರಿಸಲಾಗಿದೆ. ಹಾಗೂ ೨೦೧೫ ರ ಜನವರಿ ತಿಂಗಳಿನಿಂದ, ಮತ್ತೆ ಕರ್ನಾಟಕದ ಶಾಸಕರ ವಿದೇಶಯಾತ್ರೆಯು ಆರಂಭವಾಗಲಿದೆ.

ಸಮಿತಿಯ ವರದಿಯಲ್ಲಿ ಉಲ್ಲೇಖಿಸಿರುವಂತೆ ಇನ್ನು ಮುಂದೆ ಯಾವುದೇ ಸದನ ಸಮಿತಿಗಳು ಪ್ರತ್ಯೇಕವಾಗಿ ವಿದೇಶ ಪ್ರವಾಸವನ್ನು ಕೈಗೊಳ್ಳುವಂತಿಲ್ಲ.ಈ ಪದ್ದತಿಗೆ ಬದಲಾಗಿ ಉಭಯ ಸದನಗಳ ಆಯ್ದ ೨೦ ಸದಸ್ಯರು ಮತ್ತು ಐವರು ಅಧಿಕಾರಿಗಳ ತಂಡವನ್ನು ರಚಿಸಿ ವಿದೇಶ ಪ್ರವಾಸಕ್ಕೆ ಕಳುಹಿಸಲಾಗುತ್ತದೆ.ಇದಲ್ಲದೆ ಶಾಸಕರು ಯಾವ ದೇಶಗಳಿಗೆ ಭೇಟಿ ನೀಡಬೇಕು ಎನ್ನುವುದನ್ನು ಸಭಾಪತಿಗಳೇ ಆಯ್ಕೆಮಾಡಲಿದ್ದಾರೆ. ದೇಶಗಳನ್ನು ಆಯ್ಕೆಮಾಡುವಾಗ ವಿವಿಧ ದೇಶಗಳು ವಿಶೇಷ ಸಾಧನೆಗೈದಿರುವ ಕ್ಷೇತ್ರಗಳು, ಅಲ್ಲಿನ ಸಂಸದೀಯ ವ್ಯವಸ್ಥೆ ಮತ್ತು ಶಾಸಕರು ಅಲ್ಲಿ ಅಧ್ಯಯನ ಮಾಡಬೇಕಾದ ವಿಚಾರಗಳ ರೂಪುರೇಷೆಗಳನ್ನು ಸಭಾಪತಿಗಳೇ ನಿರ್ಧರಿಸಲಿದ್ದಾರೆ. ಈ ಮಾರ್ಗಸೂಚಿಗಳ ವ್ಯಾಪ್ತಿಯಲ್ಲೇ ಅಧ್ಯಯನ ಪ್ರವಾಸವು ಜರಗುತ್ತದೆ. ( ಉದಾಹರಣೆಗೆ ಮೂಲ ಸೌಕರ್ಯ, ತ್ಯಾಜ್ಯ ಸಂಗ್ರಹ- ವಿಲೇವಾರಿ, ಉತ್ತಮ ಗುಣಮಟ್ಟದ ರಸ್ತೆಗಳು- ಕಾಲುದಾರಿಗಳು, ಕೃಷಿ ಪದ್ಧತಿ, ಕಾನೂನು ಸುವ್ಯವಸ್ಥೆ ಮತ್ತಿತರ ವಿಷಯಗಳ ಬಗ್ಗೆ ಅಧ್ಯಯನವನ್ನು ನಡೆಸಬೇಕಾಗುತ್ತದೆ.) ಆದರೆ ಹಿಂದಿನಂತೆ ಪ್ರವಾಸದಿಂದ ಮರಳಿದ ಬಳಿಕ ಅಧ್ಯಯನದ ವರದಿಯನ್ನು ನೀಡದೇ ಇರಲು ಅವಕಾಶ ಇಲ್ಲದಿರುವುದರಿಂದ, ಕಾಲಮಿತಿಯಲ್ಲಿ ತಾವು ನಡೆಸಿದ್ದ ಅಧ್ಯಯನದ ವರದಿಯನ್ನು ವಿಧಾನ ಸಭೆಯ ಅಥವಾ ಪರಿಷತ್ತಿನ ಅಧ್ಯಕ್ಷರಿಗೆ ಸಲ್ಲಿಸಲೇಬೇಕಾಗುತ್ತದೆ!. ಅಂತೆಯೇ ತಾವು  ಅಧ್ಯಯನವನ್ನು ನಡೆಸಿದ್ದ ಪ್ರಮುಖ ವಿಚಾರಗಳನ್ನು ನಮ್ಮ ರಾಜ್ಯದಲ್ಲೂ ಅನುಷ್ಠಾನಗೊಳಿಸುವ ಬಗ್ಗೆ ತಮ್ಮ ಸಲಹೆ - ಸೂಚನೆಗಳನ್ನು ನೀಡಬೇಕಾಗುತ್ತದೆ. ಹಾಗೂ ಇವೆಲ್ಲಾ ಕಾರಣಗಳಿಂದಾಗಿ ಪ್ರವಾಸಕ್ಕೆ ತೆರಳುವ ಸಂದರ್ಭದಲ್ಲಿ ನಮ್ಮ ಶಾಸಕರು ವಿವಿಧ ವಿಚಾರಗಳ ಬಗ್ಗೆ ನಿಸ್ಸಂದೇಹವಾಗಿಯೂ " ಅಧ್ಯಯನ " ವನ್ನು ನಡೆಸಲೆಬೇಕಾಗುತ್ತದೆ!.  

ಆದರೆ ಇದೇ ಸಂದರ್ಭದಲ್ಲಿ ವಿದೇಶಗಳಲ್ಲಿ ಅಧ್ಯಯನ ಪ್ರವಾಸ ಕೈಗೊಳ್ಳಲಿರುವ ಶಾಸಕರ ಖರ್ಚುವೆಚ್ಚಗಳಿಗೆ ವಿಧಿಸಲಾಗಿದ್ದ ೫.೬ ಲಕ್ಷ ರೂ.ಗಳ ಮಿತಿಯನ್ನು ರದ್ದುಪಡಿಸುವಂತೆ ಸಮಿತಿಯು ಸೂಚಿಸಿದೆ. ಈ ಶಿಫಾರಸನ್ನು ಸಮರ್ಥಿಸಲು, ದೇಶದಿಂದ ದೇಶಕ್ಕೆ  ಸಂಭವಿಸುವ ವೆಚ್ಚಗಳಲ್ಲಿ ವ್ಯತ್ಯಯವಾಗುತ್ತದೆ ಎಂದು ಸಮಿತಿಯು ಉಲ್ಲೇಖಿಸಿದೆ. 

ಅಂತಿಮವಾಗಿ ವಿದೇಶ ಪ್ರವಾಸವನ್ನು ಏರ್ಪಡಿಸಲು ಶಾಸಕರು - ಅಧಿಕಾರಿಗಳು ಬಳಸುತ್ತಿದ್ದ ಖಾಸಗಿ ಟ್ರಾವೆಲ್ ಏಜೆನ್ಸಿಗಳಿಗೆ ಬದಲಾಗಿ, ೧೦ ಶಾಸಕರ ಸಮಿತಿಯೊಂದು ಈ ಬಗ್ಗೆ ನಿರ್ಧರಿಸಲಿದೆ. ಆದರೆ ಶಾಸಕರ ಉಚಿತ ವಿದೇಶ ಪ್ರವಾಸ ಭಾಗ್ಯವು, ಇನ್ನು ಮುಂದೆಯೂ ಅಬಾಧಿತವಾಗಿ ಮುಂದುವರೆಯಲಿದೆ. 

ಸೌಲಭ್ಯವನ್ನೇ ರದ್ದುಪಡಿಸಿ 

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವುದು ನಿಜವಾದಲ್ಲಿ, ಪ್ರಜೆಗಳು ಪಾವತಿಸಿದ ತೆರಿಗೆಯ ಹಣವನ್ನು ಬಳಸಿ ನಮ್ಮ ಶಾಸಕರು ಕೈಗೊಳ್ಳುವ  ಉಚಿತ ಸ್ವದೇಶ ಪ್ರವಾಸ ಮತ್ತು ವಿದೇಶ ಅಧ್ಯಯನ ಪ್ರವಾಸಗಳನ್ನು  ರದ್ದುಗೊಳಿಸಲೇಬೇಕು. ಏಕೆಂದರೆ ಇದಕ್ಕೂ ಮುನ್ನ ವಿದೇಶ ಅಧ್ಯಯನ ಪ್ರವಾಸಗಳನ್ನು ಕೈಗೊಂಡಿದ್ದ ಶಾಸಕರ ತಂಡಗಳು ನೀಡಿದ್ದ ವರದಿಗಳಲ್ಲಿ ( ವರದಿಗಳನ್ನು ನೀಡಿದ್ದಲ್ಲಿ ! ) ಶಿಫಾರಸು ಮಾಡಿರುವ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿದ ಉದಾಹರಣೆಗಳೇ ಇಲ್ಲ. ಇದಕ್ಕೂ ಮಿಗಿಲಾಗಿ ವಿದೇಶಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಸ್ವಚ್ಚತೆ, ಕಾನೂನು ಪರಿಪಾಲನೆ, ಶಿಸ್ತು ಮತ್ತಿತರ ವಿಚಾರಗಳು ಮತ್ತು ಅತ್ಯುತ್ತಮ ಮೂಲಸೌಕರ್ಯಗಳ ಸೌಲಭ್ಯ ಇತ್ಯಾದಿಗಳ ವಿವರಗಳನ್ನು ಅರಿತುಕೊಳ್ಳಲು ಆಯಾ ದೇಶಗಳಿಗೆ ಭೇಟಿ ನೀಡಬೇಕಾದ ಅವಶ್ಯಕತೆಯೇ ಉದ್ಭವಿಸುವುದಿಲ್ಲ. ಇವೆಲ್ಲಾ ಮಾಹಿತಿಗಳು ಅಂತರ್ಜಾಲ ತಾಣಗಳಲ್ಲಿ ಸುಲಭದಲ್ಲೇ ಲಭಿಸುತ್ತವೆ. ಇದೇ ಕಾರಣದಿಂದಾಗಿ ಇಂತಹ ಅಧ್ಯಯನ ಪ್ರವಾಸಗಳಿಂದ ನಮ್ಮ ರಾಜಕ್ಕೆ ಮತ್ತು ರಾಜ್ಯದ ಪ್ರಜೆಗಳಿಗೆ ಯಾವುದೇ ರೀತಿಯ ಲಾಭವಿಲ್ಲ. ಅಂತೆಯೇ ಇದರಿಂದ ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಸೌಲಭ್ಯಗಳು ದೊರೆಯುವ ಮತ್ತು ತತ್ಪರಿಣಾಮವಾಗಿ ಇವರ ಜೀವನದ ಮಟ್ಟವು ಉನ್ನತ ಸ್ತರಕ್ಕೆ ಏರುವ ಸಾಧ್ಯತೆಗಳೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. 

ಸರ್ಕಾರಿ ಅಧಿಕಾರಿಗಳೇ ಸದಸ್ಯರಾಗಿದ್ದ ಈ ಸಮಿತಿಯ ಸಂಪೂರ್ಣ ವರದಿಯ ಬಗ್ಗೆ ನಮ್ಮ ಶಾಸಕರು ಏನೆನ್ನುತ್ತಾರೆ ಅನ್ನುವುದನ್ನು ಅರಿತುಕೊಳ್ಳುವ ಕುತೂಹಲ ಜನಸಾಮಾನ್ಯರ ಮನದಲ್ಲಿ ಮೂಡಿದಲ್ಲಿ ಅಚ್ಚರಿ ಪಡಬೇಕಾಗಿಲ್ಲ. ಏಕೆಂದರೆ ತಾವು ಚುನಾಯಿಸಿದ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಅರಿತುಕೊಳ್ಳುವ ಹಕ್ಕು ರಾಜ್ಯದ ಜನರಿಗೆ ಇದೆ.


ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



Friday, December 19, 2014

ALLEGATION OF CORRUPTION


ಸಚಿವರ ಭ್ರಷ್ಟಾಚಾರ : ಶಾಸಕರಿಂದ ಆರೋಪಗಳ ಮಹಾಪೂರ !

ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲಗಳ ಅಧಿವೇಶನಕ್ಕೆ ಮುನ್ನ ಜರಗಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ತಮ್ಮದೇ ಪಕ್ಷದ ಸಚಿವರ ವಿರುದ್ಧ ಭ್ರಷ್ಟಾಚಾರ, ಸರ್ಕಾರಿ ನೌಕರರ ವರ್ಗಾವಣೆಯ ಧಂಧೆ ಮತ್ತು ತಮ್ಮನ್ನು ನಿರ್ಲಕ್ಷಿಸುತ್ತಿರುವುದರ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರು ಗಂಭೀರ ಆರೋಪಗಳನ್ನು ಮಾಡಿದ್ದ ವಿಚಾರವು ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟಗೊಂಡಿತ್ತು. ಈ ಸಂದರ್ಭದಲ್ಲಿ ನಿರ್ದಿಷ್ಟ ನಿದರ್ಶನಗಳೊಂದಿಗೆ ನೇರವಾಗಿ ಆರೋಪ ಮಾಡಿದ್ದ ಶಾಸಕರು, ಈ ಅಕ್ರಮಗಳಿಗೆ ಕಡಿವಾಣ ತೊಡಿಸದೇ ಇದ್ದಲ್ಲಿ, ನೇರವಾಗಿ ಎ ಐ ಸಿ ಸಿ ಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಎಚ್ಚರಿಕೆಯನ್ನು ನೀಡಿದ್ದರು. 

ಪಕ್ಷದ ಶಾಸಕರ ಈ ಸಭೆಯಲ್ಲಿ ಸಣ್ಣ ನೀರಾವರಿ ಸಚಿವರು ಮೂರು ಲಕ್ಷ ಲಂಚ ಪಡೆದು ಕಾರ್ಯಕಾರಿ ಎಂಜಿನಿಯರ್ ರನ್ನು ವರ್ಗಾವಣೆ ಮಾಡಿದ್ದುದು, ಕೆಲ ಸಚಿವರು ಶೇ.೫ ರಿಂದ ೮ ರಷ್ಟು ಮೊತ್ತವನ್ನು ಲಂಚದ ರೂಪದಲ್ಲಿ ನೀಡದೇ ಇದ್ದಲ್ಲಿ ಅನುದಾನದ ಹಣವನ್ನು ಬಿಡುಗಡೆ ಮಾಡದಿರುವುದು, ಪ್ರಬಲ ಸಚಿವರು ಇಲಾಖಾ ಅನುದಾನವನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಶಾಸಕರಿಗೆ ಅನ್ಯಾಯ ಮಾಡುವುದು ಮತ್ತು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ೨೫ ಕೋಟಿ ರೂ.ಗಳಲ್ಲಿ ೧೩೫ ಕೋಟಿರೂ.ಗಳನ್ನುಸಚಿವರೊಬ್ಬರ ಜಿಲ್ಲೆಯೊಂದಕ್ಕೆ ಬಿಡುಗಡೆ ಮಾಡಿರುವುದೇ ಮುಂತಾದ ನಿದರ್ಶನಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ನಿಜ ಹೇಳಬೇಕಿದ್ದಲ್ಲಿ ಸಭೆಯಲ್ಲಿ ಪ್ರಸ್ತಾಪ ಮಾಡದೇ ಇದ್ದ ಭ್ರಷ್ಟಾಚಾರ ಸ್ವಜನ ಪಕ್ಷಪಾತ ಮುಂತಾದ ಪ್ರಕರಣಗಳು ಸಾಕಷ್ಟು ಇದ್ದಿರಲೇಬೇಕು. ಆದರೆ ಇವೆಲ್ಲವನ್ನೂ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಲು ಅನೇಕ ಶಾಸಕರು ಹಿಂಜರಿದಿರಬೇಕು. 

ಭ್ರಷ್ಟಾಚಾರ ಗುಟ್ಟೇನಲ್ಲ 

ರಾಜಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ರಾಜ್ಯದ ಪ್ರಜೆಗಳಿಗೆ ತಿಳಿಯದ ವಿಚಾರವೇನಲ್ಲ. ಯಾವುದೇ ಪಕ್ಷ ಅಧಿಕಾರದ ಗದ್ದುಗೆಯನ್ನು ಏರಿದರೂ, ಶೈಕ್ಷಣಿಕ ಅರ್ಹತೆಗಳಿಲ್ಲದ, ಕ್ರಿಮಿನಲ್ ಹಿನ್ನೆಲೆಯುಳ್ಳ ಹಾಗೂ ಹಣಬಲ ಮತ್ತು ತೋಳ್ಬಲಗಳಿರುವ ಶಾಸಕರು ಸಚಿವ ಸ್ಥಾನವನ್ನು ಗಳಿಸಲು ಯಶಸ್ವಿಯಾಗುವುದು ನಮ್ಮ ದೇಶದ ರಾಜಕೀಯ ಕ್ಷೇತ್ರದ ಅಧಃಪತನಕ್ಕೆ ಸಾಕ್ಷಿಯಾಗಿದೆ. ವಿಶೇಷವೆಂದರೆ ಅತ್ಯಾಚಾರ ಮತ್ತು ಕೊಲೆಗಳಂತಹ ಹೇಯ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದವರೂ, ಇಂದು ಶಾಸಕ, ಸಂಸದ ಹಾಗೂ ಸಚಿವರಾಗಿರುವುದು ಮತ್ತು ಈ ಬಗ್ಗೆ ಸ್ಪಷ್ಟನೆಯನ್ನು ನೀಡುವಾಗ ತಾವು ಕೇವಲ ಆರೋಪಿಯೇ ಹೊರತು ಅಪರಾದಿ ಅಥವಾ ಪಾತಕಿಯಲ್ಲ ಎನ್ನುವುದು ವಾಡಿಕೆಯಾಗಿದೆ. 

ಭ್ರಷ್ಟಾಚಾರದ ಪೆಡಂಭೂತ 

ಭಾರತದ ಮಾಜಿ ಪ್ರಧಾನಿಯೊಬ್ಬರು ಅನೇಕ ವರ್ಷಗಳ ಹಿಂದೆ ಭ್ರಷ್ಟಾಚಾರವನ್ನು " ಒಂದು ಅಂತಾರಾಷ್ಟ್ರೀಯ ಘಟನೆ" ಎಂದಿದ್ದುದನ್ನು ಅನೇಕ ಭಾರತೀಯರು ಮರೆತಿರುವ ಸಾಧ್ಯತೆಗಳಿಲ್ಲ.ಅಂದಿನ ದಿನಗಳಲ್ಲಿ ದೇಶದಲ್ಲಿ ಕಂಡುಬರುತ್ತಿದ್ದ ಕೆಲ ಭ್ರಷ್ಟಾಚಾರದ ಪ್ರಕರಣಗಳಿಗೆ ಸಂಬಂದಿಸಿದಂತೆ ಮಾಜಿ ಪ್ರಧಾನಿಗಳು ಹೇಳಿದ್ದ ಈ ಮಾತುಗಳು, ಭ್ರಷ್ಟಾಚಾರವನ್ನು ಸಮರ್ಥಿಸಲು ನೀಡಿದ್ದ ಹೇಳಿಕೆಯಂತಿದ್ದವು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. 

ಕೆಲವೇ ದಶಕಗಳ ಹಿಂದಿನ ತನಕ ತೆರೆಯ ಮರೆಯಲ್ಲಿ ಹಾಗೂ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವು, ಇಂದು ಬಹಿರಂಗವಾಗಿ ಹಾಗೂ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ. ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ನಿವಾಸಗಳ ಮೇಲೆ ಆದಾಯ ತೆರಿಗೆ, ಲೋಕಾಯುಕ್ತ ಮತ್ತಿತರ ಸರ್ಕಾರಿ ಇಲಾಖೆಗಳು ನಡೆಸಿದ್ದ ದಾಳಿಗಳ ಸಂದರ್ಭದಲ್ಲಿ ಪತ್ತೆಯಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಸೊತ್ತುಗಳೇ ಇದಕ್ಕೆ ಮೂಕ ಸಾಕ್ಷಿಯಾಗಿವೆ. ಅಂತೆಯೇ ಭಿಕ್ಷಾಧಿಪತಿಗಳಾಗಿದ್ದ ಹಲವಾರು ರಾಜಕೀಯ ನೇತಾರರು ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಿರುವುದು ಇದನ್ನು ಸಾಬೀತುಪಡಿಸುತ್ತದೆ. ಅನೇಕ ನೇತಾರರು ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ್ದ ಆಸ್ತಿಪಾಸ್ತಿಗಳ ಮೌಲ್ಯವು ವರ್ಷ ಕಳೆಯುವಷ್ಟರಲ್ಲೇ ಹಲವಾರು ಪಟ್ಟು ಹೆಚ್ಚುತ್ತಿರುವುದು, ಅಕ್ರಮಗಳನ್ನು ಎಸಗುವುದು ಮತ್ತು ಭ್ರಷ್ಟಾಚಾರದ ಪರಿಣಾಮವಾಗಿಯೇ ಹೊರತು, ನ್ಯಾಯ ಸಮ್ಮತ ಮಾರ್ಗದಿಂದಲ್ಲ ಎನ್ನುವುದು ನಮ್ಮ ದೇಶದ ಮತದಾರರಿಗೆ ಚೆನ್ನಾಗಿ ತಿಳಿದಿದೆ. ಆದರೆ ಚುನಾಯಿತ ಜನ ಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಹಕ್ಕನ್ನು ಭಾರತದ ಮತದಾರರಿಗೆ ನೀಡದ ಕಾರಣದಿಂದಾಗಿ, ಪ್ರಜೆಗಳು ಅಸಾಯಕರಾಗಿ ಇವರ ದುರ್ವರ್ತನೆಗಳನ್ನು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿರುವುದು ಮಾತ್ರ ಸುಳ್ಳೇನಲ್ಲ. 

ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು " ಜಿ ಪ್ರವರ್ಗದ ನಿವೇಶನ " ಗಳ ಹಗರಣದ ಬಗ್ಗೆ  ಹೇಳಿದ್ದಂತೆ, ರಾಜ್ಯದ ಶಾಸಕರು ಒಂದಕ್ಕೂ ಅಧಿಕ ನಿವೇಶನಗಳನ್ನು ಅಲ್ಪಬೆಲೆಗೆ ಪಡೆದುಕೊಳ್ಳುವುದು, ಇವುಗಳನ್ನು ಮಾರುಕಟ್ಟೆ ಬೆಲೆಯಲ್ಲಿ ಮಾರಾಟ ಮಾಡಿ ದೊರೆಯುವ ಹಣವನ್ನು ಚುನಾವಣೆಯ ಸಂದರ್ಭದಲ್ಲಿ ವ್ಯಯಿಸಲೇ ಹೊರತು ಅನ್ಯ ಉದ್ದೇಶಕ್ಕಾಗಿ ಅಲ್ಲ ಎನ್ನುವುದು ಗಮನಾರ್ಹ. ಚುನಾವಣೆಗಳ ಸಂದರ್ಭದಲ್ಲಿ ಅಧಿಕತಮ ಅಭ್ಯರ್ಥಿಗಳು ವ್ಯಯಿಸುವ ಮೊತ್ತ, ಅಪರೂಪದಲ್ಲಿ ಚುನಾವಣಾ ಅಧಿಕಾರಿಗಳು ವಶಪಡಿಸಿಕೊಳ್ಳುವ ಕೋಟ್ಯಂತರ ರೂಪಾಯಿಗಳು ಮತ್ತು ಮತದಾರರಿಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಂಚುವ ಹಣ ಮತ್ತು ಹೆಂಡಗಳ ಪ್ರಮಾಣವನ್ನು ಗಮನಿಸಿದಲ್ಲಿ, ಚುನಾವಣಾ ಆಯೋಗವು ನಿಗದಿಸಿರುವ ಮೊತ್ತವನ್ನು ಮೀರುವುದರಲ್ಲಿ ಸಂದೇಹವಿಲ್ಲ. 

ಸರ್ಕಾರದಿಂದ ಲಭಿಸುವ ಜಿ ಪ್ರವರ್ಗದ ನಿವೇಶನ ಮತ್ತಿತರ  ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳುವ ಅನೇಕ ಶಾಸಕರು, ಕೈತುಂಬಾ ಹಣವನ್ನು ಸಂಪಾದಿಸುವ ಸಲುವಾಗಿಯೇ ಫಲವತ್ತಾದ ಖಾತೆಯೊಂದರ ಸಚಿವರಾಗಲು ಹಾತೊರೆಯುತ್ತಾರೆ. ದುರದೃಷ್ಟವಶಾತ್ ಈ ಅವಕಾಶದಿಂದ ವಂಚಿತರಾದಲ್ಲಿ, ಯಾವುದಾದರೂ ನಿಗಮ - ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಪಡೆಯಲು ಹರಸಾಹಸವನ್ನೇ ನಡೆಸುತ್ತಾರೆ. ತನ್ಮೂಲಕ ಚುನಾವಣೆಯ ಸಂದರ್ಭದಲ್ಲಿ ತಾವು ವ್ಯಯಿಸಿದ್ದ ಕೋಟ್ಯಂತರ ರೂಪಾಯಿಗಳಿಗೆ ಪ್ರತಿಯಾಗಿ, ಇನ್ನಷ್ಟು ಕೋಟಿ ರೂ.ಗಳನ್ನು ಸಂಪಾದಿಸುತ್ತಾರೆ. 

ಪ್ರಾಯಶಃ " ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು " ಎನ್ನುವ ಮಾತುಗಳು ಇದೀಗ ಬದಲಾದ ಸ್ಥಿತಿಯಲ್ಲಿ ತಮ್ಮ ಅರ್ಥವನ್ನೇ ಕಳೆದುಕೊಂಡಿವೆ. ಏಕೆಂದರೆ ರಾಜಕೀಯ ಪ್ರಭಾವ, ಸಾಕಷ್ಟು ಹಣಬಲ ಮತ್ತು ತೋಳ್ಬಲಗಳಿಲ್ಲದೇ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲುವುದು ಇದೀಗ ಅಕ್ಷರಶಃ ಅಸಾಧ್ಯವೆನಿಸುತ್ತದೆ. ಹಾಗೂ ಇದೇ ಕಾರಣದಿಂದಾಗಿ ಪ್ರಾಮಾಣಿಕ ಪ್ರಜೆಯೊಬ್ಬ ಚುನಾವಣೆಗಳಲ್ಲಿ ಸ್ಪರ್ಧಿಸಿ, ಗೆಲ್ಲುವುದು ಅಸಾಧ್ಯವೆನಿಸುತ್ತಿದೆ. ಆಮ್ ಆದ್ಮಿ ಪಕ್ಷವು ಇದಕ್ಕೆ ಅಪವಾದವೆನಿಸಿದರೂ, ಸ್ಪಷ್ಟ ಬಹುಮತದ ಅಭಾವ ಹಾಗೂ ಆಡಳಿತದ ಅನುಭವವಿಲ್ಲದ ಶಾಸಕರು ಮತ್ತು ನೇತಾರರಿಂದಾಗಿ ಸಿಕ್ಕ ಅವಕಾಶವನ್ನು ಕಳೆದುಕೊಂಡು ನೇಪಥ್ಯಕ್ಕೆ ಸರಿದಿದೆ. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 


Saturday, December 13, 2014

LED LIGHTS - DO NOT LAST LONGER



  ದಾರಿದೀಪಗಳನ್ನು ಖರೀದಿಸುವಾಗ ಖಾತರಿನೀಡುವುದೇಕೆ ?


ನಿರಂತರವಾಗಿ ಹೆಚ್ಚುತ್ತಿರುವ ರಾಜ್ಯದ ಜನಸಂಖ್ಯೆ, ಹೆಚ್ಚುತ್ತಲೇ ಇರುವ ವಿದ್ಯುಚ್ಛಕ್ತಿಯ ಬೇಡಿಕೆ, ವಿದ್ಯುತ್ ಕಳ್ಳತನ ಹಾಗೂ ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಜಾರಿಗೊಳಿಸದ ಕಾರಣಗಳಿಂದಾಗಿ ನಮ್ಮ ರಾಜ್ಯದಲ್ಲಿ ವಿದ್ಯುತ್ ಕ್ಷಾಮದ ಸಮಸ್ಯೆಯು ಇಂದಿಗೂ ಬಗೆಹರಿದಿಲ್ಲ.

ಆದರೆ ಇತ್ತೀಚಿನ ಕೆಲವರ್ಷಗಳಿಂದ ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಅನುಷ್ಠಾನಗೊಳಿಸುವತ್ತ ಸರ್ಕಾರ ಗಮನಹರಿಸಿದ ಕಾರಣದಿಂದಾಗಿ, ರಾಜ್ಯದ ಅನೇಕ ನಗರ ಮತ್ತು ಮಹಾನಗರಗಳಲ್ಲಿ ವಿದ್ಯುತ್ ಕಬಳಿಸುವ ಸೋಡಿಯಂ ಮತ್ತಿತರ ದೀಪಗಳಿಗೆ ಬದಲಾಗಿ, ವಿದ್ಯುತ್ ಉಳಿತಾಯ ಮಾಡಬಲ್ಲ ಎಲ್ ಇ ಡಿ ದಾರಿದೀಪಗಳನ್ನು ಅಳವಡಿಸಲಾಗುತ್ತಿದೆ. ಹಾಗೂ ಇದಕ್ಕಾಗಿ ಸರ್ಕಾರವೇ ನೀಡುವ ಲಕ್ಷಾಂತರ ರೂಪಾಯಿಗಳ ಅನುದಾನವನ್ನು ಬಳಸಲಾಗುತ್ತದೆ.ಆದರೆ ಸರ್ಕಾರದ ಈ ಯೋಜನೆಯು ಸ್ಥಳೀಯ ಸಂಸ್ಥೆಗಳಿಗೆ ಸಾಕಷ್ಟು ಕಷ್ಟನಷ್ಟಗಳಿಗೆ ಮತ್ತು ಅವ್ಯವಹಾರಗಳಿಗೆ ಕಾರಣವೆನಿಸಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಕೆಟ್ಟುಹೋದ ದಾರಿದೀಪಗಳು 

ದ.ಕ ಜಿಲ್ಲೆಯ ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಅತ್ಯಲ್ಪ ಪ್ರಮಾಣದ ವಿದ್ಯುಚ್ಛಕ್ತಿಯನ್ನು ಬಳಸಿ, ಪ್ರಖರವಾದ ಬೆಳಕನ್ನು ನೀಡುವ ಹಾಗೂ ಪರಿಸರ ಸ್ನೇಹಿ ಎನಿಸಿರುವ ಎಲ್ ಇ ಡಿ ದಾರಿದೀಪಗಳನ್ನು ಅಳವಡಿಸಲು ನಿರ್ಧರಿಸಿ ೧೦-೦೫-೨೦೧೨ ರಂದು ಮೊದಲಬಾರಿಗೆ ಟೆಂಡರ್ ಗಳನ್ನು ಆಹ್ವಾನಿಸಲಾಗಿತ್ತು. ತದನಂತರ ಅತ್ಯಂತ ಕಡಿಮೆ ದರವನ್ನು ನಮೂದಿಸಿದ್ದ ಸ್ವಸ್ತಿಕ್ ಲ್ಯುಮಿನರೀಸ್ ಮತ್ತು ಸನ್ ಲೈಟ್ ಲ್ಯುಮಿನರೀಸ್ ಸಂಸ್ಥೆಗಳಿಗೆ ನಿಗದಿತ ಪ್ರದೇಶಗಳಲ್ಲಿ ಎಲ್ ಇ ಡಿ ದಾರಿದೀಪಗಳನ್ನು ಅಳವಡಿಸಲು ಆದೇಶಿಸಲಾಗಿತ್ತು. ಪುರಸಭಾ ವ್ಯಾಪ್ತಿಯಲ್ಲಿ ಸ್ವಸ್ತಿಕ್ ಸಂಸ್ಥೆಯು ೧೪೪, ಸನ್ ಲೈಟ್ ಸಂಸ್ಥೆಯು ೫೫ ಮತ್ತು ಸರ್ಕಾರಿ ಸಂಸ್ಥೆಯಾಗಿರುವ " ಕ್ರೆಡಲ್ " ನ ವತಿಯಿಂದ ಉಚಿತವಾಗಿ ದೊರೆತ ೧೨೦ ದೀಪಗಳು ಸೇರಿದಂತೆ ಒಟ್ಟು ೩೧೯ ದೀಪಗಳನ್ನು ೨೦೧೩ ಮತ್ತು ೨೦೧೪ ರಲ್ಲಿ ಅಳವಡಿಸಲಾಗಿತ್ತು. ಕ್ರೆಡಲ್ ನೀಡಿದ್ದ ದೀಪಗಳನ್ನು ಬೆಂಗಳೂರಿನ ಕೃಪಾ ಟೆಲಿಕಾಂ ಸಂಸ್ಥೆ ಅಳವಡಿಸಿತ್ತು. ಈ ದೀಪಗಳಿಗೆ ಒಂದು ವರ್ಷದ ಖಾತರಿಯನ್ನೂ ನೀಡಲಾಗಿತ್ತು.

ಅಲ್ಪಾಯುಷಿ ದೀಪಗಳು  

ನೀವು ಬಳಸುವ ಉತ್ತಮ ಗುಣಮಟ್ಟದ ಸಾಮಾನ್ಯ ವಿದ್ಯುತ್ ಬಲ್ಬ್ ೧೦೦೦ ಗಂಟೆ ಹಾಗೂ ಸಿ ಎಫ್ ಎಲ್ ಬಲ್ಬ್ ಗಳು ೫ ರಿಂದ ೧೦.೦೦೦ ಸಾವಿರ ಗಂಟೆ ಮತ್ತು ಎಲ್ ಇ ಡಿ ದೀಪಗಳು ೫೦,೦೦೦ ಗಂಟೆಗಳ ಕಾಲ ಉರಿಯಲೇಬೇಕು. ಎಲ್ ಇ ಡಿ ದೀಪಗಳು ಉಳಿತಾಯ ಮಾಡುವ ವಿದ್ಯುಚ್ಛಕ್ತಿಯ ಪ್ರಮಾಣ, ಹೊರಸೂಸುವ ಬೆಳಕಿನ ಪ್ರಖರತೆ ಮತ್ತು ಇವುಗಳ ಆಯುಷ್ಯಗಳನ್ನು ಪರಿಗಣಿಸಿದಾಗ, ಇವುಗಳ ದುಬಾರಿ ಬೆಲೆಯೂ ( ದೀಪವೊಂದರ ಸುಮಾರು ೨೦,೦೦೦/- ) ತೀರಾ ನಗಣ್ಯವೆನಿಸುತ್ತದೆ. ಆದರೆ ಪುತ್ತೂರಿನಲ್ಲಿ ಅಳವಡಿಸಿದ್ದ ೩೧೯ ಎಲ್ ಇ ಡಿ ದೀಪಗಳಲ್ಲಿ ೧೭೫ ದೀಪಗಳು ವರ್ಷ ಕಳೆಯುವಷ್ಟರಲ್ಲೇ ಕೆಟ್ಟುಹೋಗಿದ್ದವು. ಇವುಗಳಲ್ಲಿ ಕೃಪಾ ಟೆಲಿಕಾಂ ಸಂಸ್ಥೆ ಅಳವಡಿಸಿದ್ದ ಹಾಗೂ ಕ್ರೆಡಲ್ ವತಿಯಿಂದ ಪುಕ್ಕಟೆಯಾಗಿ ದೊರೆತಿದ್ದ ೧೨೦ ದೀಪಗಳಲ್ಲಿ ೧೦೫, ಸನ್ ಲೈಟ್ ಅಳವಡಿಸಿದ್ದ ೫೫ ರಲ್ಲಿ ೨೫ ಮತ್ತು ಸ್ವಸ್ತಿಕ್ ಅಳವಡಿಸಿದ್ದ ೧೪೪ ರಲ್ಲಿ ೫೫ ದೀಪಗಳು ಸೇರಿದಂತೆ,ಶೇ.೫೫ ರಷ್ಟು ದೀಪಗಳು ಅಕಾಲಿಕವಾಗಿ ಅಸುನೀಗಿದ್ದವು!. ಗುತ್ತಿಗೆದಾರರು ಹೇಳುವಂತೆ ಇದಕ್ಕೆ ಮಳೆಗಾಲದಲ್ಲಿ ಬಂದೆರಗುವ ಗುಡುಗು - ಮಿಂಚುಗಳೇ ಕಾರಣವೆನ್ನುವುದು ನಿಶ್ಚಿತವಾಗಿಯೂ ಸಮರ್ಥನೀಯವಲ್ಲ. ಇದು ನಿಜವಾಗಿದ್ದಲ್ಲಿ ಭಾರತದ ಅಧಿಕತಮ ನಗರ - ಪಟ್ಟಣಗಳಲ್ಲಿ ಇಂತಹ ದೀಪಗಳನ್ನೇ  ಅಳವಡಿಸುವಂತಿಲ್ಲ.


 
ಖಾತರಿಯ ಅವಧಿ ಎಷ್ಟು?

ಸಹಸ್ರಾರು ರೂಪಾಯಿ ಬೆಲೆಬಾಳುವ ಎಲ್ ಇ ಡಿ ದಾರಿದೀಪಗಳಿಗೆ ಕೇವಲ ಒಂದು ವರ್ಷದ ಖಾತರಿಯನ್ನು ನೀಡಲಾಗಿದೆ. ಆದರೆ ಪುರಸಭೆಯ ಗುತ್ತಿಗೆಯ ಷರತ್ತಿನಂತೆ ಗುತ್ತಿಗೆದಾರರು ಕಾಮಗಾರಿಗಳನ್ನು ಪರಿಪೂರ್ಣಗೊಳಿಸಿದ ಬಳಿಕ ಹಾಗೂ ಅಂತಿಮ ಬಿಲ್ಲನ್ನು ಪಾವತಿಸಿದ ನಂತರ, ಮುಂದಿನ ಎರಡು ವರ್ಷಗಳ ಅವಧಿಗೆ ಈ ದಾರಿದೀಪಗಳನ್ನು ಗುತ್ತಿಗೆದಾರರು ಉಚಿತವಾಗಿ ನಿರ್ವಹಿಸಬೇಕು. ಇದರರ್ಥ ಈ ದೀಪಗಳು ಎರಡು ವರ್ಷಗಳಲ್ಲಿ ಕೆಟ್ಟುಹೋದಲ್ಲಿ, ಗುತ್ತಿಗೆದಾರರೇ ಇದನ್ನು ಉಚಿತವಾಗಿ ದುರಸ್ತಿಪಡಿಸಬೇಕು. ಆದರೆ ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ ಕೆಟ್ಟುಹೋಗಿದ್ದ ಕೆಲವು ಎಲ್ ಇ ಡಿ ದೀಪಗಳನ್ನು ದುರಸ್ತಿಪಡಿಸಿದ್ದಲ್ಲಿ, ಮತ್ತೆ ಕೆಲವು ದೀಪಗಳನ್ನು ಬದಲಾಯಿಸಿ ಹೊಸ ದೀಪಗಳನ್ನು ನೀಡಲಾಗಿತ್ತು. ತದನಂತರ ಕೆಲವೆಡೆ ಈ ದೀಪಗಳಿಗೆ ಬದಲಾಗಿ ಅಲ್ಪಬೆಲೆಯ ಟಿ - ೫ ದಾರಿದೀಪಗಳನ್ನು ಅಳವಡಿಸಲಾಗಿತ್ತು. ವಿಶೇಷವೆಂದರೆ ಸುಮಾರು ೨೦,೦೦೦ ರೂ. ಬೆಲೆಯ ಎಲ್ ಇ ಡಿ ದೀಪಗಳಿಗೆ ಬದಲಾಗಿ ಕೇವಲ ೧,೪೮೯ ರೂ.ಬೆಲೆಯ ಟಿ - ೫ ದೀಪಗಳನ್ನು ಅಳವಡಿಸಿದ್ದ ಬಗ್ಗೆ, ಯಾರೊಬ್ಬರೂ ತಲೆಕೆಡಿಸಿಕೊಂಡಿರಲಿಲ್ಲ!. ಇದು " ಯಾರದ್ದೋ ದುಡ್ಡು, ಯಲ್ಲಮ್ಮನ ಜಾತ್ರೆ " ಎನ್ನುವ ಆಡುಮಾತಿಗೆ ಉತ್ತಮ ಉದಾಹರಣೆಯೂ ಹೌದು. 



ಕಾಮಗಾರಿಗಳಲ್ಲಿ ನ್ಯೂನತೆ 

ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಎಲ್ ಇ ಡಿ ದಾರಿದೀಪಗಳ ಅಳವಡಿಕೆಗಾಗಿ ಟೆಂಡರ್ ಗಳನ್ನು ಆಹ್ವಾನಿಸಿದಾಗ, ಈ ದೀಪಗಳನ್ನು ೩೨ ಡಯಾಮೀಟರ್ ನ ಹಾಗೂ ೨.೭೦ ಮೀಟರ್ ಉದ್ದದ ಜಿ. ಐ ಪೈಪ್ ಮತ್ತು ನಿಗದಿತ ಬ್ರಾಕೆಟ್ ಗಳೊಂದಿಗೆ ವಿದ್ಯುತ್ ಕಂಬಗಳಿಗೆ ಅಳವಡಿಸಬೇಕು ಎಂದು ನಮೂದಿಸಲಾಗಿದ್ದು, ಇದಕ್ಕಾಗಿ ಒಂದು ಬ್ರಾಕೆಟ್ ಗೆ ಸುಮಾರು ೯೦೦ ರೂ.ಗಳನ್ನು ಪಾವತಿಸಲಾಗಿದೆ. ಆದರೆ ಪುತ್ತೂರಿನಲ್ಲಿ ಅಳವಡಿಸಿದ್ದ ೩೧೯ ದಾರಿದೀಪಗಳಲ್ಲಿ ಒಂದೇ ಒಂದು ದೀಪಕ್ಕೂ ೨.೭೦ ಮೀಟರ್ ನ ಜಿ.ಐ ಪೈಪನ್ನು ಬಳಸದೇ, ಹಿಂದೆ ಸೋಡಿಯಂ ವೇಪರ್ ಹಾಗೂ ಟ್ಯೂಬ್ ಲೈಟ್ ಗಳನ್ನು ಅಳವಡಿಸಲು ಬಳಸಲಾಗಿದ್ದ ಹಳೆಯ ಪೈಪುಗಳಿಗೆ ಇವುಗಳನ್ನು ಅಳವಡಿಸಿದ್ದರೂ, ಈ ಫಿಟ್ಟಿಂಗ್ ಗಳ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಿರುವುದು ಸಂದೇಹಾಸ್ಪದವಾಗಿದ್ದು, ಗುತ್ತಿಗೆಯ ಷರತ್ತಿನ ಸ್ಪಷ್ಟ ಉಲ್ಲಂಘನೆಯಾಗಿದೆ. 

ಇಷ್ಟು ಮಾತ್ರವಲ್ಲ, ಕಾಮಗಾರಿಗಳನ್ನು ಆರಂಭಿಸುವಂತೆ ಪುರಸಭೆ ಆದೇಶಿಸಿದ ಬಳಿಕ, ತಮ್ಮ ಕಾಮಗಾರಿಗಳು ಪರಿಪೂರ್ಣಗೊಂಡಿವೆ ಎನ್ನುವ ವರದಿಯನ್ನು ಸ್ವಸ್ತಿಕ್ ಮತ್ತು ಸನ್ ಲೈಟ್ ಸಂಸ್ಥೆಗಳು ಸಲ್ಲಿಸಿಲ್ಲ. ( ವಿಶೇಷವೆಂದರೆ ಕ್ರೆಡಲ್ ಸಂಸ್ಥೆಯು ಉಚಿತವಾಗಿ ನೀಡಿದ್ದ ೧೨೦ ದಾರಿದೀಪಗಳನ್ನು ಅಳವಡಿಸಿದ್ದ ಕೃಪಾ ಟೆಲಿಕಾಂ ಸಂಸ್ಥೆಯು ತನ್ನ ಕಾಮಗಾರಿಗಳು ಪರಿಪೂರ್ಣಗೊಂಡ ವರದಿಯನ್ನು ನೀಡುವುದರೊಂದಿಗೆ, ಈ ಸಂದರ್ಭದಲ್ಲಿ ತೆಗೆದಿದ್ದ ೧೨೦ ಹಳೆಯ ಸೋಡಿಯಂ ದೀಪಗಳನ್ನು ಪುರಸಭೆಗೆ ಮರಳಿಸಿದೆ!. )
ಈ ವರದಿಯ ಬಳಿಕ ಸಂಸ್ಥೆಗಳು ನಡೆಸಿರುವ ಕಾಮಗಾರಿಗಳನ್ನು ಪುರಸಭಾ ಅಧಿಕಾರಿಗಳು ಪರಿಶೀಲಿಸಿ, ಇವುಗಳು ತೃಪ್ತಿಕರವಾಗಿವೆ ಎಂದು ಪ್ರಮಾಣೀಕರಿಸದೇ ಗುತ್ತಿಗೆದಾರರಿಗೆ ನಿಗದಿತ ಮೊತ್ತವನ್ನು ಪಾವತಿಸುವಂತಿಲ್ಲ. ಆದರೂ ಇವೆರಡೂ ಸಂಸ್ಥೆಗಳಿಗೆ ಗುತ್ತಿಗೆಯ ಮೊತ್ತವನ್ನು ಪಾವತಿಸಿರುವುದು ಹೇಗೆ ಮತ್ತು ಏಕೆ? ಮತ್ತು ಸುಮಾರು ೨೦,೦೦೦ ರೂ.ಬೆಲೆಬಾಳುವ ದೀಪಗಳಿಗೆ ಬದಲಾಗಿ ೧,೪೮೯ ರೂ. ಬೆಲೆಯ ಟಿ - ೫ ದೀಪಗಳನ್ನು ಅಳವಡಿಸಲು ಅನುಮತಿಯನ್ನು ನೀಡಿರುವುದಾದರೂ ಹೇಗೆ ಮತ್ತು ಏಕೆ?, ಎನ್ನುವ ಪ್ರಶ್ನೆಗೆ ಉತ್ತರವೇನೆಂದು ನಮಗೂ ತಿಳಿದಿಲ್ಲ!. 

ಮಾಹಿತಿ ನೀಡದ ಪುರಸಭೆ 

ಮಾಹಿತಿ ಹಕ್ಕು ಕಾಯಿದೆಯನ್ವಯ ಪುತ್ತೂರು ಪುರಸಭೆಗೆ ೨೬-೦೮-೨೦೧೪ ರಂದು ಈ ದೀಪಗಳ ಬಗ್ಗೆ ಅಪೇಕ್ಷಿತ ಮಾಹಿತಿಗಳನ್ನು ಒದಗಿಸುವಂತೆ ಅರ್ಜಿಯನ್ನು ಸಲ್ಲಿಸಿದ್ದ ಬಳಕೆದಾರರ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ, ೩೦-೦೯-೨೦೧೪ ರಂದು ನೀಡಿದ್ದ ಮಾಹಿತಿಗಳು ಅಪೂರ್ಣ ಮತ್ತು ದಾರಿತಪ್ಪಿಸುವ ಮಾಹಿತಿಗಳಾಗಿದ್ದುದರಿಂದ ಈ ಬಗ್ಗೆ ೧೦-೧೦-೨೦೧೪ ರಂದು ಪ್ರಥಮ ಮೇಲ್ಮನವಿಯನ್ನು ನಿಗದಿತ ಪ್ರಾಧಿಕಾರಕ್ಕೆ ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆಯನ್ನು ನಡೆಸಿದ ಬಳಿಕ ದಿ.೧೧-೧೧-೨೦೧೪ ರಂದು ನೀಡಿದ್ದ ಮಾಹಿತಿಗಳೂ ಪರಿಪೂರ್ಣವಾಗಿರಲಿಲ್ಲ. ಇದೇ ಕಾರಣದಿಂದಾಗಿ ಮತ್ತೆ ಮೇಲ್ಮನವಿ ಪ್ರಾಧಿಕಾರಕ್ಕೆ ದೂರನ್ನು ನೀಡಿದ ನಂತರ ೨೬-೧೧-೨೦೧೪ ರಂದು ಮತ್ತೊಮ್ಮೆ ನೀಡಿದ್ದ ಮಾಹಿತಿಗಳಲ್ಲಿ ಈ ಗುತ್ತಿಗೆಗಳ ಬಗ್ಗೆ ಕೆಲ ಹೊಸ ವಿಚಾರಗಳು ತಿಳಿದುಬಂದಿದ್ದರೂ, ಕೆಲವೊಂದು ದಾಖಲೆಗಳನ್ನು ಪುರಸಭೆಯ ಅಧಿಕಾರಿಗಳು ಇಂದಿನ ತನಕ ನೀಡಿಲ್ಲ. 

ಇವೆಲ್ಲವನ್ನೂ ಪುರಸಭೆಗೆ ತೆರಿಗೆಯನ್ನು ಪಾವತಿಸುವ ಸ್ಥಳೀಯ ನಾಗರಿಕರ ಗಮನಕ್ಕೆ ತರುವುದು ನಮ್ಮ ಉದ್ದೇಶವಾಗಿದೆ. ಜೊತೆಗೆ ದಾರಿದೀಪಗಳ ಗುತ್ತಿಗೆಯಲ್ಲಿ ಸಂಭವಿಸಿರುವ ನ್ಯೂನತೆಗಳನ್ನು ಸರಿಪಡಿಸುವ ಮತ್ತು ಷರತ್ತುಗಳನ್ನು ಪರಿಪಾಲಿಸದೇ ಇದ್ದರೂ, ಪುರಸಭೆಯು ಪಾವತಿಸಿದ್ದ ಮೊತ್ತವನ್ನು ಮರಳಿ ಪಡೆಯುವ ಬಗ್ಗೆ ಜನಪ್ರತಿನಿಧಿಗಳನ್ನು ಆಗ್ರಹಿಸುವುದು ನಮ್ಮ ನಿಮ್ಮೆಲ್ಲರ ಹೊಣೆಗಾರಿಕೆಯಾಗಿದೆ. 

ಡಾ,ಸಿ.ನಿತ್ಯಾನಂದ ಪೈ, ಪುತ್ತೂರು  

ಚಿತ್ರ - ಟಿ - ೫ ದಾರಿದೀಪ 





Tuesday, December 9, 2014

PICK A PLASTIC BOTTLE MISSION !



 ಹುಡುಕದಿದ್ದರೂ ಕಾಲಿಗೆ ತೊಡರುವ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳು !

ನಮ್ಮ ದೇಶದ ಪ್ರತಿಯೊಂದು ರಾಜ್ಯಗಳಲ್ಲಿನ ರಸ್ತೆಗಳಲ್ಲೂ ಕಾಣಸಿಗುವ ವೈವಿಧ್ಯಮಯ ತ್ಯಾಜ್ಯಗಳಲ್ಲಿ ಬಳಸಿ ಎಸೆದ ಪ್ಲಾಸ್ಟಿಕ್ ಬಾಟಲಿಗಳ ಪ್ರಮಾಣವು ಸಾಕಷ್ಟಿದೆ. ಸಾರ್ವಜನಿಕ ಸಭೆ- ಸಮಾರಂಭಗಳ ಸಂದರ್ಭದಲ್ಲಿ ಮತ್ತು ಬೇಸಗೆಯ ದಿನಗಳಲ್ಲಿ ಇಂತಹ ತ್ಯಾಜ್ಯ ಬಾಟಲಿಗಳ ಹಾವಳಿಯೂ ಅತಿಯಾಗಿರುತ್ತದೆ. ವಿಶೇಷವೆಂದರೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿಸಿ ಮಾರಾಟಮಾಡುವ ಶುದ್ಧೀಕರಿಸಿದ ನೀರು ಅಥವಾ ಲಘುಪಾನೀಯಗಳನ್ನು ಸೇವಿಸುವ ಸುಶಿಕ್ಷಿತ ಜನರು, ಖಾಲಿ ಬಾಟಲಿಗಳನ್ನು ಕಂಡಲ್ಲಿ ಎಸೆಯಲು ಹಿಂಜರಿಯುವುದಿಲ್ಲ. ಅನೇಕ ಸಂದರ್ಭಗಳಲ್ಲಿ ರೈಲು ಅಥವಾ ಅನ್ಯ ವಾಹನಗಳಲ್ಲಿ ಪಯಣಿಸುವ ಪ್ರಯಾಣಿಕರು ತ್ಯಾಜ್ಯ ಬಾಟಲಿಗಳನ್ನು ರಸ್ತೆಗಳ - ರೈಲುಹಳಿಗಳ ಬದಿಗಳಲ್ಲಿ ಎಸೆಯುವುದನ್ನೂ ನಿಲ್ಲಿಸುವುದೇ ಇಲ್ಲ. ಈ ಕೆಟ್ಟ ಹವ್ಯಾಸಕ್ಕೆ ಕಡಿವಾಣವನ್ನು ತೊಡಿಸಬೇಕಾದ ಅವಶ್ಯಕತೆ ಇದ್ದರೂ, ಬೆಕ್ಕಿನ ಕೊರಳಿಗೆ ಗಂಟೆಯನ್ನು ಕಟ್ಟುವವರು ಯಾರು?, ಎನ್ನುವ ಇಂತಹ ಪ್ರಶ್ನೆಗೆ ಉತ್ತರ ದೊರಕುವ ಸಾಧ್ಯತೆಗಳೇ ಇಲ್ಲ. ಆದರೆ ಇದೀಗ ದೇಶಾದ್ಯಂತ ನಡೆಯುತ್ತಿರುವ ಸ್ವಚ್ಛ ಭಾರತ ಅಭಿಯಾನದ ಪರಿಣಾಮವಾಗಿಯಾದರೂ, ತ್ಯಾಜ್ಯ ಬಾಟಲಿಗಳು ಮಾತ್ರವಲ್ಲ, ಯಾವುದೇ ತ್ಯಾಜ್ಯಗಳನ್ನು ಕಂಡಲ್ಲಿ ಎಸೆಯುವ ಹವ್ಯಾಸವನ್ನು ಭಾರತೀಯರು ತ್ಯಜಿಸಲೇಬೇಕಾಗಿದೆ. 

ದುಬಾರಿ ಬಾಟಲಿಗಳು!

ಕಳೆದ ಹಲವಾರು ವರ್ಷಗಳಿಂದ ಜನಪ್ರಿಯವೆನಿಸಿರುವ ಶುದ್ಧೀಕರಿಸಿದ ನೀರಿನ ಮತ್ತು ಲಘುಪಾನೀಯಗಳ ಬಾಟಲಿಗಳನ್ನು ಕಚ್ಚಾ ಪೆಟ್ರೋಲಿಯಂ ತೈಲದಿಂದ ತಯಾರಿಸಲಾಗುತ್ತದೆ. ಈ ತೈಲಕ್ಕಾಗಿ ನಾವು ಸಾಕಷ್ಟು ವಿದೇಶಿ ವಿನಿಯಮವನ್ನು ತೆರಲೇಬೇಕಾಗುತ್ತದೆ. ಬಹುತೇಕ ಜನರು ತಮ್ಮ ಸ್ವಾಸ್ಥ್ಯ ರಕ್ಷಣೆಯ ಸಲುವಾಗಿ ಕುಡಿಯುವ ಈ ಬಾಟಲೀಕರಿಸಿದ ನೀರಿನಿಂದಾಗಿ, ಪ್ರತಿಯೊಂದು ರಸ್ತೆ ಹಾಗೂ ಚರಂಡಿಗಳಲ್ಲಿ ತ್ಯಾಜ್ಯ ಬಾಟಲಿಗಳು ಎಸೆಯಲ್ಪತ್ತಿರುತ್ತವೆ. ಹಾಗೂ ಪರೋಕ್ಷವಾಗಿ ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತವೆ.

ಸುಶಿಕ್ಷಿತ ಜನರೇ ಹೆಚ್ಚಾಗಿ ಖರೀದಿಸಿ ಕುಡಿಯುವ ಈ ಬಾಟಲೀಕರಿಸಿದ ನೀರಿನ ಅಥವಾ ಲಘುಪಾನೀಯಗಳ ತ್ಯಾಜ್ಯ ಬಾಟಲಿಗಳು, ಇವುಗಳನ್ನು ಬಳಸದ ಜನರ ಆರೋಗ್ಯದ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ ಎನ್ನುವ ಗಂಭೀರ ವಿಚಾರವನ್ನು ಈ ಜನರು ಅನುಕೂಲಕರವಾಗಿ ಮರೆತುಬಿಡುತ್ತಾರೆ. ಅಂತೆಯೇ ಇಂತಹ ತ್ಯಾಜ್ಯಗಳ  ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಯ ವೆಚ್ಚದ ಬಗ್ಗೆಯೂ ಯಾರೊಬ್ಬರೂ ಚಿಂತಿಸುವುದಿಲ್ಲ. ವಿಶೇಷವೆಂದರೆ ಸ್ವಚ್ಚ ಭಾರತ ಅಭಿಯಾನದ ಯಶಸ್ಸಿಗಾಗಿ ಜನಸಾಮಾನ್ಯರ ಮನಸ್ಪೂರ್ವಕ ಸಹಕಾರವನ್ನು ಅಪೇಕ್ಷಿಸುವ ರಾಜ್ಯ - ಕೇಂದ್ರ ಸರ್ಕಾರಗಳ ಕಛೇರಿಗಳು ಮತ್ತು ಆಯೋಜಿಸುವ ಪ್ರತಿಯೊಂದು ಸಭೆ - ಸಮಾರಂಭಗಳಲ್ಲಿ ಇಂತಹ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು ರಾರಾಜಿಸುತ್ತವೆ!. 

ಚರಂಡಿಗಳಲ್ಲಿ ಬಾಟಲಿಗಳ ರಾಶಿ 

ಇದೇ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಪುತ್ತೂರಿನ ಪ್ರಧಾನ ರಸ್ತೆಯ ಬದಿಯಲ್ಲಿದ್ದ ಬೃಹತ್ ದೇವದಾರು ಮರವೊಂದನ್ನು, ರಸ್ತೆಯ ವಿಸ್ತರಣೆಗಾಗಿ ಕಡಿಯಲಾಗಿತ್ತು. ಈ ಸಂದರ್ಭದಲ್ಲಿ ಇದೇ ರಸ್ತೆಯ ಬದಿಯಲ್ಲಿದ್ದ ಬೃಹತ್ ಚರಂಡಿಯಲ್ಲಿ ಕಡಿದ ಮರದ ಕೊಂಬೆಗಳು ಬಿದ್ದಿದ್ದು, ಇದರಿಂದಾಗಿ ಚರಂಡಿಯಲ್ಲಿ ಹರಿಯುತ್ತಿದ್ದ ಕೊಳಚೆ ನೀರಿನ ಹರಿವಿಗೆ ಅಡಚಣೆ ಉಂಟಾಗಿತ್ತು. ತತ್ಪರಿಣಾಮವಾಗಿ ಚರಂಡಿಯ ಈ ಭಾಗದಲ್ಲಿ ಅಗಾಧ ಪ್ರಮಾಣದ ಪ್ಲಾಸ್ಯಿಕ್ ಕೈಚೀಲಗಳು, ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಇತರ ವೈವಿಧ್ಯಮಯ ತ್ಯಾಜ್ಯಗಳು ಸಂಗ್ರಹವಾಗಿದ್ದವು. ಇವುಗಳಲ್ಲಿ ನೂರಾರು ತ್ಯಾಜ್ಯ  ಪ್ಲಾಸ್ಟಿಕ್ ಬಾಟಲಿಗಳ ಪಾಲೇ ಸರ್ವಾಧಿಕವಾಗಿತ್ತು. 

ಈ ವಿಲಕ್ಷಣ ಸಮಸ್ಯೆಗೆ ರಸ್ತೆಬದಿಗಳಲ್ಲಿ ಜನರು ಎಸೆದ ತ್ಯಾಜ್ಯ ಬಾಟಲಿಗಳೇ ಕಾರಣವೆನಿಸಿದ್ದವು. ಅಂದು ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡಿರದೇ ಇದ್ದರೂ, ರಸ್ತೆಬದಿಯಲ್ಲಿ ಬಿದ್ದಿರುವ ತ್ಯಾಜ್ಯ ಬಾಟಲಿಗಳನ್ನು ನಾವು ಸಂಗ್ರಹಿಸಿದಲ್ಲಿ ಈ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸಬಹುದು ಎನ್ನುವ ವಿಶ್ವಾಸ ಮೂಡಿತ್ತು. ಹಾಗೂ ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾದಲ್ಲಿ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಬಹುದು ಎನ್ನುವ ಭಾವನೆಯೂ ಮನದಲ್ಲಿ ಮೂಡಿತ್ತು.

ಶುಭಸ್ಯ ಶೀಘ್ರಂ ಎನ್ನುವಂತೆ ಮರುದಿನದಿಂದಲೇ ಬೆಳಗಿನ ಜಾವ ನಡಿಗೆಯಲ್ಲಿ ತೊಡಗುವಾಗ ದಾರಿಯುದ್ದಕ್ಕೂ ಕಾಲಿಗೆ ತೊಡರುವ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಕೈಚೀಲವೊಂದರಲ್ಲಿ ಸಂಗ್ರಹಿಸುವ ಕಾಯಕವನ್ನು ಆರಂಭಿಸಿದ್ದೆನು. ನಗರದ ಪ್ರಧಾನ ರಸ್ತೆಯ ಎರಡು ಕಿಲೋಮೀಟರ್ ಭಾಗದಲ್ಲಿ ಪ್ರತಿನಿತ್ಯ ಸರಾಸರಿ ೧೫ ರಿಂದ ೩೦ ಬಾಟಲಿಗಳು ಸಂಗ್ರಹವಾಗುತ್ತಿದ್ದು, ತಿಂಗಳೊಪ್ಪತ್ತಿನಲ್ಲಿ ಸುಮಾರು ೬೦೦ ಕ್ಕೂ ಮಿಕ್ಕಿ ಬಾಟಲಿಗಳು ಸಂಗ್ರಹವಾಗಿದ್ದವು.ಅರ್ಥಾತ್, ಕಳೆದ ಏಳು ತಿಂಗಳುಗಳಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಬಾಟಲಿಗಳನ್ನು ಸಂಗ್ರಹಿಸಲು ಯಶಸ್ವಿಯಾಗಿದ್ದೆನು. 

 ಈ ಬಾಟಲಿಗಳನ್ನು ಮನೆಮನೆಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸುವ ಸ್ವಸಹಾಯ ಗುಂಪುಗಳ ಸದಸ್ಯರಿಗೆ ನೀಡಿ, ಇವುಗಳನ್ನು ಗುಜರಿ ಅಂಗಡಿಗಳಲ್ಲಿ ಮಾರಿ ದೊರೆಯುವ ಹಣವನ್ನು ಸ್ವಂತಕ್ಕಾಗಿ ಬಳಸಲು ಹೇಳಿದ್ದೆನು. ಮೊತ್ತಮೊದಲ ಬಾರಿ ನೀಡಿದ್ದ ತ್ಯಾಜ್ಯ ಬಾಟಲಿಗಳ ಮಾರಾಟದಿಂದ ಕಾರ್ಯಕರ್ತರಿಗೆ ೧೦೦ ರೂ. ದೊರೆತಿದ್ದುದನ್ನು ಅರಿತು ಸಂತೋಷವೂ ಆಗಿತ್ತು. ಇದಕ್ಕೂ ಮಿಗಿಲಾಗಿ ಸಂಗ್ರಹಿತ ತ್ಯಾಜ್ಯ ಬಾಟಲಿಗಳು ಪುನರ್ ಆವರ್ತನಗೊಂಡು, ಅನ್ಯ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವುದು ಮನಸ್ಸಿಗೆ ಒಂದಿಷ್ಟು ನೆಮ್ಮದಿಯನ್ನೂ ನೀಡಿತ್ತು. 

ಕಳೆದ ಏಳು ತಿಂಗಳುಗಳ ಹಿಂದೆ ಆರಂಭಿಸಿದ್ದ ದೈನಂದಿನ ನಡಿಗೆಯೊಂದಿಗೆ ತ್ಯಾಜ್ಯ ಬಾಟಲಿಗಳನ್ನು ಸಂಗ್ರಹಿಸುವ ಕಾಯಕ ಇಂದಿಗೂ ಮುಂದುವರೆದಿದೆ. ಇದರಿಂದಾಗಿ ಒಂದಿಷ್ಟು ಹೆಚ್ಚುವರಿ ವ್ಯಾಯಾಮವೂ ಅಯಾಚಿತವಾಗಿ ಲಭಿಸುತ್ತಿದೆ. ಇದರೊಂದಿಗೆ ಪ್ಲಾಸ್ಟಿಕ್ ಬಾಟಲಿಗಳಿಂದ ಉದ್ಭವಿಸುತ್ತಿರುವ ಸಮಸ್ಯೆಗಳು, ನಮ್ಮ ಸುತ್ತಮುತ್ತಲ ಪರಿಸರದ ಮೇಲೆ ಬೀರುವ ದುಷ್ಪರಿಣಾಮಗಳು ಮತ್ತು ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುವ ಸಂಭಾವ್ಯತೆಗಳ ಬಗ್ಗೆ ಬಂದುಮಿತ್ರರಿಗೆ ತಿಳಿಸಿ, ಇವುಗಳನ್ನು ಬಳಸದಂತೆ ಅವರ ಮನವೊಲಿಸುವುದು ನಿಸ್ಸಂದೇಹವಾಗಿಯೂ ಮನಸ್ಸಿಗೆ ಮುದನೀಡುತ್ತದೆ. 

ಕೊನೆಯ ಮಾತು 

ಈ ಲೇಖನವನ್ನು ಓದಿದ ಬಳಿಕ ಯಾರದೇ ಸಹಾಯವಿಲ್ಲದೇ ನೀವು ಏಕಾಂಗಿಯಾಗಿ ಈ ಕಾರ್ಯವನ್ನು ಮಾಡುವ ಮನಸ್ಸಿದ್ದಲ್ಲಿ ಪ್ರಯತ್ನಿಸಿ. ತನ್ಮೂಲಕ ಸ್ವಚ್ಛ  ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳಿ. ಇದು ಅಸಾಧ್ಯ ಎನಿಸಿದಲ್ಲಿ ಕನಿಷ್ಠಪಕ್ಷ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನಾದರೂ ನಿಲ್ಲಿಸಿ. ತ್ಯಾಜ್ಯಗಳ ಉತ್ಪಾದನೆಯನ್ನೇ ಕಡಿಮೆಮಾಡುವುದು, ತ್ಯಾಜ್ಯ ಸಂಗ್ರಹ - ವಿಲೇವಾರಿಗಿಂತಲೂ ಹೆಚ್ಚು ಪರಿಣಾಮಕಾರಿ ಎನ್ನುವುದನ್ನು ಮರೆಯದಿರಿ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಚಿತ್ರ- ಒಂದು ವಾರದಲ್ಲಿ ಪುತ್ತೂರಿನ ಪ್ರಧಾನ ರಸ್ತೆಯ ೨ ಕಿ.ಮೀ. ಭಾಗದಲ್ಲಿ ಸಂಗ್ರಹಿಸಿರುವ ತ್ಯಾಜ್ಯ ಬಾಟಲಿಗಳು.