Tuesday, December 23, 2014

IDOLS LYING IN POLLUTED WATER



ತ್ಯಾಜ್ಯನೀರಿನಲ್ಲಿ ಬಿದ್ದಿರುವ ಪೂಜಿಸಿದ ವಿಗ್ರಹಗಳು 

ಶುಭ ಸಮಾರಂಭವೊಂದರ ಸಲುವಾಗಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದ ಸಭಾಂಗಣಕ್ಕೆ ಭೇಟಿ ನೀಡಿದಾಗ, ವಾಹನವನ್ನು ನಿಲ್ಲಿಸಲು ಬಾಕಿಮಾರು ಗದ್ದೆಯತ್ತ ತೆರಳಿದ್ದೆನು. ಸಮೀಪದಲ್ಲಿದ್ದ ಬಾವಿಯಲ್ಲಿ ಮನುಷ್ಯನ ಆಕಾರದಂತೆ ಕಂಡುಬಂದ ವಸ್ತು ಯಾವುದೆಂದು ಕುತೂಹಲದಿಂದ ವೀಕ್ಸಿಸಿದಾಗ, ಇವೆಲ್ಲವೂ ಐದಾರು ವಿಗ್ರಹಗಳ ಪಳೆಯುಳಿಕೆಗಳೇ ಹೊರತು ಬೇರೇನೂ ಅಲ್ಲವೆಂದು ಖಚಿತವಾಗಿತ್ತು. ಜೊತೆಗೆ ಈ ಕೆರೆ - ಬಾವಿಯ ಬಗ್ಗೆ ಹಿಂದೆ ಎರಡುಬಾರಿ ಬರೆದಿದ್ದ ಬರಹಗಳ ನೆನಪೂ ಸ್ವಾಭಾವಿಕವಾಗಿಯೇ ಆಗಿತ್ತು. 

ಹಿನ್ನೆಲೆ  

ಸ್ಥಳೀಯ ಶ್ರೀ ಮಹಾಲಿಂಗೇಶ್ವರ ದೇವಳದ ಮುಂದಿರುವ ಬಾಕಿಮಾರು ಗದ್ದೆಯ ಒಂದು ಮೂಲೆಯಲ್ಲಿ ಪುಟ್ಟ ಕೆರೆಯೊಂದು ಇದ್ದಿದ್ದುದನ್ನು ಸ್ಥಳೀಯರು ಮರೆತಿರಲಾರರು. ಗತ ಶತಮಾನದ ಆದಿಯಲ್ಲಿ ಇಲ್ಲಿದ್ದ ಪುಟ್ಟ ಹೊಂಡವೊಂದರಲ್ಲಿ ಕಡುಬೇಸಗೆಯ ದಿನಗಳಲ್ಲೂ  ನೀರು ತುಂಬಿರುವುದನ್ನು ಬಹಳಷ್ಟು ಜನರು ಕಂಡಿದ್ದಾರೆ. ಹತ್ತಾರು ವರ್ಷಗಳ ಹಿಂದೆ ಶ್ರೀ ದೇವರ ಬಾಕಿಮಾರು ಗದ್ದೆಯಲ್ಲಿ " ಜೋಡುಕರೆ ಕಂಬಳ " ವನ್ನು ಆರಂಭಿಸಿದ್ದ ಸಂದರ್ಭದಲ್ಲಿ, ಕಂಬಳದ ಗದ್ದೆಯನ್ನು ಸಿದ್ದಪಡಿಸಲು ಅಗಾಧ ಪ್ರಮಾಣದ ನೀರಿನ ಅವಶ್ಯಕತೆ ಇದ್ದಿತು. ಪಕ್ಕದಲ್ಲೇ ಇದ್ದ ಈ ನೀರು ತುಂಬಿದ ಹೊಂಡವನ್ನು ಕೆರೆಯನ್ನಾಗಿ ಪರಿವರ್ತಿಸಿದಲ್ಲಿ, ಕಂಬಳದ ಗದ್ದೆಗೆ ಬೇಕಾದಷ್ಟು ನೀರು ಸ್ಥಳದಲ್ಲೇ ಲಭಿಸಬಹುದು ಎನ್ನುವ ಊಹೆ ನಿಜವಾಗಿತ್ತು. ಆದರೆ ಒಂದಿಷ್ಟು ಆಳಕ್ಕೆ ಅಗೆದೊಡನೆ ಕಲ್ಲು ಸಿಕ್ಕಿದ್ದರಿಂದ, ಕೆರೆಯ ಕಾಮಗಾರಿಯು ಅಷ್ಟಕ್ಕೇ ಸ್ಥಗಿತಗೊಂಡಿತ್ತು. ಆದರೆ ಕಂಬಳದ ಕ್ರೀಡಾಂಗಣದ ಸಿದ್ಧತೆಗೆ ಬೇಕಾಗುವಷ್ಟು ನೀರನ್ನು ಈ ಪುಟ್ಟಕೆರೆಯೇ ಪೂರೈಸುತ್ತಿತ್ತು.
 
ಇದಲ್ಲದೇ ಕಡುಬೇಸಗೆಯ ದಿನಗಳಲ್ಲಿ ನೀರಿನ ಕೊರತೆ ಉದ್ಭವಿಸಿದಲ್ಲಿ, ಅನೇಕ ನಿರ್ಮಾಣ ಕಾಮಗಾರಿಗಳ ಗುತ್ತಿಗೆದಾರರು ಇದೇ ಕೆರೆಯ ನೀರನ್ನು ಅನಿವಾರ್ಯವಾಗಿ ಬಳಸುತ್ತಿದ್ದರು. ಆದರೆ ಈ ಕೆರೆಯ ನೀರು ಅತ್ಯಂತ ಕಲುಷಿತವಾಗಿದ್ದುದರಿಂದ ಯಾರೊಬ್ಬರೂ ಇದನ್ನು ಅನ್ಯ ಉದ್ದೇಶಗಳಿಗಾಗಿ ಬಳಸುತ್ತಿರಲಿಲ್ಲ. ಹಾಗೂ ಇದೇ ಕಾರಣದಿಂದಾಗಿ ಇದರಲ್ಲಿ ಬಂದುಬೀಳುತ್ತಿದ್ದ ತ್ಯಾಜ್ಯಗಳಿಗೆ ಇತಿಮಿತಿಗಳೇ ಇರಲಿಲ್ಲ. ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಂತೂ, ಈ ಕೆರೆಯು ತ್ಯಾಜ್ಯಗಳಿಂದ ತುಂಬಿ ತುಳುಕುತ್ತಾ ತ್ಯಾಜ್ಯವಿಲೇವಾರಿ ಘಟಕದಂತೆ ಕಾಣಿಸುತ್ತಿತ್ತು. ಇಷ್ಟೆಲ್ಲಾ ಸಾಲದೆನ್ನುವಂತೆ, ಆವರಣದ ಗೋಡೆಯೇ ಇಲ್ಲದಿದ್ದ ಈ ಕೆರೆಯಲ್ಲಿ ಕೆಲ ಜಾನುವಾರುಗಳೊಂದಿಗೆ ಒಂದಿಬ್ಬರು ನತದೃಷ್ಟರೂ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಪ್ರಾಯಶಃ ಇವೆಲ್ಲಾ ಕಾರಣಗಳಿಂದಾಗಿ ಸದಾ ತ್ಯಾಜ್ಯಗಳಿಂದ ತುಂಬಿ ದುರ್ವಾಸನೆಯನ್ನು ಬೀರುತ್ತಿದ್ದ ಮತ್ತು ದಾರಿಹೋಕರಿಗೆ ಅಸಹ್ಯವೆನಿಸುತ್ತಿದ್ದ ಕೆರೆಗೆ ಮೋಕ್ಷವನ್ನು ನೀಡುವ ನಿರ್ಧಾರವೊಂದು ೨೦೦೮-೦೯ ರಲ್ಲಿ ಅನುಷ್ಠಾನಗೊಂಡಿತ್ತು. ಹಾಗೂ ಇದಕ್ಕಾಗಿ ಮಂಜೂರಾಗಿದ್ದ ೧.೩೦ ಲಕ್ಷ ರೂ.ಗಳನ್ನು ವ್ಯಯಿಸಿ, ಕಾಂಕ್ರೀಟ್ ರಿಂಗ್ ಗಳನ್ನು ಅಳವಡಿಸುವ ಮೂಲಕ ಎರಡು ಬಾವಿಗಳನ್ನು ನಿರ್ಮಿಸಲಾಗಿತ್ತು. ಬಳಿಕ ಇವುಗಳಿಗೆ ಕಬ್ಬಿಣದ ಜಾಲರಿಯ ಮುಚ್ಚಳಗಳನ್ನು ಅಳವಡಿಸಲಾಗಿತ್ತು.

 ವಿಗ್ರಹಗಳ ವಿಸರ್ಜನೆ 

ಪುತ್ತೂರಿನಲ್ಲಿ ಜರಗುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಮತ್ತು ನವರಾತ್ರಿಗಳ ಸಂದರ್ಭಗಳಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಿಸಿದ ದೇವರ ವಿಗ್ರಹಗಳನ್ನು ಕಳೆದ ಅನೇಕ ವರ್ಷಗಳಿಂದ ಶ್ರೀ ಲಕ್ಷ್ಮಿ ವೆಂಕಟ್ರಮಣ ದೇವಳದ ಮುಂದಿದ್ದ ಸರ್ಕಾರಿ ಬಾವಿಯಲ್ಲಿ ಜಲಸ್ಥಂಭನಗೊಳಿಸಲಾಗುತ್ತಿತ್ತು. ಆದರೆ ಸುಮಾರು ಏಳು ವರ್ಷಗಳ ಹಿಂದೆ ಈ ನಿರುಪಯುಕ್ತ ಬಾವಿಯಲ್ಲಿ ಜನರು ಎಸೆಯುತ್ತಿದ್ದ ತ್ಯಾಜ್ಯಗಳಿಂದ ಉದ್ಭವಿಸುತ್ತಿದ್ದ ಸಮಸ್ಯೆಗಳಿಂದಾಗಿ, ಈ ಬಾವಿಯನ್ನು ಅನಿವಾರ್ಯವಾಗಿ ಮುಚ್ಚಲಾಗಿತ್ತು. ತದನಂತರ ಗಣಪತಿ, ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳನ್ನು ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿನ ಬಾವಿಯಲ್ಲಿ ವಿಸರ್ಜಿಸುವ ಪದ್ಧತಿ ಆರಂಭವಾಗಿತ್ತು. ಈ ಪದ್ದತಿಯು ಇಂದಿಗೂ ಮುಂದುವರೆದಿದ್ದು, ಇದೇ ವರ್ಷದ ನವರಾತ್ರಿಯ ಬಳಿಕ ಇದರಲ್ಲಿ ವಿಸರ್ಜಿಸಿದ್ದ ವಿಗ್ರಹಗಳ ಪಳೆಯುಳಿಕೆಗಳು ದಾರಿಹೋಕರಿಗೆ ಕಾಣಸಿಗುತ್ತವೆ. ಇದರೊಂದಿಗೆ ವೈವಿಧ್ಯಮಯ ತ್ಯಾಜ್ಯಗಳು ಇದರಲ್ಲಿ ಬಂದು ಬಿದ್ದಿರುವುದರಿಂದ, ಬಾವಿಯ ನೀರು ಕಲುಷಿತಗೊಂಡು ದುರ್ವಾಸನೆಯನ್ನು ಬೀರುತ್ತಿದೆ. ಒಂದು ಬಾವಿಯ ಜಾಲರಿಯ ಮುಚ್ಚಳ ಮುರಿದುಹೊಗಿದ್ದಲ್ಲಿ, ಮತ್ತೊಂದು ಕಾಣೆಯಾಗಿದೆ. ಇವೆಲ್ಲವನ್ನೂ ಕಾಣುವಾಗ ಮನಸ್ಸು ಮಮ್ಮಲ ಮರುಗುತ್ತದೆ. ವೈಭವದಿಂದ ನಾವೇ ಪೂಜಿಸಿದ್ದ ದೇವರ ವಿಗ್ರಹಗಳು ಇಂದು ಕಲುಷಿತ ನೀರಿನಲ್ಲಿ ಬಿದ್ದಿರುವುದು ಪುತ್ತೂರಿನ ಜನರಿಗೆ ಹೆಮ್ಮೆತರುವ ವಿಚಾರವೇನಲ್ಲ. ಆದರೆ ಇಂತಹ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಘಟನೆಗಳು, ಈ ರೀತಿಯ ಸಮಸ್ಯೆಗಳು ಉದ್ಭವಿಸದಂತೆ ಒಂದಿಷ್ಟು ಮುನ್ನೆಚ್ಚರಿಕೆಯನ್ನು ವಹಿಸಿದಲ್ಲಿ ಲೇಸು ಎನ್ನುವುದು ಸ್ಥಳೀಯರ ಅಭಿಪ್ರಾಯವೂ ಹೌದು. 

ಪ್ರಸ್ತುತ ಈ ಕಲುಷಿತ ಬಾವಿಯನ್ನು ಸ್ವಚ್ಚಗೊಳಿಸಿ, ಮತ್ತೆ ಇವುಗಳಿಗೆ ಜಾಲರಿಯ ಮುಚ್ಚಳಗಳನ್ನು ಮುಚ್ಚಿದಲ್ಲಿ " ಸ್ವಚ್ಚ ಭಾರತ ಅಭಿಯಾನ " ದ ಸಂದರ್ಭದಲ್ಲಿ ಸಾರ್ಥಕವೆನಿಸೀತು. ಇದಕ್ಕೆ ತಪ್ಪಿದಲ್ಲಿ, ಈಗಾಗಲೇ ಮುಚ್ಚಿರುವ ಇತರ ಬಾವಿಗಳಂತೆ ಈ ಬಾವಿಯೂ ಕಣ್ಮರೆಯಾಗುವುದರಲ್ಲಿ ಸಂದೇಹವಿಲ್ಲ!.   

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 





No comments:

Post a Comment