Sunday, March 29, 2015

ARTICLE NO.250 - FLEX CALENDARS



ಹಾದಿ ಬೀದಿಗಳಲ್ಲಿ ನೇತಾಡುತ್ತಿರುವ ಫ್ಲೆಕ್ಸ್ ಕ್ಯಾಲೆಂಡರುಗಳು !

ಒಂದೆರಡು ದಶಕಗಳ ಹಿಂದಿನ ತನಕ ವಸತಿ - ವಾಣಿಜ್ಯ ಕಟ್ಟಡಗಳ ಗೋಡೆಗಳ ಮೇಲೆ ರಾರಾಜಿಸುತ್ತಿದ್ದ ವರ್ಣರಂಜಿತ ಕ್ಯಾಲೆಂಡರುಗಳು ಇದೀಗ ಕಣ್ಮರೆಯಾಗಿ ವರುಷಗಳೇ ಸಂದಿವೆ. ಅನೇಕ ಗ್ರಾಹಕ ಉತ್ಪನ್ನಗಳ ತಯಾರಕ ಸಂಸ್ಥೆಗಳು ತಮ್ಮ ಉತ್ಪನ್ನಗಳ ಅಥವಾ ಸಂಸ್ಥೆಯ ಪ್ರಚಾರಕ್ಕಾಗಿ ಮುದ್ರಿಸಿ, ಉಚಿತವಾಗಿ ವಿತರಿಸುತ್ತಿದ್ದ ಇಂತಹ ಕ್ಯಾಲೆಂಡರುಗಳನ್ನು ಜನಸಾಮಾನ್ಯರು ಮುಗಿಬಿದ್ದು ಪಡೆದುಕೊಳ್ಳುತ್ತಿದ್ದರು. ಇವುಗಳಲ್ಲಿ ಚಲನಚಿತ್ರ ತಾರೆಯರು ಮತ್ತು ದೇವರ ಚಿತ್ರಗಳಿರುವ  ಕ್ಯಾಲೆಂಡರುಗಳಿಗೆ ಅತ್ಯಧಿಕ ಬೇಡಿಕೆಯಿತ್ತು. ಆದರೆ ಕಾಲಕ್ರಮೇಣ ಅತ್ಯಾಧುನಿಕ ವಸತಿ – ವಾಣಿಜ್ಯ ಕಟ್ಟಡಗಳ ಮಾಲೀಕರು – ಬಾಡಿಗೆದಾರರು, ಗೋಡೆಗಳಿಗೆ ಮೊಳೆಗಳನ್ನು ಹೊಡೆದು ಕ್ಯಾಲೆಂಡರುಗಳನ್ನು ತೂಗುಹಾಕುವ ಪದ್ದತಿಯನ್ನೇ ಕೈಬಿಟ್ಟಿದ್ದರು. ಇದೀಗ ಇವುಗಳ ಬದಲಾಗಿ ಹಾದಿಬೀದಿಗಳಲ್ಲಿರುವ ಕಂಬಗಳಿಗೆ ನೇತುಹಾಕಿರುವ ಫ್ಲೆಕ್ಸ್ ಕ್ಯಾಲೆಂಡರುಗಳನ್ನು ಕಾಣಬಹುದಾಗಿದೆ.

ಕಾನೂನುಬಾಹಿರ

ಅಂದು ಕಣ್ಮರೆಯಾಗಿದ್ದ ಕ್ಯಾಲೆಂಡರುಗಳು ಹೊಸ ಅವತಾರದಲ್ಲಿ  ಮತ್ತೆ ಪ್ರತ್ಯಕ್ಷವಾಗುವಾಗ ಹಲವಾರು ವರ್ಷಗಳೇ ಕಳೆದಿದ್ದು, ಇವುಗಳು ಕೇವಲ ಪ್ರಚಾರದ ಸಲುವಾಗಿ ಹಾಗೂ ತಾತ್ಕಾಲಿಕವಾಗಿ ಬಳಸುವಂತಹದ್ದೇ ಆಗಿದ್ದವು. ವಿಶೇಷವೆಂದರೆ ಇವುಗಳನ್ನು ರಸ್ತೆಗಳ ಬದಿಗಳಲ್ಲಿರುವ ವಿದ್ಯುತ್, ದೂರವಾಣಿ ಮತ್ತಿತರ ಕಂಬಗಳಿಗೆ ನೇತುಹಾಕಲಾಗುತ್ತಿದ್ದು, ಪಾದಚಾರಿಗಳು ನಿರಾತಂಕವಾಗಿ ನಡೆದಾಡಲು ಅಡ್ಡಿಯಾಗುತ್ತಿವೆ. ಕೆಲ ಸಂದರ್ಭಗಳಲ್ಲಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಚಾಲಕರಿಗೆ  ಸಣ್ಣಪುಟ್ಟ ಗಾಯಗಳು ಸಂಭವಿಸಲೂ ಇವುಗಳು ಕಾರಣವೆನಿಸಿವೆ. ಆದರೂ ಇವುಗಳನ್ನು ಕಾನೂನುಬಾಹಿರವಾಗಿ ಅಳವಡಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಸ್ಥಳೀಯ ಸಂಸ್ಥೆಗಳು ಇವರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದಾಗಿಯೇ, ಇವುಗಳ ಹಾವಳಿಯೂ ಇತ್ತೀಚಿನ ದಿನಗಳಲ್ಲಿ ಮಿತಿಮೀರಿದೆ.

ಬಳಸುವವರು ಯಾರು?

ಯಾವುದೇ ಸಭೆ – ಸಮಾರಂಭಗಳಿರಲಿ, ಇವುಗಳ ಪ್ರಚಾರಕ್ಕೆ ಫ್ಲೆಕ್ಸ್ ಕ್ಯಾಲೆಂಡರ್ ಮತ್ತು ಬ್ಯಾನರ್ ಗಳ ಬಳಕೆ ವ್ಯಾಪಕವಾಗಿದೆ. ಅದರಲ್ಲೂ ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ಪ್ರಾಯೋಜಕರು, ಇವುಗಳಿಗಾಗಿಯೇ ಗಣನೀಯ ಪ್ರಮಾಣದ ಹಣವನ್ನು ವ್ಯಯಿಸುತ್ತಾರೆ.

ಸಾಮಾನ್ಯವಾಗಿ ರಾಜಕೀಯ ಪಕ್ಷಗಳು, ಧಾರ್ಮಿಕ ಕಾರ್ಯಕ್ರಮಗಳು, ಸಭೆ – ಸಮಾರಂಭಗಳೇ ಮುಂತಾದವುಗಳ ಪ್ರಚಾರದ ಸಲುವಾಗಿ ಬೀದಿಬೀದಿಗಳಲ್ಲಿ ಅಳವಡಿಸುವ ಫ್ಲೆಕ್ಸ್ ಕ್ಯಾಲೆಂಡರುಗಳನ್ನು, ಕೆಲ ಪ್ರಾಯೋಜಕರು ತಮ್ಮ ಕಾರ್ಯಕ್ರಮ ಮುಗಿದಂತೆಯೇ ತೆಗೆಸುವರಾದರೂ, ಅಧಿಕತಮ ಪ್ರಾಯೋಜಕರು ಇದರ ಗೋಜಿಗೆ ಹೋಗುವುದೇ ಇಲ್ಲ. ಅಪರೂಪದಲ್ಲಿ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ಇವುಗಳನ್ನು ತೆರವುಗೊಳಿಸುವ ಅಥವಾ ಬೇರೊಂದು ಕಾರ್ಯಕ್ರಮದ ಪ್ರಾಯೋಜಕರು ತಮ್ಮ ಕ್ಯಾಲೆಂಡರುಗಳನ್ನೂ ನೇತುಹಾಕುವ ಸಲುವಾಗಿ ಹಳೆಯ ಕ್ಯಾಲೆಂಡರುಗಳನ್ನು ತೆರವುಗೊಳಿಸುವುದುಂಟು. ಅಂತೆಯೇ ತೆರವುಗೊಳಿಸಿದ ಕ್ಯಾಲೆಂಡರುಗಳನ್ನು ಸಮೀಪದಲ್ಲಿರುವ ಚರಂಡಿಯಲ್ಲಿ ಎಸೆಯುವುದು ಕೂಡಾ ಅಪರೂಪವೇನಲ್ಲ. ಮತ್ತೆ ಕೆಲವರು ಹಳೆಯ ಕ್ಯಾಲೆಂಡರುಗಳ ಮೇಲೆ ತಮ್ಮ ಹೊಸ ಕ್ಯಾಲೆಂಡರುಗಳನ್ನು ನೇತುಹಾಕಿ ಅದೃಶ್ಯರಾಗುವುದು ವಿಶೇಷವೇನಲ್ಲ.

ಹೆಚ್ಚುತ್ತಿರುವ ತ್ಯಾಜ್ಯಗಳು

ಸಾಕಷ್ಟು ಸಮಸ್ಯೆಗಳಿಗೆ ಕಾರಣವೆನಿಸುತ್ತಿರುವ ಈ ಫ್ಲೆಕ್ಸ್ ಕ್ಯಾಲೆಂಡರುಗಳು, ನಾವಿಂದು ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣ ಇನ್ನಷ್ಟು ಹೆಚ್ಚಲು ಕಾರಣವೆನಿಸುತ್ತಿರುವುದು ಮಾತ್ರ ಸುಳ್ಳೇನಲ್ಲ. ಈ ವಿಚಾರದ ಅರಿವಿದ್ದರೂ, ಇವುಗಳ ಬಳಕೆಯನ್ನು ನಿಯಂತ್ರಿಸಲು ಸ್ಥಳೀಯ ಸಂಸ್ಥೆಗಳು ಮತ್ತು ನಾಗರಿಕರು ಪ್ರಯತ್ನಿಸುತ್ತಿಲ್ಲ. ಕೆಲವೇ ವರ್ಷಗಳ ಹಿಂದೆ ಬಳಸಲ್ಪಡುತ್ತಿದ್ದ ಪರಿಸರ ಸ್ನೇಹಿ ಬಟ್ಟೆಯ ಬ್ಯಾನರ್ ಮತ್ತು ಬಂಟಿಂಗ್ಸ್ ಗಳ ಜಾಗವನ್ನು ಇಂದು ಫ್ಲೆಕ್ಸ್ ಬ್ಯಾನರ್ ಮತ್ತು ಕ್ಯಾಲೆಂಡರುಗಳು ಆಕ್ರಮಿಸಿವೆ. ಜನಸಾಮಾನ್ಯರಿಗೆ ಬಣ್ಣಬಣ್ಣದ ಆಕರ್ಷಕ ಫ್ಲೆಕ್ಸ್ ಗಳ ವ್ಯಾಮೋಹ ವೃದ್ಧಿಸುತ್ತಿರುವುದರಿಂದ, ಮತ್ತೆ ಬಳಸಲಾಗದ ಫ್ಲೆಕ್ಸ್ ಗಳು ತ್ಯಾಜ್ಯಗಳ ಪ್ರಮಾಣ ಹೆಚ್ಚಲು ಕಾರಣವೆನಿಸಿರುವುದು ಸತ್ಯ. ಆದರೆ ಇವುಗಳ ಬಳಕೆಯನ್ನು ನಿಷೇಧಿಸಲು ಸರ್ಕಾರ ಹಿಂಜರಿಯುತ್ತಿರುವುದು ಕೂಡಾ ಅಷ್ಟೇ ಸತ್ಯ!.

ಕೊನೆಯ ಮಾತು

ಸ್ವಚ್ಚ ಭಾರತ ಅಭಿಯಾನವನ್ನು ಉದ್ಘಾಟಿಸುವ  ಸಂದರ್ಭದಲ್ಲಿ, ಇದರಲ್ಲಿ ಭಾಗಿಯಾಗಿದ್ದ ಪ್ರತಿಯೊಂದು ಸಂಘಸಂಸ್ಥೆಗಳು ಇದರ ಪ್ರಚಾರಕ್ಕಾಗಿ ಫ್ಲೆಕ್ಸ್ ಬ್ಯಾನರ್ ಗಳನ್ನು ಬಳಸಿದ್ದುದು ವಿಪರ್ಯಾಸವೇ ಸರಿ!.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


Monday, March 9, 2015

POISON IN YOUR KITCHEN



ನಿಮ್ಮ ಅಡುಗೆಮನೆ ಸುರಕ್ಷಿತವಾಗಿಹುದೇ ?

ಸಾಮಾನ್ಯವಾಗಿ ಭಾರತೀಯ ಮಹಿಳೆಯರು ಅತಿಹೆಚ್ಚು ಸಮಯವನ್ನು ವ್ಯಯಿಸುವ ಅಡುಗೆಮನೆಯು ಆರೋಗ್ಯದ ದೃಷ್ಟಿಯಿಂದ ಸಂಪೂರ್ಣ ಸುರಕ್ಷಿತವಲ್ಲ. ವಿಶೇಷವೆಂದರೆ ಇದು ಸಾಂಪ್ರದಾಯಿಕ ಉರುವಲುಗಳನ್ನು ಬಳಸುವ ಅಪ್ಪಟ ಭಾರತೀಯ ಶೈಲಿಯ ಅಡುಗೆಮನೆಗಳಿಗೆ ಮಾತ್ರ ಸೀಮಿತವಾಗಿರದೇಅತ್ಯಾಧುನಿಕ ಶೈಲಿಯ ಶ್ರೀಮಂತರ ಅಡುಗೆಮನೆಗಳಿಗೂ ಅನ್ವಯಿಸುತ್ತದೆ ಎಂದಲ್ಲಿ ನೀವೂ ನಂಬಲಾರಿರಿ. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಅಡುಗೆಮನೆಗಳು ಇವುಗಳನ್ನು ಬಳಸುವವರ ಆರೋಗ್ಯದ ದೃಷ್ಠಿಯಿಂದ ತುಸು ಅಪಾಯಕಾರಿ ಎನ್ನುವುದು ಮಾತ್ರ ಸತ್ಯ.ಆದರೆ ಸೂಕ್ತ ವಾತಾಯನ ವ್ಯವಸ್ಥೆ ಮತ್ತು ಅಡುಗೆಮನೆಯಲ್ಲಿನ ಕಲುಷಿತ ಗಾಳಿಯನ್ನು ಹೊರಹಾಕಬಲ್ಲ ಎಗ್ಸಾಸ್ಟ್ ಫ್ಯಾನ್ ಬಳಸುವ ಮೂಲಕ ಇದನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದಾಗಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಅಡುಗೆಮನೆಯಲ್ಲಿ ವಿಷಾನಿಲ ?
ನಿಮ್ಮ ಅಡುಗೆಮನೆಯಲ್ಲಿ ಸೌದೆ,ಇದ್ದಿಲು,ಸೀಮೆಯೆಣ್ಣೆ ಅಥವಾ ನೈಸರ್ಗಿಕ, ಬಯೋ ಹಾಗೂ ಎಲ್ ಪಿ ಜಿ ಅನಿಲಗಳನ್ನು ಉರಿಸುವಾಗ  ಅಪಾಯಕಾರಿ ಅನಿಲಗಳು ಮತ್ತು ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇವುಗಳಲ್ಲಿ ನೈಟ್ರೋಜೆನ್ ಡೈಆಕ್ಸೈಡ್, ಕಾರ್ಬನ್ ಮೊನೊಕ್ಸೈಡ್, ಫಾರ್ಮಲ್ ಡಿಹೈಡ್ ಮತ್ತು ಸೂಕ್ಷ್ಮ ಕಣಗಳು ಪ್ರಮುಖವಾಗಿವೆ. ೨೦೧೪ ರಲ್ಲಿ ಪ್ರಕಟವಾಗಿದ್ದ ಅಧ್ಯಯನವೊಂದರ ವರದಿಯಂತೆ, ಜಗತ್ತಿನಲ್ಲಿ ಸುಮಾರು ೩ ಬಿಲಿಯನ್ ಜನರು ಮನೆಯೊಳಗಿನ ವಾಯುಮಾಲಿನ್ಯದಿಂದ ಪೀಡಿತರಾಗುತ್ತಾರೆ. ಇವರಲ್ಲಿ ಅಧಿಕತಮ ಜನರು ಬಡ ರಾಷ್ಟ್ರಗಳ ಪ್ರಜೆಗಳೇ ಆಗಿದ್ದರೂ, ಸುಮಾರು ೫ ರಿಂದ ೬ ಲಕ್ಷ ಆಮೆರಿಕನ್ ಜನರು ಇದೇ ಸಮಸ್ಯೆಗೆ ಈಡಾಗುತ್ತಿರಲು ಘನ ಇಂಧನಗಳ ಬಳಕೆಯೇ ಕಾರಣವೆನಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ಅಂದಾಜಿಸಿರುವಂತೆ ಜಾಗತಿಕ ಮಟ್ಟದಲ್ಲಿ ಸುಮಾರು ೪.೩ ಮಿಲಿಯನ್ ಜನರು ಮನೆಯೊಳಗಿನ ವಾಯುಮಾಲಿನ್ಯದಿಂದ ಉದ್ಭವಿಸುವ ಆರೋಗ್ಯದ ಸಮಸ್ಯೆಗಳಿಗೆ  ಬಲಿಯಾಗುತ್ತಿದ್ದು, ಇದಕ್ಕೆ ಹೋಲಿಸಿದಾಗ ಹೊರಾಂಗಣ ವಾಯುಮಾಲಿನ್ಯದಿಂದ ಮೃತಪಡುತ್ತಿರುವ ಜನರ ಸಂಖ್ಯೆಯು ಒಂದಿಷ್ಟು ಕಡಿಮೆ (೩.೭ ಮಿಲಿಯನ್ ) ಎನಿಸುತ್ತದೆ.
ಕೆಲಿಫೋರ್ನಿಯಾದ ಲಾರೆನ್ಸ್ ಬರ್ಕ್ಲಿ ರಾಷ್ಟ್ರೀಯ ಪ್ರಯೋಗಾಲಯದ ಸಂಶೋಧಕರು, ನೈಸರ್ಗಿಕ ಅನಿಲವನ್ನು ಉರಿಸುವಾಗ ಉತ್ಪನ್ನವಾಗುವ ಪ್ರದೂಷಕಗಳ ಪ್ರಮಾಣವು ಅಮೇರಿಕಾದ ಎನ್ವಿರಾನ್ಮೆಂಟಲ್ ಪ್ರೋಟೆಕ್ಷನ್ ಏಜೆನ್ಸಿ ನಿಗದಿಸಿರುವ ಸುರಕ್ಷತಾ ಮಟ್ಟಕ್ಕಿಂತಲೂ ತುಸು ಅಧಿಕವಾಗಿದೆ ಎನ್ನುವುದನ್ನು ಪತ್ತೆಹಚ್ಚಿದ್ದರು. ಈ ವರದಿಯು ೨೦೧೩ ರಲ್ಲಿ ಪ್ರಕಟವಾಗಿತ್ತು. ಇದಕ್ಕೂ ಮುನ್ನ ೧೯೯೬ ರಲ್ಲಿ ಪ್ರಕಟವಾಗಿದ್ದ ಮತ್ತೊಂದು ವರದಿಯಂತೆ ಅನಿಲ ಒಲೆಗಳನ್ನು ಉರಿಸುವುದರಿಂದ ಶ್ವಾಸಾಂಗಗಳ ಸಮಸ್ಯೆಗಳಾದ ಏದುಬ್ಬಸ, ಉಸಿರಾಡಲು ಕಷ್ಟವಾಗುವುದು ಮತ್ತು ಆಸ್ತಮಾಗಳಂತಹ ತೊಂದರೆಗಳು ಉದ್ಭವಿಸುತ್ತವೆ ಎನ್ನುವುದು ತಿಳಿದುಬಂದಿತ್ತು. ಕೆನಡಾ ದೇಶದ ಸರ್ಕಾರವು ಸೂಚಿಸಿದ್ದ ಮಾರ್ಗದರ್ಶಿ ನಿಯಮಗಳಂತೆ, ಗ್ಯಾಸ್ ವಾಟರ್ ಹೀಟರ್, ಕುಲುಮೆಗಳು, ಅಡುಗೆ ಸ್ಟವ್ ಗಳು,ಮನೆಯೊಳಗೆ ರಾಸಾಯನಿಕ ಪ್ರದೂಷಣೆಯನ್ನು ಹೆಚ್ಚಿಸಲು ಮೂಲ ಕಾರಣವೆನಿಸುತ್ತವೆ.
ಈ ರೀತಿಯಲ್ಲಿ ಅಡುಗೆಗಾಗಿ ಬಳಸುವ ಅನಿಲಗಳು ಅಲ್ಪ ಪ್ರಮಾಣದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಿದರೂ, ಭಾರತದಲ್ಲಿ ಬಳಸಲ್ಪಡುವ ಘನ ಇಂಧನಗಳು ವ್ಯಾಪಕವಾಗಿ ಉತ್ಪಾದಿಸುವ ಸೂಕ್ಷ್ಮ ಕಣಗಳೊಂದಿಗೆ ತುಲನೆ ಮಾಡಿದಾಗ, ಸಾಕಷ್ಟು ಸುರಕ್ಷಿತವೆನಿಸುವುದು. ಅಂತೆಯೇ ಕೆಲ ಸಂದರ್ಭಗಳಲ್ಲಿ ಅಡುಗೆ ಅನಿಲವನ್ನು ಉರಿಸಿದಾಗ ಪುಟ್ಟ ಮಕ್ಕಳಲ್ಲಿ ಶ್ವಾಸೋಚ್ಚ್ವಾಸದ ಸಮಸ್ಯೆ ಉಲ್ಬಣಿಸುವುದಾದರೂ, ಇದಕ್ಕೆ ಅನಿಲವನ್ನು ಉರಿಸುವುದು ಕಾರಣವೇ ಅಥವಾ ಬೇಯುತ್ತಿರುವ ಆಹಾರ ಕಾರಣವೇ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ನಿಜ ಹೇಳಬೇಕಿದ್ದಲ್ಲಿ “ಸಂಪೂರ್ಣ ಸುರಕ್ಷಿತ “ ಎನ್ನುವುದು ಯಾವುದಕ್ಕೂ ಅನ್ವಯಿಸುವ ಸಾಧ್ಯತೆಗಳೇ ಇಲ್ಲ. ಆದುದರಿಂದ ಘನ ಇಂಧನಗಳನ್ನು ಬಳಸುವವರು ಇದರ ಬದಲಾಗಿ  ಅಡುಗೆ ಅನಿಲವನ್ನು ಬಳಸುವುದು ಉತ್ತಮ. ಪ್ರಾಯಶಃ ಇತ್ತೆಚಿನ ಕೆಲವರ್ಷಗಳಿಂದ ಜನಪ್ರಿಯವೆನಿಸಿರುವ ಇಂಡಕ್ಶನ್ ಒಲೆಗಳು ಮಾತ್ರ  ಯಾವುದೇ ರೀತಿಯ ಪ್ರದೂಶಕಗಳನ್ನು ಉತ್ಪಾದಿಸುವುದಿಲ್ಲ. ಆದರೆ ಇದರಲ್ಲಿ ಆಹಾರವನ್ನು ಬೇಯಿಸುವಾಗ ಉತ್ಪನ್ನವಾಗುವ ಹಬೆಯು ಕೆಲ ಸಮಸ್ಯೆಗಳಿಗೆ ಕಾರಣವೆನಿಸುವಸಾಧ್ಯತೆಗಳಿವೆ.
ಇದಲ್ಲದೆ ನೀವು ಸೇವಿಸುವ ಆಹಾರವನ್ನು ಎಣ್ಣೆಯಲ್ಲಿ ಕರಿಯುವಾಗ ಹಾಗೂ ಕಾವಲಿ ಅಥವಾ ಗ್ರಿಲ್ ಗಳನ್ನು  ಬಳಸಿ ಖಾದ್ಯಗಳನ್ನು  ತಯಾರಿಸುವಾಗ, ಎಕ್ರೋಲಿನ್ ಬಿಡುಗಡೆಯಾಗುವುದು. ಕೆಲ ಅಧ್ಯಯನಗಳ ವರದಿಯಂತೆ ಇದು ಕ್ಯಾನ್ಸರ್ ಕಾರಕ ಎಂದು ಪರಿಗಣಿಸಲ್ಪಟ್ಟಿದೆ. ಕೆಲ ಆಹಾರಗಳಲ್ಲೂ ಎಕ್ರೋಲಿನ್ ಅತ್ಯಲ್ಪ ಪ್ರಮಾಣದಲ್ಲಿ ಇರುತ್ತದೆ.  ಹಾಗೂ ಇದು ಅಡುಗೆಯ ಸಂದರ್ಭದಲ್ಲಿ ಕಾರ್ಬೋಹೈಡ್ರೇಟ್, ಸಸ್ಯಜನ್ಯ ತೈಲ, ಪ್ರಾಣಿಗಳ ಕೊಬ್ಬು ಮತ್ತು ಅಮೈನೋ ಆಸಿಡ್ ಗಳಿಂದ ಉತ್ಪನ್ನವಾಗುತ್ತದೆ. ಅಂತೆಯೇ ಭಾರತೀಯರು ಮೆಚ್ಚಿ ಸವಿಯುವ ಕರಿದ ತಿಂಡಿಗಳನ್ನು ತಯಾರಿಸುವಾಗ ಕುದಿಸುವ ಎಣ್ಣೆಯ ಬಾಣಲೆಯಿಂದ ಹೊರಸೂಸುವ ಧೂಮವನ್ನು ಸೇವಿಸುವುದರಿಂದ ಮನುಷ್ಯನ ವಂಶವಾಹಿನಿಗಳಿಗೆ ಹಾನಿಯಾಗುವ ಮತ್ತು ಕ್ಯಾನ್ಸರ್ ಉದ್ಭವಿಸುವ ಸಾಧ್ಯತೆಗಳಿವೆ.ಆದರೆ ಎಕ್ರೋಲಿನ್ ಅನ್ನು ನಿಶ್ಚಿತವಾಗಿಯೂ ಕ್ಯಾನ್ಸರ್ ಕಾರಕವೆಂದು ಪರಿಗಣಿಸಬಲ್ಲ ಸಾಕ್ಷ್ಯಾಧಾರಗಳು ಲಭಿಸಿಲ್ಲ.
ವಾತಾಯನ ವ್ಯವಸ್ಥೆಯೇ ಪರಿಹಾರ
ನಿಮ್ಮ ಅಡುಗೆಮನೆಯಲ್ಲಿ ಇರಿಸಿರುವ ಅನಿಲ ಒಲೆಯ ಮೇಲ್ಭಾಗದಲ್ಲಿ ಅಳವಡಿಸುವ ವಿದ್ಯುತ್ ಚಿಮಣಿ ಮತ್ತು ಒಳಗಿನ ಕಲುಷಿತ ಗಾಳಿಯನ್ನು ಹೊರಕ್ಕೆ ವಿಸರ್ಜಿಸಬಲ್ಲ ಎಕ್ಸಾಸ್ಟ್ ಫ್ಯಾನ್ ಗಳು, ಅಡುಗೆಮನೆಯಲ್ಲಿನ ವಾತಾವರಣವನ್ನು ತಕ್ಕಮಟ್ಟಿಗೆ ಸ್ವಚ್ಚವಾಗಿರಿಸಲು ಉಪಯುಕ್ತವೆನಿಸುತ್ತವೆ. ಇದರೊಂದಿಗೆ ಸಮರ್ಪಕವಾದ ಜಾಗದಲ್ಲಿ ಕಿಟಿಕಿಗಳು ಮತ್ತು ವೆಂಟಿಲೇಟರ್  ಗಳನ್ನು ಇರಿಸಿದಲ್ಲಿ, ನಿಮ್ಮ ಅಡುಗೆಮನೆಯಲ್ಲಿನ ವಾಯುಮಾಲಿನ್ಯದ ಸಮಸ್ಯೆಯನ್ನು ನಿಯಂತ್ರಿಸುವುದು ಸುಲಭಸಾಧ್ಯವೆನಿಸುವುದು.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು