Sunday, March 29, 2015

ARTICLE NO.250 - FLEX CALENDARS



ಹಾದಿ ಬೀದಿಗಳಲ್ಲಿ ನೇತಾಡುತ್ತಿರುವ ಫ್ಲೆಕ್ಸ್ ಕ್ಯಾಲೆಂಡರುಗಳು !

ಒಂದೆರಡು ದಶಕಗಳ ಹಿಂದಿನ ತನಕ ವಸತಿ - ವಾಣಿಜ್ಯ ಕಟ್ಟಡಗಳ ಗೋಡೆಗಳ ಮೇಲೆ ರಾರಾಜಿಸುತ್ತಿದ್ದ ವರ್ಣರಂಜಿತ ಕ್ಯಾಲೆಂಡರುಗಳು ಇದೀಗ ಕಣ್ಮರೆಯಾಗಿ ವರುಷಗಳೇ ಸಂದಿವೆ. ಅನೇಕ ಗ್ರಾಹಕ ಉತ್ಪನ್ನಗಳ ತಯಾರಕ ಸಂಸ್ಥೆಗಳು ತಮ್ಮ ಉತ್ಪನ್ನಗಳ ಅಥವಾ ಸಂಸ್ಥೆಯ ಪ್ರಚಾರಕ್ಕಾಗಿ ಮುದ್ರಿಸಿ, ಉಚಿತವಾಗಿ ವಿತರಿಸುತ್ತಿದ್ದ ಇಂತಹ ಕ್ಯಾಲೆಂಡರುಗಳನ್ನು ಜನಸಾಮಾನ್ಯರು ಮುಗಿಬಿದ್ದು ಪಡೆದುಕೊಳ್ಳುತ್ತಿದ್ದರು. ಇವುಗಳಲ್ಲಿ ಚಲನಚಿತ್ರ ತಾರೆಯರು ಮತ್ತು ದೇವರ ಚಿತ್ರಗಳಿರುವ  ಕ್ಯಾಲೆಂಡರುಗಳಿಗೆ ಅತ್ಯಧಿಕ ಬೇಡಿಕೆಯಿತ್ತು. ಆದರೆ ಕಾಲಕ್ರಮೇಣ ಅತ್ಯಾಧುನಿಕ ವಸತಿ – ವಾಣಿಜ್ಯ ಕಟ್ಟಡಗಳ ಮಾಲೀಕರು – ಬಾಡಿಗೆದಾರರು, ಗೋಡೆಗಳಿಗೆ ಮೊಳೆಗಳನ್ನು ಹೊಡೆದು ಕ್ಯಾಲೆಂಡರುಗಳನ್ನು ತೂಗುಹಾಕುವ ಪದ್ದತಿಯನ್ನೇ ಕೈಬಿಟ್ಟಿದ್ದರು. ಇದೀಗ ಇವುಗಳ ಬದಲಾಗಿ ಹಾದಿಬೀದಿಗಳಲ್ಲಿರುವ ಕಂಬಗಳಿಗೆ ನೇತುಹಾಕಿರುವ ಫ್ಲೆಕ್ಸ್ ಕ್ಯಾಲೆಂಡರುಗಳನ್ನು ಕಾಣಬಹುದಾಗಿದೆ.

ಕಾನೂನುಬಾಹಿರ

ಅಂದು ಕಣ್ಮರೆಯಾಗಿದ್ದ ಕ್ಯಾಲೆಂಡರುಗಳು ಹೊಸ ಅವತಾರದಲ್ಲಿ  ಮತ್ತೆ ಪ್ರತ್ಯಕ್ಷವಾಗುವಾಗ ಹಲವಾರು ವರ್ಷಗಳೇ ಕಳೆದಿದ್ದು, ಇವುಗಳು ಕೇವಲ ಪ್ರಚಾರದ ಸಲುವಾಗಿ ಹಾಗೂ ತಾತ್ಕಾಲಿಕವಾಗಿ ಬಳಸುವಂತಹದ್ದೇ ಆಗಿದ್ದವು. ವಿಶೇಷವೆಂದರೆ ಇವುಗಳನ್ನು ರಸ್ತೆಗಳ ಬದಿಗಳಲ್ಲಿರುವ ವಿದ್ಯುತ್, ದೂರವಾಣಿ ಮತ್ತಿತರ ಕಂಬಗಳಿಗೆ ನೇತುಹಾಕಲಾಗುತ್ತಿದ್ದು, ಪಾದಚಾರಿಗಳು ನಿರಾತಂಕವಾಗಿ ನಡೆದಾಡಲು ಅಡ್ಡಿಯಾಗುತ್ತಿವೆ. ಕೆಲ ಸಂದರ್ಭಗಳಲ್ಲಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಚಾಲಕರಿಗೆ  ಸಣ್ಣಪುಟ್ಟ ಗಾಯಗಳು ಸಂಭವಿಸಲೂ ಇವುಗಳು ಕಾರಣವೆನಿಸಿವೆ. ಆದರೂ ಇವುಗಳನ್ನು ಕಾನೂನುಬಾಹಿರವಾಗಿ ಅಳವಡಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಸ್ಥಳೀಯ ಸಂಸ್ಥೆಗಳು ಇವರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದಾಗಿಯೇ, ಇವುಗಳ ಹಾವಳಿಯೂ ಇತ್ತೀಚಿನ ದಿನಗಳಲ್ಲಿ ಮಿತಿಮೀರಿದೆ.

ಬಳಸುವವರು ಯಾರು?

ಯಾವುದೇ ಸಭೆ – ಸಮಾರಂಭಗಳಿರಲಿ, ಇವುಗಳ ಪ್ರಚಾರಕ್ಕೆ ಫ್ಲೆಕ್ಸ್ ಕ್ಯಾಲೆಂಡರ್ ಮತ್ತು ಬ್ಯಾನರ್ ಗಳ ಬಳಕೆ ವ್ಯಾಪಕವಾಗಿದೆ. ಅದರಲ್ಲೂ ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ಪ್ರಾಯೋಜಕರು, ಇವುಗಳಿಗಾಗಿಯೇ ಗಣನೀಯ ಪ್ರಮಾಣದ ಹಣವನ್ನು ವ್ಯಯಿಸುತ್ತಾರೆ.

ಸಾಮಾನ್ಯವಾಗಿ ರಾಜಕೀಯ ಪಕ್ಷಗಳು, ಧಾರ್ಮಿಕ ಕಾರ್ಯಕ್ರಮಗಳು, ಸಭೆ – ಸಮಾರಂಭಗಳೇ ಮುಂತಾದವುಗಳ ಪ್ರಚಾರದ ಸಲುವಾಗಿ ಬೀದಿಬೀದಿಗಳಲ್ಲಿ ಅಳವಡಿಸುವ ಫ್ಲೆಕ್ಸ್ ಕ್ಯಾಲೆಂಡರುಗಳನ್ನು, ಕೆಲ ಪ್ರಾಯೋಜಕರು ತಮ್ಮ ಕಾರ್ಯಕ್ರಮ ಮುಗಿದಂತೆಯೇ ತೆಗೆಸುವರಾದರೂ, ಅಧಿಕತಮ ಪ್ರಾಯೋಜಕರು ಇದರ ಗೋಜಿಗೆ ಹೋಗುವುದೇ ಇಲ್ಲ. ಅಪರೂಪದಲ್ಲಿ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ಇವುಗಳನ್ನು ತೆರವುಗೊಳಿಸುವ ಅಥವಾ ಬೇರೊಂದು ಕಾರ್ಯಕ್ರಮದ ಪ್ರಾಯೋಜಕರು ತಮ್ಮ ಕ್ಯಾಲೆಂಡರುಗಳನ್ನೂ ನೇತುಹಾಕುವ ಸಲುವಾಗಿ ಹಳೆಯ ಕ್ಯಾಲೆಂಡರುಗಳನ್ನು ತೆರವುಗೊಳಿಸುವುದುಂಟು. ಅಂತೆಯೇ ತೆರವುಗೊಳಿಸಿದ ಕ್ಯಾಲೆಂಡರುಗಳನ್ನು ಸಮೀಪದಲ್ಲಿರುವ ಚರಂಡಿಯಲ್ಲಿ ಎಸೆಯುವುದು ಕೂಡಾ ಅಪರೂಪವೇನಲ್ಲ. ಮತ್ತೆ ಕೆಲವರು ಹಳೆಯ ಕ್ಯಾಲೆಂಡರುಗಳ ಮೇಲೆ ತಮ್ಮ ಹೊಸ ಕ್ಯಾಲೆಂಡರುಗಳನ್ನು ನೇತುಹಾಕಿ ಅದೃಶ್ಯರಾಗುವುದು ವಿಶೇಷವೇನಲ್ಲ.

ಹೆಚ್ಚುತ್ತಿರುವ ತ್ಯಾಜ್ಯಗಳು

ಸಾಕಷ್ಟು ಸಮಸ್ಯೆಗಳಿಗೆ ಕಾರಣವೆನಿಸುತ್ತಿರುವ ಈ ಫ್ಲೆಕ್ಸ್ ಕ್ಯಾಲೆಂಡರುಗಳು, ನಾವಿಂದು ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣ ಇನ್ನಷ್ಟು ಹೆಚ್ಚಲು ಕಾರಣವೆನಿಸುತ್ತಿರುವುದು ಮಾತ್ರ ಸುಳ್ಳೇನಲ್ಲ. ಈ ವಿಚಾರದ ಅರಿವಿದ್ದರೂ, ಇವುಗಳ ಬಳಕೆಯನ್ನು ನಿಯಂತ್ರಿಸಲು ಸ್ಥಳೀಯ ಸಂಸ್ಥೆಗಳು ಮತ್ತು ನಾಗರಿಕರು ಪ್ರಯತ್ನಿಸುತ್ತಿಲ್ಲ. ಕೆಲವೇ ವರ್ಷಗಳ ಹಿಂದೆ ಬಳಸಲ್ಪಡುತ್ತಿದ್ದ ಪರಿಸರ ಸ್ನೇಹಿ ಬಟ್ಟೆಯ ಬ್ಯಾನರ್ ಮತ್ತು ಬಂಟಿಂಗ್ಸ್ ಗಳ ಜಾಗವನ್ನು ಇಂದು ಫ್ಲೆಕ್ಸ್ ಬ್ಯಾನರ್ ಮತ್ತು ಕ್ಯಾಲೆಂಡರುಗಳು ಆಕ್ರಮಿಸಿವೆ. ಜನಸಾಮಾನ್ಯರಿಗೆ ಬಣ್ಣಬಣ್ಣದ ಆಕರ್ಷಕ ಫ್ಲೆಕ್ಸ್ ಗಳ ವ್ಯಾಮೋಹ ವೃದ್ಧಿಸುತ್ತಿರುವುದರಿಂದ, ಮತ್ತೆ ಬಳಸಲಾಗದ ಫ್ಲೆಕ್ಸ್ ಗಳು ತ್ಯಾಜ್ಯಗಳ ಪ್ರಮಾಣ ಹೆಚ್ಚಲು ಕಾರಣವೆನಿಸಿರುವುದು ಸತ್ಯ. ಆದರೆ ಇವುಗಳ ಬಳಕೆಯನ್ನು ನಿಷೇಧಿಸಲು ಸರ್ಕಾರ ಹಿಂಜರಿಯುತ್ತಿರುವುದು ಕೂಡಾ ಅಷ್ಟೇ ಸತ್ಯ!.

ಕೊನೆಯ ಮಾತು

ಸ್ವಚ್ಚ ಭಾರತ ಅಭಿಯಾನವನ್ನು ಉದ್ಘಾಟಿಸುವ  ಸಂದರ್ಭದಲ್ಲಿ, ಇದರಲ್ಲಿ ಭಾಗಿಯಾಗಿದ್ದ ಪ್ರತಿಯೊಂದು ಸಂಘಸಂಸ್ಥೆಗಳು ಇದರ ಪ್ರಚಾರಕ್ಕಾಗಿ ಫ್ಲೆಕ್ಸ್ ಬ್ಯಾನರ್ ಗಳನ್ನು ಬಳಸಿದ್ದುದು ವಿಪರ್ಯಾಸವೇ ಸರಿ!.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


No comments:

Post a Comment