Monday, October 30, 2017

BREAST CANCER - CONSULT A SPECIALIST DOCTOR


 ಸ್ತನ ಕ್ಯಾನ್ಸರ್ : ಅರಿವು ಮೂಡಿಸುವ ಮಾಸ ಅಕ್ಟೋಬರ್ 

ಕೇವಲ ಮಧ್ಯವಯಸ್ಸನ್ನು ಮೀರಿದ ಮಹಿಳೆಯರನ್ನು ಮಾತ್ರ ಬಾಧಿಸುವ ವ್ಯಾಧಿಯೆಂದು ಅನೇಕ ಭಾರತೀಯರು ಇಂದಿಗೂ ನಂಬಿರುವ ಸ್ತನಕ್ಯಾನ್ಸರ್ ವ್ಯಾಧಿಯು, ಹದಿಹರೆಯದ ಹುಡುಗಿಯರು ಮತ್ತು ತರುಣಿಯರನ್ನೂ ಪೀಡಿಸಬಲ್ಲದು. ವಿಶೇಷವೆಂದರೆ ಈ ವ್ಯಾಧಿಯು ಕೇವಲ ಮಹಿಳೆಯರನ್ನು ಮಾತ್ರವಲ್ಲ, ಅತ್ಯಲ್ಪ ಪ್ರಮಾಣದ ಪುರುಷರನ್ನೂ ಬಾಧಿಸಬಲ್ಲದು ಎಂದು ನಿಮಗೂ ತಿಳಿದಿರಲಾರದು. ಈ ವಿಶಿಷ್ಟ ವ್ಯಾಧಿಯ ಬಗ್ಗೆ ನೀವು ತಿಳಿದಿರಲೇಬೇಕಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಗ್ರಸ್ಥಾನ 

ಜಾಗತಿಕ ಮಟ್ಟದಲ್ಲಿ ಮಹಿಳೆಯರಲ್ಲಿ ಪತ್ತೆಯಾಗುತ್ತಿರುವ ವೈವಿಧ್ಯಮಯ ಕ್ಯಾನ್ಸರ್ ಗಳಲ್ಲಿ ಸ್ತನ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ಈ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚುವುದರೊಂದಿಗೆ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ಇದರ ಮಾರಕತೆಯನ್ನು ನಿಶ್ಚಿತವಾಗಿಯೂ ನಿಯಂತ್ರಿಸಬಹುದಾಗಿದೆ. ಈ ಸಂದೇಶದೊಂದಿಗೆ, ಈ ವ್ಯಾಧಿಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇನ್ನಿತರ ಸಂಘಟನೆಗಳು ಜೊತೆಗೂಡಿ, ವರ್ಷಂಪ್ರತಿ ಅಕ್ಟೋಬರ್ ತಿಂಗಳನ್ನು " ಗುಲಾಬಿ ಮಾಸ " ವನ್ನಾಗಿ ಆಚರಿಸುತ್ತವೆ. ಹಾಗೂ ಇದಕ್ಕಾಗಿ ಗುಲಾಬಿ ವರ್ಣದ ರಿಬ್ಬನನ್ನು ಲಾಂಛನವನ್ನಾಗಿ ಬಳಸಲಾಗುತ್ತಿದೆ.  

ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಬಗ್ಗೆ ನಿಖರವಾದ ಅಂಕಿಅಂಶಗಳು ಲಭ್ಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿರುವ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಇಂತಹ ಮಾಹಿತಿಯನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ಅವಶ್ಯಕ ವಿವರಗಳನ್ನು ದಾಖಲಿಸಿಕೊಳ್ಳುವ ಪದ್ದತಿಯು ಸಮರ್ಪಕವಾಗಿ  ಅನುಷ್ಠಾನಗೊಂಡಿಲ್ಲ. ಆದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ಅಭಿಪ್ರಾಯದಂತೆ, ಭಾರತದ ಪ್ರತಿ ೨೨ ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ ನಿಂದ ಪೀಡಿತರಾಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬಾಕೆಯು, ತನ್ನ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ ಗೆ ಈಡಾಗುವ ಸಾಧ್ಯತೆಗಳಿವೆ.  ಮಹಿಳೆಯರ ವಯಸ್ಸು ಹೆಚ್ಚಾದಂತೆಯೇ, ಇದರ ಸಂಭಾವ್ಯತೆಯೂ ಹೆಚ್ಚುತ್ತದೆ.

ಕೆಲವೇ ದಶಕಗಳ ಹಿಂದೆ ೫೦ ವರ್ಷ ಮೀರಿದ ಮಹಿಳೆಯರನ್ನು ಮಾತ್ರ ಬಾಧಿಸುತ್ತಿದ್ದ ಸ್ತನ ಕ್ಯಾನ್ಸರ್, ಇತ್ತೀಚಿನ ಕೆಲವರ್ಷಗಳಿಂದ ೨೫ ರಿಂದ ೫೦ ವರ್ಷ ವಯೋಮಾನದವರಲ್ಲೂ ಪತ್ತೆಯಾಗುತ್ತಿದೆ. ಪ್ರಸ್ತುತ ಪತ್ತೆಯಾಗುತ್ತಿರುವ ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. ೬೫ ರಿಂದ ೭೦ ರಷ್ಟು ೫೦ ವರ್ಷ ಕಳೆದ ಮತ್ತು ಶೇ. ೩೦ ರಿಂದ ೩೫ ರಷ್ಟು ಪ್ರಕರಣಗಳು ೫೦ ವರ್ಷಕ್ಕಿಂತ ಕೆಳಗಿನವರಲ್ಲಿ ಪತ್ತೆಯಾಗುತ್ತಿವೆ.

ವಿಶೇಷವೆಂದರೆ ಶೇ. ೭೦ ಕ್ಕೂ ಅಧಿಕ ಪ್ರಕರಣಗಳು ಉಲ್ಬಣಿಸಿದ ಸ್ಥಿತಿಯಲ್ಲಿ ಪತ್ತೆಯಾಗುತ್ತಿರುವುದರಿಂದ, ಈ ರೋಗಿಗಳು ಬದುಕಿ ಉಳಿಯುವ ಸಾಧ್ಯತೆ ಕಡಿಮೆಯಾಗುವುದರೊಂದಿಗೆ  ಅಕಾಲಿಕ ಮರಣದ ಪ್ರಮಾಣವೂ ಹೆಚ್ಚುತ್ತಿದೆ.  

ಕಾರಣವೇನು?

ಸ್ತನಗಳ ಕ್ಯಾನ್ಸರ್ ಉದ್ಭವಿಸಲು ನಿಖರವಾದ ಹಾಗೂ ನಿರ್ದಿಷ್ಟವಾದ ಕಾರಣಗಳು ಏನೆಂದು ಹೇಳಲಾಗದು. ಆದರೆ ಈ ವ್ಯಾಧಿಯ ಸಂಭಾವ್ಯತೆಗೆ ಸಂಬಂಧಿಸಿದಂತೆ ಕೆಲವೊಂದು ಅಪಾಯಕಾರಿ ಅಂಶಗಳು ಇಂತಿವೆ. ಇವುಗಳಲ್ಲಿ ಮೇಲೆ ನಮೂದಿಸಿದಂತೆ ಲಿಂಗ ಮತ್ತು ವಯಸ್ಸು, ೧೨ ವರ್ಷ ವಯಸ್ಸಿಗೆ ಮುನ್ನ ಪುಷ್ಪವತಿಯರಾಗಿದ್ದ ಬಾಲಕಿಯರು, ೫೫ ವರ್ಷ ವಯಸ್ಸಿನ ಬಳಿಕ ಋತುಬಂಧವಾದ ಸ್ತ್ರೀಯರು, ಅವಿವಾಹಿತರು, ಸಂತಾನ ಪ್ರಾಪ್ತಿಯಾಗದವರು, ೪೦ ವರ್ಷ ವಯಸ್ಸಿನ ಬಳಿಕ ಮಕ್ಕಳನ್ನು ಹೆತ್ತವರು, ಕಂದನಿಗೆ ತನ್ನ ಮೊಲೆಹಾಲನ್ನು ಊಡಿಸದವರು, ಗರ್ಭನಿರೋಧಕ ಔಷದಗಳನ್ನು ಸೇವಿಸುತ್ತಿದ್ದ ಮತ್ತು ಸೇವಿಸುತ್ತಿರುವವರು, ಅನ್ಯ ಕಾರಣಗಳಿಗಾಗಿ ಹಾರ್ಮೋನ್ ಯುಕ್ತ ಔಷದಗಳನ್ನು ಸೇವಿಸುವ ಮಹಿಳೆಯರು ಮತ್ತು ಸ್ತನ ಕ್ಯಾನ್ಸರ್ ಪೀಡಿತರ ಸಮೀಪದ ಸಂಬಂಧಿಗಳು ಈ ವ್ಯಾಧಿಗೆ ತುತ್ತಾಗುವ ಸಾಧ್ಯತೆಗಳಿವೆ. ಇದಲ್ಲದೆ ಅನುವಂಶಿಕತೆ ಮತ್ತು ಪರಿವರ್ತಿತ ಹಾಗೂ ಅಸಾಮಾನ್ಯ ವಂಶವಾಹಿನಿಗಳ ಇರುವಿಕೆ, ಅಧಿಕ ತೂಕ ಹಾಗೂ ಅತಿ ಬೊಜ್ಜು, ಅತಿಯಾದ ಧೂಮ ಹಾಗೂ ಮದ್ಯಪಾನ ಮತ್ತು ನಿರುಪಯುಕ್ತ ಆಹಾರಗಳನ್ನು ( ಜಂಕ್ ಫುಡ್ ) ಅತಿಯಾಗಿ ಸೇವಿಸುವ ಹವ್ಯಾಸ ಇರುವವರಲ್ಲೂ, ಈ ವ್ಯಾಧಿ ತಲೆದೋರುವ ಸಾಧ್ಯತೆಗಳು ಹೆಚ್ಚಿವೆ. 

ಜಾಗತಿಕ ಮಟ್ಟದಲ್ಲಿ ವರ್ಷಂಪ್ರತಿ ೧.೩೮ ದಶಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ,೫೮,೦೦೦ ರೋಗಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ಸಮಸ್ಯೆಗೆ ಅಭಿವೃದ್ಧಿ ಹೊಂದಿರುವ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ದೇಶಗಳೂ ಅಪವಾದವೆನಿಸಿಲ್ಲ. ಆದರೆ ಮಧ್ಯಮ ಮತ್ತು ಅಲ್ಪ ಆದಾಯವಿರುವ ದೇಶಗಳಲ್ಲಿ ಸ್ತನ ಕ್ಯಾನ್ಸರ್ ವ್ಯಾಧಿಗೆ ಬಲಿಯಾಗುತ್ತಿರುವವರ ಪ್ರಮಾಣವು ೨,೬೯,೦೦೦ ಕ್ಕೂ ಹೆಚ್ಚಿದೆ. 

ಸ್ತನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯು ವರ್ಷಂಪ್ರತಿ ನಿಧಾನವಾಗಿ ಆದರೆ ನಿಶ್ಚಿತವಾಗಿ ಹೆಚ್ಚುತ್ತಲೇ ಇದ್ದು, ಇದಕ್ಕೆ ಅನುಗುಣವಾಗಿ ವ್ಯಾಧಿಪೀಡಿತರ ಮರಣದ ಪ್ರಮಾಣವೂ ವೃದ್ಧಿಸುತ್ತಿದೆ. ಆದರೆ ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಇದನ್ನು ಗುಣಪಡಿಸುವ ಸಾಧ್ಯತೆಗಳು ಶೇ.೯೮ ರಷ್ಟಿದ್ದು, ವಿಳಂಬವಾದಲ್ಲಿ ಇದರ ಪ್ರಮಾಣವು ಕೇವಲ ಶೇ. ೨೭ ರಷ್ಟಿರುತ್ತದೆ.  

ಪ್ರಸ್ತುತ ಭಾರತದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಅಧಿಕ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಗ್ರಾಮೀಣ ಜನರ ಅಜ್ಞಾನ, ವಿದ್ಯಾವಂತರ ಲಜ್ಜೆ ಮತ್ತು ತಮ್ಮ ಶಾರೀರಿಕ ಆರೋಗ್ಯದ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಥವಾ ಮುಚ್ಚಿಡುವ ಹವ್ಯಾಸಗಳಿಂದಾಗಿ, ಗಣನೀಯ ಪ್ರಮಾಣದ ಪ್ರಕರಣಗಳು ವೈದ್ಯರ ಗಮನಕ್ಕೆ ಬರುವುದೇ ಇಲ್ಲ!. 

ಪ್ರಾಯಶಃ ಇಂತಹ ಕಾರಣಗಳಿಂದಾಗಿಯೇ ಬಹುತೇಕ ಮಹಿಳೆಯರು ತಮ್ಮ ಸ್ತನಗಳಲ್ಲಿ ಪುಟ್ಟ ಹುಣಸೆ ಬೀಜದಷ್ಟು ಗಾತ್ರದ ಗೆಡ್ಡೆಯೊಂದು ಇರುವುದನ್ನು ( ಪ್ರಾಥಮಿಕ ಹಂತ ) ಅರಿತರೂ, ವೈದ್ಯರನ್ನು ಸಂದರ್ಶಿಸುವುದಿಲ್ಲ. ಈ ಗೆಡ್ಡೆಯು ತುಸು ದೊಡ್ಡದಾದ ಬಳಿಕ ( ತುಸು ವೃದ್ಧಿಸಿದ ಹಂತ ) ಮತ್ತು ಇನ್ನು ಕೆಲವರು ಈ ಗೆಡ್ಡೆಯಲ್ಲಿ ತೀವ್ರ ನೋವು ಆರಂಭಗೊಂಡ ಬಳಿಕ ( ಮೂರನೇ ಹಂತ ) ವೈದ್ಯರನ್ನು ಭೇಟಿಯಾಗುತ್ತಾರೆ. ತತ್ಪರಿಣಾಮವಾಗಿ ಈ ರೋಗಿಗಳು ಸಾಕಷ್ಟು ಶಾರೀರಿಕ ಹಾಗೂ ಮಾನಸಿಕ ಯಾತನೆಗಳೊಂದಿಗೆ, ಆರ್ಥಿಕ ಸಂಕಷ್ಟಗಳಿಗೂ ಒಳಗಾಗುತ್ತಾರೆ. 

ಎಲ್ಲವೂ ಕ್ಯಾನ್ಸರ್ ಅಲ್ಲ 

ಅನೇಕ ವಿದ್ಯಾವಂತರೂ ಸ್ತನಗಳಲ್ಲಿ ಉದ್ಭವಿಸುವ ಗೆಡ್ಡೆಗಳೆಲ್ಲವೂ ಕ್ಯಾನ್ಸರ್ ಎಂದೇ ನಂಬುತ್ತಾರೆ. ಆದರೆ ನಿಜ ಹೇಳಬೇಕಿದ್ದಲ್ಲಿ, ಇವುಗಳಲ್ಲಿ ಶೇ. ೭೫ ರಷ್ಟು ಗೆಡ್ಡೆಗಳು ನಿರಪಾಯಕಾರಿಗಳೇ ಆಗಿರುತ್ತವೆ. ಆದುದರಿಂದ ಯಾವುದೇ ಕಾರಣಕ್ಕೂ ಇಂತಹ ಗೆಡ್ಡೆಗಳು ಉದ್ಭವಿಸಿದಲ್ಲಿ, ಇದನ್ನು ನಿರಪಾಯಕಾರಿ ಎಂದು ನೀವಾಗಿ ನಿರ್ಧರಿಸಿ ಮುಚ್ಚಿಡುವ ಪ್ರಯತ್ನವು " ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ " ದಂತಾಗುವುದು ಎನ್ನುವುದನ್ನು ಮರೆಯದಿರಿ. ಈ ಮಾಹಿತಿಯನ್ನು ನಿಮ್ಮ ಬಂಧುಮಿತ್ರರೊಂದಿಗೆ ಹಂಚಿಕೊಳ್ಳುವ ಮೂಲಕ " ಗುಲಾಬಿ ಮಾಸ " ದ ಆಚರಣೆಯಲ್ಲಿ ನೀವೂ ಸಕ್ರಿಯವಾಗಿ ಪಾಲ್ಗೊಳ್ಳಿರಿ. ತನ್ಮೂಲಕ ಸ್ತನ ಕ್ಯಾನ್ಸರ್ ನ ಮಾರಕತೆಯನ್ನು ತಡೆಗಟ್ಟಲು ಸಹಕರಿಸಿ. 

ಸ್ವಯಂ ಸ್ತನ ಪರೀಕ್ಷೆ 

ಮಾರಕವೆನಿಸಬಲ್ಲ ಸ್ತನ ಕ್ಯಾನ್ಸರ್ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸ್ವಯಂ ಸ್ತನ ಪರೀಕ್ಷೆಯು ಅತ್ಯಂತ ಸರಳ ಹಾಗೂ ಸುಲಭ ವಿಧಾನವೂ ಹೌದು. ಹದಿಹರೆಯದ ಹುಡುಗಿಯರಿಂದ ಆರಂಭಿಸಿ, ವಯೋವೃದ್ಧ ಮಹಿಳೆಯರ ತನಕ ಪ್ರತಿಯೊಬ್ಬರೂ ಈ ಸರಳ ವಿದಾನವನ್ನು ತಮ್ಮ ಪರಿಚಿತ ವೈದ್ಯರಿಂದ ಕೇಳಿ ತಿಳಿದುಕೊಳ್ಳಬಹುದಾಗಿದೆ. ಬಳಿಕ ಪ್ರತಿ ತಿಂಗಳಲ್ಲೂ ಸ್ವಯಂ ಸ್ತನ ಪರೀಕ್ಷೆಯನ್ನು ನಡೆಸುತ್ತಿದ್ದಲ್ಲಿ, ಅಸಾಮಾನ್ಯ ಬದಲಾವಣೆಗಳನ್ನು ಸುಲಭದಲ್ಲೇ ಪತ್ತೆಹಚ್ಚಬಹುದಾಗಿದೆ. ಜೊತೆಗೆ ಸ್ತನಗಳಲ್ಲಿ ನೋವು, ಜ್ವರ, ಸ್ತನ ಹಾಗೂ ಕಂಕುಳಿನಲ್ಲಿ ಇರುವ ಲಿಂಫ್ ಗ್ರಂಥಿಗಳಲ್ಲಿ ಬಾವು, ಸ್ತನಗಳಲ್ಲಿ ಉದ್ಭವಿಸಿರುವ ಚಿಕ್ಕಪುಟ್ಟ ಗೆಡ್ಡೆಗಳು ಅಥವಾ ಯಾವುದೇ ರೀತಿಯ ಅಸಾಮಾನ್ಯ ಬದಲಾವಣೆಗಳನ್ನು ಗಮನಿಸಿದೊಡನೆ, ತಜ್ಞ ವೈದ್ಯರನ್ನು ಸಂದರ್ಶಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಅಯಾಚಿತ ಸಮಸ್ಯೆಗಳನ್ನು ನಿಶ್ಚಿತವಾಗಿ ತಡೆಗಟ್ಟಬಹುದು. 

ಅಂತಿಮವಾಗಿ ಹೇಳುವುದಾದಲ್ಲಿ ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಪ್ರಾಥಮಿಕ ಹಂತದಲ್ಲೇ ಪತ್ತೆಯಾಗುತ್ತಿರುವ ಪ್ರಮಾಣವು ಅತ್ಯಲ್ಪವಾಗಿದೆ. ಈ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಜನಜಾಗೃತಿಯನ್ನು ಮೂಡಿಸಬೇಕಾಗಿದೆ. ತನ್ಮೂಲಕ ಇದಕ್ಕೆ ಬಲಿಯಾಗುವ ರೋಗಿಗಳ ಪ್ರಮಾಣವನ್ನೂ ಕನಿಷ್ಠ ಶೇ.೩೦ ರಷ್ಟು ಕಡಿಮೆ ಮಾಡಬಹುದಾಗಿದೆ. 

ನಿಮಗಿದು ಗೊತ್ತೇ?

ಇತ್ತೀಚೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆ ಬಿಡುಗಡೆ ಮಾಡಿದ ವರದಿಯಂತೆ, ಬೆಂಗಳೂರಿನಲ್ಲಿ ಪತ್ತೆಯಾಗುತ್ತಿರುವ ವೈವಿಧ್ಯಮಯ ಕ್ಯಾನ್ಸರ್ ಪ್ರಕರಣಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಸ್ತನ ಕ್ಯಾನ್ಸರ್ ಪ್ರಕರಣಗಳ ಪ್ರಮಾಣವು ಶೇ. ೨೭ ರಷ್ಟಿದೆ!. ವಿಶೇಷವೆಂದರೆ  ದೆಹಲಿಯಲ್ಲಿ  ಈ ಪ್ರಮಾಣವು ಶೇ. ೪೧ ರಷ್ಟಿದ್ದು, ಸ್ತನ ಕ್ಯಾನ್ಸರ್ ನ ರಾಜಧಾನಿ ಎನಿಸಿದೆ!.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು