Sunday, November 13, 2016

EYES ON DIABETES

                           ನ. ೧೪ : ವಿಶ್ವ ಮಧುಮೇಹ ದಿನಾಚರಣೆ
                    ಮಧುಮೇಹದ ಮೇಲೊಂದು ಕಣ್ಣಿರಲಿ
           

ಮಧುಮೇಹ ಎನ್ನುವ ಸುಂದರ ನಾಮಧೇಯದ ಗಂಭೀರ ಕಾಯಿಲೆಯು, ಈ ವ್ಯಾಧಿಪೀಡಿತರ ಪಾಲಿಗೆ ಅತ್ಯಂತ “ ಕಹಿ “ ಎಂದೆನಿಸುವುದು ಸುಳ್ಳೇನಲ್ಲ. ಅದರಲ್ಲೂ ವಿಶೇಷವಾಗಿ ಸಿಹಿತಿಂಡಿಗಳನ್ನು ಮೆಚ್ಚಿ ಸವಿಯುವ ಭಾರತೀಯರಿಗೆ, ಈ ವ್ಯಾಧಿಯ ಇರುವಿಕೆಗಿಂತಲೂ ಹೆಚ್ಚಾಗಿ, ಸಕ್ಕರೆ ಹಾಗೂ ಬೆಲ್ಲಗಳನ್ನು ಬಳಸಿ ಸಿದ್ಧಪಡಿಸುವ ವೈವಿಧ್ಯಮಯ ಸಿಹಿತಿಂಡಿಗಳನ್ನು ತಿನ್ನುವಂತಿಲ್ಲ ಎನ್ನುವ ವಿಚಾರವೇ ಅತ್ಯಂತ ಅಸಹನೀಯವೆನಿಸುತ್ತದೆ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಹುಟ್ಟಿನಿಂದ ಸಾವಿನ ತನಕ ನಾವು ಆಚರಿಸುವ ಪ್ರತಿಯೊಂದು ಸಮಾರಂಭಗಳಲ್ಲಿ ಸಿಹಿತಿಂಡಿಗಳಿಗೆ ಸಿಂಹಪಾಲು ಸಲ್ಲುತ್ತದೆ. ಪ್ರಾಯಶಃ ಇದೇ ಕಾರಣದಿಂದಾಗಿ ಜಗತ್ತಿನಲ್ಲೇ ಅತ್ಯಧಿಕ ಸಂಖ್ಯೆಯ ಮಧುಮೇಹ ಪೀಡಿತರು ನಮ್ಮ ದೇಶದಲ್ಲೇ ಇರುವುದರಿಂದಾಗಿ, ಭಾರತವು ವಿಶ್ವದ ಮಧುಮೇಹಿಗಳ ರಾಜಧಾನಿ “ ಎಂದೇ ಕರೆಯಲ್ಪಡುತ್ತಿದೆ. ವಿಶ್ವ ಮಧುಮೇಹ ದಿನದ ಸಲುವಾಗಿ ಈ ವ್ಯಾಧಿಯ ಬಗ್ಗೆ ಅರಿವು ಮೂಡಿಸುವ ಕಿಂಚಿತ್ ಮಾಹಿತಿ ಇಲ್ಲಿದೆ.

ವಿಶ್ವದ ಪ್ರತಿಯೊಂದು ರಾಷ್ಟ್ರಗಳ ಪ್ರಜೆಗಳನ್ನು ಕಾಡುತ್ತಿರುವ ಮಧುಮೇಹ ವ್ಯಾಧಿಯ ಪಿಡುಗು, ಇತ್ತೀಚಿನ ಕೆಲ ವರ್ಷಗಳಿಂದ ಅನಿಯಂತ್ರಿತವಾಗಿ ಹೆಚ್ಚುತ್ತಿದೆ. ಶಾಶ್ವತ ಪರಿಹಾರವಿಲ್ಲದ ಹಾಗೂ ಸಂಕೀರ್ಣ ಸಮಸ್ಯೆಗಳಿಗೆ ಮತ್ತು ಕಾರಣಾಂತರಗಳಿಂದ ರೋಗಿಯ ಅಕಾಲಿಕ ಮರಣಕ್ಕೂ ಕಾರಣವೆನಿಸಬಲ್ಲ ಈ ಗಂಭೀರ ಹಾಗೂ ಮಾರಕ ಕಾಯಿಲೆಯನ್ನು ನಾವಿಂದು ನಿಯಂತ್ರಿಸಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಅಂತರರಾಷ್ಟ್ರೀಯ ಮಧುಮೇಹ ಒಕ್ಕೂಟವು ವರ್ಷಂಪ್ರತಿ ನವೆಂಬರ್ ೧೪ ರಂದು ಆಚರಿಸುವ “ ವಿಶ್ವ ಮಧುಮೇಹ ದಿನ “ ಮತ್ತು ಈ ವ್ಯಾಧಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯೋಜಿಸುತ್ತಿರುವ ಅಭಿಯಾನದಲ್ಲಿ ನಾವೆಲ್ಲರೂ ಪಾಲ್ಗೊಳ್ಳಬೇಕಿದೆ. ಏಕೆಂದರೆ ಮಧುಮೇಹ ಪೀಡಿತ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಿಗೆ, ತಮ್ಮನ್ನು ಈ ವ್ಯಾಧಿ ಕಾಡುತ್ತಿರುವ  ಬಗ್ಗೆ ತಿಳಿದಿರುವುದೇ ಇಲ್ಲ!.

ಚಾರ್ಲ್ಸ್ ಬೆಸ್ಟ್ ಎನ್ನುವ ಸಹಸಂಶೋಧಕನೊಂದಿಗೆ ಸೇರಿ ಜಗತ್ತಿನ ಮಧುಮೇಹಿಗಳ ಪಾಲಿಗೆ ಸಾಕ್ಷಾತ್ “ ಸಂಜೀವಿನಿ “ ಎನಿಸಿರುವ “ ಇನ್ಸುಲಿನ್ “ ಔಷದವನ್ನು ೧೯೨೨ ಆವಿಷ್ಕರಿಸಿದ್ದ ಫ್ರೆಡರಿಕ್ ಬಾಂಟಿಂಗ್ ನ ಜನ್ಮದಿನವಾದ ನ. ೧೪ ನ್ನು, ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ನ. ೧೪ ರಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ, ಮಧುಮೇಹದ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಮತ್ತು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ.

ಮಧುಮೇಹ – ಡಯಾಬೆಟೆಸ್

ಮನುಷ್ಯನ ಶರೀರದಲ್ಲಿರುವ ಮೇದೋಜೀರಕ ಗ್ರಂಥಿಯಲ್ಲಿನ ಬೀಟಾ ಕಣಗಳು ಉತ್ಪಾದಿಸುವ ಇನ್ಸುಲಿನ್ ನ ಪ್ರಮಾಣದಲ್ಲಿ ಕೊರತೆಯಾದಾಗ ಅಥವಾ ಶರೀರವು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾದಾಗ ಅಥವಾ ಇನ್ಸುಲಿನ್ ನ ಉತ್ಪಾದನೆಯೇ ಸಂಪೂರ್ಣವಾಗಿ ನಶಿಸಿದಾಗ, ಡಯಾಬೆಟೆಸ್ ಅರ್ಥಾತ್ ಮಧುಮೇಹ ವ್ಯಾಧಿಯು ಉದ್ಭವಿಸುತ್ತದೆ. ತತ್ಪರಿಣಾಮವಾಗಿ ರೋಗಿಯ ರಕ್ತದಲ್ಲಿನ ಸಕ್ಕರೆಯ ಅಂಶವು ಅನಿಯಂತ್ರಿತವಾಗಿ ಹೆಚ್ಚುತ್ತದೆ.

ಮಧುಮೇಹವನ್ನು ಇನ್ಸುಲಿನ್ ಅವಲಂಬಿತ ಮತ್ತು ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ ಎಂದು ಸ್ಥೂಲವಾಗಿ ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಇದಲ್ಲದೇ ಮಹಿಳೆಯರು ಗರ್ಭಧರಿಸಿದಾಗ ಕಂಡುಬರುವ ಮಧುಮೇಹವು, ಸಾಮಾನ್ಯವಾಗಿ ಹೆರಿಗೆಯ ಬಳಿಕ ಕಣ್ಮರೆಯಾಗುವುದು.
ಇನ್ಸುಲಿನ್ ಅವಲಂಬಿತ ಮಧುಮೇಹವು ನವಜಾತ ಶಿಶುವಿನಿಂದ ಆರಂಭಿಸಿ, ಯಾವುದೇ ವಯಸ್ಸಿನವರಲ್ಲೂ ಉದ್ಭವಿಸಬಹುದು. ಆದರೆ ಎರಡನೆಯ ವಿಧದ ಮಧುಮೇಹವು ಹೆಚ್ಚಾಗಿ ಮಧ್ಯ ವಯಸ್ಸಿನಲ್ಲಿ ಅಥವಾ ಇಳಿವಯಸ್ಸಿನಲ್ಲಿ ತಲೆದೋರುವುದಾದರೂ, ಇತ್ತೀಚಿನ ಕೆಲವರ್ಷಗಳಿಂದ ಯೌವ್ವನಸ್ತರಲ್ಲೂ ಪತ್ತೆಯಾಗುತ್ತಿದೆ. ಜೊತೆಗೆ ಇವೆರಡೂ ವಿಧದ ಮಧುಮೇಹ ವ್ಯಾಧಿಯ ಪ್ರಮಾಣವು ತ್ವರಿತಗತಿಯಲ್ಲಿ ವೃದ್ಧಿಸುತ್ತಿದೆ.

ಆಧುನಿಕ – ನಿಷ್ಕ್ರಿಯ ಜೀವನ ಶೈಲಿ, ನಿರುಪಯುಕ್ತ ಮತ್ತು ಅತಿಆಹಾರ ಸೇವನೆ, ಅಧಿಕ ತೂಕ – ಅತಿಬೊಜ್ಜು, ತೀವ್ರ ಮಾನಸಿಕ ಒತ್ತಡ, ಅನುವಂಶಿಕತೆ ಮತ್ತು ಅನ್ಯ ಕೆಲ ಕಾರಣಗಳು ಮಧುಮೇಹ ಉದ್ಭವಿಸಲು ಪ್ರಮುಖ ಕಾರಣಗಳೆನಿಸುತ್ತವೆ.

ಪೂರ್ವಸೂಚನೆಗಳು

ಅತಿಆಯಾಸ, ಅತಿಯಾದ ಬಾಯಾರಿಕೆ, ಶರೀರದ ತೂಕ ಕಡಿಮೆಯಾಗುವುದು, ತಲೆತಿರುಗುವಿಕೆ, ಕಣ್ಣುಗಳ ದೃಷ್ಠಿ ಮಂಜಾಗುವುದು, ಪದೇಪದೇ ಮೂತ್ರ ವಿಸರ್ಜಿಸಬೇಕೆನಿಸುವುದು, ಮೂತ್ರಾಂಗಗಳಲ್ಲಿ ತುರಿಕೆ, ಗಾಯಗಳು ಮತ್ತು ಅನ್ಯ ಕಾಯಿಲೆಗಳು ಬೇಗನೆ ವಾಸಿಯಾಗದೇ ಉಲ್ಬಣಿಸುವುದೇ ಮುಂತಾದ ಪೂರ್ವಸೂಚನೆಗಳು ಮಧುಮೇಹ ಪೀಡಿತರಲ್ಲಿ ಕಂಡುಬರುತ್ತವೆ.

ಪತ್ತೆಹಚ್ಚುವುದೆಂತು?

ಬೆಳಗ್ಗೆ ಆಹಾರ ಸೇವಿಸುವ ಮುನ್ನ ( ಬರೀ ಹೊಟ್ಟೆಯಲ್ಲಿ ) ನಿಮ್ಮ ರಕ್ತದಲ್ಲಿನ ಗ್ಲುಕೋಸ್ ನ ಪ್ರಮಾಣವು ೧೦೦ ಎಂ. ಜಿ / ಡಿ ಸಿ ಎಲ್ ಗಿಂತ ಹೆಚ್ಚಿದ್ದಲ್ಲಿ ಅಥವಾ ಮಧ್ಯಾಹ್ನ ಊಟಮಾಡಿದ ಎರಡು ಗಂಟೆಯ ಬಳಿಕ ೧೪೦ ಎಂ. ಜಿ / ಡಿ ಸಿ ಎಲ್ ಗಿಂತ ಅಧಿಕವಿದ್ದಲ್ಲಿ, ನಿಮಗೆ ಮಧುಮೇಹ ವ್ಯಾಧಿ ಇದೆಯೆಂದು ತಿಳಿಯಿರಿ. ಆದರೆ ರಕ್ತದಲ್ಲಿನ ಗ್ಲುಕೋಸ್ ನ ಪ್ರಮಾಣವು ಅಲ್ಪಪ್ರಮಾಣದಲ್ಲಿ ಹೆಚ್ಚಿದ್ದಲ್ಲಿ, ಕೇವಲ ಆಹಾರ ಸೇವನೆಯಲ್ಲಿ ಪಥ್ಯ ಮತ್ತು ಜೀವನ ಶೈಲಿಯ ಬದಲಾವಣೆಗಳಿಂದ ಇದನ್ನು ನಿಯಂತ್ರಿಸಬಹುದಾಗಿದೆ. ಈ ವಿಧಾನ ಅಪೇಕ್ಷಿತ ಪರಿಣಾಮ ನೀಡದಿದ್ದಲ್ಲಿ ಮಾತ್ರ ದೈನಂದಿನ ಔಷದ ಸೇವನೆ ಅನಿವಾರ್ಯವೆನಿಸುವುದು.

ಚಿಕಿತ್ಸೆ

ಮಧುಮೇಹ ಪೀಡಿತ ವ್ಯಕ್ತಿಗಳು ತಮ್ಮ ಜೀವನ ಶೈಲಿಯಲ್ಲಿ ಅವಶ್ಯಕ ಬದಲಾವಣೆಗಳನ್ನು ಮಾಡಿಕೊಳ್ಳುವುದರೊಂದಿಗೆ, ಆಹಾರ ಸೇವನೆಯಲ್ಲಿ ಪಥ್ಯ, ದಿನನಿತ್ಯ ವ್ಯಾಯಾಮ, ನಡಿಗೆ ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವುದು, ಶರೀರದ ತೂಕ ಮತ್ತು ಅಧಿಕ ಬೊಜ್ಜನ್ನು ಇಳಿಸಿಕೊಳ್ಳುವುದು, ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳುವುದರೊಂದಿಗೆ ತಜ್ಞ ವೈದ್ಯರು ಸೂಚಿಸಿದ ಔಷದಗಳನ್ನು ಕ್ರಮಬದ್ಧವಾಗಿ ಸೇವಿಸುವ ಮೂಲಕ ಈ ವ್ಯಾಧಿಯನ್ನು ನಿಶ್ಚಿತವಾಗಿ ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದಾಗಿದೆ. ಜೊತೆಗೆ ನಿಗದಿತ ಅವಧಿಯಲ್ಲಿ ರಕ್ತಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ, ತಮ್ಮ ವ್ಯಾಧಿ ನಿಯಂತ್ರಣದಲ್ಲಿರುವ ಅಥವಾ ಹದ್ದುಮೀರಿರುವ ವಿಚಾರವನ್ನು ಸುಲಭದಲ್ಲೇ ಅರಿತುಕೊಳ್ಳಬಹುದಾಗಿದೆ.

ತಪ್ಪುಕಲ್ಪನೆಗಳು

ಮಧುಮೇಹ ಪೀಡಿತರಿಗೆ ಕೇವಲ ಸಕ್ಕರೆಯನ್ನು ಬಳಸಿ ತಯಾರಿಸಿದ ಖಾದ್ಯಪೇಯಗಳು ನಿಷಿದ್ಧ. ಆದುದರಿಂದ ಬೆಲ್ಲ ಮತ್ತು ಜೇನುತುಪ್ಪಗಳನ್ನು ಸೇವಿಸಬಹುದು ಎಂದು ಅನೇಕರು ನಂಬಿದ್ದು, ಇದು ಅಪ್ಪಟ ಸುಳ್ಳು. ಏಕೆಂದರೆ ಸಕ್ಕರೆ ಮತ್ತು ಬೆಲ್ಲಗಳನ್ನು ತಯಾರಿಸುವುದ ಕಬ್ಬಿನಿಂದಲೇ ಎನ್ನುವುದು ನಿಮಗೂ ತಿಳಿದಿದೆಯಲ್ಲವೇ?.

ಮಧುಮೇಹ ವ್ಯಾಧಿಯನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದವನ್ನು ಇಂದಿನ ತನಕ ಯಾವುದೇ ವೈದ್ಯಕೀಯ ವಿಜ್ಞಾನಿಗಳು ಪತ್ತೆಹಚ್ಚಿಲ್ಲ. ಆದರೆ ಈ ವ್ಯಾಧಿಯಲ್ಲದೇ ಶಾಶ್ವತ ಪರಿಹಾರವೇ ಇಲ್ಲದ ಅನ್ಯ ಕೆಲ ವ್ಯಾಧಿಗಳನ್ನೂ ಶಾಶ್ವತವಾಗಿ ಗುಣಪಡಿಸುವುದಾಗಿ ಘೋಷಿಸುವ ಜಾಹೀರಾತುಗಳಿಗೆ ನಮ್ಮ ದೇಶದಲ್ಲಿ ಬರವಿಲ್ಲ. ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುವ ಇಂತಹ “ ದಾರಿತಪ್ಪಿಸುವ ಜಾಹೀರಾತು “ ಗಳಿಗೆ ಮರುಳಾಗಿ, ತಾವು ಸೇವಿಸುತ್ತಿದ್ದ ಔಷದಗಳನ್ನು ತ್ಯಜಿಸಿ, ನಕಲಿ ವೈದ್ಯರ – ಔಷದ ತಯಾರಕರ ಚಿಕಿತ್ಸೆಗಳನ್ನು ಪ್ರಯೋಗಿಸಿ ತಮ್ಮ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ಇವೆಲ್ಲವುಗಳ ಅರಿವಿದ್ದರೂ ಆರೋಗ್ಯ ಇಲಾಖೆ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ಇಂತಹ ಕಾನೂನುಬಾಹಿರ ಜಾಹೀರಾತುಗಳನ್ನು ನೀಡುವವರ ವಿರುದ್ಧ ಯಾವುದೇ ಕಾನೂನುಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ನಮ್ಮ ದೇಶದಲ್ಲಿ ಇಂತಹ ವ್ಯಾಧಿಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.

ನೊಬೆಲ್ ಪ್ರಶಸ್ತಿ

ಮಧುಮೇಹ ಹಾಗೂ ಶಾಶ್ವತ ಪರಿಹಾರವಿಲ್ಲದ ಅನ್ಯ ವ್ಯಾಧಿಗಳನ್ನು ನಿಶ್ಚಿತವಾಗಿ ಮತ್ತು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಪತ್ತೆ ಹಚ್ಚಿದವರಿಗೆ “ ನೊಬೆಲ್ ಪ್ರಶಸ್ತಿ “ ಕಟ್ಟಿಟ್ಟ ಬುತ್ತಿ. ಇಂತಹ ಕಾಯಿಲೆಗಳನ್ನು ಗುಣಪಡಿಸಬಲ್ಲ ಔಷದಗಳನ್ನು ತಾವು ಸಂಶೋಧಿಸಿರುವುದಾಗಿ ಜಾಹೀರಾತುಗಳನ್ನು ನೀಡಿ, ಜುಜುಬಿ ಮೊತ್ತದ ಹಣವನ್ನು ಸಂಪಾದಿಸುವುದರ ಬದಲಾಗಿ, ನೊಬೆಲ್ ಪ್ರಶಸ್ತಿಯೊಂದಿಗೆ ಲಕ್ಷಾಂತರ ಡಾಲರ್ ಬಹುಮಾನವನ್ನೂ ಗಳಿಸುವ ಅವಕಾಶವನ್ನು ಇವರು ಬಳಸಿಕೊಳ್ಳದಿರಲು ಕಾರಣವೇನೆಂದು ಇದೀಗ ನಿಮಗೂ ಅರ್ಥವಾಗಿರಬೇಕಲ್ಲವೇ?.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು




Saturday, November 5, 2016

CONSTRUCTION WASTE - RECYCLE AND REUSE


          ಕಟ್ಟಡಗಳ ಭಗ್ನಾವಶೇಷ : ಮರುಬಳಕೆಗಿದೆ ಅವಕಾಶ !

ನಿರಂತರ ಹಾಗೂ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ ನಾವಿಂದು ನಿರ್ಮಿಸುತ್ತಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳು, ರಸ್ತೆ, ಸೇತುವೆ, ಫ್ಲೈ ಓವರ್, ಸಬ್ ವೇ ಇತ್ಯಾದಿಗಳ ನಿರ್ಮಾಣ ಕಾಮಗಾರಿಗಳೂ ಶರವೇಗದಲ್ಲಿ ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ಹಳೆಯ ಹಾಗೂ ದುಸ್ಥಿತಿಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸುವ ಕಾಮಗಾರಿಗಳೂ ಎಡೆಬಿಡದೆ ಸಾಗುತ್ತಿವೆ. ತತ್ಪರಿಣಾಮವಾಗಿ ಇವುಗಳಿಂದ ಉತ್ಪನ್ನವಾಗುವ ತ್ಯಾಜ್ಯಗಳ ಪ್ರಮಾಣವೂ ಸ್ವಾಭಾವಿಕವಾಗಿ ಹೆಚ್ಚುತ್ತಿವೆ. ಈ ತ್ಯಾಜ್ಯಗಳನ್ನು ನಾವು ಮರುಬಳಕೆ ಮಾಡದೇ ಇದ್ದಲ್ಲಿ, ಇವುಗಳನ್ನು ತುಂಬಿಸಲು ಅಥವಾ ವಿಲೇವಾರಿ ಮಾಡಲು ಬೇಕಾಗುವ ಲ್ಯಾಂಡ್ ಫಿಲ್ ಸೈಟ್ ಗಳ ಸಂಖ್ಯೆಯೂ ಇನ್ನಷ್ಟು ವೃದ್ಧಿಸಲಿದೆ. ಲಭ್ಯ ಮಾಹಿತಿಯಂತೆ ಪುರಸಭಾ ತ್ಯಾಜ್ಯಗಳಲ್ಲಿ ಶೇ. ೧೦ ರಿಂದ ೨೦ ರಷ್ಟಿರುವ ಇಂತಹ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಿ ಮರುಬಳಕೆ ಮಾಡದೇ ಇದ್ದಲ್ಲಿ, ಈ ತ್ಯಾಜ್ಯಗಳಿಂದ ಉದ್ಭವಿಸಲಿರುವ ಗಂಭೀರ ಮತ್ತು ಅಪಾಯಕಾರಿ ಸಮಸ್ಯೆಗಳು ದೇಶದ ಪ್ರಗತಿಗೆ ಕಂಟಕವಾಗಿ ಪರಿಣಮಿಸಲಿವೆ.

ಭಗ್ನಾವಶೇಷಗಳು

ಬಹುತೇಕ ನೂತನ ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ, ಹಳೆಯ ಕಟ್ಟಡಗಳನ್ನು ಕೆಡವಲಾಗುತ್ತದೆ. ಅದೇ ರೀತಿಯಲ್ಲಿ ಕೆಲ ಹಳೆಯ ಕಟ್ಟಡಗಳನ್ನು ಪುನರ್ ನವೀಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಗಾಧ ಪ್ರಮಾಣದ ತ್ಯಾಜ್ಯಗಳು ಉತ್ಪನ್ನವಾಗುತ್ತವೆ. ಸಾಮಾನ್ಯವಾಗಿ ಇಂತಹ ತ್ಯಾಜ್ಯಗಳನ್ನು ನಿರುಪಯುಕ್ತ ಎಂದು ಪರಿಗಣಿಸುವುದರಿಂದ, ಅಯಾ ಪಟ್ಟಣ ಅಥವಾ ನಗರಗಳ ಹೊರವಲಯದಲ್ಲಿನ ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ ತಂದು ಸುರಿಯಲಾಗುತ್ತದೆ.

ಕತ್ತಲಾದ ಬಳಿಕವೇ ನಡೆಯುವ ಇಂತಹ “ ಅನೈತಿಕ ತ್ಯಾಜ್ಯ ವಿಲೇವಾರಿ “ ಯಿಂದಾಗಿ, ರಸ್ತೆಗಳ ಇಕ್ಕೆಲಗಳಲ್ಲಿರುವ ಚರಂಡಿಗಳು ಮುಚ್ಚಲ್ಪಡುವುದರಿಂದ ಮಳೆಗಾಲದ ದಿನಗಳಲ್ಲಿ ನೂತನ ರಸ್ತೆಗಳೂ ನಿರ್ನಾಮಗೊಳ್ಳುತ್ತವೆ. ಮುನಿಸಿಪಲ್ ಕಾಯಿದೆಯಂತೆ ಇಂತಹ ತ್ಯಾಜ್ಯಗಳನ್ನು ಕೇವಲ ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ಮಾತ್ರ ವಿಲೇವಾರಿ ಮಾಡಬೇಕಾಗುವುದಾದರೂ, ರಸ್ತೆಗಳ ಬದಿಗಳಲ್ಲಿ ಸುರಿಯುವ ಹವ್ಯಾಸ ದಿನೇದಿನೇ ಹೆಚ್ಚುತ್ತಿದೆ. ನಿಶಾಚರರು ನಡೆಸುವ ಈ ಕಾರ್ಯಾಚರಣೆಯನ್ನು ತಡೆಗಟ್ಟಲು ಆಗದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಅನಿವಾರ್ಯವಾಗಿ ಸುಮ್ಮನಿರಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತಿದೆ.

ತ್ಯಾಜ್ಯ – ವಿಲೇವಾರಿ

ನಮ್ಮ ದೇಶದಲ್ಲಿ ವರ್ಷಂಪ್ರತಿ ೧೦ ರಿಂದ ೧೫ ದಶಲಕ್ಷ ಟನ್ ಗಳಷ್ಟು ಪ್ರಮಾಣದ “ ನಿರ್ಮಾಣ ಕಾಮಗಾರಿಗಳ ತ್ಯಾಜ್ಯ “ ಉತ್ಪನ್ನವಾಗುತ್ತವೆ. ಆದರೆ ಇದರ ಅತಿ ಸಣ್ಣ ಪಾಲು ಮಾತ್ರ ಮರುಬಳಕೆಯಾಗುತ್ತಿದೆ. ಮುನಿಸಿಪಲ್ ಘನತ್ಯಾಜ್ಯ ನಿರ್ವಹಣೆಯ ಕಾಯಿದೆ ೨೦೦೦ ದಂತೆ, ಇಂತಹ ತ್ಯಾಜ್ಯಗಳನ್ನು ಪ್ರತ್ಯೆಕಿಸಬೇಕಾಗಿದ್ದರೂ, ಅನ್ಯ ತ್ಯಾಜ್ಯಗಳೊಂದಿಗೆ ಇವುಗಳನ್ನು ಬೆರೆಸಿ ವಿಲೇವಾರಿ ಮಾಡಲಾಗುತ್ತಿದೆ. ಗತವರ್ಷದಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ್ದ ಭೀಕರ ನೆರೆ ದುರಂತಕ್ಕೆ ಅನಿಯಂತ್ರಿತ, ಕಾನೂನುಬಾಹಿರ ಮತ್ತು ಅತಿಯಾದ ನಿರ್ಮಾಣ ಕಾಮಗಾರಿಗಳು ಮತ್ತು ಇವುಗಳಿಂದ ಉತ್ಪನ್ನವಾಗಿದ್ದ ತ್ಯಾಜ್ಯಗಳನ್ನು ಬೇಕಾಬಿಟ್ಟಿಯಾಗಿ ವಿಲೇವಾರಿ ಮಾಡಿದ್ದುದೇ ಕಾರಣವೆನಿಸಿತ್ತು.

ಪುನರ್ ಆವರ್ತನ – ಮರುಬಳಕೆ        

ಅನೇಕ ದೇಶಗಳಲ್ಲಿ ಕಟ್ಟಡಗಳನ್ನು ಧ್ವಂಸಗೊಳಿಸುವ ಸಂದರ್ಭದಲ್ಲಿ ದೊರೆಯುವ ಇಟ್ಟಿಗೆ, ಕಲ್ಲು ಮತ್ತು ಕಾಂಕ್ರೀಟ್ ತುಂಡುಗಳನ್ನು ಹುಡಿಮಾಡಿದ ಬಳಿಕ, ಇವುಗಳನ್ನು ನೂತನ ರಸ್ತೆಗಳ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲೂ ಈ ವಿಧಾನವನ್ನು ಅನುಸರಿಸುವುದಾದಲ್ಲಿ, ಈ ವಿನೂತನ ವಿಧಾನವನ್ನು ಭಾರತದಲ್ಲೂ ಅನುಷ್ಠಾನಿಸುವುದು ಅಸಾಧ್ಯವೇನಲ್ಲ. ಇಂತಹ ಉಪಯುಕ್ತ ಉಪಕ್ರಮಗಳಿಂದ ನೂತನ ನಿರ್ಮಾಣ ಕಾಮಗಾರಿಗಳ ವೆಚ್ಚ ಕಡಿಮೆಯಾಗುವುದರೊಂದಿಗೆ, ನಿರುಪಯುಕ್ತ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬಹುದಾಗಿದೆ. ಇದಕ್ಕೂ ಮಿಗಿಲಾಗಿ ರಸ್ತೆಗಳ ಬದಿಗಳಲ್ಲಿ ಇಂತಹ ತ್ಯಾಜ್ಯಗಳನ್ನು ಸುರಿಯುವ ಮೂಲಕ ರಸ್ತೆಗಳನ್ನೇ ಹಾಳುಗೆಡಹುವ ಅನಿಷ್ಠ ಪದ್ದತಿಗೆ ವಿದಾಯ ಹೇಳಬಹುದಾಗಿದೆ.

ಒಂದೆರಡು ವರ್ಷಗಳ ಹಿಂದಿನ ಮಾಹಿತಿಯಂತೆ ದೆಹಲಿಯ ಮುನಿಸಿಪಲ್ ಕಾರ್ಪೋರೇಶನ್ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸುಮಾರು ೪೦೦೦ ಟನ್ ಗಳಷ್ಟು ನಿರ್ಮಾಣ ಕಾಮಗಾರಿಗಳ ತ್ಯಾಜ್ಯಗಳನ್ನು ಸಂಗ್ರಹಿಸಲಾಗುತ್ತಿತ್ತು. ಅರ್ಥಾತ್, ಒಂದು ವರ್ಷದಲ್ಲಿ ೧.೫ ದಶಲಕ್ಷ ಟನ್ ತ್ಯಾಜ್ಯವು ದೇಶದ ರಾಜಧಾನಿಯೊಂದರಲ್ಲೇ ಸಂಗ್ರಹವಾಗುತ್ತಿತ್ತು. ಈ ತ್ಯಾಜ್ಯಗಳನ್ನು ಮರುಬಳಕೆ ಅಥವಾ ಪುನರ್ ಆವರ್ತನಗೊಳಿಸಿ ಬಳಸಿದ್ದಲ್ಲಿ, ಅಲ್ಲಿನ ಲ್ಯಾಂಡ್ ಫಿಲ್ ಸೈಟ್ ಗಳ ಆಯುಷ್ಯವು ಇನ್ನಷ್ಟು ಹೆಚ್ಚುತ್ತಿತ್ತು!. ಜೊತೆಗೆ ನೂತನ ರಸ್ತೆಗಳ ನಿರ್ಮಾಣದಲ್ಲಿ ಈ ತ್ಯಾಜ್ಯಗಳನ್ನು ಬಳಸಿದ್ದಲ್ಲಿ, ನಿರ್ಮಾಣ ವೆಚ್ಚ ಕಡಿಮೆಯಾಗುತ್ತಿದ್ದುದರಿಂದ ಇನ್ನಷ್ಟು ಹೊಸ ರಸ್ತೆಗಳನ್ನು ನಿರ್ಮಿಸಬಹುದಾಗಿತ್ತು.

ಕೊನೆಯ ಮಾತು

ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಯಾದಿಯಲ್ಲಿರುವ ಅಮೇರಿಕ. ಇಂಗ್ಲೆಂಡ್, ಜಪಾನ್, ಜರ್ಮನಿ, ಡೆನ್ಮಾರ್ಕ್ ಮತ್ತಿತರ ದೇಶಗಳು ಈಗಾಗಲೇ ಇಂತಹ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸುವ ಅಥವಾ ಮರುಬಳಕೆ ಮಾಡುವ ಸಲುವಾಗಿ ಅವಶ್ಯಕ ಕಾನೂನು – ನಿಯಮಗಳನ್ನು ರೂಪಿಸಿವೆ. ಮಾತ್ರವಲ್ಲ, ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತಿವೆ. ಆದರೆ ನಮ್ಮ ದೇಶದಲ್ಲಿ ಇಂದಿನ ತನಕ ಇಂತಹ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಉಪಯುಕ್ತವೆನಿಸುವ ಮತ್ತು ನೂತನ ನಿರ್ಮಾಣ ಕಾಮಗಾರಿಗಳ ವೆಚ್ಚವನ್ನು ಕಡಿಮೆಮಾಡಬಲ್ಲ ವಿಧಾನಗಳ ಬಗ್ಗೆ ಚಿಂತಿಸಲು ನಮ್ಮನ್ನಾಳುವವರಿಗೆ ಸಮಯವೇ ಇಲ್ಲ!.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು