Saturday, August 31, 2013

Cystitis-UTI


  ಮೂತ್ರಾಶಯದ ಉರಿಯೂತ: ಬಾಧಿಸುವುದು ಉರಿಮೂತ್ರ!

ಬಹುತೇಕ ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ, ವಿಶೇಷವಾಗಿ ಮಹಿಳೆಯರನ್ನು ಪದೇಪದೇ ಪೀಡಿಸುವ ಆರೋಗ್ಯದ ಸಮಸ್ಯೆಗಳಲ್ಲಿ "ಉರಿಮೂತ್ರ"ವೂ ಒಂದಾಗಿದೆ. ದಕ್ಷಿಣ ಕನ್ನಡದ ಜನರು ಉರಿಶೀತ ಎಂದು ಹೆಸರಿಸಿರುವ ಈ ವ್ಯಾಧಿಯ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ. 

ಮಧುಚಂದ್ರದಲ್ಲಿ ಮನಸ್ತಾಪ 

ಮಧುಸೂಧನ- ಮಾಧವಿ ದಂಪತಿಗಳು ತಮ್ಮ ವಿವಾಹ ನೆರವೇರಿದ ಮರುದಿನ ಮಧುಚಂದ್ರಕ್ಕಾಗಿ ಮೈಸೂರಿಗೆ ತೆರಳಿದ್ದರು. ಹದಿನೈದು ದಿನಗಳ ಕಾಲ ಸ್ವೇಚ್ಚೆಯಿಂದ ವಿಹರಿಸುವ ಬಯಕೆಯಿಂದ ಹೊರಟಿದ್ದ ದಂಪತಿಗಳು, "ಸ್ವರ್ಗಕ್ಕೆ ಕಿಚ್ಚು ಹಚ್ಚಲು" ಸನ್ನದ್ಧರಾಗಿದ್ದರು!. 
ಅನೇಕ ನವವಿವಾಹಿತರಂತೆ ಪ್ರಥಮ ರಾತ್ರಿಯಂದು ಕಾಣಿಸಿದ್ದ ಅಲ್ಪ ಸ್ವಲ್ಪ ಲಜ್ಜೆ ಸಂಕೋಚಗಳು ಒಂದೆರಡು ದಿನಗಳಲ್ಲಿ ಮಾಯವಾದಂತೆಯೇ, ನವ ದಂಪತಿಗಳು ದಿನದಲ್ಲಿ ಎರಡು ಮೂರು ಬಾರಿಯಾದರೂ ಅಂಗಸಂಗದ ಸುಖವನ್ನು ಸವಿಯಲಾರಂಭಿಸಿದ್ದರು. ಆದರೆ ವಾರ ಕಳೆಯುವಷ್ಟರಲ್ಲಿ ಮಾಧವಿಯನ್ನು ಕಾಡಲಾರಂಭಿಸಿದ ಪುಟ್ಟ ಸಮಸ್ಯೆಯೊಂದು ಬೆಟ್ಟದೋಪಾದಿಯಲ್ಲಿ ಬೆಳೆದು,ಇವರಿಬ್ಬರ ನಡುವೆ ಮನಸ್ತಾಪಕ್ಕೆ ಕಾರಣವೆನಿಸಿತ್ತು. 

ಪ್ರಾರಂಭಿಕ ಹಂತದಲ್ಲಿ ಸಂಭೋಗ ನಡೆಸಿದ ಬಳಿಕ ಮಾಧವಿಯ ಯೋನಿಯಲ್ಲಿ ಒಂದಿಷ್ಟು ನೋವು ಮತ್ತು ಉರಿಯೊಂದಿಗೆ ಉರಿಮೂತ್ರವೂ ಪ್ರಾರಂಭವಾಗಿತ್ತು. ಮುಂದಿನ ನಾಲ್ಕಾರು ದಿನಗಳಲ್ಲಿ ವಿಪರೀತವೆನಿಸಿದ ಈ ಸಮಸ್ಯೆಯಿಂದಾಗಿ, ಸಂಭೋಗಿಸಲು ಭಯಪಡುತ್ತಿದ್ದ ಪತ್ನಿಯ ವರ್ತನೆಗಳಿಂದ, ಮಧುಸೂಧನನಿಗೆ ಅಚ್ಚರಿಯಾಗಿತ್ತು. ಅಂತಿಮವಾಗಿ ಪತ್ನಿಯಿಂದ ವಿಷಯವೇನೆಂದು ಕೇಳಿ ತಿಳಿದುಕೊಂಡ ಆತನಿಗೆ, ಪತ್ನಿಯ ಶೀಲದ ಬಗ್ಗೆ ಸಂದೇಹ ಮೂಡಿದ್ದರಿಂದ ಆತನ ತಲೆಯು ಜೇನುಗೂಡಿನಂತಾಗಿತ್ತು. 

ಪರಊರಿನಲ್ಲಿ ಅನಿರೀಕ್ಷಿತವಾಗಿ ಉದ್ಭವಿಸಿದ ಸಮಸ್ಯೆಗೆ, ಪರಿಚಯವಿಲ್ಲದ ವೈದ್ಯರಿಂದ ಚಿಕಿತ್ಸೆ ಪಡೆಯಲು ಇಚ್ಚಿಸದ ದಂಪತಿಗಳು ತಮ್ಮ ಊರಿಗೆ ಮರಳಿದ್ದರು. ಬಳಿಕ ಕುಟುಂಬ ವೈದ್ಯರ ಸಲಹೆಯಂತೆ ಸ್ತ್ರೀರೋಗ ತಜ್ಞರನ್ನು ಭೇಟಿಯಾದರು. ದಂಪತಿಗಳ ಸಮಸ್ಯೆಯನ್ನು ಆಲಿಸಿದ ಕುಶಾಗ್ರಮತಿ ವೈದ್ಯರಿಗೆ, ಇವರಿಬ್ಬರೂ ಒಬ್ಬರನ್ನೊಬ್ಬರು ಸಂದೇಹಿಸುತ್ತಿರುವುದು ತಿಳಿಯಿತು. 

ಮಾಧವಿಯನ್ನು ಕೂಲಂಕುಶವಾಗಿ ಪರೀಕ್ಷಿಸಿದ ಬಳಿಕ ಪ್ರಯೋಗಾಲಯದಲ್ಲಿ ಕೆಲ ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸಿದ್ದ ವೈದ್ಯರಿಗೆ, ಸಮಸ್ಯೆಯ ಮೂಲವೆನೆಂದು ಪತ್ತೆಯಾಗಿತ್ತು. ತದನಂತರ ದಂಪತಿಗಳನ್ನು ಸಲಹಾ ಕೊಠಡಿಯಲ್ಲಿ ಕುಳ್ಳಿರಿಸಿದ ವೈದ್ಯರು ಮಾಧವಿಯ ಸಮಸ್ಯೆಯ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಅನೇಕ ಸ್ತ್ರೀಯರಲ್ಲಿ ಅಲ್ಪಾವಧಿಯಲ್ಲಿ ಅತಿಯಾದ ಸಂಭೋಗ ನಡೆಸುವುದರಿಂದ ಉದ್ಭವಿಸಬಲ್ಲ ಈ ಸಮಸ್ಯೆಯು " ಹನಿಮೂನ್ ಸಿಸ್ಟೈಟಿಸ್" ಎಂದು ಕರೆಯಲಾಗುತ್ತಿದ್ದು, ಇದು ಗುಹ್ಯರೋಗವಲ್ಲ ಎಂದಿದ್ದರು. ಜೊತೆಗೆ ದಂಪತಿಗಳು ನಿಗದಿತ ಅವಧಿಗೆ ಸೇವಿಸಬೇಕಾದ ಔಷದಗಳನ್ನು ನೀಡಿ, ಎರಡು ವಾರಗಳ ಕಾಲ "ಹಾಸಿಗೆ ಪಥ್ಯ" ವನ್ನು ಪರಿಪಾಲಿಸಲು ಆದೇಶಿಸಿದ್ದರು. 

ಅನಾವಶ್ಯಕವಾಗಿ ಪರಸ್ಪರರನ್ನು ಸಂದೆಹಿಸಿದ್ದ ದಂಪತಿಗಳು ವೈದ್ಯರ ಸಲಹೆ ಸೂಚನೆಗಳನ್ನು ಅಕ್ಷರಶಃ ಪಾಲಿಸಿದ ಪರಿಣಾಮವಾಗಿ ಸಮಸ್ಯೆಯೂ ಪರಿಹಾರಗೊಂಡಿತು. ಇದರೊಂದಿಗೆ ಇವರಿಬ್ಬರ ಮನಗಳಲ್ಲಿ ಮೂಡಿದ್ದ ಸಂದೇಹ- ಮನಸ್ತಾಪಗಳು ತಾವಾಗಿ ಮಾಯವಾಗಿದ್ದವು. 

ವಿಶೇಷವೆಂದರೆ ಇಂತಹ ಸಮಸ್ಯೆ ಬಾಧಿಸಿದ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆಯಲು ಹಿಂಜರಿವ ದಂಪತಿಗಳು,ತಮ್ಮ ಸಂಗಾತಿಯಲ್ಲಿದ್ದ ಗುಪ್ತರೋಗವೊಂದು ಇದೀಗ ತಮಗೂ ಹರಡಿದೆಯೆಂದು ಸಂದೇಹಿಸುವುದುಂಟು. ತತ್ಪರಿಣಾಮವಾಗಿ ಇವರಿಬ್ಬರ ನಡುವೆ ತಲೆದೋರುವ ಸಂದೇಹ- ವಿರಸಗಳು ಮಿತಿಮೀರಿದಲ್ಲಿ, ವಿವಾಹ ವಿಚ್ಛೇದನದಲ್ಲಿ ಪರ್ಯವಸಾನಗೊಳ್ಳುವುದು ಅಪರೂಪವೇನಲ್ಲ. 

ಏನಿದು ಸಿಸ್ಟೈಟಿಸ್ ?

ಹಲವಾರು ಕಾರಣಗಳಿಂದ ಉದ್ಬವಿಸಬಲ್ಲ" ಮೂತ್ರಾಶಯದ ಉರಿಯೂತ" ವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಸಿಸ್ಟೈಟಿಸ್ ಎಂದು ಕರೆಯುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಇದಕ್ಕೆ ರೋಗಕಾರಕ ಸೂಕ್ಷ್ಮಾಣು ಜೀವಿಗಳ "ಸೋಂಕು" ಕಾರಣವಾಗಿರುತ್ತದೆ. ಇದಲ್ಲದೆ ವಿವಿಧ ವಸ್ತುಗಳ ಹಾಗೂ ರಾಸಾಯನಿಕ ದ್ರವ್ಯಗಳ ಅಲರ್ಜಿ, ಪ್ರತಿರೋಧಕ ಪ್ರತಿಕ್ರಿಯೆ ಮತ್ತು ಶಾರೀರಿಕ ತೊಂದರೆಗಳೂ ಕಾರಣವೆನಿಸುವ ಸಾಧ್ಯತೆಗಳಿವೆ. ಇದಲ್ಲದೆ ಅನೇಕರಲ್ಲಿ ಮೂತ್ರಾಶಯದ ಉರಿಯೂತದೊಂದಿಗೆ ಮೂತ್ರ ವಿಸರ್ಜನಾ ನಾಳದ ಉರಿಯೂತವೂ ಉದ್ಭವಿಸಬಲ್ಲದು. 

ಈ ಸಮಸ್ಯೆಗೆ ಕಾರಣವೆನಿಸುವ ಸೊಂಕುಗಳಲ್ಲಿ ಗೊನೋರಿಯ,ಹಲವಾರು ವಿಧದ ಬ್ಯಾಕ್ಟೀರಿಯ ಮತ್ತು ವೈರಸ್ ಗಳು,ಮೂತ್ರಪಿಂಡ ಹಾಗೂ ಮೂತ್ರನಾಳಗಳಲ್ಲಿ ಇದ್ದಂತಹ ಸೋಂಕುಗಳು,ಮೂತ್ರಾಂಗಗಳಲ್ಲಿ ಉದ್ಭವಿಸಬಲ್ಲ ಕಲ್ಲುಗಳಿಂದ ಉಂಟಾಗಬಲ್ಲ ಅಡೆತಡೆಗಳು, ಟ್ರೈಕೊಮೊನಾಸ್ ವಜೈನಾಲಿಸ್ ಎನ್ನುವ ಪಾರಸೈಟ್, ಕ್ಯಾಂಡಿಡಾ ಅಲ್ಬಿಕಾನ್ಸ್ ಎನ್ನುವ ಫಂಗಸ್ ಮತ್ತು ಆಘಾತಗಳು ಪ್ರಮುಖವಾಗಿವೆ. 

ಪುರುಷರು ಹಾಗೂ ಮಹಿಳೆಯರನ್ನು ಪೀಡಿಸಬಲ್ಲ ಮೂತ್ರಾಶಯದ ಉರಿಯೂತವು ವಿಶೇಷವಾಗಿ ಮಹಿಳೆಯರನ್ನು ಪದೇಪದೇ ಕಾಡುತ್ತದೆ. ಬಹುತೇಕ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿಕನಿಷ್ಠ  ಒಂದುಬಾರಿಯಾದರೂ ಅನುಭವಿಸುವ ಈ ಸಮಸ್ಯೆಗೆ ನಿರ್ದಿಷ್ಟ ಕಾರಣಗಳೂ ಇವೆ. ಮಹಿಳೆಯರಲ್ಲಿ ಮೂತ್ರ ವಿಸರ್ಜನಾಂಗ ಹಾಗೂ ಪ್ರಜನನಾಂಗಗಳ ರಚನೆಯಲ್ಲಿನ ವೈಶಿಷ್ಟ್ಯದಿಂದಾಗಿ, ಇವರಲ್ಲಿ ಬಾಹ್ಯ ಸೋಂಕುಗಳು ಸುಲಭದಲ್ಲೇ ಒಳಗೆ ಪ್ರವೇಶಗಳಿಸಲು ಅವಕಾಶ ನೀಡುತ್ತದೆ. ಜೊತೆಗೆ ಮಹಿಳೆಯರ ಮೂತ್ರ ವಿಸರ್ಜನಾ ನಾಳವು ಕೇವಲ ನಾಲ್ಕು ಸೆಂಟಿಮೀಟರ್ ಉದ್ದವಿರುವುದರಿಂದ, ರೋಗಾಣುಗಳು ಮೂತ್ರಾಶಯವನ್ನು ಪ್ರವೇಶಿಸಲು ಸಾಕಷ್ಟು ದೂರ ಚಲಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಅದೇ ರೀತಿಯಲ್ಲಿ ಮೂತ್ರ ವಿಸರ್ಜನಾ ನಾಲವು ಚರ್ಮಕ್ಕೆ ಹೊಂದಿಕೊಂಡಿದ್ದು, ಈ ಭಾಗವು ರೋಗಾಣುಗಳ ತಾಣವಾಗಿರುತ್ತದೆ. ಇದು ಸಾಲದೆನ್ನುವಂತೆ ಸ್ತ್ರೀಯರ ಶರೀರದಲ್ಲಿ ಯೋನಿ ಹಾಗೂ ಗುದದ್ವಾರಗಳು ಅತ್ಯಂತ ಸಮೇಪವಿರುವುದರಿಂದಾಗಿ, ಇವೆರಡೂ ದ್ವಾರಗಳಲ್ಲಿ ಇರಬಹುದಾದ ರೋಗಾಣುಗಳು ಸುಲಭವಾಗಿ ಶರೀರದ ಒಳಭಾಗವನ್ನು ಪ್ರವೇಶಿಸಿ ಕಾಯಿಲೆಗಳಿಗೆ ಕಾರಣವೆನಿಸುತ್ತವೆ. ವಿಶೇಷವೆಂದರೆ ಚರ್ಮದ ಹೊರಮೈಯಲ್ಲಿರುವ ರೋಗಾಣುಗಳು ಸಾಮಾನ್ಯವಾಗಿ ಯಾವುದೇ ತೊಂದರೆಗಳಿಗೆ ಕಾರಣವೆನಿಸದಿದ್ದರೂ, ಮೂತ್ರ ವಿಸರ್ಜನಾ ನಾಳ ಅಥವಾ ಮೂತ್ರಾಶಯದಲ್ಲಿ ಪ್ರವೇಶಗಳಿಸಿದ ಬಳಿಕ ರೋಗಕಾರಕಗಳಾಗಿ ಪರಿಣಮಿಸುವ ಸಾಧ್ಯತೆಗಳಿವೆ. 

ಆದರೆ ಪುರುಷರ ಮೂತ್ರ ವಿಸರ್ಜನಾ ನಾಳವು ಸುಮಾರು ೨೦ ಸೆಂಟಿಮೀಟರ್ ಉದ್ದವಿದ್ದು, ಶಿಶ್ನದ ಮುಂದೊಗಲು ಮಹಿಳೆಯರ ಯೋನಿದ್ವಾರದಲ್ಲಿರುವಷ್ಟು ರೋಗಾಣುಗಳಿಗೆ ಆಶ್ರಯ ನೀಡುವುದಿಲ್ಲ. ಪುರುಷರಲ್ಲಿ ಮೂತ್ರಕೋಶದ ಹಾಗೂ ಮೂತ್ರ ವಿಸರ್ಜನಾ ನಾಳದ ಉರಿಯೂತಗಳು ಅಪರೂಪವೆನಿಸಲು ಇದೊಂದು ಪ್ರಮುಖ ಕಾರಣವೂ ಹೌದು. 

ವಿಶೇಷವಾಗಿ ವಿವಾಹಿತ ಮಹಿಳೆಯರಲ್ಲಿ ಹಾಗೂ ಅವಿವಾಹಿತರಾಗಿದ್ದೂ ಪರಪುರುಷರೊಂದಿಗೆ ದೈಹಿಕ ಸಂಬಂಧ ಹೊಂದಿರುವ ಮಹಿಳೆಯರಲ್ಲಿ ಈ ಸಮಸ್ಯೆ ತುಸು ಅಧಿಕವೆನಿಸಲು, ಇಂತಹ ಶಾರೀರಿಕ ಸಂಬಂಧಗಳೇ ಕಾರಣವೆನಿಸುತ್ತದೆ. ಏಕೆಂದರೆ ಸ್ತ್ರೀಯರ ಶರೀರದಲ್ಲಿ ಮೂತ್ರ ವಿಸರ್ಜನಾ ನಾಳ ಹಾಗೂ ಮೂತ್ರಾಶಯದ ತಳಭಾಗಗಳು ಯೋನಿಯ ಮುಂಭಾಗದ ಗೋಡೆಗೆ ಅತಿ ಸನಿಹದಲ್ಲಿದ್ದು,ಸಂಭೋಗದ ಸಂದರ್ಭದಲ್ಲಿ ಘರ್ಷಣೆಯಿಂದಾಗಿ ಆಘಾತಗೊಳ್ಳುವ ಸಾಧ್ಯತೆಗಳಿವೆ. ತಜ್ಞವೈದ್ಯರ ಅಭಿಪ್ರಾಯದಂತೆ ಮೂತ್ರ ವಿಸರ್ಜನಾ ನಾಳದ ಉರಿಯೂತವನ್ನು ಹುಟ್ಟುಹಾಕಲು, ಘರ್ಷಣೆಯಿಂದ ಉಂಟಾಗುವ ಆಘಾತವೇ ಸಾಕಾಗುವುದು. ಅಂತೆಯೇ ಸಂಭೋಗದ ಸಮಯದಲ್ಲಿ ಕೆಲ ರೋಗಾಣುಗಳು ಮೂತ್ರ ವಿಸರ್ಜನಾ ನಾಳ ಮತ್ತು ಮೂತ್ರಕೋಶವನ್ನು ಪ್ರವೇಶಿಸಬಹುದಾದರೂ, ನಮ್ಮ ದೇಹದ ಸ್ವಾಭಾವಿಕ ರೋಗಪ್ರತಿರೋಧಕ ಶಕ್ತಿಯು ಇವುಗಳಿಂದ ಉದ್ಭವಿಸಬಲ್ಲ ಸೋಂಕನ್ನು ತಡೆಗಟ್ಟಲು ಯಶಸ್ವಿಯಾಗುವುದು. ಆದರೆ ಆಘಾತದ ತೀವ್ರತೆಯಿಂದಾಗಿ ಸ್ತ್ರೀಯರ ಯೋನಿಯಲ್ಲಿನ ಟಿಶ್ಯೂಗಳಿಗೆ ಹಾನಿಯಾದಲ್ಲಿ,ಸೋಂಕು ಉದ್ಭವಿಸುವ ಸಾಧ್ಯತೆಗಳು ಹೆಚ್ಚುತ್ತವೆ. ಇದೇ ಕಾರಣದಿಂದಾಗಿ ಅಲ್ಪಾವಧಿಯಲ್ಲಿ ಅತಿಯಾಗಿ ಸಂಭೋಗ ಸುಖವನ್ನು ಸವಿದಿದ್ದ ಮಾಧವಿಗೆ, ಸುಲಭದಲ್ಲೇ ಸೋಂಕು ಉದ್ಭವಿಸಿ ಕ್ಷಿಪ್ರಗತಿಯಲ್ಲಿ ಉಲ್ಬಣಿಸಿತ್ತು!. 

ಕೆಲ ಸ್ತ್ರೀಯರಲ್ಲಿ ಅಪರೂಪದಲ್ಲೊಮ್ಮೆ ಸಂಭೋಗ ನಡೆಸಿದರೂ, ಪ್ರತಿಬಾರಿ ಉದ್ಭವಿಸುವ ಈ ಸಮಸ್ಯೆಯಿಂದಾಗಿ ಇಂತಹ ಮಹಿಳೆಯರಿಗೆ ಸಂಭೋಗದ ಬಗ್ಗೆ ಅತೀವ ಹೆದರಿಕೆಗೆ ಕಾರಣವೆನಿಸುತ್ತದೆ. ತತ್ಪರಿಣಾಮವಾಗಿ ಸಾಕಷ್ಟು ಉದ್ರೇಕಿತರಾಗದ ಸ್ತ್ರೀಯರ ಯೋನಿಯಲ್ಲಿ ಸ್ವಾಭಾವಿಕ ಸ್ರಾವಗಳ ಕೊರತೆಯಿಂದಾಗಿ, ಸಂಭೋಗದ ಸಂದರ್ಭದಲ್ಲಿ ವಿಪರೀತ ನೋವು ಮತ್ತು ಆಘಾತಗಳಿಗೆ ಕಾರಣವೆನಿಸುತ್ತದೆ. ಮಾತ್ರವಲ್ಲ, ಇದೇ ಕಾರಣದಿಂದಾಗಿ ಉದ್ಭವಿಸುವ ಸಮಸ್ಯೆಗಳಿಂದಾಗಿ ದಂಪತಿಗಳ ನಡುವೆ ಅನಾವಶ್ಯಕ ವಿರಸಕ್ಕೆ ಮೂಲವೆನಿಸುತ್ತದೆ!. 

ರೋಗ ಲಕ್ಷಣಗಳು 

ಮೂತ್ರ ವಿಸರ್ಜಿಸುವಾಗ ಹಾಗೂ ತದನಂತರ ಅತಿಯಾದ ಉರಿ, ಮೂತ್ರ ವಿಸರ್ಜಿಸಿದ ಕೊಂಚ ಹೊತ್ತಿನಲ್ಲೇ ಮತ್ತೆ ಮೂತ್ರ ವಿಸರ್ಜಿಸಬೇಕೆನ್ನುವ ಸಂವೇದನೆ ಮತ್ತು  ಅಲ್ಪ ಪ್ರಮಾಣದಲ್ಲಿ ಕಿಬ್ಬೊಟ್ಟೆಯಲ್ಲಿ ನೋವು, ಈ ವ್ಯಾಧಿಯ ಪ್ರಮುಖ ಲಕ್ಷಣಗಳಾಗಿವೆ. ವ್ಯಾಧಿಯ ಬಾಧೆ ಅತಿಯಾದ ಸಂದರ್ಭದಲ್ಲಿ ಕಿಬ್ಬೊಟ್ಟೆಯಲ್ಲಿ ಮೂತ್ರ ವಿಸರ್ಜನೆಗೆ ಮುನ್ನ, ವಿಸರ್ಜಿಸುವಾಗ ಮತ್ತು ವಿಸರ್ಜಿಸಿದ ಬಳಿಕ ವಿಪರೀತ ನೋವು ಹಾಗೂ ಕೆಲವರಲ್ಲಿ ಅತಿಮೂತ್ರ ಅಥವಾ ಅತ್ಯಲ್ಪ ಮೂತ್ರ ವಿಸರ್ಜನೆ,ಚಳಿಜ್ವರ,ದುರ್ವಾಸನಾಯುಕ್ತ  ಅಥವಾ ಕಲ್ಮಶಯುಕ್ತ ನೀರಿನಂತಹ ಅಥವಾ ರಕ್ತಮಿಶ್ರಿತ ಮೂತ್ರ ವಿಸರ್ಜನೆ ಕಂಡುಬರುತ್ತದೆ. ಸುದೀರ್ಘಕಾಲ ಈ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಮೂತ್ರ ವಿಸರ್ಜನೆಯ ಸಂವೇದನೆ ಪ್ರತ್ಯಕ್ಷವಾದೊಡನೆ ಇದನ್ನು ನಿಯಂತ್ರಿಸಲು ಅಸಾಧ್ಯವೆನಿಸುವುದರಿಂದ ಅನಿಯಂತ್ರಿತವಾಗಿ ಮೂತ್ರ ವಿಸರ್ಜಿಸಲ್ಪಡುತ್ತದೆ. 

ಚಿಕಿತ್ಸೆ 

ಅವಶ್ಯಕ  ಪರೀಕ್ಷೆಗಳ ಮೂಲಕ ಮೂತ್ರಾಶಯದ ಉರಿಯೂತದ ಸಮಸ್ಯೆಗೆ ನಿರ್ದಿಷ್ಟ ಕಾರಣವನ್ನು ಪತ್ತೆಹಚ್ಚಿದ ಬಳಿಕ ವೈದ್ಯರು ಇದಕ್ಕೆ ಅನುಗುಣವಾಗಿ ಸೂಚಿಸುವ ಚಿಕಿತ್ಸೆಯನ್ನು ಕ್ರಮಬದ್ಧವಾಗಿ ಪಡೆದುಕೊಳ್ಳುವ ಮೂಲಕ, ಈ ಸಮಸ್ಯೆಯನ್ನು ಪರಿಹರಿಸುವುದು ಸುಲಭಸಾಧ್ಯವೂ ಹೌದು. 

ಔಷದ ಸೇವನೆಯೊಂದಿಗೆ ದಿನನಿತ್ಯ ಕನಿಷ್ಠ ಮೂರು- ನಾಲ್ಕು ಲೀಟರ್ ನೀರನ್ನು ಕುಡಿಯುವುದರಿಂದ, ಈ ಸಮಸ್ಯೆಯು ಕ್ಷಿಪ್ರಗತಿಯಲ್ಲಿ ಬಗೆಹರಿಯುವುದು. ಕೆಲ ವಿಧದ ಸೋಪುಗಳು,ಟಾಲ್ಕಂ ಪೌಡರ್,ಸುವಾಸನಾ ದ್ರವ್ಯಗಳು, ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್- ಟ್ಯಾಮ್ಪನ್ ಗಳು ಈ ಸಮಸ್ಯೆಗೆ ಕಾರಣವೆನಿಸುವುದರಿಂದ, ಇವುಗಳ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುವುದು. 

ಸುದೀರ್ಘಕಾಲ ಈ ಸಮಸ್ಯೆಯಿಂದ ಬಳಲುತ್ತಿರುವವರು "ಯುರಾಲಜಿಸ್ಟ್" ರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆಯುವುದು ನಿಶ್ಚಿತವಾಗಿಯೂ ಹಿತಕರವೆನಿಸುವುದು. 

ನಿಮಗಿದು ತಿಳಿದಿರಲಿ 

ನಿಮ್ಮನ್ನು ಬಾಧಿಸುವ ಯಾವುದೇ ಆರೋಗ್ಯದ ಸಮಸ್ಯೆಗಳ ಬಗ್ಗೆ ಅಯಾಚಿತ- ಉಚಿತ ಸಲಹೆಗಳನ್ನು ನೀಡುವ ಬಂಧುಮಿತ್ರರ ಬಳಿ ಚರ್ಚಿಸದಿರಿ. ಉರಿಮೂತ್ರ ಬಾಧಿಸಿದೊಡನೆ "ಉಷ್ಣ" ವಾಗಿದೆಯೆಂದು ನೀವಾಗಿ ನಿರ್ಧರಿಸಿ, ನಾಲ್ಕಾರು ಎಳನೀರುಗಳನ್ನು ಕುಡಿಯುವುದರಿಂದ ಈ ಪೀಡೆ ಪರಿಹಾರವಾಗದು. ಈ ಸ್ವಯಂ ಚಿಕಿತ್ಸೆಯಿಂದ ನಿಮ್ಮ ಸಮಸ್ಯೆ ಕೊಂಚಮಟ್ಟಿಗೆ ಶಮನಗೊಂಡರೂ, ಸೋಂಕಿನಿಂದ ಉದ್ಭವಿಸಿರುವುದಾದಲ್ಲಿ ಇದು ವ್ಯರ್ಥವೆನಿಸುವುದು. ನಾಲ್ಕಾರು ದಿನಗಳ ಕಾಲ ದಿನದಲ್ಲಿ ಹಲವಾರು ಎಳನೀರುಗಳಿಗಾಗಿ ನೀವು ವ್ಯಯಿಸುವ ಹಣಕ್ಕಿಂತ, ಇದೇ ಅವಧಿಯಲ್ಲಿ ವೈದ್ಯರು ನೀಡುವ ಚಿಕಿತ್ಸೆಯ ವೆಚ್ಚ ನಿಶ್ಚಿತವಾಗಿ ಕಡಿಮೆಯೆನಿಸುವುದು. ಇದೇ ಕಾರಣದಿಂದಾಗಿ ನಿಮ್ಮ ನಂಬಿಗಸ್ತ ಕುಟುಂಬ ವೈದ್ಯರ ಅಥವಾ ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ಸೂಕ್ತ ಸಮಯದಲ್ಲಿ ಪಡೆದುಕೊಂಡಲ್ಲಿ, ನಿಮ್ಮ ಸಮಸ್ಯೆ ಉಲ್ಬಣಿಸುವುದನ್ನು ತಡೆಗಟ್ಟುವುದರೊಂದಿಗೆ ಕ್ಷಿಪ್ರ ಪರಿಹಾರವೂ ಲಭಿಸುವುದರಲ್ಲಿ ಸಂದೇಹವಿಲ್ಲ. ಅಂತೆಯೇ ವ್ಯಾಧಿ ಬಾಧಿಸಿರುವ ಅವಧಿ ಮತ್ತು ಇದರ ತೀವ್ರತೆಗೆ ಅನುಗುಣವಾಗಿ ಚಿಕಿತ್ಸೆಯ ಅವಧಿ ಹೆಚ್ಚುವುದರಿಂದ, ಅನಾವಶ್ಯಕ ವಿಳಂಬದಿಂದಾಗಿ ಸುದೀರ್ಘಕಾಲ ಔಷದ ಸೇವನೆ ಅನಿವಾರ್ಯವೆನಿಸೀತು. 

ವಿವಾಹಿತರಲ್ಲಿ ಅದರಲ್ಲೂ ವಿಶೇಷವಾಗಿ ನವವಿವಾಹಿತರಲ್ಲಿ ಇಂತಹ ಸಮಸ್ಯೆಗಳು ತಲೆದೋರಿದಾಗ, ಅಕಾರಣವಾಗಿ ಸಂಗಾತಿಯನ್ನು ಸಂದೆಹಿಸಿ ಸಂಸಾರದಲ್ಲಿ ವಿರಸಕ್ಕೆ ಅವಕಾಶವನ್ನು ಕಲ್ಪಿಸದಿರಿ. ಜೊತೆಗೆ ಈ ಬಗ್ಗೆ ನಿಮ್ಮ ಪರಮಾಪ್ತ ಮಿತ್ರರ ಬಳಿ ಚರ್ಚಿಸಿ,ಅಯಾಚಿತ ಸಲಹೆಯನ್ನು ಪಡೆದು ಕೊರಗದಿರಿ. ಇದಕ್ಕೆ ಬದಲಾಗಿ ನಿಮ್ಮ ಪರಿಚಿತ ವೈದ್ಯರ ಬಳಿ ಸಲಹೆ- ಚಿಕಿತ್ಸೆಗಳನ್ನು ಪಡೆದುಕೊಳ್ಳಿರಿ. ಇವೆಲ್ಲಕ್ಕೂ ಮಿಗಿಲಾಗಿ ನಿಮ್ಮ  ಬಂಧುಮಿತ್ರರು ಇದೇ ರೀತಿಯ ಸಮಸ್ಯೆಗಳ ಬಗ್ಗೆ ನಿಮ್ಮಲ್ಲಿ ಸಲಹೆಯನ್ನು ಅಪೇಕ್ಷಿಸಿದಲ್ಲಿ, ಅವರ ಕುಟುಂಬ ವೈದ್ಯರ ಸಲಹೆ ಪಡೆಯುವಂತೆ ಸೂಚಿಸಲು ಮರೆಯದಿರಿ!. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ೨೭-೧೦-೨೦೦೫ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 

Friday, August 30, 2013

Potato- Healthy food



                                      ಆರೋಗ್ಯದಾಯಕ ಆಲೂಗಡ್ಡೆ!

ಕಳೆದ ಒಂದೆರಡು ದಶಕಗಳಿಂದ ಅಬಾಲವೃದ್ಧರನ್ನು ಬಾಧಿಸುತ್ತಿರುವ "ಗ್ಯಾಸ್ ಟ್ರಬಲ್ " ಎನ್ನುವ ವಿಶಿಷ್ಟ ಸಮಸ್ಯೆಗೆ ಕಾರಣವೆನಿಸುವ ಆಹಾರ ಪದಾರ್ಥಗಳಲ್ಲಿ, ಬಹುತೇಕ ಜನರ ಅಭಿಪ್ರಾಯದಂತೆ ಆಲೂಗಡ್ಡೆಗೆ ಅಗ್ರಸ್ಥಾನ ಸಲ್ಲುತ್ತದೆ. ಆದರೆ ಈ ವಿಚಾರವನ್ನು ಸಮರ್ಥಿಸುವ ವಿದ್ಯಾವಂತರಿಗೂ, ಆರೋಗ್ಯದಾಯಕ ಆಲೂಗಡ್ಡೆಯಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿದಿಲ್ಲ. ಈ ಬಗ್ಗೆ ನೀವು ತಿಳಿದಿರಲೇ ಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ. 
----------                   ------------------                                   ------------------                      -------------------              ----------------

ಪ್ರಪಂಚದಾದ್ಯಂತ ಅತಿ ಹೆಚ್ಚು ಜನರು ಬೆಳೆಸಿ ಬಳಸುವ ತರಕಾರಿಗಳಲ್ಲಿ ಆಲೂಗಡ್ಡೆ ಅರ್ಥಾತ್ ಬಟಾಟೆಯು ಮಹತ್ವಪೂರ್ಣ ಸ್ಥಾನವನ್ನು ಗಳಿಸಿದೆ. ವೈವಿಧ್ಯಮಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ, ಎಲ್ಲ ಋತುಗಳಲ್ಲೂ ಸುಲಭವಾಗಿ ಲಭಿಸುವ ಮತ್ತು ಅಸಂಖ್ಯ ಸ್ವಾದಿಷ್ಟ ಖಾದ್ಯಗಳಲ್ಲಿ ಬಳಸಲ್ಪಡುವ ಬಟಾಟೆಯ ಬಗ್ಗೆ, ಭಾರತೀಯರಲ್ಲಿ ಸಾಕಷ್ಟು ತಪ್ಪುಕಲ್ಪನೆಗಳಿವೆ. ಬಟಾಟೆಯನ್ನು ಭಕ್ಷಿಸುವುದರಿಂದ ವಾಯುಬಾಧೆ ಉರುಫ್ ಗ್ಯಾಸ್ ಟ್ರಬಲ್ ಬಾಧಿಸುವುದೆಂದು ನಂಬಿರುವುದು ಇವುಗಳಲ್ಲಿ ಪ್ರಮುಖವಾಗಿದೆ!. 

ಪಟಾಟ ಯಾನೆ ಪೊಟೆಟೊ 

ಮೂಲತಃ ಸ್ಪಾನಿಶ್ ಭಾಷೆಯಲ್ಲಿ "ಪಟಾಟ" ಎನ್ನುವ ನಾಮಧೇಯದ ಬಟಾಟೆಯು, ಆಂಗ್ಲರ ಬಾಯಲ್ಲಿ" ಪೊಟೆಟೊ " ಎನಿಸಿಕೊಂಡ ಬಳಿಕ, ಕನ್ನಡಿಗರ ನಾಡಿನಲ್ಲಿ ಬಟಾಟೆ ಎಂದು ಪರಿವರ್ತನೆಗೊಂಡಿತ್ತು. ಉತ್ತರ ಭಾರತದಲ್ಲಿ "ಆಲೂ" ಎಂದುಕರೆಯಲ್ಪಡುವ ಬಟಾಟೆಯು, ಕನ್ನಡಿಗರ ಆಡುಭಾಷೆಯಲ್ಲಿ ಆಲೂಗಡ್ಡೆ ಎಂದೂ ಕರೆಯಲ್ಪಡುತ್ತದೆ. ಸಸ್ಯಶಾಸ್ತ್ರದಲ್ಲಿ "ಸೊಲೆನಮ್ ಟ್ಯೂಬರೋಸಂ"ಎಂದು ಹೆಸರಿಸಲ್ಪಟ್ಟಿರುವ ಈ ಗಡ್ದೆಯು, ಸತ್ವಭರಿತ ಪರಿಪೂರ್ಣ ಆಹಾರವೂ ಹೌದು. ಭಾರತೀಯರ ದೈನಂದಿನ ಆಹಾರದಲ್ಲಿ ಅಕ್ಕಿ,ಗೋಧಿ,ರಾಗಿ ಹಾಗೂ ಜೋಳಗಳನ್ನು ಬಳಸುವಂತೆಯೇ, ಫ್ರಾನ್ಸ್, ಅಯರ್ಲ್ಯಾಂಡ್, ಇಂಗ್ಲಂಡ್ ಮತ್ತಿತರ ದೇಶಗಳ ಜನರು ದಿನನಿತ್ಯ ಬಟಾಟೆಯನ್ನು ಸೇವಿಸುತ್ತಾರೆ!. 

ಪೂರ್ವೇತಿಹಾಸ 

ಪೋರ್ಚುಗೀಸರೊಂದಿಗೆ ಭಾರತದ ನೆಲದಲ್ಲಿ ಕಾಲಿರಿಸಿ ಬೇರೂರಿದ ಬಟಾಟೆಯನ್ನು, ದೇಶದ ವಿವಿಧ ಪ್ರಾಂತ್ಯಗಳಿಗೆ ಪರಿಚಯಿಸಿದ ಖ್ಯಾತಿ ಈಸ್ಟ್ ಇಂಡಿಯಾ ಕಂಪೆನಿಗೆ ಸಲ್ಲುತ್ತದೆ. ಅತ್ಯಲ್ಪ ಸಮಯದಲ್ಲೇ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದ್ದ ಬಟಾಟೆಯನ್ನು," ಉಪವಾಸ ವೃತ" ವನ್ನು ಪರಿಪಾಲಿಸುವ ದಿನಗಳಲ್ಲೂ ಸೇವಿಸಬಹುದು ಎನ್ನುವ ನಿರ್ಣಯವನ್ನು ಧಾರ್ಮಿಕ ನಾಯಕರ ಸಮ್ಮೇಳನವೊಂದರಲ್ಲಿ ಅನೇಕ ವರ್ಷಗಳ ಹಿಂದೆಯೇ ಅಂಗೀಕರಿಸಲಾಗಿತ್ತು!. 

ದಕ್ಷಿಣ ಅಮೇರಿಕ ಆಲೂಗಡ್ಡೆಯ ತವರೂರು ಎನ್ನುವ ಪ್ರತೀತಿ ಇದ್ದರೂ,ಸಸ್ಯಶಾಸ್ತ್ರ ತಜ್ಞರ ಅಭಿಪ್ರಾಯದಂತೆ ಚಿಲಿ,ಪೆರು ಮತ್ತು ಬೊಲಿವಿಯ ದೇಶಗಳಲ್ಲಿ ಬೆಳೆಯುತ್ತಿದ್ದ ಸಸ್ಯದ ತಳಿಯೊಂದು ಇದರ ಮೂಲವಾಗಿದೆ. ಸುಮಾರು ೪೦೦ ವರ್ಷಗಳ ಹಿಂದೆಯೇ ಈ ದೇಶಗಳಲ್ಲಿನ ಇಂಕಾ ಇಂಡಿಯನ್ ಜನರು ಬಟಾಟೆಯನ್ನು ಬೆಳೆಸುತ್ತಿದ್ದರು. ಸ್ಪಾನಿಶ್ ದೇಶದ ಅನ್ವೇಷಕರು ದಕ್ಷಿಣ ಅಮೇರಿಕಾದಲ್ಲಿ ಬಟಾಟೆಯನ್ನು ಸವಿದ ಮೊದಲ ಯುರೋಪಿಯನರೂ ಹೌದು. ಈ ಅನ್ವೇಷಕರಿಂದಾಗಿ ೧೫೦೦ ರ ಮಧ್ಯಭಾಗದಲ್ಲಿ ಯುರೋಪಿನಲ್ಲಿ ಬಟಾಟೆಯು ಜನಪ್ರಿಯವೆನಿಸಿತು. ಇದೇ ಸಮಯದಲ್ಲಿ ಬ್ರಿಟಿಷರು ಇಂಗ್ಲೆಂಡಿಗೆ ಕೊಂಡೊಯ್ದ "ಪೊಟೆಟೊ " , ಅಲ್ಲಿಂದ ಸ್ಕಾಟ್ಲ್ಯಾಂಡ್  ಮತ್ತು ಐರ್ಲ್ಯಾಂಡ್ ಗಳಿಗೂ ತಲುಪಿತು. ಈ ರೀತಿಯಲ್ಲಿ ದೇಶ ವಿದೇಶಗಳಿಗೆ ಪರಿಚಯಿಸಲ್ಪಟ್ಟ ಆಲೂಗಡ್ದೆಯು, ಐರ್ಲ್ಯಾಂಡ್ ನಲ್ಲಿ ಹುಲುಸಾಗಿ ಬೆಳೆಯಲಾರಂಭಿಸಿದ ಪರಿಣಾಮವಾಗಿ ಅಲ್ಲಿನ ಪ್ರಮುಖ ಬೆಳೆಯಾಗಿ ಸುಪ್ರಸಿದ್ಧವಾಯಿತು. ಜೊತೆಗೆ ಈ ದೇಶದ ಜನರ ದೈನಂದಿನ ಆಹಾರದ ಪ್ರಧಾನ ಹಾಗೂ ಅವಿಭಾಜ್ಯ ಅಂಗವೆನಿಸಿದ್ದ ಬಟಾಟೆಯು, ಇದೇ ಕಾರಣದಿಂದಾಗಿ "ಐರಿಶ್ ಪೊಟೆಟೊ" ಎಂದೇ ಕರೆಯಲ್ಪಡುತ್ತಿತ್ತು. ಇಷ್ಟು ಮಾತ್ರವಲ್ಲ, ಈ ಅದ್ಭುತ ಗಡ್ಡೆಯಲ್ಲಿ " ಕಾಮೋದ್ದೀಪಕ ಗುಣ" ಇರುವುದೆಂದು ಧೃಢವಾಗಿ ನಂಬಿದ್ದ ಅಲ್ಲಿನ ಜನತೆ, ಆಲೂಗಡ್ಡೆಯನ್ನು "ಲವ್ ಏಪ್ಪಲ್ " ಎಂದು ಕರೆಯುತ್ತಿದ್ದರು!. 

ಪ್ರಪ್ರಥಮವಾಗಿ ಯೂರೋಪಿನ ಮಾರುಕಟ್ಟೆಗಳಿಗೆ ಬಂದಿದ್ದ ಬಟಾಟೆಗಳು ತಮ್ಮ ತೂಕಕ್ಕಿಂತ ಅಧಿಕ ಪ್ರಮಾಣದ ಚಿನ್ನದಷ್ಟು ಬೆಳೆಬಾಳುತ್ತಿದ್ದವು. ಇದೇ ಕಾರಣದಿಂದಾಗಿ ಜನಸಾಮಾನ್ಯರ ಕೈಗೆಟುಕದ ಬಟಾಟೆಯು, ಇಂಗ್ಲೆಂಡ್ ನ ರಾಜಮನೆತನದ ಮತ್ತು ಗಣ್ಯವ್ಯಕ್ತಿಗಳಿಗೆ ಮಾತ್ರ ಲಭ್ಯವಾಗುತ್ತಿತ್ತು. ಕಾಲಕ್ರಮೇಣ ಸುಲಭಬೆಲೆಗೆ ಲಭಿಸಲಾರಂಭಿಸಿದ ಈ ಗಡ್ಡೆಗಳು, ಇಂಗ್ಲೆಂಡ್ ನ ಬೀದಿಬೀದಿಗಳಲ್ಲಿ "ಬೇಯಿಸಿದ ಬಿಸಿ ಬಟಾಟೆ " ಗಳನ್ನು ಮಾರಾಟ ಮಾಡುವಷ್ಟು ಬೇಡಿಕೆಯನ್ನು ಗಳಿಸಿದ್ದವು!. 

ಪೋಷಕಾಂಶಗಳ ಆಗರ 

ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಒಂದು ಮಧ್ಯಮ ಗಾತ್ರದ ಆಲೂಗಡ್ಡೆಯಲ್ಲಿ, ಒಂದು ಸೇಬು ಹಣ್ಣಿನಲ್ಲಿ ಇರುವಷ್ಟು ಅಥವಾ ಒಂದು ಲೋಟ ಕಿತ್ತಳೆ ಹಣ್ಣಿನ ರಸದಲ್ಲಿ ಇರುವಷ್ಟೇ ಕ್ಯಾಲರಿಗಳಿವೆ!. 

ಆಲೂಗಡ್ಡೆಯಲ್ಲಿ ಶೇ. ೮೦ ರಷ್ಟು ನೀರು ಹಾಗೂ ಶೇ. ರಷ್ಟು ಘನ ಪದಾರ್ಥಗಳಿದ್ದು, ಈ ಘನ ಪದಾರ್ಥಗಳಲ್ಲಿ ಶೇ. ೮೫ ರಷ್ಟು ಪಿಷ್ಟ ಹಾಗೂ ಶೇ. ೧೫ ರಷ್ಟು ಪ್ರೋಟೀನ್ ಗಳಿದ್ದು, ಇದರೊಂದಿಗೆ ಪ್ರಮುಖ ಜೀವಸತ್ವಗಳಾದ ನಯಾಸಿನ್,ಥಯಾಮಿನ್,ರೈಬೋಫ್ಲೇವಿನ್,ವಿಟಮಿನ್  ಸಿ ಗಳೊಂದಿಗೆ ಕಬ್ಬಿಣ,ಕ್ಯಾಲ್ಸಿಯಂ,ಮೆಗ್ನೆಸಿಯಂ, ಫಾಸ್ಫರಸ್,ಸಲ್ಫರ್,ಸೋಡಿಯಂ ಹಾಗೂ  ಪೊಟಾಸಿಯಂ ಇತ್ಯಾದಿ ಖನಿಜಗಳು ಮತ್ತು ಲವಣಗಳಿವೆ. ಸುಲಭದಲ್ಲೇ ಪಚನವಾಗುವ ಈ ಸ್ವಾದಿಷ್ಟ ತರಕಾರಿಯು, ಗ್ಯಾಸ್ ಟ್ರಬಲ್ ಗೆ ಕಾರಣವೆನಿಸುವುದಿಲ್ಲ. 

ನಮ್ಮ ಶರೀರಕ್ಕೆ ಒಂದುದಿನದಲ್ಲಿ ಬೇಕಾಗುವಷ್ಟು ವಿಟಮಿನ್ ಗಳಾದ ರೈಬೋಫ್ಲೇವಿನ್, ಮೂರರಿಂದ ನಾಲ್ಕು ಪಟ್ಟು ಥಯಾಮಿನ್, ಒಂದೂವರೆ ಪಟ್ಟು ಕಬ್ಬಿಣದ ಸತ್ವ,ಹತ್ತು ಪಟ್ಟು ವಿಟಮಿನ್ ಸಿ, ಒಂದು ಬಾಳೆಹಣ್ಣಿನಲ್ಲಿ ಇರುವುದಕ್ಕಿಂತ ಅಧಿಕ ಪೊಟಾಸಿಯಂ ಇತ್ಯಾದಿಗಳಿಂದ ಸಮೃದ್ಧವಾಗಿರುವ ಬಟಾಟೆಯಲ್ಲಿ ಉಪ್ಪು ಮತ್ತು ಕೊಬ್ಬಿನ ಅಂಶಗಳೇ ಇಲ್ಲ. ಇದೇ ಕಾರಣದಿಂದಾಗಿ ಅನೇಕರು ನಂಬಿರುವಂತೆ, ನಮ್ಮ ಶರೀರದ ತೂಕ ಮತ್ತು ಗಾತ್ರಗಳನ್ನು ಹೆಚ್ಚಿಸುವಲ್ಲಿ ಈ ಗಡ್ದೆಯು ಪಾತ್ರವಹಿಸುವ ಸಾಧ್ಯತೆಗಳೇ ಇಲ್ಲ!. 

ಆದರೆ  ಅಬಾಲವೃದ್ಧರು ಮೆಚ್ಚಿ ಸವಿಯುವ ಬಟಾಟೆಯ ಚಿಪ್ಸ್- ವೇಫರ್ಸ್ ಮತ್ತು ಎಣ್ಣೆ,ಬೆಣ್ಣೆ ಅಥವಾ ತುಪ್ಪಗಳನ್ನು ಧಾರಾಳವಾಗಿ ಬಳಸಿ ತಯಾರಿಸಿದ ರುಚಿಕರ ಖಾದ್ಯಗಳನ್ನು ಅತಿಯಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಹಿತಕರವಲ್ಲ. 

ಸಸ್ಯಾಹಾರ ಮತ್ತು ಮಾಂಸಾಹಾರ ಪ್ರಿಯರು ತಯಾರಿಸುವ ನೂರಾರು ಸ್ವಾದಿಷ್ಟ ಖಾದ್ಯಗಳಲ್ಲಿ ಬಳಸಲ್ಪಡುವ,ಯಾವುದೇ ಆಹಾರ ಪದಾರ್ಥಗಳೊಡನೆ ಸುಲಭವಾಗಿ ಬೆರೆತು ಅವುಗಳ ಸ್ವಾದವನ್ನು ಇನ್ನಷ್ಟು ಹೆಚ್ಚಿಸಬಲ್ಲ ಹಾಗೂ ,ಜೀವಸತ್ವಗಳು, ಖನಿಜಗಳು,ಲವಣಗಳು ಮತ್ತು ನಾರಿನಂಶಗಳ ಆಗರ ಎನಿಸಿರುವ ಬಟಾಟೆಯ ದೈನಂದಿನ ಸೇವನೆಯು, ನಿಮ್ಮ ಆರೋಗ್ಯದ ರಕ್ಷಣೆಯಲ್ಲಿ ಅತ್ಯಂತ ಉಪಯುಕ್ತವೆನಿಸುವುದು. 

ವಾಯುಕಾರಕ ದ್ರವ್ಯ 

ಬಟಾಟೆಯಂತಹ ಗಡ್ಡೆಗಳು ಹಾಗೂ ಬೇಳೆ- ಕಾಳುಗಳಲ್ಲಿ ಕ್ಷುಲ್ಲಕ ಪ್ರಮಾಣದಲ್ಲಿ " ಆಲ್ಫಾ ಗಾಲಾಕ್ಟೋಸ್ ಡೈಜೆಸ್ಟಿಂಗ್ ರೆಸಿನೋಸ್" ಎನ್ನುವ ದ್ರವ್ಯವಿರುವುದು ಕೆಲ ವರ್ಷಗಳ ಹಿಂದೆ ಪತ್ತೆಯಾಗಿತ್ತು. "ವಾಯು" ಉತ್ಪಾದಕ ಸಾಮರ್ಥ್ಯವನ್ನು ಹೊಂದಿರುವ ಈ ದ್ರವ್ಯವು, ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವ ಕೋಟ್ಯಂತರ ಜನರಲ್ಲಿ ಕ್ಷುಲ್ಲಕ ಪ್ರಮಾಣದ ಜನರನ್ನು ಪೀಡಿಸಬಲ್ಲದಾದರೂ, ಬಹುತೇಕ ಜನರಲ್ಲಿ ಯಾವುದೇ ತೊಂದರೆಗಳಿಗೆ ಕಾರಣವೆನಿಸುವುದಿಲ್ಲ. 

ಬಹುತೇಕ ಭಾರತೀಯರು ನಂಬಿರುವಂತೆ ಇಂತಹ ಆಹಾರ ಪದಾರ್ಥಗಳ ಸೇವನೆಯಿಂದ ತೀವ್ರ ಸ್ವರೂಪದ "ಗ್ಯಾಸ್ ಟ್ರಬಲ್ " ಬಾಧಿಸುವ ಸಾಧ್ಯತೆಗಳಿಲ್ಲ. ಏಕೆಂದರೆ ಇಂತಹ ಅಸಾಮಾನ್ಯ ತೊಂದರೆಗಳು ಬಟಾಟೆಯಂತಹ ಆಹಾರಸೇವನೆಯಿಂದ ಉದ್ಭವಿಸುವುದಾದಲ್ಲಿ,ಪ್ರಪಂಚದ ಬಹುತೇಕ ರಾಷ್ಟ್ರಗಳ ಅಧಿಕತಮ ಜನರು ಬಟಾಟೆಯನ್ನು ತಮ್ಮ ದೈನಂದಿನ ಆಹಾರವನ್ನಾಗಿ ಬಳಸುವ ಸಾಧ್ಯತೆಗಳೇ ಇರಲಿಲ್ಲ!. 

ಆದರೆ ತಥಾಕಥಿತ ಗ್ಯಾಸ್ ಟ್ರಬಲ್ ಪೀಡಿತ ವ್ಯಕ್ತಿಗಳು ಪ್ರತಿನಿತ್ಯ ನಿಗದಿತ ಸಮಯದಲ್ಲಿ ಅವಶ್ಯಕ ಪ್ರಮಾಣದ ಸಮತೋಲಿತ ಆಹಾರದ ಸೇವನೆ,ಕ್ರಮಬದ್ಧ ಶಾರೀರಿಕ ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವುದು, ಕನಿಷ್ಠ ೨-೩ ಲೀಟರ್ ನೀರನ್ನು ಕುಡಿಯುವುದು,ದುಶ್ಚಟಗಳಿಂದ ದೂರವಿರುವುದು ಮತ್ತು ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳುವಂತಹ  ಉಪಕ್ರಮಗಳನ್ನು ಪರಿಪಾಲಿಸಿದಲ್ಲಿ, ಗ್ಯಾಸ್ ಟ್ರಬಲ್ ನಂತಹ ಸಮಸ್ಯೆಗಳನ್ನು ದೂರವಿರಿಸಬಹುದು. ಜೊತೆಗೆ ನಿಮ್ಮ ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಬಹುದು. 

ಡಾ. ಸಿ . ನಿತ್ಯಾನಂದ ಪೈ,ಪುತ್ತೂರು  

ಉದಯವಾಣಿ ಪತ್ರಿಕೆಯ ೦೮-೧೨-೨೦೦೫ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 


Thursday, August 29, 2013

Fever



                                  ಜ್ವರ : ನೂರು ನೂರು ತರಹ !
ಸಾಮಾನ್ಯ ಶೀತದಿಂದ ಆರಂಭಿಸಿ, ಮಲೇರಿಯ, ಡೆಂಗೆ, ಟಿ. ಬಿ, ಏಡ್ಸ್ ಮತ್ತು ಕೆಲವಿಧದ ಕ್ಯಾನ್ಸರ್ ಗಳಲ್ಲೂ ಪ್ರಕಟವಾಗುವ ಜ್ವರ ಒಂದು ಲಕ್ಷಣವೇ ಹೊರತು ವ್ಯಾಧಿಯಲ್ಲ. ನೂರಾರು ವ್ಯಾಧಿಗಳು ಬಾಧಿಸಿದಾಗ ಪ್ರತ್ಯಕ್ಷವಾಗುವ ಜ್ವರದ ಬಗ್ಗೆ ಜನಸಾಮಾನ್ಯರಿಗೆ ಸಮರ್ಪಕ ಮಾಹಿತಿಗಳೇ ತಿಳಿದಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಅನೇಕ ರೋಗಿಗಳು ತಮ್ಮನ್ನು ಬಾಧಿಸುತ್ತಿರುವ ಜ್ವರವನ್ನು ತ್ವರಿತಗತಿಯಲ್ಲಿ ಗುಣಪಡಿಸಲು ವಿಫಲರಾದ ವೈದ್ಯರನ್ನು ಬದಲಾಯಿಸಲು ಹಿಂಜರಿಯುವುದಿಲ್ಲ!. 
----------------           --------------------                  --------------------------
ಅನುಭವೀ ವೈದ್ಯರ ಮನದಲ್ಲೂ ಸಂದೇಹ ಮೂಡಿಸಬಲ್ಲ ರೋಗಲಕ್ಷಣಗಳಲ್ಲಿ ಜ್ವರ ಪ್ರಮುಖವಾಗಿದೆ. ಹಲವಾರು ವ್ಯಾಧಿಗಳು ಬಾಧಿಸಿದ ಸಂದರ್ಭದಲ್ಲಿ ತಲೆದೋರುವ ಜ್ವರಕ್ಕೆ, ಮೂಲಕಾರಣ ಎನಿಸಿರುವ ವ್ಯಾಧಿಯನ್ನು ಬಹುತೇಕ ಸಂದರ್ಭಗಳಲ್ಲಿ ವೈದ್ಯರು ಸುಲಭವಾಗಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ನೀಡಬಲ್ಲರು. ಆದರೆ ಅಲ್ಪಪ್ರಮಾಣದ ರೋಗಿಗಳಲ್ಲಿ ಜ್ವರದ ಮೂಲವನ್ನು ಪತ್ತೆಹಚ್ಚುವುದು ಕಷ್ಟಸಾಧ್ಯವೆನಿಸುವುದು. ಇಂತಹ ಪ್ರಕರಣಗಳಲ್ಲಿ ಅವಶ್ಯಕ ಪರೀಕ್ಷೆಗಳನ್ನು ನಡೆಸಿ,ಇದಕ್ಕೆ ಕಾರಣವೆನಿಸಿರುವ ವ್ಯಾಧಿಯನ್ನು ನಿಖರವಾಗಿ ಪತ್ತೆಹಚ್ಚಿದ ಬಳಿಕ ನೀಡುವ ಚಿಕಿತ್ಸೆಯು ಫಲಪ್ರದ ಎನಿಸುವುದು.

ನರಹರಿಯ ಜ್ವರ 

ಭಾನುವಾರ ಸಂಜೆಯತನಕ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ನರಹರಿಗೆ, ನಡುರಾತ್ರಿಯಲ್ಲಿ ಕೆಂಡಾಮಂಡಲ ಜ್ವರ ಕಾಯಲಾರಂಭಿಸಿತ್ತು. ಮಗನ ನರಳುವಿಕೆಯ ಸದ್ದಿಗೆ ಎಚ್ಚೆತ್ತ ವೈದೇಹಿಯು, ತಕ್ಷಣ ಆತನ ಹಣೆಗೆ ತಣ್ಣೀರಿನ ಪಟ್ಟಿಹಾಕಿ ಜ್ವರದ ಮಾತ್ರೆಯೊಂದನ್ನು ನೀಡಿದ್ದಳು. ಮಗನ ಜ್ವರಕ್ಕೆ ಪುತ್ತೂರು ಜಾತ್ರೆಯಲ್ಲಿ ತಿಂದಿದ್ದ ಹಲವಾರು ಐಸ್ ಕ್ರೀಮ್ ಗಳೇ ಕಾರಣವೆಂದು ಆಕೆ ಭಾವಿಸಿದ್ದಳು. 

ಮರುದಿನ ಬೆಳಗ್ಗೆ ಸಮೀಪದ ವೈದ್ಯರಿಂದ ಮೂರು ಹೊತ್ತಿನ ಔಷದವನ್ನು ತಂದು ನೀಡಿದ ಬಳಿಕವೂ ಮಗನ ಜ್ವರ ಕಡಿಮೆಯಾಗದ ಕಾರಣದಿಂದಾಗಿ, ಮತ್ತೊಬ್ಬ ವೈದ್ಯರ ಔಷದವನ್ನು ತಂದಿದ್ದಳು. ಈ ವೈದ್ಯರ ಚಿಕಿತ್ಸೆಯೂ ಅಪೇಕ್ಷಿತ ಪರಿಣಾಮವನ್ನು ನೀಡದಿದ್ದಾಗ, ಇನ್ನೊಬ್ಬ ವೈದ್ಯರಲ್ಲಿಗೆ ಮಗನನ್ನು ಕರೆದೊಯ್ದಿದ್ದಳು. ಜೊತೆಗೆ ಮಗನ ಜ್ವರವನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಗುಣಪಡಿಸಬಲ್ಲ ಇಂಜೆಕ್ಷನ್ ನೀಡುವಂತೆ ಒತ್ತಾಯಿಸಿದ್ದಳು!. 

ನರಹರಿಯನ್ನು ಸಾವಕಾಶವಾಗಿ ಪರೀಕ್ಷಿಸಿದ ವೈದ್ಯರಿಗೆ ಯಾವುದೇ ವ್ಯಾಧಿಯನ್ನು ಪತ್ತೆಹಚ್ಚಲು ಆಗಿರಲಿಲ್ಲ. ಆದರೆ ಮೂರು ದಿನಗಳಿಂದ ಬಾಧಿಸುತ್ತಿರುವ ಜ್ವರದ ತೀವ್ರತೆಯನ್ನು ಕಂಡು "ವೈರಸ್" ನ ಸೋಂಕನ್ನು ಸಂದೇಹಿಸಿದ್ದ ವೈದ್ಯರು, ಮುಂದಿನ ಎರಡು ದಿನಗಳ ಕಾಲ ಆರು ಘಂಟೆಗೊಂದಾವರ್ತಿ ಪಾರಾಸಿಟಮಾಲ್ ಮಾತ್ರೆಯನ್ನು ನೀಡಲು ಸೂಚಿಸಿದರು. ಜೊತೆಗೆ ಕುಡಿಯಲು ಸಾಕಷ್ಟು ನೀರು,ನಿಂಬೆ ಶರಬತ್ತು, ಹಣ್ಣಿನ ರಸಗಳೊಂದಿಗೆ ಪೋಷಕಾಂಶಗಳಿಂದ ಸಮೃದ್ಧ ಆಹಾರಗಳನ್ನು ನೀಡಿ ಸಂಪೂರ್ಣ ವಿಶ್ರಾಂತಿ ಪಡೆಯಲು ಹೇಳಿದರು. ಜ್ವರ ಆರಂಭವಾಗಿ ಈಗಾಗಲೇ ಮೂರು ದಿನಗಳು ಕಳೆದಿರುವುದರಿಂದ, ಮುಂದಿನ ಒಂದೆರಡು ದಿನಗಳಲ್ಲಿ ವಾಸಿಯಾಗುವ ಅಥವಾ ಯಾವುದಾದರೂ ವ್ಯಾಧಿಯ ಲಕ್ಷಣಗಳನ್ನು ತೋರುವ ಸಾಧ್ಯತೆಗಳಿವೆ ಎಂದು ವೈದೇಹಿಗೆ ತಿಳಿಸಿದರು. 

ಎರಡು ದಿನಗಳ ಬಳಿಕ ನರಹರಿಯ ಹಣೆ,ಗಲ್ಲ, ಕುತ್ತಿಗೆಯ ಭಾಗಗಳಲ್ಲಿ ಹಲವಾರು ನೀರು ತುಂಬಿದ ಚಿಕ್ಕ ಗುಳ್ಳೆಗಳು ಮೂಡಿದ್ದವು. ಇದನ್ನು ಗಮನಿಸಿದ ವೈದೇಹಿಯು ತಕ್ಷಣ ಮಗನನ್ನು ವೈದ್ಯರಲ್ಲಿ ಕರೆದೊಯ್ದಳು. ನರಹರಿಯನ್ನು ಕಂಡೊಡನೆ ಆತನನ್ನು ಪೀಡಿಸುತ್ತಿದ್ದ ಜ್ವರಕ್ಕೆ "ಸೀತಾಳೆ ಸಿಡುಬು" ಕಾರಣವೆನಿಸಿತ್ತೆಂದು ಹೇಳಿದ ವೈದ್ಯರು, ಅವಶ್ಯಕ ಔಷದಗಳನ್ನು ನೀಡಿದ್ದರು. ಸುಮಾರು ಎರಡು ವಾರಗಳಲ್ಲಿ ನರಹರಿಯು ಸಂಪೂರ್ಣವಾಗಿ ಗುಣಮುಖನಾಗಿದ್ದನು. 

ಜ್ವರ ಎಂದರೇನು?

ಮನುಷ್ಯನ ಶರೀರದ ಉಷ್ಣತೆಯು ಕಾರಣಾಂತರಗಳಿಂದ ಹೆಚ್ಚಾಗಿರುವ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ "ಪೈರೆಕ್ಸಿಯಾ" ಅರ್ಥಾತ್ ಜ್ವರ ಎನ್ನುವರು. ಸಾಮಾನ್ಯವಾಗಿ ಆರೋಗ್ಯವಂತ ವಯಸ್ಕರ ಶರೀರದ ತಾಪಮಾನವು ೯೮. ೬ ಡಿಗ್ರಿ ಫ್ಯಾರನ್ ಹೀಟ್ ಇರುವುದು. ಆದರೆ ಹವಾಮಾನದ ವೈಪರೀತ್ಯಗಳು ಹಾಗೂ ಅನಾರೋಗ್ಯದ ಸಂದರ್ಭಗಳಲ್ಲಿ ಇದರ ಮಟ್ಟದಲ್ಲಿ ವ್ಯತ್ಯಯವಾಗುವುದು. 

ನಮ್ಮ ಶರೀರದ ಉಷ್ಣತೆಯನ್ನು ಅಳೆಯಲು ಬಳಸುವ ಥರ್ಮೊಮೀಟರ್ ನ್ನು ಆರೋಗ್ಯವಂತರ ನಾಲಗೆಯ ಕೆಳಗೆ ಒಂದೆರಡು ನಿಮಿಷ ಇರಿಸಿದಾಗ ೯೮.೬ ಡಿಗ್ರಿ ಎಫ್. ಹಾಗೂ ಕಂಕುಳಲ್ಲಿ ಇರಿಸಿದಲ್ಲಿ ೯೭.೬ ಮತ್ತು ಗುದದ್ವಾರದಲ್ಲಿ ಇರಿಸಿ ಪರೀಕ್ಷಿಸಿದಾಗ ೯೯. ೬ ಡಿಗ್ರಿ ತೋರಿಸುವುದು.

ಮಾನವನ ಶರೀರದ ಉಷ್ಣತೆಯ ಮಟ್ಟವನ್ನು ಸಮರ್ಪಕವಾಗಿ ನಿಯಂತ್ರಿಸಬಲ್ಲ ವ್ಯವಸ್ಥೆಯೊಂದಿದ್ದು, ಇದರಲ್ಲಿ ಮೆದುಳಿನ ಹೈಪೊಥಲಮಸ್, ಚರ್ಮ ಹಾಗೂ ಸ್ವೇದಗ್ರಂಥಿಗಳು, ಶ್ವಾಸಕೋಶಗಳು ಮತ್ತು ಮಾಂಸಪೇಶಿಗಳು ಒಳಗೊಂಡಿರುತ್ತವೆ. ಅತಿಯಾದ ಶಾರೀರಿಕ ಚಟುವಟಿಕೆಗಳ ಪರಿಣಾಮವಾಗಿ ಶರೀರದ ತಾಪಮಾನವು ಹೆಚ್ಚಾದಾಗ, ಈ ವ್ಯವಸ್ಥೆಯಿಂದಾಗಿ ಶರೀರವು ಬೆವರುವುದರ ಮೂಲಕ ಏರಿದ ತಾಪಮಾನವು ಕಡಿಮೆಯಾಗುವುದು. 

ಬಹುತೇಕ ಸಂದರ್ಭಗಳಲ್ಲಿ ಮನುಷ್ಯನಿಗೆ ಜ್ವರ ಬಾಧಿಸಲು ಬ್ಯಾಕ್ಟೀರಿಯ, ವೈರಸ್, ಫಂಗಸ್ ಇತ್ಯಾದಿ ರೋಗಾಣುಗಳು ಕಾರಣವಾಗಿರುತ್ತವೆ. ಈ ರೋಗಾಣುಗಳು ನಮ್ಮ ಶರೀರದಲ್ಲಿ ಪ್ರವೇಶಗಳಿಸಿದಾಗ, ನಮ್ಮ ಶರೀರದಲ್ಲಿರುವ ಬಿಳಿ ರಕ್ತಕಣಗಳು ಇವುಗಳ ವಿರುದ್ಧ ಹೋರಾಡುವಾಗ "ಜ್ವರ" ಪ್ರಕಟಗೊಳ್ಳುವುದು. 

ಇದಲ್ಲದೆ ರಕ್ತ ಸಂಚಲನೆಯಲ್ಲಿ ಸಂಭವಿಸಬಲ್ಲ ತೊಂದರೆಗಳು, ಔಷದ ಅಥವಾ ಇತರ ವಸ್ತುಗಳಿಗೆ ಶರೀರ ತೋರುವ ತೀವ್ರ "ಅಲರ್ಜಿ" ಪ್ರತಿಕ್ರಿಯೆಗಳು, ಕೊಲಾಜೆನ್ ಕಾಯಿಲೆಗಳು ಮತ್ತು ಕೆಲವಿಧದ ಗಂಭೀರ-ಮಾರಕ ಕ್ಯಾನ್ಸರ್ ಗಳಲ್ಲೂ ಜ್ವರ ಒಂದು ಪ್ರಮುಖ ಲಕ್ಷಣವಾಗಿರುತ್ತದೆ. ಶರೀರದ ತಾಪಮಾನವನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಬಾಧಿಸಬಲ್ಲ ಕೆಲ ವ್ಯಾಧಿಗಳೊಂದಿಗೆ, ಅಪರೂಪದಲ್ಲಿ ಕೆಲವ್ಯಕ್ತಿಗಳಲ್ಲಿ ಮಾನಸಿಕ ಕಾರಣಗಳಿಂದಲೂ ಜ್ವರ ಉದ್ಭವಿಸುವ ಸಾಧ್ಯತೆಗಳಿವೆ. 

ಲಕ್ಷಣಗಳು 

ಕ್ಷುಲ್ಲಕ ವ್ಯಾಧಿಗಳು ಬಾಧಿಸಿದ ಸಂದರ್ಭದಲ್ಲಿ ಸೌಮ್ಯ ರೂಪದ ತಲೆ- ಮೈಕೈನೋವುಗಳೊಂದಿಗೆ ತಲೆದೋರುವ ಜ್ವರವು,ಮಲೇರಿಯ ಹಾಗೂ ಇತರ ಕೆಲ ವ್ಯಾಧಿಗಳು ಉಲ್ಬಣಿಸಿದಾಗ ತೀವ್ರ ತಲೆನೋವು, ವಿಪರೀತ ಚಳಿ- ನಡುಕಗಳೊಂದಿಗೆ ಆಯಾ ವ್ಯಾಧಿಗಳಿಗೆ ಅನುಗುಣವಾಗಿ ಇತರ ಲಕ್ಷಣಗಳನ್ನು ತೋರುವುದು. 

ಸಾಮಾನ್ಯವಾಗಿ ಜ್ವರ ಬಾಧಿಸಿದ ಸಂದರ್ಭದಲ್ಲಿ ತಲೆಸಿಡಿತ,ಮೈಕೈನೋವು,ಹಸಿವಿಲ್ಲದಿರುವುದು,ವಾಕರಿಕೆ ಅಥವಾ ವಾಂತಿ,ಅತಿ ಆಯಾಸ,ಬಾಯಾರಿಕೆ,ಬಳಲಿಕೆ,ನಿರಾಸಕ್ತಿಗಳಂತಹ ಲಕ್ಷಣಗಳು ಕಂಡುಬರುತ್ತವೆ. ತೀವ್ರಜ್ವರ ಬಾಧಿಸಿದ ಸಂದರ್ಭದಲ್ಲಿ ಜ್ವರಕ್ಕೆ ಕಾರನವೆನಿಸಿದ ಕಾಯಿಲೆ ಹಾಗೂ ರೋಗಿಯ ವಯಸ್ಸುಗಳಿಗೆ ಅನುಗುಣವಾಗಿ ಚಳಿ,ನಡುಕ,ಅರೆಪ್ರಜ್ನಾವಸ್ಥೆ,ಬಡಬಡಿಸುವುದು, ಕನವರಿಕೆ, ಅಪಸ್ಮಾರದಂತಹ ಸೆಳೆತಗಳು ಮತ್ತು ಮೂರ್ಛೆ ತಪ್ಪುವುದೇ ಮುಂತಾದ ಲಕ್ಷಣಗಳು  ಕಂಡುಬರುತ್ತವೆ. ಅಂತೆಯೇ ಸೂಕ್ತ ಚಿಕಿತ್ಸೆಯೇ ಇಲ್ಲದ ವ್ಯಾಧಿಗಳು ಬಾಧಿಸಿದಾಗ ಹಾಗೂ ಸೂಕ್ತ ಸಮಯದಲ್ಲಿ ವೈದ್ಯರ ಸಲಹೆ-ಚಿಕಿತ್ಸೆಗಳನ್ನು ಪಡೆಯದೇ ಉಲ್ಬಣಿಸಿದಾಗ ಮತ್ತು ಅನಿರೀಕ್ಷಿತ ಸಮಸ್ಯೆಗಳಿಂದ ಜ್ವರಪೀಡಿತ ರೋಗಿಗಳು ಮೃತಪಡುವುದು ಅಪರೂಪವೇನಲ್ಲ. 

ಇವೆಲ್ಲಾ ಕಾರಣಗಳಿಂದಾಗಿ ನಿಮ್ಮನ್ನು ಬಾಧಿಸುತ್ತಿರುವ ಜ್ವರಕ್ಕೆ ಕಾರಣ ಏನೆಂದು ಅರಿಯದೇ ಸ್ವಯಂ ಚಿಕಿತ್ಸೆ ಪಡೆದುಕೊಂಡಲ್ಲಿ, ಸಂಕೀರ್ಣ ಸಮಸ್ಯೆಗಳೊಂದಿಗೆ ಪ್ರಾಣಾಪಾಯಕ್ಕೂ ಕಾರಣವೆನಿಸಬಹುದು ಎನ್ನುವುದನ್ನು ಮರೆಯದಿರಿ. 

ಚಿಕಿತ್ಸೆ 

ಜ್ವರದೊಂದಿಗೆ ಪ್ರತ್ಯಕ್ಷವಾಗುವ ಇತರ ಲಕ್ಷಣಗಳು,ರೋಗಿಯ ಶಾರೀರಿಕ ಪರೀಕ್ಷೆ ಹಾಗೂ ಆತನು ನೀಡುವ ಮೌಖಿಕ ಮಾಹಿತಿಗಳ ಆಧಾರದ ಮೇಲೆ, ಇದಕ್ಕೆ ಕಾರಣವಾಗಿರುವ ವ್ಯಾಧಿಯನ್ನು ಗುರುತಿಸಿ ವೈದ್ಯರು ನೀಡುವ ಚಿಕಿತ್ಸೆಯು ಬಹುತೇಕ ಸಂದರ್ಭಗಳಲ್ಲಿ ಯಶಸ್ವಿಯಾಗುವುದು. ಆದರೆ ಒಂದೆರಡು ದಿನಗಳ ಚಿಕಿತ್ಸೆಯ ಬಳಿಕವೂ ಉಲ್ಬಣಿಸುವ,ವಾರ ಕಳೆದರೂ ವಾಸಿಯಾಗದ ಹಾಗೂ ರೋಗಿಗೆ ಪ್ರಾಣಾಪಾಯದಂತಹ ಸಮಸ್ಯೆಗಳು ಬಾಧಿಸಿದಲ್ಲಿ ರೋಗಿಯ ರಕ್ತ,ಮಲ,ಮೂತ್ರ,ಕಫಗಳ ಪರೀಕ್ಷೆ,ಕ್ಷ- ಕಿರಣ,ಅಲ್ಟ್ರಾ ಸೌಂಡ್ ಸೋನೋಗ್ರಾಂ ಇತ್ಯಾದಿ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಅಂತೆಯೇ ಇಂತಹ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಜ್ವರಕ್ಕೆ ಕಾರಣವೆನಿಸಿದ ಕಾಯಿಲೆಯನ್ನು ನಿಖರವಾಗಿ ಪತ್ತೆಹಚ್ಚದೆ ನೀಡುವ ಚಿಕಿತ್ಸೆಯು ನಿಷ್ಪ್ರಯೋಜಕ ಎನಿಸಬಹುದು. ಇದೇ ಕಾರಣದಿಂದಾಗಿ ಜ್ವರ ಬಾಧಿಸಿದ ಸಂದರ್ಭದಲ್ಲಿ ನಿಮ್ಮ ನಂಬಿಗಸ್ತ ವೈದ್ಯರ ಸಲಹೆ-ಚಿಕಿತ್ಸೆಗಳನ್ನು ಪಡೆದುಕೊಳ್ಳುವ ಮೂಲಕ ಸಂಭಾವ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. 

ಆದರೆ ಆಕಸ್ಮಿಕವಾಗಿ ಅಪರಾತ್ರಿಯಲ್ಲಿ , ಸಮೀಪದಲ್ಲಿ ವೈದ್ಯರು ಲಭ್ಯರಿಲ್ಲದ ಹಳ್ಳಿಗಳಲ್ಲಿ ಅಥವಾ ಸೌಮ್ಯರೂಪದ ಜ್ವರ ತಲೆದೋರಿದಾಗ ಇದನ್ನು ಶಮನಗೊಳಿಸಲು ಹಾಗೂ ಉಲ್ಬಣಿಸದಂತೆ ನಿಯಂತ್ರಿಸಲು, ಪಾರಾಸಿಟಮಾಲ್ ನಂತಹ ಮಾತ್ರೆ-ಸಿರಪ್ ಗಳನ್ನು, ಜ್ವರದ ತೀವ್ರತೆಗೆ ಅನುಗುಣವಾಗಿ ೪ ರಿಂದ ೬ ಗಂಟೆಗೆ ಒಂದುಬಾರಿ ಸೇವಿಸಬಹುದು. ಆದರೆ ೧೨ ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಹಾಗೂ ಅತಿ ಆಮ್ಲದ(ಹೈಪರ್ ಅಸಿಡಿಟಿ) ಬಾಧೆ ಅಥವಾ ಜಠರದ ಹುಣ್ಣುಗಳಿರುವ ವ್ಯಕ್ತಿಗಳಿಗೆ ಆಸ್ಪಿರಿನ್ -ಐಬುಪ್ರೊಫೇನ್ ನಂತಹ ಔಷದಗಳನ್ನು ನೀಡಬಾರದು.ಇದಲ್ಲದೆ ಜ್ವರಪೀಡಿತರಿಗೆ ಚಳಿ ಮತ್ತು ನಡುಕಗಳು ಇಲ್ಲದಿದ್ದಲ್ಲಿ (ವಿಶೇಷವಾಗಿ ಪುಟ್ಟ ಮಕ್ಕಳಿಗೆ) ಉಣ್ಣೆಯ ಸ್ವೆಟರ್,ಟೋಪಿ ಅಥವಾ ಬೆಚ್ಚನೆಯ ಕಂಬಳಿ-ಬ್ಲಾಂಕೆಟ್ ಗಳನ್ನು ಹೊದಿಸದಿರಿ. ಏಕೆಂದರೆ ಇದರಿಂದಾಗಿ ಶರೀರದ ತಾಪಮಾನವು ಇನ್ನಷ್ಟು ಹೆಚ್ಚಾಗುವುದರಿಂದ, ಅಪಸ್ಮಾರದಂತಹ ಸೆಳೆತಗಳು ಹಾಗೂ ಅನ್ಯ ತೊಂದರೆಗಳಿಗೆ ಕಾರಣವೆನಿಸುವುದು. 

ಜ್ವರಪೀಡಿತರಿಗೆ ತೆಳ್ಳಗಿನ ಹತ್ತಿಯ ಬಟ್ಟೆಗಳನ್ನು ತೊಡಿಸಿ, ಹಣೆಗೆ ತಣ್ಣೀರಿನ ಪಟ್ಟಿಯನ್ನು ಹಾಕುವುದರೊಂದಿಗೆ ರೋಗಿಯ ಶರೀರವನ್ನು ಒದ್ದೆ ಬಟ್ಟೆಯಿಂದ ಆಗಾಗ ಒರೆಸುವುದರಿಂದ ಶರೀರದ ತಾಪಮಾನ ಕಡಿಮೆಯಾಗುವುದು. ಜ್ವರ ತುಸು ಹೆಚ್ಚಿದ್ದಲ್ಲಿ ತಂಪಾದ ಹವಾನಿಯಂತ್ರಿತ ಕೊಠಡಿಯಲ್ಲಿ ಅಥವಾ ವಿದ್ಯುತ್ ಪಂಖದ ಗಾಳಿಗೆ ಮಲಗಿಸಿದಲ್ಲಿ, ಜ್ವರದ ತೀವ್ರತೆಯನ್ನು ನಿಯಂತ್ರಿಸುವುದು ಸುಲಭವೆನಿಸುವುದು. 

ಪುಟ್ಟ ಮಕ್ಕಳಿಗೆ ತೀವ್ರ ಜ್ವರ ಬಾಧಿಸಿದಾಗ ಅಪಸ್ಮಾರದಂತಹ ಸೆಳೆತಗಳು ಕಂಡುಬರಬಹುದು. ಇಂತಹ ಸಂದರ್ಭದಲ್ಲಿ ಮೇಲೆ ಸೂಚಿಸಿದ ಉಪಕ್ರಮಗಳೊಂದಿಗೆ, ಮಗುವಿನ ಹಣೆ-ತಲೆಯ ಭಾಗದಲ್ಲಿ ಐಸ್ ಬ್ಯಾಗ್ ಇರಿಸಿದಲ್ಲಿ ತಕ್ಷಣಗಳು ಶಮನಗೊಳ್ಳುತ್ತವೆ. ಆದರೆ ಇದರಿಂದ ಸೆಳೆತಗಳು ನಿಲ್ಲದೆ ಇದ್ದಲ್ಲಿ ಮಗುವನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ನೀಡುವುದು ಅನಿವಾರ್ಯವೂ ಹೌದು. 

ಜ್ವರಪೀಡಿತರ ಶರೀರದ ಉಷ್ಣತೆ ಹೆಚ್ಚುವುದರಿಂದಾಗಿ ಇವರ ಶರೀರದಲ್ಲಿ ದ್ರವಾಂಶಗಳ ಕೊರತೆಯಿಂದ  ನಿರ್ಜಲೀಕೃತ ಸ್ಥಿತಿ ಉಂಟಾಗುವ ಸಾಧ್ಯತೆಗಳಿವೆ. ಇದರೊಂದಿಗೆ ಸಮರ್ಪಕವಾಗಿ ಆಹಾರವನ್ನು ಸೇವಿಸದಿರುವುದರಿಂದಾಗಿ ಅತಿ ಆಯಾಸ,ಸುಸ್ತು ಸಂಕಟಗಳು ಬಾಧಿಸಬಹುದು. ಇದನ್ನು ತಡೆಗಟ್ಟಲು ಶುದ್ಧವಾದ ನೀರು,ಹಣ್ಣಿನ ರಸಗಳು ಹಾಗೂ ಸಕ್ಕರೆ ಮತ್ತು ಕೊಂಚ ಉಪ್ಪನ್ನು ಬೆರೆಸಿ ತಯಾರಿಸಿದ ಶರಬತ್ ಗಳನ್ನು  ನೀಡುತ್ತಿರಬೇಕು. 

ಯಾವುದೇ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಸಮೃದ್ಧ ಪೋಷಕಾಂಶಗಳಿರುವ ಆಹಾರದ ಅವಶ್ಯಕತೆಯಿರುತ್ತದೆ. ಇದರೊಂದಿಗೆ ವ್ಯಾಧಿ ಪೀಡಿತ ಶರೀರಕ್ಕೆ ಸಾಕಷ್ಟು ವಿಶ್ರಾಂತಿಯೂ ಬೇಕಾಗುತ್ತದೆ. ಸೂಕ್ತ ಚಿಕಿತ್ಸೆಯೊಂದಿಗೆ ಇದನ್ನು ಪರಿಪಾಲಿಸಿದಲ್ಲಿ, ನಿಮ್ಮನ್ನು ಕಾಡುವ ಜ್ವರ ಮತ್ತು ಇದಕ್ಕೆ ಕಾರಣವೆನಿಸಿರುವ ವ್ಯಾಧಿಯೂ, ನಿಗದಿತ ಅವಧಿಯಲ್ಲಿ ವಾಸಿಯಾಗುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ . ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೩೧-೦೫-೨೦೦೭  ಅಂಕಣದಲ್ಲಿ ಪ್ರಕಟಿತ ಲೇಖನ   


Wednesday, August 28, 2013

Is your child a poor eater?


                        ಪುಟ್ಟ ಕಂದನ ಹೊಟ್ಟೆ ಹಸಿವು ಎಂತಿದೆ?

ಪುಟ್ಟ ಮಕ್ಕಳ ಹೊಟ್ಟೆ ಹಸಿವು ಹಾಗೂ ದೈನಂದಿನ ಆಹಾರದ ಪ್ರಮಾಣಗಳನ್ನು ನಿಖರವಾಗಿ ಅರಿತುಕೊಳ್ಳುವುದು ಸುಲಭಸಾಧ್ಯವಲ್ಲ. ಅದರಲ್ಲೂ ಮಾತು ಬಾರದ ಹಸುಗೂಸಿನ ವಿಚಾರದಲ್ಲಂತೂ ಸಂಪೂರ್ಣವಾಗಿ ಮಾತಾಪಿತರ ಊಹೆಯೇ ಮಗುವಿನ ಲಾಲನೆ-ಪಾಲನೆಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ತಾಯಿಗೆ ಚಳಿಯಾದಾಗ ಮಗುವಿಗೆ "ಸ್ವೆಟರ್" ತೊಡಿಸುವುದು ಇದಕ್ಕೊಂದು ಉತ್ತಮ ಉದಾಹರಣೆಯೂ ಹೌದು!. 
------------------                     ----------------------                           -----------------------                                -----------------------------

ಪ್ರತಿನಿತ್ಯ ಬೆಳಿಗ್ಗೆ ಎಂಟು ಗಂಟೆಯಾಗುತ್ತಲೇ ಮಾಧವ ಮಾಸ್ತರರು ತಾರಕ ಸ್ವರದಲ್ಲಿ ನಾಯಿ,ಬೆಕ್ಕು,ಕಾಗೆ ಮತ್ತು ಗುಬ್ಬಚ್ಚಿಗಳನ್ನು ಕರೆಯುವ ಸದ್ದನ್ನು ಕೇಳಿದೊಡನೆ,ಅವರ ವಠಾರದ ನಿವಾಸಿಗಳಿಗೆ ಮಾಸ್ತರರು ತಮ್ಮ ಮುದ್ದಿನ ಮಗಳಿಗೆ ಕೈತುತ್ತು ನೀಡುತ್ತಿದ್ದಾರೆ ಎಂದು ತಿಳಿಯುತ್ತಿತ್ತು. ಅನ್ನಾಹಾರಗಳನ್ನು ತಿನ್ನಲು ಒಲ್ಲೆನೆಂದು ರಂಪಾಟ ಮಾಡುತ್ತಿದ್ದ ಮಗಳ ಹೊಟ್ಟೆಗೆ ಒಂದಿಷ್ಟು ಅನ್ನವನ್ನು ಹಾಕಲು ಮಾಸ್ತರರು ತಾನು ಕಲಿತಿದ್ದ ವಿದ್ಯೆಗಳನ್ನೆಲ್ಲಾ ಬಳಸಬೇಕಾಗುತ್ತಿತ್ತು!. 

ಉದ್ಯೋಗಸ್ತ ದಂಪತಿಗಳ ಏಕಮಾತ್ರ ಪುತ್ರಿಯಾದ ವಾಣಿಯನ್ನು ಹಗಲಿಡೀ ನೋಡಿಕೊಳ್ಳಲು ಆಕೆಯ ಅಜ್ಜನು ಪ್ರತಿದಿನ ಬೆಳಗ್ಗೆ ಬಂದು, ಸಂಜೆಯ ವೇಳೆಗೆ ತನ್ನ ಮನೆಗೆ ಮರಳುತ್ತಿದ್ದರು. ಇಳಿವಯಸ್ಸಿನ ಅಜ್ಜನನ್ನು ದಿನವಿಡೀ ಗೊಳುಹೊಯ್ಯುತ್ತಿದ್ದ ವಾಣಿಯು,ಅಜ್ಜನ ಕೈಯ್ಯಿಂದ ಒಂದುತುತ್ತು ಅನ್ನವನ್ನೂ ತಿನ್ನುತ್ತಿರಲಿಲ್ಲ. ಆದರೆ ಮೊಮ್ಮಗಳು ಉಪವಾಸವಿರುವುದನ್ನು ಸಹಿಸಲಾರದ ಅಜ್ಜನು ಅನಿವಾರ್ಯವಾಗಿ ನೀಡುತ್ತಿದ್ದ ಚಾಕಲೇಟು-ಬಿಸ್ಕತ್ತುಗಳನ್ನು ಮಾತ್ರ ಆಕೆ ನಿರಾಕರಿಸುತ್ತಿರಲಿಲ್ಲ!. ಈ ವಿಚಾರವನ್ನು ಅರಿಯದ ಮಾಸ್ತರರು ಸಂಜೆ ಶಾಲೆ ಬಿಟ್ಟೊಡನೆ ಮನೆಗೆ ಧಾವಿಸಿ, ತನ್ನ ಮುದ್ದಿನ ಮಗಳಿಗೆ ಒತ್ತಾಯದಿಂದ ಕೈತುತ್ತು ಹಾಕುತ್ತಿದ್ದರು. 

ಇದೇ ರೀತಿಯ ಹಲವಾರು ಘಟನೆಗಳನ್ನು ನೀವೂ ಕಂಡಿರಬಹುದು. ಇದಕ್ಕೆ ತದ್ವಿರುದ್ಧವಾಗಿ ಯಾರು ಏನನ್ನೇ ನೀಡಿದರೂ, ಕ್ಷಣಾರ್ಧದಲ್ಲಿ ಕಬಳಿಸಿ ಮತ್ತಷ್ಟು ಬೇಕೆಂದು ಹಠಮಾಡುವ ಮಕ್ಕಳನ್ನೂ ಕಂಡಿರಲೇಬೇಕು. ಚಿಕ್ಕ ಮಕ್ಕಳಲ್ಲಿ ಕಂಡುಬರುವ ಇಂತಹ ಪ್ರವೃತ್ತಿಗಳಿಗೆ ವಿಭಿನ್ನ ಕಾರಣಗಳೂ ಇರುತ್ತವೆ. 

ತಮ್ಮ ಮಗು ಸಾಕಷ್ಟು (ಅರ್ಥಾತ್ ತಾವು ಅಪೇಕ್ಷಿಸಿದಷ್ಟು) ಅನ್ನಾಹಾರಗಳನ್ನು ತಿನ್ನುವುದೇ ಇಲ್ಲವೆಂದು ದೂರುವ ಅನೇಕ ದಂಪತಿಗಳಿಗೆ, ನಿಜಕ್ಕೂ ಮಕ್ಕಳ ಆಹಾರ ಸೇವನಾ ಶೈಲಿಯ ಬಗ್ಗೆ ಸಮರ್ಪಕ ಹಾಗೂ ಪ್ರಾಥಮಿಕ ಮಾಹಿತಿಗಳೇ ತಿಳಿದಿರುವುದಿಲ್ಲ. ಇದೇ ಕಾರಣದಿಂದಾಗಿ ತಮ್ಮ ಮಗುವಿಗ ಚೆನ್ನಾಗಿ ಹಸಿವಾಗುವಂತಹ ಟಾನಿಕ್ ಬರೆದುಕೊಡಿ ಎಂದು ವೈದ್ಯರನ್ನು ಒತ್ತಾಯಿಸುವ ದಂಪತಿಗಳ ಸಂಖ್ಯೆಯೂ ಕಡಿಮೆಯೇನಿಲ್ಲ!. 

ಇನ್ನುಕೆಲವರಂತೂ ಅಲ್ಪಾಹಾರ ಸೇವನೆಯಿಂದ ತಮ್ಮ ಮಗುವಿನಲ್ಲಿ ಉದ್ಭವಿಸಬಹುದಾದ ಪೋಷಕಾಂಶಗಳ ಕೊರತೆಯನ್ನು ನೀಗಿಸಲು, ನಿರ್ದಿಷ್ಟ ಪರಿಹಾರವನ್ನು ತಾವೇ ನಿರ್ಧರಿಸುತ್ತಾರೆ. ಇದಕ್ಕಾಗಿ ಟಿ.ವಿ ಜಾಹೀರಾತುಗಳಲ್ಲಿ ತಾವು ಕಂಡಿರುವ "ಪರಿಪೂರ್ಣ ಪೋಷಕಾಂಶಗಳಿಂದ ಸಮೃದ್ಧವಾಗಿದೆ" ಎಂದು ಇವುಗಳ ತಯಾರಕರು ಘೋಷಿಸುವ ವಾಣಿಜ್ಯ ಉತ್ಪನ್ನಗಳನ್ನು ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ, ತಮ್ಮ ಕಂದನಿಗೆ ಒತ್ತಾಯಪೂರ್ವಕವಾಗಿ ನೀಡಿ ಸಂತೃಪ್ತರಾಗುತ್ತಾರೆ!. 

ಸಮಸ್ಯೆಯ ಮೂಲ 

ತಮ್ಮ ಮಕ್ಕಳ ಹಸಿವು ಮತ್ತು ಆಹಾರಸೇವನೆಗಳ ಬಗ್ಗೆ ಬಹುತೇಕ ಮಾತಾಪಿತರು ಚಿಂತಿತರಾಗಲು, ಇಂತಹ ಮಕ್ಕಳ ಆರೋಗ್ಯದ ಮಟ್ಟ ಹಾಗೂ ಶಾರೀರಿಕ ಬೆಳವಣಿಗೆಗಳಲ್ಲಿ ಕಂಡುಬರುವ ವ್ಯತ್ಯಯಗಳೇ ಕಾರಣವೆಂದಲ್ಲಿ ತಪ್ಪೆನಿಸಲಾರದು. ದಷ್ಟಪುಷ್ಟವಾಗಿ ಬೆಳೆದಿರುವ ತಮ್ಮ ಬಂಧುಮಿತ್ರರ ಮಕ್ಕಳೊಂದಿಗೆ ಹೋಲಿಸಿದಾಗ, ತಮ್ಮ ಮಗು "ನರಪೇತಲ ನಾರಾಯಣ" ನಂತೆ ಕಾಣುವುದನ್ನು ಸಹಿಸದ ಮಾತೆಯರು, ತಮ್ಮ ಕಂದನಿಗೆ ತಾವು ನಿರ್ಧರಿಸಿದಷ್ಟು ಪ್ರಮಾಣದ ಆಹಾರವನ್ನು ತಿನ್ನಿಸಲು ಶತಪ್ರಯತ್ನಗಳನ್ನು ನಡೆಸುತ್ತಾರೆ. ಈ ಸಂದರ್ಭದಲ್ಲಿ ಲಲ್ಲೆಗರೆಯುವುದು,ಲಂಚದ ಆಮಿಷ ಒಡ್ಡುವುದು, ಒತ್ತಾಯ ಮತ್ತಿತರ ಉಪಾಯಗಳು ಫಲಿಸದಿದ್ದಲ್ಲಿ, ಕೆಲ ದಂಪತಿಗಳು ಬೆದರಿಕೆ ಹಾಕುವುದು ಮತ್ತು ಪೆಟ್ಟು ನೀಡುವ ಮಟ್ಟಕ್ಕೂ ಹೋಗುವುದು ಅಪರೂಪವೇನಲ್ಲ!. ಇಂತಹ ಪ್ರಯತ್ನಗಳು ನಿರೀಕ್ಷಿತ ಪರಿಣಾಮಗಳನ್ನು ನೀಡುವಲ್ಲಿ ನಿಷ್ಫಲವೆನಿಸುವ ಸಾಧ್ಯತೆಗಳೇ ಹೆಚ್ಚು. ಜೊತೆಗೆ ಮಕ್ಕಳಲ್ಲಿ ಹಠಮಾರಿತನ ಹಾಗೂ ಸೇಡಿನ ಮನೋಭಾವನೆಗಳಿಗೆ ಸೋಪಾನವೆನಿಸೀತು. ಇದೇ ಕಾರಣದಿಂದಾಗಿ ಈ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಅರಿತುಕೊಳ್ಳುವುದು ಮಗುವಿನ ಆರೋಗ್ಯ ಮತ್ತು ಮಾತಾಪಿತರ ಮಾನಸಿಕ ನೆಮ್ಮದಿಯ ಹಿತದೃಷ್ಟಿಯಿಂದ ಉಪಯುಕ್ತವೆನಿಸುವುದು. 

ಸಾಮಾನ್ಯವಾಗಿ ಎಲ್ಲ ಮಕ್ಕಳಲ್ಲೂ ಹಸಿವು,ಆಹಾರಸೇವನೆಯ ಪ್ರಮಾಣ, ಆರೋಗ್ಯದ ಮಟ್ಟ ಮತ್ತು ಶಾರೀರಿಕ ಬೆಳವಣಿಗೆಗಳು ಏಕರೀತಿಯಲ್ಲಿರುವುದು ಅಸಾಧ್ಯವೋ ಹೌದು. ಅದೇ ರೀತಿಯಲ್ಲಿ ಮಕ್ಕಳ ಸಾಮಾನ್ಯ ಆರೋಗ್ಯ,ಶರೀರದ ತೂಕ ಮತ್ತು ಗಾತ್ರಗಳಲ್ಲಿ ಮಾತಾಪಿತರ ವಂಶವಾಹಿನಿ- ವರ್ಣತಂತುಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಇದೇ ಕಾರಣದಿಂದಾಗಿ ಧಡೂತಿ ದೇಹವನ್ನು ಹೊಂದಿರುವ ದಂಪತಿಗಳ ಮಕ್ಕಳು "ಮಹಾಕಾಯ" ಹೊಂದಿರುವುದು ಹಾಗೂ ಸಣಕಲು ಶರೀರದ ಮಾತಾಪಿತರ ಮಕ್ಕಳು "ಕೃಶಕಾಯ" ರಾಗಿರುವುದು ಸ್ವಾಭಾವಿಕವೂ ಹೌದು. 

ಗರ್ಭಿಣಿಯರು ಬಡತನ ಅಥವಾ ಇನ್ನಿತರ ಕಾರಣಗಳಿಂದ ಪೋಷಕಾಂಶಗಳಿಂದ ಸಮೃದ್ಧವಾದ ಆಹಾರವನ್ನು ಸೇವಿಸದೇ ಇದ್ದಲ್ಲಿ ಮತ್ತು  ಆಗಾಗ ಕಾಯಿಲೆ-ಕಸಾಲೆಗಳಿಂದ ಬಳಳುತ್ತಿದ್ದಲ್ಲಿ ಕೂಡಾ ಹುಟ್ಟಿದ ಮಗುವಿನ ಆರೋಗ್ಯ ಹಾಗೂ ಶಾರೀರಿಕ ಬೆಳವಣಿಗೆಗಳಲ್ಲಿ ನಿರ್ದಿಷ್ಟ ನ್ಯೂನ್ಯತೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಈ ವೈಜ್ಞಾನಿಕ ಸತ್ಯವನ್ನು ಅರಿತುಕೊಂಡ ಮಾತಾಪಿತರು ಸಣಕಲು ಶರೀರದ, ಸದಾ ಚಟುವಟಿಕೆಯಿಂದ ಇರುವ ಆರೋಗ್ಯವಂತ ಮಗುವು, ದಷ್ಟಪುಷ್ಟವಾಗಿದ್ದರೂ ಜಡಭರತನಂತಿದ್ದು ಆಗಾಗ ಅನಾರೋಗ್ಯದಿಂದ ಬಳಲುವ ಮಗುವಿಗಿಂತ ಲೇಸೆಂದು ಒಪ್ಪಿಕೊಳ್ಳುತ್ತಾರೆ. 

ಹಸಿವು-ಆಹಾರ 

ಪುಟ್ಟ ಕಂದನು ಹುಟ್ಟಿದ ಒಂದುವರ್ಷದಲ್ಲೇ ತನ್ನ ತೂಕವನ್ನು ನಾಲ್ಕರಿಂದ ಆರುಪಟ್ಟು  ಹೆಚ್ಚಿಸಿಕೊಳ್ಳುವುದು ಸ್ವಾಭಾವಿಕ. ಈ ಅವಧಿಯಲ್ಲಿ ಮಗುವಿನ ಹಸಿವಿನ ಪ್ರಮಾಣವೂ ಬೆಳವಣಿಗೆಯ ವೇಗಕ್ಕೆ ಅನುಗುಣವಾಗಿ ತುಸು ಹೆಚ್ಚಾಗುವುದು. ಆದರೆ ಎರಡನೆಯ ವರ್ಷದಿಂದ ಶಾರೀರಿಕ ಬೆಳವಣಿಗೆಯ ವೇಗವು ಒಂದಿಷ್ಟು ಕಡಿಮೆಯಾಗುವುದರಿಂದ,ಮಕ್ಕಳು ಸೇವಿಸುವ ಆಹಾರದ ಪ್ರಮಾಣವೂ ಒಂದಿಷ್ಟು ಕಡಿಮೆಯಾಗುವುದು. ಜೊತೆಗೆ ಈ ವಯಸ್ಸಿನಲ್ಲಿ ತನ್ನ ಬೇಕು-ಬೇಡಗಳನ್ನು ತನ್ನದೇ ಆದ ರೀತಿಯಲ್ಲಿ ತಾಯಿಗೆ ತಿಳಿಸುವ ಕಲೆಯನ್ನು ಪುಟ್ಟ ಕಂದನು ಕರಗತಮಾಡಿಕೊಂಡಿರುತ್ತಾನೆ. ತನಗೆ ಬೇಡವೆನಿಸಿದ ಆಹಾರ ನೀಡಿದಾಗ ಬಾಯಿ ಮುಚ್ಚುವುದು,ಮುಖವನ್ನು ತಿರುಗಿಸುವುದು,ಅಮ್ಮನ ಕೈಯ್ಯನ್ನು ದೂಡುವುದು ಹಾಗೂ ಒತ್ತಾಯದಲ್ಲಿ ಬಾಯಿಗೆ ಹಾಕಿದ ಆಹಾರವನ್ನು "ಪುರ್' ಎಂದು ಸದ್ದುಮಾಡುತ್ತಾ ಉಗಿಯುವುದು ಇಂತಹ ಕಲೆಗಳಲ್ಲಿ ಒಂದಾಗಿದೆ!. 

ಹಸಿವು ಕಂದನ ಸ್ವಾಭಾವಿಕ ಶಾರೀರಿಕ  ಪ್ರಕ್ರಿಯೆಗಳಲ್ಲಿ  ಒಂದಾಗಿದ್ದು, ಕೇವಲ ಅಲ್ಪ ಪ್ರಮಾಣದ ಆಹಾರವನ್ನು ಸೇವಿಸುವುದರಿಂದ ಜೀವಸತ್ವಗಳು ಮತ್ತು ಪೋಷಕಾಂಶಗಳ ಕೊರತೆ ಉದ್ಭವಿಸುವುದಿಲ್ಲ. ಪುಟ್ಟ ಮಕ್ಕಳ "ಜಠರ" ದ ಗಾತ್ರವೂ ಚಿಕ್ಕದಾಗಿ ಇರುವುದರಿಂದ , ವಯಸ್ಕರಂತೆ ದಿನದಲ್ಲಿ ಮೂರು- ನಾಲ್ಕು ಬಾರಿ ಪಟ್ಟಾಗಿ ಹೊಟ್ಟೆ ಬಿರಿಯುವಂತೆ ತಿನ್ನುವುದು ಅಸಾಧ್ಯವೆಂದು ತಿಳಿದಿರಿ. ಇದೇ ಕಾರಣದಿಂದಾಗಿ ಚಿಕ್ಕಮಕ್ಕಳು ಒಂದೆರಡು ಘಂಟೆಗೊಮ್ಮೆ ಅಲ್ಪಪ್ರಮಾಣದ ಆಹಾರವನ್ನು ಸೇವಿಸಲು ಬಯಸಿದಲ್ಲಿ ಸಹಕರಿಸಿ. 

ಆಹಾರಸೇವನೆಯ ಸಂದರ್ಭದಲ್ಲಿ ನಿಮ್ಮ ಕಂದನ ಬೇಕು-ಬೇಡಗಳನ್ನು ಸೂಕ್ಷ್ಮವಾಗಿ ಗಮನಿಸಿ. ಬಹುತೇಕ ಮಕ್ಕಳು ಪ್ರತಿದಿನ ಒಂದೇ ವಿಧದ ಆಹಾರವನ್ನು ಸೇವಿಸಲು ನಿರಾಕರಿಸುವುದುಂಟು. ಮಾತ್ರವಲ್ಲ, ಕೆಲದಿನಗಳ ಕಾಲ ತಾನು ಮೆಚ್ಚಿ ತಿನ್ನುತ್ತಿದ್ದ ಆಹಾರವೊಂದನ್ನು, ಕೆಲವೇ ದಿನಗಳ ಬಳಿಕ ನಿರಾಕರಿಸುವುದೂ ಉಂಟು. ಇಂತಹ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ  ಮಗು ಬೇಡವೆಂದ ಆಹಾರವನ್ನು ತಿನ್ನಿಸುವ ಬದಲಾಗಿ ಬೇರೊಂದು ಆಹಾರವನ್ನು ನೀಡಲು ಆರಂಭಿಸಿದಲ್ಲಿ, ಮುಂದೆ ಕೆಲದಿನಗಳ ಬಳಿಕ ಹಿಂದೆ ನೀಡುತ್ತಿದ್ದ ಆಹಾರವನ್ನೇ ಮತೊಮ್ಮೆ ನೀಡಿದಲ್ಲಿ ನಿರಾಕರಿಸುವುದಿಲ್ಲ. 

ಮಕ್ಕಳ ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿರುವ "ಹಾಲು", ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಚಿಕ್ಕಮಕ್ಕಳಿಗೆ ಮಕ್ಕಳಿಗೆ ಒಂದುದಿನದಲ್ಲಿ ಸುಮಾರು ೨೦೦ ಮಿಲಿ ಲೀಟರ್ ಹಾಲು ಸಾಕಾಗುತ್ತದೆ. ಆದರೆ ತಮ್ಮ ಮಗುವಿನ ಆರೋಗ್ಯರಕ್ಷಣೆ ಹಾಗೂ ಶಾರೀರಿಕ ಬೆಳವಣಿಗೆಗಾಗಿ ಸಾಕಷ್ಟು ಹಾಲನ್ನು ನೀಡುವುದು ಅವಶ್ಯಕವೆಂದು ನಂಬುವ ಮಾತಾಪಿತರು, ದಿನನಿತ್ಯ ನಾಲ್ಕಾರು ಬಾರಿ ಹಾಲನ್ನು ಕುಡಿಸುವುದರಿಂದ ಮಕ್ಕಳ ಹಸಿವು ಕಡಿಮೆಯಾಗುತ್ತದೆ!. ತತ್ಪರಿಣಾಮವಾಗಿ ಮಕ್ಕಳು ಸೇವಿಸುವ ಅನ್ಯ ಆಹಾರಗಳ ಪ್ರಮಾಣವೂ ಕಡಿಮೆಯಾಗುತ್ತದೆ. 

ದನದ (ಹಸುವಿನ ) ಹಾಲನ್ನು ಕುಡಿಸುವುದರಿಂದ ಮಕ್ಕಳಲ್ಲಿ "ಕಫ" ತುಂಬುತ್ತದೆ ಎಂದು ಧೃಢವಾಗಿ ನಂಬಿರುವ ಅನೇಕ ವಿದ್ಯಾವಂತರೂ, ಈ ಸಮಸ್ಯೆಯನ್ನು ಪರಿಹರಿಸಲು ಹಾಲಿಗೆ ನೀರು ಬೆರೆಸಿ ನೀಡುತ್ತಾರೆ. ಇದೊಂದು ತಪ್ಪುಕಲ್ಪನೆಯೇ ಹೊರತು ವೈಜ್ಞಾನಿಕ ಸತ್ಯವಲ್ಲ. 

ಪ್ರತಿನಿತ್ಯ ಟಿ. ವಿ. ಚಾನೆಲ್ ಗಳಲ್ಲಿ ತಪ್ಪದೆ ಪ್ರಸಾರವಾಗುವ, ಮಕ್ಕಳ ಶಾರೀರಿಕ ಬೆಳವಣಿಗೆ,ಆರೋಗ್ಯ ಮತ್ತು ಶಕ್ತಿಗಳನ್ನು ಹೆಚ್ಚಿಸಬಲ್ಲದು ಎನ್ನುವ "ಕೊಕ್ಕೋ"ಮಿಶ್ರಿತ  ಪೇಯಗಳ  ಜಾಹೀರಾತುಗಳನ್ನು ಕಂಡು ಪ್ರಭಾವಿತರಾಗದವರೇ ಇಲ್ಲವೆನ್ನಬಹುದು. ಹಾಲಿನಲ್ಲಿ ಬೆರೆಸಿ ನೀಡಬೇಕಾದ ಇಂತಹ ಪೇಯಗಳು ಸ್ವಾದಿಷ್ಟವೆನಿಸಿದರೂ, ಇವುಗಳ ಸೇವನೆಯಿಂದ ನಿಶ್ಚಿತವಾಗಿಯೂ ಮಕ್ಕಳ ಹಸಿವು ಕಡಿಮೆಯಾಗುವುದು!. 

ನಿಮಗಿದು ತಿಳಿದಿರಲಿ 

ನವಜಾತ ಶಿಶುವಿಗೆ ಮೊದಲ ಆರು ತಿಂಗಳಿನಿಂದ ಒಂದು ವರ್ಷದ ಅವಧಿಗೆ "ಸ್ತನ್ಯಪಾನ" ಅತ್ಯವಶ್ಯಕ ಎನಿಸುತ್ತದೆ. ಮಗುವಿನ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ, ಆರೋಗ್ಯ  ರಕ್ಷಣೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ, ತಾಯಿಯ ಹಾಲು ಅತ್ಯಂತ ಮಹತ್ವಪೂರ್ಣವೆನಿಸುತ್ತದೆ. 

ಮಗುವಿಗೆ ಕನಿಷ್ಠ ನಾಲ್ಕರಿಂದ ಆರು ತಿಂಗಳುಗಳು ಕಳೆದ ಬಳಿಕವೇ ಘನ ಆಹಾರವನ್ನು ನೀಡಲು ಆರಂಭಿಸಿ. ಅದರಲ್ಲೂ ಮನೆಯಲ್ಲೇ ಸಿದ್ಧಪಡಿಸುವ ಗೋಧಿ-ರಾಗಿಗಳ ಮಿಶ್ರಣದಿಂದ ತಯಾರಿಸುವ "ಮಣ್ಣಿ " ಗೆ ಆದ್ಯತೆಯಿರಲಿ. ಇದರೊಂದಿಗೆ ಒಂದಿಷ್ಟು ಬೇಯಿಸಿದ ತರಕಾರಿ ಹಾಗೂ ಹಣ್ಣುಹಂಪಲುಗಳು, ಬೇಯಿಸಿದ ಮೊಟ್ಟೆ ಇತ್ಯಾದಿಗಳನ್ನು ಕ್ರಮೇಣ ನೀಡಲಾರಂಭಿಸಿ. 

ನಿಮ್ಮ ಕಂದನಿಗೆ ಎರಡುವರ್ಷ ವಯಸ್ಸಾದಂತೆಯೇ, ತಾನಾಗಿ ಆಹಾರ ಸೇವಿಸಲು ಅವಕಾಶ ಮತ್ತು ಉತ್ತೇಜನ ನೀಡಿ. ಅನೇಕ ಮಾತೆಯರು ಇಂದಿಗೂ ನಂಬಿರುವಂತೆ , ಮಕ್ಕಳಿಗೆ ಕೈತುತ್ತು ನೀಡಿದಲ್ಲಿ ಹೆಚ್ಚು ಆಹಾರ ಸೇವಿಸುತ್ತಾರೆ ಎನ್ನುವುದು ಅಪ್ಪಟ ಸುಳ್ಳು!. ಜೊತೆಗೆ ಕೈತುತ್ತನ್ನು ತಿನ್ನುವ ಮಕ್ಕಳು ಕ್ರಮೇಣ ತಾವಾಗಿಯೇ ಆಹಾರವನ್ನು ಸೇವಿಸಬೇಕು ಎನ್ನುವುದನ್ನೇ ಮರೆತುಬಿಡುತ್ತಾರೆ. ಇಂತಹ ಸಮಸ್ಯೆಗಳಿಗೆ ಆಸ್ಪದವನ್ನು ನೀಡದಂತೆ ನಿಮ್ಮ ಕಂಡನು ಮೆಚ್ಚುವ ಆಹಾರವನ್ನು ಒಂದು ಬಟ್ಟಲಿನಲ್ಲಿ ಇರಿಸಿ, ಚೊಕ್ಕಟವಾಗಿರುವ ಜಾಗದಲ್ಲಿ ಮಗುವನ್ನು ಕುಳ್ಳಿರಿಸಿ ತಿನ್ನಲು ಬಿಡಿ. ತಾಯಿ ಕೈತುತ್ತು ನೀಡುವುದಿಲ್ಲ ಎನ್ನುವುದನ್ನು ಅರಿತ ಮಗುವು, ಕಾಲಕ್ರಮೇಣ ತಾನಾಗಿ ಆಹಾರವನ್ನು ಸೇವಿಸಲಾರಂಭಿಸುತ್ತದೆ. 

ಆಹಾರ ಸೇವನೆಯ ಸಂದರ್ಭದಲ್ಲಿ ಕೊಂಚ ಹಠಮಾಡುವ ಮಕ್ಕಳ ತಂದೆತಾಯಂದಿರೂ ಹಠಮಾರಿತನವನ್ನು ತೋರಿದಲ್ಲಿ,ಊಟದ ಕೋಣೆಯು ರಣರಂಗವಾಗಿ ಪರಿಣಮಿಸಬಹುದು. ಇಂತಹ ಸನ್ನಿವೇಶಗಳ ಪುನರಾವರ್ತನೆಯಿಂದ ಮಕ್ಕಳು ಆಹಾರ ಸೇವನೆಯನ್ನೇ ದ್ವೇಷಿಸುವಂತಾಗುವುದು. ಇಂತಹ ಸ್ವಭಾವದ ಮಕ್ಕಳು ಮೆಚ್ಚದಿರುವ ಆಹಾರವನ್ನು ಕೆಲಕಾಲ ನೀಡದೇ, ಇವರು ಮೆಚ್ಚುವಂತಹ ಆಹಾರವನ್ನೇ ನೀಡಿದಲ್ಲಿ,ಸಂತೋಷದಿಂದ ಸವಿಯುವ ಮಕ್ಕಳು ಕ್ರಮೇಣ ತಾವು ಈ ಮೊದಲು ನಿರಾಕರಿಸುತ್ತಿದ್ದ ಆಹಾರವನ್ನು ಕೇಳಿ ತಿನ್ನುವಷ್ಟು ಬದಲಾಗುತ್ತಾರೆ. 

ಆಹಾರ ಸೇವನೆಯ ಸಮಯದಲ್ಲಿ ಮಕ್ಕಳ ವಿದ್ಯಾಭ್ಯಾಸ,ವರ್ತನೆಗಳು ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸದಿದ್ದಲ್ಲಿ, ನಿಶ್ಚಿತವಾಗಿಯೂ ಮಕ್ಕಳು ನಿರಾತಂಕವಾಗಿ ಆಹಾರವನ್ನು ಆಸ್ವಾದಿಸುವುದರಲ್ಲಿ ಸಂದೇಹವಿಲ್ಲ. 

ಅನೇಕ ಮಕ್ಕಳು ಜನ್ಮತಃ ಅಲ್ಪಪ್ರಮಾಣದ ಆಹಾರವನ್ನು ಸೇವಿಸುತ್ತಿದ್ದರೂ, ಇವರ ಶಾರೀರಿಕ ಬೆಳವಣಿಗೆ ಮತ್ತು ಆರೋಗ್ಯದ ಮಟ್ಟ ಉತ್ತಮವಾಗಿದ್ದು ಸದಾ ಚಟುವಟಿಕೆಯಿಂದ ಇರುತ್ತಾರೆ. ಇಂತಹ ಮಕ್ಕಳಿಗೆ ಅಧಿಕ ಪ್ರಮಾಣದ ಆಹಾರವನ್ನು ನೀಡಿ ತಿನ್ನಲು ಒತ್ತಾಯಿಸದಿರಿ. ಇದಕ್ಕೆ ಬದಲಾಗಿ ಅಲ್ಪಪ್ರಮಾಣದ ಆಹಾರವನ್ನು ನೀಡಿ, ಮಗು ತಾನಾಗಿ ಮತ್ತೊಮ್ಮೆ ಬೇಕೆಂದು ಕೇಳುವಂತೆ ಮಾಡಿರಿ. 

ಅನೇಕ ವಿದ್ಯಾವಂತರೂ ನಂಬಿರುವಂತೆ ವಿವಿಧ ರೀತಿಯ ಜೀವಸತ್ವಗಳು ಮತ್ತು ಟಾನಿಕ್ ಗಳನ್ನು ನೀಡುವುದರಿಂದ ಅಲ್ಪಾಹಾರ ಸೇವಿಸುವ ಮಕ್ಕಳ ಹಸಿವನ್ನು ಹೆಚ್ಚಿಸುವುದು ಅಸಾಧ್ಯ. ಜೊತೆಗೆ ಪೋಷಕಾಂಶಗಳ ಕೊರತೆ ಇಲ್ಲದಿರುವಾಗ ನೀಡುವ ಇಂತಹ ಔಷದಗಳು, ಬೇರೊಂದು ಸಮಸ್ಯೆಗೆ ಕಾರಣವೆನಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 

ಇವೆಲ್ಲಕ್ಕೂ ಮಿಗಿಲಾಗಿ ದಿನನಿತ್ಯ ಎರಡು ಹೊತ್ತಿನ ಊಟಗಳ ನಡುವೆ ಮಕ್ಕಳು ತಿನ್ನುವ ತಿಂಡಿಗಳೂ ಆರೋಗ್ಯರಕ್ಷಣೆ ಹಾಗೂ ಶಾರೀರಿಕ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಈ ಉಪಾಹಾರಗಳಲ್ಲಿ "ನಿಷ್ಪ್ರಯೋಜಕ ಆಹಾರ" (ಜಂಕ್ ಫುಡ್) ಗಳ ಸೇವನೆಯು ಶಾರೀರಿಕ ಬೆಳವಣಿಗೆಯನ್ನೇ ಕುಂಠಿತಗೊಳಿಸುವುದರೊಂದಿಗೆ, ಅನಾರೋಗ್ಯಗಳಿಗೂ  ಕಾರಣವೆನಿಸಬಹುದು. 

ಅತಿಯಾದ ಪ್ರೀತಿ, ವಿಪರೀತ ಶಿಸ್ತು ಮತ್ತು ಮಿತಿಮೀರಿದ ಶಿಕ್ಷೆಗಳು ನಿಸ್ಸಂದೇಹವಾಗಿಯೂ ಮಕ್ಕಳಲ್ಲಿ ಹಠಮಾರಿತನ ಬೆಳೆಯಲು ಮೂಲ ಕಾರಣವೆನಿಸುತ್ತವೆ. ತಮ್ಮ "ಆಜ್ಞೆ" ಯನ್ನು ಶಿರಸಾ ವಹಿಸಿ ಪರಿಪಾಲಿಸಬೇಕೆಂದು ಬಯಸುವ ಅನೇಕ ಮಾತಾಪಿತರು, ತಮ್ಮ ಮಕ್ಕಳ ಮಾತು- ಭಾವನೆಗಳಿಗೆ ಕಿಲುಬುಕಾಸಿನ ಬೆಲೆಯನ್ನೂ ನೀಡುವುದಿಲ್ಲ. ಇದು ನಿಜಕ್ಕೂ ಸರಿಯಲ್ಲ. ಮಕ್ಕಳ ಬೇಕು-ಬೇಡಗಳನ್ನು ಅರಿತುಕೊಂಡು,ಅವರ ಮನೋಭಾವನೆಗಳನ್ನು ಅರ್ಥೈಸಿಕೊಂಡು ವರ್ತಿಸುವುದು, ಮಕ್ಕಳ ನಡವಳಿಕೆಗಳ ಹಿತದೃಷ್ಟಿಯಿಂದ ಒಳಿತೆನಿಸುವುದು. 

ಪ್ರತಿಯೊಂದು "ಕ್ರಿಯೆ"ಗೂ ಅದಕ್ಕೆ ಅನುಗುಣವಾದ "ಪ್ರತಿಕ್ರಿಯೆ" ಇರುವುದು ಸತ್ಯ. ಅದೇ ರೀತಿಯಲ್ಲಿ ಮಕ್ಕಳೊಂದಿಗೆ ನೀವು ತೋರುವ ವರ್ತನೆಗಳಿಗೆ ಅನುಗುಣವಾಗಿ ಮಗು ಪ್ರತಿಕ್ರಿಯಿಸುವುದು ಸ್ವಾಭಾವಿಕ. ಇದೇ ಕಾರಣದಿಂದಾಗಿ "ಜಾಣಮರಿ,ಇದೆಲ್ಲವನ್ನೂ ತಿಂದರೆ ನೀನು ಗುಡ್ ಬಾಯ್" ಎಂದಾಗ ಮರುಮಾತಿಲ್ಲದೆ ಊಟಮಾಡುವ ಮಗು, ಲೋ ಬಟ್ಟಲಲ್ಲಿ ಇಕ್ಕಿರುವುದನ್ನು ತಿನ್ನದೇ ಹೋದಲ್ಲಿ ನಿನ್ನ ಬೆನ್ನಿನ ಚರ್ಮ ಸುಲಿಯುತ್ತೇನೆ, ಎಂದಾಗ ಏನನ್ನೂ ತಿನ್ನದೇ ಇರುವುದು ಕೂಡಾ ಅಷ್ಟೇ ಸ್ವಾಭಾವಿಕ!. 

ಇವೆಲ್ಲಕ್ಕೂ ಮಿಗಿಲಾಗಿ ಹೆತ್ತವರು ತಮ್ಮ ಬಾಲ್ಯದಲ್ಲಿ ತಮ್ಮ ಮಾತಾಪಿತರಿಂದ ತಾವೇನು ಅಪೇಕ್ಷಿಸಿದ್ದೆವು ಹಾಗೂ  ತಮಗೆ ಕಂಡುಬಂದಿದ್ದ ನ್ಯೂನ್ಯತೆಗಳೇನು ಎಂದು ನೆನಪಿಸಿಕೊಂಡಲ್ಲಿ, ತಮ್ಮ ಮಕ್ಕಳ ಲಾಲನೆ ಪೋಷನೆಗಳು ಸುಲಭವೆನಿಸೀತು. 

ಅಂತಿಮವಾಗಿ ನಿಮ್ಮ ಮಕ್ಕಳ ಬೇಕು-ಬೇಡಗಳನ್ನು ಅರಿತುಕೊಂಡು, ಅವರ ದೈನಂದಿನ ಚಟುವಟಿಕೆ ಇತ್ಯಾದಿಗಳನ್ನು ಪರಿಗಣಿಸಿ,ವಿವಿಧ ಪೋಷಕಾಂಶಗಳಿಂದ ಸಮೃದ್ಧವಾದ ವೈವಿಧ್ಯಮಯ ಆಹಾರಗಳನ್ನು ನೀಡಿರಿ. ಅವಶ್ಯಕತೆಯಿದ್ದಲ್ಲಿ ನಿಮ್ಮ ನಂಬಿಗಸ್ತ ಕುಟುಂಬ ವೈದ್ಯರು ಅಥವಾ ಶಿಶುತಜ್ಞರ ಸಲಹೆಯನ್ನು ಪಡೆಯಿರಿ. 

ಡಾ.ಸಿ. ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ೨೯-೧೨-೨೦೦೫ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 


Tuesday, August 27, 2013

Civic sense - responsibility





                           ನಾಗರಿಕ ಪ್ರಜ್ಞೆಯ ಕೊರತೆ: ಪರಿಹಾರವಾಗದು ಸಮಸ್ಯೆ 
ಘಟನೆ-೧
ರಾತ್ರಿ  ಹತ್ತು ಗಂಟೆಯ ಹೊತ್ತಿಗೆ ತರಾತುರಿಯಿಂದ ಮನೆಗೆ ಮರಳುತ್ತಿದ್ದ ಸುರೇಶನು, ತನ್ನ ಮನೆಯ ಸಮೀಪದ ರಸ್ತೆಯ ಹೊಂಡದಲ್ಲಿ ತುಂಬಿಸಿದ್ದ ಕಲ್ಲೊಂದನ್ನು ಎಡವಿ ಬಿದ್ದ ರಭಸಕ್ಕೆ ಆತನ ಮುಂಗೈ ಮೂಳೆ ಮುರಿದಿತ್ತು. ತಕ್ಷಣ ಸಮೀಪದ ಆಸ್ಪತ್ರೆಗೆ ಧಾವಿಸಿ,ತಜ್ಞವೈದ್ಯರ ಸಲಹೆ-ಚಿಕಿತ್ಸೆಗಳನ್ನು ಪಡೆದು ಹೊರಬೀಳುವಾಗ,ಆತನ ಕಿಸೆಯಿಂದ ಒಂದು ಸಾವಿರ ರೂಪಾಯಿಗಳು ಖರ್ಚಾಗಿದ್ದವು!. 

ಕಳೆದ ಒಂದು ತಿಂಗಳಿನಿಂದ ಸುರೇಶನ ಮನೆಯ ಸಮೀಪದಲ್ಲಿನ ದಾರಿದೀಪ ಕೆಟ್ಟಿದ್ದು, ಈ ವಿಚಾರವನ್ನು ಆತನು ನಿರ್ಲಕ್ಷಿಸಿದ್ದುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವೆನಿಸಿತ್ತು. 

ಮರುದಿನ ಪುರಸಭೆಯ ಕಚೇರಿಗೆ ತೆರಳಿದ್ದ ಸುರೇಶನು ತನ್ನ ಮನೆಯ ಸಮೀಪದ ದಾರಿದೀಪ ಕೆಟ್ಟು ಹೋಗಿ ತಿಂಗಳು ಕಳೆದರೂ ದುರಸ್ತಿ ಪಡಿಸದ ಪುರಸಭಾ ನೌಕರರ ವಿರುದ್ಧ ಕೆಂಡಕಾರಿದ್ದನು. ತುಸು ಉದ್ವಿಗ್ನನಂತೆ ಕಾಣುತ್ತಿದ್ದ ಆತನನ್ನು, ಮುಖ್ಯಾಧಿಕಾರಿಗಳು ಕುಳಿತುಕೊಳ್ಳಲು ಹೇಳಿದ್ದರು. ಪ್ರಾಮಾಣಿಕವಾಗಿ ತೆರಿಗೆಯನ್ನು ಪಾವತಿಸುತ್ತಿರುವ ಜವಾಬ್ದಾರಿಯುತ ನಾಗರಿಕನಾಗಿರುವ ತನಗೆ, ನಗರದ ನಿವಾಸಿಗಳ ಸಮಸ್ಯೆಗಳನ್ನು ಹಾಗೂ ಕುಂದುಕೊರತೆಗಳನ್ನು ಪರಿಹರಿಸದ ಪುರಸಭೆಯ ಅಧಿಕಾರಿಗಳು ಮತ್ತು ಸಿಬಂದಿಗಳನ್ನು ಕಂಡೊಡನೆ ಕೆಂಡಾಮಂಡಲ ಸಿಟ್ಟುಬರುತ್ತದೆ ಎಂದು ದೂರಿದ್ದನು. ಜೊತೆಗೆ ನಗರದ ರಸ್ತೆಗಳ ದುಸ್ಥಿತಿ,ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ,ತುಂಬಿತುಳುಕುವ ಕಸದ ತೊಟ್ಟಿಗಳು ಇತ್ಯಾದಿಗಳಿಂದ ಜನಸಾಮಾನ್ಯರಿಗೆ ಸಂಭವಿಸುತ್ತಿರುವ ತೊಂದರೆಗಳ ಬಗ್ಗೆ ದೂರುಗಳ ಸರಮಾಲೆಯನ್ನೆ ಬಿಚ್ಚಿಟ್ಟನು. 

ಸುರೇಶನ ಟೀಕಾ ಪ್ರಹಾರ ಮುಗಿಯುವ ತನಕ ಸುಮ್ಮನಿದ್ದ ಮುಖ್ಯಾಧಿಕಾರಿ, ದಾರಿದೀಪ ಕೆಟ್ಟಿರುವ ಬಗ್ಗೆ ಮತ್ತು ಇದೀಗ ತಾವು ವಿವರಿಸಿದ ಇತರ ಸಮಸ್ಯೆಗಳ ಬಗ್ಗೆ ಪುರಸಭಾ ಕಚೇರಿಯಲ್ಲಿ ದೂರನ್ನು ದಾಖಲಿಸಿ ಎಷ್ಟು ದಿನಗಳು ಕಳೆದಿವೆ ಎಂದು ಕೇಳಿದಾಗ, ಸುರೇಶನ ಮುಖ ನಿಸ್ತೇಜವಾಗಿತ್ತು. ಏಕೆಂದರೆ ಸುರೇಶನು ಮನೆಯ ಸಮೀಪದ ದಾರಿದೀಪ ಕೆಟ್ಟಿರುವ ಹಾಗೂ ಅನ್ಯ ಸಮಸ್ಯೆಗಳ ಬಗ್ಗೆ ಒಂದೇ ಒಂದು ಬಾರಿಯಾದರೂ ದೂರನ್ನೇ ದಾಖಲಿಸಿರಲಿಲ್ಲ!.  

ಘಟನೆ-೨

ತನ್ನ ಮನೆಗೆ ನಾಲ್ಕಾರು ದಿನಗಳಿಂದ ನಲ್ಲಿನೀರು ಬಾರದ ಕಾರಣದಿಂದಾಗಿ ಪಕ್ಕದ ಮನೆಯ ಬಾವಿಯಿಂದ ನೀರೆಳೆದು ಹೊತ್ತು ಸುಸ್ತಾದ  ಶಾಮಣ್ಣನವರು, ನೀರನ್ನು ಬಿಡುವ ಪುರಸಭೆಯ ಸಿಬಂದಿಯನ್ನು ಮನಸಾರೆ ಶಪಿಸುತ್ತಿದ್ದರು. ಜೊತೆಗೆ ಈ ಸಮಸ್ಯೆಗೆ ಕರ್ತವ್ಯದ ಮೇಲಿದ್ದ ಸಿಬಂದಿ ರಜೆಯ ಹಾಕಿರುವುದೇ ಕಾರಣವೆಂದು ನಂಬಿದ್ದರು. ಆದರೆ ಮುಂದಿನ ಮೂರುದಿನಗಳ ಬಳಿಕವೂ ನಲ್ಲಿನೀರು ಬರದಿದ್ದಾಗ, ಅಕ್ಕಪಕ್ಕದ ಮನೆಯವರಲ್ಲಿ ವಿಚಾರಿಸಿದ ಶಾಮಣ್ಣನವರಿಗೆ ತಮ್ಮ ಹಿಂದಿನ ರಸ್ತೆಯಲ್ಲಿರುವ ಮನೆಗಳಿಗೆ ನೀರು ಬರುತ್ತಿರುವುದು ತಿಳಿದುಬಂದಿತ್ತು. 

ಪುರಸಭೆಯ ಕಚೇರಿಯಲ್ಲಿ ಈ ಬಗ್ಗೆ ದೂರನ್ನು ನೀಡುವಂತೆ ನೆರೆಕರೆಯವರು ಸೂಚಿಸಿದರೂ,ಶಾಮಣ್ಣನವರು ಮಾತ್ರ ಇದಕ್ಕೆ ಸಿದ್ಧರಿರಲಿಲ್ಲ. ಏಕೆಂದರೆ ಹಿಂದೊಮ್ಮೆ ಇಂತಹ ದೂರೊಂದನ್ನು ನೀಡಲು ಹೋಗಿದ್ದ ಸಂದರ್ಭದಲ್ಲಿ, ಸಂಬಂಧಿತ ಇಲಾಖೆಯ ಅಧಿಕಾರಿಯೊಬ್ಬರು ಉದ್ಧಟತನದಿಂದ ವರ್ತಿಸಿ ತನ್ನನ್ನು ಅವಮಾನಿಸಿದ್ದ ಘಟನೆಯನ್ನು ಶಾಮಣ್ಣ ಮರೆತಿರಲಿಲ್ಲ. ಇದೇ ಕಾರಣದಿಂದಾಗಿ ಪುರಸಭೆಗೆ ದೂರುಸಲ್ಲಿಸದಿದ್ದ ಶಾಮಣ್ಣನವರ ಮನೆಗೆ, ಮುಂದಿನ ಮೂರು ವಾರಗಳ ಕಾಲ ನಲ್ಲಿನೀರು ಬರಲೇ ಇಲ್ಲ!. 

ಘಟನೆ-೩

ನಗರದ ಹೊರವಲಯದ ಬಡಾವಣೆಯ ರಸ್ತೆಯೊಂದರ ಚರಂಡಿಯಲ್ಲಿ ಬೀದಿನಾಯಿಯೊಂದು ಸತ್ತುಬಿದ್ದಿತ್ತು. ಯಾವುದೋ ವಾಹನಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಈ ನಾಯಿಯು, ಒಂದೆರಡು ದಿನಗಳ ಕಾಲ ಅರೆಜೀವವಾಗಿ ರಸ್ತೆಯ ಬದಿಯಲ್ಲಿ ಬಿದ್ದುಕೊಂಡಿದ್ದು ಅಂತಿಮವಾಗಿ ಚರಂಡಿಯಲ್ಲಿ ಬಿದ್ದು ಸತ್ತಿತ್ತು. 

ಸುಮಾರು ಮೂರು ದಿನಗಳ ಬಳಿಕ ಸತ್ತ ನಾಯಿಯ ಶವವು ಕೊಳೆಯಲಾರಂಭಿಸಿ  ಸುತ್ತಮುತ್ತಲ ಪರಿಸರದಲ್ಲಿ ದುರ್ವಾಸನೆ ಹಬ್ಬಿತ್ತು. ಕರವಸ್ತ್ರದಿಂದ ಮೂಗನ್ನು  ಮುಚ್ಚಿಕೊಂಡು ಓಡಾಡುತ್ತಿದ್ದ ಸ್ಥಳೀಯರು,ತಮ್ಮ ವಾರ್ಡಿನ ಜನಪ್ರತಿನಿಧಿ ಮತ್ತು ಪೌರಕಾರ್ಮಿಕರನ್ನು ವಾಚಾಮಗೋಚರವಾಗಿ ಬಯ್ಯುತ್ತಿದ್ದರೂ ಪುರಸಭೆಗೆ ದೂರನ್ನು ನೀಡುವ ಗೋಜಿಗೆ ಹೋಗಿರಲಿಲ್ಲ. ಏಕೆಂದರೆ ಈ ರಸ್ತೆಯಲ್ಲಿ ನೂರಾರು ಜನರು ಓಡಾಡುತ್ತಿರುವುದರಿಂದ, ಯಾರಾದರೂ ದೂರು ನೀಡಲಿ ಎನ್ನುವ ಮನೋಭಾವ ಇವರೆಲ್ಲರಲ್ಲೂ ಇದ್ದಿತು. ಅಂತೆಯೇ ಈ ದುರ್ಗಂಧವನ್ನು ಸಹಿಸಿಕೊಳ್ಳುವಷ್ಟು ಸಹನೆಯೂ ಇತ್ತು!. 

ನಾಗರಿಕ ಪ್ರಜ್ಞೆ ಮತ್ತು ಹೊಣೆಗಾರಿಕೆ 

ಹಳ್ಳಿಯಿಂದ ಆರಂಭಿಸಿ ದಿಲ್ಲಿಯ ತನಕ ಪ್ರತಿಯೊಂದು ಊರುಗಳಲ್ಲೂ ಉದ್ಭವಿಸುವ ವೈವಿಧ್ಯಮಯ ಸಾರ್ವಜನಿಕ ಸಮಸ್ಯೆಗಳು ಮತ್ತು ಕುಂದುಕೊರತೆಗಳ ಬಗ್ಗೆ ಮತ್ತು ಇವುಗಳನ್ನು ತ್ವರಿತಗತಿಯಲ್ಲಿ ಪರಿಹರಿಸದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು-ನೌಕರರ ನಿರ್ಲಕ್ಷ್ಯಗಳ ಬಗ್ಗೆ ಜನಸಾಮಾನ್ಯರು ಕಿಡಿಕಾರುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ತಮ್ಮ ನಾಗರಿಕ ಪ್ರಜ್ಞೆ ಮತ್ತು ಹೊಣೆಗಾರಿಕೆಗಳನ್ನು ಮಾತ್ರ ಅನುಕೂಲಕರವಾಗಿ ಮರೆತುಬಿಡುತ್ತಾರೆ!. 

ನಿಜ ಹೇಳಬೇಕಿದ್ದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ನಾಗರಿಕ ಪ್ರಜ್ಞೆ ಮತ್ತು ಹೊಣೆಗಾರಿಕೆಗಳು  ನಿಶ್ಚಿತವಾಗಿಯೂ ಇರಲೇಬೇಕು. ಇವುಗಳನ್ನು ಸಂದರ್ಭೋಚಿತವಾಗಿ ಹಾಗೂ ಸಮರ್ಪಕವಾಗಿ, ,ಬಹುತೇಕ ಸಾರ್ವಜನಿಕ ಸಮಸ್ಯೆಗಳು ಮತ್ತು ಕುಂದುಕೊರತೆಗಳು ಸುಲಭದಲ್ಲೇ ಪರಿಹಾರಗೊಳ್ಳುತ್ತವೆ. ಆದರೆ ಅಧಿಕತಮ ಜನರು ಇಂತಹ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸದೇ, ತಮ್ಮ ಊರಿನ ಜನರು ನಿಷ್ಪ್ರಯೋಜಕರು ಎಂದು ದೂರುತ್ತಾರೆ. ಈ ಸಂದರ್ಭದಲ್ಲಿ ತಾವು ಕೂಡಾ ಈ ಊರಿನ ಜನರಲ್ಲಿ ಒಬ್ಬರು ಎನ್ನುವುದನ್ನು ಮಾತ್ರ ಮರೆತುಬಿಡುತ್ತಾರೆ. 

ಸಾಮಾನ್ಯವಾಗಿ ಪುರಜನರನ್ನು ಪೀಡಿಸುವ ಸಮಸ್ಯೆಗಳ ಬಗ್ಗೆ ಸ್ಥಳೀಯ ಸಂಸ್ಥೆಗೆ ದೂರನ್ನೇ ನೀಡದಿದ್ದಲ್ಲಿ, ಇವುಗಳು ಪರಿಹಾರಗೊಳ್ಳುವ ಸಾಧ್ಯತೆಗಳೇ ಇರುವುದಿಲ್ಲ. ಜೊತೆಗೆ ದೂರು ನೀಡಿದ ಬಳಿಕವೂ ಸಮಸ್ಯೆ ಪರಿಹಾರಗೊಳ್ಳದೇ ಇದ್ದಲ್ಲಿ  ಸಂಬಂಧಿತ ಅಧಿಕಾರಿಯನ್ನು ಸಂಪರ್ಕಿಸಿ, ತಾವು ನೀಡಿದ್ದ ದೂರಿನ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಳುವಷ್ಟು ವ್ಯವಧಾನವೂ ನಾಗರಿಕರಲ್ಲಿ ಇರಲೇಬೇಕು. 

ಉದಾಹರಣೆಗೆ ಸುರೇಶನ ಮನೆಯ ಸಮೀಪದ ದಾರಿದೀಪ ಕೆಟ್ಟಿರುವ ವಿಚಾರ ಪುರಸಭೆಯ ನೌಕರರಿಗೆ ತಿಳಿಯುವುದಾದರೂ ಹೇಗೆ?. ಪುರಸಭಾ ವ್ಯಾಪ್ತಿಯಲ್ಲಿ ಬೆಳಗುವ ಸಹಸ್ರಾರು ದಾರಿದೀಪಗಳನ್ನು ಪುರಸಭೆಯ ನೌಕರರು, ಪ್ರತಿದಿನ ಕತ್ತಲಾದ ಬಳಿಕ ಪರಿಶೀಲಿಸುವುದು ಅಸಾಧ್ಯ ಎನ್ನುವುದು ಸುರೇಶನಿಗೆ ಅರಿಯದ ವಿಚಾರವೇನಲ್ಲ.ನಿಜಸ್ಥಿತಿ ಹೀಗಿರುವಾಗ ಯಾರಾದರೂ ಈ ಬಗ್ಗೆ ದೂರು ನೀಡದೆ ಇದ್ದಲ್ಲಿ, ಇಲ್ಲಿನ ದಾರಿದೀಪ ದುರಸ್ಥಿಯಾಗುವ ಸಾಧ್ಯತೆಗಳೇ ಇಲ್ಲ. 

ಅದೇ ರೀತಿಯಲ್ಲಿ ಶಾಮಣ್ಣನವರ ಮನೆಯಿರುವ ಬೀದಿಯಲ್ಲಿ ನಲ್ಲಿನೀರು ಬರಿತ್ತಿಲ್ಲವೆಂದು ನೀರು ಬಿಡುವ ಸಿಬಂದಿಗೆ ಗೊತ್ತಾಗುವುದೆಂತು?. ನಗರದ ಹೊರವಲಯದಲ್ಲಿರುವ ಚರಂಡಿಯೊಂದರಲ್ಲಿ ನಾಯಿ ಸತ್ತುಬಿದ್ದಿರುವುದು ಪೌರಕಾರ್ಮಿಕರಿಗೆ ತಿಳಿಯುವುದು ಹೇಗೆ?.ಈ ರೀತಿಯ ಸಮಸ್ಯೆಗಳು ಕ್ಷಿಪ್ರಗತಿಯಲ್ಲಿ  ಪರಿಹಾರಗೊಳ್ಳಬೇಕಿದ್ದಲ್ಲಿ, ಪ್ರತಿಯೊಬ್ಬ ನಾಗರಿಕರು ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು ಸ್ಥಳೀಯ ಸಂಸ್ಥ್ಹೆಯೊಂದಿಗೆ ಸಹಕರಿಸಬೇಕು. 

ದೂರು- ಪರಿಹಾರ 

ಜನಸಾಮಾನ್ಯರು ತಮ್ಮನ್ನು ಬಾಧಿಸುತ್ತಿರುವ ಪೌರ ಸಮಸ್ಯೆಗಳ ಬಗ್ಗೆ ಸ್ಥಳೀಯ ಸಂಸ್ಥೆಗಳಿಗೆ ದೂರು ನೀಡಲೇಬೇಕು. ಜೊತೆಗೆ ಈ ದೂರಿನಲ್ಲಿ ನಿರ್ದಿಷ್ಟ ಸಮಸ್ಯೆಯ ಎಲ್ಲ ವಿವರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ "ಸಾರ್ವಜನಿಕ ಕುಂದುಕೊರತೆ ಮತ್ತು ಪರಿಹಾರ" ವಿಭಾಗವಿದ್ದು, ಇಲ್ಲಿ ದೂರನ್ನು ದಾಖಲಿಸಲು ಮುದ್ರಿತ ಅರ್ಜಿಯನ್ನು ಉಚಿತವಾಗಿ ನೀಡಲಾಗುತ್ತದೆ. ಈ ಅರ್ಜಿಗಳಲ್ಲಿ ಆರೋಗ್ಯ,ಶಿಕ್ಷಣ,ಸಾಮಾನ್ಯ ಆಡಳಿತ,ನಗರ ಯೋಜನೆ,ಕಂದಾಯ,ಪಶು ಸಂಗೋಪನೆ,ತೋಟಗಾರಿಕೆ,ಮಾಹಿತಿ ತಂತ್ರಜ್ಞಾನ,ಸಮುದಾಯ ಅಭಿವೃದ್ಧಿ ಮತ್ತು ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ೧೨೮ ಸಮಸ್ಯೆಗಳನ್ನು ನಮೂದಿಸಿರುತ್ತಾರೆ. ಇವುಗಳಲ್ಲಿ ತಮಗೆ ಸಂಬಂಧಿಸಿದ ಸಮಸ್ಯೆಯ ಕ್ರಮಸಂಖ್ಯೆಯ ಸುತ್ತಲೂ ವೃತ್ತವೊಂದನ್ನು ಗುರುತಿಸಿ,ತಮ್ಮ ಹೆಸರು,ವಿಳಾಸಗಳನ್ನು ನಮೂದಿಸಿ ದೂರನ್ನು ದಾಖಲಿಸಬೇಕು. ಈ ಅರ್ಜಿಯಲ್ಲಿ ಮುದ್ರಿತವಾಗಿರದ ಸಮಸ್ಯೆಯನ್ನು ನಮೂದಿಸಲೂ ಪ್ರತ್ಯೇಕ ಸ್ಥಳಾವಕಾಶವಿದೆ. ದೂರು ದಾಖಲಿಸಿದ ಬಳಿಕ ಇದರ ಸ್ವೀಕೃತಿಯನ್ನು ತಪ್ಪದೆ ಪಡೆದುಕೊಂಡಲ್ಲಿ, ನಿಗದಿತ ಅವಧಿಯಲ್ಲಿ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಸ್ವೀಕೃತಿಯ ಆಧಾರದದಲ್ಲಿ ಮೇಲಧಿಕಾರಿಗಳೊಂದಿಗೆ ವ್ಯವಹರಿಸಬಹುದು. 

ಶ್ಯಾಮಣ್ಣನವರಂತೆ ಪುರಸಭಾ ಕಚೇರಿಗೆ ಭೇಟಿ ನೀಡಲು ಹಿಂಜರಿವ ಅಥವಾ ಕಾರಣಾಂತರಗಳಿಂದ ಭೇಟಿನೀಡಲಾಗದ ನಾಗರಿಕರಿಗಾಗಿ ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ದಿನದ ೨೪ ತಾಸುಗಳೂ ದೂರವಾಣಿ ಅಥವಾ ಅಂತರ್ಜಾಲದ(ಇಂಟರ್ ನೆಟ್) ಮೂಲಕ ದೂರು ಸ್ವೀಕರಿಸುವ ವ್ಯವಸ್ಥೆ ಜಾರಿಯಲ್ಲಿದೆ. ಈ ವಿಧಾನದಲ್ಲಿ ದೂರು  ಸ್ವೀಕೃತಿ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಸಂಖ್ಯೆಯನ್ನು ಬಳಸಿ, ಮುಂದೆ ದೂರವಾಣಿ- ಅಂತರ್ಜಾಲದ ಮೂಲಕ ಅವಶ್ಯಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. 

ಸಾರ್ವಜನಿಕ ಸಮಸ್ಯೆಗಳು ಮತ್ತು ಪುರಸಭೆ ನೀಡುವ ಸೇವಾ ಸೌಲಭ್ಯಗಳಲ್ಲಿ ಉದ್ಭವಿಸಬಹುದಾದ ಕುಂದುಕೊರತೆಗಳ ಪರಿಹಾರಕ್ಕಾಗಿ ಇಷ್ಟೆಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿದ್ದರೂ, ಅಧಿಕತಮ ಜನರಿಗೆ ಈ ವಿಚಾರ ತಿಳಿದಿಲ್ಲ. ಇದನ್ನು ತಿಳಿದಿರುವ ಅನೇಕ ನಾಗರಿಕರು ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ತಮ್ಮ ಸಮಸ್ಯೆಗಳು ಪರಿಹಾರವಾಗದಿರಲು ಸ್ಥಳೀಯ ಸಂಸ್ಥೆಗಳ ಸಿಬಂದಿಗಳೇ ಕಾರಣವೆಂದು ದೂರುವ ಹವ್ಯಾಸವನ್ನು ಮಾತ್ರ ನಿಲ್ಲಿಸುವುದೇ ಇಲ್ಲ!. 

ಡಾ.ಸಿ . ನಿತ್ಯಾನಂದ ಪೈ,ಪುತ್ತೂರು                                                              

ಉದಯವಾಣಿ ಪತ್ರಿಕೆಯ ೨೯-೧೧-೨೦೦೭ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 

Friday, August 23, 2013

article no.50-psychiatric problems




                                  ಮದುವೆಯಾಗದೇ ಹುಚ್ಚುಬಿಡದು, ಹುಚ್ಚುಬಿಡದೇ  ........?

ಮನೋವ್ಯಾಧಿಗಳಿಗೆ ಈಡಾಗುತ್ತಿರುವ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೂ,ಈ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸುವ ಮಾರ್ಗೋಪಾಯಗಳು ಮತ್ತು ಇದಕ್ಕೆ ಬೇಕಾಗುವ ವ್ಯವಸ್ಥೆಗಳು ಜನಸಾಮಾನ್ಯರಿಗೆ ಸುಲಭದಲ್ಲಿ ಲಭ್ಯವಾಗುತ್ತಿಲ್ಲ.
-------------------             ----------------------                         ------------------------------------                 -----------------------------

ಅನೇಕ ಭಾರತೀಯರ ಮನದಲ್ಲಿ ತಪ್ಪುಕಲ್ಪನೆಗಳು ಮತ್ತು ಮೂಢ ನಂಬಿಕೆಗಳಿಗೆ ಕಾರಣವೆನಿಸಿರುವ ಆರೋಗ್ಯದ ಸಮಸ್ಯೆಗಳಲ್ಲಿ ಮಾನಸಿಕ ವ್ಯಾಧಿಗಳಿಗೆ ಅಗ್ರಸ್ಥಾನ ಸಲ್ಲುತ್ತದೆ. ತಜ್ಞ ಮನೋವೈದ್ಯರ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಗಳಿಂದ ಗುಣವಾಗಬಲ್ಲ ವಿವಿಧ ಮನೋವ್ಯಾಧಿಗಳಿಗೆ, ಜನಸಾಮಾನ್ಯರು ಇಂದಿಗೂ ಮಂತ್ರ-ತಂತ್ರ ಮತ್ತು ಪೂಜೆ-ಪುನಸ್ಕಾರಗಳಂತಹ ಪರಿಹಾರಗಳಿಗೆ ಮೊರೆಹೊಗುತ್ತಿರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತದೆ!. 

ಸುಹಾಸನಿಗೆ "ಹುಚ್ಚು" ಹಿಡಿದಿಲ್ಲ 

ಶ್ರೀನಿವಾಸರಾಯರ ಏಕಮಾತ್ರ ಪುತ್ರ ಸುಹಾಸನು ಆಟಪಾಠಗಳಲ್ಲಿ ಪ್ರವೀಣನಾಗಿದ್ದು, ಕಾಲೇಜಿನಲ್ಲಿ "ಹೀರೋ" ಎನಿಸಿದ್ದನು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ತನ್ನ ಸೌಮ್ಯ ಸ್ವಭಾವ ಮತ್ತು ನಯವಿನಯಗಳಿಂದಾಗಿ, ಸಹಪಾಠಿಗಳ ಮತ್ತು ಅಧ್ಯಾಪಕರ ಮೆಚ್ಚುಗೆಗೆ ಪಾತ್ರನಾಗಿದ್ದನು. 

ಸ್ನೇಹಜೀವಿಯಾಗಿದ್ದ ಸುಹಾಸನು ಸದಾ ಸ್ನೇಹಿತರೊಂದಿಗೆ ಕಾಲಕಳೆಯುತ್ತಿದ್ದರೂ, ವಿದ್ಯಾಭ್ಯಾಸದಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದನು. ಆದರೆ ಬಿ. ಕಾಂ ಅಂತಿಮ ವರ್ಷದ ಮಧ್ಯಂತರ ಪರೀಕ್ಷೆಗಳು ಆರಂಭವಾದಂತೆಯೇ, ಸುಹಾಸನ ವರ್ತನೆಗಳು ನಿಧಾನವಾಗಿ ಬದಲಾಗಲಾರಂಭಿಸಿದ್ದವು. ಇದನ್ನು ಗಮನಿಸಿದ್ದ ಆತನ ಮಿತ್ರರು, ಪ್ರಾಯಶಃ ಪರೀಕ್ಷೆಗಳ ಒತ್ತಡವೇ ಇದಕ್ಕೆ ಕಾರಣವಾಗಿರಬೇಕೆಂದು ಸಂದೇಹಿಸಿದ್ದರು. ಆದರೆ ಫಲಿತಾಂಶಗಳು ಪ್ರಕಟವಾದಾಗ ಸದಾ ಅಗ್ರಸ್ಥಾನದಲ್ಲಿ ಇರುತ್ತಿದ್ದ ಸುಹಾಸನು ಪ್ರತೀ ವಿಷಯದಲ್ಲೂ ಅನುತ್ತೀರ್ಣನಾಗಿದ್ದನು. 

ಮುಂದಿನ ಒಂದೆರಡು ತಿಂಗಳುಗಳಲ್ಲಿ ಸುಹಾಸನ ವಿಲಕ್ಷಣ ವರ್ತನೆಗಳು ಆತನ ಸ್ನೇಹಿತರಲ್ಲಿ ಆತಂಕವನ್ನು ಮೂಡಿಸಿದ್ದವು. ಆತ್ಮೀಯ ಸ್ನೇಹಿತರಿಂದಲೂ ದೂರವಾದ ಸುಹಾಸನು ತರಗತಿಗಳಿಗೂ ಹೋಗುತ್ತಿರಲಿಲ್ಲ. ಗಂಟೆಗಟ್ಟಲೆ ವಾಚನಾಲಯದಲ್ಲಿ ಅಂತರ್ಮುಖಿಯಾಗಿ ಕುಳಿತಿರುವುದು,ತನ್ನಷ್ಟಕ್ಕೆ ತಾನೇ ಮಾತನಾಡುವುದು,ಅಧ್ಯಾಪಕರು ಮತ್ತು ಮಿತ್ರರನ್ನು ಸಂದೇಹದ ದೃಷ್ಟಿಯಿಂದ ನೋಡುವುದು,ಸ್ನಾನವನ್ನೂ ಮಾಡದೆ ಬಟ್ಟೆಗಳನ್ನು ಬದಲಾಯಿಸದೆ ಇರುವುದೇ ಮುಂತಾದ ಚರ್ಯೆಗಳನ್ನು ಗಮನಿಸಿದ್ದ ಅಧ್ಯಾಪಕರು, ಕಾಲೇಜಿನ ಪ್ರಾಚಾರ್ಯರಲ್ಲಿ ಈ ವಿಚಾರವನ್ನು ತಿಳಿಸಿದ್ದರು. 

ಮರುದಿನ ಶ್ರೀನಿವಾಸರಾಯರನ್ನು ಕಾಲೇಜಿಗೆ ಕರೆಸಿದ್ದ ಪ್ರಾಚಾರ್ಯರು, ಸುಹಾಸನ ವಿಚಿತ್ರ ವರ್ತನೆಗಳನ್ನು ವಿವರಿಸಿ ಆತನನ್ನು ಮನೋವೈದ್ಯರಲ್ಲಿ ಕರೆದೊಯ್ಯಲು ಸೂಚಿಸಿದ್ದರು. ಪ್ರಾಚಾರ್ಯರ ಮಾತುಗಳನ್ನು ಕೇಳಿ ಕನಲಿ ಕೆಂಡವಾಗಿದ್ದ ರಾಯರು, ತನ್ನ ಮಗನಿಗೆ ಹುಚ್ಚು ಹಿಡಿದಿಲ್ಲವೆಂದು ಗುಡುಗಿ, ಆತನನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದೊಯ್ದರು. 

ತನ್ನ ಪುತ್ರನ ಸಮಸ್ಯೆಗೆ ಮಾನಸಿಕ ವ್ಯಾಧಿ ಕಾರಣವಲ್ಲ ಎಂದು ಧೃಢವಾಗಿ ನಂಬಿದ್ದ ರಾಯರು, ತನ್ನ ಪರಿಚಿತ ಜ್ಯೋತಿಷಿಗಳ ಬಳಿ ಮಗನ ಜಾತಕವನ್ನು ತೋರಿಸಿದರು. ಸುಹಾಸನ ಜಾತಕವನ್ನು ಕೂಲಂಕುಶವಾಗಿ ಪರಿಶೀಲಿಸಿದ ಜ್ಯೋತಿಷಿಗಳ ಅಭಿಪ್ರಾಯದಂತೆ ಆತನ ಸಮಸ್ಯೆಗಳಿಗೆ "ಬ್ರಹ್ಮಚಾರಿ ದೋಷ"ವೇ ಕಾರಣವೆನಿಸಿತ್ತು. ಹಲವಾರು ವರ್ಷಗಳ ಹಿಂದೆ ಹದಿಹರೆಯದಲ್ಲೇ ತೋಟದ ಕೆರೆಗೆ ಬಿದ್ದು ಅಪಮೃತ್ಯುವಿಗೆ  ಈಡಾಗಿದ್ದ ರಾಯರ ಕಿರಿಯ ತಮ್ಮನ ಪ್ರೇತವೇ ಈ ಸಮಸ್ಯೆಗೆ ಮೂಲ ಕಾರಣವೆನಿಸಿತ್ತು. 

ಜ್ಯೋತಿಷಿಗಳು ಸೂಚಿಸಿದ ಪೂಜೆ-ಪುನಸ್ಕಾರಗಳು, ಪ್ರೇತೋದ್ಧಾರ ಇತ್ಯಾದಿ ಪರಿಹಾರಗಳಿಗಾಗಿ ಸಹಸ್ರಾರು ರೂಪಾಯಿಗಳನ್ನು ವ್ಯಯಿಸಿದರೂ, ಸುಹಾಸನ ಸಮಸ್ಯೆ ಇನ್ನಷ್ಟು ಉಲ್ಬಣಿಸಿತ್ತು!. 

ಅಂತಿಮವಾಗಿ ಅನ್ಯಮಾರ್ಗವಿಲ್ಲದೇ ಕುಟುಂಬ ವೈದ್ಯರ ಸಲಹೆಯಂತೆ ಖ್ಯಾತ ಮನೋವೈದ್ಯರನ್ನು ಭೇಟಿಯಾಗಿ, ಅವರ ಸಲಹೆಯಂತೆ ಚಿಕಿತ್ಸೆಯನ್ನು ಆರಂಭಿಸಿದ ನಾಲ್ಕಾರು ವಾರಗಳಲ್ಲೇ ಸುಹಾಸನು ಮತ್ತೆ ಹಿಂದಿನಂತೆ ಬದಲಾಗಿದ್ದನು. ಮುಂದೆ ಎರಡು ವರ್ಷಗಳ ಕಾಲ ಚಿಕಿತ್ಸೆಯನ್ನು ಮುಂದುವರೆಸಿದ ಪರಿಣಾಮವಾಗಿ,ಸುಹಾಸನು ಸಂಪೂರ್ಣವಾಗಿ ಗುನಮುಖನಾಗುವುದರೊಂದಿಗೆ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಪದವಿಯನ್ನು ಗಳಿಸಿದ್ದನು. 

ಮನೋವೈದ್ಯರು ಹೇಳಿದಂತೆ ಸುಹಾಸನಿಗೆ "ಸಿಜೋಫ್ರೆನಿಯ " ಎನ್ನುವ ಮಾನಸಿಕ ವ್ಯಾಧಿ ಬಾಧಿಸಿತ್ತು. ಅನೇಕ ಕುಟುಂಬಗಳ ಹಲವಾರು ತಲೆಮಾರುಗಳಲ್ಲಿ ಕಂಡುಬರುವ ಕೆಲ ಮಾನಸಿಕ ವ್ಯಾಧಿಗಳಿಗೆ " ವಂಶವಾಹಿನಿ" ಗಳು ಕಾರಣವಾಗಿರುವ ಸಾಧ್ಯತೆಗಳು ಇರುವುದರಿಂದ,ಇವು ಅನುವಂಶಿಕವಾಗಿ ಕುಟುಂಬದ ಮುಂದಿನ ಪೀಳಿಗೆಯಲ್ಲೂ  ಕಂಡುಬರುವುದು. ಇದಲ್ಲದೇ ಕೆಲವೊಮ್ಮೆ ಮೆದುಳಿನಲ್ಲಿ ಸಂಭವಿಸುವ ನರ ರಾಸಾಯನಿಕ ವ್ಯತ್ಯಯಗಳು- ಏರುಪೇರುಗಳು, ಮದ್ಯಪಾನ ಅಥವಾ ಮಾದಕ ದ್ರವ್ಯಗಳ ಚಟ, ಶಿಕ್ಷಣ ಅಥವಾ ಉದ್ಯೋಗದಲ್ಲಿ ಹಿನ್ನಡೆ ಅಥವಾ ವೈಫಲ್ಯ, ತೀವ್ರ ಮಾನಸಿಕ ಒತ್ತಡ,ಸಂಬಂಧಗಳಲ್ಲಿ ಒಡಕು ಇವೇ ಮುಂತಾದ ಹಲವಾರು ಕಾರಣಗಳು ಮಾನಸಿಕ ವ್ಯಾಧಿಗಳಿಗೆ ಕಾರಣವೆನಿಸುವ ಅಥವಾ ಪ್ರೇರೇಪಿಸುವ ಸಾಧ್ಯತೆಗಳಿವೆ. 

ಮಾನಸಿಕ ವ್ಯಾಧಿಪೀಡಿತರಿಗೆ ತಜ್ಞ ಮನೋವೈದ್ಯರ ಸಲಹೆ, ಆಪ್ತ ಸಂವಾದ ಮತ್ತು ಚಿಕಿತ್ಸೆಗಳೊಂದಿಗೆ, ಮನೆಮಂದಿಯ ಮತ್ತು ಬಂಧುಮಿತ್ರರ ಸಾಂತ್ವನ ಹಾಗೂ ಪ್ರೋತ್ಸಾಹಗಳ ಅವಶ್ಯಕತೆ ಇರುತ್ತದೆ. ಆದರೆ ತಮ್ಮ ಅಜ್ಞಾನ, ತಪ್ಪುಕಲ್ಪನೆಗಳು ಅಥವಾ ಮೂಢನಂಬಿಕೆಗಳಿಂದಾಗಿ ಅನೇಕ ಭಾರತೀಯರು ಈ ವೈಜ್ಞಾನಿಕ ಸತ್ಯವನ್ನು ಒಪ್ಪದೇ, ಅನ್ಯ ವಿಧಿವಿಧಾನಗಳ ಮೊರೆಹೋಗುವುದು ನಂಬಲಸಾಧ್ಯ ಎನಿಸುತ್ತದೆ. 

ಕೆಲವೇ ದಶಕಗಳ ಹಿಂದಿನ ತನಕ ಕ್ಷುಲ್ಲಕ ಹಾಗೂ ಗಂಭೀರ ಮಾನಸಿಕ ವ್ಯಾಧಿಗಳೆಲ್ಲವನ್ನೂ ಸಾರಾಸಗಟಾಗಿ "ಹುಚ್ಚು" ಎಂದು ಜನಸಾಮಾನ್ಯರು ಕರೆಯಲು ಅವರ ಅಜ್ಞಾನವೇ ಕಾರಣವಾಗಿತ್ತು. ಇದೇ ಕಾರಣದಿಂದ ಸಣ್ಣಪುಟ್ಟ ಮಾನಸಿಕ ತೊಂದರೆಗಳ ಪರಿಹಾರಕ್ಕಾಗಿ ಮಾನಸಿಕ ವೈದ್ಯರ ಚಿಕಿತ್ಸೆ ಪಡೆದಲ್ಲಿ "ಹುಚ್ಚ" ಎನ್ನುವ ಹಣೆಪಟ್ಟಿಯನ್ನು ಧರಿಸಬೇಕಾದೀತು ಎನ್ನುವ ಭಯದಿಂದ, ಅನೇಕ ಜನರು ತಮ್ಮ ತಮ್ಮ ಕುಟುಂಬದ ಸದಸ್ಯರಿಗೆ ಮನೋವ್ಯಾಧಿ ಬಾಧಿಸುತ್ತಿರುವುದು ಖಚಿತವಾಗಿ ತಿಳಿದಿದ್ದರೂ, ತಜ್ಞ ವೈದ್ಯರ ಸಲಹೆ-ಚಿಕಿತ್ಸೆಗಳನ್ನೇ ಕೊಡಿಸುತ್ತಿರಲಿಲ್ಲ!. ಇದಕ್ಕೂ ಮಿಗಿಲಾಗಿ "ಮದುವೆಯಾಗದೇ ಹುಚ್ಚು ಬಿಡದು, ಹುಚ್ಚು ಬಿಡದೇ ಮದುವೆಯಾಗದು" ಎನ್ನುವ ಸುಪ್ರಸಿದ್ಧ ಗಾದೆ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ, ಇಂತಹ ವ್ಯಾಧಿಪೀಡಿತರಿಗೆ " ಸಾವಿರ ಸುಳ್ಳು ಹೇಳಿ ಮಾಡುವೆ ಮಾಡಲು" ಹಿಂಜರಿಯುತ್ತಿರಲಿಲ್ಲ!. 

ಸಾಮಾನ್ಯವಾಗಿ ಅವಿದ್ಯಾವಂತ ಹಾಗೂ ಗ್ರಾಮೀಣ ಜನರು ಇಂತಹ ಸಮಸ್ಯೆಗಳಿಗೆ ದೇವರ-ಗುರುಗಳ ಶಾಪ, ಮಾಟ - ಮಂತ್ರ, ಭೂತ -ಪ್ರೇತ,ವಶೀಕರಣ ಅಥವಾ ಜಾತಕದಲ್ಲಿನ ದೋಷಗಳೇ ಕಾರಣವೆಂದು ನಂಬುತ್ತಾರೆ. ಅಂತೆಯೇ ಇದರ ಪರಿಹಾರಕ್ಕಾಗಿ ಪೂಜೆ- ಪುನಸ್ಕಾರ, ಮಂತ್ರ- ತಂತ್ರ, ದೇವರಲ್ಲಿ ಹರಕೆ ಹೇಳಿಕೊಳ್ಳುವುದು ಅಥವಾ ದೋಷಗಳ ಪರಿಹಾರಕ್ಕಾಗಿ ವಿವಿಧ ರೀತಿಯ ಪ್ರಾಯಶ್ಚಿತಗಳನ್ನು ನಡೆಸುವುದರ ಮೂಲಕ ಇಂತಹ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಿಸಿಕೊಳ್ಳುತ್ತಾರೆ. ಬಳಿಕ ಸುದೀರ್ಘಕಾಲ ಮನೋವೈದ್ಯರ ಚಿಕಿತ್ಸೆ ಪಡೆಯದ ಕಾರಣದಿಂದಾಗಿ ಗಂಭೀರ ಸ್ವರೂಪವನ್ನು ತಳೆಯಬಲ್ಲ ಮಾನಸಿಕ ವ್ಯಾಧಿಗಳನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟಸಾಧ್ಯ ಅಥವಾ ಅಸಾಧ್ಯವೆಂದು ಅರಿತ ಬಳಿಕ ಪರಿತಪಿಸುತ್ತಾರೆ. ಇಂತಹ ಪ್ರಮಾದಗಳಿಂದ ಸೂಕ್ತ ಸಮಯದಲ್ಲಿ ಸಮರ್ಪಕ ಚಿಕಿತ್ಸೆ ದೊರೆಯದೇ, ಅನೇಕ ಮನೋರೋಗಿಗಳು ಆತ್ಮಹತ್ಯೆಗೆ ಶರಣಾದ ನಿದರ್ಶನಗಳೂ ಸಾಕಷ್ಟಿವೆ. ಆದರೆ ಅಲ್ಪಪ್ರಮಾಣದ ಭಾರತೀಯರಲ್ಲಿ ಇಂತಹ ಮೂಢನಂಬಿಕೆಗಳು- ತಪ್ಪುಕಲ್ಪನೆಗಳು ಇಂದಿಗೂ ಜೀವಂತವಾಗಿವೆ. 

ಜಾಗತಿಕ ಸಮಸ್ಯೆ 

ಪ್ರಪಂಚದ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಕಾಯಿಲೆಗಳಲ್ಲಿ ಮಾನಸಿಕ ವ್ಯಾಧಿಗಳಿಗೆ ದ್ವಿತೀಯ ಸ್ಥಾನ ಸಲ್ಲುತ್ತದೆ. ಆದರೆ ಆಧುನಿಕ ಜೀವನಶೈಲಿಯನ್ನು ಗಮನಿಸಿದಲ್ಲಿ, ಮುಂದಿನ ಕೆಲವೇ ವರ್ಷಗಳಲ್ಲಿ ಇದು ಅಗ್ರಸ್ಥಾನಕ್ಕೆ ಏರಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ದಾಖಲೆಗಳಂತೆ ಮಾನಸಿಕ ವ್ಯಾಧಿಗಳಲ್ಲಿ ಒಂದಾಗಿರುವ "ಖಿನ್ನತೆ" ಎರಡನೇ ಸ್ಥಾನದಲ್ಲಿದೆ. ಇದಲ್ಲದೇ ಸಿಜೋಫ್ರೆನಿಯ,ಉದ್ವಿಗ್ನತೆ,ಹಿಸ್ಟೀರಿಯ,ಗೀಳುರೋಗಗಳಂತಹ ವ್ಯಾಧಿಗಳ ಬಾಧೆಯೂ ಹೆಚ್ಚುತ್ತಲೇ ಇದೆ. 

ವಿಶ್ವಾದ್ಯಂತ ಸುಮಾರು ೪೫೦ ಮಿಲಿಯನ್ ಗೂ ಅಧಿಕ ಜನರು ಮಾನಸಿಕ ರೋಗಗಳು ಅಥವಾ ವರ್ತನೆಗಳ ತೊಂದರೆಗಳಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಜಾಗತಿಕಮಟ್ಟದಲ್ಲಿ ಇಂದು ಮನುಷ್ಯರನ್ನು ಬಾಧಿಸುತ್ತಿರುವ ವ್ಯಾಧಿಗಳಲ್ಲಿ ಶೇ. ೧೪ ರಷ್ಟು ಮಾನಸಿಕ ಕಾಯಿಲೆಗಳೇ ಆಗಿವೆ. 

ಶ್ರೀಮಂತ ರಾಷ್ಟ್ರಗಳಲ್ಲಿ ಪ್ರತಿ ೧೦,೦೦೦ ಮಾನಸಿಕ ರೋಗಿಗಳಿಗೆ ಒಬ್ಬ ಮಾನಸಿಕ ತಜ್ಞರು ಲಭ್ಯರಿದ್ದಲ್ಲಿ, ಬಹುತೇಕ ಬಡರಾಷ್ಟ್ರಗಳಲ್ಲಿ ೨೦ ಲಕ್ಷ ಮನೋರೋಗಿಗಳಿಗೆ ಒಬ್ಬ ಮನೋವೈದ್ಯರು ಲಭ್ಯರಿದ್ದಾರೆ. ಪ್ರಸ್ತುತ ನಮ್ಮ ದೇಶದಲ್ಲಿ ವೃತ್ತಿಪರ ಮಾನಸಿಕ ತಜ್ಞರ ಸಂಖ್ಯೆ ೫ ಸಾವಿರಕ್ಕೂ ಕಡಿಮೆಯಿದ್ದು, ರೋಗಿಗಳ ಸಂಖ್ಯೆ ೩ ಕೋಟಿಗೂ ಹೆಚ್ಚಿದೆ. ಇದರಲ್ಲಿ ಶೇ. ೧೫ ರಿಂದ ೨೦ ರಷ್ಟು ರೋಗಿಗಳು ಮಹಿಳೆಯರಾಗಿದ್ದು, ಪುರುಷ ರೋಗಿಗಳ ಸಂಖ್ಯೆಯೇ ಹೆಚ್ಚಿದೆ. 

ಪ್ರಸ್ತುತ ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯಮಯ ಕಾರಣಗಳಿಂದಾಗಿ, ಅದರಲ್ಲೂ ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ತೋರಲು ಬಾಲ್ಯದಿಂದಲೇ ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ಕಾರಣಗಳಿಂದಾಗಿ ಮನೋವ್ಯಾಧಿಗಳಿಗೆ ಈಡಾಗುತ್ತಿರುವ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಈ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸುವ ಮಾರ್ಗೋಪಾಯಗಳು ಮತ್ತು ಇದಕ್ಕೆ ಬೇಕಾದ ವ್ಯವಸ್ಥೆಗಳು ಜನಸಾಮಾನ್ಯರಿಗೆ ಸುಲಭದಲ್ಲೇ ಲಭ್ಯವಾಗುತ್ತಿಲ್ಲ. ಅದೇ ರೀತಿಯಲ್ಲಿ ಗ್ರಾಮೀಣ ಪ್ರದೇಶಗಳು ಹಾಗೂ ಸಣ್ಣಪುಟ್ಟ ನಗರಗಳಲ್ಲಿ ಮಾನಸಿಕ ವ್ಯಾಧಿಗಳಿಗೆ ಚಿಕಿತ್ಸೆ ನೀಡಬಲ್ಲ ಸೈಕಿಯಾಟ್ರಿಸ್ಟ್, ಮಾನಸಿಕ ರೋಗಿಗಳ ಸಮಸ್ಯೆಯನ್ನು ವಿಶ್ಲೇಷಿಸಿ ಆಪ್ತ ಸಂವಾದದ ಮೂಲಕ ಪರಿಹರಿಸಬಲ್ಲ ಸೈಕಾಲಜಿಸ್ಟ್ ಮತ್ತು ರೋಗಿ ಹಾಗೂ ಆತನ ಮನೆಮಂದಿಗೆ ಮಾರ್ಗದರ್ಶನ ನೀಡಬಲ್ಲ ನುರಿತ ಕೌನ್ಸೆಲರ್ ಗಳು ಲಭ್ಯರಿರುವುದಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಅನೇಕ ಮನೋವ್ಯಾಧಿಪೀಡಿತರು, ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನೇ ಪಡೆದುಕೊಳ್ಳುವುದಿಲ್ಲ. ಪಡೆದುಕೊಂಡರೂ ಕಾರಣಾಂತರಗಳಿಂದ ಚಿಕಿತ್ಸೆಯನ್ನು ಮುಂದುವರೆಸುವುದಿಲ್ಲ. ಚಿಕಿತ್ಸೆಯನ್ನು ಪಡೆದುಕೊಂಡು ಸಂಪೂರ್ಣವಾಗಿ ಗುಣಮುಖರಾದ ವ್ಯಕ್ತಿಗಳನ್ನೂ ಸಮಾಜವು ಸಂದೇಹದ ದೃಷ್ಟಿಯಿಂದ ನೋಡುವುದನ್ನು ಇಂದಿಗೂ ನಿಲ್ಲಿಸಿಲ್ಲ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ಅನೇಕ ಮಾನಸಿಕ ವ್ಯಾಧಿಪೀಡಿತರ ಬದುಕು ನರಕಸದೃಶ ಎಣಿಸುತ್ತಿರುವುದು ಮಾತ್ರ ಸುಳ್ಳೇನಲ್ಲ. 

ಅದೇನೇ ಇರಲಿ,ಮಾನಸಿಕ ವ್ಯಾಧಿಯ ಲಕ್ಷಣಗಳು ಉದ್ಭವಿಸಿದೊಡನೆ, ಮಾನಸಿಕ ತಜ್ಞರ ಸಲಹೆ-ಚಿಕಿತ್ಸೆಯನ್ನು ಪ್ರಾರಂಭಿಸಿ. ವೈದ್ಯರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸಿದಲ್ಲಿ ಸಮಸ್ಯೆಗಳು ಪರಿಹಾರಗೊಳ್ಳುವ ಸಾಧ್ಯತೆಗಳು ಹೆಚ್ಚುತ್ತವೆ. ಅನಾವಶ್ಯಕ ವಿಳಂಬಗಳಿಂದಾಗಿ ಸಮಸ್ಯೆ ಇನ್ನಷ್ಟು ಉಲ್ಬಣಿಸಿದಷ್ಟು ಇವುಗಳ ಪರಿಹಾರ ಕಷ್ಟಸಾಧ್ಯ ಅಥವಾ ಅಸಾಧ್ಯವೆನಿಸುವ ಸಾಧ್ಯತೆಗಳಿವೆ ಎನ್ನುವುದನ್ನು ಮರೆಯದಿರಿ. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ೨೪-೦೧-೨೦೦೮ ರ ಅಂಕಣದಲ್ಲಿ ಪ್ರಕಟಿತ ಲೇಖನ 


Thursday, August 22, 2013

Talcum powder-is dangerous



                                           ಟಾಲ್ಕಂ ಪೌಡರ್ : ಅತಿಬಳಕೆ ಅಪಾಯಕರ
 ಪ್ರತಿನಿತ್ಯ ಸ್ನಾನದ ಬಳಿಕ ಶರೀರದಾದ್ಯಂತ ತಾಲ್ಕಂ ಪೌಡರನ್ನು ಚಿಮುಕಿಸುವ ಹವ್ಯಾಸ ಅನೇಕರಲ್ಲಿದೆ. ವಿಶೇಷವೆಂದರೆ ತಾವು ದಿನನಿತ್ಯ ತಪ್ಪದೆ ಬಳಸುವ ತಾಲ್ಕಂ ಪೌಡರ್ ಗಳ ಬಗ್ಗೆ ಅನೇಕ ವಿದ್ಯಾವಂತರಿಗೂ ಸಮರ್ಪಕ ಮಾಹಿತಿ ತಿಳಿದಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಯಾರೊಬ್ಬರೂ ಇದರ ಬಳಕೆಯನ್ನು ನಿಲ್ಲಿಸಿಲ್ಲ. 
-----------------           ----------------------                      ------------------------                       -----------------------         ------------------
ಅನಾರೋಗ್ಯ ಪೀಡಿತ ಹಸುಳೆಗಳಿಗೆ ಸ್ನಾನವನ್ನೇ ಮಾಡಿಸದ ಮಾತೆಯರು, ತಮ್ಮ ಕಂದನಿಗೆ ತಪ್ಪದೆ ಬೇಬಿ ಪೌಡರ್ ನಿಂದ ಅಭಿಷೇಕವನ್ನು ಮಾಡುತ್ತಾರೆ. ಉದಾಹರಣೆಗೆ ಸಾಮಾನ್ಯ ಶೀತ ಮತ್ತು ಜ್ವರದಿಂದ ಬಳಲುತ್ತಿರುವ ಮಕ್ಕಳಿಗೆ ಸ್ನಾನ ಮಾಡಿಸಿದಲ್ಲಿ "ಥಂಡಿ" ಯಾಗುವುದು ಎನ್ನುವ ಮೂಢನಂಬಿಕೆಯು, ಬಹುತೇಕ ಭಾರತೀಯ ನಾರಿಯರಲ್ಲಿದೆ. ಆದರೆ ಇದಕ್ಕೆ ಹೊರತಾಗಿ ಪೌಡರ್ ನ ಅಭಿಷೇಕ ಮಾಡುವುದರಿಂದ, ಕಂದನ  ಆರೋಗ್ಯವು ಇನ್ನಷ್ಟು ಹದಗೆಡುತ್ತದೆ ಎನ್ನುವ ವಿಚಾರ ಅಧಿಕತಮ ತಾಯಂದಿರಿಗೆ ತಿಳಿದಿಲ್ಲ. ಹಾಗೂ ಇದೇ ಕಾರಣದಿಂದಾಗಿ ಇವರೆಲ್ಲರೂ ತಮ್ಮ ಕಂದಮ್ಮಗಳಿಗೆ ಟಾಲ್ಕಂ ಪೌಡರ್ ನ ಅಭಿಷೇಕ ಮಾಡುವುದನ್ನು ಇಂದಿಗೂ ನಿಲ್ಲಿಸಿಲ್ಲ!. 

ಟಾಲ್ಕಂ ನಿಂದ ತಯಾರಿಸುವ ಪೌಡರ್!

ಮಾರುಕಟ್ಟೆಯಲ್ಲಿ ಸಾಧಾರಣ ಬೆಲೆಗೆ ದೊರೆಯುವ ಸಾಮಾನ್ಯ ಟಾಲ್ಕ್, ಬೆವರುಸಾಲೆ- ತುರಿಕೆಗಳನ್ನು ನಿವಾರಿಸಬಲ್ಲ ಟಾಲ್ಕ್, ಗಂಡಸರು ಅಥವಾ ಹೆಂಗಸರ ಸಲುವಾಗಿಯೇ ವಿಶೇಷವಾಗಿ ತಯಾರಿಸಿರುವ ಟಾಲ್ಕ್ ಮತ್ತು ನಿಮ್ಮ ಮುದ್ದು ಕಂದನ ಕೋಮಲ ತ್ವಚೆಗಾಗಿ ರಕ್ಷಿಸಲು ತಯಾರಿಸಿದ ಬೇಬಿ ಟಾಲ್ಕ್ , ಇವೆಲ್ಲವುಗಳ ತಯಾರಿಕೆಯಲ್ಲಿ "ಟಾಲ್ಕಂ" ಎನ್ನುವ ಖನಿಜವನ್ನು ಮೂಲದ್ರವ್ಯವಾಗಿ ಬಳಸುತ್ತಾರೆ. ಈ ಟಾಲ್ಕಂ ನ ನಯವಾದ ಪುಡಿಗೆ ಸೂಕ್ತ ಪ್ರಮಾಣದ ಸುಗಂಧ ದ್ರವ್ಯ ಮತ್ತು ಇತರ ಕೆಲ ದ್ರವ್ಯಗಳು ಅಥವಾ ನಿರ್ದಿಷ್ಟ ಔಷದೀಯ ದ್ರವ್ಯಗಳನ್ನು ಬೆರೆಸಿ, ವಾಣಿಜ್ಯ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಅಲ್ಪಬೆಲೆಗೆ ಅಥವಾ ದುಬಾರಿಬೆಲೆಗೆ ಲಭಿಸುವ ಯಾವುದೇ ವಾಣಿಜ್ಯ ಉತ್ಪನ್ನಗಳಲ್ಲೂ, ಟಾಲ್ಕಂ  ಖನಿಜವನ್ನು ಬಳಸಲೇ ಬೇಕಾಗುತ್ತದೆ. ಹಾಗೂ ಇದೇ ಕಾರಣದಿಂದಾಗಿ ಇದನ್ನು ಟಾಲ್ಕಂ ಪೌಡರ್ ಎಂದು ಹೆಸರಿಸಲಾಗಿದೆ. ಆದರೆ ಟಾಲ್ಕಂ ನ ನೈಜ ಹಾಗೂ ರಾಸಾಯನಿಕ ನಾಮಧೆಯವು "ಹೈಡ್ರೇಟೆಡ್ ಮೆಗ್ನೆಸಿಯಂ ಸಿಲಿಕೇಟ್" ಎಂದಾಗಿದೆ. 

ಕೆಲವೇ ದಶಕಗಳ ಹಿಂದೆ ಭಾರತೀಯರು ಬಳಸುತ್ತಿದ್ದ ಶೃಂಗಾರ ಸಾಧನಗಳಲ್ಲಿ ಅತ್ಯಂತ ಜನಪ್ರಿಯವೆನಿಸಿದ್ದ ಟಾಲ್ಕಂ ಪೌಡರ್ ನ ಸ್ಥಾನವನ್ನು, ಇದೀಗ ವಿವಿಧ ರೀತಿಯ ಲೋಶನ್ ಗಳು ಹಾಗೂ ಕ್ರೀಮ್ ಗಳು, ಕೊಲೋನ್-ಪರ್ಫ್ಯೂಮ್ ಗಳು ಮತ್ತು ಡಿಯೋಡೊರೆಂಟ್ ಗಳು ಆಕ್ರಮಿಸಿಕೊಂಡಿವೆ. 

ಅತಿಬಳಕೆ ಅಪಾಯಕರವೇ?

ಟಾಲ್ಕಂ ಪೌಡರ್ ನ ಅತಿಬಳಕೆಯು ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು ಎನ್ನುವ ವಿಚಾರ ಅನೇಕರಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಶೀತ,ಕೆಮ್ಮು ಅಥವಾ ಅಸ್ತಮಾ ಕಾಯಿಲೆಯಿಂದ ಬಳಲುವ ಮತ್ತು ಧೂಳಿನ ಅಲರ್ಜಿ ಇರುವ ವ್ಯಕ್ತಿಗಳಿಗೆ, ಟಾಲ್ಕಂ ಪೌಡರ್ ಬಳಸದಂತೆ ವೈದ್ಯರು ಸೂಚಿಸುತ್ತಾರೆ. ಏಕೆಂದರೆ ಟಾಲ್ಕಂ ನ ಸೂಕ್ಷ್ಮವಾದ ಕಣಗಳು ಮೂಗಿನ ಮೂಲಕ ಶ್ವಾಸಕೋಶಗಳನ್ನು ಪ್ರವೇಶಿಸಿದಲ್ಲಿ, ಶೀತ ಹಾಗೂ ಕೆಮ್ಮುಗಳು ಉಲ್ಬಣಿಸುತ್ತವೆ. ಅದೇ ರೀತಿಯಲ್ಲಿ ಅಸ್ತಮಾ ಮತ್ತು ಧೂಳಿನ ಅಲರ್ಜಿ ಇರುವವರಲ್ಲಿ, ಶೀನು,ಕೆಮ್ಮು ಮತ್ತು ಉಸಿರಾಟದ ತೊಂದರೆಗಳು ಉದ್ಭವಿಸಿ ಉಲ್ಬಣಿಸುವ ಸಾಧ್ಯತೆಗಳಿವೆ. 

ಟಾಲ್ಕಂ ಪೌಡರ್ ನ ಜಾಹೀರಾತುಗಳಲ್ಲಿ ನಟಿಸುವ ರೂಪದರ್ಶಿಗಳು ತಮ್ಮ ಶರೀರದ ಮೇಲೆ ಟಾಲ್ಕಂ ಪೌಡರನ್ನು ಧಾರಾಳವಾಗಿ ಸಿಂಪದಿಸುವುದನ್ನು ಕಂಡು ಇದನ್ನು ಅನುಕರಿಸದಿರಿ. ಏಕೆಂದರೆ ಹಲವಾರು ವೈದ್ಯಕೀಯ ಅಧ್ಯಯನಗಳ ವರದಿಗಳಂತೆ, ಪ್ರತಿನಿತ್ಯ ಧಾರಾಳವಾಗಿ ಟಾಲ್ಕಂ ಪೌಡರನ್ನು ಬಳಸುವವರಿಗೆ ಶ್ವಾಸಕೋಶಗಳು, ಅಂದಾಶಯ ಮತ್ತು ಚರ್ಮದ ಕ್ಯಾನ್ಸರ್ ಬಾಧಿಸುವ ಸಾಧ್ಯತೆಗಳಿವೆ. ಇದಲ್ಲದೆ ಆಸ್ಪಿರೇಶನ್ ನ್ಯುಮೋನಿಯ,ಗ್ರಾನ್ಯುಲೋಮ ಇತ್ಯಾದಿ ಗಂಭೀರ ಕಾಯಿಲೆಗಳುತಲೆದೋರುವ ಸಾಧ್ಯತೆಗಳಿವೆ. 

ಪ್ರತಿನಿತ್ಯ ಒಳ ಉಡುಪುಗಳನ್ನು ಧರಿಸುವ ಮುನ್ನ ತಮ್ಮ ಶರೀರದ ಮೇಲೆ ಅತಿಯಾದ ಪ್ರಮಾಣದಲ್ಲಿ ಟಾಲ್ಕಂ ಪೌಡರ್ ಚಿಮುಕಿಸುವ ಶೇ. ೪೦ ರಷ್ಟು ಮಹಿಳೆಯರಿಗೆ ಅಂಡಾಶಯಗಳ ಕ್ಯಾನ್ಸರ್ ಬಾಧಿಸುವುದು ತಿಳಿದುಬಂದಿದೆ. 

ಬೇಬಿ ಪೌಡರ್ ನಲ್ಲಿ ಕ್ಯಾನ್ಸರ್ ಕಾರಕ  ದ್ರವ್ಯ!

ಇದೇ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಮಹಾರಾಷ್ಟ ಸರಕಾರದ ಎಫ್ . ಡಿ . ಎ , ಜಾನ್ಸನ್ ಎಂಡ್ ಜಾನ್ಸನ್ ಸಂಸ್ಥೆಯ ಬೇಬಿ ಪೌಡರ್ ನಲ್ಲಿ " ಇಥೈಲೀನ್ ಆಕ್ಸೈಡ್" ಎನ್ನುವ ರಾಸಾಯನಿಕದ ಇರುವಿಕೆಯನ್ನು ಪತ್ತೆ ಹಚ್ಚಿದ ಬಳಿಕ, ಈ ಉತ್ಪನ್ನವನ್ನು ನಿಷೇಧಿಸಿದ್ದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದವು. ಇಥೈಲೀನ್ ಆಕ್ಸೈಡ್ ರಾಸಾಯನಿಕವು ಕ್ಯಾನ್ಸರ್ ಕಾರಕವೆಂದು ಸಾಬೀತಾಗಿದ್ದು, ಪುಟ್ಟ ಮಕ್ಕಳ ಪಾಲಿಗೆ ಅತ್ಯಂತ ಅಪಯಕಾರಿಯಾಗಿ ಪರಿಣಮಿಸಬಲ್ಲದು. ಅಂತರ ರಾಷ್ಟ್ರೀಯ ಖ್ಯಾತಿಯ ಸಂಸ್ಥೆಯೊಂದು ಇಂತಹ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದುದು, ನಿಜಕ್ಕೂ ನಂಬಲು ಅಸಾಧ್ಯವೆನಿಸುತ್ತದೆ.  ಸಂಸ್ಥೆಯ ಹೇಳಿಕೆಯಂತೆ ಈ ರಾಸಾಯನಿಕವನ್ನು ಬೇಬಿ ಪೌಡರನ್ನು "ರೋಗಾಣುರಹಿತ" ವನ್ನಾಗಿಸಲು ಬಳಸಲಾಗಿತ್ತು. ಆದರೆ ಆದರೆ ಇದನ್ನು ಬಳಸಿದವರ ಪಾಲಿಗೆ ಮಾತ್ರ, ಇದು ರೋಗಕಾರಕ ಎನಿಸಲಿತ್ತು!. ಅದೃಷ್ಟವಶಾತ್ ಈ ರಾಸಾಯನಿಕದ ಇರುವಿಕೆ ಪತ್ತೆಯಾದುದರಿಂದ, ಸಂಭಾವ್ಯ ಗಂಭೀರ ದುರಂತವೊಂದು  ತಡೆಗಟ್ಟಲ್ಪಟ್ಟಿತ್ತು. 

೧೯೬೦ ರಲ್ಲೇ ವಾರ್ನಿಂಗ್!

ಟಾಲ್ಕಂ ಪೌಡರ್ ನ ಅತಿಬಳಕೆಯ ದುಷ್ಪರಿಣಾಮಗಳು ೧೯೬೦ ರಲ್ಲೇ ವೈದ್ಯಕೀಯ ವಿಜ್ಞಾನಿಗಳ ಗಮನಕ್ಕೆ ಬಂದಿತ್ತು. ೧೯೭೧ ರಲ್ಲಿ ಅನೇಕ ಕ್ಯಾನ್ಸರ್ ಪೀಡಿತ ಮಹಿಳೆಯರ ಅಂಡಾಶಯಗಳನ್ನು ಪರೀಕ್ಷಿಸಿದಾಗ, ಶೇ. ೭೫ ರಷ್ಟು ಗಡ್ದೆಗಳಲ್ಲಿ ಟಾಲ್ಕಂ ನ ಸೂಕ್ಷ್ಮ ಕಣಗಳು ಪತ್ತೆಯಾಗಿದ್ದವು. 
ಹಾರ್ವರ್ಡ್ ಮೆಡಿಕಲ್ ಸ್ಕೂಲ್ , ಬೋಸ್ಟನ್ ನ ಸಂಶೋಧಕರು ಪ್ರತಿನಿತ್ಯ ಅತಿಯಾಗಿ ಟಾಲ್ಕಂ ಪೌಡರ್ ಬಳಸುತ್ತಿದ್ದ ೩೦೦೦ ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿದ ಬಳಿಕ ಲಭಿಸಿದ್ದ ಫಲಿತಾಂಶಗಳು ಇದನ್ನು ಸಮರ್ಥಿಸುತ್ತವೆ. ಇದಲ್ಲದೆ ವಾರದಲ್ಲಿ ಕೇವಲ ಒಂದು ದಿನ ಟಾಲ್ಕಂ ಪೌಡರ್ ಬಳಸುವ ಮಹಿಳೆಯರಲ್ಲಿ ಅಂಡಾಶಯಗಳ ಕ್ಯಾನ್ಸರ್ ಉದ್ಭವಿಸುವ ಸಾಧ್ಯತೆಗಳು ಶೇ. ೩೬ ರಷ್ಟು ಮತ್ತು ದಿನನಿತ್ಯ ಬಳಸುವವರಲ್ಲಿ ಶೇ. ೪೧ ರಷ್ಟು ಹೆಚ್ಚುವುದೆಂದು ಇದೇ ಅಧ್ಯಯನದಿಂದ ತಿಳಿದುಬಂದಿತ್ತು. 

೧೯೯೩ ರಲ್ಲಿ ಅಮೇರಿಕಾದ ಟಾಕ್ಸಿಕಾಲಜಿ  ಪ್ರೋಗ್ರಾಮ್ ನಿಂದ ತಿಳಿದುಬಂದಂತೆ,ಟಾಲ್ಕಂ ಪೌಡರ್ ನ ಅತಿಬಳಕೆಯಿಂದ ಇಲಿಗಳಲ್ಲಿ ಕ್ಯಾನ್ಸರ್ ಗದ್ದೆಗಳು ಬೆಳೆದಿರುವುದು ಪತ್ತೆಯಾಗಿತ್ತು. ೧೧೩ ವಾರಗಳ ಕಾಲ, ಪ್ರತಿದಿನ ೬ ಗಂಟೆಗಳ ಅವಧಿಗೆ ಟಾಲ್ಕಂ ಪೌಡರನ್ನು ಶ್ವಾಸೋಚ್ಚ್ವಾಸದೊಂದಿಗೆ ಸೇವಿಸಿದ್ದ ಇಲಿಗಳಲ್ಲಿ ಈ ಸಮಸ್ಯೆಯು ತಲೆದೋರಿತ್ತು. 

ಅದೇನೇ ಇರಲಿ, ಅಂತಿಮವಾಗಿ ನಾವು ಹೇಳುವುದಾದಲ್ಲಿ ಜನಸಾಮಾನ್ಯರ ಅಚ್ಚುಮೆಚ್ಚಿನ ಸೌಂದರ್ಯ ಪ್ರಸಾದನಗಳಲ್ಲಿ ಒಂದಾಗಿರುವ ಟಾಲ್ಕಂ ಪೌಡರ್ ನ ಬಳಕೆಯನ್ನು ನಿಯಂತ್ರಿಸುವುದು ಅಥವಾ ಸಂಪೂರ್ಣವಾಗಿ ನಿಲ್ಲಿಸುವುದು, ನಿಮ್ಮ  ಹಾಗೂ ನಿಮ್ಮ ಕುಟುಂಬದ ಆರೋಗ್ಯದ ಹಿತದೃಷ್ಟಿಯಿಂದ ಉಪಯುಕ್ತವೆನಿಸುವುದು. ಜೊತೆಗೆ ಅನಿವಾರ್ಯವೆನಿಸಿದಲ್ಲಿ ನೈಸರ್ಗಿಕ ಉತ್ಪನ್ನಗಳಾಗಿರುವ ಚಂದನ-ಅರಿಶಿನ ಇತ್ಯಾದಿಗಳನ್ನು ಬಳಸುವುದು ಅತ್ಯಂತ ಸುರಕ್ಷಿತ ಹಾಗೂ ಆರೋಗ್ಯಕರ ಎನಿಸುವುದು. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

ವಿಜಯವಾಣಿ ಪತ್ರಿಕೆಯ ೧೧-೦೯-೨೦೧೨ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ 

Consaguineous marriages


                                   ಸೋದರ ಸಂಬಂಧಿಗಳಲ್ಲಿ ವಿವಾಹ ಸರಿಯೇ?
ಭಾರತದಲ್ಲಿ ಸೋದರ ಸಂಬಂಧಿಗಳ ನಡುವೆ ಜರಗುವ ವಿವಾಹಗಳಲ್ಲಿ ಎರಡು ವಿಧಗಳಿವೆ. ಅಣ್ಣ-ತಂಗಿ ಅಥವಾ ಅಕ್ಕ-ತಮ್ಮಂದಿರ ಗಂಡು- ಹೆಣ್ಣು ಮಕ್ಕಳ ನಡುವಿನ ವಿವಾಹವು ಮೊದಲನೆಯ ವಿಧವಾಗಿದ್ದು, ಸೋದರಮಾವನು ತನ್ನ ಅಕ್ಕನ ಹೆಣ್ಣು ಮಗಳನ್ನು ವಿವಾಹವಾಗುವುದು ಎರಡನೆಯ ವಿಧವಾಗಿದೆ. ಈ ರೀತಿಯ ವಿವಾಹಗಳಿಂದಾಗಿ ಹುಟ್ಟುವ ಮಕ್ಕಳಲ್ಲಿ ಅನುವಂಶಿಕ - ಜನ್ಮದತ್ತ ಕಾಯಿಲೆಗಳ ಸಂಭಾವ್ಯತೆಯು ಎರಡನೆಯ ವಿಧದ ವಿವಾಹಗಳಲ್ಲಿ ಹೆಚ್ಚಾಗಿರುತ್ತದೆ. 
---------------------------   -------------------------------------                         -------------------------------------          ---------------------------    ಸಹಸ್ರಾರು ವರ್ಷಗಳಿಂದ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ರಕ್ತಸಂಬಂಧಿಗಳ ನಡುವೆ ವಿವಾಹವಾಗುವುದು ರೂಢಿಯಲ್ಲಿದೆ. ಇದಕ್ಕೆ ಭಾರತವೂ ಅಪವಾದವೆನಿಸಿಲ್ಲ. ಭಾರತದ ಹಿಂದೂ ಧರ್ಮೀಯರಲ್ಲಿ ಸೋದರ ಸಂಬಂಧಿಗಳಲ್ಲಿ ವಿವಾಹ ನಡೆಸುವ ಪದ್ಧತಿ ಸಹಸ್ರಾರು ವರ್ಷಗಳಿಂದ ವಾಡಿಕೆಯಲ್ಲಿದೆ. ಮೂಲತಃ ಪ್ರೀತಿ,ವಿಶ್ವಾಸ ಹಾಗೂ ಬಾಂಧವ್ಯಗಳ ದ್ಯೋತಕವೆನಿಸಿದ್ದ ಇಂತಹ ವಿವಾಹಗಳಿಗೆ, ಪರಸ್ಪರ ಜಾತಕಗಳ ಹೊಂದಾಣಿಕೆಯ ಅವಶ್ಯಕತೆಯೂ ಇರಲಿಲ್ಲ. 

ಅನೇಕ ಕುಟುಂಬಗಳಲ್ಲಿ "ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ" ಎನಿಸದಿರಲು ಹಾಗೂ ಮತ್ತೆ ಕೆಲವರಲ್ಲಿ ಪುತ್ರ ಸಂತಾನದ ಭಾಗ್ಯವಿಲ್ಲದ ಕಾರಣದಿಂದಾಗಿ, ತಾವು ಕಷ್ಟಪಟ್ಟು ಗಳಿಸಿ ಉಳಿಸಿದ್ದ ಧನಕನಕಗಳು ಅನ್ಯರ ಪಾಲಾಗದಿರಲಿ ಎನ್ನುವ ಸ್ವಾರ್ಥವೂ ಸೋದರ ಸಂಬಂಧಿಗಳಲ್ಲಿ ವಿವಾಹ ನಡೆಯಲು ಪ್ರಮುಖ ಕಾರಣವೆನಿಸಿತ್ತು. 

ತಮ್ಮ ಮಕ್ಕಳು- ಮೊಮ್ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಂಬಲಿಸುತ್ತಿದ್ದ ನಮ್ಮ ಪೂರ್ವಜರಿಗೆ, ಇಂತಹ ವಿವಾಹಗಳ ಪರಿಣಾಮವಾಗಿ ತಮ್ಮ ಮುಂದಿನ ಸಂತತಿಯನ್ನು ಪೀಡಿಸಬಲ್ಲ ಅನೇಕ ಆರೋಗ್ಯದ ಸಮಸ್ಯೆಗಳ ಬಗ್ಗೆ ತಿಳುವಳಿಕೆಯೂ ಇರಲಿಲ್ಲ. ಪ್ರಾಯಃ ಇದೇ ಕಾರಣದಿಂದಾಗಿ ರಕ್ತಸಂಬಂಧಿಗಳ ನಡುವೆ ಜರಗುತ್ತಿದ್ದ ವಿವಾಹಗಳು, ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ಇಂದಿಗೂ ನಡೆಯುತ್ತಿವೆ. 

 ಭಾರತದಲ್ಲಿ ಸೋದರ ಸಂಬಂಧಿಗಳ ನಡುವೆ ನಡೆಯುವ ವಿವಾಹಗಳಲ್ಲಿ ಎರಡು ವಿಧಗಳಿವೆ. ಅಣ್ಣ-ತಂಗಿ ಅಥವಾ ಅಕ್ಕ- ತಮ್ಮಂದಿರ ಗಂಡು-ಹೆಣ್ಣು ಮಕ್ಕಳ ನಡುವಿನ ವಿವಾಹವು ಮೊದಲನೆಯದಾಗಿದ್ದು, ಸೋದರಮಾವನು ತನ್ನ ಅಕ್ಕನ ಮಗಳನ್ನು ವಿವಾಹವಾಗುವುದು ಎರಡನೆಯ ವಿಧವಾಗಿದೆ. ಈ ರೀತಿಯ ವಿವಾಹಗಳಿಂದ ಹುಟ್ಟುವ ಮಕ್ಕಳಲ್ಲಿ ಅನುವಂಶಿಕ - ಜನ್ಮದತ್ತ ಕಾಯಿಲೆಗಳ ಸಂಭಾವ್ಯತೆಯು ಹೆಚ್ಚಾಗಿರುತ್ತದೆ. 

ಅನುವಂಶಿಕತೆ 

ನಮ್ಮ ಶರೀರದ ಜೀವಕಣಗಳಲ್ಲಿ ತಂದೆಯಿಂದ ಪಡೆದ ೨೩ ಹಾಗೂ ತಾಯಿಯಿಂದ ಪಡೆದ ೨೩ ವರ್ನತಂತುಗಳಿದ್ದು, ಇವುಗಳು ೨೩ ಜೊತೆಗಳಾಗಿ ಇರುತ್ತವೆ. ಇವುಗಳಲ್ಲಿ ಒಂದು ಜೊತೆ ಲಿಂಗ ನಿರ್ಧಾರಕ (ಸೆಕ್ಸ್ ಕ್ರೋಮೊಸೋಮ್ಸ್) ವಾಗಿದ್ದು, ಇನ್ನುಳಿದ ೨೨ ಜೊತೆಗಳನ್ನು  ಅಟೊಸೊಮ್ಸ್ ಎನ್ನುವರು

ಪ್ರತಿಯೊಂದು ವರ್ಣತಂತುವಿನಲ್ಲಿ ಸಾವಿರಕ್ಕೂ ಅಧಿಕ ವಂಶವಾಹಿನಿಗಳು(ಜೀನ್ಸ್) ಇದ್ದು, ಇವುಗಳಲ್ಲಿ ವ್ಯಕ್ತಿಯ ಶಾರೀರಿಕ- ಮಾನಸಿಕ  ಗುಣಲಕ್ಷಣಗಳು, ಅನುವಂಶಿಕ ಕಾಯಿಲೆಗಳ ಮಾಹಿತಿಗಳು ಮತ್ತಿತರ ಅನೇಕ ಸಂಕೇತಗಳು ಅಡಕವಾಗಿರುತ್ತವೆ. ಪ್ರತಿಯೊಂದು ವರ್ಣತಂತು ಅಥವಾ ವಂಶವಾಹಿನಿಯಲ್ಲಿ ಇರಬಹುದಾದ ನ್ಯೂನ್ಯತೆ, ವೈಪರೀತ್ಯ, ವಿಕೃತಿಗಳು ಅಥವಾ ಇವುಗಳ ಪರಿವರ್ತನೆಗಳ ಪರಿಣಾಮವಾಗಿ ಕೆಲವೊಂದು ನಿರ್ದಿಷ್ಟ ಕಾಯಿಲೆಗಳು,ನ್ಯೂನ್ಯತೆಗಳು ಹಾಗೂ ವೈಕಲ್ಯಗಳು ಮುಂದಿನ ಸಂತತಿಯಲ್ಲಿ ಕಂಡುಬರುವುದುಂಟು. ಇಂತಹ ಸಮಸ್ಯೆಗಳು ಸೋದರ ಸಂಬಂಧಿಗಳಲ್ಲಿ ನಡೆಯುವ ವಿವಾಹಗಳಿಂದಾಗಿ ದ್ವಿಗುಣಗೊಳ್ಳುವ ಸಾಧ್ಯತೆಗಳಿವೆ. 

ಕಾರಣಗಳ ವೈವಿಧ್ಯ 

ಮನುಷ್ಯನನ್ನು ಬಾಧಿಸಬಲ್ಲ ಕೆಲವೊಂದು ಕಾಯಿಲೆಗಳು ಕೇವಲ ವಂಶವಾಹಿನಿಗಳ ವೈಪರೀತ್ಯದಿಂದಾಗಿಯೇ ಉದ್ಭವಿಸುತ್ತವೆ. ಇವುಗಳಲ್ಲಿ ಪರಿಸರ ಅಥವಾ ಅನ್ಯ ಕಾರಣಗಳು ತಮ್ಮ ಪ್ರಭಾವವನ್ನು ಬೀರುವುದಿಲ್ಲ. ಇಂತಹ ಕಾಯಿಲೆಗಳಲ್ಲಿ ವರ್ನತಂತುಗಳ ಅಸಾಮಾನ್ಯತೆಯೂ ಸೇರಿದ್ದು, ಇವುಗಳನ್ನು ಏಕ ಕಾರಣದಿಂದ ಉದ್ಭವಿಸುವ ಕಾಯಿಲೆಯೆಂದು ಗುರುತಿಸಲಾಗಿದೆ. ಕೇವಲ ಒಂದು ವಂಶವಾಹಿನಿಯ ನ್ಯೂನ್ಯತೆಯಿಂದ ಅಪರೂಪದಲ್ಲಿ ಕಾಣಸಿಗುವ ಸಾವಿರಕ್ಕೂ ಹೆಚ್ಚು ವಿಧದ ಆರೋಗ್ಯದ ಸಮಸ್ಯೆಗಳಿದ್ದು, ಇವುಗಳು ಜನ್ಮದತ್ತವಾಗಿ ಅಥವಾ ಬಾಲ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಆದರೆ ಇವುಗಳಿಗೆ ಅಪವಾದಗಳು ಇರುವುದು ನಿಜವಾಗಿದ್ದರೂ, ಇಂತಹ ಗಂಭೀರ ಕಾಯಿಲೆಗಳು ಮಾತಾಪಿತರಿಂದ ನೇರವಾಗಿ ಮಕ್ಕಳಿಗೆ ಬರುವ ಸಾಧ್ಯತೆಗಳಿವೆ. ಇದೇ ಕಾರಣದಿಂದಾಗಿ ಸೋದರ ಸಂಬಂಧಿ ದಂಪತಿಗಳ ಸಂತತಿಯಲ್ಲಿ ಇವುಗಳ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. 

ಇನ್ನು ಕೆಲವು ಕಾಯಿಲೆಗಳಿಗೆ ನಮ್ಮ ಪರಿಸರ ಅರ್ಥಾತ್ ಸೋಂಕು,ಆಹಾರ,ಪೋಷಕಾಂಶಗಳು ಹಾಗೂ ಪರಿಸರ ಪ್ರದೂಷಣೆಗಳು ಕಾರಣವೆನಿಸುತ್ತವೆ. ಇವುಗಳಿಗೆ ಪರಿಸರವೇ ನೇರವಾಗಿ ಕಾರಣವಾಗಿರುತ್ತದೆ. 

ಮತ್ತೆ ಕೆಲವು ಕಾಯಿಲೆಗಳಿಗೆ ಪರಿಸರ ಮತ್ತು ಅನುವಂಶಿಕತೆ ಇವೆರಡೂ ಕಾರಣವೆನಿಸುವುದುಂಟು. ಇವುಗಳಿಗೆ ಬಹುಕಾರಣಗಳಿಂದ ಬರುವ ಕಾಯಿಲೆಗಳು ಎನ್ನುತ್ತಾರೆ. ಇವುಗಳಲ್ಲಿ ಜನ್ಮದತ್ತ ವೈಕಲ್ಯಗಳು,ಮಧುಮೇಹ,ಅಧಿಕ ರಕ್ತದೊತ್ತಡ,ಜನ್ಮದತ್ತ ಹೃದ್ರೋಗಗಳು, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು ಮತ್ತು ಸಿಜೋಫ್ರೆನಿಯಾ ದಂತಹ ವ್ಯಾಧಿಗಳು ಸೇರಿವೆ. ಇಂತಹ ಸಮಸ್ಯೆಗಳಲ್ಲಿ ಸಾಮಾನ್ಯವಾಗಿ ಒಂದಕ್ಕೂ ಹೆಚ್ಚು ವಂಶವಾಹಿನಿಗಳ ವೈಪರೀತ್ಯಗಳು ಕಾರಣವಾಗಿರುತ್ತವೆ. 

ವರ್ಣತಂತುಗಳ ಅಸಾಮಾನ್ಯತೆಗಳಿಂದಾಗಿ ಡೌನ್ಸ್ ಸಿಂಡ್ರೋಮ್,ಸೀಳು ತುಟಿ- ಒಸಡುಗಳಂತಹ ವೈಕಲ್ಯಗಳು, ಸ್ವಯಂ ಸಂಭವಿಸುವ ಗರ್ಭಪಾತ,ವ್ಯಕ್ತಿತ್ವದ ಸಮಸ್ಯೆಗಳೇ ಮುಂತಾದ ಕಾಯಿಲೆಗಳು ಬಾಧಿಸುತ್ತವೆ. 

ಅನುವಂಶಿಕ ಕಾಯಿಲೆಗಳು ಅನೇಕ ಕುಟುಂಬಗಳ ಒಂದು ತಲೆಮಾರಿನಲ್ಲಿ ಮಾಯವಾಗಿ,ಮುಂದಿನ ತಲೆಮಾರಿನ ಸಂತತಿಯಲ್ಲಿ ಮತ್ತೊಮ್ಮೆ ಪ್ರತ್ಯಕ್ಷವಾಗಬಹುದು. ಅಪರೂಪದಲ್ಲಿ ಒಂದೇ ರೀತಿಯ ನ್ಯೂನ್ಯತೆಗಳು ಇರುವ ದಂಪತಿಗಳಲ್ಲಿ ಹುಟ್ಟುವ ಎಲ್ಲಾ ಮಕ್ಕಳಲ್ಲೂ ಇದೇ ರೀತಿಯ ನ್ಯೂನ್ಯತೆಗಳು ಕಂಡುಬರುವುದು. ಇಂತಹ ಸಾಧ್ಯತೆಗಳು ರಕ್ತಸಂಬಂಧಿಗಳ ನಡುವಿನ ವಿವಾಹಗಳಿಂದಾಗಿ ಉದ್ಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ಒಂದೇ ರೀತಿಯ ನ್ಯೂನ್ಯತೆಗಳು ರಕ್ತಸಂಬಂಧಿಗಳಲ್ಲದ ದಂಪತಿಗಳಲ್ಲಿ ಕಂಡುಬರುವ ಸಾಧ್ಯತೆಗಳು ತೀರಾ ವಿರಳವಾಗಿರುತ್ತವೆ. 

ದೀರ್ಘಾಯುಷ್ಯದ ಪರಂಪರೆ ಇರುವ ಕುಟುಂಬಗಳಲ್ಲಿ ಅನುವಂಶಿಕ ಕಾಯಿಲೆಗಳ ಇರುವಿಕೆಯನ್ನು ಪತ್ತೆ ಹಚ್ಚುವುದು ಅತ್ಯಂತ ಸುಲಭ. ಸೋದರ ಸಂಬಂಧಿಗಳ ವಿವಾಹದಿಂದಾಗಿ ಹುಟ್ಟುವ ಮಕ್ಕಳಲ್ಲಿ  ಹೆರಿಗೆಯ ಮುನ್ನ- ಹೆರಿಗೆಯ ಸಂದರ್ಭದಲ್ಲಿ  ತೊಂದರೆಗಳು ಸಂಭವಿಸುವುದು, ಅಪರೂಪದ ಜನ್ಮದತ್ತ ವೈಕಲ್ಯಗಳು ಹಾಗೂ ಮಾನಸಿಕ ಬೆಳವಣಿಗೆಗಳು ಕುಂಠಿತಗೊಳ್ಳುವುದೇ ಮುಂತಾದ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳು ಹೆಚ್ಚಿವೆ. ವಿಶೇಷವಾಗಿ ಕುಟುಂಬದ ಹಿರಿಯರಲ್ಲಿ ಇಂತಹ ಸಮಸ್ಯೆಗಲಿದ್ದಲ್ಲಿ, ಇವುಗಳು ಮುಂದಿನ ಸಂತತಿಯಲ್ಲಿ ಪುನರಾವರ್ತನೆಯಾಗುತ್ತವೆ. 

ರಕ್ತಸಂಬಂಧಿಗಳ ನಡುವೆ ನಡೆಯುವ ವಿವಾಹಗಳಲ್ಲಿ ಇಂತಹ ಆರೋಗ್ಯದ ಸಮಸ್ಯೆಗಳು ತಲೆದೋರಲು ಅನುವಂಶಿಕತೆಯೇ ಪ್ರಧಾನ ಕಾರಣವಾಗಿರುತ್ತದೆ. ಏಕೆಂದರೆ ಒಂದೇ ತಾಯಿಯ ಮಕ್ಕಳ ಜೀವಕಣಗಳಲ್ಲಿರುವ ಶೇ. ೫೦ ರಷ್ಟು ವರ್ಣತಂತುಗಳು ಮತ್ತು ಇವುಗಳಲ್ಲಿನ ವಂಶವಾಹಿನಿಗಳು ಒಂದೇ ರೀತಿಯದ್ದಾಗಿರುತ್ತವೆ. ಆದರೆ ಸೋದರಮಾವ ಹಾಗೂ ಸೋದರಸೊಸೆಯರಲ್ಲಿ ಈ ಪ್ರಮಾಣವು ಶೇ. ೨೫ ಮತ್ತು ಸೋದರಮಾವ-ಸೋದರ ಅತ್ತೆಯ ಮಕ್ಕಳಲ್ಲಿ ಶೇ. ೧೨. ೫ ಆಗಿರುತ್ತದೆ. ಈ ಮಕ್ಕಳು ಹಾಗೂ ಮೊಮ್ಮಕ್ಕಳ ತಂದೆ-ತಾಯಿ ಹಾಗೂ ಅಜ್ಜ-ಅಜ್ಜಿಯರು ,ಈ ದಂಪತಿಗಳ ಪೂರ್ವಜರಾಗಿರುವುದೇ ಇದಕ್ಕೆ ಮೂಲಕಾರಣ ಎನಿಸುತ್ತದೆ. ಹಾಗೂ ಇದೇ ಕಾರಣದಿಂದಾಗಿ ಈ ಹಿರಿಯರಲ್ಲಿ ಇದ್ದಿರಬಹುದಾದ ಅನುವಂಶಿಕ ನ್ಯೂನ್ಯತೆಗಳು- ಕಾಯಿಲೆಗಳು, ಇವರ ಮಕ್ಕಳು-ಮೊಮ್ಮಕ್ಕಳ ನಡುವಿನ ವೈವಾಹಿಕ ಸಂಬಂಧದಿಂದಾಗಿ ಹುಟ್ಟುವ ಮಕ್ಕಳನ್ನು  ಬಾಧಿಸುವ ಸಾಧ್ಯತೆಗಳು ಹೆಚ್ಚಿವೆ. 

ಆದರೆ ರಕ್ತಸಂಬಂಧಿಗಳಲ್ಲದ ದಂಪತಿಗಳಲ್ಲಿ ಏಕರೀತಿಯ ಅನುವಂಶಿಕ ನ್ಯೂನ್ಯತೆಗಳು ಇರುವ ಸಾಧ್ಯತೆಗಳು ಅತ್ಯಂತ ಅಪರೂಪವಾಗಿರುವುದರಿಂದ, ಮುಂದಿನ ಸಂತತಿಯಲ್ಲಿ ಇಂತಹ ಆರೋಗ್ಯದ ಸಮಸ್ಯೆಗಳು ತಲೆದೋರುವ ಸಾಧ್ಯತೆಗಳು ಅತ್ಯಂತ ಅಪರೂಪವಾಗಿರುತ್ತವೆ. 

ಇವೆಲ್ಲಾ ಕಾರಣಗಳಿಂದಾಗಿ ರಕ್ತಸಂಬಂಧಿಗಳ ನಡುವೆ ನಡೆಯುವ ವಿವಾಹಗಳು ನಿಶ್ಚಿತವಾಗಿಯೂ, ಮುಂದಿನ ಸಂತತಿಯ ಆರೋಗ್ಯದ ದೃಷ್ಟಿಯಿಂದ ಹಾನಿಕರ ಎನಿಸುತ್ತವೆ. 

ಡಾ. ಸಿ .ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ           

Monday, August 19, 2013

Iodine deficiency and iodised salt



              ಮಕ್ಕಳು ಸರಿಯಾಗಿ ಬೆಳೆಯುತ್ತಿಲ್ಲವೇ?,ಅಯೋಡಿನ್ ಕೊರತೆ ಇರಬಹುದು!
ಕೆಲ ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದ್ದ ಅನ್ಕಿಂಶಗಳಂತೆ, ಪ್ರತಿವರ್ಷ ಜಗತ್ತಿನಾದ್ಯಂತ ೧೫೦ ದಶಲಕ್ಷ ಜನರು ಅಯೋಡಿನ್ ಕೊರತೆಯಿಂದ ಬಳಲುತ್ತಾರೆ. ಇದೇ ಸಂದರ್ಭದಲ್ಲಿ ಭಾರತ ಸರಕಾರ ನಡೆಸಿದ್ದ ಸಮೀಕ್ಷೆಯಂತೆ,ಸುಮಾರು ೬೪ ದಶಲಕ್ಷ ಭಾರತೀಯರು ಈ ಸಮಸ್ಯೆಯಿಂದ ಪೀಡಿತರಾಗಿದ್ದುದು ಪತ್ತೆಯಾಗಿತ್ತು. ಇಂತಹ ಸಮಸ್ಯೆಯನ್ನು ಅಯೋಡಿನ್ ಅಂಶಗಳಿರುವ ಆಹಾರ ಪದಾರ್ಥಗಳ ಸೇವನೆ ಮತ್ತು ಅಡುಗೆಯಲ್ಲಿ ಅಯೋಡಿನ್ ಯುಕ್ತ ಉಪ್ಪನ್ನು ಬಳಸುವ ಮೂಲಕ ಸುಲಭದಲ್ಲೇ ತಡೆಗಟ್ಟಬಹುದು. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
----------------------------------      ---------------------------------------     ------------------------------------------     -------------------------------

ಮನುಷ್ಯನ ಆರೋಗ್ಯಕ್ಕೆ ಅತ್ಯವಷ್ಯಕವೆನಿಸುವ ಸೂಕ್ಷ್ಮ ಪೋಷಕಾಂಶಗಳಲ್ಲಿ ಅಯೋಡಿನ್ ಒಂದಾಗಿದೆ. ನಾವೆಲ್ಲರೂ ಪ್ರತಿನಿತ್ಯ ಸೇವಿಸುವ ವಿವಿಧ ಹಸಿರುಸೊಪ್ಪುಗಳು, ತರಕಾರಿಗಳು,ಹಾಲು ಮತ್ತು ಮೀನುಗಳಲ್ಲಿ ಅಲ್ಪಪ್ರಮಾಣದಲ್ಲಿ ಅಯೋಡಿನ್ ಇರುತ್ತದೆ. ಆದರೂ ಪ್ರಪಂಚದ ಅನೇಕ ರಾಷ್ಟ್ರಗಳ ಜನರನ್ನು ಅಯೋಡಿನ್ ನ ಕೊರತೆಯಿಂದ ಉದ್ಭವಿಸಬಲ್ಲ ಆರೋಗ್ಯದ ಸಮಸ್ಯೆಗಳು ಕಾಡುತ್ತಿವೆ. 

ಅಯೋಡಿನ್ ನ ಕೊರತೆ 

ಕಾರಣಾಂತರಗಳಿಂದ ನಮ್ಮ ಶರೀರಕ್ಕೆ ಲಭ್ಯವಾಗುವ ಅಯೋಡಿನ್ ನ ಪ್ರಮಾಣದಲ್ಲಿ ಕೊರತೆಯುಂಟಾದಾಗ ಥೈರಾಯ್ಡ್ ಗ್ರಂಥಿಯ ಹಿಗ್ಗುವಿಕೆ,ಮಕ್ಕಳಲ್ಲಿ ಶಾರೀರಿಕ- ಮಾನಸಿಕ ಬೆಳವಣಿಗೆಗಳು ಕುಂಠಿತಗೊಳ್ಳುವುದು ಹಾಗೂ ವಾಕ್ ಶ್ರಾವಣ ದೋಷಗಳು ಕಂಡುಬರುತ್ತವೆ. ವಿಶೇಷವಾಗಿ ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣ,ಪುಟ್ಟ ಕಂದಂದಿರು ಮತ್ತು ಬೆಳೆಯುವ ಮಕ್ಕಳಲ್ಲಿ ಬುದ್ದಿಮಾಂದ್ಯತೆಯ ಸಮಸ್ಯೆ, ಅಯೋಡಿನ್ ನ ಕೊರತೆಯಿಂದ ಉದ್ಭವಿಸುವ ಸಾಧ್ಯತೆಗಳಿವೆ. 

ಅತಿಸೇವನೆ ಅನಾರೋಗ್ಯಕ್ಕೆ ಹಾದಿ 

ಅಯೋಡಿನ್ ಮಿಶ್ರಿತ ಉಪ್ಪಿನ ಅತಿಸೇವನೆಯಿಂದ "ಹೈಪರ್ ಥೈರಾಯ್ದಿಸಂ " (Iodine induced hyper thyroidism-IIM ) ಎನ್ನುವ  ತಲೆದೋರಬಲ್ಲದು. ಇದರಿಂದಾಗಿ ಶರೀರಕ್ಕೆ ಅತ್ಯವಶ್ಯಕವೆನಿಸುವ ಜೀವಸತ್ವಗಳ ಬೇಡಿಕೆ ಹೆಚ್ಚಾಗುವುದರಿಂದ, ತತ್ಸಂಬಂಧಿತ ಜೀವಸತ್ವಗಳ ಕೊರತೆಯೂ ಉಂಟಾಗಬಹುದು. ಇದಲ್ಲದೇ ಅತಿಯಾದ ಹಸಿವು ಹಾಗೂ ಇದರರ ಪರಿಣಾಮವಾಗಿ ಅತಿಆಹಾರ ಸೇವನೆ- ಭೇದಿ,ಅತಿಆಯಾಸ,ಮಾನಸಿಕ ತೊಂದರೆಗಳಾದ ಖಿನ್ನತೆ ಮತ್ತು ಉದ್ವೇಗಗಳಂತಹ ಸಮಸ್ಯೆಗಳು ಬಾಧಿಸಬಹುದು.   

ಇವೆಲ್ಲಕ್ಕೂ ಮಿಗಿಲಾಗಿ ಅತಿಯಾದ ಉಪ್ಪಿನ ಸೇವನೆಯಿಂದ ಹೃದಯ ಹಾಗೂ ರಕ್ತನಾಳಗಳಿಗೆ ಸಂಬಂಧಿಸಿದ ಗಂಭೀರ ತೊಂದರೆಗಳು,ಅಧಿಕ ರಕ್ತದೊತ್ತಡ,ಮೂಳೆಗಳ ಸವೆತ ಮತ್ತು ದೌರ್ಬಲ್ಯಗಳಂತಹ ವ್ಯಾಧಿಗಳು ಬಾಧಿಸಬಹುದು. ಈ ರೀತಿಯಲ್ಲಿ ಗಂಭೀರವಾದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಅಯೋಡಿನ್ ಯುಕ್ತ ಉಪ್ಪನ್ನು, ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಅತಿಯಾಗಿ ಬಳಸದಿರಿ. ಅಯೋಡಿನ್ ನ ಕೊರತೆಯಿಂದ ಉದ್ಭವಿಸಬಲ್ಲ "ಅಯೋಡಿನ್ ಡಿಫೀಶಿಯೆನ್ಸಿ ಡಿಸಾರ್ಡರ್ " ನಂತಹ ಆರೋಗ್ಯದ ಸಮಸ್ಯೆಯನ್ನು ತಡೆಗಟ್ಟಲು ಈ ಉಪ್ಪಿನ ಬಳಕೆ ಉಪಯುಕ್ತವೆನಿಸಬಹುದಾದರೂ, ಇದರ ಅತಿಬಳಕೆಯು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿ ಪರಿಣಮಿಸಬಲ್ಲದು ಎನ್ನುವುದನ್ನು ಮರೆಯದಿರಿ. 

ತಾಯಿಯ ಹಾಲಿನಿಂದ ಅಯೋಡಿನ್ ಕೊರತೆ 

ಸಾಮಾನ್ಯವಾಗಿ ಪುಟ್ಟಕೂಸಿಗೆ ಬೇಕಾಗುವಷ್ಟು ಅಯೋಡಿನ್ ತಾಯಿಯ ಹಾಲಿನಿಂದಲೇ ದೊರೆಯುತ್ತದೆ. ಆದರೂ ಹಸುಳೆಗಳಲ್ಲಿ ಅಯೋಡಿನ್ ಕೊರತೆ ಉಂಟಾಗಲು ಎರಡು ಪ್ರಮುಖ ಕಾರಣಗಳಿವೆ. ಮಗುವಿಗೆ ಮೊಲೆಯುಣಿಸುವ ತಾಯಂದಿರಲ್ಲಿ ಪೌಷ್ಟಿಕಾಂಶಗಳ ನ್ಯೂನತೆ ಮತ್ತು ಅಯೋಡಿನ್ ನ ಕೊರತೆ ಇರುವುದು ಅಥವಾ ಈ ಹಾಲಿನಲ್ಲಿರುವ ಅಯೋಡಿನ್ ಅಂಶಗಳನ್ನು ಹೀರಿಕೊಳ್ಳಲು ಹಸುಳೆಗಳ ಜೀರ್ಣಾಂಗಗಳು ವಿಫಲವಾಗುವುದೇ ಇವೆರಡು ಕಾರಣಗಳಾಗಿವೆ. ಇವುಗಳಲ್ಲಿ ಎರಡನೇ ಕಾರಣಕ್ಕೆ ಪರ್ ಕ್ಲೋರೇಟ್ ಎನ್ನುವ ಪ್ರದೂಷಕ ರಾಸಾಯನಿಕವೇ ಕಾರಣವಾಗಿರುತ್ತದೆ. 

ಪರ್ ಕ್ಲೋರೇಟ್ ರಾಸಾಯನಿಕವನ್ನು ಪಟಾಕಿ,ಸಿಡಿಮದ್ದು,ಸ್ಪೋಟಕಗಳ ತಯಾರಿಕೆ ಮತ್ತು ರಾಕೆಟ್ ಗಳ ಇಂಧನದ ರೂಪದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ತತ್ಪರಿಣಾಮವಾಗಿ ನಾವು ಸೇವಿಸುವ ನೀರು ಮತ್ತು ಆಹಾರ ಪದಾರ್ಥಗಳಲ್ಲಿ ಇದರ ಅಂಶಗಳು ಬೆರೆತಿರುವುದು ಪತ್ತೆಯಾಗಿದೆ. ಈ ರಾಸಾಯನಿಕದ ಪ್ರದೂಷಣೆಗೆ ಒಳಗಾಗಿದ್ದ ತಾಯಂದಿರ ಶಿಶುಗಳು, ತಾಯಿಯ ಎದೆಹಾಲಿನಲ್ಲಿರುವ ಅಯೋಡಿನ್ ಅಂಶವನ್ನು ಹೀರಿಕೊಳ್ಳಲು ವಿಫಲವಾಗುತ್ತವೆ ಎನ್ನುವುದನ್ನು ವೈದ್ಯಕೀಯ ಅಧ್ಯಯನವೊಂದು ಬಹಿರಂಗಪಡಿಸಿತ್ತು. 

ನವಜಾತ ಶಿಶುಗಳಿಗೆ ೬ ತಿಂಗಳು ತುಂಬುವ ತನಕ ಪ್ರತಿನಿತ್ಯ ೧೧೦ ಮೈಕ್ರೋ ಗ್ರಾಂ ಅಯೋಡಿನ್ ನ ಅವಶ್ಯಕತೆ ಇರುತ್ತದೆ. ಆದರೆ ತಾಯಿಯ ಹಾಲಿನಲ್ಲಿ ಇರಬಹುದಾದ ಪರ್ ಕ್ಲೋರೇಟ್ ನ ದುಷ್ಪರಿಣಾಮದಿಂದಾಗಿ ಅನೇಕ ಶಿಶುಗಳಿಗೆ ದಿನವೊಂದರಲ್ಲಿ ಕೇವಲ ೧೦ ರಿಂದ ೧೨ ಮೈಕ್ರೋ ಗ್ರಾಂ ಅಯೋಡಿನ್ ಲಭಿಸುತ್ತದೆ!. 

ತಾಯಿಯ ಶರೀರದಲ್ಲಿನ ಅಯೋಡಿನ್ ನ ಶೇ. ೨೧ ರಷ್ಟು ಅಂಶವು ಎದೆಹಾಲಿನಲ್ಲೇ ಇರುವುದಾದರೂ, ಆಕೆಯ ಶರೀರದಲ್ಲಿನ ಪರ್ ಕ್ಲೋರೇಟ್ ನ ಶೇ. ೫೦ ರಷ್ಟು ಅಂಶವು ಎದೆಹಾಲನ್ನು ಸೇರುತ್ತದೆ. ಇದರಿಂದಾಗಿ ಶಿಶುಗಳ ತೂಕಕ್ಕೆ ಅನುಗುಣವಾಗಿ ೦. ೨ ರಿಂದ ೦. ೩ ಮೈಕ್ರೋ ಗ್ರಾಂ ನಷ್ಟು ಪರ್ ಕ್ಲೋರೇಟ್ ,ಈ ಶಿಶುಗಳ ಉದರವನ್ನು ಸೇರುತ್ತದೆ. 

ಇದಲ್ಲದೇ ಅಯೋಡಿನ್ ನ ಕೊರತೆಯಿಂದಾಗಿ ಮನುಷ್ಯನ ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಯಲ್ಲಿ ವ್ಯತ್ಯಯವಾಗುತ್ತದೆ. ಈ ಗ್ರಂಥಿಯು ಸ್ರವಿಸುವ ಥೈರಾಕ್ಸಿನ್ ಎನ್ನುವ ಹಾರ್ಮೋನ್, ಶಿಶುಗಳ ನರಮಂಡಲದ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಈ ಹಾರ್ಮೋನ್ ನ ಕೊರತೆಯಿಂದಾಗಿ ಶಿಶುಗಳ ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುವುದು,ಮೆದುಳಿಗೆ ಹಾನಿಯಾಗುವುದು ಮತ್ತು ಶಾರೀರಿಕ  ಬೆಳವಣಿಗೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಜೊತೆಗೆ ತೀವ್ರತರ ಕೊರತೆಯಿಂದ ಬಳಲುವ ಶಿಶುಗಳು ಬದುಕಿ ಉಳಿಯುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಇವೆಲ್ಲ ಸಮಸ್ಯೆಗಳನ್ನು ನಿಯಂತ್ರಿಸುವ ಹಾಗೂ ತಡೆಗಟ್ಟುವ ಸಲುವಾಗಿಯೇ, ಭಾರತವೂ ಸೇರಿದಂತೆ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಅಯೋಡಿನ್ ಯುಕ್ತ ಉಪ್ಪಿನ ಮಾರಾಟವನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಜನಸಾಮಾನ್ಯರು ಈ ಉಪ್ಪನ್ನು ಬಹಳ ಜಾಗರೂಕತೆಯಿಂದ ಬಳಸಬೇಕಾಗಿದೆ. 

ಅಯೋಡಿನ್ ಯುಕ್ತ ಉಪ್ಪು 

ಅಯೋಡಿನ್ ಯುಕ್ತ ಉಪ್ಪನ್ನು ತಯಾರಿಸುವಾಗ ಒಂದು ಟನ್ ಉಪ್ಪಿಗೆ ಬೆರೆಸುವ ಪೊಟಾಸಿಯಂ ಆಯೋಡೇಟ್ ನ ಪ್ರಮಾಣವು ಕೇವಲ ೫೦ ಗ್ರಾಂ ಆಗಿರುತ್ತದೆ. ಅಯೋಡಿನ್ ಯುಕ್ತ ಉಪ್ಪನ್ನು ಬಳಸುವ ಜನಸಾಮಾನ್ಯರು ಇವುಗಳ ಪೊಟ್ಟಣಗಳ ಮೇಲೆ "ಇದರಲ್ಲಿರುವ ಅಯೋಡಿನ್ ನ ಪ್ರಮಾಣವು ೧೫ ರಿಂದ ೩೦ ಪಿ . ಪಿ . ಎಂ " ಎಂದು ಮುದ್ರಿಸಿರುವುದನ್ನು ಗಮನಿಸುವುದೇ ಇಲ್ಲ. ಪಿ. ಪಿ. ಎಂ ಅಂದರೆ ಪಾರ್ಟ್ಸ್ ಪರ್ ಮಿಲಿಯನ್ ಎಂದರ್ಥ. ಅರ್ಥಾತ್ ಒಂದು ಮಿಲಿಯನ್ ಉಪ್ಪಿನ ಕಣಗಳಲ್ಲಿ ಕೇವಲ ೧೫ ರಿಂದ ೩೦ ಪೊಟಾಸಿಯಂ ಆಯೋಡೇಟ್ ನ ಕಣಗಳು ಇರುತ್ತವೆ!. ನಿಜಸ್ಥಿತಿ ಹೀಗಿದ್ದರೂ,ಅನೇಕ ಅಯೋಡಿನ್ ಯುಕ್ತ ಉಪ್ಪಿನ ತಯಾರಕರು ತಮ್ಮ ಉತ್ಪನ್ನದ ಕಣಕಣಗಳಲ್ಲೂ ಸರಿಯಾದ ಪ್ರಮಾಣದಲ್ಲಿ ಅಯೋಡಿನ್ ಇದೆ ಎನ್ನುವ ಜಾಹೀರಾತುಗಳನ್ನು ನೀಡುವ ಮೂಲಕ ಅಮಾಯಕರ ದಾರಿತಪ್ಪಿಸುತ್ತಿದ್ದಾರೆ. 

ಇಷ್ಟು ಮಾತ್ರವಲ್ಲ, ತಮ್ಮ ಸಂಸ್ಥೆ ತಯಾರಿಸಿ ಮಾರಾಟಮಾಡುವ ಅಯೋಡಿನ್ ಯುಕ್ತ ಉಪ್ಪಿನ ಸೇವನೆಯಿಂದ ನಿಮ್ಮ ಮಕ್ಕಳ ಬುದ್ಧಿಶಕ್ತಿ ಹೆಚ್ಚುತ್ತದೆ ಎನ್ನುವ ಜಾಹೀರಾತುಗಳನ್ನು ಪ್ರಕಟಿಸುತ್ತಾರೆ. ಇದನ್ನು ನಿಜವೆಂದು ನಂಬಿ ತಮ್ಮ ಮಕ್ಕಳಿಗೆ ದಿನನಿತ್ಯ ನೀಡುವ ಆಹಾರ ಪದಾರ್ಥಗಳಲ್ಲಿ ಬಳಸುವ ಅಯೋಡಿನ್ ಯುಕ್ತ ಉಪ್ಪಿನ ಪ್ರಮಾಣವನ್ನು ಹೆಚ್ಚಿಸಿದಲ್ಲಿ, ಅನಪೇಕ್ಷಿತ ಹಾಗೂ ಗಂಭೀರವಾದ ಆರೋಗ್ಯದ ಸಮಸ್ಯೆಗಳು ಉದ್ಭವಿಸುತ್ತವೆ. 

ಅತಿಸೇವನೆಯಿಂದ ಅನಾರೋಗ್ಯ 

೧೯೯೦ ರಲ್ಲಿ ಆಫ್ರಿಕಾ ಖಂಡದ ಅನೇಕ ದೇಶಗಳಲ್ಲಿ ಅಯೋಡಿನ್ ಮಿಶ್ರಿತ ಉಪ್ಪಿನ ಅತಿಸೇವನೆಯಿಂದ , Iodine induced hyperthyroidism ಸಮಸ್ಯೆಯು ವ್ಯಾಪಕವಾಗಿ ಕಂಡುಬಂದಿತ್ತು. ೧೯೯೫ ರಲ್ಲಿ ಜಿಂಬಾಬ್ವೆಯಲ್ಲಿ ಇದೇ ಕಾರಣದಿಂದಾಗಿ ಐ. ಐ. ಎಚ್ ನ ಪ್ರಮಾಣವು ಶೇ. ೨೭ ರಷ್ಟು ಹೆಚ್ಚಿತ್ತು. ಅಮೇರಿಕ,ಇಂಗ್ಲೆಂಡ್,ಜರ್ಮನಿ,ಜಪಾನ್,ಇಟಲಿ,ಆಸ್ಟ್ರೇಲಿಯಾ,ಸ್ವಿಟ್ಜರ್ಲೆಂಡ್ ಮುಂತಾದ ದೇಶಗಳು ೧೯೪೦ ರಲ್ಲೇ ಅಯೋಡಿನ್ ಮಿಶ್ರಿತ ಉಪ್ಪಿನ ಕಡ್ಡಾಯ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದವು. ಅಮೇರಿಕ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಹೈಪರ್ ಥೈರಾಯ್ದಿಸಂ  ಸಮಸ್ಯೆಯಿಂದಾಗಿ ಅನೇಕ ಜನರು ಮೃತಪಟ್ಟಿದ್ದುದೇ ಈ ನಿರ್ಧಾರಕ್ಕೆ ಮೂಲಕಾರಣವೆನಿಸಿತ್ತು. 
ಆದರೆ ಕೆಲವಾರು ವರ್ಷಗಳ ಹಿಂದೆ ಅಯೋಡಿನ್ ಯುಕ್ತ ಉಪ್ಪಿನ ಬಳಕೆಯನ್ನು ಕಡ್ಡಾಯಗೊಳಿಸಿದ್ದ ನಮ್ಮ ದೇಶದಲ್ಲಿ,ಐ. ಐ. ಎಚ್ ಬಗ್ಗೆ ಸಮರ್ಪಕ ಮಾಹಿತಿಗಳೇ ಲಭ್ಯವಿಲ್ಲ. ಬಹುತೇಕ ಭಾರತೀಯರು "ಉಪ್ಪಿಗಿಂತ ರುಚಿಯಿಲ್ಲ......... " ಎನ್ನುವ ಆಡುಮಾತಿನಂತೆಯೇ ತುಸು ಅಧಿಕ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುವುದರಿಂದಾಗಿ, ನಮ್ಮ ದೇಶದಲ್ಲೂ ಐ. ಐ. ಎಚ್ ನ ಪ್ರಕರಣಗಳು ಹೆಚ್ಚಿರುವ ಸಾಧ್ಯತೆಗಳಿವೆ. ಪ್ರಾಯಶಃ ಇದೇ ಕಾರಣದಿಂದಾಗಿ ಇತೀಚೆಗೆ ಕೇಂದ್ರ ಸರಕಾರವು ಅಯೋಡಿನ್ ಮಿಶ್ರಿತ ಉಪ್ಪಿನ ಕಡ್ಡಾಯ ಬಳಕೆಯ ಸಾಧಕ-ಬಾಧಕಗಳನ್ನು ಅರಿತುಕೊಳ್ಳಲು ಸಮೀಕ್ಷೆಯೊಂದನ್ನು ನಡೆಸಲು ಆದೇಶಿಸಿದೆ. ಇದರ ವರದಿ ಬಹಿರಂಗಗೊಂಡ ಬಳಿಕವೇ, ಈ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ. 

ಕೊನೆಯ ಮಾತು 

ಅಯೋಡಿನ್ ಯುಕ್ತ ಉಪ್ಪಿನ ಕೆಲ ಜಾಹೀರಾತುಗಳು ಘೋಷಿಸುತ್ತಿದ್ದಂತೆ,ಇದರ ಸೇವನೆಯಿಂದ ನಿಮ್ಮ ಮಕ್ಕಳ ಬುದ್ಧಿಶಕ್ತಿ ಹೆಚ್ಚಾಗುವುದು ನಿಜವಾಗಿದ್ದಲ್ಲಿ ಭಾರತದ ಪ್ರತಿಯೊಂದು ಶಾಲಾ ಕಾಲೇಜುಗಳ,ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಬೇಕಿತ್ತು. ಏಕೆಂದರೆ ಕಳೆದ ಹಲವಾರು ವರ್ಷಗಳಿಂದ ವರ್ಷಗಳಿಂದ ಇವರೆಲ್ಲರೂ ಕೇವಲ ಅಯೋಡಿನ್ ಯುಕ್ತ ಉಪ್ಪನ್ನೇ ಸೇವಿಸುತ್ತಿದ್ದಾರೆ. ಆದರೆ ಶಾಲಾ ಕಾಲೇಜುಗಳ ವಾರ್ಷಿಕ ಪರೀಕ್ಷೆಗಳ ಫಲಿತಾಂಶಗಳನ್ನೊಮ್ಮೆ ಗಮನಿಸಿ. ಈಗ ಹೇಳಿ,ನಮ್ಮ-ನಿಮ್ಮ ಮಕ್ಕಳ ಬುದ್ಧಿಶಕ್ತಿ ಹೆಚ್ಚಾಗಿದೆಯೇ?. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

  ವಿಜಯವಾಣಿ ಪತ್ರಿಕೆಯ ೦೩-೦೭-೨೦೧೨ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ