Monday, August 5, 2013

Beware of Shampoos


                              ಕೇಶರಕ್ಷಕ ಶಾಂಪೂಗಳ ಬಳಕೆ ಸುರಕ್ಷಿತವೇ ?

ಒಂದೆರಡು ದಶಕಗಳ ಹಿಂದಿನ ತನಕ ಬಹುತೇಕ ಭಾರತೀಯರು ತಮ್ಮ ಕೂದಲುಗಳನ್ನು ಸ್ವಚ್ಚವಾಗಿಸಲು ಸೀಗೆಪುಡಿ ಅಥವಾ ಸಾಮಾನ್ಯ ಸ್ನಾನದ ಸಾಬೂನುಗಳನ್ನು ಬಳಸುತ್ತಿದ್ದರು. ಆದರೆ ಇತ್ತೀಚಿನ ಕೆಲವರ್ಷಗಳಿಂದ ಅಧಿಕತಮ ಭಾರತೀಯರು ತಮ್ಮ ತಲೆಗೂದಲಿನ ಸಂರಕ್ಷಣೆಗಾಗಿ, ವೈವಿಧ್ಯಮಯ ಶಾಂಪೂಗಳನ್ನು ಉಪಯೋಗಿಸಲು ಆರಂಭಿಸಿದ್ದಾರೆ. ವಿಶೇಷವೆಂದರೆ ಶಾಂಪೂಗಳ ಬಗ್ಗೆ ಏನೇನೂ ತಿಳಿದಿರದ ಅನಕ್ಷರಸ್ಥರೂ, ಇದೀಗ ಗೂಡಂಗಡಿಗಳಲ್ಲೂ ಒಂದೆರಡು ರೂಪಾಯಿಗಳಿಗೆ ಲಭಿಸುವ ಶಾಂಪೂ ಸ್ಯಾಶೆಗಳನ್ನೇ ಖರೀದಿಸಿ ಬಳಸುತ್ತಿದ್ದಾರೆ!. 

ಜಾಹೀರಾತುಗಳ ಪ್ರಭಾವ 

ಜನಸಾಮಾನ್ಯರು ಪ್ರತಿನಿತ್ಯ ಟೆಲಿವಿಶನ್ ನಲ್ಲಿ ವೀಕ್ಷಿಸುವ ಅತ್ಯಾಕರ್ಷಕ ಜಾಹೀರಾತುಗಳು, ಕಾಲಕ್ರಮೇಣ ಇವರ ಮನಸ್ಸಿನ ಮೇಲೆ ಅಚ್ಚಳಿಯದ ಪರಿಣಾಮವನ್ನು ಬೀರುತ್ತವೆ. ಅದರಲ್ಲೂ ಸಿನೆಮಾತಾರೆಯರು ಅಥವಾ ಖ್ಯಾತ ರೂಪದರ್ಶಿಗಳು ಅನುಮೋದಿಸುವ ಸೌಂದರ್ಯ ಪ್ರಸಾದನಗಳ ಜಾಹೀರಾತುಗಳು ಯುವಜನರನ್ನು ಸಂಪೂರ್ಣವಾಗಿ ಮರುಳುಗೊಳಿಸುತ್ತವೆ. ಆದರೆ ಈ ವಾಣಿಜ್ಯ ಉತ್ಪನ್ನಗಳ ತಯಾರಕರು, ತಮ್ಮ ಉತ್ಪನ್ನಗಳ ಅದ್ಭುತ ಪರಿಣಾಮಗಳ ಬಗ್ಗೆ ಕಹಳೆಯನ್ನು ಊದಿದರೂ, ಇವುಗಳ ಅಡ್ಡ ಅಥವಾ ದುಷ್ಪರಿಣಾಮಗಳ ಬಗ್ಗೆ ಚಕಾರವೆತ್ತುವುದಿಲ್ಲ. 

ಉದಾಹರಣೆಗೆ ನಿಮ್ಮ ಸಿಕ್ಕುಗಟ್ಟಿದ ಕೂದಲುಗಳನ್ನು ಬಿಡಿಸಬಲ್ಲ, ಕೂದಲುಗಳು ಉದುರುವುದನ್ನು ಮತ್ತು ತಲೆಹೊಟ್ಟನ್ನು ತಡೆಗಟ್ಟಬಲ್ಲ, ಕೂದಲುಗಳಿಗೆ ಆಕರ್ಷಕ ಹೊಳಪನ್ನು ನೀಡಬಲ್ಲ ಹಾಗೂ ಬೆಳವಣಿಗೆಯನ್ನು ಹೆಚ್ಚಿಸಬಲ್ಲ ಮತ್ತು ನಿಮ್ಮ ಮುದ್ದುಕಂದನ ಕಣ್ಣುಗಳಲ್ಲಿ ನೀರಿಳಿಸದಂತಹ ವಿಸ್ಮಯಕಾರೀ ಶಾಂಪೂಗಳ ಗುಣಗಾನಗಳನ್ನು, ಇವುಗಳ ಜಾಹೀರಾತುಗಳಲ್ಲಿ ಕಂಡಿರಲೇಬೇಕು, ಜೊತೆಗೆ ಇವುಗಳಿಗೆ ಮರುಳಾಗಿ ಒಂದೆರೆಡು ರೂಪಾಯಿ ಬೆಲೆಯ ಸ್ಯಾಶೆ ಅಥವಾ ದುಬಾರಿ ಬೆಲೆಯ ಬಾಟಲಿಗಳನ್ನು ಖರೀದಿಸಿ ಬಳಸಿರಬಹುದು. ಆದರೆ ಇವುಗಳನ್ನು ಅತಿಯಾಗಿ ಬಳಸಿದಲ್ಲಿ ಉದ್ಭವಿಸಬಲ್ಲ ಆರೋಗ್ಯದ ಸಮಸ್ಯೆಗಳ ಬಗ್ಗೆ ಪಾಯಃ ನಿಮಗೂ ತಿಳಿದಿರಲಾರದು. ಅದೇ ರೀತಿಯಲ್ಲಿ ಇವುಗಳ ತಯಾರಿಕೆಯಲ್ಲಿ ಬಳಸಿರುವ ದ್ರವ್ಯಗಳ ಬಗ್ಗೆ ತಿಳಿದಿರುವ ಸಾಧ್ಯತೆಗಳೇ ಇಲ್ಲ. 

ಅನಾರೋಗ್ಯಕರ "ನೊರೆಕಾರಕ "

ಶಾಂಪೂಗಳನ್ನು ನೀವು ಬಳಸಿದಾಗ ಉತ್ಪನ್ನವಾಗುವ ಅಪಾರ ಪ್ರಮಾಣದ "ನೊರೆ " ಯನ್ನು ಉಂಟುಮಾಡಲು ಇವುಗಳಲ್ಲಿ "ಡೈ ಇಥನೊಲಮೈನ್ " (DEA) ಎನ್ನುವ ರಾಸಾಯನಿಕವನ್ನು ಬಳಸುತ್ತಾರೆ. ಇದರ ಅತಿಯಾದ ಬಳಕೆಯು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು. ಈ ರಾಸಾಯನಿಕದ ಬಳಕೆಯಿಂದ ಕ್ಯಾನ್ಸರ್ ಉದ್ಭವಿಸುವ ಸಾಧ್ಯತೆಗಳ ಬಗ್ಗೆ 2006 ರಲ್ಲಿ ಅಧ್ಯಯನವನ್ನು ನಡೆಸಲಾಗಿತ್ತು. ತದನಂತರ ಇದು ಮನುಷ್ಯರ ಮೆದುಳಿನ ಮೇಲೆ ಬೀರಬಲ್ಲ ದುಷ್ಪರಿಣಾಮಗಳ ಬಗ್ಗೆಯೂ ಪ್ರಯೋಗಗಳನ್ನು ನಡೆಸಲಾಗಿತ್ತು. 

ಗರ್ಭ ಧರಿಸಿದ್ದ ಇಲಿಗಳ ಚರ್ಮದ ಮೇಲೆ ಡೈ ಇಥನೊಲಮೈನ್ ರಾಸಾಯನಿಕವನ್ನು ಹಲವಾರು ದಿನಗಳ ಕಾಲ ಲೇಪಿಸಿ ನಡೆಸಿದ್ದ ಅಧ್ಯಯನ-ಪ್ರಯೋಗಗಳಿಂದ, ಇವುಗಳ ಮೆದುಳಿನ ಜೀವಕಣಗಳ ಬೆಳವಣಿಗೆ ಕುಂಠಿತವಾಗುವುದು ಹಾಗೂ ಅತಿಯಾಗಿ ನಶಿಸುವುದು ತಿಳಿದುಬಂದಿತ್ತು. 

ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಯರಿಗೆ ತಮ್ಮ ಗರ್ಭದಲ್ಲಿರುವ ಭ್ರೂಣಕ್ಕೆ ಪೂರೈಸಲು ತುಸು ಅಧಿಕ ಪ್ರಮಾಣದ ಕೋಲಿನ್ (choline) ನ ಅವಶ್ಯಕತೆ ಇರುತ್ತದೆ. ಗರ್ಭಸ್ಥ ಶಿಶುವಿನ ಶಾರೀರಿಕ ಬೆಳವಣಿಗೆಗೆ ಅತ್ಯವಶ್ಯಕವೆನಿಸುವ ಈ ಪೋಷಕಾಂಶವನ್ನು, ತಾಯಿಯ ಶರೀರವು ಹೀರಿಕೊಳ್ಳುವುದನ್ನು  ಡೈ ಇಥನೊಲಮೈನ್ ತಡೆಗಟ್ಟುತ್ತದೆ. ತತ್ಪರಿಣಾಮವಾಗಿ ಶಿಶುವಿನ ಶಾರೀರಿಕ ಬೆಳವಣಿಗೆಯು ಸ್ವಾಭಾವಿಕವಾಗಿ ಕ್ಷಯಿಸುತ್ತದೆ.

 ಫೆಡರೇಶನ್  ಆಫ್ ಅಮೇರಿಕನ್ ಸೋಸೈಟೀಸ್ ಫಾರ್ ಏಕ್ಸ್ಪರಿಮೆಂಟಲ್ ಬಯಾಲಜಿ ಎನ್ನುವ ಸಂಸ್ಥೆಯು 2006 ರ ಫಾಸೆಮ್ ಜರ್ನಲ್ ನಲ್ಲಿ ಪ್ರಕಟಿಸಿದ್ದ ಈ ಅಧ್ಯಯನದ ವರದಿಗಳು ದಿಗ್ಭ್ರಮೆ ಹುಟ್ಟಿಸುವಂತಿದೆ. ಮಾನವನ ಮೆದುಳಿನ ಮೇಲೆ ಹಾಗೂ ಗರ್ಭಸ್ಥ ಶಿಶುವಿನ ಮೇಲೆ ಡೈ ಇಥನೊಲಮೈನ್ ಬೀರಬಲ್ಲ  ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಈ ರಾಸಾಯನಿಕವನ್ನು ಶಾಂಪೂಗಳಲ್ಲದೇ , ಕೈತೊಳೆಯಲು ಬಳಸುವ ಸೋಪುಗಳು,ಸೋಪಿನ ದ್ರಾವಣಗಳು ಮತ್ತು ಕೆಶವಿನ್ಯಾಸಕ್ಕೆ ಉಪಯುಕ್ತವೆಂದು ನೀವು ನಂಬಿರುವ "ಹೇರ್ ಸ್ಪ್ರೇ" ಗಳ ತಯಾರಿಕೆಯಲ್ಲೂ ಬಳಸುತ್ತಾರೆ. ವಿಶೇಷವೆಂದರೆ ಜಗತ್ತಿನ ದೊಡ್ಡಣ್ಣ ಎನಿಸಿರುವ ಅಮೇರಿಕಾದಲ್ಲಿ, ಗತದಶಕದಲ್ಲಿ ಪ್ರತಿವರ್ಷ ಒಂದು ಲಕ್ಷ ಟನ್  ಡೈ ಇಥನೊಲಮೈನ್ ಮಾರಾಟವಾಗುತ್ತಿತ್ತು!. 

ಬೇಬಿ ಶಾಂಪೂ! 

ಸುಪ್ರಸಿದ್ಧ ಅಂತರ ರಾಷ್ಟ್ರೀಯ ಸಂಸ್ಥೆಯೊಂದು ಭಾರತವೂ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಪುಟ್ಟ ಕಂದಮ್ಮಗಳ ಸಲುವಾಗಿಯೇ ಶಾಂಪೂವೊಂದನ್ನು ಮಾರಾಟ ಮಾಡುತ್ತಿದೆ. ಈ ಉತ್ಪನ್ನವನ್ನು ಬಳಸುವುದರಿಂದ ನಿಮ್ಮ ಪುಟ್ಟ ಕಂದನ ಕಣ್ಣುಗಳಲ್ಲಿ ನೀರು ಬರುವ ಸಾಧ್ಯತೆಗಳೇ ಇಲ್ಲವೆಂದು ಸಂಸ್ಥೆ ತನ್ನ ಜಾಹೀರಾತುಗಳಲ್ಲಿ ಘಂಟಾಘೋಷವಾಗಿ ಸಾರುತ್ತಿತ್ತು. ಆದರೆ ಅಮೇರಿಕಾದ ಗ್ರಾಹಕ ರಕ್ಷಣಾ ಸಂಸ್ಥೆಯೊಂದು ನಡೆಸಿದ್ದ ಪ್ರಯೋಗದ ಪರಿಣಾಮವಾಗಿ, ಈ ಉತ್ಪನ್ನದಲ್ಲಿ ಅಪಾಯಕಾರಿ ರಾಸಾಯನಿಕಗಳ ಇರುವಿಕೆ ಪತ್ತೆಯಾಗಿತ್ತು. 

ಪುಟ್ಟ ಕಂದಮ್ಮಗಳ ಸಲುವಾಗಿಯೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಈ ಶಾಂಪೂವಿನಲ್ಲಿ ಫೋರ್ಮಲ್  ಡಿಹೈಡ್ ನ್ನು ಬಿಡುಗಡೆ ಮಾಡುವ ಸಂರಕ್ಷಕವಾದ ಕ್ವಾಟರ್ನಿಯಂ -15 ಹಾಗೂ ರಾಸಾಯನಿಕ ಉಪ ಉತ್ಪನ್ನವಾಗಿರುವ 1,4-ಡೈ ಒಕ್ಟೆನ್  ಗಳಿದ್ದು, ಇವೆರಡೂ ರಾಸಾಯನಿಕಗಳು ಕ್ಯಾನ್ಸರ್ ಕಾರಕಗಳೆಂದು ಸಾಬೀತಾಗಿವೆ. ದ ಫೆಡರಲ್ ಕನ್ಸ್ಯೂಮರ್ ಪ್ರೊಡಕ್ಟ್  ಸೇಫ್ಟಿ ಕಮಿಷನ್, ಈ ವಿಷಯದಲ್ಲಿ ಎಚ್ಚರಿಕೆಯನ್ನು ನೀಡಿದೆ. ಈ ಬಗ್ಗೆ ಸಾಕಷ್ಟು ವಿರೋಧ- ಪ್ರತಿಭಟನೆಗಳು ವ್ಯಕ್ತವಾದ ಬಳಿಕ,ಇದರ ತಯಾರಕರು ತಮ್ಮ ಉತ್ಪನ್ನದಲ್ಲಿರುವ ಈ ಅಪಾಯಕಾರಿ ರಾಸಾಯನಿಕದ ಪ್ರಮಾಣವನ್ನು "ಪತ್ತೆಹಚ್ಚಲು ಅಸಾಧ್ಯ" ಎನಿಸುವಷ್ಟು ಕಡಿಮೆ ಮಾಡುವುದಾಗಿ ಘೋಷಿಸಿದೆ!. 2009 ರಲ್ಲೇ ಅನೇಕ ಗ್ರಾಹಕ, ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಂಘಟನೆಗಳು ಸಂಸ್ಥೆಗೆ ಪತ್ರಗಳನ್ನು ಬರೆದು ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದ ಪರಿಣಾಮವಾಗಿ ಇದರ ತಯಾರಕರು ಈ ನಿರ್ಧಾರವನ್ನು ತಳೆದಿದ್ದರೂ, ಅಪಾಯಕಾರಿ ರಾಸಾಯನಿಕದ ಬಳಕೆಯನ್ನೇ ನಿಲ್ಲಿಸಲು ಸಿದ್ಧರಿರಲಿಲ್ಲ!. 

ಪ್ರಸ್ತುತ ಈ ಸಂಸ್ಥೆಯು ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಪದ್ದತಿಯನ್ನು ಅನುಸರಿಸುತ್ತಿದ್ದು, ತನ್ನ ಉತ್ಪನ್ನಗಳಲ್ಲಿನ ಅಪಾಯಕಾರಿ ರಾಸಾಯನಿಕಗಳ ಬಳಕೆಯನ್ನು ನಿಲ್ಲಿಸಲು ಹಿಂಜರಿಯುತ್ತಿರುವುದು ಏಕೆಂದು ಯಾರಿಗೂ ತಿಳಿದಿಲ್ಲ. ಆದರೆ ಇಂದಿಗೂ ಈ ಸಂಸ್ಥೆಯ ಉತ್ಪನ್ನಗಳನ್ನು ತಮ್ಮ ಪುಟ್ಟ ಕಂದನಿಗಾಗಿ, ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ ಬಳಸುವವರ ಸಂಖ್ಯೆಯೂ ಕಡಿಮೆಯೇನಿಲ್ಲ!. 

ಅದೇನೇ ಇರಲಿ, ಇನ್ನುಮುಂದಾದರೂ ನೀವು ಬಳಸುತ್ತಿರುವ ಸೌಂದರ್ಯ ವರ್ಧಕಗಳಲ್ಲಿನ ರಾಸಾಯನಿಕ ದ್ರವ್ಯಗಳ ಬಗ್ಗೆ ಅರಿತುಕೊಳ್ಳದೆ, ಇವುಗಳನ್ನು ಬಳಸದಿರಿ. ನಿಮ್ಮ ಪೂರ್ವಜರು ಬಳಸುತ್ತಿದ್ದ ನೈಸರ್ಗಿಕ ಸೌಂದರ್ಯ ಪ್ರಸಾದನಗಳನ್ನು ಬಳಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿರಿ. 



ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

No comments:

Post a Comment