Saturday, August 10, 2013

Karnatakada nivratta shaasakariginnu nishchinte!



                ಉದಯವಾಣಿ ಪತ್ರಿಕೆಯ ಅಂಕಣದಲ್ಲಿ ದಿ. 19-04-2012 ರಂದು ಪ್ರಕಟಿತ ಲೇಖನ 

         ಕರ್ನಾಟಕದ ನಿವೃತ್ತ ಶಾಸಕರಿಗಿನ್ನು ನಿಶ್ಚಿಂತೆ !

ಇಂದಿನ ದಿನಗಳಲ್ಲಿ ಸಾಕಷ್ಟು ಶ್ರಮಪಟ್ಟು ಉನ್ನತ ಶಿಕ್ಷಣವನ್ನು ಪಡೆದರೂ,ಕೈತುಂಬಾ ಸಂಬಳ ಸಿಗಬಲ್ಲ ಉತ್ತಮ ಉದ್ಯೋಗ ದೊರೆಯುವುದು ಸುಲಭವೇನಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಯಾವುದೇ ಶೈಕ್ಷಣಿಕ ಅರ್ಹತೆ, ಅನುಭವ ಮತ್ತು ಬುದ್ದಿವಂತಿಕೆಗಳು ಇಲ್ಲದಿದ್ದರೂ, ಕೈತುಂಬಾ ಸಂಪಾದಿಸಬಲ್ಲ,ನಿವೃತ್ತಿಯ ಬಳಿಕವೂ ನಿಶ್ಚಿಂತೆಯಿಂದ ಜೇಬು ತುಂಬಿಸಬಲ್ಲ ಉತ್ತಮ ಉದ್ಯೋಗವೊಂದಿದೆ ಎಂದಲ್ಲಿ ನೀವೂ ನಂಬಲಾರಿರಿ. ಇಂತಹ ಉದ್ಯೋಗವು ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಲಭ್ಯವಿದೆ. ಇದನ್ನು ಗಳಿಸಿಕೊಳ್ಳಬಲ್ಲ ಸಾಮರ್ಥ್ಯ ಇದ್ದವರು ಕೇವಲ ಐದು ವರ್ಷಗಳ ಕಾಲ "ದುಡಿದಲ್ಲಿ" ಅಥವಾ ದುಡಿದಂತೆ ನಟಿಸಿದಲ್ಲಿ, ಮುಂದೆ ಜೀವನಪರ್ಯಂತ ಆರಾಮವಾಗಿ ಬದುಕಬಹುದಾಗಿದೆ. 

ಆದರೆ ಈ ಉದ್ಯೋಗ ದೊರೆಯಬೇಕಿದ್ದಲ್ಲಿ ಒಂದಿಷ್ಟು ರಾಜಕೀಯ ಪ್ರಭಾವ, ಸಾಕಷ್ಟು ಹಣಬಲ ಹಾಗೂ ಧಾರಾಳ ತೋಳ್ಬಲದ ಅವಶ್ಯಕತೆ ಇದೆ. ಸಮಾಜ ಸೇವೆ ಅಥವಾ ಜನಸೇವೆ ಎಂದು ರಾಜಕಾರಣಿಗಳು ನಾಮಕರಣ ಮಾಡಿರುವ ಈ ಉದ್ಯೋಗವನ್ನು ಪಡೆಯಬೇಕಿದ್ದಲ್ಲಿ,ನೀವು ಚುನಾವಣೆಯಲ್ಲಿ ಗೆಲ್ಲಲೇಬೇಕಾಗುತ್ತದೆ. ಕೇವಲ ಒಂದುಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಐದು ವರ್ಷಗಳ ಅವಧಿಯನ್ನು ಪೂರೈಸಲು ಯಶಸ್ವಿಯಾದಲ್ಲಿ, ಮುಂದೆ ಜೀವನಪರ್ಯಂತ ನಿಶ್ಚಿಂತೆಯಿಂದ ನಿವೃತ್ತ ಜೀವನವನ್ನು ನಡೆಸಬಹುದಾಗಿದೆ!. 

ರಾಜ್ಯದ ವಿಧಾನಸಭಾ ಸದಸ್ಯರಾಗಿ ಕೇವಲ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿದವರು  ನಿವೃತ್ತರಾದರೂ, ನಿಶ್ಚಿಂತೆಯಿಂದ ಜೀವಿಸಬಲ್ಲ ಅವಕಾಶವನ್ನು ಸ್ವಯಂ ಶಾಸಕರೇ ಕಲ್ಪಿಸಿಕೊಂಡಿದ್ದಾರೆ. ತಾವು ಮಾಡುತ್ತಿರುವುದು ಸಮಾಜಸೆವೆಯೇ ಹೊರತು ಉದ್ಯೋಗವಲ್ಲ ಎನ್ನುವ ನಮ್ಮ ಶಾಸಕರು, ತಮ್ಮ ಮಾಸಿಕವೇತನ, ವಿವಿಧ ಭತ್ಯೆಗಳು  ಮತ್ತು ಅನೇಕ ಅನ್ಯ ಸವಲತ್ತುಗಳನ್ನು ತಮಗೆ ಬೇಕೆನಿಸಿದಾಗ ಹಾಗೂ ತಮಗೆ ಬೇಕೆನಿಸಿದಷ್ಟು ಪ್ರಮಾಣದಲ್ಲಿ ತಾವೇ ಹೆಚ್ಚಿಸಿಕೊಳ್ಳುವ ಅಧಿಕಾರವನ್ನೂ ಹೊಂದಿದ್ದಾರೆ!. 

ಅಪರೂಪದಲ್ಲೊಮ್ಮೆ ನಡೆಯುವ ವಿಧಾನಸಭಾ ಕಲಾಪಗಳಲ್ಲಿ ಸದಾ ಸದ್ದುಗದ್ದಲ,ಧರಣಿ,ಪ್ರತಿಭಟನೆ ಮತ್ತು ಸಭಾತ್ಯಾಗ ಮಾಡುವ ವಿರೋಧಪಕ್ಷಗಳ ಶಾಸಕರು ಮತ್ತು ಮಾತುಮಾತಿಗೆ ಇವರನ್ನು ಜರೆಯುವ ಆಡಳಿತ ಪಕ್ಷದ ಸದಸ್ಯರ ನಡುವೆ, ಆಡಳಿತಕ್ಕೆ ಸಂಬಂಧಿಸಿದ ಯಾವುದೇ ವಿಚಾರದಲ್ಲೂ ಏಕಮತ ಮೂಡುವುದಿಲ್ಲ. ಆದರೆ ತಮ್ಮ ಸಂಬಳ ಸವಲತ್ತುಗಳನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸುವ ಸಂದರ್ಭದಲ್ಲಿ ಮಾತ್ರ ಇವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಉದ್ಭವಿಸುವುದೇ ಇಲ್ಲ!. 

ಇತ್ತೀಚಿಗೆ ಒಂದು ಲಕ್ಷ ಕೋಟಿ ರೂಪಾಯಿಗಳ ಮುಂಗಡ ಆಯವ್ಯಯ ಪತ್ರವನ್ನು ರಾಜ್ಯದ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಇದಕ್ಕೆ ಅನುಗುಣವಾಗಿ ರಾಜ್ಯ ಸರಕಾರದ ಸಾಲದ ಮೊತ್ತ, ಇದರ ಬಡ್ಡಿ ಮತ್ತು ಮರುಪಾವತಿಯ ಕಂತುಗಳ ಮೊತ್ತವೂ ಹೆಚ್ಚಲಿದೆ. ಇದರೊಂದಿಗೆ ರಾಜ್ಯ ಸರಕಾರದ ವಾರ್ಷಿಕ ಆದಾಯದ ಬಹು ದೊಡ್ದಪಾಲು, ಸರಕಾರೀ ನೌಕರರ ಸಂಬಳ,ಭತ್ಯೆ ಮತ್ತು ನಿವೃತ್ತ ನೌಕರರ ಪಿಂಚಣಿಗಾಗಿ ವ್ಯಯವಾಗುತ್ತಿದೆ. ಆದರೆ ರಾಜ್ಯದ ಆರ್ಥಿಕ ಸ್ಥಿತಿಗತಿ,ಜನಸಾಮಾನ್ಯರನ್ನು ಪೀಡಿಸುತ್ತಿರುವ ಬರ-ನೆರೆಗಳ ಬಗ್ಗೆ ಚಿಂತಿಸದ ಶಾಸಕರಿಗೆ,ಯಾವುದೇ ಸಂದರ್ಭದಲ್ಲೂ ತಮ್ಮ ಸಂಬಳ-ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವ ಸ್ವಾತಂತ್ರ್ಯವಿದೆ!. 

ವೇತನಕ್ಕಿಂತ ಅಧಿಕ ಪಿಂಚಣಿ !

"ಹುಟ್ಟಿದರೇ ಕನ್ನಡನಾಡಿನಲ್ಲಿ ಹುಟ್ಟಬೇಕು, ಮೆಟ್ಟಿದರೇ ಕನ್ನಡ ನೆಲವನ್ನು ಮೆಟ್ಟಬೇಕು ........... " ಎನ್ನುವ ಜನಪ್ರಿಯ ಸಿನೆಮಾ ಹಾಡಿನಂತೆ,ಕರ್ನಾಟಕದಲ್ಲಿ ಹುಟ್ಟಿ ಒಂದು ಬಾರಿ ಶಾಸಕರಾಗಿ ಆಯ್ಕೆಯಾದಲ್ಲಿ, ನಿಮ್ಮ ಅದೃಷ್ಟವೋ ಅದೃಷ್ಟ!. ಏಕೆಂದರೆ ಇತ್ತೀಚಿಗೆ ಜರಗಿದ್ದ ರಾಜ್ಯ ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ, ರಾಜ್ಯದ ಮಾಜಿ ಶಾಸಕರಿಗೆ ನೀಡುತ್ತಿದ್ದ ಪಿಂಚಣಿ ಮತ್ತು ಇತರ ಸವಲತ್ತುಗಳನ್ನು ಸಾಕಷ್ಟು ಹೆಚ್ಚಿಸಲಾಗಿದೆ. ಈ ಬಂಪರ್ ಕೊಡುಗೆಯಿಂದಾಗಿ ಕೇವಲ ಐದುವರ್ಷಗಳ ಅವಧಿಯನ್ನು ಪೂರೈಸಿದ ಮಾಜಿ ಶಾಸಕರಿಗೆ ಮಾಸಿಕ 25,000 ರೂ. ಮತ್ತು ಒಂದಕ್ಕೂ ಹೆಚ್ಚು ಅವಧಿಗೆ ಶಾಸಕರಾಗಿದ್ದವರಿಗೆ ಗರಿಷ್ಟ 35,000 ರೂ. ಗಳ ಮಾಸಿಕ ಪಿಂಚಣಿ ದೊರೆಯಲಿದೆ. ಇದರೊಂದಿಗೆ ಆರೋಗ್ಯವಂತ ಶಾಸಕರಿಗೂ ಮಾಸಿಕ 2000 ರೂ. ಗಳ ವೈದ್ಯಕೀಯ ವೆಚ್ಚವನ್ನು ನೀಡಲು ಸರಕಾರ (ಅರ್ಥಾತ್ ಶಾಸಕರು) ಸಮ್ಮತಿಸಿದೆ. ಇಷ್ಟು ಮಾತ್ರವಲ್ಲ, ವರ್ಷಂಪ್ರತಿ ತಮಗೆ ಬೇಕೆನಿಸಿದಲ್ಲಿ ಪ್ರವಾಸ ಹೋಗಲು ಒಂದು ಲಕ್ಷ ರೂಪಾಯಿಗಳು,ದೂರವಾಣಿ ಮತ್ತು ಒಬ್ಬ ಸಿಬಂದಿಯ ಸೌಲಭ್ಯವೂ ದೊರೆಯಲಿದೆ. ಈ ರೀತಿಯ ಸೌಲಭ್ಯಗಳು ಜೀವನಪರ್ಯಂತ ದೊರೆಯಲಿರುವಾಗ, ಕೇವಲ ಒಂದು ಅಥವಾ ಅದಕ್ಕೂ ಹೆಚ್ಚಿನ ಅವಧಿಗೆ "ಜನಸೇವೆ"ಯನ್ನು ಮಾಡಿದ ಜನಪ್ರತಿನಿಧಿಗಳು, ನಿಶ್ಚಿಂತರಾಗಿ ನಿವೃತ್ತ ಜೀವನವನ್ನು ಕಳೆಯಲು ಯಾವುದೇ ಅಡ್ಡಿ ಆತಂಕಗಳು ಬಾಧಿಸುವ ಸಾಧ್ಯತೆಗಳೇ ಇರುವುದಿಲ್ಲ. ಇದೀಗ ನೀವೇ ಹೇಳಿ,ಜೀವನಪರ್ಯಂತ ದುಡಿದು ನಿವೃತ್ತರಾಗುವ ಜನಸಾಮಾನ್ಯರಿಗೂ ದೊರೆಯದ ಪಿಂಚಣಿ ಮತ್ತು ಇತರ ಸೌಲಭ್ಯಗಳು ದೊರೆಯುವಂತಹ ಅನ್ಯ ಉದ್ಯೋಗ ಬೇರೊಂದಿಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ!. 

ಲಕ್ಷಾಧೀಶ್ವರ ಶಾಸಕರು 

2009 ನೆ ಇಸವಿಯ ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯದ ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳಲ್ಲಿ ಯಾವುದೇ ಚರ್ಚೆ,ವಾದವಿವಾದಗಳು ಮತ್ತು ಸದನದ ಕಲಾಪವನ್ನು ಬಹಿಷ್ಕರಿಸುವ ಪ್ರಲಾಪಗಳಿಲ್ಲದೇ, ಸರ್ವಾನುಮತದಿಂದ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು. 

1956ರ ಕರ್ನಾಟಕ ವಿಧಾನಮಂಡಲದವರ ವೇತನಗಳು, ನಿವೃತ್ತಿವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ 2009 ನ್ನು ಆಡಳಿತ ಮತ್ತು ವಿರೋಧಪಕ್ಷಗಳ ಸದಸ್ಯರೆಲ್ಲರೂ ಸದ್ದುಗದ್ದಲವಿಲ್ಲದೆ ಅಂಗೀಕರಿಸಲಾಗಿತ್ತು. ಈ ಮಸೂದೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ 17.34 ಕೋಟಿ  ರೂ. ಗಳ ಹೆಚ್ಚುವರಿ ಹೊರೆ ಬೀಳಲಿದೆ. ಕಾಲಕ್ರಮೇಣ ನಿವೃತ್ತ ಶಾಸಕರ ಸಂಖ್ಯೆ ಹೆಚ್ಚುತ್ತಾ ಹೋದಂತೆಯೇ,ಈ ಹೊರೆಯ ಪ್ರಮಾಣವೂ ಸ್ವಾಭಾವಿಕವಾಗಿಯೇ ಹೆಚ್ಚಲಿದೆ!. 

2009 ರಲ್ಲಿ ಕರ್ನಾಟಕದ ಶಾಸಕರ ಮಾಸಿಕ ವೇತನವನ್ನು 8000 ರೂ. ಗಳಿಂದ 10,000 ರೂ. ಗಳಿಗೆ ಹೆಚ್ಚಿಸಲಾಗಿತ್ತು. ಈ ಸಂದರ್ಭದಲ್ಲಿ ನಿವೃತ್ತಿ ವೇತನವನ್ನು ಮಾಸಿಕ 5000 ರೂ. ಗಳಿಂದ ಕನಿಷ್ಠ 15,000 ರೂ.ಮತ್ತು ಗರಿಷ್ಟ 25,000 ರೂ. ಗಳಿಗೆ ಏರಿಸಲಾಗಿತ್ತು. ಇದಲ್ಲದೆ ಶಾಸಕರ ಕ್ಷೇತ್ರ ಭತ್ಯೆಯನ್ನು ಮಾಸಿಕ 3,500 ರೂ. ಗಳಿಂದ 15,000 ರೂ. ಮತ್ತು ದೂರವಾಣಿ ಭತ್ಯೆಯನ್ನು 7,500 ರಿಂದ 10,000 ರೂ. ಗಳಿಗೆ, ಅಂಚೆ ವೆಚ್ಚವನ್ನು 1000 ದಿಂದ 4000 ರೂ. ಗಳಿಗೆ ಮತ್ತು ಸಹಾಯಕ ಸಿಬಂದಿಯ ವೇತನವನ್ನು 2000 ದಿಂದ 4000 ರೂ. ಗಳಿಗೆ ಹೆಚ್ಚಿಸಲಾಗಿತ್ತು. ಇದಲ್ಲದೇ ಸದನದ ಕಲಾಪ ನಡೆಯುವಾಗ ದೊರೆಯುವ ದಿನಭತ್ಯೆ,ಸದನದ ವಿವಿಧ ಸಮಿತಿಗಳ ಸದಸ್ಯರಾಗಿದ್ದಲ್ಲಿ ಲಭಿಸುವ ಭತ್ಯೆ, ನಿಗಮ- ಮಂಡಳಿಗಳ ಅಧ್ಯಕ್ಷರಾಗಿದ್ದಲ್ಲಿ ಸಿಗುವ ಆರ್ಥಿಕ ಮತ್ತು ಅನ್ಯ ಸವಲತ್ತುಗಳು, ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಯೊಂದರಲ್ಲಿ ಅತ್ಯಲ್ಪ ಬೆಲೆಗೆ ದೊರೆಯುವ ಜಿ ಕೆಟಗರಿ ನಿವೇಶನ(ಇತ್ತೀಚಿಗೆ ರಾಜ್ಯದ ಉಚ್ಚ ನ್ಯಾಯಾಲಯ ಈ ಸವಲತ್ತನ್ನು ರದ್ದುಗೊಳಿಸಿದೆ)  ಇತ್ಯಾದಿ ಸೌಲಭ್ಯಗಳ ಪಟ್ಟಿಯನ್ನು ಕಂಡಲ್ಲಿ, ಇವರನ್ನು ಚುನಾಯಿಸಿದ ಮತದಾರರಿಗೆ "ಶಾಕ್ " ಹೊಡೆಯುವುದರಲ್ಲಿ ಸಂದೇಹವಿಲ್ಲ. 

2009 ರ ಸೆಪ್ಟೆಂಬರ್ ತಿಂಗಳಿನಲ್ಲಿ ಶಾಸಕರಿಗೆ ವೇತನಕ್ಕಿಂತಲೂ ಹಲವಾರು ಪಟ್ಟು ಅಧಿಕ ಮೊತ್ತದ ಪಿಂಚಣಿಯನ್ನು ನೀಡಲು ನಿರ್ಧರಿಸಿದ್ದ ಸರಕಾರವು, ಇದೀಗ ಮತ್ತೊಮ್ಮೆ ಹೆಚ್ಚಿಸಲು ನಿರ್ಧರಿಸಿರುವುದು ನಂಬಲು ಅಸಾಧ್ಯವೆನಿಸುತ್ತಿದೆ. ಆದರೆ ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟವನ್ನು ಗಮನಿಸಿದಾಗ, ಹಾಲಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಮತ್ತೆ ಗೆದ್ದು ಬರುವ ವಿಶ್ವಾಸ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ!.

ಅಪವಾದವಿಹುದೇ? 

ಆದರೆ ಭಾರತದ ಸಿ.ಪಿ. ಎಂ ಪಕ್ಷದ ಶಾಸಕರು- ಸಂಸದರು ಮಾತ್ರ ಇದಕ್ಕೆ ಅಪವಾದವೆನಿಸುತ್ತಾರೆ. ಏಕೆಂದರೆ ಈ ಪಕ್ಷದ ಸಂಸದರು ತಮಗೆ ದೊರೆಯುವ ಮಾಸಿಕ ವೇತನ ಮತ್ತು ಭತ್ಯೆಯಾಗಿರುವ 1.10 ಲಕ್ಷ ರೂ. ಗಳಲ್ಲಿ ಶೇ. 70 ರಷ್ಟು ಅಂದರೆ ಸುಮಾರು 75,000 ರೂ. ಗಳನ್ನು, ತಮ್ಮ ಪಕ್ಷಕ್ಕೆ ನೀಡುವ ವಿಶಿಷ್ಠ ಸಂಪ್ರದಾಯ ಇಂದಿಗೂ ಜಾರಿಯಲ್ಲಿದೆ. ಮಿಕ್ಕಿ ಉಳಿದ 35,000 ರೂ. ಗಳನ್ನು ಮಾತ್ರ ಸಂಸದರು ತಮ್ಮ ಖರ್ಚುವೆಚ್ಚಗಳಿಗಾಗಿ ಬಳಸುತ್ತಾರೆ. ಅದೇ  ರೀತಿಯಲ್ಲಿ ಇದೇ ಪಕ್ಷದ ರಾಜ್ಯಸಭಾ ಸದಸ್ಯರು ತಮಗೆ ದೊರೆಯುವ ಮಾಸಿಕ ವೇತನ-ಭತ್ಯೆಯಲ್ಲಿ ಪ್ರತೀ ತಿಂಗಳಿನಲ್ಲೂ, 80,000 ರೂ. ಗಳನ್ನು ಪಕ್ಷಕ್ಕೆ ನೀಡುತ್ತಾರೆ!. 

2010 ಕ್ಕೂ ಮುನ್ನ ಸಂಸದರ ವೇತನವು 42,000 ರೂ. ಗಳಿದ್ದಾಗ, ಸಿ. ಪಿ. ಎಂ ಪಕ್ಷದ ಸಂಸದರು 35,000 ರೂ. ಗಳನ್ನು ಪಕ್ಷಕ್ಕೆ ನೀಡುತ್ತಿದ್ದರು. ಆ ಪಕ್ಷದ ಹಿರಿಯ ನಾಯಕರು ಹೇಳುವಂತೆ, ಅನ್ಯಪಕ್ಷಗಳ ಸದಸ್ಯರು ಚುನಾವಣೆಗಳ ಸಂದರ್ಭದಲ್ಲಿ ತಾವೇ ಹಣವನ್ನು ಖರ್ಚು ಮಾಡುತ್ತಾರಾದರೆ, ಸಿ. ಪಿ. ಎಂ ಪಕ್ಷವು ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ತಾನೇ ಭರಿಸುತ್ತದೆ. ಜೊತೆಗೆ ಪಕ್ಷದ ಸಂಸದರು ಮತ್ತು ಶಾಸಕರು ಜನಸಾಮಾನ್ಯರಂತೆ ಜೀವಿಸಲು ಅವರಿಗೆ ದೊರೆಯುವ ವೇತನದ ಶೇ. 30 ರಷ್ಟು ಮೊತ್ತವು ಸಾಕಾಗುವುದು. ಇಷ್ಟು ಮಾತ್ರವಲ್ಲ,ಈ ಪಕ್ಷದ ನಿವೃತ್ತ ಶಾಸಕ-ಸಂಸದರು ತಮಗೆ ದೊರೆಯುವ ನಿವೃತ್ತಿ ವೆತನವಾಗಿರುವ 25,000 ರೂ. ಗಳಲ್ಲಿ 15,000 ರೂ.ಗಳನ್ನು ಪಕ್ಷದ ನಿಧಿಗೆ ನೀಡಬೇಕಾಗಿದೆ!. 

ನಿಜಹೆಳಬೇಕಿದ್ದಲ್ಲಿ ಸಂಸದರ ವೇತನ ಮತ್ತು ಭತ್ಯೆಗಳನ್ನು 2010 ರಲ್ಲಿ ಶೇ. 300 ರಷ್ಟು ಹೆಚ್ಚಿಸುವ ನಿರ್ಣಯವನ್ನು ಕೇವಲ ಸಿ. ಪಿ. ಎಂ ಪಕ್ಷವು ತೀವ್ರವಾಗಿ ವಿರೋಧಿಸಿತ್ತು. ಅಂತೆಯೇ ವೇತನ ಹೆಚ್ಚಳ ಜಾರಿಗೆ ಬಂದ ಬಳಿಕ, ಸಂಸದರು ಪಕ್ಷಕ್ಕೆ ನೀಡುವ ದೇಣಿಗೆಯ ಪ್ರಮಾಣವನ್ನೂ ಹೆಚ್ಚಿಸಿತ್ತು!. 

ಆದರೆ ನಮ್ಮ ಸುವರ್ಣ ಕರ್ನಾಟಕದಲ್ಲಿ ನಡೆಯುವ ವಿಚಿತ್ರ ವಿದ್ಯಮಾನಗಳನ್ನು ಗಮನಿಸಿದಾಗ , ರಾಜ್ಯದ ಮತದಾರರಿಗೂ ಲಜ್ಜೆಯೆನಿಸುತ್ತದೆ. ಗತವರ್ಷದಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನದಲ್ಲಿ, ಕಾನೂನು ಸಚಿವರಾಗಿದ್ದ ಸುರೇಶ ಕುಮಾರ್ ಮಂಡಿಸಿದ್ದ "ಅನರ್ಹ ಶಾಸಕರಿಗೂ ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ನೀಡುವ ನಿರ್ಣಯ"ವನ್ನು ಸರ್ವಾನುಮತದಿಂದ ಅಂಗೀಕರಿಸಿದ್ದುದು ,ಲಜ್ಜೆಗೇಡಿತನದ ಪರಮಾವಧಿ ಎನ್ನುವುದರಲ್ಲಿ ಸಂದೇಹವಿಲ್ಲ!.  

ಡಾ. ಸಿ . ನಿತ್ಯಾನಂದ ಪೈ, ಪುತ್ತೂರು 

No comments:

Post a Comment