Thursday, August 22, 2013

Talcum powder-is dangerous



                                           ಟಾಲ್ಕಂ ಪೌಡರ್ : ಅತಿಬಳಕೆ ಅಪಾಯಕರ
 ಪ್ರತಿನಿತ್ಯ ಸ್ನಾನದ ಬಳಿಕ ಶರೀರದಾದ್ಯಂತ ತಾಲ್ಕಂ ಪೌಡರನ್ನು ಚಿಮುಕಿಸುವ ಹವ್ಯಾಸ ಅನೇಕರಲ್ಲಿದೆ. ವಿಶೇಷವೆಂದರೆ ತಾವು ದಿನನಿತ್ಯ ತಪ್ಪದೆ ಬಳಸುವ ತಾಲ್ಕಂ ಪೌಡರ್ ಗಳ ಬಗ್ಗೆ ಅನೇಕ ವಿದ್ಯಾವಂತರಿಗೂ ಸಮರ್ಪಕ ಮಾಹಿತಿ ತಿಳಿದಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಯಾರೊಬ್ಬರೂ ಇದರ ಬಳಕೆಯನ್ನು ನಿಲ್ಲಿಸಿಲ್ಲ. 
-----------------           ----------------------                      ------------------------                       -----------------------         ------------------
ಅನಾರೋಗ್ಯ ಪೀಡಿತ ಹಸುಳೆಗಳಿಗೆ ಸ್ನಾನವನ್ನೇ ಮಾಡಿಸದ ಮಾತೆಯರು, ತಮ್ಮ ಕಂದನಿಗೆ ತಪ್ಪದೆ ಬೇಬಿ ಪೌಡರ್ ನಿಂದ ಅಭಿಷೇಕವನ್ನು ಮಾಡುತ್ತಾರೆ. ಉದಾಹರಣೆಗೆ ಸಾಮಾನ್ಯ ಶೀತ ಮತ್ತು ಜ್ವರದಿಂದ ಬಳಲುತ್ತಿರುವ ಮಕ್ಕಳಿಗೆ ಸ್ನಾನ ಮಾಡಿಸಿದಲ್ಲಿ "ಥಂಡಿ" ಯಾಗುವುದು ಎನ್ನುವ ಮೂಢನಂಬಿಕೆಯು, ಬಹುತೇಕ ಭಾರತೀಯ ನಾರಿಯರಲ್ಲಿದೆ. ಆದರೆ ಇದಕ್ಕೆ ಹೊರತಾಗಿ ಪೌಡರ್ ನ ಅಭಿಷೇಕ ಮಾಡುವುದರಿಂದ, ಕಂದನ  ಆರೋಗ್ಯವು ಇನ್ನಷ್ಟು ಹದಗೆಡುತ್ತದೆ ಎನ್ನುವ ವಿಚಾರ ಅಧಿಕತಮ ತಾಯಂದಿರಿಗೆ ತಿಳಿದಿಲ್ಲ. ಹಾಗೂ ಇದೇ ಕಾರಣದಿಂದಾಗಿ ಇವರೆಲ್ಲರೂ ತಮ್ಮ ಕಂದಮ್ಮಗಳಿಗೆ ಟಾಲ್ಕಂ ಪೌಡರ್ ನ ಅಭಿಷೇಕ ಮಾಡುವುದನ್ನು ಇಂದಿಗೂ ನಿಲ್ಲಿಸಿಲ್ಲ!. 

ಟಾಲ್ಕಂ ನಿಂದ ತಯಾರಿಸುವ ಪೌಡರ್!

ಮಾರುಕಟ್ಟೆಯಲ್ಲಿ ಸಾಧಾರಣ ಬೆಲೆಗೆ ದೊರೆಯುವ ಸಾಮಾನ್ಯ ಟಾಲ್ಕ್, ಬೆವರುಸಾಲೆ- ತುರಿಕೆಗಳನ್ನು ನಿವಾರಿಸಬಲ್ಲ ಟಾಲ್ಕ್, ಗಂಡಸರು ಅಥವಾ ಹೆಂಗಸರ ಸಲುವಾಗಿಯೇ ವಿಶೇಷವಾಗಿ ತಯಾರಿಸಿರುವ ಟಾಲ್ಕ್ ಮತ್ತು ನಿಮ್ಮ ಮುದ್ದು ಕಂದನ ಕೋಮಲ ತ್ವಚೆಗಾಗಿ ರಕ್ಷಿಸಲು ತಯಾರಿಸಿದ ಬೇಬಿ ಟಾಲ್ಕ್ , ಇವೆಲ್ಲವುಗಳ ತಯಾರಿಕೆಯಲ್ಲಿ "ಟಾಲ್ಕಂ" ಎನ್ನುವ ಖನಿಜವನ್ನು ಮೂಲದ್ರವ್ಯವಾಗಿ ಬಳಸುತ್ತಾರೆ. ಈ ಟಾಲ್ಕಂ ನ ನಯವಾದ ಪುಡಿಗೆ ಸೂಕ್ತ ಪ್ರಮಾಣದ ಸುಗಂಧ ದ್ರವ್ಯ ಮತ್ತು ಇತರ ಕೆಲ ದ್ರವ್ಯಗಳು ಅಥವಾ ನಿರ್ದಿಷ್ಟ ಔಷದೀಯ ದ್ರವ್ಯಗಳನ್ನು ಬೆರೆಸಿ, ವಾಣಿಜ್ಯ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಅಲ್ಪಬೆಲೆಗೆ ಅಥವಾ ದುಬಾರಿಬೆಲೆಗೆ ಲಭಿಸುವ ಯಾವುದೇ ವಾಣಿಜ್ಯ ಉತ್ಪನ್ನಗಳಲ್ಲೂ, ಟಾಲ್ಕಂ  ಖನಿಜವನ್ನು ಬಳಸಲೇ ಬೇಕಾಗುತ್ತದೆ. ಹಾಗೂ ಇದೇ ಕಾರಣದಿಂದಾಗಿ ಇದನ್ನು ಟಾಲ್ಕಂ ಪೌಡರ್ ಎಂದು ಹೆಸರಿಸಲಾಗಿದೆ. ಆದರೆ ಟಾಲ್ಕಂ ನ ನೈಜ ಹಾಗೂ ರಾಸಾಯನಿಕ ನಾಮಧೆಯವು "ಹೈಡ್ರೇಟೆಡ್ ಮೆಗ್ನೆಸಿಯಂ ಸಿಲಿಕೇಟ್" ಎಂದಾಗಿದೆ. 

ಕೆಲವೇ ದಶಕಗಳ ಹಿಂದೆ ಭಾರತೀಯರು ಬಳಸುತ್ತಿದ್ದ ಶೃಂಗಾರ ಸಾಧನಗಳಲ್ಲಿ ಅತ್ಯಂತ ಜನಪ್ರಿಯವೆನಿಸಿದ್ದ ಟಾಲ್ಕಂ ಪೌಡರ್ ನ ಸ್ಥಾನವನ್ನು, ಇದೀಗ ವಿವಿಧ ರೀತಿಯ ಲೋಶನ್ ಗಳು ಹಾಗೂ ಕ್ರೀಮ್ ಗಳು, ಕೊಲೋನ್-ಪರ್ಫ್ಯೂಮ್ ಗಳು ಮತ್ತು ಡಿಯೋಡೊರೆಂಟ್ ಗಳು ಆಕ್ರಮಿಸಿಕೊಂಡಿವೆ. 

ಅತಿಬಳಕೆ ಅಪಾಯಕರವೇ?

ಟಾಲ್ಕಂ ಪೌಡರ್ ನ ಅತಿಬಳಕೆಯು ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು ಎನ್ನುವ ವಿಚಾರ ಅನೇಕರಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಶೀತ,ಕೆಮ್ಮು ಅಥವಾ ಅಸ್ತಮಾ ಕಾಯಿಲೆಯಿಂದ ಬಳಲುವ ಮತ್ತು ಧೂಳಿನ ಅಲರ್ಜಿ ಇರುವ ವ್ಯಕ್ತಿಗಳಿಗೆ, ಟಾಲ್ಕಂ ಪೌಡರ್ ಬಳಸದಂತೆ ವೈದ್ಯರು ಸೂಚಿಸುತ್ತಾರೆ. ಏಕೆಂದರೆ ಟಾಲ್ಕಂ ನ ಸೂಕ್ಷ್ಮವಾದ ಕಣಗಳು ಮೂಗಿನ ಮೂಲಕ ಶ್ವಾಸಕೋಶಗಳನ್ನು ಪ್ರವೇಶಿಸಿದಲ್ಲಿ, ಶೀತ ಹಾಗೂ ಕೆಮ್ಮುಗಳು ಉಲ್ಬಣಿಸುತ್ತವೆ. ಅದೇ ರೀತಿಯಲ್ಲಿ ಅಸ್ತಮಾ ಮತ್ತು ಧೂಳಿನ ಅಲರ್ಜಿ ಇರುವವರಲ್ಲಿ, ಶೀನು,ಕೆಮ್ಮು ಮತ್ತು ಉಸಿರಾಟದ ತೊಂದರೆಗಳು ಉದ್ಭವಿಸಿ ಉಲ್ಬಣಿಸುವ ಸಾಧ್ಯತೆಗಳಿವೆ. 

ಟಾಲ್ಕಂ ಪೌಡರ್ ನ ಜಾಹೀರಾತುಗಳಲ್ಲಿ ನಟಿಸುವ ರೂಪದರ್ಶಿಗಳು ತಮ್ಮ ಶರೀರದ ಮೇಲೆ ಟಾಲ್ಕಂ ಪೌಡರನ್ನು ಧಾರಾಳವಾಗಿ ಸಿಂಪದಿಸುವುದನ್ನು ಕಂಡು ಇದನ್ನು ಅನುಕರಿಸದಿರಿ. ಏಕೆಂದರೆ ಹಲವಾರು ವೈದ್ಯಕೀಯ ಅಧ್ಯಯನಗಳ ವರದಿಗಳಂತೆ, ಪ್ರತಿನಿತ್ಯ ಧಾರಾಳವಾಗಿ ಟಾಲ್ಕಂ ಪೌಡರನ್ನು ಬಳಸುವವರಿಗೆ ಶ್ವಾಸಕೋಶಗಳು, ಅಂದಾಶಯ ಮತ್ತು ಚರ್ಮದ ಕ್ಯಾನ್ಸರ್ ಬಾಧಿಸುವ ಸಾಧ್ಯತೆಗಳಿವೆ. ಇದಲ್ಲದೆ ಆಸ್ಪಿರೇಶನ್ ನ್ಯುಮೋನಿಯ,ಗ್ರಾನ್ಯುಲೋಮ ಇತ್ಯಾದಿ ಗಂಭೀರ ಕಾಯಿಲೆಗಳುತಲೆದೋರುವ ಸಾಧ್ಯತೆಗಳಿವೆ. 

ಪ್ರತಿನಿತ್ಯ ಒಳ ಉಡುಪುಗಳನ್ನು ಧರಿಸುವ ಮುನ್ನ ತಮ್ಮ ಶರೀರದ ಮೇಲೆ ಅತಿಯಾದ ಪ್ರಮಾಣದಲ್ಲಿ ಟಾಲ್ಕಂ ಪೌಡರ್ ಚಿಮುಕಿಸುವ ಶೇ. ೪೦ ರಷ್ಟು ಮಹಿಳೆಯರಿಗೆ ಅಂಡಾಶಯಗಳ ಕ್ಯಾನ್ಸರ್ ಬಾಧಿಸುವುದು ತಿಳಿದುಬಂದಿದೆ. 

ಬೇಬಿ ಪೌಡರ್ ನಲ್ಲಿ ಕ್ಯಾನ್ಸರ್ ಕಾರಕ  ದ್ರವ್ಯ!

ಇದೇ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಮಹಾರಾಷ್ಟ ಸರಕಾರದ ಎಫ್ . ಡಿ . ಎ , ಜಾನ್ಸನ್ ಎಂಡ್ ಜಾನ್ಸನ್ ಸಂಸ್ಥೆಯ ಬೇಬಿ ಪೌಡರ್ ನಲ್ಲಿ " ಇಥೈಲೀನ್ ಆಕ್ಸೈಡ್" ಎನ್ನುವ ರಾಸಾಯನಿಕದ ಇರುವಿಕೆಯನ್ನು ಪತ್ತೆ ಹಚ್ಚಿದ ಬಳಿಕ, ಈ ಉತ್ಪನ್ನವನ್ನು ನಿಷೇಧಿಸಿದ್ದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದವು. ಇಥೈಲೀನ್ ಆಕ್ಸೈಡ್ ರಾಸಾಯನಿಕವು ಕ್ಯಾನ್ಸರ್ ಕಾರಕವೆಂದು ಸಾಬೀತಾಗಿದ್ದು, ಪುಟ್ಟ ಮಕ್ಕಳ ಪಾಲಿಗೆ ಅತ್ಯಂತ ಅಪಯಕಾರಿಯಾಗಿ ಪರಿಣಮಿಸಬಲ್ಲದು. ಅಂತರ ರಾಷ್ಟ್ರೀಯ ಖ್ಯಾತಿಯ ಸಂಸ್ಥೆಯೊಂದು ಇಂತಹ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದುದು, ನಿಜಕ್ಕೂ ನಂಬಲು ಅಸಾಧ್ಯವೆನಿಸುತ್ತದೆ.  ಸಂಸ್ಥೆಯ ಹೇಳಿಕೆಯಂತೆ ಈ ರಾಸಾಯನಿಕವನ್ನು ಬೇಬಿ ಪೌಡರನ್ನು "ರೋಗಾಣುರಹಿತ" ವನ್ನಾಗಿಸಲು ಬಳಸಲಾಗಿತ್ತು. ಆದರೆ ಆದರೆ ಇದನ್ನು ಬಳಸಿದವರ ಪಾಲಿಗೆ ಮಾತ್ರ, ಇದು ರೋಗಕಾರಕ ಎನಿಸಲಿತ್ತು!. ಅದೃಷ್ಟವಶಾತ್ ಈ ರಾಸಾಯನಿಕದ ಇರುವಿಕೆ ಪತ್ತೆಯಾದುದರಿಂದ, ಸಂಭಾವ್ಯ ಗಂಭೀರ ದುರಂತವೊಂದು  ತಡೆಗಟ್ಟಲ್ಪಟ್ಟಿತ್ತು. 

೧೯೬೦ ರಲ್ಲೇ ವಾರ್ನಿಂಗ್!

ಟಾಲ್ಕಂ ಪೌಡರ್ ನ ಅತಿಬಳಕೆಯ ದುಷ್ಪರಿಣಾಮಗಳು ೧೯೬೦ ರಲ್ಲೇ ವೈದ್ಯಕೀಯ ವಿಜ್ಞಾನಿಗಳ ಗಮನಕ್ಕೆ ಬಂದಿತ್ತು. ೧೯೭೧ ರಲ್ಲಿ ಅನೇಕ ಕ್ಯಾನ್ಸರ್ ಪೀಡಿತ ಮಹಿಳೆಯರ ಅಂಡಾಶಯಗಳನ್ನು ಪರೀಕ್ಷಿಸಿದಾಗ, ಶೇ. ೭೫ ರಷ್ಟು ಗಡ್ದೆಗಳಲ್ಲಿ ಟಾಲ್ಕಂ ನ ಸೂಕ್ಷ್ಮ ಕಣಗಳು ಪತ್ತೆಯಾಗಿದ್ದವು. 
ಹಾರ್ವರ್ಡ್ ಮೆಡಿಕಲ್ ಸ್ಕೂಲ್ , ಬೋಸ್ಟನ್ ನ ಸಂಶೋಧಕರು ಪ್ರತಿನಿತ್ಯ ಅತಿಯಾಗಿ ಟಾಲ್ಕಂ ಪೌಡರ್ ಬಳಸುತ್ತಿದ್ದ ೩೦೦೦ ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿದ ಬಳಿಕ ಲಭಿಸಿದ್ದ ಫಲಿತಾಂಶಗಳು ಇದನ್ನು ಸಮರ್ಥಿಸುತ್ತವೆ. ಇದಲ್ಲದೆ ವಾರದಲ್ಲಿ ಕೇವಲ ಒಂದು ದಿನ ಟಾಲ್ಕಂ ಪೌಡರ್ ಬಳಸುವ ಮಹಿಳೆಯರಲ್ಲಿ ಅಂಡಾಶಯಗಳ ಕ್ಯಾನ್ಸರ್ ಉದ್ಭವಿಸುವ ಸಾಧ್ಯತೆಗಳು ಶೇ. ೩೬ ರಷ್ಟು ಮತ್ತು ದಿನನಿತ್ಯ ಬಳಸುವವರಲ್ಲಿ ಶೇ. ೪೧ ರಷ್ಟು ಹೆಚ್ಚುವುದೆಂದು ಇದೇ ಅಧ್ಯಯನದಿಂದ ತಿಳಿದುಬಂದಿತ್ತು. 

೧೯೯೩ ರಲ್ಲಿ ಅಮೇರಿಕಾದ ಟಾಕ್ಸಿಕಾಲಜಿ  ಪ್ರೋಗ್ರಾಮ್ ನಿಂದ ತಿಳಿದುಬಂದಂತೆ,ಟಾಲ್ಕಂ ಪೌಡರ್ ನ ಅತಿಬಳಕೆಯಿಂದ ಇಲಿಗಳಲ್ಲಿ ಕ್ಯಾನ್ಸರ್ ಗದ್ದೆಗಳು ಬೆಳೆದಿರುವುದು ಪತ್ತೆಯಾಗಿತ್ತು. ೧೧೩ ವಾರಗಳ ಕಾಲ, ಪ್ರತಿದಿನ ೬ ಗಂಟೆಗಳ ಅವಧಿಗೆ ಟಾಲ್ಕಂ ಪೌಡರನ್ನು ಶ್ವಾಸೋಚ್ಚ್ವಾಸದೊಂದಿಗೆ ಸೇವಿಸಿದ್ದ ಇಲಿಗಳಲ್ಲಿ ಈ ಸಮಸ್ಯೆಯು ತಲೆದೋರಿತ್ತು. 

ಅದೇನೇ ಇರಲಿ, ಅಂತಿಮವಾಗಿ ನಾವು ಹೇಳುವುದಾದಲ್ಲಿ ಜನಸಾಮಾನ್ಯರ ಅಚ್ಚುಮೆಚ್ಚಿನ ಸೌಂದರ್ಯ ಪ್ರಸಾದನಗಳಲ್ಲಿ ಒಂದಾಗಿರುವ ಟಾಲ್ಕಂ ಪೌಡರ್ ನ ಬಳಕೆಯನ್ನು ನಿಯಂತ್ರಿಸುವುದು ಅಥವಾ ಸಂಪೂರ್ಣವಾಗಿ ನಿಲ್ಲಿಸುವುದು, ನಿಮ್ಮ  ಹಾಗೂ ನಿಮ್ಮ ಕುಟುಂಬದ ಆರೋಗ್ಯದ ಹಿತದೃಷ್ಟಿಯಿಂದ ಉಪಯುಕ್ತವೆನಿಸುವುದು. ಜೊತೆಗೆ ಅನಿವಾರ್ಯವೆನಿಸಿದಲ್ಲಿ ನೈಸರ್ಗಿಕ ಉತ್ಪನ್ನಗಳಾಗಿರುವ ಚಂದನ-ಅರಿಶಿನ ಇತ್ಯಾದಿಗಳನ್ನು ಬಳಸುವುದು ಅತ್ಯಂತ ಸುರಕ್ಷಿತ ಹಾಗೂ ಆರೋಗ್ಯಕರ ಎನಿಸುವುದು. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

ವಿಜಯವಾಣಿ ಪತ್ರಿಕೆಯ ೧೧-೦೯-೨೦೧೨ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ 

No comments:

Post a Comment