Sunday, June 25, 2017

SAY NO TO DRUGS


                                ಜೂನ್ 26 – ವಿಶ್ವ ಮಾದಕದ್ರವ್ಯ ವಿರೋಧಿ ದಿನ
       ಮಾದಕ ದ್ರವ್ಯಗಳ ವ್ಯಸನ : ನಿರರ್ಥಕವೆನಿಸುವುದು ಜೀವನ

ಕಳೆದ ಹಲವಾರು ದಶಕಗಳಿಂದ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಮಾದಕ ದ್ರವ್ಯಗಳ ಸೇವನೆಯ ಚಟ ದಿನೇದಿನೇ ಹೆಚ್ಚುತ್ತಿದೆ. ಈ ಅಪಾಯಕಾರಿ ವ್ಯಸನಕ್ಕೆ ಯುವಜನರೊಂದಿಗೆ ಪುಟ್ಟ ಮಕ್ಕಳೂ ಬಲಿಯಾಗುತ್ತಿರುವುದು ಗಾಬರಿ ಹುಟ್ಟಿಸುವಂತಿದೆ. ಈ ವಿಶ್ವವ್ಯಾಪಿ ಸಮಸ್ಯೆಗೆ ನಮ್ಮ ದೇಶವೂ ಅಪವಾದವೆನಿಸಿಲ್ಲ. ಅಂತೆಯೇ ಈ ಸಮಸ್ಯೆಗೆ ಬಡ, ಮಧ್ಯಮ ಆದಾಯದ ಮತ್ತು ಶ್ರೀಮಂತ ರಾಷ್ಟ್ರಗಳೆನ್ನುವ ಭೇದವೂ ಇಲ್ಲವೆಂದಲ್ಲಿ ನೀವೂ ನಂಬಲಾರಿರಿ.

ಮಾದಕ ದ್ರವ್ಯಗಳ ಸೇವನೆಯ ಪರಿಣಾಮವಾಗಿ ಉದ್ಭವಿಸುತ್ತಿರುವ ವೈವಿಧ್ಯಮಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಯುನೈಟೆಡ್ ನೇಶನ್ಸ್ ಸಂಸ್ಥೆಯು, 1987 ರ ಡಿಸೆಂಬರ್ 7 ರಂದು ಆಯೋಜಿಸಿದ್ದ ಅಧಿವೇಶನದಲ್ಲಿ ಪ್ರತಿವರ್ಷ ಜೂನ್ 26 ರಂದು “ ವಿಶ್ವ ಮಾದಕ ದ್ರವ್ಯ ವಿರೋಧಿ ದಿನ “ ವನ್ನಾಗಿ ಆಚರಿಸುವ ನಿರ್ಣಯವನ್ನು ಅಂಗೀಕರಿಸಿತ್ತು. ತನ್ಮೂಲಕ ಈ ಸಮಸ್ಯೆಯ ವಿರುದ್ಧ ಹೋರಾಟವನ್ನು ನಡೆಸುವ ನಿಟ್ಟಿನಲ್ಲಿ, ವಿವಿಧ ದೇಶಗಳ ಸಹಕಾರದೊಂದಿಗೆ “ ಮಾದಕ ದ್ರವ್ಯ ಮುಕ್ತ ಜಗತ್ತು “ ಎನ್ನುವ ಧ್ಯೇಯವನ್ನು ಅನುಷ್ಠಾನಗೊಳಿಸಲು ನಿರ್ಧರಿಸಿತ್ತು. 1988 ರಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಾದಕ ದ್ರವ್ಯ ವಿರೋಧಿ ದಿನವನ್ನು ಆಚರಿಸಲಾಗುತ್ತಿದ್ದು, ಈ ವರ್ಷ “ ಮಕ್ಕಳ ಮತ್ತು ಯುವಜನರ ಮಾತುಗಳನ್ನು ಆಲಿಸುವುದು, ಅವರ ಆರೋಗ್ಯಪೂರ್ಣ ಮತ್ತು ಸುರಕ್ಷಿತ ಬೆಳವಣಿಗೆಯ ಮೊದಲ ಹೆಜ್ಜೆ “ ಎನ್ನುವ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ವಿಶೇಷವಾಗಿ ಯುವಜನರ ಜೀವನವನ್ನೇ ನಾಶಪಡಿಸುತ್ತಿರುವ ಮಾದಕದ್ರವ್ಯಗಳ ವಿರುದ್ಧ ನಡೆಯುತ್ತಿರುವ ಈ ಹೋರಾಟ ಯಶಸ್ವಿಯಾಗಬೇಕಿದ್ದಲ್ಲಿ, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಸರ್ಕಾರಗಳು ಮತ್ತು ಪ್ರತಿಯೊಬ್ಬ ಪ್ರಜೆಯ ಮನಸ್ಪೂರ್ವಕ ಸಹಕಾರ ಅತ್ಯವಶ್ಯಕವೆನಿಸುವುದು.

ಸಂಘಟಿತ ಪ್ರಯತ್ನ

ಮಾದಕದ್ರವ್ಯಗಳ ವಿರುದ್ಧ ಹೋರಾಟದಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತ ಪ್ರಯತ್ನಗಳು ನಡೆಯುತ್ತಿದ್ದರೂ, ಈ ಭಯಾನಕ ಮತ್ತು ಅಪಾಯಕಾರಿ ಸಮಸ್ಯೆಯು ಅನಿಯಂತ್ರಿತವಾಗಿ ಮುಂದುವರೆಯುತ್ತಿದೆ. ತತ್ಪರಿಣಾಮವಾಗಿ ಸಾರ್ವಜನಿಕ ಆರೋಗ್ಯ, ಸುರಕ್ಷತೆ ಮತ್ತು ನೆಮ್ಮದಿಗಳೊಂದಿಗೆ, ವಿವಿಧ ದೇಶಗಳ ಸುರಕ್ಷತೆ ಮತ್ತು ಸ್ವಾಯತ್ತತೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಅಧಿಕತಮ ದೇಶಗಳ ಯುವಜನತೆಯನ್ನು ಶಾಪದೋಪಾದಿಯಲ್ಲಿ ಪೀಡಿಸುತ್ತಿರುವ ಈ ಗಂಭೀರ ಸಮಸ್ಯೆಯ ವಿರುದ್ಧ ಹೋರಾಡಲು, ಜಗತ್ತಿನ ಪ್ರತಿಯೊಂದು ದೇಶಗಳ ಸರ್ಕಾರಗಳು ಆರ್ಥಿಕ ಮತ್ತು ಸಾಮಾಜಿಕ ಬೆಂಬಲಗಳನ್ನು ನೀಡುವ ಮೂಲಕ ಸಹಕರಿಸುವಂತೆ ಯುನೈಟೆಡ್ ನೇಶನ್ಸ್ ಸಂಸ್ಥೆ ಮನವಿ ಮಾಡುತ್ತಿದೆ.

ಕಳ್ಳ ಸಾಗಾಣಿಕೆ

ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸರಬರಾಜಾಗುವ ಮಾದಕದ್ರವ್ಯಗಳ ಕಳ್ಳ ಸಾಗಾಣಿಕೆಯು ನಮ್ಮ ನೆರೆಯ ಅಫ್ಘಾನಿಸ್ಥಾನ, ಪಾಕಿಸ್ತಾನ, ನೇಪಾಳ, ಬಾಂಗ್ಲಾ ದೇಶ, ಭೂತಾನ ಮತ್ತು ಶ್ರೀಲಂಕಾ ದೇಶಗಳ ಮೂಲಕ ನಡೆಯುತ್ತದೆ. ಇಂತಹ ದ್ರವ್ಯಗಳಲ್ಲಿ ಆಫೀಮು, ಗಾಂಜಾ, ಚರಸ್, ಕೊಕೇನ್ ಗಳಂತಹ ದ್ರವ್ಯಗಳಲ್ಲದೇ, ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ಕೆಲವಿಧದ ಮತ್ತೇರಿಸಬಲ್ಲ ಔಷದಗಳನ್ನೂ ಕಳ್ಳಸಾಗಾಣಿಕೆ ಮಾಡಲಾಗುತ್ತದೆ. 

ಹೆಚ್ಚುತ್ತಿರುವ ವ್ಯಸನಿಗಳು

ಲಭ್ಯ ಮಾಹಿತಿಯಂತೆ ಜಾಗತಿಕ ಮಟ್ಟದಲ್ಲಿ ಸುಮಾರು 200 ದಶಲಕ್ಷಕ್ಕೂ ಅಧಿಕ ಜನರು ವಿವಿಧ ರೀತಿಯ ಮಾದಕ ದ್ರವ್ಯಗಳ ದಾಸಾನುದಾಸರಾಗಿದ್ದಾರೆ. ಇವರಲ್ಲಿ 162 ದಶಲಕ್ಷ ಜನರು ಕೆನಬಿಸ್, ಮರಿಹುವಾನ, ಹಶೀಶ್ ಹಾಗೂ ಟಿ. ಸಿ. ಎಚ್, 35 ದಶಲಕ್ಷ ಜನರು ಎ. ಟಿ. ಎಸ್, ಎಕ್ಸ್ಟಸಿ ಹಾಗೂ ಮೆಥ ಆಮ್ಫಿಟಮೈನ್, 16 ದಶಲಕ್ಷ ವ್ಯಸನಿಗಳು ಓಪಿಯಂ, ಮೊರ್ಫಿನ್ ಮತ್ತು ಅಫೀಮಿನ ಕೃತಕ ಉತ್ಪನ್ನಗಳು ಮತ್ತು 13 ದಶಲಕ್ಷ ವ್ಯಸನಿಗಳು ಕೊಕೇನ್ ನಂತಹ ಮಾದಕದ್ರವ್ಯಗಳನ್ನು ಸೇವಿಸುತ್ತಿದ್ದಾರೆ. ಈ ಮಾದಕ ವ್ಯಸನಿಗಳು ತಮ್ಮ ದೈನಂದಿನ ಸೇವನೆಯ ಮಾದಕದ್ರವ್ಯಗಳನ್ನು ಖರೀದಿಸಲು ಹಣದ ಅಭಾವವಿದ್ದಲ್ಲಿ, ಅಮಾಯಕರ ಮೇಲೆ ಹಲ್ಲೆನಡೆಸುವ, ಸುಲಿಗೆ ಮಾಡುವ ಮತ್ತು ಅನೇಕ ಸಂದರ್ಭಗಳಲ್ಲಿ ಕೊಲೆಯಂತಹ ಪಾತಕಗಳನ್ನು ನಡೆಸಿರುವ ಉದಾಹರಣೆಗಳು ಸಾಕಷ್ಟಿವೆ.

ಬಹುತೇಕ ವ್ಯಸನಿಗಳು ತಮ್ಮ ಸ್ನೇಹಿತರ ಒತ್ತಾಯಕ್ಕೆ ಮಣಿದು ಅಥವಾ ಅನ್ಯ ಕಾರಣಗಳಿಂದ ಮಾದಕದ್ರವ್ಯಗಳ ಸೇವನೆಯನ್ನು ಆರಂಭಿಸುತ್ತಾರೆ. ಕಾಲಕ್ರಮೇಣ ಇವುಗಳ ಸೇವನೆಯ ವ್ಯಸನಕ್ಕೆ ಈಡಾಗಿ, ತಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಗಳೊಂದಿಗೆ, ಸಾಕಷ್ಟು ಹಣದೊಂದಿಗೆ, ತಮ್ಮ ಮರ್ಯಾದೆಯನ್ನೂ ಕಳೆದುಕೊಳ್ಳುತ್ತಾರೆ. ಜೊತೆಗೆ ತಮ್ಮ ಕುಟುಂಬದ ಅನ್ಯ ಸದಸ್ಯರ ನೆಮ್ಮದಿಯನ್ನು ಕೆಡಿಸುವುದರೊಂದಿಗೆ, ಅವರ ಸಾಮಾಜಿಕ ಜೀವನಕ್ಕೂ ಅಡ್ಡಿ ಆತಂಕಗಳನ್ನು ತಂದೊಡ್ಡುತ್ತಾರೆ. ಅನೇಕ ವ್ಯಸನಿಗಳು ಗಂಭೀರ ಸ್ವರೂಪದ ಶಾರೀರಿಕ ಹಾಗೂ ಮಾನಸಿಕ ಕಾಯಿಲೆಗಳಿಗೆ ಈಡಾಗುತ್ತಾರೆ. ದೀರ್ಘಕಾಲೀನ ವ್ಯಸನಿಗಳು ಕಾರಣಾಂತರಗಳಿಂದ ಆತ್ಮಹತ್ಯೆಗೆ ಶರಣಾಗುವುದು ಕೂಡಾ ಅಪರೂಪವೇನಲ್ಲ.

ನಮ್ಮ ದೇಶದಲ್ಲಿ ಯುವಜನರು, ಹದಿಹರೆಯದವರಲ್ಲದೇ, ಶಾಲಾ ವಿದ್ಯಾರ್ಥಿಗಳೂ ಮಾದಕದ್ರವ್ಯ ಸೇವನೆಯ ಚಟವನ್ನು ಹೊಂದಿದ್ದಾರೆ. ಈ ವಿಚಾರದಲ್ಲಿ ದೇಶದ ಅನ್ಯ ರಾಜ್ಯಗಳಿಗೆ ಹೋಲಿಸಿದಾಗ, ಕರ್ನಾಟಕವೂ ಉನ್ನತ ಸ್ಥಾನದಲ್ಲಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಸುಮಾರು ಎರಡು ವರ್ಷಗಳ ಹಿಂದೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿಗಳು ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬನನ್ನು ಬಂಧಿಸಿದ್ದು, ಈತನು “ ರೇವ್ ಪಾರ್ಟಿ “ ಗಳಿಗೆ ಮಾದಕದ್ರವ್ಯಗಳನ್ನು ಸರಬರಾಜು ಮಾಡುವುದರೊಂದಿಗೆ, ಸ್ವಯಂ ವ್ಯಸನಿಯೂ ಆಗಿದ್ದ ವಿಚಾರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಈತನು ಸರಬರಾಜು ಮಾಡುತ್ತಿದ್ದ ದ್ರವ್ಯಗಳಲ್ಲಿ ಎಲ್ ಎಸ್ ಡಿ ಮತ್ತು ಎಂ ಡಿ ಎಂ ಎ ಎನ್ನುವ ಚಿತ್ತ ವಿಭ್ರಮೆ ಅಥವಾ ಭ್ರಾಂತಿಯನ್ನು ಮೂಡಿಸಬಲ್ಲ ಅಪಾಯಕಾರಿ ದ್ರವ್ಯಗಳು ಸೇರಿದ್ದವು. ಕೇಂದ್ರ ನರಮಂಡಲದ ಮೇಲೆ ತೀವ್ರಸ್ವರೂಪದ ದುಷ್ಪರಿಣಾಮಗಳನ್ನು ಬೀರಬಲ್ಲ ಈ ದ್ರವ್ಯಗಳು, ಸಿಜೋಫ್ರೆನಿಯಾದಂತಹ ಗಂಭೀರ ಮಾನಸಿಕ ವ್ಯಾಧಿಯಲ್ಲದೇ, ಹೃದಯಸ್ಥಂಭನ ಮತ್ತು ಮರಣಕ್ಕೂ ಕಾರಣವೆನಿಸಬಲ್ಲದು. ಇವೆಲ್ಲಾ ಮಾಹಿತಿಗಳನ್ನು ಅರಿತ ಬಳಿಕ ಮಾದಕದ್ರವ್ಯಗಳ ಸೇವನೆ ಅತ್ಯಂತ ಅಪಾಯಕಾರಿ ಎನ್ನುವುದು ಇದೀಗ ನಿಮಗೂ ಅರಿವಾಗಿರಲೇಬೇಕು. ಇದೇ ಕಾರಣದಿಂದಾಗಿ ಮಾದಕದ್ರವ್ಯಗಳ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ನೀವೂ ಕೈಜೋಡಿಸಲೇಬೇಕು.

ಕೊನೆಯ ಮಾತು

ಅಂತರ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಮಾದಕದ್ರವ್ಯ ಸೇವನೆಯ ಚಟವನ್ನು ತಡೆಗಟ್ಟಲು ಯುನೈಟೆಡ್ ನೇಶನ್ಸ್ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾಗುವ ಮೂಲಕ ನಮ್ಮ ದೇಶದಲ್ಲೂ ವೃದ್ಧಿಸುತ್ತಿರುವ ಈ ಸಮಸ್ಯೆಯನ್ನು ತೊಡೆದುಹಾಕಲು ಪ್ರಯತ್ನಿಸಬೇಕಾಗಿದೆ. ಅಂತೆಯೇ ದೇಶದ ಯುವಜನತೆ ಇಂತಹ ವ್ಯಸನಗಳಿಗೆ ಬಲಿಯಾಗದಂತೆ ತಡೆಗಟ್ಟುವ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರ ಮೇಲಿದೆ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು




Wednesday, June 14, 2017

WORLD BLOOD DONORS DAY - JUN 14


                                   ಜೂನ್ 14 : ವಿಶ್ವ ರಕ್ತದಾನಿಗಳ ದಿನ
                            ಜೀವದಾನ ಎನಿಸಬಲ್ಲ ರಕ್ತದಾನ

ಬಹುತೇಕ ಜನರು ಧೃಢವಾಗಿ ನಂಬಿರುವಂತೆ ಕಾರಣಾಂತರಗಳಿಂದ ಪ್ರಾಣಾಪಾಯದ .ಸ್ಥಿತಿಯಲ್ಲಿರುವ ವ್ಯಕ್ತಿಯೊಬ್ಬರ ಜೀವವನ್ನು ಕೇವಲ ವೈದ್ಯರು ಮಾತ್ರ ಉಳಿಸಬಲ್ಲರು ಎನ್ನುವುದು ನಿಜವಲ್ಲ. ಇಂತಹ ವ್ಯಕ್ತಿಗಳ ಜೀವವನ್ನು ಉಳಿಸಲು ನಿಮ್ಮಿಂದಲೂ ಸಾಧ್ಯ ಎನ್ನುವ ವಿಚಾರವು ಪ್ರಾಯಶಃ ನಿಮಗೂ ತಿಳಿದಿರಲಾರದು. ನೀವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತವು ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ವ್ಯಕ್ತಿಗಳ ಪ್ರಾಣವನ್ನು ಉಳಿಸಬಲ್ಲದು ಎನ್ನುವುದನ್ನು ಅರಿತಿರಿ. ಇದೇ ಉದ್ದೇಶಕ್ಕಾಗಿ ರಕ್ತದಾನ ಮಾಡಿ, ಈಗಲೇ ಮಾಡಿ ಮತ್ತು ಪದೇಪದೇ ಮಾಡುತ್ತಿರಿ.
-----------------------------------------------------------------------------------------------

ಆರೋಗ್ಯವಂತ ವ್ಯಕ್ತಿಯ ಶರೀರದಲ್ಲಿ ಸುಮಾರು ಐದರಿಂದ ಆರು ಲೀಟರ್ ಗಳಷ್ಟು ಪ್ರಮಾಣದ ರಕ್ತ ಇರುತ್ತದೆ. ಕೆಲವೊಂದು ಪೂರ್ವಯೋಜಿತ ವೈದ್ಯಕೀಯ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗೂ ಪ್ರಸವದ ಸಂದರ್ಭದಲ್ಲಿ ಮತ್ತು ಕಾರಣಾಂತರಗಳಿಂದ  ರಕ್ತ ಅಥವಾ ರಕ್ತದಲ್ಲಿರುವ ಘಟಕಗಳ ಪ್ರಮಾಣವು ಕಡಿಮೆಯಾದಾಗ, ಮನುಷ್ಯನ ಆರೋಗ್ಯ ಹದಗೆಡುವ ಅಥವಾ ಪ್ರಾಣಕ್ಕೆ ಸಂಚಕಾರ ಸಂಭವಿಸುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ತ್ವರಿತವಾಗಿ ಮತ್ತು ಸಂದರ್ಭೋಚಿತವಾಗಿ ಪೂರ್ಣ ರಕ್ತವನ್ನು ಅಥವಾ ರಕ್ತದ ಘಟಕಗಳನ್ನು ಮರುಪೂರಣ ಮಾಡುವ ಮೂಲಕ ರೋಗಿಯನ್ನು ಪ್ರಾಣಾಪಾಯದಿಂದ ಪಾರುಮಾಡಬಹುದಾಗಿದೆ. ಆದರೆ ಇಂತಹ ಸಂದರ್ಭಗಳಲ್ಲಿ ಅವಶ್ಯಕ ಪ್ರಮಾಣದ ಹಾಗೂ ಸುರಕ್ಷಿತ ರಕ್ತ ದೊರೆಯದೇ ಇದ್ದಲ್ಲಿ, ರೋಗಿಯು ಪ್ರಾಣಾಪಾಯಕ್ಕೆ ಈಡಾಗುವ ಹಾಗೂ ಮೃತಪಡುವ ಸಾಧ್ಯತೆಗಳು ಹೆಚ್ಚುತ್ತವೆ.

 ಪ್ರಸ್ತುತ ಜಾಗತಿಕ ಮಟ್ಟದಲ್ಲಿ ರಕ್ತದ ಬೇಡಿಕೆಯ ಪ್ರಮಾಣವು ಪೂರೈಕೆಯ ಪ್ರಮಾಣಕ್ಕಿಂತ ಸಾಕಷ್ಟು ಹೆಚ್ಚಿದೆ. ಜಾಗತಿಕ ಮಟ್ಟದಲ್ಲಿ ವಾರ್ಷಿಕ 108 ಮಿಲಿಯನ್ ಯೂನಿಟ್ ರಕ್ತ ಸಂಗ್ರಹವಾಗುತ್ತಿದೆ. ಪ್ರತಿಯೊಂದು ದೇಶದ ಶೇ 1 ರಷ್ಟು ಪ್ರಜೆಗಳು ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದಲ್ಲಿ, ಆಯಾ ದೇಶದ ರಕ್ತದ ಬೇಡಿಕೆಯನ್ನು ಸುಲಭದಲ್ಲೇ ಪೂರೈಸಬಹುದಾಗಿದೆ. ಜಗತ್ತಿನ 62 ರಾಷ್ಟ್ರಗಳು ತಮ್ಮ ಬೇಡಿಕೆಯ ಶೇ. 100 ರಷ್ಟು ರಕ್ತವನ್ನು ಸ್ವಯಂಪ್ರೇರಿತವಾಗಿ ಮತ್ತು ಫಲಾಪೇಕ್ಷೆಯಿಲ್ಲದೇ ನೀಡುವ ದಾನಿಗಳಿಂದ ಸಂಗ್ರಹಿಸುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನ ಪ್ರತಿಯೊಂದು ರಾಷ್ಟ್ರಗಳೂ 2020 ಕ್ಕೆ ಮುನ್ನ ಸ್ವಯಂಪ್ರೇರಿತ ದಾನಿಗಳಿಂದಲೇ ಸಂಗ್ರಹಿಸುವ ಉದ್ದೇಶವನ್ನು ಹೊಂದಿದೆ. ನೀವು 18 ರಿಂದ 60 ವಯಸ್ಸಿನವರಾಗಿದ್ದು ಆರೋಗ್ಯವಂತರಾಗಿದ್ದಲ್ಲಿ, ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ನಮ್ಮ ದೇಶದಲ್ಲಿ ಕಂಡುಬರುತ್ತಿರುವ ರಕ್ತದ ಕೊರತೆಯನ್ನು ನೀಗಿಸಬಹುದಾಗಿದೆ. ತತ್ಪರಿಣಾಮವಾಗಿ ಅಸಂಖ್ಯ ರೋಗಿಗಳ ಪ್ರಾಣ ಉಳಿಸುವುದರೊಂದಿಗೆ, ಒಂದಿಷ್ಟು ಪುಣ್ಯವನ್ನೂ ಗಳಿಸಬಹುದಾಗಿದೆ!.  

ವಿಶ್ವ ರಕ್ತದಾನಿಗಳ ದಿನ

ವಿಶ್ವ ರಕ್ತದಾನಿಗಳ ದಿನವನ್ನು ಜೂನ್   14, 2004 ರಂದು ಮೊತ್ತಮೊದಲಿಗೆ ಆಚರಿಸಲಾಗಿತ್ತು. ತದನಂತರ ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳಲ್ಲಿ ಇದನ್ನು ವರ್ಷಂಪ್ರತಿ ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ, ಅಂತರ ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ, ರೆಡ್ ಕ್ರೆಸೆಂಟ್ ಸೊಸೈಟೀಸ್, ರಕ್ತದಾನಿಗಳ ಅಂತರ ರಾಷ್ಟ್ರೀಯ ಒಕ್ಕೂಟ ಮತ್ತು ಅಂತರ ರಾಷ್ಟ್ರೀಯ ರಕ್ತಪೂರಣ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ವಿಶ್ವಾದ್ಯಂತ ನಡೆಸಲಾಗುತ್ತದೆ.  ಈ ಸಂದರ್ಭದಲ್ಲಿ ರಕ್ತದಾನದ ಮಹತ್ವ ಹಾಗೂ ಅವಶ್ಯಕತೆ, ಸುರಕ್ಷಿತ ರಕ್ತ ಹಾಗೂ ರಕ್ತದ ಉತ್ಪನ್ನಗಳು ಮತ್ತು ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂಪ್ರೇರಿತ ರಕ್ತದಾನ ಮಾಡುವ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳೊಂದಿಗೆ ವಿಶೇಷ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಅಂತೆಯೇ ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಅಸಂಖ್ಯ ಜನರ ಪ್ರಾಣಗಳನ್ನು ಉಳಿಸಿರುವ ರಕ್ತದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಲಾಗುತ್ತದೆ.

ಕಾರ್ಲ್ ಲ್ಯಾಂಡ್ ಸ್ಟೈನರ್ ನಾಮಾಂಕಿತ ವೈದ್ಯ ಹಾಗೂ ಬಯಾಲಜಿಸ್ಟ್ ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಆಧುನಿಕ ರಕ್ತಪೂರಣ ವಿಧಾನದ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ಈ ವೈದ್ಯರು, 1901 ರಲ್ಲಿ ಮನುಷ್ಯನ ರಕ್ತದ ಎ, ಬಿ ಮತ್ತು ಓ ಗುಂಪುಗಳನ್ನು ಪತ್ತೆಹಚ್ಚಿದ ಮತ್ತು ಆಧುನಿಕ ಪದ್ದತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. 1937 ರಲ್ಲಿ ಅಲೆಕ್ಸಾಂಡರ್ ವೈನರ್ ಎನ್ನುವ ಸಹ ಸಂಶೋಧಕರೊಂದಿಗೆ “ ರೀಸಸ್ ಫ್ಯಾಕ್ಟರ್ “ ಎನ್ನುವ ಅಂಶವನ್ನು ಗುರುತಿಸುವ ಮೂಲಕ, ರಕ್ತವನ್ನು ಪಡೆಯುವ ರೋಗಿಗಳ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತವನ್ನು ಪೂರಣ ಮಾಡಲು ಇವರು ಕಾರಣಕರ್ತರೆನಿಸಿದ್ದರು.

ಈ ವೈದ್ಯರ ಅಸಾಧಾರಣ ಸಾಧನೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಲ್ಲಿಸಿದ್ದ ಕೊಡುಗೆಯನ್ನು ಪರಿಗಣಿಸಿ, ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ನಿಮಗಿದು ತಿಳಿದಿರಲಿ

ಪೂರ್ವಯೋಜಿತ ವೈದ್ಯಕೀಯ ಚಿಕಿತ್ಸೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ರಕ್ತವು ಪ್ರಮುಖ ಸಾಧನ ಸಂಪತ್ತು ಎನಿಸುತ್ತದೆ. ಅಂತೆಯೇ ರಕ್ತವು ಗಂಬೀರ ಸ್ಥಿತಿಯಲ್ಲಿರುವ ವ್ಯಕ್ತಿಗಳ ಜೀವಿತಾವಧಿಯನ್ನು ವೃದ್ಧಿಸುವುದರೊಂದಿಗೆ, ಇವರ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದಲ್ಲದೇ ಶಸ್ತ್ರಚಿಕಿತ್ಸೆ ಹಾಗೂ ಸಂಕೀರ್ಣ ವೈದ್ಯಕೀಯ ಚಿಕಿತ್ಸೆಗಳಲ್ಲಿ ಅತ್ಯಂತ ಉಪಯುಕ್ತವೆನಿಸುತ್ತದೆ. ಇದಲ್ಲದೇ ಪ್ರಾಕೃತಿಕ ವಿಕೋಪ, ರಸ್ತೆ ಮತ್ತಿತರ ಅಪಘಾತಗಳು, ಭಯೋತ್ಪಾದಕ ಕೃತ್ಯಗಳು ಮತ್ತು ಯುದ್ಧ ಇತ್ಯಾದಿ ಸಂದರ್ಭಗಳಲ್ಲಿ ರಕ್ತವು ಜೀವರಕ್ಷಕ ಎನಿಸುತ್ತದೆ. ಆದರೆ ಇಂತಹ ಪರಿಸ್ಥಿತಿಗಳನ್ನು ವೈದ್ಯರು ಸಮರ್ಥವಾಗಿ ನಿಭಾಯಿಸಲು ಸುರಕ್ಷಿತ ಹಾಗೂ ಅವಶ್ಯಕ ಪ್ರಮಾಣದ ರಕ್ತದ ಪೂರೈಕೆ ಅನಿವಾರ್ಯವೆನಿಸುತ್ತದೆ. ಇದಕ್ಕಾಗಿ ಸರ್ಕಾರಿ ಮತ್ತು ಸ್ವಯಂಸೇವಾ ಸಂಘಟನೆಗಳು ನಡೆಸುವ ರಕ್ತನಿಧಿ ( ಬ್ಲಡ್ ಬ್ಯಾಂಕ್ ) ಗಳಲ್ಲಿ ಅವಶ್ಯಕ ಸೌಲಭ್ಯಗಳೊಂದಿಗೆ ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂಪ್ರೇರಿತ ರಕ್ತದಾನ ಮಾಡುವ ದಾನಿಗಳ ಸಹಕಾರದ ಅವಶ್ಯಕತೆಯಿದೆ. ಆರೋಗ್ಯವಂತ ವ್ಯಕ್ತಿಯೊಬ್ಬನು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಅನೇಕ ಜನರ ಪ್ರಾಣಗಳನ್ನು ಉಳಿಸುವುದರೊಂದಿಗೆ, ಇಂತಹ ದಾನಿಗಳು ತಮ್ಮ ವೈಯುಕ್ತಿಕ ಆರೋಗ್ಯದ ಮಟ್ಟವನ್ನೂ ಉನ್ನತಸ್ತರದಲ್ಲಿ ಕಾಪಾಡಿಕೊಳ್ಳಬಹುದಾಗಿದೆ.

ಬೇಡಿಕೆ – ಪೂರೈಕೆ

ಭಾರತದ ಜನಸಂಖ್ಯೆಯು 125 ಕೋಟಿಯನ್ನು ಮೀರಿದ್ದು, ದೇಶದಲ್ಲಿ ರಕ್ತದ ಬೇಡಿಕೆಯ ಪ್ರಮಾಣವು ವಾರ್ಷಿಕ ಸುಮಾರು 5 ಕೋಟಿ ಯೂನಿಟ್ ಆಗಿದೆ. ಆದರೆ ರಕ್ತದ ಪೂರೈಕೆಯ ಪ್ರಮಾಣವು ಕೇವಲ ೨. ೫ ಕೋಟಿ ಯೂನಿಟ್ ಎಂದಲ್ಲಿ ನೀವೂ ನಂಬಲಾರಿರಿ. ಇದಕ್ಕೂ ಮಿಗಿಲಾಗಿ ಸೂಕ್ತ ಸಮಯದಲ್ಲಿ ಸುರಕ್ಷಿತ ಮತ್ತು ಅವಶ್ಯಕ ಪ್ರಮಾಣದ ರಕ್ತ ಲಭ್ಯವಾಗದ ಕಾರಣದಿಂದಾಗಿ ಅನೇಕ ರೋಗಿಗಳು ಮೃತಪಡುತ್ತಾರೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸಬೇಕಿದ್ದಲ್ಲಿ ನಮ್ಮ ದೇಶದ ಯುವಜನತೆ ನಿಯಮಿತವಾಗಿ ಹಾಗೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕಿದೆ. ಅರ್ಥಾತ್, ಈ ವರ್ಷದ ವಿಶ್ವ ರಕ್ತದಾನಿಗಳ ದಿನದ ಘೋಷ ವಾಕ್ಯವಾದ “ ರಕ್ತದಾನ ಮಾಡಿ, ಈಗಲೇ ಮಾಡಿ, ಪದೇಪದೇ ಮಾಡಿ “ ಎನ್ನುವುದನ್ನು ಅಕ್ಷರಶಃ ಪರಿಪಾಲಿಸಬೇಕಿದೆ.

ಡಾ. ಸಿ. ನಿತ್ಯಾನಂದ ಪೈ,
ಬಳಕೆದಾರರ ಹಿತರಕ್ಷಣಾ ವೇದಿಕೆ, ಪುತ್ತೂರು