Tuesday, December 26, 2017

CONSTRUCTION WASTE ................


         ಕಟ್ಟಡಗಳ ಭಗ್ನಾವಶೇಷ : ಮರುಬಳಕೆಗೆ ಅವಕಾಶ


ಬೆಂಗಳೂರು ಮಹಾನಗರದಲ್ಲಿ ಪ್ರತಿನಿತ್ಯ ೩೬೦೦ ಟನ್ ಗಳಿಗಿಂತ ಅಧಿಕ ಪ್ರಮಾಣದ “ ಕಟ್ಟಡಗಳ ಭಗ್ನಾವಶೇಷ “ ಉತ್ಪನ್ನವಾಗುತ್ತಿದ್ದು, ಇವುಗಳನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುತ್ತಿರುವುದು ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುತ್ತಿದೆ. ಈ ಸಮಸ್ಯೆಗೆ ದೇಶದ ಅನ್ಯ ಪಟ್ಟಣ – ನಗರಗಳೂ ಅಪವಾದವೆನಿಸಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಬಿ ಬಿ ಎಂ ಪಿ ಅವಶ್ಯಕ ಕಾನೂನುಗಳನ್ನು ರೂಪಿಸಲು ಸಜ್ಜಾಗಿದೆ. ಕಂಡಕಂಡಲ್ಲಿ ಇಂತಹ ತ್ಯಾಜ್ಯಗಳನ್ನು ಸುರಿಯುವವರಿಗೆ ೧ ರಿಂದ ೫ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲು ನೂತನ ಕಾನೂನಿನಲ್ಲಿ ಅವಕಾಶವನ್ನು ಕಲ್ಪಿಸಲಾಗುತ್ತದೆ. ಜೊತೆಗೆ ಕದ್ದುಮುಚ್ಚಿ ತ್ಯಾಜ್ಯಗಳನ್ನು ಸುರಿಯುವವರನ್ನು ಗುರುತಿಸಲು ಸಾಕಷ್ಟು ಸಿ ಸಿ ಕ್ಯಾಮರಾಗಳನ್ನು ಅಳವಡಿಸಲಿದೆ. ತನ್ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಬಿ ಬಿ ಎಂ ಪಿ ನಿರ್ಧರಿಸಿದೆ. ಆದರೆ ಇದೇ ಸಂದರ್ಭದಲ್ಲಿ ಈ ತ್ಯಾಜ್ಯಗಳನ್ನು ಮರುಬಳಕೆ ಮಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸುವ ಮತ್ತು ಬಿ ಬಿ ಎಂ ಸಿ ಯ ಬೊಕ್ಕಸಕ್ಕೆ ಒಂದಿಷ್ಟು ಹಣವನ್ನು ಉಳಿಸಬಲ್ಲ ವಿಧಾನಗಳನ್ನು ಅಳವಡಿಸಿಕೊಳ್ಳುವ ವಿಚಾರವನ್ನು ಮಾತ್ರ  ಮರೆತುಬಿಟ್ಟಿದೆ!.

ಸಮಸ್ಯೆಯ ಮೂಲ

ನಿರಂತರ ಹಾಗೂ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ, ನಾವು ನಿರ್ಮಿಸುತ್ತಿರುವ ವಸತಿ – ವಾಣಿಜ್ಯ ಕಟ್ಟಡಗಳು, ರಸ್ತೆಗಳು, ಫ್ಲೈ ಓವರ್, ಸಬ್ ವೇ ಇತ್ಯಾದಿಗಳ ನಿರ್ಮಾಣಗಳು ಶರವೇಗದಲ್ಲಿ ಸಾಗುತ್ತಿವೆ. ಜನಸಂಖ್ಯೆ ಇನ್ನಷ್ಟು ಹೆಚ್ಚಿದಂತೆ ಇವುಗಳ ಬೇಡಿಕೆಯೂ ಇನ್ನಷ್ಟು ಹೆಚ್ಚಲಿದೆ. ಇದರೊಂದಿಗೆ ಹಳೆಯ ಕಟ್ಟಡಗಳ ದುರಸ್ತಿ, ನವೀಕರಣ ಮತ್ತು ಹಳೆಯ ಕಟ್ಟಡಗಳನ್ನು ಭಗ್ನಗೊಳಿಸಿ ಹೊಸ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭಗಳಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳ ಪ್ರಮಾಣವೂ ಅತಿಯಾಗಿದೆ. ಬೆಂಗಳೂರು ನಗರದಲ್ಲಿ ದಿನನಿತ್ಯ ಉತ್ಪನ್ನವಾಗುವ ಇಂತಹ ತ್ಯಾಜ್ಯಗಳ ಪ್ರಮಾಣವು ೩೬೦೦ ಟನ್ ಗಳಾಗಿದ್ದು, ದೇಶದಲ್ಲಿ ಉತ್ಪನ್ನವಾಗುತ್ತಿರುವ ಇಂತಹ ತ್ಯಾಜ್ಯಗಳ ಪ್ರಮಾಣವು ೧೨ ರಿಂದ ೧೫ ಮಿಲಿಯನ್ ಟನ್ ಗಳಾಗಿದೆ. ವಿಶೇಷವೆಂದರೆ ಈ ತ್ಯಾಜ್ಯಗಳ ಸಮಸ್ಯೆಯು “ ರಕ್ತಬೀಜಾಸುರ “ ನಂತೆ ವೃದ್ಧಿಸುತ್ತಿದೆ. ಇದನ್ನು ಪರಿಹರಿಸಬಲ್ಲ ಮಾರ್ಗೋಪಾಯಗಳನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸದೇ ಇದ್ದಲ್ಲಿ, ಜನಸಾಮಾನ್ಯರ ಆರೋಗ್ಯಕ್ಕೆ ಮತ್ತು ದೇಶದ ಪ್ರಗತಿಗೆ ಕಂಟಕವಾಗಿ ಪರಿಣಮಿಸಲಿದೆ.

ಪರಿಹಾರವೇನು?

ಮನಸ್ಸಿದ್ದಲ್ಲಿ ಮಾರ್ಗವಿದೆ ಎನ್ನುವ ಮಾತಿನಂತೆ, ಈ ಸಮಸ್ಯೆಯನ್ನು ಬಗೆಹರಿಸಲು ಸುಲಭ ಮತ್ತು ಉಪಯುಕ್ತ ವಿಧಾನಗಳು ಸಾಕಷ್ಟಿವೆ. ಆದರೆ ಇವುಗಳನ್ನು ಕಟ್ಟುನಿಟ್ಟಾಗಿ  ಅನುಷ್ಠಾನಿಸುವ ಇಚ್ಛಾಶಕ್ತಿ ಸರಕಾರ ಮತ್ತು ಪ್ರಜೆಗಳಲ್ಲಿ ಇರಲೇಬೇಕಾಗುತ್ತದೆ.
ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಯಾದಿಯಲ್ಲಿರುವ ಅಮೆರಿಕ, ಇಂಗ್ಲೆಂಡ್, ಜಪಾನ್, ಜರ್ಮನಿ, ಡೆನ್ಮಾರ್ಕ್ ಮತ್ತಿತರ ದೇಶಗಳು ಈಗಾಗಲೇ ಇಂತಹ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಿ ಬಳಸುವ ಸಲುವಾಗಿ ಅನೇಕ ನಿಯಮಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಅನುಷ್ಠಾನಿಸಿವೆ. ಕಟ್ಟಡಗಳನ್ನು ಭಗ್ನಗೊಳಿಸುವಾಗ ಲಭಿಸುವ ಇಟ್ಟಿಗೆ, ಕಲ್ಲುಗಳು ಮತ್ತು ಕಾಂಕ್ರೀಟ್ ತುಂಡುಗಳನ್ನು ಹುಡಿಮಾಡಿದ ಬಳಿಕ, ಇದನ್ನು ನೂತನ ರಸ್ತೆಗಳ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಈ ದೇಶಗಳು ತ್ಯಾಜ್ಯಗಳನ್ನು ಬಳಸಿ ನೂತನ ರಸ್ತೆಗಳನ್ನು ನಿರ್ಮಿಸುವುದಾದಲ್ಲಿ, ಈ ವಿಧಾನವನ್ನು ನಾವೂ ಅನುಷ್ಠಾನಿಸುವುದು ಅಸಾಧ್ಯವೇನಲ್ಲ.ತತ್ಪರಿಣಾಮವಾಗಿ ನಿರ್ಮಾಣ ಕಾಮಗಾರಿಗಳ ವೆಚ್ಚ ಕಡಿಮೆಯಾಗುವುದರೊಂದಿಗೆ, ನಿರುಪಯುಕ್ತ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಸುಲಭಸಾಧ್ಯವೆನಿಸಲಿದೆ. ಇದಕ್ಕೂ ಮಿಗಿಲಾಗಿ ಮುನಿಸಿಪಲ್ ಕಾಯಿದೆಯಂತೆ “ ಲ್ಯಾಂಡ್ ಫಿಲ್ ಸೈಟ್ “ ಗಳಲ್ಲಿ ಸುರಿಯಬೇಕಾದ ತ್ಯಾಜ್ಯಗಳನ್ನು ಈ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ, ಇರುವ ಲ್ಯಾಂಡ್ ಫಿಲ್ ಸೈಟ್ ಗಳ ಆಯುಷ್ಯವನ್ನು ಹೆಚ್ಚಿಸಬಹುದಾಗಿದೆ.

ಕೊನೆಯ ಮಾತು

ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿರುವ ನಮ್ಮ ದೇಶದಲ್ಲಿ  ರಸ್ತೆಗಳ ದುರಸ್ತಿ, ಪುನರ್ ನವೀಕರಣ ಮತ್ತು ನೂತನ ರಸ್ತೆಗಳ ನಿರ್ಮಾಣ ನಿರಂತರವಾಗಿ ನಡೆಯುತ್ತಿದೆ. ಅಂತೆಯೇ ನಮ್ಮಲ್ಲಿ ಉತ್ಪನ್ನವಾಗುತ್ತಿರುವ ಕಟ್ಟಡ ತ್ಯಾಜ್ಯಗಳ ಪ್ರಮಾಣವೂ ದಿನೇದಿನೇ ಹೆಚ್ಚುತ್ತಿದೆ. ಈ ತ್ಯಾಜ್ಯಗಳನ್ನು ಬಳಸಿ ನೂತನ ರಸ್ತೆಗಳನ್ನು ನಿರ್ಮಿಸುವ ಮೂಲಕ ಉಳಿತಾಯವಾಗುವ ಹಣವನ್ನು ಬಳಸುವ ಮೂಲಕ ಇನ್ನಷ್ಟು ಹೊಸ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಇದಕ್ಕೂ ಮಿಗಿಲಾಗಿ ನೂತನ ರಸ್ತೆಗಳ ನಿರ್ಮಾಣದಲ್ಲಿ ತ್ಯಾಜ್ಯ ಪ್ಲಾಸ್ಟಿಕ್ ಬಳಸಿದಲ್ಲಿ, ಈ ರಸ್ತೆಗಳು ಸುದೀರ್ಘಕಾಲ ಬಾಳ್ವಿಕೆ ಬರುವುದಲ್ಲದೆ, ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬಹುದಾಗಿದೆ. ಆದರೆ ನಮ್ಮನ್ನಾಳುವವರು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧರಿರುವರೇ ಎನ್ನುವುದು “ ಮಿಲಿಯನ್ ಡಾಲರ್ “ ಪ್ರಶ್ನೆಯಾಗಿದೆ!.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು