Wednesday, February 28, 2018

scorching summer ............


                      ಧಗಧಗಿಸಲಿದೆ ಈ ಬಾರಿಯ ಬೇಸಗೆ

ಸಾಮಾನ್ಯವಾಗಿ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಗೆಯ ಧಗೆಯು ಮಾರ್ಚ್ ತಿಂಗಳಿನ ಮಧ್ಯಭಾಗದಲ್ಲಿ ಆರಂಭವಾಗುತ್ತದೆ. ಬಳಿಕ ಧಗೆಯ ತೀವ್ರತೆ ಹೆಚ್ಚುತ್ತ , ಎಪ್ರಿಲ್ ತಿಂಗಳಿನಲ್ಲಿ ಪ್ರತ್ಯಕ್ಷವಾಗುವ “ ಎಪ್ರಿಲ್ ಶವರ್ಸ್ “ ಎಂದು ಕರೆಯಲ್ಪಡುವ ಮಳೆ ಸುರಿದಂತೆಯೇ ತುಸು ಕಡಿಮೆಯಾಗುತ್ತದೆ. ತದನಂತರ ಮೇ ತಿಂಗಳಿನ ಅಂತ್ಯದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗುವ ತನಕ, ಬೇಸಗೆಯ ಧಗೆಯು ಮತ್ತಷ್ಟು ಹೆಚ್ಚುತ್ತಾ ಹೋಗುತ್ತದೆ.

2015 ರಲ್ಲಿ  ದೇಶದ ಬಹುತೇಕ ರಾಜ್ಯಗಳಲ್ಲಿ ಬೇಸಗೆಯ ಸಂದರ್ಭದಲ್ಲಿ ಕಂಡುಬಂದಿದ್ದ ತಾಪಮಾನದ ಮಟ್ಟವು ನೂತನ ದಾಖಲೆಯನ್ನೇ ಸೃಷ್ಠಿಸಿತ್ತು. ಆದರೆ 2016 ರ ಬೇಸಗೆಯಲ್ಲಿ ಈ ದಾಖಲೆಯು ಮುರಿಯಲ್ಪಟ್ಟಿತ್ತು. ಬಳಿಕ 2017 ರಲ್ಲಿ ಈ ದಾಖಲೆಯೂ ಮುರಿಯಲ್ಪಟ್ಟಿದ್ದು, 2018 ರಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು, ಹೊಸ  ದಾಖಲೆಯನ್ನು ಸ್ಥಾಪಿಸುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಇದಕ್ಕೆ ಪೂರಕವಾಗಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮವಾಗಿ  2016 ರಲ್ಲಿ ರಾಜ್ಯದ 177 ತಾಲೂಕುಗಳಲ್ಲಿ 136 ತಾಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದ್ದು, 2017 ರಲ್ಲಿ ಈ ಸಂಖ್ಯೆಯು 160 ಕ್ಕೆ ಏರಿತ್ತು. ಈ ವರ್ಷ ಬರಪೀಡಿತ ತಾಲೂಕುಗಳ ಸಂಖ್ಯೆ ಮತ್ತಷ್ಟು ಹೆಚ್ಚುವುದೇ ಎನ್ನುವುದನ್ನು ಕಾದುನೋಡಬೇಕಷ್ಟೇ.

ಆದರೆ ಈ ವರ್ಷ ಫೆಬ್ರವರಿ ತಿಂಗಳಿನ ಮಧ್ಯಭಾಗದಲ್ಲೇ ಉದ್ಭವಿಸಿರುವ ಬೇಸಗೆಯ ಧಗೆಯು, ಇದಕ್ಕೂ ಮುನ್ನ ಮೇ ತಿಂಗಳಿನಲ್ಲಿ ಕಂಡುಬರುತ್ತಿದ್ದ ತಾಪಮಾನದಷ್ಟೇ ಆಗಿರುವುದು ವಿಶೇಷ . ಪ್ರಸ್ತುತ ಬೆಳಿಗ್ಗೆ ಸುಮಾರು 30 ಡಿಗ್ರಿ ಸೆಲ್ಸಿಯಸ್ ನಿಂದ ಆರಂಭಿಸಿ, ಮಧ್ಯಾಹ್ನದ ವೇಳೆ 41 ಡಿಗ್ರಿಯ ತನಕ ಏರುತ್ತಿರುವ ತಾಪಮಾನವನ್ನು, ಇದುವರೆಗೆ ದಕ್ಷಿಣ ಕನ್ನಡದ ಜನತೆ ಅನುಭವಿಸಿರಲಿಲ್ಲ ಎಂದಲ್ಲಿ ತಪ್ಪೆನಿಸಲಾರದು. ಇದೇ ಸಂದರ್ಭದಲ್ಲಿ ಮಧ್ಯರಾತ್ರಿಯ ಬಳಿಕ ಬೆಳಗಿನ ಜಾವದ ತನಕ ವಾತಾವರಣದ ಉಷ್ಣತೆಯು ಸುಮಾರು 21 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದು, ಚುಮುಚುಮು ಚಳಿಯೂ ಇರುತ್ತದೆ. ದೇಶದ ಉದ್ದಗಲಕ್ಕೂ ಕಂಡುಬರುತ್ತಿರುವ ಹವಾಮಾನದ ವೈಪರೀತ್ಯಕ್ಕೆ ಇದೂ ಒಂದು ಉದಾಹರಣೆಯಾಗಿದೆ.

ಕಾರಣವೇನು?

ಪ್ರಾಯಶಃ ನಿರಂತರವಾಗಿ ಹೆಚ್ಚುತ್ತಿರುವ ದೇಶದ ಜನಸಂಖ್ಯೆ, ವಾಹನಗಳ ಸಂಖ್ಯೆ, ವಾಯು ಹಾಗೂ ಜಲಮಾಲಿನ್ಯ, ಪರಿಸರ ಮಾಲಿನ್ಯ,ಅತಿಯಾದ ತ್ಯಾಜ್ಯಗಳ ಉತ್ಪಾದನೆ ಮತ್ತು  ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಮಿತಿಮೀರಿದ ನಗರೀಕರಣ - ಕಾಂಕ್ರೀಟ್ ಕಾಡುಗಳ ನಿರ್ಮಾಣ, ಅರಣ್ಯ – ಕೃಷಿ ಭೂಮಿಗಳನ್ನು ನಾಶಪಡಿಸಿ ತಲೆ ಎತ್ತುತ್ತಿರುವ ಉದ್ದಿಮೆ, ಕೈಗಾರಿಕೆ, ವಿದ್ಯುತ್ ಉತ್ಪಾದನಾ ಘಟಕಗಳು ಹಾಗೂ ವಿಶೇಷ ವಿತ್ತವಲಯಗಳು, ಜಲಸಂರಕ್ಷಣೆಯ ಬಗ್ಗೆ ನಿರ್ಲಕ್ಷ್ಯ, ಕೃಷಿಗಾಗಿ ಕೃತಕ ರಾಸಾಯನಿಕಗಳ ಅತಿಬಳಕೆ, ಸಾಂಪ್ರದಾಯಿಕ ಉರುವಲುಗಳ ಬಳಕೆ ಇತ್ಯಾದಿಗಳ ಪರಿಣಾಮವಾಗಿ ವೃದ್ಧಿಸುತ್ತಿರುವ  ಜಾಗತಿಕ ತಾಪಮಾನ ಮತ್ತು ಹವಾಮಾನದ ವ್ಯತ್ಯಯಗಳೇ ಈ ಬದಲಾವಣೆಗೆ ಕಾರಣವಾಗಿರಬಹುದು. ಅಂತೆಯೇ ಈ ವಿಲಕ್ಷಣ ಸಮಸ್ಯೆಯು ಹೆಚ್ಚುತ್ತಿರಲು, ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಜನಸಸಂಖ್ಯೆಯನ್ನು ನಿಯಂತ್ರಿಸಲು ಬೇಕಾದ ಕಾನೂನುಗಳನ್ನು ರೂಪಿಸಲು ನಮ್ಮನ್ನಾಳುವವರು ಹಿಂಜರಿಯುತ್ತಿರುವುದು ಮಗದೊಂದು ಕಾರಣ ಎನ್ನುವುದರಲ್ಲಿ ಸಂದೇಹವಿಲ್ಲ.

ಹವಾಮಾನದ ವ್ಯತ್ಯಯ

 ಹವಾಮಾನದ ವ್ಯತ್ಯಯದ ಭಯಾನಕ ದುಷ್ಪರಿಣಾಮಗಳಲ್ಲಿ  ಜಾಗತಿಕ ತಾಪಮಾನದ  ಮತ್ತು ಉಷ್ಣ ಅಲೆಗಳ ಹೆಚ್ಚಳಗಳು ಪ್ರಮುಖವಾಗಿವೆ. ಈ ಸಮಸ್ಯೆಯ ಸಂಭಾವ್ಯತೆ ಮತ್ತು ತೀವ್ರತೆಗಳು, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ.

ಈಗಾಗಲೇ ಸಾಕಷ್ಟು ವಾದವಿವಾದಗಳಿಗೆ ಗ್ರಾಸವಾಗಿರುವ ಜಾಗತಿಕ ತಾಪಮಾನದ ಹೆಚ್ಚಳವು, ಬೇಸಗೆಯ ಧಗೆಯನ್ನು ಹೆಚ್ಚಿಸುವುದರೊಂದಿಗೆ ಹವಾಮಾನದ ವೈಪರೀತ್ಯಗಳಿಗೂ ಕಾರಣವೆನಿಸುತ್ತಿದೆ. ತತ್ಪರಿಣಾಮವಾಗಿ ಕಡುಬೇಸಗೆಯ ದಿನಗಳಲ್ಲೂ ಗುಡುಗು ಮಿಂಚುಗಳೊಂದಿಗೆ ಧಾರಾಕಾರ ಮಳೆಸುರಿಯುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯೂ  ಸುರಿಯುತ್ತದೆ.

ಒಂದೆಡೆ ಅತಿವೃಷ್ಠಿ ಮತ್ತೊಂದೆಡೆ ಅನಾವೃಷ್ಠಿ, ಮತ್ತೆ ಕೆಲವೆಡೆ ಅತಿಯಾದ ಸೆಕೆ ಅಥವಾ ಅತಿಯಾದ ಚಳಿ ಇತ್ಯಾದಿ ವೈಪರೀತ್ಯಗಳಿಗೆ ಮೇಲೆ ನಮೂದಿಸಿದ ಕಾರಣಗಳಲ್ಲದೇ ಅನ್ಯ ಕಾರಣಗಳೂ ಇರುವ ಸಾಧ್ಯತೆಗಳಿವೆ. ಪ್ರಾಕೃತಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಹವಾಮಾನ ತಜ್ಞರು – ವಿಜ್ಞಾನಿಗಳು ಸೂಕ್ತ ಪರಿಹಾರವನ್ನು ಪತ್ತೆಹಚ್ಚಲು ಶ್ರಮಿಸುತ್ತಿದ್ದರೂ, ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ.ಇದೇ ಕಾರಣದಿಂದಾಗಿ  ಮನುಷ್ಯರ ಆರೋಗ್ಯಕ್ಕೆ  ಅತ್ಯಂತ ಅಪಾಯಕಾರಿ ಎನಿಸುತ್ತಿರುವ ಈ ಸಮಸ್ಯೆಯನ್ನು  ಕನಿಷ್ಠ ಪಕ್ಷ ನಿಯಂತ್ರಿಸುವ ನಿಟ್ಟಿನಲ್ಲಿ ನಾವಿಂದು ಕಾರ್ಯಪ್ರವೃತ್ತರಾಗಬೇಕಿದೆ. ಏಕೆಂದರೆ ಮುಂದಿನ ಒಂದೆರಡು ದಶಕಗಳಲ್ಲಿ ಜಗತ್ತಿನ ಸರಾಸರಿ ತಾಪಮಾನದ ಮಟ್ಟವು ಎರಡರಿಂದ ಆರು ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಲಿದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ಆದರೆ ಪ್ರಸ್ತುತ ಶರವೇಗದಲ್ಲಿ ಏರುತ್ತಿರುವ ತಾಪಮಾನವನ್ನು ಗಮನಿಸಿದಾಗ, ಮಂದಿನ ಒಂದೆರಡು ವರ್ಷಗಳಲ್ಲೇ ಎರಡರಿಂದ ಆರು ಡಿಗ್ರಿಗಳಷ್ಟು ತಾಪಮಾನ ಹೆಚ್ಚುವುದೇ ಎನ್ನುವ ಸಂದೇಹ ಜನಸಾಮಾನ್ಯರ ಮನದಲ್ಲಿ ಮೂಡುವುದರಲ್ಲಿ ಸಂದೇಹವಿಲ್ಲ.

ಉಷ್ಣ ಅಲೆ

ವಾತಾವರಣದ ತಾಪಮಾನವು ಅತಿಯಾದ ಸಂದರ್ಭದಲ್ಲಿ ಉದ್ಭವಿಸುವ ಉಷ್ಣ  ಸಂದರ್ಭದಲ್ಲಿ ಅಲೆಯು ಎರಡು ವಿಧಗಳಲ್ಲಿ ತನ್ನ ಮಾರಕತೆಯನ್ನು ತೋರ್ಪಡಿಸುತ್ತದೆ. ಇವುಗಳಲ್ಲಿ “ ಉಷ್ಣ ಆಘಾತ “ ( Heat stroke) ಕ್ಕೆ ಒಳಗಾದ ವ್ಯಕ್ತಿಯ ಶರೀರದ ಉಷ್ಣತೆಯು ವಿಪರೀತ ಹೆಚ್ಚುವುದರಿಂದ ಉದ್ಭವಿಸುವ “ ನಿರ್ಜಲೀಕೃತ ಸ್ಥಿತಿ “ ಮತ್ತು ಆತನ ಮೆದುಳಿಗೆ ಸಂಭವಿಸುವ ಹಾನಿಯೂ ಆತನ  ಆಕಸ್ಮಿಕ ಮರಣಕ್ಕೆ ಕಾರಣವೆನಿಸಬಲ್ಲದು. ಎರಡನೆಯ ವಿಧದಲ್ಲಿ ವಯೋವೃದ್ಧರು ಹಾಗೂ ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳಿಗೆ ಸಂಬಂಧಿಸಿದ ಮತ್ತು ಅನ್ಯ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ರಕ್ತ ಸಂಚಲನ ವ್ಯವಸ್ಥೆಯ ವೈಫಲ್ಯದಿಂದ ಮರಣ ಸಂಭವಿಸುವ ಸಾಧ್ಯತೆಗಳಿವೆ. ಇದಲ್ಲದೇ ಹಸುಗೂಸುಗಳು ಮತ್ತು ಪುಟ್ಟ ಮಕ್ಕಳ ಆರೋಗ್ಯದ ಮೇಲೂ ಉಷ್ಣ ಅಲೆಯು ದುಷ್ಪರಿಣಾಮವನ್ನು ಬೀರುತ್ತದೆ.

ಬಲಿಯಾಗುತ್ತಿರುವ ಬಡವರು

ಯಾವುದೇ ದೇಶದಲ್ಲಿ ಉಷ್ಣ ಅಲೆಗೆ ಬಲಿಯಾಗುವವರಲ್ಲಿ ಬಡವರ ಸಂಖ್ಯೆಯೇ ಅಧಿಕವಾಗಿದೆ. ಅದರಲ್ಲೂ ಹೊರಾಂಗಣದಲ್ಲಿ ದುಡಿಯುವ ಕೃಷಿಕರು, ಕೂಲಿಕಾರ್ಮಿಕರು ರಸ್ತೆ ಮತ್ತು ಕಟ್ಟಡಗಳ ನಿರ್ಮಾಣ ಕಾಮಗಾರಿಗಳಲ್ಲಿ ದುಡಿಯುವ ಜನರು, ನೆರಳಿನ ಆಸರೆಯಿಲ್ಲದೇ ಸೂರ್ಯನ ಬಿಸಿಲಿಗೆ ಮೈ ಒಡ್ಡುವುದರಿಂದ ಉಷ್ಣ ಅಲೆಯ ಹಾವಳಿಗೆ ಸುಲಭದಲ್ಲೇ ಬಲಿಯಾಗುತ್ತಾರೆ. ಅಂತೆಯೇ ಕೆಲವೊಂದು ಗಂಭೀರ - ಮಾರಕ ವ್ಯಾಧಿಗಳಿಂದ ಬಳಲುತಿರುವವರು, ವಾತಾವರಣದ ಉಷ್ಣತೆ ಅತಿಯಾಗಿ ಹೆಚ್ಚಿದ ಸಂದರ್ಭಗಳಲ್ಲಿ ಮೂತ್ರಪಿಂಡಗಳ ವೈಫಲ್ಯ ಹಾಗೂ ಹೃದಯಾಘಾತ ಇತ್ಯಾದಿಗಳಿಂದ ಮೃತಪಡುತ್ತಾರೆ.

ಮುಂಜಾಗ್ರತೆ

ವಾತಾವರಣದ ತಾಪಮಾನವು ಅತಿಯಾಗಿ ಹೆಚ್ಚಿದ ಸಂದರ್ಭದಲ್ಲಿ ಸೂರ್ಯನ ಬಿಸಿಲಿಗೆ ನೇರವಾಗಿ ಮೈಯ್ಯೊಡ್ಡದಿರಿ. ಅನಿವಾರ್ಯ ಸಂದರ್ಭದಲ್ಲಿ ಛತ್ರಿಯನ್ನು ಬಳಸಿ. ಧಾರಾಳವಾಗಿ ನೀರು, ಪಾನಕ ಹಾಗೂ ಹಣ್ಣಿನ ರಸ ಇತ್ಯಾದಿ ದ್ರವಗಳನ್ನು ಸೇವಿಸಿ. ಗಂಭೀರ ವ್ಯಾಧಿಗಳಿಂದ ಬಳಲುತ್ತಿರುವ ರೋಗಿಗಳ ಶರೀರದ ಉಷ್ಣತೆಯು ಹೆಚ್ಚದಂತೆ ಹವಾನಿಯಂತ್ರಕ ಅಥವಾ ಕೂಲರ್ ಬಳಸಿ. ಈ ಸೌಲಭ್ಯ ಇಲ್ಲದಲ್ಲಿ ತಣ್ಣೀರಿನಲ್ಲಿ ಅದ್ದಿದ  ಒದ್ದೆ ಬಟ್ಟೆಯಿಂದ ರೋಗಿಯ ಶರೀರವನ್ನು ಆಗಾಗ ಒರೆಸುತ್ತಿರಿ. ಇಂತಹವರ ಆರೋಗ್ಯದಲ್ಲಿ ಕೊಂಚ ಏರುಪೇರು ಸಂಭವಿಸಿದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಉಷ್ಣ ಅಲೆಯ ಸಂದರ್ಭದಲ್ಲಿ ಜ್ವರ, ವಾಂತಿ ಹಾಗೂ ಭೇದಿಗಳಂತಹ ಸಮಸ್ಯೆಗಳು ಬಾಧಿಸಿದಲ್ಲಿ, ಇದನ್ನು ನಿರ್ಲಕ್ಷಿಸದೇ ವೈದ್ಯರ ಸಲಹೆ ಮತ್ತು ಚಿಕಿತ್ಸೆಯನ್ನು  ಪಡೆದುಕೊಳ್ಳಿ.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು  



Wednesday, February 21, 2018

Burning trash is dangerous................


          ತ್ಯಾಜ್ಯಗಳ ಮುಕ್ತ ದಹನ : ಅನಾರೋಗ್ಯಕ್ಕೆ ಆಹ್ವಾನ

ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ಅಗಾಧ ಪ್ರಮಾಣದ ವೈವಿಧ್ಯಮಯ ತ್ಯಾಜ್ಯಗಳಲ್ಲಿ ಶೇ. 40 ರಷ್ಟನ್ನು ಅನಿಯಂತ್ರಿತ ಹಾಗೂ ಮುಕ್ತವಾಗಿ ದಹಿಸಲಾಗುತ್ತಿದೆ. ಈ ಅಪಾಯಕಾರಿ ಸಮಸ್ಯೆಗೆ ನಮ್ಮ ದೇಶವೂ ಅಪವಾದವೆನಿಸಿಲ್ಲ ಎಂದು ಇತ್ತೀಚಿಗೆ ನಡೆಸಿದ್ದ ಅಧ್ಯಯನದ ವರದಿಯಿಂದ ಬಹಿರಂಗಗೊಂಡಿದೆ. ಈ ರೀತಿಯಲ್ಲಿ ದಹಿಸಲ್ಪಡುವ ತ್ಯಾಜ್ಯಗಳು ಹೊರಸೂಸುವ ಪ್ರದೂಷಕಗಳ ಪ್ರಮಾಣವು, ಪರಿಸರದಲ್ಲಿ ಬಿಡುಗಡೆಯಾಗುತ್ತಿರುವ ಮಾನವಜನ್ಯ ಜಾಗತಿಕ ಪ್ರದೂಷಕಗಳ ಶೇ. 29 ರಷ್ಟಿದೆ!.

ತ್ಯಾಜ್ಯಗಳ ಅನಿಯಂತ್ರಿತ ಹಾಗೂ ಮುಕ್ತ ದಹನವನ್ನು “ ವಾಣಿಜ್ಯ ದಹನ ವ್ಯವಸ್ಥೆ “ ಯಂತೆ ( ಕಮರ್ಷಿಯಲ್ ಇನ್ಸಿನರೇಶನ್ ) ನಿಯಂತ್ರಿಸುವುದು ಅಸಾಧ್ಯವೆನಿಸುತ್ತದೆ. ಹಾಗೂ ಇದೇ ಕಾರಣದಿಂದಾಗಿ ಇದು ಮನುಕುಲಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಈ ಬಗ್ಗೆ ಅಧ್ಯಯನವನ್ನು ನಡೆಸಿದ್ದ ಅಮೆರಿಕ ಮೂಲದ ನ್ಯಾಷನಲ್ ಸೆಂಟರ್ ಫಾರ್ ಅಟ್ಮೋಸ್ಫೆರಿಕ್ ರಿಸರ್ಚ್ ಸಂಸ್ಥೆಯ ಹೇಳಿಕೆಯಂತೆ, ತ್ಯಾಜ್ಯಗಳ ಅನಿಯಂತ್ರಿತ ಹಾಗೂ ಮುಕ್ತ ದಹಿಸುವಿಕೆಯಿಂದ ಹೊರಸೂಸುವ ಪ್ರದೂಷಕಗಳ ಪ್ರಮಾಣವು, ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಾದ ಭಾರತ,ಚೀನಾ, ಬ್ರೆಜಿಲ್, ಮೆಕ್ಸಿಕೋ, ಪಾಕಿಸ್ತಾನ ಮತ್ತು ಟರ್ಕಿಗಳಲ್ಲಿ ಅಪಾಯಕಾರಿ ಮಟ್ಟವನ್ನು ತಲುಪಿದೆ. ಈ ಅನಾರೋಗ್ಯಕರ ಮತ್ತು ಅಪಾಯಕಾರಿ ಸಮಸ್ಯೆಯ ಬಗ್ಗೆ ಇಂದಿಷ್ಟು ಮಾಹಿತಿ ಇಲ್ಲಿದೆ.

ತ್ಯಾಜ್ಯಗಳ ದಹನ

ನಮ್ಮಲ್ಲಿ ದಿನನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳಾದ ವೈವಿದ್ಯಮಯ ನಿರುಪಯುಕ್ತ ವಸ್ತುಗಳು, ಕಾಗದ, ಪ್ಲಾಸ್ಟಿಕ್ ಕೈಚೀಲ ಮತ್ತಿತರ ಉತ್ಪನ್ನಗಳು, ನಿಷ್ಪ್ರಯೋಜಕ ಬ್ಯಾಟರಿಗಳು, ಎಣ್ಣೆ, ಪೈಂಟ್, ವಿದ್ಯುತ್ ಬಲ್ಬ್ ಹಾಗೂ ಬಟ್ಟೆಬರೆಗಳೇ ಮುಂತಾದ ನಿಷ್ಪ್ರಯೋಜಕ  ವಸ್ತುಗಳನ್ನು ಬೆಂಕಿಹಚ್ಚಿ ಸುಡುವ ಮೂಲಕ ಸುಲಭದಲ್ಲೇ ವಿಲೇವಾರಿ ಮಾಡುವ ಹವ್ಯಾಸವಿದ್ದಲ್ಲಿ, ನಿಮ್ಮ ಹಾಗೂ ನಿಮ್ಮ ಮನೆಯೊಂದಿಗೆ, ನೆರೆಕರೆಯ ನಿವಾಸಿಗಳ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದೆಂದು ಪ್ರಾಯಶಃ ನಿಮಗೂ ತಿಳಿದಿರಲಾರದು. ಅದರಲ್ಲೂ ವಿಶೇಷವಾಗಿ ಹಸುಗೂಸುಗಳು, ಪುಟ್ಟ ಮಕ್ಕಳು, ವಯೋವೃದ್ಧರು ಮತ್ತು ಗರ್ಭಿಣಿಯರ ಪಾಲಿಗೆ  “ ಧೂಮಕೇತು”  ವಿನಂತೆ ಕಾಡಬಲ್ಲ ಈ ದಹನಕ್ರಿಯೆಯಿಂದ ಉದ್ಭವಿಸುವ ಅಪಾಯಕಾರಿ ಅನಿಲಗಳು, ಅನೇಕ ವಿಧದ ಗಂಭೀರ ಮತ್ತು ಮಾರಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುವುದು.

ಈ ಧೂಮದಲ್ಲೇನಿದೆ?

ನೀವು ತ್ಯಾಜ್ಯಗಳನ್ನು ಬೆಂಕಿಹಚ್ಚಿ ಸುಡುವಾಗ ಫಾರ್ಮಲ್ ಡಿಹೈಡ್, ಹೈಡ್ರೋಜನ್ ಕ್ಲೋರೈಡ್, ಸಲ್ಫರ್ ಡೈಆಕ್ಸೈಡ್ ಮತ್ತು ಫ್ಯೂರಾನ್ ಮತ್ತಿತರ ಅನಿಲಗಳು ಬಿಡುಗಡೆಯಾಗುತ್ತವೆ. ಇವುಗಳಲ್ಲಿ ಡೈಆಕ್ಸಿನ್ ಮತ್ತು ಫ್ಯೂರಾನ್ ಅನಿಲಗಳು ಕ್ಯಾನ್ಸರ್ ಕಾರಕಗಳೆಂದು ಗುರುತಿಸಲ್ಪಟ್ಟಿವೆ. ಸುಮಾರು ಎರಡರಿಂದ ನಲವತ್ತು ಮನೆಗಳಲ್ಲಿ ತ್ಯಾಜ್ಯಗಳನ್ನು ಮುಕ್ತವಾಗಿ ದಹಿಸುವಾಗ ಉತ್ಪನ್ನವಾಗುವ ಡೈಆಕ್ಸಿನ್ ಮತ್ತು ಫ್ಯೂರಾನ್ ಗಳ ಪ್ರಮಾಣವು, ಆಧುನಿಕ ಇನ್ಸಿನರೇಟರ್ ಒಂದರಲ್ಲಿ ವೈಜ್ಞಾನಿಕ ಹಾಗೂ ಸುರಕ್ಷಿತ ವಿಧಾನಗಳಿಂದ ಸುಮಾರು 200 ಟನ್ ತ್ಯಾಜ್ಯಗಳನ್ನು ದಹಿಸಿದಾಗ ಉತ್ಪನ್ನವಾಗುವ ಪ್ರಮಾಣದಷ್ಟೇ  ಆಗಿರುತ್ತದೆ!. ಏಕೆಂದರೆ ಇನ್ಸಿನರೇಟರ್ ಗಳಲ್ಲಿ ತ್ಯಾಜ್ಯಗಳನ್ನು ಗರಿಷ್ಠ ಉಷ್ಣತೆಯಲ್ಲಿ ದಹಿಸಲಾಗುತ್ತದೆ. ಆದರೆ ತ್ಯಾಜ್ಯಗಳನ್ನು ಮುಕ್ತವಾಗಿ ದಹಿಸುವಾಗ ಉಷ್ಣತೆಯ ಪ್ರಮಾಣವು ಸಾಕಷ್ಟು ಕಡಿಮೆಯಿರುತ್ತದೆ. ಇದೇ ಕಾರಣದಿಂದಾಗಿ ಇದು ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ.ನಿಜಸ್ಥಿತಿ ಹೀಗಿರುವಾಗ ದೇಶದ ಅನೇಕ ರಾಜ್ಯಗಳಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ರಾಶಿಬಿದ್ದಿರುವ ತ್ಯಾಜ್ಯಗಳಿಗೆ ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಬೆಂಕಿ ತಗಲಿದಾಗ ಉತ್ಪನ್ನವಾಗುವ ಪ್ರದೂಷಕಗಳ ಪ್ರಮಾಣ ಮತ್ತು ಇವುಗಳ ದುಷ್ಪರಿಣಾಮಗಳನ್ನು ಊಹಿಸುವುದು ಅಸಾಧ್ಯವೂ ಹೌದು.

ಕ್ಯಾನ್ಸರ್ ಕಾರಕ

ನಿರುಪಯುಕ್ತ ತ್ಯಾಜ್ಯಗಳನ್ನು ಮುಕ್ತವಾಗಿ ದಹಿಸುವಾಗ ಅತ್ಯಧಿಕ ಉಷ್ಣತೆಯಲ್ಲಿ ದಹನಕ್ರಿಯೆ ಜರಗದ ಕಾರಣದಿಂದಾಗಿ, ಇದರಿಂದ ಉತ್ಪನ್ನವಾಗುವ “ ಸೂಕ್ಷ್ಮಾತಿಸೂಕ್ಷ್ಮ ಕಣ “ ಗಳು ( ಪಾರ್ಟಿಕ್ಯುಲೇಟ್ ಮ್ಯಾಟರ್ ) ಮನುಷ್ಯನ ಶ್ವಾಸದೊಂದಿಗೆ ಸೇವಿಸಲು ಸೂಕ್ತವಲ್ಲದ ಹಾಗೂ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಅಮೆರಿಕದಲ್ಲಿ ನಡೆಸಿದ್ದ ಅಧ್ಯಯನವೊಂದರ ವರದಿಯಂತೆ, ಮನುಷ್ಯನ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸುವ ಹಾಗೂ ವಾಯುಮಾಲಿನ್ಯಕ್ಕೆ ಮೂಲವೆನಿಸುವ ವಿಷಕಾರಕ ದ್ರವ್ಯಗಳಲ್ಲಿ “ ಅಪರಿಪೂರ್ಣ ದಹನಕ್ರಿಯೆ “ ಯಿಂದ ಉದ್ಭವಿಸುವ ದ್ರವ್ಯ – ಅನಿಲಗಳು ಕ್ಯಾನ್ಸರ್ ಕಾರಕವೆಂದು ತಿಳಿದುಬಂದಿದೆ. ಇದಲ್ಲದೇ ಈ ಸೂಕ್ಷ್ಮಾತಿಸೂಕ್ಷ್ಮ ಕಣಗಳು  ಕ್ಯಾನ್ಸರ್, ದೀರ್ಘಕಾಲೀನ ಶ್ವಾಸಕೋಶಗಳ ಉರಿಯೂತಗಳಂತಹ ಸಮಸ್ಯೆಗಳೊಂದಿಗೆ ಕಣ್ಣು, ಕಿವಿ, ಮೊಗು ಮತ್ತು ಗಂಟಲು ಮುಂತಾದ ಅಂಗಗಳಿಗೆ ಸಂಬಂಧಿಸಿದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ. ನಿಮ್ಮ ಶ್ವಾಸಕೋಶಗಳನ್ನು ಪ್ರವೇಶಿಸಿದ ತುಸು ದೊಡ್ಡ ಗಾತ್ರದ ಕಣಗಳು ನೀವು ಕೆಮ್ಮಿದಾಗ ಅಥವಾ ಶೀನಿದಾಗ ಹೊರಬೀಳಬಹುದಾದರೂ, ಸಣ್ಣ ಗಾತ್ರದ ಕಣಗಳು ಶರೀರದಲ್ಲೇ ಉಳಿದುಕೊಳ್ಳುವುದರಿಂದ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತವೆ.

ಇಷ್ಟು ಮಾತ್ರವಲ್ಲ, ಮುಕ್ತವಾಗಿ ತ್ಯಾಜ್ಯಗಳನ್ನು ಸುಡುವಾಗ ಉತ್ಪನ್ನವಾಗುವ ಅನಿಲ ಹಾಗೂ ಸೂಕ್ಷ್ಮಾತಿಸೂಕ್ಷ್ಮ ಕಣಗಳ ರೂಪದಲ್ಲಿ ಹೊರಬೀಳುವ ಅಪಾಯಕಾರಿ ದ್ರವ್ಯಗಳು ಬೂದಿಯಲ್ಲೂ ಉಳಿದುಕೊಳ್ಳುವುದರಿಂದ, ಈ ಬೂದಿಯೂ ಮನುಷ್ಯರ ಅನಾರೋಗ್ಯಕ್ಕೆ ಕಾರಣವೆನಿಸುತ್ತದೆ. ಈ ಬೂದಿಯಿಂದಾಗಿ ಸಮೀಪದಲ್ಲಿನ ಬಾವಿ ಅಥವಾ ಅನ್ಯ ಜಲಮೂಲಗಳು ಕಲುಷಿತಗೊಳ್ಳುವುದರಿಂದ, ಈ ನೀರನ್ನು ಕುಡಿದ ಮನುಷ್ಯರು ಮತ್ತು ಇವುಗಳಲ್ಲಿರುವ ಜಲಚರಗಳಿಗೆ  ಅಪಾಯಕಾರಿಯಾಗಿ ಪರಿಣಮಿಸುತ್ತದೆ.

ಕೊನೆಯ ಮಾತು

ನಿಮ್ಮ ವಸತಿ ಅಥವಾ ವಾಣಿಜ್ಯ ಕಟ್ಟಡಗಳಲ್ಲಿ ದಿನನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳನ್ನು ಕ್ಷಣಮಾತ್ರದಲ್ಲಿ ಬೆಂಕಿಹಚ್ಚಿ ಸುಡಬಹುದಾದರೂ, ಇದರಿಂದ ಸಂಭವಿಸಬಲ್ಲ ಅನಾಹುತಗಳನ್ನು ತಡೆಗಟ್ಟುವುದು ಅಸಾಧ್ಯವೂ ಹೌದು. ಈ ಸಮಸ್ಯೆಯನ್ನು ಬಗೆಹರಿಸಲು ನೀವು ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಸಾಧ್ಯವಿರುವಷ್ಟು ಕಡಿಮೆಮಾಡಿ. ಅದರಲ್ಲೂ ಪ್ಲಾಸ್ಟಿಕ್ ಕೈಚೀಲಗಳು ಮತ್ತು ಅನ್ಯ ಉತ್ಪನ್ನಗಳ ಬಳಕೆಯನ್ನೇ ನಿಲ್ಲಿಸಿ. ನಿರ್ದಿಷ್ಟ ಗುಣಮಟ್ಟದ ಸ್ವಚ್ಛ ಪ್ಲಾಸ್ಟಿಕ್ ಉತ್ಪನ್ನಗಳನ್ನು ಪುನರ್ ಬಳಕೆ, ಪುನರ್ ಆವರ್ತನ ಅಥವಾ ರಸ್ತೆಗಳ ನಿರ್ಮಾಣದಲ್ಲಿ ಬಳಸಬಹುದಾದರೂ, ನಮ್ಮ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಅವಶ್ಯಕ ಕಾನೂನುಗಳನ್ನು ಇಂದಿನ ತನಕ ರೂಪಿಸಿಲ್ಲ. ಪ್ಲಾಸ್ಟಿಕ್ ನಿಷೇಧ ರಾಜ್ಯದಲ್ಲಿ ಜಾರಿಗೆ ಬಂದಿದ್ದರೂ, ಮಾರುಕಟ್ಟೆಯಲ್ಲಿ ಇವುಗಳ ಮಾರಾಟ ಮತ್ತು ಬಳಕೆ ಇಂದಿಗೂ ನಿಂತಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ಜನಸಾಮಾನ್ಯರು ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ನಿಲ್ಲಿಸಲು ಸಿದ್ಧರಿಲ್ಲ. ಅಂತೆಯೇ ತಮ್ಮಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಸ್ಥಳೀಯ ಸಂಸ್ಥೆಗಳು ನಿಯೋಜಿಸಿರುವ ಕಾರ್ಯಕರ್ತರಿಗೆ (ನಿಗದಿತ ಮಾಸಿಕ ಶುಲ್ಕವನ್ನು ಉಳಿಸಲು ) ನೀಡುವುದಿಲ್ಲ.ತತ್ಪರಿಣಾಮವಾಗಿ ಪ್ಲಾಸ್ಟಿಕ್ ಮತ್ತು ಅನ್ಯವಿಧದ ತ್ಯಾಜ್ಯಗಳ ಸಮಸ್ಯೆ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ. ಈ ಸಮಸ್ಯೆಯನ್ನು ಸಮರೋಪಾದಿಯಲ್ಲಿ ನಿಯಂತ್ರಿಸದೇ ಇದ್ದಲ್ಲಿ, ನಮ್ಮ ಮುಂದಿನ ಸಂತತಿಯನ್ನು ಇದು ಶಾಪದೋಪಾದಿಯಲ್ಲಿ ಪೀಡಿಸಲಿದೆ.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು