Wednesday, October 29, 2014

SVACHA PUTTOORU ABHIYAANA.......




 ಸ್ವಚ್ಛ ಪುತ್ತೂರು ಅಭಿಯಾನ : ವರ್ತಕರು ಮತ್ತು ಗ್ರಾಹಕರ ಸ್ಪಂದನ 

ಮಾನ್ಯ ಪ್ರಧಾನ ಮಂತ್ರಿಗಳು ಸ್ವತಃ ಭಾಗವಹಿಸುವ ಮೂಲಕ ಚಾಲನೆ ನೀಡಿದ್ದ ಸ್ವಚ್ಚ ಭಾರತ ಅಭಿಯಾನಕ್ಕೆ ದೇಶದ ಪ್ರಜೆಗಳಿಂದ ಅಭೂತಪೂರ್ವ ಸ್ಪಂದನ ದೊರೆತಿದೆ. ಇದರೊಂದಿಗೆ ವಿವಿಧ ರಾಜ್ಯಗಳ ಸ್ಥಳೀಯ ಸಂಸ್ಥೆಗಳು, ಅಯಾಚಿತವಾಗಿ ತಮಗೆ ಲಭಿಸಿದ್ದ ಈ ಅವಕಾಶವನ್ನು ಬಳಸುವ ಮೂಲಕ, ತಮ್ಮ ವ್ಯಾಪ್ತಿಯಲ್ಲಿ ರಾಶಿ ಬಿದ್ದಿದ್ದ ಸಕಲ ವಿಧದ ತ್ಯಾಜ್ಯಗಳನ್ನು ತೆರವುಗೊಳಿಸುವ ಪ್ರಯತ್ನದಲ್ಲಿ ನಿರತವಾಗಿವೆ. ಈ ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಂದ ಆರಂಭಿಸಿ, ಉನ್ನತ ಹುದ್ದೆಯಲ್ಲಿರುವ ಗಣ್ಯರು, ಸರ್ಕಾರಿ ನೌಕರರು- ಅಧಿಕಾರಿಗಳು,  ಖಾಸಗಿ ಹಾಗೂ ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಮತ್ತು ಪೌರಕಾರ್ಮಿಕರು  ಮುತುವರ್ಜಿಯಿಂದ ಭಾಗವಹಿಸಿದ್ದರು. ಗಾಂಧೀ ಜಯಂತಿಯಂದು ಅಭಿಯಾನದ ಉದ್ಘಾಟನೆ ಜರಗಿದ ಬಳಿಕ, ಇವರಲ್ಲಿ ಅನೇಕರು ನೇಪಥ್ಯಕ್ಕೆ ಸರಿದಿದ್ದರು. ಆದರೆ ಸಾಮಾಜಿಕ ಕಳಕಳಿಯುಳ್ಳ ಜನರು ಮತ್ತು ಸ್ವಯಂ ಸೇವಾ ಸಂಘಟನೆಗಳ ಸದಸ್ಯರು, ಸ್ವಚ್ಛತಾ ಅಭಿಯಾನವನ್ನು ಕ್ರಮಬದ್ಧವಾಗಿ ಜರಗಿಸುವ ದೀರ್ಘಾವಧಿ ಯೋಜನೆಗಳನ್ನು ಹಮ್ಮಿಕೊಂಡು, ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಶ್ರಮಿಸುತ್ತಿದ್ದಾರೆ.

ಸ್ವಚ್ಛ ಪುತ್ತೂರು 

 ಇದೇ ಸಂದರ್ಭದಲ್ಲಿ " ಸ್ವಚ್ಛ ಪುತ್ತೂರು " ಅಭಿಯಾನವನ್ನು ಆರಂಭಿಸಿರುವ ಪುರಸಭೆಗೆ, ಸ್ಥಳೀಯರ ಸಹಕಾರ ಲಭಿಸುತ್ತಿದೆ. ಸ್ಥಳೀಯ ವರ್ತಕ ಸಂಘದ ವತಿಯಿಂದ ದರ್ಭೆ ವೃತ್ತದಿಂದ ಆರಂಭಿಸಿ, ಬೊಳುವಾರಿನ ಕೂಡುರಸ್ತೆಯ ವರೆಗಿನ ನಗರದ ಪ್ರಧಾನ ರಸ್ತೆಯನ್ನು ಸ್ವಚ್ಚಗೊಳಿಸುವ ಆಶ್ವಾಸನೆ ದೊರೆತಿದೆ. ತದನಂತರ ಈ ರಸ್ತೆಯನ್ನು ಸ್ವಚ್ಚವಾಗಿ ಇರಿಸಬೇಕಾದ ಹೊಣೆಗಾರಿಕೆಯು ಸ್ಥಳೀಯ ನಿವಾಸಿಗಳ ಮೇಲಿರುತ್ತದೆ. ಈ ಅನುಕರಣೀಯ ಸೇವೆಗೆ ಪುರಸಭೆಯ ಹಸಿರು ನಿಶಾನೆ ದೊರಕಿದ್ದು, ತನ್ನ ಸಹಕಾರವನ್ನು ನೀಡಲು ಸಮ್ಮತಿಸಿದೆ. ಆದರೆ ಪುತ್ತೂರಿನ ವರ್ತಕ ಸಂಘದ ಸದಸ್ಯರು ಇದರೊಂದಿಗೆ ತ್ಯಾಜ್ಯಗಳ ಉತ್ಪಾದನೆಯನ್ನೇ ನಿಯಂತ್ರಿಸಬಲ್ಲ ಕೆಲವೊಂದು ಉಪಕ್ರಮಗಳನ್ನು ಅನುಷ್ಠಾನಗೊಳಿಸಿದಲ್ಲಿ, ಪುತ್ತೂರು ನಗರವನ್ನು ಸದಾ ಸ್ವಚ್ಛವಾಗಿರಿಸುವುದು ಸುಲಭಸಾಧ್ಯ ಎನಿಸುವುದರಲ್ಲಿ ಸಂದೇಹವಿಲ್ಲ.

ಪುನರ್ ಬಳಕೆ- ನಿಯಂತ್ರಣ 

 ಉದಾಹರಣೆಗೆ ಜರ್ಮನಿ ದೇಶದಲ್ಲಿ ಉತ್ಪನ್ನವಾಗುವ ಶೇ.೯೫ ರಷ್ಟು ಘನ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಲಾಗುತ್ತಿದೆ. ಅಂತೆಯೇ ಅನೇಕ ವಿಧದ ತ್ಯಾಜ್ಯಗಳ ಉತ್ಪಾದನೆಯನ್ನು ತಡೆಗಟ್ಟಲು, ನಿರ್ದಿಷ್ಠ ಮಾರ್ಗೋಪಾಯಗಳನ್ನೂ ಅನುಸರಿಸಲಾಗುತ್ತದೆ. ಇವುಗಳಲ್ಲಿ ಗ್ರಾಹಕರು ಖರೀದಿಸಿದ ಯಾವುದೇ ಉತ್ಪನ್ನವನ್ನು ಪ್ಯಾಕ್ ಮಾಡಿರುವ ಪ್ಲಾಸ್ಟಿಕ್, ಕಾಗದ ಮತ್ತು ಥರ್ಮೊಕೂಲ್ ಇತ್ಯಾದಿಗಳನ್ನು, ಇದನ್ನು ಪೂರೈಕೆ ಮಾಡಿದ ವರ್ತಕರೇ ಮರಳಿ ಕೊಂಡೊಯ್ಯಬೇಕಾಗುವುದು. ಹಾಗೂ ಇವುಗಳನ್ನು ತಪ್ಪದೇ ( ಸಾಧ್ಯವಿರುವಷ್ಟು ಕಾಲ )ಮರುಬಳಕೆ ಮಾಡಬೇಕಾಗುವುದು. ಇಂತಹ ವಿಶಿಷ್ಠ ವಿಧಾನದ ಮೂಲಕ ತ್ಯಾಜ್ಯಗಳ ಉತ್ಪಾದನೆಯನ್ನು ಕಡಿಮೆ ಮಾಡುವುದರೊಂದಿಗೆ, ಇವುಗಳನ್ನು ಪುನರ್ ಆವರ್ತನಗೊಳಿಸುವ ಖರ್ಚುವೆಚ್ಚಗಳನ್ನೂ ಉಳಿಸಬಹುದಾಗಿದೆ. 

ಜರ್ಮನಿಯ ಮಾದರಿಯನ್ನು ಭಾರತೀಯರು ಅನುಸರಿಸುವುದು ನಿಶ್ಚಿತವಾಗಿಯೂ ಅಸಾಧ್ಯವೇನಲ್ಲ. ಇದರೊಂದಿಗೆ ತ್ಯಾಜ್ಯಗಳ ಉತ್ಪಾದನೆಯನ್ನು ಕಡಿಮೆ ಮಾಡಬಲ್ಲ ಅನ್ಯ ವಿಧಾನಗಳನ್ನು ಅನುಷ್ಠಾನಗೊಳಿಸಿದಲ್ಲಿ, ಅಗಾಧ ಪ್ರಮಾಣದ ತ್ಯಾಜ್ಯಗಳನ್ನು ಸಂಗ್ರಹಿಸಿ, ಸುರಕ್ಷಿತವಾಗಿ ಸಾಗಿಸಿ, ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ವೈಜ್ಞಾನಿಕ ವಿಧಾನದಿಂದ ವಿಲೇವಾರಿ ಮಾಡುವ ಖರ್ಚುವೆಚ್ಚಗಳು ಉಳಿತಾಯವಾಗಲಿವೆ. ಇದಲ್ಲದೇ ಈಗಾಗಲೇ ತುಂಬಿತುಳುಕುತ್ತಿರುವ ಲ್ಯಾಂಡ್ ಫಿಲ್ ಸೈಟ್ ಗಳು, ಇನ್ನಷ್ಟು ವರ್ಷಗಳ ಕಾಲ ಬಳಸಲು ದೊರೆಯಲಿವೆ. 

ಉತ್ಪಾದನೆಯ ನಿಯಂತ್ರಣ 

ಪ್ರಸ್ತುತ ಪುತ್ತೂರಿನ ವರ್ತಕ ಸಂಘದವರು ಪ್ರಧಾನ ರಸ್ತೆಯನ್ನು ಸ್ವಚ್ಛಗೊಳಿಸುವುದರೊಂದಿಗೆ, ರಸ್ತೆಬದಿಗಳಲ್ಲಿ ಮತ್ತೆ ತ್ಯಾಜ್ಯಗಳು ರಾಶಿಬೀಳದಂತೆ ತಡೆಗಟ್ಟುವ ಕೆಲವೊಂದು ಉಪಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಇಂತಹ ಉಪಕ್ರಮಗಳಲ್ಲಿ ಗ್ರಾಹಕರು ಯಾವುದೇ ವಸ್ತುವಿನ ಖರೀದಿಗೆ ಬರುವಾಗ ಬಟ್ಟೆಯ ಕೈಚೀಲವನ್ನು ತರಬೇಕು ಹಾಗೂ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಸೂಚಿಸುವ ಫಲಕಗಳನ್ನು ತಮ್ಮ ಮಳಿಗೆಗಳಲ್ಲಿ ಪ್ರದರ್ಶಿಸಬೇಕು. 


ತ್ಯಾಜ್ಯಗಳ ಉತ್ಪಾದನೆಯನ್ನೇ ಕಡಿಮೆ ಮಾಡಬಲ್ಲ ಇತರ ಅನೇಕ ವಿಧಾನಗಳಲ್ಲಿ ಒಂದು ವಿಧಾನ ಇಂತಿದೆ. ಇದೀಗ ಗ್ರಾಹಕರು ಖರೀದಿಸುವ ಅಕ್ಕಿಯನ್ನು ( ಮತ್ತಿತರ ವಸ್ತುಗಳನ್ನು ) ಹಲವಾರು ವರ್ಷಗಳಿಂದ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಮಾರಾಟಮಾಡಲಾಗುತ್ತಿದೆ. ೫, ೧೦, ೨೫ ಮತ್ತು ೫೦ ಕಿಲೋ ಚೀಲಗಳಲ್ಲಿ ಅಕ್ಕಿ ಮತ್ತಿತರ ಸರಕುಗಳನ್ನು ಸರಬರಾಜು ಮಾಡುವ ವಿವಿಧ ಸಂಸ್ಥೆಗಳು, ತಮ್ಮ ಉತ್ಪನ್ನವನ್ನು ಖರೀದಿಸಿದ ಗ್ರಾಹಕರು ಸುಸ್ಥಿತಿಯಲ್ಲಿರುವ ಚೀಲವನ್ನು ಮರಳಿ ವರ್ತಕರಿಗೆ ನೀಡಿದಲ್ಲಿ, ಅವರು ಖರೀದಿಸುವ ಮತ್ತೊಂದು ಚೀಲ ಅಕ್ಕಿಯ ಬೆಲೆಯಲ್ಲಿ ೫ ಅಥವಾ ೧೦ ರೂ.ಗಳ ರಿಯಾಯಿತಿಯನ್ನು ನೀಡಬೇಕಾಗುವುದು. ಇದೇ ರೀತಿಯಲ್ಲಿ ಇತರ ದಿನಬಳಕೆಯ ವಸ್ತುಗಳ ಖಾಲಿ ಚೀಲಗಳನ್ನುಗ್ರಾಹಕರಿಂದ ಮರಳಿಪಡೆದು ಮತ್ತೆ ಬಳಸಬಹುದಾಗಿದೆ.ಇದರಿಂದಾಗಿ ಈ ಪ್ಲಾಸ್ಟಿಕ್ ಚೀಲಗಳು ತ್ಯಾಜ್ಯಗಳ ರೂಪದಲ್ಲಿ ನಿರುಪಯುಕ್ತವೆನಿಸುವುದನ್ನು ತಡೆಗಟ್ಟಬಹುದಾಗಿದೆ. ಅದೇ ರೀತಿಯಲ್ಲಿ ಗ್ರಾಹಕರಿಗೆ ರೆಫ್ರಿಜರೇಟರ್ ಮಾರಾಟ ಮಾಡಿದ ವರ್ತಕರು ಇದನ್ನು ಗ್ರಾಹಕರ ಮನೆಗೆ ತಲುಪಿಸಿದ ಬಳಿಕ, ರೆಫ್ರಿಜರೇಟರ್ ಪ್ಯಾಕ್ ಮಾಡಿರುವ ಥರ್ಮೊಕೂಲ್, ಪ್ಲಾಸ್ಟಿಕ್ ಕವಚ ಮತ್ತು ರಟ್ಟಿನ ಪೆಟ್ಟಿಗೆಯನ್ನು ತಾವೇ ಮರಳಿ ಕೊಂಡೊಯ್ಯಬೇಕು. ಇದರಿಂದಾಗಿ ಈ ವಸ್ತುಗಳು ತ್ಯಾಜ್ಯಗಳ ರಾಶಿಯನ್ನು ಸೇರುವುದನ್ನು ತಡೆಗಟ್ಟಬಹುದಾಗಿದೆ.  

ಅಂತೆಯೇ ತ್ಯಾಜ್ಯ ಪ್ಲಾಸ್ಟಿಕ್ ಚೀಲಗಳ ಪ್ರಮಾಣವನ್ನು ನಿಯಂತ್ರಿಸಲು, ದಿನಬಳಕೆಯ ಪ್ರತಿಯೊಂದು ಸಾಮಾಗ್ರಿಗಳನ್ನು ಪ್ಲಾಸ್ಟಿಕ್  ಚೀಲಗಳಲ್ಲಿ ಕಟ್ಟಿ ಕೊಡುವುದನ್ನು ವರ್ತಕರು ನಿಲ್ಲಿಸಬೇಕಾಗುವುದು. ಏಕೆಂದರೆ ಆಲೂಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಮತ್ತಿತರ ಕೆಲ ಸಾಮಾಗ್ರಿಗಳನ್ನು ನೇರವಾಗಿ ಬಟ್ಟೆಯ ಚೀಲಗಳಲ್ಲಿ ಹಾಕಬಹುದಾಗಿದೆ ಹಾಗೂ ಅನ್ಯ ಕೆಲ ವಸ್ತುಗಳನ್ನು ಕಾಗದದಲ್ಲಿ ಕಟ್ಟಿಕೊಡುವುದು ಹಿತಕರವೆನಿಸಲಿದೆ. ಇದು ತರಕಾರಿ ಮತ್ತು ಹಣ್ಣು ಹಂಪಲುಗಳಿಗೂ ಅನ್ವಯಿಸುತ್ತದೆ.ಅದೇ ರೀತಿಯಲ್ಲಿ ಪ್ಲಾಸ್ಟಿಕ್ ಕೈಚೀಲಗಳನ್ನು ಕೇಳುವ ಗ್ರಾಹಕರಿಂದ ಪ್ರತಿಯೊಬ್ಬ ವರ್ತಕರು ಇದಕ್ಕಾಗಿ ನಿಗದಿತ ಶುಲ್ಕವನ್ನು ವಸೂಲು ಮಾಡಲು ಆರಂಭಿಸಿದಲ್ಲಿ, ಸ್ವಾಭಾವಿಕವಾಗಿಯೇ ಗ್ರಾಹಕರು ಬಟ್ಟೆಯ ಚೀಲವನ್ನು ತರುವ ಹವ್ಯಾಸವನ್ನು ರೂಢಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಕೇವಲ ಉದಾಹರಣೆಗಾಗಿ ನಮೂದಿಸಿರುವ ಈ ಉಪಕ್ರಮಗಳೊಂದಿಗೆ ಇನ್ನಿತರ ಉಪಯುಕ್ತ ಉಪಕ್ರಮಗಳನ್ನು ಅನುಸರಿಸುವ ಮೂಲಕ, ಪ್ರತಿಯೊಬ್ಬ ವರ್ತಕರು ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡಲು ನೆರವಾದಲ್ಲಿ, ನಾವಿಂದು ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ನಿಸ್ಸಂದೇಹವಾಗಿ ಕಡಿಮೆಮಾಡಬಹುದಾಗಿದೆ. ಹಾಗೂ ಪ್ರತಿಯೊಬ್ಬ ವರ್ತಕರು ಮತ್ತು ವಿಶೇಷವಾಗಿ ಗ್ರಾಹಕರು ಈ ವಿಚಾರದಲ್ಲಿ ಸಹಕರಿಸಿದರೆ,ಸ್ವಚ್ಛ ಪುತ್ತೂರು ಅಭಿಯಾನವು ಫಲಪ್ರದ ಎನಿಸುವುದರಲ್ಲಿ ಸಂದೇಹವಿಲ್ಲ.

ಪುರಸಭೆಯ ಪಾತ್ರ 

ಸುಮಾರು ೩೩ ಕಿ.ಮೀ. ವಿಸ್ತೀರ್ಣವಿರುವ ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯಗಳನ್ನು ಕಡ್ಡಾಯವಾಗಿ ಪ್ರತ್ಯೇಕಿಸಿ ಸಂಗ್ರಹಿಸುವ ಹೊಣೆಗಾರಿಕೆ ಪುರಸಭೆಯ ಮೇಲಿದೆ. ಇವುಗಳಲ್ಲಿ ಪುನರ್ ಬಳಕೆ ಅಥವಾ ಆವರ್ತನಗೊಳಿಸಲು ಸಾಧ್ಯವಿರುವ ತ್ಯಾಜ್ಯಗಳನ್ನು ಅದಕ್ಕಾಗಿಯೇ ವಿನಿಯೋಗಿಸಬೇಕಾಗಿದೆ. ಅದೇ ರೀತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆಗಳ ನಿರ್ಮಾಣದಲ್ಲಿ ಬಳಸುವ ತಂತ್ರಜ್ಞಾನವನ್ನು ಸ್ಥಳೀಯ ರಸ್ತೆಗಳ ನಿರ್ಮಾಣದಲ್ಲಿ ಬಳಸಿದಲ್ಲಿ, ನಿರ್ಮಾಣದ ವೆಚ್ಚ ಕಡಿಮೆ ಆಗುವುದರೊಂದಿಗೆ, ತ್ಯಾಜ್ಯಗಳ ಸುರಕ್ಷಿತ ವಿಲೇವಾರಿಯೂ ಆಗುವುದು. ಇದಕ್ಕೂ ಮಿಗಿಲಾಗಿ ದೇಶದ ಕೆಲ ರಾಜ್ಯಗಳು ಮತ್ತು ಅನೇಕ ಸ್ಥಳೀಯ ಸಂಸ್ಥೆಗಳು ಈಗಾಗಲೇ ಜಾರಿಗೊಳಿಸಿರುವ ಕಾನೂನಿನಂತೆ, ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನೇ ನಿಷೇಧಿಸಿದಲ್ಲಿ, ಕನಿಷ್ಠ ಪಕ್ಷ ಪ್ಲಾಸ್ಟಿಕ್ ತ್ಯಾಜ್ಯಗಳ ಹಾವಳಿಯೂ ನಿಶ್ಚಿತವಾಗಿ ಕಡಿಮೆಯಾಗುವುದು. 

ಅಂತಿಮವಾಗಿ ಹೇಳುವುದಾದಲ್ಲಿ ಎರಡು ಕೈಗಳು ಸೇರದೇ ಚಪ್ಪಾಳೆಯಾಗದು ಎನ್ನುವ ಮಾತಿನಂತೆ, ಪುರಸಭೆಯ ಸದಸ್ಯರು, ಅಧಿಕಾರಿಗಳು, ಸಿಬಂದಿಗಳು ಮತ್ತು ನಾಗರಿಕರು ಕೈಜೋಡಿಸದೇ, ತ್ಯಾಜ್ಯಗಳ ಸಮಸ್ಯೆ ಬಗೆಹರಿಯದು!.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೮-೧೦-೨೦೧೪ ರ ಸುದಿನ ಸಂಚಿಕೆಯಲ್ಲಿ ಪ್ರಕಟಿತ ಲೇಖನ.



Monday, October 27, 2014

INCREASING AIR POLLUTION........


 

 ವೃದ್ಧಿಸುತ್ತಿರುವ ವಾಯುಮಾಲಿನ್ಯ : ಹೆಚ್ಚುತ್ತಿದೆ ಅನಾರೋಗ್ಯ 

ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಇದೀಗ " ಸ್ವಚ್ಛ ಭಾರತ ಅಭಿಯಾನ " ದ ಅಂಗವಾಗಿ ಅಲ್ಲಲ್ಲಿ ರಾಶಿಬಿದ್ದಿರುವ ತ್ಯಾಜ್ಯಗಳಿಂದ ತುಂಬಿರುವ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮಗಳು ಜರಗುತ್ತಲೇ ಇವೆ. ಇದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆಯ ಸಮಸ್ಯೆಯನ್ನು ಪರಿಹರಿಸಲು ಶೌಚಾಲಯಗಳೇ ಇಲ್ಲದ ಮನೆಗಳಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಪ್ರಯತ್ನವೂ ನಡೆಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ನಮ್ಮ ದೇಶದ ಪ್ರತಿಯೊಂದು ನಗರ - ಪಟ್ಟಣಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ " ವಾಯು ಮಾಲಿನ್ಯ " ದ ಸಮಸ್ಯೆಯನ್ನು ನಿಯಂತ್ರಿಸುವತ್ತ ಯಾರೊಬ್ಬರೂ ಗಮನಹರಿಸಿದಂತಿಲ್ಲ. ಈ ಗಂಭೀರ ಸಮಸ್ಯೆಯನ್ನು ಸಮರೋಪಾದಿಯಲ್ಲಿ ನಿಯಂತ್ರಿಸದೆ ಇದ್ದಲ್ಲಿ, ದೇಶದ ಪ್ರಜೆಗಳು ಗಂಭೀರ ಹಾಗೂ ಮಾರಕ ವ್ಯಾಧಿಗಳಿಗೆ ಈಡಾಗುವುದರಲ್ಲಿ ಸಂದೇಹವಿಲ್ಲ. 

ವಾಯು ಮಾಲಿನ್ಯ 

ಭಾರತದ ಮಹಾನಗರಗಳನ್ನು ಜ್ಞಾಪಿಸಿದೊಡನೆ ಕಿಕ್ಕಿರಿದ ಜನ- ವಾಹನ ಸಂದಣಿಗಳೊಂದಿಗೆ, ತೀವ್ರ ಸ್ವರೂಪದ ವಾಯುಮಾಲಿನ್ಯದ ನೆನಪಾಗುವುದು ಸ್ವಾಭಾವಿಕ. ಕೆಲ ದಶಕಗಳ ಹಿಂದೆ ದೇಶದ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಈ ವಿಶಿಷ್ಟ ಸಮಸ್ಯೆಯು, ಇದೀಗ ತೀವ್ರ ಸಾಂಕ್ರಾಮಿಕ ವ್ಯಾಧಿಗಳಂತೆಯೇ ದೇಶದ ಅನ್ಯ ನಗರ- ಪಟ್ಟಣಗಳಿಗೂ ಹರಡಲಾರಂಭಿಸಿದೆ. ಇರುವೆಗಳ ಸಾಲಿನಂತೆ ಸಂಚರಿಸುವ ವಾಹನಗಳು ಉಗುಳುವ ಅಗಾಧ ಪ್ರಮಾಣದ ಹೊಗೆಯಿಂದಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯವು, ಅನೇಕ ವಿಧದ ಗಂಭೀರ ವ್ಯಾಧಿಗಳ ಸಂಭಾವ್ಯತೆಯನ್ನು ಹೆಚ್ಚಿಸುತ್ತಿದೆ. 

ಮನುಷ್ಯನು ಆರೋಗ್ಯದಿಂದ ಬದುಕಲು ಅತ್ಯವಶ್ಯಕವೆನಿಸುವ ಶುದ್ಧವಾದ ಗಾಳಿಯನ್ನು ಉಸಿರಾಡಲು, ನಮ್ಮ ದೇಶದ ಮಹಾನಗರಗಳಲ್ಲಿಂದು ಆಸ್ಪದವೇ ಇಲ್ಲದಂತಾಗಿದೆ. ಮನುಷ್ಯನಿಗೆ ಮಾರಕವೆನಿಸಬಲ್ಲ ಈ ಸಮಸ್ಯೆಗೆ, ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಇದಕ್ಕೆ ಅನುಗುಣವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗಳೂ ಪ್ರಮುಖ ಕಾರಣವೆನಿಸಿವೆ. ಇದಲ್ಲದೇ ಸಣ್ಣಪುಟ್ಟ ಹಾಗೂ ಬೃಹತ್ ಉದ್ದಿಮೆಗಳು ಮತ್ತು ಇತರ ವಾಣಿಜ್ಯ ಚಟುವಟಿಕೆಗಳಿಂದ ಸಂಭವಿಸುತ್ತಿರುವ ವಾಯುಮಾಲಿನ್ಯದ ಪ್ರಮಾಣವೂ ಸಾಕಷ್ಟು ವೃದ್ಧಿಸುತ್ತಿರುವುದರಿಂದ, ಜನಸಾಮಾನ್ಯರ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. 

ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚಿಗೆ ನಡೆಸಿದ್ದ ಅಧ್ಯಯನದಂತೆ, ಜಗತ್ತಿನ ಅತ್ಯಂತ ಪ್ರದೂಷಿತ ೨೦ ನಗರಗಳ ಯಾದಿಯಲ್ಲಿ ಅಗ್ರಸ್ಥಾನದಲ್ಲಿದ್ದ ಬೇಜಿಂಗ್ ನಗರವನ್ನು ಪದಚ್ಯುತಗೊಳಿಸಿ, ನಮ್ಮ ದೇಶದ ರಾಜಧಾನಿಯಾಗಿರುವ ದೆಹಲಿಯು ಈ ಸ್ಥಾನದಲ್ಲಿ ವಿರಾಜಮಾನವಾಗಿದೆ. ಇಷ್ಟು ಮಾತ್ರವಲ್ಲ, ಈ ೨೦ ನಗರಗಳಲ್ಲಿ ೧೩ ನಗರಗಳು ಭಾರತದಲ್ಲೇ ಇವೆ!. 

ದ್ವಿಚಕ್ರ ವಾಹನಗಳೇ ಕಾರಣ 

ದೇಶದಲ್ಲಿ ವಾಯುಮಾಲಿನ್ಯದ ಸಮಸ್ಯೆ ಅತಿಯಾಗುತ್ತಿರಲು ಡೀಸೆಲ್ ಇಂಧನವನ್ನು ಬಳಸಿ ಅತಿಯಾಗಿ ಹೊಗೆಯನ್ನು ಉಗುಳುವ ಸಾರಿಗೆ ವಾಹನಗಳೇ ಕಾರಣವೆಂದು ಬಹುತೇಕ ಜನರು ನಂಬಿದ್ದಾರೆ. ಆದರೆ ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯು ಕೆಲ ವರ್ಷಗಳ ಹಿಂದೆಯೇ ನಡೆಸಿದ್ದ ಅಧ್ಯಯನದಿಂದ ತಿಳಿದುಬಂದಂತೆ, ಈ ಸಮಸ್ಯೆ ಉಲ್ಬಣಿಸಲು ಮಿತಿಮೀರಿದ ದ್ವಿಚಕ್ರ ವಾಹನಗಳೇ ಕಾರಣವೆಂದು ತಿಳಿದುಬಂದಿತ್ತು!. 

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಪ್ರದೂಷಣೆ, ವಾಯುಮಾಲಿನ್ಯ ಮತ್ತು ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವೆನಿಸುತ್ತಿರುವ ಹಸಿರುಮನೆ ಅನಿಲಗಳ ಹೊರಸೂಸುವಿಕೆಯ ಪ್ರಮಾಣ ಮತ್ತು ಕಾರಣಗಳನ್ನು ಪತ್ತೆಹಚ್ಚುವ ಸಲುವಾಗಿ ಈ ಅಧ್ಯಯನವನ್ನು ನಡೆಸಿತ್ತು. ಎನ್ಜೆನ್ ಗ್ಲೋಬಲ್ ಸೊಲ್ಯೂಶನ್ಸ್ ಪ್ರೈವೇಟ್ ಲಿ. ಎನ್ನುವ ಸಂಸ್ಥೆಯು ರಾಜ್ಯದ ಆಯ್ದ ನಗರಗಳಲ್ಲಿ ನಡೆಸಿದ್ದ ಅಧ್ಯಯನದಿಂದಾಗಿ, ವಾಯುಮಾಲಿನ್ಯದ ಸಮಸ್ಯೆ ಉಲ್ಬಣಿಸಲು ದ್ವಿಚಕ್ರ ವಾಹನಗಳೇ ಕಾರಣವೆಂದು ತಿಳಿದುಬಂದಿತ್ತು. 

ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ನಡೆಸಿದ್ದ ಈ ಅಧ್ಯಯನ ಮೂಲಕ ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮೊನೊಕ್ಸೈಡ್ ,ಸಲ್ಫರ್ ಡೈ ಆಕ್ಸೈಡ್, ಆಕ್ಸೈಡ್ ಆಫ್ ನೈಟ್ರೋಜೆನ್ ಮುಂತಾದ ಹಸಿರುಮನೆ ಅನಿಲಗಳ ಹೊರಸೂಸುವಿಕೆಯ ಪ್ರಮಾಣ ಮತ್ತು ಕಾರಣಗಳನ್ನು, ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸಿ ಪತ್ತೆಹಚ್ಚಲಾಗಿತ್ತು. 

ದುಷ್ಪರಿಣಾಮಗಳು 

ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿ ಎನಿಸುವ ಹಸಿರುಮನೆ ಅನಿಲಗಳ ಸೇವನೆಯಿಂದ ಕಣ್ಣುಗಳಲ್ಲಿ ಉರಿ, ತಲೆನೋವು, ವಾಕರಿಕೆ, ಶ್ವಾಸಾಂಗಗಳ ಕಾಯಿಲೆಗಳು, ಶ್ವಾಸಕೋಶಗಳ ಉರಿಯೂತ, ಹೃದ್ರೋಗಗಳ ಉಲ್ಬಣಿಸುವಿಕೆ, ಕೆಲವಿಧದ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳು ಉದ್ಭವಿಸುವ ಸಾಧ್ಯತೆಗಳಿವೆ. 


ಈ ಅಧ್ಯಯನದ ಅಂಗವಾಗಿ ಮೇಲೆ ನಮೂದಿಸಿದ ಏಳು ಜಿಲ್ಲೆಗಳಲ್ಲಿ ನೊಂದಾಯಿಸಲ್ಪತ್ತಿರುವ ವಾಹನಗಳ ಸಂಖ್ಯೆ ಮತ್ತು ವೈವಿಧ್ಯತೆಗಳನ್ನು ಪರಿಶೀಲಿಸಿದಾಗ, ದ್ವಿಚಕ್ರ ವಾಹನಗಳ ಸಂಖ್ಯೆ ಮಿತಿಮೀರಿ ಹೆಚ್ಚಿರುವುದು ಪತ್ತೆಯಾಗಿತ್ತು. ಪ್ರಾಯಶಃ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಅಸಮರ್ಪಕವಾಗಿರುವುದೇ ಇದಕ್ಕೆ ಕಾರಣವಾಗಿರಲೂಬಹುದು.ಆದರೆ ಬಲ್ಲವರು ಹೇಳುವಂತೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭಾರತದ ಪ್ರಜೆಗಳ ಆದಾಯದ ಪ್ರಮಾಣವೂ ಹೆಚ್ಚುತ್ತಿರುವುದರಿಂದಾಗಿ, ಸ್ವಂತ ಉಪಯೋಗಕ್ಕಾಗಿ ವಾಹನಗಳನ್ನು ಖರೀದಿಸಿ ಬಳಸುವವರ ಸಂಖ್ಯೆಯೂ ಸ್ವಾಭಾವಿಕವಾಗಿಯೇ ಹೆಚ್ಚುತ್ತಿದೆ. 

೨೦೦೫ ರಲ್ಲಿ ರಾಜ್ಯ ಸರ್ಕಾರವೇ ನಡೆಸಿದ್ದ ಸಮೀಕ್ಷೆಯೊಂದರಂತೆ, ಕರ್ನಾಟಕದಲ್ಲಿರುವ ಒಟ್ಟು ಕುಟುಂಬಗಳ ಸಂಖ್ಯೆಯು ೧.೨೪ ಕೋಟಿ ಆಗಿತ್ತು. ಇವುಗಳಲ್ಲಿ ಬಡತನದ ರೇಖೆಗಿಂತ ಕೆಳಗಿದ್ದ ಕುಟುಂಬಗಳ ಸಂಖ್ಯೆ ೧.೦೬ ಯಾಗಿತ್ತು. ಆದರೆ ರಾಜ್ಯದ ಅಧಿಕತಮ ಕುಟುಂಬಗಳ ಸದಸ್ಯರ ಬಳಿ ಒಂದು ಅಥವಾ ಅದಕ್ಕೂ ಅಧಿಕ ಸಂಖ್ಯೆಯ ದ್ವಿಚಕ್ರ ವಾಹನಗಳಿದ್ದವು!. ಇದೀಗ ಸುಮಾರು ಹತ್ತು ವರ್ಷಗಳ ಬಳಿಕ ಈ ಸಂಖ್ಯೆಯು ಹಲವಾರು ಪಟ್ಟು ಹೆಚ್ಚಾಗಿರುವುದರಲ್ಲಿ ಸಂದೇಹವಿಲ್ಲ.  

ರಾಜ್ಯದ ಪ್ರತಿಯೊಂದು ನಗರ- ಪಟ್ಟಣಗಳಲ್ಲೂ ಸಂಭವಿಸುತ್ತಿರುವ ವಾಯುಮಾಲಿನ್ಯ- ಪರಿಸರ ಪ್ರದೂಷಣೆಗಳಿಗೆ, ಇತರ ಕಾರಣಗಳೊಂದಿಗೆ ಹೆಚ್ಚುತ್ತಿರುವ ದ್ವಿಚಕ್ರ ಮತ್ತು ಅನ್ಯ ವರ್ಗಗಳ ವಾಹನಗಳೂ ಕಾರಣವೆನಿಸುತ್ತಿವೆ ಎನ್ನಲು ಇದಕ್ಕಿಂತ ಮಿಗಿಲಾದ ಸಾಕ್ಷಿ ಬೇರೊಂದಿಲ್ಲ. 

ಕೊನೆಯ ಮಾತು 

ಪ್ರಸ್ತುತ ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ವಾಯುಮಾಲಿನ್ಯದ ಸಮಸ್ಯೆಯನ್ನೂ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಇದಕಾಗಿ ಸೂಕ್ತ ಕಾಯಿದೆಗಳನ್ನು ರೂಪಿಸಿ, ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಇದಕ್ಕೆ ತಪ್ಪಿದಲ್ಲಿ ನಮ್ಮ ಮುಂದಿನ ಸಂತತಿಯು ವಾಯುಮಾಲಿನ್ಯದ ದುಷ್ಪರಿಣಾಮಗಳಿಂದ ಗಂಭೀರ - ಮಾರಕ ವ್ಯಾಧಿಗಳಿಗೆ ಈಡಾಗುವುದರಲ್ಲಿ ಸಂದೇಹವಿಲ್ಲ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 



Saturday, October 25, 2014

TENDER COCONUT - DESTROYS BACTERIA'S



  ಎಳನೀರಿನಲ್ಲಿದೆ ರೋಗಾಣುನಾಶಕ ಗುಣ !

ಎಳನೀರು ಅರ್ಥಾತ್ ಸೀಯಾಳದ ಸಿಹಿಯಾದ ನೀರನ್ನು ಮೆಚ್ಚಿ ಸವಿಯದವರು ಈ ಜಗತ್ತಿನಲ್ಲೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಅನಾರೋಗ್ಯ ಪೀಡಿತರೊಂದಿಗೆ ಆರೋಗ್ಯವಂತರೂ ಗುಟುಕರಿಸುವ ಈ ಎಳನೀರಿನಲ್ಲಿ, ರೋಗಾಣುನಾಶಕ ಗುಣಗಳಿರುವುದು ನಿಮಗೂ ತಿಳಿದಿರಲಾರದು. ಈ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.

ನೈಸರ್ಗಿಕ ಪೇಯ 

ಬೇಸಗೆಯ ದಿನಗಳಲ್ಲಿ ಬಾಯಾರಿದ ಜನರು ತಮ್ಮ ದಾಹವನ್ನು ನೀಗಿಸಲು ಕುಡಿಯುವ ಎಳನೀರಿನಲ್ಲಿ ಔಷಧೀಯ ಗುಣಗಳು ಇರುವುದನ್ನು, ವೈದ್ಯಕೀಯ ಸಂಶೋಧಕರು ಇತ್ತೀಚಿಗೆ ಪತ್ತೆಹಚ್ಚಿದ್ದಾರೆ. ಆದರೆ ಸಹಸ್ರಾರು ವರ್ಷಗಳ ಹಿಂದೆ ಬರೆದಿದ್ದ ಆಯುರ್ವೇದ ಶಾಸ್ತ್ರದ ಸಂಹಿತೆಗಳಲ್ಲಿ, ಅನಾರೋಗ್ಯ ಪೀಡಿತರಿಗೆ ಸಂಜೀವಿನಿ ಎನಿಸಬಲ್ಲ ಎಳನೀರಿನ ಬಗ್ಗೆ ಸಾಕಷ್ಟು ಮಾಹಿತಿಗಳಿವೆ. ಪ್ರಾಯಶಃ ಇದೇ ಕಾರಣದಿಂದಾಗಿ ನಾಟಿ ಮದ್ದು ಮತ್ತು ಮಂತ್ರ- ತಂತ್ರಗಳ ಚಿಕಿತ್ಸೆಯನ್ನು ಪ್ರಯೋಗಿಸುವ ಹಳ್ಳಿ ವೈದ್ಯರು, ಇತರ ಔಷದಗಳೊಂದಿಗೆ ಎಳನೀರನ್ನೂ ತಪ್ಪದೇ ಬಳಸುತ್ತಾರೆ. 

ಏಷ್ಯಾ ಖಂಡ ಮತ್ತು ಲ್ಯಾಟಿನ್ ಅಮೆರಿಕ ಪ್ರದೇಶಗಳಲ್ಲಿ ಅತ್ಯಂತ ಜನಪ್ರಿಯ ಪೇಯವೆನಿಸಿರುವ ಸೀಯಾಳದ ನೀರು ಸಿಹಿಯಾಗಿರುವುದರೊಂದಿಗೆ, ಗಣನೀಯ ಪ್ರಮಾಣದ ಪೋಷಕಾಂಶಗಳನ್ನೂ ಹೊಂದಿದೆ. ದಕ್ಷಿಣ ಕನ್ನಡದ ಜನರು ಸಾಮಾನ್ಯವಾಗಿ ಬೇಸಗೆಯ ದಿನಗಳಲ್ಲಿ ಉದ್ಭವಿಸುವ ಹಾಗೂ " ಉಷ್ಣ " ಎಂದು ಹೆಸರಿಸಿರುವ ವಿಶಿಷ್ಟ ತೊಂದರೆಯ ಪರಿಹಾರಕ್ಕಾಗಿ ಬಳಸುವುದು ಎಳನೀರನ್ನೇ ಎನ್ನುವುದು ನಿಮಗೂ ತಿಳಿದಿರಲೇಬೇಕು. ಅಂತೆಯೇ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳು ಬಾಧಿಸಿದ ಸಂದರ್ಭಗಳಲ್ಲಿ, ವೈದ್ಯರ ಸಲಹೆಯನ್ನು ಪಡೆಯುವ ಮುನ್ನ ಎಳನೀರನ್ನು ಸೇವಿಸುವುದು ಅನೇಕ ಜನರ ನೆಚ್ಚಿನ ಹವ್ಯಾಸವೂ ಹೌದು. 

ಆರೋಗ್ಯಕರ - ಸುರಕ್ಷಿತ 

ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ವಿಧದ ಕೃತಕ ರಾಸಾಯನಿಕಗಳನ್ನು ಬೆರೆಸಿ ತಯಾರಿಸಿದ ಲಘುಪಾನೀಯಗಳಿಗಿಂತ ಸುರಕ್ಷಿತ ಮತ್ತು ಆರೋಗ್ಯಕರ ಎನಿಸುವ ಎಳನೀರಿಗೆ, ಬಹುರಾಷ್ಟ್ರೀಯ ಸಂಸ್ಥೆಗಳು ಉತ್ಪಾದಿಸಿ ಮಾರಾಟ ಮಾಡುವ ಕೋಲಾಗಳು ನಿಶ್ಚಿತವಾಗಿಯೂ ಸಾಟಿಯಲ್ಲ. ಲಘುಪಾನೀಯಗಳ ಅತಿಯಾದ ಸೇವನೆಯು ಅನಾರೋಗ್ಯಕ್ಕೆ ಕಾರಣವೆನಿಸುವುದಾದರೂ, ಎಳನೀರನ್ನು ತುಸು ಅಧಿಕ ಪ್ರಮಾಣದಲ್ಲಿ ಸೇವಿಸಿದರೂ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳೇ ಇಲ್ಲ. 

ಅಬಾಲವೃದ್ಧರೆಲ್ಲರೂ ಮೆಚ್ಚಿ ಸವಿಯುವ ಎಳನೀರು ಬಾಯಾರಿಕೆಯನ್ನು ನೀಗಿಸುವುದರಿಂದಿಗೆ, ಬಸವಳಿದ ಶರೀರಕ್ಕೆ ಒಂದಿಷ್ಟು ಹುಮ್ಮಸ್ಸನ್ನೂ ನೀಡುತ್ತದೆ. ವೈವಿಧ್ಯಮಯ ಜೀವಸತ್ವಗಳು, ಖನಿಜಗಳು, ಪ್ರೋಟೀನ್,ಪೊಟಾಸಿಯಂ, ಸೋಡಿಯಂ, ಅಲ್ಪ ಪ್ರಮಾಣದ ಕಾರ್ಬೊಹೈಡ್ರೇಟ್ ಹಾಗೂ ಕ್ಯಾಲರಿಗಳು ಮತ್ತು ಅನ್ಯ ಕೆಲ ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ, ಇದನ್ನು ನೈಸರ್ಗಿಕ ಶಕ್ತಿವರ್ಧಕ ಮತ್ತು ಕ್ರೀಡಾ ಪೇಯವೆಂದೂ ಪರಿಗಣಿಸಲಾಗಿದೆ. ಇದಲ್ಲದೇ ಜ್ವರ, ವಾಂತಿ, ಭೇದಿ, ನಿರ್ಜಲೀಕೃತ ಸ್ಥಿತ ಮತ್ತು ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ಜೀವರಕ್ಷಕ ಎನಿಸುತ್ತದೆ. 

ಈ ರೀತಿಯಲ್ಲಿ ಮನುಷ್ಯನ ಆರೋಗ್ಯಕ್ಕೆ ಹಿತಕರವೆನಿಸುವ ಎಳನೀರಿನಲ್ಲಿ  ಕೆಲವಿಧದ ಅಪಾಯಕಾರಿ ರೋಗಾಣುಗಳನ್ನು ನಾಶಪಡಿಸುವ ಶಕ್ತ ಇರುವುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. 

ಪ್ರಬಲವಾಗುತ್ತಿರುವ ರೋಗಾಣುಗಳು 

ಮನುಷ್ಯನನ್ನು ಬಾಧಿಸುವ ರೋಗಕಾರಕ ರೋಗಾಣುಗಳು ಕಾಲಕ್ರಮೇಣ ಪರಿವರ್ತನೆಗೊಂಡು, ಇನ್ನಷ್ಟು ಪ್ರಬಲಗೊಳ್ಳುತ್ತಿರುವುದರೊಂದಿಗೆ ಜೀವನಿರೋಧಕ ಔಷದಗಳಿಗೆ ಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಳ್ಳಲು ಯಶಸ್ವಿಯಾಗುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ವೈದ್ಯಕೀಯ ಸಂಶೋಧಕರು ನಮ್ಮ ಶರೀರಕ್ಕೆ ಮೂಲ ಪ್ರತಿರೋಧಕ ಶಕ್ತಿಯನ್ನು ಒದಗಿಸುವ ಪ್ರೋಟೀನ್ ಗಳತ್ತ ತಮ್ಮ ಗಮನ ಹರಿಸಿದ್ದಾರೆ. ಏಕೆಂದರೆ ಮನುಷ್ಯನ ಶರೀರದ ಮೇಲೆ ಬ್ಯಾಕ್ಟೀರಿಯಾಗಳು ದಾಳಿಮಾಡಿದಾಗ, ಪ್ರತಿರೋಧಕ ಜೀವಕಣಗಳು ಬಿಡುಗಡೆ ಮಾಡುವ ಪ್ರತಿಕಾಯಗಳು ಪ್ರೋಟೀನ್ ನಿಂದಲೇ ನಿರ್ಮಿತವಾಗಿರುತ್ತವೆ. 

ಜಗತ್ತಿನಾದ್ಯಂತ ಅನೇಕ ಸಂಶೋಧಕರು ವಿವಿಧ ಸಸ್ಯಗಳ ಬೇರು, ಗೆಡ್ಡೆ, ಎಲೆ, ಹೂ ಮತ್ತು ಬೀಜಗಳಿಂದ ಸೂಕ್ಷ್ಮಾಣುಜೀವಿ ವಿರೋಧಿ ಪ್ರೋಟೀನ್ ಗಳನ್ನು ಯಶಸ್ವಿಯಾಗಿ ಪ್ರತ್ಯೇಕಿಸಿದ್ದಾರೆ. ಇದೇ ರೀತಿಯಲ್ಲಿ ಎಳನೀರಿನಲ್ಲಿರುವ ಔಷಧೀಯ ಗುಣಗಳನ್ನು ಅರಿತ ಪಶ್ಚಿಮ ಬಂಗಾಳ ಮತ್ತು ಬ್ರೆಜಿಲ್ ದೇಶದ ಸಂಶೋಧಕರು, ಇದರ ಸೂಕ್ಷ್ಮಾಣುಜೀವಿ ವಿರೋಧಿ ಗುಣಗಳನ್ನು ಅಧ್ಯಯನ ಮಾಡಲು ನಿರ್ಧರಿಸಿದ್ದರು. ಈ ಪ್ರಯೋಗದ ಅಂಗವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಿದ್ದ ಸೀಯಾಳದ ನೀರನ್ನು ಶುದ್ಧೀಕರಿಸಿ, ಮೂರು ಪಾಲುಗಳನ್ನಾಗಿ ವಿಂಗಡಿಸಿದ ಬಳಿಕ, ನಾಲ್ಕು ವಿಧದ ಬ್ಯಾಕ್ಟೀರಿಯಾ ತಳಿಗಳ ಮೇಲೆ ಪ್ರಯೋಗಿಸಲಾಗಿತ್ತು. ತತ್ಪರಿಣಾಮವಾಗಿ ಎಸ್ಕರೇಶಿಯಾ ಕೋಲೈ, ಸ್ಟ್ರೆಪ್ಟೋಕಾಕಸ್ ಆರಿಯಸ್, ಬ್ಯಾಸಿಲಸ್ ಸಬ್ಟಿಲಿಸ್ ಮತ್ತು ಸುಡೋಮೊನಾಸ್ ಎರುಜಿನೋಸ್ ರೋಗಾಣುಗಳನ್ನು ಮಣಿಸಲು ಸೀಯಾಳದ ನೀರು ಅತ್ಯಂತ ಪರಿಣಾಮಕಾರಿ ಎಂದು ತಿಳಿದುಬಂದಿತ್ತು. 

ಈ ರೀತಿಯಲ್ಲಿ ಮನುಷ್ಯನನ್ನು ಪೀಡಿಸಬಲ್ಲ ಅಪಾಯಕಾರಿ ರೋಗಾಣುಗಳ ವಿರುದ್ಧ ಹೋರಾಡಲು ಅತ್ಯಂತ ಪರಿಣಾಮಕಾರಿ ಎನಿಸಿರುವ ಎಳನೀರಿನಲ್ಲಿರುವ ಔಷಧೀಯ ಅಂಶಗಳು, ಭವಿಷ್ಯದಲ್ಲಿ ತಯಾರಾಗಲಿರುವ ಜೀವನಿರೋಧಕ ಔಷದಗಳ ತಯಾರಿಕೆಯಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸಲಿದೆ. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ೨೮-೦೬-೨೦೦೯ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. 


Friday, October 24, 2014

BREAST CANCER AWARENESS MONTH



 ಸ್ತನ ಕ್ಯಾನ್ಸರ್ : ಅರಿವು ಮೂಡಿಸುವ ಮಾಸ ಅಕ್ಟೋಬರ್ 

ಕೇವಲ ಮಧ್ಯವಯಸ್ಸನ್ನು ಮೀರಿದ ಮಹಿಳೆಯರನ್ನು ಮಾತ್ರ ಬಾಧಿಸುವ ವ್ಯಾಧಿಯೆಂದು ಅನೇಕ ಭಾರತೀಯರು ಇಂದಿಗೂ ನಂಬಿರುವ ಸ್ತನಗಳ ಕ್ಯಾನ್ಸರ್ ವ್ಯಾಧಿಯು, ಹದಿಹರೆಯದ ಹುಡುಗಿಯರು ಮತ್ತು ತರುಣಿಯರನ್ನೂ ಪೀಡಿಸಬಲ್ಲದು. ವಿಶೇಷವೆಂದರೆ ಈ ವ್ಯಾಧಿಯು ಕೇವಲ ಮಹಿಳೆಯರನ್ನು ಮಾತ್ರವಲ್ಲ, ಅತ್ಯಲ್ಪ ಪ್ರಮಾಣದ ಪುರುಷರನ್ನೂ ಬಾಧಿಸಬಲ್ಲದು ಎಂದು ನಿಮಗೂ ತಿಳಿದಿರಲಾರದು. ಈ ವಿಶಿಷ್ಟ ವ್ಯಾಧಿಯ ಬಗ್ಗೆ ನೀವು ತಿಳಿದಿರಲೇಬೇಕಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಗ್ರಸ್ಥಾನ 

ಜಾಗತಿಕ ಮಟ್ಟದಲ್ಲಿ ಮಹಿಳೆಯರಲ್ಲಿ ಪತ್ತೆಯಾಗುತ್ತಿರುವ ವೈವಿಧ್ಯಮಯ ಕ್ಯಾನ್ಸರ್ ಗಳಲ್ಲಿ ಸ್ತನ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ಈ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚುವುದರೊಂದಿಗೆ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ಇದರ ಮಾರಕತೆಯನ್ನು ನಿಶ್ಚಿತವಾಗಿಯೂ ನಿಯಂತ್ರಿಸಬಹುದಾಗಿದೆ. ಈ ಸಂದೇಶದೊಂದಿಗೆ, ಈ ವ್ಯಾಧಿಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವರ್ಷಂಪ್ರತಿ ಅಕ್ಟೋಬರ್ ತಿಂಗಳನ್ನು " ಗುಲಾಬಿ ಮಾಸ " ವನ್ನಾಗಿ ಆಚರಿಸಲಾಗುತ್ತದೆ. 

ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಬಗ್ಗೆ ನಿಖರವಾದ ಅಂಕಿಅಂಶಗಳು ಲಭ್ಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿರುವ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಇಂತಹ ಮಾಹಿತಿಯನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ಅವಶ್ಯಕ ವಿವರಗಳನ್ನು ದಾಖಲಿಸಿಕೊಳ್ಳುವ ಪದ್ದತಿಯು ಅನುಷ್ಠಾನಗೊಂಡಿಲ್ಲ. ಆದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ಅಭಿಪ್ರಾಯದಂತೆ, ಭಾರತದ ಪ್ರತಿ ೨೨ ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ ನಿಂದ ಪೀಡಿತರಾಗುತ್ತಿದ್ದಾರೆ. ಮಹಿಳೆಯರ ವಯಸ್ಸು ಹೆಚ್ಚಾದಂತೆಯೇ, ಇದರ ಸಂಭಾವ್ಯತೆಯೂ ಹೆಚ್ಚುತ್ತದೆ. 

ಕಾರಣವೇನು?

ಸ್ತನಗಳ ಕ್ಯಾನ್ಸರ್ ಉದ್ಭವಿಸಲು ನಿಖರವಾದ ಹಾಗೂ ನಿರ್ದಿಷ್ಟವಾದ ಕಾರಣಗಳು ಏನೆಂದು ಹೇಳಲಾಗದು. ಆದರೆ ಈ ವ್ಯಾಧಿಯ ಸಂಭಾವ್ಯತೆಗೆ ಸಂಬಂಧಿಸಿದಂತೆ ಕೆಲವೊಂದು ಅಪಾಯಕಾರಿ ಅಂಶಗಳು ಇಂತಿವೆ. ಇವುಗಳಲ್ಲಿ ಮೇಲೆ ನಮೂದಿಸಿದಂತೆ ಲಿಂಗ ಮತ್ತು ವಯಸ್ಸು, ೧೨ ವರ್ಷ ವಯಸ್ಸಿಗೆ ಮುನ್ನ ಪುಷ್ಪವತಿಯರಾಗಿದ್ದ ಬಾಲಕಿಯರು, ೫೫ ವರ್ಷ ವಯಸ್ಸಿನ ಬಳಿಕ ಋತುಬಂಧವಾದ ಸ್ತ್ರೀಯರು, ಅವಿವಾಹಿತರು, ಸಂತಾನ ಪ್ರಾಪ್ತಿಯಾಗದವರು, ೪೦ ವರ್ಷ ವಯಸ್ಸಿನ ಬಳಿಕ ಮಕ್ಕಳನ್ನು ಹೆತ್ತವರು, ಕಂದನಿಗೆ ತನ್ನ ಮೊಲೆಹಾಲನ್ನು ಊಡಿಸದವರು, ಗರ್ಭನಿರೋಧಕ ಔಷದಗಳನ್ನು ಸೇವಿಸುತ್ತಿದ್ದ ಮತ್ತು ಸೇವಿಸುತ್ತಿರುವವರು, ಅನ್ಯ ಕಾರಣಗಳಿಗಾಗಿ ಹಾರ್ಮೋನ್ ಯುಕ್ತ ಔಷದಗಳನ್ನು ಸೇವಿಸುವ ಮಹಿಳೆಯರು ಮತ್ತು ಸ್ತನ ಕ್ಯಾನ್ಸರ್ ಪೀಡಿತರ ಸಮೀಪದ ಸಂಬಂಧಿಗಳು ಈ ವ್ಯಾಧಿಗೆ ತುತ್ತಾಗುವ ಸಾಧ್ಯತೆಗಳಿವೆ. ಇದಲ್ಲದೆ ಅನುವಂಶಿಕತೆ ಮತ್ತು ಪರಿವರ್ತಿತ ಹಾಗೂ ಅಸಾಮಾನ್ಯ ವಂಶವಾಹಿನಿಗಳ ಇರುವಿಕೆ, ಅಧಿಕ ತೂಕ ಹಾಗೂ ಅತಿ ಬೊಜ್ಜು, ಅತಿಯಾದ ಧೂಮ ಹಾಗೂ ಮದ್ಯಪಾನ ಮತ್ತು ನಿರುಪಯುಕ್ತ ಆಹಾರಗಳನ್ನು ( ಜಂಕ್ ಫುಡ್ ) ಅತಿಯಾಗಿ ಸೇವಿಸುವ ಹವ್ಯಾಸ ಇರುವವರಲ್ಲೂ, ಈ ವ್ಯಾಧಿ ತಲೆದೋರುವ ಸಾಧ್ಯತೆಗಳು ಹೆಚ್ಚಿವೆ. 

ಪ್ರಸ್ತುತ ಭಾರತದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಅಧಿಕ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಗ್ರಾಮೀಣ ಜನರ ಅಜ್ಞಾನ, ವಿದ್ಯಾವಂತರ ಲಜ್ಜೆ ಮತ್ತು ತಮ್ಮ ಶಾರೀರಿಕ ಆರೋಗ್ಯದ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಥವಾ ಮುಚ್ಚಿಡುವ ಹವ್ಯಾಸಗಳಿಂದಾಗಿ, ಗಣನೀಯ ಪ್ರಮಾಣದ ಪ್ರಕರಣಗಳು ವೈದ್ಯರ ಗಮನಕ್ಕೆ ಬರುವುದೇ ಇಲ್ಲ!. 

ಪ್ರಾಯಶಃ ಇಂತಹ ಕಾರಣಗಳಿಂದಾಗಿಯೇ ಬಹುತೇಕ ಮಹಿಳೆಯರು ತಮ್ಮ ಸ್ತನಗಳಲ್ಲಿ ಪುಟ್ಟ ಹುಣಸೆ ಬೀಜದಷ್ಟು ಗಾತ್ರದ ಗೆಡ್ಡೆಯೊಂದು ಇರುವುದನ್ನು ( ಪ್ರಾಥಮಿಕ ಹಂತ ) ಅರಿತರೂ, ವೈದ್ಯರನ್ನು ಸಂದರ್ಶಿಸುವುದಿಲ್ಲ. ಈ ಗೆಡ್ಡೆಯು ತುಸು ದೊಡ್ಡದಾದ ಬಳಿಕ ( ತುಸು ವೃದ್ಧಿಸಿದ ಹಂತ ) ಮತ್ತು ಇನ್ನು ಕೆಲವರು ಈ ಗೆಡ್ಡೆಯಲ್ಲಿ ತೀವ್ರ ನೋವು ಆರಂಭಗೊಂಡ ಬಳಿಕ ( ಮೂರನೇ ಹಂತ ) ವೈದ್ಯರನ್ನು ಭೇಟಿಯಾಗುತ್ತಾರೆ. ತತ್ಪರಿಣಾಮವಾಗಿ ಈ ರೋಗಿಗಳು ಸಾಕಷ್ಟು ಶಾರೀರಿಕ ಹಾಗೂ ಮಾನಸಿಕ ಯಾತನೆಗಳೊಂದಿಗೆ, ಆರ್ಥಿಕ ಸಂಕಷ್ಟಗಳಿಗೂ ಒಳಗಾಗುತ್ತಾರೆ. 

ಎಲ್ಲವೂ ಕ್ಯಾನ್ಸರ್ ಅಲ್ಲ 

ಅನೇಕ ವಿದ್ಯಾವಂತರೂ ಸ್ತನಗಳಲ್ಲಿ ಉದ್ಭವಿಸುವ ಗೆಡ್ಡೆಗಳೆಲ್ಲವೂ ಕ್ಯಾನ್ಸರ್ ಎಂದೇ ನಂಬುತ್ತಾರೆ. ಆದರೆ ನಿಜ ಹೇಳಬೇಕಿದ್ದಲ್ಲಿ, ಇವುಗಳಲ್ಲಿ ಶೇ. ೭೫ ರಷ್ಟು ಗೆಡ್ಡೆಗಳು ನಿರಪಾಯಕಾರಿಗಳೇ ಆಗಿರುತ್ತವೆ. ಆದುದರಿಂದ ಯಾವುದೇ ಕಾರಣಕ್ಕೂ ಇಂತಹ ಗೆಡ್ಡೆಗಳು ಉದ್ಭವಿಸಿದಲ್ಲಿ, ಇದನ್ನು ಮುಚ್ಚಿಡುವ ಪ್ರಯತ್ನವು " ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ " ದಂತಾಗುವುದು ಎನ್ನುವುದನ್ನು ಮರೆಯದಿರಿ. ಈ ಮಾಹಿತಿಯನ್ನು ನಿಮ್ಮ ಬಂಧುಮಿತ್ರರೊಂದಿಗೆ ಹಂಚಿಕೊಳ್ಳುವ ಮೂಲಕ " ಗುಲಾಬಿ ಮಾಸ " ದ ಆಚರಣೆಯಲ್ಲಿ ನೀವೂ ಸಕ್ರಿಯವಾಗಿ ಪಾಲ್ಗೊಳ್ಳಿರಿ. ತನ್ಮೂಲಕ ಸ್ತನ ಕ್ಯಾನ್ಸರ್ ನ ಮಾರಕತೆಯನ್ನು ತಡೆಗಟ್ಟಲು ಸಹಕರಿಸಿ. 

ಸ್ವಯಂ ಸ್ತನ ಪರೀಕ್ಷೆ 

ಮಾರಕವೆನಿಸಬಲ್ಲ ಸ್ತನ ಕ್ಯಾನ್ಸರ್ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸ್ವಯಂ ಸ್ತನ ಪರೀಕ್ಷೆಯು ಅತ್ಯಂತ ಸರಳ ಹಾಗೂ ಸುಲಭ ವಿಧಾನವೂ ಹೌದು. ಹದಿಹರೆಯದ ಹುಡುಗಿಯರಿಂದ ಆರಂಭಿಸಿ, ವಯೋವೃದ್ಧ ಮಹಿಳೆಯರ ತನಕ ಪ್ರತಿಯೊಬ್ಬರೂ ಈ ಸರಳ ವಿದಾನವನ್ನು ತಮ್ಮ ಪರಿಚಿತ ವೈದ್ಯರಿಂದ ಕೇಳಿ ತಿಳಿದುಕೊಳ್ಳಬಹುದಾಗಿದೆ. ಬಳಿಕ ಪ್ರತಿ ತಿಂಗಳಲ್ಲೂ ಸ್ವಯಂ ಸ್ತನ ಪರೀಕ್ಷೆಯನ್ನು ನಡೆಸುತ್ತಿದ್ದಲ್ಲಿ, ಅಸಾಮಾನ್ಯ ಬದಲಾವಣೆಗಳನ್ನು ಸುಲಭದಲ್ಲೇ ಪತ್ತೆಹಚ್ಚಬಹುದಾಗಿದೆ. ಜೊತೆಗೆ ಸ್ತನಗಳಲ್ಲಿ ನೋವು, ಜ್ವರ, ಸ್ತನ ಹಾಗೂ ಕಂಕುಳಿನಲ್ಲಿ ಇರುವ ಲಿಂಫ್ ಗ್ರಂಥಿಗಳಲ್ಲಿ ಬಾವು, ಸ್ತನಗಳಲ್ಲಿ ಉದ್ಭವಿಸಿರುವ ಚಿಕ್ಕಪುಟ್ಟ ಗೆಡ್ಡೆಗಳು ಅಥವಾ ಯಾವುದೇ ರೀತಿಯ ಅಸಾಮಾನ್ಯ ಬದಲಾವಣೆಗಳನ್ನು ಗಮನಿಸಿದೊಡನೆ, ತಜ್ಞ ವೈದ್ಯರನ್ನು ಸಂದರ್ಶಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಅಯಾಚಿತ ಸಮಸ್ಯೆಗಳನ್ನು ನಿಶ್ಚಿತವಾಗಿ ತಡೆಗಟ್ಟಬಹುದು. 

ಅಂತಿಮವಾಗಿ ಹೇಳುವುದಾದಲ್ಲಿ ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಪ್ರಾಥಮಿಕ ಹಂತದಲ್ಲೇ ಪತ್ತೆಯಾಗುತ್ತಿರುವ ಪ್ರಮಾಣವು ಅತ್ಯಲ್ಪವಾಗಿದೆ. ಈ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಜನಜಾಗೃತಿಯನ್ನು ಮೂಡಿಸಬೇಕಾಗಿದೆ. ತನ್ಮೂಲಕ ಇದಕ್ಕೆ ಬಲಿಯಾಗುವ ರೋಗಿಗಳ ಪ್ರಮಾಣವನ್ನೂ ಕನಿಷ್ಠ ಶೇ.೩೦ ರಷ್ಟು ಕಡಿಮೆ ಮಾಡಬಹುದಾಗಿದೆ. 

ಡಾ. ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೨-೧೦-೨೦೧೦ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. 


Thursday, October 23, 2014

BALA SVACHCHA ABHIYAANA


 ಬಾಲ ಸ್ವಚ್ಛ ಅಭಿಯಾನ : ಸೇರಲಿ ಜಲ- ವಾಯುಮಾಲಿನ್ಯ 

ಗಾಂಧೀ ಜಯಂತಿಯಂದು ಆರಂಭಗೊಂಡಿದ್ದ " ಸ್ವಚ್ಛ ಭಾರತ ಅಭಿಯಾನ " ಕ್ಕೆ ಜನಸಾಮಾನ್ಯರಿಂದ ದೇಶಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂದು ಹಳ್ಳಿಯಿಂದ ಆರಂಭಿಸಿ ದಿಲ್ಲಿಯ ತನಕ ಅಸಂಖ್ಯ ಜನರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದುದೇ ಇದರ ಯಶಸ್ಸಿಗೆ ಸಾಕ್ಷಿಯಾಗಿತ್ತು. ವಿಶೇಷವೆಂದರೆ ಈ ಅಭಿಯಾನಕ್ಕೆ ಚಾಲನೆ ನೀಡಿ ಹಲವಾರು ದಿನಗಳೇ ಕಳೆದಿದ್ದರೂ, ಅನೇಕ ರಾಜ್ಯಗಳಲ್ಲಿ ಇಂದಿಗೂ ಸ್ವಚ್ಛತಾ ಅಭಿಯಾನ ನಡೆಯುತ್ತಲೇ ಇದೆ. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಕರೆಗೆ ಸ್ಪಂದಿಸಿದ ಪ್ರಜೆಗಳು, ಅವರ ಅಪೇಕ್ಷೆಯಂತೆ ೨೦೧೯ ರಲ್ಲಿ ಬಾಪೂಜಿಯವರ ೧೫೦ ನೆ ಜನ್ಮದಿನದ ಸಂದರ್ಭದಲ್ಲಿ ನಮ್ಮ ದೇಶವನ್ನು ಸ್ವಚ್ಛ, ಸ್ವಸ್ಥ ಮತ್ತು ಸುಂದರವಾಗಿಸುವ ಕನಸನ್ನು ನನಸಾಗಿಸಲು ಸಾಕಷ್ಟು ಶ್ರಮಿಸಬೇಕಿದೆ. ತನ್ಮೂಲಕ ಪ್ರಪಂಚದ ಅತ್ಯಂತ ಸ್ವಚ್ಛ ಹತ್ತು ದೇಶಗಳ ಯಾದಿಯಲ್ಲಿ ಸ್ಥಾನವನ್ನು ಗಳಿಸಬೇಕಿದೆ. 

ಬಾಲ ಸ್ವಚ್ಛ ಅಭಿಯಾನ 

ಶಾಲಾ ವಿದ್ಯಾರ್ಥಿಗಳಲ್ಲೂ ಸ್ವಚ್ಛತೆಯ ಅರಿವನ್ನು ಮೂಡಿಸುವ ಸಲುವಾಗಿ, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ರವರ ಜನ್ಮದಿನವಾಗಿರುವ ನವೆಂಬರ್ ೧೪ ರಂದು " ಬಾಲ ಸ್ವಚ್ಛ ಅಭಿಯಾನ " ಕ್ಕೆ ಪ್ರಧಾನಿ ಮೋದಿಯವರು ಚಾಲನೆಯನ್ನು ನೀಡಲಿದ್ದಾರೆ. ಈ ರೀತಿಯಲ್ಲಿ ದೇಶದ ಇಬ್ಬರು ಮಹಾನ್ ನಾಯಕರ ಜನ್ಮದಿನದಂದು, ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಯೋಜನೆ ಮತ್ತು ಉದ್ದೇಶ ಮೋದಿಯವರ ಮನದಲ್ಲಿದೆ. 

ಮಕ್ಕಳಿಗೆ ಮಾಹಿತಿ ನೀಡಿ 

 ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸುವ ಮಕ್ಕಳಿಗೆ ನಮ್ಮ ದೇಶದ ಉದ್ದಗಲಕ್ಕೂ ಕಾಣಸಿಗುವ ವೈವಿಧ್ಯಮಯ ತ್ಯಾಜ್ಯಗಳು, ಬಯಲನ್ನೇ ಶೌಚಾಲಯವನ್ನಾಗಿ ಬಳಸುವುದು, ಮಳೆನೀರು ಹರಿವ ಚರಂಡಿಗಳಲ್ಲಿ ಕಲುಷಿತ ನೀರನ್ನು ವಿಸರ್ಜಿಸುವುದು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಲೇ ಇರುವ ವಾಹನಗಳು, ಕಾರ್ಖಾನೆಗಳು ಹಾಗೂ ಬೃಹತ್ ಉದ್ದಿಮೆಗಳು ವಿಸರ್ಜಿಸುವ ಅಪಾಯಕಾರಿ ಧೂಮ ಇತ್ಯಾದಿಗಳಿಂದ ಸಂಭವಿಸುತ್ತಿರುವ ಪರಿಸರ, ಜಲ ಮತ್ತು ವಾಯುಮಾಲಿನ್ಯಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಬೇಕು. ಅದೇ ರೀತಿಯಲ್ಲಿ ಮನುಷ್ಯನ ಆರೋಗ್ಯ ಮತ್ತು ಪರಿಸರ ಮಾಲಿನ್ಯಗಳಿಗೆ ಇರುವ ಅವಿನಾಭಾವ ಸಂಬಂಧಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಪ್ರಮುಖವಾಗಿ ತಮ್ಮ ಮನೆ, ಶಾಲೆ ಹಾಗೂ ಸುತ್ತಮುತ್ತಲ ಪರಿಸರಗಳನ್ನು  ಸ್ವಚ್ಛವಾಗಿ ಇರಿಸುವ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳುವ ಬಗ್ಗೆ ಅವಶ್ಯಕ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಲೇಬೇಕು. 

ಇದಲ್ಲದೇ " ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ " ಎನ್ನುವ ಆಡುಮಾತಿನಂತೆ, ತ್ಯಾಜ್ಯಗಳ ಉತ್ಪಾದನೆಯನ್ನೇ ನಿಯಂತ್ರಿಸಿದಲ್ಲಿ, ಇವುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಶ್ರಮ ಕಡಿಮೆಯಾಗುವುದು ಮತ್ತು ಇದರೊಂದಿಗೆ ಜಲ, ವಾಯು ಮತ್ತು ಪರಿಸರ ಮಾಲಿನ್ಯಗಳ ಪ್ರಮಾಣ ಕಡಿಮೆಯಾಗುವುದು. ತತ್ಪರಿಣಾಮವಾಗಿ ದೇಶದ ಪ್ರಜೆಗಳ ಆರೋಗ್ಯದ ಮಟ್ಟವೂ ಉನ್ನತಸ್ತರಕ್ಕೆ ಏರುವುದು ಎನ್ನುವ ಮಹತ್ವಪೂರ್ಣವಿಚಾರವನ್ನು ಮಕ್ಕಳಿಗೆ ಮನದಟ್ಟು ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ನುಡಿದಂತೆ ನಡೆಯಿರಿ 

ಈ ಸಂದರ್ಭದಲ್ಲಿ ಮಕ್ಕಳ ಹೆತ್ತವರು ಅಥವಾ ಪೋಷಕರು, ತಮ್ಮ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ತಿಳಿವಳಿಕೆ ನೀಡುವ ಮುನ್ನ ತಮ್ಮ ವರ್ತನೆಗಳ ಬಗ್ಗೆ ಗಮನ ಹರಿಸುವುದು ಲೇಸು. ಏಕೆಂದರೆ ಎಳೆಯ ಮಕ್ಕಳು ತಮ್ಮ ತಂದೆತಾಯಿ, ಮನೆಯಲ್ಲಿನ ಹಿರಿಯರು ಮತ್ತು ಒಡನಾಡಿಗಳ ನಡೆನುಡಿಗಳು ಮತ್ತು ವರ್ತನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವುದು ಮತ್ತು ಅನುಕರಿಸುವುದು ಸ್ವಾಬಾವಿಕ. ಇದೇ ಕಾರಣದಿಂದಾಗಿ ಹೆತ್ತವರು, ಪೋಷಕರು, ಒಡನಾಡಿಗಳು ಮತ್ತು ಶಿಕ್ಷಕರು, ಮಕ್ಕಳಿಗೆ ತಾವು ಹೇಳುವ " ಸ್ವಚ್ಛತೆಯ ಪಾಠ " ವನ್ನು ತಾವೂ ಅನುಸರಿಸುವ ಮೂಲಕ ಮಾದರಿಯಾಗಬೇಕು. ಉದಾಹರಣೆಗೆ ಚಾಕಲೇಟ್, ಬಿಸ್ಕಿಟ್ ಅಥವಾ ಇತರ ಖಾದ್ಯಗಳನ್ನು ತಿನ್ನ್ನುವ ಸಂದರ್ಭದಲ್ಲಿ, ಇವುಗಳ ಹೊರಕವಚವನ್ನು ಎಲ್ಲೆಂದರಲ್ಲಿ ಎಸೆಯದೇ, ಅದನ್ನು ಮಡಿಸಿ ನಿಮ್ಮ ಜೇಬಿನಲ್ಲಿ ಇರಿಸಿಕೊಂಡರೆ ನಿಮ್ಮ ಮಕ್ಕಳೂ ಇದನ್ನು ಅನುಕರಿಸುವುದರಲ್ಲಿ ಸಂದೇಹವಿಲ್ಲ. ಅರ್ಥಾತ್ ನುಡಿದಂತೆ ನಡೆಯುವ ಮೂಲಕ, ತಮ್ಮ ಮಕ್ಕಳು ಸದಾ ಸ್ವಚ್ಛತೆಯ ಸೂತ್ರಗಳನ್ನು ಪರಿಪಾಲಿಸುವಂತೆ ಹಿರಿಯರು ಪ್ರೇರೇಪಿಸಬೇಕು. ಹೆತ್ತವರು, ಪೋಷಕರು, ಒಡನಾಡಿಗಳು ಮತ್ತು ಶಿಕ್ಸಕರ ಈ ರೀತಿಯ ನಡವಳಿಕೆಗಳು ನಿಶ್ಚಿತವಾಗಿಯೂ ಎಳೆಯ ಮಕ್ಕಳ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರುತ್ತವೆ. 

ಅದೇನೇ ಇರಲಿ, ಮುಂದಿನ ನಾಲ್ಕು ವರ್ಷಗಳ ಕಾಲ ಭಾರತೀಯರೆಲ್ಲರೂ ಸ್ವಚ್ಛ ಭಾರತ ಅಭಿಯಾನದಲ್ಲಿ ಮನಸ್ಪೂರ್ವಕವಾಗಿ ಭಾಗವಹಿಸಿದಲ್ಲಿ, ಗಾಂಧೀಜಿಯವರ " ಸ್ವಚ್ಛ, ಸ್ವಸ್ಥ ಮತ್ತು ಸುಂದರ ಭಾರತ " ದ ಕನಸನ್ನು ನನಸಾಗಿಸುವುದು ನಿಸ್ಸಂದೇಹವಾಗಿಯೂ ಸುಲಭಸಾಧ್ಯವೆನಿಸೀತು. 

ಕೊನೆಯ ಮಾತು 

ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?, ಎನ್ನುವ ಸುಪ್ರಸಿದ್ಧ ಆಡುಮಾತನ್ನು ನೀವೂ ಕೇಳಿರಲೇಬೇಕು. ಅತ್ಯಂತ ಅರ್ಥಪೂರ್ಣ ಎನಿಸುವ ಈ ಮಾತುಗಳು ಅಕ್ಷರಶಃ ಸತ್ಯ ಎನ್ನುವುದರಲ್ಲಿ ಸಂದೇಹವಿಲ್ಲ. ಈ ಆಡುಮಾತಿನ ನೈಜ ಅರ್ಥದಂತೆ ಪುಟ್ಟ ಮಕ್ಕಳು ಮಾಡುವ ತಪ್ಪುಗಳನ್ನು ತಿದ್ದಿ ಸರಿಪಡಿಸದೇ ಇದ್ದಲ್ಲಿ, ಮುಂದೆ ಎಂದಿಗೂ ಇದನ್ನು ಸರಿಪಡಿಸುವುದು ಅಸಾಧ್ಯ. ಇದೇ ಕಾರಣದಿಂದಾಗಿ ನಿಮ್ಮ ಮಕ್ಕಳು ಸತ್ಪ್ರಜೆಗಳಾಗಬೇಕಿದ್ದಲ್ಲಿ, ನಿಮ್ಮ ಹಾಗೂ ನಿಮ್ಮ ಮನೆಮಂದಿಯ ವರ್ತನೆಗಳು ಸಮರ್ಪಕವಾಗಿ ಇರಲೇಬೇಕು. ಆದುದರಿಂದ ಸ್ವಚ್ಛತೆಯ ವಿಚಾರದಲ್ಲಿ ನಿಮ್ಮ ವರ್ತನೆಗಳು ಅನುಕರಣೀಯವಾಗಿ ಇರುವಂತೆ ಸಾಕಷ್ಟು ಮುಂಜಾಗ್ರತೆ ವಹಿಸುವುದು ಹಿತಕರವೆನಿಸುವುದು.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 



Wednesday, October 22, 2014

Eat more fruits and vegetables - Prevent heart disease



 

 ಹಣ್ಣು ಹಂಪಲುಗಳ ಸೇವನೆ : ಹೃದ್ರೋಗದಿಂದ ರಕ್ಷಣೆ !

ಇತೀಚಿನ ಕೆಲವರ್ಷಗಳಿಂದ ಜನಸಾಮಾನ್ಯರನ್ನು ಅತಿಯಾಗಿ ಬಾಧಿಸುತ್ತಿರುವ ಮತ್ತು ಅಕಾಲಿಕ ಮರಣಕ್ಕೂ ಕಾರಣವೆನಿಸುತ್ತಿರುವ ಹೃದ್ರೋಗವೊಂದರಿಂದ ಪಾರಾಗಲು, ತುಸು ಅಧಿಕ ಪ್ರಮಾಣದಲ್ಲಿ ಹಣ್ಣು ಹಂಪಲುಗಳನ್ನು ದಿನನಿತ್ಯ ಸೇವಿಸುವುದು ಉಪಯುಕ್ತವೆನಿಸುವುದು ಎಂದು ಯುರೋಪ್ ನಲ್ಲಿ ನಡೆದ ವೈದ್ಯಕೀಯ ಅಧ್ಯಯನದ ವರದಿ ಬಹಿರಂಗಪಡಿಸಿದೆ. ಮಾಸಾಹಾರಿಗಳ ಪಾಲಿಗೆ ಅಪಥ್ಯವೆನಿಸಬಹುದಾದ ಈ ವಿಧಾನವು, ಸಸ್ಯಾಹಾರಿಗಳಿಗೆ ನಿಸ್ಸಂದೇಹವಾಗಿಯೂ ವರದಾನವೆನಿಸಲಿದೆ. 

ಐ.ಎಚ್.ಡಿ ತಡೆಗಟ್ಟಿರಿ 

ಪ್ರತಿನಿತ್ಯ ನಿಗದಿತ ಪ್ರಮಾಣದ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿದಲ್ಲಿ ಇಸ್ಕೀಮಿಕ್ ಹಾರ್ಟ್ ಡಿಸೀಸ್ ( ಐ.ಎಚ್.ಡಿ ) ಎಂದು ಕರೆಯಲ್ಪಡುವ ಹೃದ್ರೋಗದಿಂದ ಬಳಲುವ ಮತ್ತು ಹೃದಯಾಘಾತದಿಂದ ಮೃತಪಡುವ ಅಪಾಯವನ್ನು ಕಡಿಮೆಯಾಗಿಸಬಹುದು ಎಂದು ಈ ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದರೊಂದಿಗೆ ಸಮತೋಲಿತ ಹಾಗೂ ಆರೋಗ್ಯದಾಯಕ ಆಹಾರಪದಾರ್ಥಗಳ ಸೇವನೆ ಮತ್ತು ಆರೋಗ್ಯಕರ ಜೀವನಶೈಲಿಯ ಪರಿಪಾಲನೆಗಳೂ ಅತ್ಯವಶ್ಯಕ ಎನ್ನುವುದರ ಮಹತ್ವವನ್ನು ಯುರೋಪಿಯನ್ ಹಾರ್ಟ್ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. 

ಮನುಷ್ಯನ ಹೃದಯಕ್ಕೆ ನಿರಂತರವಾಗಿ ಶುದ್ಧ ರಕ್ತವನ್ನು ಸರಬರಾಜು ಮಾಡುವ ಕೊರೋನರಿ ಆರ್ಟರಿಗಳ ಒಳಮೈಯ್ಯಲ್ಲಿ ಶೇಖರಿಸಲ್ಪಡುವ ಕೊಬ್ಬಿನ ಅಂಶಗಳಿಂದಾಗಿ, ಹೃದಯಕ್ಕೆ ಪೂರೈಕೆಯಾಗುವ ರಕ್ತದ ಪ್ರಮಾಣವು ಕಡಿಮೆಯಾಗುವ ಸ್ಥಿತಿಯನ್ನು ಐ.ಎಚ್.ಡಿ ಎಂದು ಕರೆಯುವರು. ಈ ಸಮಸ್ಯೆಯಿಂದಾಗಿ ಎಂಜೈನಾ ಎಂದು ಕರೆಯಲ್ಪಡುವ ಎದೆನೋವು ಬಾಧಿಸುವ ಮತ್ತು ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚುತ್ತವೆ. ಈ ಗಂಭೀರ ಹಾಗೂ ಅಪಾಯಕಾರಿ ಸಮಸ್ಯೆಯ ಸಂಭಾವ್ಯತೆಯನ್ನು ಕಡಿಮೆಮಾಡಲು, ಪ್ರತಿನಿತ್ಯ ನಿಗದಿತ ಪ್ರಮಾಣದಲ್ಲಿ ಹಣ್ಣು ಹಂಪಲುಗಳು ಮತ್ತು ತಾಜಾ ತರಕಾರಿಗಳನ್ನು ಸೇವಿಸುವುದು ಉಪಯುಕ್ತವೆನಿಸುವುದು. 

ಯುರೋಪ್ ಖಂಡದ ೮ ದೇಶಗಳ ಸುಮಾರು ೩ ಲಕ್ಷ ಜನರ ಮೇಲೆ ಈ ಅಧ್ಯಯನವನ್ನು ನಡೆಸಲಾಗಿತ್ತು. ಪ್ರತಿನಿತ್ಯ ಸುಮಾರು ೬೦೦ ರಿಂದ ೮೦೦ ಗ್ರಾಮ್ ಗಳಷ್ಟು ಹಣ್ಣು ಮತ್ತು ತರಕಾರಿಗಳನ್ನು ತಪ್ಪದೇ ಸೇವಿಸುತ್ತಿದ್ದ ವ್ಯಕ್ತಿಗಳಲ್ಲಿ ಐ.ಎಚ್.ಡಿ ಮತ್ತು ಹೃದಯಾಘಾತದ ಪ್ರಮಾಣಗಳು ಕಡಿಮೆಯಿರುವುದು ಮತ್ತು ಕೇವಲ ೨೦೦ ರಿಂದ ೨೫೦ ಗ್ರಾಮ್ ಸೇವಿಸುತ್ತಿದ್ದವರಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದುದು ಈ ಅಧ್ಯಯನದಿಂದ ತಿಳಿದುಬಂದಿತ್ತು. ಅಲ್ಪ ಪ್ರಮಾಣದ ಹಣ್ಣು ತರಕಾರಿಗಳನ್ನು ಸೇವಿಸುವವರಲ್ಲಿ ಐ. ಎಚ್. ಡಿ ಹಾಗೂ ತತ್ಪರಿಣಾಮವಾಗಿ ಸಂಭವಿಸಿದ್ದ ಮರಣದ ಪ್ರಮಾಣವು, ಹೆಚ್ಚು ಹಣ್ಣು ತರಕಾರಿಗಳನ್ನು ಸೇವಿಸುವವರಿಗಿಂತಲೂ ಶೇ.೨೦ ರಷ್ಟು ಹೆಚ್ಚಾಗಿದ್ದಿತು. ವಿಶೇಷವೆಂದರೆ ಸಾಕಷ್ಟು ಕಡಿಮೆ ಪ್ರಮಾಣದ ಹಣ್ಣು ತರಕಾರಿಗಳನ್ನು ಸೇವಿಸುತ್ತಿದ್ದವರು, ಈ ಪ್ರಮಾಣವನ್ನು ಸುಮಾರು ೮೦ ಗ್ರಾಮ್ ಗಳಷ್ಟು ಹೆಚ್ಚಿಸಿದಾಗ, ಈ ಸಮಸ್ಯೆಯ ಸಂಭಾವ್ಯತೆಯು ಶೇ.೪ ರಷ್ಟು ಕಡಿಮೆಯಾಗಿತ್ತು ಎನ್ನುವ ಕುತೂಹಲಕಾರಿ ಮಾಹಿತಿಯು ಈ ಅಧ್ಯಯನದಿಂದ ಪತ್ತೆಯಾಗಿತ್ತು. 

ಎಚ್ಚರಿಕೆ 

ಅದೇನೇ ಇರಲಿ, ನೀವು ದಿನನಿತ್ಯ ಸೇವಿಸುವ ಹಣ್ಣು ತರಕಾರಿಗಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಮೂಲಕ, ಹೃದ್ರೋಗದ ಸಂಭಾವ್ಯತೆಯನ್ನು ಸುಲಭದಲ್ಲೇ ಕಡಿಮೆ ಮಾಡಿಕೊಳ್ಳಬಹುದು ಎಂದು ನಿಶ್ಚಿಂತರಾಗಿ ಇರದಿರಿ. ಏಕೆಂದರೆ ಇದೇ ವರದಿಯಲ್ಲಿ ಆರೋಗ್ಯದಾಯಕ ಆಹಾರ ಸೇವನೆ ಮತ್ತು ಆರೋಗ್ಯಕರ ಜೀವನಶೈಲಿಯ ಪರಿಪಾಲನೆಯೂ ಈ ವಿಚಾರದಲ್ಲಿ ಅತ್ಯಂತ ಮಹತ್ವಪೂರ್ಣವೆನಿಸುತ್ತವೆ ಎಂದು ಉಲ್ಲೇಖಿಸಲಾಗಿದೆ. ಅರ್ಥಾತ್, ಹಿತ-ಮಿತವಾದ, ಅತಿಯಾದ ಕೊಬ್ಬಿನ ಹಾಗೂ ಸಕ್ಕರೆಯ ಅಂಶವಿಲ್ಲದ ಸಸ್ಯಾಹಾರದ ಸೇವನೆ, ಪ್ರತಿನಿತ್ಯ ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವುದು, ದುಶ್ಚಟಗಳಿಂದ ದೂರವಿರುವುದು ಮತ್ತು ಶಿಸ್ತುಬದ್ಧ ಜೀವನಶೈಲಿಯನ್ನು ಅನುಕರಿಸುವುದರಿಂದ, ಹೃದ್ರೋಗವನ್ನು ಮಾತ್ರವಲ್ಲ, ಅನೇಕ ಅನ್ಯ ಕಾಯಿಲೆಗಳನ್ನು ದೂರವಿರಿಸಲು ಇದು ಅತ್ಯಂತ ಉಪಯುಕ್ತವೆನಿಸುವುದು. ಇದರೊಂದಿಗೆ ಮಾನಸಿಕ ನೆಮ್ಮದಿಗಾಗಿ ಧ್ಯಾನ, ಯೋಗ, ಸಂಗೀತ, ಬರಹ, ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತವನ್ನು ಚಾಚುವುದೇ ಮುಂತಾದ ಚಟುವಟಿಕೆಗಳು, ಆರೋಗ್ಯಕರ ಮತ್ತು ಸಂತೃಪ್ತ ಜೀವನಕ್ಕೆ ಬುನಾದಿಯಾಗಲಿವೆ ಎನ್ನುವುದನ್ನು ಮರೆಯದಿರಿ. 

ಕೊನೆಯ ಮಾತು 

ದಿನೇದಿನೇ ಏರುತ್ತಿರುವ ಹಣ್ಣು ಹಂಪಲು ಮತ್ತು ತರಕಾರಿಗಳ ಬೆಲೆಗಳೊಂದಿಗೆ, ಇವಗಳನ್ನು ಬೆಳೆಯುವಾಗ ಮತ್ತು ತದನಂತರ ಸಂರಕ್ಷಿಸಿಡಲು ಬಳಸಲಾಗುತ್ತಿರುವ ವೈವಿಧ್ಯಮಯ ಹಾಗೂ ಅಪಾಯಕಾರಿ ರಾಸಾಯನಿಕ ಕೀಟನಾಶಕಗಳ ವಿಚಾರವನ್ನು ಗಮನಿಸಿದಲ್ಲಿ, ಯುರೋಪ್ ನಲ್ಲಿ ನಡೆಸಿದ್ದ ಅಧ್ಯಯನದ ವರದಿಯು ನಮ್ಮ ದೇಶಕ್ಕೆ ಅನ್ವಯಿಸಬಲ್ಲದೇ ಎನ್ನುವ ಸಂದೇಹ ಮೂಡುವುದು ಸ್ವಾಭಾವಿಕ. ಏಕೆಂದರೆ ಈಗಾಗಲೇ ಕಲುಷಿತ ನೀರು ಹಾಗೂ ಗಾಳಿಯನ್ನು ಸೇವಿಸುತ್ತಾ ಪ್ರದೂಷಿತ ಪರಿಸರದಲ್ಲಿ ವಾಸಿಸುತ್ತಿರುವ ನಾವು, ಇವೆಲ್ಲಾ ಕಾರಣಗಳಿಂದಾಗಿ " ವಿಷಮಾನವ " ರಾಗಿ ಬದುಕುತ್ತಿದ್ದೇವೆ. ತತ್ಪರಿಣಾಮವಾಗಿ ಉದ್ಭವಿಸುತ್ತಿರುವ ಗಂಭೀರ ಕಾಯಿಲೆಗಳ ಅಪಾಯದೊಂದಿಗೆ ತುಲನೆ ಮಾಡಿದಾಗ, ಹಣ್ಣು - ತರಕಾರಿಗಳನ್ನು ಸೇವಿಸುವುದು ಕೂಡಾ ಅಸುರಕ್ಷಿತವೆನಿಸುವುದು. ಆದರೂ ಸಾವಯವ ಪದ್ದತಿಯಲ್ಲಿ ಬೆಳೆಸಿದ ಆಹಾರಧಾನ್ಯಗಳು, ಹಣ್ಣು ಹಂಪಲುಗಳು ಮತ್ತು ತರಕಾರಿಗಳನ್ನು ಸೇವಿಸುವ ಮೂಲಕ ಈ ಸಮಸ್ಯೆಯನ್ನು ನಿಶ್ಚಿತವಾಗಿ ತಡೆಗಟ್ಟಬಹುದಾಗಿದೆ. ಇದರೊಂದಿಗೆ ನಮ್ಮ ಸುತ್ತಮುತ್ತಲ ಪರಿಸರವನ್ನು ನಿರ್ಮಲ ಹಾಗೂ ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ನಾವೆಲ್ಲರೂ ಶ್ರಮಿಸಬೇಕಾಗಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೯-೧೧-೨೦೧೧ ರ ಸಚಿಕೆಯಲ್ಲಿ ಪ್ರಕಟಿತ ಲೇಖನ. 


Tuesday, October 21, 2014

WORLD IODINE DEFICIENCY PRVENTION DAY



  ಅಕ್ಟೋಬರ್ ೨೧-ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನ

ಆಯೋಡಿನ್ ಯುಕ್ತ ಉಪ್ಪನ್ನು ಮಾರಾಟ ಮಾಡುತ್ತಿರುವ ಕೆಲ ಸಂಸ್ಥೆಗಳು ತಮ್ಮ ಉತ್ಪನ್ನದ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಪ್ರಕಟಿಸುತ್ತಿರುವ ಜಾಹೀರಾತುಗಳು ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆಯುತ್ತವೆ. ಏಕೆಂದರೆ ಈ ಉತ್ಪನ್ನಗಳಲ್ಲಿ ಇರುವ " ಅಯೋಡಿನ್ " ನ ಸೇವನೆಯಿಂದನಿಮ್ಮ ಮಕ್ಕಳ ಬುದ್ಧಿಶಕ್ತಿ ಹೆಚ್ಚುತ್ತದೆ ಎನ್ನುವ ಸಂದೇಶ ಈ ಜಾಹೀರಾತುಗಳಲ್ಲಿದೆ.

ಅಯೋಡಿನ್ ಮಿಶ್ರಿತ ಉಪ್ಪಿನ ಕೆಲ ಜಾಹೀರಾತುಗಳು ಘಂಟಾಘೋಷವಾಗಿ ಸಾರುವಂತೆ, ಇದರ ಸೇವನೆಯಿಂದ ನಿಮ್ಮ ಮಕ್ಕಳ ಬುದ್ಧಿಶಕ್ತಿ ಹೆಚ್ಚುವುದು ನಿಜವಾಗಿದ್ದಲ್ಲಿ ಭಾರತದ ಪ್ರತಿಯೊಂದು ಶಾಲಾಕಾಲೇಜುಗಳ ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ದರ್ಜೆಯಲ್ಲಿ ಉತ್ತೀರ್ಣನಾಗಲೇಬೇಕು. ಏಕೆಂದರೆ ಕಳೆದ ಹಲವಾರು ವರ್ಷಗಳಿಂದ ಇವರೆಲ್ಲರೂ ಕೇವಲ ಅಯೋಡಿನ್ ಮಿಶ್ರಿತ ಉಪ್ಪನ್ನೇ ಸೇವಿಸುತ್ತಿದ್ದಾರೆ. ಆದರೆ ದೇಶದ ಶಾಲಾಕಾಲೇಜುಗಳ ವಾರ್ಷಿಕ ಫಲಿತಾಂಶಗಳನ್ನು ಗಮನಿಸಿದಲ್ಲಿ, ಅಯೋಡಿನ್ ಮಿಶ್ರಿತ ಉಪ್ಪಿನ ತಯಾರಕರ ಜಾಹೀರಾತುಗಳು ಉತ್ಪ್ರೇಕ್ಷಿತ ಎನ್ನುವುದು ನಿಮಗೂ ಮನದಟ್ಟಾಗುತ್ತದೆ!.

ಜಗತ್ತಿನ ಅನೇಕ ರಾಷ್ಟ್ರಗಳ ಕೆಲವೊಂದು ಪ್ರಾಂತ್ಯಗಳ ನಿವಾಸಿಗಳನ್ನು ಪೀಡಿಸುತ್ತಿರುವ ಆರೋಗ್ಯದ ಸಮಸ್ಯೆಗಳಲ್ಲಿಅಯೋಡಿನ್ ಕೊರತೆಯಿಂದ ಉದ್ಭವಿಸಬಲ್ಲ ತೊಂದರೆಗಳೂ ಸೇರಿವೆ. ಈ ಸಮಸ್ಯೆಯು ವ್ಯಾಪಕವಾಗಿ ಕಂಡು ಬಂದಾಗ " ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ " ಎನ್ನುವಂತೆಅಯೋಡಿನ್ ಮಿಶ್ರಿತ ಉಪ್ಪಿನ ಸೇವನೆಯು ಅತ್ಯಂತ ಉಪಯುಕ್ತವೆನಿಸುವುದು.

ಆದರೆ "  ಅತಿಯಾದರೆ ಅಮೃತವೂ ವಿಷವೆನಿಸಬಲ್ಲದು " ಎನ್ನುವ ಆಡುಮಾತಿನಂತೆಅಯೋಡಿನ್ ಮಿಶ್ರಿತ ಉಪ್ಪಿನ ಅತಿಯಾದ ಸೇವನೆಯೂ ಗಂಭೀರ  ಆರೋಗ್ಯದ ಸಮಸ್ಯೆಗಳನ್ನು ಸೃಷ್ಠಿಸಬಲ್ಲದು.

ಅಯೋಡಿನ್ ಸೇವನೆ ಅವಶ್ಯಕವೇ?

ಮನುಷ್ಯನ ಶರೀರ - ಆರೋಗ್ಯಗಳಿಗೆ ಅತ್ಯವಶ್ಯಕವೆನಿಸುವ ಸೂಕ್ಷ್ಮ ಪೋಷಕಾಂಶಗಳಲ್ಲಿಅಯೋಡಿನ್ ಒಂದಾಗಿದೆ. ಸಾಮಾನ್ಯವಾಗಿ ನಾವೆಲ್ಲರೂ ದಿನನಿತ್ಯ ಸೇವಿಸುವ ವಿವಿಧ ಹಸಿರು ಸೊಪ್ಪುಗಳು, ತಾಜಾ ತರಕಾರಿಗಳುಹಾಲು ಮತ್ತು ಮೀನುಗಳಲ್ಲಿ ಅಲ್ಪ ಪ್ರಮಾಣದ ಅಯೋಡಿನ್ ಇರುತ್ತದೆ.
ಕಾರಣಾಂತರಗಳಿಂದ ನಮ್ಮ ಶರೀರಕ್ಕೆ ಲಭ್ಯವಾಗುವ ಅಯೋಡಿನ್ ಪ್ರಮಾಣದಲ್ಲಿ ಕೊರತೆಯುಂಟಾದಾಗಥೈರಾಯ್ಡ್ ಗ್ರಂಥಿಯ ಹಿಗ್ಗುವಿಕೆ, ಮಕ್ಕಳಲ್ಲಿ ಶಾರೀರಿಕ - ಮಾನಸಿಕ ಬೆಳವಣಿಗೆಗಳು ಕುಂಠಿತಗೊಳ್ಳುವುದು ಹಾಗೂ ವಾಕ್ - ಶ್ರವಣ ದೋಷಗಳು ಕಂಡುಬರುತ್ತವೆ. ವಿಶೇಷವಾಗಿ ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣ, ಎಳೆಯ ಕಂದಮ್ಮಗಳು ಮತ್ತು ಬೆಳೆಯುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆಗಳಂತಹ ಸಮಸ್ಯೆಗಳು ಅಯೋಡಿನ್ ಕೊರತೆಯಿಂದ ಉದ್ಭವಿಸುವ ಸಾಧ್ಯತೆಗಳಿವೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದ್ದ ಅಂಕಿ ಅಂಶಗಳಂತೆವರ್ಷಂಪ್ರತಿ ಜಗತ್ತಿನಾದ್ಯಂತ ೧೪೦ ದಶಲಕ್ಷ ಜನರು ಅಯೋಡಿನ್ ಕೊರತೆಯಿಂದ ಬಳಲುತ್ತಾರೆ. ಭಾರತ ಸರ್ಕಾರವು ಇತ್ತೀಚಿಗೆ ನಡೆಸಿದ್ದ ಸಮೀಕ್ಷೆಯಂತೆ ೬೪ ದಶಲಕ್ಷ ಭಾರತೀಯರು ಈ ಸಮಸ್ಯೆಯಿಂದ ಪೀಡಿತರಾಗಿದ್ದಾರೆ.

ಅಯೋಡಿನ್ ಕೊರತೆಯಿಂದಾಗಿ ಉದ್ಭವಿಸಬಲ್ಲ ಆರೋಗ್ಯದ ಸಮಸ್ಯೆಗಳನ್ನು ಅಯೋಡಿನ್ ಮಿಶ್ರಿತ ಉಪ್ಪಿನ ಸೇವನೆಯಿಂದ ಸುಲಭದಲ್ಲೇ ತಡೆಗಟ್ಟಬಹುದು. ಭಾರತದ ಕೆಲರಾಜ್ಯಗಳು ಮತ್ತು ಕೆಲವು ಪ್ರಾಂತ್ಯಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿದ್ದ ಈ ಸಮಸ್ಯೆಯನ್ನು ತಡೆಗಟ್ಟುವ ಸಲುವಾಗಿಯೇ, ಕೇಂದ್ರ ಸರ್ಕಾರವು ಹಲವಾರು ವರ್ಷಗಳ ಹಿಂದೆಯೇ ಅಯೋಡಿನ್ ಮಿಶ್ರಿತ ಉಪ್ಪಿನ ಮಾರಾಟವನ್ನು ಕಡ್ಡಾಯಗೊಳಿಸುವುದರೊಂದಿಗೆಸಾಮಾನ್ಯ ಅಡುಗೆ ಉಪ್ಪಿನ ಮಾರಾಟವನ್ನೇ ನಿಷೇಧಿಸಿತ್ತು.

ದಾರಿತಪ್ಪಿಸುವ ಜಾಹೀರಾತುಗಳು

ಇತ್ತೀಚಿಗೆ ವಿವಿದ್ಹ್ ಮಾಧ್ಯಮಗಳ ಮೂಲಕ ವಿಶಿಷ್ಠ ಜಾಹೀರಾತುಗಳನ್ನು ನೀಡುತ್ತಿರುವ ಕೆಲ ಅಯೋಡಿನ್ ಮಿಶ್ರಿತ ಉಪ್ಪಿನ ತಯಾರಕರು, ನಿಶ್ಚಿತವಾಗಿಯೂ ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಇಂತಹ ಜಾಹೀರಾತುಗಳಲ್ಲಿ ತಮ್ಮ ಸಂಸ್ಥೆಯು ತಯಾರಿಸಿ ಮಾರಾಟಮಾಡುವ " ಅಯೋಡಿನ್ ಮಿಶ್ರಿತ " ಉಪ್ಪಿನಲ್ಲಿ ನಿಮ್ಮ ಮಕ್ಕಳ ಬುದ್ಧಿಶಕ್ತಿ, ಚಟುವಟಿಕೆಗಳು ಹಾಗೂ ಶಾರೀರಿಕ ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ಮೆದುಳನ್ನು ಚುರುಕಾಗಿಸುವ " ಶಕ್ತಿ " ಇದೆಯೆಂದು ಘಂಟಾಘೋಷವಾಗಿ ಸಾರುತ್ತಿದ್ದಾರೆ.ಜೊತೆಗೆ ತಮ್ಮ ಉತ್ಪನ್ನದ ಕಣಕಣಗಳಲ್ಲೂ  ಅಯೋಡಿನ್ ಸರಿಯಾದ ಪ್ರಮಾಣದಲ್ಲಿದ್ದು, " ನಿಮ್ಮ ಮಕ್ಕಳನ್ನು ಮಾಡುತ್ತದೆ ಸ್ಮಾರ್ಟ್ " ಎಂದು ಸಾರಿ ಹೇಳಲಾಗುತ್ತಿದೆ!.

ನಿಜ ಹೇಳಬೇಕಿದ್ದಲ್ಲಿ ಅಯೋಡಿನ್ ಮಿಶ್ರಿತ ಉಪ್ಪನ್ನು ತಯಾರಿಸುವಾಗ ಒಂದು ಟನ್ ಉಪ್ಪಿಗೆ ಬೆರೆಸುವ " ಪೊಟಾಸಿಯಂ ಆಯೋಡೆಟ್ " ಣ ಪ್ರಮಾಣವು ಕೇವಲ ೫೦ ಗ್ರಾಂ ಆಗಿರುತ್ತದೆ!. ಅಯೋಡಿನ್ ಮಿಶ್ರಿತ ಉಪ್ಪಿನ ಪೊಟ್ಟಣಗಳ ಹೊರಕವಚಗಳ  ಮೇಲೆ ಇದರಲ್ಲಿರುವ ಅಯೋಡಿನ್ ನ ಪ್ರಮಾಣವನ್ನು ೧೫ ಅಥವಾ ೩೦ ಪಿ.ಪಿ.ಎಂ ಎಂದು ನಮೂದಿಸಿರುವುದನ್ನು ಪ್ರಾಯಶಃ ನೀವೂ ಗಮನಿಸಿರಲಾರಿರಿ. ಪಿ.ಪಿ.ಎಂ ಎಂದರೆ ಪಾರ್ಟಿಕಲ್ ಪರ್ ಮಿಲಿಯನ್ ಎಂದರ್ಥ. ಅರ್ಥಾತ್, ಒಂದು ಮಿಲಿಯನ್ ಉಪ್ಪಿನ ಕಣಗಳಲ್ಲಿ ಕೇವಲ ೧೫ ಅಥವಾ ೩೦ ಪೊಟಾಸಿಯಂ ಅಯೋಡೆಟ್ ನ ಕಣಗಳು ಇರುತ್ತವೆ. ನಿಜಸ್ಥಿತಿ ಹೀಗಿರುವಾಗ ಈ ಉಪ್ಪಿನ ಪೊಟ್ಟಣದಲ್ಲಿನ ಪ್ರತಿಯೊಂದು ಉಪ್ಪಿನ ಕಣಗಳಲ್ಲೂ ಅಯೋಡಿನ್ ಇರುವುದು ಅಸಾಧ್ಯವಲ್ಲವೇ?.
ಇಷ್ಟು ಮಾತ್ರವಲ್ಲ, ಈ ಜಾಹೀರಾತನ್ನು ನಿಜವೆಂದು ನಂಬಿದ ಅಮಾಯಕರು ತಮ್ಮ ಮಕ್ಕಳಿಗೆ ದಿನನಿತ್ಯ ನೀಡುವ ಆಹಾರ ಪದಾರ್ಥಗಳಲ್ಲಿ ಬಳಸುವ ಉಪ್ಪಿನ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಗಳೂ ಇವೆ. ತತ್ಪರಿಣಾಮವಾಗಿ ಈ ಮಕ್ಕಳಿಗೆ ಅಲ್ಪಾವಧಿಯಲ್ಲೇ ಕೆಲವೊಂದು ಆರೋಗ್ಯದ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಏಕೆಂದರೆ ಅಯೋಡಿನ್ ಹಾಗೂ ಉಪ್ಪು, ಇವೆರಡರ ಅತಿಸೇವನೆಯು ನಿಶ್ಚಿತವಾಗಿಯೂ ಅನಾರೋಗ್ಯಕ್ಕೆ ಕಾರಣವೆನಿಸುತ್ತದೆ.

ಅತಿಸೇವನೆಯ ತೊಂದರೆಗಳು

ಅಯೋಡಿನ್ ಮಿಶ್ರಿತ ಉಪ್ಪಿನ ಅತಿಯಾದ ಸೇವನೆಯಿಂದ " ಹೈಪೋ ಥೈರಾಯ್ದಿಸ್ಮ್ " ಅರ್ಥಾತ್, Iodine induced hypothyroidism (IIH) , ಎನ್ನುವ ಸಮಸ್ಯೆ ಉದ್ಭವಿಸಬಲ್ಲದು. ತತ್ಪರಿಣಾಮವಾಗಿ ಶರೀರಕ್ಕೆ ಅತ್ಯವಶ್ಯಕವೆನಿಸುವ ಜೀವಸತ್ವಗಳ ಬೇಡಿಕೆ ಹೆಚ್ಚುವುದರಿಂದತತ್ಸಂಬಂಧಿತ ಜೀವಸತ್ವಗಳ ಕೊರತೆಯೂ ಉಂಟಾಗಬಹುದು. ಇದಲ್ಲದೆ ಅತಿಯಾದ ಹಸಿವು ಹಾಗೂ ಇದರಿಂದಾಗಿ ಅತಿಆಹಾರ ಸೇವನೆ ಮತ್ತು ಭೇದಿ, ಮಾಂಸಪೇಶಿಗಳಲ್ಲಿ ನಡುಕ, ಅತಿ ಆಯಾಸ, ನರ - ಮಾನಸಿಕ ತೊಂದರೆಗಳಾದ ಖಿನ್ನತೆ, ಉದ್ವೇಗಗಳಂತಹ ಸಮಸ್ಯೆಗಳೂ ತಲೆದೋರಬಹುದು.

ಇವೆಲ್ಲಕ್ಕೂ ಮಿಗಿಲಾಗಿ ಹೃದಯ - ರಕ್ತನಾಳಗಳಿಗೆ ಸಂಬಂಧಿಸಿದ ಗಂಭೀರ ತೊಂದರೆಗಳು, ಅಧಿಕ ರಕ್ತದೊತ್ತಡ, ಮೂಲೆಗಳ ಸವೆತ ಹಾಗೂ ದೌರ್ಬಲ್ಯ ಮತ್ತು ಕೆಲವಿಧದ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳು ಕೇವಲ ಅತಿಯಾದ ಉಪ್ಪಿನ ಸೇವನೆಯಿಂದಲೇ ಉದ್ಭವಿಸಬಲ್ಲವು.


ವಯಸ್ಕರಲ್ಲಿ ಅಧಿಕ ರಕ್ತದೊತ್ತಡ ಆರಂಭವಾಗಲು ಮತ್ತು ಹೆಚ್ಚಲು ತುಸು ಅಧಿಕ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುವುದು ಕೂಡಾ ಕಾರನವೆನಿಸಬಲ್ಲದು. ಇತ್ತೀಚಿಗೆ ನಡೆಸಿದ್ದ ಸಂಶೋಧನೆಗಳ ವರದಿಗಳಂತೆ, ಉಪ್ಪನ್ನು ಧಾರಾಳವಾಗಿ ಬಳಸಿ ತಯಾರಿಸಿದ ಆಹಾರಗಳನ್ನು ಅತಿಯಾಗಿ ಸೇವಿಸುವ ಮಕ್ಕಳಿಗೆಮುಂದೆ ಎಂದಾದರೂ ಅಧಿಕ ರಕ್ತದೊತ್ತಡ ಬಾಧಿಸುವ ಹಾಗೂ ಪಕ್ಷವಾತ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಹೃದಯದ ವೈಫಲ್ಯಗಳಂತಹ ತೊಂದರೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಈ ರೀತಿಯ ಗಂಭೀರ - ಮಾರಕ ಆರೋಗ್ಯದ ತೊಂದರೆಗಳಿಗೆ ಕಾರಣವೆನಿಸಬಲ್ಲ ಉಪ್ಪನ್ನು, ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಅತಿಯಾಗಿ ಬಳಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎನ್ನುವುದನ್ನು ಮರೆಯದಿರಿ.

೧೯೯೦ ರಲ್ಲಿ ಆಫ್ರಿಕಾ ಖಂಡದ ಅನೇಕ ದೇಶಗಳಲ್ಲಿ ಅಯೋಡಿನ್ ಮಿಶ್ರಿತ ಉಪ್ಪಿನ ಅತಿಯಾದ ಸೇವನೆಯಿಂದಾಗಿ I I A " ಸಮಸ್ಯೆಯು ವ್ಯಾಪಕವಾಗಿ ಕಂಡುಬಂದಿತ್ತು. ೧೯೯೫ ರಲ್ಲಿ ಜಿಂಬಾಬ್ವೆ ದೇಶದಲ್ಲಿ ಇದೆ ಕಾರಣದಿಂದಾಗಿ ಈ ಸಮಸ್ಯೆಯ ಪ್ರಮಾಣವು ಶೇ. ೨೭ ರಷ್ಟು ಹೆಚ್ಚಿತ್ತು.

ಅಮೇರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್, ಇಟಲಿ, ಆಸ್ಟ್ರೇಲಿಯ, ಸ್ವಿಟ್ಜರ್ಲೆಂಡ್ ಇವೆ ಮುಂತಾದ ದೇಶಗಳು ೧೯೪೦ ರಲ್ಲೇ ಅಯೋಡಿನ್ ಮಿಶ್ರಿತ ಉಪ್ಪಿನ ಕಡ್ಡಾಯ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದವು. ಅಮೇರಿಕ ಹಾಗೂ ಇಂಗ್ಲೆಂಡ್ ದೇಶಗಳಲ್ಲಿ " ಹೈಪರ್ ಥೈರಾಯ್ದಿಸ್ಮ್ " ನಿಂದಾಗಿ ಅನೇಕ ಪ್ರಜೆಗಳು ಮೃತಪಟ್ಟಿದ್ದುದೇ ಈ ನಿರ್ಧಾರಕ್ಕೆ ಕಾರಣವೆನಿಸಿತ್ತು.

ಭಾರತದಲ್ಲಿ I I H " ಸಮಸ್ಯೆಯ ಬಗ್ಗೆ ಸಮರ್ಪಕವಾದ ಮಾಹಿತಿಯೇ ಲಭ್ಯವಿಲ್ಲಡ ಕಾರಣದಿಂದಾಗಿಈ ಬಗ್ಗೆ ಖಚಿತ ಮಾಹಿತಿ ಅಥವಾ ಅಂಕಿ ಅಂಶಗಳನ್ನು ನೀಡುವುದು ಅಸಾಧ್ಯವೂ ಹೌದು. ಆದರೆ ಬಹುತೇಕ ಭಾರತೀಯರು " ಉಪ್ಪಿಗಿಂತ ರುಚಿಯಿಲ್ಲ ...." ಎನ್ನುವ ಆಡುಮಾತಿನಂತೆಸ್ವಾಭಾವಿಕವಾಗಿಯೇ ತುಸು ಅಧಿಕ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುವುದರಿಂದಅಯೋಡಿನ್ ಮಿಶ್ರಿತ ಉಪ್ಪಿನ ಸೇವನೆಯ ಬಗ್ಗೆ ಸಾಕಷ್ಟು ಮುಂಜಾಗರೂಕತೆ ವಹಿಸುವುದು ಆರೋಗ್ಯ ರಕ್ಷಣೆಯ ದೃಷ್ಠಿಯಿಂದ ಹಿತಕರವೆನಿಸೀತು!.

ಅಯೋಡಿನ್ ಮಿಶ್ರಿತ ಉಪ್ಪು

ನೀವು ಸಾಮಾನ್ಯವಾಗಿ ಅಡುಗೆಗಾಗಿ ಬಳಸುವ " ಅಡುಗೆ ಉಪ್ಪು " ಅರ್ಥಾತ್ ಸೋಡಿಯಂ ಕ್ಲೋರೈಡ್ ಗೆ ನಿರ್ದಿಷ್ಟ ಪ್ರಮಾಣದ " ಪೊಟಾಸಿಯಂ ಅಯೋಡೆಟ್ " ನ್ನು ಬೆರೆಸುವ ಮೊಲಕ ಅಯೋಡಿನ್ ಮಿಶ್ರಿತ ಉಪ್ಪನ್ನು ಸಿದ್ಧಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಒಂದು ಮೆಟ್ರಿಕ್ ಟನ್ ಉಪ್ಪಿಗೆ ಬೆರೆಸುವ ಪೊಟಾಸಿಯಂ ಅಯೋಡೆಟ್ ಣ ಪ್ರಮಾಣವು ಕೇವಲ ೫೦ ಗ್ರಾಂ ಗಳಾಗಿರುತ್ತದೆ.

ಈ ಮಿಶ್ರಣವನ್ನು ಮೂರು ವಿಧಗಳಲ್ಲಿ ತಯಾರಿಸಬಹುದಾಗಿದೆ. ಇವುಗಳಲ್ಲಿ ಮೊದಲನೆಯದಾದ ಒಣ ಮಿಶ್ರಣ ವಿಧಾನದಲ್ಲಿ ಇವೆರಡೂ ದ್ರವ್ಯಗಳನ್ನು " ಸ್ಕ್ರ್ಯೂ ಕನ್ವೇಯರ್ " ಗಳನ್ನು ಬಳಸಿ ಮಿಶ್ರಣ ಮಾಡಲಾಗುತ್ತದೆ. ಸ್ಪ್ರೇ ಮಿಕ್ಸಿಂಗ್ ವಿಧಾನದಲ್ಲಿ ಪೊಟಾಸಿಯಂ ಆಯೋಡೆಟ್ ದ್ರಾವಣವನ್ನು ಬೆಲ್ಟ್ ಕನ್ವೇಯರ್ ಗಳ ಮೂಲಕ ಬೀಳುವ ಉಪ್ಪ್ಗೆ ಸಿಂಪಡಿಸಿದ ಬಳಿಕ ಮತ್ತೆ ಸ್ಕ್ರ್ಯೂ ಕನ್ವೇಯರ್ ಗಳಲ್ಲಿ ಮಿಶ್ರ ಮಾಡಲಾಗುತ್ತದೆ. ಸಬ್ಮರ್ಶನ್ ವಿಧಾನದಲ್ಲಿ ಒಂದು ಟ್ಯಾಂಕ್ ನಲ್ಲಿ ಉಪ್ಪು ಮತ್ತು ಪೊಟಾಸಿಯಂ ಆಯೋಡೆಟ್ ದ್ರಾವಣಗಳನ್ನು ಬೆರೆಸಿ ತಯಾರಿಸಿದ ಹರಳುಗಳನ್ನು ಸಂಗ್ರಹಿಸಿ ಒಣಗಿಸಲಾಗುತ್ತದೆ.

ಆದರೆ ಜನರು ಮೆಚ್ಚಿ ಖರೀದಿಸುವ " ಸರಾಗವಾಗಿ ಹರಿಯುವ " ( Free flowing ) ಉಪ್ಪಿನ ಹುಡಿ  ದುಬಾರಿ ಬೆಲೆಗೆ ಮಾರಾಟವಾಗುತ್ತದೆ. ಅಯೋಡಿನ್ ಮಿಶ್ರಿತ ಉಪ್ಪಿನ ಹರಳುಗಳ ಒಂದು ಕಿಲೋಗ್ರಾಂ ಪೊಟ್ಟಣಕ್ಕೆ ಸುಮಾರು ೩ ರೂಪಾಯಿ ಬೆಲೆಯಿದ್ದಲ್ಲಿ, ಉಪ್ಪಿನ ಹುಡಿಯ ಪೊಟ್ಟಣಕ್ಕೆ ೬ ರಿಂದ ೯ ರೂಪಾಯಿ ಬೆಲೆಯಿದೆ.
ಉಪ್ಪಿನ ಹರಳುಅಗಳನ್ನು ಹುಡಿ ಮಾಡಿದರೂ ಇವುಗಳ ಕಣಗಳು ಏಕರೀತಿಯದ್ದಾಗಿ ಇರುವುದಿಲ್ಲ. ಇದೇ  ಕಾರಣದಿಂದಾಗಿ ಮತ್ತು ಉಪ್ಪು ತೇವಾಂಶವನ್ನು ಕ್ಷಿಪ್ರಗತಿಯಲ್ಲಿ ಹೀರಿಕೊಳ್ಳುವುದರಿಂದ, ಈ ಉಪ್ಪಿನ ಹುಡಿಯು ಸರಾಗವಾಗಿ ಹರಿಯುವಂತೆ ಮಾಡಲು ಮತ್ತು ಅಚ್ಚ ಬಿಳಿಯ ಬಣ್ಣದ್ದಾಗಿ ಕಾಣಿಸಲುಇವುಗಳ ತಯಾರಕರು ಒಂದಿಷ್ಟು ಹೆಚ್ಚುವರಿ ಹಣವನ್ನು ವ್ಯಯಿಸಿ, ದುಪ್ಪಟ್ಟು ಲಾಭವನ್ನು ಗಳಿಸುತ್ತಾರೆ!.

ಕೊನೆಯ ಮಾತು

ಅಯೋಡಿನ್ ಮಿಶ್ರಿತ ಉಪ್ಪಿನ ಸೇವನೆಯನ್ನೇ ವಿರೋಧಿಸುವುದು ಈ ಲೇಖನದ ಉದ್ದೇಶವಲ್ಲ. ಆದರೆ ಅಯೋಡಿನ್ ಕೊರತೆಯಿಂದ ಉದ್ಭವಿಸಬಲ್ಲ Iodine deficiency disorder ನಂತಹ ಗಂಭೀರ ಸಮಸ್ಯೆಯನ್ನು ತಡೆಗಟ್ಟಲು ಉಪಯುಕ್ತವೆನಿಸುವಅಯೋಡಿನ್ ಮಿಶ್ರಿತ ಉಪ್ಪಿನ ತಯಾರಕರು ನೀಡುತ್ತಿರುವ ಜಾಹೀರಾತುಗಳಲ್ಲಿ ನಮೂದಿಸದ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವುದೇ ನಮ್ಮ ಉದ್ದೇಶವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ,  ಒಂದು ದೇಶದ ಪ್ರಜೆಗಳನ್ನು ಬಾಧಿಸುತ್ತಿರುವ ಅಯೋಡಿನ್ ಕೊರತೆಯಿಂದ ಉದ್ಭವಿಸಬಲ್ಲ ಸಮಸ್ಯೆಗಳನ್ನುಅಯೋಡಿನ್ ಮಿಶ್ರಿತ ಉಪ್ಪಿನ ಸಾರ್ವತ್ರಿಕ ಬಳಕೆಯಿಂದ ಸುಲಭದಲ್ಲೇ ನೀಗಿಸಬಹುದು. ಅದೇ ರೀತಿಯಲ್ಲಿ ಇದರ ಸೇವನೆಯ ಲಾಭದೊಂದಿಗೆ ತುಲನೆ ಮಾಡಿದಾಗಇದರ ಅತಿಸೇವನೆಯಿಂದ ಉದ್ಭವಿಸಬಲ್ಲ ತೊಂದರೆಗಳು ನಗಣ್ಯವೆನಿಸುತ್ತವೆ.

ಆದರೂ ಭಾರತದಲ್ಲಿ ಅಯೋಡಿನ್ ಮಿಶ್ರಿತ ಉಪ್ಪಿನ ಅತಿಸೇವನೆಯಿಂದ ಉದ್ಭವಿಸಿರಬಹುದಾದ ಆರೋಗ್ಯದ ಸಮಸ್ಯೆಗಳ ಬಗ್ಗೆ ಅತ್ಯವಶ್ಯಕವೆನಿಸುವ ಸಮೀಕ್ಷೆ- ಅಧ್ಯಯನಗಳನ್ನು ನಡೆಸಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದ ಅಯೋಡಿನ್ ಮಿಶ್ರಿತ ಉಪ್ಪಿನ ಕಡ್ಡಾಯ ಮಾರಾಟದ ನಿರ್ಧಾರವನ್ನು ಪ್ರಶ್ನಿಸಿದ ಅರ್ಜಿಯೊಂದನ್ನು ಸರ್ವೋಚ್ಛ ನ್ಯಾಯಾಲಯವು ಇತ್ತೀಚಿಗೆ ವಿಚಾರಣೆಗಾಗಿ ಅಂಗೀಕರಿಸಿದೆ. ಆದರೆ ಇದಕ್ಕೂ ಮುನ್ನ ಜನಸಾಮಾನ್ಯರನ್ನು ದಾರಿತಪ್ಪಿಸುವ ಜಾಹೀರಾತುಗಳನ್ನು ನಿಷೆಧಿಸಬೇಕಾದ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು

ಉದಯವಾಣಿ ಪತ್ರಿಕೆಯ ದಿ. ೧೪-೦೬-೨೦೦೭ ರ ಸಂಚಿಕೆಯ ಬಳಕೆದಾರ : ಸಮಸ್ಯೆ - ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ .




Wednesday, October 15, 2014

COSMETICS : VEG or NONVEG ?



 

  

 ಸೌಂದರ್ಯ ಪ್ರಸಾದನಗಳಲ್ಲಿ ಏನಿದೆಯೆಂದು ಬಲ್ಲಿರಾ ?

ತಮ್ಮ ಶಾರೀರಿಕ ಸೌಂದರ್ಯದ ಬಗ್ಗೆ ಕಾಳಜಿ ಇರದ ಹಾಗೂ ತಾನು ಸುಂದರವಾಗಿ ಕಾಣಿಸಬೇಕೆಂದು ಬಯಸದ ಸ್ತ್ರೀ- ಪುರುಷರು ಈ ಜಗತ್ತಿನಲ್ಲೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಇದೇ ಕಾರಣದಿಂದಾಗಿ ತಮ್ಮ ಶಾರೀರಿಕ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಬಲ್ಲ ಸೌಂದರ್ಯ ಪ್ರಸಾದನಗಳನ್ನು ಪ್ರತಿನಿತ್ಯ ತಪ್ಪದೆ ಬಳಸುವ ಸ್ತ್ರೀ- ಪುರುಷರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಆದರೆ ವೈವಿಧ್ಯಮಯ ಮತ್ತು ದುಬಾರಿ ಬೆಲೆಯ ಸೌಂದರ್ಯ ಪ್ರಸಾದನಗಳನ್ನು ಬಳಸುವ ಬಹುತೇಕ ಜನರಿಗೆ, ತಾವು ಉಪಯೋಗಿಸುತ್ತಿರುವ ಪ್ರಸಾದನಗಳ ತಯಾರಿಕೆಯ ಮತ್ತು ಇವುಗಳಲ್ಲಿ ಬಳಸುವ ನೈಸರ್ಗಿಕ,   ಕೃತಕ ರಾಸಾಯನಿಕ ಹಾಗೂ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ದ್ರವ್ಯಗಳ ಬಗ್ಗೆ ಯಾವುದೇ ಮಾಹಿತಿಗಳ ಅರಿವಿರುವುದಿಲ್ಲ. ಏಕೆಂದರೆ ಇಂತಹ ಉತ್ಪನ್ನಗಳ ತಯಾರಕರು ತಮ್ಮ ಉತ್ಪನ್ನಗಳನ್ನು ತಯಾರಿಸುವಾಗ ಬಳಸುವ ದ್ರವ್ಯಗಳ ಬಗ್ಗೆ ಗ್ರಾಹಕರಿಗೆ ಯಾವುದೇ ಮಾಹಿತಿಯನ್ನೇ ನೀಡುವುದಿಲ್ಲ !. ವಿಶೇಷವೆಂದರೆ ೧೯೮೬ ರಲ್ಲೇ ದೇಶಾದ್ಯಂತ ಜಾರಿಗೊಂಡಿದ್ದ ಗ್ರಾಹಕ ರಕ್ಷಣಾ ಕಾಯಿದೆಯಂತೆ, ತಾವು ಖರೀದಿಸಿ ಬಳಸುವ ಪ್ರತಿಯೊಂದು ಉತ್ಪನ್ನಗಳಲ್ಲಿ ಏನಿದೆಯೆಂದು ಅರಿತುಕೊಳ್ಳುವ ಹಕ್ಕು ಗ್ರಾಹಕರಿಗೆ ಇದೆ. 

ಬಣ್ಣದ ಗುರುತು ಕಡ್ಡಾಯ 

ಪ್ರಸ್ತುತ ಕೇಂದ್ರ ಸರ್ಕಾರವು ಜನಸಾಮಾನ್ಯರು ದಿನನಿತ್ಯ ಬಳಸುವ ಸೌಂದರ್ಯ ಪ್ರಸಾದನಗಳ ಹೊರಕವಚಗಳ ಮೇಲೆ " ಸಸ್ಯಜನ್ಯ " ಅಥವಾ " ಪ್ರಾಣಿಜನ್ಯ " ದ್ರವ್ಯಗಳನ್ನು ಬಳಸಿರುವ ಬಗ್ಗೆ ಹಸಿರು ಹಾಗೂ ಕೆಂಪು ಅಥವಾ ಕಂದು ಬಣ್ಣದ " ಗುರುತು " ಹಾಕುವಂತೆ ಹೊರಡಿಸಿದ್ದ ಅಧಿಸೂಚನೆಯನ್ನು, ಇವುಗಳ ತಯಾರಕರು ಖಂಡತುಂಡವಾಗಿ ವಿರೋಧಿಸುತ್ತಿದ್ದಾರೆ. ಅಂತೆಯೇ ಈ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.  

ಕೇಂದ್ರದಲ್ಲಿ ಅಧಿಕಾರದ ಗದ್ದುಗೆಯನ್ನು ಏರಿದ್ದ ನೂತನ ಸರ್ಕಾರವು ಕೇವಲ ಒಂದು ತಿಂಗಳಿನಲ್ಲೇ ಈ ಅಧಿಸೂಚನೆಯನ್ನು ಗ್ರಾಹಕ ವ್ಯವಹಾರಗಳ ಇಲಾಖೆಯ ಮೂಲಕ ಇದೆ ವರ್ಷದ ಜೂನ್ ೧೬ ರಂದು ಹೊರಡಿಸಿತ್ತು. ಈ ಅಧಿಸೂಚನೆಯಂತೆ ಗ್ರಾಹಕರು ಬಳಸುವ ಸೋಪ್, ಶಾಂಪೂ, ಮಹಿಳೆಯರು ಮತ್ತು ಪುರುಷರು ಬಳಸುವ ವಿವಿಧ ಸೌಂದರ್ಯ ಪ್ರಸಾದನಗಳು, ಟೂತ್ ಪೇಸ್ಟ್ ಮತ್ತಿತರ ಉತ್ಪನ್ನಗಳ ಹೊರಕವಚಗಳ ಮೇಲೆ ಸಸ್ಯಜನ್ಯ ದ್ರವ್ಯಗಳನ್ನು ಬಳಸಿದ್ದಲ್ಲಿ ಹಸಿರು ಮತ್ತು ಪ್ರಾಣಿಜನ್ಯ ದ್ರವ್ಯಗಳನ್ನು ಬಳಸಿದ್ದಲ್ಲಿ ಕೆಂಪು ಅಥವಾ ಕಂದು ಬಣ್ಣದ ಗುರುತನ್ನು ಸ್ಪಷ್ಟವಾಗಿ ಕಾಣಿಸುವಂತೆ ಮುದ್ರಿಸಬೇಕಾಗುತ್ತದೆ. ಲೀಗಲ್ ಮೆಟ್ರೋಲಜಿ ಕಾಯಿದೆ ೨೦೦೯ ಮತ್ತು ಲೀಗಲ್ ಮೆಟ್ರೋಲಜಿ ( ಪ್ಯಾಕೆಜ್ಡ್ ಕೊಮೊಡಿಟೀಸ್ ನಿಯಮ ೨೦೧೧ ) ಕಾಯಿದೆಯನ್ವಯ ಈ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಜುಲೈ ೧ ನೆ ತಾರೀಕಿನಿಂದ ಇದನ್ನು ಅನುಷ್ಠಾನಗೊಳಿಸಬೇಕಾಗಿತ್ತು. 

ಕೋಟ್ಯಂತರ ರೂಪಾಯಿಗಳ ವಹಿವಾಟು 

ಒಂದಾನೊಂದು ಕಾಲದಲ್ಲಿ ಭಾರತೀಯ  ನಾರಿಯರು ಬಳಸುತ್ತಿದ್ದ ಅರಶಿನ, ಚಂದನ, ಕುಂಕುಮ ಮತ್ತು ಕೆಲ ಮಹಿಳೆಯರು ಬಳಸುತ್ತಿದ್ದ ಸ್ನೋ ಮತ್ತು ಟಾಲ್ಕಂ ಪೌಡರ್ ಗಳ ಸ್ಥಾನವನ್ನು ಇಂದು ವೈವಿಧ್ಯಮಯ ಸೌಂದರ್ಯ ಪ್ರಸಾದನಗಳು ಆಕ್ರಮಿಸಿವೆ.ಇವುಗಳ ವೈವಿಧ್ಯ ಎಷ್ಟಿದೆಯೆಂದರೆ, " ನಖಶಿಖಾಂತ " ಬಳಸಬಹುದಾದ ನೂರಾರು ಪ್ರಸಾದನಗಳು ಇಂದು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಂತೆಯೇ ಇತ್ತೀಚಿನ ಕೆಲವರ್ಷಗಳಿಂದ ಪುರುಷರಿಗಾಗಿಯೇ ಇಂತಹ ಪ್ರತ್ಯೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳ ಬೇಡಿಕೆ ಮತ್ತು ಮಾರಾಟಗಳೂ ಭರ್ಜರಿಯಾಗಿವೆ.

ಭಾರತದಲ್ಲಿ ಸೌಂದರ್ಯ ಪ್ರಸಾದನಗಳ ಉದ್ದಿಮೆಯ ವಾರ್ಷಿಕ ವ್ಯವಹಾರವು ಸುಮಾರು ೬೦,೦೦೦ ಕೋಟಿ ರೂ.ಗಳಾಗಿದ್ದು, ಇಂತಹ ಉತ್ಪನ್ನಗಳ ತಯಾರಕರ ಇಂಡಿಯನ್ ಬ್ಯೂಟಿ ಎಂಡ್ ಹೈಜೀನ್ ಅಸೋಸಿಯೇಶನ್( ಐ.ಬಿ.ಎಚ್. ಎ ) ಎನ್ನುವ ಸಂಘಟನೆಯು ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆಯ ವಿರುದ್ಧ ದಾವೆಯನ್ನು ಹೂಡಿದೆ. ಸೆಪ್ಟೆಂಬರ್ ೯ ರಂದು ಮುಂಬೈ ನ ಉಚ್ಛ ನ್ಯಾಯಾಲಯವು ಈ ಅಧಿಸೂಚನೆಯ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಿದ್ದು, ಸೌಂದರ್ಯ ಪ್ರಸಾದನಗಳ ತಯಾರಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ಈ ಬಗ್ಗೆ ಕೇಂದ್ರ ಸರ್ಕಾರವು ೨ ವಾರಗಳಲ್ಲಿ  ಪ್ರತಿಕ್ರಿಯೆಯನ್ನು ನೀಡುವಂತೆ ಸೂಚಿಸಿದ್ದು, ಕೇಂದ್ರವು ಎರಡು ವಾರಗಳ ಹೆಚ್ಚುವರಿ ಅವಧಿಯನ್ನು ನೀಡುವಂತೆ ವಿನಂತಿಸಿದೆ. 

ತಯಾರಕರ ಆಕ್ಷೇಪ 

ಕೇಂದ್ರ ಸರ್ಕಾರವು ಉದ್ದಿಮೆಯ ಪ್ರತಿನಿಧಿಗಳೊಂದಿಗೆ ಸಮಾಲೋಚಿಸದೇ ಮತ್ತು ಈ ಅಧಿಸೂಚನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸದೇ, ಏಕಪಕ್ಷೀಯವಾಗಿ ಇದನ್ನು ಜಾರಿಗೆ ತಂದಿರುವ ಬಗ್ಗೆ ಉದ್ದಿಮೆಯು ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದೆ. ಈ ಉದ್ದಿಮೆಯ ಪ್ರತಿನಿಧಿಗಳೇ ಹೇಳುವಂತೆ, ಸೌಂದರ್ಯ ಪ್ರಸಾದನಗಳ ತಯಾರಿಕೆಯಲ್ಲಿ ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಕೊಬ್ಬು ಮತ್ತು ಎಣ್ಣೆ ಇತ್ಯಾದಿ ದ್ರವ್ಯಗಳನ್ನು ಬಳಸಲಾಗುತ್ತಿದೆ. ಆದರೆ ಇವುಗಳನ್ನು ಆಂತರಿಕ ಸೇವನೆಗಾಗಿ ಬಳಸದ ಕಾರಣದಿಂದಾಗಿ, ಈ ಉತ್ಪನ್ನಗಳ ಹೊರಕವಚಗಳ ಮೇಲೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಎನ್ನುವ ಗುರುತನ್ನು ಹಾಕುವ ಅವಶ್ಯಕತೆಯೇ ಇಲ್ಲವೆಂದು ವಾದಿಸುತ್ತಿರುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ!. 

ನಿಜ ಹೇಳಬೇಕಿದ್ದಲ್ಲಿ ಸೌಂದರ್ಯ ಪ್ರಸಾದನಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಎಣ್ಣೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದ್ದು, ಪ್ರಾಣಿಗಳ ಚರ್ಮ, ಎಲುಬು ಮತ್ತಿತರ ಭಾಗಗಳನ್ನೂ ಉಪಯೋಗಿಸಲಾಗುತ್ತದೆ. ಇದೇ ಕಾರಣದಿಂದಾಗಿ ಇಂತಹ ಯಾವುದೇ ಉತ್ಪನ್ನಗಳನ್ನು ಆಂತರಿಕ ಅಥವಾ ಬಾಹ್ಯ ಉಪಯೋಗಕ್ಕಾಗಿ ಬಳಸುವ ಜನರಿಗೆ ಈ ಬಗ್ಗೆ ಸಮರ್ಪಕ ಮಾಹಿತಿಯನ್ನು ನೀಡಬೇಕಾದ ಹೊಣೆಗಾರಿಕೆ ಇವುಗಳ ತಯಾರಕರ ಮೇಲಿದೆ.( ಪಾಶ್ಚಾತ್ಯ ದೇಶಗಳಲ್ಲಿ ಇದು ಕಡ್ಡಾಯವಾಗಿದೆ.) ಅಂತೆಯೇ ಅನೇಕ ಭಾರತೀಯರು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ನಂಬಿಕೆಗಳಿಂದಾಗಿ, ಪ್ರಾಣಿಜನ್ಯ ಉತ್ಪನ್ನಗಳನ್ನು ಬಾಹ್ಯ ಅಥವಾ ಆಂತರಿಕ ಉಪಯೋಗಕ್ಕಾಗಿ ಬಳಸುವುದಿಲ್ಲ. ಇದಲ್ಲದೇ ಪ್ರಾಣಿಜನ್ಯ ದ್ರವ್ಯಗಳ ಬಳಕೆಯಿಂದ ಅನೇಕರಲ್ಲಿ " ಅಲರ್ಜಿ " ಯಂತಹ ಅಥವಾ ಅನ್ಯವಿಧದ  ಆರೋಗ್ಯದ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಅಂತೆಯೇ ಕೆಲ ಸಂದರ್ಭಗಳಲ್ಲಿ ಪ್ರಾಣಿಜನ್ಯ ದ್ರವ್ಯಗಳನ್ನು ಸಂಗ್ರಹಿಸುವಾಗ ಈ ಪ್ರಾಣಿಗಳಿಗೆ ಹಿಂಸೆಯಾಗುವಂತಹ ವಿಧಾನಗಳನ್ನು ಅನುಸರಿಸಲಾಗುತ್ತದೆ. ಪ್ರಾಣಿಹಿಂಸೆಯನ್ನು ವಿರೋಧಿಸುವ ವ್ಯಕ್ತಿಗಳಿಗೆ ಇದು ವರ್ಜ್ಯವೆನಿಸುತ್ತದೆ. ಇವೆಲ್ಲಾ ಕಾರಣಗಳಿಂದಾಗಿ ಸೌಂದರ್ಯ ಪ್ರಸಾದನಗಳ ಹೊರಕವಚಗಳ ಮೇಲೆ ಸರ್ಕಾರ ಆದೇಶಿಸಿರುವಂತೆ ನಿಗದಿತ ಬಣ್ಣದ ಗುರುತನ್ನು ಹಾಕಲೇಬೇಕಾಗುತ್ತದೆ.

ಲಾಭದತ್ತ ತಯಾರಕರ ಚಿತ್ತ 

ವಾರ್ಷಿಕ ೬೦,೦೦೦ ಸಾವಿರ ಕೋಟಿಗೂ ಅಧಿಕ ವ್ಯವಹಾರ ನಡೆಸುತ್ತಿರುವ ಈ ಲಾಭದಾಯಕ ಉದ್ದಿಮೆಯು, ವರ್ಷಂಪ್ರತಿ ಶೇ.೨೦ ರಷ್ಟು ಅಭಿವೃದ್ಧಿಯನ್ನು ತೋರುತ್ತಿದೆ. ಸುಮಾರು ಎರಡು ವರ್ಷಗಳ ಹಿಂದೆ ಅಗ್ರಸ್ಥಾನದಲ್ಲಿದ್ದ ವೈಯುಕ್ತಿಕ ಸೌಂದರ್ಯ ಪ್ರಸಾದನಗಳ ವಾರ್ಷಿಕ ವಹಿವಾಟು ೩೫,೦೦೦ ಕೋಟಿ ರೂ.ಗಳಾಗಿದ್ದು, ಇದರ ನಂತರದ ಸ್ಥಾನವು ೧೩, ೦೦೦ ಕೋಟಿ ರೂ.ಗಳ ಟಾಯ್ಲೆಟ್ ಸಾಬೂನುಗಳಿಗೆ ಸಲ್ಲುತ್ತದೆ.ಇದೇ ಸಂದರ್ಭದಲ್ಲಿ ದಂತಮಂಜನಗಳು ಮತ್ತು ಚರ್ಮದ ಆರೈಕೆಯ ಉತ್ಪನ್ನಗಳು ಮೂರನೆಯ ಸ್ಥಾನದಲ್ಲಿದ್ದವು. ಈ ರೀತಿಯಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ನಡೆಸುತ್ತಿರುವ ಇಂತಹ ಉದ್ದಿಮೆಗಳು, ತಮ್ಮ ಲಾಭದತ್ತ ಗಮನವನ್ನು ಕೆಂದ್ರೀಕರಿಸುತ್ತಿವೆಯೇ ಹೊರತು, ತಮ್ಮ ಉತ್ಪನ್ನಗಳನ್ನು ಖರೀದಿಸಿ ಬಳಸುವ ಗ್ರಾಹಕರ ಹಿತರಕ್ಷಣೆಯತ್ತ ಅಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ. ಸರ್ಕಾರದ ಅಧಿಸೂಚನೆಯನ್ನು ಈ ಉದ್ದಿಮೆದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿರುವುದು ಇದನ್ನು ಸಮರ್ಥಿಸುತ್ತದೆ.  

ಗೌಪ್ಯತೆಯ ಮುಸುಕು 

ಪ್ರಸ್ತುತ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಧಿಸೂಚನೆಯನ್ನು ಪರಿಪಾಲಿಸಿದಲ್ಲಿ, ತಮ್ಮ ವ್ಯವಹಾರವು ಕೋಟ್ಯಂತರ ರೂಪಾಯಿಗಳ ನಷ್ಟಕ್ಕೆ ಗುರಿಯಾಗಬಹುದೆನ್ನುವ ಸಂದೇಹ ಉದ್ದಿಮೆಯನ್ನು ಕಾಡುತ್ತಿದೆ. ಹಾಗೂ ಇದೇ ಕಾರಣದಿಂದಾಗಿ ತಮ್ಮ ಉತ್ಪನ್ನಗಳನ್ನು ಗ್ರಾಹಕರು " ಸೇವಿಸುವುದಿಲ್ಲ " ಎನ್ನುವ ಕಾರಣದಿಂದಾಗಿ ತಮ್ಮ ಉತ್ಪನ್ನಗಳಲ್ಲಿ ಪ್ರಾಣಿಜನ್ಯ ದ್ರವ್ಯಗಳು ಇವೆಯೇ ಎನ್ನುವುದನ್ನು ತಾವು ಘೋಷಿಸುವ ಮತ್ತು ಗ್ರಾಹಕರು ಅರಿತುಕೊಳ್ಳುವ ಅವಶ್ಯಕತೆಯಿಲ್ಲ ಎನ್ನುವ ವಾದವನ್ನು ಮಂಡಿಸುತ್ತಿರುವ ಉದ್ದಿಮೆಯ ಪ್ರತಿನಿಧಿಗಳ ವಾದದಲ್ಲಿ ಹುರುಳಿಲ್ಲ. ಅದೇ ರೀತಿಯಲ್ಲಿ ಈ ಅಧಿಸೂಚನೆಯನ್ನು ಜಾರಿಗೊಳಿಸುವ ಮುನ್ನ ತಮ್ಮೊಂದಿಗೆ ಸರ್ಕಾರವು ಸಮಾಲೋಚನೆಯನ್ನೇ ನಡೆಸಿಲ್ಲ ಎನ್ನುವುದು, ಕೇವಲ ಒಂದು ನೆಪವೇ ಹೊರತು ಸಮರ್ಥನೀಯ ಕಾರಣವಲ್ಲ. 

ಸೌಂದರ್ಯ ಪ್ರಸಾದನಗಳ ತಯಾರಕರು ಶತಾಯಗತಾಯ ತಮ್ಮ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಿರುವ ದ್ರವ್ಯಗಳ ಮಾಹಿತಿಯನ್ನು ಗೌಪ್ಯತೆಯ ಮುಸುಕಿನಲ್ಲಿ ಅಡಗಿಸುವ ಪ್ರಯತ್ನವನ್ನು ಮಾಡುತ್ತಿರುವುದು ಇದೀಗ ಗುಟ್ಟಾಗಿ ಉಳಿದಿಲ್ಲ. ಅದೇ ರೀತಿಯಲ್ಲಿ ಇದು ಕೇವಲ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ದ್ರವ್ಯಗಳ ಬಳಕೆಯ ವಿಚಾರ ಮಾತ್ರವಲ್ಲ, ಈ ಉತ್ಪನ್ನಗಳನ್ನು ಬಳಸುವ ಗ್ರಾಹಕರ ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ಗ್ರಾಹಕ ರಕ್ಷಣಾ ಕಾಯಿದೆಗಳಿಗೆ ಸಂಬಂಧಿಸಿದ ವಿಚಾರವೂ ಆಗಿದೆ. ಈ ದೃಷ್ಟಿಯಿಂದ ಸರ್ಕಾರದ ನಿರ್ಧಾರವು ನಿಶ್ಚಿತವಾಗಿಯೂ ಸಮಂಜಸವೆನಿಸಿದೆ. ಇದೀಗ ಸರ್ಕಾರವು ತನ್ನ ನಿರ್ಧಾರವನ್ನು ನ್ಯಾಯಾಲಯದ ಮುಂದೆ ಸಮರ್ಥಿಸಿಕೊಳ್ಳಬೇಕಿದೆ. ಇದಕ್ಕೆ ವ್ಯತಿರಿಕ್ತವಾಗಿ ಉದ್ದಿಮೆಗಳ ಒತ್ತಡಕ್ಕೆ ಮಣಿದು ತನ್ನ ನಿರ್ಧಾರದಿಂದ ಹಿಂದೆ ಸರಿದಲ್ಲಿ, ಈ ಅಧಿಸೂಚನೆಯನ್ನು ಮತ್ತು ಗ್ರಾಹಕ ರಕ್ಷಣಾ ಕಾಯಿದೆಯನ್ನು ಜಾರಿಗೆ ತಂದ ಉದ್ದೇಶವೇ ವಿಫಲವಾಗಲಿದೆ. ಇದಕ್ಕೂ ಮಿಗಿಲಾಗಿ ಅಮಾಯಕ ಗ್ರಾಹಕರ ರಕ್ಷಣೆಗೆ ಸರ್ಕಾರ ನೆರವಾಗುತ್ತಿಲ್ಲ ಎನ್ನುವ ಅಪವಾದಕ್ಕೆ ಗುರಿಯಾಗಲಿದೆ.  

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು  

  

Tuesday, October 14, 2014

HOLY RIVER - POLLUTED WATER !



 ಪವಿತ್ರ ನದಿಗಳಲ್ಲಿ ಹರಿಯುತ್ತಿದೆ - ಅಪವಿತ್ರ ನೀರು 

ಈ ಜನ್ಮದಲ್ಲಿ ತಾವು ಮಾಡಿರಬಹುದಾದ ಪಾಪಗಳನ್ನು ನಿವಾರಿಸಿಕೊಳ್ಳುವುದರೊಂದಿಗೆ, ಕಿಂಚಿತ್ ಪುಣ್ಯಪ್ರಾಪ್ತಿಗಾಗಿ ಸುಪ್ರಸಿದ್ಧ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವ ಹವ್ಯಾಸ ಭಾರತೀಯರಲ್ಲಿದೆ. ಈ ಸಂದರ್ಭದಲ್ಲಿ ಪುಣ್ಯಕ್ಷೇತ್ರಗಳ ಸಮೀಪದಲ್ಲಿ ಹರಿಯುವ ಪವಿತ್ರ ನದಿಗಳಲ್ಲಿ ತಪ್ಪದೆ " ಪುಣ್ಯ ಸ್ನಾನ " ಮಾಡುವ ಯಾತ್ರಿಕರಿಗೆ, ಈ ನದಿಗಳಲ್ಲಿ ಹರಿಯುತ್ತಿರುವ ನೀರು ಅಪವಿತ್ರ ಎನ್ನುವುದು ತಿಳಿದಿರುವುದಿಲ್ಲ!. 

ಗಂಗೇಚ ಯಮುನೇಚ .....

ಅನಾದಿಕಾಲದಿಂದಲೂ ಭಾರತದ ಹಿಂದೂ ಧರ್ಮೀಯರಿಗೆ ಗಂಗಾ ನದಿಯು ಪೂಜ್ಯವೆನಿಸಿದೆ. ಉತ್ತರ ಭಾರತದತ್ತ ತೀರ್ಥಯಾತ್ರೆಗೆ ತೆರಳುವ ಪ್ರತಿಯೊಬ್ಬ ಹಿಂದೂ ಬಾಂಧವರು, ಮರಳಿಬರುವಾಗ ಗಂಗೆಯ ನೀರನ್ನು ಮರೆಯದೇ ತರುವ ಸಂಪ್ರದಾಯ ಇಂದಿಗೂ ರೂಢಿಯಲ್ಲಿದೆ. ಮರಣಶಯ್ಯೆಯಲ್ಲಿರುವ ಕುಟುಂಬದ ಹಿರಿಯರ ಬಾಯಿಗೆ ಗಂಗೋದಕವನ್ನು ಬಿಡುವುದರಿಂದ, ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುವ ಅಚಲ ವಿಶ್ವಾಸವೂ ಇದಕ್ಕೆ ಪ್ರಮುಖ ಕಾರಣವೆನಿಸಿದೆ. 

ಆದರೆ ಕಳೆದ ಕೆಲವರ್ಷಗಳಿಂದ ಗಂಗಾನದಿಯ ನೀರು ಅತ್ಯಂತ ಮಲಿನವಾಗಿರುವುದರಿಂದ, ಇದನ್ನು ಕುಡಿಯುವುದು ಬಿಡಿ, ಇದರಲ್ಲಿ ಸ್ನಾನವನ್ನು ಮಾಡುವುದೂ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಕಲುಷಿತ ಗಂಗಾ ನದಿಯ ನೀರನ್ನು ಶುದ್ಧೀಕರಿಸಲು ಕೇಂದ್ರ ಸರ್ಕಾರವು ಸಹಸ್ರಾರು ಕೋಟಿ ರೂಪಾಯಿಗಳ ಕ್ರಿಯಾಯೋಜನೆಯನ್ನು ಅನುಷ್ಠಾನಿಸಿದ್ದರೂ, ಗಂಗೆಯ ಜಲಮಾಲಿನ್ಯದ ಸಮಸ್ಯೆ ಕಿಂಚಿತ್ ಕೂಡಾ ಕಡಿಮೆಯಾಗಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ " ಪಾಪನಾಶಿನಿ " ಎಂದೇ ಪ್ರಖ್ಯಾತವೀಗಿರುವ ಗಂಗೆಯ ನೀರು, ಇದೀಗ " ಆರೋಗ್ಯ ನಾಶಿನಿ " ಯಾಗಿ ಪರಿವರ್ತನೆಗೊಂಡಿದೆ. 

ಡೆಹರಾಡೂನ್ ನ ಪೀಪಲ್ಸ್ ಸಯನ್ಸ್ ಇನ್ಸ್ಟಿಟ್ಯೂಟ್ ( ಪಿ ಎಸ್ ಐ ) ಸಂಸ್ಥೆಯ ಸಂಶೋಧಕರು ಇತ್ತೀಚಿಗೆ ನಡೆಸಿದ್ದ ಅಧ್ಯಯನದ ವರದಿಯಂತೆ ಹರಿದ್ವಾರದ ಸಮೀಪದಲ್ಲಿ ಹರಿಯುತ್ತಿರುವ ಗಂಗಾ ನದಿಯಲ್ಲಿ ಸ್ನಾನ ಮಾಡುವ ಜನರು ತಮ್ಮ ಪಾಪಗಳನ್ನು ಕಳೆದುಕೊಂಡರೂ, ಚರ್ಮರೋಗಗಳು, ಉದರದ ಸೋಂಕುಗಳೂ ಸೇರಿದಂತೆ ಹತ್ತುಹಲವು ಕಾಯಿಲೆಗಳನ್ನು ಗಳಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಸಂಶೋಧಕರ ತಂಡವು ಹರಿದ್ವಾರದ ಸಮೀಪದಲ್ಲಿ ಹರಿಯುತ್ತಿರುವ ಗಂಗೆಯ ನೀರನ್ನು ಸಂಗ್ರಹಿಸಿ ಪರೀಕ್ಷಿಸಿದಾಗ, ಇದರಲ್ಲಿ ಮನುಷ್ಯನ ಮಲದಲ್ಲಿರುವ ಹಾಗೂ ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಬ್ಯಾಕ್ಟೀರಿಯಾಗಳು ಸಮೃದ್ಧವಾಗಿರುವುದು ಪತ್ತೆಯಾಗಿತ್ತು!. 

ಅತಿ ಹೆಚ್ಚು ಸಂಖ್ಯೆಯ ಭಕ್ತರು ಸ್ನಾನ ಮಾಡುವ ಹರ್ ಕೀ ಪೌರಿಯಲ್ಲಿನ ಗಂಗಾಜಲವು, ಕೇಂದ್ರ ಪರಿಸರ ಮಾಲಿನ್ಯ ಮಂಡಳಿಯು ನಿಗದಿಸಿರುವ ಮಾನದಂಡಗಳಿಗಿಂತ ಹೆಚ್ಚು ಪ್ರದೂಷಿತವಾಗಿತ್ತು. ಇದೇ ಕಾರಣದಿಂದಾಗಿ ಗಂಗೆಯಲ್ಲಿ ಸ್ನಾನವನ್ನು ಮಾಡುವುದರಿಂದ ಹಾಗೂ ಈ ನೀರನ್ನು ಕುಡಿಯುವುದರಿಂದ, ಸಾಂಕ್ರಾಮಿಕ ಮತ್ತು ಅನ್ಯ ಕೆಲವಿಧದ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳು ಹೆಚ್ಚಾಗಿತ್ತು. ಮನುಷ್ಯನ ಮಲದಲ್ಲಿರುವ ಅಪಾಯಕಾರಿ ರೋಗಾಣುಗಳು ಹಲವಾರು ವಿಧದ ಜಲಜನ್ಯ ರೋಗಗಳಿಗೆ ಕಾರಣವೆನಿಸುವುದರೊಂದಿಗೆ, ಈ ನೀರಿನ ಬಳಕೆಯಿಂದ ಚರ್ಮರೋಗಗಳು, ಶ್ರವಣ ಇಂದ್ರಿಯಕ್ಕೆ ಸಂಬಂಧಿಸಿದ ಮತ್ತು ವಾಂತಿ- ಭೇದಿಗಳಂತಹ ಕಾಯಿಲೆಗಳು ಉದ್ಭವಿಸುತ್ತವೆ. 

ಜಗತ್ಪ್ರಸಿದ್ಧ ಕುಂಭಮೇಳಕ್ಕಿಂತ ಕೆಲವೇ ದಿನಗಳ ಮುನ್ನ ಹರಿದ್ವಾರದ ಸಮೀಪದಲ್ಲಿ ಗಂಗಾನದಿಗೆ ಕಲುಷಿತ ನೀರನ್ನು ವಿಸರ್ಜಿಸುವ ೧೦ ಬೃಹತ್ ಚರಂಡಿಗಳ ನೀರನ್ನು ಪಿ ಎಸ್ ಐ ನ ಸಂಶೋಧಕರು ಹಲವಾರು ಪರೀಕ್ಷೆಗಳಿಗೆ ಒಳಪಡಿಸಿದ್ದರು. ಈ ಸಂದರ್ಭದಲ್ಲಿ ಚರಂಡಿಗಳಿಗೆ ನೀರನ್ನು ವಿಸರ್ಜಿಸುವ ಮುನ್ನ ಬಳಸುತ್ತಿದ್ದ ಕೊಳಚೆ ನೀರು ಸಂಸ್ಕರಣಾ ಘಟಕಗಳು ಸಮರ್ಪಕವಾಗಿ ಕಾರ್ಯಾಚರಿಸದ ಕಾರಣದಿಂದಾಗಿ, ಮಲಿನ ಹಾಗೂ ತ್ಯಾಜ್ಯ ನೀರು ನೇರವಾಗಿ ಗಂಗಾನದಿಯನ್ನು ಸೇರುತ್ತಿದ್ದುದು ಪತ್ತೆಯಾಗಿತ್ತು. ಹಾಗೂ ಇದೇ ಕಾರಣದಿಂದಾಗಿ ಈ ಕೊಳಚೆ ನೀರಿನಲ್ಲಿ ಅತ್ಯಧಿಕ ಪ್ರಮಾಣದ ಅಪಾಯಕಾರಿ ರೋಗಾಣುಗಳು ಇರುವುದು ತಿಳಿದುಬಂದಿತ್ತು. 

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳಂತೆ, ಯಾವುದೇ ನದಿಯ ನೀರನ್ನು ಪರೀಕ್ಷಿಸುವಾಗ ೧೦೦ ಮಿಲಿ ಲೀಟರ್ ನೀರಿನಲ್ಲಿರುವ ರೋಗಾಣುಗಳ ಪ್ರಮಾಣವು, ಗರಿಷ್ಟ ಸಂಭವನೀಯ ಸಂಖ್ಯೆಯಾಗಿರುವ ೫೦೦ ನ್ನು ಮೀರಬಾರದು. ಆದರೆ ಪಿ ಎಸ್ ಐ ನ ಸಂಶೋಧಕರು ಮೂರು ವಿಭಿನ್ನ ಸ್ಥಳಗಳಿಂದ ಸಂಗ್ರಹಿಸಿದ್ದ ಗಂಗಾಜಲದಲ್ಲಿನ ರೋಗಾಣುಗಳ ಪ್ರಮಾಣವು ೧೦೦೦, ೧೫೦೦ ಮತ್ತು ಜಗಜೀತ್ ಪುರದಲ್ಲಿ ಸಂಗ್ರಹಿಸಿದ್ದ ಮಾದರಿಯಲ್ಲಿ ೭.೫ ಲಕ್ಷದಷ್ಟಿತ್ತು!. 

ಗಂಗಾನದಿಗೆ ಹರಿದು ಬರುವ ಕೊಳಚೆ ನೀರಿನ ಪ್ರಮಾಣವು ಅಗಾಧವಾಗಿದ್ದು, ಇದನ್ನು ಶುದ್ಧೀಕರಿಸಲು ಅಳವಡಿಸಿರುವ ಜಲ ಸಂಸ್ಕರಣಾ ಘಟಕಗಳ ಸಾಮರ್ಥ್ಯಕ್ಕಿಂತಲೂ ಇದು ಸಾಕಷ್ಟು ಅಧಿಕವಾಗಿದೆ. ಇನ್ನು ಕೆಲ ಘಟಕಗಳು ಕಾರಣಾಂತರಗಳಿಂದ ಸಮರ್ಪಕವಾಗಿ ಕಾರ್ಯಾಚರಿಸದೇ ಇರುವುದರಿಂದಾಗಿ, ಗಂಗೆಯ ಜಲಮಾಲಿನ್ಯದ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತಿದೆ. ನಿಜ ಹೇಳಬೇಕಿದ್ದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹರಿಯುತ್ತಿರುವ ನದಿಗಳೂ ಇದಕ್ಕೆ ಅಪವಾದವೆನಿಸಿಲ್ಲ. ಆದರೆ ಈ ನದಿಗಳಲ್ಲಿನ ಜಲಪ್ರದೂಷಣೆಯ ಪ್ರಮಾಣವು ಗಂಗಾನದಿಯಷ್ಟು ತೀವ್ರವಾಗಿರುವ ಸಾಧ್ಯತೆಗಳಿಲ್ಲ. 

ಅದೇನೇ ಇರಲಿ, ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವೆನಿಸಬಲ್ಲ ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಹಮ್ಮಿಕೊಂಡಿರುವ ಕ್ರಿಯಾಯೋಜನೆಗಳು ಯಶಸ್ವಿಯಾಗಬೇಕಿದ್ದಲ್ಲಿ, ದೇಶದ ಪ್ರಜೆಗಳ ಪರಿಪೂರ್ಣ ಸಹಕಾರವೂ ಅತ್ಯವಶ್ಯಕವೆನಿಸುತ್ತದೆ. ದೇಶಾದ್ಯಂತ ವ್ಯಾಪಕವಾಗಿ ಕಂಡುಬರುತ್ತಿರುವ ಈ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಪರಿಹರಿಸದೆ ಇದ್ದಲ್ಲಿ, ದೇಶದ ಅಧಿಕತಮ " ಪಾಪನಾಶಿನಿ " ನದಿಗಳು " ರೋಗವಾಹಿನಿ " ಗಳಾಗಿ ಪರಿವರ್ತನೆಗೊಳ್ಳಲಿವೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೭-೦೩-೨೦೧೦ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. ಸ್ವಚ್ಚ್ ಭಾರತ ಅಭಿಯಾನದ ಸಲುವಾಗಿ ಇದೀಗ ಬ್ಲಾಗ್ ನಲ್ಲಿ ಪ್ರಕಟಿಸಲಾಗಿದೆ. 

 

Monday, October 13, 2014

KANDALLI KASAVANNU ESEDAVARIGE DANDA- JAILUSHIKSHE !




 ಕಂಡಲ್ಲಿ ಕಸವನ್ನು ಎಸೆದವರಿಗೆ ದಂಡ - ಜೈಲುಶಿಕ್ಷೆ !

ಸ್ವಚ್ಛ ಭಾರತ ಅಭಿಯಾನ ಆರಂಭವಾಗುವುದಕ್ಕೆ ಮುನ್ನ, ಅನೇಕ ಜನರು ಕಂಡಕಂಡಲ್ಲಿ ತ್ಯಾಜ್ಯಗಳನ್ನು ಎಸೆಯುವವರಿಗೆ ಗಣನೀಯ ಪ್ರಮಾಣದ ದಂಡವನ್ನು ವಿಧಿಸಬೇಕೆಂದು ವಾದಿಸಿದ್ದರು. ಇನ್ನು ಕೆಲವರಂತೂ ಇಂತಹ ಹೇಯ ಕೃತ್ಯಗಳನ್ನು ಎಸಗುವವರಿಗೆ ಜೈಲು ಶಿಕ್ಷೆ ನೀಡಬೇಕೆನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಕರ್ನಾಟಕ ರಾಜ್ಯ ಸರ್ಕಾರವು ಈ ಬಗ್ಗೆ ೨೦೧೦ ರಲ್ಲೇ ತಳೆದಿದ್ದ ನಿಲುವಿನಂತೆ, ಕಂಡಲ್ಲಿ ತ್ಯಾಜ್ಯಗಳನ್ನು ಎಸೆಯುವವರಿಗೆ ಭಾರತೀಯ ದಂಡ ಸಂಹಿತೆಯಂತೆ ದಂಡ ಮತ್ತು ಜೈಲುಶಿಕ್ಷೆಗಳನ್ನು ವಿಧಿಸುವಂತೆ ಆದೇಶಿಸಿತ್ತು. ಬಹುತೇಕ ಪತ್ರಿಕೆಗಳ ಮುಖಪುಟದಲ್ಲಿ ಪ್ರತ್ಯಕ್ಷವಾಗಿದ್ದ ಈ ವರದಿಯು, ತದನಂತರ ಪತ್ರಿಕೆಗಳಿಗೆ ಗ್ರಾಸವೆನಿಸಿರಲೇ ಇಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಅಧಿಕತಮ ಕನ್ನಡಿಗರಿಗೆ ಇಂತಹ ಸರ್ಕಾರಿ ಆದೇಶದ ನೆನಪಿಲ್ಲ.

ಕಾನೂನುಗಳ ಅನುಷ್ಠಾನ 

ಕಾನೂನು ಒಂದು ಕತ್ತೆ ಎನ್ನುವ ಮಾತನ್ನು ನೀವೂ ಕೇಳಿರಲೇಬೇಕು. ಏಕೆಂದರೆ ದೇಶದ ಪ್ರಜೆಗಳು ನೆಮ್ಮದಿಯಿಂದ ಜೀವಿಸುವ ಸಲುವಾಗಿ ಸರ್ಕಾರವೇ ರೂಪಿಸಿರುವ ಕಾನೂನುಗಳು ಇರುವುದೇ ಮುರಿಯುವ ಸಲುವಾಗಿ ಎನ್ನುವುದನ್ನು ಸಮರ್ಥಿಸುವಂತಹ ಅನೇಕ ಘಟನೆಗಳನ್ನು ನೀವು ಕಂಡಿರಬೇಕು. ದೇಶದ ಉದ್ದಗಲಕ್ಕೂ ಪ್ರತಿನಿತ್ಯ ಕಾಣಸಿಗುವ ಇಂತಹ ಕಾನೂನು ಉಲ್ಲಂಘನೆಯ ಪ್ರಕರಣಗಳನ್ನು ಕಂಡೂ ಕಾಣದಂತೆ ವರ್ತಿಸುವ ಪ್ರಜೆಗಳು, ಸಂದರ್ಭೋಚಿತವಾಗಿ ತಾವೂ ಸಣ್ಣಪುಟ್ಟ ಕಾನೂನುಗಳನ್ನು ಉಲ್ಲಂಘಿಸಲು ಹಿಂಜರಿಯುವುದಿಲ್ಲ!. 

ನಮ್ಮ ರಾಜ್ಯದ ಪ್ರತಿಯೊಂದು ಸ್ಥಳೀಯ  ಸಂಸ್ಥೆಗಳ ಪಾಲಿಗೆ ಬಗೆಹರಿಸಲಾಗದ ಸಮಸ್ಯೆ ಎನಿಸುತ್ತಿರುವ ತ್ಯಾಜ್ಯ ಸಂಗ್ರಹ - ವಿಲೇವಾರಿಗಳ ಸಂದರ್ಭಗಳಲ್ಲಿ ಉದ್ಭವಿಸುತ್ತಿರುವ ತೊಂದರೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರವು ಕೆಲವೊಂದು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲು ೨೦೧೦ ರಲ್ಲಿ ಉದ್ದೇಶಿಸಿತ್ತು. ಏಕೆಂದರೆ ರಾಜ್ಯದ ಎಲ್ಲೆಡೆ ಕಾನೂನುಬಾಹಿರವಾಗಿ ಸಾಮಾನ್ಯ ಮತ್ತು ಅಪಾಯಕಾರಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವ ಹವ್ಯಾಸ ನಿಧಾನವಾಗಿ ಹೆಚ್ಚಲಾರಂಭಿಸಿತ್ತು. ಖಾಲಿ ಜಾಗಗಳು, ರಸ್ತೆ ಬದಿ- ಚರಂಡಿಗಳುಮತ್ತು  ಕೆರೆಕುಂಟೆಗಳಲ್ಲೂ ವಿಸರ್ಜಿಸುತ್ತಿದ್ದ ವೈವಿಧ್ಯಮಯ ತ್ಯಾಜ್ಯಗಳು, ಆರೋಗ್ಯದ ಮತ್ತಿತರ ಸಮಸ್ಯೆಗಳಿಗೆ ಕಾರಣವೆನಿಸಿತ್ತು.  

ರಾಜ್ಯದ ಅನೇಕ ನಗರ - ಪಟ್ಟಣಗಳಲ್ಲಿ ತ್ಯಾಜ್ಯಗಳು ಉತ್ಪನ್ನವಾಗುವ ಸ್ಥಳಗಳಿಂದಲೇ ಇವುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸುವ ಯೋಜನೆ ಅದಾಗಲೇ ಆರಂಭಗೊಂಡಿದ್ದರೂ, ಸಾರ್ವಜನಿಕ ಸ್ಥಳಗಳಲ್ಲಿ ರಾಶಿಬೀಳುತ್ತಿದ್ದ ತ್ಯಾಜ್ಯಗಳ ಪ್ರಮಾಣ ಮಾತ್ರ ಒಂದಿಷ್ಟೂ ಕಡಿಮೆಯಾಗಿರಲಿಲ್ಲ. ಇದೇ ಕಾರಣದಿಂದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ಆಡಳಿತಾಧಿಕಾರಿಗಳಿಗೆ ಸುತ್ತೊಲೆಯೊಂದನ್ನು ಕಳಿಸಿದ್ದರು. ಇದರಂತೆ ಪುರಸಭಾ ಘನತ್ಯಾಜ್ಯ ಸಂಗ್ರಹ- ವಿಲೇವಾರಿ ನಿಯಮಗಳಂತೆ, ಸಂಗ್ರಹಿತ ತ್ಯಾಜ್ಯಗಳನ್ನು ಸುರಕ್ಷಿತ ಹಾಗೂ ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವಂತೆ ಆದೇಶಿಸಿದ್ದರು. ಅದೇ ರೀತಿಯಲ್ಲಿ ಜೈವಿಕ ಮತ್ತು ವೈದ್ಯಕೀಯ ತ್ಯಾಜ್ಯಗಳ ನಿಯಮ ೧೯೯೮  ರಂತೆ, ಎಲ್ಲಾ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಸೂಚಿಸಿದ್ದರು. 

ಕ್ರಿಮಿನಲ್ ಪ್ರಕರಣ  

ಮುಖ್ಯ ಕಾರ್ಯದರ್ಶಿಯವರು ಸಂಬಂಧಿತ ಅಧಿಕಾರಿಗಳಿಗೆ ಬರೆದಿದ್ದ ಪತ್ರದಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೨೬೮, ೨೬೯, ೨೭೦, ೨೭೭, ೨೭೮, ಮತ್ತು ೨೮೪ ರನ್ವಯ ಸಾರ್ವಜನಿಕ ಆರೋಗ್ಯ, ಸುರಕ್ಷತೆ, ಸೌಲಭ್ಯ, ಸಭ್ಯತೆಮತ್ತು ನೈತಿಕತೆಗಳನ್ನು ಉಲ್ಲಂಘಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕೆಂದು ಸೂಚಿಸಿದ್ದರು. 

ಇಂತಹ ಪ್ರಕರಣಗಳಲ್ಲಿ ಕನಿಷ್ಠ ೫೦೦ ರೂ. ದಂಡದಿಂದ ಆರಂಭಿಸಿ, ೬ ತಿಂಗಳುಗಳ ಜೈಲುವಾಸದಂತಹ ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ. ಈ ಕಾನೂನನ್ನು ಅನುಷ್ಠಾನಗೊಳಿಸುವ ಹೊಣೆಗಾರಿಕೆಯನ್ನು ಪರಿಸರ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳಿಗೆ ವಹಿಸಲಾಗಿತ್ತು. ವಿಶೇಷವೆಂದರೆ ಕಳೆದ ಮೂರು ವರ್ಷಗಳಲ್ಲಿ ಈ ಕಾಯಿದೆಯಂತೆ ಯಾರೊಬ್ಬರಿಗೂ ದಂಡ ಅಥವಾ ಜೈಲು ಶಿಕ್ಷೆಗಳನ್ನು ನೀಡಿದ ವಿಚಾರವು ನಮ್ಮ ಗಮನಕ್ಕೆ ಬಂದಿಲ್ಲ. ಹಾಗೂ ಪ್ರಾಯಶಃ ಇಂತಹ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ಕಂಡಲ್ಲಿ ತ್ಯಾಜ್ಯಗಳನ್ನು ಎಸೆಯುವ ಜನಸಾಮಾನ್ಯರ ಕೆಟ್ಟ ಹವ್ಯಾಸವು ಅಂತ್ಯಗೊಂಡಿಲ್ಲ!. 

ಕೊನೆಯ ಮಾತು 

ದೇಶದಲ್ಲಿ ಅಸ್ತಿತ್ವದಲ್ಲಿರುವ ಸಕಲ ಕಾನೂನುಗಳನ್ನು ಗೌರವಿಸಿ ಪರಿಪಾಲಿಸುವ ಮನೋಭಾವ ನಮ್ಮ ದೇಶದ ಪ್ರಜೆಗಳಲ್ಲೂ ಇದ್ದಿದ್ದಲ್ಲಿ, ಇಂದು " ಸ್ವಚ್ಚ ಭಾರತ ಅಭಿಯಾನ" ವನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸುತ್ತಲೇ ಇರಲಿಲ್ಲ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಅಂತೆಯೇ ಜನಸಾಮಾನ್ಯರ ಆರೋಗ್ಯದ ಗುಣಮಟ್ಟಗಳು ಉನ್ನತಸ್ಥರದಲ್ಲಿ ಇರುತ್ತಿದ್ದುದರಲ್ಲಿ ಸಂದೇಹವಿಲ್ಲ.

ಡಾ. ಸಿ.ನಿತ್ಯಾನಂದ ಪೈ, ಪುತ್ತೂರು