Wednesday, October 15, 2014

COSMETICS : VEG or NONVEG ?



 

  

 ಸೌಂದರ್ಯ ಪ್ರಸಾದನಗಳಲ್ಲಿ ಏನಿದೆಯೆಂದು ಬಲ್ಲಿರಾ ?

ತಮ್ಮ ಶಾರೀರಿಕ ಸೌಂದರ್ಯದ ಬಗ್ಗೆ ಕಾಳಜಿ ಇರದ ಹಾಗೂ ತಾನು ಸುಂದರವಾಗಿ ಕಾಣಿಸಬೇಕೆಂದು ಬಯಸದ ಸ್ತ್ರೀ- ಪುರುಷರು ಈ ಜಗತ್ತಿನಲ್ಲೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಇದೇ ಕಾರಣದಿಂದಾಗಿ ತಮ್ಮ ಶಾರೀರಿಕ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಬಲ್ಲ ಸೌಂದರ್ಯ ಪ್ರಸಾದನಗಳನ್ನು ಪ್ರತಿನಿತ್ಯ ತಪ್ಪದೆ ಬಳಸುವ ಸ್ತ್ರೀ- ಪುರುಷರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಆದರೆ ವೈವಿಧ್ಯಮಯ ಮತ್ತು ದುಬಾರಿ ಬೆಲೆಯ ಸೌಂದರ್ಯ ಪ್ರಸಾದನಗಳನ್ನು ಬಳಸುವ ಬಹುತೇಕ ಜನರಿಗೆ, ತಾವು ಉಪಯೋಗಿಸುತ್ತಿರುವ ಪ್ರಸಾದನಗಳ ತಯಾರಿಕೆಯ ಮತ್ತು ಇವುಗಳಲ್ಲಿ ಬಳಸುವ ನೈಸರ್ಗಿಕ,   ಕೃತಕ ರಾಸಾಯನಿಕ ಹಾಗೂ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ದ್ರವ್ಯಗಳ ಬಗ್ಗೆ ಯಾವುದೇ ಮಾಹಿತಿಗಳ ಅರಿವಿರುವುದಿಲ್ಲ. ಏಕೆಂದರೆ ಇಂತಹ ಉತ್ಪನ್ನಗಳ ತಯಾರಕರು ತಮ್ಮ ಉತ್ಪನ್ನಗಳನ್ನು ತಯಾರಿಸುವಾಗ ಬಳಸುವ ದ್ರವ್ಯಗಳ ಬಗ್ಗೆ ಗ್ರಾಹಕರಿಗೆ ಯಾವುದೇ ಮಾಹಿತಿಯನ್ನೇ ನೀಡುವುದಿಲ್ಲ !. ವಿಶೇಷವೆಂದರೆ ೧೯೮೬ ರಲ್ಲೇ ದೇಶಾದ್ಯಂತ ಜಾರಿಗೊಂಡಿದ್ದ ಗ್ರಾಹಕ ರಕ್ಷಣಾ ಕಾಯಿದೆಯಂತೆ, ತಾವು ಖರೀದಿಸಿ ಬಳಸುವ ಪ್ರತಿಯೊಂದು ಉತ್ಪನ್ನಗಳಲ್ಲಿ ಏನಿದೆಯೆಂದು ಅರಿತುಕೊಳ್ಳುವ ಹಕ್ಕು ಗ್ರಾಹಕರಿಗೆ ಇದೆ. 

ಬಣ್ಣದ ಗುರುತು ಕಡ್ಡಾಯ 

ಪ್ರಸ್ತುತ ಕೇಂದ್ರ ಸರ್ಕಾರವು ಜನಸಾಮಾನ್ಯರು ದಿನನಿತ್ಯ ಬಳಸುವ ಸೌಂದರ್ಯ ಪ್ರಸಾದನಗಳ ಹೊರಕವಚಗಳ ಮೇಲೆ " ಸಸ್ಯಜನ್ಯ " ಅಥವಾ " ಪ್ರಾಣಿಜನ್ಯ " ದ್ರವ್ಯಗಳನ್ನು ಬಳಸಿರುವ ಬಗ್ಗೆ ಹಸಿರು ಹಾಗೂ ಕೆಂಪು ಅಥವಾ ಕಂದು ಬಣ್ಣದ " ಗುರುತು " ಹಾಕುವಂತೆ ಹೊರಡಿಸಿದ್ದ ಅಧಿಸೂಚನೆಯನ್ನು, ಇವುಗಳ ತಯಾರಕರು ಖಂಡತುಂಡವಾಗಿ ವಿರೋಧಿಸುತ್ತಿದ್ದಾರೆ. ಅಂತೆಯೇ ಈ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.  

ಕೇಂದ್ರದಲ್ಲಿ ಅಧಿಕಾರದ ಗದ್ದುಗೆಯನ್ನು ಏರಿದ್ದ ನೂತನ ಸರ್ಕಾರವು ಕೇವಲ ಒಂದು ತಿಂಗಳಿನಲ್ಲೇ ಈ ಅಧಿಸೂಚನೆಯನ್ನು ಗ್ರಾಹಕ ವ್ಯವಹಾರಗಳ ಇಲಾಖೆಯ ಮೂಲಕ ಇದೆ ವರ್ಷದ ಜೂನ್ ೧೬ ರಂದು ಹೊರಡಿಸಿತ್ತು. ಈ ಅಧಿಸೂಚನೆಯಂತೆ ಗ್ರಾಹಕರು ಬಳಸುವ ಸೋಪ್, ಶಾಂಪೂ, ಮಹಿಳೆಯರು ಮತ್ತು ಪುರುಷರು ಬಳಸುವ ವಿವಿಧ ಸೌಂದರ್ಯ ಪ್ರಸಾದನಗಳು, ಟೂತ್ ಪೇಸ್ಟ್ ಮತ್ತಿತರ ಉತ್ಪನ್ನಗಳ ಹೊರಕವಚಗಳ ಮೇಲೆ ಸಸ್ಯಜನ್ಯ ದ್ರವ್ಯಗಳನ್ನು ಬಳಸಿದ್ದಲ್ಲಿ ಹಸಿರು ಮತ್ತು ಪ್ರಾಣಿಜನ್ಯ ದ್ರವ್ಯಗಳನ್ನು ಬಳಸಿದ್ದಲ್ಲಿ ಕೆಂಪು ಅಥವಾ ಕಂದು ಬಣ್ಣದ ಗುರುತನ್ನು ಸ್ಪಷ್ಟವಾಗಿ ಕಾಣಿಸುವಂತೆ ಮುದ್ರಿಸಬೇಕಾಗುತ್ತದೆ. ಲೀಗಲ್ ಮೆಟ್ರೋಲಜಿ ಕಾಯಿದೆ ೨೦೦೯ ಮತ್ತು ಲೀಗಲ್ ಮೆಟ್ರೋಲಜಿ ( ಪ್ಯಾಕೆಜ್ಡ್ ಕೊಮೊಡಿಟೀಸ್ ನಿಯಮ ೨೦೧೧ ) ಕಾಯಿದೆಯನ್ವಯ ಈ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಜುಲೈ ೧ ನೆ ತಾರೀಕಿನಿಂದ ಇದನ್ನು ಅನುಷ್ಠಾನಗೊಳಿಸಬೇಕಾಗಿತ್ತು. 

ಕೋಟ್ಯಂತರ ರೂಪಾಯಿಗಳ ವಹಿವಾಟು 

ಒಂದಾನೊಂದು ಕಾಲದಲ್ಲಿ ಭಾರತೀಯ  ನಾರಿಯರು ಬಳಸುತ್ತಿದ್ದ ಅರಶಿನ, ಚಂದನ, ಕುಂಕುಮ ಮತ್ತು ಕೆಲ ಮಹಿಳೆಯರು ಬಳಸುತ್ತಿದ್ದ ಸ್ನೋ ಮತ್ತು ಟಾಲ್ಕಂ ಪೌಡರ್ ಗಳ ಸ್ಥಾನವನ್ನು ಇಂದು ವೈವಿಧ್ಯಮಯ ಸೌಂದರ್ಯ ಪ್ರಸಾದನಗಳು ಆಕ್ರಮಿಸಿವೆ.ಇವುಗಳ ವೈವಿಧ್ಯ ಎಷ್ಟಿದೆಯೆಂದರೆ, " ನಖಶಿಖಾಂತ " ಬಳಸಬಹುದಾದ ನೂರಾರು ಪ್ರಸಾದನಗಳು ಇಂದು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಂತೆಯೇ ಇತ್ತೀಚಿನ ಕೆಲವರ್ಷಗಳಿಂದ ಪುರುಷರಿಗಾಗಿಯೇ ಇಂತಹ ಪ್ರತ್ಯೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳ ಬೇಡಿಕೆ ಮತ್ತು ಮಾರಾಟಗಳೂ ಭರ್ಜರಿಯಾಗಿವೆ.

ಭಾರತದಲ್ಲಿ ಸೌಂದರ್ಯ ಪ್ರಸಾದನಗಳ ಉದ್ದಿಮೆಯ ವಾರ್ಷಿಕ ವ್ಯವಹಾರವು ಸುಮಾರು ೬೦,೦೦೦ ಕೋಟಿ ರೂ.ಗಳಾಗಿದ್ದು, ಇಂತಹ ಉತ್ಪನ್ನಗಳ ತಯಾರಕರ ಇಂಡಿಯನ್ ಬ್ಯೂಟಿ ಎಂಡ್ ಹೈಜೀನ್ ಅಸೋಸಿಯೇಶನ್( ಐ.ಬಿ.ಎಚ್. ಎ ) ಎನ್ನುವ ಸಂಘಟನೆಯು ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆಯ ವಿರುದ್ಧ ದಾವೆಯನ್ನು ಹೂಡಿದೆ. ಸೆಪ್ಟೆಂಬರ್ ೯ ರಂದು ಮುಂಬೈ ನ ಉಚ್ಛ ನ್ಯಾಯಾಲಯವು ಈ ಅಧಿಸೂಚನೆಯ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಿದ್ದು, ಸೌಂದರ್ಯ ಪ್ರಸಾದನಗಳ ತಯಾರಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ಈ ಬಗ್ಗೆ ಕೇಂದ್ರ ಸರ್ಕಾರವು ೨ ವಾರಗಳಲ್ಲಿ  ಪ್ರತಿಕ್ರಿಯೆಯನ್ನು ನೀಡುವಂತೆ ಸೂಚಿಸಿದ್ದು, ಕೇಂದ್ರವು ಎರಡು ವಾರಗಳ ಹೆಚ್ಚುವರಿ ಅವಧಿಯನ್ನು ನೀಡುವಂತೆ ವಿನಂತಿಸಿದೆ. 

ತಯಾರಕರ ಆಕ್ಷೇಪ 

ಕೇಂದ್ರ ಸರ್ಕಾರವು ಉದ್ದಿಮೆಯ ಪ್ರತಿನಿಧಿಗಳೊಂದಿಗೆ ಸಮಾಲೋಚಿಸದೇ ಮತ್ತು ಈ ಅಧಿಸೂಚನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸದೇ, ಏಕಪಕ್ಷೀಯವಾಗಿ ಇದನ್ನು ಜಾರಿಗೆ ತಂದಿರುವ ಬಗ್ಗೆ ಉದ್ದಿಮೆಯು ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದೆ. ಈ ಉದ್ದಿಮೆಯ ಪ್ರತಿನಿಧಿಗಳೇ ಹೇಳುವಂತೆ, ಸೌಂದರ್ಯ ಪ್ರಸಾದನಗಳ ತಯಾರಿಕೆಯಲ್ಲಿ ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಕೊಬ್ಬು ಮತ್ತು ಎಣ್ಣೆ ಇತ್ಯಾದಿ ದ್ರವ್ಯಗಳನ್ನು ಬಳಸಲಾಗುತ್ತಿದೆ. ಆದರೆ ಇವುಗಳನ್ನು ಆಂತರಿಕ ಸೇವನೆಗಾಗಿ ಬಳಸದ ಕಾರಣದಿಂದಾಗಿ, ಈ ಉತ್ಪನ್ನಗಳ ಹೊರಕವಚಗಳ ಮೇಲೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಎನ್ನುವ ಗುರುತನ್ನು ಹಾಕುವ ಅವಶ್ಯಕತೆಯೇ ಇಲ್ಲವೆಂದು ವಾದಿಸುತ್ತಿರುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ!. 

ನಿಜ ಹೇಳಬೇಕಿದ್ದಲ್ಲಿ ಸೌಂದರ್ಯ ಪ್ರಸಾದನಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಎಣ್ಣೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದ್ದು, ಪ್ರಾಣಿಗಳ ಚರ್ಮ, ಎಲುಬು ಮತ್ತಿತರ ಭಾಗಗಳನ್ನೂ ಉಪಯೋಗಿಸಲಾಗುತ್ತದೆ. ಇದೇ ಕಾರಣದಿಂದಾಗಿ ಇಂತಹ ಯಾವುದೇ ಉತ್ಪನ್ನಗಳನ್ನು ಆಂತರಿಕ ಅಥವಾ ಬಾಹ್ಯ ಉಪಯೋಗಕ್ಕಾಗಿ ಬಳಸುವ ಜನರಿಗೆ ಈ ಬಗ್ಗೆ ಸಮರ್ಪಕ ಮಾಹಿತಿಯನ್ನು ನೀಡಬೇಕಾದ ಹೊಣೆಗಾರಿಕೆ ಇವುಗಳ ತಯಾರಕರ ಮೇಲಿದೆ.( ಪಾಶ್ಚಾತ್ಯ ದೇಶಗಳಲ್ಲಿ ಇದು ಕಡ್ಡಾಯವಾಗಿದೆ.) ಅಂತೆಯೇ ಅನೇಕ ಭಾರತೀಯರು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ನಂಬಿಕೆಗಳಿಂದಾಗಿ, ಪ್ರಾಣಿಜನ್ಯ ಉತ್ಪನ್ನಗಳನ್ನು ಬಾಹ್ಯ ಅಥವಾ ಆಂತರಿಕ ಉಪಯೋಗಕ್ಕಾಗಿ ಬಳಸುವುದಿಲ್ಲ. ಇದಲ್ಲದೇ ಪ್ರಾಣಿಜನ್ಯ ದ್ರವ್ಯಗಳ ಬಳಕೆಯಿಂದ ಅನೇಕರಲ್ಲಿ " ಅಲರ್ಜಿ " ಯಂತಹ ಅಥವಾ ಅನ್ಯವಿಧದ  ಆರೋಗ್ಯದ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಅಂತೆಯೇ ಕೆಲ ಸಂದರ್ಭಗಳಲ್ಲಿ ಪ್ರಾಣಿಜನ್ಯ ದ್ರವ್ಯಗಳನ್ನು ಸಂಗ್ರಹಿಸುವಾಗ ಈ ಪ್ರಾಣಿಗಳಿಗೆ ಹಿಂಸೆಯಾಗುವಂತಹ ವಿಧಾನಗಳನ್ನು ಅನುಸರಿಸಲಾಗುತ್ತದೆ. ಪ್ರಾಣಿಹಿಂಸೆಯನ್ನು ವಿರೋಧಿಸುವ ವ್ಯಕ್ತಿಗಳಿಗೆ ಇದು ವರ್ಜ್ಯವೆನಿಸುತ್ತದೆ. ಇವೆಲ್ಲಾ ಕಾರಣಗಳಿಂದಾಗಿ ಸೌಂದರ್ಯ ಪ್ರಸಾದನಗಳ ಹೊರಕವಚಗಳ ಮೇಲೆ ಸರ್ಕಾರ ಆದೇಶಿಸಿರುವಂತೆ ನಿಗದಿತ ಬಣ್ಣದ ಗುರುತನ್ನು ಹಾಕಲೇಬೇಕಾಗುತ್ತದೆ.

ಲಾಭದತ್ತ ತಯಾರಕರ ಚಿತ್ತ 

ವಾರ್ಷಿಕ ೬೦,೦೦೦ ಸಾವಿರ ಕೋಟಿಗೂ ಅಧಿಕ ವ್ಯವಹಾರ ನಡೆಸುತ್ತಿರುವ ಈ ಲಾಭದಾಯಕ ಉದ್ದಿಮೆಯು, ವರ್ಷಂಪ್ರತಿ ಶೇ.೨೦ ರಷ್ಟು ಅಭಿವೃದ್ಧಿಯನ್ನು ತೋರುತ್ತಿದೆ. ಸುಮಾರು ಎರಡು ವರ್ಷಗಳ ಹಿಂದೆ ಅಗ್ರಸ್ಥಾನದಲ್ಲಿದ್ದ ವೈಯುಕ್ತಿಕ ಸೌಂದರ್ಯ ಪ್ರಸಾದನಗಳ ವಾರ್ಷಿಕ ವಹಿವಾಟು ೩೫,೦೦೦ ಕೋಟಿ ರೂ.ಗಳಾಗಿದ್ದು, ಇದರ ನಂತರದ ಸ್ಥಾನವು ೧೩, ೦೦೦ ಕೋಟಿ ರೂ.ಗಳ ಟಾಯ್ಲೆಟ್ ಸಾಬೂನುಗಳಿಗೆ ಸಲ್ಲುತ್ತದೆ.ಇದೇ ಸಂದರ್ಭದಲ್ಲಿ ದಂತಮಂಜನಗಳು ಮತ್ತು ಚರ್ಮದ ಆರೈಕೆಯ ಉತ್ಪನ್ನಗಳು ಮೂರನೆಯ ಸ್ಥಾನದಲ್ಲಿದ್ದವು. ಈ ರೀತಿಯಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ನಡೆಸುತ್ತಿರುವ ಇಂತಹ ಉದ್ದಿಮೆಗಳು, ತಮ್ಮ ಲಾಭದತ್ತ ಗಮನವನ್ನು ಕೆಂದ್ರೀಕರಿಸುತ್ತಿವೆಯೇ ಹೊರತು, ತಮ್ಮ ಉತ್ಪನ್ನಗಳನ್ನು ಖರೀದಿಸಿ ಬಳಸುವ ಗ್ರಾಹಕರ ಹಿತರಕ್ಷಣೆಯತ್ತ ಅಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ. ಸರ್ಕಾರದ ಅಧಿಸೂಚನೆಯನ್ನು ಈ ಉದ್ದಿಮೆದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿರುವುದು ಇದನ್ನು ಸಮರ್ಥಿಸುತ್ತದೆ.  

ಗೌಪ್ಯತೆಯ ಮುಸುಕು 

ಪ್ರಸ್ತುತ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಧಿಸೂಚನೆಯನ್ನು ಪರಿಪಾಲಿಸಿದಲ್ಲಿ, ತಮ್ಮ ವ್ಯವಹಾರವು ಕೋಟ್ಯಂತರ ರೂಪಾಯಿಗಳ ನಷ್ಟಕ್ಕೆ ಗುರಿಯಾಗಬಹುದೆನ್ನುವ ಸಂದೇಹ ಉದ್ದಿಮೆಯನ್ನು ಕಾಡುತ್ತಿದೆ. ಹಾಗೂ ಇದೇ ಕಾರಣದಿಂದಾಗಿ ತಮ್ಮ ಉತ್ಪನ್ನಗಳನ್ನು ಗ್ರಾಹಕರು " ಸೇವಿಸುವುದಿಲ್ಲ " ಎನ್ನುವ ಕಾರಣದಿಂದಾಗಿ ತಮ್ಮ ಉತ್ಪನ್ನಗಳಲ್ಲಿ ಪ್ರಾಣಿಜನ್ಯ ದ್ರವ್ಯಗಳು ಇವೆಯೇ ಎನ್ನುವುದನ್ನು ತಾವು ಘೋಷಿಸುವ ಮತ್ತು ಗ್ರಾಹಕರು ಅರಿತುಕೊಳ್ಳುವ ಅವಶ್ಯಕತೆಯಿಲ್ಲ ಎನ್ನುವ ವಾದವನ್ನು ಮಂಡಿಸುತ್ತಿರುವ ಉದ್ದಿಮೆಯ ಪ್ರತಿನಿಧಿಗಳ ವಾದದಲ್ಲಿ ಹುರುಳಿಲ್ಲ. ಅದೇ ರೀತಿಯಲ್ಲಿ ಈ ಅಧಿಸೂಚನೆಯನ್ನು ಜಾರಿಗೊಳಿಸುವ ಮುನ್ನ ತಮ್ಮೊಂದಿಗೆ ಸರ್ಕಾರವು ಸಮಾಲೋಚನೆಯನ್ನೇ ನಡೆಸಿಲ್ಲ ಎನ್ನುವುದು, ಕೇವಲ ಒಂದು ನೆಪವೇ ಹೊರತು ಸಮರ್ಥನೀಯ ಕಾರಣವಲ್ಲ. 

ಸೌಂದರ್ಯ ಪ್ರಸಾದನಗಳ ತಯಾರಕರು ಶತಾಯಗತಾಯ ತಮ್ಮ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಿರುವ ದ್ರವ್ಯಗಳ ಮಾಹಿತಿಯನ್ನು ಗೌಪ್ಯತೆಯ ಮುಸುಕಿನಲ್ಲಿ ಅಡಗಿಸುವ ಪ್ರಯತ್ನವನ್ನು ಮಾಡುತ್ತಿರುವುದು ಇದೀಗ ಗುಟ್ಟಾಗಿ ಉಳಿದಿಲ್ಲ. ಅದೇ ರೀತಿಯಲ್ಲಿ ಇದು ಕೇವಲ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ದ್ರವ್ಯಗಳ ಬಳಕೆಯ ವಿಚಾರ ಮಾತ್ರವಲ್ಲ, ಈ ಉತ್ಪನ್ನಗಳನ್ನು ಬಳಸುವ ಗ್ರಾಹಕರ ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ಗ್ರಾಹಕ ರಕ್ಷಣಾ ಕಾಯಿದೆಗಳಿಗೆ ಸಂಬಂಧಿಸಿದ ವಿಚಾರವೂ ಆಗಿದೆ. ಈ ದೃಷ್ಟಿಯಿಂದ ಸರ್ಕಾರದ ನಿರ್ಧಾರವು ನಿಶ್ಚಿತವಾಗಿಯೂ ಸಮಂಜಸವೆನಿಸಿದೆ. ಇದೀಗ ಸರ್ಕಾರವು ತನ್ನ ನಿರ್ಧಾರವನ್ನು ನ್ಯಾಯಾಲಯದ ಮುಂದೆ ಸಮರ್ಥಿಸಿಕೊಳ್ಳಬೇಕಿದೆ. ಇದಕ್ಕೆ ವ್ಯತಿರಿಕ್ತವಾಗಿ ಉದ್ದಿಮೆಗಳ ಒತ್ತಡಕ್ಕೆ ಮಣಿದು ತನ್ನ ನಿರ್ಧಾರದಿಂದ ಹಿಂದೆ ಸರಿದಲ್ಲಿ, ಈ ಅಧಿಸೂಚನೆಯನ್ನು ಮತ್ತು ಗ್ರಾಹಕ ರಕ್ಷಣಾ ಕಾಯಿದೆಯನ್ನು ಜಾರಿಗೆ ತಂದ ಉದ್ದೇಶವೇ ವಿಫಲವಾಗಲಿದೆ. ಇದಕ್ಕೂ ಮಿಗಿಲಾಗಿ ಅಮಾಯಕ ಗ್ರಾಹಕರ ರಕ್ಷಣೆಗೆ ಸರ್ಕಾರ ನೆರವಾಗುತ್ತಿಲ್ಲ ಎನ್ನುವ ಅಪವಾದಕ್ಕೆ ಗುರಿಯಾಗಲಿದೆ.  

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು  

  

No comments:

Post a Comment