Thursday, October 23, 2014

BALA SVACHCHA ABHIYAANA


 ಬಾಲ ಸ್ವಚ್ಛ ಅಭಿಯಾನ : ಸೇರಲಿ ಜಲ- ವಾಯುಮಾಲಿನ್ಯ 

ಗಾಂಧೀ ಜಯಂತಿಯಂದು ಆರಂಭಗೊಂಡಿದ್ದ " ಸ್ವಚ್ಛ ಭಾರತ ಅಭಿಯಾನ " ಕ್ಕೆ ಜನಸಾಮಾನ್ಯರಿಂದ ದೇಶಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂದು ಹಳ್ಳಿಯಿಂದ ಆರಂಭಿಸಿ ದಿಲ್ಲಿಯ ತನಕ ಅಸಂಖ್ಯ ಜನರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದುದೇ ಇದರ ಯಶಸ್ಸಿಗೆ ಸಾಕ್ಷಿಯಾಗಿತ್ತು. ವಿಶೇಷವೆಂದರೆ ಈ ಅಭಿಯಾನಕ್ಕೆ ಚಾಲನೆ ನೀಡಿ ಹಲವಾರು ದಿನಗಳೇ ಕಳೆದಿದ್ದರೂ, ಅನೇಕ ರಾಜ್ಯಗಳಲ್ಲಿ ಇಂದಿಗೂ ಸ್ವಚ್ಛತಾ ಅಭಿಯಾನ ನಡೆಯುತ್ತಲೇ ಇದೆ. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಕರೆಗೆ ಸ್ಪಂದಿಸಿದ ಪ್ರಜೆಗಳು, ಅವರ ಅಪೇಕ್ಷೆಯಂತೆ ೨೦೧೯ ರಲ್ಲಿ ಬಾಪೂಜಿಯವರ ೧೫೦ ನೆ ಜನ್ಮದಿನದ ಸಂದರ್ಭದಲ್ಲಿ ನಮ್ಮ ದೇಶವನ್ನು ಸ್ವಚ್ಛ, ಸ್ವಸ್ಥ ಮತ್ತು ಸುಂದರವಾಗಿಸುವ ಕನಸನ್ನು ನನಸಾಗಿಸಲು ಸಾಕಷ್ಟು ಶ್ರಮಿಸಬೇಕಿದೆ. ತನ್ಮೂಲಕ ಪ್ರಪಂಚದ ಅತ್ಯಂತ ಸ್ವಚ್ಛ ಹತ್ತು ದೇಶಗಳ ಯಾದಿಯಲ್ಲಿ ಸ್ಥಾನವನ್ನು ಗಳಿಸಬೇಕಿದೆ. 

ಬಾಲ ಸ್ವಚ್ಛ ಅಭಿಯಾನ 

ಶಾಲಾ ವಿದ್ಯಾರ್ಥಿಗಳಲ್ಲೂ ಸ್ವಚ್ಛತೆಯ ಅರಿವನ್ನು ಮೂಡಿಸುವ ಸಲುವಾಗಿ, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ರವರ ಜನ್ಮದಿನವಾಗಿರುವ ನವೆಂಬರ್ ೧೪ ರಂದು " ಬಾಲ ಸ್ವಚ್ಛ ಅಭಿಯಾನ " ಕ್ಕೆ ಪ್ರಧಾನಿ ಮೋದಿಯವರು ಚಾಲನೆಯನ್ನು ನೀಡಲಿದ್ದಾರೆ. ಈ ರೀತಿಯಲ್ಲಿ ದೇಶದ ಇಬ್ಬರು ಮಹಾನ್ ನಾಯಕರ ಜನ್ಮದಿನದಂದು, ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಯೋಜನೆ ಮತ್ತು ಉದ್ದೇಶ ಮೋದಿಯವರ ಮನದಲ್ಲಿದೆ. 

ಮಕ್ಕಳಿಗೆ ಮಾಹಿತಿ ನೀಡಿ 

 ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸುವ ಮಕ್ಕಳಿಗೆ ನಮ್ಮ ದೇಶದ ಉದ್ದಗಲಕ್ಕೂ ಕಾಣಸಿಗುವ ವೈವಿಧ್ಯಮಯ ತ್ಯಾಜ್ಯಗಳು, ಬಯಲನ್ನೇ ಶೌಚಾಲಯವನ್ನಾಗಿ ಬಳಸುವುದು, ಮಳೆನೀರು ಹರಿವ ಚರಂಡಿಗಳಲ್ಲಿ ಕಲುಷಿತ ನೀರನ್ನು ವಿಸರ್ಜಿಸುವುದು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಲೇ ಇರುವ ವಾಹನಗಳು, ಕಾರ್ಖಾನೆಗಳು ಹಾಗೂ ಬೃಹತ್ ಉದ್ದಿಮೆಗಳು ವಿಸರ್ಜಿಸುವ ಅಪಾಯಕಾರಿ ಧೂಮ ಇತ್ಯಾದಿಗಳಿಂದ ಸಂಭವಿಸುತ್ತಿರುವ ಪರಿಸರ, ಜಲ ಮತ್ತು ವಾಯುಮಾಲಿನ್ಯಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಬೇಕು. ಅದೇ ರೀತಿಯಲ್ಲಿ ಮನುಷ್ಯನ ಆರೋಗ್ಯ ಮತ್ತು ಪರಿಸರ ಮಾಲಿನ್ಯಗಳಿಗೆ ಇರುವ ಅವಿನಾಭಾವ ಸಂಬಂಧಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಪ್ರಮುಖವಾಗಿ ತಮ್ಮ ಮನೆ, ಶಾಲೆ ಹಾಗೂ ಸುತ್ತಮುತ್ತಲ ಪರಿಸರಗಳನ್ನು  ಸ್ವಚ್ಛವಾಗಿ ಇರಿಸುವ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳುವ ಬಗ್ಗೆ ಅವಶ್ಯಕ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಲೇಬೇಕು. 

ಇದಲ್ಲದೇ " ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ " ಎನ್ನುವ ಆಡುಮಾತಿನಂತೆ, ತ್ಯಾಜ್ಯಗಳ ಉತ್ಪಾದನೆಯನ್ನೇ ನಿಯಂತ್ರಿಸಿದಲ್ಲಿ, ಇವುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಶ್ರಮ ಕಡಿಮೆಯಾಗುವುದು ಮತ್ತು ಇದರೊಂದಿಗೆ ಜಲ, ವಾಯು ಮತ್ತು ಪರಿಸರ ಮಾಲಿನ್ಯಗಳ ಪ್ರಮಾಣ ಕಡಿಮೆಯಾಗುವುದು. ತತ್ಪರಿಣಾಮವಾಗಿ ದೇಶದ ಪ್ರಜೆಗಳ ಆರೋಗ್ಯದ ಮಟ್ಟವೂ ಉನ್ನತಸ್ತರಕ್ಕೆ ಏರುವುದು ಎನ್ನುವ ಮಹತ್ವಪೂರ್ಣವಿಚಾರವನ್ನು ಮಕ್ಕಳಿಗೆ ಮನದಟ್ಟು ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ನುಡಿದಂತೆ ನಡೆಯಿರಿ 

ಈ ಸಂದರ್ಭದಲ್ಲಿ ಮಕ್ಕಳ ಹೆತ್ತವರು ಅಥವಾ ಪೋಷಕರು, ತಮ್ಮ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ತಿಳಿವಳಿಕೆ ನೀಡುವ ಮುನ್ನ ತಮ್ಮ ವರ್ತನೆಗಳ ಬಗ್ಗೆ ಗಮನ ಹರಿಸುವುದು ಲೇಸು. ಏಕೆಂದರೆ ಎಳೆಯ ಮಕ್ಕಳು ತಮ್ಮ ತಂದೆತಾಯಿ, ಮನೆಯಲ್ಲಿನ ಹಿರಿಯರು ಮತ್ತು ಒಡನಾಡಿಗಳ ನಡೆನುಡಿಗಳು ಮತ್ತು ವರ್ತನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವುದು ಮತ್ತು ಅನುಕರಿಸುವುದು ಸ್ವಾಬಾವಿಕ. ಇದೇ ಕಾರಣದಿಂದಾಗಿ ಹೆತ್ತವರು, ಪೋಷಕರು, ಒಡನಾಡಿಗಳು ಮತ್ತು ಶಿಕ್ಷಕರು, ಮಕ್ಕಳಿಗೆ ತಾವು ಹೇಳುವ " ಸ್ವಚ್ಛತೆಯ ಪಾಠ " ವನ್ನು ತಾವೂ ಅನುಸರಿಸುವ ಮೂಲಕ ಮಾದರಿಯಾಗಬೇಕು. ಉದಾಹರಣೆಗೆ ಚಾಕಲೇಟ್, ಬಿಸ್ಕಿಟ್ ಅಥವಾ ಇತರ ಖಾದ್ಯಗಳನ್ನು ತಿನ್ನ್ನುವ ಸಂದರ್ಭದಲ್ಲಿ, ಇವುಗಳ ಹೊರಕವಚವನ್ನು ಎಲ್ಲೆಂದರಲ್ಲಿ ಎಸೆಯದೇ, ಅದನ್ನು ಮಡಿಸಿ ನಿಮ್ಮ ಜೇಬಿನಲ್ಲಿ ಇರಿಸಿಕೊಂಡರೆ ನಿಮ್ಮ ಮಕ್ಕಳೂ ಇದನ್ನು ಅನುಕರಿಸುವುದರಲ್ಲಿ ಸಂದೇಹವಿಲ್ಲ. ಅರ್ಥಾತ್ ನುಡಿದಂತೆ ನಡೆಯುವ ಮೂಲಕ, ತಮ್ಮ ಮಕ್ಕಳು ಸದಾ ಸ್ವಚ್ಛತೆಯ ಸೂತ್ರಗಳನ್ನು ಪರಿಪಾಲಿಸುವಂತೆ ಹಿರಿಯರು ಪ್ರೇರೇಪಿಸಬೇಕು. ಹೆತ್ತವರು, ಪೋಷಕರು, ಒಡನಾಡಿಗಳು ಮತ್ತು ಶಿಕ್ಸಕರ ಈ ರೀತಿಯ ನಡವಳಿಕೆಗಳು ನಿಶ್ಚಿತವಾಗಿಯೂ ಎಳೆಯ ಮಕ್ಕಳ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರುತ್ತವೆ. 

ಅದೇನೇ ಇರಲಿ, ಮುಂದಿನ ನಾಲ್ಕು ವರ್ಷಗಳ ಕಾಲ ಭಾರತೀಯರೆಲ್ಲರೂ ಸ್ವಚ್ಛ ಭಾರತ ಅಭಿಯಾನದಲ್ಲಿ ಮನಸ್ಪೂರ್ವಕವಾಗಿ ಭಾಗವಹಿಸಿದಲ್ಲಿ, ಗಾಂಧೀಜಿಯವರ " ಸ್ವಚ್ಛ, ಸ್ವಸ್ಥ ಮತ್ತು ಸುಂದರ ಭಾರತ " ದ ಕನಸನ್ನು ನನಸಾಗಿಸುವುದು ನಿಸ್ಸಂದೇಹವಾಗಿಯೂ ಸುಲಭಸಾಧ್ಯವೆನಿಸೀತು. 

ಕೊನೆಯ ಮಾತು 

ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?, ಎನ್ನುವ ಸುಪ್ರಸಿದ್ಧ ಆಡುಮಾತನ್ನು ನೀವೂ ಕೇಳಿರಲೇಬೇಕು. ಅತ್ಯಂತ ಅರ್ಥಪೂರ್ಣ ಎನಿಸುವ ಈ ಮಾತುಗಳು ಅಕ್ಷರಶಃ ಸತ್ಯ ಎನ್ನುವುದರಲ್ಲಿ ಸಂದೇಹವಿಲ್ಲ. ಈ ಆಡುಮಾತಿನ ನೈಜ ಅರ್ಥದಂತೆ ಪುಟ್ಟ ಮಕ್ಕಳು ಮಾಡುವ ತಪ್ಪುಗಳನ್ನು ತಿದ್ದಿ ಸರಿಪಡಿಸದೇ ಇದ್ದಲ್ಲಿ, ಮುಂದೆ ಎಂದಿಗೂ ಇದನ್ನು ಸರಿಪಡಿಸುವುದು ಅಸಾಧ್ಯ. ಇದೇ ಕಾರಣದಿಂದಾಗಿ ನಿಮ್ಮ ಮಕ್ಕಳು ಸತ್ಪ್ರಜೆಗಳಾಗಬೇಕಿದ್ದಲ್ಲಿ, ನಿಮ್ಮ ಹಾಗೂ ನಿಮ್ಮ ಮನೆಮಂದಿಯ ವರ್ತನೆಗಳು ಸಮರ್ಪಕವಾಗಿ ಇರಲೇಬೇಕು. ಆದುದರಿಂದ ಸ್ವಚ್ಛತೆಯ ವಿಚಾರದಲ್ಲಿ ನಿಮ್ಮ ವರ್ತನೆಗಳು ಅನುಕರಣೀಯವಾಗಿ ಇರುವಂತೆ ಸಾಕಷ್ಟು ಮುಂಜಾಗ್ರತೆ ವಹಿಸುವುದು ಹಿತಕರವೆನಿಸುವುದು.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 



No comments:

Post a Comment