Saturday, October 25, 2014

TENDER COCONUT - DESTROYS BACTERIA'S



  ಎಳನೀರಿನಲ್ಲಿದೆ ರೋಗಾಣುನಾಶಕ ಗುಣ !

ಎಳನೀರು ಅರ್ಥಾತ್ ಸೀಯಾಳದ ಸಿಹಿಯಾದ ನೀರನ್ನು ಮೆಚ್ಚಿ ಸವಿಯದವರು ಈ ಜಗತ್ತಿನಲ್ಲೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಅನಾರೋಗ್ಯ ಪೀಡಿತರೊಂದಿಗೆ ಆರೋಗ್ಯವಂತರೂ ಗುಟುಕರಿಸುವ ಈ ಎಳನೀರಿನಲ್ಲಿ, ರೋಗಾಣುನಾಶಕ ಗುಣಗಳಿರುವುದು ನಿಮಗೂ ತಿಳಿದಿರಲಾರದು. ಈ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.

ನೈಸರ್ಗಿಕ ಪೇಯ 

ಬೇಸಗೆಯ ದಿನಗಳಲ್ಲಿ ಬಾಯಾರಿದ ಜನರು ತಮ್ಮ ದಾಹವನ್ನು ನೀಗಿಸಲು ಕುಡಿಯುವ ಎಳನೀರಿನಲ್ಲಿ ಔಷಧೀಯ ಗುಣಗಳು ಇರುವುದನ್ನು, ವೈದ್ಯಕೀಯ ಸಂಶೋಧಕರು ಇತ್ತೀಚಿಗೆ ಪತ್ತೆಹಚ್ಚಿದ್ದಾರೆ. ಆದರೆ ಸಹಸ್ರಾರು ವರ್ಷಗಳ ಹಿಂದೆ ಬರೆದಿದ್ದ ಆಯುರ್ವೇದ ಶಾಸ್ತ್ರದ ಸಂಹಿತೆಗಳಲ್ಲಿ, ಅನಾರೋಗ್ಯ ಪೀಡಿತರಿಗೆ ಸಂಜೀವಿನಿ ಎನಿಸಬಲ್ಲ ಎಳನೀರಿನ ಬಗ್ಗೆ ಸಾಕಷ್ಟು ಮಾಹಿತಿಗಳಿವೆ. ಪ್ರಾಯಶಃ ಇದೇ ಕಾರಣದಿಂದಾಗಿ ನಾಟಿ ಮದ್ದು ಮತ್ತು ಮಂತ್ರ- ತಂತ್ರಗಳ ಚಿಕಿತ್ಸೆಯನ್ನು ಪ್ರಯೋಗಿಸುವ ಹಳ್ಳಿ ವೈದ್ಯರು, ಇತರ ಔಷದಗಳೊಂದಿಗೆ ಎಳನೀರನ್ನೂ ತಪ್ಪದೇ ಬಳಸುತ್ತಾರೆ. 

ಏಷ್ಯಾ ಖಂಡ ಮತ್ತು ಲ್ಯಾಟಿನ್ ಅಮೆರಿಕ ಪ್ರದೇಶಗಳಲ್ಲಿ ಅತ್ಯಂತ ಜನಪ್ರಿಯ ಪೇಯವೆನಿಸಿರುವ ಸೀಯಾಳದ ನೀರು ಸಿಹಿಯಾಗಿರುವುದರೊಂದಿಗೆ, ಗಣನೀಯ ಪ್ರಮಾಣದ ಪೋಷಕಾಂಶಗಳನ್ನೂ ಹೊಂದಿದೆ. ದಕ್ಷಿಣ ಕನ್ನಡದ ಜನರು ಸಾಮಾನ್ಯವಾಗಿ ಬೇಸಗೆಯ ದಿನಗಳಲ್ಲಿ ಉದ್ಭವಿಸುವ ಹಾಗೂ " ಉಷ್ಣ " ಎಂದು ಹೆಸರಿಸಿರುವ ವಿಶಿಷ್ಟ ತೊಂದರೆಯ ಪರಿಹಾರಕ್ಕಾಗಿ ಬಳಸುವುದು ಎಳನೀರನ್ನೇ ಎನ್ನುವುದು ನಿಮಗೂ ತಿಳಿದಿರಲೇಬೇಕು. ಅಂತೆಯೇ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳು ಬಾಧಿಸಿದ ಸಂದರ್ಭಗಳಲ್ಲಿ, ವೈದ್ಯರ ಸಲಹೆಯನ್ನು ಪಡೆಯುವ ಮುನ್ನ ಎಳನೀರನ್ನು ಸೇವಿಸುವುದು ಅನೇಕ ಜನರ ನೆಚ್ಚಿನ ಹವ್ಯಾಸವೂ ಹೌದು. 

ಆರೋಗ್ಯಕರ - ಸುರಕ್ಷಿತ 

ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ವಿಧದ ಕೃತಕ ರಾಸಾಯನಿಕಗಳನ್ನು ಬೆರೆಸಿ ತಯಾರಿಸಿದ ಲಘುಪಾನೀಯಗಳಿಗಿಂತ ಸುರಕ್ಷಿತ ಮತ್ತು ಆರೋಗ್ಯಕರ ಎನಿಸುವ ಎಳನೀರಿಗೆ, ಬಹುರಾಷ್ಟ್ರೀಯ ಸಂಸ್ಥೆಗಳು ಉತ್ಪಾದಿಸಿ ಮಾರಾಟ ಮಾಡುವ ಕೋಲಾಗಳು ನಿಶ್ಚಿತವಾಗಿಯೂ ಸಾಟಿಯಲ್ಲ. ಲಘುಪಾನೀಯಗಳ ಅತಿಯಾದ ಸೇವನೆಯು ಅನಾರೋಗ್ಯಕ್ಕೆ ಕಾರಣವೆನಿಸುವುದಾದರೂ, ಎಳನೀರನ್ನು ತುಸು ಅಧಿಕ ಪ್ರಮಾಣದಲ್ಲಿ ಸೇವಿಸಿದರೂ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳೇ ಇಲ್ಲ. 

ಅಬಾಲವೃದ್ಧರೆಲ್ಲರೂ ಮೆಚ್ಚಿ ಸವಿಯುವ ಎಳನೀರು ಬಾಯಾರಿಕೆಯನ್ನು ನೀಗಿಸುವುದರಿಂದಿಗೆ, ಬಸವಳಿದ ಶರೀರಕ್ಕೆ ಒಂದಿಷ್ಟು ಹುಮ್ಮಸ್ಸನ್ನೂ ನೀಡುತ್ತದೆ. ವೈವಿಧ್ಯಮಯ ಜೀವಸತ್ವಗಳು, ಖನಿಜಗಳು, ಪ್ರೋಟೀನ್,ಪೊಟಾಸಿಯಂ, ಸೋಡಿಯಂ, ಅಲ್ಪ ಪ್ರಮಾಣದ ಕಾರ್ಬೊಹೈಡ್ರೇಟ್ ಹಾಗೂ ಕ್ಯಾಲರಿಗಳು ಮತ್ತು ಅನ್ಯ ಕೆಲ ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ, ಇದನ್ನು ನೈಸರ್ಗಿಕ ಶಕ್ತಿವರ್ಧಕ ಮತ್ತು ಕ್ರೀಡಾ ಪೇಯವೆಂದೂ ಪರಿಗಣಿಸಲಾಗಿದೆ. ಇದಲ್ಲದೇ ಜ್ವರ, ವಾಂತಿ, ಭೇದಿ, ನಿರ್ಜಲೀಕೃತ ಸ್ಥಿತ ಮತ್ತು ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ಜೀವರಕ್ಷಕ ಎನಿಸುತ್ತದೆ. 

ಈ ರೀತಿಯಲ್ಲಿ ಮನುಷ್ಯನ ಆರೋಗ್ಯಕ್ಕೆ ಹಿತಕರವೆನಿಸುವ ಎಳನೀರಿನಲ್ಲಿ  ಕೆಲವಿಧದ ಅಪಾಯಕಾರಿ ರೋಗಾಣುಗಳನ್ನು ನಾಶಪಡಿಸುವ ಶಕ್ತ ಇರುವುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. 

ಪ್ರಬಲವಾಗುತ್ತಿರುವ ರೋಗಾಣುಗಳು 

ಮನುಷ್ಯನನ್ನು ಬಾಧಿಸುವ ರೋಗಕಾರಕ ರೋಗಾಣುಗಳು ಕಾಲಕ್ರಮೇಣ ಪರಿವರ್ತನೆಗೊಂಡು, ಇನ್ನಷ್ಟು ಪ್ರಬಲಗೊಳ್ಳುತ್ತಿರುವುದರೊಂದಿಗೆ ಜೀವನಿರೋಧಕ ಔಷದಗಳಿಗೆ ಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಳ್ಳಲು ಯಶಸ್ವಿಯಾಗುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ವೈದ್ಯಕೀಯ ಸಂಶೋಧಕರು ನಮ್ಮ ಶರೀರಕ್ಕೆ ಮೂಲ ಪ್ರತಿರೋಧಕ ಶಕ್ತಿಯನ್ನು ಒದಗಿಸುವ ಪ್ರೋಟೀನ್ ಗಳತ್ತ ತಮ್ಮ ಗಮನ ಹರಿಸಿದ್ದಾರೆ. ಏಕೆಂದರೆ ಮನುಷ್ಯನ ಶರೀರದ ಮೇಲೆ ಬ್ಯಾಕ್ಟೀರಿಯಾಗಳು ದಾಳಿಮಾಡಿದಾಗ, ಪ್ರತಿರೋಧಕ ಜೀವಕಣಗಳು ಬಿಡುಗಡೆ ಮಾಡುವ ಪ್ರತಿಕಾಯಗಳು ಪ್ರೋಟೀನ್ ನಿಂದಲೇ ನಿರ್ಮಿತವಾಗಿರುತ್ತವೆ. 

ಜಗತ್ತಿನಾದ್ಯಂತ ಅನೇಕ ಸಂಶೋಧಕರು ವಿವಿಧ ಸಸ್ಯಗಳ ಬೇರು, ಗೆಡ್ಡೆ, ಎಲೆ, ಹೂ ಮತ್ತು ಬೀಜಗಳಿಂದ ಸೂಕ್ಷ್ಮಾಣುಜೀವಿ ವಿರೋಧಿ ಪ್ರೋಟೀನ್ ಗಳನ್ನು ಯಶಸ್ವಿಯಾಗಿ ಪ್ರತ್ಯೇಕಿಸಿದ್ದಾರೆ. ಇದೇ ರೀತಿಯಲ್ಲಿ ಎಳನೀರಿನಲ್ಲಿರುವ ಔಷಧೀಯ ಗುಣಗಳನ್ನು ಅರಿತ ಪಶ್ಚಿಮ ಬಂಗಾಳ ಮತ್ತು ಬ್ರೆಜಿಲ್ ದೇಶದ ಸಂಶೋಧಕರು, ಇದರ ಸೂಕ್ಷ್ಮಾಣುಜೀವಿ ವಿರೋಧಿ ಗುಣಗಳನ್ನು ಅಧ್ಯಯನ ಮಾಡಲು ನಿರ್ಧರಿಸಿದ್ದರು. ಈ ಪ್ರಯೋಗದ ಅಂಗವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಿದ್ದ ಸೀಯಾಳದ ನೀರನ್ನು ಶುದ್ಧೀಕರಿಸಿ, ಮೂರು ಪಾಲುಗಳನ್ನಾಗಿ ವಿಂಗಡಿಸಿದ ಬಳಿಕ, ನಾಲ್ಕು ವಿಧದ ಬ್ಯಾಕ್ಟೀರಿಯಾ ತಳಿಗಳ ಮೇಲೆ ಪ್ರಯೋಗಿಸಲಾಗಿತ್ತು. ತತ್ಪರಿಣಾಮವಾಗಿ ಎಸ್ಕರೇಶಿಯಾ ಕೋಲೈ, ಸ್ಟ್ರೆಪ್ಟೋಕಾಕಸ್ ಆರಿಯಸ್, ಬ್ಯಾಸಿಲಸ್ ಸಬ್ಟಿಲಿಸ್ ಮತ್ತು ಸುಡೋಮೊನಾಸ್ ಎರುಜಿನೋಸ್ ರೋಗಾಣುಗಳನ್ನು ಮಣಿಸಲು ಸೀಯಾಳದ ನೀರು ಅತ್ಯಂತ ಪರಿಣಾಮಕಾರಿ ಎಂದು ತಿಳಿದುಬಂದಿತ್ತು. 

ಈ ರೀತಿಯಲ್ಲಿ ಮನುಷ್ಯನನ್ನು ಪೀಡಿಸಬಲ್ಲ ಅಪಾಯಕಾರಿ ರೋಗಾಣುಗಳ ವಿರುದ್ಧ ಹೋರಾಡಲು ಅತ್ಯಂತ ಪರಿಣಾಮಕಾರಿ ಎನಿಸಿರುವ ಎಳನೀರಿನಲ್ಲಿರುವ ಔಷಧೀಯ ಅಂಶಗಳು, ಭವಿಷ್ಯದಲ್ಲಿ ತಯಾರಾಗಲಿರುವ ಜೀವನಿರೋಧಕ ಔಷದಗಳ ತಯಾರಿಕೆಯಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸಲಿದೆ. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ೨೮-೦೬-೨೦೦೯ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. 


No comments:

Post a Comment