Wednesday, July 31, 2013

Chinese restaurant syndrome




                                            ಅನಾರೋಗ್ಯಕರ ಅಜಿನೊಮೊಟೊ 
ಪಾಶ್ಚಾತ್ಯರ ಆಧುನಿಕ ಜೀವನಶೈಲಿಗೆ ಮಾರುಹೋಗಿರುವ ನಮ್ಮ ಯುವಪೀಳಿಗೆಗೆ, ನೂಡಲ್ಸ್,ಬರ್ಗರ್ ಹಾಗೂ ಪಿಜ್ಜಾಗಳಂತಹ ವೈವಿಧ್ಯಮಯ ವಿದೇಶಿ ಖಾದ್ಯಗಳೆಂದರೆ ಪಂಚಪ್ರಾಣ. ಆದರೆ ಇಂತಹ "ಜಂಕ್ ಫುಡ್" ಗಳಲ್ಲಿ ಬೆರೆತಿರುವ ಅಜಿನೊಮೊಟೊ ನಾಮಧೇಯದ ರುಚಿವರ್ಧಕದ ಅತಿಸೇವನೆಯಿಂದ ಉದ್ಭವಿಸಬಲ್ಲ ಆರೋಗ್ಯದ ಸಮಸ್ಯೆಗಳ ಬಗ್ಗೆ, ಇಂತಹ ಖಾದ್ಯಪ್ರಿಯರಿಗೂ ಅವಶ್ಯಕ ಮಾಹಿತಿ ತಿಳಿದಿರುವುದಿಲ್ಲ!. 

ಅದೊಂದು ದಿನ ಸಹೋದ್ಯೋಗಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಯಥೇಛ್ಛವಾಗಿ ತಿಂದುಂಡು ಮರಳಿದ ಅಶೋಕನಿಗೆ,ನಡುರಾತ್ರಿಯಲ್ಲಿ ತೀವ್ರವಾದ ಎದೆಯುರಿ ಹಾಗೂ ನೋವು ಕಾಣಿಸಿಕೊಂಡಿತ್ತು. ಆಕಸ್ಮಿಕವಾಗಿ ಉದ್ಭವಿಸಿದ್ದ ಸಮಸ್ಯೆಯಿಂದ ಗಾಬರಿಗೊಂಡಿದ್ದ ಆತನು,ಸ್ನೇಹಿತನ ನೆರವಿನಿಂದ ಸಮೀಪದ ಆಸ್ಪತ್ರೆಗೆ ಧಾವಿಸಿದ್ದನು. ತುರ್ತುಚಿಕಿತ್ಸೆಯನ್ನು ನೀಡಿದ ವೈದ್ಯರು ಆತನನ್ನು ಒಳರೋಗಿಯಾಗಿ ದಾಖಲಿಸಿದ್ದರು. 

ಮರುದಿನ ಅಶೋಕನನ್ನು ಕೂಲಂಕುಶವಾಗಿ ಪ್ರಶ್ನಿಸಿದ ಬಳಿಕ ಅವಶ್ಯಕ ಪರೀಕ್ಷೆಗಳನ್ನು ನಡೆಸಿದ್ದ ತಜ್ನವೈದ್ಯರು, ಆತನ ಸಮಸ್ಯೆಗಳಿಗೆ ಅತಿಯಾದ ಜಂಕ್ ಫುಡ್ ಸೇವನೆಯಿಂದ ಉದ್ಭವಿಸುವ "ಚೈನೀಸ್ ರೆಸ್ಟೋರೆಂಟ್ ಸಿಂಡ್ರೋಮ್" ಕಾರಣವೆಂದು ತಿಳಿಸಿದ್ದರು. ವೈದ್ಯರು ಹೇಳುವಂತೆ ಜಂಕ್ ಫುಡ್ ಗಳಲ್ಲಿ ಅತಿಯಾಗಿ ಬಳಸುವ "ಮೊನೊ ಸೋಡಿಯಂ ಗ್ಲುಟಾಮೆಟ್" ಅರ್ಥಾತ್ ಅಜಿನೊಮೊಟೊ, ಈ ಸಮಸ್ಯೆಗಳಿಗೆ ಕಾರಣವೆನಿಸಿತ್ತು. 

ಏನಿದು ಅಜಿನೊಮೊಟೊ?

ಸಾಮಾನ್ಯವಾಗಿ ವಿದೇಶಿ ಶೈಲಿಯ ಖಾದ್ಯಗಳಲ್ಲಿ ರುಚಿವರ್ಧಕವಾಗಿ ಬಳಸುವ ಮೊನೊ ಸೋಡಿಯಂ ಗ್ಲುಟಾಮೆಟ್ (MSG) ನ್ನು ಪಾಕಶಾಸ್ತ್ರಜ್ಞರು ಅಜಿನೊಮೊಟೊ ಅಥವಾ "ಚೈನೀಸ್ ಸಾಲ್ಟ್" ಎಂದು ಕರೆಯುತ್ತಾರೆ. ಈ ದ್ರವ್ಯವು ಗ್ಲುಟಾಮೆಟ್ ಎಸಿಡ್ ನ ಸೋಡಿಯಂ ಲವಣವಾಗಿದ್ದು, ನೀರಿನಲ್ಲಿ ಸುಲಭದಲ್ಲೇ ಕರಗುತ್ತದೆ. 

ಚೀನಾ ಹಾಗೂ ಇತರ ಅನೇಕ ದೇಶಗಳ ಬಹುತೇಕ ಸ್ವಾದಿಷ್ಟ ಖಾದ್ಯಗಳ ತಯಾರಿಕೆಯಲ್ಲಿ ಬಳಸಲ್ಪಡುವ ಅಜಿನೊಮೊಟೊ ವನ್ನು 1960 ರ ತನಕ ಮನುಷ್ಯರ ಸೇವನೆಗೆ ಸುರಕ್ಷಿತವೆಂದು ಭಾವಿಸಲಾಗಿತ್ತು. ಕಾಲಕ್ರಮೇಣ "ಚೈನೀಸ್ ರೆಸ್ಟೋರೆಂಟ್ ಸಿಂಡ್ರೋಮ್' ಎಂದು ವೈದ್ಯರು ಹೆಸರಿಸಿದ್ದ ವಿಶಿಷ್ಠ  ಆರೋಗ್ಯದ ಸಮಸ್ಯೆಗೆ,ಇದರ ಸೇವನೆಯೇ ಕಾರಣವೆಂದು ತಿಳಿದುಬಂದಿತ್ತು. 

ಹೊಟ್ಟೆ-ಎದೆಯಲ್ಲಿ ಅತಿಯಾದ ಉರಿ ಮತ್ತು ನೋವು, ತಲೆನೋವು, ವಾಕರಿಕೆ, ಭೇದಿ, ಕುತ್ತಿಗೆಯ ಹಿಂದು- ಮುಂದಿನ ಭಾಗಗಳಲ್ಲಿ ನೋವು ಇತ್ಯಾದಿ ಲಕ್ಷಣಗಳ ಸಮುಚ್ಚಯವು ಚಿನೀಸ್ ರೆಸ್ಟೋರೆಂಟ್ ಸಿಂಡ್ರೋಮ್ ಪೀಡಿತರಲ್ಲಿ ಕಂಡುಬರುತ್ತದೆ. ಇನ್ನು ಕೆಲವರಲ್ಲಿ ತೀವ್ರವಾದ ಎದೆ ನೋವು ಬಾಧಿಸುವುದರಿಂದ ತಮಗೆ ಹೃದಯಾಘಾತ ಸಂಭವಿಸಿದೆ ಎಂದು ಭಾವಿಸಿ, ತಮ್ಮ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಿಸಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಅಜಿನೊಮೊಟೊ ಮಿಶ್ರಿತ ಆಹಾರವನ್ನು ಸೇವಿಸಿದ ಹಲವಾರು ನಿಮಿಷಗಳ ಬಳಿಕ ಪ್ರತ್ಯಕ್ಷವಾಗುವ ಈ ಲಕ್ಷಣಗಳು, ಮುಂದಿನ ನಾಲ್ಕಾರು ಗಂಟೆಗಳಲ್ಲಿ ತಾವಾಗಿ ಶಮನಗೊಳ್ಳುತ್ತವೆ. ಇಷ್ಟೊಂದು ತೀವ್ರಸ್ವರೂಪದ ದುಷ್ಪರಿಣಾಮಗಳು ಉದ್ಭವಿಸಲು ಕೇವಲ 1.5 ರಿಂದ 3.0 ಗ್ರಾಂ ಅಜಿನೊಮೊಟೊ ಸೇವಿಸಿದರೆ ಸಾಕಾಗುವುದು!. 

ದುಷ್ಪರಿಣಾಮಗಳ ದಾಖಲೆ 

1960 ರ ದಶಕದ ಅಂತ್ಯದಲ್ಲಿ ಚೈನೀಸ್ ಸಾಲ್ಟ್ ನ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ವಾದವಿವಾದಗಳು ಹುಟ್ಟಿಕೊಂಡಿದ್ದವು. ಈ ಸಂದರ್ಭದಲ್ಲಿ ಪ್ರಖ್ಯಾತ ವೈದ್ಯಕೀಯ ಸಂಶೋಧಕ ಡಾ. ಜಾನ್ ಒಲ್ನೆ ಯವರು ವಾಷಿಂಗ್ಟನ್ ವಿಶ್ವ ವಿದ್ಯಾಲಯದಲ್ಲಿ ನಡೆಸಿದ್ದ ಅಧ್ಯಯನ-ಪ್ರಯೋಗಗಳು ಅಜಿನೊಮೊಟೊ ದ ದುಷ್ಪರಿಣಾಮಗಳನ್ನು ಸಾಬೀತುಪಡಿಸಿದ್ದವು. 

ಡಾ. ಜಾನ್ ರವರು ಪ್ರಯೋಗಾಲಯದಲ್ಲಿ ಇಲಿಗಳಿಗೆ ಚುಚ್ಚುಮದ್ದಿನ ಮೂಲಕ ಅಜಿನೊಮೊಟೊ ವನ್ನು ನೀಡಿ ನಡೆಸಿದ್ದ ಅಧ್ಯಯನದಲ್ಲಿ, ಇಲಿಗಳ ಮೆದುಳಿಗೆ ಹಾನಿ ಸಂಭವಿಸಿರುವುದು ತಿಳಿದುಬಂದಿತ್ತು. ಈ ವಿಚಾರ ಬೆಳಕಿಗೆ ಬರುವ ಮುನ್ನ ಅನೇಕ ದೇಶಗಳಲ್ಲಿ ಶಿಶು ಆಹಾರಗಳ ತಯಾರಿಕೆಯಲ್ಲಿ ಅಜಿನೊಮೊಟೊ ವನ್ನು ಧಾರಾಳವಾಗಿ ಬಳಸಲಾಗುತ್ತಿತ್ತು. ಆದರೆ ಡಾ. ಜಾನ್ ರ ಅಧ್ಯಯನದ ಪರಿಣಾಮಗಳು ಪ್ರಕಟವಾದ ಬಳಿಕ ಎಚ್ಚೆತ್ತ ಗ್ರಾಹಕರ ಪ್ರತಿಭಟನೆಯಿಂದಾಗಿ,ಶಿಶು ಆಹಾರದಲ್ಲಿ ಇದರ ಬಳಕೆಯನ್ನು ನಿಲ್ಲಿಸಲಾಗಿತ್ತು!. 

ತದನಂತರ ನಡೆಸಿದ್ದ ಪ್ರಯೋಗಗಳಿಂದ ಅತ್ಯಲ್ಪ ಪ್ರಮಾಣದ ಅಜಿನೊಮೊಟೊ ಬೆರೆಸಿದ್ದ ಆಹಾರವನ್ನು ಸೇವಿಸಿದ್ದ ಇಲಿಮರಿಗಳಲ್ಲಿ ಮತ್ತು ಇತರ ಪ್ರಾಣಿಗಳಲ್ಲೂ ಇದೇ ರೀತಿಯ ದುಷ್ಪರಿಣಾಮಗಳು ಕಂಡುಬಂದಿದ್ದವು. 

ಮನುಷ್ಯನ ಮೆದುಲಿನಲ್ಲಿನ ಹೈಪೊಥಲಮಸ್ ಎನ್ನುವ ಭಾಗದಲ್ಲಿ ಹಾನಿಯನ್ನು ಉಂಟುಮಾಡುವ ಅಜಿನೊಮೊಟೊ, ತನ್ಮೂಲಕ ಮನುಷ್ಯನ ಶರೀರದಲ್ಲಿ ಹಾರ್ಮೋನುಗಳನ್ನು ಉತ್ಪಾದಿಸುವ ಮತ್ತು ನಿಯಂತ್ರಿಸುವ ಪ್ರಕ್ರಿಯೆಗಳಲ್ಲಿ ವ್ಯತ್ಯಯವನ್ನು ಉಂಟುಮಾಡುತ್ತದೆ. ತತ್ಪರಿಣಾಮವಾಗಿ ನಮ್ಮ ಶರೀರದ ಅಂಗಾಂಗಗಳ ಕಾರ್ಯಕ್ಷಮತೆಯಲ್ಲೂ ವ್ಯತ್ಯಯಗಳು ಸಂಭವಿಸುತ್ತವೆ. 

ಪುಟ್ಟ ಇಲಿಮರಿಗಳಿಗೆ ಎಡೆಬಿಡದೆ ಅಜಿನೊಮೊಟೊ ನೀಡುತ್ತಾ ಬಂದು,  ಇವುಗಳು ಪ್ರೌಡ್ಹಾವಸ್ಥೆಯನ್ನು ತಲುಪಿದ ಸಂದರ್ಭದಲ್ಲಿ, ಇವುಗಳ ಶಾರೀರಿಕ ಬೆಳವಣಿಗೆಗೆ ಅವಶ್ಯಕವಾದ ಹಾರ್ಮೋನುಗಳ ಉತ್ಪಾದನೆ ಕುಂಠಿತವಾಗಿದ್ದುದು ಪತ್ತೆಯಾಗಿತ್ತು. ಅಂತೆಯೇ ಗರ್ಭ ಧರಿಸಿದ್ದ ಇಲಿಗಳಿಗೆ ಅಜಿನೊಮೊಟೊ ನೀಡಿದ್ದರ ಪರಿಣಾಮದಿಂದಾಗಿ, ಇವುಗಳ ಮರಿಗಳಲ್ಲಿ "ವರ್ತನೆಗಳ ಬದಲಾವಣೆ"ಗಳು ಕಂಡುಬಂದಿದ್ದವು. ಇದರಿಂದಾಗಿ ಗರ್ಭಿಣಿ ಸ್ತ್ರೀಯರು ಅಜಿನೊಮೊಟೊ ಸೇವಿಸುವುದರಿಂದ ಗರ್ಭಸ್ಥ ಶಿಶುವಿನ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿತ್ತು. ಜೊತೆಗೆ ಮಗುವಿಗೆ ಮೊಲೆಹಾಲನ್ನು ನೀಡುವ ಮಾತೆಯರು ಅಜಿನೊಮೊಟೊ ಸೇವಿಸಿದಾಗ, ಇವರ ಮೊಲೆ ಹಾಲಿನಲ್ಲೂ ಇದರ ಅಂಶಗಳು ಪತ್ತೆಯಾಗಿದ್ದವು. 

ವಯಸ್ಕರ ರಕ್ತದಲ್ಲಿ ಇರಬಹುದಾದ ವಿಷಕಾರಕ ಅಂಶಗಳು ಮೆದುಳನ್ನು ತಲುಪದಂತೆ ತಡೆಯಬಲ್ಲ "ತಡೆಗೋಡೆ" (Blood-brain barrier) ಯಂತಹ ವ್ಯವಸ್ಥೆಯೊಂದು ಕಾರ್ಯಾಚರಿಸುತ್ತದೆ. ಆದರೆ ಪುಟ್ಟ ಮಕ್ಕಳಲ್ಲಿ ಈ ವ್ಯವಸ್ಥೆಯು ದುರ್ಬಲವಾಗಿರುವುದರಿಂದ, ಅತ್ಯಲ್ಪ ಪ್ರಮಾಣದ ಅಜಿನೊಮೊಟೊ ದ ಸೇವನೆಯೂ ಮೆದುಳನ್ನು ತಲುಪಿ ಶಿಶುವಿಗೆ ಹಾನಿಕಾರಕವೆನಿಸುತ್ತದೆ. 

ಸಾಮಾನ್ಯವಾಗಿ ಒಂದು ವಸ್ತುವಿನಲ್ಲಿನ ವಿಷವನ್ನು ಇದರ ಸೇವನೆಯ ಪ್ರಮಾಣ ಹಾಗೂ ಸೇವಿಸಿದ ವ್ಯಕ್ತಿಯ ಶರೀರದ ತೂಕಕ್ಕೆ ಅನುಗುಣವಾಗಿ ಅಳೆಯಬಹುದಾಗಿದೆ. ಇದೇ ಕಾರಣದಿಂದಾಗಿ ವಯಸ್ಕರು ಸೇವಿಸಬಹುದಾದಷ್ಟು ಪ್ರಮಾಣದ ಅಜಿನೊಮೊಟೊ ಮಿಶ್ರಿತ ಆಹಾರವನ್ನು ಮಕ್ಕಳು ಸೇವಿಸಿದಲ್ಲಿ, ನಿಸ್ಸಂದೇಹವಾಗಿ ಅಪಾಯಕಾರಿ ಎನಿಸಬಲ್ಲದು. ಪುಟ್ಟ ಮಕ್ಕಳು ಮಾತ್ರವಲ್ಲ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಪೀದಿತರೂ ಅಜಿನೊಮೊಟೊ ಸೇವಿಸುವುದು, ಇವರ ಆರೋಗ್ಯದ ಹಿತದೃಷ್ಟಿಯಿಂದ ಅಪಾಯಕಾರಿಯೂ ಹೌದು. ಇದರಲ್ಲಿರುವ ಸೋಡಿಯಂ ಲವಣವೇ ಇದಕ್ಕೆ ಕಾರಣವೆನಿಸಿದೆ. 

ಹೋರಾಟ-ಪರಿಹಾರ 

ಅಜಿನೊಮೊಟೊ ಸೇವನೆಯಿಂದ ಉದ್ಭವಿಸಬಲ್ಲ ಗಂಭೀರ ಆರೋಗ್ಯದ ಸಮಸ್ಯೆಗಳನ್ನು ಅರಿತ ಅನೇಕ ವಿದೇಶಿ ಗ್ರಾಹಕ ಸಂಘಟನೆಗಳು, ಶಿಶು ಆಹಾರಗಳಲ್ಲಿ ಇದನ್ನು ಬೇರೆಸದಂತೆ ತೀವ್ರ ಹೋರಾಟ ನಡೆಸಿದ್ದವು. ತತ್ಪರಿಣಾಮವಾಗಿ ವಿಶ್ವ ಆರೋಗ್ಯ ಸಂಸ್ಥೆಯೂ ಸೇರಿದಂತೆ ಹಲವಾರು ದೇಶಗಳು ಶಿಶು ಆಹಾರದಲ್ಲಿ ಇದರ ಬಳಕೆಯನ್ನು ನಿಷೇಧಿಸಿದ್ದವು. ಇದೇ ಸಂದರ್ಭದಲ್ಲಿ ಅಮೆರಿಕಾದ ಆಹಾರ ಮತ್ತು ಔಷದ ಪ್ರಾಧಿಕಾರ ನೇಮಿಸಿದ್ದ ವೈಜ್ಞಾನಿಕ ಸಲಹಾ ಸಮಿತಿಯು, ಅಜಿನೊಮೊಟೊ ಶಿಶು ಆಹಾರದಲ್ಲಿ ಬಳಸಲು ಸುರಕ್ಷಿತವಲ್ಲ ಎನ್ನುವ ನಿರ್ಧಾರವನ್ನು ಪ್ರಕಟಿಸಿತ್ತು. 

ಗ್ರಾಹಕ ಸಂಘಟನೆಗಳ ಅವಿರತ ಹೋರಾಟದ ಫಲವಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಅಜಿನೊಮೊಟೊ ಮಿಶ್ರಿತ ಖಾದ್ಯಗಳ ಪೊಟ್ಟಣಗಳ ಮೇಲೆ ಇದರ ಪ್ರಮಾಣ ಮತ್ತು ದುಷ್ಪರಿಣಾಮಗಳನ್ನು ಮುದ್ರಿಸಬೇಕೆಂಬ ನಿಯಮವು ಅನೇಕ ದೇಶಗಳಲ್ಲಿ ಜಾರಿಗೊಂಡಿತ್ತು. ಈ ಆಹಾರ ಪದಾರ್ಥಗಳ ಸೇವನೆಯು ಪುಟ್ಟ ಮಕ್ಕಳು ಹಾಗೂ ಗರ್ಭಿಣಿಯರು, ಮಗುವಿಗೆ ಮೊಲೆಹಾಲನ್ನು ಉಣಿಸುವ ಬಾಣಂತಿಯರು,ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಪೀಡಿತರಿಗೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು ಎನ್ನುವುದನ್ನು ಪ್ರತಿಯೊಂದು ಉತ್ಪನ್ನಗಳ ಮೇಲೆ ಮುದ್ರಿಸಬೇಕೆನ್ನುವ ನಿಯಮವನ್ನು ಜಾರಿಗೆ ತರಲಾಗಿತ್ತು. ಇವೆಲ್ಲಕ್ಕೂ ಮಿಗಿಲಾಗಿ ಒಂದು ವರ್ಷಕ್ಕಿಂತ ಕೆಳಗಿನ ಹಸುಳೆಗಳಿಗಾಗಿ ತಯಾರಿಸುವ ಯಾವುದೇ ಆಹಾರಗಳಲ್ಲಿ ಅಜಿನೊಮೊಟೊ ಬಳಸುವುದನ್ನೇ ನಿಷೇಧಿಸಲಾಗಿತ್ತು. ಆದರೆ ಭವ್ಯ ಭಾರತದಲ್ಲಿ ಹಲವಾರು ವರ್ಷಗಳಿಂದ ನೆಲೆಯೂರಿ ಕಾರ್ಯಾಚರಿಸುತ್ತಿರುವ ಬಹುರಾಷ್ಟ್ರೀಯ ಸಂಸ್ಥೆಗಳೂ,ಈ ನಿಯಮಗಳನ್ನು ಪಾಲಿಸುವುದೇ ಇಲ್ಲ. ಏಕೆಂದರೆ ನಮ್ಮ ದೇಶದಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರಗಳ ಆರೋಗ್ಯ ಇಲಾಖೆಗಳು, ಇಂತಹ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ!. 

ಅದೇನೇ ಇರಲಿ, ದಿನನಿತ್ಯ ಇಂತಹ ಅಪಾಯಕಾರಿ ರುಚಿವರ್ಧಕಗಳಿಂದ ಸಮೃದ್ಧವಾಗಿರುವ ವೈವಿಧ್ಯಮಯ "ಜಂಕ್ ಫುಡ್" ಗಳನ್ನು ಸವಿಯುವ ಹವ್ಯಾಸ ನಿಮ್ಮಲ್ಲಿದ್ದಲ್ಲಿ ಹಾಗೂ ಮೇಲೆ ನಮೂದಿಸಿದ್ದ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಬಾಧಿಸುತ್ತಿದ್ದಲ್ಲಿ, ತಕ್ಷಣ ನಿಮ್ಮ ಹವ್ಯಾಸಕ್ಕೆ ಕಡಿವಾಣವನ್ನು ತೊಡಿಸಿ. ಅಂತೆಯೇ ಒಂದಿಷ್ಟು ಅಜಿನೊಮೊಟೊ ಸೇರಿಸಿದ ಆಹಾರ ಸೇವನೆಯಿಂದ ಏನೂ ಅಪಾಯವಿಲ್ಲ ಎಂದು ನೀವೇ ನಿರ್ಧರಿಸದಿರಿ. ಏಕೆಂದರೆ ನಿಮ್ಮ ಬಂಧುಮಿತ್ರರೊಂದಿಗೆ ಸೇವಿಸುವ ಹಲವಾರು ಖಾದ್ಯಗಳಲ್ಲಿ ಬೆರೆತಿರಬಹುದಾದ ಅಜಿನೊಮೊಟೊ ದ ಒಟ್ಟು ಪ್ರಮಾಣವು ನಿಶ್ಚಿತವಾಗಿಯೂ ಸುರಕ್ಷಿತವಲ್ಲ. ಅದೇ ರೀತಿಯಲ್ಲಿ ವಿದೇಶಿ ಶೈಲಿಯ ಖಾನಾವಳಿಗಳಲ್ಲಿ ಬಾಣಸಿಗರು ತಯಾರಿಸಿದ ಖಾದ್ಯಗಳಲ್ಲಿ ಬೆರೆಸಿರುವ ಅಜಿನೊಮೊಟೊ ದ ಪ್ರಮಾಣ ಎಷ್ಟೆಂದು ನಿಮಗೂ ತಿಳಿಯುವ ಸಾಧ್ಯತೆಗಳಿಲ್ಲ!. 

ಇವೆಲ್ಲಾ ಕಾರಣಗಳಿಂದಾಗಿ ಅಪ್ಪಟ ಭಾರತೀಯ ಶೈಲಿಯ, ಆದರೆ ಆರೋಗ್ಯಕ್ಕೆ ಹಾನಿಕರವೆನಿಸದ ಖಾದ್ಯ-ಪೇಯಗಳನ್ನೇ ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಿ!. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

Friday, July 26, 2013

Gubbiya mele brahmaastra!



                               ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ?

ತಮ್ಮನ್ನು ಪೀಡಿಸುತ್ತಿರುವ ಕಾಯಿಲೆಗಳನ್ನು ಕ್ಷಣಮಾತ್ರದಲ್ಲಿ ಗುಣಪಡಿಸಬೇಕೆಂದು ವೈದ್ಯರನ್ನು ಒತ್ತಾಯಿಸುವ ರೋಗಿಗಳ ಸಂಖ್ಯೆ ಭಾರತದಲ್ಲಿ ಕಡಿಮೆಯೇನಿಲ್ಲ. ಅದೇರೀತಿಯಲ್ಲಿ ಕ್ಷುಲ್ಲಕ ಕಾಯಿಲೆಗಳಿಗೂ,ಅನಾವಶ್ಯಕವಾಗಿ ಪ್ರಬಲ ಔಷದಗಳನ್ನು ನೀಡುವ ವೈದ್ಯರೂ ಇಲ್ಲದಿಲ್ಲ. ಆದರೆ ಇಂತಹ ಪ್ರಯೋಗಗಳ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಿಗೆ ಪ್ರಾಥಮಿಕ ಮಾಹಿತಿಯೇ ತಿಳಿದಿರುವುದಿಲ್ಲ!
-------             --------          ---------          -----------           ------------           ----------             ---------
ಒಂದೆರಡು ದಿನಗಳಿಂದ ಶೀತದಿಂದ ಬಳಲುತ್ತಿದ್ದ ತನ್ನ ಮಗುವಿಗೆ ಮಾಲತಿಯು ದಿನದಲ್ಲಿ ಮೂರುಬಾರಿ  ಮೆಟಾಸಿನ್ ಸಿರಪ್ ನೀಡಿದರೂ ಗುಣವಾಗಿರಲಿಲ್ಲ. ಮರುದಿನ ಪ್ರತ್ಯಕ್ಷವಾದ ಕೆಮ್ಮು ಮತ್ತು ಜ್ವರ ಉಲ್ಬಣಿಸಿ ನರಳುತ್ತಿದ್ದ ಮಗು, ಇರುಳಿಡೀ ನಿದ್ರಿಸದ ಕಾರಣದಿಂದಾಗಿ ಮಾಲತಿಯೂ ಜಾಗರಣೆ ಮಾಡಬೇಕಾಯಿತು.
 
ಮರುದಿನ ಬೆಳಿಗ್ಗೆ ಪರಿಚಿತ ವೈದ್ಯರ ಬಳಿ ಮಗುವನ್ನು ಕರೆದೊಯ್ದ ಮಾಲತಿಯು, ತಾನು ಮೆಟಾಸಿನ್ ಸಿರಪ್ ನೀಡಿದ್ದರೂ ಕಡಿಮೆಯಾಗಿರದ ಶೀತ-ಜ್ವರಗಳನ್ನು ಗುಣಪಡಿಸಲು "ಪ್ರಬಲ ಔಷದ" ವನ್ನು ನೀಡಲು ಒತ್ತಾಯಿಸಿದ್ದಳು. 
ಮುಗುಳುನಗೆಯನ್ನು ಬೀರಿದ ವೈದ್ಯರು ಮಗುವನ್ನು ಪರೀಕ್ಷಿದಾಗ, ಗಂಟಲು ಮತ್ತು ಶ್ವಾಸಕೋಶಗಳ ಸೋಂಕು ಪತ್ತೆಯಾಗಿತ್ತು. ಐದು ದಿನಗಳಿಗೆ ಔಷದವನ್ನು ನೀಡಿದ ವೈದ್ಯರು,ಇದರ ಸೇವನಾಕ್ರಮವನ್ನು ವಿವರಿಸಿದ್ದರು. 

ಮುಸ್ಸಂಜೆಯ ಹೊತ್ತಿನಲ್ಲಿ ವೈದ್ಯರನ್ನು ದೂರವಾಣಿಯ ಮೂಲಕ ಸಂಪರ್ಕಿಸಿದ ಮಾಳತಿಯು, ಮಗುವಿನ ಶೀತ-ಜ್ವರ ಕಿಂಚಿತ್ ಕೂಡಾ ಕಡಿಮೆಯಾಗಿಲ್ಲವೆಂದು ದೂರಿದ್ದಳು. ಒಂದೆರಡು ದಿನಗಳ ಹಿಂದೆ ಆರಂಭಗೊಂಡಿದ್ದ ಕಾಯಿಲೆಯನ್ನು ಕೇವಲ ಎರಡು ಹೊತ್ತಿನ ಔಷದಗಳಿಂದ ಗುಣಪಡಿಸಲು ಸಾಧ್ಯವಿದ್ದಲ್ಲಿ,ತಾನು ಐದು ದಿನಗಳಿಗೆ ಔಷದವನ್ನು ನೀಡುವ ಅವಶ್ಯಕತೆಯೇ ಇರುತ್ತಿರಲಿಲ್ಲ ಎಂದ ವೈದ್ಯರು,ಪ್ರತಿ ಆರು ತಾಸಿಗೊಂದು ಬಾರಿಯಂತೆ ಐದು ದಿನ ಔಷದವನ್ನು ನೀಡಲು ಸೂಚಿಸಿದರು.  ಸೂಚನೆಯನ್ನು ಪರಿಪಾಲಿಸಿದಂತೆಯೇ,ಮಗುವಿನ ಕಾಯಿಲೆ ಗುಣವಾಗಿತ್ತು. 

ಮಾಲತಿಯಂತೆಯೇ ಅನೇಕರು ತಮ್ಮನ್ನು ಹಾಗೂ ಮನೆಮಂದಿಯನ್ನು ಬಾಧಿಸುವ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು,ತಮಗೆ ತಿಳಿದಿರುವ ಔಷದವನ್ನು ಸೇವಿಸುತ್ತಾರೆ. ಅಪೇಕ್ಷಿತ ಪರಿಹಾರ ದೊರೆಯದೇ ಇದ್ದಲ್ಲಿ,ಇನ್ನಷ್ಟು ಪ್ರಬಲ ಔಷದವನ್ನು ಬಳಸುತ್ತಾರೆ. ಇಂತಹ ಸಂದರ್ಭಗಳಲ್ಲಿ ತಾವು ವೈದ್ಯರ ಸಲಹೆಯನ್ನು ಪಡೆಯದೇ ಬಳಸುತ್ತಿರುವ ಪ್ರಬಲ ಔಷದಗಳು (ವಿಶೇಷವಾಗಿ ಮಕ್ಕಳಿಗೆ) ಸುರಕ್ಷಿತವೇ ಎನ್ನುವುದನ್ನೇ ನಿರ್ಲಕ್ಷಿಸುತ್ತಾರೆ!. 

ಸಾಮಾನ್ಯವಾಗಿ ಕ್ಷಿಪ್ರಗತಿಯಲ್ಲಿ ಪರಿಹಾರ ನೀಡುವುದೆಂದು ನೀವು ನಂಬಿರುವ ಔಷದಗಳು ನಿಜಕ್ಕೂ ಸುರಕ್ಷಿತ ಎನಿಸಬೇಕೆಂದಿಲ್ಲ. ಇದೇ ಕಾರಣದಿಂದಾಗಿ ಪುಟ್ಟಮಕ್ಕಳಿಗೆ ಯಾವುದೇ ಔಷದವನ್ನು ನೀಡುವ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಹಿತಕರವೆನಿಸುವುದು. ಅನುಭವಿ ತಜ್ಞ ವೈದ್ಯರೇ ಹೇಳುವಂತೆ, ಚಿಕ್ಕಮಕ್ಕಳಿಗೆ ಚಿಕಿತ್ಸೆಯನ್ನು ನೀಡುವ ಮುನ್ನ ವೈದ್ಯರೂ ತಾವು ನೀಡುವ ಔಷದಗಳಿಂದ ದೊರೆಯಬಲ್ಲ ಪರಿಹಾರಕ್ಕಿಂತ ಹೆಚ್ಚಾಗಿ ಇವುಗಳು ಸುರಕ್ಷಿತವೇ ಎನ್ನುವತ್ತ ಗಮನಹರಿಸಬೇಕಾಗುತ್ತದೆ. 

ಅಂತೆಯೇ ಯಾವುದೇ ಔಷದವನ್ನು ವೈದ್ಯರು ಸೂಚಿಸಿದಂತೆ ನಿಗದಿತ ಸಮಯದಲ್ಲಿ,ನಿಗದಿತ ಪ್ರಮಾಣದಲ್ಲಿ,ನಿಗದಿತ ಅವಧಿಗೆ ಸೇವಿಸುವುದು ಅತ್ಯವಷ್ಯಕವೂ ಹೌದು. ಇದರಿಂದಾಗಿ ಔಷದಗಳ ಕಾರ್ಯಕ್ಷಮತೆ ಹೆಚ್ಚುವುದರೊಂದಿಗೆ,ಅಪೇಕ್ಷಿತ ಪರಿಣಾಮವೂ ಲಭಿಸುವುದರಲ್ಲಿ ಸಂದೇಹವಿಲ್ಲ. 


over the counter ಉತ್ಪನ್ನಗಳು 

ಇತ್ತೀಚಿನ ಕೆಲವರ್ಷಗಳಿಂದ ವೈದ್ಯರ ಸಲಹೆ-ಸೂಚನೆಗಳ ಅವಶ್ಯಕತೆಯಿಲ್ಲದೇ, ಔಷದ ಅಂಗಡಿಗಳಿಂದ ನೀವು ಖರೀದಿಸಬಹುದಾದ "ಅಸಂಬದ್ಧ ಔಷದಗಳ ಸಮ್ಮಿಶ್ರಣ" ಗಳ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸುಲಭದಲ್ಲೇ ಲಭಿಸುತ್ತವೆ. ಒಂದಕ್ಕೂ ಹೆಚ್ಚು ವಿಧದ ಔಷದಗಳ ಸಮ್ಮಿಶ್ರಣದಿಂದ ಸಿದ್ಧಪಡಿಸುವ ಇಂತಹ ಉತ್ಪನ್ನಗಳಲ್ಲಿ,ಕೆಲವೊಂದು ಔಷದಗಳನ್ನು ಅನಾವಶ್ಯಕವಾಗಿ ಬೆರೆಸಲಾಗುತ್ತದೆ. ಅನೇಕ ಔಷದ ತಯಾರಿಕಾ ಸಂಸ್ಥೆಗಳು ಇಂತಹ ಉತ್ಪನ್ನಗಳನ್ನು ಅವಶ್ಯಕ ಪ್ರಯೋಗ-ಪರೀಕ್ಷೆಗಳಿಗೆ ಒಳಪಡಿಸದೇ  ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ಈ ಮಹತ್ವಪೂರ್ಣ ವಿಚಾರವನ್ನು ಅರಿತಿರದ ಅಮಾಯಕರು ಇವುಗಳನ್ನು ಸೇವಿಸಿ ಅಯಾಚಿತ ತೊಂದರೆಗಳಿಗೆ ಈಡಾಗುತ್ತಿದ್ದರೂ, ಇಂತಹ ಉತ್ಪನ್ನಗಳನ್ನು ಸರಕಾರವು ನಿಷೇಧಿಸುತ್ತಿಲ್ಲ!. 

ಇವೆಲ್ಲಕ್ಕೂ ಮಿಗಿಲಾಗಿ ಸಾಮಾನ್ಯ ಶೀತದಿಂದ ಆರಂಭಿಸಿ, ಮಧುಮೇಹದಂತಹ ಗಂಭೀರ ಕಾಯಿಲೆಗಳಿಗೂ "ರಾಮಬಾಣ" ದಂತೆ ಪರಿಣಾಮಕಾರಿ ಎಂದು ಇವುಗಳ ತಯಾರಕರು ಸ್ವತಃ ಘೋಷಿಸುವ ಅಸಂಖ್ಯ ಜಾಹೀರಾತುಗಳು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರತಿನಿತ್ಯ ಪ್ರಸಾರವಾಗುತ್ತಿವೆ. ಈ ಜಾಹೀರಾತುಗಳಿಗೆ ಮರುಳಾಗಿ,ದುಬಾರಿ ಬೆಲೆಯನ್ನು ತೆತ್ತು ಇಂತಹ ಔಷದಗಳನ್ನು ಖರೀದಿಸಿ ಸೇವಿಸಿದವರು ನಿಶ್ಚಿತವಾಗಿಯೂ ಮೂರ್ಖರೆನಿಸುತ್ತಾರೆ. ಏಕೆಂದರೆ ಈ ಔಷದಗಳು ನಿರೀಕ್ಷಿತ ಪರಿಣಾಮವನ್ನು ನೀಡದಿದ್ದಲ್ಲಿ ಇವುಗಳ ತಯಾರಕರು ಅಥವಾ ಔಷದ ಅಂಗಡಿಯವರನ್ನು ನೀವು ದೂರುವಂತಿಲ್ಲ!. 

ಆದರೆ ವೈದ್ಯರು ಸೂಚಿಸಿದ ಔಷದಗಳನ್ನು ಸೇವಿಸಿದ ಬಳಿಕ ಅಪೇಕ್ಷಿತ ಪರಿಣಾಮ ದೊರೆಯದೆ ಇದ್ದಲ್ಲಿ ಅಥವಾ ಅನಿರೀಕ್ಷಿತ ಅಡ್ಡಪರಿಣಾಮಗಳು -ತೊಂದರೆಗಳು ತಲೆದೊರಿದಲ್ಲಿ,ಜನಸಾಮಾನ್ಯರು ನಿಸ್ಸಂದೇಹವಾಗಿ ವೈದ್ಯರನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ಅಂತೆಯೇ ವೈದ್ಯರ ಚಿಕಿತ್ಸೆ ವಿಫಲಗೊಂಡಲ್ಲಿ  ದೂರುವ ರೋಗಿಗಳು, ಔಷದ ಅಂಗಡಿಗಳಿಂದ ಸ್ವಯಂ ಖರೀದಿಸಿ ಸೇವಿಸಿದ್ದ ಔಷದಗಳ ವೈಫಲ್ಯ ಅಥವಾ ದುಷ್ಪರಿಣಾಮಗಳ ಬಗ್ಗೆ ತೆಪ್ಪಗಿರುತ್ತಾರೆ. 

ಉದಾಹರಣೆಗೆ ಮಳೆ ಅಥವಾ ಚಳಿಗಾಲಗಳಲ್ಲಿ ಬಾಧಿಸುವ ಶೀತ,ಕೆಮ್ಮು,ಉಬ್ಬಸ(ಅಸ್ತಮಾ) ಇತ್ಯಾದಿ ಕಾಯಿಲೆಗಳಿಗೆ ಅನೇಕರು ಕೆಮ್ಮಿನ ಸಿರಪ್ ಖರೀದಿಸಿ ಸೇವಿಸುತ್ತಾರೆ. ನಿಜಹೆಳಬೇಕಿದ್ದಲ್ಲಿ ಶೀತ-ಕೆಮ್ಮು ಮತ್ತು ಅಸ್ತಮಾ ಕಾಯಿಲೆಗಳು ವಿಭಿನ್ನವಾಗಿದ್ದು,ವೈದ್ಯರು ಇವುಗಳಿಗೆ ನೀಡುವ ಚಿಕಿತ್ಸೆಯೂ ವಿಭಿನ್ನವಾಗಿರುತ್ತದೆ. ಆದರೆ ಇಂದಿಗೂ ಅನೇಕ ವಿದ್ಯಾವಂತರೂ ಕೆಲವಾರು ದಿನಗಳ ಕಾಲ ಕೆಮ್ಮಿನ ಸಿರಪ್ ಸೇವಿಸಿ,ಸಮಸ್ಯೆ ಇನ್ನಷ್ಟು ಉಲ್ಬಣಿಸಿದ ಬಳಿಕವೇ ವೈದ್ಯರನ್ನು ಸಂದರ್ಶಿಸುತ್ತಾರೆ. ಅದೇ ರೀತಿಯಲ್ಲಿ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಆಧುನಿಕ ಪದ್ದತಿಯ ಔಷದಗಳನ್ನು ಸೇವಿಸುವುದು ಹಿತಕರವಲ್ಲ ಎಂದು ನಿರ್ಧರಿಸಿ,ಅನ್ಯ ಪದ್ದತಿಗಳ ಔಷದಗಳನ್ನು ಸೇವಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಅನ್ಯ ಪದ್ದತಿಯ ವೈದ್ಯರ ಸಲಹೆ ಪಡೆಯುವುದನ್ನೇ ಮರೆತುಬಿಡುತ್ತಾರೆ!. 

 ಅಜ್ಞಾನದಿಂದ ಅಚಾತುರ್ಯ 

ಜನಸಾಮಾನ್ಯರನ್ನು ಅಪರೂಪದಲ್ಲಿ ಬಾಧಿಸುವ ತಲೆನೋವು,ಶೀತ,ಕೆಮ್ಮು,ಜ್ವರ,ಅಜೀರ್ಣ,ಹೊಟ್ಟೆನೋವು,ಭೇದಿ ಮತ್ತು ವಾಂತಿಗಳಂತಹ ವ್ಯಾಧಿಗಳು ಬಹುತೇಕ ಸಂದರ್ಭಗಳಲ್ಲಿ ಒಂದಿಷ್ಟು ಪಥ್ಯ ಮತ್ತು ವಿಶ್ರಾಂತಿಗಳಿಂದ ಶಮನಗೊಳ್ಳುತ್ತವೆ. ಇಂತಹ ಸಮಸ್ಯೆಗಳಿಗೆ "ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ"ಪ್ರಯೋಗಿಸಿದಂತೆ,ಪ್ರಬಲ ಔಷದಗಳನ್ನು ಸೇವಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ವೈದ್ಯಕೀಯ ವಿಚಾರಗಳ ಬಗ್ಗೆ ವಿಶೇಷ ಮಾಹಿತಿಯನ್ನು ಅರಿಯದ ಜನರು,ಪ್ರಬಲ ಔಷದಗಳ ಸೇವನೆಯಿಂದ ತಮ್ಮ ಕಾಯಿಲೆಗಳು ಚಿಟಿಕೆ ಹೊಡೆಯುವಷ್ಟರಲ್ಲಿ ಗುಣವಾಗುದು ಎಂದು ನಂಬಿದ್ದಾರೆ. ವಿಶೇಷವೆಂದರೆ ಇವೆಲ್ಲವುಗಳ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಅರಿತಿದ್ದೂ,ಇಂತಹ ಔಷದಗಳನ್ನು ನೀಡುವ ವೈದ್ಯರೂ ಇದ್ದಾರೆ! . 

ಈ ರೀತಿಯ ಪ್ರಯೋಗಗಳಿಂದ ಉದ್ಭವಿಸಬಲ್ಲ ತೊಂದರೆಗಳನ್ನು ಅನುಭವಿಸುವವರು ರೋಗಿಗಳೇ ಹೊರತು ವೈದ್ಯರಲ್ಲ. ಅಧಿಕತಮ ಔಷದಗಳಿಗೆ ಅಡ್ಡ-ದುಷ್ಪರಿಣಾಮಗಳು ಇರುವುದರಿಂದ,ಇವುಗಳ ಅನಾವಶ್ಯಕ ಅಥವಾ ಮಿತಿಮೀರಿದ ಸೇವನೆಯು ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ ಎನ್ನುವುದನ್ನು ಮರೆಯದಿರಿ. 

ನೀವೇನು ಮಾಡಬಹುದು 

ಅಪರೂಪದಲ್ಲಿ ಅಥವಾ ಪದೇಪದೇ ನಿಮ್ಮನ್ನು ಕಾಡುವ ಯಾವುದೇ ಕಾಯಿಲೆಗಳಿಗೆ,ನಿಮ್ಮ ನಂಬಿಗಸ್ತ ವೈದ್ಯರ ಸಲಹೆ-ಚಿಕಿತ್ಸೆಗಳನ್ನು ಪಡೆದುಕೊಳ್ಳಿ. ನಿಮ್ಮ ಶಾರೀರಿಕ ಹಾಗೂ ಇತರ ಪರೀಕ್ಷೆಗಳನ್ನು ನಡೆಸಿದ ಬಳಿಕ ವೈದ್ಯರು ಪತ್ತೆಹಚ್ಚಿರುವ ಕಾಯಿಲೆ ಯಾವುದೆಂದು ಕೇಳಿ ತಿಳಿದುಕೊಳ್ಳಿ. ತದನಂತರ ಇದರ ಪರಿಹಾರಕ್ಕಾಗಿ ಅವಶ್ಯಕ ಮತ್ತು ಸರಳ  ಚಿಕಿತ್ಸೆಯ ಮಾಹಿತಿಯನ್ನು ಪಡೆಯಿರಿ. ನಿಮಗೆ ಎಂತಹ ಚಿಕಿತ್ಸೆ ಬೇಕೆಂದು ನೀವೇ ನಿರ್ಧರಿಸಿ ವೈದ್ಯರಿಗೆ ಸಲಹೆಯನ್ನು ನೀಡದಿರಿ. 

ವೈದ್ಯರು ಪತ್ತೆಹಚ್ಚಿದ ಕಾಯಿಲೆ ಅಥವಾ ಸೂಚಿಸಿರುವ ಚಿಕಿತ್ಸೆಯ ಬಗ್ಗೆ ಸಂದೇಹಗಳಿದ್ದರೆ, ಈ ಚಿಕಿತ್ಸೆಯನ್ನು ನಿರಾಕರಿಸುವ ಹಾಗೂ ಮತ್ತೊಬ್ಬ ವೈದ್ಯರ ಸಲಹೆ-ಚಿಕಿತ್ಸೆಯನ್ನು ಪಡೆದುಕೊಳ್ಳುವ ಹಕ್ಕು ನಿಮಗಿದೆ. ಇದರಿಂದಾಗಿ ನೀವು ವೈದ್ಯರಿಗೆ ನೀಡಿದ ಶುಲ್ಕವನ್ನು ಕಳೆದುಕೊಳ್ಳಬೇಕಾದೀತೇ ಹೊರತು,ನಿಮ್ಮ ನೆಮ್ಮದಿ ಮತ್ತು ಆರೋಗ್ಯಗಳನ್ನು ಅಲ್ಲ ಎನ್ನುವುದು ನೆನೆಪಿರಲಿ. 

ಅಂತಿಮವಾಗಿ ವೈದ್ಯರು ಪತ್ತೆಹಚ್ಚಿರುವ ವ್ಯಾಧಿ ಮತ್ತು ಸೂಚಿಸಿದ ಚಿಕಿತ್ಸೆಗಳ ಬಗ್ಗೆ ತೃಪ್ತಿಯಾದಲ್ಲಿ ,ವೈದ್ಯರ ಸಲಹೆ ಸೂಚನೆಗಳನ್ನು ಕ್ರಮಬದ್ದವಾಗಿ ಪರಿಪಾಲಿಸಿ. ಯಾವುದೇ ಕಾರಣಕ್ಕೂ ವೈದ್ಯರು ನಿಗದಿಸಿದ್ದ ಔಷದಗಳ ಪ್ರಮಾಣ ಮತ್ತು ಅವಧಿಗಳನ್ನು ಬದಲಾಯಿಸದಿರಿ. ಆದರೆ ಚಿಕಿತ್ಸೆ ಆರಂಭಿಸಿದೊಡನೆ ಅಥವಾ ಒಂದೆರಡು ದಿನಗಳಲ್ಲಿ ಯಾವುದೇ ರೀತಿಯ ಅಡ್ಡ-ದುಷ್ಪರಿಣಾಮಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಕೊನೆಯದಾಗಿ ವೈದ್ಯರು ನಿಮಗೆ ಒಂದುಬಾರಿ ಸೂಚಿಸಿದ್ದ ಔಷದಗಳನ್ನು ಮತ್ತೆ ಅದೇ ಕಾಯಿಲೆ ಮರುಕಳಿಸಿದರೂ,ವೈದ್ಯರ ಸೂಚನೆಯಿಲ್ಲದೆ ಸೇವಿಸದಿರಿ. 

ಡಾ. ಸಿ. ನಿತ್ಯಾನಂದ ಪೈ 
ಬಳಕೆದಾರರ ಹಿತರಕ್ಷಣಾ ವೇದಿಕೆ 
ಪುತ್ತೂರು 

Wednesday, July 24, 2013

Right to hearing act




                                                  ರಾಜಸ್ಥಾನದಲ್ಲಿ ಜಾರಿಗೆಬಂದಿದೆ 
                   ಸಾರ್ವಜನಿಕ ಆಲಿಕೆಯ ಹಕ್ಕು ಕಾಯಿದೆ 

ತಮ್ಮ ನ್ಯಾಯಸಮ್ಮತ ಕೆಲಸಕಾರ್ಯಗಳಿಗಾಗಿ ಸರಕಾರೀ ಕಚೇರಿಗಳಿಗೆ ತೆರಳಿದ ಜನರನ್ನು ಇಲ್ಲಸಲ್ಲದ ನೆಪಗಳನ್ನು ಮುಂದೊಡ್ಡಿ ಸತಾಯಿಸುವ ಸರಕಾರೀ ನೌಕರರು,ಇದೀಗ ತಮ್ಮ ನಡವಳಿಕೆ-ನಿರ್ಧಾರಗಳಿಗೆ ಕಾರಣಗಳೇನು ಎಂದು ಸಮಜಾಯಿಷಿ ನೀಡಬೇಕಿದೆ. ಏಕೆಂದರೆ ಇಂತಹ ಕಾನೂನೊಂದು ರಾಜಸ್ಥಾನದಲ್ಲಿ ಜಾರಿಗೆಬಂದಿದೆ. 
ಆರ್. ಟಿ. ಎಚ್ ಕಾಯಿದೆ 
ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ಸುದೀರ್ಘ ಹೋರಾಟದ ಫಲವಾಗಿ ದೇಶದ ಜನತೆಗೆ ಲಭಿಸಿರುವ " ಮಾಹಿತಿ ಪಡೆಯುವ ಹಕ್ಕು ಕಾಯಿದೆಯ ಉಗಮಸ್ಥಾನವೂ ಆಗಿರುವ ರಾಜಸ್ಥಾನದಲ್ಲಿ, ಪ್ರಜಾಪೀಡಕ ಸರಕಾರೀ ಅಧಿಕಾರಿಗಳು ಹಾಗೂ ಸಿಬಂದಿಗಳ ನಿರಂಕುಶ ವರ್ತನೆಗಳಿಗೆ ಕಡಿವಾಣವನ್ನು ತೊಡಿಸುವುದರೊಂದಿಗೆ, ಜನಸಾಮಾನ್ಯರ ಹಕ್ಕುಗಳಿಗೆ ಚ್ಯುತಿ ಉಂಟಾದ ಸಂದರ್ಭದಲ್ಲಿ ನೆರವಾಗುವ ಉದ್ದೇಶದಿಂದ " ರೈಟ್ ಟು ಹಿಯರಿಂಗ್" ಅರ್ಥಾತ್ ಸಾರ್ವಜನಿಕ ಆಲಿಕೆಯ ಹಕ್ಕು ಕಾಯಿದೆಯನ್ನು ಜಾರಿಗೆ ತರಲಾಗಿದೆ. ಈ ಕಾಯಿದೆಯಂತೆ ಸರಕಾರಿ ಕಚೇರಿಗಳ ಕೆಲಸಕಾರ್ಯಗಳ ವಿಚಾರದಲ್ಲಿ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ, ಜನಸಾಮಾನ್ಯರು ನಿಯೋಜಿತ ಅಧಿಕಾರಿಗೆ ಲಿಖಿತ ದೂರೊಂದನ್ನು ದಾಖಲಿಸಬೇಕಾಗುತ್ತದೆ. ಇದಕ್ಕೆ ಗುಲಾಬಿ ಬಣ್ಣದ ಸ್ವೀಕೃತಿಯನ್ನು ನೀಡಲಾಗುತ್ತದೆ. ದೂರಿನ ಯಥಾಪ್ರತಿಯೊಂದನ್ನು ಸಂಬಂಧಿತ ಅಧಿಕಾರಿಗೂ ನೀಡಲಾಗುತ್ತದೆ. 
ಪ್ರತೀ ಶುಕ್ರವಾರ ನಿಗದಿತ ಸಮಯದಲ್ಲಿ ಪಂಚಾಯತ್, ಬ್ಲಾಕ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಸರಕಾರೀ ಕಛೇರಿಗಳಲ್ಲಿ , ದೂರುಗಳಿಗೆ ಸಂಬಂಧಿಸಿದ ಅಧಿಕಾರಿಗಳು-ಸಿಬಂದಿಗಳು ಸಾರ್ವಜನಿಕರು-ದೂರುದಾರರ ಮುಂದೆ ಹಾಜರಾಗುತ್ತಾರೆ. ದಾಖಲಾಗಿರುವ ಪ್ರತಿಯೊಂದು ದೂರುಗಳಿಗೆ- ಸಮಸ್ಯೆಗಳಿಗೆ ಇವರು ಸೂಕ್ತ ಸಮಜಾಯಿಶಿ ನೀಡುವ ಮತ್ತು ಜನರ ಹಕ್ಕುಗಳಿಗೆ ಚ್ಯುತಿಯಾದಲ್ಲಿ ಇದನ್ನು ಪರಿಹರಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಆಲಿಕೆ ಹಕ್ಕು ಕಾಯಿದೆಯು ಯಶಸ್ವಿಯಾಗಿದೆ. 
ಸಮಜಾಯಿಶಿ- ಪರಿಹಾರ 
ಜನಸಾಮಾನ್ಯರನ್ನು ಕಾಡುವ ಸಮಸ್ಯೆಗಳಾಗಿರುವ ಪಡಿತರ ಚೀಟಿ ದೊರೆಯದ,ಪಡಿತರ ಸಾಮಾಗ್ರಿಗಳನ್ನು ನೀಡದ,ವೃದ್ಧಾಪ್ಯ ವೇತನವನ್ನು ನಿರಾಕರಿಸಿದ, ಉದ್ಯೋಗ ಖಾತರಿ ಯೋಜನೆಯಲ್ಲಿ ಸೇರಿಸದ, ಬಡವರಿಗೆ ದೊರೆಯುವ ಜಮೀನು- ಮನೆಗಳ ಫಲಾನುಭವಿಗಳ ಪಟ್ಟಿಯಿಂದ ಹೆಸರು ಕಣ್ಮರೆಯಾದ, ಜಮೀನಿನ ಪಹಣಿ ಪತ್ರವನ್ನು ನೀಡದಂತಹ ಹಲವಾರು ಕುಂದುಕೊರತೆಗಳು, ಆರ್. ಟಿ. ಎಚ್ ಕಾಯಿದೆಯನ್ವಯ ಪರಿಹಾರಗೊಂಡಿವೆ. ಏಕೆಂದರೆ ಸಾರ್ವಜನಿಕ ಆಲಿಕೆಯ ಸಂದರ್ಭದಲ್ಲಿ ಅಧಿಕಾರಿಗಳು ಜನರ ಕೆಲಸಕಾರ್ಯಗಳನ್ನು ಮಾಡದೆ ಇರಲು ಸೂಕ್ತ ಸಮಜಾಯಿಶಿಯನ್ನು ನೀಡುವುದರೊಂದಿಗೆ, ನ್ಯಾಯಸಮ್ಮತ ಹಕ್ಕುಗಳನ್ನು-ಬೇಡಿಕೆಗಳನ್ನು ಈಡೇರಿಸಬೇಕಾಗುತ್ತದೆ. 
ಈ ಕಾಯಿದೆಯಂತೆ ಜನಸಾಮಾನ್ಯರು ದೂರನ್ನು ದಾಖಲಿಸಿದ 15 ದಿನಗಳ ಒಳಗಾಗಿ ಸಾರ್ವಜನಿಕ ಆಲಿಕೆಯ ಅವಕಾಶವನ್ನು ನೀಡಬೇಕಾದ ಮತ್ತು ಆಲಿಕೆ ನಡೆದ 7 ದಿನಗಳಲ್ಲಿ ದೂರುದಾರರ ಸಮಸ್ಯೆಯನ್ನು ಪರಿಹರಿಸುವ ಲಿಖಿತ ಆದೇಶವನ್ನು ತಲುಪಿಸಬೇಕಾಗುವುದು.ಇದಕ್ಕೆ ತಪ್ಪಿದಲ್ಲಿ ತಪ್ಪಿತಸ್ಥ ಅಧಿಕಾರಿಗೆ ದಿನವೊಂದಕ್ಕೆ 250 ರೂ. ದಂಡವನ್ನು ವಿಧಿಸಬಹುದಾಗಿದೆ.  ಅರ್ಥಾತ್, ಜನರು ದೂರನ್ನು ದಾಖಲಿಸಿದ 21 ದಿನಗಳಲ್ಲಿ ಹೆಚ್ಚಿನ ಸಮಸ್ಯೆಗಳು ಪರಿಹಾರಗೊಳ್ಳುವುದೇ ಇದರ ವೈಶಿಷ್ಟ್ಯವಾಗಿದೆ. 
ರಾಜ್ ಸಮಂದ್ ನಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡಿದ್ದ ಈ ಕಾಯಿದೆಯು,ಇದೇ ವರ್ಷದ ಎಪ್ರಿಲ್ ತಿಂಗಳಿನಿಂದ ರಾಜಸ್ಥಾನ ರಾಜ್ಯಾದ್ಯಂತ ಜಾರಿಗೆ ಬಂದಿದೆ. ಆದರೆ ಇದರ ಅನುಷ್ಠಾನದಲ್ಲಿ ಕೆಲವೊಂದು ಅಡೆತಡೆಗಳೂ ಉದ್ಭವಿಸಿದ್ದು, ಇವೆಲ್ಲವನ್ನೂ ಸಮರ್ಪಕವಾಗಿ ಪರಿಹರಿಸಲಾಗುತ್ತಿದೆ. ತತ್ಪರಿಣಾಮವಾಗಿ ಸರಕಾರದ ಆಡಳಿತದಲ್ಲಿ ಪಾರದರ್ಶಕತೆಯೊಂದಿಗೆ, ಉತ್ತರದಾಯಿತ್ವವನ್ನು ಜಾರಿಗೊಳಿಸುವಲ್ಲಿ ಅತ್ಯಂತ ಉಪಯುಕ್ತವೆನಿಸಿದೆ. 
ಅನೇಕ ವರ್ಷಗಳಿಂದ ಸರಕಾರೀ ಅಧಿಕಾರಿಗಳ ದಬ್ಬಾಳಿಕೆ,ನಿರಂಕುಶ ವರ್ತನೆಗಳು, ಭ್ರಷ್ಟಾಚಾರ ಮತ್ತು ಜನರ ಹಕ್ಕುಗಳಿಗೆ ಚ್ಯುತಿಯನ್ನು ಉಂಟುಮಾಡುತ್ತಿದ್ದ ಸಂದರ್ಭಗಳಲ್ಲಿ ಅಸಹಾಯಕರಾಗಿದ್ದ ಪ್ರಜೆಗಳಿಗೆ, ಈ ಕಾಯಿದೆಯು ಪ್ರಬಲವಾದ ಅಸ್ತ್ರವಾಗಿ ಪರಿಣಮಿಸಿದೆ. ತತ್ಪರಿಣಾಮವಾಗಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಮಸ್ಯೆಗಳು ಮತ್ತು ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ರಾಜಸ್ಥಾನದಲ್ಲಿ ದೂರುಗಳ ಮಹಾಪೂರವೇ ಹರಿದುಬರುತ್ತಿದೆ!.  
ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರ ಅನಿಸಿಕೆಯಂತೆ ಸರಕಾರೀ ಯಂತ್ರದ ವಿವಿಧ ಹಂತಗಳಲ್ಲಿ ಉತ್ತರದಾಯಿತ್ವ ಇಲ್ಲದಿರುವುದು ಜನಸಾಮಾನ್ಯರನ್ನು ಕೆರಳಿಸಿದೆ. ಈ ಪ್ರಬಲ ಕಾಯಿದೆಯು ಸರಕಾರೀ ಅಧಿಕಾರಿಗಳಲ್ಲಿ ಉತ್ತರದಾಯಿತ್ವವನ್ನು ಖಾತರಿಗೊಳಿಸುವ ಆಂದೋಲನದ ರೂಪದಲ್ಲಿ ದೇಶಾದ್ಯಂತ ಜಾರಿಗೆ ಬರಬೇಕಿದೆ. 
ಈ ಕಾಯಿದೆಯನ್ನು ಜಾರಿಗೆ ತರುವಂತಹ ದಿಟ್ಟ ನಿರ್ಧಾರವನ್ನು ತಳೆದ ರಾಜಸ್ಥಾನ ಸರಕಾರದ ನಿರ್ಧಾರ ನಿಜಕ್ಕೂ ಅಭಿನಂದನೀಯ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಜಾರಿಗೊಳಿಸುವ ವಿಚಾರವನ್ನು ಇದೀಗ ಕೇಂದ್ರಸರಕಾರ ಮತ್ತು ಸಂಸತ್ತಿನ ಸದಸ್ಯರು ಪರಿಗಣಿಸಬೇಕಿದೆ. ತನ್ಮೂಲಕ ಸರಕಾರೀ ಅಧಿಕಾರಿಗಳ ಪ್ರಜಾಪೀಡನೆಯನ್ನು ಅಂತ್ಯಗೊಳಿಸಿ, ಉತ್ತರದಾಯಿತ್ವದ ಹೊಣೆಗಾರಿಕೆಯನ್ನು ಹೇರಬೇಕಾದ ಕಾಲ ಸನ್ನಿಹಿತವಾಗಿದೆ. 
ಬಿಹಾರ ಮತ್ತಿತರ ರಾಜ್ಯಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದ "ಸಕಾಲ" ಯೋಜನೆಯನ್ನು ರಾಜ್ಯದಲ್ಲೂ ಜಾರಿಗೆ ತಂದಿದ್ದ ಕರ್ನಾಟಕ ಸರಕಾರವು,ಇದೀಗ "ಸಾರ್ವಜನಿಕ ಆಲಿಕೆಯ ಹಕ್ಕು" ಕಾಯಿದೆಯನ್ನು ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸುವುದೇ?, ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಷ್ಟೇ!. 
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

Thursday, July 18, 2013




                          ನಿಮ್ಮ ನಡೆನುಡಿಗಳಿಗೆ ಹಿಡಿದ ಕೈಗನ್ನಡಿ!
ತನ್ನ ಮನೆಮಂದಿಯ ನಡೆನುಡಿಗಳನ್ನು ದಿನನಿತ್ಯ ಕಂಡು-ಕೇಳುವ ಪುಟ್ಟ ಕಂದನು, ಇವುಗಳನ್ನು ಅನುಕರಿಸುವುದು ಸ್ವಾಭಾವಿಕವೂ ಹೌದು. ಇದೇ ಕಾರಣದಿಂದಾಗಿ ನಿಮ್ಮ ಕಂದನ ಗುಣಾವಗುಣಗಳಿಗೆ ನೀವು ಹೊಣೆಗಾರರೇ ಹೊರಟ, ಆ ಮುಗ್ಧ ಕಂದನಲ್ಲ. ಸದ್ಗುಣ- ದುರ್ಗುಣಗಳ ನಡುವಿನ ವ್ಯತ್ಯಾಸವನ್ನೇ ಅರಿತಿರದ ನಿಮ್ಮ ಕಂದನ ವರ್ತನೆಗಳು, ನಿಶ್ಚಿತವಾಗಿಯೂ ನಿಮ್ಮ ನಡೆ-ನುಡಿಗಳಿಗೆ ಹಿಡಿದ ಕನ್ನಡಿ ಎನ್ನುವುದನ್ನು ಅರಿತಿರಿ!. 

ರಾಸ್ಕಲ್ ನನ್ಮಗನೇ ...... 
ಶ್ರೀನಿವಾಸನ ಮನೆಯಿಂದ ಬಂದಿದ್ದ ತುರ್ತುಕರೆಗೆ ಸ್ಪಂದಿಸಿದ್ದ ವೈದ್ಯರು, ಆತನ ಮನೆಬಾಗಿಲಿನಲ್ಲಿ ನಿಂತು ತನ್ನನ್ನೇ ದಿಟ್ಟಿಸುತ್ತಿದ್ದ ಮುದ್ದುಕಂದನನ್ನು ಕಂಡು ಆತನ ಮೈದಡವಿದ್ದರು. ಮರುಕ್ಷಣದಲ್ಲಿ ರಾಸ್ಕಲ್ ನನ್ಮಗನೇ ಒಳಗೆ ಬಾರೋ ಎಂದುಲಿದು ಒಳಕ್ಕೆ ಓಡಿದ್ದ ಮಗುವಿನ ಮಾತುಗಳನ್ನು ಕೇಳಿದ ವೈದ್ಯರಿಗೆ ದಿಗ್ಭ್ರಮೆಯಾಗಿತ್ತು. 
ಅಷ್ಟರಲ್ಲೇ ಹೊರಬಂದ ಶ್ರೀನಿವಾಸನು ವೈದ್ಯರಿಗೆ ವಂದಿಸುತ್ತಿದ್ದಂತೆಯೇ ಮತ್ತೆ ಪ್ರತ್ಯಕ್ಶವಾಗಿದ್ದ ಮಗುವನ್ನು ಎತ್ತಿಕೊಂಡವನೇ,"ನೋಡಿ ಸಾರ್,ಎಷ್ಟೊಂದು ಚೂಟಿಯಾಗಿದ್ದಾನೆ ಈ ಸೂಳೆಮಗ,ಇನ್ನೂ ಮೂರುವರ್ಷ ಪೂರ್ತಿಯಾಗಿಲ್ಲ,ಆಗಲೇ ಈ ಮುಂಡೆಗಂಡ ....... ". ಶ್ರೀನಿವಾಸನ ಬಾಯಿಂದ ಪುಂಖಾನುಪುಂಖವಾಗಿ ಹೊರಬೀಳುತ್ತಿದ್ದ ಅಣಿಮುತ್ತುಗಳೇ, ಆತನ ಕಂದನ ಮಾತುಗಳ ಮೂಲವನ್ನು ಸಾರಿಹೆಳುತ್ತಿದ್ದವು. 
ತುಸು ಸಾವರಿಸಿಕೊಂಡ ವೈದ್ಯರು ಒಳಕೋಣೆಯಲ್ಲಿದ್ದ  ರೋಗಿಯನ್ನು ಪರೀಕ್ಷಿಸಿ,ಅವಶ್ಯಕ ಔಷದಗಳನ್ನು ನೀಡಿ ಹೊರಬಂದ ಬಳಿಕ,ಶ್ರೀನಿವಾಸನು ನೀಡಿದ್ದ ಹಣವನ್ನು ಜೇಬಿಗೆ ಹಾಕಿದ್ದರು. ಇದನ್ನು ಕಂಡ ಕಂದನು "ಏ ಕಳ್ಳಾ, ಕಂಡದ್ದನ್ನೆಲ್ಲಾ ಜೇಬಿಗೆ ಹಾಕ್ತೀಯಾ?",ಎನ್ನಬೇಕೇ!. 
ಶ್ರೀನಿವಾಸನ ಪುತ್ರರತ್ನನ ಮಾತುಗಳು ವೈದ್ಯರಿಗೆ ಕಸಿವಿಸಿಯನ್ನು ಉಂಟುಮಾಡಿದರೂ,ಇದೀಗ ಬೆಚ್ಚಿಬೀಳುವ ಸರದಿ ಶ್ರೀನಿವಾಸನದ್ದಾಗಿತ್ತು. ಸಿಟ್ಟು ನೆತ್ತಿಗೆರಿದ ಪರಿಣಾಮವಾಗಿ ಮಗುವಿಗೆ ಎರಡೇಟು ಬಾರಿಸಿ "ಕೆಟ್ಟ ಮಾತುಗಳನ್ನು ಆಡಬಾರದೆಂದು ಸಾವಿರಬಾರಿ ಹೇಳಿದರೂ ಕೇಳ್ತಾ ಇಲ್ಲ ಈ ಬೇವರ್ಸಿ ನನ್ಮಗ"ಎಂದು ಕಿರುಚಿದ್ದನು. ಮರುಕ್ಷಣದಲ್ಲೇ ತನ್ನ ತಪ್ಪಿನ ಅರಿವಾಗಿ,ವೈದ್ಯರ ಮುಂದೆಯೇ ಮುಖಮುಚ್ಚಿ ಅಳಲಾರಂಭಿಸಿದ. ಪರಿಸ್ಥಿತಿಯನ್ನು ಅರ್ಥೈಸಿಕೊಂಡ ವೈದ್ಯರು ಆತನನ್ನು ಸಾಂತ್ವನಿಸಿದರೂ,ಚಿಕ್ಕ ಮಕ್ಕಳಂತೆ ಬಿಕ್ಕಿಬಿಕ್ಕಿ ಅಳುತ್ತಿದ್ದ ಶ್ರೀನಿವಾಸನು,ತನ್ನ ಹಿಡಿತವಿಲ್ಲದ ನಾಲಗೆಯಿಂದಾಗಿ ಸಂಭವಿಸಿದ ಘಟನೆಯಿಂದ ಸಾಕಷ್ಟು ನೊಂದಿದ್ದನು. ಮಗನ ವರ್ತನೆಗಳಿಗೆ ತಾನೇ ಕಾರಣಕರ್ತನೆಂದು ತಿಳಿದಿದ್ದ ಆತನು,ಹಠಾತ್ತಾಗಿ ವೈದ್ಯರ ಕಾಲಿಗೆರಗಿ ತನ್ನನ್ನು ಈ ಸಮಸ್ಯೆಯಿಂದ ಪಾರುಮಾಡುವಂತೆ ಅಂಗಲಾಚಿದನು. 
ವೈದ್ಯರ ಸಲಹೆಯಂತೆ ಪರಿಣಿತ ಮನೋವೈದ್ಯರ ಬಳಿ ಆಪ್ತಸಲಹೆ ಪಡೆಯಲು ಆರಂಭಿಸಿದ ಶ್ರೀನಿವಾಸನು,ಕೇವಲ ಮೂರು ತಿಂಗಳಲ್ಲೇ ಸಂಪೂರ್ಣವಾಗಿ ಬದಲಾಗಿದ್ದನು. ಆಶ್ಚರ್ಯವೆಂದರೆ ಆಪ್ತಸಲಹೆಯನ್ನೇ ಪಡೆದುಕೊಳ್ಳದ ಆತನ ಪತ್ನಿ ಮತ್ತು ಮಗನ ವರ್ತನೆಗಳೂ, ಆತನ ವರ್ತನೆಗಳು ಬದಲಾಗ ತೊಡಗಿದಂತೆಯೇ ಸಮರ್ಪಕವಾಗಿ ಪರಿವರ್ತನೆಗೊಂಡಿದ್ದವು!. 
ತದನಂತರ ಶ್ರೀನಿವಾಸನ ಸಂಸಾರವು ಸುಖಸಂತೋಷಗಳ ಸಾಗರ ಎನ್ನುವಂತಾಗಿರಲು, ಮನೆಗೆ ಬಂದ ಅತಿಥಿಗಳನ್ನು "ಹೆಲೋ ಅಂಕಲ್,ಹೆಲೋ ಆಂಟಿ, ನಮಸ್ತೆ" ಎಂದುಸ್ವಾಗತಿಸುವ ಮುದ್ದುಕಂದನೇ ಸಾಕ್ಷಿಯಾಗಿದ್ದನು!. 
ಮನಸ್ಸಿಗಾದ ಗಾಯ ಮಾಗದೇ?
ಅನಂತ ಮತ್ತು ಆತನ ಪತ್ನಿ ಆಶಾ ತಮ್ಮ ಏಕಮಾತ್ರ ಪುತ್ರಿಯ ಹುಟ್ಟುಹಬ್ಬಕ್ಕೆಂದು ಹೊಸಬಟ್ಟೆಗಳನ್ನು ಕೊಳ್ಳಲು ಪೇಟೆಗೆ ತೆರಳಿದ್ದರು. ತರಗತಿಯಲ್ಲಿ ಮೊದಲ ಸ್ಥಾನಗಳಿಸಿದಲ್ಲಿ  ನೀನು ಬಯಸಿದ ಉಡುಪನ್ನು ಕೊಡಿಸುವುದಾಗಿ ಅಪ್ಪ ಹೇಳಿದ್ದ ಮಾತನ್ನು ಪುಟ್ಟಿಯೂ ಮರೆತಿರಲಿಲ್ಲ. ಇದೇ ಕಾರಣದಿಂದಾಗಿ ತನ್ನ ಸಲುವಾಗಿ ಕೊಳ್ಳುವ ಬಟ್ಟೆಯನ್ನು ತಾನೇ ಆಯ್ಕೆಮಾಡುವುದಾಗಿ ಹಠ ಹಿಡಿದಿದ್ದ ಪುತ್ತಿಯನ್ನೂ ಜೊತೆಗೆ ಕರೆದೊಯ್ದಿದ್ದರು. 
ನಗರದ ಖ್ಯಾತ ಜವುಳಿ ಅಂಗಡಿಯಲ್ಲಿ ತನ್ನ ಮಗಳಿಗೆ ಒಪ್ಪುವ ಬಟ್ಟೆಗಳನ್ನು ಆಶಾಳು ಆರಿಸುತ್ತಿದ್ದಾಗ ಆಕಸ್ಮಿಕವಾಗಿ ಕಾಣಸಿಕ್ಕಿದ ಸ್ನೇಹಿತನೊಂದಿಗೆ ಅನಂತನು ಹರಟೆಹೊಡೆಯಲು  ನಿಂತಿದ್ದನು. ಅಷ್ಟರಲ್ಲೇ ಪ್ರದರ್ಶನಕ್ಕಾಗಿ ಇರಿಸಿದ್ದ ಬೊಂಬೆಗೆ ತೊಡಿಸಿದ್ದ ಸುಂದರವಾದ ಉಡುಪೊಂದು ಪುಟ್ಟಿಯ ಕಣ್ಣಿಗೆ ಬಿದ್ದಿತ್ತು. 

ಸ್ವಲ್ಪ ಹೊತ್ತಿನ ಬಳಿಕ ತಾನು ಆಯ್ಕೆಮಾಡಿದ ಉಡುಪುಗಳನ್ನು ಮಗಳಿಗೆ ತೋರಿಸಲು ಬಯಸಿದ ಆಶಾಳಿಗೆ,ಸಮೀಪದ ಗೊಂಬೆಯ ಬಳಿ ನಿಂತಿದ್ದ ಪುಟ್ಟಿಯನ್ನು ಕಂಡು ಅಚ್ಚರಿಯಾಗಿತ್ತು. ಅತ್ತ ತೆರಳಿದ ಆಕೆಗೂ ಗೊಂಬೆಗೆ ತೊಡಿಸಿದ್ದ ಉಡುಗೆ ಮೆಚ್ಚಿಗೆಯಾಗಿತ್ತು. ಪುಟ್ಟಿ ಬಯಸಿದ ಉಡುಪನ್ನು ಕೊಡಿಸುವುದಾಗಿ ಹೇಳಿದ ಆಶಾಳಿಗೆ,ಅದರ ಬೆಲೆ 1200 ರುಪಾಯಿಗಳೆಂದು ತಿಳಿದಾಗ ಗಾಬರಿಯಾಗಿತ್ತು. ಕೆಳಮಧ್ಯಮ ವರ್ಗದ ಈ ಈ ಕುಟುಂಬಕ್ಕೆ ಇಂತಹ ದುಬಾರಿ ಉಡುಪನ್ನು ಖರೀದಿಸುವುದು ಕನಸಿನ ಮಾತಾಗಿತ್ತು. ಇದೇ ಕಾರಣದಿಂದಾಗಿ ಬೇರೊಂದು ಉಡುಪನ್ನು ಆಯ್ಕೆ ಮಾಡಲು ತಾಯಿಯು ಹೇಳಿದುದನ್ನು ಕೇಳಿದೊಡನೆ ಪುಟ್ಟಿ ಮಂಕಾಗಿದ್ದಳು. ಬಳಿಕ ತಾಯಿಯೇ ಆಯ್ಕೆ ಮಾಡಿದ  ಉಡುಪುಗಳನ್ನು ಕಣ್ಣೆತ್ತಿಯೂ ನೋಡದ ಪುಟ್ಟಿಯು, ತಾಯಿ ಆಯ್ದ ಬಟ್ಟೆಗಳನ್ನು ಕಣ್ಣೆತ್ತಿಯೂ ನೋಡದೆ,ನಿನಗೆ ಮೆಚ್ಚುಗೆಯಾದಲ್ಲಿ ನನಗೂ ಮೆಚ್ಚುಗೆ ಎಂದಿದ್ದಳು. ಸದಾ ಅರಳು ಹುರಿದಂತೆ ಮಾತನಾಡುತ್ತಿದ್ದ ಮಗಳು ಮೌನ ವಹಿಸಿದ್ದನ್ನು ಅರ್ಥೈಸಿಕೊಂಡ ಅಶಾ ಮಾತ್ರ ಅಸಹಾಯಳಾಗಿದ್ದಳು. 

ತನ್ನ ತಂದೆಯ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಅರಿವಿಲ್ಲದ ಮುಗ್ಧ ಬಾಲೆಗೆ ತಾನು ಬಯಸಿದ ಉಡುಪಿನ ದುಬಾರಿ ಬೆಲೆಯ ಅರಿವೇ ಇರಲಿಲ್ಲ. ಅಂತೆಯೇ ತಾನು ಬಯಸಿದ ಉಡುಗೆಯನ್ನು ಕೊಡಿಸುವುದಾಗಿ ಹೇಳಿದ್ದ ತಂದೆ, ಕೊಟ್ಟ ಮಾತಿಗೆ ತಪ್ಪಿದರೆನ್ನುವ ನೋವು ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು.ಪತ್ನಿ ಮತ್ತು ಮಗಳ ಚರ್ಯೆಗಳನ್ನು ದೂರದಿಂದಲೇ ಗಮನಿಸುತ್ತಿದ್ದ ಅನಂತನಿಗೆ,ಏನೋ ಎಡವಟ್ಟಾಗಿದೆ ಎನ್ನುವ ಸಂದೇಹ ಮೂಡಿತ್ತು. ತಕ್ಷಣ ಪತ್ನಿಯ ಬಳಿಗೆ ಬಂದು ವಿಷಯವನ್ನರಿತ ಆತನಿಗೆ ತನ್ನ ಬಾಲ್ಯದ  ನೆನಪಾಗಿತ್ತು. ನಾಲ್ಕಾರು ಸಹೋದರರು ಅಪ್ಪ ತಂದಿದ್ದ ಒಂದೇ ವಿಧದ ಬಟ್ಟೆಗಳನ್ನು ಧರಿಸಿ ಓಡಾಡುತ್ತಿದ್ದಾಗ,ತಾನು ಬಯಸಿದ ಬಟ್ಟೆಗಳನ್ನು ಧರಿಸಲಾಗದ ಕಾರಣದಿಂದ ಕಣ್ಣೀರು ಹಾಕುತ್ತಿದ್ದುದನ್ನು ಅನಂತನು ಇಂದಿಗೂ ಮರೆತಿರಲಿಲ್ಲ. 

ಮರುಕ್ಷಣದಲ್ಲಿ ಪುಟ್ಟಿಯನ್ನು  ಕರೆದು ತಾನು ಆಕೆಗಾಗಿ ಖರೀದಿಸಲಿದ್ದ ಮೂರು ಜೊತೆ ಬಟ್ಟೆಗಳಿಗೆ ಬದಲಾಗಿ,ಆಕೆ ಮೆಚ್ಚಿದ್ದ ಒಂದೇ ಉಡುಪನ್ನು ಖರೀದಿಸಲೇ ಎಂದು ಕೇಳಿದೊಡನೆ ಪುಟ್ಟಿಯ ಮುಖದಲ್ಲಿ ಮುಗುಳುನಗೆ ಮೂಡಿತ್ತು. ಮರುಮಾತನಾಡದೇ ಆ ಉಡುಪನ್ನು ಖರೀದಿಸಿ,ಕಣ್ ಸನ್ನೆಯಿಂದಲೇ ಪತ್ನಿಯನ್ನು ಸುಮ್ಮನಿರುವಂತೆ ಸೂಚಿಸಿದ ಅನಂತನು ಪುಟ್ಟಿಯೊಡನೆಹೊರಗೆ ಬಂದಿದ್ದನು. ತನ್ನ ಮೆಚ್ಚಿನ ಉಡುಪನ್ನು ಎದೆಗವಚಿಕೊಂಡು ಸಂತಸದಿಂದ ಬೀಗುತ್ತಿದ್ದ ಮಗಳನ್ನು ಕಂಡು ಅನಂತನ ಕಣ್ಣಿನಲ್ಲಿ ಕಂಬನಿ ಮೂಡಿತ್ತು. ಜೊತೆಗೆ ಮಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಸಂತೃಪ್ತಿಯೂ ಆತನ ಮುಖದಲ್ಲಿ ಕಾಣಿಸುತ್ತಿತ್ತು.
ದಾರಿತಪ್ಪಿದ ಮಗ 
ನಗರದ ಖ್ಯಾತ ಶಾಲೆಯಲ್ಲಿ ಒಂದೆರಡು ತಿಂಗಳುಗಳಿಂದ ನಡೆಯುತ್ತಿದ್ದ ಸಣ್ಣಪುಟ್ಟ ಕಳ್ಳತನದ ಪ್ರಕರಣಗಳು ಮುಖ್ಯೋಪಾದ್ಯಾಯರನ್ನು ಕಂಗೆಡಿಸಿದ್ದವು. ಮೊದಮೊದಲು ವಿದ್ಯಾರ್ಥಿಗಳ ಚೀಲದಲ್ಲಿದ್ದ ವಸ್ತುಗಳಿಗೆ ಸೀಮಿತವಾಗಿದ್ದ ಕಳ್ಳತನವು,ಕ್ರಮೇಣ ಶಿಕ್ಷಕರ ಕೊಥದಿಯಲ್ಲಿನ ಚೀಲಗಳಲ್ಲಿ ಇರಿಸಿದ್ದ ಹಣ ನಾಪತ್ತೆಯಾಗುವ ಹಂತಕ್ಕೆ ತಲುಪಿತ್ತು. 

ಅದೊಂದು ದಿನ ಶಿಕ್ಷಕರ ಕೊಠಡಿಯಲ್ಲಿ ಇರಿಸಿದ್ದ ಹಣದ ಪರ್ಸ್ ಮಾಯವಾದ ವರ್ತಮಾನವನ್ನು ಅರಿತ ಮುಖ್ಯೋಪಾಧ್ಯಾಯರು,ಪ್ರತಿಯೊಂದು ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ವೈಯುಕ್ತಿಕವಾಗಿ ತಪಾಸಣೆಗೆ ಒಳಪಡಿಸಿದ್ದರು. ಈ ಸಂದರ್ಭದಲ್ಲಿ ಪರ್ಸಿನೊಂದಿಗೆ ಸಿಕ್ಕಿಬಿದ್ದ ವಿದ್ಯಾರ್ಥಿ ಕಿರಣನೆಂದು ಬಹಿರಂಗವಾದಾಗ,ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ನಂಬಲು ಅಸಾಧ್ಯವೆನಿಸಿತ್ತು.
"ಛೋಟಾ ನವಾಬ್" ಎಂದೇ ಪ್ರಖ್ಯಾತನಾಗಿದ್ದ ಕಿರಣನಿಗೆ ಹಣವನ್ನು ನೀರಿನಂತೆ ಪೋಲುಮಾಡುವ ಹವ್ಯಾಸವಿತ್ತು. ಸಹಪಾಠಿಗಳಿಗೂ ಅಚ್ಚರಿಯಾಗುವಂತೆ ಏಳನೆಯ ತರಗತಿಯ ಈ ಬಾಲಕನ ಜೇಬಿನಲ್ಲಿ ಸದಾ ನೂರರ ನೋಟುಗಳೇ ಇರುತ್ತಿದ್ದವು!. ದಿನದಲ್ಲಿ ನಾಲ್ಕಾರು ಕೋಲಾಗಳು,ಹತ್ತಾರು ಕ್ಯಾಡ್ಬರೀಸ್ ಚಾಕಲೇಟ್ ಗಳು,ಐಸ್ ಕ್ರೀಮ್, ಚ್ಯೂಯಿಂಗ್ ಗಮ್ ಮತ್ತು ಪಾನ್ ಪರಾಗ್ ಗಳನ್ನು ತಿನ್ನುತ್ತಿದ್ದ ಕಿರಣನಿಗೆ,ಇಂತಹ ಮೋಜುಗಳಿಗೆಗಾಗಿ ಎಂದೂ ಹಣದ ಕೊರತೆಯೇ ಉದ್ಭವಿಸುತ್ತಿರಲಿಲ್ಲ. ಅಂತೆಯೇ ಆತನಿಗೆ ಇಷ್ಟೊಂದು ಹಣವನ್ನು ನೀಡುತ್ತಿದ್ದವರು ಯಾರೆಂದು ಆತನ ಖಾಸಾ ಮಿತ್ರರಿಗೂ ತಿಳಿದಿರಲಿಲ್ಲ.
ನಿಜ ಹೇಳಬೇಕಿದ್ದಲ್ಲಿ ಕಿರಣನ ತಂದೆ ರಮೇಶ ರಾಯರು ಆಗರ್ಭ ಶ್ರೀಮಂತರಾಗಿದ್ದರೂ, ಆತನ ತಾಯಿ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದರು. ಆಕೆಯ ಬಾಲ್ಯದಲ್ಲಿ ಮೂರುಹೊತ್ತಿನ ತುತ್ತಿಗೂ ಮನೆಯಲ್ಲಿ ತತ್ವಾರ ಇದ್ದುದರಿಂದಾಗಿ,ಕಂಡದ್ದನ್ನು ಕದಿಯುವ ಹವ್ಯಾಸ ಆಕೆಗೆ ರೂಢಿಯಾಗಿತ್ತು. ಹೊಟ್ಟೆಯ ಪಾಡಿಗಾಗಿ ಅಂಟಿಕೊಂಡಿದ್ದ ಈ ದುಶ್ಚಟವು, ಇದೀಗ ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುವ ಸ್ಥಿತಿಯಲ್ಲೂ ಮುಂದುವರೆದಿತ್ತು!.

ಅದೊಂದು ದಿನ ತನ್ನ ಪರೀಕ್ಷೆಗಾಗಿ ಸಿದ್ಧತೆಯನ್ನು ನಡೆಸುತ್ತಿದ್ದ ಕಿರಣನು,ತನಗೆ ತಿಳಿಯದ ಲೆಕ್ಕವೊಂದನ್ನು ಕಲಿಯಲು ತಾಯಿಯನ್ನು ಅರಸಿಕೊಂಡು ಆಕೆಯ ಕೊಠಡಿಗೆ ಹೋಗಿದ್ದನು. ಗಂಡನ ಪರ್ಸಿನಿಂದ ಹಣವನ್ನು ಎಗರಿಸುತ್ತಿದ್ದ ಆಕೆಗೆ,ಆಕಸ್ಮಿಕವಾಗಿ ಕೋಣೆಯನ್ನು ಪ್ರವೇಶಿಸಿದವರು ಯಾರೆಂದು ತಿಳಿಯದೇಗಾಬರಿಗೊಂಡಾಗ ಕೈಯ್ಯಲ್ಲಿದ್ದ ಪರ್ಸ್ ಕೆಳಕ್ಕೆ  ಬಿದ್ದಿತ್ತು. ಅನಿರೀಕ್ಷಿತ ಘಟನೆಯಿಂದ ಹೆದರಿ ಬಿಳಿಚಿಕೊಂಡ ತಾಯಿಯ ವರ್ತನೆಯನ್ನು ಕಂಡು ಆಶ್ಚರ್ಯಚಕಿತನಾಗಿದ್ದ ಕಿರಣನು, ಆಕೆ ಹೆದರಲು ಕಾರಣವೇನೆಂದು ಕೇಳಿದ್ದನು. ಆತನ ಬಾಯಿ ಮುಚ್ಚಿಸಲು ಅದೇ ಪರ್ಸಿನಿಂದ ಹತ್ತು ರೂಪಾಯಿಯ ನೋಟೊಂದನ್ನು ನೀಡಿ ಚಾಕಲೇಟು ತಿನ್ನು ಎಂದು ಹೇಳಿದ ಆಕೆಯು, ಕೋಣೆಯಿಂದ ಹೊರನಡೆದಿದ್ದಳು.  
ನಾಲ್ಕಾರು ವರ್ಷಗಳಲ್ಲಿ ಇಂತಹ ಹಲವಾರು ಘಟನೆಗಳನ್ನು ಕಂಡಿದ್ದ ಕಿರಣನಿಗೆ ತಾಯಿಯ ಮೇಲೆ ಸಂದೇಹ ಮೂಡುವುದರೊಂದಿಗೆ, ತಾಯಿಯ ಕಣ್ಣುತಪ್ಪಿಸಿ ತಂದೆಯ ಪರ್ಸಿನಿಂದ ಹಣವನ್ನು ಕದಿಯುವ ಕಲೆಯೂ ಕರತಲಾಮಲಕವೆನಿಸಿತ್ತು. ಜೊತೆಗೆ ತಾಯಿಯ ಗುಟ್ಟನ್ನು ರಟ್ಟು ಮಾಡುವುದಾಗಿ ಬೆದರಿಸಿ, ಆಕೆಯಿಂದಲೂ ಹಣ ಸುಲಿಯುವುದು ಅಭ್ಯಾಸವಾಯಿತು. ಆತನ ಜೇಬಿನಲ್ಲಿ ಸದಾ ನೂರರ ನೋಟುಗಳು ಇರಲು ಇದುವೇ ಕಾರಣವಾಗಿತ್ತು. 
ಆದರೆ ತಾಯಿ ಮಗನ ದುರಾದೃಷ್ಟದಿಂದ ಇವರಿಬ್ಬರೂ ಒಂದೇ ವಾರದಲ್ಲಿ ರಮೇಶ ರಾಯರ ಕೈಯ್ಯಲ್ಲಿ ಸಿಕ್ಕಿ ಬಿದ್ದು ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದಿತ್ತು. ಇದರಿಂದಾಗಿ ಕಿರಣನಿಗೆ ಅನಾಯಾಸವಾಗಿ ಲಭಿಸುತ್ತಿದ್ದ "ಆದಾಯ"ವೂ ನಿಂತು ಹೋಗಿತ್ತು. ಆದರೆ ತನ್ನ ದುಂಡು ವೆಚ್ಚಗಳನ್ನು ನಿಯಂತ್ರಿಸಲಾಗದ ಕಿರಣನು, ಶಾಲೆಯಲ್ಲಿ ತನ್ನ ಕೈಚಳಕವನ್ನು ತೋರಲು ಆರಂಭಿಸಿ ಸಿಕ್ಕಿಬಿದ್ದಿದ್ದನು!. 

ಕೊನೆಯ ಮಾತು 
ನೂಲಿನಂತೆ ಸೀರೆ,ತಾಯಿಯಂತೆ ಮಗಳು ಎನ್ನುವ ಆಡುಮಾತನ್ನು ನೆನೆಪಿಸುವ ಇಂತಹ ದುರ್ಗುಣಗಳಿಗೆ ಮಕ್ಕಳ ತಂದೆ ತಾಯಂದಿರೇ ನೇರವಾಗಿ ಹೊಣೆಗಾರರು ಎನ್ನುವುದರಲ್ಲಿ ಎರಡು ಮಾತಿಲ್ಲ. 

ಸಾಮಾನ್ಯವಾಗಿ ಕುಟುಂಬ ವೈದ್ಯರ ವೃತ್ತಿಜೀವನದಲ್ಲಿ ಇಂತಹ ಅನೇಕ ಸಮಸ್ಯೆಗಳು ಕಾಣಸಿಗುತ್ತವೆ. ತಮ್ಮಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳ ವರ್ತನೆಗಳು ಅವರ ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತವೆ ಎಂದು ಸಾಕಷ್ಟು ಉದಾಹರಣೆಗಳೊಂದಿಗೆ ವಿವರಿಸಿದರೂ,ಇದನ್ನು ನಿರ್ಲಕ್ಷಿಸುವ ಮಾತಾಪಿತರು ಕೊನೆಗೊಂದು ದಿನ ವೈದ್ಯರ ಸಹಾಯವನ್ನು ಅಪೇಕ್ಷಿಸಿ ಬರುವುದು ಅಪರೂಪವೇನಲ್ಲ. 

ನಿಮ್ಮಲ್ಲಿರಬಹುದಾದ ದುರ್ಗುಣಗಳನ್ನು ಸುಲಭದಲ್ಲೇ ಕಲಿಯುವ ನಿಮ್ಮ ಮಗು,ಅಷ್ಟೇ ಸುಲಭವಾಗಿ ನಿಮ್ಮ ಸದ್ಗುಣಗಳನ್ನೂ ಕಲಿಯಬಲ್ಲದು ಎನ್ನುವುದನ್ನು ಮರೆಯದಿರಿ. ಅಂತೆಯೇ ಕ್ಲಿಷ್ಟಕರ ಸಮಸ್ಯೆಗಳನ್ನು ಸೃಷ್ಟಿಸಬಲ್ಲ ದುರ್ವರ್ತನೆಗಳು ನಿಮ್ಮಲ್ಲಿದ್ದಲ್ಲಿ "ಕೆಟ್ಟದ್ದನ್ನು ಸುಟ್ಟುಬಿಡು" ಎನ್ನುವ ಮಾತಿನಂತೆಯೇ ಸುಟ್ಟು(ಬಿಟ್ಟು) ಬಿಡಿ!. 

ಡಾ . ಸಿ. ನಿತ್ಯಾನಂದ ಪೈ,ಪುತ್ತೂರು 




Monday, July 15, 2013

traffic jam!



                                                                   ಜನ-ವಾಹನಗಳ ಸುಗಮ ಸಂಚಾರಕ್ಕೆ 
           ರಸ್ತೆಗಳ ವಿಸ್ತರಣೆ- ನಿಯಮಗಳ ಪಾಲನೆ ಅನಿವಾರ್ಯ 

ರಸ್ತೆಗಳನ್ನು ನಿರ್ಮಿಸುವುದೇ ಜನ-ವಾಹನಗಳ ಸುಗಮ ಸಂಚಾರಕ್ಕಾಗಿ ಎನ್ನುವ ವಿಚಾರ ನಿಮಗೂ ತಿಳಿದಿರಲೇಬೇಕು. ಆದರೆ ಇತ್ತೀಚಿನ ಎರಡು-ಮೂರು ದಶಕಗಳಿಂದ ನಮ್ಮದೇಶದ ಪ್ರತಿಯೊಂದು ರಾಜ್ಯಗಳ,ಪ್ರತಿಯೊಂದು ನಗರ-ಪಟ್ಟಣಗಳಲ್ಲಿನ ರಸ್ತೆಗಳಲ್ಲಿ "ಸುಗಮ ಸಂಚಾರ"ವೇ ಅಸಾಧ್ಯವೆನಿಸುತ್ತಿದೆ. ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸಲು ಚಾಲಕರು ಕಸರತ್ತು ನಡೆಸುತ್ತಿದ್ದಲ್ಲಿ, ಪಾದಚಾರಿಗಳು ಸುರಕ್ಷಿತವಾಗಿ ನಡೆದಾಡಲು ಹರಸಾಹಸವನ್ನೇ ನಡೆಸಬೇಕಾಗುತ್ತಿದೆ.ಈ ಸಮಸ್ಯೆಗೆ ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ನಗರ-ಪಟ್ಟಣಗಳು ಮಾತ್ರವಲ್ಲ, ವೈಜ್ಞಾನಿಕ ಯೋಜನೆಯಂತೆ ನಿರ್ಮಿಸಿದ್ದ ನಗರ-ಮಹಾನಗರಗಳ ರಸ್ತೆಗಳೂ ಅಪವಾದವೆನಿಸಿಲ್ಲ. ಪ್ರತಿನಿತ್ಯ ಸುಗಮ ಸಂಚಾರಕ್ಕೆ ಸಂಭವಿಸುತ್ತಿರುವ ಅಡಚಣೆಗಳಿಂದಾಗಿ, ಜನಸಾಮಾನ್ಯರ ಸಮಯದೊಂದಿಗೆ, ಅಗಾಧಪ್ರಮಾಣದ  ಇಂಧನಗಳು ಪೋಲಾಗುತ್ತಿವೆ. ತತ್ಪರಿಣಾಮವಾಗಿ ಸಹಸ್ರಾರು ಮಾನವ ಘಂಟೆಗಳೂ ವ್ಯರ್ಥವಾಗುವುದರಿಂದ,ದೇಶದ ಬೊಕ್ಕಸಕ್ಕೂ ಕೋಟ್ಯಂತರ ರೂಪಾಯಿಗಳ ನಷ್ಟ ಸಂಭವಿಸುತ್ತಿದೆ. ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುವುದು ಅಸಾಧ್ಯವೆನಿಸಿದರೂ, ಸರಕಾರ ಮತ್ತು ಪ್ರಜೆಗಳು ಕೈಜೋಡಿಸಿದಲ್ಲಿ  ಸಮರ್ಪಕವಾಗಿ ನಿಯಂತ್ರಿಸುವುದು ಸಾಧ್ಯ. 
ಸಮಸ್ಯೆಯ ಮೂಲ 
ಹಲವಾರು ದಶಕಗಳ ಹಿಂದೆ ಎತ್ತಿನಗಾಡಿಗಳು ಸಂಚರಿಸುತ್ತಿದ್ದ ಅಸಂಖ್ಯ ರಸ್ತೆಗಳು, ಕಾಲಕ್ರಮೇಣ ಮೋಟಾರು ವಾಹನಗಳ ಬಳಕೆ ಆರಂಭಗೊಂಡ ಬಳಿಕ ವಿಸ್ತರಿಸಲ್ಪಟ್ಟಿದ್ದವು. ಅಂದಿನ ದಿನಗಳಲ್ಲಿ ಬಹುತೇಕ ವಸತಿ-ವಾಣಿಜ್ಯ ಕಟ್ಟಡಗಳನ್ನು ರಸ್ತೆಗಳ ಬದಿಗಳಲ್ಲೇ ನಿರ್ಮಿಸಲಾಗುತ್ತಿತ್ತು. ಜೊತೆಗೆ ಜನ-ವಾಹನಗಳ ಸಂಖ್ಯೆಗಳೂ ಸಾಕಷ್ಟು ಕಡಿಮೆ ಇದ್ದುದರಿಂದಾಗಿ, ಅಗಲಕಿರಿದಾದ ರಸ್ತೆಗಳಲ್ಲಿ ಸಂಚರಿಸುವುದು ತ್ರಾಸದಾಯಕ ಎನಿಸುತ್ತಿರಲಿಲ್ಲ. ಆದರೆ ವರುಷಗಳು ಉರುಳಿದಂತೆಯೇ ಹೆಚ್ಚಿದ್ದ ಜನಸಂಖ್ಯೆಗೆ ಮತ್ತು ಪ್ರಜೆಗಳ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ, ದೇಶದಲ್ಲಿನ ವಾಹನಗಳ ಸಂಖ್ಯೆಯೂ ಮಿತಿಮೀರಿ ಹೆಚ್ಚಿತ್ತು. ಇದರೊಂದಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕೊರತೆ ಅಥವಾ ಅಭಾವ ಮತ್ತು ಶ್ರೀಮಂತರ ಆಡಂಬರದ ಪರಿಣಾಮವಾಗಿ, ವಾಹನಗಳ ಸಂಖ್ಯೆ ಸಹಜವಾಗಿಯೇ ಅತಿಯಾಗಿ ಹೆಚ್ಚಿತ್ತು. ಇದರಿಂದಾಗಿ ಪ್ರತಿಯೊಂದು ನಗರ-ಪಟ್ಟಣಗಳ ಬೀದಿಬೀದಿಗಳಲ್ಲೂ, ದ್ವಿಚಕ್ರ,ತ್ರಿಚಕ್ರ, ಚತುಶ್ಚಕ್ರ ಮತ್ತು ಹಲವಾರು ಚಕ್ರಗಳ ಬೃಹತ್ ಸಾರಿಗೆ-ಸರಕು ಸಾಗಾಟದ ವಾಹನಗಳು ಓಡಾಡಲು ಆರಂಭಿಸಿದ್ದವು. 
ದೇಶಾದ್ಯಂತ ಜನ-ವಾಹನಗಳ ಸಂಖ್ಯೆಗಳು ಹೆಚ್ಚಲಾರಂಭಿಸಿದ್ದರೂ, ಇದಕ್ಕೆ ಅನುಗುಣವಾಗಿ ರಸ್ತೆಗಳನ್ನು ವಿಸ್ತರಿಸುವತ್ತ ಸ್ಥಳೀಯ ಸಂಸ್ಥೆಗಳು ಮತ್ತು ಸರಕಾರ ಗಮನಹರಿಸಿರಲಿಲ್ಲ. ಇದಲ್ಲದೇ ಪಾದಚಾರಿಗಳು ನಿರಾತಂಕದಿಂದ ನಡೆದಾಡಲು ಸೂಕ್ತ ಕಾಲುದಾರಿಗಳು,ವಿವಿಧ ವರ್ಗದ ವಾಹನಗಳನ್ನು ನಿಲ್ಲಿಸಲು ಬೇಕಾದ ತಂಗುದಾಣಗಳು ಮತ್ತು ಜನ-ವಾಹನಗಳ ಸಂಚಾರವನ್ನು ನಿಯಂತ್ರಿಸಲು ಸಂಚಾರಿ ಆರಕ್ಷಕರ ನೇಮಕ ಇತ್ಯಾದಿ ವ್ಯವಸ್ಥೆಗಳನ್ನು ಒದಗಿಸುವ ಬಗ್ಗೆ ಸರಕಾರವೂ ಚಿಂತಿಸಿರಲಿಲ್ಲ . 
ಇಷ್ಟೆಲ್ಲಾ ಸಾಲದೆನ್ನುವಂತೆ ಬಹುತೇಕ ನಗರ-ಪಟ್ಟಣಗಳಲ್ಲಿ ರಸ್ತೆಗಳ ಅಂಚಿನಲ್ಲೇ ನಿರ್ಮಿಸಿದ್ದ ಹಳೆಯ ಕಟ್ಟಡಗಳನ್ನು ಕೆಡವಿ,ಹೊಸ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭದಲ್ಲೂ ರಸ್ತೆಯ ವಿಸ್ತರಣೆಗೆ ಒಂದಿಷ್ಟು ಜಮೀನನ್ನು ಬಿಟ್ಟುಕೊಡುವಂತೆ ಕಟ್ಟಡಗಳ ಮಾಲೀಕರ ಮನವೊಲಿಸಲು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪ್ರಯತ್ನಿಸಿರಲಿಲ್ಲ. ಮುನಿಸಿಪಲ್ ಕಾಯಿದೆಗಳಲ್ಲಿ ಇದಕ್ಕೆ ಅವಕಾಶವಿದ್ದರೂ, ಭ್ರಷ್ಟ ಅಧಿಕಾರಿಗಳ ಕೈಬೆಚ್ಚಗೆ ಮಾಡಿದ್ದ ಕಟ್ಟಡಗಳ ಮಾಲೀಕರು, ರಸ್ತೆಗಳ ವಿಸ್ತರಣೆಗೆ ಅವಕಾಶವನ್ನೇ ನೀಡಿರಲಿಲ್ಲ. ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿದ್ದವರೂ, ಇದಕ್ಕೆ ಅಪವಾದ ಎನಿಸಿರಲಿಲ್ಲ!. 
ಅನೇಕ ಸಂದರ್ಭಗಳಲ್ಲಿ  ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಹಳೆಯ ಕಟ್ಟಡವನ್ನು ನವೀಕರಿಸುವ ಪರವಾನಿಗೆಯನ್ನು ಪಡೆದುಕೊಂಡು,ನೂತನ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿದವರ ಸಂಖ್ಯೆಯೂ ಕಡಿಮೆಯೇನಿಲ್ಲ. ಕನಿಷ್ಠ ತಮ್ಮ ಮತ್ತು ತಮ್ಮಲ್ಲಿ ಬರುವ ಗ್ರಾಹಕರ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವನ್ನೇ ಕಲ್ಪಿಸದ ಕಟ್ಟಡಗಳ ಮಾಲೀಕರ ವಿರುದ್ಧ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಯಾವುದೇ ರೀತಿಯ ಕಾನೂನು ಕ್ರಮಗಳನ್ನೇ ಕೈಗೊಳ್ಳುತ್ತಿರಲಿಲ್ಲ. ಇಷ್ಟು ಮಾತ್ರವಲ್ಲ, ಇಂತಹ ಕಟ್ಟಡಗಳ ಮೇಲೆ ಮತ್ತೊಂದು ಅಂತಸ್ತನ್ನು ನಿರ್ಮಿಸಲು ಪರವಾನಿಗೆಯನ್ನು ನೀಡಲೂ  ಈ ಅಧಿಕಾರಿಗಳು ಹಿಂಜರಿಯುತ್ತಿರಲಿಲ್ಲ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ಪ್ರತಿಯೊಂದು ನಗರ-ಪಟ್ಟಣಗಳ ರಸ್ತೆಗಳಲ್ಲಿ  ಸುಗಮ ಸಂಚಾರಕ್ಕೆ ಆಸ್ಪದವೇ ದೊರೆಯುತ್ತಿಲ್ಲ!. 
ಇವೆಲ್ಲವುಗಳೊಂದಿಗೆ ಬೀದಿಬದಿ ವ್ಯಾಪಾರಿಗಳು,ತಮ್ಮ ಸರಕುಗಳನ್ನು ಅಂಗಡಿಯ ಮುಂದಿನ ಕಾಲುದಾರಿಯ ಮೇಲೆ ಇರಿಸುವ ವ್ಯಾಪಾರಿಗಳು,ಮೆರವಣಿಗೆ,ಪ್ರತಿಭಟನೆ, ರಸ್ತೆತಡೆ, ರಸ್ತೆಗಳ ಇಕ್ಕೆಲಗಳಲ್ಲಿ  ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ವಾಹನಗಳು,ಕೈತೋರಿಸಿದಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸುವ ಸಾರಿಗೆ ವಾಹನಗಳು,ರಸ್ತೆ ಅಪಘಾತಗಳು,ಅಲೆಮಾರಿ ಜಾನುವಾರುಗಳು ಮತ್ತು ಟ್ರಾಫಿಕ್ ಜಾಮ್,ಸಾರಿಗೆ ನಿಯಮಗಳ ಉಲ್ಲಂಘನೆ ಇತ್ಯಾದಿ ಕಾರಣಗಳಿಂದಾಗಿಯೂ, ನಮ್ಮ ರಸ್ತೆಗಳಲ್ಲಿ ಸುಗಮ ಸಂಚಾರ ಅಸಾಧ್ಯವೆನಿಸುತ್ತಿದೆ. 
ಈ ಸಮಸ್ಯೆಯನ್ನು ಯಾರು,ಯಾವಾಗ ಮತ್ತು ಹೇಗೆ ಪರಿಹರಿಸುತ್ತಾರೆ?, ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ!. 
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

Thursday, July 4, 2013

Navajaata shishugala marana.......




           ನವಜಾತ ಶಿಶುಗಳ ಮರಣದ ಪ್ರಮಾಣ:ಭಾರತಕ್ಕೆ ಅಗ್ರಸ್ಥಾನ!

ಅಭಿವೃದ್ಧಿಶೀಲ  ರಾಷ್ಟ್ರಗಳ ಯಾದಿಯಲ್ಲಿ ಮುಂಚೂಣಿಯಲ್ಲಿರುವ ಭಾರತವು,ಜಾಗತಿಕ ಮಟ್ಟದಲ್ಲಿ ನವಜಾತ ಶಿಶುಗಳ ಮರಣದ ವಿಚಾರದಲ್ಲೂ ಅಗ್ರಸ್ಥಾನದಲ್ಲಿದೆ. ಅಂತರ ರಾಷ್ಟ್ರೀಯ ಮಟ್ಟದ ಸರಕಾರೇತರ ಸೇವಾ ಸಂಸ್ಥೆ "ಸೇವ್ ದ ಚಿಲ್ಡ್ರನ್" ಇತ್ತೀಚಿಗೆ ಬಹಿರಂಗಗೊಳಿಸಿರುವ ಮಾಹಿತಿಯಂತೆ,ಜನಿಸಿದ ದಿನದಂದೇ ಮೃತಪಡುವ ಶಿಶುಗಳ ಸಂಖ್ಯೆಯು ಭಾರತದಲ್ಲಿ ಅತ್ಯಧಿಕವಾಗಿದೆ. ಇಷ್ಟು ಮಾತ್ರವಲ್ಲ, ತನ್ನ ಕಂದನಿಗೆ ಜನ್ಮ ನೀಡಿದಂದೇ ಮೃತಪಡುವ ಮಾತೆಯರ ಸಂಖ್ಯೆಯು ನಮ್ಮ ದೇಶದಲ್ಲಿ ಅತಿಯಾಗಿದ್ದು, ನಾವೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. 
ಪುಟ್ಟ ಕೂಸೊಂದು ತಾಯಿಯ ಗರ್ಭದಿಂದ ಈ ಧರೆಗೆ ಇಳಿದುಬಂದ ದಿನವು ಅತ್ಯಂತ ಅಪಾಯಕಾರಿ ಅವಧಿಯಾಗಿದ್ದು,ಈ ಸಂದರ್ಭದಲ್ಲಿ ಉಸಿರಾಟದ ಸಮಸ್ಯೆಗಳು, ಅಪಕ್ವ ಮತ್ತು ಅಶಕ್ತ ಶರೀರಗಳು ಶಿಶುವಿನ ಮರಣಕ್ಕೆ ಕಾರಣವೆನಿಸುತ್ತವೆ. ಅಂತೆಯೇ ಶಿಶುವಿಗೆ ಜನ್ಮನೀಡಿದಂದು ಮೃತಪಡುವ ಮಾತೆಯರ ಮರಣಕ್ಕೆ, ಹೆರಿಗೆಯ ಸಂದರ್ಭದಲ್ಲಿ ಸಂಭವಿಸುವ ಅತಿಯಾದ ರಕ್ತಸ್ರಾವವೇ ಪ್ರಮುಖ ಕಾರಣವೆನಿಸುತ್ತದೆ.
ಅಪೌಷ್ಟಿಕತೆ ಮತ್ತು ತತ್ಸಂಬಂಧಿತ ಆರೋಗ್ಯದ ಸಮಸ್ಯೆಗಳಿಂದಾಗಿ, ಜನಿಸಿದ ಒಂದು ವರ್ಷದೊಳಗೆ ಮೃತಪಡುವ ಶಿಶುಗಳ ವಿಚಾರವು ಗತವರ್ಷದಲ್ಲಿ ದೇಶಾದ್ಯಂತ ಸಾಕಷ್ಟು ಚರ್ಚೆಗಳಿಗೆ ಗ್ರಾಸವೆನಿಸಿತ್ತು. ಭಾರತದ ವಿವಿಧ ರಾಜ್ಯಗಳಲ್ಲಿ ಪತ್ತೆಯಾಗಿದ್ದ ಇಂತಹ ಅಸಂಖ್ಯ ಪ್ರಕರಣಗಳ ಬಗ್ಗೆ ತನಿಖೆಯನ್ನೂ ನಡೆಸಲಾಗಿತ್ತು. ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ ಸುದ್ದಿಗಳು ಮಾಧ್ಯಮಗಳಲ್ಲಿ ಬಿತ್ತರಿಸಲ್ಪಟ್ಟಿತ್ತು. ತತ್ಪರಿಣಾಮವಾಗಿ ಎಚ್ಚೆತ್ತ ಕೇಂದ್ರಸರಕಾರವು, ಈ ಗಂಭೀರ ಸಮಸ್ಯೆಯನ್ನು ಬಗೆಹರಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಸರಕಾರಗಳಿಗೆ ಆದೇಶಿಸಿತ್ತು. 
ಕುಪೋಷಣೆಯೇ ಭಾರತದಿಂದ ತೊಲಗು,ಎನ್ನುವ ಕಿರುಜಾಹೀರಾತು ಇಂದಿಗೂ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಆದರೆ ಕ್ವಿಟ್ ಇಂಡಿಯಾ ಚಳವಳಿಯ ಪರಿಣಾಮವಾಗಿ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿದಷ್ಟು ಸುಲಭವಾಗಿ ಅಪೌಷ್ಟಿಕತೆಯನ್ನು ತೊಲಗಿಸುವುದು ಅಸಾಧ್ಯವೂ ಹೌದು.
ಅಗ್ರಸ್ಥಾನದಲ್ಲಿ ಭಾರತ 
ಸರಕಾರೇತರ ಸಂಸ್ಥೆಯಾಗಿರುವ "ಸೇವ್ ದ ಚಿಲ್ಡ್ರನ್" ನ ವರದಿಯಂತೆ,ನವಜಾತ ಶಿಶುಗಳು ಜನಿಸಿದ ದಿನದಂದೇ ಮೃತಪಡುವ ಪ್ರಮಾಣದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನದಲ್ಲಿದೆ. ನಮ್ಮದೇಶದಲ್ಲಿ ಇಂತಹ ಮರಣಗಳ ಸಂಖ್ಯೆಯು ಒಂದುವರ್ಷದಲ್ಲಿ 3,09,000 ವಾಗಿದ್ದು,ಪ್ರಪಂಚದಾದ್ಯಂತ ಸಂಭವಿಸುತ್ತಿರುವ ಇಂತಹ ಮರಣಗಳ ಶೇ. 29 ರಷ್ಟಿದೆ. ವಿಶೇಷವೆಂದರೆ ನಮ್ಮ ನೆರೆಯಲ್ಲಿರುವ ಪುಟ್ಟ ಬಾಂಗ್ಲಾದೇಶದಲ್ಲಿ , ಈ ಸಂಖ್ಯೆಯು ಕೇವಲ 28,100,ಅರ್ಥಾತ್ ಶೇ. 3 ರಷ್ಟಿದೆ!
ಜನಿಸಿದಂದೇ ಶಿಶುಗಳು ಮೃತಪಡುವ ಶೇ. 99 ರಷ್ಟು ಪ್ರಕರಣಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಸಂಭವಿಸುತ್ತಿದ್ದು,ಇನ್ನುಳಿದ ಶೇ. 1 ರಷ್ಟು ಮರಣಗಳು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಸಂಭವಿಸುತ್ತಿವೆ. ಇವುಗಳಲ್ಲಿ ಅಮೇರಿಕ ದೇಶವು ಅಗ್ರಸ್ಥಾನದಲ್ಲಿದೆ ಎನ್ನುವ ಅಂಶವು, 180ದೇಶಗಳ "ಮಾತೆಯರ ಸ್ಥಿತಿಗತಿಗಳು"ಎನ್ನುವ ವಿಚಾರದಲ್ಲಿ ಪ್ರಕಟಿತ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಫ್ರಿಕಾದ ನಂತರ ದಕ್ಷಿಣ ಏಷಿಯಾ ಅತ್ಯಂತ ಅಪಾಯಕಾರಿ ಎನಿಸಿದ್ದು, ಜನಿಸಿದಂದೇ ಮೃತಪಡುವ ಒಂದು ದಶಲಕ್ಷ ಶಿಶುಗಳಲ್ಲಿ  ಶೇ. 40 ರಷ್ಟು ಭಾರತ,ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳದ್ದೇ ಆಗಿವೆ. ಹಾಗೂ ಈ ಮರಣಗಳಿಗೆ ಮಾತೆಯರ  ದೀರ್ಘಕಾಲೀನ ಅಪೌಷ್ಟಿಕತೆಯೇ ಕಾರಣವೆನಿಸಿದೆ. ಬಾಂಗ್ಲಾ, ನೇಪಾಳ ಮತ್ತು ಭಾರತಗಳಲ್ಲಿ ಶೇ12 ರಿಂದ 13 ರಷ್ಟು ಮಹಿಳೆಯರಲ್ಲಿ ಅಪೌಷ್ಟಿಕತೆಯಿಂದಾಗಿ ಶಾರೀರಿಕ ಬೆಳವಣಿಗೆಯೇ ಕುಂಠಿತವಾಗಿರುತ್ತದೆ. ತತ್ಪರಿಣಾಮವಾಗಿ ಹೆರಿಗೆಯ ಸಮಯದಲ್ಲಿ ಅಪಾಯದ ಸಂಭಾವ್ಯತೆಯ ಪ್ರಮಾಣ ಹೆಚ್ಚುವುದರೊಂದಿಗೆ, ಇವರಲ್ಲಿ ಹುಟ್ಟುವ ಶಿಶುಗಳು ಅಲ್ಪ ತೂಕದವುಗಳಾಗಿರುತ್ತವೆ. ಜೊತೆಗೆ ದಕ್ಷಿಣ ಏಷ್ಯಾದಲ್ಲಿ ಕೇವಲ  ಶೇ. 43 ರಷ್ಟು ಹೆರಿಗೆಗಳು  ವೈದ್ಯರ ಅಥವಾ ಅರೆವೈದ್ಯಕೀಯ ಸಿಬಂದಿಗಳ ನೆರವಿನಿಂದ ನಡೆಯುತ್ತವೆ. 

ಇದಲ್ಲದೇ ಅವಧಿಗೆ ಮುನ್ನ ಸಂಭವಿಸುವ ಜೀವಂತ ಶಿಶುಗಳ  ಪ್ರಮಾಣವು ಶೇ. 13 ರಷ್ಟಿದ್ದು, ಶಿಶುಗಳ ಮರಣಕ್ಕೆ ಕಾರಣವೆನಿಸುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ  ದಕ್ಷಿಣ ಏಷ್ಯಾದ ರಾಷ್ಟ್ರಗಳು,ನವಜಾತ ಶಿಶುಗಳ ಮರಣದ ಪ್ರಮಾಣವನ್ನು ನಿಯಂತ್ರಿಸಲು ಅವಶ್ಯಕ ಕ್ರಮಗಳನ್ನು ಕೈಗೊಂಡಿವೆ. ಇವುಗಳಲ್ಲಿ ಬಾಂಗ್ಲಾದೇಶವು ಈ ಪ್ರಮಾಣವನ್ನು ಶೇ. 49 ರಷ್ಟು ಮತ್ತು ನೇಪಾಳವು ಶೇ. 47 ರಷ್ಟು ಇಳಿಸುವಲ್ಲಿ ಯಶಸ್ವಿಯಾಗಿವೆ. ಇದಕ್ಕಾಗಿಯೇ ತಮ್ಮ ದೇಶದಲ್ಲಿ ಗರ್ಭಿಣಿಯರು,ಬಾಣಂತಿಯರು ಮತ್ತು ನವಜಾತ ಶಿಶುಗಳ ಸಲುವಾಗಿ ಅವಶ್ಯಕ ವೈದ್ಯಕೀಯ ವ್ಯವಸ್ಥೆಗಳನ್ನು  ಅನುಷ್ಟಾನಿಸಿವೆ. 

ಭಾರತ ಸರಕಾರವು ನವಜಾತ ಶಿಶುಗಳ ಸಲುವಾಗಿ ದೇಶದ 600 ಜಿಲ್ಲೆಗಳಲ್ಲಿ ನವಜಾತ ಶಿಶುಗಳ ತೀವ್ರನಿಗಾ ಘಟಕಗಳನ್ನು ಆರಂಭಿಸಲಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಹೇಳುವಂತೆ, ಯಾವುದೇ ಸ್ಥಳದಲ್ಲಿ ಒಂದು ಹೆರಿಗೆಯಾದಲ್ಲಿ ಸಂಭಾವ್ಯ ಸಮಸ್ಯೆಗಳನ್ನು ಪರಿಹರಿಸಲು ಆರೋಗ್ಯ ಇಲಾಖೆಯು ಸನ್ನದ್ಧವಾಗಿ ಇರಬೇಕಾಗುತ್ತದೆ. ಅದೇನೇ ಇರಲಿ,ಮುಂದಿನ ದಿನಗಳಲ್ಲಿ ನವಜಾತ ಶಿಶುಗಳ ಮರಣದ ಪ್ರಮಾಣವನ್ನು  ನಿಯಂತ್ರಿಸಲು ನಾವು ಯಶಸ್ವಿಯಾಗುವತ್ತ ಶ್ರಮಿಸಬೇಕು. ಅಂತೆಯೇ ನವಜಾತ ಶಿಶುಗಳೊಂದಿಗೆ ಇವುಗಳಿಗೆ ಜನ್ಮವನ್ನು ನೀಡಿದ  ಮಾತೆಯರಿಗೆ ಯಾವುದೇ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲೇಬೇಕು. ಹಾಗೂ ಈ ನಿಟ್ಟಿನಲ್ಲಿ ದೇಶದ ಜನತೆ ಸರಕಾರದೊಂದಿಗೆ ಕೈಜೋಡಿಸಿದಲ್ಲಿ , ಯಶಸ್ಸನ್ನು ಸಾಧಿಸುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ . ನಿತ್ಯಾನಂದ ಪೈ,ಪುತ್ತೂರು