Saturday, June 29, 2013


         ಜುಲೈ 1, ರಾಷ್ಟ್ರೀಯ ವೈದ್ಯರ ದಿನಾಚರಣೆ
ಅನಾದಿ ಕಾಲದಿಂದ ನಿಮ್ಮ ಕುಟುಂಬದ ಸದಸ್ಯರ ಯೋಗಕ್ಷೇಮದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ವೈದ್ಯರ ಸೇವೆಯನ್ನು ಸ್ಮರಿಸಿ,ಕೃತಜ್ಞತೆಗಳನ್ನು ಸಲ್ಲಿಸಲು ಜುಲೈ 1 ಪ್ರಶಸ್ತವಾದ ದಿನ." ರಾಷ್ಟ್ರೀಯ ವೈದ್ಯರ ದಿನ "ದಂದು ನಿಮ್ಮ ಆರೋಗ್ಯದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಹಾಗೂ ನಿಮ್ಮ ಆಪ್ತ ಮಿತ್ರರೂ ಆಗಿರುವ ವೈದ್ಯರಿಗೆ,ನಿಮ್ಮ ಪ್ರೀತಿ-ವಿಶ್ವಾಸಗಳ ದ್ಯೋತಕವಾಗಿ ಇಂದು ಶುಭಕಾಮನೆಗಳನ್ನು ಸಲ್ಲಿಸುವುದನ್ನು ಮರೆಯದಿರಿ.
ರಾಷ್ಟ್ರೀಯ ವೈದ್ಯರ ದಿನಾಚರಣೆ
ಅಪ್ರತಿಮ ವೈದ್ಯ ಹಾಗೂ ಮಹಾನ್ ರಾಜಕಾರಣಿ ಎಂದೇ ಸುಪ್ರಸಿದ್ಧರಾಗಿದ್ದ ದಿ. ಡಾ. ಬಿ. ಸಿ. ರಾಯ್ ಇವರ ಜನ್ಮದಿನವನ್ನು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತ ಸರಕಾರವು ಡಾ. ರಾಯ್ ಇವರು ವೈದ್ಯಕೀಯ  ಕ್ಷೇತ್ರದಲ್ಲಿ ಸಲ್ಲಿಸಿದ್ದ ಸೇವೆಯನ್ನು ಗುರುತಿಸಿ,ಅವರ ಜನ್ಮದಿನವನ್ನು (ಇದು ಅವರು ಮೃತರಾದ ದಿನವೂ ಆಗಿದೆ) ವೈದ್ಯರ ದಿನವನ್ನಾಗಿ ಆಚರಿಸಲು 1991ರಲ್ಲಿ ನಿರ್ಧರಿಸಿತ್ತು.
1882,ಜುಲೈ 1 ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ್ದ ಡಾ. ಬಿಧಾನ ಚಂದ್ರ ರಾಯ್,ಕೊಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದ ಬಳಿಕ,ಇಂಗ್ಲೆಂಡ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು. 1911ರಲ್ಲಿ ಭಾರತಕ್ಕೆ ಮರಳಿ,ಕೊಲ್ಕತಾದ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು.
ಮಹಾತ್ಮಾ ಗಾಂಧಿಯವರಿಂದ ಪ್ರಭಾವಿತರಾಗಿದ್ದ ಡಾ. ರಾಯ್,ಸ್ವಾತಂತ್ರ್ಯ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ತದನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ 14 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದರು.
ರಾಜಕೀಯ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಡಾ. ರಾಯ್ ಇವರ ಮಹೋನ್ನತ ಸಾಧನೆಯನ್ನು ಗುರುತಿಸಿದ್ದ ಕೇಂದ್ರ ಸರಕಾರವು,1961ರಲ್ಲಿ ಇವರಿಗೆ "ಭಾರತ ರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
1962 ರ ಜುಲೈ 1 ರಂದು,ಅರ್ಥಾತ್ ತಮ್ಮ ಜನ್ಮದಿನದಂದೇ ವಿಧಿವಶರಾಗಿದ್ದ ಡಾ. ರಾಯ್ ಇವರ ಸ್ಮರಣಾರ್ಥ,ವೈದ್ಯಕೀಯ ಕ್ಷೇತ್ರದಲ್ಲಿ ಮಹೋನ್ನತ ಸಾಧನೆಗೈದ ಭಾರತೀಯರಿಗೆ ರಾಷ್ಟ್ರಮಟ್ಟದ ಪುರಸ್ಕಾರವನ್ನು ನೀಡುವ ಸಂಪ್ರದಾಯವನ್ನು 1976 ರಲ್ಲಿ ಆರಂಭಿಸಿದ್ದು,ಇಂದಿಗೂ ಮುಂದುವರೆದಿದೆ.
 
     ಆಧುನಿಕ ಜೀವನ ಶೈಲಿ ಮತ್ತು ಅನಾರೋಗ್ಯ
 
ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಧ್ಯಯನ ಮತ್ತು ಸಂಶೋಧನೆಗಳ ಫಲವಾಗಿ ಮನುಷ್ಯನ ಸರಾಸರಿ ಆಯುಷ್ಯದ ಅವಧಿಯು ಹೆಚ್ಚಿದೆ. ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ಕೆಲವೊಂದು ಮಾರಕ ವ್ಯಾಧಿಗಳನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಗಳು ಹಾಗೂ ಔಷಧಗಳು,ವಿನೂತನ ಚಿಕಿತ್ಸಾ ವಿಧಾನಗಳು,ಪರಿಣಾಮಕಾರೀ ಶಸ್ತ್ರಚಿಕಿತ್ಸೆಗಳು,ವಿವಿಧ ರೋಗಗಳನ್ನು ನಿಖರವಾಗಿ ಪತ್ತೆಹಚ್ಚಬಲ್ಲ ಪರೀಕ್ಷೆಗಳು,ಅತ್ಯಾಧುನಿಕ ಮತ್ತು ಪ್ರಬಲ ಔಷಧಗಳ ಸಂಶೋಧನೆಯಿಂದಾಗಿ, ರೋಗಿಗಳ ಅಕಾಲಿಕ ಮರಣದ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ನಾವಿಂದು ಅನುಕರಿಸುತ್ತಿರುವ ಪಾಶ್ಚಾತ್ಯರ ಜೀವನಶೈಲಿ,ನಿಷ್ಕ್ರಿಯತೆ,ಅತಿಯಾಗಿ ಸೇವಿಸುವ  ನಿರುಪಯುಕ್ತ ಆಹಾರಗಳು (junk food),ಸೇವಿಸುತ್ತಿರುವ ಆಹಾರಪದಾರ್ಥಗಳಲ್ಲಿ ಸೇರಿರುವ ಕೀಟನಾಶಕಗಳು,ಹೆಚ್ಚುತ್ತಿರುವ ಜನ-ವಾಹನಗಳ ಸಂಖ್ಯೆಯಿಂದಾಗಿ ಸಂಭವಿಸುತ್ತಿರುವ ಪರಿಸರ ಪ್ರದೂಷಣೆ,ಬಳಸಿ ಎಸೆಯುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳು,ಕಾರಣಾಂತರಗಳಿಂದ ಕಾಡುವ ಜಾಗತಿಕ ತಾಪಮಾನದ ಹೆಚ್ಚಳ ಮತ್ತು ತತ್ಪರಿಣಾಮವಾಗಿ ಸಂಭವಿಸುತ್ತಿರುವ ಅತಿವೃಷ್ಟಿ-ಅನಾವೃಷ್ಟಿಗಳಂತಹ ಪ್ರಾಕೃತಿಕ ವಿಕೋಪಗಳು ನಮ್ಮ ನಿಮ್ಮೆಲ್ಲರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮವನ್ನು ಬೀರುತ್ತಿವೆ. ಇದರೊಂದಿಗೆ ಅನುವಂಶಿಕತೆ,ತೀವ್ರ ಮಾನಸಿಕ ಒತ್ತಡ,ದುಶ್ಚಟಗಳು,ಮಾದಕ ದ್ರವ್ಯಗಳ ಸೇವನೆಯಂತಹ ಸಮಸ್ಯೆಗಳು ಇನ್ನಷ್ಟು ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತಿವೆ.
ಇಷ್ಟೆಲ್ಲಾ ಸಾಲದೆನ್ನುವಂತೆ ಸಾಂಕ್ರಾಮಿಕವಾಗಿ ತ್ವರಿತಗತಿಯಲ್ಲಿ ಹರಡಬಲ್ಲ ಚಿಕುನ್ ಗುನ್ಯಾ,ಡೆಂಗೆ,ಮತ್ತು ಫ್ಲೂ ಜ್ವರಗಳಂತಹ ಅಪಾಯಕಾರಿ ಕಾಯಿಲೆಗಳ ಹಾವಳಿ ವೃದ್ಧಿಸುತ್ತಿದೆ.
ಕೆಲವೇ ದಶಕಗಳ ಹಿಂದೆ ಮಧ್ಯವಯಸ್ಸು ಕಳೆದ ಬಳಿಕ ಪ್ರತ್ಯಕ್ಷವಾಗುತ್ತಿದ್ದ ಮಧುಮೇಹ,ಅಧಿಕ ರಕ್ತದೊತ್ತಡ,ಪಕ್ಷಾಘಾತ ಹಾಗೂ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು ಇತ್ತೀಚಿನ ಕೆಲವರ್ಷಗಳಿಂದ ಯೌವನಸ್ಥರಲ್ಲಿ ಪತ್ತೆಯಾಗುತ್ತಿವೆ. ಅಂತೆಯೇ ವಿವಿಧ ರೀತಿಯ ಕ್ಯಾನ್ಸರ್ ವ್ಯಾಧಿಯ ಮತ್ತು ಇವುಗಳಿಗೆ ಬಲಿಯಾಗುತ್ತಿರುವವರ  ಪ್ರಮಾಣವು ದಿನೇ ದಿನೇ ಹೆಚ್ಚುತ್ತಲೇ ಇದೆ. ವಿಶ್ವ ಆರೋಗ್ಯ ಸಂಸ್ಥೆಯು ಸಾಂಕ್ರಾಮಿಕವಾಗಿ ಹರಡದ ಇಂತಹ ಕಾಯಿಲೆಗಳ ಸಂಭಾವ್ಯತೆಯನ್ನು ನಿಯಂತ್ರಿಸಲು ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳು ಸನ್ನದ್ಧವಾಗುವಂತೆ ಕರೆನೀಡಿದೆ. ಆದರೆ ಇವೆಲ್ಲವೂ "ಗೋರ್ಕಲ್ಲ ಮೇಲೆ ನೀರನ್ನು ಸುರಿದಂತೆ" ವ್ಯರ್ಥವೆನಿಸುತ್ತಿದೆ.
ಪರಿಹಾರವೇನು?
ಸಹಸ್ರಾರು ವರ್ಷಗಳ ಹಿಂದೆ ಆಯುರ್ವೇದ ಸಂಹಿತೆಗಳಲ್ಲಿ ಉಲ್ಲೇಖಿಸಿರುವ "ದಿನಚರ್ಯೆ" ಯನ್ನು ಪರಿಪಾಲಿಸುವುದು ನಿಶ್ಚಿತವಾಗಿಯೂ ನಮ್ಮ ಆರೋಗ್ಯವನ್ನು ಉನ್ನತಸ್ತರದಲ್ಲಿ ಕಾಪಾಡಿಕೊಳ್ಳಲು ಉಪಯುಕ್ತವೆನಿಸಬಲ್ಲದು. ಶಿಸ್ತುಬದ್ಧ ಹಾಗೂ ಆರೋಗ್ಯದಾಯಕ ಜೀವನಶೈಲಿಯ ಪರಿಪಾಲನೆ, ಈ ವಿಚಾರದಲ್ಲಿ ನಿಸ್ಸಂದೇಹವಾಗಿಯೂ ನಿರ್ಣಾಯಕ ಪಾತ್ರವನ್ನು ನಿರ್ವಹಿಸುವುದು.
ಸಕ್ರಿಯ ಜೀವನಶೈಲಿ, ಸಮತೋಲಿತ ಆಹಾರ ಸೇವನೆ,ಪ್ರತಿನಿತ್ಯ ನಡಿಗೆ,ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು,ಮಾನಸಿಕ ಒತ್ತಡವನ್ನು ದೂರವಿರಿಸಲು ಪ್ರಾಣಾಯಾಮ,ಯೋಗ,ಧ್ಯಾನಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಸಂಗೀತವನ್ನು ಆಲಿಸುವುದು,ಪುಸ್ತಕಗಳನ್ನು ಓದುವುದು,ಮನೆಯಂಗಳದಲ್ಲಿ ಕೈತೋಟವನ್ನು ನಿರ್ಮಿಸುವುದೇ ಮುಂತಾದ ಚಟುವಟಿಕೆಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭಸಾಧ್ಯವೂ ಹೌದು.
ಇವೆಲ್ಲಕ್ಕೂ ಮಿಗಿಲಾಗಿ ದುರಭ್ಯ್ಯಾಸ-ದುಶ್ಚಟಗಳಿಂದ ದೂರವಿರುವುದು,ಮದ್ಯ-ಮಾದಕ ಪದಾರ್ಥಗಳ ಸೇವನೆಯ ಚಟವನ್ನು ಅಭ್ಯಾಸ ಮಾಡದಿರುವುದು,ನಿಗದಿತ ಸಮಯದಲ್ಲಿ ಮಲಗುವ ಮತ್ತು ಬೆಳಗಿನ ಜಾವದಲ್ಲಿ ಏಳುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು,ಸೂಕ್ತ ಸಮಯದಲ್ಲಿ ಹಾಗೂ ಸೂಕ್ತ ಪ್ರಮಾಣದ ಆಹಾರವನ್ನು ಸೇವಿಸುವುದು ಮತ್ತು ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿ ಇರಿಸುವುದರಿಂದ 
 ನಿಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಕಾಪಾಡಬಹುದು.
ಇದಲ್ಲದೇ ಅಪಾಯಕಾರಿ ಅಥವಾ ಮಾರಕ ಕಾಯಿಲೆಗಳಿಂದ ನಿಶ್ಚಿತವಾಗಿ ರಕ್ಷಿಸಬಲ್ಲ "ಲಸಿಕೆ"ಗಳನ್ನು ನಿಮ್ಮ ಮಕ್ಕಳಿಗೆ ತಪ್ಪದೆ ಕೊಡಿಸುವುದರಿಂದ,ಹಲವಾರು ವ್ಯಾಧಿಗಳನ್ನು ದೂರವಿರಿಸಬಹುದು. ಜೊತೆಗೆ ಯಾವುದೇ ಕಾಯಿಲೆ ಬಾಧಿಸಿದಾಗ ಅದನ್ನು ನಿರ್ಲಕ್ಷಿಸದೇ,ಪರಿಚಿತ ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಹಿತಕರ ಎನಿಸುವುದು.
ಕೊನೆಯದಾಗಿ ಹೇಳುವುದಾದಲ್ಲಿ,ಕೈತುಂಬಾ ಹಣವನ್ನು ಗಳಿಸುವ ಆತುರದಲ್ಲಿ ಹಗಲಿರುಳು ದುಡಿದು ಕಳೆದುಕೊಂಡ ಆರೋಗ್ಯವನ್ನು ಮರಳಿಗಳಿಸಲು,ಕಷ್ಟಪಟ್ಟು ಸಂಪಾದಿಸಿದ್ದ ಹಣವನ್ನು  ಕಳೆದುಕೊಂಡು ಪರಿತಪಿಸದಿರಿ!.
ಆರೋಗ್ಯವೇ ಭಾಗ್ಯ ಎನ್ನುವ ಮುತ್ತಿನಂತಹ ಮಾತುಗಳನ್ನು ಎಂದೂ ಮರೆಯದಿರಿ.
 
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು
  

Tuesday, June 25, 2013

ಪಡಿತರ ಚೀಟಿಗಳ ನವೀಕರಣ:ಇದಕ್ಕೇನು ಕಾರಣ?
ಇದೇ ವರ್ಷದ ಮಾರ್ಚ್ 11 ರಂದು ರಾಜ್ಯಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸುತ್ತೋಲೆಯೊಂದನ್ನು ಹೊರಡಿಸಿ,2010 ರ ಡಿಸೆಂಬರ್ 31 ಕ್ಕೆ ಮುನ್ನ ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದ ಕುಟುಂಬಗಳು ತಮ್ಮ ಚೀಟಿಗಳನ್ನು ಕಡ್ಡಾಯವಾಗಿ ನವೀಕರಿಸುವಂತೆ ಸೂಚಿಸಿತ್ತು. ಆದರೆ ಈ ಸೂಚನೆಗೆ ಕಾರಣ ಏನೆಂದು ತಿಳಿಸಿರಲಿಲ್ಲ. ರಾಜ್ಯದ ಪ್ರಜೆಗಳಿಗೆ ಸಾಕಷ್ಟು ಕಷ್ಟನಷ್ಟಗಳಿಗೆ ಕಾರಣವೆನಿಸಿರುವ ಈ ಸುತ್ತೋಲೆಯ ಹಿಂದಿನ ಕಾರಸ್ಥಾನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಪಡಿತರ ಚೀಟಿಯ ಗುತ್ತಿಗೆ
ರಾಜ್ಯಸರಕಾರವು ಸಹಾಯಧನದ ಮೂಲಕ ತನ್ನ ಪ್ರಜೆಗಳಿಗೆ ಒದಗಿಸುವ ಆಹಾರಧಾನ್ಯಗಳನ್ನು ಪಡೆದುಕೊಳ್ಳಲು,ಪಡಿತರ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಅನೇಕ ವರ್ಷಗಳಿಂದ ಹಲವಾರು ಸಮಸ್ಯೆಗಳಿಗೆ ಕಾರಣವೆನಿಸಿದ್ದ ಈ ವ್ಯವಸ್ಥೆಯನ್ನು ಸರಿಪಡಿಸಲು,ರಾಜ್ಯಸರಕಾರವು ಡಿಜಿಟಲ್ ಪಡಿತರ ಚೀಟಿಗಳನ್ನು ಸಿದ್ಧಪಡಿಸಿ ವಿತರಿಸಲು ವಿನೂತನ ವ್ಯವಸ್ಥೆಯೊಂದನ್ನು ಜಾರಿಗೊಳಿಸಿತ್ತು.
ರಾಜ್ಯದ ಪ್ರತಿಯೊಂದು ಅರ್ಹ ಕುಟುಂಬಗಳ ಸದಸ್ಯರೆಲ್ಲರ ಭಾವಚಿತ್ರ,ಬೆರಳಚ್ಚು ಮತ್ತಿತರ ವಿವರಗಳನ್ನು ಸಂಗ್ರಹಿಸಿ,ಇವುಗಳ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಎ.ಪಿ. ಎಲ್,ಬಿ.ಪಿ.ಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿಗಳನ್ನು ವಿತರಿಸುವ ಹೊಣೆಗಾರಿಕೆಯನ್ನು "ಕೊಮ್ಯಾಟ್ ಟೆಕ್ನಾಲಜೀಸ್" ಎನ್ನುವ ಬೆಂಗಳೂರಿನ ಸಂಸ್ಥೆಗೆ ನೀಡಲಾಗಿತ್ತು. ಖಾಸಗಿ-ಸರಕಾರೀ ಭಾಗವಹಿಸುವಿಕೆಯ ಈ ಯೋಜನೆಯಂತೆ,ಸಂಸ್ಥೆಯು ನಿಗದಿತ ಅನಧಿಯಲ್ಲಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪಡಿತರ ಚೀಟಿಗಳನ್ನು ವಿತರಿಸಬೇಕಿತ್ತು. ಇದಕ್ಕಾಗಿ ಸರಕಾರವು ಕೊಮ್ಯಾಟ್ ಸಂಸ್ಥೆಗೆ 54.28 ಕೋಟಿ ರೂ. ಗಳನ್ನೂ ಪಾವತಿಸಿತ್ತು.
ತನಗೆ ಅನಾಯಾಸವಾಗಿ ದೊರೆತಿದ್ದ ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡಿದ್ದ ಸಂಸ್ಥೆಯು,ಲಕ್ಷಾಂತರ ಜನರಿಗೆ ಬೇನಾಮಿ,ನಕಲಿ ಹಾಗೂ ಒಂದೇ ಕುಟುಂಬಕ್ಕೆ 2 -3 ಮತ್ತು ಎ.ಪಿ.ಎಲ್ ವರ್ಗದವರಿಗೆ ಬಿ.ಪಿ. ಎಲ್ ಚೀಟಿಗಳನ್ನು ವಿತರಿಸಿತ್ತು.
2001 ರ ಜನಗಣತಿಯಂತೆ ರಾಜ್ಯದಲ್ಲಿನ ಒಟ್ಟು ಕುಟುಂಬಗಳ ಸಂಖ್ಯೆಯು 1.02 ಕೋಟಿಯಾಗಿದ್ದರೂ,ಕೊಮ್ಯಾಟ್ ವಿತರಿಸಿದ್ದ ಪಡಿತರ ಚೀಟಿಗಳ ಸಂಖ್ಯೆಯು 1.67 ಕೋಟಿಯಾಗಿತ್ತು!.
2011 ರ ಜನಗಣತಿಯಂತೆ ರಾಜ್ಯದಲ್ಲಿನ ಒಟ್ಟು ಕುಟುಂಬಗಳ ಸಂಖ್ಯೆ 1.31 ಕೋಟಿಯಾಗಿದೆ. ಆದರೆ 2006 ರಿಂದ ಕೊಮ್ಯಾಟ್ ವಿತರಿಸಿದ್ದ ಪಡಿತರ ಚೀಟಿಗಳಲ್ಲಿ 55 ಲಕ್ಷ ಚೀಟಿಗಳು ನಕಲಿ-ಬೆನಾಮಿಯಾಗಿವೆ!.
ನಿಜ ಹೇಳಬೇಕಿದ್ದಲ್ಲಿ ಅಂತ್ಯೋದಯ ಮತ್ತು ಬಿ.ಪಿ. ಎಲ್ ಚೀಟಿಗಳನ್ನು ಅರ್ಹ ಕುಟುಂಬಗಳಿಗೆ ಮಾತ್ರ ನೀಡುವ ಮೂಲಕ ಸರಕಾರದ ಸಹಾಯಧನದಿಂದ ಕಡಿಮೆ ಬೆಲೆಗೆ ಒದಗಿಸುವ ಪಡಿತರ ಧಾನ್ಯಗಳ ದುರುಪಯೋಗವನ್ನು ತಡೆಗಟ್ಟುವ ಉದ್ದೇಶದಿಂದ ಜಾರಿಗೊಂಡಿದ್ದ ಈ ಯೋಜನೆಯೇ ದುರುಪಯೋಗಗೊಂಡಿದ್ದು ವಿಪರ್ಯಾಸವೇ ಸರಿ.
2011 ರಲ್ಲಿ ಸರಕಾರವು ಪತ್ತೆಹಚ್ಚಿ ರದ್ದುಪದಿಸಿದ್ದ ನಕಲಿ ಪಡಿತರ ಚೀಟಿಗಳಲ್ಲಿ ಬಿ.ಪಿ. ಎಲ್ ಚೀಟಿಗಳ ಸಂಖ್ಯೆ 20 ಲಕ್ಷವಾಗಿದ್ದು,ಎ.ಪಿ.ಎಲ್ ಚೀಟಿಗಳ ಸಂಖ್ಯೆಯು 12 ಲಕ್ಷಗಳಾಗಿತ್ತು!.
ಸಂಸ್ಥೆಯಿಂದ ವಂಚನೆ
ಕೊಮ್ಯಾಟ್ ಟೆಕ್ನಾಲಜೀಸ್ ಸಂಸ್ಥೆಯು ಕೇವಲ ನಕಲಿ-ಬೇನಾಮಿ ಚೀಟಿಗಳನ್ನು ವಿತರಿಸಿದ್ದು ಮಾತ್ರವಲ್ಲ,ಅರ್ಹ ಕುಟುಂಬಗಳ ಸದಸ್ಯರಿಂದ ತಾನು ಸಂಗ್ರಹಿಸಿದ್ದ ಭಾವಚಿತ್ರ,ಕೈಬೆರಳಚ್ಚು ಮತ್ತಿತರ ವಿವರಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ನೀಡದೇ,ತನ್ನ ವಂಚನೆಯನ್ನು ಮುಚ್ಚಿಹಾಕಲು ಯತ್ನಿಸಿತ್ತು.
ವಿಶೇಷವೆಂದರೆ 2011 ರ ನವೆಂಬರ್ ತಿಂಗಳಿನಲ್ಲಿ ರಾಜ್ಯಸರಕಾರವು ಸಂಸ್ಥೆಗೆ 54.28 ಕೋಟಿ ರೂಪಾಯಿಗಳನ್ನು ಪಾವತಿಸಿದಂತೆಯೇ, ನಿಗದಿತ ಅವಧಿಗೆ ಮುನ್ನವೇ ತನ್ನ ಕೆಲಸಕಾರ್ಯಗಳನ್ನು ಮುಕ್ತಾಯಗೊಳಿಸಿ ಮಾಯವಾಗಿತ್ತು.
"ನಿರ್ಮಿಸು,ನಡೆಸು ಮತ್ತು ವರ್ಗಾಯಿಸು"(ಬಿಲ್ಡ್,ಆಪರೇಟ್ ಏಂಡ್ ಟ್ರಾನ್ಸ್ಫಫರ್) ಎನ್ನುವ ಈ ಗುತ್ತಿಗೆಯ ಷರತ್ತುಗಳನ್ನು ಉಲ್ಲಂಘಿಸಿದ್ದ ಈ ಸಂಸ್ಥೆಗೆ,ಸರಕಾರವು 6.47 ಕೋಟಿ ರೂ. ದಂಡವನ್ನು ವಿಧಿಸಿದೆ. ಆದರೆ ಕೊಮ್ಯಾಟ್ ವಿತರಿಸಿದ್ದ ನಕಲಿ-ಬೇನಾಮಿ ಚೀಟಿಗಳಿಗೆ ನೀಡಿದ್ದ ಪಡಿತರ ಧಾನ್ಯಗಳಿಂದಾಗಿ ಸರಕಾರದ ಬೊಕ್ಕಸಕ್ಕೆ ಸುಮಾರು 70 ಕೋಟಿ ರೂ. ಗಳಷ್ಟು ನಷ್ಟ ಸಂಭವಿಸಿದೆ.
ಭಾರತದ ಮಹಾಲೇಖಪಾಲರು(ಸಿ. ಎ. ಜಿ) ಗತವರ್ಷದಲ್ಲಿ ಕೊಮ್ಯಾಟ್ ಸಂಸ್ಥೆಯ ಅವ್ಯವಹಾರಗಳ ಬಗ್ಗೆ ನಡೆಸಿದ್ದ ತನಿಖೆಯ ವರದಿಯಲ್ಲಿ, ಈ ಗುತ್ತಿಗೆಯ ಲೋಪದೋಷಗಳು,ಶರತ್ತುಗಳ ಉಲ್ಲಂಘನೆಯೇ ಮುಂತಾದ ವಿಚಾರಗಳ ಬಗ್ಗೆ ವಿಸ್ತೃತವಾಗಿ ಉಲ್ಲೇಖಿಸಿದ್ದಾರೆ. ಈ ವರದಿಯ ಪ್ರತಿಯೊಂದನ್ನು ನೀಡುವಂತೆ ಮಾಹಿತಿ ಹಕ್ಕು ಕಾಯಿದೆಯಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಅರ್ಜಿಯನ್ನು ಸಲ್ಲಿಸಿದ್ದ ಕಾರ್ಯಕರ್ತರಿಗೆ,ಇಲಾಖೆಯು ಇಲ್ಲಸಲ್ಲದ ನೆಪವನ್ನು ಮುಂದೊಡ್ಡಿ ವರದಿಯ ಪ್ರತಿಯನ್ನು ನೀಡಲು ನಿರಾಕರಿಸಿತ್ತು. ಆದರೆ ಮಹಾಲೇಖಪಾಲರ ಕಚೇರಿಯು ವರದಿಯ ಯಥಾ ಪ್ರತಿಯನ್ನು ಕ್ಷಿಪ್ರಗತಿಯಲ್ಲಿ ನೀಡಿತ್ತು!.
ಜನರ ಜೇಬಿಗೆ ಕತ್ತರಿ
ಕೊಮ್ಯಾಟ್ ಸಂಸ್ಥೆಯು ರಾಜ್ಯದ ಜನರಿಂದ ಮತ್ತು ಸರಕಾರದಿಂದ ಕೋಟ್ಯಂತರ ರೂಪಾಯಿಗಳನ್ನು ಪಡೆದು ನೀಡಿದ್ದ ಪಡಿತರ ಚೀಟಿಗಳನ್ನು ಇದೀಗ ಮತ್ತೊಮ್ಮೆ ನವೀಕರಿಸಬೇಕಾಗಿ ಬಂದಿದೆ. ಜೊತೆಗೆ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇವಾಕೇಂದ್ರಗಳಿಗೆ ಹೋಗಬೇಕಾಗುತ್ತದೆ. ಇದರೊಂದಿಗೆ  ತಮ್ಮದಲ್ಲದ ತಪ್ಪಿಗೆ ಮತ್ತೊಮ್ಮೆ ಒಂದಿಷ್ಟು ಶುಲ್ಕವನ್ನೂ ತೆರಲೇಬೇಕಾಗುತ್ತದೆ. ಅರ್ಥಾತ್ ಕೊಮ್ಯಾಟ್ ಮಾಡಿರುವ  ಅವ್ಯವಹಾರ-ತಪ್ಪುಗಳಿಗೆ ಜನಸಾಮಾನ್ಯರು ಕಷ್ಟನಷ್ಟಗಳನ್ನು ಅನುಭವಿಸಬೇಕಾಗಿದೆ!.
ಕೊನೆಯ ಮಾತು
ಅದೇನೇ ಇರಲಿ,ಈ ಬಾರಿಯಾದರೂ ಅನರ್ಹ ಕುಟುಂಬಗಳು ಅಂತ್ಯೋದಯ ಅಥವಾ ಬಿ. ಪಿ. ಎಲ್ ಚೀಟಿಗಳನ್ನು ಪಡೆದುಕೊಳ್ಳುವುದನ್ನು ಸರಕಾರವು ತಡೆಗಟ್ಟಬೇಕಾಗಿದೆ. ಇದಕ್ಕೆ ತಪ್ಪಿದಲ್ಲಿ ರಾಜ್ಯಸರಕಾರವು ಈಗಾಗಲೇ ಘೋಷಿಸಿರುವಂತೆ ಬಡ ಕುಟುಂಬಗಳಿಗೆ ಕಿಲೋ ಒಂದರ ಒಂದು
 ರೂಪಾಯಿಯಂತೆ  ಅಕ್ಕಿಯನ್ನು ನೀಡುವ ಯೋಜನೆಯ ದುರುಪಯೋಗ ಸಂಭವಿಸಲಿದೆ. ಜೊತೆಗೆ ಸರಕಾರದ ಬೊಕ್ಕಸಕ್ಕೂ ಕೋಟ್ಯಂತರ ರೂಪಾಯಿಗಳ ನಷ್ಟಕ್ಕೆ ಕಾರಣವೆನಿಸಲಿದೆ.
ಇಂದಿನ ಸುದ್ದಿ
ಇಂದಿನ ಪತ್ರಿಕೆಯಲ್ಲಿ ರಾಜ್ಯದ ಸಚಿವರಾಗಿರುವ ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆಯಂತೆ,ಹೊಸದಾಗಿ ಬಿ.ಪಿ. ಎಲ್  ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಅರ್ಜಿಸಲ್ಲಿಸುವ ಕುಟುಂಬಗಳಿಂದ ಆದಾಯ ಪ್ರಮಾಣ ಪತ್ರ ಮತ್ತಿತರ ದಾಖಲೆಗಳನ್ನು ನೀಡುವಂತೆ ಸತಾಯಿಸದೇ ಇರುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅದೇ ರೀತಿಯಲ್ಲಿ ದ್ವಿಚಕ್ರ ವಾಹನ,ಟಿ. ವಿ ಮತ್ತು ತಾರಸಿಯ ಮನೆಯನ್ನು ಹೊಂದಿರುವುದು ಇತ್ಯಾದಿ ಮಾನದಂಡಗಳನ್ನು ಅನ್ವಯಿಸದೇ,ಅರ್ಜಿದಾರರಿಗೆ ಬಿ.ಪಿ. ಎಲ್ ಚೀಟಿಯನ್ನು ನೀಡುವಂತೆ ಸೂಚಿಸಲಾಗಿದೆ ಎನ್ನುವ ವರದಿಯು 25-06-13 ರ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಕಳೆದ ಲೋಕಸಭಾ  ಚುನಾವಣೆಗಳಿಗೆ ಮುನ್ನ  ಬಿ.ಜೆ. ಪಿ ಸರಕಾರವು ತಾವು ಬಿ.ಪಿ.ಎಲ್ ವರ್ಗಕ್ಕೆ ಸೇರಿದವರು ಎಂದು ಅಫಿದವಿತ್ ಸಲ್ಲಿಸಿದವರಿಗೆಲ್ಲಾ ಬಿ.ಪಿ.ಎಲ್ ಚೀಟಿಗಳನ್ನು ನೀಡಿದಂತೆಯೇ,ಕಾಂಗ್ರೆಸ್ ಸರಕಾರವೂ ಅನರ್ಹರಿಗೆ ಬಿ.ಪಿ. ಎಲ್ ಕಾರ್ಡುಗಳನ್ನು (ಕಾನೂನು ಬಾಹಿರವಾಗಿ)ನೀಡಲು ಹೊರಟಿರುವುದು ಎಷ್ಟು ಸರಿ?,ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆಗಳಿಲ್ಲ.
ಒಂದೆಡೆ ಕೊಮ್ಯಾಟ್ ಸಂಸ್ಥೆಯು ಅನರ್ಹರಿಗೆ ನೀಡಿದ್ದ ಲಕ್ಷಾಂತರ ನಕಲಿ-ಬೇನಾಮಿ ಪಡಿತರ ಚೀಟಿಗಳನ್ನು ರದ್ದುಪಡಿಸುತ್ತಿದ್ದಲ್ಲಿ,ಮತ್ತೊಂದೆಡೆ ಅದೇ ಸರಕಾರವು ನಿಗದಿತ ಮಾನದಂಡಗಳನ್ನು ನಿರ್ಲಕ್ಷಿಸಿ ಅನರ್ಹರಿಗೆ ಬಿ.ಪಿ. ಎಲ್ ಚೀಟಿಗಳನ್ನು ವಿತರಿಸಲು ಆದೆಶಿಸಿರುವುದು ಸರ್ವಥಾ ಸಮರ್ಥನೀಯವಲ್ಲ.
ಇದೀಗ (ದಿ. 20-07-2013) ಪತ್ರಿಕೆಗಳಲ್ಲಿ ವರದಿಯಾಗಿರುವಂತೆ 2010 ಕ್ಕೆ ಮುನ್ನ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವವರು, ಇವುಗಳನ್ನು ಮತ್ತೆ ತಮ್ಮ ಬಯೋಮೆಟ್ರಿಕ್ಸ್ ನೀಡಿ ನವೀಕರಿಸಬೇಕಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರು ಹೇಳಿದ್ದಾರೆ. ಇದರಿಂದಾಗಿ ಕೊಮ್ಯಾಟ್ ಸಂಸ್ಥೆಯು ವಿತರಿಸಿದ್ದ ಸುಮಾರು 55 ಲಕ್ಷ ನಕಲಿ-ಬೇನಾಮಿ ಪಡಿತರ ಚೀಟಿಗಳು ಯಥಾಸ್ಥಿತಿಯಲ್ಲಿ ಉಳಿದುಕೊಳ್ಳಲಿವೆ. ಅಂತೆಯೇ ಇವುಗಳ ದುರುಪಯೋಗವು ಸರಕಾರದ ಬೊಕ್ಕಸಕ್ಕೆ ಕನ್ನವನ್ನು ಕೊರೆಯುವ ಸಾಧ್ಯತೆಗಳಿವೆ!. 
ಅದೇನೇ ಇರಲಿ,ರಾಜ್ಯದಲ್ಲಿ ಯಾವುದೇ ಪಕ್ಷದ ಸರಕಾರ ಬಂದರೂ,ಪಡಿತರ ಚೀಟಿಗಳ ಗೊಂದಲ-ಸಮಸ್ಯೆಗಳು ಇದೇ ರೀತಿಯಲ್ಲಿ ಮುಂದುವರೆಯಲಿವೆ.  
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು

Friday, June 14, 2013

          ಮತ್ತೆ ಮರುಕಳಿಸಿರುವ ಡೆಂಗೆ ಜ್ವರ
ವೈದ್ಯಕೀಯ ಶಬ್ದಕೋಶದಲ್ಲಿ "ಡೆಂಗೆ"ಎಂದು ನಮೂದಿಸಲ್ಪಟ್ಟಿರುವ ಜ್ವರವೊಂದನ್ನು ಅನೇಕ ರೀತಿಯಲ್ಲಿ ಮುದ್ರಿಸಿ,ಉಚ್ಚರಿಸುವುದನ್ನು 
ನೀವೂ ಕಂಡಿರಲೇಬೇಕು. ಸೊಳ್ಳೆಗಳಿಂದ ಹರಡುವ ಈ ವ್ಯಾಧಿಯನ್ನು ಯಾವ ರೀತಿಯಲ್ಲಿ ಉಚ್ಚರಿಸಿದರೂ,ಇದರ ರೋಗಲಕ್ಷಣಗಳು,
ಅಪಾಯಕಾರಿ ಅಂಶಗಳು ಮತ್ತು ಮಾರಕತೆಯ ಪ್ರಮಾಣವು ಕಡಿಮೆಯಾಗದು. ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿ ಇರಿಸುವ ಮೂಲಕ, ಸೊಳ್ಳೆಗಳ ಸಂತತಿಯನ್ನು ಸಂಪೂರ್ಣವಾಗಿ ನಾಶಗೊಳಿಸುವ ತನಕ,ಈ ವ್ಯಾಧಿಯ ಹಾವಳಿಯನ್ನು ನಿಯಂತ್ರಿಸುವುದು ಅಸಾಧ್ಯವೂ ಹೌದು.
ಸುಮಾರು ನಾಲ್ಕೈದು ವರ್ಷಗಳ ಹಿಂದೆ ನಮ್ಮ ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳದ ಗಡಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಾ,ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದ್ದ ಚಿಕುನ್ ಗುನ್ಯಾ ವ್ಯಾಧಿಯೊಂದಿಗೆ ಡೆಂಗೆ ಜ್ವರದ ಹಲವಾರು ಪ್ರಕರಣಗಳು ಪತ್ತೆಯಾಗಿದ್ದವು. ಇವೆರಡೂ ವ್ಯಾಧಿಗಳು ಸೋಂಕು ಪೀಡಿತ ವ್ಯಕ್ತಿಯನ್ನು ಕಚ್ಚಿದ್ದ ಸೊಳ್ಳೆಗಳಿಂದ ಹರಡುವುದರಿಂದ, ಜೊತೆಯಾಗಿ ಕಾಣಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಈ ವ್ಯಾಧಿಗಳನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷಧಗಳನ್ನು ಇದುವರೆಗೆ ಪತ್ತೆಹಚ್ಚಿಲ್ಲದ ಕಾರಣದಿಂದಾಗಿ ಸಾಕಷ್ಟು ಸಂಖ್ಯೆಯ ರೋಗಿಗಳ ಮರಣಕ್ಕೂ ಕಾರಣವೆನಿಸಿವೆ. ಈ ಮಾರಕತೆಯು ಜನಸಾಮಾನ್ಯರ ಮನದಲ್ಲಿ ಭೀತಿಯನ್ನು ಹುಟ್ಟಿಸಲು ಯಶಸ್ವಿಯಾಗಿದೆ.
ಏನಿದು ಡೆಂಗೆ?
ಅರ್ಬೊ ವೈರಸ್ ಗಳ ವರ್ಗಕ್ಕೆ ಸೇರಿದ ಡೆಂಗೆ ರೋಗಕಾರಕ ವೈರಸ್ ಗಳು ಸಾಮಾನ್ಯವಾಗಿ ಎಡೆಸ್ ಇಜಿಪ್ತೈ ಜಾತಿಯ ಹೆಣ್ಣು ಸೊಳ್ಳೆಗಳಿಂದ ಹರಡುತ್ತದೆ. ಡೆಂಗೆ ಪೀಡಿತರನ್ನು ಕಚ್ಚಿದ ಈ ಸೊಳ್ಳೆಗಳು,೮ ರಿಂದ ೧೨ ದಿನಗಳಲ್ಲಿ ಡೆಂಗೆ ವೈರಸ್ ಗಳನ್ನು ಹರಡುವ ಸಾಮರ್ಥ್ಯವನ್ನು ಗಳಿಸುತ್ತವೆ. ವಿಶೇಷವೆಂದರೆ ಈ ಸೊಳ್ಳೆಗಳು ಸಾಯುವ ತನಕ ಈ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತವೆ.
ಡೆಂಗೆ ವ್ಯಾಧಿಪೀಡಿತ ವ್ಯಕ್ತಿಗಳು ಈ ವೈರಸ್ ಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಂಡರೂ,ಇದು ಕೇವಲ ೯ ತಿಂಗಳ ಅವಧಿಗೆ ಸೀಮಿತವಾಗಿರುತ್ತದೆ. ಆದರೆ ಹಲವಾರುಬಾರಿ ಡೆಂಗೆ ಜ್ವರದಿಂದ ಪೀಡಿತರಾದ ವ್ಯಕ್ತಿಗಳು,ಶಾಶ್ವತವಾಗಿ ರೋಗಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಳ್ಳುತ್ತಾರೆ.
ಡೆಂಗೆ ವ್ಯಾಧಿಪೀಡಿತರನ್ನು ಕಚ್ಚಿದ ಸೊಳ್ಳೆಗಳು ಆರೋಗ್ಯವಂತರನ್ನು ಕಚ್ಚಿದ ನಂತರ ಸುಮಾರು ೫-೬ ದಿನಗಳಲ್ಲಿ ರೋಗಲಕ್ಷಣಗಳು ಪ್ರಕಟವಾಗುತ್ತವೆ. ಕಾಯಿಲೆಯ ತೀವ್ರತೆ ಹೆಚ್ಚಿದ್ದಲ್ಲಿ ೭-೧೦ ದಿನಗಳು ಹಾಗೂ ಸೌಮ್ಯರೂಪದಲ್ಲಿ ಇದ್ದಲ್ಲಿ ೪-೬ ದಿನಗಳ ಕಾಲ ರೋಗಿಯನ್ನು ಪೀಡಿಸುತ್ತದೆ.
ರೋಗ ಲಕ್ಷಣಗಳು
ಡೆಂಗೆ ವ್ಯಾಧಿಪೀಡಿತರಲ್ಲಿ ಜ್ವರ,ಶರೀರದಾದ್ಯಂತ ನೋವು,ಅದರಲ್ಲೂ ಕಣ್ಣುಗಳ ಹಿಂಭಾಗ,ತಲೆ ಮತ್ತು ಅಸ್ಥಿಸಂಧಿಗಳಲ್ಲಿ ವಿಪರೀತ ನೋವು, ಕಣ್ಣುಗಳು ಕೆಂಪಾಗಿ ನೀರು ಒಸರುವುದು,ಬೆಳಕನ್ನು ನೋಡಲು ಆಗದಿರುವುದು,ವಾಕರಿಕೆ,ವಾಂತಿ,ಹಸಿವಿಲ್ಲದಿರುವುದು,ಎದ್ದೇಳಲು ಆಗದೇ ಹಾಸಿಗೆಯಲ್ಲೇ ಬಿದ್ದಿರುವುದು,ನಿದ್ರಾಹೀನತೆ ಮತ್ತು ಖಿನ್ನತೆಗಳಂತಹ ಲಕ್ಷಣಗಳು ಕಂಡುಬರುತ್ತವೆ.
ವ್ಯಾಧಿಯ ತೀವ್ರತೆ ಹೆಚ್ಚಿದ್ದಲ್ಲಿ ಏರುವ ಜ್ವರದ ಬಾಧೆಯು ೭ ರಿಂದ ೮ ದಿನಗಳ ಕಾಲ ಪೀಡಿಸುವುದು. ಕೆಲರೋಗಿಗಳಲ್ಲಿ ಮೂರು ದಿನಗಳ ಬಳಿಕ ಮಾಯವಾಗುವ ಜ್ವರ ಮತ್ತು ಅನ್ಯ ಲಕ್ಷಣಗಳು,ಒಂದೆರಡು ದಿನಗಳಲ್ಲಿ ಮತ್ತೆ ಮರುಕಳಿಸುವುದು ಅಪರೂಪವೇನಲ್ಲ. ಈ ಸಂದರ್ಭದಲ್ಲಿ ರೋಗಿಗಳ ಕೈಕಾಲುಗಳ ಮೇಲೆ ಬೆವರುಸಾಲೆಯಂತಹ ದದ್ದುಗಳು ಮೂಡಿ,ಶರೀರದ ಅನ್ಯಭಾಗಗಳಿಗೂ ಹರಡಬಹುದು. ಬಹುತೇಕ ರೋಗಿಗಳು ಜ್ವರಮುಕ್ತರಾದ ಬಳಿಕವೂ ಅತಿಯಾದ ಆಯಾಸ ಮತ್ತು ಬಳಲಿಕೆಗಳಿಂದ ಮಲಗಿಕೊಂಡೇ ಇರುವುದು ಈ ವ್ಯಾಧಿಯ ಪೀಡೆಗಳಲ್ಲಿ ಒಂದಾಗಿದೆ.
೧೯೫೬ ರಿಂದ ದಕ್ಷಿಣ ಆಫ್ರಿಕಾ ದೇಶದಲ್ಲಿ ಅನೇಕಬಾರಿ ಸಾಂಕ್ರಾಮಿಕವಾಗಿ ಹರಡಿದ್ದ ಡೆಂಗೆ ಜ್ವರದೊಂದಿಗೆ ಚಿಕುನ್ ಗುನ್ಯಾ ವೈರಸ್ ಗಳು ಸೇರಿಕೊಂಡಿದ್ದ ಪರಿಣಾಮವಾಗಿ ಉದ್ಭವಿಸಿದ್ದ ಸಂಕೀರ್ಣ ಸಮಸ್ಯೆಗಳಲ್ಲಿ ಆಘಾತ(shock) ಮತ್ತು ರಕ್ತಸ್ರಾವಗಳು ಪ್ರಮುಖವಾಗಿದ್ದವು. ಡೆಂಗೆ ಹೆಮೊರೇಜಿಕ್ ಫಿವರ್ ಎನ್ನುವ ಈ ಅಪಾಯಕಾರಿ ಸಮಸ್ಯೆಯ ಮಾರಕತೆಗೆ ಶೇ. ೧೦ ರಷ್ಟು ರೋಗಿಗಳು ಬಲಿಯಾಗಿದ್ದರು.
ಪತ್ತೆಹಚ್ಚುವುದು ಹೇಗೆ?
ಶಂಕಿತ ಜ್ವರ ಪೀಡಿತರ ರಕ್ತದ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಮೂಲಕ ಡೆಂಗೆ ವೈರಸ್ ಗಳ ಇರುವಿಕೆಯನ್ನು ಪತ್ತೆಹಚ್ಚಬಹುದಾಗಿದೆ. 
ಚಿಕಿತ್ಸೆ  
ಡೆಂಗೆ ಜ್ವರವನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷಧಗಳನ್ನು ಯಾವುದೇ ಸಂಶೋಧಕರು ಇಂದಿನತನಕ ಪತ್ತೆಹಚ್ಚಿಲ್ಲ. ರೋಗಿಯನ್ನು ಬಾಧಿಸುವ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರು ನೀಡುವ ಔಷಧಗಳನ್ನು ಸೇವಿಸಿ,ಸಂಪೂರ್ಣ ವಿಶ್ರಾಂತಿಯನ್ನು ಪಡೆಯುವುದೇ ಇದಕ್ಕೆ ಏಕಮಾತ್ರ ಪರಿಹಾರವಾಗಿದೆ.
ರೋಗಪೀಡಿತರನ್ನು ಪ್ರತ್ಯೇಕವಾದ ಕೋಣೆಯಲ್ಲಿರಿಸಿ,ಸೊಳ್ಳೆಪರದೆಯನ್ನು ಕಡ್ಡಾಯವಾಗಿ ಬಳಸುವ ಮೂಲಕ ರೋಗವು ಇತರರಿಗೆ ಹರಡದಂತೆ ತಡೆಗಟ್ಟಬಹುದು. ಜೊತೆಗೆ ಸುತ್ತಮುತ್ತಲಿನ ಪರಿಸರದಲ್ಲಿ ಇರಬಹುದಾದ ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರಗಳನ್ನು ನಾಶಗೊಳಿಸುವುದು,ನಿಶ್ಚಿತವಾಗಿಯೂ ಇದನ್ನು ತಡೆಗಟ್ಟುವ ಪರಿಣಾಮಕಾರಿ ವಿಧಾನವೂ ಹೌದು.
ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ಹಲವಾರು ಕಾಯಿಲೆಗಳಂತೆ,ಡೆಂಗೆ ಜ್ವರವನ್ನು ತಡೆಗಟ್ಟಬಲ್ಲ ಲಸಿಕೆಯೊಂದನ್ನು ಸಂಶೋಧಿಸಲು ವೈದ್ಯಕೀಯ ಸಂಶೋಧಕರು ಶ್ರಮಿಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ಯಶಸ್ವಿಯಾದಲ್ಲಿ,ಡೆಂಗೆ ಜ್ವರವನ್ನು ಖಚಿತವಾಗಿ ನಿಯಂತ್ರಿಸುವುದು ಸುಲಭಸಾಧ್ಯ ಎನಿಸಲಿದೆ.
ವಿಶೇಷ ಸೂಚನೆ-ದಿನಾಂಕ 25-06-13 ರಂದು ಉದಯವಾಣಿ ಪತ್ರಿಕೆಯ ಸುದಿನ ಪುರವಣಿಯಲ್ಲಿ ಈ ಲೇಖನವನ್ನು ಪ್ರಕಟಿಸಿದ್ದಾರೆ. ಆದರೆ ನನ್ನ ಅರಿವಿಗೆ ತರದೇ ಒಂದಿಷ್ಟು ಬದಲಾವಣೆಯನ್ನೂ ಮಾಡಿದ್ದಾರೆ. ಅದರಂತೆ ವೈದ್ಯಕೀಯ ಶಬ್ದಕೋಶದಲ್ಲಿ "ಡೆಂಗೆ" ಎಂದು ನಮೂದಿಸಿರುವುದಾಗಿ ನಾನು ಬರೆದಿರುವುದನ್ನು ತಿದ್ದಿ,"ಡೆಂಗ್ಯೂ"ಎಂದು ನಮೂದಿಸಿರುವ ಎಂದು ಬದಲಾಯಿಸಿದ್ದಾರೆ. ಇದು ಖಂಡಿತವಾಗಿಯೂ ಸರಿಯಲ್ಲ. ಪ್ರಾಯಶಃ ಉದಯವಾಣಿ ಪತ್ರಿಕೆಯಲ್ಲಿ ಹಿಂದಿನಿಂದಲೂ "ಡೆಂಗ್ಯೂ" ಎನ್ನುವ ಶಬ್ದವನ್ನು ಮುದ್ರಿಸುತ್ತಿದ್ದು,ಇದಕ್ಕೂ ಮುನ್ನ ನಾನು ಕಳುಹಿಸಿದ್ದ ಲೇಖನಗಳಲ್ಲಿ ಬಳಸಿದ್ದ ಡೆಂಗೆ ಶಬ್ದವನ್ನು ಡೆಂಗ್ಯೂ ಎಂದು ಬದಲಾಯಿಸುತ್ತಿದ್ದರು. ತಾವು ಪ್ರಕಟಿಸುವ ಹೆಸರೇ ಸರಿ ಎಂದು ಸಮರ್ಥಿಸಲು,ಈ ಬಾರಿಯೂ ನಾನು ಬರೆದಿರುವ ಶಬ್ದವನ್ನು ಬದಲಾಯಿಸಲಾಗಿದೆ ಎನ್ನುವುದನ್ನು ನಿಮಗೆ  ಈ ಮೂಲಕ ತಿಳಿಸುತ್ತಿದ್ದೇನೆ.
ಡಾ.ಸಿ.ನಿತ್ಯಾನಂದ ಪೈ,ಪುತ್ತೂರು

Saturday, June 8, 2013

June-14,World blood donors day

                ಜೂನ್ ೧೪ :ವಿಶ್ವ ರಕ್ತದಾನಿಗಳ ದಿನಾಚರಣೆಯ ದಶಮಾನೋತ್ಸವ
ಪ್ರಾಣಾಪಾಯದ ಸ್ಥಿತಿಯಲ್ಲಿರುವವರನ್ನು ಬದುಕಿಸಲು ನೀವು ವೈದ್ಯರೇ ಆಗಿರಬೇಕಿಲ್ಲ. ನೀವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತವು,ಮೂರು ವ್ಯಕ್ತಿಗಳ ಜೀವವನ್ನು ಉಳಿಸಬಲ್ಲದು. ಆದುದರಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯ ದಶಮಾನೋತ್ಸವವನ್ನು ಇಂದೇ ರಕ್ತದಾನ ಮಾಡುವ ಮೂಲಕ ಆಚರಿಸಿ. "ಜೀವ"ದ ಕೊಡುಗೆಯನ್ನು ನೀಡಿ,ರಕ್ತದಾನ ಮಾಡಿ,ಎನ್ನುವ ಘೋಷಣೆಯನ್ನು ಸಾಕಾರಗೊಳಿಸಿ.
----------           -----------         ------------           -------------            ------------           --------------         -----------
                     ವಿಶ್ವ ರಕ್ತದಾನಿಗಳ ದಿನವನ್ನು ಜೂನ್ ೧೪,೨೦೦೪ ರಂದು ಮೊತ್ತ ಮೊದಲಬಾರಿಗೆ ಆಚರಿಸಲಾಗಿತ್ತು. ತದನಂತರ ವರ್ಷಂಪ್ರತಿ ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳಲ್ಲಿ ಇದನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಕ್ತದಾನದ ಮಹತ್ವ ಹಾಗೂ ಅವಶ್ಯಕತೆ,ಸುರಕ್ಷಿತ ರಕ್ತ ಹಾಗೂ ರಕ್ತದ ಉತ್ಪನ್ನಗಳು,ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಯಂಪ್ರೇರಿತ ರಕ್ತದಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವುಮೂಡಿಸುವ ಕಾರ್ಯಕ್ರಮಗಳೊಂದಿಗೆ,ಅಸಂಖ್ಯ ಪ್ರಾಣಗಳನ್ನು ಉಳಿಸಿರುವ ರಕ್ತದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಸುರಕ್ಷಿತ ರಕ್ತ ಮತ್ತು ರಕ್ತದ ಉತ್ಪನ್ನಗಳ ಪೂರಣವು ಲಕ್ಷಾಂತರ ಜನರ ಪ್ರಾಣವನ್ನು ಉಳಿಸುತ್ತಿದೆ. ಪ್ರಾಣಾಪಾಯದ ಸ್ಥಿತಿಯಿಂದ ರಕ್ಷಿಸುವುದಲ್ಲದೇ,ಸುಧೀರ್ಘಕಾಲ ಆರೋಗ್ಯವಂತರಾಗಿ ಜೀವಿಸಲು ನೆರವಾಗುತ್ತದೆ. ಸಂಕೀರ್ಣ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಡೆಸಲು ಹಾಗೂ ಬಾಣಂತಿಯರು ಮತ್ತು ನವಜಾತ ಶಿಶುಗಳನ್ನು ಪ್ರಾಣಾಪಾಯದ ಸ್ಥಿತಿಯಲ್ಲಿ ಕಾಪಾಡುತ್ತದೆ.  
ದಾನಿಗಳ-ರಕ್ತದ ಕೊರತೆ
ವಿಶ್ವಾದ್ಯಂತ ರಕ್ತದ ಬೇಡಿಕೆ ಮತ್ತು ಪೂರೈಕೆಯ ನಡುವೆ ಅಗಾಧ ಪ್ರಮಾಣದ ಅಂತರವಿದೆ. ನಮ್ಮ ದೇಶದಲ್ಲಿ ವರ್ಷಂಪ್ರತಿ ಸುಮಾರು ನಾಲ್ಕು ಕೋಟಿ ಯೂನಿಟ್ ರಕ್ತದ ಬೇಡಿಕೆಯಿದ್ದರೂ,ಪೂರೈಕೆಯ ಪ್ರಮಾಣವು ಕೇವಲ ೪೦ ಲಕ್ಷ ಯೂನಿಟ್ ಗಳಾಗಿವೆ. ತತ್ಪರಿಣಾಮವಾಗಿ ತುರ್ತು ಪರಿಸ್ಥಿತಿಯಲ್ಲಿ ಅವಶ್ಯಕ ಪ್ರಮಾಣದ ರಕ್ತಪೂರಣವಾಗದೇ,ಲಕ್ಷಾಂತರ ಜನರು ಅಕಾಲಿಕ ಮರಣಕ್ಕೆ ಈಡಾಗುತ್ತಾರೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ಹಲವಾರು ಅಂತರ ರಾಷ್ಟ್ರೀಯ ಸಂಘಟನೆಗಳ ಸಹಕಾರದೊಂದಿಗೆ,ಸ್ವಯಂಪ್ರೇರಿತ ರಕ್ತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ವಿಶ್ವ ರಕ್ತದಾನಿಗಳ ದಿನವನ್ನು ವರ್ಷಂಪ್ರತಿ ಆಚರಿಸುತ್ತಿದೆ.
ಪ್ರಸ್ತುತ ವಿಶ್ವದ ೬೨ ರಾಷ್ಟ್ರಗಳಲ್ಲಿ "ರಕ್ತಪೂರಣ"ಸೇವೆಯು ಸ್ವಯಂಪ್ರೇರಿತ ರಕ್ತದಾನಿಗಳ ನೆರವಿನಿಂದಲೇ ನಡೆಯುತ್ತಿದ್ದು,೨೦೦೨ ರಲ್ಲಿ ಈ ವ್ಯವಸ್ಥೆಯು ಕೇವಲ ೩೯ ರಾಷ್ಟ್ರಗಳಿಗೆ ಸೀಮಿತವಾಗಿತ್ತು. ೨೦೦೯ ರ ಮೆಲ್ಬೋರ್ನ್ ಘೋಷಣೆಯಂತೆ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ೨೦೨೦ ಕ್ಕೆ ಮುನ್ನ,ರಕ್ತದಾನದ ಸೇವೆಯನ್ನು ಶತಪ್ರತಿಶತ ಫಲಾಪೇಕ್ಷೆಯಿಲ್ಲದೆ ನೀಡುವ ದಾನಿಗಳಿಂದ ಸಂಗ್ರಹಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ರಕ್ತಪೂರಣದ ಅವಶ್ಯಕತೆ ಇರುವವರಿಗೆ ಬೇಕಾಗುವಷ್ಟು ಪ್ರಮಾಣದ ರಕ್ತವನ್ನು ಸ್ವಯಂಪ್ರೇರಿತ ದಾನಿಗಳಿಂದ ಪಡೆಯಲಾಗುತ್ತಿದೆ. ಕೆಲಸಂದರ್ಭಗಳಲ್ಲಿ ಸಮೀಪದ ಸಂಬಂಧಿಗಳಿಂದ ಮತ್ತು ಅನಿವಾರ್ಯವೆನಿಸಿದಾಗ ಹಣವನ್ನು ಪಡೆದು ರಕ್ತವನ್ನು ನೀಡುವ ವೃತ್ತಿಪರ ದಾನಿಗಳಿಂದ ಪಡೆಯಲಾಗುತ್ತದೆ. ಇದೇ ದಶಕದ ಅಂತ್ಯಕ್ಕೆ ಮುನ್ನ,ಜಗತ್ತಿನ ಪ್ರತಿಯೊಂದು ರಾಷ್ಟ್ರಗಳಲ್ಲಿ ಸ್ವಯಂಪ್ರೇರಿತ ರಕ್ತದಾನದ ಮೂಲಕ ಅವಶ್ಯಕ ಪ್ರಮಾಣದ ರಕ್ತವನ್ನು ಪಡೆಯುವ ಪದ್ಧತಿ ಜಾರಿಗೆ ಬರಲಿ ಎನ್ನುವುದೇ ವಿಶ್ವ ಆರೋಗ್ಯ ಸಂಸ್ಥೆಯ ಆಶಯವಾಗಿದೆ.
ರಕ್ತದಾನ-ಶ್ರೇಷ್ಠ ದಾನ
ಅನಾದಿ ಕಾಲದಿಂದಲೂ ಭಾರತದ ಹಿಂದೂ ಮತ್ತು ಅನ್ಯ ಧರ್ಮೀಯರು ಸಂದರ್ಭೋಚಿತವಾಗಿ ವಿವಿಧ ರೀತಿಯ ದಾನಗಳನ್ನು ನೀಡುವ ಪದ್ಧತಿ ರೂಢಿಯಲ್ಲಿತ್ತು. ಅರ್ಹ ವ್ಯಕ್ತಿಗಳಿಗೆ ನೀಡುವ ದಾನಗಳಿಂದ ತಮ್ಮ ಮತ್ತು ಕುಟುಂಬದ ಸದಸ್ಯರಿಗೆ ಒಂದಿಷ್ಟು ಪುಣ್ಯವೂ ಲಭಿಸುತ್ತದೆ ಎನ್ನುವ ನಂಬಿಕೆಯು ಇಂದಿಗೂ ನಮ್ಮಲ್ಲಿ ಜೀವಂತವಾಗಿದೆ. ಆದರೆ ಇವೆಲ್ಲಾ ದಾನಗಳಿಗಿಂತ ಮಿಗಿಲಾದ ಹಾಗೂ ಸಾವಿನ ದವಡೆಗಳಲ್ಲಿ ಸಿಲುಕಿರುವವರನ್ನು ಬದುಕಿಸಬಲ್ಲ ಮತ್ತು ಅತ್ಯಂತ ಶ್ರೇಷ್ಠವಾದ ದಾನವೇ ರಕ್ತದಾನ. ಅಕ್ಷರಶಃ "ಜೀವದಾನ" ಎನಿಸುವ ಈ ದಾನಕ್ಕೆ ಇತರ ಯಾವುದೇ ದಾನಗಳು ಸಾಟಿಯಲ್ಲ ಎನ್ನುವುದನ್ನು ಮರೆಯದಿರಿ. ಇಂದೇ ರಕ್ತದಾನ ಮಾಡಿರಿ.
ನಿಮಗಿದು ತಿಳಿದಿರಲಿ
ನಿಮಗೆ ೧೮ ವರ್ಷ ವಯಸ್ಸಾದಂದಿನಿಂದ ೬೦ ನೇ ವಯಸ್ಸಿನ ತನಕ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ರಕ್ತದಾನ ಮಾಡುತ್ತಿದ್ದಲ್ಲಿ,೫೦೦ ಕ್ಕೂ ಅಧಿಕ ಜನರ ಪ್ರಾಣಗಳನ್ನು ಉಳಿಸಬಹುದಾಗಿದೆ. ತನ್ಮೂಲಕ ಸಾಕಷ್ಟು ಪುಣ್ಯ ಮತ್ತು ಮಾನಸಿಕ ಸಂತೃಪ್ತಿಯನ್ನು ಗಳಿಸಬಹುದಾಗಿದೆ. ಇಷ್ಟು ಮಾತ್ರವಲ್ಲ,ನಿಯಮಿತವಾಗಿ ರಕ್ತವನ್ನು ನೀಡುವ ಮೂಲಕ ನಿಮ್ಮ ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಬಹುದಾಗಿದೆ.
ಮಹತ್ವ
ಕಾರ್ಲ್ ಲ್ಯಾಂಡ್ ಸ್ಟೈನರ್ ನಾಮಾಂಕಿತ ವೈದ್ಯ ಹಾಗೂ ಬಯಾಲಜಿಸ್ಟ್ ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆಧುನಿಕ ರಕ್ತಪೂರಣದ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ವೈದ್ಯರು,೧೯೦೧ ರಲ್ಲಿ ರಕ್ತದ ಎ ಬಿ ಒ ಗುಂಪುಗಳನ್ನು ಪತ್ತೆಹಚ್ಚಿದ ಹಾಗೂ ಆಧುನಿಕ ಪದ್ದತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. ೧೯೩೭ ರಲ್ಲಿ ಅಲೆಕ್ಸಾಂಡರ್ ವೈನರ್ ಎನ್ನುವ ಸಂಶೋಧಕರೊಂದಿಗೆ "ರೀಸಸ್ ಫ್ಯಾಕ್ಟರ್" ಎನ್ನುವ ಅಂಶವನ್ನು ಗುರುತಿಸುವ ಮೂಲಕ,ರೋಗಿಯ  ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತಪೂರಣವನ್ನು ಮಾಡಲು ಕಾರಣಕರ್ತರೆನಿಸಿದ್ದರು. ಈ ವೈದ್ಯರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ,ಇವರ ಜನ್ಮದಿನವನ್ನು ರಕ್ತದಾನಿಗಳ ದಿನವನ್ನಾಗಿ ಆಚರಿಸುವ ಮೂಲಕ ಗೌರವಿಸಲಾಗಿದೆ.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು
            ಪ್ರತಿನಿತ್ಯ ಬ್ರೆಡ್ ಸೇವಿಸುವುದು ಹಿತಕರವಲ್ಲ    
         ------------      -------------     ------------------
ಒಂದಾನೊಂದು ಕಾಲದಲ್ಲಿ ಅನಾರೋಗ್ಯಪೀಡಿತರ ಆಹಾರವೆಂದೇ ಪ್ರಖ್ಯಾತವಾಗಿದ್ದ ಬ್ರೆಡ್,ಇದೀಗ ಅನೇಕ ಭಾರತೀಯರ ಬೆಳಗಿನ ಉಪಾಹಾರದ ಅವಿಭಾಜ್ಯ ಅಂಗವೆನಿಸಿದೆ.ಒಂಟಿಜೀವಿಗಳಾದ ಬ್ರಹ್ಮಚಾರಿಗಳು,ಬಿಡುವಿಲ್ಲದ ಉದ್ಯೋಗಸ್ಥ ದಂಪತಿಗಳು,ಅನ್ಯ ಆಹಾರವನ್ನು ತಿನ್ನಲು ಒಲ್ಲದ ಮಕ್ಕಳು ಮತ್ತು ಪಾಶ್ಚಾತ್ಯರ ಜೀವನಶೈಲಿಯನ್ನು ಅನುಕರಿಸುವ ಬಹುತೇಕ ಜನರು,ವಾರದ ಆರುದಿನಗಳಲ್ಲಿ ಬೆಳಗಿನ ಉಪಾಹಾರಕ್ಕೆ ಬ್ರೆಡ್ದನ್ನು ಸೇವಿಸುತ್ತಾರೆ.
ಸಾಮಾನ್ಯವಾಗಿ ಬೆಣ್ಣೆ,ಹಣ್ಣುಗಳ ಜಾಮ್ ಅಥವಾ ಮೊಟ್ಟೆಯ ಆಮ್ಲೆಟ್ ನೊಂದಿಗೆ ದಿನನಿತ್ಯ ಬ್ರೆಡ್ಡನ್ನು ತಿನ್ನುವ ವ್ಯಕ್ತಿಗಳಿಗೂ,ಇದು ತನ್ನ ಆರೋಗ್ಯದ ಮೇಲೆ ಬೀರಬಲ್ಲ ದುಷ್ಪರಿಣಾಮಗಳ ಬಗ್ಗೆ ಅವಶ್ಯಕ ಮಾಹಿತಿ ತಿಳಿದಿರುವುದಿಲ್ಲ.ಪ್ರಾಯಶಃ ಇದೇ ಕಾರಣದಿಂದಾಗಿ ಇವರು ಪ್ರತಿನಿತ್ಯ ಬ್ರೆಡ್ ಸೇವಿಸುವ ಹವ್ಯಾಸವನ್ನು ತ್ಯಜಿಸಿಲ್ಲ.
ಅಧಿಕತಮ ಭಾರತೀಯರು,ಅದರಲ್ಲೂ ಸುಶಿಕ್ಷಿತ ನಗರವಾಸಿಗಳು ಮೆಚ್ಚಿ ಸವಿಯುವ ಬ್ರೆಡ್,ನಿಜಕ್ಕೂ ಒಂದು ಪರಿಪೂರ್ಣ ಮತ್ತು ಆರೋಗ್ಯಕರ ಆಹಾರವಲ್ಲ.ಏಕೆಂದರೆ ಬ್ರೆಡ್ ನ ತಯಾರಿಕೆಯಲ್ಲಿ ಬಳಸುವ ಮೈದಾ ಹಿಟ್ಟನ್ನು ಸಿದ್ದಪಡಿಸಲು ಮತ್ತು ಬ್ರೆಡ್ಡನ್ನು ತಯಾರಿಸುವ ಸಂದರ್ಭದಲ್ಲಿ ಬಳಸುವ ರಾಸಾಯನಿಕ ದ್ರವ್ಯಗಳು,ಮನುಷ್ಯನ ಆರೋಗ್ಯಕ್ಕೆ ಹಾನಿಕರ ಎಂದು ಸಾಬೀತಾಗಿವೆ.
ಅಪಾಯಕಾರಿ ರಾಸಾಯನಿಕಗಳು
ಮೈದಾ ಹಿಟ್ಟನ್ನು ಗೋಧಿಯ ಹುಡಿಯನ್ನು ಸಂಸ್ಕರಿಸುವ ಮೂಲಕ ಸಿದ್ದಪದಡಿಸಲಾಗುತ್ತದೆ.ಬೆಂಜೊಯ್ಲ್ ಪೆರೋಕ್ಸೈಡ್ ಎನ್ನುವ ರಾಸಾಯನಿಕವನ್ನು ಬಳಸುವ ಮೂಲಕ ನಸುಹಳದಿ ಬಣ್ಣದ ಗೋಧಿಯ ಹುಡಿಯನ್ನು ಆಕರ್ಷಕವಾದ ಬಿಳಿಯ ಬಣ್ಣಕ್ಕೆ  ಪರಿವರ್ತಿಸಲಾಗುತ್ತದೆ.ಈ ರಾಸಾಯನಿಕದಿಂದಾಗಿ ಮೈದಾದಿಂದ ತಯಾರಿಸಿದ ಖಾದ್ಯಗಳನ್ನು ಅತಿಯಾಗಿ ಸೇವಿಸಿದಲ್ಲಿ,ಮೂತ್ರಾಂಗದ ಕಲ್ಲುಗಳು,ಮಧುಮೇಹ  ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳಿವೆ.ದಕ್ಷಿಣ ಕನ್ನಡ ಜಿಲ್ಲೆ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಮೈದಾಹಿಟ್ಟನ್ನು ಬಳಸಿ ಬ್ರೆಡ್,ಬನ್,ಬರ್ಗರ್,ಪಫ್ ಇತ್ಯಾದಿ ಬೇಕರಿ ಉತ್ಪನ್ನಗಳು ಹಾಗೂ ದೋಸೆ, ಪೂರಿ,ಚಪಾತಿ,ನಾನ್,ರೋಟಿ,ಬತೂರ,ಸಮೋಸ,ಪರೋಟ,ಬನ್ಸ್,ಗೋಳಿಬಜೆ ಮುಂತಾದ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಿ ಸವಿಯುತ್ತಾರೆ.ಆದರೆ ತಾವು ಸವಿಯುವ ಖಾದ್ಯಗಳಿಂದ ಅನಾರೋಗ್ಯ ಬಾಧಿಸಬಹುದು ಎನ್ನುವ ವಿಚಾರವನ್ನು ನಿರ್ಲಕ್ಷಿಸುತ್ತಾರೆ.
ಅಪರೂಪದಲ್ಲಿ ನೀವೂ ಸವಿದಿರಬಹುದಾದ ಬ್ರೆಡ್,ನಿಶ್ಚಿತವಾಗಿಯೂ ಪರಿಪೂರ್ಣ ಹಾಗೂ ಆರೋಗ್ಯದಾಯಕ  ಆಹಾರವಲ್ಲ.ಏಕೆಂದರೆ ಇದನ್ನು ತಯಾರಿಸುವ ಮುನ್ನ ಸಿದ್ದಪಡಿಸುವ ಹಿಟ್ಟಿನ ಮಿಶ್ರಣವನ್ನು ಸುಧ್ರಢಗೊಳಿಸಲು ಪೊಟಾಸಿಯಂ ಬ್ರೋಮೇಟ್ ಎನ್ನುವ ರಾಸಾಯನಿಕವನ್ನು ಬಳಸುತ್ತಾರೆ.ಆದರೆ ನೀವು ಖರೀದಿಸಿದ ಖ್ಯಾತನಾಮ ಸಂಸ್ಥೆಯ ಉತ್ಪನ್ನದ ಹೊರಕವಚದಲ್ಲಿ ಈ ರಾಸಾಯನಿಕದ ಹೆಸರನ್ನು ಅಥವಾ ಇದರ ಅಂತರ ರಾಷ್ಟ್ರೀಯ ಸಂಕೇತ ಸಂಖ್ಯೆ(೯೨೪-ಎ)ಯನ್ನು ನಮೂದಿಸಿರುತ್ತಾರೆ.ಇದನ್ನು ನಮೂದಿಸದೇ ಇದ್ದಲ್ಲಿ,ಈ ಉತ್ಪನ್ನದಲ್ಲಿ ಪೊಟಾಸಿಯಂ ಬ್ರೋಮೆಟನ್ನು ಬಳಸಿಲ್ಲವೆಂದು ಭಾವಿಸದಿರಿ. ಏಕೆಂದರೆ ಈ ರಾಸಾಯನಿಕವನ್ನು ಬ್ರೆಡ್ ಗಳ ತಯಾರಿಕೆಯಲ್ಲಿ ಬಳಸುವ "ಲವಣ"ಗಳೊಂದಿಗೆ ಸೇರಿಸಿದ್ದಲ್ಲಿ,೯೨೪-ಎ ಸಂಕೇತವನ್ನು ಪ್ರತ್ಯೇಕವಾಗಿ ನಮೂದಿಸುವುದಿಲ್ಲ. ಇದೇ ಕಾರಣದಿಂದಾಗಿ ನೀವು ಸೇವಿಸುವ ಬ್ರೆಡ್ ನಲ್ಲಿ ಅಪಾಯಕಾರಿ ರಾಸಾಯನಿಕ ಇರುವುದು ನಿಮಗೂ ತಿಳಿಯುವುದಿಲ್ಲ!.
ಅಪಾಯಕಾರಿ ರಾಸಾಯನಿಕ
ಕ್ಯಾನ್ಸರ್ ವ್ಯಾಧಿಯ ಬಗ್ಗೆ ಸಂಶೋಧನೆಯನ್ನು ನಡೆಸುತ್ತಿರುವ "ಇಂಟರ್ ನೇಶನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್"ಸಂಸ್ಥೆಯ ಅಭಿಪ್ರಾಯದಂತೆ,ಪೊಟಾಸಿಯಂ ಬ್ರೋಮೆಟ್ ರಾಸಾಯನಿಕವು ೨ ಬಿ ವರ್ಗಕ್ಕೆ ಅರ್ಥಾತ್ ಮನುಷ್ಯರಲ್ಲಿ ಕ್ಯಾನ್ಸರ್ ವ್ಯಾಧಿಗೆ ಕಾರಣವೆನಿಸಬಲ್ಲ ದ್ರವ್ಯವಾಗಿದೆ. ಪ್ರಾಣಿಗಳ ಮೇಲೆ ನಡೆಸಿದ್ದ ಪ್ರಯೋಗಗಳು ಇದನ್ನು ಧೃಡೀಕರಿಸಿವೆ. ಇದೇ ಕಾರಣದಿಂದಾಗಿ ಈ ರಾಸಾಯನಿಕವನ್ನು ಆಹಾರಪದಾರ್ಥಗಳ ತಯಾರಿಕೆಯಲ್ಲಿ ಬಳಸದಂತೆ ಯುರೋಪ್ ಮತ್ತು ಬ್ರಿಟನ್ ದೇಶಗಳು ೧೯೯೦ ರಲ್ಲೇ ನಿಷೇಧಿಸಿದ್ದವು. ತದನಂತರ ೧೯೯೪ ರಲ್ಲಿ ಕೆನಡಾ,೨೦೦೧ ರಲ್ಲಿ ಶ್ರೀಲಂಕಾ,ಮತ್ತು ೨೦೦೫ ರಲ್ಲಿ ಚೀನಾ,ನೈಜೀರಿಯಾ,ಉಗಾಂಡ,ಪೆರು,ಬ್ರೆಝಿಲ್ ಮತ್ತು ಇತರ ಕೆಲ ದೇಶಗಳು ಇದನ್ನು ನಿಷೇಧಿಸಿದ್ದವು. ಅಮೇರಿಕಾದಲ್ಲಿ ಇದನ್ನು ನಿಷೇಧಿಸಿರದಿದ್ದರೂ,ಎಫ್. ಡಿ. ಎ ಅಧಿಕಾರಿಗಳು ಬೇಕರಿಗಳ ಮಾಲಕರು ಸ್ವಯಂ ಪ್ರೇರಿತವಾಗಿ ಇದನ್ನು ಬಳಸದಂತೆ ಸೂಚಿಸಿದ್ದರು. ಆದರೆ ಕ್ಯಾಲಿಫೋರ್ನಿಯಾದಲ್ಲಿ ಇದನ್ನು ಬಳಸಿ ತಯಾರಿಸಿದ ಬ್ರೆಡ್ ಗಳ ಹೊರಕವಚಗಳ ಮೇಲೆ ಇದನ್ನು ನಮೂದಿಸುವುದರೊಂದಿಗೆ,ಈ ಬಗ್ಗೆ ಎಚ್ಚರಿಕೆಯನ್ನೂ ಮುದ್ರಿಸಲಾಗುತ್ತದೆ.
ಅಮೇರಿಕ ಮತ್ತು ಇತರ ಕೆಲ ದೇಶಗಳಲ್ಲಿ  ಈ ಅಪಾಯಕಾರಿ ರಾಸಾಯನಿಕವನ್ನು ನಿಷೇಧಿಸುವಂತೆ ಹಲವಾರು ಸಂಘಸಂಸ್ಥೆಗಳು ಒತ್ತಡವನ್ನು ಹೇರುತ್ತಿವೆ. ಆದರೆ ಬಹುತೇಕ ಭಾರತೀಯರಿಗೆ ತಾವು ತಿನ್ನುವ ಬ್ರೆಡ್ ಗಳಲ್ಲಿ ಇಂತಹ ಅಪಾಯಕಾರಿ ರಾಸಾಯನಿಕ ಇರುವ ಅರಿವಿಲ್ಲದ ಕಾರಣದಿಂದಾಗಿ ಯಾರೊಬ್ಬರೂ ಈ ಬಗ್ಗೆ ಚಿಂತಿಸುವುದಿಲ್ಲ. ಹಾಗೂ ಇದೇ ಕಾರಣದಿಂದಾಗಿ ಸಂಬಂಧಿತ ಇಲಾಖೆಗಳು ಇದನ್ನು ನಿಷೇಧಿಸುವತ್ತ ಗಮನಹರಿಸಿಲ್ಲ.
ಉತ್ತಮ ತಯಾರಿಕಾ ಪದ್ಧತಿ
ಭಾರತದಲ್ಲಿ ಅಸ್ತಿತ್ವದಲ್ಲಿರುವ "ಆಹಾರ ಪದಾರ್ಥಗಳ ಕಲಬೆರಕೆಯನ್ನು ತಡೆಗಟ್ಟುವ ನಿಯಮಗಳು-೧೯೫೫ ರಂತೆ,ಬ್ರೆಡ್ ನ ತಯಾರಿಕೆಯಲ್ಲಿ ಪೊಟಾಸಿಯಂ ಬ್ರೋಮೆಟ್ ಮತ್ತು ಪೊಟಾಸಿಯಂ ಅಯೋಡೇಟ್ ದ್ರವ್ಯಗಳನ್ನು ಬಳಸಬಹುದು. ಉತ್ತಮ ತಯಾರಿಕಾ ಪದ್ದತಿಯಂತೆ ಎಸ್ಕಾರ್ಬಿಕ್ ಎಸಿಡ್ ಕೂಡಾ ಬಳಸಬಹುದಾಗಿದೆ. ಆದರೆ ಅಧಿಕತಮ ತಯಾರಕರು ಪೊಟಾಸಿಯಂ ಅಯೋಡೇಟ್ ಅಥವಾ ಎಸ್ಕಾರ್ಬಿಕ್ ಎಸಿಡ್ ಗಳನ್ನು ಬಳ ಸದಿರಲು,ಇವುಗಳ ಬೆಲೆಯು ಪೊ. ಬ್ರೋಮೆಟ್ ಗಿಂತಲೂ ಸಾಕಷ್ಟು ಅಧಿಕವಾಗಿರುವುದೇ ಕಾರಣವೆನಿಸಿದೆ. ಇದಕ್ಕೂ ಮಿಗಿಲಾಗಿ ಅಲ್ಪ ಪ್ರಮಾಣದ ಪೊ. ಬ್ರೋಮೇಟನ್ನು ಮೈದಾ ಹಿಟ್ಟಿನಲ್ಲಿ ಬೆರೆಸಿದರೂ,ಬೇಕ್ ಮಾಡಿದ ಬಳಿಕ ಬ್ರೆಡ್ಡುಗಳು ಹಿಗ್ಗುವ ಮೂಲಕ ತಮ್ಮ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತವೆ. ತತ್ಪರಿಣಾಮವಾಗಿ ೪೦೦ ಗ್ರಾಂ ತೂಕದ ಒಂದು ಬ್ರೆಡ್,ಒಂದು ಲೀಟರ್ ನ ಐಸ್ ಕ್ರೀಮ್ ಪ್ಯಾಕ್ ಗಿಂತಲೂ ದೊಡ್ಡದಾಗಿ ಕಾಣಿಸುತ್ತದೆ!.
ಬ್ರೆಡ್ ತಯಾರಿಸುವಾಗ ಸೇರಿಸುವ ಪೊ. ಬ್ರೋಮೆಟ್ ನ ಪ್ರಮಾಣವು ತುಸು ಹೆಚ್ಚಾದಲ್ಲಿ ಅಥವಾ ಇದನ್ನು ನಿಗದಿತ ತಾಪಮಾನದಲ್ಲಿ,ನಿಗದಿತ ಅವಧಿಗೆ ಬೇಯಿಸದೇ ಇದ್ದಲ್ಲಿ ಉಳಿದುಕೊಳ್ಳುವ ಪೊ. ಬ್ರೋಮೆಟ್ ನ ಅಂಶವು ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು.
ಕಣ್ಮರೆಯಾಗುತ್ತಿರುವ ಕೇರಳ ಪರೋಟ 
ವಿದೇಶೀಯರು ಪರಿಚಯಿಸಿದ ಬ್ರೆಡ್,ಬನ್,ಪಿಜ್ಜಾ,ಪಫ್ ಇತ್ಯಾದಿ ಖಾದ್ಯಗಳಲ್ಲಿ ಮಾತ್ರವಲ್ಲ,ಅಪ್ಪಟ ಭಾರತೀಯ ಖಾದ್ಯಗಳಾಗಿರುವ ದೋಸೆ,ಪೂರಿ,ಸಮೋಸ,ಬನ್ಸ್,ರೊಟ್ಟಿ ಹಾಗೂ ಪರೋಟಾಗಳ ತಯಾರಿಕೆಯಲ್ಲಿ ಮೈದಾ ಹಿಟ್ಟನ್ನು ಬಳಸುತ್ತಾರೆ. ಅದರಲ್ಲೂ ವೈವಿಧ್ಯಮಯ ಹಾಗೂ ಸ್ವಾದಿಷ್ಟ ಪರೋಟಾಗಳನ್ನು ಭಾರತೀಯರೆಲ್ಲರೂ ಮೆಚ್ಚಿ ಸವಿಯುತ್ತಾರೆ.
ಆದರೆ ಕೇರಳೀಯರ ಅಚ್ಚುಮೆಚ್ಚಿನ ತಿನಿಸಾಗಿರುವ "ಕೇರಳ ಪರೋಟ"ವು ಇತ್ತೀಚಿನ ದಿನಗಳಲ್ಲಿ ಕೇರಳದ ಹೋಟೆಲ್ ಗಳಿಂದ ಕಣ್ಮರೆಯಾಗುತ್ತಿದೆ. ಏಕೆಂದರೆ ಇದರ ತಯಾರಿಕೆಯಲ್ಲಿ ಬಳಸುವ ಮೈದಾ ಹಿಟ್ಟಿನ ಸೇವನೆಯಿಂದ ಉದ್ಭವಿಸಬಲ್ಲ ಆರೋಗ್ಯದ ಸಮಸ್ಯೆಗಳನ್ನು ಅರಿತ ಕೇರಳದ ಹೋಟೆಲ್ ಮಾಲೀಕರು ಮತ್ತು ಜನಸಾಮಾನ್ಯರು,ಇವುಗಳ ತಯಾರಿಕೆ,ಮಾರಾಟ ಮತ್ತು ಸೇವನೆಗಳನ್ನೇ ನಿಲ್ಲಿಸಿದ್ದಾರೆ!.
ನೀವು ಬಳಸುವ ಗೋಧಿಯನ್ನು ಗಿರಣಿಗಳಲ್ಲಿ ಹುಡಿಮಾಡಿಸಿದಾಗ,ಇದರ ಬಣ್ಣವು ನಸುಹಳದಿಯಾಗಿ ಇರುವುದು. ಈ ಹಿಟ್ಟನ್ನು ಬೆನ್ಜೈಲ್ ಬೆನ್ಜೋಯಿಕ್ ಪೆರೋಕ್ಸೈಡ್ ಎನ್ನುವ ರಾಸಾಯನಿಕವನ್ನು ಬಳಸಿ ಬ್ಲೀಚ್ ಮಾಡಿದಾಗ,ಅಚ್ಚ ಬಿಳಿಯ ಬಣ್ಣದ ಮೈದಾ ಹುಡಿಯು ಸಿದ್ದವಾಗುತ್ತದೆ. ಇದೇ ಕಾರಣದಿಂದಾಗಿ ಮೈದಾದಿಂದ ತಯಾರಿಸಿದ ಖಾದ್ಯಗಳ ಅತಿಸೇವನೆಯಿಂದ ಮಧುಮೇಹ,ಹೃದಯ ಸಂಬಂಧಿ ಕಾಯಿಲೆಗಳು,ಮೂತ್ರಾಂಗಗಳಲ್ಲಿ ಕಲ್ಲುಗಳು ಉದ್ಭವಿಸುವುದೇ ಮುಂತಾದ ಆರೋಗ್ಯದ ಸಮಸ್ಯೆಗಳು ತಲೆದೋರುವ ಸಾಧ್ಯತೆಗಳಿವೆ ಎಂದು ಕೊಯಿಕ್ಕೋಡ್ ವೈದ್ಯಕೀಯ ಕಾಲೇಜಿನ ಮೈಕ್ರೋಬಯಾಲಜಿ ವಿಭಾಗದ ಡಾ. ಮಾಯಾ ಬಹಿರಂಗಪಡಿಸಿದ್ದರು. ಈ ವಿಚಾರವನ್ನು ಅರಿತ ಕೇರಳದ ಅನೇಕ ಸಂಘಟನೆಗಳು, ಮಲಬಾರ್ ಪ್ರಾಂತ್ಯದ ಆದ್ಯಂತ ಮೈದಾಹಿಟ್ಟಿನ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿದ್ದರು. ಮೈದಾ ವರ್ಜನ ಸಮಿತಿಯ ಪದಾಧಿಕಾರಿಗಳು ಇದರ ನೇತೃತ್ವವನ್ನು ವಹಿಸಿದ್ದರು. ತತ್ಪರಿಣಾಮವಾಗಿ ಕೇರಳದ ಬಹುತೇಕ ಹೋಟೆಲ್ ಮಾಲೀಕರು, ತಮ್ಮ ಆದಾಯಕ್ಕೆ ಕತ್ತರಿ ಬೀಳಲಿದ್ದರೂ,ಕೇರಳ ಪರೋಟದ ತಯಾರಿಕೆ ಮತ್ತು ಮಾರಾಟಗಳನ್ನೇ ನಿಲ್ಲಿಸಿದ್ದರು!.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು

Saturday, June 1, 2013

                             ಜ್ವರಪೀಡಿತ    ಕಂದನನ್ನು ಕಾಡಬಲ್ಲ ಸೆಳೆತಗಳು
ಜ್ವರಪೀಡಿತ ಮಕ್ಕಳಲ್ಲಿ ಅಕಸ್ಮಿಕವಾಗಿ ಉದ್ಭವಿಸುವ ಅಪಸ್ಮಾರದಂತಹ ಸೆಳೆತಗಳನ್ನು "ಬಾಲಗೃಹ"ದ ಪೀಡೆ ಎಂದು ನಂಬಿ,ಹಿರಿಯರ ಅಣತಿಯಂತೆ "ಚಿಹ್ನೆಯ ಮಾತ್ರೆ"ಯನ್ನು ನೀಡುವ ಮಾತೆಯರನ್ನು ನೀವೂ ಕಂಡಿರಬಹುದು. ಈ ರೀತಿಯ ಚಿಕಿತ್ಸೆಗಳಿಗೆ ತಪ್ಪುಕಲ್ಪನೆಗಳು ಅಥವಾ ಮೂಢನಂಬಿಕೆಗಳೇ ಕಾರಣ. ಈ ಬಗ್ಗೆ ಒಂದಿಷ್ಟು ವೈಜ್ಞಾನಿಕ ಮಾಹಿತಿ ಇಲ್ಲಿದೆ.
----------           -----------           -------------            -------------             ------------             ---------------      
ಕೆಲದಿನಗಳಿಂದ ಶೀತದಿಂದ ಬಳಲುತ್ತಿದ್ದ ಪುಟ್ಟಿಗೆ ಅಂದು ರಾತ್ರಿ ಕೆಂಡಾಮಂಡಲ ಜ್ವರ ಕಾಯಲಾರಂಭಿಸಿತ್ತು. ಜ್ವರದ ತಾಪಕ್ಕೆ ಏನೇನೋ ಬಡಬಡಿಸುತ್ತಿದ್ದ ಮಗುವಿನ ಸ್ಥಿತಿಯನ್ನು ಕಂಡು ಗಾಬರಿಯಾದ ಪದ್ಮಕ್ಕ ತನ್ನಲ್ಲಿದ್ದ ಶೀತದ ಮದ್ದನ್ನು ನೀಡಿ,ಗಂಡ ಮನೆಗೆ ಬಂದೊಡನೆ ಪುಟ್ಟಿಯನ್ನು ವೈದ್ಯರಲ್ಲಿ ಕರೆದೊಯ್ಯಲು ಸಿದ್ಧಳಾದಳು.
ತೊಡೆಯ ಮೇಲೆ ಮಗುವನ್ನು ಮಲಗಿಸಿ ಚಿಂತಾಕ್ರಾಂತಳಾಗಿ ಕುಳಿತಿದ್ದ ಪದ್ಮಕ್ಕನಿಗೆ ಆಕಸ್ಮಿಕವಾಗಿ ಪುಟ್ಟಿಯ ಕೈಕಾಲು ಮತ್ತು ಮತ್ತು ಶರೀರ ಸೆಟೆದುಕೊಂಡು,ಕಣ್ಣಾಲಿಗಳು ಮೇಲೆ ಹೋಗಿದ್ದುದನ್ನು ಕಂಡು ಹೃದಯವೇ ಬಾಯಿಗೆ ಬಂದಂತಾಗಿತ್ತು. ಅಷ್ಟರಲ್ಲೇ ಮಗುವಿನ ಮುಖವು ವಕ್ರವಾಗಿ,ಬಾಯಿಯಿಂದ ಒಂದಿಷ್ಟು ನೊರೆಯೊಂದಿಗೆ ಸಂಜೆ ನೀಡಿದ್ದ ಆಹಾರ ವಾಂತಿಯಾಗಿತ್ತು. ಜೊತೆಗೆ ಮಗುವಿನ ಗಂಟಲಿನಿಂದ ಗೊರಗೊರ ಸದ್ದು ಬರುತ್ತಿದ್ದು,ಶ್ವಾಸೋಚ್ವಾಸದ ಗತಿಯೂ ಬದಲಾಯಿತು. ಮರುಕ್ಷಣದಲ್ಲೇ ಸೆಟೆದುಕೊಂಡಿದ್ದ ಕೈ,ಕಾಲು ಹಾಗೂ ಶರೀರ ಮತ್ತು ವಕ್ರವಾಗಿದ್ದ ಬಾಯಿ ಸಡಿಲಗೊಂಡು, ಮಗು ನಿಶ್ಚೇಷ್ಟಿತವಾಯಿತು.
ಒಂದೆರಡು ನಿಮಿಷಗಳಲ್ಲೇ ನಡೆದುಹೊಗಿದ್ದ ಘಟನೆಯಿಂದ ಭಯಭೀತಳಾದ ಪದ್ಮಕ್ಕನು ನೆರೆಮನೆಯ ಶಾಂತಮ್ಮನನ್ನು ಜೋರಾಗಿ ಕೂಗಿ ಕರೆದಿದ್ದಳು. ತಕ್ಷಣ ಧಾವಿಸಿದ್ದ ಶಾಂತಮ್ಮನು, ಮಗುವನ್ನು ಎತ್ತಿಕೊಂಡು ಸಮೀಪದ ವೈದ್ಯರಲ್ಲಿಗೆ ಕರೆದೊಯ್ದಳು.
ಪುಟ್ಟಿಗೆ ತೊಡಿಸಿದ್ದ ಅಂಗಿಯ ಮೇಲೊಂದು ಸ್ವೆಟರ್,ತಲೆಗೊಂದು ಉಣ್ಣೆಯ ಟೋಪಿಯೊಂದಿಗೆ ಉಣ್ಣೆಯ ಶಾಲಿನಲ್ಲಿ ಸುತ್ತಿದ್ದ ಜ್ವರಪೀಡಿತ ಕಂದನನ್ನು ಕಂಡ ವೈದ್ಯರು ಸಿಟ್ಟಿಗೆದ್ದಿದ್ದರು. ಕ್ಷಣಮಾತ್ರದಲ್ಲಿ ಮಗುವಿನ ಬಟ್ಟೆಗಳನ್ನು ಕಿತ್ತೆಸೆದು,ವೇಗವಾಗಿ ತಿರುಗುವ ಫ್ಯಾನಿನ ಕೆಳಗೆ ಮಲಗಿಸಿ ತಣ್ಣೀರನ್ನು ಶರೀರದಾದ್ಯಂತ ಚಿಮುಕಿಸಿದ್ದರು. ಇದಕ್ಕೆ ಸ್ಪಂದಿಸಿದ ಪುಟ್ಟಿಯು ಒಂದೆರಡು ನಿಮಿಷಗಳ ಬಳಿಕ ಕಣ್ತೆರೆದಳು.
ಮಗುವಿನ ಶಾರೀರಿಕ ತಪಾಸಣೆಯನ್ನು ನಡೆಸಿದ ನಡೆಸಿದ ವೈದ್ಯರಿಗೆ ಪುಟ್ಟಿಯನ್ನು ಪೀಡಿಸಿದ್ದ ಸೆಳೆತಗಳಿಗೆ ಮಿತಿಮೀರಿದ ಜ್ವರವೇ  ಕಾರಣವೆಂದು ಖಚಿತವಾಗಿತ್ತು. ಅವಶ್ಯಕ ಔಷದಗಳನ್ನು ನೀಡಿದ ವೈದ್ಯರು ಇನ್ನುಮುಂದೆ ಮಗುವಿಗೆ ಜ್ವರಬಂದಲ್ಲಿ ಸ್ವೆಟರ್,ಟೋಪಿ ಮತ್ತು ಶಾಲುಗಳನ್ನು ಹೊದಿಸದೇ,ತಲೆ ಹಾಗೂ ಹಣೆಗೆ ತಣ್ಣೀರಿನ ಪಟ್ಟಿ ಅಥವಾ ಐಸ್ ಬ್ಯಾಗ್ ಇರಿಸಿ,ಫ್ಯಾನಿನ ಕೆಳಗೆ ಮಲಗಿಸಲು ಸೂಚಿಸಿದ್ದರು. ಜೊತೆಗೆ ಅಲ್ಪ ಪ್ರಮಾಣದ ಜ್ವರ ಬಾಧಿಸಿದರೂ ವಿಲಂಬಿಸದೇ,ಪಾರಾಸಿಟಮಾಲ್ ಔಷದವನ್ನು ಪ್ರತೀ ನಾಲ್ಕು ಘಂಟೆಗೊಮ್ಮೆ ನೀಡಿ ಅವಶ್ಯಕತೆ ಇದ್ದಲ್ಲಿ ವೈದ್ಯರ ಸಲಹೆ ಪಡೆಯುವಂತೆ ಎಚ್ಚರಿಕೆಯನ್ನು ನೀಡಿದ್ದರು.
ನಿಜ ಹೇಳಬೇಕಿದ್ದಲ್ಲಿ ಪುಟ್ಟಿಯನ್ನು ಬಾಧಿಸಿದ್ದ ಜ್ವರವು ಇನ್ನಷ್ಟು ಹೆಚ್ಚಲು ಪದ್ಮಕ್ಕನು ಆಕೆಗೆ ತೊಡಿಸಿದ್ದ ಉಣ್ಣೆಯ ಟೋಪಿ ಹಾಗೂ ಶಾಲು ಕಾರಣವಾಗಿತ್ತು. ತಮ್ಮ ಅಜ್ಞಾನದಿಂದಾಗಿ ಇಂತಹ ತಪ್ಪುಗಳನ್ನು ಎಸಗುವ ಬಹುತೇಕ ಮಾತಾಪಿತರು,ಇದನ್ನು ತಮ್ಮ ತಂದೆತಾಯಿ ಅಥವಾ ಅಜ್ಜ ಅಜ್ಜಿಯರಿಂದ ಕಲಿತಿರುತ್ತಾರೆ!.
ಫೆಬ್ರೈಲ್ ಕನ್ವಲ್ಶನ್ಸ್
ಅನೇಕ ವ್ಯಾಧಿಗಳ ಲಕ್ಷಣವಾಗಿರುವ ಜ್ವರವು ಪುಟ್ಟ ಮಕ್ಕಳನ್ನು ಬಾಧಿಸಿದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯದ ಅಥವಾ ಅನ್ಯ ಕಾರಣಗಳಿಂದಾಗಿ ಉಲ್ಬಣಿಸಿದಾಗ ಉದ್ಭವಿಸಬಲ್ಲ ಅಪಸ್ಮಾರದಂತಹ ಸೆಳೆತಗಳನ್ನು ವೈದ್ಯಕೀಯ ಪರಿಭಾಷೆಯಲ್ಲಿ "ಫೆಬ್ರೈಲ್ ಕನ್ವಲ್ಶನ್ಸ್" ಅಥವಾ ಸೀಝರ್ಸ್ ಎಂದು ಕರೆಯುತ್ತಾರೆ. ಎಳೆಯ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಈ ಸೆಳೆತಗಳಲ್ಲಿ ಶೇ. ೫೦ ರಷ್ಟು ಪ್ರಕರಣಗಳಿಗೆ ಅನಿಯಂತ್ರಿತ ಜ್ವರವೇ ಕಾರಣವಾಗಿರುತ್ತದೆ.
ನೂರಾರು ವರ್ಷಗಳ ಹಿಂದೆ ಇಂತಹ ಸಮಸ್ಯೆಗಳನ್ನು "ಬಾಲಗ್ರಹ"ದ ಪೀಡೆ ಎಂದೇ ಕರೆಯುತ್ತಿದ್ದರು. ಜೊತೆಗೆ ಇದನ್ನು ತಡೆಗಟ್ಟುವ ಹಾಗೂ ಗುಣಪಡಿಸುವ ಉದ್ದೇಶದಿಂದ "ಚಿಹ್ನೆಯ ಮಾತ್ರೆ"ಯನ್ನು ನೀಡುತ್ತಿದ್ದು,ಈ ಸಂಪ್ರದಾಯವು ಇಂದಿಗೂ ರೂಢಿಯಲ್ಲಿದೆ. ಇಷ್ಟುಮಾತ್ರವಲ್ಲ,ಹುಣ್ಣಿಮೆ,ಅಮಾವಾಸ್ಯೆ,ಮಂಗಳ ಹಾಗೂ ಆದಿತ್ಯವಾರಗಳಂದು ತಮ್ಮ ಕಂದನಿಗೆ ಈ ಮಾತ್ರೆಯನ್ನು ತಪ್ಪದೆ ನೀಡಿದಲ್ಲಿ,ಬಾಲಗ್ರಹ-ಕಫಬಾಧೆಯಂತಹ ಸಮಸ್ಯೆಗಳಿಂದ ರಕ್ಷಿಸುವುದು ಮತ್ತು ಗುಣಪಡಿಸುವುದೆಂದು ಅನೇಕರು ಇಂದಿಗೂ ನಂಬಿದ್ದಾರೆ!.
ಜನಸಾಮಾನ್ಯರು "ಫಿಟ್ಸ್"ಎಂದು ಕರೆಯುವ ಸೆಳೆತಗಳಿಗೆ ಅಪಸ್ಮಾರ ವ್ಯಾಧಿಯೊಂದೇ ಕಾರಣವಲ್ಲ. ಮೆದುಳು ಅಥವಾ ಮೆದುಳಿನ ಪರೆಯ ಉರಿಯೂತ,ಮೆದುಳಿನ ಆಘಾತ,ಅಪಘಾತಗಳ ಸಂದರ್ಭದಲ್ಲಿ ತಗಲಿರಬಹುದಾದ ಏಟು,ಧನುರ್ವಾತ,ಮೂತ್ರಪಿಂಡಗಳ ಉರಿಯೂತ,ರಕ್ತದಲ್ಲಿನ ಸಕ್ಕರೆಯ ಅಂಶವು ಹಠಾತ್ತಾಗಿ ಕುಸಿಯುವುದೇ ಮುಂತಾದ ಸಂದರ್ಭಗಳಲ್ಲೂ ಸೆಳೆತಗಳು ಉದ್ಭವಿಸುವ ಸಾಧ್ಯತೆಗಳಿವೆ.
ಆದರೆ ಜ್ವರಪೀಡಿತ ಮಕ್ಕಳಲ್ಲಿ ಅದರಲ್ಲೂ ೧೨ ರಿಂದ ೧೮ ತಿಂಗಳ ವಯೋಮಾನದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸೆಳೆತಗಳು, ಈ ಮಕ್ಕಳಿಗೆ ೫ ರಿಂದ ೬ ವರ್ಷ ವಯಸ್ಸಾಗುವಾಗ ಮಾಯವಾಗುತ್ತವೆ.ತೀವ್ರವಾದ  ಜ್ವರದಿಂದ ಬಳಲುವ ಶೇ. ೩ ರಿಂದ ೪ ರಷ್ಟು ಮಕ್ಕಳಲ್ಲಿ ಸೆಳೆತಗಳು ಕಂಡುಬರುತ್ತವೆ. ಜೊತೆಗೆ ಈ ಸಮಸ್ಯೆಯಿಂದ ಬಳಲುವ ಶೇ. ೫೦ ರಷ್ಟು ಮಕ್ಕಳಲ್ಲಿ ಇದು ಅನುವಂಶಿಕವಾಗಿ ಬಂದಿರುತ್ತದೆ. ಅರ್ಥಾತ್ ಈ ಮಕ್ಕಳ ತಂದೆ-ತಾಯಿಯರ ಕುಟುಂಬಗಳ ಸದಸ್ಯರಲ್ಲಿ ಇದ್ದಿರಬಹುದಾದ ಈ ತೊಂದರೆಯು, ಹಿರಿಯರ ವಂಶವಾಹಿನಿಗಳ ಮೂಲಕ ಮುಂದಿನ ಸಂತತಿಯನ್ನು ಬಾಧಿಸುತ್ತದೆ.
ಸಾಮಾನ್ಯವಾಗಿ ಹಠಾತ್ತಾಗಿ ಏರುವ ಜ್ವರವೇ ಸೆಳೆತಗಳಿಗೆ ಕಾರಣವೆನಿಸುವುದಾದರೂ, ಕೆಲಮಕ್ಕಳಲ್ಲಿ ಅಲ್ಪಪ್ರಮಾಣದ ಜ್ವರ ಬಾಧಿಸಿದಾಗಲೂ ಸೆಳೆತಗಳು ಉದ್ಭವಿಸುವುದು ಅಪರೂಪವೇನಲ್ಲ. ಇನ್ನು ಕೆಲವರಲ್ಲಿ ಸೆಳೆತಗಳು ಪ್ರತ್ಯಕ್ಷವಾದ ಬಳಿಕವೇ ಜ್ವರ ಕಾಣಿಸಿಕೊಳ್ಳುವುದು. ಇಂತಹ ಸಂದರ್ಭಗಳಲ್ಲಿ ತಮ್ಮ ಮಗುವಿಗೆ ಜ್ವರ ಬಂದಿರುವುದರ ಅರಿವು ಮಾತಾಪಿತರಿಗೆ ಇಲ್ಲದಿರುವುದು ಕೂಡಾ ಇದಕ್ಕೆ ಕಾರಣವೆನಿಸೀತು.
ಪುಟ್ಟ ಮಕ್ಕಳಿಗೆ ಜ್ವರ ಬಾಧಿಸಿದ ೬ ರಿಂದ ೮ ಗಂಟೆಗಳ ಅವಧಿಯಲ್ಲಿ ಹೆಚ್ಚಾಗಿ ಕಂಡುಬರುವ ಸೆಳೆತಗಳು,೨೪ ಗಂಟೆಗಳ ಬಳಿಕ ಬಾಧಿಸುವ ಸಾಧ್ಯತೆಗಳೇ ಕಡಿಮೆ. ಜ್ವರಪೀಡಿತ ಮಕ್ಕಳಲ್ಲಿ ಕಂಡುಬರುವ ಫಿಟ್ಸ್, ಮಗುವಿನ ದೇಹದ ಒಂದುಭಾಗದಲ್ಲಿ ಅಥವಾ ಸಂಪೂರ್ಣ ಶರೀರದಲ್ಲಿ ಕಾಣಿಸಿಕೊಳ್ಳಬಹುದು. ಜೊತೆಗೆ ಕೆಲವೇ ಸೆಕೆಂಡುಗಳಿಂದ ಹಿಡಿದು ಹತ್ತಾರು ನಿಮಿಷಗಳ ಕಾಲ ಬಾಧಿಸಬಲ್ಲ ಇಂತಹ ಸೆಳೆತಗಳನ್ನು "ಫೋಕಲ್ ಕನ್ವಲ್ಶನ್ಸ್"ಎನ್ನುತ್ತಾರೆ. ಆದರೆ ಅಪರೂಪದಲ್ಲಿ ಕಾಣಸಿಗುವ,೧೫ ನಿಮಿಷಗಳಿಗೂ ಅಧಿಕ ಸಮಯ ಬಾಧಿಸುವ ಸೆಳೆತವನ್ನು ನಿರ್ಲಕ್ಷಿಸದೇ, ಇದರ ಮೂಲವನ್ನು ಪತ್ತೆಹಚ್ಚಿ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಅನೇಕ ವೈರಸ್ ಗಳ ಸೋಂಕಿನಿಂದ ಉದ್ಭವಿಸಿ ಉಲ್ಬಣಿಸುವ ಜ್ವರದಲ್ಲೂ ದೀರ್ಘಾವಧಿ ಫಿಟ್ಸ್ ಕಂಡುಬರುತ್ತದೆ.
೧೫ ನಿಮಿಷಗಳಿಗಿಂತ ಅಧಿಕ ಸಮಯ ಫಿಟ್ಸ್ ಬಾಧಿಸುತ್ತಿದ್ದಲ್ಲಿ ಅಥವಾ ನಿಮ್ಮ ಕಂದನಿಗೆ ಪದೇಪದೇ ಈ ತೊಂದರೆ ಮರುಕಳಿಸುತ್ತಿದ್ದಲ್ಲಿ ಹಾಗೂ ನಿಮ್ಮ ಕುಟುಂಬದ ಹಿರಿಯರಿಗೆ ಅಪಸ್ಮಾರ ರೋಗವಿದ್ದಲ್ಲಿ ಮತ್ತು  ೯ ತಿಂಗಳಿಗೂ ಕಡಿಮೆ ವಯಸ್ಸಿನ ಹಸುಗೂಸಿಗೆ ಫಿಟ್ಸ್ ಬರುತ್ತಿದ್ದಲ್ಲಿ ಇ. ಇ. ಜಿ ಪರೀಕ್ಷೆಯನ್ನು ಮಾಡಿಸಬೇಕಾಗುವುದು. ಈ ಪರೀಕ್ಷೆಯಿಂದ ಮೆದುಳಿನ ನರಗಳಲ್ಲಿನ ವಿದ್ಯುನ್ಮಾನಗಳ ವ್ಯತ್ಯಯವನ್ನು ಸುಲಭವಾಗಿಯೇ ಪತ್ತೆಹಚ್ಚಬಹುದು. ಇದರೊಂದಿಗೆ ಮಕ್ಕಳ ಮೆದುಳಿನ ನರಗಳಲ್ಲಿನ ನ್ಯೂನತೆಗಳನ್ನು ಸಮರ್ಥಿಸಬಲ್ಲ ಪುರಾವೆಗಳನ್ನು ಕೂಡಾ ಅರಿತುಕೊಳ್ಳಬಹುದು. ಈ ಪರೀಕ್ಷೆಯ ಮೂಲಕ ಪತ್ತೆ ಹಚ್ಚಿದ ವಿಶಿಷ್ಟ ರೀತಿಯ ಅಸಮಾನತೆಗಳಿರುವ ಗಣನೀಯ ಪ್ರಮಾಣದ ಮಕ್ಕಳು ಮುಂದೆ ಅಪಸ್ಮಾರದಿಂದ ಬಳಲುತ್ತಾರೆ.
ಸಾಮಾನ್ಯವಾಗಿ ಜ್ವರದಿಂದ ಬರುವ ಸೆಳೆತಗಳು ಅಪರೂಪದಲ್ಲಿ ಬಾಧಿಸುತ್ತವೆ. ಇಂತಹ ಮಕ್ಕಳಲ್ಲಿ ಮುಂದೆ ಎಂದಾದರೂ ಜ್ವರ ಬಂದಲ್ಲಿ ಮತ್ತೆ ಮರುಕಳಿಸುವ ಸಾಧ್ಯತೆಗಳೂ ಇವೆ. ಅಧಿಕತಮ ಮಕ್ಕಳಲ್ಲಿ ಐದಾರು ವರ್ಷ ವಯಸ್ಸಿನಲ್ಲಿ ಮಾಯವಾಗುವ ಈ ಸಮಸ್ಯೆಯನ್ನು ನಿರ್ಲಕ್ಷಿಸುವುದು ಹಿತಕರವಲ್ಲ. ಇಂತಹ ಸೆಳೆತಗಳೊಂದಿಗೆ ಮೆದುಳಿನ ಉರಿಯೂತ ಅಥವಾ ಮೆದುಳಿಗೆ ಹಾನಿಯಾಗಿರುವುದು ಪತ್ತೆಯಾದಲ್ಲಿ ಹಾಗೂ ಇಂತಹ ಸಮಸ್ಯೆಗಳು ಇಲ್ಲದ ಮಕ್ಕಳಲ್ಲಿ ಪದೇಪದೇ ಮರುಕಳಿಸುವ ಸೆಳೆತಗಳ ಸಮಸ್ಯೆಯನ್ನು ತಜ್ಞವೈದ್ಯರ ಸಲಹೆ ಮತ್ತು ಚಿಕಿತ್ಸೆಯಿಂದ ನಿಯಂತ್ರಿಸಬಹುದಾಗಿದೆ.
ಮುಂಜಾಗರೂಕತೆ -ಚಿಕಿತ್ಸೆ
ಕೇವಲ ಜ್ವರ ಬಾಧಿಸಿದಾಗ ಮಾತ್ರ ವಿಸುವ ಸೆಳೆತಗಳ ಬಗ್ಗೆ ಅನಾವಶ್ಯಕವಾಗಿ ಗಾಬರಿಪಡದೇ,ಮಗುವಿಗೆ ತೊಡಿಸಿರಬಹುದಾದ ಬಿಗಿಯಾದ ಉಡುಪುಗಳನ್ನು ತೆಗೆದು ಉಸಿರಾಟಕ್ಕೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು. ಮಗುವನ್ನು ಅಂಗಾತ ಮಲಗಿಸದೇ ಒಂದು ಮಗ್ಗುಲಾಗಿ ಮಲಗಿಸಿ,ತಲೆಗೆ ಐಸ್ ಬ್ಯಾಗ್ ಅಥವಾ ತಣ್ಣೀರಿನ ಪಟ್ಟಿಯನ್ನು ಇರಿಸಬೇಕು. ಜ್ವರದ ತೀವ್ರತೆ ಹೆಚ್ಚಾಗಿದ್ದಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಅಥವಾ ಫ್ಯಾನಿನ ಗಾಳಿ ಬೀಳುವಲ್ಲಿ ಮಲಗಿಸಿ ಸಂಪೂರ್ಣ ಶರೀರವನ್ನು ಒದ್ದೆ ಬಟ್ಟೆಯಿಂದ ಒರೆಸುತ್ತಿರಬೇಕು.
ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಕ್ಕಳ ಬಾಯಿಯಲ್ಲಿ ಔಷದ ಅಥವಾ ನೀರನ್ನು ಹಾಕಬಾರದು. ಇಂತಹ ಸಂದರ್ಭದಲ್ಲಿ ಜ್ವರ ನಿವಾರಕ ಹಾಗೂ ಸೆಳೆತಗಳ ಶಮನಕ್ಕಾಗಿ ನೀಡಲೇ ಬೇಕಾಗುವ ಔಷದಗಳನ್ನು ಗುದದ್ವಾರದ ಮೂಲಕ ನೀಡಬಹುದಾದ "ಸಪೋಸಿಟರೀಸ್ "ಗಳ ರೂಪದಲ್ಲಿ ಬಳಸಬಹುದು. ಇತರ ಔಷದಗಳನ್ನು ಮಗುವಿಗೆ ಪ್ರಜ್ಞೆ ಮರುಕಳಿಸಿದ ಬಳಿಕವೇ ನೀಡಬೇಕು. ಈ ಉಪಕ್ರಮಗಳಿಂದಲೂ ಜ್ವರ ಮತ್ತು ಸೆಳೆತಗಳು ಶಮನಗೊಳ್ಳದೆ ಇದ್ದಲ್ಲಿ, ಸುಸಜ್ಜಿತ ಆಸ್ಪತ್ರೆಯಲ್ಲಿ ದಾಖಲಿಸಿ ತುರ್ತು ಚಿಕಿತ್ಸೆಯನ್ನು ನೀಡಬೇಕಾಗುವುದು. 
 
ಡಾ. ಸಿ . ನಿತ್ಯಾನಂದ ಪೈ,ಪುತ್ತೂರು