Saturday, June 29, 2013


         ಜುಲೈ 1, ರಾಷ್ಟ್ರೀಯ ವೈದ್ಯರ ದಿನಾಚರಣೆ
ಅನಾದಿ ಕಾಲದಿಂದ ನಿಮ್ಮ ಕುಟುಂಬದ ಸದಸ್ಯರ ಯೋಗಕ್ಷೇಮದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ವೈದ್ಯರ ಸೇವೆಯನ್ನು ಸ್ಮರಿಸಿ,ಕೃತಜ್ಞತೆಗಳನ್ನು ಸಲ್ಲಿಸಲು ಜುಲೈ 1 ಪ್ರಶಸ್ತವಾದ ದಿನ." ರಾಷ್ಟ್ರೀಯ ವೈದ್ಯರ ದಿನ "ದಂದು ನಿಮ್ಮ ಆರೋಗ್ಯದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಹಾಗೂ ನಿಮ್ಮ ಆಪ್ತ ಮಿತ್ರರೂ ಆಗಿರುವ ವೈದ್ಯರಿಗೆ,ನಿಮ್ಮ ಪ್ರೀತಿ-ವಿಶ್ವಾಸಗಳ ದ್ಯೋತಕವಾಗಿ ಇಂದು ಶುಭಕಾಮನೆಗಳನ್ನು ಸಲ್ಲಿಸುವುದನ್ನು ಮರೆಯದಿರಿ.
ರಾಷ್ಟ್ರೀಯ ವೈದ್ಯರ ದಿನಾಚರಣೆ
ಅಪ್ರತಿಮ ವೈದ್ಯ ಹಾಗೂ ಮಹಾನ್ ರಾಜಕಾರಣಿ ಎಂದೇ ಸುಪ್ರಸಿದ್ಧರಾಗಿದ್ದ ದಿ. ಡಾ. ಬಿ. ಸಿ. ರಾಯ್ ಇವರ ಜನ್ಮದಿನವನ್ನು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತ ಸರಕಾರವು ಡಾ. ರಾಯ್ ಇವರು ವೈದ್ಯಕೀಯ  ಕ್ಷೇತ್ರದಲ್ಲಿ ಸಲ್ಲಿಸಿದ್ದ ಸೇವೆಯನ್ನು ಗುರುತಿಸಿ,ಅವರ ಜನ್ಮದಿನವನ್ನು (ಇದು ಅವರು ಮೃತರಾದ ದಿನವೂ ಆಗಿದೆ) ವೈದ್ಯರ ದಿನವನ್ನಾಗಿ ಆಚರಿಸಲು 1991ರಲ್ಲಿ ನಿರ್ಧರಿಸಿತ್ತು.
1882,ಜುಲೈ 1 ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ್ದ ಡಾ. ಬಿಧಾನ ಚಂದ್ರ ರಾಯ್,ಕೊಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದ ಬಳಿಕ,ಇಂಗ್ಲೆಂಡ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು. 1911ರಲ್ಲಿ ಭಾರತಕ್ಕೆ ಮರಳಿ,ಕೊಲ್ಕತಾದ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು.
ಮಹಾತ್ಮಾ ಗಾಂಧಿಯವರಿಂದ ಪ್ರಭಾವಿತರಾಗಿದ್ದ ಡಾ. ರಾಯ್,ಸ್ವಾತಂತ್ರ್ಯ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ತದನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ 14 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದರು.
ರಾಜಕೀಯ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಡಾ. ರಾಯ್ ಇವರ ಮಹೋನ್ನತ ಸಾಧನೆಯನ್ನು ಗುರುತಿಸಿದ್ದ ಕೇಂದ್ರ ಸರಕಾರವು,1961ರಲ್ಲಿ ಇವರಿಗೆ "ಭಾರತ ರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
1962 ರ ಜುಲೈ 1 ರಂದು,ಅರ್ಥಾತ್ ತಮ್ಮ ಜನ್ಮದಿನದಂದೇ ವಿಧಿವಶರಾಗಿದ್ದ ಡಾ. ರಾಯ್ ಇವರ ಸ್ಮರಣಾರ್ಥ,ವೈದ್ಯಕೀಯ ಕ್ಷೇತ್ರದಲ್ಲಿ ಮಹೋನ್ನತ ಸಾಧನೆಗೈದ ಭಾರತೀಯರಿಗೆ ರಾಷ್ಟ್ರಮಟ್ಟದ ಪುರಸ್ಕಾರವನ್ನು ನೀಡುವ ಸಂಪ್ರದಾಯವನ್ನು 1976 ರಲ್ಲಿ ಆರಂಭಿಸಿದ್ದು,ಇಂದಿಗೂ ಮುಂದುವರೆದಿದೆ.
 
     ಆಧುನಿಕ ಜೀವನ ಶೈಲಿ ಮತ್ತು ಅನಾರೋಗ್ಯ
 
ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಧ್ಯಯನ ಮತ್ತು ಸಂಶೋಧನೆಗಳ ಫಲವಾಗಿ ಮನುಷ್ಯನ ಸರಾಸರಿ ಆಯುಷ್ಯದ ಅವಧಿಯು ಹೆಚ್ಚಿದೆ. ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ಕೆಲವೊಂದು ಮಾರಕ ವ್ಯಾಧಿಗಳನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಗಳು ಹಾಗೂ ಔಷಧಗಳು,ವಿನೂತನ ಚಿಕಿತ್ಸಾ ವಿಧಾನಗಳು,ಪರಿಣಾಮಕಾರೀ ಶಸ್ತ್ರಚಿಕಿತ್ಸೆಗಳು,ವಿವಿಧ ರೋಗಗಳನ್ನು ನಿಖರವಾಗಿ ಪತ್ತೆಹಚ್ಚಬಲ್ಲ ಪರೀಕ್ಷೆಗಳು,ಅತ್ಯಾಧುನಿಕ ಮತ್ತು ಪ್ರಬಲ ಔಷಧಗಳ ಸಂಶೋಧನೆಯಿಂದಾಗಿ, ರೋಗಿಗಳ ಅಕಾಲಿಕ ಮರಣದ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ನಾವಿಂದು ಅನುಕರಿಸುತ್ತಿರುವ ಪಾಶ್ಚಾತ್ಯರ ಜೀವನಶೈಲಿ,ನಿಷ್ಕ್ರಿಯತೆ,ಅತಿಯಾಗಿ ಸೇವಿಸುವ  ನಿರುಪಯುಕ್ತ ಆಹಾರಗಳು (junk food),ಸೇವಿಸುತ್ತಿರುವ ಆಹಾರಪದಾರ್ಥಗಳಲ್ಲಿ ಸೇರಿರುವ ಕೀಟನಾಶಕಗಳು,ಹೆಚ್ಚುತ್ತಿರುವ ಜನ-ವಾಹನಗಳ ಸಂಖ್ಯೆಯಿಂದಾಗಿ ಸಂಭವಿಸುತ್ತಿರುವ ಪರಿಸರ ಪ್ರದೂಷಣೆ,ಬಳಸಿ ಎಸೆಯುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳು,ಕಾರಣಾಂತರಗಳಿಂದ ಕಾಡುವ ಜಾಗತಿಕ ತಾಪಮಾನದ ಹೆಚ್ಚಳ ಮತ್ತು ತತ್ಪರಿಣಾಮವಾಗಿ ಸಂಭವಿಸುತ್ತಿರುವ ಅತಿವೃಷ್ಟಿ-ಅನಾವೃಷ್ಟಿಗಳಂತಹ ಪ್ರಾಕೃತಿಕ ವಿಕೋಪಗಳು ನಮ್ಮ ನಿಮ್ಮೆಲ್ಲರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮವನ್ನು ಬೀರುತ್ತಿವೆ. ಇದರೊಂದಿಗೆ ಅನುವಂಶಿಕತೆ,ತೀವ್ರ ಮಾನಸಿಕ ಒತ್ತಡ,ದುಶ್ಚಟಗಳು,ಮಾದಕ ದ್ರವ್ಯಗಳ ಸೇವನೆಯಂತಹ ಸಮಸ್ಯೆಗಳು ಇನ್ನಷ್ಟು ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತಿವೆ.
ಇಷ್ಟೆಲ್ಲಾ ಸಾಲದೆನ್ನುವಂತೆ ಸಾಂಕ್ರಾಮಿಕವಾಗಿ ತ್ವರಿತಗತಿಯಲ್ಲಿ ಹರಡಬಲ್ಲ ಚಿಕುನ್ ಗುನ್ಯಾ,ಡೆಂಗೆ,ಮತ್ತು ಫ್ಲೂ ಜ್ವರಗಳಂತಹ ಅಪಾಯಕಾರಿ ಕಾಯಿಲೆಗಳ ಹಾವಳಿ ವೃದ್ಧಿಸುತ್ತಿದೆ.
ಕೆಲವೇ ದಶಕಗಳ ಹಿಂದೆ ಮಧ್ಯವಯಸ್ಸು ಕಳೆದ ಬಳಿಕ ಪ್ರತ್ಯಕ್ಷವಾಗುತ್ತಿದ್ದ ಮಧುಮೇಹ,ಅಧಿಕ ರಕ್ತದೊತ್ತಡ,ಪಕ್ಷಾಘಾತ ಹಾಗೂ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು ಇತ್ತೀಚಿನ ಕೆಲವರ್ಷಗಳಿಂದ ಯೌವನಸ್ಥರಲ್ಲಿ ಪತ್ತೆಯಾಗುತ್ತಿವೆ. ಅಂತೆಯೇ ವಿವಿಧ ರೀತಿಯ ಕ್ಯಾನ್ಸರ್ ವ್ಯಾಧಿಯ ಮತ್ತು ಇವುಗಳಿಗೆ ಬಲಿಯಾಗುತ್ತಿರುವವರ  ಪ್ರಮಾಣವು ದಿನೇ ದಿನೇ ಹೆಚ್ಚುತ್ತಲೇ ಇದೆ. ವಿಶ್ವ ಆರೋಗ್ಯ ಸಂಸ್ಥೆಯು ಸಾಂಕ್ರಾಮಿಕವಾಗಿ ಹರಡದ ಇಂತಹ ಕಾಯಿಲೆಗಳ ಸಂಭಾವ್ಯತೆಯನ್ನು ನಿಯಂತ್ರಿಸಲು ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳು ಸನ್ನದ್ಧವಾಗುವಂತೆ ಕರೆನೀಡಿದೆ. ಆದರೆ ಇವೆಲ್ಲವೂ "ಗೋರ್ಕಲ್ಲ ಮೇಲೆ ನೀರನ್ನು ಸುರಿದಂತೆ" ವ್ಯರ್ಥವೆನಿಸುತ್ತಿದೆ.
ಪರಿಹಾರವೇನು?
ಸಹಸ್ರಾರು ವರ್ಷಗಳ ಹಿಂದೆ ಆಯುರ್ವೇದ ಸಂಹಿತೆಗಳಲ್ಲಿ ಉಲ್ಲೇಖಿಸಿರುವ "ದಿನಚರ್ಯೆ" ಯನ್ನು ಪರಿಪಾಲಿಸುವುದು ನಿಶ್ಚಿತವಾಗಿಯೂ ನಮ್ಮ ಆರೋಗ್ಯವನ್ನು ಉನ್ನತಸ್ತರದಲ್ಲಿ ಕಾಪಾಡಿಕೊಳ್ಳಲು ಉಪಯುಕ್ತವೆನಿಸಬಲ್ಲದು. ಶಿಸ್ತುಬದ್ಧ ಹಾಗೂ ಆರೋಗ್ಯದಾಯಕ ಜೀವನಶೈಲಿಯ ಪರಿಪಾಲನೆ, ಈ ವಿಚಾರದಲ್ಲಿ ನಿಸ್ಸಂದೇಹವಾಗಿಯೂ ನಿರ್ಣಾಯಕ ಪಾತ್ರವನ್ನು ನಿರ್ವಹಿಸುವುದು.
ಸಕ್ರಿಯ ಜೀವನಶೈಲಿ, ಸಮತೋಲಿತ ಆಹಾರ ಸೇವನೆ,ಪ್ರತಿನಿತ್ಯ ನಡಿಗೆ,ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು,ಮಾನಸಿಕ ಒತ್ತಡವನ್ನು ದೂರವಿರಿಸಲು ಪ್ರಾಣಾಯಾಮ,ಯೋಗ,ಧ್ಯಾನಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಸಂಗೀತವನ್ನು ಆಲಿಸುವುದು,ಪುಸ್ತಕಗಳನ್ನು ಓದುವುದು,ಮನೆಯಂಗಳದಲ್ಲಿ ಕೈತೋಟವನ್ನು ನಿರ್ಮಿಸುವುದೇ ಮುಂತಾದ ಚಟುವಟಿಕೆಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭಸಾಧ್ಯವೂ ಹೌದು.
ಇವೆಲ್ಲಕ್ಕೂ ಮಿಗಿಲಾಗಿ ದುರಭ್ಯ್ಯಾಸ-ದುಶ್ಚಟಗಳಿಂದ ದೂರವಿರುವುದು,ಮದ್ಯ-ಮಾದಕ ಪದಾರ್ಥಗಳ ಸೇವನೆಯ ಚಟವನ್ನು ಅಭ್ಯಾಸ ಮಾಡದಿರುವುದು,ನಿಗದಿತ ಸಮಯದಲ್ಲಿ ಮಲಗುವ ಮತ್ತು ಬೆಳಗಿನ ಜಾವದಲ್ಲಿ ಏಳುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು,ಸೂಕ್ತ ಸಮಯದಲ್ಲಿ ಹಾಗೂ ಸೂಕ್ತ ಪ್ರಮಾಣದ ಆಹಾರವನ್ನು ಸೇವಿಸುವುದು ಮತ್ತು ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿ ಇರಿಸುವುದರಿಂದ 
 ನಿಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಕಾಪಾಡಬಹುದು.
ಇದಲ್ಲದೇ ಅಪಾಯಕಾರಿ ಅಥವಾ ಮಾರಕ ಕಾಯಿಲೆಗಳಿಂದ ನಿಶ್ಚಿತವಾಗಿ ರಕ್ಷಿಸಬಲ್ಲ "ಲಸಿಕೆ"ಗಳನ್ನು ನಿಮ್ಮ ಮಕ್ಕಳಿಗೆ ತಪ್ಪದೆ ಕೊಡಿಸುವುದರಿಂದ,ಹಲವಾರು ವ್ಯಾಧಿಗಳನ್ನು ದೂರವಿರಿಸಬಹುದು. ಜೊತೆಗೆ ಯಾವುದೇ ಕಾಯಿಲೆ ಬಾಧಿಸಿದಾಗ ಅದನ್ನು ನಿರ್ಲಕ್ಷಿಸದೇ,ಪರಿಚಿತ ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಹಿತಕರ ಎನಿಸುವುದು.
ಕೊನೆಯದಾಗಿ ಹೇಳುವುದಾದಲ್ಲಿ,ಕೈತುಂಬಾ ಹಣವನ್ನು ಗಳಿಸುವ ಆತುರದಲ್ಲಿ ಹಗಲಿರುಳು ದುಡಿದು ಕಳೆದುಕೊಂಡ ಆರೋಗ್ಯವನ್ನು ಮರಳಿಗಳಿಸಲು,ಕಷ್ಟಪಟ್ಟು ಸಂಪಾದಿಸಿದ್ದ ಹಣವನ್ನು  ಕಳೆದುಕೊಂಡು ಪರಿತಪಿಸದಿರಿ!.
ಆರೋಗ್ಯವೇ ಭಾಗ್ಯ ಎನ್ನುವ ಮುತ್ತಿನಂತಹ ಮಾತುಗಳನ್ನು ಎಂದೂ ಮರೆಯದಿರಿ.
 
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು
  

No comments:

Post a Comment