Thursday, July 4, 2013

Navajaata shishugala marana.......




           ನವಜಾತ ಶಿಶುಗಳ ಮರಣದ ಪ್ರಮಾಣ:ಭಾರತಕ್ಕೆ ಅಗ್ರಸ್ಥಾನ!

ಅಭಿವೃದ್ಧಿಶೀಲ  ರಾಷ್ಟ್ರಗಳ ಯಾದಿಯಲ್ಲಿ ಮುಂಚೂಣಿಯಲ್ಲಿರುವ ಭಾರತವು,ಜಾಗತಿಕ ಮಟ್ಟದಲ್ಲಿ ನವಜಾತ ಶಿಶುಗಳ ಮರಣದ ವಿಚಾರದಲ್ಲೂ ಅಗ್ರಸ್ಥಾನದಲ್ಲಿದೆ. ಅಂತರ ರಾಷ್ಟ್ರೀಯ ಮಟ್ಟದ ಸರಕಾರೇತರ ಸೇವಾ ಸಂಸ್ಥೆ "ಸೇವ್ ದ ಚಿಲ್ಡ್ರನ್" ಇತ್ತೀಚಿಗೆ ಬಹಿರಂಗಗೊಳಿಸಿರುವ ಮಾಹಿತಿಯಂತೆ,ಜನಿಸಿದ ದಿನದಂದೇ ಮೃತಪಡುವ ಶಿಶುಗಳ ಸಂಖ್ಯೆಯು ಭಾರತದಲ್ಲಿ ಅತ್ಯಧಿಕವಾಗಿದೆ. ಇಷ್ಟು ಮಾತ್ರವಲ್ಲ, ತನ್ನ ಕಂದನಿಗೆ ಜನ್ಮ ನೀಡಿದಂದೇ ಮೃತಪಡುವ ಮಾತೆಯರ ಸಂಖ್ಯೆಯು ನಮ್ಮ ದೇಶದಲ್ಲಿ ಅತಿಯಾಗಿದ್ದು, ನಾವೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. 
ಪುಟ್ಟ ಕೂಸೊಂದು ತಾಯಿಯ ಗರ್ಭದಿಂದ ಈ ಧರೆಗೆ ಇಳಿದುಬಂದ ದಿನವು ಅತ್ಯಂತ ಅಪಾಯಕಾರಿ ಅವಧಿಯಾಗಿದ್ದು,ಈ ಸಂದರ್ಭದಲ್ಲಿ ಉಸಿರಾಟದ ಸಮಸ್ಯೆಗಳು, ಅಪಕ್ವ ಮತ್ತು ಅಶಕ್ತ ಶರೀರಗಳು ಶಿಶುವಿನ ಮರಣಕ್ಕೆ ಕಾರಣವೆನಿಸುತ್ತವೆ. ಅಂತೆಯೇ ಶಿಶುವಿಗೆ ಜನ್ಮನೀಡಿದಂದು ಮೃತಪಡುವ ಮಾತೆಯರ ಮರಣಕ್ಕೆ, ಹೆರಿಗೆಯ ಸಂದರ್ಭದಲ್ಲಿ ಸಂಭವಿಸುವ ಅತಿಯಾದ ರಕ್ತಸ್ರಾವವೇ ಪ್ರಮುಖ ಕಾರಣವೆನಿಸುತ್ತದೆ.
ಅಪೌಷ್ಟಿಕತೆ ಮತ್ತು ತತ್ಸಂಬಂಧಿತ ಆರೋಗ್ಯದ ಸಮಸ್ಯೆಗಳಿಂದಾಗಿ, ಜನಿಸಿದ ಒಂದು ವರ್ಷದೊಳಗೆ ಮೃತಪಡುವ ಶಿಶುಗಳ ವಿಚಾರವು ಗತವರ್ಷದಲ್ಲಿ ದೇಶಾದ್ಯಂತ ಸಾಕಷ್ಟು ಚರ್ಚೆಗಳಿಗೆ ಗ್ರಾಸವೆನಿಸಿತ್ತು. ಭಾರತದ ವಿವಿಧ ರಾಜ್ಯಗಳಲ್ಲಿ ಪತ್ತೆಯಾಗಿದ್ದ ಇಂತಹ ಅಸಂಖ್ಯ ಪ್ರಕರಣಗಳ ಬಗ್ಗೆ ತನಿಖೆಯನ್ನೂ ನಡೆಸಲಾಗಿತ್ತು. ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ ಸುದ್ದಿಗಳು ಮಾಧ್ಯಮಗಳಲ್ಲಿ ಬಿತ್ತರಿಸಲ್ಪಟ್ಟಿತ್ತು. ತತ್ಪರಿಣಾಮವಾಗಿ ಎಚ್ಚೆತ್ತ ಕೇಂದ್ರಸರಕಾರವು, ಈ ಗಂಭೀರ ಸಮಸ್ಯೆಯನ್ನು ಬಗೆಹರಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಸರಕಾರಗಳಿಗೆ ಆದೇಶಿಸಿತ್ತು. 
ಕುಪೋಷಣೆಯೇ ಭಾರತದಿಂದ ತೊಲಗು,ಎನ್ನುವ ಕಿರುಜಾಹೀರಾತು ಇಂದಿಗೂ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಆದರೆ ಕ್ವಿಟ್ ಇಂಡಿಯಾ ಚಳವಳಿಯ ಪರಿಣಾಮವಾಗಿ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿದಷ್ಟು ಸುಲಭವಾಗಿ ಅಪೌಷ್ಟಿಕತೆಯನ್ನು ತೊಲಗಿಸುವುದು ಅಸಾಧ್ಯವೂ ಹೌದು.
ಅಗ್ರಸ್ಥಾನದಲ್ಲಿ ಭಾರತ 
ಸರಕಾರೇತರ ಸಂಸ್ಥೆಯಾಗಿರುವ "ಸೇವ್ ದ ಚಿಲ್ಡ್ರನ್" ನ ವರದಿಯಂತೆ,ನವಜಾತ ಶಿಶುಗಳು ಜನಿಸಿದ ದಿನದಂದೇ ಮೃತಪಡುವ ಪ್ರಮಾಣದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನದಲ್ಲಿದೆ. ನಮ್ಮದೇಶದಲ್ಲಿ ಇಂತಹ ಮರಣಗಳ ಸಂಖ್ಯೆಯು ಒಂದುವರ್ಷದಲ್ಲಿ 3,09,000 ವಾಗಿದ್ದು,ಪ್ರಪಂಚದಾದ್ಯಂತ ಸಂಭವಿಸುತ್ತಿರುವ ಇಂತಹ ಮರಣಗಳ ಶೇ. 29 ರಷ್ಟಿದೆ. ವಿಶೇಷವೆಂದರೆ ನಮ್ಮ ನೆರೆಯಲ್ಲಿರುವ ಪುಟ್ಟ ಬಾಂಗ್ಲಾದೇಶದಲ್ಲಿ , ಈ ಸಂಖ್ಯೆಯು ಕೇವಲ 28,100,ಅರ್ಥಾತ್ ಶೇ. 3 ರಷ್ಟಿದೆ!
ಜನಿಸಿದಂದೇ ಶಿಶುಗಳು ಮೃತಪಡುವ ಶೇ. 99 ರಷ್ಟು ಪ್ರಕರಣಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಸಂಭವಿಸುತ್ತಿದ್ದು,ಇನ್ನುಳಿದ ಶೇ. 1 ರಷ್ಟು ಮರಣಗಳು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಸಂಭವಿಸುತ್ತಿವೆ. ಇವುಗಳಲ್ಲಿ ಅಮೇರಿಕ ದೇಶವು ಅಗ್ರಸ್ಥಾನದಲ್ಲಿದೆ ಎನ್ನುವ ಅಂಶವು, 180ದೇಶಗಳ "ಮಾತೆಯರ ಸ್ಥಿತಿಗತಿಗಳು"ಎನ್ನುವ ವಿಚಾರದಲ್ಲಿ ಪ್ರಕಟಿತ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಫ್ರಿಕಾದ ನಂತರ ದಕ್ಷಿಣ ಏಷಿಯಾ ಅತ್ಯಂತ ಅಪಾಯಕಾರಿ ಎನಿಸಿದ್ದು, ಜನಿಸಿದಂದೇ ಮೃತಪಡುವ ಒಂದು ದಶಲಕ್ಷ ಶಿಶುಗಳಲ್ಲಿ  ಶೇ. 40 ರಷ್ಟು ಭಾರತ,ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳದ್ದೇ ಆಗಿವೆ. ಹಾಗೂ ಈ ಮರಣಗಳಿಗೆ ಮಾತೆಯರ  ದೀರ್ಘಕಾಲೀನ ಅಪೌಷ್ಟಿಕತೆಯೇ ಕಾರಣವೆನಿಸಿದೆ. ಬಾಂಗ್ಲಾ, ನೇಪಾಳ ಮತ್ತು ಭಾರತಗಳಲ್ಲಿ ಶೇ12 ರಿಂದ 13 ರಷ್ಟು ಮಹಿಳೆಯರಲ್ಲಿ ಅಪೌಷ್ಟಿಕತೆಯಿಂದಾಗಿ ಶಾರೀರಿಕ ಬೆಳವಣಿಗೆಯೇ ಕುಂಠಿತವಾಗಿರುತ್ತದೆ. ತತ್ಪರಿಣಾಮವಾಗಿ ಹೆರಿಗೆಯ ಸಮಯದಲ್ಲಿ ಅಪಾಯದ ಸಂಭಾವ್ಯತೆಯ ಪ್ರಮಾಣ ಹೆಚ್ಚುವುದರೊಂದಿಗೆ, ಇವರಲ್ಲಿ ಹುಟ್ಟುವ ಶಿಶುಗಳು ಅಲ್ಪ ತೂಕದವುಗಳಾಗಿರುತ್ತವೆ. ಜೊತೆಗೆ ದಕ್ಷಿಣ ಏಷ್ಯಾದಲ್ಲಿ ಕೇವಲ  ಶೇ. 43 ರಷ್ಟು ಹೆರಿಗೆಗಳು  ವೈದ್ಯರ ಅಥವಾ ಅರೆವೈದ್ಯಕೀಯ ಸಿಬಂದಿಗಳ ನೆರವಿನಿಂದ ನಡೆಯುತ್ತವೆ. 

ಇದಲ್ಲದೇ ಅವಧಿಗೆ ಮುನ್ನ ಸಂಭವಿಸುವ ಜೀವಂತ ಶಿಶುಗಳ  ಪ್ರಮಾಣವು ಶೇ. 13 ರಷ್ಟಿದ್ದು, ಶಿಶುಗಳ ಮರಣಕ್ಕೆ ಕಾರಣವೆನಿಸುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ  ದಕ್ಷಿಣ ಏಷ್ಯಾದ ರಾಷ್ಟ್ರಗಳು,ನವಜಾತ ಶಿಶುಗಳ ಮರಣದ ಪ್ರಮಾಣವನ್ನು ನಿಯಂತ್ರಿಸಲು ಅವಶ್ಯಕ ಕ್ರಮಗಳನ್ನು ಕೈಗೊಂಡಿವೆ. ಇವುಗಳಲ್ಲಿ ಬಾಂಗ್ಲಾದೇಶವು ಈ ಪ್ರಮಾಣವನ್ನು ಶೇ. 49 ರಷ್ಟು ಮತ್ತು ನೇಪಾಳವು ಶೇ. 47 ರಷ್ಟು ಇಳಿಸುವಲ್ಲಿ ಯಶಸ್ವಿಯಾಗಿವೆ. ಇದಕ್ಕಾಗಿಯೇ ತಮ್ಮ ದೇಶದಲ್ಲಿ ಗರ್ಭಿಣಿಯರು,ಬಾಣಂತಿಯರು ಮತ್ತು ನವಜಾತ ಶಿಶುಗಳ ಸಲುವಾಗಿ ಅವಶ್ಯಕ ವೈದ್ಯಕೀಯ ವ್ಯವಸ್ಥೆಗಳನ್ನು  ಅನುಷ್ಟಾನಿಸಿವೆ. 

ಭಾರತ ಸರಕಾರವು ನವಜಾತ ಶಿಶುಗಳ ಸಲುವಾಗಿ ದೇಶದ 600 ಜಿಲ್ಲೆಗಳಲ್ಲಿ ನವಜಾತ ಶಿಶುಗಳ ತೀವ್ರನಿಗಾ ಘಟಕಗಳನ್ನು ಆರಂಭಿಸಲಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಹೇಳುವಂತೆ, ಯಾವುದೇ ಸ್ಥಳದಲ್ಲಿ ಒಂದು ಹೆರಿಗೆಯಾದಲ್ಲಿ ಸಂಭಾವ್ಯ ಸಮಸ್ಯೆಗಳನ್ನು ಪರಿಹರಿಸಲು ಆರೋಗ್ಯ ಇಲಾಖೆಯು ಸನ್ನದ್ಧವಾಗಿ ಇರಬೇಕಾಗುತ್ತದೆ. ಅದೇನೇ ಇರಲಿ,ಮುಂದಿನ ದಿನಗಳಲ್ಲಿ ನವಜಾತ ಶಿಶುಗಳ ಮರಣದ ಪ್ರಮಾಣವನ್ನು  ನಿಯಂತ್ರಿಸಲು ನಾವು ಯಶಸ್ವಿಯಾಗುವತ್ತ ಶ್ರಮಿಸಬೇಕು. ಅಂತೆಯೇ ನವಜಾತ ಶಿಶುಗಳೊಂದಿಗೆ ಇವುಗಳಿಗೆ ಜನ್ಮವನ್ನು ನೀಡಿದ  ಮಾತೆಯರಿಗೆ ಯಾವುದೇ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲೇಬೇಕು. ಹಾಗೂ ಈ ನಿಟ್ಟಿನಲ್ಲಿ ದೇಶದ ಜನತೆ ಸರಕಾರದೊಂದಿಗೆ ಕೈಜೋಡಿಸಿದಲ್ಲಿ , ಯಶಸ್ಸನ್ನು ಸಾಧಿಸುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ . ನಿತ್ಯಾನಂದ ಪೈ,ಪುತ್ತೂರು 

No comments:

Post a Comment