Thursday, July 18, 2013




                          ನಿಮ್ಮ ನಡೆನುಡಿಗಳಿಗೆ ಹಿಡಿದ ಕೈಗನ್ನಡಿ!
ತನ್ನ ಮನೆಮಂದಿಯ ನಡೆನುಡಿಗಳನ್ನು ದಿನನಿತ್ಯ ಕಂಡು-ಕೇಳುವ ಪುಟ್ಟ ಕಂದನು, ಇವುಗಳನ್ನು ಅನುಕರಿಸುವುದು ಸ್ವಾಭಾವಿಕವೂ ಹೌದು. ಇದೇ ಕಾರಣದಿಂದಾಗಿ ನಿಮ್ಮ ಕಂದನ ಗುಣಾವಗುಣಗಳಿಗೆ ನೀವು ಹೊಣೆಗಾರರೇ ಹೊರಟ, ಆ ಮುಗ್ಧ ಕಂದನಲ್ಲ. ಸದ್ಗುಣ- ದುರ್ಗುಣಗಳ ನಡುವಿನ ವ್ಯತ್ಯಾಸವನ್ನೇ ಅರಿತಿರದ ನಿಮ್ಮ ಕಂದನ ವರ್ತನೆಗಳು, ನಿಶ್ಚಿತವಾಗಿಯೂ ನಿಮ್ಮ ನಡೆ-ನುಡಿಗಳಿಗೆ ಹಿಡಿದ ಕನ್ನಡಿ ಎನ್ನುವುದನ್ನು ಅರಿತಿರಿ!. 

ರಾಸ್ಕಲ್ ನನ್ಮಗನೇ ...... 
ಶ್ರೀನಿವಾಸನ ಮನೆಯಿಂದ ಬಂದಿದ್ದ ತುರ್ತುಕರೆಗೆ ಸ್ಪಂದಿಸಿದ್ದ ವೈದ್ಯರು, ಆತನ ಮನೆಬಾಗಿಲಿನಲ್ಲಿ ನಿಂತು ತನ್ನನ್ನೇ ದಿಟ್ಟಿಸುತ್ತಿದ್ದ ಮುದ್ದುಕಂದನನ್ನು ಕಂಡು ಆತನ ಮೈದಡವಿದ್ದರು. ಮರುಕ್ಷಣದಲ್ಲಿ ರಾಸ್ಕಲ್ ನನ್ಮಗನೇ ಒಳಗೆ ಬಾರೋ ಎಂದುಲಿದು ಒಳಕ್ಕೆ ಓಡಿದ್ದ ಮಗುವಿನ ಮಾತುಗಳನ್ನು ಕೇಳಿದ ವೈದ್ಯರಿಗೆ ದಿಗ್ಭ್ರಮೆಯಾಗಿತ್ತು. 
ಅಷ್ಟರಲ್ಲೇ ಹೊರಬಂದ ಶ್ರೀನಿವಾಸನು ವೈದ್ಯರಿಗೆ ವಂದಿಸುತ್ತಿದ್ದಂತೆಯೇ ಮತ್ತೆ ಪ್ರತ್ಯಕ್ಶವಾಗಿದ್ದ ಮಗುವನ್ನು ಎತ್ತಿಕೊಂಡವನೇ,"ನೋಡಿ ಸಾರ್,ಎಷ್ಟೊಂದು ಚೂಟಿಯಾಗಿದ್ದಾನೆ ಈ ಸೂಳೆಮಗ,ಇನ್ನೂ ಮೂರುವರ್ಷ ಪೂರ್ತಿಯಾಗಿಲ್ಲ,ಆಗಲೇ ಈ ಮುಂಡೆಗಂಡ ....... ". ಶ್ರೀನಿವಾಸನ ಬಾಯಿಂದ ಪುಂಖಾನುಪುಂಖವಾಗಿ ಹೊರಬೀಳುತ್ತಿದ್ದ ಅಣಿಮುತ್ತುಗಳೇ, ಆತನ ಕಂದನ ಮಾತುಗಳ ಮೂಲವನ್ನು ಸಾರಿಹೆಳುತ್ತಿದ್ದವು. 
ತುಸು ಸಾವರಿಸಿಕೊಂಡ ವೈದ್ಯರು ಒಳಕೋಣೆಯಲ್ಲಿದ್ದ  ರೋಗಿಯನ್ನು ಪರೀಕ್ಷಿಸಿ,ಅವಶ್ಯಕ ಔಷದಗಳನ್ನು ನೀಡಿ ಹೊರಬಂದ ಬಳಿಕ,ಶ್ರೀನಿವಾಸನು ನೀಡಿದ್ದ ಹಣವನ್ನು ಜೇಬಿಗೆ ಹಾಕಿದ್ದರು. ಇದನ್ನು ಕಂಡ ಕಂದನು "ಏ ಕಳ್ಳಾ, ಕಂಡದ್ದನ್ನೆಲ್ಲಾ ಜೇಬಿಗೆ ಹಾಕ್ತೀಯಾ?",ಎನ್ನಬೇಕೇ!. 
ಶ್ರೀನಿವಾಸನ ಪುತ್ರರತ್ನನ ಮಾತುಗಳು ವೈದ್ಯರಿಗೆ ಕಸಿವಿಸಿಯನ್ನು ಉಂಟುಮಾಡಿದರೂ,ಇದೀಗ ಬೆಚ್ಚಿಬೀಳುವ ಸರದಿ ಶ್ರೀನಿವಾಸನದ್ದಾಗಿತ್ತು. ಸಿಟ್ಟು ನೆತ್ತಿಗೆರಿದ ಪರಿಣಾಮವಾಗಿ ಮಗುವಿಗೆ ಎರಡೇಟು ಬಾರಿಸಿ "ಕೆಟ್ಟ ಮಾತುಗಳನ್ನು ಆಡಬಾರದೆಂದು ಸಾವಿರಬಾರಿ ಹೇಳಿದರೂ ಕೇಳ್ತಾ ಇಲ್ಲ ಈ ಬೇವರ್ಸಿ ನನ್ಮಗ"ಎಂದು ಕಿರುಚಿದ್ದನು. ಮರುಕ್ಷಣದಲ್ಲೇ ತನ್ನ ತಪ್ಪಿನ ಅರಿವಾಗಿ,ವೈದ್ಯರ ಮುಂದೆಯೇ ಮುಖಮುಚ್ಚಿ ಅಳಲಾರಂಭಿಸಿದ. ಪರಿಸ್ಥಿತಿಯನ್ನು ಅರ್ಥೈಸಿಕೊಂಡ ವೈದ್ಯರು ಆತನನ್ನು ಸಾಂತ್ವನಿಸಿದರೂ,ಚಿಕ್ಕ ಮಕ್ಕಳಂತೆ ಬಿಕ್ಕಿಬಿಕ್ಕಿ ಅಳುತ್ತಿದ್ದ ಶ್ರೀನಿವಾಸನು,ತನ್ನ ಹಿಡಿತವಿಲ್ಲದ ನಾಲಗೆಯಿಂದಾಗಿ ಸಂಭವಿಸಿದ ಘಟನೆಯಿಂದ ಸಾಕಷ್ಟು ನೊಂದಿದ್ದನು. ಮಗನ ವರ್ತನೆಗಳಿಗೆ ತಾನೇ ಕಾರಣಕರ್ತನೆಂದು ತಿಳಿದಿದ್ದ ಆತನು,ಹಠಾತ್ತಾಗಿ ವೈದ್ಯರ ಕಾಲಿಗೆರಗಿ ತನ್ನನ್ನು ಈ ಸಮಸ್ಯೆಯಿಂದ ಪಾರುಮಾಡುವಂತೆ ಅಂಗಲಾಚಿದನು. 
ವೈದ್ಯರ ಸಲಹೆಯಂತೆ ಪರಿಣಿತ ಮನೋವೈದ್ಯರ ಬಳಿ ಆಪ್ತಸಲಹೆ ಪಡೆಯಲು ಆರಂಭಿಸಿದ ಶ್ರೀನಿವಾಸನು,ಕೇವಲ ಮೂರು ತಿಂಗಳಲ್ಲೇ ಸಂಪೂರ್ಣವಾಗಿ ಬದಲಾಗಿದ್ದನು. ಆಶ್ಚರ್ಯವೆಂದರೆ ಆಪ್ತಸಲಹೆಯನ್ನೇ ಪಡೆದುಕೊಳ್ಳದ ಆತನ ಪತ್ನಿ ಮತ್ತು ಮಗನ ವರ್ತನೆಗಳೂ, ಆತನ ವರ್ತನೆಗಳು ಬದಲಾಗ ತೊಡಗಿದಂತೆಯೇ ಸಮರ್ಪಕವಾಗಿ ಪರಿವರ್ತನೆಗೊಂಡಿದ್ದವು!. 
ತದನಂತರ ಶ್ರೀನಿವಾಸನ ಸಂಸಾರವು ಸುಖಸಂತೋಷಗಳ ಸಾಗರ ಎನ್ನುವಂತಾಗಿರಲು, ಮನೆಗೆ ಬಂದ ಅತಿಥಿಗಳನ್ನು "ಹೆಲೋ ಅಂಕಲ್,ಹೆಲೋ ಆಂಟಿ, ನಮಸ್ತೆ" ಎಂದುಸ್ವಾಗತಿಸುವ ಮುದ್ದುಕಂದನೇ ಸಾಕ್ಷಿಯಾಗಿದ್ದನು!. 
ಮನಸ್ಸಿಗಾದ ಗಾಯ ಮಾಗದೇ?
ಅನಂತ ಮತ್ತು ಆತನ ಪತ್ನಿ ಆಶಾ ತಮ್ಮ ಏಕಮಾತ್ರ ಪುತ್ರಿಯ ಹುಟ್ಟುಹಬ್ಬಕ್ಕೆಂದು ಹೊಸಬಟ್ಟೆಗಳನ್ನು ಕೊಳ್ಳಲು ಪೇಟೆಗೆ ತೆರಳಿದ್ದರು. ತರಗತಿಯಲ್ಲಿ ಮೊದಲ ಸ್ಥಾನಗಳಿಸಿದಲ್ಲಿ  ನೀನು ಬಯಸಿದ ಉಡುಪನ್ನು ಕೊಡಿಸುವುದಾಗಿ ಅಪ್ಪ ಹೇಳಿದ್ದ ಮಾತನ್ನು ಪುಟ್ಟಿಯೂ ಮರೆತಿರಲಿಲ್ಲ. ಇದೇ ಕಾರಣದಿಂದಾಗಿ ತನ್ನ ಸಲುವಾಗಿ ಕೊಳ್ಳುವ ಬಟ್ಟೆಯನ್ನು ತಾನೇ ಆಯ್ಕೆಮಾಡುವುದಾಗಿ ಹಠ ಹಿಡಿದಿದ್ದ ಪುತ್ತಿಯನ್ನೂ ಜೊತೆಗೆ ಕರೆದೊಯ್ದಿದ್ದರು. 
ನಗರದ ಖ್ಯಾತ ಜವುಳಿ ಅಂಗಡಿಯಲ್ಲಿ ತನ್ನ ಮಗಳಿಗೆ ಒಪ್ಪುವ ಬಟ್ಟೆಗಳನ್ನು ಆಶಾಳು ಆರಿಸುತ್ತಿದ್ದಾಗ ಆಕಸ್ಮಿಕವಾಗಿ ಕಾಣಸಿಕ್ಕಿದ ಸ್ನೇಹಿತನೊಂದಿಗೆ ಅನಂತನು ಹರಟೆಹೊಡೆಯಲು  ನಿಂತಿದ್ದನು. ಅಷ್ಟರಲ್ಲೇ ಪ್ರದರ್ಶನಕ್ಕಾಗಿ ಇರಿಸಿದ್ದ ಬೊಂಬೆಗೆ ತೊಡಿಸಿದ್ದ ಸುಂದರವಾದ ಉಡುಪೊಂದು ಪುಟ್ಟಿಯ ಕಣ್ಣಿಗೆ ಬಿದ್ದಿತ್ತು. 

ಸ್ವಲ್ಪ ಹೊತ್ತಿನ ಬಳಿಕ ತಾನು ಆಯ್ಕೆಮಾಡಿದ ಉಡುಪುಗಳನ್ನು ಮಗಳಿಗೆ ತೋರಿಸಲು ಬಯಸಿದ ಆಶಾಳಿಗೆ,ಸಮೀಪದ ಗೊಂಬೆಯ ಬಳಿ ನಿಂತಿದ್ದ ಪುಟ್ಟಿಯನ್ನು ಕಂಡು ಅಚ್ಚರಿಯಾಗಿತ್ತು. ಅತ್ತ ತೆರಳಿದ ಆಕೆಗೂ ಗೊಂಬೆಗೆ ತೊಡಿಸಿದ್ದ ಉಡುಗೆ ಮೆಚ್ಚಿಗೆಯಾಗಿತ್ತು. ಪುಟ್ಟಿ ಬಯಸಿದ ಉಡುಪನ್ನು ಕೊಡಿಸುವುದಾಗಿ ಹೇಳಿದ ಆಶಾಳಿಗೆ,ಅದರ ಬೆಲೆ 1200 ರುಪಾಯಿಗಳೆಂದು ತಿಳಿದಾಗ ಗಾಬರಿಯಾಗಿತ್ತು. ಕೆಳಮಧ್ಯಮ ವರ್ಗದ ಈ ಈ ಕುಟುಂಬಕ್ಕೆ ಇಂತಹ ದುಬಾರಿ ಉಡುಪನ್ನು ಖರೀದಿಸುವುದು ಕನಸಿನ ಮಾತಾಗಿತ್ತು. ಇದೇ ಕಾರಣದಿಂದಾಗಿ ಬೇರೊಂದು ಉಡುಪನ್ನು ಆಯ್ಕೆ ಮಾಡಲು ತಾಯಿಯು ಹೇಳಿದುದನ್ನು ಕೇಳಿದೊಡನೆ ಪುಟ್ಟಿ ಮಂಕಾಗಿದ್ದಳು. ಬಳಿಕ ತಾಯಿಯೇ ಆಯ್ಕೆ ಮಾಡಿದ  ಉಡುಪುಗಳನ್ನು ಕಣ್ಣೆತ್ತಿಯೂ ನೋಡದ ಪುಟ್ಟಿಯು, ತಾಯಿ ಆಯ್ದ ಬಟ್ಟೆಗಳನ್ನು ಕಣ್ಣೆತ್ತಿಯೂ ನೋಡದೆ,ನಿನಗೆ ಮೆಚ್ಚುಗೆಯಾದಲ್ಲಿ ನನಗೂ ಮೆಚ್ಚುಗೆ ಎಂದಿದ್ದಳು. ಸದಾ ಅರಳು ಹುರಿದಂತೆ ಮಾತನಾಡುತ್ತಿದ್ದ ಮಗಳು ಮೌನ ವಹಿಸಿದ್ದನ್ನು ಅರ್ಥೈಸಿಕೊಂಡ ಅಶಾ ಮಾತ್ರ ಅಸಹಾಯಳಾಗಿದ್ದಳು. 

ತನ್ನ ತಂದೆಯ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಅರಿವಿಲ್ಲದ ಮುಗ್ಧ ಬಾಲೆಗೆ ತಾನು ಬಯಸಿದ ಉಡುಪಿನ ದುಬಾರಿ ಬೆಲೆಯ ಅರಿವೇ ಇರಲಿಲ್ಲ. ಅಂತೆಯೇ ತಾನು ಬಯಸಿದ ಉಡುಗೆಯನ್ನು ಕೊಡಿಸುವುದಾಗಿ ಹೇಳಿದ್ದ ತಂದೆ, ಕೊಟ್ಟ ಮಾತಿಗೆ ತಪ್ಪಿದರೆನ್ನುವ ನೋವು ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು.ಪತ್ನಿ ಮತ್ತು ಮಗಳ ಚರ್ಯೆಗಳನ್ನು ದೂರದಿಂದಲೇ ಗಮನಿಸುತ್ತಿದ್ದ ಅನಂತನಿಗೆ,ಏನೋ ಎಡವಟ್ಟಾಗಿದೆ ಎನ್ನುವ ಸಂದೇಹ ಮೂಡಿತ್ತು. ತಕ್ಷಣ ಪತ್ನಿಯ ಬಳಿಗೆ ಬಂದು ವಿಷಯವನ್ನರಿತ ಆತನಿಗೆ ತನ್ನ ಬಾಲ್ಯದ  ನೆನಪಾಗಿತ್ತು. ನಾಲ್ಕಾರು ಸಹೋದರರು ಅಪ್ಪ ತಂದಿದ್ದ ಒಂದೇ ವಿಧದ ಬಟ್ಟೆಗಳನ್ನು ಧರಿಸಿ ಓಡಾಡುತ್ತಿದ್ದಾಗ,ತಾನು ಬಯಸಿದ ಬಟ್ಟೆಗಳನ್ನು ಧರಿಸಲಾಗದ ಕಾರಣದಿಂದ ಕಣ್ಣೀರು ಹಾಕುತ್ತಿದ್ದುದನ್ನು ಅನಂತನು ಇಂದಿಗೂ ಮರೆತಿರಲಿಲ್ಲ. 

ಮರುಕ್ಷಣದಲ್ಲಿ ಪುಟ್ಟಿಯನ್ನು  ಕರೆದು ತಾನು ಆಕೆಗಾಗಿ ಖರೀದಿಸಲಿದ್ದ ಮೂರು ಜೊತೆ ಬಟ್ಟೆಗಳಿಗೆ ಬದಲಾಗಿ,ಆಕೆ ಮೆಚ್ಚಿದ್ದ ಒಂದೇ ಉಡುಪನ್ನು ಖರೀದಿಸಲೇ ಎಂದು ಕೇಳಿದೊಡನೆ ಪುಟ್ಟಿಯ ಮುಖದಲ್ಲಿ ಮುಗುಳುನಗೆ ಮೂಡಿತ್ತು. ಮರುಮಾತನಾಡದೇ ಆ ಉಡುಪನ್ನು ಖರೀದಿಸಿ,ಕಣ್ ಸನ್ನೆಯಿಂದಲೇ ಪತ್ನಿಯನ್ನು ಸುಮ್ಮನಿರುವಂತೆ ಸೂಚಿಸಿದ ಅನಂತನು ಪುಟ್ಟಿಯೊಡನೆಹೊರಗೆ ಬಂದಿದ್ದನು. ತನ್ನ ಮೆಚ್ಚಿನ ಉಡುಪನ್ನು ಎದೆಗವಚಿಕೊಂಡು ಸಂತಸದಿಂದ ಬೀಗುತ್ತಿದ್ದ ಮಗಳನ್ನು ಕಂಡು ಅನಂತನ ಕಣ್ಣಿನಲ್ಲಿ ಕಂಬನಿ ಮೂಡಿತ್ತು. ಜೊತೆಗೆ ಮಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಸಂತೃಪ್ತಿಯೂ ಆತನ ಮುಖದಲ್ಲಿ ಕಾಣಿಸುತ್ತಿತ್ತು.
ದಾರಿತಪ್ಪಿದ ಮಗ 
ನಗರದ ಖ್ಯಾತ ಶಾಲೆಯಲ್ಲಿ ಒಂದೆರಡು ತಿಂಗಳುಗಳಿಂದ ನಡೆಯುತ್ತಿದ್ದ ಸಣ್ಣಪುಟ್ಟ ಕಳ್ಳತನದ ಪ್ರಕರಣಗಳು ಮುಖ್ಯೋಪಾದ್ಯಾಯರನ್ನು ಕಂಗೆಡಿಸಿದ್ದವು. ಮೊದಮೊದಲು ವಿದ್ಯಾರ್ಥಿಗಳ ಚೀಲದಲ್ಲಿದ್ದ ವಸ್ತುಗಳಿಗೆ ಸೀಮಿತವಾಗಿದ್ದ ಕಳ್ಳತನವು,ಕ್ರಮೇಣ ಶಿಕ್ಷಕರ ಕೊಥದಿಯಲ್ಲಿನ ಚೀಲಗಳಲ್ಲಿ ಇರಿಸಿದ್ದ ಹಣ ನಾಪತ್ತೆಯಾಗುವ ಹಂತಕ್ಕೆ ತಲುಪಿತ್ತು. 

ಅದೊಂದು ದಿನ ಶಿಕ್ಷಕರ ಕೊಠಡಿಯಲ್ಲಿ ಇರಿಸಿದ್ದ ಹಣದ ಪರ್ಸ್ ಮಾಯವಾದ ವರ್ತಮಾನವನ್ನು ಅರಿತ ಮುಖ್ಯೋಪಾಧ್ಯಾಯರು,ಪ್ರತಿಯೊಂದು ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ವೈಯುಕ್ತಿಕವಾಗಿ ತಪಾಸಣೆಗೆ ಒಳಪಡಿಸಿದ್ದರು. ಈ ಸಂದರ್ಭದಲ್ಲಿ ಪರ್ಸಿನೊಂದಿಗೆ ಸಿಕ್ಕಿಬಿದ್ದ ವಿದ್ಯಾರ್ಥಿ ಕಿರಣನೆಂದು ಬಹಿರಂಗವಾದಾಗ,ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ನಂಬಲು ಅಸಾಧ್ಯವೆನಿಸಿತ್ತು.
"ಛೋಟಾ ನವಾಬ್" ಎಂದೇ ಪ್ರಖ್ಯಾತನಾಗಿದ್ದ ಕಿರಣನಿಗೆ ಹಣವನ್ನು ನೀರಿನಂತೆ ಪೋಲುಮಾಡುವ ಹವ್ಯಾಸವಿತ್ತು. ಸಹಪಾಠಿಗಳಿಗೂ ಅಚ್ಚರಿಯಾಗುವಂತೆ ಏಳನೆಯ ತರಗತಿಯ ಈ ಬಾಲಕನ ಜೇಬಿನಲ್ಲಿ ಸದಾ ನೂರರ ನೋಟುಗಳೇ ಇರುತ್ತಿದ್ದವು!. ದಿನದಲ್ಲಿ ನಾಲ್ಕಾರು ಕೋಲಾಗಳು,ಹತ್ತಾರು ಕ್ಯಾಡ್ಬರೀಸ್ ಚಾಕಲೇಟ್ ಗಳು,ಐಸ್ ಕ್ರೀಮ್, ಚ್ಯೂಯಿಂಗ್ ಗಮ್ ಮತ್ತು ಪಾನ್ ಪರಾಗ್ ಗಳನ್ನು ತಿನ್ನುತ್ತಿದ್ದ ಕಿರಣನಿಗೆ,ಇಂತಹ ಮೋಜುಗಳಿಗೆಗಾಗಿ ಎಂದೂ ಹಣದ ಕೊರತೆಯೇ ಉದ್ಭವಿಸುತ್ತಿರಲಿಲ್ಲ. ಅಂತೆಯೇ ಆತನಿಗೆ ಇಷ್ಟೊಂದು ಹಣವನ್ನು ನೀಡುತ್ತಿದ್ದವರು ಯಾರೆಂದು ಆತನ ಖಾಸಾ ಮಿತ್ರರಿಗೂ ತಿಳಿದಿರಲಿಲ್ಲ.
ನಿಜ ಹೇಳಬೇಕಿದ್ದಲ್ಲಿ ಕಿರಣನ ತಂದೆ ರಮೇಶ ರಾಯರು ಆಗರ್ಭ ಶ್ರೀಮಂತರಾಗಿದ್ದರೂ, ಆತನ ತಾಯಿ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದರು. ಆಕೆಯ ಬಾಲ್ಯದಲ್ಲಿ ಮೂರುಹೊತ್ತಿನ ತುತ್ತಿಗೂ ಮನೆಯಲ್ಲಿ ತತ್ವಾರ ಇದ್ದುದರಿಂದಾಗಿ,ಕಂಡದ್ದನ್ನು ಕದಿಯುವ ಹವ್ಯಾಸ ಆಕೆಗೆ ರೂಢಿಯಾಗಿತ್ತು. ಹೊಟ್ಟೆಯ ಪಾಡಿಗಾಗಿ ಅಂಟಿಕೊಂಡಿದ್ದ ಈ ದುಶ್ಚಟವು, ಇದೀಗ ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುವ ಸ್ಥಿತಿಯಲ್ಲೂ ಮುಂದುವರೆದಿತ್ತು!.

ಅದೊಂದು ದಿನ ತನ್ನ ಪರೀಕ್ಷೆಗಾಗಿ ಸಿದ್ಧತೆಯನ್ನು ನಡೆಸುತ್ತಿದ್ದ ಕಿರಣನು,ತನಗೆ ತಿಳಿಯದ ಲೆಕ್ಕವೊಂದನ್ನು ಕಲಿಯಲು ತಾಯಿಯನ್ನು ಅರಸಿಕೊಂಡು ಆಕೆಯ ಕೊಠಡಿಗೆ ಹೋಗಿದ್ದನು. ಗಂಡನ ಪರ್ಸಿನಿಂದ ಹಣವನ್ನು ಎಗರಿಸುತ್ತಿದ್ದ ಆಕೆಗೆ,ಆಕಸ್ಮಿಕವಾಗಿ ಕೋಣೆಯನ್ನು ಪ್ರವೇಶಿಸಿದವರು ಯಾರೆಂದು ತಿಳಿಯದೇಗಾಬರಿಗೊಂಡಾಗ ಕೈಯ್ಯಲ್ಲಿದ್ದ ಪರ್ಸ್ ಕೆಳಕ್ಕೆ  ಬಿದ್ದಿತ್ತು. ಅನಿರೀಕ್ಷಿತ ಘಟನೆಯಿಂದ ಹೆದರಿ ಬಿಳಿಚಿಕೊಂಡ ತಾಯಿಯ ವರ್ತನೆಯನ್ನು ಕಂಡು ಆಶ್ಚರ್ಯಚಕಿತನಾಗಿದ್ದ ಕಿರಣನು, ಆಕೆ ಹೆದರಲು ಕಾರಣವೇನೆಂದು ಕೇಳಿದ್ದನು. ಆತನ ಬಾಯಿ ಮುಚ್ಚಿಸಲು ಅದೇ ಪರ್ಸಿನಿಂದ ಹತ್ತು ರೂಪಾಯಿಯ ನೋಟೊಂದನ್ನು ನೀಡಿ ಚಾಕಲೇಟು ತಿನ್ನು ಎಂದು ಹೇಳಿದ ಆಕೆಯು, ಕೋಣೆಯಿಂದ ಹೊರನಡೆದಿದ್ದಳು.  
ನಾಲ್ಕಾರು ವರ್ಷಗಳಲ್ಲಿ ಇಂತಹ ಹಲವಾರು ಘಟನೆಗಳನ್ನು ಕಂಡಿದ್ದ ಕಿರಣನಿಗೆ ತಾಯಿಯ ಮೇಲೆ ಸಂದೇಹ ಮೂಡುವುದರೊಂದಿಗೆ, ತಾಯಿಯ ಕಣ್ಣುತಪ್ಪಿಸಿ ತಂದೆಯ ಪರ್ಸಿನಿಂದ ಹಣವನ್ನು ಕದಿಯುವ ಕಲೆಯೂ ಕರತಲಾಮಲಕವೆನಿಸಿತ್ತು. ಜೊತೆಗೆ ತಾಯಿಯ ಗುಟ್ಟನ್ನು ರಟ್ಟು ಮಾಡುವುದಾಗಿ ಬೆದರಿಸಿ, ಆಕೆಯಿಂದಲೂ ಹಣ ಸುಲಿಯುವುದು ಅಭ್ಯಾಸವಾಯಿತು. ಆತನ ಜೇಬಿನಲ್ಲಿ ಸದಾ ನೂರರ ನೋಟುಗಳು ಇರಲು ಇದುವೇ ಕಾರಣವಾಗಿತ್ತು. 
ಆದರೆ ತಾಯಿ ಮಗನ ದುರಾದೃಷ್ಟದಿಂದ ಇವರಿಬ್ಬರೂ ಒಂದೇ ವಾರದಲ್ಲಿ ರಮೇಶ ರಾಯರ ಕೈಯ್ಯಲ್ಲಿ ಸಿಕ್ಕಿ ಬಿದ್ದು ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದಿತ್ತು. ಇದರಿಂದಾಗಿ ಕಿರಣನಿಗೆ ಅನಾಯಾಸವಾಗಿ ಲಭಿಸುತ್ತಿದ್ದ "ಆದಾಯ"ವೂ ನಿಂತು ಹೋಗಿತ್ತು. ಆದರೆ ತನ್ನ ದುಂಡು ವೆಚ್ಚಗಳನ್ನು ನಿಯಂತ್ರಿಸಲಾಗದ ಕಿರಣನು, ಶಾಲೆಯಲ್ಲಿ ತನ್ನ ಕೈಚಳಕವನ್ನು ತೋರಲು ಆರಂಭಿಸಿ ಸಿಕ್ಕಿಬಿದ್ದಿದ್ದನು!. 

ಕೊನೆಯ ಮಾತು 
ನೂಲಿನಂತೆ ಸೀರೆ,ತಾಯಿಯಂತೆ ಮಗಳು ಎನ್ನುವ ಆಡುಮಾತನ್ನು ನೆನೆಪಿಸುವ ಇಂತಹ ದುರ್ಗುಣಗಳಿಗೆ ಮಕ್ಕಳ ತಂದೆ ತಾಯಂದಿರೇ ನೇರವಾಗಿ ಹೊಣೆಗಾರರು ಎನ್ನುವುದರಲ್ಲಿ ಎರಡು ಮಾತಿಲ್ಲ. 

ಸಾಮಾನ್ಯವಾಗಿ ಕುಟುಂಬ ವೈದ್ಯರ ವೃತ್ತಿಜೀವನದಲ್ಲಿ ಇಂತಹ ಅನೇಕ ಸಮಸ್ಯೆಗಳು ಕಾಣಸಿಗುತ್ತವೆ. ತಮ್ಮಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳ ವರ್ತನೆಗಳು ಅವರ ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತವೆ ಎಂದು ಸಾಕಷ್ಟು ಉದಾಹರಣೆಗಳೊಂದಿಗೆ ವಿವರಿಸಿದರೂ,ಇದನ್ನು ನಿರ್ಲಕ್ಷಿಸುವ ಮಾತಾಪಿತರು ಕೊನೆಗೊಂದು ದಿನ ವೈದ್ಯರ ಸಹಾಯವನ್ನು ಅಪೇಕ್ಷಿಸಿ ಬರುವುದು ಅಪರೂಪವೇನಲ್ಲ. 

ನಿಮ್ಮಲ್ಲಿರಬಹುದಾದ ದುರ್ಗುಣಗಳನ್ನು ಸುಲಭದಲ್ಲೇ ಕಲಿಯುವ ನಿಮ್ಮ ಮಗು,ಅಷ್ಟೇ ಸುಲಭವಾಗಿ ನಿಮ್ಮ ಸದ್ಗುಣಗಳನ್ನೂ ಕಲಿಯಬಲ್ಲದು ಎನ್ನುವುದನ್ನು ಮರೆಯದಿರಿ. ಅಂತೆಯೇ ಕ್ಲಿಷ್ಟಕರ ಸಮಸ್ಯೆಗಳನ್ನು ಸೃಷ್ಟಿಸಬಲ್ಲ ದುರ್ವರ್ತನೆಗಳು ನಿಮ್ಮಲ್ಲಿದ್ದಲ್ಲಿ "ಕೆಟ್ಟದ್ದನ್ನು ಸುಟ್ಟುಬಿಡು" ಎನ್ನುವ ಮಾತಿನಂತೆಯೇ ಸುಟ್ಟು(ಬಿಟ್ಟು) ಬಿಡಿ!. 

ಡಾ . ಸಿ. ನಿತ್ಯಾನಂದ ಪೈ,ಪುತ್ತೂರು 




No comments:

Post a Comment