Monday, July 15, 2013

traffic jam!



                                                                   ಜನ-ವಾಹನಗಳ ಸುಗಮ ಸಂಚಾರಕ್ಕೆ 
           ರಸ್ತೆಗಳ ವಿಸ್ತರಣೆ- ನಿಯಮಗಳ ಪಾಲನೆ ಅನಿವಾರ್ಯ 

ರಸ್ತೆಗಳನ್ನು ನಿರ್ಮಿಸುವುದೇ ಜನ-ವಾಹನಗಳ ಸುಗಮ ಸಂಚಾರಕ್ಕಾಗಿ ಎನ್ನುವ ವಿಚಾರ ನಿಮಗೂ ತಿಳಿದಿರಲೇಬೇಕು. ಆದರೆ ಇತ್ತೀಚಿನ ಎರಡು-ಮೂರು ದಶಕಗಳಿಂದ ನಮ್ಮದೇಶದ ಪ್ರತಿಯೊಂದು ರಾಜ್ಯಗಳ,ಪ್ರತಿಯೊಂದು ನಗರ-ಪಟ್ಟಣಗಳಲ್ಲಿನ ರಸ್ತೆಗಳಲ್ಲಿ "ಸುಗಮ ಸಂಚಾರ"ವೇ ಅಸಾಧ್ಯವೆನಿಸುತ್ತಿದೆ. ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸಲು ಚಾಲಕರು ಕಸರತ್ತು ನಡೆಸುತ್ತಿದ್ದಲ್ಲಿ, ಪಾದಚಾರಿಗಳು ಸುರಕ್ಷಿತವಾಗಿ ನಡೆದಾಡಲು ಹರಸಾಹಸವನ್ನೇ ನಡೆಸಬೇಕಾಗುತ್ತಿದೆ.ಈ ಸಮಸ್ಯೆಗೆ ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ನಗರ-ಪಟ್ಟಣಗಳು ಮಾತ್ರವಲ್ಲ, ವೈಜ್ಞಾನಿಕ ಯೋಜನೆಯಂತೆ ನಿರ್ಮಿಸಿದ್ದ ನಗರ-ಮಹಾನಗರಗಳ ರಸ್ತೆಗಳೂ ಅಪವಾದವೆನಿಸಿಲ್ಲ. ಪ್ರತಿನಿತ್ಯ ಸುಗಮ ಸಂಚಾರಕ್ಕೆ ಸಂಭವಿಸುತ್ತಿರುವ ಅಡಚಣೆಗಳಿಂದಾಗಿ, ಜನಸಾಮಾನ್ಯರ ಸಮಯದೊಂದಿಗೆ, ಅಗಾಧಪ್ರಮಾಣದ  ಇಂಧನಗಳು ಪೋಲಾಗುತ್ತಿವೆ. ತತ್ಪರಿಣಾಮವಾಗಿ ಸಹಸ್ರಾರು ಮಾನವ ಘಂಟೆಗಳೂ ವ್ಯರ್ಥವಾಗುವುದರಿಂದ,ದೇಶದ ಬೊಕ್ಕಸಕ್ಕೂ ಕೋಟ್ಯಂತರ ರೂಪಾಯಿಗಳ ನಷ್ಟ ಸಂಭವಿಸುತ್ತಿದೆ. ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುವುದು ಅಸಾಧ್ಯವೆನಿಸಿದರೂ, ಸರಕಾರ ಮತ್ತು ಪ್ರಜೆಗಳು ಕೈಜೋಡಿಸಿದಲ್ಲಿ  ಸಮರ್ಪಕವಾಗಿ ನಿಯಂತ್ರಿಸುವುದು ಸಾಧ್ಯ. 
ಸಮಸ್ಯೆಯ ಮೂಲ 
ಹಲವಾರು ದಶಕಗಳ ಹಿಂದೆ ಎತ್ತಿನಗಾಡಿಗಳು ಸಂಚರಿಸುತ್ತಿದ್ದ ಅಸಂಖ್ಯ ರಸ್ತೆಗಳು, ಕಾಲಕ್ರಮೇಣ ಮೋಟಾರು ವಾಹನಗಳ ಬಳಕೆ ಆರಂಭಗೊಂಡ ಬಳಿಕ ವಿಸ್ತರಿಸಲ್ಪಟ್ಟಿದ್ದವು. ಅಂದಿನ ದಿನಗಳಲ್ಲಿ ಬಹುತೇಕ ವಸತಿ-ವಾಣಿಜ್ಯ ಕಟ್ಟಡಗಳನ್ನು ರಸ್ತೆಗಳ ಬದಿಗಳಲ್ಲೇ ನಿರ್ಮಿಸಲಾಗುತ್ತಿತ್ತು. ಜೊತೆಗೆ ಜನ-ವಾಹನಗಳ ಸಂಖ್ಯೆಗಳೂ ಸಾಕಷ್ಟು ಕಡಿಮೆ ಇದ್ದುದರಿಂದಾಗಿ, ಅಗಲಕಿರಿದಾದ ರಸ್ತೆಗಳಲ್ಲಿ ಸಂಚರಿಸುವುದು ತ್ರಾಸದಾಯಕ ಎನಿಸುತ್ತಿರಲಿಲ್ಲ. ಆದರೆ ವರುಷಗಳು ಉರುಳಿದಂತೆಯೇ ಹೆಚ್ಚಿದ್ದ ಜನಸಂಖ್ಯೆಗೆ ಮತ್ತು ಪ್ರಜೆಗಳ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ, ದೇಶದಲ್ಲಿನ ವಾಹನಗಳ ಸಂಖ್ಯೆಯೂ ಮಿತಿಮೀರಿ ಹೆಚ್ಚಿತ್ತು. ಇದರೊಂದಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕೊರತೆ ಅಥವಾ ಅಭಾವ ಮತ್ತು ಶ್ರೀಮಂತರ ಆಡಂಬರದ ಪರಿಣಾಮವಾಗಿ, ವಾಹನಗಳ ಸಂಖ್ಯೆ ಸಹಜವಾಗಿಯೇ ಅತಿಯಾಗಿ ಹೆಚ್ಚಿತ್ತು. ಇದರಿಂದಾಗಿ ಪ್ರತಿಯೊಂದು ನಗರ-ಪಟ್ಟಣಗಳ ಬೀದಿಬೀದಿಗಳಲ್ಲೂ, ದ್ವಿಚಕ್ರ,ತ್ರಿಚಕ್ರ, ಚತುಶ್ಚಕ್ರ ಮತ್ತು ಹಲವಾರು ಚಕ್ರಗಳ ಬೃಹತ್ ಸಾರಿಗೆ-ಸರಕು ಸಾಗಾಟದ ವಾಹನಗಳು ಓಡಾಡಲು ಆರಂಭಿಸಿದ್ದವು. 
ದೇಶಾದ್ಯಂತ ಜನ-ವಾಹನಗಳ ಸಂಖ್ಯೆಗಳು ಹೆಚ್ಚಲಾರಂಭಿಸಿದ್ದರೂ, ಇದಕ್ಕೆ ಅನುಗುಣವಾಗಿ ರಸ್ತೆಗಳನ್ನು ವಿಸ್ತರಿಸುವತ್ತ ಸ್ಥಳೀಯ ಸಂಸ್ಥೆಗಳು ಮತ್ತು ಸರಕಾರ ಗಮನಹರಿಸಿರಲಿಲ್ಲ. ಇದಲ್ಲದೇ ಪಾದಚಾರಿಗಳು ನಿರಾತಂಕದಿಂದ ನಡೆದಾಡಲು ಸೂಕ್ತ ಕಾಲುದಾರಿಗಳು,ವಿವಿಧ ವರ್ಗದ ವಾಹನಗಳನ್ನು ನಿಲ್ಲಿಸಲು ಬೇಕಾದ ತಂಗುದಾಣಗಳು ಮತ್ತು ಜನ-ವಾಹನಗಳ ಸಂಚಾರವನ್ನು ನಿಯಂತ್ರಿಸಲು ಸಂಚಾರಿ ಆರಕ್ಷಕರ ನೇಮಕ ಇತ್ಯಾದಿ ವ್ಯವಸ್ಥೆಗಳನ್ನು ಒದಗಿಸುವ ಬಗ್ಗೆ ಸರಕಾರವೂ ಚಿಂತಿಸಿರಲಿಲ್ಲ . 
ಇಷ್ಟೆಲ್ಲಾ ಸಾಲದೆನ್ನುವಂತೆ ಬಹುತೇಕ ನಗರ-ಪಟ್ಟಣಗಳಲ್ಲಿ ರಸ್ತೆಗಳ ಅಂಚಿನಲ್ಲೇ ನಿರ್ಮಿಸಿದ್ದ ಹಳೆಯ ಕಟ್ಟಡಗಳನ್ನು ಕೆಡವಿ,ಹೊಸ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭದಲ್ಲೂ ರಸ್ತೆಯ ವಿಸ್ತರಣೆಗೆ ಒಂದಿಷ್ಟು ಜಮೀನನ್ನು ಬಿಟ್ಟುಕೊಡುವಂತೆ ಕಟ್ಟಡಗಳ ಮಾಲೀಕರ ಮನವೊಲಿಸಲು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪ್ರಯತ್ನಿಸಿರಲಿಲ್ಲ. ಮುನಿಸಿಪಲ್ ಕಾಯಿದೆಗಳಲ್ಲಿ ಇದಕ್ಕೆ ಅವಕಾಶವಿದ್ದರೂ, ಭ್ರಷ್ಟ ಅಧಿಕಾರಿಗಳ ಕೈಬೆಚ್ಚಗೆ ಮಾಡಿದ್ದ ಕಟ್ಟಡಗಳ ಮಾಲೀಕರು, ರಸ್ತೆಗಳ ವಿಸ್ತರಣೆಗೆ ಅವಕಾಶವನ್ನೇ ನೀಡಿರಲಿಲ್ಲ. ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿದ್ದವರೂ, ಇದಕ್ಕೆ ಅಪವಾದ ಎನಿಸಿರಲಿಲ್ಲ!. 
ಅನೇಕ ಸಂದರ್ಭಗಳಲ್ಲಿ  ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಹಳೆಯ ಕಟ್ಟಡವನ್ನು ನವೀಕರಿಸುವ ಪರವಾನಿಗೆಯನ್ನು ಪಡೆದುಕೊಂಡು,ನೂತನ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿದವರ ಸಂಖ್ಯೆಯೂ ಕಡಿಮೆಯೇನಿಲ್ಲ. ಕನಿಷ್ಠ ತಮ್ಮ ಮತ್ತು ತಮ್ಮಲ್ಲಿ ಬರುವ ಗ್ರಾಹಕರ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವನ್ನೇ ಕಲ್ಪಿಸದ ಕಟ್ಟಡಗಳ ಮಾಲೀಕರ ವಿರುದ್ಧ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಯಾವುದೇ ರೀತಿಯ ಕಾನೂನು ಕ್ರಮಗಳನ್ನೇ ಕೈಗೊಳ್ಳುತ್ತಿರಲಿಲ್ಲ. ಇಷ್ಟು ಮಾತ್ರವಲ್ಲ, ಇಂತಹ ಕಟ್ಟಡಗಳ ಮೇಲೆ ಮತ್ತೊಂದು ಅಂತಸ್ತನ್ನು ನಿರ್ಮಿಸಲು ಪರವಾನಿಗೆಯನ್ನು ನೀಡಲೂ  ಈ ಅಧಿಕಾರಿಗಳು ಹಿಂಜರಿಯುತ್ತಿರಲಿಲ್ಲ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ಪ್ರತಿಯೊಂದು ನಗರ-ಪಟ್ಟಣಗಳ ರಸ್ತೆಗಳಲ್ಲಿ  ಸುಗಮ ಸಂಚಾರಕ್ಕೆ ಆಸ್ಪದವೇ ದೊರೆಯುತ್ತಿಲ್ಲ!. 
ಇವೆಲ್ಲವುಗಳೊಂದಿಗೆ ಬೀದಿಬದಿ ವ್ಯಾಪಾರಿಗಳು,ತಮ್ಮ ಸರಕುಗಳನ್ನು ಅಂಗಡಿಯ ಮುಂದಿನ ಕಾಲುದಾರಿಯ ಮೇಲೆ ಇರಿಸುವ ವ್ಯಾಪಾರಿಗಳು,ಮೆರವಣಿಗೆ,ಪ್ರತಿಭಟನೆ, ರಸ್ತೆತಡೆ, ರಸ್ತೆಗಳ ಇಕ್ಕೆಲಗಳಲ್ಲಿ  ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ವಾಹನಗಳು,ಕೈತೋರಿಸಿದಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸುವ ಸಾರಿಗೆ ವಾಹನಗಳು,ರಸ್ತೆ ಅಪಘಾತಗಳು,ಅಲೆಮಾರಿ ಜಾನುವಾರುಗಳು ಮತ್ತು ಟ್ರಾಫಿಕ್ ಜಾಮ್,ಸಾರಿಗೆ ನಿಯಮಗಳ ಉಲ್ಲಂಘನೆ ಇತ್ಯಾದಿ ಕಾರಣಗಳಿಂದಾಗಿಯೂ, ನಮ್ಮ ರಸ್ತೆಗಳಲ್ಲಿ ಸುಗಮ ಸಂಚಾರ ಅಸಾಧ್ಯವೆನಿಸುತ್ತಿದೆ. 
ಈ ಸಮಸ್ಯೆಯನ್ನು ಯಾರು,ಯಾವಾಗ ಮತ್ತು ಹೇಗೆ ಪರಿಹರಿಸುತ್ತಾರೆ?, ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ!. 
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

No comments:

Post a Comment