Friday, July 26, 2013

Gubbiya mele brahmaastra!



                               ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ?

ತಮ್ಮನ್ನು ಪೀಡಿಸುತ್ತಿರುವ ಕಾಯಿಲೆಗಳನ್ನು ಕ್ಷಣಮಾತ್ರದಲ್ಲಿ ಗುಣಪಡಿಸಬೇಕೆಂದು ವೈದ್ಯರನ್ನು ಒತ್ತಾಯಿಸುವ ರೋಗಿಗಳ ಸಂಖ್ಯೆ ಭಾರತದಲ್ಲಿ ಕಡಿಮೆಯೇನಿಲ್ಲ. ಅದೇರೀತಿಯಲ್ಲಿ ಕ್ಷುಲ್ಲಕ ಕಾಯಿಲೆಗಳಿಗೂ,ಅನಾವಶ್ಯಕವಾಗಿ ಪ್ರಬಲ ಔಷದಗಳನ್ನು ನೀಡುವ ವೈದ್ಯರೂ ಇಲ್ಲದಿಲ್ಲ. ಆದರೆ ಇಂತಹ ಪ್ರಯೋಗಗಳ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಿಗೆ ಪ್ರಾಥಮಿಕ ಮಾಹಿತಿಯೇ ತಿಳಿದಿರುವುದಿಲ್ಲ!
-------             --------          ---------          -----------           ------------           ----------             ---------
ಒಂದೆರಡು ದಿನಗಳಿಂದ ಶೀತದಿಂದ ಬಳಲುತ್ತಿದ್ದ ತನ್ನ ಮಗುವಿಗೆ ಮಾಲತಿಯು ದಿನದಲ್ಲಿ ಮೂರುಬಾರಿ  ಮೆಟಾಸಿನ್ ಸಿರಪ್ ನೀಡಿದರೂ ಗುಣವಾಗಿರಲಿಲ್ಲ. ಮರುದಿನ ಪ್ರತ್ಯಕ್ಷವಾದ ಕೆಮ್ಮು ಮತ್ತು ಜ್ವರ ಉಲ್ಬಣಿಸಿ ನರಳುತ್ತಿದ್ದ ಮಗು, ಇರುಳಿಡೀ ನಿದ್ರಿಸದ ಕಾರಣದಿಂದಾಗಿ ಮಾಲತಿಯೂ ಜಾಗರಣೆ ಮಾಡಬೇಕಾಯಿತು.
 
ಮರುದಿನ ಬೆಳಿಗ್ಗೆ ಪರಿಚಿತ ವೈದ್ಯರ ಬಳಿ ಮಗುವನ್ನು ಕರೆದೊಯ್ದ ಮಾಲತಿಯು, ತಾನು ಮೆಟಾಸಿನ್ ಸಿರಪ್ ನೀಡಿದ್ದರೂ ಕಡಿಮೆಯಾಗಿರದ ಶೀತ-ಜ್ವರಗಳನ್ನು ಗುಣಪಡಿಸಲು "ಪ್ರಬಲ ಔಷದ" ವನ್ನು ನೀಡಲು ಒತ್ತಾಯಿಸಿದ್ದಳು. 
ಮುಗುಳುನಗೆಯನ್ನು ಬೀರಿದ ವೈದ್ಯರು ಮಗುವನ್ನು ಪರೀಕ್ಷಿದಾಗ, ಗಂಟಲು ಮತ್ತು ಶ್ವಾಸಕೋಶಗಳ ಸೋಂಕು ಪತ್ತೆಯಾಗಿತ್ತು. ಐದು ದಿನಗಳಿಗೆ ಔಷದವನ್ನು ನೀಡಿದ ವೈದ್ಯರು,ಇದರ ಸೇವನಾಕ್ರಮವನ್ನು ವಿವರಿಸಿದ್ದರು. 

ಮುಸ್ಸಂಜೆಯ ಹೊತ್ತಿನಲ್ಲಿ ವೈದ್ಯರನ್ನು ದೂರವಾಣಿಯ ಮೂಲಕ ಸಂಪರ್ಕಿಸಿದ ಮಾಳತಿಯು, ಮಗುವಿನ ಶೀತ-ಜ್ವರ ಕಿಂಚಿತ್ ಕೂಡಾ ಕಡಿಮೆಯಾಗಿಲ್ಲವೆಂದು ದೂರಿದ್ದಳು. ಒಂದೆರಡು ದಿನಗಳ ಹಿಂದೆ ಆರಂಭಗೊಂಡಿದ್ದ ಕಾಯಿಲೆಯನ್ನು ಕೇವಲ ಎರಡು ಹೊತ್ತಿನ ಔಷದಗಳಿಂದ ಗುಣಪಡಿಸಲು ಸಾಧ್ಯವಿದ್ದಲ್ಲಿ,ತಾನು ಐದು ದಿನಗಳಿಗೆ ಔಷದವನ್ನು ನೀಡುವ ಅವಶ್ಯಕತೆಯೇ ಇರುತ್ತಿರಲಿಲ್ಲ ಎಂದ ವೈದ್ಯರು,ಪ್ರತಿ ಆರು ತಾಸಿಗೊಂದು ಬಾರಿಯಂತೆ ಐದು ದಿನ ಔಷದವನ್ನು ನೀಡಲು ಸೂಚಿಸಿದರು.  ಸೂಚನೆಯನ್ನು ಪರಿಪಾಲಿಸಿದಂತೆಯೇ,ಮಗುವಿನ ಕಾಯಿಲೆ ಗುಣವಾಗಿತ್ತು. 

ಮಾಲತಿಯಂತೆಯೇ ಅನೇಕರು ತಮ್ಮನ್ನು ಹಾಗೂ ಮನೆಮಂದಿಯನ್ನು ಬಾಧಿಸುವ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು,ತಮಗೆ ತಿಳಿದಿರುವ ಔಷದವನ್ನು ಸೇವಿಸುತ್ತಾರೆ. ಅಪೇಕ್ಷಿತ ಪರಿಹಾರ ದೊರೆಯದೇ ಇದ್ದಲ್ಲಿ,ಇನ್ನಷ್ಟು ಪ್ರಬಲ ಔಷದವನ್ನು ಬಳಸುತ್ತಾರೆ. ಇಂತಹ ಸಂದರ್ಭಗಳಲ್ಲಿ ತಾವು ವೈದ್ಯರ ಸಲಹೆಯನ್ನು ಪಡೆಯದೇ ಬಳಸುತ್ತಿರುವ ಪ್ರಬಲ ಔಷದಗಳು (ವಿಶೇಷವಾಗಿ ಮಕ್ಕಳಿಗೆ) ಸುರಕ್ಷಿತವೇ ಎನ್ನುವುದನ್ನೇ ನಿರ್ಲಕ್ಷಿಸುತ್ತಾರೆ!. 

ಸಾಮಾನ್ಯವಾಗಿ ಕ್ಷಿಪ್ರಗತಿಯಲ್ಲಿ ಪರಿಹಾರ ನೀಡುವುದೆಂದು ನೀವು ನಂಬಿರುವ ಔಷದಗಳು ನಿಜಕ್ಕೂ ಸುರಕ್ಷಿತ ಎನಿಸಬೇಕೆಂದಿಲ್ಲ. ಇದೇ ಕಾರಣದಿಂದಾಗಿ ಪುಟ್ಟಮಕ್ಕಳಿಗೆ ಯಾವುದೇ ಔಷದವನ್ನು ನೀಡುವ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಹಿತಕರವೆನಿಸುವುದು. ಅನುಭವಿ ತಜ್ಞ ವೈದ್ಯರೇ ಹೇಳುವಂತೆ, ಚಿಕ್ಕಮಕ್ಕಳಿಗೆ ಚಿಕಿತ್ಸೆಯನ್ನು ನೀಡುವ ಮುನ್ನ ವೈದ್ಯರೂ ತಾವು ನೀಡುವ ಔಷದಗಳಿಂದ ದೊರೆಯಬಲ್ಲ ಪರಿಹಾರಕ್ಕಿಂತ ಹೆಚ್ಚಾಗಿ ಇವುಗಳು ಸುರಕ್ಷಿತವೇ ಎನ್ನುವತ್ತ ಗಮನಹರಿಸಬೇಕಾಗುತ್ತದೆ. 

ಅಂತೆಯೇ ಯಾವುದೇ ಔಷದವನ್ನು ವೈದ್ಯರು ಸೂಚಿಸಿದಂತೆ ನಿಗದಿತ ಸಮಯದಲ್ಲಿ,ನಿಗದಿತ ಪ್ರಮಾಣದಲ್ಲಿ,ನಿಗದಿತ ಅವಧಿಗೆ ಸೇವಿಸುವುದು ಅತ್ಯವಷ್ಯಕವೂ ಹೌದು. ಇದರಿಂದಾಗಿ ಔಷದಗಳ ಕಾರ್ಯಕ್ಷಮತೆ ಹೆಚ್ಚುವುದರೊಂದಿಗೆ,ಅಪೇಕ್ಷಿತ ಪರಿಣಾಮವೂ ಲಭಿಸುವುದರಲ್ಲಿ ಸಂದೇಹವಿಲ್ಲ. 


over the counter ಉತ್ಪನ್ನಗಳು 

ಇತ್ತೀಚಿನ ಕೆಲವರ್ಷಗಳಿಂದ ವೈದ್ಯರ ಸಲಹೆ-ಸೂಚನೆಗಳ ಅವಶ್ಯಕತೆಯಿಲ್ಲದೇ, ಔಷದ ಅಂಗಡಿಗಳಿಂದ ನೀವು ಖರೀದಿಸಬಹುದಾದ "ಅಸಂಬದ್ಧ ಔಷದಗಳ ಸಮ್ಮಿಶ್ರಣ" ಗಳ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸುಲಭದಲ್ಲೇ ಲಭಿಸುತ್ತವೆ. ಒಂದಕ್ಕೂ ಹೆಚ್ಚು ವಿಧದ ಔಷದಗಳ ಸಮ್ಮಿಶ್ರಣದಿಂದ ಸಿದ್ಧಪಡಿಸುವ ಇಂತಹ ಉತ್ಪನ್ನಗಳಲ್ಲಿ,ಕೆಲವೊಂದು ಔಷದಗಳನ್ನು ಅನಾವಶ್ಯಕವಾಗಿ ಬೆರೆಸಲಾಗುತ್ತದೆ. ಅನೇಕ ಔಷದ ತಯಾರಿಕಾ ಸಂಸ್ಥೆಗಳು ಇಂತಹ ಉತ್ಪನ್ನಗಳನ್ನು ಅವಶ್ಯಕ ಪ್ರಯೋಗ-ಪರೀಕ್ಷೆಗಳಿಗೆ ಒಳಪಡಿಸದೇ  ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ಈ ಮಹತ್ವಪೂರ್ಣ ವಿಚಾರವನ್ನು ಅರಿತಿರದ ಅಮಾಯಕರು ಇವುಗಳನ್ನು ಸೇವಿಸಿ ಅಯಾಚಿತ ತೊಂದರೆಗಳಿಗೆ ಈಡಾಗುತ್ತಿದ್ದರೂ, ಇಂತಹ ಉತ್ಪನ್ನಗಳನ್ನು ಸರಕಾರವು ನಿಷೇಧಿಸುತ್ತಿಲ್ಲ!. 

ಇವೆಲ್ಲಕ್ಕೂ ಮಿಗಿಲಾಗಿ ಸಾಮಾನ್ಯ ಶೀತದಿಂದ ಆರಂಭಿಸಿ, ಮಧುಮೇಹದಂತಹ ಗಂಭೀರ ಕಾಯಿಲೆಗಳಿಗೂ "ರಾಮಬಾಣ" ದಂತೆ ಪರಿಣಾಮಕಾರಿ ಎಂದು ಇವುಗಳ ತಯಾರಕರು ಸ್ವತಃ ಘೋಷಿಸುವ ಅಸಂಖ್ಯ ಜಾಹೀರಾತುಗಳು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರತಿನಿತ್ಯ ಪ್ರಸಾರವಾಗುತ್ತಿವೆ. ಈ ಜಾಹೀರಾತುಗಳಿಗೆ ಮರುಳಾಗಿ,ದುಬಾರಿ ಬೆಲೆಯನ್ನು ತೆತ್ತು ಇಂತಹ ಔಷದಗಳನ್ನು ಖರೀದಿಸಿ ಸೇವಿಸಿದವರು ನಿಶ್ಚಿತವಾಗಿಯೂ ಮೂರ್ಖರೆನಿಸುತ್ತಾರೆ. ಏಕೆಂದರೆ ಈ ಔಷದಗಳು ನಿರೀಕ್ಷಿತ ಪರಿಣಾಮವನ್ನು ನೀಡದಿದ್ದಲ್ಲಿ ಇವುಗಳ ತಯಾರಕರು ಅಥವಾ ಔಷದ ಅಂಗಡಿಯವರನ್ನು ನೀವು ದೂರುವಂತಿಲ್ಲ!. 

ಆದರೆ ವೈದ್ಯರು ಸೂಚಿಸಿದ ಔಷದಗಳನ್ನು ಸೇವಿಸಿದ ಬಳಿಕ ಅಪೇಕ್ಷಿತ ಪರಿಣಾಮ ದೊರೆಯದೆ ಇದ್ದಲ್ಲಿ ಅಥವಾ ಅನಿರೀಕ್ಷಿತ ಅಡ್ಡಪರಿಣಾಮಗಳು -ತೊಂದರೆಗಳು ತಲೆದೊರಿದಲ್ಲಿ,ಜನಸಾಮಾನ್ಯರು ನಿಸ್ಸಂದೇಹವಾಗಿ ವೈದ್ಯರನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ಅಂತೆಯೇ ವೈದ್ಯರ ಚಿಕಿತ್ಸೆ ವಿಫಲಗೊಂಡಲ್ಲಿ  ದೂರುವ ರೋಗಿಗಳು, ಔಷದ ಅಂಗಡಿಗಳಿಂದ ಸ್ವಯಂ ಖರೀದಿಸಿ ಸೇವಿಸಿದ್ದ ಔಷದಗಳ ವೈಫಲ್ಯ ಅಥವಾ ದುಷ್ಪರಿಣಾಮಗಳ ಬಗ್ಗೆ ತೆಪ್ಪಗಿರುತ್ತಾರೆ. 

ಉದಾಹರಣೆಗೆ ಮಳೆ ಅಥವಾ ಚಳಿಗಾಲಗಳಲ್ಲಿ ಬಾಧಿಸುವ ಶೀತ,ಕೆಮ್ಮು,ಉಬ್ಬಸ(ಅಸ್ತಮಾ) ಇತ್ಯಾದಿ ಕಾಯಿಲೆಗಳಿಗೆ ಅನೇಕರು ಕೆಮ್ಮಿನ ಸಿರಪ್ ಖರೀದಿಸಿ ಸೇವಿಸುತ್ತಾರೆ. ನಿಜಹೆಳಬೇಕಿದ್ದಲ್ಲಿ ಶೀತ-ಕೆಮ್ಮು ಮತ್ತು ಅಸ್ತಮಾ ಕಾಯಿಲೆಗಳು ವಿಭಿನ್ನವಾಗಿದ್ದು,ವೈದ್ಯರು ಇವುಗಳಿಗೆ ನೀಡುವ ಚಿಕಿತ್ಸೆಯೂ ವಿಭಿನ್ನವಾಗಿರುತ್ತದೆ. ಆದರೆ ಇಂದಿಗೂ ಅನೇಕ ವಿದ್ಯಾವಂತರೂ ಕೆಲವಾರು ದಿನಗಳ ಕಾಲ ಕೆಮ್ಮಿನ ಸಿರಪ್ ಸೇವಿಸಿ,ಸಮಸ್ಯೆ ಇನ್ನಷ್ಟು ಉಲ್ಬಣಿಸಿದ ಬಳಿಕವೇ ವೈದ್ಯರನ್ನು ಸಂದರ್ಶಿಸುತ್ತಾರೆ. ಅದೇ ರೀತಿಯಲ್ಲಿ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಆಧುನಿಕ ಪದ್ದತಿಯ ಔಷದಗಳನ್ನು ಸೇವಿಸುವುದು ಹಿತಕರವಲ್ಲ ಎಂದು ನಿರ್ಧರಿಸಿ,ಅನ್ಯ ಪದ್ದತಿಗಳ ಔಷದಗಳನ್ನು ಸೇವಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಅನ್ಯ ಪದ್ದತಿಯ ವೈದ್ಯರ ಸಲಹೆ ಪಡೆಯುವುದನ್ನೇ ಮರೆತುಬಿಡುತ್ತಾರೆ!. 

 ಅಜ್ಞಾನದಿಂದ ಅಚಾತುರ್ಯ 

ಜನಸಾಮಾನ್ಯರನ್ನು ಅಪರೂಪದಲ್ಲಿ ಬಾಧಿಸುವ ತಲೆನೋವು,ಶೀತ,ಕೆಮ್ಮು,ಜ್ವರ,ಅಜೀರ್ಣ,ಹೊಟ್ಟೆನೋವು,ಭೇದಿ ಮತ್ತು ವಾಂತಿಗಳಂತಹ ವ್ಯಾಧಿಗಳು ಬಹುತೇಕ ಸಂದರ್ಭಗಳಲ್ಲಿ ಒಂದಿಷ್ಟು ಪಥ್ಯ ಮತ್ತು ವಿಶ್ರಾಂತಿಗಳಿಂದ ಶಮನಗೊಳ್ಳುತ್ತವೆ. ಇಂತಹ ಸಮಸ್ಯೆಗಳಿಗೆ "ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ"ಪ್ರಯೋಗಿಸಿದಂತೆ,ಪ್ರಬಲ ಔಷದಗಳನ್ನು ಸೇವಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ವೈದ್ಯಕೀಯ ವಿಚಾರಗಳ ಬಗ್ಗೆ ವಿಶೇಷ ಮಾಹಿತಿಯನ್ನು ಅರಿಯದ ಜನರು,ಪ್ರಬಲ ಔಷದಗಳ ಸೇವನೆಯಿಂದ ತಮ್ಮ ಕಾಯಿಲೆಗಳು ಚಿಟಿಕೆ ಹೊಡೆಯುವಷ್ಟರಲ್ಲಿ ಗುಣವಾಗುದು ಎಂದು ನಂಬಿದ್ದಾರೆ. ವಿಶೇಷವೆಂದರೆ ಇವೆಲ್ಲವುಗಳ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಅರಿತಿದ್ದೂ,ಇಂತಹ ಔಷದಗಳನ್ನು ನೀಡುವ ವೈದ್ಯರೂ ಇದ್ದಾರೆ! . 

ಈ ರೀತಿಯ ಪ್ರಯೋಗಗಳಿಂದ ಉದ್ಭವಿಸಬಲ್ಲ ತೊಂದರೆಗಳನ್ನು ಅನುಭವಿಸುವವರು ರೋಗಿಗಳೇ ಹೊರತು ವೈದ್ಯರಲ್ಲ. ಅಧಿಕತಮ ಔಷದಗಳಿಗೆ ಅಡ್ಡ-ದುಷ್ಪರಿಣಾಮಗಳು ಇರುವುದರಿಂದ,ಇವುಗಳ ಅನಾವಶ್ಯಕ ಅಥವಾ ಮಿತಿಮೀರಿದ ಸೇವನೆಯು ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ ಎನ್ನುವುದನ್ನು ಮರೆಯದಿರಿ. 

ನೀವೇನು ಮಾಡಬಹುದು 

ಅಪರೂಪದಲ್ಲಿ ಅಥವಾ ಪದೇಪದೇ ನಿಮ್ಮನ್ನು ಕಾಡುವ ಯಾವುದೇ ಕಾಯಿಲೆಗಳಿಗೆ,ನಿಮ್ಮ ನಂಬಿಗಸ್ತ ವೈದ್ಯರ ಸಲಹೆ-ಚಿಕಿತ್ಸೆಗಳನ್ನು ಪಡೆದುಕೊಳ್ಳಿ. ನಿಮ್ಮ ಶಾರೀರಿಕ ಹಾಗೂ ಇತರ ಪರೀಕ್ಷೆಗಳನ್ನು ನಡೆಸಿದ ಬಳಿಕ ವೈದ್ಯರು ಪತ್ತೆಹಚ್ಚಿರುವ ಕಾಯಿಲೆ ಯಾವುದೆಂದು ಕೇಳಿ ತಿಳಿದುಕೊಳ್ಳಿ. ತದನಂತರ ಇದರ ಪರಿಹಾರಕ್ಕಾಗಿ ಅವಶ್ಯಕ ಮತ್ತು ಸರಳ  ಚಿಕಿತ್ಸೆಯ ಮಾಹಿತಿಯನ್ನು ಪಡೆಯಿರಿ. ನಿಮಗೆ ಎಂತಹ ಚಿಕಿತ್ಸೆ ಬೇಕೆಂದು ನೀವೇ ನಿರ್ಧರಿಸಿ ವೈದ್ಯರಿಗೆ ಸಲಹೆಯನ್ನು ನೀಡದಿರಿ. 

ವೈದ್ಯರು ಪತ್ತೆಹಚ್ಚಿದ ಕಾಯಿಲೆ ಅಥವಾ ಸೂಚಿಸಿರುವ ಚಿಕಿತ್ಸೆಯ ಬಗ್ಗೆ ಸಂದೇಹಗಳಿದ್ದರೆ, ಈ ಚಿಕಿತ್ಸೆಯನ್ನು ನಿರಾಕರಿಸುವ ಹಾಗೂ ಮತ್ತೊಬ್ಬ ವೈದ್ಯರ ಸಲಹೆ-ಚಿಕಿತ್ಸೆಯನ್ನು ಪಡೆದುಕೊಳ್ಳುವ ಹಕ್ಕು ನಿಮಗಿದೆ. ಇದರಿಂದಾಗಿ ನೀವು ವೈದ್ಯರಿಗೆ ನೀಡಿದ ಶುಲ್ಕವನ್ನು ಕಳೆದುಕೊಳ್ಳಬೇಕಾದೀತೇ ಹೊರತು,ನಿಮ್ಮ ನೆಮ್ಮದಿ ಮತ್ತು ಆರೋಗ್ಯಗಳನ್ನು ಅಲ್ಲ ಎನ್ನುವುದು ನೆನೆಪಿರಲಿ. 

ಅಂತಿಮವಾಗಿ ವೈದ್ಯರು ಪತ್ತೆಹಚ್ಚಿರುವ ವ್ಯಾಧಿ ಮತ್ತು ಸೂಚಿಸಿದ ಚಿಕಿತ್ಸೆಗಳ ಬಗ್ಗೆ ತೃಪ್ತಿಯಾದಲ್ಲಿ ,ವೈದ್ಯರ ಸಲಹೆ ಸೂಚನೆಗಳನ್ನು ಕ್ರಮಬದ್ದವಾಗಿ ಪರಿಪಾಲಿಸಿ. ಯಾವುದೇ ಕಾರಣಕ್ಕೂ ವೈದ್ಯರು ನಿಗದಿಸಿದ್ದ ಔಷದಗಳ ಪ್ರಮಾಣ ಮತ್ತು ಅವಧಿಗಳನ್ನು ಬದಲಾಯಿಸದಿರಿ. ಆದರೆ ಚಿಕಿತ್ಸೆ ಆರಂಭಿಸಿದೊಡನೆ ಅಥವಾ ಒಂದೆರಡು ದಿನಗಳಲ್ಲಿ ಯಾವುದೇ ರೀತಿಯ ಅಡ್ಡ-ದುಷ್ಪರಿಣಾಮಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಕೊನೆಯದಾಗಿ ವೈದ್ಯರು ನಿಮಗೆ ಒಂದುಬಾರಿ ಸೂಚಿಸಿದ್ದ ಔಷದಗಳನ್ನು ಮತ್ತೆ ಅದೇ ಕಾಯಿಲೆ ಮರುಕಳಿಸಿದರೂ,ವೈದ್ಯರ ಸೂಚನೆಯಿಲ್ಲದೆ ಸೇವಿಸದಿರಿ. 

ಡಾ. ಸಿ. ನಿತ್ಯಾನಂದ ಪೈ 
ಬಳಕೆದಾರರ ಹಿತರಕ್ಷಣಾ ವೇದಿಕೆ 
ಪುತ್ತೂರು 

No comments:

Post a Comment