Friday, July 12, 2013

Mateyara molehaalannu sangrahisuva bank!

ಮಾತೆಯರ ಮೊಲೆಹಾಲನ್ನು ಸಂಗ್ರಹಿಸುವ ಬ್ಯಾಂಕ್!

ಲೇಖನದ ಶೀರ್ಷಿಕೆಯನ್ನು ಕಂಡು ನಿಮಗೆ ಆಶ್ಚರ್ಯವಾಗಿರಲೇಬೇಕು. ಏಕೆಂದರೆ ಹಣಕಾಸಿನ ವ್ಯವಹಾರವನ್ನು ನಡೆಸುವ ಬ್ಯಾಂಕಿನ ಬಗ್ಗೆ ಅರಿವಿದ್ದರೂ,ಮಾತೆಯರ ಮೊಲೆಹಾಲನ್ನು ಸಂಗ್ರಹಿಸುವ ಬ್ಯಾಂಕಿನ ಬಗ್ಗೆ ನೀವು ಅರಿತಿರಲಾರಿರಿ. ನಿಜಹೆಳಬೇಕಿದ್ದಲ್ಲಿ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಇಂತಹ ಬ್ಯಾಂಕುಗಳಿದ್ದು , ತಾವು ಸುರಕ್ಷಿತ ವಿಧಾನಗಳಿಂದ ಸಂಗ್ರಹಿಸಿದ ತಾಯಂದಿರ ಹಾಲನ್ನು ಜತನದಿಂದ ಸಂರಕ್ಷಿಸಿ, ಅವಶ್ಯಕತೆಯಿರುವ ಶಿಶುಗಳಿಗೆ ವಿತರಿಸುವ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತವೆ. ನಮ್ಮ ದೇಶದಲ್ಲಿ ಇಂತಹ ಬೆರಳೆಣಿಕೆಯಷ್ಟು ಬ್ಯಾಂಕ್ ಗಳಿರುವುದು ನಿಮಗೂ ತಿಳಿದಿರಲಾರದು. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ತಾಯಿಯ ಹಾಲು ಶ್ರೇಷ್ಠ 
ಅದೇ ತಾನೇ ಜನಿಸಿದ ಹಸುಗೂಸಿಗೆ ಅವಶ್ಯಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತಾಯಿಯ ಹಾಲು ಪರಿಪೂರ್ಣ ಆಹಾರವೆನಿಸುತ್ತದೆ. ಶಿಶುಗಳ ಶಾರೀರಿಕ-ಮಾನಸಿಕ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಯ ಗಳಿಕೆಯ ದೃಷ್ಟಿಯಿಂದ ಇದು ಅತ್ಯಂತ ಉಪಯುಕ್ತವೆನಿಸುತ್ತದೆ. ಇದೇ ಕಾರಣದಿಂದಾಗಿ ಪುಟ್ಟ ಕಂದನಿಗೆ ಕನಿಷ್ಠ ಆರು ತಿಂಗಳು ತುಂಬುವ ತನಕ ತಾಯಿಯ ಎದೆಹಾಲನ್ನು ಕಡ್ಡಾಯವಾಗಿ ಉಣಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯೇ ಸೂಚಿಸಿದೆ. 
ಸಾಮಾನ್ಯವಾಗಿ ಆರೋಗ್ಯವಂತ ಶಿಶುಗಳಿಗೆ ಆರು ತಿಂಗಳು ತುಂಬುವಷ್ಟರಲ್ಲಿ ಅದರ ತೂಕವು ದುಪ್ಪಟ್ಟಾಗುತ್ತದೆ. ಅಂತೆಯೇ ಒಂದು ವರ್ಷ ತುಂಬುವಾಗ ಮೂರುಪಟ್ಟು ಹೆಚ್ಚುತ್ತದೆ. ಈ ಬೆಳವಣಿಗೆಗೆ ಅತ್ಯವಶ್ಯಕವೆನಿಸುವ ಪೋಷಕಾಂಶಗಳು ತಾಯಿಯ ಹಾಲಿನಲ್ಲಿ ಸಮೃದ್ಧವಾಗಿ ಇರುತ್ತವೆ. ಆದರೆ ಕಾರಣಾಂತರಗಳಿಂದ ತನ್ನ ತಾಯಿಯ ಹಾಲಿನಿಂದ ವಂಚಿತವಾಗಿರುವ ಮಕ್ಕಳಿಗಾಗಿ ಅನ್ಯ ಮಾತೆಯರಿಂದ ಎದೆಹಾಲನ್ನು ಸಂಗ್ರಹಿಸಿ ವಿತರಿಸುವ ಸಲುವಾಗಿಯೇ,ಮಾತೆಯರ ಮೊಲೆಹಾಲಿನ ಬ್ಯಾಂಕ್ ಗಳನ್ನು ಪ್ರಾರಂಭಿಸಲಾಗಿದೆ. ತಾಯಿಯ ಹಾಲಿನಿಂದ ವಂಚಿತವಾಗಿರುವ ಕಂದಮ್ಮಗಳಿಗೆ ಇವು ವರದಾನವೆನಿಸಿವೆ. 
ನಮ್ಮ ದೇಶದಲ್ಲಿ ಇಂತಹ ಎಂಟು ಬ್ಯಾಂಕ್ ಗಳು ಕಾರ್ಯಾಚರಿಸುತ್ತಿದ್ದು,ರಾಜಸ್ಥಾನದ ಉದೈಪುರದಲ್ಲಿರುವ  ಬ್ಯಾಂಕಿನ ಕಾರ್ಯ ವಿಧಾನವನ್ನು ಇಲ್ಲಿ ಉದಾಹರಿಸಲಾಗಿದೆ. 
ಎದೆಹಾಲಿನ ಬ್ಯಾಂಕ್ 
ಹೆರಿಗೆಯ ಸಂದರ್ಭದಲ್ಲಿ ತನ್ನ ತಾಯಿಯನ್ನು ಕಳೆದುಕೊಂಡ, ಎದೆಹಾಲಿನ ಕೊರತೆಯಿರುವ ಮಾತೆಯರ,ಮಾತಾಪಿತರಿಂದ ತ್ಯಜಿಸಲ್ಪಟ್ಟ, ಕೆಲವೊಂದು ಕಾಯಿಲೆಗಳಿಂದ ಬಳಲುವ ಬಾಣಂತಿಯರ ಮತ್ತು ಅನಾರೋಗ್ಯಪೀಡಿತ ಶಿಶುಗಳಿಗೆ ಅತ್ಯವಶ್ಯಕ ಎನಿಸುವ ಮೊಲೆಹಾಲನ್ನು ,ಇಂತಹ ಬ್ಯಾಂಕುಗಳು ತಾವು ದಾನಿ ಮಾತೆಯರಿಂದ ಸಂಗ್ರಹಿಸಿ ವಿತರಿಸುತ್ತವೆ. 
ತನ್ನ ಕಂದನ ಅವಶ್ಯಕತೆಗಿಂತಲೂ ಅಧಿಕ ಹಾಲನ್ನು ಹೊಂದಿರುವ ಅನೇಕ ಮಾತೆಯರು,ಪ್ರತಿನಿತ್ಯ ಇಂತಹ ಬ್ಯಾಂಕಿಗೆ ಭೇಟಿನೀಡಿ ತಮ್ಮ ಎದೆಹಾಲನ್ನು ನೀಡುತ್ತಾರೆ. ಬ್ಯಾಂಕಿನಲ್ಲಿನ ಸಿಬಂದಿಗಳು ದಾನಿಗಳು ನೀಡಿದ್ದ ಹಾಲನ್ನು ಮೈನಸ್ 20 ಡಿಗ್ರಿ ಸೆಲ್ಸಿಯಸ್ ನಲ್ಲಿ  ಡೀಪ್ ಫ್ರೀಜರ್ ನಲ್ಲಿ ಇರಿಸಿ ಸಂರಕ್ಷಿಸುತ್ತಾರೆ. ಹೊಸದಾಗಿ ಬಂದಿರುವ ದಾನಿಗಳ ರಕ್ತದ ಮಾದರಿಯನ್ನು ಪಡೆದು,ಎಚ್. ಐ. ವಿ, ಹೆಪಟೈಟಿಸ್ ಬಿ ಮತ್ತು ಗುಹ್ಯರೋಗಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ತದನಂತರವೇ ಇವರಿಂದ ಎದೆಹಾಲನ್ನು ಸಂಗ್ರಹಿಸಲಾಗುತ್ತದೆ. 
ಬ್ಯಾಂಕಿಗೆ ಬಂದಿರುವ ತಾಯಂದಿರು ಮೊದಲು ತಮ್ಮ ಕೂಸಿಗೆ ಬೇಕಾದಷ್ಟು ಹಾಲುಣಿಸಿದ ಬಳಿಕ, ಸ್ವಯಂಚಾಲಿತ ವಿದ್ಯುತ್ ಪಂಪ್ ಮೂಲಕ ಆಕೆಯ ಎದೆಹಾಲನ್ನು ಸಂಗ್ರಹಿಸಲಾಗುತ್ತದೆ. ದಾನಿಗಳ ಮಕ್ಕಳು ತಾಯಿಹಾಲಿನ ಕೊರತೆಯಿಂದ ಬಳಲದಂತೆ ಈ ಪದ್ದತಿಯನ್ನು ಅನುಸರಿಸಲಾಗುತ್ತದೆ. ದಾನಿ ಮಾತೆಯರಿಂದ ಸಂಗ್ರಹಿಸಿದ ಹಾಲನ್ನು ಪರಿಶುದ್ಧವಾದ ಪಾತ್ರೆಯಲ್ಲಿ ಸಂಗ್ರಹಿಸಿದ ಬಳಿಕ, ರೋಗಾಣುಗಳ ಇರುವಿಕೆಯನ್ನು ಪತ್ತೆಹಚ್ಚಲು ಪರೀಕ್ಷಿಸಲಾಗುತ್ತದೆ. ತದನಂತರ ಐವರು ದಾನಿಗಳು ನೀಡಿದ್ದ ಶುದ್ಧವಾದ ಹಾಲನ್ನು ಒಂದು ಪಾತ್ರೆಯಲ್ಲಿ ಹಾಕಿ ಬೆರೆಸಲಾಗುತ್ತದೆ. ಇದರಿಂದಾಗಿ ವಿಭಿನ್ನ ದಾನಿಗಳ ಹಾಲಿನಲ್ಲಿ ಇರುವ, ವಿಭಿನ್ನ ಪ್ರಮಾಣದ ಪೋಷಕಾಂಶಗಳು ಏಕರೀತಿಯಲ್ಲಿ ಶಿಶುಗಳಿಗೆ ಲಭಿಸುತ್ತವೆ. ರೋಗಾಣುಗಳು ಪತ್ತೆಯಾಗಿದ್ದ ಹಾಲನ್ನು ಹೊರತುಪಡಿಸಿ,ಶುದ್ಧವಾಗಿರುವ ಹಾಲನ್ನು ಪ್ಯಾಶ್ಚರೀಕರಿಸಿದ ಬಳಿಕ 20 ಡಿಗ್ರಿ ಸೆ. ನಲ್ಲಿ ಸಂರಕ್ಷಿಸಲಾಗುತ್ತದೆ.ಸುಮಾರು ಆರು ತಿಂಗಳುಗಳ ಕಾಲ ಎದೆಹಾಲನ್ನು ಸಂರಕ್ಷಿಸಿ ಇರಿಸಬಹುದಾಗಿದ್ದರೂ, ಹಾಲಿನ ಪೂರೈಕೆಗಿಂತ ಬೇಡಿಕೆಯ ಪ್ರಮಾಣವೇ ಹೆಚ್ಚಿರುವುದರಿಂದ ಹಾಲಿನ ಸಂಗ್ರಹ ಕೆಲವೇ ವಾರಗಳಿಗೆ ಸೀಮಿತವಾಗಿರುತ್ತದೆ.  ತಾಯಿಹಾಲಿಗೆ ಬೇಡಿಕೆ ಬಂದೊಡನೆ,ಸಂರಕ್ಷಿಸಿರುವ ಹಾಲನ್ನು ಪೂರೈಸಲಾಗುತ್ತದೆ. ಇದಲ್ಲದೇ ಪುಟ್ಟ ಶಿಶುಗಳಿಗೆ ದಾನಿಗಳು ನೇರವಾಗಿ ಹಾಲುಣಿಸುವ ವ್ಯವಸ್ಥೆಯೂ,ಇಂತಹ ಬ್ಯಾಂಕ್ ಗಳಲ್ಲಿ ಲಭ್ಯವಿದೆ. 
ನಿಯಮಿತವಾಗಿ ತನ್ನ ಎದೆಹಾಲನ್ನು ಬ್ಯಾಂಕಿಗೆ ನೀಡುವ ಮಾತೆಯರಿಗೆ ಒಂದು ಕಾರ್ಡನ್ನು ನೀಡಲಾಗುತ್ತದೆ.ದಾನಿ ಮಾತೆಯರು ಹಾಲಿನ ಕೊರತೆಯ ಸಂದರ್ಭದಲ್ಲೂ, ಈ ಕಾರ್ಡನ್ನು ಬಳಸಿ ಯಾವುದೇ ಶಿಶುಗಳಿಗಾಗಿ ಹಾಲನ್ನು ಆದ್ಯತೆಯ ಮೇರೆಗೆ ಪಡೆಯಬಹುದಾಗಿದೆ. 
ಪ್ರಸ್ತುತ ನಮ್ಮ ದೇಶದಲ್ಲಿ ಮಾತೆಯರ ಮೊಲೆಹಾಲನ್ನು ಸಂಗ್ರಹಿಸಿ ವಿತರಿಸುವ ಎಂಟು ಬ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿದ್ದು,ಇವುಗಳಲ್ಲಿ  ನಾಲ್ಕು ಮುಂಬೈ ಮಹಾನಗರಿಯಲ್ಲಿವೆ. ಉಳಿದಂತೆ ಪುಣೆ,ವಡೋದರಾ,ಹೈದರಾಬಾದ್ ಮತ್ತು ಉದೈಪುರಗಳಲ್ಲಿ ತಲಾ ಒಂದೊಂದು ಬ್ಯಾಂಕುಗಳಿವೆ. 
ನಮ್ಮ ದೇಶದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಟಿಕತೆಯ ಸಮಸ್ಯೆಯನ್ನು ಗಮನಿಸಿದಲ್ಲಿ, ದೇಶದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ಊರುಗಳಲ್ಲೂ ಇಂತಹ ಬ್ಯಾಂಕುಗಳನ್ನು ಸ್ಥಾಪಿಸಬೇಕಾದ ಅನಿವಾರ್ಯತೆಯಿದೆ. ಜೊತೆಗೆ ಗರ್ಭವತಿಯರನ್ನು ಪೀಡಿಸುತ್ತಿರುವ ಅಪೌಷ್ಟಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ, ಸರಕಾರವು ಅವಶ್ಯಕ ಕ್ರಮಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಬೇಕಾಗಿದೆ. 

ಅಮೃತ ಬ್ಯಾಂಕ್ 

ವರ್ಷಂಪ್ರತಿ ಆಗಸ್ಟ್ ತಿಂಗಳಿನ ಮೊದಲ ವಾರವನ್ನು "ವಿಶ್ವ ಸ್ತನ್ಯಪಾನ ಸಪ್ತಾಹ " ವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 7 ರಂದು ಪಶ್ಚಿಮ ಬಂಗಾಳ ಸರಕಾರವು ದೇಶದ ಮೊತ್ತಮೊದಲ ಸರಕಾರೀ ಎದೆಹಾಲಿನ ಬ್ಯಾಂಕ್ ನ್ನು ಪ್ರಾರಂಭಿಸಿದೆ. ಕೊಲ್ಕತ್ತಾದ ಎಸ್. ಎಸ್. ಕೆ. ಎಂ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಅತ್ಯಾದುನಿಕ ಹಾಗೂ ಸುಸಜ್ಜಿತ ಬ್ಯಾಂಕ್ ನ್ನು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉದ್ಘಾಟಿಸಿದರು. ಅಮೃತ ಬ್ಯಾಂಕ್ ಎಂದು ಹೆಸರಿಸಿರುವ ಈ ಬ್ಯಾಂಕ್, ತಾಯಿಯ ಎದೆಹಾಲಿನಿಂದ ವಂಚಿತ ಶಿಶುಗಳಿಗೆ, ತಾನು ಸಂಗ್ರಹಿಸಿದ ಎದೆಹಾಲನ್ನು ಉಚಿತವಾಗಿ ಪೂರೈಸಲಿದೆ. 

ದೇಶದ ಅನ್ಯರಾಜ್ಯಗಳು ಕೊಲ್ಕತಾದ ಮಾದರಿಯನ್ನು ಅನುಕರಿಸಿದಲ್ಲಿ, ಅಪೌಷ್ಟಿಕತೆಯ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಉಪಯುಕ್ತವೆನಿಸಲಿರುವುದು.
ಡಾ. ಸಿ . ನಿತ್ಯಾನಂದ ಪೈ,ಪುತ್ತೂರು 

1 comment: