Thursday, March 2, 2017

ROAD SAFETY WEEK - NEW RULES


                      ವರ್ಷವಿಡೀ ನಡೆಯುತ್ತಿರಲಿ ರಸ್ತೆ ಸುರಕ್ಷಾ ಸಪ್ತಾಹ


ನಮ್ಮ ದೇಶದ ಪ್ರಜೆಗಳು ನೆಮ್ಮದಿಯಿಂದ ಜೀವಿಸಲು ಉಪಯುಕ್ತವೆನಿಸಬಲ್ಲ ನೂರಾರು ಕಾನೂನು ಮತ್ತು ನೀತಿನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿವೆ. ಆದರೆ ಇವುಗಳನ್ನು ಅನುಷ್ಠಾನಗೊಳಿಸುವಲ್ಲಿ ತತ್ಸಂಬಂಧಿತ ಅಧಿಕಾರಿಗಳು ವಿಫಲರಾಗಿರುವುದು ನಿಮಗೂ ತಿಳಿದಿರಲೇಬೇಕು. ರಸ್ತೆ ಸುರಕ್ಷಾ ಸಪ್ತಾಹದ ಆಚರಣೆಯು ಇದಕ್ಕೊಂದು ಉತ್ತಮ ಉದಾಹರಣೆ ಎನಿಸುತ್ತದೆ. ಈ ಸಪ್ತಾಹದ ಸಂದರ್ಭದಲ್ಲಿ ಸಾರಿಗೆ ಇಲಾಖೆ  ಮತ್ತು ಸಂಚಾರಿ ಆರಕ್ಷಕರು ತೋರುವ ಕ್ರಿಯಾಶೀಲತೆಯನ್ನು ಇನ್ನುಳಿದ ದಿನಗಳಲ್ಲೂ ತೋರಿದಲ್ಲಿ, ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳು ಹಾಗೂ ಶಾಶ್ವತ ಅಂಗವೈಕಲ್ಯಕ್ಕೆ ಈಡಾಗುವವರು ಮತ್ತು ಇವುಗಳಿಗೆ  ಬಲಿಯಾಗುವವರ ಸಂಖ್ಯೆ ನಿಶ್ಚಿತವಾಗಿಯೂ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.

ರಸ್ತೆ ಸುರಕ್ಷಾ ಸಪ್ತಾಹ

ಕಳೆದ ೨೮ ವರ್ಷಗಳಿಂದ ನಮ್ಮ ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಜನವರಿ ತಿಂಗಳಿನಲ್ಲಿ ರಸ್ತೆ ಸುರಕ್ಷಾ ಸಪ್ತಾಹವನ್ನು ಆಚರಿಸಲಾಗುತ್ತಿದೆ, ಈ ಕಾರ್ಯಕ್ರಮದಲ್ಲಿ ಸಂಚಾರ ವಿಭಾಗದ ಆರಕ್ಷಕರು, ಸಾರಿಗೆ ಇಲಾಖೆಗಳೊಂದಿಗೆ, ಅನೇಕ ಸ್ವಯಂಸೇವಾ ಸಂಘಟನೆಗಳು ಭಾಗಿಯಾಗುತ್ತವೆ. ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಶಾಲಾಕಾಲೇಜುಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸುಮಾರು ಮೂರು ದಶಕಗಳಿಂದ ಈ ಕಾರ್ಯಕ್ರಮ ಜರಗುತ್ತಿದ್ದರೂ, ನಮ್ಮ ದೇಶದಲ್ಲಿ ಸಂಭವಿಸುತ್ತಿರುವ ಅಪಘಾತಗಳು ಮತ್ತು ಇವುಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ನಮ್ಮ ಇಚ್ಛಾಶಕ್ತಿಯ ಕೊರತೆಯನ್ನು ತೋರುತ್ತದೆ.

ರಸ್ತೆ ಸುರಕ್ಷಾ ಸಪ್ತಾಹದ ಸಂದರ್ಭದಲ್ಲಿ ಬಹುತೇಕ ನಗರ ಮತ್ತು ಪಟ್ಟಣಗಳಲ್ಲಿ ಬ್ಯಾನರ್ ಗಳನ್ನೂ ಅಳವಡಿಸುವ ಹಾಗೂ ಕರಪತ್ರಗಳನ್ನು ಮುದ್ರಿಸಿ ಹಂಚುವ ಮೂಲಕ ರಸ್ತೆ ಸುರಕ್ಷತೆಯ ಬಗ್ಗೆ ಅರಿವನ್ನು ಮೂಡಿಸಲಾಗುವುದಾದರೂ, ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನುಷ್ಠಾನಿಸಬೇಕಾದ ಅನೇಕ ವಿಚಾರಗಳನ್ನು ಅನುಕೂಲಕರವಾಗಿ ಮರೆತುಬಿಡಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಹ್ವಾನಿತ ಗಣ್ಯರು, ಅದರಲ್ಲೂ ರಾಜಕೀಯ ನೇತಾರರು  ಸಾಮಾನ್ಯವಾಗಿ ಸಾರಿಗೆ ನಿಯಮಗಳನ್ನು ಪರಿಪಾಲಿಸಬೇಕಾದ ಮತ್ತು ಜನಸಾಮಾನ್ಯರಲ್ಲಿ ಈ ಬಗ್ಗೆ ಅರಿವು ಮೂಡಿಸುವ, ಅಪಘಾತಗಳನ್ನು ತಡೆಗಟ್ಟುವ ಮತ್ತು ಇದರಿಂದಾಗಿ ಸಂಭವಿಸುತ್ತಿರುವ ಮರಣಗಳ ಪ್ರಮಾಣವನ್ನು ನಿಯಂತ್ರಿಸುವ ಬಗ್ಗೆ ಭಾಷಣಗಳನ್ನು ಬಿಗಿಯುತ್ತಾರೆ. ಆದರೆ ತಾವು ಸರ್ಕಾರಿ ವಾಹನಗಳಲ್ಲಿ ಸಂಚರಿಸುವಾಗ ಇವೆಲ್ಲಾ ನಿಯಮಗಳನ್ನು ಗಾಳಿಗೆ ತೂರುತ್ತಾರೆ ಎನ್ನುವುದು ದೇಶದ ಪ್ರಜೆಗಳಿಗೆ ತಿಳಿಯದ ವಿಚಾರವೇನಲ್ಲ.

ರಸ್ತೆ ಅಪಘಾತಗಳ ರಾಜಧಾನಿ

ಭಾರತವು ವಿಶ್ವದ ರಸ್ತೆ ಅಪಘಾತಗಳ ರಾಜಧಾನಿ ಎನಿಸಿದ್ದ ಚೀನಾ ದೇಶವನ್ನು ಪದಚ್ಯುತಗೊಳಿಸಿ, ಅಗ್ರಸ್ಥಾನವನ್ನು ಅಲಂಕರಿಸಿ ಕೆಲವರ್ಷಗಳೇ ಕಳೆದಿವೆ. ಇದಕ್ಕೆ ಸಾಕಷ್ಟು ಸಮರ್ಥನೀಯ ಕಾರಣಗಳೂ ಇವೆ. ನಮ್ಮ ದೇಶದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳ ಸಂಖ್ಯೆ ಅತ್ಯಧಿಕವಾಗಿರುವುದರೊಂದಿಗೆ, ಇವುಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಅತ್ಯಧಿಕವಾಗಿರುವುದು ಪ್ರಮುಖ ಕಾರಣವೆನಿಸಿದೆ. ೨೦೧೪ ರ ಅಂಕಿ ಅಂಶಗಳಂತೆ ನಮ್ಮ ದೇಶದಲ್ಲಿ ಪ್ರತಿ ಗಂಟೆಗೆ ೨೦ ಕ್ಕೂ ಅಧಿಕ ಜನರು ರಸ್ತೆ ಅಪಘಾತಗಳಿಂದ ಮೃತಪಡುತ್ತಾರೆ. ಅರ್ಥಾತ್, ಒಂದು ವರ್ಷದಲ್ಲಿ ಸುಮಾರು ೧,೪೦,೦೦೦ ಜನರು ರಸ್ತೆ ಅಪಘಾತಗಳಲ್ಲಿ ಮೃತಪಡುವುದರೊಂದಿಗೆ, ಇದಕ್ಕೂ ಅಧಿಕ ಸಂಖ್ಯೆಯ ಜನರು ಶಾಶ್ವತ ಅಂಗವೈಕಲ್ಯಗಳಿಗೆ ಈಡಾಗುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದರಂತೆ ಭಾರತದಲ್ಲಿ ಸಂಭವಿಸುವ ದ್ವಿಚಕ್ರ ವಾಹನಗಳ ಅಪಘಾತಗಳಲ್ಲಿ ಮರಣದ ಪ್ರಮಾಣವು ಶೇ. ೨ ಕ್ಕೂ ಅಧಿಕವಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕವೆನಿಸಿದೆ. ಇದೇ ವರದಿಯಲ್ಲಿ ಉಲ್ಲೇಖಿಸಿರುವಂತೆ, ನಮ್ಮ ದೇಶದಲ್ಲಿ ಕೇವಲ ಶೇ. ೫೦ ರಷ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿದಲ್ಲಿ, ಶೇ. ೧೦ ರಷ್ಟು ಲಘು ವಾಹನಗಳ ಸವಾರರು ಸೀಟ್ ಬೆಲ್ಟ್ ಧರಿಸುತ್ತಾರೆ!. ರಸ್ತೆ ಅಪಘಾತಗಳಲ್ಲಿ ಮರಣದ ಪ್ರಮಾಣವು ಹೆಚ್ಚಲು ಇದೊಂದು ಪ್ರಮುಖ ಕಾರಣವೂ ಹೌದು.

ಅಂತೆಯೇ,  ಅತಿವೇಗದ ಚಾಲನೆ, ಮದ್ಯ ಅಥವಾ ಅನ್ಯ ಅಮಲು ಪದಾರ್ಥ ಸೇವಿಸಿವಾಹನ ಚಲಾಯಿಸುವುದು, ವಾಹನ ಚಾಲನೆಯಲ್ಲಿ ಪರಿಣತಿ ಇಲ್ಲದಿದ್ದರೂ ವಾಹನ ಚಲಾಯಿಸುವುದು, ಸಾರಿಗೆ ನಿಯಮಗಳನ್ನು ಉಲ್ಲಂಘಿಸುವುದು, ದ್ವಿಚಕ್ರ ವಾಹನದಲ್ಲಿ ಮೂರು ಅಥವಾ ನಾಲ್ಕು ಮಂದಿ ಪ್ರಯಾಣಿಸುವುದು, ಇತರ ವರ್ಗದ ವಾಹನಗಳಲ್ಲೂ ನಿಗದಿತ ಸಂಖ್ಯೆಗಿಂತ ಅಧಿಕ ಜನರನ್ನು ತುಂಬಿಸುವುದು, ಸರಕು ಸಾಗಾಟದ ವಾಹನಗಳಲ್ಲಿ ಜನರನ್ನು ಕೊಂಡೊಯ್ಯುವುದು, ಕಣ್ಣು ಕೋರೈಸುವ ದೀಪಗಳನ್ನು ಬೆಳಗಿಸಿ ವಾಹನ ಚಲಾಯಿಸುವುದು, ದುಸ್ಥಿತಿಯಲ್ಲಿರುವ ರಸ್ತೆಗಳು, ಅಲೆಮಾರಿ ಜಾನುವಾರುಗಳ ಹಾವಳಿ, ವೃತ್ತಿಪರ ಚಾಲಕರು ಸಾಕಷ್ಟು ವಿಶ್ರಾಂತಿ ಪಡೆಯದೇ ವಾಹನ ಚಲಾಯಿಸುವುದು, ಯಾವುದೇ ಸೂಚನೆಯನ್ನು ನೀಡದೆ ಥಟ್ಟನೇ ವಾಹನಗಳನ್ನು ನಿಲ್ಲಿಸುವುದು ಅಥವಾ ತಿರುಗಿಸುವುದು, ದೃಷ್ಠಿದೋಷವಿರುವ ಚಾಲಕರು ಇದನ್ನು ಸರಿಪಡಿಸಿಕೊಳ್ಳದೇ ವಾಹನ ಚಲಾಯಿಸುವುದು ಮತ್ತು ಅನಿಯಂತ್ರಿತವಾಗಿ ಹೆಚ್ಚುತ್ತಲೇ ಇರುವ ವಾಹನಗಳ ಸಂಖ್ಯೆಗಳಿಂದಾಗಿ, ರಸ್ತೆ ಅಪಘಾತಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.

ನಿಯಂತ್ರಿಸುವುದೆಂತು?

ವಾಹನ ಚಾಲನಾ ಪರವಾನಿಗೆಯನ್ನು ನೀಡುವ ಮುನ್ನ ಚಾಲಕರನ್ನು ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸುವುದು, ಪ್ರತಿಯೊಂದು ನಗರ ಹಾಗೂ ಪಟ್ಟಣಗಳಲ್ಲಿನ ಸಂಚಾರಿ ಆರಕ್ಷಕರಿಂದ ವರ್ಷವಿಡೀ ನಿಯಮಿತವಾಗಿ ವಾಹನಗಳ ಮತ್ತು ಇವುಗಳ ಚಾಲಕರ ದಾಖಲೆಗಳನ್ನು ತಪಾಸಣೆಯನ್ನು ಮಾಡಿಸುವ ಮೂಲಕ, ಪರವಾನಿಗೆ ಇಲ್ಲದೇ ಅಥವಾ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವ ಚಾಲಕರನ್ನು ಪತ್ತೆಹಚ್ಚಿ ಸೂಕ್ತ ಕಾನೂನುಕ್ರಮ ಜರಗಿಸಬೇಕು. ಗಂಭೀರ ಸ್ವರೂಪದ ಮತ್ತು ಸಾವುನೋವುಗಳಿಗೆ ಕಾರಣವೆನಿಸುವ ಅಪಘಾತಗಳ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನಡೆಸಿ, ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಇದೇ ರೀತಿಯಲ್ಲಿ ಅಪಘಾತ ಮತ್ತು ಅಮಾಯಕರ ಅಕಾಲಿಕ ಮರಣಗಳಿಗೆ ಕಾರಣವೆನಿಸುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಅತಿವೇಗದ ಚಾಲನೆ, ಅವೈಜ್ಞಾನಿಕ ರಸ್ತೆ ಉಬ್ಬುಗಳು, ಅಪ್ರಾಪ್ತರು ವಾಹನ ಚಲಾಯಿಸುವುದು, ರಸ್ತೆಗಳ ದುಸ್ಥಿತಿ ಮತ್ತಿತರ ಸಮಸ್ಯೆಗಳನ್ನು ಪರಿಹರಿಸುವುದೇ ಮುಂತಾದ ಕ್ರಮಗಳನ್ನು ತತ್ಸಂಬಂಧಿತ ಇಲಾಖೆಗಳು ಕೈಗೊಳ್ಳಬೇಕು. ಇದರೊಂದಿಗೆ  ಪ್ರತಿಯೊಬ್ಬ ವಾಹನಗಳ ಚಾಲಕರು ಸಂಚಾರ ನಿಯಮಗಳನ್ನು ತಪ್ಪದೆ ಪರಿಪಾಲಿಸಿದಲ್ಲಿ, ಭಾರತವನ್ನು ರಸ್ತೆ ಅಪಘಾತಗಳ ರಾಜಧಾನಿ  ಎನ್ನುವ ಪಟ್ಟದಿಂದ ಕೆಳಗಿಳಿಸುವುದು ಅಸಾಧ್ಯವೇನಲ್ಲ.

ತಾಜಾ ಸುದ್ದಿ

ಈ ಲೇಖನವನ್ನು ಬರೆದು ಮುಗಿಸುವಷ್ಟರಲ್ಲಿ ವಾಟ್ಸಾಪ್            ನಲ್ಲಿ ಬಂದ ಸಂದೇಶದಂತೆ, ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ನಿಯಮಗಳು ಈ ಕೆಳಗಿನಂತಿವೆ.

ಫೆಬ್ರವರಿ ೨೧ ರಂದು ರಾಜ್ಯ ಸಭೆಯು ಮೋಟಾರು ವಾಹನಗಳ ( ತಿದ್ದುಪಡಿ ) ಕಾಯಿದೆ ೨೦೧೬ ನ್ನು ಅಂಗೀಕರಿಸಿದ್ದು, ಇದು ಇದೇ ತಿಂಗಳಿನ ೧ ನೇ ತಾರೀಕಿನಿಂದ ಜಾರಿಗೊಂಡಿದೆ. ನೂತನ ನಿಯಮಗಳಂತೆ ವಾಹನವನ್ನು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸದಿದ್ದಲ್ಲಿ ರೂ ೧೦೦೦, ವಾಹನದ ವಿಮಾ ದಾಖಲೆ ಇಲ್ಲದಿದ್ದಲ್ಲಿ ರೂ ೧,೫೦೦, ನೋಂದಣಿ ಮತ್ತು ಅನ್ಯ ದಾಖಲೆಗಳು ಇಲ್ಲದಿದ್ದಲ್ಲಿ ರೂ ೫,೦೦೦ ಹಾಗೂ ವಾಹನವನ್ನು ಮುಟ್ಟುಗೋಲು ಹಾಕುವುದುಮತ್ತು ಚಾಲನಾ ಪರವಾನಿಗೆ ಇಲ್ಲದಿದ್ದಲ್ಲಿ ರೂ ೧೦,೦೦೦ ದಂಡವನ್ನು ವಿಧಿಸಲಾಗುವುದು.ವಾಹನವನ್ನು ಚಲಾಯಿಸುವಾಗ  ಮೊಬೈಲ್ ಬಳಸಿದಲ್ಲಿ ರೂ ೫೦೦೦, ಮದ್ಯ ಸೇವಿಸಿ ವಾಹನ ಚಲಾಯಿಸಿದಲ್ಲಿ ರೂ ೨೫,೦೦೦ ಹಾಗೂ ಇದನ್ನು ಮೂರುಬಾರಿ ಪುನರಾವರ್ತಿಸಿದಲ್ಲಿ ವಾಹನ ಚಾಲನಾ ಪರವಾನಿಗೆ ಮುಟ್ಟುಗೋಲು ಹಾಕುವುದು ಮತ್ತು ವಾಹನದ ಪ್ರದೂಷಣೆಯ ಪ್ರಮಾಣ ಪತ್ರ ಇರದಿದ್ದಲ್ಲಿ ರೂ ೧,೫೦೦ ದಂಡವನ್ನು ತೆರಬೇಕಾಗುವುದು. ಇಂತಹ ತಪ್ಪುಗಳನ್ನು ಮೂರುಬಾರಿ ಪುನರಾವರ್ತಿಸಿದಲ್ಲಿ ವಾಹನ ಚಾಲನಾ ಪರವಾನಿಗೆಯನ್ನು ರದ್ದುಪಡಿಸುವಂತಹ  ಕಠಿಣ ಕ್ರಮಗಳನ್ನು ಕೈಗೊಳ್ಳಲು ನೂತನ ತಿದ್ದುಪಡಿಯಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಈ ಕಾನೂನು ಮತ್ತು ನಿಯಮಗಳನ್ನು ತತ್ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಜಾರಿಗೊಳಿಸದೇ ಇದ್ದಲ್ಲಿ, ಕೇಂದ್ರ ಸರ್ಕಾರದ ಈ ನಡೆಯು ನಿಷ್ಪ್ರಯೋಜಕವೆನಿಸಲಿದೆ. ಇಷ್ಟು ಮಾತ್ರವಲ್ಲ, ರಸ್ತೆ ಅಪಘಾತಗಳು ಮತ್ತು ಇವುಗಳಿಂದಾಗಿ ಶಾಶ್ವತ ಅಂಗವೈಕಲ್ಯ ಅಥವಾ ಮರಣಕ್ಕೆ ಈಡಾಗುವವರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು