Tuesday, May 28, 2013


 ಟ್ರಾಫಿಕ್  ಜಾಮ್ ಗೆ ಕಾರಣವೆನಿಸುವ ಮೆರವಣಿಗೆಗಳು
ದೇಶದ ಪ್ರತಿಯೊಂದು ನಗರಗಳು,ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನನಿತ್ಯ ಸಂಭವಿಸುತ್ತಿರುವ ಟ್ರಾಫಿಕ್ ಜಾಮ್ ನಲ್ಲಿ ಒಂದಲ್ಲ ಒಂದುಬಾರಿ ನೀವೂ ಸಿಲುಕಿರಲೇಬೇಕು. ಅದರಲ್ಲೂ ತುರ್ತು ಸಂದರ್ಭಗಳಲ್ಲಿ ಸಿಲುಕಿಕೊಂಡು ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸಲಾರದೇ ಅಸಹಾಯಕರಾಗಿ ಕೈ ಹಿಸುಕಿಕೊಂಡು ಚಡಪಡಿಸಿರಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಸಮಸ್ಯೆಗೆ ಕಾರಣಕರ್ತರಾದ ವ್ಯಕ್ತಿಗಳು ಅಥವಾ ಸಂಘಟನೆಗಳನ್ನು ಮನಸಾರೆ ಶಪಿಸಿರಲೂ ಬಹುದು. ಆದರೆ ಹೊಟ್ಟೆಯಲ್ಲಿ ಸಿಟ್ಟಿದ್ದರೂ,ರಟ್ಟೆಯಲ್ಲಿ ಬಲವಿಲ್ಲದ ಕಾರಣದಿಂದಾಗಿ ತೆಪ್ಪಗೆಕುಳಿತಿರಬಹುದು!.
ಇತ್ತೀಚಿಗೆ ನಡೆದಿದ್ದ ವಿಧಾನ ಸಭಾ ಚುನಾವಣೆಗಳ ಫಲಿತಾಂಶ ಪ್ರಕಟವಾದ ಬಳಿಕ,ವಿವಿಧ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಅಭ್ಯರ್ಥಿಗಳ ವಿಜಯೋತ್ಸವದ ಮೆರವಣಿಗೆಗಳು ಇಂದಿಗೂ ನಡೆಯುತ್ತಿವೆ. ನೂರಾರು ಕಾರ್ಯಕರ್ತರು,ಅಭಿಮಾನಿಗಳು ಮತ್ತು ಬೆಂಬಲಿಗರೊಂದಿಗೆ ಹಲವಾರು ವಾಹನಗಳು ಮತ್ತು ಬಾಜಾಬಜಂತ್ರಿಗಳೊಂದಿಗೆ ನಡೆಯುವ ಇಂತಹ ಮೆರವಣಿಗೆಗಳು,ಹಲವಾರು ತಾಸುಗಳ ಕಾಲ ಟ್ರಾಫಿಕ್ ಜಾಮ್ ಸಮಸ್ಯೆಗೆ ಕಾರಣವೆನಿಸುತ್ತಿವೆ. ಜನಸಾಮಾನ್ಯರಿಗೆ ಅಯಾಚಿತ ತೊಂದರೆಗಳಿಗೂ ಕಾರಣವೆನಿಸುತ್ತಿವೆ.
ಟ್ರಾಫಿಕ್ ಜಾಮ್ ಸಮಸ್ಯೆಗೆ ಕಾರಣಗಳೇನು?
ಅದೇನೇ ಇರಲಿ, ಈ ಟ್ರಾಫಿಕ್ ಜಾಮ್ ಸಂಭವಿಸಲು ಅನೇಕ ಕಾರಣಗಳಿವೆ. ಇವುಗಳಲ್ಲಿ ರಾಜಕೀಯ ಪಕ್ಷಗಳು-ಇತರ ಸಂಘಟನೆಗಳು ನಡೆಸುವ ರಸ್ತೆ ತಡೆ-ಬಂದ್,ಅಗಲಕಿರಿದಾದ ರಸ್ತೆಗಳು,ಪಾದಚಾರಿಗಳಿಗೆ ಅತ್ಯವಶ್ಯಕ ಎನಿಸುವ ಕಾಲುದಾರಿಗಳ ಅಭಾವ,ರಸ್ತೆಗಳ ದುರಸ್ತಿ-ಡಾಮರೀಕರಣದ ಕಾಮಗಾರಿಗಳು,ರಸ್ತೆಬದಿಗಳಲ್ಲಿ ವಾಹನಗಳ ನಿಲುಗಡೆ,ಅತಿಯಾದ ವಾಹನಗಳ ಸಂಖ್ಯೆ,ಸಾರಿಗೆ ನಿಯಮಗಳನ್ನು ಪರಿಪಾಲಿಸದ ವಾಹನ ಚಾಲಕರು,ಅಲೆಮಾರಿ ಜಾನುವಾರುಗಳ ಹಾವಳಿ,ಹಬ್ಬ-ಹರಿದಿನಗಳು ಅಥವಾ ಸಭೆ-ಸಮಾರಂಭಗಳು,ಶಾಲಾಕಾಲೇಜುಗಳು ಹಾಗೂ ಕಛೇರಿಗಳು ಆರಂಭವಾಗುವ ಮತ್ತು ಮುಚ್ಚುವ ಸಮಯ,ರಸ್ತೆ ಅಪಘಾತಗಳು,  ಧಾರ್ಮಿಕ ಹಾಗೂ ರಾಜಕೀಯ ಪಕ್ಷಗಳ ಮೆರವಣಿಗೆಗಳು ಮತ್ತು ವಾಹನಗಳ ರೇಲಿಗಳು ಪ್ರಮುಖವಾಗಿವೆ.
ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಒಂದಿಷ್ಟು ಅಡಚಣೆ ಸಂಭವಿಸಿದೊಡನೆ ಸಾಲುಗಟ್ಟಿ ನಿಲ್ಲುವ ವಾಹನಗಳನ್ನು ದಾಟಿ ಮುನ್ನುಗುವ ಇತರ ವಾಹನಗಳಿಂದಾಗಿ ಟ್ರಾಫಿಕ್ ಜಾಮ್ ಅಭೇದ್ಯವೆನಿಸುತ್ತದೆ. ಇಂತಹ ಸಂದರ್ಭದಲ್ಲಿ ದ್ವಿಚಕ್ರ-ತ್ರಿಚಕ್ರ ವಾಹನಗಳ ಚಾಲಕರ ಆತುರದಿಂದಾಗಿ,ಸಮಸ್ಯೆಯು ಇನ್ನಷ್ಟು ಜಟಿಲಗೊಳ್ಳುತ್ತದೆ.
ಸಂಚಾರ ವಿಭಾಗದ ಆರಕ್ಷಕರ ಅನುಪಸ್ಥಿತಿಯಲ್ಲಿ ಸಹನೆಯಿಲ್ಲದ ಚಾಲಕರ ನಡುವೆ ವಾಗ್ಯುದ್ಧವೇ ನಡೆಯುತ್ತದೆ. ತತ್ಪರಿಣಾಮವಾಗಿ 
ನೂರಾರು ವಾಹನಗಳಿಂದ ತುಂಬಿ ತುಳುಕುವ ರಸ್ತೆಯಲ್ಲಿ ಪಾದಚಾರಿಗಳು ಸಂಚರಿಸುವುದೂ ಅಸಾಧ್ಯವೆನಿಸುತ್ತದೆ.
ಆದರೆ ಇವೆಲ್ಲಕ್ಕೂ ಮಿಗಿಲಾಗಿ ಸಾಲುಗಟ್ಟಿ ನಿಂತ ಅಸಂಖ್ಯ ವಾಹನಗಳ ಎಂಜಿನ್ ಗಳು ಕಾರ್ಯಾಚರಿಸುತ್ತಲೇ ಇರುವುದರಿಂದ ಅಗಾಧ ಪ್ರಮಾಣದ ಇಂಧನವು ಪೋಲಾಗುತ್ತದೆ. ಜೊತೆಗೆ ನೂರಾರು ವಾಹನಗಳು ಏಕಕಾಲದಲ್ಲಿ ಉಗುಳುವ ಹೊಗೆಯಿಂದಾಗಿ ಸುತ್ತಮುತ್ತಲ ಪರಿಸರವು ಕಲುಷಿತಗೊಳ್ಳುತ್ತದೆ. ಹಾಗೂ ಈ ಕಲುಷಿತ ಗಾಳಿಯನ್ನು ಸೇವಿಸಿದ ಜನರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮವನ್ನು ಬೀರುತ್ತದೆ. ಪುಟ್ಟ ಮಕ್ಕಳ ಪಾಲಿಗೆ ಕಾರ್ಬನ್ ಡೈ ಆಕ್ಸೈಡ್ ಮಿಶ್ರಿತ ಧೂಮವು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಇಷ್ಟೆಲ್ಲಾ ಸಾಲದೆನ್ನುವಂತೆ ಸಾಲುಗಟ್ಟಿ ನಿಂತ ವಾಹನಗಳ ಚಾಲಕರು ಎಡೆಬಿಡದೇ ಬಾರಿಸುವ ಕರ್ಕಶವಾದ ಹಾರ್ನ್ ಗಳಿಂದಾಗಿ ಶಬ್ದಮಾಲಿನ್ಯವೂ ಉಂಟಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತಡೆಗಟ್ಟಲು, ಸಂಬಂಧಿತ ಇಲಾಖೆಗಳ ಅಧಿಕಾರಿಗಳಲ್ಲಿನ  ಇಚ್ಛಾಶಕ್ತಿಯ ಕೊರತೆಯೂ ಕಾರಣವೆನಿಸಿದೆ. ಜೊತೆಗೆ ಈ ಸಾರ್ವತ್ರಿಕ ಸಮಸ್ಯೆಯನ್ನು ತಡೆಗಟ್ಟಲು ಅವಶ್ಯಕ ನಿಯಮಗಳನ್ನು ರೂಪಿಸಬೇಕಾದ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ರಾಜಕೀಯ ನೇತಾರರು-ಪಕ್ಷಗಳು,ತಾವೇ ನಡೆಸುವ ರಸ್ತೆ ತಡೆ,ಧರಣಿ ಮುಷ್ಕರ,ಬಂದ್,ಮೆರವಣಿಗೆ ಮತ್ತು ರೇಲಿಗಳಿಗೆ ಅಡಚನೆಯಾಗಬಹುದು ಎನ್ನುವ ಕಾರಣದಿಂದಾಗಿ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನುವ ಸಂದೇಹ ದೇಶದ ಜನತೆಯನ್ನು ಕಾಡುತ್ತಿರುವುದು ಮಾತ್ರ ಸುಳ್ಳೇನಲ್ಲ!.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು
ಫೋಟೋ-ಕಾಂಗ್ರೆಸ್ಸ್ ಪಕ್ಷದ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ್ದ ಟ್ರಾಫಿಕ್ ಜಾಮ್

Friday, May 24, 2013


ಪೂಜ್ಯ ದೇವಳದ ಮುಂದಿನ ಗದ್ದೆಯಲ್ಲಿ ಎಷ್ಟೊಂದು ತ್ಯಾಜ್ಯ!
ಪುತ್ತೂರಿನ ಮತ್ತು ಸುತ್ತಮುತ್ತಲ ಹತ್ತಾರು ಊರುಗಳ ನಿವಾಸಿಗಳ ಆರಾಧ್ಯ ದೇವತೆಯಾಗಿರುವ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯು ವರ್ಷಂಪ್ರತಿ ವಿಜೃಂಭಣೆಯಿಂದ ಜರಗುತ್ತದೆ. ಆದರೆ ಈ ವರ್ಷ ಸಂಪೂರ್ಣವಾಗಿ ಪುನರ್ನಿರ್ಮಿತ ದೇವಳದ ಬ್ರಹ್ಮಕಲಶದ ಸಡಗರ-ಸಂಭ್ರಮಗಳೊಂದಿಗೆ ವರ್ಷಾವಧಿ ಜಾತ್ರೆಯೂ ಅದ್ಧೂರಿಯಾಗಿ ನಡೆಯುತ್ತಿರುವುದು ವಿಶೇಷ.
ಇದೇ ತಿಂಗಳಿನ ಮೊದಲನೆಯ ವಾರದಲ್ಲಿ ಆರಂಭಗೊಂಡಿದ್ದ ಬ್ರಹ್ಮಕಲಶದ ಕಾರ್ಯಕ್ರಮವು ಮುಗಿದಂತೆಯೇ ಜಾತ್ರೆ ಆರಂಭಗೊಂಡಿತ್ತು. ಬ್ರಹ್ಮಕಲಶದ ಸಂದರ್ಭದಲ್ಲಿ ನಡೆಯುತ್ತಿದ್ದ ಅನೇಕ ಧಾರ್ಮಿಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ,ಪ್ರತಿನಿತ್ಯ ಬೆಳಗಿನ ಜಾವದಿಂದ ನಟ್ಟಿರುಳಿನ ತನಕ ನಡೆಯುತ್ತಿದ್ದ ಅನ್ನ ದಾಸೋಹದಲ್ಲಿ ಸಹಸ್ರಾರು ಭಕ್ತಾಭಿಮಾನಿಗಳು ಶ್ರದ್ಧಾ ಭಕ್ತಿಪೂರ್ವಕವಾಗಿ ಭಾಗವಹಿಸಿದ್ದರು. ಅತ್ಯಂತ ಶಿಸ್ತುಬದ್ಧವಾಗಿ ಜರಗಿದ್ದ ಈ ಕಾರ್ಯಕ್ರಮದಲ್ಲಿ ಸಹಸ್ರಾರು ಕಾರ್ಯಕರ್ತರು  ಮತ್ತು ಅಸಂಖ್ಯ ಭಕ್ತರು ಪಾಲ್ಗೊಂಡಿದ್ದರು.  ಆರಂಭದಿಂದ ಅಂತ್ಯದ ತನಕ ಬ್ರಹ್ಮಕಲಶದ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀದೇವಳದ ಆವರಣ ಮತ್ತು ಮುಂಭಾಗದಲ್ಲಿನ ಗದ್ದೆಗಳಲ್ಲಿ ಸ್ವಚ್ಚತೆಯನ್ನು ಜತನದಿಂದ ಕಾಪಾಡಲಾಗಿತ್ತು. ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಲು ಅಲ್ಲಲ್ಲಿ ಪ್ಲಾಸ್ಟಿಕ್ ಡ್ರಮ್ ಗಳನ್ನೂ ಇರಿಸಿದ್ದು,ಅಪ್ಪಿತಪ್ಪಿ ಎಲ್ಲಾದರೂ ಎಸೆದ ತ್ಯಾಜ್ಯಗಳನ್ನು ತಕ್ಷಣ ಹೆಕ್ಕಿ ತೆಗೆಯುತ್ತಿದ್ದ ಸ್ವಯಂಸೇವಕರ ದಂಡು,ಸ್ವಚ್ಚತೆಯನ್ನು ಕಾಪಾಡಲು ಸದಾ ಶ್ರಮಿಸುತ್ತಿತ್ತು.
ಆದರೆ ಬ್ರಹ್ಮಕಲಶದ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದ ಬಳಿಕ ವರ್ಷಾವಧಿ ಜಾತ್ರೆಯ ಕಾರ್ಯಕ್ರಮಗಳು ಆರಂಭವಾದಂತೆಯೇ,ದೇವಳದ ಮುಂಭಾಗದ ಗದ್ದೆಯಲ್ಲಿ ತಾತ್ಕಾಲಿಕ ಮಳಿಗೆಗಳು ತಲೆಯೆತ್ತಿದ್ದವು. ಇವುಗಳಲ್ಲಿ ಭಕ್ತಾಭಿಮಾನಿಗಳ ಹಸಿವು-ನೀರಡಿಕೆಗಳನ್ನು ನೀಗಿಸುವ ಖಾದ್ಯ-ಪೇಯಗಳನ್ನು ಮಾರಾಟಮಾಡುವ ಮಳಿಗೆಗಳ ಸಂಖ್ಯೆಯು ಸ್ವಾಭಾವಿಕವಾಗಿಯೇ ಹೆಚ್ಚಾಗಿತ್ತು. ಇಂತಹ ಮಳಿಗೆಗಳಿಂದಾಗಿ ಜಾತ್ರೆಯ ಗದ್ದೆಯಲ್ಲಿ ತ್ಯಾಜ್ಯಗಳ ಉತ್ಪಾದನೆ ಅತಿಯಾಗುತ್ತಿದೆ. 
ಅನಾದಿ ಕಾಲದಿಂದಲೂ ಸೀಮೆಯ ಆರಾಧ್ಯದೇವತೆಯ ಬಗ್ಗೆ ಅಪಾರವಾದ ಭಕ್ತಿ-ವಿಶ್ವಾಸ ವನ್ನು ಹೊಂದಿರುವ ಅಸಂಖ್ಯ ಭಕ್ತರು,ದೇವಳವನ್ನು ಪ್ರವೇಶಿಸುವಾಗ ಮಡಿ ಮೈಲಿಗೆಗಳನ್ನು ಅರಿತು ಸ್ನಾನವನ್ನು ಮಾಡಿ 
ಶುಚಿರ್ಭೂತರಾಗಿ ಬರುತ್ತಾರೆ. ದೇವಳದ ಆವರಣದಲ್ಲೂ ದೈವ ಸನ್ನಿಧಿಯ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತಾರೆ. ಆದರೆ
 ಜಾತ್ರೆಯ ಗದ್ದೆಯನ್ನು ಪ್ರವೇಶಿಸಿದೊಡನೆ ಇವೆಲ್ಲವನ್ನೂ ಮರೆತುಬಿಡುತ್ತಾರೆ!. 
ಜಾತ್ರೆಯ  ಸಂದರ್ಭದಲ್ಲಿ ಉತ್ಪನ್ನವಾಗಿರುವ ಅಗಾಧ ಪ್ರಮಾಣದ ತ್ಯಾಜ್ಯಗಳು, ಬ್ರಹ್ಮಕಲಶದ ಸಂದರ್ಭದಲ್ಲಿ ಕಾಣಿಸದಿರಲು ನಿರ್ದಿಷ್ಟ ಕಾರಣವೂ ಇದೆ. ಬ್ರಹ್ಮಕಲಶದ ಕಾರ್ಯಕ್ರಮದ ಎಲ್ಲಾ ದಿನಗಳಲ್ಲೂ,ದೇವಳಕ್ಕೆ ಭೇಟಿನೀಡಿದ ಭಕ್ತರಿಗೆ ಊಟ-ಉಪಾಹಾರಗಳ ವ್ಯವಸ್ಥೆಯನ್ನು ಉಚಿತವಾಗಿ ಒದಗಿಸಲಾಗಿತ್ತು. ಈ ಸಂದರ್ಭದಲ್ಲಿ ಉತ್ಪನ್ನವಾದ ಯಾವುದೇ ತ್ಯಾಜ್ಯಗಳನ್ನು ಸದಾ ಸಿದ್ಧವಾಗಿರುತ್ತಿದ್ದ ವಾಹನಗಳಲ್ಲಿ ನೇರವಾಗಿ ತುಂಬಿಸಿ,ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆಯೂ ಇತ್ತು. ಜೊತೆಗೆ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ವಯಂಸೇವಕರು ಇದರ ಉಸ್ತುವಾರಿಯನ್ನು ಸಮರ್ಪಕವಾಗಿ ನಡೆಸುತ್ತಿದ್ದರು. ಇವೆಲ್ಲಕ್ಕೂ ಮಿಗಿಲಾಗಿ ಉಚಿತ ಊಟ-ಉಪಾಹಾರಗಳ ವ್ಯವಸ್ಥೆ ಇದ್ದುದರಿಂದಾಗಿ,ಗದ್ದೆಯಲ್ಲಿ ಹಣವನ್ನು ತೆತ್ತು ಇವುಗಳನ್ನು ಪಡೆಯಬೇಕಾದ ಅವಶ್ಯಕತೆಯೇ ಇರಲಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಖಾದ್ಯ-ಪೇಯಗಳ ಮಳಿಗೆಗಳನ್ನು ಯಾರೊಬ್ಬರೂ ತೆರೆದಿರದ ಕಾರಣದಿಂದಾಗಿ,ಜಾತ್ರೆಯ ಗದ್ದೆಯಲ್ಲಿ ತ್ಯಾಜ್ಯಗಳು ತುಂಬಿರಲಿಲ್ಲ!.
ಆದರೆ ಜಾತ್ರೆ ಆರಂಭವಾದಂತೆಯೇ ದೇವಳದ ಮುಂದಿನ ಬಾಕಿಮಾರು ಗದ್ದೆಯಲ್ಲಿ ತ್ಯಾಜ್ಯಗಳ ಪ್ರಮಾಣವು ದಿನೇದಿನೇ ಹೆಚ್ಚಲಾರಂಭಿಸಿತ್ತು. ಗದ್ದೆಯ ವಿವಿಧ ಭಾಗಗಳಲ್ಲಿ ತ್ಯಾಜ್ಯಸಂಗ್ರಹಕ್ಕಾಗಿ ತೊಟ್ಟಿಗಳನ್ನು ಇರಿಸಿದ್ದರೂ,ಕಂಡಲ್ಲಿ ಕಸವನ್ನು ಎಸೆಯುವ ಜನರ ಕೆಟ್ಟ ಹವ್ಯಾಸದಿಂದಾಗಿ ಅಲ್ಲಲ್ಲಿ ಕಸಗಳ ರಾಶಿ ಕಣ್ಣಿಗೆ ರಾಚುವಂತೆ ಗೋಚರಿಸುತ್ತಿತ್ತು.ಜೊತೆಗೆ ಗದ್ದೆಯಲ್ಲಿ ಇರಿಸಿದ್ದ ಕಸದ ತೊಟ್ಟಿಗಳ ಸಂಖ್ಯೆಯು ತೀರಾ ಕಡಿಮೆಯಾಗಿದ್ದು,ಇವುಗಳು ತುಂಬಿದೊಡನೆ 
ತೆರವುಗೊಳಿಸಲು ಜನದಟ್ಟಣೆಯು ಅಡ್ಡಿಯಾಗುತ್ತಿತ್ತು.ಆದರೂ ಬೆಳಗಿನ ಜಾವ ಕರ್ತವ್ಯಕ್ಕೆ ಹಾಜರಾಗುವ ಪುತ್ತೂರು ಪುರಸಭೆಯ ಪೌರ ಕಾರ್ಮಿಕರು ಗದ್ದೆಯ ಉದ್ದಗಲಕ್ಕೂ ಹರಡಿರುವ ಈ ತ್ಯಾಜ್ಯಗಳನ್ನು ಸಂಗ್ರಹಿಸಿ,ವಾಹನಗಳಲ್ಲಿ ತುಂಬಿ ವಿಲೇವಾರಿ ಮಾಡಲು ಹರಸಾಹಸವನ್ನೇ ನಡೆಸುತ್ತಿದ್ದಾರೆ. ಕೆಲವೇ ದಿನಗಳ ಮುನ್ನ ದೇವಳದ ಸುತ್ತಮುತ್ತಲ ಪರಿಸರವನ್ನು ಚೊಕ್ಕಟವಾಗಿ ಇರಿಸಲು ಸಹಕರಿಸಿದ್ದ ಭಕ್ತಾಭಿಮಾನಿಗಳು,ಇದೀಗ ಅಸಹ್ಯವೆನಿಸುವ ಕಸದ ರಾಶಿಗಳನ್ನು ಹುಟ್ಟುಹಾಕಲು ಕಾರಣವೆನಿಸಿರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತದೆ.
ಅದೇನೇ ಇರಲಿ,ಇನ್ನು ಮುಂದಾದರೂ ದೇವಳದ ಪಾವಿತ್ರ್ಯಕ್ಕೆ ಧಕ್ಕೆಯಾಗುವ,ಮನುಷ್ಯನ ಆರೋಗ್ಯಕ್ಕೆ ಮಾರಕವೆನಿಸಬಲ್ಲ,ನಮ್ಮ ಸುತ್ತಮುತ್ತಲ ಪರಿಸರಕ್ಕೆ ಹಾನಿಕಾರಕ ಎನಿಸುವ ತ್ಯಾಜ್ಯಗಳನ್ನು,ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಮರ್ಪಕವಾಗಿ ಸಂಗ್ರಹಿಸಲು,ಬಳಿಕ ಸುರಕ್ಷಿತವಾಗಿ ಸಾಗಿಸಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆಯನ್ನು ಮಾಡಬೇಕಿದೆ. ಇದಕ್ಕೂ ಮಿಗಿಲಾಗಿ ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಿಂದಲೇ ಇವುಗಳನ್ನು ಸಂಗ್ರಹಿಸುವ ಮತ್ತು ಕಂಡಲ್ಲಿ ಕಸವನ್ನು ಎಸೆಯುವುದರಿಂದ ಸಂಭವಿಸಬಲ್ಲ ಗಂಭೀರ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ.
ಕೊನೆಯ ಮಾತು
ಪುತ್ತೂರು ಪುರಸಭೆಯ ವತಿಯಿಂದ ದೇವಳದ ಕಾರ್ಯಕ್ರಮದ ಸಂದರ್ಭದಲ್ಲಿ ಅಲಂಕಾರಕ್ಕಾಗಿ  ಪ್ಲಾಸ್ಟಿಕ್ ನಿರ್ಮಿತ ತೋರಣ ಹಾಗೂ ಫ್ಲೆಕ್ಸ್ ಅಭಿನಂದನಾ-ಸ್ವಾಗತ ಫಲಕಗಳನ್ನು ಬಳಸದೇ,ನೈಸರ್ಗಿಕ ವಸ್ತುಗಳಿಂದ ಸಿದ್ಧಪಡಿಸಿದ ತಳಿರು ತೋರಣಗಳು ಮತ್ತು ಬಟ್ಟೆಯಿಂದ ತಯಾರಿಸಿದ ಬ್ಯಾನರ್ ಗಳನ್ನು ಬಳಸುವಂತೆ ಸೂಚಿಸಲಾಗಿತ್ತು. ಇದರೊಂದಿಗೆ ಗದ್ದೆಯಲ್ಲಿನ ಖಾದ್ಯ-ಪೇಯಗಳು ಮತ್ತು ಅನ್ಯ ಮಳಿಗೆಗಳಲ್ಲಿ ಪ್ಲಾಸ್ಟಿಕ್-ಥರ್ಮೊಕೊಲ್ ನಿರ್ಮಿತ ತಟ್ಟೆ,ಲೋಟ,ಚಮಚ,ಬಾಟಲಿಗಳೇ ಮುಂತಾದವುಗಳನ್ನು ಬಳಸದಂತೆ ಎಚ್ಚರಿಕೆಯನ್ನು ನೀಡಲಾಗಿತ್ತು. ಇದನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದ್ದ ಅಧಿಕಾರಿಗಳು,ಇವೆಲ್ಲವನ್ನೂ ಕಂಡೂ ಕಾಣದಂತೆ ವರ್ತಿಸಿದ್ದರು!. ಪುರಸಭೆಯ ನಿಷ್ಕ್ರಿಯತೆಯ ಬಗ್ಗೆ ಚೆನ್ನಾಗಿ ಅರಿತಿರುವ ಸ್ಥಳೀಯರು,ಇಂತಹ ಪೊಳ್ಳು ಬೆದರಿಕೆಗಳಿಗೆ ಸೊಪ್ಪು ಹಾಕುವುದಿಲ್ಲ. ಹಾಗೂ ಇದೇ ಕಾರಣದಿಂದಾಗಿ ಜಾತ್ರೆಯ ಗದ್ದೆ ಮತ್ತು ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯಗಳ ಪ್ರಮಾಣವು ಹೆಚ್ಚುವುದರಲ್ಲಿ ಸಂದೇಹವಿಲ್ಲ!.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು
24-05-2013
ಬ್ರಹ್ಮ ರಥೋತ್ಸವದ ಮರುದಿನ ಬೆಳಿಗ್ಗೆ ತೆಗೆದ ಫೋಟೋ

Wednesday, May 22, 2013

aatmeeya odugare,

ಆತ್ಮೀಯ ಓದುಗರೇ,
ಬಳಕೆದಾರರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ,ಜನಸಾಮಾನ್ಯರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಉದಯವಾಣಿ ಮತ್ತು ಇತರ ಕನ್ನಡ ಪತ್ರಿಕೆಗಳಲ್ಲಿ ಕಳೆದ ಹತ್ತಾರು ವರ್ಷಗಳಲ್ಲಿಸಾಕಷ್ಟುಲೇಖನಗಳನ್ನುಬರೆದಿದ್ದೇನೆ.ಇದೀಗ ನನ್ನದೇ ಆದ ಬ್ಲಾಗ್ ನಲ್ಲಿ ಕೆಲವೊಂದು ಲೇಖನಗಳನ್ನು ಪ್ರಕಟಿಸಲಿದ್ದೇನೆ. ನಿಮ್ಮ ಅನಿಸಿಕೆಗಳು ಮತ್ತು ಅಭಿಪ್ರಾಯಗಳಿಗೆ ಸ್ಪಂದಿಸಲು ಪ್ರಯತ್ನಿಸುತ್ತೇನೆ.

ಇಂತಿ,
ಡಾ.ಸಿ.ನಿತ್ಯಾನಂದ ಪೈ
ಸಂಚಾಲಕ
ಬಳಕೆದಾರರ ಹಿತರಕ್ಷಣಾ ವೇದಿಕೆ
ಬೊಳುವಾರು
ಪುತ್ತೂರು,ದ. ಕ
ದಿ -೦೮ -೦ ೩ -೨ ೦ ೧ ೩
   ದಾರಿತಪ್ಪಿಸುವ ಜಾಹೀರಾತುಗಳತ್ತ ಕೇಂದ್ರಸರಕಾರದ ಚಿತ್ತ
ವಿವಿಧ ಮಾಧ್ಯಮಗಳಲ್ಲಿ ಪ್ರತಿನಿತ್ಯ ಪ್ರಕಟವಾಗುವ ಅಸಂಖ್ಯ ಜಾಹೀರಾತುಗಳಲ್ಲಿ ಜನಸಾಮಾನ್ಯರ ದಾರಿತಪ್ಪಿಸುವ,ಸತ್ಯಕ್ಕೆ ದೂರವಾದ ಮತ್ತು ಉತ್ಪ್ರೇಕ್ಷಿತ  ಜಾಹೀರಾತುಗಳ ಸಂಖ್ಯೆ ಸಾಕಷ್ಟಿದೆ. ಇಂತಹ  ಜಾಹೀರಾತುಗಳನ್ನು ನಿಯಂತ್ರಿಸಲು ಹಾಗೂ ನಿಷೇಧಿಸಲು ಮತ್ತು ಇವುಗಳ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ನಮ್ಮ ದೇಶದಲ್ಲಿ ಅವಶ್ಯಕ ವ್ಯವಸ್ಥೆಗಳೂ ಇವೆ.  ಆದರೆ  ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು  ಈ ಕಾನೂನುಗಳನ್ನು  ಕಟ್ಟುನಿಟ್ಟಾಗಿ ಜಾರಿಗೊಳಿಸದ ಕಾರಣದಿಂದಾಗಿ, ಇಂತಹ ಜಾಹೀರಾತುಗಳ  ಹಾವಳಿ ಇತ್ತೀಚಿನ ಕೆಲ ವರ್ಷಗಳಿಂದ ಹೆಚ್ಚುತ್ತಿದೆ. ಹಾಗೂ ಇದೇ ಕಾರಣದಿಂದಾಗಿ ಇವುಗಳ ವಿರುದ್ಧ ದೂರುಗಳನ್ನು ನೀಡುತ್ತಿರುವ ಗ್ರಾಹಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರವು, ಈ ಸಮಸ್ಯೆಯನ್ನು  ನಿಯಂತ್ರಿಸಲು ಕಠಿಣ  ಕ್ರಮಗಳನ್ನು ಕೈಗೊಳ್ಳಲು ಸನ್ನದ್ಧವಾಗಿದೆ.  
-----------          ------------           -------------          ------------           -----------          ------------         ------------                           ಪ್ರತಿನಿತ್ಯ ವಿವಿಧ ಮಾಧ್ಯಮಗಳಲ್ಲಿ ಪ್ರಕಟ- ಪ್ರಸಾರವಾಗುವ ವೈವಿಧ್ಯಮಯ ಜಾಹೀರಾತುಗಳಲ್ಲಿ ಕೆಲವೊಂದು ಜಾಹೀರಾತುಗಳು  ಮುಗ್ಧ ಹಾಗೂ ಅಮಾಯಕ ಜನರನ್ನು ಮರುಳುಗೊಳಿಸುತ್ತವೆ. ಜನಸಾಮಾನ್ಯರನ್ನು ದಾರಿತಪ್ಪಿಸಬಲ್ಲ, ಸತ್ಯಕ್ಕೆ ದೂರವಾದ ಮತ್ತು ವಿಸ್ಮಯಕಾರಿ- ಪವಾಡ ಸದೃಶ ಪರಿಣಾಮಗಳನ್ನು ಬೀರಬಲ್ಲ ಎಂದು ಘೋಷಿಸುವ ವಿವಿಧ ಗ್ರಾಹಕ ಉತ್ಪನ್ನಗಳ ಜಾಹೀರಾತುಗಳನ್ನು ನಿಯಂತ್ರಿಸಲು ಇದೀಗ ಕೇಂದ್ರ ಸರಕಾರ ಸಜ್ಜಾಗಿದೆ.
ಆಹಾರ ಸುರಕ್ಷಾ ಮತ್ತು ಗುಣಮಟ್ಟ ಕಾಯಿದೆ, ಗ್ರಾಹಕ ರಕ್ಷಣಾ ಕಾಯಿದೆ ಮತ್ತು ಔಷದ ಮತ್ತು ವಿಸ್ಮಯಕಾರಿ ಚಿಕಿತ್ಸೆಗಳ ಕಾಯಿದೆಗಳು ಅಸ್ತಿತ್ವದಲ್ಲಿದ್ದರೂ, ಇಂತಹ ಜಾಹೀರಾತುಗಳ ಹಾವಳಿ ಮಿತಿಮೀರಿದೆ. ಇವುಗಳಿಗೆ ಕಡಿವಾಣವನ್ನು ತೊಡಿಸುವ ಸಲುವಾಗಿ ಅಂತರ್ ಸಚಿವಾಲಯ ಮಟ್ಟದ ಸಮಿತಿಯೊಂದನ್ನು ರೂಪಿಸುವುದಾಗಿ ಕೇಂದ್ರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು  ಮೇ ತಿಂಗಳಿನಲ್ಲಿ ಹೇಳಿಕೆಯೊಂದನ್ನು ನೀಡಿದ್ದರು.
ಇಂತಹ ಜಾಹೀರಾತುಗಳನ್ನು  ತಡೆಗಟ್ಟಲು ಸಮಗ್ರವಾದ ಕಾನೂನನ್ನು ರೂಪಿಸುವ ಅವಶ್ಯಕತೆಯಿದ್ದು, ಇದಕ್ಕಾಗಿ ಸಂಬಂಧಿತರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುತ್ತಿದೆ. ಸಂಸ್ಥೆಗಳು ತಮ್ಮ ಜಾಹೀರಾತುಗಳಲ್ಲಿ ನೀಡುವ ಸುಳ್ಳು ಭರವಸೆಗಳ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸುವ ಹಕ್ಕನ್ನು, ನೂತನ ಕಾಯಿದೆಯು ಗ್ರಾಹಕರಿಗೆ ನೀಡಲಿದೆ ಎಂದು ಸಚಿವರು ನುಡಿದಿದ್ದರು. ಜೊತೆಗೆ ಈ ವಿಚಾರದಲ್ಲಿ ಸ್ವಯಂ ನಿಯಂತ್ರಣ ಮತ್ತು ಕಾನೂನು ನಿಯಂತ್ರಣಗಳು ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತಗೊಂಡಿದೆ ಎಂದು ಹೇಳಿದ್ದರು.
ಅವಶ್ಯಕ ಕಾನೂನುಗಳು ಇದ್ದರೂ ಅನಿಯಂತ್ರಿತವಾಗಿ ವೃದ್ಧಿಸುತ್ತಿರುವ ಈ ಸಮಸ್ಯೆಯನ್ನು ಖಚಿತವಾಗಿ ನಿಯಂತ್ರಿಸುವತ್ತ ಕೇಂದ್ರ ಸರಕಾರವು ತನ್ನ ಗಮನವನ್ನು ಹರಿಸಿರುವುದು ಇದರ ತೀವ್ರತೆ ಮತ್ತು ದುಷ್ಪರಿಣಾಮಗಳನ್ನು  ಸೂಚಿಸುತ್ತದೆ. ಅಸಂಖ್ಯ ಗ್ರಾಹಕ ಉತ್ಪನ್ನಗಳು, ಸೌಂದರ್ಯ ಪ್ರಸಾದನಗಳು ಮತ್ತು ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದ ವೈವಿಧ್ಯಮಯ ಉತ್ಪನ್ನಗಳ ಕೆಲವೊಂದು  ಜಾಹೀರಾತುಗಳಿಂದ ಪ್ರಭಾವಿತರಾಗಿ, ಇವುಗಳನ್ನು ಖರೀದಿಸಿ ಬಳಸಿದ ಪರಿಣಾಮವಾಗಿ ಕಷ್ಟ ನಷ್ಟಗಳಿಗೆ ಈಡಾಗಿದ್ದ ಗ್ರಾಹಕರಿಂದ ಬಂದಿದ್ದ ಸಹಸ್ರಾರು ದೂರುಗಳೇ, ಸರಕಾರದ ಈ ಕ್ರಮಕ್ಕೆ ಕಾರಣವೆನ್ನುವುದರಲ್ಲಿ ಸಂದೇಹವಿಲ್ಲ. 
ಮೋಡಿ ಮಾಡುವ ಜಾಹೀರಾತುಗಳು 
ಮಾಧ್ಯಮಗಳಲ್ಲಿ ಪ್ರತಿನಿತ್ಯ ಪ್ರಸಾರವಾಗುವ ಸಹಸ್ರಾರು ಜಾಹೀರಾತುಗಳಲ್ಲಿ ಮನುಷ್ಯನ ಶರೀರ, ಮನಸ್ಸು ಮತ್ತು  ಆರೋಗ್ಯಗಳಿಗೆ ಸಂಬಂಧಿಸಿದ ಅನೇಕ ಜಾಹೀರಾತುಗಳು ಗ್ರಾಹಕರನ್ನು ಆಯಸ್ಕಾಂತದಂತೆ ಆಕರ್ಷಿಸುತ್ತವೆ. ಇವುಗಳಲ್ಲಿ ಕೃಷ್ಣ ವರ್ಣದವರನ್ನು ಗೌರ ವರ್ಣದವರನ್ನಾಗಿಸಬಲ್ಲ,ಬಕ್ಕತಲೆಯಲ್ಲಿ    ಮತ್ತೆ ಕೂದಲುಗಳನ್ನು ಮೂಡಿಸಬಲ್ಲ, ಕುಳ್ಳರನ್ನು ನೀಳಕಾಯರನ್ನಾಗಿಸುವ,  ಕೃಶಕಾಯರನ್ನು ಅತಿಕಾಯರನ್ನಾಗಿಸುವ,  ಧಡೂತಿ ದೇಹದವರನ್ನು ಬಳುಕುವ ಬಳ್ಳಿಯಂತೆ ಪರಿವರ್ತಿಸುವ, ಮರೆಗುಳಿಗಳ ಸ್ಮರಣ ಶಕ್ತಿಯನ್ನು ಹೆಚ್ಚಿಸುವ, ಇಳಿವಯಸ್ಸಿನವರ ಲೈಂಗಿಕ ಸಾಮರ್ಥ್ಯವನ್ನು ವೃದ್ಧಿಸುವ, ಗಂಟು - ಸೊಂಟ ನೋವುಗಳನ್ನು ಕ್ಷಣಮಾತ್ರದಲ್ಲಿ ನಿವಾರಿಸಬಲ್ಲ,ಆಸ್ತಮಾ-ಮಧುಮೇಹ-ಅಧಿಕ ರಕ್ತದೊತ್ತಡ-ಹೃದ್ರೋಗ ಮತ್ತು ಮಾರಕ ಕ್ಯಾನ್ಸರ್ ಗಳಂತಹ ಶಾಶ್ವತ ಪರಿಹಾರವಿಲ್ಲದ ವ್ಯಾಧಿಗಳನ್ನು ನಿಶ್ಚಿತವಾಗಿ ಗುಣಪಡಿಸುವುದಾಗಿ ಘೋಷಿಸುವ ನೂರಾರು ವಿಸ್ಮಯಕಾರಿ ಔಷದಗಳ  ಜಾಹೀರಾತುಗಳನ್ನು    ನೀವೂ ಕಂಡಿರಲೇಬೇಕು.ನಿಜ ಹೇಳಬೇಕಿದ್ದಲ್ಲಿ   ಔಷದ ನಿಯಂತ್ರಣ ಇಲಾಖೆಯ ನಿಯಮಗಳಲ್ಲಿ ೫೪ ವಿಧದ ಕಾಯಿಲೆಗಳು- ಆರೋಗ್ಯದ ಸಮಸ್ಯೆಗಳನ್ನು ಹೆಸರಿಸಿದ್ದು, ಇವುಗಳ ಬಗ್ಗೆ ಯಾವುದೇ ರೀತಿಯ ಜಾಹೀರಾತುಗಳನ್ನು ನೀಡುವಂತಿಲ್ಲ.  ಇವುಗಳಲ್ಲಿ ಮಧುಮೇಹ, ಕ್ಯಾನ್ಸರ್,  ತೊನ್ನು, ಅತಿಬೊಜ್ಜು, ನಪುಂಸಕತ್ವ, ಸಂತಾನ ಹೀನತೆ, ಜಠರದ ಹುಣ್ಣುಗಳು, ಲೈಂಗಿಕ ರೋಗಗಳು-ಸಮಸ್ಯೆಗಳು ,ಹೃದ್ರೋಗಗಳು ಮತ್ತು  ಸ್ತ್ರೀಯರ ಸ್ತನಗಳ ಮತ್ತು ಶರೀರದ ಗಾತ್ರಗಳಿಗೆ  ಸಂಬಂಧಿಸಿದ ಮತ್ತು ಇತರ ಕೆಲ  ಸಮಸ್ಯೆಗಳೂ  ಸೇರಿವೆ. ೨೦೦೪ ರಲ್ಲಿ ಈ ಪಟ್ಟಿಯನ್ನು ಪುನರ್ ವಿಮರ್ಶಿಸಿದ್ದು, ಎಚ್.ಐ. ವಿ-ಏಡ್ಸ್ ಮತ್ತು ಪೋಲಿಯೋ ಇತ್ಯಾದಿ ಕಾಯಿಲೆಗಳನ್ನು ಇದರಲ್ಲಿ ಸೇರಿಸಲಾಗಿತ್ತು. ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯವು ಇಂತಹ ಕಾಯಿಲೆಗಳನ್ನು ಗುಣಪಡಿಸುವುದಾಗಿ ಜಾಹೀರಾತುಗಳನ್ನು ನೀಡಿ ಜನಸಾಮಾನ್ಯರನ್ನು ಮರುಳುಗೊಳಿಸುವ ಸಂಸ್ಥೆಗಳ ಮತ್ತು ನಕಲಿ ವೈದ್ಯರ  ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲು ೨೦೦೪ರಲ್ಲಿ  ಸಮಿತಿಯೊಂದನ್ನು ರಚಿಸಿತ್ತು. ಡ್ರಗ್ಸ್ ಎಂಡ್ ಮ್ಯಾಜಿಕ್ ರೆಮಿಡೀಸ್(ಅಬ್ಜೆಕ್ಷನೆಬಲ್ ಅಡ್ವರ್ಟೈಸ್ಮೆಂಟ್ಸ್)ಆಕ್ಟ್ ೧೯೫೪ ಮತ್ತು ಡ್ರಗ್ಸ್ ಎಂಡ್ ಕಾಸ್ಮೆಟಿಕ್ಸ್ ರೂಲ್ಸ್ ಕಾಯಿದೆಗಳನ್ವಯ  ಇಂತಹ ಜಾಹೀರಾತುಗಳನ್ನು ನೀಡುವ ವ್ಯಕ್ತಿಗಳು- ಸಂಸ್ಥೆಗಳ ವಿರುದ್ಧ ಔಷದ ನಿಯಂತ್ರಣ ಇಲಾಖೆಯು ನ್ಯಾಯಾಲಯದಲ್ಲಿ  ದಾವೆಯನ್ನು ಹೂಡಿ, ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಆದರೆ ನಮ್ಮ ದೇಶದಲ್ಲಿ ಇವೆರಡೂ ಕಾಯಿದೆಗಳನ್ನು ರಾಜಾರೋಷವಾಗಿ ಉಲ್ಲಂಘಿಸಲಾಗುತ್ತಿದೆ. ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಇಂತಹ ಜಾಹೀರಾತುಗಳ ವಿರುದ್ಧ ನ್ಯಾಯಾಲಯಗಳಲ್ಲಿ ದಾವೆಯನ್ನು ಹೂಡಿ, ಶಿಕ್ಷೆಯನ್ನು ಕೊಡಿಸಿದ್ದ ಪ್ರಕರಣಗಳು ಮತ್ತು ಇವುಗಳಿಂದ  ಮೋಸ ಹೋಗಿದ್ದ ಗ್ರಾಹಕರು ಇಲಾಖೆಗೆ ಸಲ್ಲಿಸಿದ್ದ ದೂರುಗಳ ಸಂಖ್ಯೆಯೂ ಕೇವಲ ಬೆರಳೆಣಿಕೆಯಷ್ಟೇ ಇವೆ.ಪ್ರಾಯಶಃ ಇದೇ ಕಾರಣದಿಂದಾಗಿ ದಾರಿತಪ್ಪಿಸುವ ಜಾಹೀರಾತುಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. ಈ ವಿಲಕ್ಷಣ ಸಮಸ್ಯೆಗೆ ಕರ್ನಾಟಕವೂ ಅಪವಾದ ಎನಿಸಿಲ್ಲ.
ಉದಾಹರಣೆಗೆ ಉತ್ತಮ ಗುಣಮಟ್ಟದ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾದ ಆಹಾರವನ್ನು ಸೇವಿಸದೇ ಮತ್ತು  ಯಾವುದೇ ರೀತಿಯ ವ್ಯಾಯಾಮವನ್ನು ಮಾಡದೇ ಪೈಲ್ವಾನರಂತಹ ಕಟ್ಟುಮಸ್ತಾದ ಶರೀರವನ್ನು ಹೊಂದುವುದು  ಅಸಾಧ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಸುಪ್ರಸಿದ್ದ ನಟರು ಅಥವಾ ಕ್ರೀಡಾಪಟುಗಳು ರೂಪದರ್ಶಿಯಾಗಿರುವ  ದುಬಾರಿ ಬೆಲೆಯ ಔಷದವೊಂದನ್ನು ಪ್ರತಿನಿತ್ಯ ಸೇವಿಸಿ ಆಕರ್ಷಕ ಅಂಗಸೌಷ್ಟವವನ್ನು ಗಳಿಸಿರಿ ಎಂದು ಘೋಷಿಸುವ ಜಾಹೀರಾತುಗಳಿಗೆ ಮರುಳಾಗಿ ಇದನ್ನು ಖರೀದಿಸಿ ಸೇವಿಸಿದಲ್ಲಿ, ದೊಡ್ಡ ಮೊತ್ತದ ಹಣದೊಂದಿಗೆ ನಿಮ್ಮ ಆರೋಗ್ಯವನ್ನೂ ಕಳೆದುಕೊಳ್ಳುವ ಸಾಧ್ಯತೆಗಳಿವೆ .ಏಕೆಂದರೆ ಇಂತಹ ಉತ್ಪನ್ನಗಳ ಹೊರಕವಚಗಳ ಮೇಲೆ ಇವುಗಳಲ್ಲಿ ಬಳಸಿರುವ ಔಷದ-ಅನ್ಯ ದ್ರವ್ಯಗಳ ವಿವರಗಳನ್ನು ಮುದ್ರಿಸಿರುವುದಿಲ್ಲ. ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ ಎನ್ನುವ ಇಂತಹ ಉತ್ಪನ್ನಗಳಲ್ಲಿ, ಅನಬಾಲಿಕ್ ಸ್ಟೆರಾಯ್ಡ್ ನಂತಹ ಔಷದಗಳನ್ನು ಬೆರೆಸಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇಂತಹ ಔಷದಗಳ ಅತಿಯಾದ ಸೇವನೆಯಿಂದ ಅಯಾಚಿತ ಹಾಗೂ ಗಂಭೀರ ಸಮಸ್ಯೆಗಳು ತಲೆದೋರುವುದರಲ್ಲಿ ಸಂದೇಹವಿಲ್ಲ.ತಜ್ಞ ವೈದ್ಯರ ಸಲಹೆ ಪಡೆಯದೇ ಸ್ಟೆರಾಯ್ಡ್ ಗಳನ್ನು ಸೇವಿಸುವುದು ಬೆಂಕಿಯೊಂದಿಗೆ ಸರಸವಾಡಿದಂತೆ ಎನ್ನುವುದನ್ನು ಮರೆಯದಿರಿ.
ಕೇವಲ ಜಾಹೀರಾತುಗಳ ಬಲದಿಂದಲೇ ಮಾರಾಟವಾಗುವ ಲೈಂಗಿಕ ಶಕ್ತಿವರ್ಧಕ ಔಷದಗಳು ಅತ್ಯಂತ ದುಬಾರಿಯಾಗಿದ್ದರೂ, ಇವುಗಳಲ್ಲಿ ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಬಲ್ಲ ಔಷದಗಳೇ ಇರುವುದಿಲ್ಲ. ಇದಕ್ಕೂ ಮಿಗಿಲಾಗಿ ಇಂತಹ ಔಷದಿಗಳೊಂದಿಗೆ  ಉಚಿತವಾಗಿ ನೀಡುವ, ಪುರುಷರ ಪ್ರಜನನಾಂಗದ ಉದ್ದ ಮತ್ತು ಗಾತ್ರಗಳನ್ನು ಹೆಚ್ಚಿಸುವ "ಯಂತ್ರ"ವನ್ನು ಇಂದಿನ ತನಕ ಸಂಶೋಧಿಸಿಲ್ಲ. ಮಾತ್ರವಲ್ಲ, ಇದು ಸಾಧ್ಯವೂ ಅಲ್ಲ.
ಇನ್ನು ಚರ್ಮದ ಮೇಲಿನ ಬಿಳಿ ಮಚ್ಚೆಗಳು ಅರ್ಥಾತ್ ತೊನ್ನು ಎಂದು ಕರೆಯಲ್ಪಡುವ ವ್ಯಾಧಿಯನ್ನು ಖಚಿತವಾಗಿ ಗುಣಪಡಿಸುವುದಾಗಿ ಘೋಷಿಸುವ ಔಷದಗಳನ್ನು ಹಚ್ಚಿದ ಕೆಲವೇ ಗಂಟೆಗಳಲ್ಲಿ ,ಚರ್ಮದ ಮೇಲಿನ ಬಿಳಿಯ ಕಲೆಗಳ ಬಣ್ಣ ಬದಲಾಗುವ  ಸಾಧ್ಯತೆಗಳೇ ಇಲ್ಲ.
ಇನ್ನು ಸ್ತ್ರೀಯರ ಸ್ತನಗಳ ಗಾತ್ರ ಹಾಗೂ ಆಕಾರಗಳನ್ನು ಹೆಚ್ಚಿಸಿ, ಆಕರ್ಷಣೀಯವಾಗಿ ಪರಿವರ್ತಿಸಬಲ್ಲ ಔಷದಗಳು ನಿಜಕ್ಕೂ ಲಭ್ಯವಿದ್ದಲ್ಲಿ,ನಿಮ್ಮ ಚಿರಪರಿಚಿತ ಕುಟುಂಬ ವೈದ್ಯರು ನಿಮಗೆ ಇದನ್ನು ಸೇವಿಸುವಂತೆ ಸೂಚಿಸುವುದರಲ್ಲಿ ಸಂದೇಹವಿಲ್ಲ!.
ಇವೆಲ್ಲಕ್ಕೂ ಮಿಗಿಲಾಗಿ ಜನಸಾಮಾನ್ಯರನ್ನು ಜೀವನ ಪರ್ಯಂತ ಕಾಡಬಲ್ಲ ಮತ್ತು ಶಾಶ್ವತ ಪರಿಹಾರವೇ ಇಲ್ಲದ ಅಧಿಕ ರಕ್ತದೊತ್ತಡ, ಮಧುಮೇಹ, ಕೆಲ ವಿಧದ ಹೃದ್ರೋಗಗಳಂತಹ  ಕಾಯಿಲೆಗಳನ್ನು  ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಗುಣಪಡಿಸುವಂತಹ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ನಿಜಕ್ಕೂ ಇಂತಹ ಔಷದಗಳನ್ನು ಸಂಶೋಧಿಸಿದ ವ್ಯಕ್ತಿಗಳಿಗೆ ಜಗತ್ಪ್ರಸಿದ್ಧ "ನೊಬೆಲ್ ಪ್ರಶಸ್ತಿ" ದೊರೆಯುವುದರಲ್ಲಿ ಸಂದೇಹವಿಲ್ಲ!.
ಕಾನೂನು ಕ್ರಮ ಕೈಗೊಳ್ಳುವವರು ಯಾರು?
ಕಾನೂನುಬಾಹಿರವಾಗಿ ಈ ರೀತಿಯ ಜಾಹೀರಾತುಗಳು ಪ್ರತಿನಿತ್ಯ ಪ್ರಕಟವಾಗುತ್ತಿದ್ದರೂ,ಇವುಗಳನ್ನು ನೀಡುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಗಳ ವಿರುದ್ಧ ಔಷದ ನಿಯಂತ್ರಣ ಇಲಾಖೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಡ್ರಗ್ಸ್ ಎಂಡ್ ಮ್ಯಾಜಿಕ್ ರೇಮಿಡೀಸ್  (ಒಬ್ಜೆಕ್ಷನೆಬಲ್ ಅಡ್ವರ್ಟೈಸ್ ಮೆಂಟ್ಸ್)ಆಕ್ಟ್ ೧೯೫೪ ರಂತೆ ಇಂತಹ ಜಾಹೀರಾತುಗಳನ್ನು ನೀಡುವ ಸಂಸ್ಥೆಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ, ಶಿಕ್ಷೆಗೆ ಗುರಿಯಾಗಿದ್ದ ಸಂಸ್ಥೆಗಳೂ ಮತ್ತೆ ಇದೇ ಜಾಹೀರಾತುಗಳನ್ನು ಪ್ರಕಟಿಸುತ್ತಿರುವುದು ಮಾತ್ರ ನಂಬಲಸಾಧ್ಯ ಎನಿಸುತ್ತದೆ. ಕರ್ನಾಟಕ ರಾಜ್ಯದ ಔಷದ ನಿಯಂತ್ರಣ ಇಲಾಖೆಯಿಂದ ಮಾಹಿತಿ ಹಕ್ಕು ಕಾಯಿದೆಯಂತೆ ಪಡೆದುಕೊಂಡಿದ್ದ ವಿವರಗಳಿಂದ ಈ ವಿಚಾರ ಬಯಲಾಗಿದೆ.
ಆದರೆ ಮಾಧ್ಯಮಗಳಲ್ಲಿ ಇದೇ ರೀತಿಯ  ಅನೇಕ ಜಾಹೀರಾತುಗಳು ಪ್ರಕಟವಾಗುತ್ತಿದ್ದು ಈ ಬಗ್ಗೆ ನೀವು ಕೈಗೊಂಡಿರುವ ಕ್ರಮಗಳೇನು?,ಎಂದು  ಮಾಹಿತಿ ಹಕ್ಕು ಕಾಯಿದೆಯನ್ವಯ ನಾವು ಸಲ್ಲಿಸಿದ್ದ ಅರ್ಜಿಯಲ್ಲಿ ನಮೂದಿಸಿರುವ ವಿವರಗಳು ಮತ್ತು ಇದರೊಂದಿಗೆ ಲಗತ್ತಿಸಿದ್ದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಜಾಹೀರಾತುಗಳ ತುಣುಕುಗಳನ್ನು  ಕಂಡ ಬಳಿಕ ಎಚ್ಚೆತ್ತ ಇಲಾಖೆಯು ಜಾಹೀರಾತುದಾರರಿಗೆ ನೋಟೀಸು ಜಾರಿಗೊಳಿಸಿರುವುದಾಗಿ ನಮಗೆ ತಿಳಿಸಿದೆ!. ಅರ್ಥಾತ್, ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವುದಿಲ್ಲ   ಹಾಗೂ ಟೆಲಿವಿಶನ್ ಚಾನಲ್ ಗಳನ್ನು ನೋಡುವುದೇ ಇಲ್ಲ ಎನ್ನುವಂತಹ ಹಾರಿಕೆಯ ಉತ್ತರವನ್ನು ನೀಡಿರುವುದು ಇವರ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ.
ಇಷ್ಟು ಮಾತ್ರವಲ್ಲ, ಇಂತಹ ಜಾಹೀರಾತುದಾರರ ವಿರುದ್ಧ ಇಲಾಖೆಯು ಮೊಕದ್ದಮೆಗಳನ್ನು ಹೂಡಿರುವ ಬಗ್ಗೆ ವಿವರಗಳನ್ನು ಒದಗಿಸುವಂತೆ ಕೋರಲಾಗಿದ್ದು, ಇಂತಹ ಪ್ರಕರಣಗಳ ತೀರ್ಪಿನ ಸಂಪೂರ್ಣ ವಿವರಗಳನ್ನೇ ನೀಡದ ಅಧಿಕಾರಿಗಳು ಕೇವಲ ಮೊದಲನೆಯ ಪುಟಗಳ ಜೆರಾಕ್ಸ್ ಪ್ರತಿಗಳನ್ನು ನೀಡಿರುವುದು ಹಲವಾರು ಸಂದೇಹಗಳಿಗೆ ಆಸ್ಪದವನ್ನು ನೀಡುವಂತಿದೆ. ಹಾಗೂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗಳನ್ನು ತೋರಿಸುತ್ತದೆ.
ಇದಕ್ಕೂ ಮಿಗಿಲಾಗಿ ಅಧಿಕಾರಿಗಳು ನೋಟೀಸನ್ನು ನೀಡಿರುವುದಾಗಿ ತಿಳಿಸಿರುವ ಸಂಸ್ಥೆಗಳು ನೀಡುತ್ತಿರುವ ದಾರಿ ತಪ್ಪಿಸುವ ಜಾಹೀರಾತುಗಳು, ಮಾಧ್ಯಮಗಳಲ್ಲಿ ಇಂದಿಗೂ ಪ್ರಕಟವಾಗುತ್ತಲೇ ಇವೆ!.ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು ನಿಜಕ್ಕೂ ಈ ಸಂಸ್ಥೆಗಳಿಗೆ ನೋಟೀಸನ್ನು ನೀಡಿದ್ದಲ್ಲಿ,ಈ ರೀತಿಯ ಜಾಹೀರಾತುಗಳು ಇಂದಿಗೂ ಪ್ರಕಟವಾಗುತ್ತಿರುವುದಾದರೂ  ಹೇಗೆ?,ಎನ್ನುವ ಪ್ರಶ್ನೆಗೆ ಸಂಬಂಧಿತ ಅಧಿಕಾರಿಗಳೇ ಉತ್ತರಿಸಬೇಕಷ್ಟೇ!.
ಆದರೆ ಇದೇ ಸಂದರ್ಭದಲ್ಲಿ ನೆರೆಯ ಕೇರಳದ ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಇದೇ ವರ್ಷದ ಮೇ ತಿಂಗಳಿನಲ್ಲಿ ತಮ್ಮ ರಾಜ್ಯಾದ್ಯಂತ ಶೃಂಗಾರ ಸಾಧನಗಳು, ಸೌಂದರ್ಯ ವರ್ಧಕಗಳು ಮತ್ತು ತ್ವರಿತಗತಿಯಲ್ಲಿ ಕೆಲವೊಂದು ಕಾಯಿಲೆಗಳನ್ನು ಗುಣಪಡಿಸುವುದಾಗಿ ಘೋಷಿಸುವ ಔಷದಗಳನ್ನು ತಯಾರಿಸುವ ಸಂಸ್ಥೆಗಳ ಮೇಲೆ ದಾಳಿನಡೆಸಿ, ೫೦ ಲಕ್ಷ ರೂ. ಮೌಲ್ಯದ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದರು. ಹಾಗೂ ಈ ಸಂಸ್ಥೆಗಳ ವಿರುದ್ಧ ಡ್ರಗ್ಸ್ ಎಂಡ್ ಮ್ಯಾಜಿಕ್ ರೇಮಿಡೀಸ್(ಒಬ್ಜೆಕ್ಷನೆಬಲ್ ಅಡ್ವರ್ಟೈಸ್ ಮೆಂಟ್ಸ್) ಆಕ್ಟ್ ೧೯೫೪ ರಂತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಇಂತಹ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡು, ಈ ಉತ್ಪನ್ನಗಳನ್ನು ಬಳಸುವಂತೆ ಜನಸಾಮಾನ್ಯರ ಮೇಲೆ ಪ್ರಭಾವವನ್ನು ಬೀರುವ ಖ್ಯಾತ ಕ್ರೀಡಾ ಪಟುಗಳು ಮತ್ತು ಚಲನ ಚಿತ್ರ ನಟರಿಗೆ ಇಂತಹ ಜಾಹೀರಾತುಗಳಲ್ಲಿ ನಟಿಸದಂತೆ ಮತ್ತು ಇಂತಹ ಉತ್ಪನ್ನಗಳನ್ನು ಅನುಮೋದಿಸದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.
ಕೇರಳದ ಔಷದ ನಿಯಂತ್ರಣ ಇಲಾಖೆ ಈ ರೀತಿಯ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳುವ ಮೂಲಕ ತಮ್ಮ ರಾಜ್ಯದ ಜನತೆಯ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ನ್ಯಾಯಾಲಯದಿಂದ ನಿಷೇಧಿತ  ಉತ್ಪನ್ನಗಳ ಜಾಹೀರಾತುಗಳು, ಇಂದಿಗೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ!.
ಅದೇನೇ ಇರಲಿ, ರಾಜ್ಯದ ಔಷದ ನಿಯಂತ್ರಣ ಇಲಾಖೆಯು ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದರೂ, ನೀವಂತೂ ಇಂತಹ ಜಾಹೀರಾತುಗಳಿಗೆ ಮರುಳಾಗದಿರಿ.ಜೊತೆಗೆ ನೀವು ಕಷ್ಟಪಟ್ಟು ಸಂಪಾದಿಸಿದ ಹಣದೊಂದಿಗೆ  ನಿಮ್ಮ ಆರೋಗ್ಯವನ್ನೂ  ಕಳೆದುಕೊಳ್ಳದಿರಿ!.

ದಿ . ೦೫-೧೧-೨೦೧೨ ರ ಹೊಸ ದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು
ಬಳಕೆದಾರರ ಹಿತರಕ್ಷಣಾ ವೇದಿಕೆ
ಬೊಳುವಾರು, ಪುತ್ತೂರು-೫೭೪೨೦೧



ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ದಾರಿತಪ್ಪಿಸುವ ಹಾಗೂ ಕಾನೂನುಬಾಹಿರ ಜಾಹೀರಾತುಗಳು


      ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ!
ನಮ್ಮ ದೇಶದಲ್ಲಿ  ಸಣ್ಣದೊಂದು ಉದ್ಯೋಗ ದೊರೆಯಬೇಕಿದ್ದಲ್ಲಿ ಕನಿಷ್ಠ ವಿದ್ಯಾರ್ಹತೆ,ಅನುಭವ,ಶಾರೀರಿಕ ಹಾಗೂ ಮಾನಸಿಕ ಆರೋಗ್ಯಗಳ ಮಟ್ಟ ಇತ್ಯಾದಿಗಳಿಗೆ ನಿರ್ದಿಷ್ಟ ಮಾನದಂಡಗಳಿವೆ. ಜೊತೆಗೆ ನಿವೃತ್ತಿಯ ವಯೋಮಿತಿಯೂ ಇದೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಪಂಚಾಯತ್ ನಿಂದ ಆರಂಭಿಸಿ ಲೋಕಸಭೆಯ ವರೆಗಿನ ಯಾವುದೇ ಚುನಾವಣೆಗಳಿಗೆ ಸ್ಪರ್ಧಿಸಲು ಇಂತಹ ಮಾನದಂಡಗಳನ್ನು ನಿಗದಿಸಿಲ್ಲ. ಕ್ರಿಮಿನಲ್ ಹಿನ್ನೆಲೆಯುಳ್ಳ,ಅತ್ಯಾಚಾರ,ದರೋಡೆ ಅಥವಾ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಜೈಲಿಗೆ ಹೋಗಿಬಂದವರಿಗೂ,ಚುನಾವಣೆಗಳಲ್ಲಿ ಸ್ಪರ್ಧಿ ಸುವ ಮತ್ತು ಗೆದ್ದಲ್ಲಿ ಮಂತ್ರಿಯಾಗುವ ಅವಕಾಶವಿರುವುದು ಪ್ರಾಯಶಃ ಭವ್ಯ ಭಾರತದಲ್ಲಿ ಮಾತ್ರ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಇದೇ ಕಾರಣದಿಂದಾಗಿ"ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ"ಎನ್ನಲು ಅಡ್ಡಿಯಿಲ್ಲ!.
ರಾಜಕೀಯ ದೊಂಬರಾಟ
ಕರ್ನಾಟಕದಲ್ಲಿ ಇದುವರೆಗೆ ನಡೆದಿದ್ದ ಚುನಾವಣೆಗಳಲ್ಲಿ ಕಂಡುಕೇಳರಿಯದ ವಿಚಿತ್ರ ವಿದ್ಯಮಾನಗಳನ್ನು ಕಣ್ಣಾರೆ ಕಾಣುವ ಸೌಭಾಗ್ಯವು ಇದೀಗ ರಾಜ್ಯದ ಜನತೆಗೆ ಪ್ರಾಪ್ತಿಯಾಗಿದೆ. ಈ ಬಾರಿಯ ಚುನಾವಣೆಯು ನಮ್ಮನ್ನಾಳುವವರ ನಿಜವಾದ ಬಣ್ಣವನ್ನು ಬಯಲುಮಾಡುತ್ತಿದೆ. ಅಧಿಕಾರದ ಗದ್ದುಗೆಯನ್ನು ಏರುವ ಹೆಬ್ಬಯಕೆಯು,ರಾಜಕೀಯ ಪುಡಾರಿಗಳು ನಡೆಸುತ್ತಿರುವ ಕಸರತ್ತುಗಳಿಗೆ ಕಾರಣವೆನಿಸಿದೆ. ಈ ದೊಂಬರಾಟವನ್ನು ವೀಕ್ಷಿಸುತ್ತಿರುವ ಮತದಾರರಿಗೆ ಮಾತ್ರ,ಅಭ್ಯರ್ಥಿಗಳ ಮರಕೋತಿ ಆಟವು  ಪ್ರಾಣ-ಧರ್ಮ ಸಂಕಟಗಳಿಗೆ ಕಾರಣವೆನಿಸುತ್ತಿದೆ. ಇದ್ದ ಮೂವರಲ್ಲಿ ಮೂವರೂ ಕದ್ದವರೇ ಆಗಿದ್ದಲ್ಲಿ,ತಾವು ಮತವನ್ನು ನೀಡುವುದಾದರೂ ಯಾರಿಗೆ?,ಎನ್ನುವ ಪ್ರಶ್ನೆ ಮತದಾರರನ್ನು ಕಾಡುತ್ತಿದೆ. 
ಅಂದು ಆ ಪಕ್ಷದಲ್ಲಿದ್ದವರು ಇಂದು ಈ ಪಕ್ಷದಲ್ಲಿ ಹಾಗೂ ಇಂದು ಈ ಪಕ್ಷದಲ್ಲಿ  ಇದ್ದವರು ನಾಳೆ ಇನ್ನೊಂದು ಪಕ್ಷಕ್ಕೆ  ವಲಸೆ ಹೋಗುತ್ತಿದ್ದು,ಯಾವ
 ಅಭ್ಯರ್ಥಿ ಯಾವ ಪಕ್ಷದಲ್ಲಿ ಇದ್ದಾನೆ ಎನ್ನುವುದು ಮತದಾರರಿಗೆ ತಿಳಿಯುತ್ತಿಲ್ಲ. ಕ್ಷಣಮಾತ್ರದಲ್ಲಿ ಅಭ್ಯರ್ತಿಗಳು
ಪಕ್ಷನಿಷ್ಠೆ ಬದಲಾಯಿಸಲು,ನಿರ್ದಿಷ್ಟ   ಪಕ್ಷದಿಂದ ಟಿಕೇಟು 
ದೊರೆಯದಿರುವುದು  ಕಾರಣವೇ ಹೊರತು,ಅನ್ಯ ಕಾರಣಗಳು ನಿಶ್ಚಿತವಾಗಿಯೂ ಅಲ್ಲ. ಆದರೂ ತಮ್ಮದೇ ಪಕ್ಷದಿಂದ ಚುನಾಯಿತರಾಗಿ,ಆಪರೇಶನ್ ಮೂಲಕ ಮತ್ತೊಂದು ಪಕ್ಷವನ್ನು ಸೇರಿ,ಇದೀಗ ಮತ್ತೆ ಮಾತೃ ಪಕ್ಷಕ್ಕೆ ಬಂದವರಿಗೆ ಟಿಕೇಟು ನೀಡುತ್ತಿರುವುದು ರಾಜಕೀಯ ಪಕ್ಷಗಳ ನೈತಿಕ ದಿವಾಳಿತನವನ್ನು ಬಯಲುಮಾಡಿದೆ.
ರಾಜಕೀಯ ಕ್ಷೇತ್ರದಲ್ಲಿ ತಮ್ಮ ಘನತೆ-ಗೌರವಗಳನ್ನು ಮೆರೆದಿದ್ದ ಹಿರಿಯ ರಾಜಕಾರಣಿಗಳು, ಇದೀಗ ತಮ್ಮ ಮಕ್ಕಳಿಗೆ ಸೂಕ್ತ ಸ್ಥಾನಮಾನವನ್ನು ಗಳಿಸಿಕೊಳ್ಳುವ ಸಲುವಾಗಿ ಟಿಕೇಟನ್ನು ನೀಡುವಂತೆ ತೆರೆಯ ಮರೆಯಲ್ಲಿ ನಡೆಸುತ್ತಿರುವ ಪ್ರಯತ್ನಗಳು ಜನಸಾಮಾನ್ಯರಿಗೆ ತಿಳಿಯದ ವಿಚಾರವೇನಲ್ಲ. ಚಲಾವಣೆಯಲ್ಲಿ ಇಲ್ಲದ ನಾಣ್ಯ ಎನಿಸಿರುವ ಇಂತಹ ಹಳೆಯ ತಲೆಮಾರಿನ ರಾಜಕಾರಣಿಗಳ ಅಧಿಕಾರ ದಾಹಕ್ಕೆ ಇದಕ್ಕಿಂತಲೂ ಉತ್ತಮ ಉದಾಹರಣೆ ಮತ್ತೊಂದಿಲ್ಲ!.
ಮತದಾರರಿಗೆ ಮನೋರಂಜನೆ
ಚುನಾವಣೆಯ ದಿನಗಳು ಸಮೀಪಿಸುತ್ತಿರುವಂತೆಯೇ ವಿವಿಧ ಪಕ್ಷಗಳ ನೇತಾರರ ಆಲಾಪ-ಪ್ರಲಾಪಗಳು ಅತಿಯಾಗುತ್ತಿವೆ. ಒಂದು ದಿನ ತಮ್ಮ ವಿರೋಧಿಗಳ ವಿರುದ್ಧ ಘರ್ಜಿಸಿದ ನಾಯಕರು,ಮರುದಿನ ಮತ್ತೊಂದು ವೇದಿಕೆಯಲ್ಲಿ ಗಳಗಳನೆ ಅಳುವುದು ಮತದಾರರಿಗೆ ಪುಕ್ಕಟೆ ಮನೋರಂಜನೆಯನ್ನು ಒದಗಿಸುತ್ತಿದೆ. ಮೊಸಳೆ ಕಣ್ಣೀರು ಸುರಿಸುವ ಇಂತಹ ನಾಯಕರ ಬಗ್ಗೆ "ನಗುವ ಹೆಂಗಸರನ್ನು ನಂಬಬೇಡ,ಅಳುವ ಗಂಡಸರನ್ನು ನಂಬಬೇಡ" ಎಂದು ಮತದಾರರು ಆಡಿಕೊಳ್ಳುವಂತಾಗಿದೆ.
ತಾವು ಸ್ಪರ್ದಿಸಿರುವ ಕ್ಷೇತ್ರದ ಜನರ ಸಮಸ್ಯೆಗಳು ಮತ್ತು ಇವುಗಳನ್ನು ಪರಿಹರಿಸಲು ತಾನು ಕೈಗೊಳ್ಳಲಿರುವ ಕಾರ್ಯತಂತ್ರಗಳ ಬಗ್ಗೆ ಯಾವುದೇ ಅಭ್ಯರ್ಥಿಯು ಚುನಾವಣಾ ಪ್ರಚಾರ ಸಭೆಗಳಲ್ಲಿ ವಿವರಿಸುವುದನ್ನು ನೀವೂ ಕೇಳಿರಲಿಕ್ಕಿಲ್ಲ. ಆದರೆ ತನ್ನ ಎದುರಾಳಿಗಳು -ಪಕ್ಷಗಳು ಹೆಣೆದಿರುವ "ಷಡ್ಯಂತ್ರ" ಗಳ ಬಗ್ಗೆ ನಿರರ್ಗಳವಾಗಿ ಕೊರೆಯುವ ಸಾಮರ್ಥ್ಯವನ್ನು ಇವರು ಹೊಂದಿರುತ್ತಾರೆ.ತನ್ನ ವಿರೋಧಿಗಳ ದೌರ್ಬಲ್ಯಗಳು,ಹಗರಣಗಳು ಮತ್ತು ಆತನ ಚರಿತ್ರೆಯನ್ನು ಕೂಲಂಕುಶವಾಗಿ ಅರಿತುಕೊಳ್ಳಲು ಸಾಕಷ್ಟು ಸಮಯವನ್ನು ವಿನಿಯೋಗಿಸಿದರೂ,ಸ್ವಕ್ಷೇತ್ರದ ಸಮಸ್ಯೆಗಳನ್ನು ತಿಳಿದುಕೊಳ್ಳಲು ಇವರಿಗೆ ಬಿಡುವೇ ಇರುವುದಿಲ್ಲ!.
ಪಕ್ಷಾತೀತರು
ತನ್ನ ಪಕ್ಷದ ಟಿಕೇಟು ಲಭಿಸದ ಕಾರಣದಿಂದಾಗಿ ಪಕ್ಷವನ್ನು ತೊರೆದು,ಪಕ್ಷ ಮತ್ತು ನಾಯಕರನ್ನು ವಾಚಾಮಗೋಚರವಾಗಿ ದೂಷಿಸುವ ಅಭ್ಯರ್ಥಿಗಳು,ತಾವು ಈ ಹಿಂದೆ ದೂಷಿಸುತ್ತಿದ್ದ ಮತ್ತೊಂದು ಪಕ್ಷವನ್ನು ಸೇರಿ ಹಾಡಿಹೊಗಳಲು,ಆ ಪಕ್ಷವು ಈತನಿಗೆ ನೀಡಿದ್ದ ಟಿಕೇಟಿನ ಪ್ರಭಾವವೇ ಹೊರತು ಬೇರೇನೂ ಅಲ್ಲ!.
ಪಕ್ಷದ ಶಿಸ್ತಿನ ಸಿಪಾಯಿಯಾಗಿ ಅನೇಕ ವರ್ಷಗಳಿಂದ ದುಡಿಯುತ್ತಿದ್ದ ಅಭ್ಯರ್ಥಿಯೊಬ್ಬನನ್ನು ಕಡೆಗಣಿಸಿ,ಇದೀಗ ಮತ್ತೊಂದು ಪಕ್ಷದಲ್ಲಿ ಸಲ್ಲದೇ(ಟಿಕೇಟು ದೊರೆಯದೆ) ಈ ಪಕ್ಷವನ್ನು ಸೇರಿದವರಿಗೆ  ಟಿಕೆಟ್ ನೀಡುವುದು ರಾಜಕೀಯ ರಂಗದ ಚದುರಂಗದಾಟದ ನಡೆಗಳಲ್ಲಿ ಒಂದಾಗಿದೆ. ತಮ್ಮ ಪಕ್ಷದ ತತ್ವ-ಸಿದ್ದಾಂತಗಳಲ್ಲಿ ನಂಬಿಕೆ ಇಲ್ಲದಿದ್ದರೂ,ಟಿಕೆಟ್ ನ ಆಸೆಯಿಂದ ವಲಸೆ ಬಂದಿರುವ ಪಕ್ಷಾಂತರಿಗಳನ್ನು  ವಿರೋಧಿಸುವ ತಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವ ನಾಯಕರು,ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು "ವ್ಯಕ್ತಿಗಿಂತ ಪಕ್ಷ ದೊಡ್ಡದು" ಎಂದು ಹೇಳಲು ಹಿಂಜರಿಯುವುದಿಲ್ಲ.
ಇಷ್ಟು ಮಾತ್ರವಲ್ಲ,ಅಂತಿಮ ಕ್ಷಣದಲ್ಲಿ ಟಿಕೆಟ್ ನೀಡಲು ನಿರಾಕರಿಸಿ ಕಡೆಗಣಿಸಿದ್ದ ತಮ್ಮದೇ ಪಕ್ಷದ ಪ್ರಭಾವಿ ಅಭ್ಯರ್ಥಿಯನ್ನು ಸಮಾಧಾನಿಸಲು ಅವರನ್ನು ಎಂ.ಎಲ್.ಸಿ ಮಾಡುವ ಅಥವಾ ಸೂಕ್ತ ಸ್ಥಾನಮಾನವನ್ನು ನೀಡುವ ಆಮಿಷವನ್ನು ಒಡ್ಡುವುದು ಸುಳ್ಳೇನಲ್ಲ.
ಆಶ್ವಾಸನೆಗಳ ಸುರಿಮಳೆ
ಚುನಾವಣಾ ಕಣದಲ್ಲಿರುವ ಒಂದು ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಆಶ್ವಾಸನೆಗಳ ಸುರಿಮಳೆಯು ಮತ್ತೊಂದು ಪಕ್ಷದ ಭರವಸೆಗಳ ಮಹಾಪೂರದಲ್ಲಿ ಕೊಚ್ಚಿಹೊಗುತ್ತಿದೆ. ಇದೇ ಕಾರಣದಿಂದಾಗಿ ಮಗದೊಂದು ಪಕ್ಷವು,ಇವೆರಡೂ ಪಕ್ಷಗಳ ಪ್ರಣಾಳಿಕೆಗಳಲ್ಲಿನ ಪ್ರಮುಖ ಅಂಶಗಳೊಂದಿಗೆ ತನ್ನ ಪಾಲಿನ ಇನ್ನಷ್ಟು ಆಶ್ವಾಸನೆಗಳನ್ನು ಸೇರಿಸಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತದೆ!.
ಇವೆಲ್ಲಕ್ಕೂ ಮಿಗಿಲಾಗಿ,ತಾವು ಅಧಿಕಾರದಲ್ಲಿ ಇದ್ದಾಗ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದ ನೇತಾರರು,ಇದೀಗ ಮತದಾರರು ನಿರೀಕ್ಷಿಸದ ಕೊಡುಗೆಗಳನ್ನು ನೀಡಲು ಮುಂದಾಗಿರುವುದು ನಂಬಲು ಅಸಾಧ್ಯವೆನಿಸುತ್ತದೆ. ಆದರೆ ಇವರು ಏನನ್ನು ನೀಡುವುದಾದರೂ ರಾಜ್ಯ ಸರಕಾರದ ಬೊಕ್ಕಸದಿಂದಲೇ ಹೊರತು,ತಮ್ಮ ಜೇಬಿನಿಂದ ಅಲ್ಲ ಎನ್ನುವುದನ್ನು ಅರ್ಥೈಸಿಕೊಳ್ಳಲು ಆಗದಷ್ಟು ಹೆಡ್ದರಲ್ಲ ರಾಜ್ಯದ ಮತದಾರರು.
ವಿಶೇಷವೆಂದರೆ ಚುನಾವಣಾ ಪ್ರಚಾರ ಸಭೆಗಳಲ್ಲಿ ತಾವು ಘೋಷಿಸಿದ್ದ  ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿ ಮುದ್ರಿಸಿದ್ದ ಆಶ್ವಾಸನೆಗಳನ್ನು,ಚುನಾವಣೆಯಲ್ಲಿ ಗೆದ್ದು  ಅಧಿಕಾರದ ಸೂತ್ರವನ್ನು ಕೈಗೆತ್ತಿಕೊಂಡ ಬಳಿಕ ಮರೆತುಬಿಡಲು ಅಲ್ಜೀಮರ್ಸ್ ಕಾಯಿಲೆಯಂತೂ ಕಾರಣವಲ್ಲ ಎನ್ನುವುದರಲ್ಲಿ ಮಾತ್ರ ಸಂದೇಹವಿಲ್ಲ!.
ಅದೇನೇ ಇರಲಿ,ಮುಂದಿನ ಕೆಲವೇ ದಿನಗಳಲ್ಲಿ ಚುನಾವಣೆಗಳು-ಮತ ಎಣಿಕೆಗಳ ಕಾರ್ಯ ಮುಗಿದು,ನಮ್ಮನ್ನು ಆಳುವವರು ಯಾರು?,ಎನ್ನುವ ಪ್ರಶ್ನೆಗೆ ಉತ್ತರ ದೊರೆಯಲಿದೆ. ಆದರೆ ಜನಸಾಮಾನ್ಯರನ್ನು ಕಾಡುತ್ತಿರುವ ನೂರಾರು  ಸಮಸ್ಯೆಗಳು ಮಾತ್ರ ಎಂದಿನಂತೆಯೇ ಮುಂದುವರೆಯಲಿವೆ!.
ಬಾಕ್ಸ್ ಐಟಂ
ಸಮಾಜಸೇವೆಯ ಸೋಗಿನಲ್ಲಿ ಶಾಸಕ-ಮಂತ್ರಿಯಾಗುವ ರಾಜಕಾರಣಿಗಳು,ರಾಜ್ಯದ ಬೊಕ್ಕಸಕ್ಕೆ ಕನ್ನವನ್ನು ಕೊರೆಯುವ ಮೂಲಕ ಅಗಾಧ ಪ್ರಮಾಣದ ಆಸ್ತಿಪಾಸ್ತಿಗಳನ್ನು ಬೆವರಿಳಿಸದೇ ಗಳಿಸುತ್ತಾರೆ. ಈ ರೀತಿಯಲ್ಲಿ ಅಕ್ರಮವಾಗಿ ಗಳಿಸಿದ್ದ ಸಂಪತ್ತನ್ನು ಉಳಿಸಿಕೊಳ್ಳುವ ಸಲುವಾಗಿ ಮತ್ತೆ ಚುನಾವಣೆಯಲ್ಲಿ ಗೆಲ್ಲಲು ಹೆಣಗುತ್ತಾರೆ. ಇದಕ್ಕಾಗಿ ತಾನು ಗಳಿಸಿದ್ದ ಸಂಪತ್ತಿನ ಸಣ್ಣದೊಂದು ಅಂಶವನ್ನು ವ್ಯಯಿಸುತ್ತಾರೆ. ಈ ವಿಚಾರವನ್ನು ಚೆನ್ನಾಗಿ ಅರಿತಿರುವ ಅಧಿಕತಮ ಪ್ರಜ್ಞಾವಂತ ಮತದಾರರು,ಇಂತಹ ಭ್ರಷ್ಟ ರಾಜಕಾರಣಿಗಳಿಗೆ ತಕ್ಕ ಪಾಠವನ್ನು ಕಲಿಸಲು ಸನ್ನದ್ಧರಾಗಿದ್ದಾರೆ!.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು



    ಲಘುಪಾನೀಯಗಳ ಅತಿಸೇವನೆ ಹಿತಕರವಲ್ಲ
ವಿಶ್ವದ ಬಹುತೇಕ ರಾಷ್ಟ್ರಗಳ ಮಕ್ಕಳು ಮತ್ತು ಯುವಜನರು ಲಘುಪಾನೀಯಗಳ ಅತಿಸೇವನೆಯ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ.ಆಧುನಿಕ ಜೀವನಶೈಲಿಯ ಅವಿಭಾಜ್ಯ ಅಂಗವೆನಿಸಿರುವ ಇಂತಹ ಹವ್ಯಾಸಗಳು,ಅನೇಕವಿಧದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತಿವೆ.ಅನೇಕ ದೇಶಗಳು ನಡೆಸಿದ್ದ ಹಲವಾರು ವೈದ್ಯಕೀಯ ಅಧ್ಯಯನ-ಸಂಶೋಧನೆಗಳಿಂದ ಬೆಳಕಿಗೆ ಬಂದಿರುವ ಈ ವಿಚಾರದ ಬಗ್ಗೆ ಜನಸಾಮಾನ್ಯರಿಗೆ ಅರಿವಿದ್ದರೂ,ಇದನ್ನು ನಿರ್ಲಕ್ಷಿಸುತ್ತಿರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತಿದೆ!.
ಕೆಲವೇ ವರ್ಷಗಳ ಹಿಂದೆ ಸಾಮಾನ್ಯವಾಗಿ ಮಧ್ಯವಯಸ್ಸು ಕಳೆದ ಬಳಿಕ ಉದ್ಭವಿಸುತ್ತಿದ್ದ ಕೆಲವಿಧದ ಗಂಭೀರ ಕಾಯಿಲೆಗಳು,ಇದೀಗ ಹದಿಹರೆಯದವರನ್ನು ಕಾಡಲು ಲಘುಪಾನೀಯ,ನಿಷ್ಪ್ರಯೋಜಕ ಆಹಾರ(ಜಂಕ್ ಫುಡ್ )ಗಳ ಅತಿಸೇವನೆಯೊಂದಿಗೆ ನಿಷ್ಕ್ರಿಯ ಜೀವನಶೈಲಿಯೂ ಕಾರಣವೆಂದು ತಿಳಿದುಬಂದಿದೆ.
ಲಘುಪಾನೀಯಗಳಿಂದ ಅಪಾಯ
ಸಾಮಾನ್ಯವಾಗಿ ಕೃತಕ ರಾಸಾಯನಿಕಗಳು,ರುಚಿಕಾರಕ ಹಾಗೂ ರುಚಿವರ್ಧಕ ದ್ರವ್ಯಗಳಿಗೆ ಸಾಕಷ್ಟು ಸಕ್ಕರೆ ಅಥವಾ ಕೃತಕ ಮಾಧುರ್ಯಕಾರಕಗಳನ್ನು ಸೇರಿಸಿ,ನೀರಿನಲ್ಲಿ ಬೆರೆಸಿದ ಬಳಿಕ ಬಾಟಲಿಗಳಲ್ಲಿ ತುಂಬಿ,ಒಂದಿಷ್ಟು ಇಂಗಾಲಾಮ್ಲವನ್ನು ಸೇರಿಸಿ ಲಘುಪಾನೀಯವನ್ನು ತಯಾರಿಸುತ್ತಾರೆ.ಆದರೆ ಇವುಗಳ ಅತಿಸೇವನೆಯ ದುಷ್ಪರಿಣಾಮಗಳ ಬಗ್ಗೆ ಇಂತಹ ಉತ್ಪನ್ನಗಳ ತಯಾರಕರು ಯಾವುದೇ ಮಾಹಿತಿಯನ್ನು ಅಥವಾ ಎಚ್ಚರಿಕೆಯನ್ನು ಪ್ರಕಟಿಸುವುದಿಲ್ಲ.ಜನಸಾಮಾನ್ಯರಂತೂ ಈ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ.
ವಿಶೇಷವೆಂದರೆ ಖ್ಯಾತ ಚಲನಚಿತ್ರ ತಾರೆಯರು ಮತ್ತು ಕ್ರಿಕೆಟ್ ಆಟಗಾರರು ಕೈತುಂಬಾ ಸಂಭಾವನೆಯನ್ನು ಪಡೆದು,ತಾವು ಅನುಮೋದಿಸುವ ಲಘುಪಾನೀಯವನ್ನು ಇದರ ಜಾಹೀರಾತಿನ ಚಿತ್ರೀಕರಣದ ಸಂದರ್ಭದಲ್ಲಿ ಮಾತ್ರ ಗುಟುಕರಿಸುತ್ತಾರೆ!.ಆದರೆ ಇಂತಹ ಜಾಹೀರಾತುಗಳಿಂದ ಪ್ರಭಾವಿತರಾದ ಜನರು ಪ್ರತಿನಿತ್ಯ ಇದನ್ನು ಸೇವಿಸುತ್ತಾರೆ.
ನೀವು ಮೆಚ್ಚಿ ಸವಿಯುವ ಲಘುಪಾನೀಯದಲ್ಲಿ ಏನಿದೆ ಎನ್ನುವುದು ಪ್ರಾಯಶಃ ನಿಮಗೂ ತಿಳಿದಿರಲಾರದು.ಉದಾಹರಣೆಗೆ ಮುಚ್ಚಳ ತೆಗೆದೊಡನೆ ನೊರೆಯೊಂದಿಗೆ ಹೊರಬರುವ ಕೋಲಾಗಳನ್ನು ಸಕ್ಕರೆ ,ಕೆಫೀನ್ ಮತ್ತು ಫಾಸ್ಫಾರಿಕ್ ಆಮ್ಲಗಳೊಂದಿಗೆ ಒಂದಿಷ್ಟು ವರ್ಣಕಾರಕ ಮತ್ತು ರುಚಿವರ್ಧಕ ದ್ರವ್ಯಗಳ ಸಮ್ಮಿಶ್ರಣಗಳಿಂದ ತಯಾರಿಸಲಾಗುತ್ತದೆ.ಇತ್ತೀಚಿಗೆ ಜನಪ್ರಿಯವೆನಿಸಿರುವ ಡಯಟ್ ಕೋಲಾಗಳಲ್ಲಿ ಸಕ್ಕರೆಯ ಬದಲಿಗೆ ಕೃತಕ ಮಾಧುರ್ಯಕಾರಕವನ್ನು ಬಳಸುತ್ತಿದ್ದು,ಇವೆಲ್ಲವೂ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.
ಒಂದು ಬಾಟಲಿ ಕೋಲಾದಲ್ಲಿ ಸಾಕಷ್ಟು ಪ್ರಮಾಣದ ಫಾಸ್ಫಾರಿಕ್ ಆಮ್ಲವಿದ್ದು,ನೀವು ಬಳಸುವ ಕಬ್ಬಿಣದ ಮೊಳೆ-ಬೀಗದಕೈಗಳಿಗೆ ಹಿಡಿದ ತುಕ್ಕನ್ನು ಕರಗಿಸಲು ಉಪಯುಕ್ತವೆನಿಸುತ್ತದೆ.ಜೊತೆಗೆ ನಿಮ್ಮ ಶೌಚಾಲಯದಲ್ಲಿನ ಅಪಾಯಕಾರಿ ರೋಗಾಣುಗಳನ್ನು ನಾಶಪಡಿಸುವಷ್ಟು ಶಕ್ತಿಶಾಲಿಯಾಗಿದೆ.ಈ ಆಮ್ಲದಿಂದಾಗಿ ಕೋಲಾಗಳ ಪಿ.ಎಚ್ ನ ಪ್ರಮಾಣವು ೨.೬ ಅಂದರೆ ಸರಿಸುಮಾರು ವಿನೆಗರ್ ನಲ್ಲಿ ಇರುವಷ್ಟೇ ಆಗಿರುತ್ತದೆ.
ಒಂದು ಬಾಟಲಿ ಕೋಲಾ ಅಥವಾ ಇತರ ಲಘುಪಾನೀಯಗಳಲ್ಲಿ ಸುಮಾರು ೧೫೦ರಿಂದ ೨೦೦ ಕ್ಯಾಲರಿಗಳಿದ್ದು,ಈ ನಿಷ್ಪ್ರಯೋಜಕ ಕ್ಯಾಲರಿಗಳನ್ನು ಹೊರತುಪಡಿಸಿ ನಿಮ್ಮ ಶರೀರಕ್ಕೆ ಯಾವುದೇ ಪೋಷಕಾಂಶಗಳು ದೊರೆಯುವುದಿಲ್ಲ.ಅಂತೆಯೇ ಈ ಕ್ಯಾಲರಿಗಳ ಬಹುದೊಡ್ಡ ಪಾಲು ಇವುಗಳಲ್ಲಿನ ಸಕ್ಕರೆಯಿಂದಾಗಿ ಲಭ್ಯವಾಗುವುದರಿಂದ,ಇವುಗಳ ಅತಿಸೇವನೆಯಿಂದ ವಯಸ್ಕರಲ್ಲಿ ಮಧುಮೇಹ,ಅತಿಬೊಜ್ಜು,ಅಧಿಕತೂಕ,ಅಧಿಕ ರಕ್ತದೊತ್ತಡ,ಹೃದಯ-ರಕ್ತನಾಳಗಳ ಕಾಯಿಲೆಗಳು ಮತ್ತು ಮಕ್ಕಳಲ್ಲಿ ಅಧಿಕ ತೂಕ ಹಾಗೂ ಅತಿಬೊಜ್ಜಿನಂತಹ ಸಮಸ್ಯೆಗಳಿಗೆ ಕಾರಣವೆನಿಸಬಲ್ಲದು.
ನಮ್ಮ ಜಠರದಲ್ಲಿರುವ ಕ್ಷಾರ-ಆಮ್ಲಗಳ ಸಮತೋಲನವು ಬಹಳ ಸೂಕ್ಷ್ಮ ಪ್ರವೃತ್ತಿಯದಾಗಿದ್ದು,ಅತಿಯಾದ ಲಘುಪಾನೀಯಗಳ ಸೇವನೆಯಿಂದ ಇದರಲ್ಲಿ ವ್ಯತ್ಯಯವಾಗುವುದು.ಅನುಭವೀ ವೈದ್ಯರೇ ಹೇಳುವಂತೆ ನಮ್ಮ ಜಠರದಲ್ಲಿ ಹೆಚ್ಚುವ ಆಮ್ಲದ ಪ್ರಮಾಣಕ್ಕೆ ಅನುಗುಣವಾಗಿ,ಉದರ ಸಂಬಂಧಿತ ವ್ಯಾಧಿಗಳ ಸಂಭಾವ್ಯತೆಯೂ ಹೆಚ್ಚಾಗುವುದು.ಜಠರದ ಲೋಳ್ಪರೆಯ ಉರಿಯೂತ-ಕೊರೆತಗಳಿಗೆ ಕಾರಣವೆನಿಸಬಲ್ಲ ಆಮ್ಲದಿಂದಾಗಿ ಉದರಶೂಲೆಯೂ ಉದ್ಭವಿಸಬಹುದು.ಈ ವಿಶಿಷ್ಟ ಸಮಸ್ಯೆಗೆ ಲಘುಪಾನೀಯಗಳಲ್ಲಿರುವ ಕೆಫೀನ್ ಹಾಗೂ ಅಸಿಟಿಕ್,ಫ್ಯುಮರಿಕ್,ಲುಕೊನಿಕ್ ಅಥವಾ ಪ್ಹಾಸ್ಫಾರಿಕ್ ಆಮ್ಲಗಳೇ ಕಾರಣವೆನಿಸುತ್ತವೆ.ಇದಲ್ಲದೆ ಕಾರ್ಬನ್ ಡೈ ಆಕ್ಸೈಡ್ ಬಳಸಿ ಸಿದ್ಧಪಡಿಸುವ ಎಲ್ಲಾ ಲಘುಪಾನೀಯಗಳು ಆಮ್ಲೀಯ ಗುಣವನ್ನು ಹೊಂದಿರುತ್ತವೆ.ಇಂತಹ ಒಂದು ಲಘುಪಾನೀಯವನ್ನು ಸೇವಿಸಿದಾಗ ನಿಮ್ಮ ಉದರವನ್ನು ಆಮ್ಲವನ್ನು ನಿಷ್ಕ್ರಿಯಗೊಳಿಸಲು,ಹತ್ತು ಲೋಟ ಕ್ಷಾರೀಯ ಗುಣವುಳ್ಳ ನೀರನ್ನು ಕುಡಿಯಬೇಕಾಗುವುದು!.
ಬಹುತೇಕ ಲಘುಪಾನೀಯಗಳಲ್ಲಿರುವ ಫಾಸ್ಫಾರಿಕ್ ಆಮ್ಲವು ಜಠರದಲ್ಲಿರುವ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಹೋರಾಡುವುದರಿಂದಾಗಿ ಅಜೀರ್ಣ,ಹೊಟ್ಟೆಯುಬ್ಬರ,ಎದೆಯುರಿ,ಮತ್ತು ಹುಳಿತೇಗಿನಂತಹ ತೊಂದರೆಗಳು ಉದ್ಭವಿಸುವ ಸಾಧ್ಯತೆಗಳಿವೆ.ನಿಮಗೆ ಅತಿಯಾದ ಹಸಿವೆ ಬಾಧಿಸಿದಾಗ ಕೇವಲ ಒಂದು ಬಾಟಲಿ ಲಘುಪಾನೀಯವನ್ನು ಕುಡಿದಲ್ಲಿ ಹೊಟ್ಟೆತುಂಬಿದಂತಹ ಭಾವನೆ ಮೂಡುವುದು.ಪ್ರಾಯಶಃ ಇದೇ ಕಾರಣದಿಂದಾಗಿ ಇವುಗಳನ್ನು ಅತಿಯಾಗಿ ಸೇವಿಸುವ ವ್ಯಕ್ತಿಗಳು,ಸೂಕ್ತ ಸಮಯದಲ್ಲಿ ಸೂಕ್ತಪ್ರಮಾಣದ ಆಹಾರವನ್ನು ಸೇವಿಸುವುದಿಲ್ಲ.ತತ್ಪರಿಣಾಮವಾಗಿ ಶರೀರಕ್ಕೆ ಅವಶ್ಯಕ ಪ್ರಮಾಣದ ಪೋಷಕಾಂಶಗಳೇ ದೊರೆಯದೇ ಸೊರಗುವ ಶರೀರವು,ತನ್ನ ರೋಗನಿರೋಧಕ ಶಕ್ತಿಯನ್ನೇ ಕಳೆದುಕೊಳ್ಳಬಹುದು.ಹಾಗೂ ಇದರಿಂದಾಗಿ ಅಯಾಚಿತ ಆರೋಗ್ಯದ ಸಮಸ್ಯೆಗಳು ಉದ್ಭವಿಸಬಹುದು.
ಕೋಲಾಗಳಲ್ಲಿ ಇರುವ ಕೆಫೀನ್ ನಮ್ಮ ಶರೀರದಲ್ಲಿರುವ ಕ್ಯಾಲ್ಸಿಯಂ ನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.ಇದರೊಂದಿಗೆ ಕೋಲಾಗಳಲ್ಲಿ ಇರುವ ಫಾಸ್ಫಾರಿಕ್ ಆಮ್ಲ ಮತ್ತು ಕಾರ್ಬನ್ ಡೈ ಆಕ್ಸೈಡ್ ಮೂಳೆಗಳಲ್ಲಿನ ಖನಿಜಾಂಶಗಳನ್ನು ನಿವಾರಿಸುವುದರಿಂದಾಗಿ ದುರ್ಬಲವಾಗುವ ಮೂಳೆಗಳು,ಸುಲಭದಲ್ಲೇ ಮುರಿಯುವ ಸಾಧ್ಯತೆಗಳಿವೆ.
ಇದಲ್ಲದೇ ಈ ಪಾನೀಯಗಳಲ್ಲಿ ಇರುವ ಕೆಫೀನ್ ಜಠರದ ಹುಣ್ಣುಗಳಿಗೆ ಕಾರಣವೆನಿಸಬಲ್ಲದು.ಜೊತೆಗೆ ಹೃದಯ ಮತ್ತು ಕೇಂದ್ರ ನರಮಂಡಲಗಳನ್ನು ಇದು ಉತ್ತೇಜಿಸುವುದರಿಂದ ತೀವ್ರ ಎದೆಬಡಿತ,ಅತಿಚಟುವಟಿಕೆ ಮತ್ತು ನಿದ್ರಾಹೀನತೆಗಳಿಗೆ ಕಾರಣವೆನಿಸಬಲ್ಲದು.ಕೆಫೀನ್ ನ ಅತಿಸೇವನೆಯು ರಕ್ತದ ಒತ್ತಡವನ್ನು ಹೆಚ್ಚಿಸುವುದರಿಂದ ಅಧಿಕ ರಕ್ತದೊತ್ತಡ ಇರುವ ವ್ಯಕ್ತಿಗಳು ಮತ್ತು ಗರ್ಭಿಣಿಯರು ಇವುಗಳನ್ನು ಸೇವಿಸದೇ ಇರುವುದು ಹಿತಕರ.
ಪುಟ್ಟ ಮಕ್ಕಳಲ್ಲಿ ಲಘುಪಾನೀಯಗಳ ಅತಿಸೇವನೆಯು "ದಂತಕುಳಿ "ಗಳಿಗೆ ಕಾರಣವೆನಿಸಲು ಇವುಗಳಲ್ಲಿರುವ ಸಕ್ಕರೆಯೇ ಕಾರಣ.ಅಂತೆಯೇ  ಇವುಗಳಲ್ಲಿನ ಆಮ್ಲಗಳು ಖನಿಜಾಂಶವನ್ನು ತೊಡೆದುಹಾಕುವುದರಿಂದ ದಂತಕ್ಷಯಕ್ಕೂ ಮೂಲವೆನಿಸುತ್ತವೆ.ವಿಶೇಷವಾಗಿ ಬೆಳೆಯುವ ವಯಸ್ಸಿನ ಮಕ್ಕಳು ಲಘುಪಾನೀಯಗಳ ಅತಿಸೇವನೆಯ ವ್ಯಸನಕ್ಕೆ ಒಳಗಾಗಿದ್ದಲ್ಲಿ,ಅವಶ್ಯಕ ಪ್ರಮಾಣದ ಸಮತೋಲಿತ ಆಹಾರವನ್ನೇ ಸೇವಿಸದೇ ಇರುವುದರಿಂದ ಇವರ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗಳು ಕುಂಠಿತಗೊಳ್ಳುವ ಸಾಧ್ಯತೆಗಳಿವೆ.ಇದರೊಂದಿಗೆ ನಿಷ್ಪ್ರಯೋಜಕ ಆಹಾರಗಳನ್ನು ಅತಿಯಾಗಿ ಸೇವಿಸುವ ಮಕ್ಕಳು ಅಧಿಕತೂಕ ಮತ್ತು ಅತಿಬೊಜ್ಜಿನಂತಹ ಸಮಸ್ಯೆಗಳಿಗೆ ಈಡಾಗುತ್ತಾರೆ.ಇವೆಲ್ಲವುಗಳೊಂದಿಗೆ ನಿಷ್ಕ್ರಿಯ ಜೀವನಶೈಲಿಯನ್ನು ಅನುಸರಿಸುವ ಮಕ್ಕಳು ಹದಿಹರೆಯದಲ್ಲೇ ಅನುವಂಶಿಕ ಮತ್ತು ಇತರ ಕಾಯಿಲೆಗಳಿಗೆ ಸುಲಭದಲ್ಲೇ ಈಡಾಗುತ್ತಾರೆ!.
ಅಂತಿಮವಾಗಿ ಲಘುಪಾನೀಯಗಳಲ್ಲಿ ಅಲ್ಪಪ್ರಮಾಣದಲ್ಲಿ ನಿಶ್ಚಿತವಾಗಿಯೂ ಇದೆಯೆಂದು ಇವುಗಳ ತಯಾರಕರೇ ಒಪ್ಪಿಕೊಂಡಿರುವ ಕೀಟನಾಶಕಗಳು,ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿದ್ದಲ್ಲಿ ಸಂಭವಿಸಬಲ್ಲ ವಿಷಕಾರಕ ಪರಿಣಾಮಗಳು ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸಬಲ್ಲವು.ಇವೆಲ್ಲಾ ಕಾರಣಗಳಿಂದಾಗಿ ಲಘುಪಾನೀಯಗಳ ಅತಿಸೇವನೆಯಿಂದ ಅನಾರೋಗ್ಯವನ್ನು ಆಹ್ವಾನಿಸುವುದಕ್ಕಿಂತಲೂ,ಇವುಗಳ ಸೇವನೆಯನ್ನೇ  ವರ್ಜಿಸುವುದು ಹಿತಕರವೆನಿಸುವುದು.
ಡಾ.ಸಿ.ನಿತ್ಯಾನಂದ ಪೈ
ಬಳಕೆದಾರರ ಹಿತರಕ್ಷಣಾ ವೇದಿಕೆ
ಬೊಳುವಾರು,ಪುತ್ತೂರು.ದ.ಕ



                ಹರ ಹರಾ, ಇದೇನಿದು ಇಲಿಜ್ವರ ?
ಕಣ್ಣುಮುಚ್ಚಾಲೆ ಆಡುತ್ತಿರುವ ಮುಂಗಾರು ಮಳೆಯೊಂದಿಗೆ ಬಿಸಿಲು ಮಳೆಗಳ ಮೇಳದಿಂದಾಗಿ, ಜನಸಾಮಾನ್ಯರನ್ನು ಕಾಡುತ್ತಿರುವ ಕಾಯಿಲೆಗಳ ಬಾಧೆ ತುಸು ಅಧಿಕವಾಗಿದೆ. ಸಾಮಾನ್ಯ ಶೀತ, ಫ್ಲೂ ಜ್ವರ, ಡೆಂಗೆ, ಟೈಫಾಯಿಡ್, ವಾಂತಿ-ಭೇದಿ ಇತ್ಯಾದಿ ವ್ಯಾಧಿಗಳೊಂದಿಗೆ, ಇಲಿ ಜ್ವರದ ಹಾವಳಿಯೂ ನಮ್ಮ ಜಿಲ್ಲೆಯಲ್ಲಿ  ಸಾಂಕ್ರಾಮಿಕವಾಗಿ ಹಬ್ಬಿದೆ.ಇವುಗಳಲ್ಲಿ  ಹಿಂದೂ ಬಾಂಧವರ ಆರಾಧ್ಯ ದೈವ  ವಿಘ್ನೇಶನ ವಾಹನವಾಗಿರುವ ಮೂಷಿಕದ ನಾಮಧೇಯದ ಕಾಯಿಲೆಯು ಈಗಾಗಲೇ ಕೆಲ ಅಮಾಯಕರನ್ನು ಬಲಿಪಡೆದಿದೆ. ಮಾರಕವೆನಿಸಬಲ್ಲ ಈ ವ್ಯಾಧಿಯ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.
"ಇಲಿ ಓಡಿತು ಎನ್ನುವುದನ್ನು ಕೇಳಿದವನು, ಹುಲಿ ಓಡಿತು ಎಂದು ಹೇಳಿದಂತೆ' ಎಂಬರ್ಥದ ತುಳುವರ ಆಡುಮಾತು ಇಲಿ ಜ್ವರದ ಮಟ್ಟಿಗೆ ಅನ್ವರ್ಥವೆನಿಸುತ್ತದೆ. ಏಕೆಂದರೆ ಈ ಸೋಂಕಿನಿಂದ ಪೀಡಿತವಾದ ಇಲಿಯ ಮೂತ್ರದ ಮೂಲಕ ಹರಡುವ ಇಲಿ ಜ್ವರವು, ಅನೇಕ ರೋಗಿಗಳ ಪಾಲಿಗೆ ಪ್ರಾಣಾಂತಿಕವಾಗಿ ಪರಿಣಮಿಸುತ್ತದೆ. ಅಪರೂಪದಲ್ಲಿ ತಲೆದೋರುವ ಈ ಕಾಯಿಲೆಯು "ಸ್ಪೈರೋಕೆಟ್" ಎನ್ನುವ ಬ್ಯಾಕ್ಟೀರಿಯಾಗಳಿಂದ ಉದ್ಭವಿಸುತ್ತದೆ.
ಉದ್ಭವಿಸುವುದೆಂತು? 
ಲೆಪ್ಟೋಸ್ಪೈರೋಸಿಸ್ ಎಂದು ಕರೆಯಲ್ಪಡುವ ಇಲಿಜ್ವರವು ಈ ಸೋಂಕು ಪೀಡಿತ ಇಲಿಗಳ ಮೂತ್ರ ಹಾಗೂ ನಾಸಿಕ, ನೇತ್ರ ಮತ್ತು ಇತರ ಕೆಲ ಅಂಗಾಂಗಗಳ ಸ್ರಾವಗಳ ಮೂಲಕ ಮತ್ತು ಇಲಿಗಳು ಕಚ್ಚುವ ಮೂಲಕವೂ, ಸಾಕು-ಕಾಡು ಪ್ರಾಣಿಗಳೊಂದಿಗೆ ಮನುಷ್ಯರಿಗೂ ಹರಡಬಲ್ಲದು. ಡಾ.ವೇಲ್ ಎಂಬಾತನು ಮೊತ್ತ ಮೊದಲ ಬಾರಿಗೆ ಈ ವ್ಯಾಧಿಯ ಲಕ್ಷಣಗಳನ್ನು ನಿಖರವಾಗಿ ವಿವರಿಸಿದ್ದುದರಿಂದ ಇದನ್ನು "ವೇಲ್ಸ್ ಸಿಂಡ್ರೋಮ್' ಎಂದೂ ಕರೆಯುತಾರೆ.
ಈ ಸೋಂಕು ಪೀಡಿತ ಇಲಿಗಳು ವಿಸರ್ಜಿಸಿದ ಒಂದು ಮಿ.ಲೀ.  ಮೂತ್ರದಲ್ಲಿ ಸುಮಾರು ೧೦ ಕೋಟಿಗೂ ಅಧಿಕ ರೋಗಾಣುಗಳಿದ್ದು,  ಇವುಗಳಿಂದ  ಕಲುಷಿತಗೊಂಡ  ನೀರು ಮತ್ತು ಮಣ್ಣಿನ ಮೂಲಕವೂ ಈ ಸೋಂಕು ಹರಡುತ್ತದೆ. ಉದಾಹರಣೆಗೆ ನಿಮ್ಮ ಮನೆಯ ಅಂಗಳದಲ್ಲಿನ ಹುಲ್ಲಿನ ಮೇಲೆ ಸೋಂಕು ಪೀಡಿತ ಇಲಿಯೊಂದು ವಿಸರ್ಜಿಸಿದ ಮೂತ್ರವನ್ನು ನಿಮ್ಮ ಸಾಕು ನಾಯಿಯು ನೆಕ್ಕಿದಲ್ಲಿ, ಅದರಲ್ಲಿದ್ದ ಬ್ಯಾಕ್ಟೀರಿಯಾಗಳು ನಾಯಿಯ ಶರೀರವನ್ನು ಪ್ರವೇಶಿಸಿ ರೋಗವನ್ನು ಉಂಟುಮಾಡುತ್ತವೆ. ಅದೇರೀತಿಯಲ್ಲಿ ನಿಮ್ಮ ಕೈ-ಕಾಲುಗಳಲ್ಲಿ ಇರಬಹುದಾದ ಗಾಯಗಳ ಮೂಲಕ ಅಥವಾ ಸಂದರ್ಭೋಚಿತವಾಗಿ ನಿಮ್ಮ ಕಣ್ಣು, ಮೂಗು ಹಾಗೂ ಬಾಯಿಗಳ ಮೂಲಕ ನಿಮ್ಮ ಶರೀರದಲ್ಲಿ ಪ್ರವೇಶವನ್ನು ಗಳಿಸಿದ ಬ್ಯಾಕ್ಟೀರಿಯಾಗಳು ಇಲಿಜ್ವರಕ್ಕೆ ಕಾರಣವೆನಿಸುತ್ತವೆ. ಇಲಿಜ್ವರವು ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡಬಲ್ಲದಾದರೂ, ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ.
ಮನುಷ್ಯರಲ್ಲಿ ಈ ವ್ಯಾಧಿ ಉದ್ಭವಿಸಲು ಲೆಪ್ಟೋಸ್ಪೈರಾ ಇಕ್ಟೆರೋ ಹೆಮೊರೆಜಿಯೇ ಅಥವಾ ಲೆ.ಕೆನಿಕೊಲ ಎನ್ನುವ ಎರಡು ವಿಧದ ಬ್ಯಾಕ್ಟೀರಿಯಾಗಳೇ  ಕಾರಣವೆನಿಸುತ್ತವೆ.
ರೋಗ ಲಕ್ಷಣಗಳು
ಈ ರೋಗಾಣುಗಳು ಮನುಷ್ಯನ ಶರೀರವನ್ನು ಪ್ರವೇಶಿಸಿದ ನಂತರ ಸುಮಾರು ನಾಲ್ಕರಿಂದ ಇಪ್ಪತ್ತೊಂದು ದಿನಗಳಲ್ಲಿ ಇಲಿಜ್ವರದ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಮೊದಲ ಹಂತದಲ್ಲಿ ಫ್ಲೂ ಜ್ವರದ ಲಕ್ಷಣಗಳನ್ನೇ ಹೋಲುವ ವಿಪರೀತ ತಲೆನೋವು, ಶರೀರದ ಮಾಂಸಖಂಡಗಳು, ಆಸ್ಥಿಸಂಧಿಗಳು ಮತ್ತು ಕಣ್ಣುಗಳಲ್ಲಿ ನೋವು, ಕಣ್ಣುಗಳು ಕೆಂಪಾಗುವುದು, ಒಂದಿಷ್ಟು ಚಳಿ ಮತ್ತು ಜ್ವರ ಕಂಡುಬರುವುದು. ಮುಂದಿನ ಐದರಿಂದ ಹತ್ತು ದಿನಗಳಲ್ಲಿ ಇವೆಲ್ಲಾ ಲಕ್ಷಣಗಳು ನಿಧಾನವಾಗಿ ಮಾಯವಾಗುತ್ತವೆ. ಈ ಹಂತದಲ್ಲಿ ವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆಯದವರು, ಸ್ವಯಂ ಚಿಕಿತ್ಸೆ ಪ್ರಯೋಗಿಸಿದವರು ಮತ್ತು ಇಂತಹ ಸಣ್ಣ ಪುಟ್ಟ ಜ್ವರಗಳಿಗೆ ಔಷದ ಸೇವನೆ ತರವಲ್ಲ ಎಂದು ನಿರ್ಲಕ್ಷಿಸುವ ವ್ಯಕ್ತಿಗಳಿಗೆ ಮುಂದಿನ ಹಂತದಲ್ಲಿ ಗಂಭೀರ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ.
ದ್ವಿತೀಯ ಹಂತದಲ್ಲಿ ಮತ್ತೆ ಮರುಕಳಿಸುವ ಮೊದಲ ಹಂತದ ಲಕ್ಷಣಗಳೊಂದಿಗೆ, ಕೆಲ ರೋಗಿಗಳಲ್ಲಿ ಕಣ್ಣು, ಮೆದುಳು ಮತ್ತು ಬೆನ್ನುಹುರಿಗಳಿಗೆ ಸಂಬಂಧಿಸಿದ ನರಗಳ ಉರಿಯೂತ ಹಾಗೂ ಕುತ್ತಿಗೆಯ ಸೆಡೆತಗಳು ಉದ್ಭವಿಸುತ್ತವೆ. ಜೊತೆಗೆ ಈ ರೋಗಾಣುಗಳು ಮೆದುಳಿನ ಮೇಲೆ ಪರೋಕ್ಷವಾಗಿ ಬೀರುವ ಪರಿಣಾಮದಿಂದಾಗಿ ಮೆದುಳುಜ್ವರವನ್ನು ಹೋಲುವ ಲಕ್ಷಣಗಳು ಅನೇಕ ರೋಗಿಗಳಲ್ಲಿ ಕಂಡುಬರುತ್ತವೆ. ಅಪರೂಪದಲ್ಲಿ ಕೆಲರೋಗಿಗಳಲ್ಲಿ ಶ್ವಾಸಕೋಶಗಳು, ಯಕೃತ್, ಪ್ಲೀಹ, ಮೂತ್ರಾಂಗಗಳು ಮತ್ತು ಹೃದಯದ ವೈಫಲ್ಯಗಳಂತಹ ಗಂಭೀರ ಸಮಸ್ಯೆಗಳು ಉದ್ಭವಿಸಿದಲ್ಲಿ, ಇಲಿಜ್ವರವು ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಈ ರೀತಿಯ ಯಾವುದೇ ಸಮಸ್ಯೆಗಳು ತಲೆದೋರದಿದ್ದಲ್ಲಿ, ನಾಲ್ಕು ವಾರಗಳ ಅವಧಿಯಲ್ಲಿ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುವರು.
ಇಲಿಜ್ವರವನ್ನು ನಿಖರವಾಗಿ ಪತ್ತೆ ಹಚ್ಚಬಲ್ಲ ಪರೀಕ್ಷೆಗಳು ನಮ್ಮ ದೇಶದಲ್ಲೂ ಲಭ್ಯವಿದ್ದು, ಕೇವಲ ೨ ನಿಮಿಷಗಳಲ್ಲಿ ಇದನ್ನು ಪತ್ತೆ ಹಚ್ಚುವ ವಿಧಾನವನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಅದೇ ರೀತಿಯಲ್ಲಿ ವ್ಯಾಧಿಯ ಮೊದಲ ಹಂತದಲ್ಲೇ ನಿಯಂತ್ರಿಸಬಲ್ಲ ಜೀವನಿರೋಧಕ ಔಷದಗಳು ಲಭ್ಯವಿದೆ.ಆದುದರಿಂದ ಜ್ವರ ಪೀಡಿತ ವ್ಯಕ್ತಿಗಳು ತಮ್ಮ ಕಾಯಿಲೆ ಯಾವುದೆಂದು ಆರಿಯದೇ, ನಿರ್ಲಕ್ಷಿಸುವುದರ ಬದಲಾಗಿ ತಮ್ಮ ನಂಬಿಗಸ್ಥ ವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆದುಕೊಂಡಲ್ಲಿ ಪ್ರಾಣಾಪಾಯದ ಸಂಭಾವ್ಯತೆಯನ್ನು ನಿಶ್ಚಿತವಾಗಿಯೂ ತಡೆಗಟ್ಟಬಹುದಾಗಿದೆ.  
ಇಲಿಜ್ವರ ಪೀಡಿತ ವ್ಯಕ್ತಿಗಳಲ್ಲಿ ಶೇ.೧೦ ರಿಂದ ೪೦ ರಷ್ಟು ರೋಗಿಗಳು ಗಂಭೀರ ಸಮಸ್ಯೆಗಳಿಂದ ಮೃತಪಡುತ್ತಾರೆ. ಆದರೆ ರೋಗಿಯ ವಯಸ್ಸು, ವ್ಯಾಧಿಯ ತೀವ್ರತೆ ಹಾಗೂ ಇದರಿಂದ ಆತನ ಅಂಗಾಂಗಗಳಿಗೆ ಸಂಭವಿಸಿರುವ ಹಾನಿಯ ಪ್ರಮಾಣ, ಆತನಲ್ಲಿ ಅದಾಗಲೇ ಇದ್ದ ಅನ್ಯ ಗಂಭೀರ ಆರೋಗ್ಯದ ಸಮಸ್ಯೆಗಳು(ಉದಾ-ಅನಿಯಂತ್ರಿತ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಗಂಭೀರ ಹೃದ್ರೋಗಗಳು) ಮತ್ತು ಆತನ ಸಾಮಾನ್ಯ ಆರೋಗ್ಯದ ಮಟ್ಟಗಳನ್ನು ಹೊಂದಿಕೊಂಡು, ಇಲಿಜ್ವರದ ಮಾರಕತೆಯ ಪ್ರಮಾಣವೂ ಹೆಚ್ಚು- ಕಡಿಮೆಯಾಗಬಲ್ಲದು.
ಇಲಿಜ್ವರವನ್ನು ತಡೆಗಟ್ಟಬಲ್ಲ ಲಸಿಕೆಯೊಂದು ಕೆಲ ದೇಶಗಳಲ್ಲಿ ಈಗಾಗಲೇ ಲಭ್ಯವಿದ್ದರೂ, ನಮ್ಮ ದೇಶದಲ್ಲಿ ಇದನ್ನು ತರಿಸಿ ಬಳಸುವವರ ಸಂಖ್ಯೆ ತೀರಾ ಕಡಿಮೆಯಿದೆ. ಆದರೆ ಈ ವ್ಯಾಧಿ ಸಾಂಕ್ರಾಮಿಕವಾಗಿ ಹರಡುತ್ತಿರುವ ಸಂದರ್ಭದಲ್ಲಿ, ಕೆಲ ವಿಧದ ಜೀವನಿರೋಧಕ ಔಷದವನ್ನು ವಾರದಲ್ಲಿ ಒಂದು ಬಾರಿ ಸೇವಿಸುವ ಮೂಲಕ ತಡೆಗಟ್ಟುವ ವಿಧಾನ ನಮ್ಮ ದೇಶದಲ್ಲಿ ಬಳಸಲ್ಪಡುತ್ತಿದೆ.
ಡಾ. ಸಿ. ನಿತ್ಯಾನಂದ ಪೈ, ಪುತ್ತೂರು


     ಮರಿಪುಡಾರಿಯೊಬ್ಬನ ಮಂಪರು ಪರೀಕ್ಷೆ!
ಭವ್ಯ  ಕರ್ನಾಟಕದ ರಾಜಕಾರಣಿಗಳಲ್ಲಿ ಇರಬಹುದಾದ ದೇಶಭಕ್ತಿ,ಸೇವಾ ಮನೋಭಾವ,ಬಡವರ ಬಗ್ಗೆ ಕಾಳಜಿ,ಹಿಂದುಳಿದ ವರ್ಗ ಹಾಗೂ ದೀನ ದಲಿತರನ್ನು ಉದ್ಧಾರಮಾಡುವ ಹಂಬಲ ಮತ್ತು ಜನಸಾಮಾನ್ಯರನ್ನು ಬಾಧಿಸುವ ಸಮಸ್ಯೆ-ಸಂಕಷ್ಟಗಳನ್ನು ಪರಿಹರಿಸುವ ಆಕಾಂಕ್ಷೆಗಳನ್ನು ಓರೆಗೆ ಹಚ್ಚಿ ನಿಖರವಾಗಿ ಪತ್ತೆಹಚ್ಚುವ ಪ್ರಯತ್ನದ ಅಂಗವಾಗಿ, ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ರಹಸ್ಯ ಕಾರ್ಯಾಚರಣೆಯನ್ನು ನಡೆಸಿದ್ದರು. ಇದರ ಅಂಗವಾಗಿ ರಾಜ್ಯದ ಮೂರು ಪ್ರಮುಖ ಪಕ್ಷಗಳಿಂದ ಟಿಕೆಟ್ ಪಡೆದುಕೊಳ್ಳಲು ವಿಫಲನಾಗಿ,ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮರಿಪುಡಾರಿಯೊಬ್ಬನನ್ನು ಪುಸಲಾಯಿಸಿ, ರಹಸ್ಯ ಸ್ಥಳದಲ್ಲಿ ತಜ್ಞರಿಂದ "ಮಂಪರು ಪರೀಕ್ಷೆ" ಯನ್ನು ನಡೆಸಲು ಯಶಸ್ವಿಯಾಗಿದ್ದರು. ಈ ಪರೀಕ್ಷೆಯನ್ನು ನಡೆಸುವಾಗ "ನೀವು ಈ ಬಾರಿ ಚುನಾವಣೆಯಲ್ಲಿ ಗೆದ್ದು ಶಾಸಕರಾದಲ್ಲಿ,ನಿಮ್ಮ ಆದ್ಯತೆಗಳೇನು?,ಎನ್ನುವ ಪ್ರಶ್ನೆಗೆ ಮರಿಪುಡಾರಿ ನೀಡಿದ್ದ ಪ್ರಾಮಾಣಿಕ ಉತ್ತರಗಳ ಅನಧಿಕೃತ ಆವೃತ್ತಿಯೊಂದು ನಮಗೆ ದೊರೆತಿದೆ. ಇದರ ಸಂಕ್ಷಿಪ್ತ ವಿವರಗಳನ್ನು ಇಲ್ಲಿ ನೀಡಲಾಗಿದೆ.
ನಾನು ಗೆದ್ದು ಶಾಸಕನಾದರೆ . . . .
*ಕಳೆದಬಾರಿಯ ಚುನಾವಣೆಯ ಮಾದರಿಯಲ್ಲಿ ಈ ಬಾರಿಯೂ ಫಲಿತಾಂಶಗಳು ಬಂದಲ್ಲಿ,ಸರಕಾರ ರಚಿಸುವ ಸಾಮರ್ಥ್ಯವಿರುವ ಪಕ್ಷಕ್ಕೆ ಬೇಷರತ್ ಬೆಂಬಲ ನೀಡುವುದಾಗಿ ಘೋಷಿಸುವುದು. ಆದರೆ ತೆರೆಯ ಮರೆಯಲ್ಲಿ ಸಚಿವಸ್ಥಾನವನ್ನು ನೀಡಲೆಬೇಕೆನ್ನುವ ಶರತ್ತನ್ನು ವಿಧಿಸಿ  ಮಂತ್ರಿಯಾಗುವುದು ನನ್ನ ಆದ್ಯತೆಗಳಲ್ಲಿ ಪ್ರಮುಖವಾಗಿದೆ.
*ಆಡಳಿತ ಪಕ್ಷದ ಹಿರಿಯ ಹಾಗೂ ಪ್ರಭಾವಿ ನಾಯಕರು ತುಳಿದಿದ್ದ ಹಾದಿಯನ್ನು ಅನುಸರಿಸುವ ಮೂಲಕ ಗುರುವನ್ನು ಮೀರಿಸಿದ ಶಿಷ್ಯನೆನಿಸಿಕೊಳ್ಳುವುದು.ಮಂತ್ರಿಗಿರಿ ದೊರೆಯಲು ಅಡೆತಡೆಗಳು ಉದ್ಭವಿಸಿದಲ್ಲಿ ,ಈಗಾಗಲೇ ಒಂದಕ್ಕೂ ಹೆಚ್ಚುಬಾರಿ ಮಂತ್ರಿಯಾಗಿದ್ದವರಿಗೆ ಮತ್ತೆ ಮಂತ್ರಿಗಿರಿಯನ್ನು ನೀಡದಂತೆ ಹಾಗೂ ಯುವಕರಿಗೆ ಅವಕಾಶವನ್ನು ನೀಡುವಂತೆ ವರಿಷ್ಠರ ಮೇಲೆ ಒತ್ತಡವನ್ನು ಹೇರುವ ಮೂಲಕ ಮಂತ್ರಿಮಂಡಲದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವುದು ದ್ವಿತೀಯ ಆದ್ಯತೆಯಾಗಿದೆ.
*ಹಿರಿಯ ಅಥವಾ ಪ್ರಭಾವಿ ಶಾಸಕರ ಕುತಂತ್ರಗಳಿಂದ ಮತ್ತು ಅನ್ಯ ಕಾರಣಗಳಿಂದ ಮಂತ್ರಿಪದವಿ ಕೈತಪ್ಪಿದಲ್ಲಿ,ಯಾವುದಾದರೂ ನಿಗಮ-ಮಂಡಳಿಯೊಂದರ ಅಧ್ಯಕ್ಷ ಪದವಿಯನ್ನು ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಡುವುದು.
*ನನ್ನ ಕ್ಷೇತ್ರಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ದೊರೆಯುವ ಅನುದಾನಗಳನ್ನು ಮಂಜೂರುಮಾಡಿಸಿ,ಅವಶ್ಯಕ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದು. ಮತ್ತು ಗುತ್ತಿಗೆದಾರರಿಂದ ನನಗೆ ಸಲ್ಲಾಬೇಕಾದ ಪಾಲನ್ನು ಮುಂಗಡವಾಗಿ ಪಡೆದುಕೊಳ್ಳುವುದು. ಈ ವ್ಯವಹಾರ ಸುಸೂತ್ರವಾಗಿ ನಡೆಯಲು,ಇಂತಹ ಕಾಮಗಾರಿಗಳ ಗುತ್ತಿಗೆಯನ್ನು ಸಾಧ್ಯವಿರುವ ಮಟ್ಟಿಗೆ ನನ್ನ ಇಷ್ಟಮಿತ್ರರಿಗೆ ಕೊಡಿಸುವುದು.
*ನನ್ನ ಕ್ಷೇತ್ರದಲ್ಲಿನ ಎಲ್ಲಾ ಸರಕಾರೀ ನೌಕರರ ವಿವರಗಳನ್ನು ಕಂಪ್ಯೂಟರಿನಲ್ಲಿ ಅಳವಡಿಸಿಕೊಂಡು,ತಮಗೆ ಬೇಕಾದ ಆಯಕಟ್ಟಿನ ಸ್ಥಾನಗಳಿಗೆ ವರ್ಗಾವಣೆಯನ್ನು ಬಯಸುವ ನೌಕರರಿಂದ ಯಥಾನುಶಕ್ತಿ ಕಪ್ಪ ಕಾಣಿಕೆಗಳನ್ನು ಪಡೆಯುವುದು.
*ಸರಕಾರೀ ನೌಕರರಿಗೆ ಸಿಂಹಸ್ವಪ್ನ ಎನಿಸಿರುವ ಅಥವಾ ಉನ್ನತ ಅಧಿಕಾರಿಗಳ ಮನೆಗೆ ದಾಳಿಮಾಡಿ ಅವರ ಮಾನವನ್ನೇ ಹರಾಜು ಹಾಕುತ್ತಿರುವ ಲೋಕಾಯುಕ್ತ ವ್ಯವಸ್ಥೆಯನ್ನೇ ರದ್ದುಪಡಿಸಲು ಕಾರ್ಯತಂತ್ರವನ್ನು ರೂಪಿಸಿ ಅನುಷ್ಠಾನಗೊಳಿಸಲು ಪ್ರಯತ್ನಿಸುವುದು. ತನ್ಮೂಲಕ ಇಂತಹ ಅಧಿಕಾರಿಗಳ ಕೃಪಾಕಟಾಕ್ಷವನ್ನು ಗಳಿಸಿ,ನನ್ನ ವೈಯುಕ್ತಿಕ ಸಂಪತ್ತನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು.
*ರಾಜಕಾರಣಿಗಳು ಮತ್ತು ಸರಕಾರೀ ಅಧಿಕಾರಿ-ನೌಕರರಿಗೆ ಕಂಟಕಪ್ರಾಯವೆನಿಸಿರುವ ಮಾಹಿತಿ ಪಡೆಯುವ ಹಕ್ಕು ಕಾಯಿದೆಯನ್ನೇ ರದ್ದುಪಡಿಸುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡವನ್ನು ಹೇರುವುದು.
*ಸರಕಾರೀ ಬಸ್ಸುಗಳು ಅತ್ಯಧಿಕ ಲಾಭವನ್ನು ಗಳಿಸುತ್ತಿರುವ ಮಾರ್ಗಗಳಲ್ಲಿ ಖಾಸಗಿ ಕಾಂಟ್ರಾಕ್ಟ್ ಕ್ಯಾರಿಯೇಜ್ ಬಸ್ಸುಗಳನ್ನು ಓಡಿಸಾಲು ಅವಕಾಶವನ್ನು ಕಲ್ಪಿಸಿ,ಸಾಧ್ಯವಿರುವಷ್ಟು ಕಪ್ಪವನ್ನು ವಸೂಲು ಮಾಡುವುದು.
*ಸ್ಥಳೀಯರ ಸಮಸ್ಯೆಗಳ ದೂರುಗಳನ್ನು ಕಿವಿಗೆ ಹಾಕಿಕೊಳ್ಳದಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿ,ಪರಿಹಾರಕ್ಕಾಗಿ ನನ್ನಲ್ಲಿ ಬಂದಾಗ ಸಿಕ್ಕಿದಷ್ಟನ್ನು ಬಾಚಿಕೊಳ್ಳುವುದು.
*ಸ್ವಕ್ಷೇತ್ರದಲ್ಲಿನ ಹಲವಾರು ಬಣಗಳ ನಡುವೆ ಅನಾವಶ್ಯಕ ವಿವಾದಗಳನ್ನು ಹುಟ್ಟುಹಾಕಿ,ಇವುಗಳನ್ನು ಬಗೆಹರಿಸಲು ಇತ್ತಂಡದವರಿಂದ ಕಿಂಚಿತ್ ಕಾಣಿಕೆಯನ್ನು ಸ್ವೀಕರಿಸುವುದು.
*ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಒಂದೆರಡು ಸೈಟುಗಳನ್ನು ಅಲ್ಪಬೆಲೆಗೆ ಪಡೆದುಕೊಳ್ಳುವುದು.
*ಪಕ್ಷದ ಮಹಿಳಾ ಘಟಕದಲ್ಲಿ ಪತ್ನಿಗೆ ಸೂಕ್ತ ಸ್ಥಾನವನ್ನು ಕೊಡಿಸಿ,ಮುಂದೆ ಶಾಸಕಿಯಾಗಲು ಹಾದಿಯನ್ನು ಸುಗಮಗೊಳಿಸುವುದು.
*ಸರಕಾರೀ ಖರ್ಚಿನಲ್ಲಿ ವಿದೇಶ ಪ್ರವಾಸದ ಅವಕಾಶವನ್ನು ಗಳಿಸಿ,ಪತ್ನಿಯ ಸ್ಥಾನದಲ್ಲಿ ಮನದನ್ನೆಯನ್ನು ಕರೆದೊಯ್ಯುವುದು.
*ಪ್ರಸ್ತುತ ಚುನಾವಣೆಯ ಮುನ್ನ ನನ್ನಲ್ಲಿದ್ದ ಆಸ್ತಿಪಾಸ್ತಿಗಳನ್ನು ಕನಿಷ್ಠ ಐವತ್ತು ಪಟ್ಟು ಹೆಚ್ಚಿಸಿಕೊಳ್ಳುವುದು. ಇದಕ್ಕಾಗಿ ಸ್ವಕ್ಷೇತ್ರದಲ್ಲಿ ಬೃಹತ್ ಯೋಜನೆಯೊಂದನ್ನು ಮಂಜೂರುಗೊಳಿಸಿ,ಇದಕ್ಕೂ ಮುನ್ನ ಉದ್ದೇಶಿತ ಪ್ರದೇಶದಲ್ಲಿ ಅತ್ಯಲ್ಪ ಬೆಲೆಗೆ ಖರೀದಿಸಿದ್ದ ನೂರಾರು ಎಕರೆ ಜಮೀನನ್ನು ನೋಟಿಫಿಕೇಶನ್-ಡಿ ನೋಟಿಫಿಕೇಶನ್ ನಾಟಕವನ್ನಾಡುವ ಮೂಲಕ  ಕೋಟ್ಯಂತರ ರೂಪಾಯಿಗಳನ್ನು ಬಾಚಿಕೊಳ್ಳುವುದು.
*ವಿದ್ಯಾ ಸಂಸ್ಥೆಯೊಂದನ್ನು ಆರಂಭಿಸಿ ಇದರ ಖಾತೆಗೆ ಕೋಟ್ಯಂತರ ರೂಪಾಯಿಗಳ ದೇಣಿಗೆಯನ್ನು ಅಧಿಕೃತವಾಗಿ ಪಡೆಯುವ ಮೂಲಕ,ನಾನು ಅನಧಿಕೃತವಾಗಿ ಅಕ್ರಮಗಳನ್ನು ಎಸಗಲು ನೆರವಾಗಿದ್ದವರಿಂದ ಬರಬೇಕಾದ ಕಪ್ಪ-ಕಾಣಿಕೆಗಳನ್ನು ಪಡೆದುಕೊಳ್ಳುವುದು
 *ದುರದೃಷ್ಟವಶಾತ್ ಇಂತಹ ಹಗರಣಗಳು ಬಹಿರಂಗಗೊಂಡು ನ್ಯಾಯಾಲಯದ ಕಟಕಟೆಯನ್ನೇರಿದಲ್ಲಿ,ಇವೆಲ್ಲವೂ ನನ್ನ ಅಭಿವೃದ್ಧಿಯನ್ನು ಸಹಿಸಲು ಆಗದ ವಿರೋಧಿಗಳ ಷಡ್ಯಂತ್ರವೆಂದು
 ಹೇಳಿಕೆಯನ್ನು ನೀಡುವುದು.ಜೊತೆಗೆ ನಾನು ಕೇವಲ ಆರೋಪಿಯೇ ಹೊರತು ಅಪರಾಧಿಯಲ್ಲ,ಮುಂದಿನ 
ದಿನಗಳಲ್ಲಿ  ನ್ಯಾಯಾಲಯದಿಂದ ಆರೋಪ ಮುಕ್ತನಾಗಿ ಹೊರಬರುವುದಾಗಿ ಹೇಳಿಕೆಯನ್ನು ನೀಡುವುದು.
 *ರಾಜಕೀಯ ವೇದಿಕೆಯಲ್ಲಿ ಜಾತ್ಯಾತೀಯತೆಯ ಬಗ್ಗೆ ಭಾಷಣವನ್ನು ಬಿಗಿದರೂ,ಸುಪ್ರಸಿದ್ದ ದೇವಳಗಳಿಗೆ ಭೇಟಿನೀಡಿ ನನ್ನ ಮತ್ತು ಕುಟುಂಬದ 
ಉತ್ತರೋತ್ತರ ಅಭಿವೃದ್ಧಿಗಾಗಿ  ಹೋಮ-ಹವನಗಳನ್ನು ನಡೆಸಿ ಮಾಡಿರುವ ಪಾಪಗಳನ್ನು ಕಳೆದುಕೊಳ್ಳುವುದು.
*ಆಕಸ್ಮಿಕವಾಗಿ ನಾನು ಎಸಗಿದ್ದ ಅಕ್ರಮಗಳು,ಅವ್ಯವಹಾರಗಳು ಅಥವಾ ಇತರ ಕಾರಣಗಳಿಂದ ಜೈಲಿಗೆ ಹೋಗುವ ಪರಿಸ್ಥಿತಿ ಉದ್ಭವಿಸಿದಲ್ಲಿ,ತಕ್ಷಣ ತೀವ್ರ ಎದೆನೋವಿನ ನೆಪವನ್ನೊಡ್ಡಿ ಪ್ರತಿಷ್ಠಿತ ಆಸ್ಪತ್ರೆಯೊಂದರ ಹವಾ ನಿಯಂತ್ರಿತ ಕೊಠಡಿಯಲ್ಲಿ "ಬಂಧಿ"ಯಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು.
*ಕಾರಣಾಂತರಗಳಿಂದ ಮಂತ್ರಿಪದವಿಯನ್ನು ಕಳೆದುಕೊಂಡಲ್ಲಿ ಅಥವಾ ರಾಜೀನಾಮೆಯನ್ನು ನೀಡಬೇಕಾದಲ್ಲಿ,ಸಮಾನ ಮನಸ್ಕರ ಬಣವನ್ನು ರಚಿಸಿ,ರಾಜೀನಾಮೆಯನ್ನು ನೀಡಿ ಪಕ್ಷವನ್ನು ಒಡೆಯುವುದಾಗಿ ಹೈಕಮಾಂಡ್ ನ ಮೇಲೆ ಒತ್ತಡವನ್ನು ಹೇರುವ ಮೂಲಕ ಮತ್ತೆ ಮಂತ್ರಿ ಪದವಿಯನ್ನು ಗಳಿಸುವುದು.
*ಸದನದಲ್ಲಿ ಮೊಬೈಲ್ ದೂರವಾಣಿಯಲ್ಲಿ "ನೀಲಿ ಚಿತ್ರ"ವನ್ನು ವೀಕ್ಷಿಸುವುದನ್ನು ಅಪರಾಧವಲ್ಲ ಎನ್ನುವ 
ನಿರ್ಣಯವನ್ನು  ಅಂಗೀಕರಿಸಲು ಪ್ರಯತ್ನಿಸುವುದು.
*ಆಕಸ್ಮಿಕವಾಗಿ ನನ್ನ "ರಾಸಲೀಲೆಯ " ಸಿ. ಡಿ "ಬಹಿರಂಗಗೊಂಡಲ್ಲಿ ,ಆ ಚಿತ್ರದಲ್ಲಿ ಇರುವ ಬೇರೊಬ್ಬ ವ್ಯಕ್ತಿಯ ಮುಖದ ಜಾಗದಲ್ಲಿ ನನ್ನ ಮುಖವನ್ನು ಅಳವಡಿಸಿ ತಯಾರಿಸಿದ ನಕಲಿ ಸಿ. ಡಿ  ಎಂದು ಘೋಷಿಸುವುದು.
* ಮುಂದಿನ ಚುನಾವಣೆಯಲ್ಲಿ ಮತ್ತೆ ಟಿಕೆಟ್ ದೊರೆಯುವ ಸಲುವಾಗಿ ಸಂಬಂಧಿತ ನೇತಾರರನ್ನು "ಖುಷಿ"ಯಾಗಿ ಇರಿಸುವುದು!.
ಇವೆಲ್ಲವೂ ಮರಿಪುಡಾರಿಯು ತಾನು ಈ ಬಾರಿ ಚುನಾವಣೆಯಲ್ಲಿ ಗೆದ್ದು ಶಾಸಕನಾದಲ್ಲಿ ಆದ್ಯತೆಯನ್ನು ನೀಡಲಿರುವ ಪ್ರಮುಖ ವಿಚಾರಗಳಾಗಿದ್ದು,ಮಂಪರು ಪರೀಕ್ಷೆಗಾಗಿ ನೀಡಿದ್ದ ಔಷದದ ಪರಿಣಾಮವಾಗಿ ಗಾಢ ನಿದ್ದೆಗೆ ಜಾರಿದ್ದರಿಂದ ಇನ್ನಷ್ಟು ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳಲು ಆಗಿರಲಿಲ್ಲವೆಂದು ತಜ್ಞರು ಹೇಳಿದ್ದುದಾಗಿ ಉನ್ನತ ಮೂಲಗಳು ತಿಳಿಸಿವೆ.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು


     ಪಕ್ಷನಿಷ್ಠೆ  ತೊರೆಯುತ್ತಿರುವ ಭಾರತದ ಮತದಾರರು! 
ಹಲವಾರು  ವರ್ಷಗಳ ಹಿಂದೆ ಭಾರತದ ರಾಜಕಾರಣಿಗಳು ಪಕ್ಷಾಂತರ ಎನ್ನುವ ಪಿಡುಗಿಗೆ ಬಲಿಯಾಗುತ್ತಿರಲಿಲ್ಲ.ಅಂದಿನ ದಿನಗಳಲ್ಲಿ  ದೇಶಸೇವೆ-ಜನಸೇವೆ ಮಾಡುವ ಏಕಮಾತ್ರ ಉದ್ದೇಶದಿಂದ ಚುನಾವಣೆಗಳಲ್ಲಿ ಸ್ಪರ್ದಿಸಿ,ಗೆದ್ದಲ್ಲಿ ಅಧಿಕಾರದ ಗದ್ದುಗೆಯನ್ನು ಏರಿದ ಹಾಗೂ ಸೋತಲ್ಲಿ ತೆರೆಮರೆಗೆ ಸರಿಯುತ್ತಿದ್ದ ಪ್ರಾಮಾಣಿಕ ವ್ಯಕ್ತಿಗಳ ಸಂಖ್ಯೆ ಸಾಕಷ್ಟಿತ್ತು. ಆದರೆ ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಕಂಡುಬರುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ, ಇಂದಿನ ರಾಜಕಾರಣಿಗಳಲ್ಲಿ ದೇಶ-ಜನಸೇವೆಯ ಉದ್ದೇಶವೇ ಕಾಣಸಿಗುವುದಿಲ್ಲ.
ಶತಾಯ ಗತಾಯ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ "ಮುಳುಗುತ್ತಿರುವ ಹಡಗು"ಎಂದು ಪರಿಗಣಿಸಿರುವ ತನ್ನ ಪಕ್ಷವನ್ನು ತೊರೆದು,"ಗೆಲ್ಲಲಿರುವ ಪಕ್ಷ"ಕ್ಕೆ ಹಾರುವ ಪಕ್ಷಾಂತರಿಗಳ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿದೆ. ಅದೇ ರೀತಿಯಲ್ಲಿ ಕೋಟ್ಯಾಧೀಶ ರಾಜಕಾರಣಿಗಳ ಸಂಖ್ಯೆ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ" ಮತದಾರ ಪ್ರಭುಗಳು",ಅನೇಕ ವರ್ಷಗಳಿಂದ ಸ್ವಇಚ್ಛೆಯಿಂದ ಬೆಂಬಲಿಸಿ ಮತವನ್ನು ನೀಡುತ್ತಿದ್ದ ಪಕ್ಷದ "ಪಕ್ಷನಿಷ್ಠೆ"ಯನ್ನು ತೊರೆದು ಮತ್ತೊಂದು ಪಕ್ಷದ ಅಥವಾ ಪಕ್ಷೇತರ ಅಭ್ಯರ್ಥಿಗೆ ಮತವನ್ನು ನೀಡುವ  ಮೂಲಕ ಪಕ್ಷಾಂತರ ಮಾಡಲು ಆರಂಭಿಸಿದ್ದಾರೆ.  ಪಕ್ಷನಿಷ್ಠೆಯನ್ನು ಬದಲಿಸಿದ ಮತದಾರೊಬ್ಬರು ಹೇಳುವಂತೆ,ಪಕ್ಶಾಂತರವು ಕೇವಲ ರಾಜಕಾರಣಿಗಳ ಸೋತ್ತೆನಲ್ಲ.ಆದರೆ ರಾಜಕಾರಣಿಗಳು ಪಕ್ಷಾಂತರ ಮಾಡಲು ವೈಯುಕ್ತಿಕ ಸ್ವಾರ್ಥ ಕಾರಣವೆನಿಸಿದ್ದರೆ,ಮತದಾರರು ಮಾಡುತ್ತಿರುವುದು 
ಸಮಾಜದ ಹಿತದೃಷ್ಟಿಯಿಂದ.  ಇನ್ನು ಕೆಲವು ಮತದಾರರು "ಪಕ್ಷಾತೀತ"ರಾಗಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಪ್ರಾಮಾಣಿಕ ಹಾಗೂ ಯೋಗ್ಯ ವ್ಯಕ್ತಿಗೆ ಮತವನ್ನು ನೀಡಲು ಆರಂಭಿಸಿದ್ದಾರೆ. ಈ ವಿದ್ಯಮಾನಗಳು ಭಾರತದ ಮತದಾರರು "ಪ್ರಜ್ಞಾವಂತ"ರಾಗುತ್ತಿರುವ ಮತ್ತು ಅಪ್ಪ ನೆಟ್ಟ ಆಲದ ಮರಕ್ಕೆ ಜೋತುಬೀಳುವ ಪ್ರವೃತ್ತಿಯನ್ನು ತ್ಯಜಿಸುತ್ತಿರುವುದಕ್ಕೆ ಸೂಕ್ತ ಪುರಾವೆಯೂ ಹೌದು. ವಿಶೇಷವೆಂದರೆ ಇಂತಹ ಆರೋಗ್ಯಕರ ಬೆಳವಣಿಗೆಗಳು ಬಹುತೇಕ ರಾಜಕಾರಣಿಗಳ ನಿದ್ದೆಗೆಡಿಸಲು ಯಶಸ್ವಿಯಾಗಿವೆ.
ಪಕ್ಷನಿಷ್ಠೆಯ ಹಿನ್ನೆಲೆ
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ದೊರೆತ ಬಳಿಕ ನಡೆದಿದ್ದ ಚುನಾವಣೆಗಳಲ್ಲಿ ಅನಾಯಾಸವಾಗಿ ಗೆದ್ದು ಅಧಿಕಾರಕ್ಕೆ ಬಂದಿತ್ತು. ಅಂದಿನ ದಿನಗಳಲ್ಲಿ ಇತರ ಪಕ್ಷಗಳ ಸಂಖ್ಯೆಯೂ ಬೆರಳೆಣಿಕೆಯಷ್ಟೇ ಇದ್ದಿತು. ಆದರೆ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ತಪ್ಪದೆ ಮತವನ್ನು ನೀಡುತ್ತಿದ್ದ ಮತದಾರರ "ಪಕ್ಷನಿಷ್ಠೆ"ಯೇ ಆ ಪಕ್ಷಕ್ಕೆ ಶ್ರೀರಕ್ಷೆಯಾಗಿತ್ತು. ಆದರೆ ೧೯೭೦ ರ ದಶಕದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ಅತಿರೇಕಗಳ ಪರಿಣಾಮವಾಗಿ,ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯವಾಗಿ ಸೋತಿತ್ತು. ಹಲವು ವಿರೋಧಪಕ್ಷಗಳು ವಿಲೀನಗೊಂಡು ಹುಟ್ಟಿದ್ದ ಜನತಾ ಪಕ್ಷವನ್ನು ಬಹುತೇಕ ಮತದಾರರು ಚುನಾಯಿಸಿದ್ದುದೇ ಈ ಸೋಲಿಗೆ ಪ್ರಮುಖ ಕಾರಣವೆನಿಸಿತ್ತು. ಆದರೆ ಜನತಾ ಪಕ್ಷದ ನಾಯಕರ ಆಂತರಿಕ ಕಿತ್ತಾಟಗಳಿಂದಾಗಿ ಸಿಡಿದು ಹೋಳಾಗಿ ಹೊರಬಂದಿದ್ದ ಕೆಲಪಕ್ಷಗಳು,ಮುಂದಿನ ಚುನಾವಣೆಗಳಲ್ಲಿ ದಯನೀಯವಾಗಿ ಸೋತಿದ್ದವು. ಜೊತೆಗೆ ಜನತೆಯ ವಿಶ್ವಾಸವನ್ನೇ ಕಳೆದುಕೊಂಡಿದ್ದವು.
ತದನಂತರ ರಾಷ್ಟ್ರಮಟ್ಟದಲ್ಲಿ ಕೆಲ ಪಕ್ಷಗಳು ಮಿಂಚಿದ್ದರೂ,ಇವುಗಳ ಪ್ರಭಾವ ಕೆಲವೇ ರಾಜ್ಯಗಳಿಗೆ ಸೀಮಿತವಾಗಿತ್ತು.ತದನಂತರ ರಾಮಜನ್ಮಭೂಮಿ-ರಾಮಮಂದಿರ ನಿರ್ಮಾಣದ ಆಶ್ವಾಸನೆಯೊಂದಿಗೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು.ಈ ಸಂದರ್ಭದಲ್ಲಿ ರಾಷ್ಟ್ರೀಯ  ಮತ್ತು ಪ್ರಾದೇಶಿಕ ಪಕ್ಷಗಳು ಕೈಜೋಡಿಸಿ ರಚಿಸಿದ ಸಮ್ಮಿಶ್ರ ಸರಕಾರ ಆಡಳಿತವನ್ನು ನಡೆಸುವ ಪದ್ಧತಿ
 ಜಾರಿಗೆ ಬಂದಿತ್ತು.  ಇದರೊಂದಿಗೆ ಕೇವಲ ಒಂದು ಅಥವಾ ಎರಡು ರಾಜ್ಯಗಳಿಗೆ ಸೀಮಿತವಾಗಿದ್ದ ಪ್ರಾದೇಶಿಕ ಪಕ್ಷಗಳು ತಮ್ಮ ನೆಲೆಯನ್ನು ಭದ್ರಗೊಳಿಸಿದ್ದವು. ಅದಾಗಲೇ ರಾಷ್ಟ್ರಮಟ್ಟದ ಮತ್ತು ಪ್ರಾದೇಶಿಕ ಪಕ್ಷಗಳು ತಮ್ಮದೇ ಆದ ನಿಷ್ಠಾವಂತ ಮತದಾರರನ್ನು ಗಳಿಸಿಕೊಳ್ಳಲು ಯಶಸ್ವಿಯಾಗಿದ್ದವು. ಹಾಗೂ ನಿರ್ದಿಷ್ಟ ಪಕ್ಷವೊಂದು ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆಯನ್ನು ಏರಲು ಇಂತಹ ಮತದಾರರ ಪಕ್ಷನಿಷ್ಠೆ ನಿರ್ಣಾಯಕವೆನಿಸುತ್ತಿತ್ತು.
ಆದರೆ ಇತ್ತೀಚಿನ ಕೆಲವರ್ಷಗಳಿಂದ ಅಧಿಕಾರದ ಸೂತ್ರವನ್ನು ಕೈಗೆತ್ತಿಕೊಂಡ ರಾಜಕಾರಣಿಗಳ ಭ್ರಷ್ಟಾಚಾರ,ಸ್ವಜನ ಪಕ್ಷಪಾತ,ಅಧಿಕಾರದ ದುರುಪಯೋಗ ಮತ್ತು ಹತ್ತು ಹಲವು ಹಗರಣಗಳನ್ನು ಕಂಡು ರೋಸಿಹೋದ ಮತದಾರರು,ಇದೀಗ ತಮ್ಮ ಪಕ್ಷನಿಷ್ಠೆಗೆ ತಿಲಾಂಜಲಿಯನ್ನಿತ್ತು ಪ್ರಜ್ಞಾವಂತ ಮತದಾರರಾಗಿ ಪರಿವರ್ತನೆಗೊಂಡಿದ್ದಾರೆ. ಹಾಗೂ ತಮ್ಮ ಕ್ಷೇತ್ರದಿಂದ ಸ್ಪರ್ದಿಸುತ್ತಿರುವ ಅಭ್ಯರ್ಥಿಗಳಲ್ಲಿ ಸಚ್ಚಾರಿತ್ರ್ಯವುಳ್ಳ,ಪ್ರಾಮಾಣಿಕ,ಕಳಂಕ ರಹಿತ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬಲ್ಲ ಯೋಗ್ಯ ಅಭ್ಯರ್ಥಿಗಳಿಗೆ ಮತವನ್ನು ನೀಡಲು ಆರಂಭಿಸಿದ್ದಾರೆ. ಯಾವುದೇ ಪ್ರಚಾರ ಮತ್ತು ಸದ್ದು ಗದ್ದಲಗಳಿಲ್ಲದೆ ಆರಂಭಗೊಂಡಿರುವ ಈ "ಕ್ರಾಂತಿ"ಯು,ಇತ್ತೀಚಿಗೆ ರಾಜ್ಯದಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಂದರ್ಭದಲ್ಲಿ ಗೋಚರಿಸಿದೆ. ಅಂತೆಯೇ  ರಾಜಕೀಯ ಪಕ್ಷಗಳ ನಾಯಕರಿಗೆ ದಿಗಿಲು ಹುಟ್ಟಿಸುತ್ತಿದೆ.
ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಂದರ್ಭದಲ್ಲಿ ದೇಶಾದ್ಯಂತ ವ್ಯಕ್ತವಾಗಿದ್ದ ಬೆಂಬಲವು ಇದೀಗ ಅದೃಶ್ಯವಾಗಿದೆ. ಆದರೆ ದೇಶದ ಪ್ರಜ್ಞಾವಂತ ಮತದಾರರು ತಳೆದಿರುವ ನಿರ್ಧಾರಗಳು ಮತ್ತು ಚಲಾಯಿಸಲಿರುವ ಮತಗಳು ಮುಂದೆ ನಡೆಯಲಿರುವ ಚುನಾವಣೆಗಳ ಚಿತ್ರಣ ಮತ್ತು ಪರಿಣಾಮಗಳನ್ನೇ ಬದಲಾಯಿಸಲಿವೆ!.
ಡಾ.ಸಿ.ನಿತ್ಯಾನಂದ ಪೈ,ಪುತ್ತೂರು

    ಕಣ್ಣು ಹಾಯಿಸಿದಲ್ಲೆಲ್ಲ ಕಾಣಸಿಗುವ ಕಸದರಾಶಿಗಳು
"ಎಲ್ಲೆಲ್ಲಿ ನೋಡಲಿ,ನಿನ್ನನ್ನೇ ಕಾಣುವೆ" ಎನ್ನುವ ಜನಪ್ರಿಯ ಚಲನಚಿತ್ರ ಗೀತೆಯು ನಮ್ಮೂರಿನ ಬೀದಿಬೀದಿಗಳಲ್ಲಿ ಕಾಣಸಿಗುವ ತ್ಯಾಜ್ಯಗಳ ಬಗ್ಗೆ ಅನ್ವರ್ಥವೆನಿಸುತ್ತದೆ. ಇದನ್ನು ಕಂಡಾಗ ನಮ್ಮ ಜಿಲ್ಲೆಗೆ ನಿರ್ಮಲ ಗ್ರಾಮ ಪುರಸ್ಕಾರವನ್ನು ನೀಡಿರುವುದಾದರೂ ಹೇಗೆ?,ಎನ್ನುವ ಪ್ರಶ್ನೆ ನಮ್ಮ ನಿಮ್ಮೆಲ್ಲರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಈ ಸಮಸ್ಯೆಗೆ ಸ್ಥಳೀಯ ಸಂಸ್ಥೆಯೊಂದಿಗೆ,ಸ್ಥಳೀಯ ನಿವಾಸಿಗಳೂ ಕಾರಣಕರ್ತರೆಂದಲ್ಲಿ ತಪ್ಪೆನಿಸಲಾರದು.
ಪುತ್ತೂರಿನ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಅನುಷ್ಠಾನಗೊಂಡಿದ್ದ ಎ.ಡಿ.ಬಿ ಸಾಲ ಆಧಾರಿತ ಕುಡ್ಸೆಂಪ್ ಯೋಜನೆಯಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗಾಗಿ ೨.೭೦ ಕೋಟಿಗೂ ಅಧಿಕ ಮೊತ್ತವನ್ನು ವ್ಯಯಿಸಲಾಗಿತ್ತು. ಇದರಲ್ಲಿ ತ್ಯಾಜ್ಯಗಳನ್ನು ಹಾಕಲು ವಿದೇಶೀ ನಿರ್ಮಿತ ಫೈಬರ್ ತೊಟ್ಟಿಗಳು,ಸಾಗಾಟಕ್ಕಾಗಿ ವಾಹನಗಳು ಮತ್ತು ವೈಜ್ಞಾನಿಕ ವಿಲೇವಾರಿಗಾಗಿ ಲ್ಯಾಂಡ್ ಫಿಲ್ ಸೈಟ್ ಇತ್ಯಾದಿಗಳನ್ನು ಒದಗಿಸಲಾಗಿತ್ತು. ಆದರೆ ಈ ವ್ಯವಸ್ಥೆ ಅಪೇಕ್ಷಿತ ರೀತಿಯಲ್ಲಿ ಹಾಗೂ ಯಶಸ್ವಿಯಾಗಿ ಕಾರ್ಯಾಚರಿಸಲು, ಸ್ಥಳೀಯ ಜನರಿಗೆ ನೀಡಲೇಬೇಕಾಗಿದ್ದ ಮಾಹಿತಿ ಮತ್ತು ಮಾರ್ಗದರ್ಶನಗಳ ಅಭಾವದಿಂದಾಗಿ ಸಮಗ್ರ ಯೋಜನೆಯೇ ವಿಫಲವಾಗಿತ್ತು.
ಈ ಯೋಜನೆಯ ಅಂಗವಾಗಿ ನಗರದ ಪ್ರತಿಯೊಂದು ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳನ್ನು ಸಂಗ್ರಹಿಸುವ ವ್ಯವಸ್ಥೆಯು ನಿಯೋಜಿತ ಕಾರ್ಯಕರ್ತರ ನಿರ್ಲಕ್ಷ್ಯ ಮತ್ತು ಸ್ಥಳೀಯರ ಅಸಹಕಾರಗಳಿಂದಾಗಿ ಯಶಸ್ವಿಯಾಗಲಿಲ್ಲ. ಇದನ್ನು ಪರಿಗಣಿಸದೇ ನಗರದ ವಿವಿಧ ಭಾಗಗಳಲ್ಲಿ ಇರಿಸಿದ್ದ ಕಸದ ತೊಟ್ಟಿಗಳನ್ನು ತೆರವುಗೊಳಿಸಿದ ಬಳಿಕ,ತೊಟ್ಟಿಗಳಿದ್ದ ಜಾಗಗಳಲ್ಲಿ (ಮತ್ತು ಇಲ್ಲದಿದ್ದ ಜಾಗಗಳಲ್ಲೂ)ಕಸವನ್ನೆಸೆಯುವ ಸ್ಥಳೀಯರ ಹವ್ಯಾಸವು ಇಂದಿಗೂ ಮುಂದುವರೆದಿದೆ. ಇದರೊಂದಿಗೆ ತುಸು ಅಧಿಕ ಪ್ರಮಾಣದಲ್ಲಿ ತ್ಯಾಜ್ಯಗಳನ್ನು ಉತ್ಪಾದಿಸುವ ಕೆಲ ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಸಂಗ್ರಹವಾದ ತ್ಯಾಜ್ಯಗಳನ್ನು ಕತ್ತಲಾದ ಬಳಿಕ ಸಮೀಪದ ಚರಂಡಿಗಳಲ್ಲಿ ಎಸೆಯಲಾಗುತ್ತಿದೆ. ಈ ರೀತಿಯಲ್ಲಿ ಚರಂಡಿಗಳಲ್ಲಿ ಎಸೆದ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವುದು ಅಸಾಧ್ಯ ಎನ್ನುವುದರ ಅರಿವಿದ್ದರೂ,ಇಂತಹ ಕೆಟ್ಟ ಹವ್ಯಾಸ ಇಂದಿಗೂ ಕೊನೆಗೊಂಡಿಲ್ಲ. ಇಷ್ಟೆಲ್ಲಾ ಸಾಲದೆನ್ನುವಂತೆ ಚರಂಡಿಗಳಲ್ಲಿ ಎಸೆದ ತ್ಯಾಜ್ಯಗಳನ್ನು ಪೌರ ಕಾರ್ಮಿಕರು ತೆರವುಗೊಳಿಸದ ಕಾರಣದಿಂದಾಗಿ ಕೊಳಚೆ ನೀರು ಮಡುಗಟ್ಟಿ ನಿಲ್ಲುವುದರಿಂದ, ಸೊಳ್ಳೆಗಳು ಮತ್ತು ಅನ್ಯ ರೋಗಾಣುಗಳ ತಾಣವೆನಿಸಲು ಪುರಸಭೆಯೇ ಕಾರಣವೆಂದು ಜನಸಾಮಾನ್ಯರು ದೂರುತ್ತಲೇ ಇರುತ್ತಾರೆ. ಆದರೆ ಚರಂಡಿಗಳಿಗೆ ಸಕಲ ವಿಧದ ತ್ಯಾಜ್ಯಗಳನ್ನು ಎಸೆಯುವವರ ಬಗ್ಗೆ ಯಾರೂ ಹರಿಹಾಯುವುದಿಲ್ಲ!.
ಸುಮಾರು ೩೬ ಚದರ ಕಿಲೋಮೀಟರ್ ವಿಸ್ತೀರ್ಣವಿರುವ ಪುತ್ತೂರಿನ ಪುರಸಭಾ ವ್ಯಾಪ್ತಿಯಲ್ಲಿರುವ ಚರಂಡಿಗಳಲ್ಲಿ ಎಸೆಯುವ ಅಗಾಧ ಪ್ರಮಾಣದ ವೈವಿಧ್ಯಮಯ ತ್ಯಾಜ್ಯಗಳನ್ನು ನಿಯಮಿತವಾಗಿ ಸಂಗ್ರಹಿಸಲು ನೂರಾರು ಪೌರಕಾರ್ಮಿಕರ ದಂಡಿಗೂ ಅಸಾಧ್ಯವೆನಿಸುವುದರಲ್ಲಿ ಸಂದೇಹವಿಲ್ಲ. ಈ ವಿಚಾರದ ಅರಿವಿದ್ದರೂ,ತ್ಯಾಜ್ಯಗಳನ್ನು ಎಸೆಯುವ ಜನರ ಮನೋಭಾವ ಬದಲಾಗುತ್ತಿಲ್ಲ.
ಅದೇ ರೀತಿಯಲ್ಲಿ ನಾವಿಂದು ಅನಾವಶ್ಯಕ ಮತ್ತು ಅತಿಯಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳು ಮತ್ತು ಸಭೆ-ಸಮಾರಂಭಗಳಲ್ಲಿ ಉಪಯೋಗಿಸುತ್ತಿರುವ ಒಂದು ಬಾರಿ ಬಳಸಿ ಎಸೆಯುವ ವಸ್ತುಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಯಾರೂ ಗಮನ 
ಹರಿಸುತ್ತಿಲ್ಲ. ಇದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು  ಪೌರ ಕಾರ್ಮಿಕರನ್ನು ದೂರುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ!. 
ನಿಜಹೆಳಬೇಕಿದ್ದಲ್ಲಿ ಕುಡ್ಸೆಂಪ್ ಯೋಜನೆಯ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಯೋಜನೆಯಲ್ಲಿ ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಲ್ಲಿ ಇವುಗಳನ್ನು ಪ್ರತ್ಯೇಕಿಸಿ,ಪುನರ್ ಆವರ್ತನಗೊಳಿಸಬಲ್ಲ ಹಾಗೂ ಗೊಳಿಸಲಾಗದ ಎಂದು ಪ್ರತ್ಯೇಕಿಸಿ ಸಂಗ್ರಹಿಸಬೇಕಿತ್ತು.ಇದರಲ್ಲಿ ಪುನರ್ ಆವರ್ತನಗೊಳಿಸಬಹುದಾದ ತ್ಯಾಜ್ಯಗಳನ್ನು  ತತ್ಸಂಬಂಧಿತ ಘಟಕಗಳಿಗೆ ರವಾನಿಸಿ,ಉಳಿದವುಗಳನ್ನು 
ಲ್ಯಾಂಡ್ ಫಿಲ್ ಸೈಟ್ ನಲ್ಲಿ ಹರಡಿ ಮಣ್ಣಿನಿಂದ ಮುಚ್ಚಬೇಕಿತ್ತು.  ಜೊತೆಗೆ ತರಕಾರಿ ಮತ್ತಿತರ ಕೊಳೆಯುವಂತಹ ತ್ಯಾಜ್ಯಗಳನ್ನು ಬಳಸಿ ಸಾವಯವ ಗೊಬ್ಬರವನ್ನು ತಯಾರಿಸುವ ಘಟಕವನ್ನುಸ್ಥಾಪಿಸಬೇಕಿತ್ತು. ಆದರೆ ದುರದೃಷ್ಟವಶಾತ್ ಇವೆಲ್ಲವೂ ಕ್ರಮಬದ್ಧವಾಗಿ ಅನುಷ್ಠಾನಗೊಂಡಿರಲೇ ಇಲ್ಲ. ಇಷ್ಟೆಲ್ಲಾ ಸಾಲದೆನ್ನುವಂತೆ ಸ್ಥಳೀಯ ನಾಗರಿಕರು ಈ ನಿಟ್ಟಿನಲ್ಲಿ ಪುರಸಭೆಯೊಂದಿಗೆ ಸಹಕರಿಸಲಿಲ್ಲ. ತತ್ಪರಿಣಾಮವಾಗಿ ಪುತ್ತೂರು ಮಾತ್ರವಲ್ಲ,ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕಸದ ರಾಶಿಗಳು ಕಾಣಲು ಸಿಗುತ್ತಿರುವುದರಲ್ಲಿ ವಿಶೇಷವೇನಿಲ್ಲ!.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು


 ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಅನುಸರಿಸಿ 
ಈ ವರ್ಷದ ಬೇಸಗೆಯು  ಪ್ರಾರಂಭಿಕ ಹಂತದಿಂದಲೇ ತನ್ನ ಪ್ರತಾಪವನ್ನು ತೋರುತ್ತಿದೆ. ಇದೀಗ ವಾತಾವರಣದ ತಾಪಮಾನದ ಮಟ್ಟವು ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ತಲುಪುವ ಹಂತವನ್ನು ಮೀರಿದೆ. ಇದರೊಂದಿಗೆ ಅನಿಯಮಿತ ವಿದ್ಯುತ್ ಕಡಿತದ ಬಾಧೆಯೂ ದಿನೇ ದಿನೇ ಹೆಚ್ಚುತ್ತಿದೆ. ವಾತಾವರಣದ ಉಷ್ಣತೆಯು ಮಿತಿಮೀರಿದ ಸಂದರ್ಭದಲ್ಲಿ ಅಕಾಲಿಕ ಮಳೆ ಸುರಿದು ಇಳೆಯನ್ನು ತಂಪಾಗಿಸಿದರೂ,ಮರುದಿನ ಬಿಸಿಲಿನ ಧಗೆಯು ಮತ್ತಷ್ಟು ಹೆಚ್ಚುತ್ತದೆ. ಇದೇ ಕಾರಣದಿಂದಾಗಿ ವಿದ್ಯುತ್ ಪಂಖಗಳು,ಹವಾ ನಿಯಂತ್ರಕಗಳು,ರೆಫ್ರಿಜೆರೇಟರ್ ಹಾಗೂ ಕೃಷಿ ಮತ್ತು ಕುಡಿಯುವ ನೀರಿನ ಪೂರೈಕೆಗಾಗಿ ಬಳಸುವ ವಿದ್ಯುತ್ ಪಂಪ್ ಇತ್ಯಾದಿಗಳು ಅವ್ಯಾಹತವಾಗಿ ಬಳಸಲ್ಪಡುತ್ತವೆ. ತತ್ಪರಿಣಾಮವಾಗಿ ವಿದ್ಯುತ್ತಿನ ಬಳಕೆಯ ಪ್ರಮಾಣವು ಸ್ವಾಭಾವಿಕವಾಗಿಯೇ ಇನ್ನಷ್ಟು ಹೆಚ್ಚುತ್ತದೆ. ಆದರೆ ಇದೇ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನೆಯ  ಪ್ರಮಾಣವು ಕಾರಣಾಂತರಗಳಿಂದ ಕಡಿಮೆಯಾಗಿರುವುದರಿಂದ ಅನಿಯಮಿತ ವಿದ್ಯುತ್ ಕಡಿತ ಜಾರಿಗೊಂಡಿದ್ದು ,ಜನಸಾಮಾನ್ಯರ ದೈನಂದಿನ ಕೆಲಸಕಾರ್ಯಗಳಿಗೆ ಅಡಚಣೆಗಳು ಸಂಭವಿಸುತ್ತಿವೆ. ವಿಶೇಷವೆಂದರೆ ವಿದ್ಯುತ್ ಕ್ಷಾಮದ ಸಮಸ್ಯೆಯು ರಾಜ್ಯದ ಜನತೆಯನ್ನು ಹಲವಾರು ವರ್ಷಗಳಿಂದ ಪೀಡಿಸುತ್ತಿದ್ದರೂ,ಸರಕಾರ ಮತ್ತು ಪ್ರಜೆಗಳು ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಮಾತ್ರ ಕಟ್ಟುನಿಟ್ಟಾಗಿ ಅನುಸರಿಸುತ್ತಿಲ್ಲ.
ನಿಜ ಹೇಳಬೇಕಿದ್ದಲ್ಲಿ ಸರಕಾರವು ಹಲವಾರು ವರ್ಷಗಳ ಹಿಂದೆಯೇ ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಸೂಚಿಸಿದ್ದು,ಸರಕಾರೀ ಕಚೇರಿಗಳಲ್ಲೇ ಇದು ಜಾರಿಗೊಂಡಿಲ್ಲ. ಇವುಗಳಲ್ಲಿ ಸರಕಾರೀ ಕಚೇರಿಗಳಲ್ಲಿ ಇರುವ ಟ್ಯೂಬ್ ಲೈಟ್ ಮತ್ತು ಸಾಮಾನ್ಯ ಬಲ್ಬ್ ಗಳು ಕೆಟ್ಟುಹೋದಲ್ಲಿ,ಇವುಗಳಿಗೆ ಬದಲಾಗಿ ಸಿ.ಎಫ್. ಎಲ್ ಬಲ್ಬ್ ಗಳನ್ನು ಅಳವಡಿಸುವುದು,ಪಂಖಗಳಿಗೆ ಎಲೆಕ್ಟ್ರಾನಿಕ್ ನಿಯಂತ್ರಕಗಳನ್ನು 
ಬಳಸುವುದು,ಹವಾನಿಯಂತ್ರಕಗಳನ್ನು ಅನಾವಶ್ಯಕವಾಗಿ ಬಳಸುವುದು,ನೂತನ ಕಚೇರಿಯೊಂದನ್ನು ನಿರ್ಮಿಸುವಾಗ ಧಾರಾಳ ಗಾಳಿ-ಬೆಳಕು ಬರುವಂತೆ ವಿನ್ಯಾಸಗೊಳಿಸುವುದು,ಕಡ್ಡಾಯವಾಗಿ ಸಿ.ಎಫ್.ಎಲ್ ಬಲ್ಬ್ ಗಳನ್ನೇ ಅಳವಡಿಸುವುದು,ಸ್ಥಳೀಯ ಸಂಸ್ಥೆಗಳ 
ವ್ಯಾಪ್ತಿಯಲ್ಲಿ ಇರುಳಿಡೀ ಬೆಳಗುವ ದಾರಿದೀಪಗಳಲ್ಲಿ ಶೇ. ೫೦ ರಷ್ಟು ದೀಪಗಳ ಸಂಪರ್ಕವನ್ನು ಕಡಿತಗೊಳಿಸುವುದೇ ಮುಂತಾದ 
ಸೂಚನೆಗಳು ಪ್ರಮುಖವಾಗಿದ್ದವು. ಆದರೆ ಈ ಉಪಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಟಾನಿಸಿದ ಒಂದೇ ಒಂದು ಸರಕಾರೀ ಕಚೇರಿ
 ಹಾಗೂ ಸ್ಥಳೀಯ ಸಂಸ್ಥೆಯನ್ನು  ಯಾರೊಬ್ಬರೂ ಕಂಡಿರುವ ಸಾಧ್ಯತೆಗಳಿಲ್ಲ. ಆದರೆ ಹಗಲಲ್ಲೂ ಟ್ಯೂಬ್ ಲೈಟ್ ಗಳು ಬೆಳಗುವ ಮತ್ತು 
ಸಿಬಂದಿಗಳು ಭೋಜನಕ್ಕಾಗಿ ತೆರಳಿದ ಸಂದರ್ಭದಲ್ಲೂ ಪಂಖಗಳು ತಿರುಗುತ್ತಿರುವ ಮತ್ತು ಹಗಲಿನಲ್ಲೂ ದಾರಿದೀಪಗಳು ಬೆಳಗುವ ದೃಶ್ಯಗಳು ಕಾಣಸಿಗುವುದರಲ್ಲಿ ಸಂದೇಹವಿಲ್ಲ. 
ಅದೇ ರೀತಿಯಲ್ಲಿ ಜನಸಾಮಾನ್ಯರೂ ತಮ್ಮ ದೈನಂದಿನ ವಿದ್ಯುತ್ ಬಳಕೆಯ ಪ್ರಮಾಣದಲ್ಲಿ ಒಂದಿಷ್ಟು ಉಳಿತಾಯ ಮಾಡುವ 
ಮಾರ್ಗೋಪಾಯಗಳನ್ನು ಅನುಸರಿಸುವುದಿಲ್ಲ. ದಿನವಿಡೀ ಕಿರಿಚುವ ಟೀವಿ,ನಿರಂತರವಾಗಿ ತಿರುಗುವ ಪಂಖಗಳು,ಅವಶ್ಯಕತೆ 
ಇಲ್ಲದಿದ್ದರೂ ಬೆಳಗುತ್ತಿರುವ ದೀಪಗಳು,ಸದಾ ಆನ್ ಆಗಿರುವ ಹವಾನಿಯಂತ್ರಕ ಗಳಿಂದಾಗಿ,ರಾಜ್ಯಾದ್ಯಂತ ಅಗಾಧ ಪ್ರಮಾಣದ 
ವಿದ್ಯುತ್  ಪೋಲಾಗುತ್ತಿದೆ.ಇಷ್ಟೆಲ್ಲಾ ಸಾಲದೆನ್ನುವಂತೆ ಬೇಸಗೆಯ ದಿನಗಳಲ್ಲೇ ಜರಗುವ
 ಜಾತ್ರೆ,ಬ್ರಹ್ಮಕಲಶ,ಮದುವೆ,ಮುಂಜಿ,ಗೃಹ ಪ್ರವೇಶಗಳಂತಹ ಕಾರ್ಯಕ್ರಮಗಳ ಸಂದರ್ಭದಲ್ಲಿ 
ಇರುಳಿಡೀ ಉರಿಸುವ ಬಣ್ಣಬಣ್ಣದ ವಿದ್ಯುತ್ ದೀಪಗಳು ಅಗಾಧ ಪ್ರಮಾಣದ ವಿದ್ಯುತ್ತನ್ನು
 ಕಬಳಿಸುತ್ತವೆ. ತತ್ಪರಿಣಾಮವಾಗಿ ಸಂಭವಿಸುವ  ವಿದ್ಯುತ್ತಿನ ಅಪವ್ಯಯದಿಂದಾಗಿ, ವಿಶೇಷವಾಗಿ ಬೇಸಗೆಯ ದಿನಗಳಲ್ಲಿ ತಪ್ಪದೆ ತಲೆದೋರುವ ವಿದ್ಯುತ್ ಕ್ಷಾಮದ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತದೆ.
ಅದೇನೇ ಇರಲಿ,ಇದೀಗ ಶಾಲಾಕಾಲೇಜುಗಳ ವಿದ್ಯಾರ್ಥಿಗಳ ಪರೀಕ್ಷೆಗಳು ಆರಂಭಗೊಂಡಿದ್ದು,ವಿದ್ಯುತ್ ಕಡಿತದ ಸಮಸ್ಯೆಯು ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಯ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆ. ಕನಿಷ್ಠ ಪಕ್ಷ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ
ನಾವು ಅನಾವಶ್ಯಕವಾಗಿ ಪೋಲುಮಾಡುತ್ತಿರುವ ವಿದ್ಯುತ್ತನ್ನು ಉಳಿಸಿದಲ್ಲಿ,ನಿಶ್ಚಿತವಾಗಿಯೂ ವಿದ್ಯುತ್ ಕ್ಷಾಮದ ಸಮಸ್ಯೆಯು ತಕ್ಕ ಮಟ್ಟಿಗೆ ಪರಿಹಾರಗೊಳ್ಳುವುದರಲ್ಲಿ ಸಂದೇಹವಿಲ್ಲ.
ಡಾ. ಸಿ . ನಿತ್ಯಾನಂದ ಪೈ,ಪುತ್ತೂರು
 ಶಾಲಾ ಕಾಲೇಜುಗಳ ಅಂತಿಮ ಪರೀಕ್ಷೆಗಳು ಆರಂಭವಾಗುವ ಮುನ್ನ ಪ್ರಕಟಿಸಿದ್ದ ಲೇಖನ
ವಿದ್ಯುತ್ ಉಳಿಸಬಲ್ಲ ಎಲ್.ಇ. ಡಿ ದಾರಿದೀಪಗಳು -ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ
ಇರುಳಿಡೀ ಬೆಳಗುವ ವಿದ್ಯುತ್ ದೀಪಗಳು



        ಹೆಂಗಸರನ್ನೇ ಹೆಚ್ಚಾಗಿ ಬಾಧಿಸುವ ಗ್ಲಕೊಮಾ
ಮನುಷ್ಯನ ಪಂಚೆಂದ್ರಿಯಗಳಲ್ಲಿ ಅತ್ಯಂತ ಪ್ರಮುಖ ಮತ್ತು ಅತ್ಯಮೂಲ್ಯವಾದ ಕಣ್ಣುಗಳ ದೃಷ್ಠಿಯನ್ನು ನಾಶಪಡಿಸಬಲ್ಲ ವ್ಯಾಧಿಗಳಲ್ಲಿ, ಗ್ಲಕೊಮಾ ದ್ವಿತೀಯ ಸ್ಥಾನದಲ್ಲಿದೆ. ಅದೇ ತಾನೇ ಜನಿಸಿದ ಪುಟ್ಟ ಕೂಸಿನಿಂದ ಆರಂಭಿಸಿ ವಯೋವೃದ್ಧರನ್ನೂ ಬಾಧಿಸಬಲ್ಲ ಈ ಕಾಯಿಲೆಗೆ ಶಾಶ್ವತ ಪರಿಹಾರವನ್ನು ಇಂದಿನ ತನಕ ಪತ್ತೆಹಚ್ಚಿಲ್ಲ. ಇದೇ ಕಾರಣದಿಂದಾಗಿ ಗ್ಲಕೊಮಾ ಪೀಡಿತ ವ್ಯಕ್ತಿಗಳು ಜೀವನಪರ್ಯಂತ ಚಿಕಿತ್ಸೆಯನ್ನು ಪಡೆಯಬೇಕಾದ ಅನಿವಾರ್ಯತೆ ಇದೆ. ಹೆಂಗಸರನ್ನು ಹೆಚ್ಚಾಗಿ ಕಾಡುವ ಈ ಅಪಾಯಕಾರಿ ವ್ಯಾಧಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
-------------          -------------          --------------              ---------------           
ಜಾಗತಿಕ ಮಟ್ಟದಲ್ಲಿ ಅತ್ಯಧಿಕ ಜನರಲ್ಲಿ ದೃಷ್ಟಿಹೀನತೆಗೆ ಕಾರಣವೆನಿಸುತ್ತಿರುವ ಕಾಯಿಲೆಗಳಲ್ಲಿ ಗ್ಲಕೊಮಾ ದ್ವಿತೀಯ ಸ್ಥಾನದಲ್ಲಿದ್ದರೂ,ಭಾರತದಲ್ಲಿ ತೃತೀಯ ಸ್ಥಾನದಲ್ಲಿದೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೂ ವ್ಯಾಪಕವಾಗಿ ಕಂಡುಬರುವ ಮತ್ತು ಶಾಶ್ವತ ಪರಿಹಾರವೇ ಇಲ್ಲದ ಈ ವ್ಯಾಧಿಗೆ,ಅಜೀವಪರ್ಯಂತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.
ಗ್ಲಕೊಮಾ ಕಾಯಿಲೆ ಹಾಗೂ ಇದರ ಲಕ್ಷಣಗಳ ಬಗ್ಗೆ ಜನಸಾಮಾನ್ಯರಿಗೆ ಅವಶ್ಯಕ ಮಾಹಿತಿಯ ಅರಿವಿಲ್ಲದೇ ಇರುವುದರೊಂದಿಗೆ,ಅಜ್ಞಾನದಿಂದಾಗಿಯೂ ಇದರ ಪ್ರಾಬಲ್ಯ ವೃದ್ಧಿಸುವುದರಿಂದಾಗಿ ಶಾಶ್ವತ ದೃಷ್ಟಿನಾಶಕ್ಕೆ ಕಾರಣವೆನಿಸುತ್ತಿದೆ. ಜಗತ್ತಿನ ಶೇಕಡಾ ಐವತ್ತರಷ್ಟು ಗ್ಲಕೊಮಾ ಪೀಡಿತರಿಗೆ ಈ ವ್ಯಾಧಿಯ ಇರುವಿಕೆಯ ಅರಿವಿಲ್ಲದಿರುವುದು ಇದನ್ನು ಸಮರ್ಥಿಸುತ್ತದೆ
ಗ್ಲಕೊಮಾ ಎಂದರೇನು?
ಮನುಷ್ಯನ ಕಣ್ಣುಗಳ ಒಳಭಾಗದಲ್ಲಿನ ದ್ರವದ ಹೊರಹರಿಯುವಿಕೆಯ ಹಾದಿಯಲ್ಲಿ ತಲೆದೋರುವ ಅಡಚಣೆಯಿಂದಾಗಿ,ಕಣ್ಣುಗಳ ಆಂತರಿಕ ಒತ್ತಡದ ಹೆಚ್ಚುವಿಕೆ ಮತ್ತು ಓಪ್ಟಿಕ್ ನರಕ್ಕೆ ಹಾನಿಯಾಗುವ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಗ್ಲಕೊಮಾ ಎಂದು ಕರೆಯುತ್ತಾರೆ. ಇದನ್ನು ಸ್ಥೂಲವಾಗಿ ಕ್ಲೋಸ್ಡ್ ಎಂಗಲ್ ಮತ್ತು ಓಪನ್ ಎಂಗಲ್(Closed angle-Open angle) ಎಂದು ವಿಂಗಡಿಸಿದ್ದಾರೆ. ಸಾಮಾನ್ಯವಾಗಿ ಓಪನ್ ಎಂಗಲ್ ಗ್ಲಕೊಮಾದಲ್ಲಿ ಗಮನಾರ್ಹ ಲಕ್ಷಣಗಳು ಕಂಡುಬರುವುದಿಲ್ಲ. ಆದರೆ ಕ್ಲೋಸ್ಡ್ ಎಂಗಲ್ ನಲ್ಲಿ ಕೆಲವೊಂದು ವಿಶಿಷ್ಠ ಲಕ್ಷಣಗಳು ಪ್ರಕಟವಾಗುತ್ತವೆ.
ಗ್ಲಕೊಮಾ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ನಿಖರವಾಗಿ ಪತ್ತೆಹಚ್ಚಿ,ಸೂಕ್ತ ಚಿಕಿತ್ಸೆಯನ್ನು ಪಡೆಯದಿದ್ದಲ್ಲಿ ನಿಶ್ಚಿತವಾಗಿಯೂ ದೃಷ್ಟಿನಾಶಕ್ಕೆ ಕಾರಣವೆನಿಸುತ್ತದೆ. ಕೆಲವೊಮ್ಮೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡರೂ,ಅಲ್ಪ ಪ್ರಮಾಣದ ವ್ಯಕ್ತಿಗಳಲ್ಲಿ ಆಂಶಿಕ ಅಥವಾ ಸಂಪೂರ್ಣ ದೃಷ್ಟಿನಾಶ ಸಂಭವಿಸುವ ಸಾಧ್ಯತೆಗಳಿವೆ. ಹಾಗೂ ಇದೇ ಕಾರಣದಿಂದಾಗಿ ಇದನ್ನು ನಿರ್ಲಕ್ಷಿಸದೇ ಕ್ಷಿಪ್ರಗತಿಯಲ್ಲಿ ತಜ್ಞವೈದ್ಯರಿಂದ ಚಿಕಿತ್ಸೆ ಪಡೆಯುವುದು ನಿಸ್ಸಂದೇಹವಾಗಿ ಹಿತಕರ ಎನಿಸುವುದು.
ಈ ಕಾಯಿಲೆಯನ್ನು ಸಂಪೂರ್ಣ-ಶಾಶ್ವತವಾಗಿ ಗುಣಪಡಿಸಬಲ್ಲ ಚಿಕಿತ್ಸಾ ವಿಧಾನವನ್ನು ಇದುವರೆಗೆ ಯಾವುದೇ ವೈದ್ಯಕೀಯ ವಿಜ್ಞಾನಿಗಳು-ಸಂಶೋಧಕರು ಪತ್ತೆಹಚ್ಚಿಲ್ಲ. ಅಂತೆಯೇ ತನ್ನ ನಿರ್ಲಕ್ಷ್ಯದಿಂದಾಗಿ ರೋಗಿಯು ಕಳೆದುಕೊಂಡ ದೃಷ್ಟಿಯನ್ನು ಮರಳಿ ಗಳಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸೂಕ್ತ ಔಷದಗಳು ಅಥವಾ ಸಂದರ್ಭೋಚಿತ ಶಸ್ತ್ರಚಿಕಿತ್ಸೆಯ ಮೂಲಕ ಇದನ್ನು ನಿಯಂತ್ರಿಸಬಹುದಾಗಿದೆ. ಹಾಗೂ ಆಂಶಿಕವಾಗಿ ಸಂಭವಿಸಿರಬಹುದಾದ ದೃಷ್ಟಿನಾಶವನ್ನು ಸ್ಥಗಿತಗೊಳಿಸಬಹುದಾಗಿದೆ.ಜೊತೆಗೆ ಸುದೀರ್ಘಕಾಲ ಬಾಧಿಸುವ ಈ ವ್ಯಾಧಿಯ ಸ್ಥಿತಿಗತಿಗಳನ್ನು ನಿರಂತರವಾಗಿ ಗಮನಿಸಬೇಕಾಗುತ್ತದೆ.
 ಸುಮಾರು ೧೩ ದಶಲಕ್ಷ ಭಾರತೀಯರು ಗ್ಲಕೊಮಾ ವ್ಯಾಧಿಯಿಂದ ಬಳುತ್ತಿದ್ದಾರೆಂದು  ಅಂದಾಜಿಸಲಾಗಿದ್ದು,ಶೇ. ೧೩ ರಷ್ಟು  
ಕುರುಡುತನಕ್ಕೆ ಈ ವ್ಯಾಧಿಯು ಮೂಲಕಾರಣವೆನಿಸಿದೆ. 
ಗ್ಲಕೊಮಾ ಕಾಯಿಲೆಯನ್ನು ಸ್ಥೂಲವಾಗಿ ಕ್ಲೋಸ್ಡ್ ಎಂಗಲ್ ಮತ್ತು ಓಪನ್ ಎಂಗಲ್ ಎನ್ನುವ ಎರಡು ಪ್ರಭೇಧಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ತೀವ್ರ ಸ್ವರೂಪದ ಕ್ಲೋಸ್ಡ್ ಎಂಗಲ್ ಪ್ರಭೇದವು ಹೆಂಗಸರಲ್ಲಿ ಗಂಡಸರಿಗಿಂತ ಮೂರುಪಟ್ಟು ಹೆಚ್ಚಿದೆ. ಏಷಿಯನ್ ರಾಷ್ಟ್ರಗಳಲ್ಲಿ ಇವೆರಡೂ ಪ್ರಭೇದಗಳ ಪ್ರಮಾಣ ಶೇ. ೫೦ ರಷ್ಟಿದೆ.  
ಸಂಭಾವ್ಯತೆ  
ಗ್ಲಕೊಮಾ ವ್ಯಾಧಿಯ ಸಂಭಾವ್ಯತೆ ಮತ್ತು ಅಪಾಯಕಾರಿ ಅಂಶಗಳು ಈ ಕೆಳಗಿನಂತಿವೆ.
ಮಧುಮೇಹ,ಅಧಿಕ ರಕ್ತದೊತ್ತಡ,ಥೈರಾಯ್ದ್  ಸಂಬಂಧಿತ ಕಾಯಿಲೆಗಳು,ಸ್ಟೆರಾಯ್ದ್ ಯುಕ್ತ ಔಷದಗಳ  ಬಳಸುವಿಕೆ,
ನಿದ್ರಾಹೀನತೆ,ಉದ್ವಿಗ್ನತೆ,ಖಿನ್ನತೆ,ಪಾರ್ಕಿನ್ಸನ್ಸ್ ಕಾಯಿಲೆ,ಆಸ್ತಮಾ ಮತ್ತಿತರ ವ್ಯಾಧಿಗಳಿಂದ ಬಳಲುತ್ತಿರುವ- ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳಲ್ಲಿ ಗ್ಲಕೊಮಾ ಉದ್ಭವಿಸುವ ಸಾಧ್ಯತೆಗಳಿವೆ. ಇದಲ್ಲದೇ ೪೦ ವರ್ಷ ವಯಸ್ಸನ್ನು ಮೀರಿದವರು ಮತ್ತು  ಕುಟುಂಬದ ಹಿರಿಯರು ಅಥವಾ ಸಮೀಪ ಸಂಬಂಧಿಗಳಲ್ಲಿ ಈ ವ್ಯಾಧಿ ಪೀಡಿತರು ಇದ್ದಲ್ಲಿ, ಮುಂದಿನ ಪೀಳಿಗೆಯಲ್ಲಿ ಇದು ತಲೆದೋರುವ ಸಾಧ್ಯತೆಗಳೂ ಇವೆ.
ಇದಲ್ಲದೆ ಪ್ರಕಾಶಮಾನವಾದ ದೀಪದ ಸುತ್ತ ಕಾಮನಬಿಲ್ಲಿನಂತಹ ಬಣ್ಣದ ಚಕ್ರವನ್ನು ಕಾಣುವವವರು,ಸಮೀಪದೃಷ್ಟಿ ಪೀಡಿತರು,ಆಗಾಗ ತಲೆನೋವಿನಿಂದ ಬಳಲುತ್ತಿರುವವರು,ಮುಖ-ಕಣ್ಣುಗಳಿಗೆ ಏಟು ಬಿದ್ದವರು ಮತ್ತು ಪದೇ ಪದೇ ಕನ್ನಡಕವನ್ನು ಬದಲಾಯಿಸಬೇಕಾದ ವ್ಯಕ್ತಿಗಳು ಗ್ಲಕೊಮಾ ವ್ಯಾಧಿಗೆ ತುತ್ತಾಗುವ ಸಾಧ್ಯತೆಗಳಿವೆ.
ಸಂಭಾವ್ಯ ವ್ಯಕ್ತಿಗಳು ನಿಯಮಿತವಾಗಿ ನೇತ್ರತಜ್ಞರಿಂದ ಕಣ್ಣುಗಳ ತಪಾಸಣೆಯನ್ನು ಮಾಡಿಸುತ್ತಿದ್ದಲ್ಲಿ,ಈ ವ್ಯಾಧಿಯನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚಬಹುದಾಗಿದೆ. ಜೊತೆಗೆ ಸೂಕ್ತ ಚಿಕಿತ್ಸೆಯನ್ನು ಪಡೆಯುವ ಮೂಲಕ ಕಣ್ಣುಗಳಿಗೆ ಸಂಭವಿಸಬಲ್ಲ ಹಾನಿಯೊಂದಿಗೆ ದೃಷ್ಠಿನಾಶದಂತಹ ಗಂಭೀರ ಸಮಸ್ಯೆಯನ್ನು ಸುಲಭವಾಗಿ ತಡೆಗಟ್ಟಬಹುದಾಗಿದೆ. ಎಳೆಯ ವಯಸ್ಸಿನಲ್ಲಿ ಬಾಧಿಸುವ ಹಾಗೂ ಅನುವಂಶಿಕವಾಗಿ ತಲೆದೋರಬಲ್ಲ  "ಜುವೆನೈಲ್ ಓಪನ್ ಎಂಗಲ್ ಗ್ಲಕೊಮಾ" ಪೀಡಿತ ಕುಟುಂಬಗಳ ಸದಸ್ಯರು ನಿಯಮಿತವಾಗಿ  ಮತ್ತು ಕಡ್ಡಾಯವಾಗಿ ತಜ್ಞವೈದ್ಯರಿಂದ ನೇತ್ರತಪಾಸಣೆ ಮಾಡಿಸುವುದು ಹಿತಕರವೆನಿಸುವುದು.
ಚಿಕಿತ್ಸೆ
ಅವಶ್ಯಕ ಪರೀಕ್ಷೆಗಳನ್ನು ನಡೆಸಿ ಗ್ಲಕೊಮಾ ವ್ಯಾಧಿಯನ್ನು ನಿಖರವಾಗಿ ಗುರುತಿಸಿದ ಬಳಿಕ,ವ್ಯಾಧಿಯ ತೀವ್ರತೆ,ರೋಗಿಯ ವಯಸ್ಸು ಹಾಗೂ ಆತನಲ್ಲಿ ಇರಬಹುದಾದ ಅನ್ಯ ಕಾಯಿಲೆಗಳು ಮತ್ತಿತರ ಅಂಶಗಳನ್ನು ಪರಿಗಣಿಸಿ, ಔಷದ ಅಥವಾ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವಂತೆ ತಜ್ಞ ವೈದ್ಯರು ಸಲಹೆಯನ್ನು ನೀಡುವರು. ಚಿಕಿತ್ಸೆ ಯಾವುದೇ ಆಗಿದ್ದರೂ,ವೈದ್ಯರ ಸೂಚನೆಯಂತೆ ಜೀವನಪರ್ಯಂತ ಔಷದೋಪಚಾರ ಮತ್ತು ನಿಗದಿತ ಅವಧಿಗೊಮ್ಮೆ ಕಣ್ಣುಗಳ ತಪಾಸಣೆಯನ್ನು ಮಾಡಬೇಕಾಗುವುದು ಅನಿವಾರ್ಯವೂ ಹೌದು.
ಇವೆಲ್ಲಕ್ಕೂ ಮಿಗಿಲಾಗಿ ಯಾವುದೇ ಕಾರಣಕ್ಕೂ ಬಂಧುಮಿತ್ರರ ಪುಕ್ಕಟೆ ಸಲಹೆಯನ್ನು ಮನ್ನಿಸಿ,ಅನ್ಯ ಚಿಕಿತ್ಸಾ ವಿಧಾನಗಳನ್ನು ಮಾತ್ರ ಪ್ರಯೋಗಿಸದಿರಿ. ಪ್ರಯೋಗಿಸಿ ಕಣ್ಣುಗಳ ದೃಷ್ಟಿಯನ್ನೇ ಕಳೆದುಕೊಂಡು ಪರಿತಪಿಸದಿರಿ!.
ಡಾ. ಸಿ . ನಿತ್ಯಾನಂದ ಪೈ
ಬಳಕೆದಾರರ ಹಿತರಕ್ಷಣಾ ವೇದಿಕೆ
ಬೊಳುವಾರು,ಪುತ್ತೂರು . ದ. ಕ

ಸ್ತನ ಕ್ಯಾನ್ಸರ್ -ಅರಿವು ಮೂಡಿಸುವ ಮಾಸ ಅಕ್ಟೋಬರ್
ಸಾಮಾನ್ಯವಾಗಿ ಮಧ್ಯ ವಯಸ್ಸನ್ನು ಮೀರಿದ ಮಹಿಳೆಯರನ್ನು ಮಾತ್ರ ಪೀಡಿಸುವ ವ್ಯಾಧಿಯೆಂದು ಅನೇಕರು ನಂಬಿರುವ ಸ್ತನ ಕ್ಯಾನ್ಸರ್, ಹದಿಹರೆಯದ ಹುಡುಗಿಯರು ಹಾಗೂ   ತರುಣಿಯರನ್ನೂ ಬಾಧಿಸಬಲ್ಲದು.ವಿಶೇಷವೆಂದರೆ ಈ ವ್ಯಾಧಿಯು ಕೇವಲ ಮಹಿಳೆಯರನ್ನು ಮಾತ್ರವಲ್ಲಾ, ಅತ್ಯಲ್ಪ  ಪ್ರಮಾಣದ ಪುರುಷರನ್ನೂ ಪೀಡಿಸಬಲ್ಲದೆಂದು ನಿಮಗೂ ತಿಳಿದಿರಲಾರದು.ಈ ಅಪಾಯಕಾರೀ ಕಾಯಿಲೆಯ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.
               ಜಾಗತಿಕ ಮಟ್ಟದಲ್ಲಿ ಮಹಿಳೆಯರಲ್ಲಿ ಪತ್ತೆಯಾಗುತ್ತಿರುವ ವಿವಿಧ ರೀತಿಯ ಕ್ಯಾನ್ಸರ್ ಗಳಲ್ಲಿ, ಸ್ತನಗಳ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ.ಆದರೆ ಈ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ, ಇದರ ಮಾರಕತೆಯನ್ನು ನಿಶ್ಚಿತವಾಗಿಯೂ ನಿಯಂತ್ರಿಸಬಹುದಾಗಿದೆ.ಈ ಸಂದೇಶದೊಂದಿಗೆ ಸ್ತನ ಕ್ಯಾನ್ಸರ್ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಉದ್ದೇಶದಿಂದ, ವರ್ಷಂಪ್ರತಿ ಅಕ್ಟೋಬರ್ ತಿಂಗಳನ್ನು "ಗುಲಾಬಿ ಮಾಸ"ವನ್ನಾಗಿ ಆಚರಿಸಲಾಗುತ್ತದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ಅಂಕಿ ಅಂಶಗಳಂತೆ ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು ಒಂದು ಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ.ಆದರೆ ಇದರಲ್ಲಿ ಶೇ.70 ರಷ್ಟು ಅದಾಗಲೇ ಅಪಾಯಕಾರೀ ಹಂತವನ್ನು ತಲುಪಿರುತ್ತವೆ.ಇದಕ್ಕೂ ಮಿಗಿಲಾಗಿ ಈ ಸಂಖ್ಯೆಯು 2020ನೇ ಇಸವಿಯಲ್ಲಿ ಎರಡು ಪಟ್ಟು ಹೆಚ್ಚಲಿದೆ!.ಕೆಲವೇ ದಶಕಗಳ ಹಿಂದೆ ಮಧ್ಯವಯಸ್ಸು ಮೀರಿದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಈ ವ್ಯಾಧಿಯು,ಇದೀಗ 25ರಿಂದ 30 ವರ್ಷದ ತರುಣಿಯರಲ್ಲಿ ಪತ್ತೆಯಾಗುತ್ತಿದೆ.ಮಹಿಳೆಯರ ವಯಸ್ಸು ಹೆಚ್ಚಾದಂತೆಯೇ,ಇದರ ಸಂಭಾವ್ಯತೆಯೂ ಹೆಚ್ಚುತ್ತದೆ.
ಸಂಭಾವ್ಯತೆ
ಸ್ತನಗಳ ಕ್ಯಾನ್ಸರ್ ಉದ್ಭವಿಸಲು ನಿಖರವಾದ ಹಾಗೂ ನಿರ್ದಿಷ್ಟವಾದ ಕಾರಣಗಳು ಏನೆಂದು ಹೇಳಲಾಗದು.ಆದರೆ ಇದರ ಸಂಭಾವ್ಯತೆಗೆ ಸಂಬಂಧಿಸಿದಂತೆ ಕೆಲವೊಂದು ಅಪಾಯಕಾರಿ ಅಂಶಗಳು ಇಂತಿವೆ.ಇವುಗಳಲ್ಲಿ 12 ವರ್ಷ ವಯಸ್ಸಾಗುವ ಮುನ್ನ ಪುಷ್ಪವತಿಯರಾದ ಮತ್ತು 55 ವರ್ಷ ವಯಸ್ಸಾದ  ಬಳಿಕ ಋತು ಬಂಧವಾದ ಸ್ತ್ರೀಯರು,ಅವಿವಾಹಿತರು,ಸಂತಾನ ಹೀನರು,40 ವರ್ಷ ವಯಸ್ಸಾದ ಬಳಿಕ ಮಕ್ಕಳನ್ನು ಹಡೆದವರು,ತಮ್ಮ ಮಗುವಿಗೆ ಮೊಲೆಹಾಲನ್ನು ಉಣಿಸದವರು, ಗರ್ಭನಿರೋಧಕ ಔಷಧಗಳನ್ನು ಹಿಂದೆ ಸೇವಿಸುತ್ತಿದ್ದವರು  ಹಾಗೂ ಇದೀಗ ಸೇವಿಸುತ್ತಿರುವವರು,ಅನ್ಯಕಾರಣಗಳಿಂದಾಗಿ ಕೆಲ ಹಾರ್ಮೋನುಗಳನ್ನು ಸೇವಿಸುವ ಮಹಿಳೆಯರು ಮತ್ತು ಸ್ತನ ಕ್ಯಾನ್ಸರ್ ಪೀಡಿತರ ಸಮೀಪದ ಸಂಬಂಧಿಗಳು ಈ  ವ್ಯಾಧಿಗೆ ಈಡಾಗುವ  ಸಾಧ್ಯತೆಗಳು ಹೆಚ್ಚಿವೆ.ಇದಲ್ಲದೆ ಅನುವಂಶಿಕತೆ ಮತ್ತು ಪರಿವರ್ತಿತ ಹಾಗೂ ಅಸಾಮಾನ್ಯ ವಂಶವಾಹಿನಿಗಳ ಇರುವಿಕೆ,ಅಧಿಕತೂಕ -ಅತಿಬೊಜ್ಜು, ಅತಿ ಮದ್ಯ-ಧೂಮಪಾನ ಮತ್ತು ನಿಷ್ಪ್ರಯೋಜಕ ಆಹಾರ (ಜಂಕ್ ಫುಡ್ )ಗಳ ಸೇವನೆಯ ಹವ್ಯಾಸ ಇರುವವರಲ್ಲೂ ಸ್ತನ ಕ್ಯಾನ್ಸರ್ ತಲೆದೋರುವ ಸಾಧ್ಯತೆಗಳು ಹೆಚ್ಚಾಗಿವೆ.
ಪ್ರಸ್ತುತ ಭಾರತದಲ್ಲಿ ವರ್ಷಂಪ್ರತಿ ಒಂದುಲಕ್ಷಕ್ಕೂ ಅಧಿಕ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದರೂ,ಗ್ರಾಮೀಣ ಜನರ ಅಜ್ಞಾನ,ವಿದ್ಯಾವಂತರ ಲಜ್ಜೆ ಮತ್ತು ತಮ್ಮ ಆರೋಗ್ಯದ ಸಮಸ್ಯೆಗಳನ್ನು ಮುಚ್ಚಿಡುವ ಅಥವಾ ನಿರ್ಲಕ್ಷಿಸುವ ಸ್ವಭಾವದಿಂದಾಗಿ ಗಣನೀಯ ಪ್ರಮಾಣದ ಪ್ರಕರಣಗಳು ವೈದ್ಯರ ಗಮನಕ್ಕೆ ಬರುತ್ತಿಲ್ಲ.ಪ್ರಾಯಶಃ ಇದೇ ಕಾರಣದಿಂದಾಗಿ ಬಹುತೇಕ ಮಹಿಳೆಯರು ತಮ್ಮ ಸ್ತನಗಳಲ್ಲಿ ಪುಟ್ಟ ಹುಣಸೆ ಬೀಜದಷ್ಟು ಗಾತ್ರದ ಗಡ್ದೆಯೊಂದು ಉದ್ಭವಿಸಿರುವುದು ತಿಳಿದೊಡನೆ(ಪ್ರಾಥಮಿಕ ಹಂತ )ವೈದ್ಯರನ್ನು ಸಂದರ್ಶಿಸುವುದಿಲ್ಲ.ಆದರೆ ಈ ಗಡ್ದೆಯು ತುಸು ದೊಡ್ಡದಾದ ಬಳಿಕ(ತುಸು ವೃದ್ಧಿಸಿದ ಹಂತ )ಮತ್ತು ಇನ್ನು ಕೆಲವರು ಈ ಗಡ್ಡೆಯಲ್ಲಿ ತೀವ್ರ ನೋವು ಆರಂಭವಾದ ಬಳಿಕವೇ ವೈದ್ಯರನ್ನು ಸಂಪರ್ಕಿಸುತ್ತಾರೆ.ತತ್ಪರಿಣಾಮವಾಗಿ ಸಾಕಷ್ಟು ಶಾರೀರಿಕ ಮತ್ತು ಮಾನಸಿಕ ಯಾತನೆಗಳೊಂದಿಗೆ ಆರ್ಥಿಕ ಸಂಕಷ್ಟಗಳಿಗೂ ಈಡಾಗುತ್ತಾರೆ.
ಎಲ್ಲವೂ ಕ್ಯಾನ್ಸರ್ ಅಲ್ಲ
ಅನೇಕ ವಿದ್ಯಾವಂತರೂ ಸ್ಥನಗಳಲ್ಲಿ ಉದ್ಭವಿಸುವ ಯಾವುದೇ  ಗಡ್ದೆಗಳು ಕ್ಯಾನ್ಸರ್ ಎಂದೇ ನಂಬಿದ್ದಾರೆ.ನಿಜಹೆಳಬೇಕಿದ್ದಲ್ಲಿ ಇವುಗಳಲ್ಲಿ ಗಣನೀಯ ಪ್ರಮಾಣದ ಗಡ್ದೆಗಳು ನಿರಪಾಯಕಾರಿಗಳೇ ಆಗಿರುತ್ತವೆ.ಆದರೆ ತಜ್ಞ ವೈದ್ಯರ ಪರೀಕ್ಷೆಗೆ ಒಳಗಾಗದೇ  ಇದನ್ನು ನಿರ್ಧರಿಸುವುದು ಅಸಾಧ್ಯವೂ ಹೌದು.ಆದುದರಿಂದ ಇಂತಹ ಸಮಸ್ಯೆ ಉದ್ಭವಿಸಿದಲ್ಲಿ ಇದನ್ನು ಮುಚ್ಚಿಡುವ ಪ್ರಯತ್ನವು "ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆ "ಆಗುವುದು ಎನ್ನುವುದನ್ನು ಮರೆಯದಿರಿ.
ನಮ್ಮ ದೇಶದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಪ್ರಾರಂಭಿಕ ಹಂತದಲ್ಲೇ ಪತ್ತೆಯಾಗುವ ಪ್ರಮಾಣವು ಕೇವಲ ಶೇ.5 ರಿಂದ 10 ರಷ್ಟಿದೆ.ಈ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಜನಜಾಗೃತಿ ಮೂಡಿಸುವ ಮೂಲಕ, ಈ ವ್ಯಾಧಿಗೆ ಬಲಿಯಾಗುವವರ ಪ್ರಮಾಣವನ್ನು ಶೇ.30 ರಷ್ಟು ಕಡಿಮೆ ಮಾಡಬಹುದಾಗಿದೆ.ಇದೇ ಕಾರಣದಿಂದಾಗಿ ಈ ಮಾಹಿತಿಯನ್ನು ನಿಮ್ಮ ಬಂಧು ಮಿತ್ರರಿಗೂ ತಿಳಿಸುವ ಮೂಲಕ "ಗುಲಾಬಿ ಮಾಸ"ದ ಆಚರಣೆಯಲ್ಲಿ ನೀವೂ ಸಕ್ರಿಯವಾಗಿ ಪಾಲ್ಗೊಳ್ಳಬಹುದಾಗಿದೆ.ತನ್ಮೂಲಕ ಈ ವ್ಯಾಧಿಯ ಮಾರಕತೆಯನ್ನು ನಿಯಂತ್ರಿಸಬಹುದಾಗಿದೆ.
ಸ್ವಯಂ ಸ್ತನ ಪರೀಕ್ಷೆ
ಮಾರಕವೆನಿಸಬಲ್ಲ ಸ್ತನ ಕ್ಯಾನ್ಸರ್ ಸಮಸ್ಯೆಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ಸ್ವಯಂ ಸ್ತನ ಪರೀಕ್ಷೆಯು ಅತ್ಯಂತ ಸರಳ ಹಾಗೂ ಸುಲಭದ ವಿಧಾನವಾಗಿದೆ.ವಯೋವೃದ್ಧ ಮಹಿಳೆಯರೂ ಈ ಸರಳ ವಿಧಾನವನ್ನು ತಮ್ಮ ವೈದ್ಯರಿಂದ ಕೇಳಿ ತಿಳಿದುಕೊಳ್ಳಬಹುದಾಗಿದೆ.ಪ್ರತೀ ತಿಂಗಳಿನಲ್ಲೂ ತಪ್ಪದೇ ಸ್ವಯಂ ಸ್ತನ ಪರೀಕ್ಷೆಯನ್ನು ನಡೆಸುತ್ತಿದ್ದಲ್ಲಿ,ಸ್ಥನಗಳಲ್ಲಿ  ಕಂಡುಬರುವ ಅಸಾಮಾನ್ಯ ಬದಲಾವಣೆಗಳನ್ನು ಸುಲಭದಲ್ಲೇ ಪತ್ತೆಹಚ್ಚಬಹುದಾಗಿದೆ.ಇದಲ್ಲದೇ ಸ್ಥನಗಳಲ್ಲಿ ಉದ್ಭವಿಸಿರಬಹುದಾದ ಪುಟ್ಟ ಗಡ್ಡೆಗಳಲ್ಲಿ ನೋವು,ಜ್ವರ,ಸ್ತನ ಹಾಗೂ ಕಂಕುಳಿನಲ್ಲಿರುವ ಗ್ರಂಥಿಗಳಲ್ಲಿ ಬಾವು ಮತ್ತು ಯಾವುದೇ ರೀತಿಯ ಅಸಾಮಾನ್ಯ ಬೆಳವಣಿಗೆಗಳನ್ನು  ನಿರ್ಲಕ್ಷಿಸದೇ, ತಜ್ಞ ವೈದ್ಯರನ್ನು ಸಂದರ್ಶಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ  ಅಯಾಚಿತ ತೊಂದರೆಗಳನ್ನು ಸುಲಭದಲ್ಲೇ ತಡೆಗಟ್ಟಬಹುದಾಗಿದೆ ಎನ್ನುವುದನ್ನು ಮರೆಯದಿರಿ.
ಡಾ.ಸಿ.ನಿತ್ಯಾನಂದ ಪೈ ,ಪುತ್ತೂರು
ವಿಳಾಸ -ಬಳಕೆದಾರರ ಹಿತರಕ್ಷಣಾ ವೇದಿಕೆ ,ಬೊಳುವಾರು
ಪುತ್ತೂರು -ದ.ಕ -574201

Monday, May 6, 2013


 ಎಲ್ಲರೂ ಮಾಡುವುದು ಹೊಟ್ಟೆಗಾಗಿ,ರಾಜಕಾರಣಿಗಳು ಮಾಡುವುದುಸೀಟಿಗಾಗಿ!
ಮೌಲ್ಯಾಧಾರಿತ  ರಾಜಕಾರಣಕ್ಕೆ ತಿಲಾಂಜಲಿಯನ್ನು ನೀಡಿರುವ ಇಂದಿನ ರಾಜಕೀಯ ನೇತಾರರು,ತಮ್ಮ ಪಕ್ಷದ ತತ್ವ,ಸಿದ್ಧಾಂತಗಳು ಮತ್ತು ಧ್ಯೇಯ ಧೋರಣೆಗಳನ್ನೇ ಮರೆತು ಕೇವಲ ಅಧಿಕಾರ ಮತ್ತು ಧನದಾಹ ಎನ್ನುವ ವ್ಯಾಧಿಯಿಂದ ಬಳಲುತ್ತಿರುವುದು ಮತದಾರರಿಗೆ ಅರಿಯದ ವಿಚಾರವೇನಲ್ಲ. ಚುನಾವಣೆಗಳ ಘೋಷಣೆಯಾದೊಡನೆ ಮತದಾರರ ಮನೆಬಾಗಿಲಿಗೆ ಬಂದು ಕೈಮುಗಿದು ಮತಯಾಚನೆ ಮಾಡುವ ರಾಜಕಾರಣಿಗಳು, ಗೆದ್ದಬಳಿಕ ಕಣ್ಣಿನಲ್ಲಿ ಎಣ್ಣೆಯನ್ನು ಹಾಕಿ ಹುಡುಕಿದರೂ ಕಾಣದಂತೆ ಅದೃಶ್ಯರಾಗುತ್ತಾರೆ!
 
ಜಗತ್ತಿನ  ಅತೀದೊಡ್ಡ ಪ್ರಜಾಪ್ರಭುತ್ವ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ದೇಶದಲ್ಲಿ,ಕೆಲವೇ ದಶಕಗಳ ಹಿಂದಿನತನಕ "ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು" ಎನ್ನುವ ಮಾತು ಅಕ್ಷರಶಃ ಅರ್ಥಪೂರ್ಣ ಎನಿಸಿತ್ತು. ಆದರೆ ಬದಲಾದ  ಇಂದಿನ ಇಂದಿನ ಪರಿಸ್ಥಿತಿಯಲ್ಲಿ ಈ ಮಾತುಗಳು ಅರ್ಥಹೀನವೆನಿಸಿರುವುದು ಸುಳ್ಳೇನಲ್ಲ.
ರಾಜ್ಯದ ವಿಧಾನಸಭಾ ಚುನಾವಣೆಯ ದಿನಾಂಕದ ಘೋಷಣೆಯಾದಂತೆಯೇ ವಿವಿಧ ರಾಜಕೀಯ ಪಕ್ಷಗಳ ಮತ್ತು ನೇತಾರರ ಚದುರಂಗದಾಟ ಇನ್ನಷ್ಟು ರಂಗೇರುತ್ತಿದೆ.ಒಂದು ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದಂತೆಯೇ,ಟಿಕೆಟ್ ದೊರೆಯದ ಸ್ಪರ್ಧಿಗಳು ಮತ್ತೊಂದು ಪಕ್ಷವನ್ನು ಸೇರಿ ಟಿಕೆಟ್ ಪಡೆಯುವ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸುತ್ತಿದ್ದಾರೆ. ಜೊತೆಗೆ ಟಿಕೆಟ್ ನೀಡದ ಪಕ್ಷದಲ್ಲಿ "ಉಸಿರುಗಟ್ಟಿಸುವ" ವಾತಾವರಣವಿದ್ದ ಅಥವಾ" ಭ್ರಷ್ಟರೇ ತುಂಬಿದ್ದ" ಕಾರಣದಿಂದಾಗಿ ಪಕ್ಷವನ್ನು ತೊರೆಯುತ್ತಿರುವುದಾಗಿ ಹೇಳಿಕೆಯನ್ನು ನೀಡುತ್ತಾರೆ. ಆದರೆ ಐದು ವರ್ಷಗಳ ಕಾಲ ಉಸಿರುಕಟ್ಟಿಸುವ ವಾತಾವರಣದಲ್ಲಿ ಭ್ರಷ್ಟರೊಂದಿಗೆ ಉಳಿದುಕೊಂಡಿದ್ದೇಕೆ?,ಎನ್ನುವ ಪ್ರಶ್ನೆಗೆ ಉತ್ತರಿಸದೇ ನುಣುಚಿಕೊಳ್ಳುತ್ತಾರೆ!.
ಪ್ರಸ್ತುತ ಬಹುತೇಕ ಪಕ್ಷಗಳು ಟಿಕೆಟ್ ದೊರೆಯದ ಆಕಾಂಕ್ಷಿಗಳ ಬಂಡಾಯದ ಬಿರುಗಾಳಿಗೆ ಸಿಲುಕಿ ನಲುಗುತ್ತಿವೆ. ಆದರೂ ಮತ್ತೊಂದು ಪಕ್ಷದ ಟಿಕೆಟ್ ಸಿಗದ ಅಭ್ಯರ್ಥಿಯ ಮನವೊಲಿಸಿ,ತಮ್ಮಪಕ್ಷದ ಟಿಕೆಟ್ ನೀಡಲು ಹಾತೊರೆಯುತ್ತಿವೆ. ಪ್ರಾಯಶಃ ಚುನಾವಣಾ ಕಣದಲ್ಲಿರುವ ಯಾವುದೇ ಪಕ್ಷಗಳೂ ಇದಕ್ಕೆ ಅಪವಾದವೆನಿಸಿಲ್ಲ.
ತಮ್ಮಪಕ್ಷದಿಂದ ಟಿಕೆಟ್ ದೊರೆಯದ ಕಾರಣದಿಂದಾಗಿ ಪಕ್ಷವನ್ನೇ ತೊರೆದು,ತಮ್ಮ ನಿಷ್ಠೆಯನ್ನು ಕ್ಷಣಮಾತ್ರದಲ್ಲಿ ಬದಲಿಸುವ,ಪಕ್ಷದ ಕಚೇರಿಯ ಅಥವಾ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ತಮ್ಮ ಬೆಂಬಲಿಗರಿಂದ ನಾಶಪಡಿಸುವ ಮನೋಭಾವವುಳ್ಳ ಅಭ್ಯರ್ಥಿಗಳು,ಆಕಸ್ಮಿಕವಾಗಿ ಚುನಾವಣೆಯಲ್ಲಿ ಗೆದ್ದಲ್ಲಿ ಅಧಿಕಾರದ ಗದ್ದುಗೆಯನ್ನು ಏರಲು ಏನನ್ನೂ ಮಾಡಲು ಹಿಂಜರಿಯಲಾರರು. ರಾಜ್ಯದ ಮತ್ತು ದೇಶದ ಹಿತಾಸಕ್ತಿಗಿಂತ ತನ್ನ ವೈಯುಕ್ತಿಕ ಹಿತಾಸಕ್ತಿಯ ಬಗ್ಗೆ ಚಿಂತಿಸುವ ಇಂತಹ ರಾಜಕಾರಣಿಗಳಿಂದ ದಕ್ಷ ಹಾಗೂ ಸ್ವಚ್ಚ ಆಡಳಿತವನ್ನು ನಿರೀಕ್ಷಿಸುವಂತಿಲ್ಲ.
 ಸಮಾಜಸೇವೆಗಾಗಿ....
ತಾವು ಶಾಸಕರಾಗುವ,ಮಂತ್ರಿಯಾಗುವ ಅಥವಾ ಅಧಿಕಾರದ ಆಸೆಯಿಲ್ಲದೇ,ಕೇವಲ "ಸಮಾಜ ಸೇವೆ" ಮಾಡುವ ಉದ್ದೇಶದಿಂದಲೇ ಚುನಾವಣೆಯಲ್ಲಿ ಸ್ಪರ್ದಿಸುತ್ತಿರುವುದಾಗಿ ಘಂಟಾಘೋಷವಾಗಿ ಸಾರುವ ಅಭ್ಯರ್ಥಿಗಳ ಮಾತುಗಳನ್ನು ಆಯಾ ಪಕ್ಷಗಳ "ನಿಷ್ಠಾವಂತ" ಮತದಾರರು ನಂಬಿದರೂ,"ಪ್ರಜ್ಞಾವಂತ" ಮತದಾರರು ನಿಶ್ಚಿತವಾಗಿಯೂ ನಂಬಲಾರರು. ಏಕೆಂದರೆ ಚುನಾವಣೆಗಾಗಿ ಪ್ರತಿಯೊಬ್ಬ ಅಭ್ಯರ್ಥಿಯು ತನ್ನ ಶಕ್ತ್ಯಾನುಸಾರ ವ್ಯಯಿಸುವ ಹಣದಿಂದ,ಹಲವಾರು ವರ್ಷಗಳ ಕಾಲ ಸಮಾಜಸೇವೆ ಮಾಡಬಹುದು ಎನ್ನುವುದು ಮತದಾರರಿಗೆ ಅರಿಯದ ವಿಚಾರವೇನಲ್ಲ!.
ಅಧಿಕಾರದ ಗದ್ದುಗೆಯನ್ನೇರುವ ಏಕಮಾತ್ರ ಉದ್ದೇಶದಿಂದ ಜನ,ಹಣ ,ಜಾತಿಯ ಬಲಗಳೊಂದಿಗೆ ರಾಜಕೀಯ ಪ್ರಭಾವಗಳನ್ನು ಬಳಸಿಕೊಂಡು ಚುನಾವಣೆಗಳಲ್ಲಿ ಸ್ಪರ್ಧಿಸುವ,ತಮ್ಮ ಅನುಕೂಲಕ್ಕೆ ತಕ್ಕಂತೆ ಪಕ್ಷಗಳನ್ನು ಬದಲಾಯಿಸುವ ಸಾಕಷ್ಟು ಅಭ್ಯರ್ಥಿಗಳ ನಿಜವಾದ ಬಣ್ಣ ಈಗಾಗಲೇ ಬಯಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಮುನ್ನ ಅನಿವಾರ್ಯವಾಗಿ ಘೋಷಿಸಲೆಬೇಕಾದ ಇವರ ಆಸ್ತಿಪಾಸ್ತಿಗಳ ವಿವರಗಳು,ಇವರು ಮಾಡಿರುವ ಸಮಾಜಸೇವೆಗೆ ಸೂಕ್ತ ಸಾಕ್ಷಿಯಾಗಿವೆ.
ಸ್ಥಾನಮಾನ
ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಹುತೇಕ ಅಭ್ಯರ್ಥಿಗಳ ಮೊದಲ ಗುರಿ ಶಾಸಕರಾಗಿ ಆಯ್ಕೆಯಾಗುವುದೇ ಆಗಿದ್ದರೂ,ತದನಂತರ ಮಂತ್ರಿಮಂಡಲದಲ್ಲೊಂದು ಸ್ಥಾನವನ್ನು ಗಳಿಸುವತ್ತ ಕೇಂದ್ರೀಕೃತವಾಗಿರುತ್ತದೆ. ಅದೃಷ್ಟವಶಾತ್ ಮಂತ್ರಿಯಾಗಿ ಆಯ್ಕೆಯಾದಲ್ಲಿ "ಫಲವತ್ತಾದ ಖಾತೆ" ಯೊಂದನ್ನು ಪಡೆಯಲು ಹಾಗೂ ಮಂತ್ರಿಗಿರಿ ಲಭಿಸದಿದ್ದಲ್ಲಿ,ಯಾವುದಾದರೂ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಬಗಲಿಗೆ ಹಾಕಿಕೊಳ್ಳಲು ಹರಸಾಹಸವನ್ನೇ ನಡೆಸುತ್ತಾರೆ. ಇಂತಹ ಸ್ಥಾನಗಳು ಕ್ಯಾಬಿನೆಟ್ ದರ್ಜೆಯ ಸ್ಥಾನಕ್ಕೆ ಸಮನಾಗಿದ್ದು,ಇದರೊಂದಿಗೆ ಕಾರು,ಬಂಗಲೆ ಇತ್ಯಾದಿ ಸೌಕರ್ಯಗಳು ಉಚಿತವಾಗಿ ದೊರೆಯುತ್ತವೆ. ಆಕಸ್ಮಿಕವಾಗಿ ಇವೆಲ್ಲವೂ ಕೈತಪ್ಪಿದಲ್ಲಿ,ಸದನದ ಯಾವುದಾದರೂ ಸಮಿತಿಯಲ್ಲಿ ಸದಸ್ಯರಾಗಿ ಸೇರಿಕೊಳ್ಳುವ ಪ್ರಯತ್ನವನ್ನು ನಡೆಸುತ್ತಾರೆ.
ಇದರೊಂದಿಗೆ ಶಾಸಕರಿಗೆ ಅಲ್ಪಬೆಲೆಗೆ ದೊರೆಯುವ ಸೈಟು,ಕಾರು ಖರೀದಿಸಲು ಕಡಿಮೆಬಡ್ಡಿಯಲ್ಲಿ ಸಾಲ,ಉಚಿತ ಕಂಪ್ಯೂಟರ್,
ಸಹಾಯಕರೊಂದಿಗೆ ರಾಜ್ಯಾದ್ಯಂತ ಸಂಚರಿಸಲು ಬಸ್ ಪಾಸ್,ಉಚಿತ ದೂರವಾಣಿ,ಕೈತುಂಬಾ ಸಂಬಳ ಮತ್ತು ಭತ್ತೆಗಳು ದೊರೆಯುತ್ತವೆ. ಐದು ವರ್ಷಗಳ ಅವಧಿಯನ್ನು ಪೂರೈಸಿದಲ್ಲಿ ಜೀವನಪರ್ಯಂತ ಪಿಂಚಿಣಿಯೊಂದಿಗೆ ವೈದ್ಯಕೀಯ ಸೆಚ್ಚಕ್ಕಾಗಿ ಹಾಗೂ ದೇಶವನ್ನು ಸುತ್ತಾಡಲು ತಲಾ ಒಂದೊಂದು ಲಕ್ಷ ರೂಪಾಯಿಗಳು ರಾಜ್ಯದ ಬೊಕ್ಕಸದಿಂದ ಅನಾಯಾಸವಾಗಿ ಲಭಿಸುತ್ತದೆ. ಇಷ್ಟೆಲ್ಲಾ ಸವಲತ್ತುಗಳು ದೊರೆತರೂ ತೃಪ್ತಿಯಿಲ್ಲದ ಅನೇಕ ಸಮಾನ ಮನಸ್ಕ ಶಾಸಕರು ಒಂದಾಗಿ,ತಮ್ಮದೇ ಆದ ಬಣವನ್ನು ರಚಿಸಿ ಮಂತ್ರಿಮಂಡಲದ ಪುನಾರಚನೆಯ ಸಂದರ್ಭದಲ್ಲಿ ಮಂತ್ರಿಪದವಿಯನ್ನು ಗಳಿಸಲು ತಂತ್ರಗಳನ್ನು ರೂಪಿಸುತ್ತಲೇ ಇರುತ್ತಾರೆ.
ಚುನಾವಣೆಗಳ ಘೋಷಣೆಯಾದ ದಿನದಿಂದ ವಿಧಾನಸಭೆಯ ಸದಸ್ಯರ ಅವಧಿ ಮುಗಿಯುವ ಅಥವಾ ಅನಿರೀಕ್ಷಿತವಾಗಿ ವಿಸರ್ಜನೆಯಾಗುವ ಅವಧಿಯಲ್ಲಿ,ನಮ್ಮನ್ನು ಆಳುವ ರಾಜಕಾರಣಿಗಳು ನಡೆಸುವ ಕಸರತ್ತುಗಳು,ಮಕ್ಕಳು ಆಡುವ ಮರಕೋತಿ ಆಟವನ್ನು ಜ್ಞಾಪಿಸುತ್ತದೆ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು!.
ಡಾ. ಸಿ. ನಿತ್ಯಾನಂದ ಪೈ ,ಪುತ್ತೂರು


ಎಂಡೋ  ಸಂತ್ರಸ್ತರನ್ನು ಸಂತೈಸದ ರಾಜಕೀಯ ಪಕ್ಷಗಳು
ರಾಜ್ಯ ವಿಧಾನಸಭಾ ಚುನಾವಣೆಯ ಕ್ಷಣಗಣನೆ ಈಗಾಗಲೇ ಆರಂಭವಾಗಿದ್ದು,ಮತದಾರರನ್ನು ಓಲೈಸುವ ಸಲುವಾಗಿ ವಿವಿಧ ರಾಜಕೀಯ ಪಕ್ಷಗಳು ಅಂಗೈಯಲ್ಲಿ ಅರಮನೆಯನ್ನು ತೋರಿಸುತ್ತಿವೆ. ಜನಸಾಮಾನ್ಯರು ಅಪೇಕ್ಷಿಸದ ಕೊಡುಗೆಗಳನ್ನು ನೀಡುವ ಭರವಸೆಯನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮುದ್ರಿಸಿರುವ ಪಕ್ಷಗಳಿಗೆ,ರಾಜ್ಯದ ಸಹಸ್ರಾರು ಎಂಡೋಸಲ್ಫಾನ್ ಸಂತ್ರಸ್ತರ ಆರ್ತನಾದ ಕೇಳಿಸದೇ ಇರುವುದು ನಂಬಲಸಾಧ್ಯ ಎನಿಸುತ್ತದೆ.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವತಿಯಿಂದ ಸುಮಾರು ಎರಡು ದಶಕಗಳಿಗೂ ಅಧಿಕ ಕಾಲ, ತನ್ನ ನಾಲ್ಕು ವಲಯಗಳಲ್ಲಿ ವರ್ಷದಲ್ಲಿ ಹಲವಾರು ಬಾರಿ ವೈಮಾನಿಕವಾಗಿ ಸಿಂಪಡಿಸಿದ್ದ ಎಂಡೋಸಲ್ಫಾನ್ ಕೀಟನಾಶಕದ ದುಷ್ಪರಿಣಾಮಗಳಿಗೆ ನೂರಾರು ಅಮಾಯಕರು ಬಲಿಯಾಗಿದ್ದಾರೆ. ಅಂತೆಯೇ ಸಹಸ್ರಾರು ಜನರು ಶಾಶ್ವತ ಪರಿಹಾರವಿಲ್ಲದ ಮಾರಕ ಕಾಯಿಲೆಗಳಿಂದ ಹಾಗೂ ಶಾರೀರಿಕ-ಮಾನಸಿಕ ವೈಕಲ್ಯಗಳು,ಬಂಜೆತನ,ನಪುಂಸಕತ್ವ,ಅಪಸ್ಮಾರ,ಜನ್ಮದತ್ತ ಗಂಭೀರ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದು,ಜೀವಂತ ಶವಗಳಂತೆ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಇಂತಹ ಮಕ್ಕಳನ್ನು ಹಡೆದ ಮಾತಾಪಿತರು ತಮ್ಮ ಕಂದಮ್ಮಗಳ ದುಸ್ಥಿತಿಯನ್ನು ಕಂಡು ಕೊರಗುತ್ತಿದ್ದಾರೆ. ಇನ್ನು ಕೆಲವರಂತೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಸಹಸ್ರಾರು ಪ್ರಕರಣಗಳನ್ನು ಬೆಳಕಿಗೆ ತಂದಿರುವ ಹೋರಾಟಗಾರರು ಮತ್ತು ಮಾಧ್ಯಮಗಳಿಂದಾಗಿ,ಈ ಗಂಭೀರ ಸಮಸ್ಯೆಯು ಸರಕಾರದ ಗಮನಕ್ಕೆ ಬಂದಿದ್ದರೂ ನಿರ್ಲಕ್ಷಿಸಲಾಗಿದೆ. ಪ್ರಾಯಶಃ ಇದೇ ಕಾರಣದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರು ಮೇ ತಿಂಗಳಿನಲ್ಲಿ ಬೆಂಗಳೂರಿಗೆ ತೆರಳಿ,ಅವಶ್ಯಕತೆ ಇದ್ದಲ್ಲಿ ವಿಧಾನ ಸೌಧದ ಮುಂದೆ ಧರಣಿ ಮುಷ್ಕರ ನಡೆಸಲು ಸನ್ನದ್ಧರಾಗಿದ್ದಾರೆ.
ಮೂಗಿಗೆ ತುಪ್ಪ ಸವರಿದಂತೆ
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿಗೆ ಭೇಟಿನೀಡಿ,ಸುಮಾರು ೨೧೭ ಸಂತ್ರಸ್ತ ಕುಟುಂಬಗಳಿಗೆ ತಲಾ ೫೦ ಸಾವಿರ ರೂಪಾಯಿ ಪರಿಹಾರವನ್ನು ವಿತರಿಸಿದ್ದರು. ಇದಲ್ಲದೆ ಎಂಡೋಸಲ್ಫಾನ್ ಪೀಡಿತರಿಗೆ ಮಾಸಿಕ ಪಿಂಚಣಿಯನ್ನು ನೀಡುತ್ತಿದ್ದು,ಒಂದೆರಡು ಎಂಡೋ ಪಾಲನಾ ಕೇಂದ್ರಗಳನ್ನು ತೆರೆದಿರುವುದನ್ನು ಹೊರತುಪಡಿಸಿದರೆ ಇವರಿಗಾಗಿ ಸರಕಾರವು ಬೇರೇನನ್ನೂ ಮಾಡಿಲ್ಲ. ತದನಂತರ ಅನಿರೀಕ್ಷಿತವಾಗಿ ಮುಖ್ಯಮಂತ್ರಿಯ ಗದ್ದುಗೆಯನ್ನು ಏರಿದ್ದ,ಇದೇ ಜಿಲ್ಲೆಯವರೇ ಆಗಿರುವ ಸದಾನಂದ ಗೌಡರು ಎಂಡೋ ಪೀಡಿತರಿಗೆ ಕನಿಷ್ಠ ಪಕ್ಷ ಕೇರಳದ ಮಾದರಿಯಲ್ಲಿ ಪರಿಹಾರವನ್ನು ನೀಡುವ ಪ್ರಯತ್ನವನ್ನೇ ಮಾಡಿರಲಿಲ್ಲ. ವಿಶೇಷವೆಂದರೆ ಮತ್ತೆ ಮುಖ್ಯಮಂತ್ರಿಯ ಗಾದಿಯನ್ನೇರಿದ ಜಗದೀಶ ಶೆಟ್ಟರ್,ಇತ್ತೀಚಿಗೆ ಮಂಡಿಸಿದ್ದ ರಾಜ್ಯ ಮುಂಗಡ ಪತ್ರದಲ್ಲಿ ಹಲವಾರು ಮಠ-ಮಂದಿರಗಳಿಗೆ ೨೫೦ ಕೋಟಿಗೂ ಅಧಿಕ ಹಣವನ್ನು ನೀಡಿದರೂ,ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಮತ್ತೊಂದು ಪಾಲನಾ ಕೇಂದ್ರವನ್ನು ಆರಂಭಿಸಲು ಕೇವಲ ಎರಡು ಕೋಟಿ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿ ಕೈತೊಳೆದುಕೊಂಡಿದ್ದರು!.
ರಾಜ್ಯದ ಆರೋಗ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿಯವರಂತೂ "ಕೇರಳ ರಾಜ್ಯಕ್ಕೆ ಮಾದರಿ ಎನಿಸಲಿರುವ ಪ್ಯಾಕೇಜ್"ನೀಡುವುದಾಗಿ ಘೋಷಿಸಿದ್ದರೂ,ಇಂದಿನ ತನಕ ಇಂತಹ ಯಾವುದೇ ಪ್ಯಾಕೇಜ್ ಮಂಜೂರಾಗಿರುವುದು ನಮಗಂತೂ ತಿಳಿದಿಲ್ಲ. ಈ ರೀತಿಯಲ್ಲಿ ಸರಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ದಿನನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಸಹಸ್ರಾರು ಸಂತ್ರಸ್ತರ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳಿಗೆ ಕಿಂಚಿತ್ ಕಾಳಜಿಯೂ ಇಲ್ಲವೆಂದಲ್ಲಿ ನಿಶ್ಚಿತವಾಗಿಯೂ ಅತಿಶಯೋಕ್ತಿ ಎನಿಸಲಾರದು.
ಇದೀಗ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಾದರೂ ತಮ್ಮ ನೋವನ್ನು ಕಡಿಮೆಮಾಡಬಲ್ಲ,ಅವಶ್ಯಕ ಚಿಕಿತ್ಸೆಯನ್ನು ಪಡೆದುಕೊಳ್ಳಬಲ್ಲ,ತಮ್ಮದಲ್ಲದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಿರುವ ಸಂತ್ರಸ್ತರಿಗೆ  ನೆಮ್ಮದಿ ಮತ್ತು ಸ್ವಾಭಿಮಾನದಿಂದ ಜೀವಿಸಲು ಸೂಕ್ತ ಪರಿಹಾರವನ್ನು ಒಳಗೊಂಡ ಪ್ಯಾಕೇಜನ್ನು,ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಘೋಷಿಸಬಹುದು ಎಂದು ನಂಬಿದ್ದ ಎಂಡೋ ಪೀಡಿತರಿಗೆ ತೀವ್ರ ನಿರಾಸೆಯಾಗಿರುವುದು ಸತ್ಯ. ಅದೇ ರೀತಿಯಲ್ಲಿ ರಾಜಕೀಯ ಪಕ್ಷಗಳ ಪಾಲಿಗೆ ಎಂಡೋಸಲ್ಫಾನ್ ಸಂತ್ರಸ್ಥರು "ವೋಟ್ ಬ್ಯಾಂಕ್" ಆಗಿಲ್ಲದಿರುವುದೂ ಅಷ್ಟೇ ಸತ್ಯ!.
ಕೊನೆಯ ಮಾತು
ಚುನಾವಣೆಗಳ ಘೋಷಣೆಯಾದ ಬಳಿಕ ವಿವಿಧ ರಾಜಕೀಯ ಪಕ್ಷಗಳು ಬಿಡುಗಡೆ ಮಾಡಿದ್ದ ಪ್ರಣಾಳಿಕೆಗಳಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಸಲುವಾಗಿ ವಿಶೇಷ ಪ್ಯಾಕೇಜನ್ನು ಘೋಷಿಸದೆ ಇರುವುದನ್ನು ಕಂಡು ಸಿಟ್ಟಿಗೆದ್ದ ಹೋರಾಟಗಾರರು,ಈ ಬಗ್ಗೆ ತಮ್ಮ ಆಕ್ಷೇಪವನ್ನು ಮಾಧ್ಯಮಗಳ ಮೂಲಕ ವ್ಯಕ್ತಪಡಿಸಿದ್ದರು. ಪ್ರಾಯಶಃ ಇದನ್ನು ಗಮನಿಸಿದ್ದ ಜಿಲ್ಲೆಯ ಕೆಲ ಅಭ್ಯರ್ಥಿಗಳು,ಸಂತ್ರಸ್ಥರಿಗೆ ಸೂಕ್ತ ಪರಿಹಾರವನ್ನು ಸರಕಾರದಿಂದ ಕೊಡಿಸಲು ಪ್ರಯತ್ನಿಸುವುದಾಗಿ ಘೋಷಿಸಿದ್ದರು. ಅದೇನೇ ಇರಲಿ,ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿ ಅಧಿಕಾರದ ಸೂತ್ರವನ್ನು ಕೈಗೆತ್ತಿಕೊಳ್ಳಲಿರುವ ಪಕ್ಷವು ಎಂಡೋ ಸಂತ್ರಸ್ತರಿಗೆ ಅವಶ್ಯಕ ಪರಿಹಾರವನ್ನು ನೀಡುವತ್ತ ಶ್ರಮಿಸಬೇಕಿದೆ. ಇದಕ್ಕೆ ತಪ್ಪಿದಲ್ಲಿ ರಾಜಕಾರಣಿಗಳ ಬಗ್ಗೆ ಈಗಾಗಲೇ ಜಿಗುಪ್ಸೆಯನ್ನು ವ್ಯಕ್ತಪಡಿಸುತ್ತಿರುವ ಜನರೊಂದಿಗೆ, ಸಂತ್ರಸ್ತರ ವಿಶ್ವಾಸವನ್ನೂ ಕಳೆದುಕೊಳ್ಳಲಿದೆ.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು



  ಕಣ್ಣುಗಳಿಗೆ ಕಂಟಕವೆನಿಸಬಲ್ಲ ವಾಹನಗಳ ತಲೆದೀಪಗಳು
ಕತ್ತಲಾದ ಬಳಿಕ ರಸ್ತೆಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ನೀಲಿ,ಬಿಳಿ ಅಥವಾ ನಸುಹಳದಿ ಬಣ್ಣದ ಕಣ್ಣುಕುಕ್ಕುವ ತಲೆದೀಪಗಳನ್ನು ಬೆಳಗಿಸಿ,ಶರವೇಗದಲ್ಲಿ ಧಾವಿಸುವ ವಾಹನಗಳನ್ನು ನೀವು  ಕಂಡಿರಲೇಬೇಕು.ಈ ದೀಪಗಳ ಪ್ರಖರತೆಯಿಂದ ಕ್ಷಣಕಾಲ ವಿಚಲಿತರಾಗಿ ,ಇಂತಹ ವಾಹನಗಳ  ಚಾಲಕರಿಗೆ ಹಿಡಿಶಾಪವನ್ನು ಹಾಕಿರಲೂಬಹುದು.ಮೋಟಾರು ವಾಹನಗಳ ಕಾಯಿದೆಯನ್ನು  ರಾಜಾರೋಷವಾಗಿ ಉಲ್ಲಂಘಿಸುವ ಇಂತಹ ಪ್ರವೃತ್ತಿಗೆ ಕಡಿವಾಣವನ್ನು ತೊಡಿಸಲು ಸಂಬಂಧಿತ ಇಲಾಖೆಗಳ ಸಿಬಂದಿಗಳು ವಿಫಲರಾಗಿರುವುದರಿಂದ,ಅಯಾಚಿತ ಸಮಸ್ಯೆಗಳು ಉದ್ಭವಿಸುತ್ತಿವೆ.ಜೊತೆಗೆ ಅಮಾಯಕರ ಪ್ರಾಣಹಾನಿಗೂ ಕಾರಣವೆನಿಸುತ್ತಿದೆ.
-----------------------------      ----------------      -------------------------- 
ಅತ್ಯಂತ ಪ್ರಖರವಾದ ಬೆಳಕನ್ನು ಬರಿಗಣ್ಣಿನಿಂದ ದಿಟ್ಟಿಸಿ ನೋಡಿದಲ್ಲಿ ಮನುಷ್ಯನ ಕಣ್ಣುಗಳಿಗೆ ಹಾನಿ ಸಂಭವಿಸುತ್ತದೆ ಎನ್ನುವುದು ನಿಮಗೂ ತಿಳಿದಿರಬೇಕು.ಇದೇ ಕಾರಣದಿಂದಾಗಿ ಸೂರ್ಯಗ್ರಹಣದ ಸಂದರ್ಭದಲ್ಲಿ ಬರಿಗಣ್ಣಿನಿಂದ  ಸೂರ್ಯನನ್ನು ವೀಕ್ಷಿಸಬಾರದೆಂದು  ನೇತ್ರತಜ್ಞರು ಎಚ್ಚರಿಕೆಯನ್ನು  ನೀಡುತ್ತಾರೆ.ಆದರೆ ಪ್ರತಿನಿತ್ಯ ಕತ್ತಲಾದ ಬಳಿಕ ರಸ್ತೆಗಳಲ್ಲಿ ನಡೆದಾಡುವ ಪಾದಚಾರಿಗಳು,ವಾಹನಗಳ ಚಾಲಕರು ಮತ್ತು   ರಸ್ತೆಯನ್ನು ಬಳಸುವ ಅನ್ಯ ಜನರು,ತಮ್ಮ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳ ಪ್ರಖರವಾದ "ತಲೆ ದೀಪ"ಗಳಿಂದ ತಮ್ಮ ಕಣ್ಣುಗಳಿಗೆ ಸಂಭವಿಸಬಲ್ಲ ಹಾನಿಯನ್ನು ತಡೆಗಟ್ಟಲಾರದೆ ಚಡಪಡಿಸುತ್ತಾರೆ.
ಕ್ಸೆನಾನ್-ಹೇಲೋಜೆನ್  ದೀಪಗಳು
ನಿರಂತರವಾಗಿ ನಡೆಯುತ್ತಿರುವ ಸಂಶೋಧನೆಗಳಿಂದ ನಾವಿಂದು ಆವಿಷ್ಕರಿಸಿರುವ ಅನೇಕ ವಸ್ತುಗಳಲ್ಲಿ ಹೆಲೋಜೆನ್ ಮತ್ತು ಕ್ಸೆನಾನ್ ದೀಪಗಳೂ ಸೇರಿವೆ.ಮನುಷ್ಯನು ತನ್ನ ಸೌಕರ್ಯಕ್ಕಾಗಿ ಸೃಷ್ಟಿಸಿದ ಆದರೆ ತನ್ನದೇ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿನಮಿಸಬಲ್ಲ ವಸ್ತುಗಳಲ್ಲಿ ಈ ಪ್ರಖರವಾದ ವಾಹನಗಳ ತಲೆದೀಪಗಳೂ ಸೇರಿವೆ.ವಿಶೇಷವೆಂದರೆ ಈ ದೀಪಗಳು ಕಣ್ಣುಗಳಿಗೆ ಹಾನಿಯನ್ನು ಉಂಟುಮಾಡುವುದಲ್ಲದೆ,ಅಸಂಖ್ಯ ವಾಹನ ಅಪಘಾತಗಳಿಗೂ ಕಾರಣವೆನಿಸುತ್ತಿವೆ.ಏಕೆಂದರೆ ಈ ದೀಪಗಳ ಪ್ರಖರತೆಯಿಂದಾಗಿ, ವಿರುದ್ಧ ದಿಕ್ಕಿನಿಂದ ಬರುವ ವಾಹನಗಳ ಚಾಲಕರ ಕಣ್ಣುಗಳಿಗೆ ಮುಂದಿರುವ ರಸ್ತೆಯೇ ಕಾಣಿಸದಂತೆ ಭಾಸವಾಗುತ್ತದೆ.
ಇಂತಹ ದೀಪಗಳಲ್ಲಿ ನೀಲಿಬಣ್ಣದ ಅತ್ಯಂತ ಪ್ರಕಾಶಮಾನವಾದ ಬೆಳಕನ್ನು ಸೂಸುವ ಕ್ಸೆನಾನ್ ದೀಪಗಳು ಪ್ರಮುಖವಾಗಿವೆ.ಹಾಗೂ ಇದೇ ಕಾರಣದಿಂದಾಗಿ ಇವುಗಳನ್ನು ಅನೇಕ ದೇಶಗಳು ನಿಷೇಧಿಸಿವೆ.ಆದರೆ ಪ್ರೊಜೆಕ್ಟರ್ ಇರುವ ಕ್ಸೆನಾನ್ ದೀಪಗಳನ್ನು ಕೆಲದೇಶಗಳಲ್ಲಿ ಬಳಸಲಾಗುತ್ತಿದ್ದು,ಇವುಗಳ ಬೆಲೆಯೂ ಕೊಂಚ ದುಬಾರಿಯಾಗಿದೆ.ಇಂತಹ ದುಬಾರಿ ದೀಪಗಳು ವಿರುದ್ಧ ದಿಕ್ಕಿನಿಂದ ಬರುವ ವಾಹನಗಳ ಚಾಲಕರ ಕಣ್ಣುಕುಕ್ಕದಂತೆ ಮಂದಗೊಳಿಸಬಹುದಾಗಿದೆ.ಆದರೆ ನಮ್ಮಲ್ಲಿ ಬಳಸುತ್ತಿರುವ ಕ್ಸೆನಾನ್ ದೀಪಗಳಲ್ಲಿ ಪ್ರೊಜೆಕ್ಟರ್ ಇಲ್ಲದಿರುವುದರಿಂದ,ಇವುಗಳ ಬೆಲೆ ಸಾಕಷ್ಟು ಕಡಿಮೆಯಿದೆ.ಹಾಗೂ ಇದೇ ಕಾರಣದಿಂದಾಗಿ ಈ ದೀಪಗಳು ಅನ್ಯವಾಹನಗಳ ಚಾಲಕರು ಮತ್ತು ಪಾದಚಾರಿಗಳ ಕಣ್ಣುಗಳಿಗೆ ಹಾನಿಕಾರಕವಾಗಿ ಪರಿಣಮಿಸುತ್ತಿವೆ.ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಮೋಟಾರು ವಾಹನಗಳ ಕಾಯಿದೆಯಂತೆ ಇಂತಹ ಕಣ್ಣುಕುಕ್ಕುವ ದೀಪಗಳನ್ನು ವಾಹನಗಳ ತಲೆದೀಪಗಳಲ್ಲಿ ಬಳಸುವಂತಿಲ್ಲ,ಆದರೆ ಕಾಯಿದೆಗಳು-ನಿಯಮಗಳು ಇರುವುದೇ ಉಲ್ಲಂಘಿಸುವ ಸಲುವಾಗಿ ಎನ್ನುವ ಭಾರತೀಯರ ಕೆಟ್ಟ ಹವ್ಯಾಸದಿಂದಾಗಿ,ಇಂತಹ ನಿಷೇಧಿತ ದೀಪಗಳ ಬಳಕೆಯು ನಮ್ಮಲ್ಲಿ ಅವ್ಯಾಹತವಾಗಿ ಸಾಗುತ್ತಿದೆ.
ವಿಶೇಷವೆಂದರೆ ಪ್ರೊಜೆಕ್ಟರ್ ಇರುವ ಕ್ಸೆನಾನ್ ದೀಪಗಳನ್ನು ಅನೇಕ ವಿದೇಶಿ ನಿರ್ಮಿತ ಮೋಟಾರು ವಾಹನಗಳಲ್ಲಿ ಬಳಸಲಾಗುತ್ತಿದ್ದು,ಇವುಗಳು ವಿರುದ್ಧ ದಿಕ್ಕಿನಿಂದ ಬರುವ ವಾಹನಗಳ ಚಾಲಕರು ಹಾಗೂ ಪಾದಚಾರಿಗಳ ಕಣ್ಣುಗಳಿಗೆ ಹಾನಿಮಾಡುವುದಿಲ್ಲ.ಆದರೆ ನಮ್ಮದೇಶದಲ್ಲಿ ಕಡಿಮೆಬೆಲೆಗೆ ಲಭ್ಯವಿರುವ ಕ್ಸೆನಾನ್ ದೀಪಗಳಲ್ಲಿ ಪ್ರೊಜೆಕ್ಟರ್ ಇಲ್ಲದಿರುವುದರಿಂದ ಮತ್ತು ವಾಹನಗಳ ತಲೆದೀಪಗಳಿಗೆ ಕಪ್ಪುಬಣ್ಣ ಬಳಿಯುವ ಅಥವಾ ಕಪ್ಪು ಸ್ಟಿಕ್ಕರ್ ಆಂಟಿಸಬೇಕೆನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದ  ಕಾರಣದಿಂದಾಗಿ,ಅಮಾಯಕರ ಕಣ್ಣುಗಳಿಗೆ ಹಾನಿ ಸಂಭವಿಸುತ್ತದೆ.
ನಿಯಮಗಳ ಉಲ್ಲಂಘನೆ
ಸಾಮಾನ್ಯವಾಗಿ ಕತ್ತಲಾದ ಬಳಿಕ ದಾರಿದೀಪಗಳು ಬೆಳಗುವ ನಗರ -ಪಟ್ಟಣಗಳಲ್ಲಿ ಯಾವುದೇ ವಾಹನಗಳ ತಲೆದೀಪಗಳನ್ನು ಬೆಳಗಿಸುವಂತಿಲ್ಲ.ಮಹಾನಗರಗಳಲ್ಲಂತೂ ವಾಹನಗಳ ತಲೆದೀಪಗಳನ್ನು ಬೆಳಗಿಸುವುದನ್ನೇ ನಿಷೇಧಿಸಲಾಗಿದೆ.ಇಂತಹ ಸಂದರ್ಭದಲ್ಲಿ "ಪಾರ್ಕ್ ಲೈಟ್ "ಎಂದು ಕರೆಯಲ್ಪಡುವ ಪುಟ್ಟ ದೀಪಗಳನ್ನು ಮಾತ್ರ ಬೆಳಗಿಸಿ ವಾಹನಗಳನ್ನು ಚಲಾಯಿಸಬೇಕಾಗುವುದು.ಏಕೆಂದರೆ ಮಹಾನಗರಗಳಲ್ಲಿ ಇರುವ ಅಸಂಖ್ಯ ದಾರಿದೀಪಗಳು, ವಾಹನಗಳ ಚಾಲಕರು-ಪಾದಚಾರಿಗಳಿಗೆ ಅವಶ್ಯಕ ಪ್ರಮಾಣದ ಬೆಳಕನ್ನು ನೀಡುತ್ತವೆ.ಇದಲ್ಲದೇ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುವಾಗ,ವಿರುದ್ಧ ದಿಕ್ಕಿನಿಂದ ಯಾವುದೇ ವಾಹನ ಬರುತ್ತಿರುವುದನ್ನು ಕಂಡೊಡನೆ ತಮ್ಮ ವಾಹನದ ತಲೆದೀಪಗಳನ್ನು ಮಂದಗೊಳಿಸಲೆಬೇಕು. ಆದರೆ ನಮ್ಮ ರಾಜ್ಯದಲ್ಲಿ ಈ ನಿಯಮವನ್ನು ಯಾವುದೇ ವಾಹನಗಳ ಚಾಲಕರು ಪರಿಪಾಲಿಸುವುದಿಲ್ಲ.ಜೊತೆಗೆ ಸಾರಿಗೆ ಮತ್ತು ಆರಕ್ಷಕ ಇಲಾಖೆಗಳು ಇದನ್ನು ಅನುಷ್ಠಾನಿಸಲು ಆಸಕ್ತಿಯನ್ನೇ ತೋರುವುದಿಲ್ಲ.
ಮೋಟಾರು ವಾಹನಗಳ ಕಾಯಿದೆಯಂತೆ  ನಗರದ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿಯ ವೇಳೆ ಸಂಚರಿಸುವ ಪ್ರತಿಯೊಂದು ವಾಹನಗಳ ಚಾಲಕರು,ತಮ್ಮ ವಿರುದ್ಧ ದಿಕ್ಕಿನಿಂದ ಯಾವುದೇ ವಾಹನ ಬರುತ್ತಿರುವುದನ್ನು ಕಂಡೊಡನೆ ತಮ್ಮ ವಾಹನದ ತಲೆದೀಪವನ್ನು "ಮಂದ "ಗೋಳಿಸಲೇಬೇಕು.ಆದರೆ ಅನೇಕ ವಾಹನಗಳ ಚಾಲಕರು ಈ ನಿಯವನ್ನು ಉಲ್ಲಂಘಿಸುವುದರೊಂದಿಗೆ,ತಮ್ಮ ವಾಹನದ ದೀಪಗಳನ್ನು ಹಲವಾರು ಬಾರಿ ಆರಿಸಿ ಮತ್ತೆ ಉರಿಸುವ ಅಥವಾ ಮಂದಗೊಳಿಸದೇ ಇರುವ  ಕೆಟ್ಟ ಹವ್ಯಾಸವನ್ನು ಹೊಂದಿರುತ್ತಾರೆ.ಇದರಿಂದಾಗಿ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳ ಚಾಲಕರ ಕಣ್ಣು ಕೋರೈಸಿದಂತಾಗಿ,ಅಪಘಾತಗಳ ಸಂಭಾವ್ಯತೆ ಹೆಚ್ಚುವುದು.ಕಾಲುದಾರಿಗಳೇ ಇಲ್ಲದ ನಗರ-ಪಟ್ಟಣಗಳಲ್ಲಿನ ಪಾದಚಾರಿಗಳು,ಅದರಲ್ಲೂ ವಿಶೇಷವಾಗಿ ವಯೋವೃದ್ಧರು ಮತ್ತು ಮಕ್ಕಳು  ಇಂತಹ ಸನ್ನಿವೇಶಗಳಲ್ಲಿ ತಮ್ಮ ಪ್ರಾಣವನ್ನು ಉಳಿಸುವ ಸಲುವಾಗಿ ರಸ್ತೆಯ ಅಂಚಿಗೆ ಸರಿಯುವ ಆತುರದಲ್ಲಿ ಬಿದ್ದು ಕೈ-ಕಾಲುಗಳನ್ನು ಮುರಿದುಕೊಂಡ ನಿದರ್ಶನಗಳೂ ಸಾಕಷ್ಟಿವೆ.
ವಿಶೇಷವೆಂದರೆ ರಾತ್ರಿಯ ವೇಳೆಯಲ್ಲಿ ಸಾಮಾನ್ಯವಾಗಿ ವಾಹನಗಳ ತಪಾಸಣೆಯನ್ನೇ ಮಾಡದ(ಮಾಡಿದರೂ ಅನ್ಯ ಉದ್ದೇಶಕ್ಕಾಗಿ ಮಾಡುವ )ಸಾರಿಗೆ ಇಲಾಖೆಯ ಅಧಿಕಾರಿಗಳು  ಮತ್ತು ಸಂಚಾರ ವಿಭಾಗದ ಆರಕ್ಷಕರಿಂದಾಗಿ, ಪ್ರಖರವಾದ ತಲೆದೀಪಗಳನ್ನು ಬೆಳಗುತ್ತಾ ಸಾರಿಗೆ ನಿಯಮಗಳನ್ನು ಉಲ್ಲಂಘಿಸುವ ಚಾಳಿ ನಿರಂತರವಾಗಿ ಸಾಗುತ್ತಿದೆ.ತತ್ಪರಿಣಾಮವಾಗಿ ಸಹಸ್ರಾರು ಅಮಾಯಕರ ಕಣ್ಣುಗಳಿಗೆ ತೀವ್ರವಾದ ಹಾನಿ ಸಂಭವಿಸುವುದರೊಂದಿಗೆ,ಅಸಂಖ್ಯ ಅಪಘಾತಗಳಿಗೆ ಕಾರಣವೆನಿಸುತ್ತಿದೆ.ಇವೆಲ್ಲಕ್ಕೂ ಮಿಗಿಲಾಗಿ ನೂರಾರು ಜನರ ಮರಣಕ್ಕೆ ಕಾರಣವೆನಿಸಿರುವ ಈ ಸಮಸ್ಯೆಯ ಅರಿವಿದ್ದರೂ,ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಇದನ್ನು ಬಗೆಹರಿಸಲು ಕ್ರಮ ಕೈಗೊಳ್ಳದಿರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತಿದೆ.
ಕೆಲವೇ ವರ್ಷಗಳ ಹಿಂದಿನ ತನಕ ಪ್ರತಿಯೊಂದು ವಾಹನಗಳ ತಲೆದೀಪಗಳ ಮೇಲಿನ ಅರ್ಧಭಾಗಕ್ಕೆ ಕಪ್ಪು ಬಣ್ಣವನ್ನು ಬಳಿಯಲೇ ಬೇಕೆನ್ನುವ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿತ್ತು.ಈ ನಿಯಮವನ್ನು ಉಲ್ಲಂಘಿಸಿದವರಿಗೆ ದಂಡವನ್ನೂ ವಿಧಿಸಲಾಗುತ್ತಿತ್ತು.ಅಂತೆಯೇ ಅನೇಕ ಸ್ವಯಂಸೇವಾ ಸಂಘಟನೆಗಳು ಸಂಚಾರ ವಿಭಾಗದ ಆರಕ್ಷಕರೊಂದಿಗೆ ಜೊತೆಗೂಡಿ  ವರ್ಷದಲ್ಲಿ ಒಂದುಬಾರಿಯಾದರೂ ವಾಹನಗಳ ತಲೆದೀಪಗಳಿಗೆ ಉಚಿತವಾಗಿ ಕಪ್ಪುಬಣ್ಣವನ್ನು ಬಳಿಯುವ "ಕಾರ್ಯಕ್ರಮ "ವನ್ನು ಹಮ್ಮಿಕೊಳ್ಳುತ್ತಿದ್ದವು.ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಇಂತಹ ಕಾರ್ಯಕ್ರಮಗಳು ಕಣ್ಮರೆಯಾಗಿವೆ.ಇದರೊಂದಿಗೆ ಪ್ರಖರವಾದ ತಲೆದೀಪಗಳನ್ನು ಬೆಳಗಿಸುತ್ತಾ ಶರವೇಗದಲ್ಲಿ ವಾಹನಗಳನ್ನು ಚಲಾಯಿಸುವ ಪ್ರವೃತ್ತಿ ಹೆಚ್ಚುತ್ತಿದೆ.ಈ ಅಪಾಯಕಾರಿ ಪ್ರವೃತ್ತಿಯನ್ನು ಕ್ಷಿಪ್ರಗತಿಯಲ್ಲಿ ತೊಡೆದುಹಾಕದೆ ಇದ್ದಲ್ಲಿ,ಇನ್ನಷ್ಟು ಅಮಾಯಕರಿಗೆ ಕಂಟಕವಾಗಿ ಪರಿಣಮಿಸಲಿದೆ.
ಕೊನೆಯ ಮಾತು
ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ವರ್ಷಂಪ್ರತಿ "ರಸ್ತೆ ಸುರಕ್ಷತಾ ಸಪ್ತಾಹ"ವನ್ನು ತಪ್ಪದೇ ಆಚರಿಸಲಾಗುತ್ತದೆ.ಈ ಸಂದರ್ಭದಲ್ಲಿ ಸಾರಿಗೆ ನಿಯಮಗಳನ್ನು ಪರಿಪಾಲಿಸದೇ  ಇದ್ದಲ್ಲಿ ಸಂಭವಿಸುವ ಅನಾಹುತಗಳ ಬಗ್ಗೆ ಮತ್ತು ರಸ್ತೆ ಸುರಕ್ಷತೆಯ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ವೈವಿಧ್ಯಮಯ ಕಾರ್ಯಕ್ರಮಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗುತ್ತದೆ.ಆದರೆ ಸಂಚಾರ ವಿಭಾಗದ ಆರಕ್ಷಕರ "ದಂಡ"ಕ್ಕೂ ಬೆದರದ ಜನರು, "ಸಾಮ"ಕ್ಕೆ ಹೆದರುವುದೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು.
ಪ್ರಾಯಶಃ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ತಮ್ಮ ಸಿಬ್ಬಂದಿಗಳಿಗೆ ಸಾರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಟಾನಿಸುವಂತೆ  ಆದೇಶಿಸಿದಲ್ಲಿ,ಇಂತಹ ಪ್ರವೃತ್ತಿಯನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದಾಗಿದೆ.ತನ್ಮೂಲಕ ಗಣನೀಯ ಪ್ರಮಾಣದ ಅಪಘಾತಗಳನ್ನು ತಡೆಗಟ್ಟುವುದರೊಂದಿಗೆ,ಅಮಾಯಕರ ಕಣ್ಣುಗಳಿಗೆ ಸಂಭವಿಸುವ ಹಾನಿಯನ್ನು ಸುಲಭದಲ್ಲೇ ನಿವಾರಿಸಬಹುದಾಗಿದೆ.
 ಡಾ.ಸಿ.ನಿತ್ಯಾನಂದ ಪೈ ,ಪುತ್ತೂರು
 ಬಳಕೆದಾರರ ಹಿತರಕ್ಷಣಾ ವೇದಿಕೆ ,ಬೊಳುವಾರು,ಪುತ್ತೂರು -574201
ಬಳಕೆದಾರರ ಹಿತರಕ್ಷಣಾ ವೇದಿಕೆ