Monday, May 6, 2013


ಎಂಡೋ  ಸಂತ್ರಸ್ತರನ್ನು ಸಂತೈಸದ ರಾಜಕೀಯ ಪಕ್ಷಗಳು
ರಾಜ್ಯ ವಿಧಾನಸಭಾ ಚುನಾವಣೆಯ ಕ್ಷಣಗಣನೆ ಈಗಾಗಲೇ ಆರಂಭವಾಗಿದ್ದು,ಮತದಾರರನ್ನು ಓಲೈಸುವ ಸಲುವಾಗಿ ವಿವಿಧ ರಾಜಕೀಯ ಪಕ್ಷಗಳು ಅಂಗೈಯಲ್ಲಿ ಅರಮನೆಯನ್ನು ತೋರಿಸುತ್ತಿವೆ. ಜನಸಾಮಾನ್ಯರು ಅಪೇಕ್ಷಿಸದ ಕೊಡುಗೆಗಳನ್ನು ನೀಡುವ ಭರವಸೆಯನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮುದ್ರಿಸಿರುವ ಪಕ್ಷಗಳಿಗೆ,ರಾಜ್ಯದ ಸಹಸ್ರಾರು ಎಂಡೋಸಲ್ಫಾನ್ ಸಂತ್ರಸ್ತರ ಆರ್ತನಾದ ಕೇಳಿಸದೇ ಇರುವುದು ನಂಬಲಸಾಧ್ಯ ಎನಿಸುತ್ತದೆ.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವತಿಯಿಂದ ಸುಮಾರು ಎರಡು ದಶಕಗಳಿಗೂ ಅಧಿಕ ಕಾಲ, ತನ್ನ ನಾಲ್ಕು ವಲಯಗಳಲ್ಲಿ ವರ್ಷದಲ್ಲಿ ಹಲವಾರು ಬಾರಿ ವೈಮಾನಿಕವಾಗಿ ಸಿಂಪಡಿಸಿದ್ದ ಎಂಡೋಸಲ್ಫಾನ್ ಕೀಟನಾಶಕದ ದುಷ್ಪರಿಣಾಮಗಳಿಗೆ ನೂರಾರು ಅಮಾಯಕರು ಬಲಿಯಾಗಿದ್ದಾರೆ. ಅಂತೆಯೇ ಸಹಸ್ರಾರು ಜನರು ಶಾಶ್ವತ ಪರಿಹಾರವಿಲ್ಲದ ಮಾರಕ ಕಾಯಿಲೆಗಳಿಂದ ಹಾಗೂ ಶಾರೀರಿಕ-ಮಾನಸಿಕ ವೈಕಲ್ಯಗಳು,ಬಂಜೆತನ,ನಪುಂಸಕತ್ವ,ಅಪಸ್ಮಾರ,ಜನ್ಮದತ್ತ ಗಂಭೀರ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದು,ಜೀವಂತ ಶವಗಳಂತೆ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಇಂತಹ ಮಕ್ಕಳನ್ನು ಹಡೆದ ಮಾತಾಪಿತರು ತಮ್ಮ ಕಂದಮ್ಮಗಳ ದುಸ್ಥಿತಿಯನ್ನು ಕಂಡು ಕೊರಗುತ್ತಿದ್ದಾರೆ. ಇನ್ನು ಕೆಲವರಂತೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಸಹಸ್ರಾರು ಪ್ರಕರಣಗಳನ್ನು ಬೆಳಕಿಗೆ ತಂದಿರುವ ಹೋರಾಟಗಾರರು ಮತ್ತು ಮಾಧ್ಯಮಗಳಿಂದಾಗಿ,ಈ ಗಂಭೀರ ಸಮಸ್ಯೆಯು ಸರಕಾರದ ಗಮನಕ್ಕೆ ಬಂದಿದ್ದರೂ ನಿರ್ಲಕ್ಷಿಸಲಾಗಿದೆ. ಪ್ರಾಯಶಃ ಇದೇ ಕಾರಣದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರು ಮೇ ತಿಂಗಳಿನಲ್ಲಿ ಬೆಂಗಳೂರಿಗೆ ತೆರಳಿ,ಅವಶ್ಯಕತೆ ಇದ್ದಲ್ಲಿ ವಿಧಾನ ಸೌಧದ ಮುಂದೆ ಧರಣಿ ಮುಷ್ಕರ ನಡೆಸಲು ಸನ್ನದ್ಧರಾಗಿದ್ದಾರೆ.
ಮೂಗಿಗೆ ತುಪ್ಪ ಸವರಿದಂತೆ
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿಗೆ ಭೇಟಿನೀಡಿ,ಸುಮಾರು ೨೧೭ ಸಂತ್ರಸ್ತ ಕುಟುಂಬಗಳಿಗೆ ತಲಾ ೫೦ ಸಾವಿರ ರೂಪಾಯಿ ಪರಿಹಾರವನ್ನು ವಿತರಿಸಿದ್ದರು. ಇದಲ್ಲದೆ ಎಂಡೋಸಲ್ಫಾನ್ ಪೀಡಿತರಿಗೆ ಮಾಸಿಕ ಪಿಂಚಣಿಯನ್ನು ನೀಡುತ್ತಿದ್ದು,ಒಂದೆರಡು ಎಂಡೋ ಪಾಲನಾ ಕೇಂದ್ರಗಳನ್ನು ತೆರೆದಿರುವುದನ್ನು ಹೊರತುಪಡಿಸಿದರೆ ಇವರಿಗಾಗಿ ಸರಕಾರವು ಬೇರೇನನ್ನೂ ಮಾಡಿಲ್ಲ. ತದನಂತರ ಅನಿರೀಕ್ಷಿತವಾಗಿ ಮುಖ್ಯಮಂತ್ರಿಯ ಗದ್ದುಗೆಯನ್ನು ಏರಿದ್ದ,ಇದೇ ಜಿಲ್ಲೆಯವರೇ ಆಗಿರುವ ಸದಾನಂದ ಗೌಡರು ಎಂಡೋ ಪೀಡಿತರಿಗೆ ಕನಿಷ್ಠ ಪಕ್ಷ ಕೇರಳದ ಮಾದರಿಯಲ್ಲಿ ಪರಿಹಾರವನ್ನು ನೀಡುವ ಪ್ರಯತ್ನವನ್ನೇ ಮಾಡಿರಲಿಲ್ಲ. ವಿಶೇಷವೆಂದರೆ ಮತ್ತೆ ಮುಖ್ಯಮಂತ್ರಿಯ ಗಾದಿಯನ್ನೇರಿದ ಜಗದೀಶ ಶೆಟ್ಟರ್,ಇತ್ತೀಚಿಗೆ ಮಂಡಿಸಿದ್ದ ರಾಜ್ಯ ಮುಂಗಡ ಪತ್ರದಲ್ಲಿ ಹಲವಾರು ಮಠ-ಮಂದಿರಗಳಿಗೆ ೨೫೦ ಕೋಟಿಗೂ ಅಧಿಕ ಹಣವನ್ನು ನೀಡಿದರೂ,ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಮತ್ತೊಂದು ಪಾಲನಾ ಕೇಂದ್ರವನ್ನು ಆರಂಭಿಸಲು ಕೇವಲ ಎರಡು ಕೋಟಿ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿ ಕೈತೊಳೆದುಕೊಂಡಿದ್ದರು!.
ರಾಜ್ಯದ ಆರೋಗ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿಯವರಂತೂ "ಕೇರಳ ರಾಜ್ಯಕ್ಕೆ ಮಾದರಿ ಎನಿಸಲಿರುವ ಪ್ಯಾಕೇಜ್"ನೀಡುವುದಾಗಿ ಘೋಷಿಸಿದ್ದರೂ,ಇಂದಿನ ತನಕ ಇಂತಹ ಯಾವುದೇ ಪ್ಯಾಕೇಜ್ ಮಂಜೂರಾಗಿರುವುದು ನಮಗಂತೂ ತಿಳಿದಿಲ್ಲ. ಈ ರೀತಿಯಲ್ಲಿ ಸರಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ದಿನನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಸಹಸ್ರಾರು ಸಂತ್ರಸ್ತರ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳಿಗೆ ಕಿಂಚಿತ್ ಕಾಳಜಿಯೂ ಇಲ್ಲವೆಂದಲ್ಲಿ ನಿಶ್ಚಿತವಾಗಿಯೂ ಅತಿಶಯೋಕ್ತಿ ಎನಿಸಲಾರದು.
ಇದೀಗ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಾದರೂ ತಮ್ಮ ನೋವನ್ನು ಕಡಿಮೆಮಾಡಬಲ್ಲ,ಅವಶ್ಯಕ ಚಿಕಿತ್ಸೆಯನ್ನು ಪಡೆದುಕೊಳ್ಳಬಲ್ಲ,ತಮ್ಮದಲ್ಲದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಿರುವ ಸಂತ್ರಸ್ತರಿಗೆ  ನೆಮ್ಮದಿ ಮತ್ತು ಸ್ವಾಭಿಮಾನದಿಂದ ಜೀವಿಸಲು ಸೂಕ್ತ ಪರಿಹಾರವನ್ನು ಒಳಗೊಂಡ ಪ್ಯಾಕೇಜನ್ನು,ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಘೋಷಿಸಬಹುದು ಎಂದು ನಂಬಿದ್ದ ಎಂಡೋ ಪೀಡಿತರಿಗೆ ತೀವ್ರ ನಿರಾಸೆಯಾಗಿರುವುದು ಸತ್ಯ. ಅದೇ ರೀತಿಯಲ್ಲಿ ರಾಜಕೀಯ ಪಕ್ಷಗಳ ಪಾಲಿಗೆ ಎಂಡೋಸಲ್ಫಾನ್ ಸಂತ್ರಸ್ಥರು "ವೋಟ್ ಬ್ಯಾಂಕ್" ಆಗಿಲ್ಲದಿರುವುದೂ ಅಷ್ಟೇ ಸತ್ಯ!.
ಕೊನೆಯ ಮಾತು
ಚುನಾವಣೆಗಳ ಘೋಷಣೆಯಾದ ಬಳಿಕ ವಿವಿಧ ರಾಜಕೀಯ ಪಕ್ಷಗಳು ಬಿಡುಗಡೆ ಮಾಡಿದ್ದ ಪ್ರಣಾಳಿಕೆಗಳಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಸಲುವಾಗಿ ವಿಶೇಷ ಪ್ಯಾಕೇಜನ್ನು ಘೋಷಿಸದೆ ಇರುವುದನ್ನು ಕಂಡು ಸಿಟ್ಟಿಗೆದ್ದ ಹೋರಾಟಗಾರರು,ಈ ಬಗ್ಗೆ ತಮ್ಮ ಆಕ್ಷೇಪವನ್ನು ಮಾಧ್ಯಮಗಳ ಮೂಲಕ ವ್ಯಕ್ತಪಡಿಸಿದ್ದರು. ಪ್ರಾಯಶಃ ಇದನ್ನು ಗಮನಿಸಿದ್ದ ಜಿಲ್ಲೆಯ ಕೆಲ ಅಭ್ಯರ್ಥಿಗಳು,ಸಂತ್ರಸ್ಥರಿಗೆ ಸೂಕ್ತ ಪರಿಹಾರವನ್ನು ಸರಕಾರದಿಂದ ಕೊಡಿಸಲು ಪ್ರಯತ್ನಿಸುವುದಾಗಿ ಘೋಷಿಸಿದ್ದರು. ಅದೇನೇ ಇರಲಿ,ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿ ಅಧಿಕಾರದ ಸೂತ್ರವನ್ನು ಕೈಗೆತ್ತಿಕೊಳ್ಳಲಿರುವ ಪಕ್ಷವು ಎಂಡೋ ಸಂತ್ರಸ್ತರಿಗೆ ಅವಶ್ಯಕ ಪರಿಹಾರವನ್ನು ನೀಡುವತ್ತ ಶ್ರಮಿಸಬೇಕಿದೆ. ಇದಕ್ಕೆ ತಪ್ಪಿದಲ್ಲಿ ರಾಜಕಾರಣಿಗಳ ಬಗ್ಗೆ ಈಗಾಗಲೇ ಜಿಗುಪ್ಸೆಯನ್ನು ವ್ಯಕ್ತಪಡಿಸುತ್ತಿರುವ ಜನರೊಂದಿಗೆ, ಸಂತ್ರಸ್ತರ ವಿಶ್ವಾಸವನ್ನೂ ಕಳೆದುಕೊಳ್ಳಲಿದೆ.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು

No comments:

Post a Comment