Tuesday, May 28, 2013


 ಟ್ರಾಫಿಕ್  ಜಾಮ್ ಗೆ ಕಾರಣವೆನಿಸುವ ಮೆರವಣಿಗೆಗಳು
ದೇಶದ ಪ್ರತಿಯೊಂದು ನಗರಗಳು,ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನನಿತ್ಯ ಸಂಭವಿಸುತ್ತಿರುವ ಟ್ರಾಫಿಕ್ ಜಾಮ್ ನಲ್ಲಿ ಒಂದಲ್ಲ ಒಂದುಬಾರಿ ನೀವೂ ಸಿಲುಕಿರಲೇಬೇಕು. ಅದರಲ್ಲೂ ತುರ್ತು ಸಂದರ್ಭಗಳಲ್ಲಿ ಸಿಲುಕಿಕೊಂಡು ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸಲಾರದೇ ಅಸಹಾಯಕರಾಗಿ ಕೈ ಹಿಸುಕಿಕೊಂಡು ಚಡಪಡಿಸಿರಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಸಮಸ್ಯೆಗೆ ಕಾರಣಕರ್ತರಾದ ವ್ಯಕ್ತಿಗಳು ಅಥವಾ ಸಂಘಟನೆಗಳನ್ನು ಮನಸಾರೆ ಶಪಿಸಿರಲೂ ಬಹುದು. ಆದರೆ ಹೊಟ್ಟೆಯಲ್ಲಿ ಸಿಟ್ಟಿದ್ದರೂ,ರಟ್ಟೆಯಲ್ಲಿ ಬಲವಿಲ್ಲದ ಕಾರಣದಿಂದಾಗಿ ತೆಪ್ಪಗೆಕುಳಿತಿರಬಹುದು!.
ಇತ್ತೀಚಿಗೆ ನಡೆದಿದ್ದ ವಿಧಾನ ಸಭಾ ಚುನಾವಣೆಗಳ ಫಲಿತಾಂಶ ಪ್ರಕಟವಾದ ಬಳಿಕ,ವಿವಿಧ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಅಭ್ಯರ್ಥಿಗಳ ವಿಜಯೋತ್ಸವದ ಮೆರವಣಿಗೆಗಳು ಇಂದಿಗೂ ನಡೆಯುತ್ತಿವೆ. ನೂರಾರು ಕಾರ್ಯಕರ್ತರು,ಅಭಿಮಾನಿಗಳು ಮತ್ತು ಬೆಂಬಲಿಗರೊಂದಿಗೆ ಹಲವಾರು ವಾಹನಗಳು ಮತ್ತು ಬಾಜಾಬಜಂತ್ರಿಗಳೊಂದಿಗೆ ನಡೆಯುವ ಇಂತಹ ಮೆರವಣಿಗೆಗಳು,ಹಲವಾರು ತಾಸುಗಳ ಕಾಲ ಟ್ರಾಫಿಕ್ ಜಾಮ್ ಸಮಸ್ಯೆಗೆ ಕಾರಣವೆನಿಸುತ್ತಿವೆ. ಜನಸಾಮಾನ್ಯರಿಗೆ ಅಯಾಚಿತ ತೊಂದರೆಗಳಿಗೂ ಕಾರಣವೆನಿಸುತ್ತಿವೆ.
ಟ್ರಾಫಿಕ್ ಜಾಮ್ ಸಮಸ್ಯೆಗೆ ಕಾರಣಗಳೇನು?
ಅದೇನೇ ಇರಲಿ, ಈ ಟ್ರಾಫಿಕ್ ಜಾಮ್ ಸಂಭವಿಸಲು ಅನೇಕ ಕಾರಣಗಳಿವೆ. ಇವುಗಳಲ್ಲಿ ರಾಜಕೀಯ ಪಕ್ಷಗಳು-ಇತರ ಸಂಘಟನೆಗಳು ನಡೆಸುವ ರಸ್ತೆ ತಡೆ-ಬಂದ್,ಅಗಲಕಿರಿದಾದ ರಸ್ತೆಗಳು,ಪಾದಚಾರಿಗಳಿಗೆ ಅತ್ಯವಶ್ಯಕ ಎನಿಸುವ ಕಾಲುದಾರಿಗಳ ಅಭಾವ,ರಸ್ತೆಗಳ ದುರಸ್ತಿ-ಡಾಮರೀಕರಣದ ಕಾಮಗಾರಿಗಳು,ರಸ್ತೆಬದಿಗಳಲ್ಲಿ ವಾಹನಗಳ ನಿಲುಗಡೆ,ಅತಿಯಾದ ವಾಹನಗಳ ಸಂಖ್ಯೆ,ಸಾರಿಗೆ ನಿಯಮಗಳನ್ನು ಪರಿಪಾಲಿಸದ ವಾಹನ ಚಾಲಕರು,ಅಲೆಮಾರಿ ಜಾನುವಾರುಗಳ ಹಾವಳಿ,ಹಬ್ಬ-ಹರಿದಿನಗಳು ಅಥವಾ ಸಭೆ-ಸಮಾರಂಭಗಳು,ಶಾಲಾಕಾಲೇಜುಗಳು ಹಾಗೂ ಕಛೇರಿಗಳು ಆರಂಭವಾಗುವ ಮತ್ತು ಮುಚ್ಚುವ ಸಮಯ,ರಸ್ತೆ ಅಪಘಾತಗಳು,  ಧಾರ್ಮಿಕ ಹಾಗೂ ರಾಜಕೀಯ ಪಕ್ಷಗಳ ಮೆರವಣಿಗೆಗಳು ಮತ್ತು ವಾಹನಗಳ ರೇಲಿಗಳು ಪ್ರಮುಖವಾಗಿವೆ.
ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಒಂದಿಷ್ಟು ಅಡಚಣೆ ಸಂಭವಿಸಿದೊಡನೆ ಸಾಲುಗಟ್ಟಿ ನಿಲ್ಲುವ ವಾಹನಗಳನ್ನು ದಾಟಿ ಮುನ್ನುಗುವ ಇತರ ವಾಹನಗಳಿಂದಾಗಿ ಟ್ರಾಫಿಕ್ ಜಾಮ್ ಅಭೇದ್ಯವೆನಿಸುತ್ತದೆ. ಇಂತಹ ಸಂದರ್ಭದಲ್ಲಿ ದ್ವಿಚಕ್ರ-ತ್ರಿಚಕ್ರ ವಾಹನಗಳ ಚಾಲಕರ ಆತುರದಿಂದಾಗಿ,ಸಮಸ್ಯೆಯು ಇನ್ನಷ್ಟು ಜಟಿಲಗೊಳ್ಳುತ್ತದೆ.
ಸಂಚಾರ ವಿಭಾಗದ ಆರಕ್ಷಕರ ಅನುಪಸ್ಥಿತಿಯಲ್ಲಿ ಸಹನೆಯಿಲ್ಲದ ಚಾಲಕರ ನಡುವೆ ವಾಗ್ಯುದ್ಧವೇ ನಡೆಯುತ್ತದೆ. ತತ್ಪರಿಣಾಮವಾಗಿ 
ನೂರಾರು ವಾಹನಗಳಿಂದ ತುಂಬಿ ತುಳುಕುವ ರಸ್ತೆಯಲ್ಲಿ ಪಾದಚಾರಿಗಳು ಸಂಚರಿಸುವುದೂ ಅಸಾಧ್ಯವೆನಿಸುತ್ತದೆ.
ಆದರೆ ಇವೆಲ್ಲಕ್ಕೂ ಮಿಗಿಲಾಗಿ ಸಾಲುಗಟ್ಟಿ ನಿಂತ ಅಸಂಖ್ಯ ವಾಹನಗಳ ಎಂಜಿನ್ ಗಳು ಕಾರ್ಯಾಚರಿಸುತ್ತಲೇ ಇರುವುದರಿಂದ ಅಗಾಧ ಪ್ರಮಾಣದ ಇಂಧನವು ಪೋಲಾಗುತ್ತದೆ. ಜೊತೆಗೆ ನೂರಾರು ವಾಹನಗಳು ಏಕಕಾಲದಲ್ಲಿ ಉಗುಳುವ ಹೊಗೆಯಿಂದಾಗಿ ಸುತ್ತಮುತ್ತಲ ಪರಿಸರವು ಕಲುಷಿತಗೊಳ್ಳುತ್ತದೆ. ಹಾಗೂ ಈ ಕಲುಷಿತ ಗಾಳಿಯನ್ನು ಸೇವಿಸಿದ ಜನರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮವನ್ನು ಬೀರುತ್ತದೆ. ಪುಟ್ಟ ಮಕ್ಕಳ ಪಾಲಿಗೆ ಕಾರ್ಬನ್ ಡೈ ಆಕ್ಸೈಡ್ ಮಿಶ್ರಿತ ಧೂಮವು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಇಷ್ಟೆಲ್ಲಾ ಸಾಲದೆನ್ನುವಂತೆ ಸಾಲುಗಟ್ಟಿ ನಿಂತ ವಾಹನಗಳ ಚಾಲಕರು ಎಡೆಬಿಡದೇ ಬಾರಿಸುವ ಕರ್ಕಶವಾದ ಹಾರ್ನ್ ಗಳಿಂದಾಗಿ ಶಬ್ದಮಾಲಿನ್ಯವೂ ಉಂಟಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತಡೆಗಟ್ಟಲು, ಸಂಬಂಧಿತ ಇಲಾಖೆಗಳ ಅಧಿಕಾರಿಗಳಲ್ಲಿನ  ಇಚ್ಛಾಶಕ್ತಿಯ ಕೊರತೆಯೂ ಕಾರಣವೆನಿಸಿದೆ. ಜೊತೆಗೆ ಈ ಸಾರ್ವತ್ರಿಕ ಸಮಸ್ಯೆಯನ್ನು ತಡೆಗಟ್ಟಲು ಅವಶ್ಯಕ ನಿಯಮಗಳನ್ನು ರೂಪಿಸಬೇಕಾದ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ರಾಜಕೀಯ ನೇತಾರರು-ಪಕ್ಷಗಳು,ತಾವೇ ನಡೆಸುವ ರಸ್ತೆ ತಡೆ,ಧರಣಿ ಮುಷ್ಕರ,ಬಂದ್,ಮೆರವಣಿಗೆ ಮತ್ತು ರೇಲಿಗಳಿಗೆ ಅಡಚನೆಯಾಗಬಹುದು ಎನ್ನುವ ಕಾರಣದಿಂದಾಗಿ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನುವ ಸಂದೇಹ ದೇಶದ ಜನತೆಯನ್ನು ಕಾಡುತ್ತಿರುವುದು ಮಾತ್ರ ಸುಳ್ಳೇನಲ್ಲ!.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು
ಫೋಟೋ-ಕಾಂಗ್ರೆಸ್ಸ್ ಪಕ್ಷದ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ್ದ ಟ್ರಾಫಿಕ್ ಜಾಮ್

No comments:

Post a Comment