Thursday, May 2, 2013

ಕಡಲ ಒಡಲಿನಲ್ಲೂ ತುಂಬಿರುವ ಪ್ಲಾಸ್ಟಿಕ್ ತ್ಯಾಜ್ಯ
ರಾಜ್ಯದ ಬಹುತೇಕ ಹಳ್ಳಿ,ಪಟ್ಟಣ,ನಗರ ಮತ್ತು ಮಹಾನಗರಗಳಲ್ಲಿ ಪ್ರತಿನಿತ್ಯ ಉತ್ಪನ್ನವಾಗುತ್ತಿರುವ ತ್ಯಾಜ್ಯಗಳ ಒಂದು ಅಂಶವು,ಚರಂಡಿಗಳನ್ನು ಸೇರಿ ಮಳೆನೀರಿನೊಂದಿಗೆ ಹರಿಯುತ್ತಾ ಅಂತಿಮವಾಗಿ ಸಮುದ್ರವನ್ನು ಸೇರುತ್ತಿದೆ.ತತ್ಪರಿಣಾಮವಾಗಿ ಕಡಲ ಒಡಲಿನಲ್ಲಿ ಬೃಹತ್ ಪ್ರಮಾಣದ ಪ್ಲಾಸ್ಟಿಕ್ ಮತ್ತು ಅನ್ಯ ತ್ಯಾಜ್ಯಗಳು ತುಂಬಿದ್ದು,ಅಸಂಖ್ಯ ಜಲಚರಗಳು ಮತ್ತು ಕಡಲ ತಡಿಯಲ್ಲಿನ ಪಕ್ಷಿಸಂಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.ಈ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಮುದ್ರಗಳ ತಳದಿಂದ ತೆರವುಗೊಳಿಸುವುದು ಅಕ್ಷರಶಃ ಅಸಾಧ್ಯವೆನಿಸಿದೆ.ನಾವಿಂದು ಬಳಸಿ ಎಸೆಯುತ್ತಿರುವ ಪ್ಲಾಸ್ಟಿಕ್ ಉತ್ಪನ್ನಗಳ ಪ್ರಮಾಣವನ್ನು ನಿಯಂತ್ರಿಸದೇ ಇದ್ದಲ್ಲಿ,ಈ ಸಮಸ್ಯೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಉಲ್ಬಣಿಸಲಿದೆ.
  ಚರಂಡಿಗಳಲ್ಲಿ ತ್ಯಾಜ್ಯ
ರಾಜ್ಯದ ಅಧಿಕತಮ ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯಸಂಗ್ರಹ,ವಿಂಗಡಣೆ ಮತ್ತು ವಿಲೇವಾರಿಗಳು ವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿಲ್ಲ.ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಿಂದಲೇ ಸಂಗ್ರಹಿಸಿ,ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಸಮರ್ಪಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯೂ ಅನೇಕ ನಗರ-ಪಟ್ಟಣಗಳಲ್ಲಿ ಜಾರಿಗೊಂಡಿಲ್ಲ.ಕಸದ ತೊಟ್ಟಿಗಳಿಲ್ಲದ ನಿರ್ಮಲಗ್ರಾಮಗಳಲ್ಲೂ,ಕಸದ ರಾಶಿಗಳು ಕಣ್ಮರೆಯಾಗಿಲ್ಲ.ಅತ್ಯಾಧುನಿಕ ತ್ಯಾಜ್ಯವಿಲೇವಾರಿ ಘಟಕಗಳಿದ್ದಲ್ಲೂ,ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ ನಡೆಯುತ್ತಿಲ್ಲ.ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ಮತ್ತು ಕಂಡಲ್ಲಿ ಕಸವನ್ನು ಎಸೆಯುವ ಜನಸಾಮಾನ್ಯರ ಕೆಟ್ಟ ಹವ್ಯಾಸದಿಂದಾಗಿ,ದೇಶದ ಮೂಲೆ ಮೂಲೆಗಳಲ್ಲೂ ಕಣ್ಣುಹಾಯಿಸಿದಲ್ಲೆಲ್ಲ ಅಗಾಧಪ್ರಮಾಣದ ಕಸದ ರಾಶಿಗಳು ಕಾಣಸಿಗುವುದು ಸುಳ್ಳೇನಲ್ಲ.
                    ಸಾಮಾನ್ಯವಾಗಿ ತಮ್ಮ ವಸತಿ-ವಾಣಿಜ್ಯ ಕಟ್ಟಡಗಳಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳನ್ನು ಸಂಗ್ರಹಿಸಿ,ಸುರಕ್ಷಿತವಾಗಿ ವಿಲೇವಾರಿ ಮಾಡುವುದರ ಹೊರತಾಗಿ ಸಮೀಪದಲ್ಲಿನ ಚರಂಡಿಗಳು,ರಸ್ತೆಯಬದಿಗಳಲ್ಲಿ ಅಥವಾ ಖಾಲಿಜಾಗಗಳಲ್ಲಿ ಎಸೆಯುವ ಹವ್ಯಾಸ ಅನೇಕರಲ್ಲಿದೆ.ಈ ತ್ಯಾಜ್ಯಗಳು ಕ್ರಮೇಣ ಚರಂಡಿಗಳಲ್ಲಿ ಸಂಗ್ರಹವಾಗಿ,ಮಳೆಗಾಲದಲ್ಲಿ ಮಳೆನೀರಿನೊಂದಿಗೆ ಹರಿದು ನದಿಗಳನ್ನು ಸೇರುತ್ತವೆ.ಹಾಗೂ ನದಿಯನೀರಿನೊಂದಿಗೆ ಹರಿಯುತ್ತಾ ಸಮುದ್ರವನ್ನು ಸೇರುತ್ತವೆ.ಇವುಗಳಲ್ಲಿ ಶೇಕಡಾ ೮೦ ರಷ್ಟು ತ್ಯಾಜ್ಯಗಳು ಭೂಮಿಯಿಂದ,ಅರ್ಥಾತ್ ಲ್ಯಾಂಡ್ ಫಿಲ್ ಸೈಟ್,ಕಡಲಿನ ಕಿನಾರೆಗಳು(ಬೀಚ್) ಮತ್ತು ನಗರ-ಪಟ್ಟಣಗಳಿಂದ ಮಳೆಯ ನೀರಿನೊಂದಿಗೆ ಹರಿದುಬರುತ್ತವೆ.ಇನ್ನುಳಿದ ಶೇಕಡಾ ೨೦ ರಷ್ಟು ತ್ಯಾಜ್ಯಗಳು ಹಡಗುಗಳು ಮತ್ತು ಸಮುದ್ರಗಳ ಸಮೀಪದಲ್ಲಿರುವ ಉದ್ದಿಮೆಗಳಿಂದ ಆಕಸ್ಮಿಕ ಅಥವಾ ಉದ್ದೇಶಪೂರ್ವಕವಾಗಿ ವಿಸರ್ಜಿಸಲ್ಪಡುತ್ತವೆ.
                    ಸಮುದ್ರಗಳಲ್ಲಿ ಪುಟ್ಟ ದ್ವೀಪಗಳಂತೆ ಕಾಣುವ ತ್ಯಾಜ್ಯಗಳು ತೇಲುತ್ತಿರುವುದನ್ನು ಅನೇಕರು ಕಂಡಿರಬಹುದು.ಜಗತ್ತಿನ ಪ್ರತಿಯೊಂದು ಸಮುದ್ರಗಳ ತಳದಲ್ಲಿ ಮತ್ತು ಮೇಲ್ಮೈಯಲ್ಲಿ ಕಾಣಸಿಗುತ್ತಿರುವ ತ್ಯಾಜ್ಯಗಳಿಂದಾಗಿ,ಒಂದು ಲಕ್ಷಕ್ಕೂ ಅಧಿಕ ಕಡಲಾಮೆಗಳು ಮತ್ತು ಇತರ ಜಲಚರಗಳು ವರ್ಷಂಪ್ರತಿ ಸಾಯುತ್ತಿವೆ.
                     ಸಮುದ್ರಗಳಲ್ಲಿ ತುಂಬಿರುವ ಪ್ಲಾಸ್ಟಿಕ್ ತ್ಯಾಜ್ಯಗಳಲ್ಲಿ ವಿವಿಧರೀತಿಯ ಮತ್ತು ಗಾತ್ರದ ಪ್ಲಾಸ್ಟಿಕ್ ಚೀಲಗಳು,ಬಲೂನುಗಳು,ಹಗ್ಗ,ಮೀನುಗಾರರು ಕಳೆದುಕೊಂಡ ಗಾಳ-ಬಲೆಗಳು,ಸಿಗರೆಟ್ ಲೈಟರ್,ಪ್ಲಾಸ್ಟಿಕ್ ಬಾಟಲಿ,ಬಳಸಿ ಎಸೆದ ಸಿರಿಂಜ್ ಹಾಗೂ ಇತರ ವೈದ್ಯಕೀಯ ತ್ಯಾಜ್ಯಗಳು ಪ್ರಮುಖವಾಗಿವೆ.ಫ್ರಾನ್ಸ್ ಮತ್ತು ಇಟಲಿ ದೇಶಗಳ ವರದಿಯೊಂದರಂತೆ,ಸಮುದ್ರದ ಒಂದು ಚದರ ಕಿಲೋಮೀಟರ್ ಪ್ರದೇಶದಲ್ಲಿ ಸುಮಾರು ೧೯೩೫ ಪ್ಲಾಸ್ಟಿಕ್ ತ್ಯಾಜ್ಯಗಳು ಪತ್ತೆಯಾಗಿವೆ.ಸಮುದ್ರದಲ್ಲಿನ ಒಟ್ಟು ತ್ಯಾಜ್ಯಗಳಲ್ಲಿ ಇಂತಹ ತ್ಯಾಜ್ಯಗಳ ಪ್ರಮಾಣವು ಶೇ.೭೭ರಷ್ಟಿದ್ದು,ಇವುಗಳಲ್ಲಿ ಶೇ.೮೩ ರಷ್ಟು ಪ್ಲಾಸ್ಟಿಕ್ ಕೈಚೀಲಗಳೇ ಆಗಿದ್ದವು!.
                     ಜಾಗತಿಕ ಮಟ್ಟದಲ್ಲಿ ವರ್ಷಂಪ್ರತಿ ೧೦೫ ದಶಲಕ್ಷ ಟನ್ ಪ್ಲಾಸ್ಟಿಕ್ ಉತ್ಪಾದಿಸಲ್ಪಡುತ್ತಿದೆ ಎಂದು ಅಂದಾಜಿಸಲಾಗಿದ್ದು,ಈ ಪ್ರಮಾಣವು ದಿನೇ ದಿನೇ ಹೆಚ್ಚುತ್ತಿದೆ.ಇದಕ್ಕೆ ಅನುಗುಣವಾಗಿ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣವೂ ಹೆಚ್ಚುತ್ತಿದ್ದು,ಇದರಲ್ಲಿ ಕನಿಷ್ಠ ಶೇಕಡಾ ೧೦ರಷ್ಟು ತ್ಯಾಜ್ಯಗಳು ಸಮುದ್ರದ ಗರ್ಭವನ್ನು ಸೇರುತ್ತಿವೆ!.
ಜಲಚರಗಳಿಗೆ ಮಾರಕ
ಕಾರಣಾಂತರದಿಂದ ಸಮುದ್ರವನ್ನು ಸೇರಿದ ಪ್ಲಾಸ್ಟಿಕ್ ತ್ಯಾಜ್ಯಗಳು ಕಾಲಕ್ರಮೇಣ ಸಣ್ಣಪುಟ್ಟ ಚೂರುಗಳಾಗಿ ಕಡಲ ತಳವನ್ನು ಸೇರುತ್ತವೆ.ಮೀನು ಮತ್ತು ಇತರ ಜಲಚರಗಳು ಇದನ್ನು ಸೇವಿಸಿದಲ್ಲಿ,ಜಲಚರಗಳ ಜೀರ್ಣಾಂಗಗಳಲ್ಲಿ ಸಿಲುಕಿ ಅಡಚಣೆಯನ್ನು ಉಂಟುಮಾಡುವುದರಿಂದಾಗಿ,ಆಹಾರವನ್ನು ಸೇವಿಸಲು ಆಗದೆ ಸತ್ತುಹೋಗುತ್ತವೆ.ಇದಲ್ಲದೇ ಸಮುದ್ರದಲ್ಲಿ ಇಲ್ಲದ ಹಲವಾರು ವಿಷಕಾರಕ ರಾಸಾಯನಿಕಗಳನ್ನು ಪ್ಲಾಸ್ಟಿಕ್ ತ್ಯಾಜ್ಯಗಳು ಬಿಡುಗಡೆ ಮಾಡುವುದರಿಂದ,ಜಲಚರಗಳ ಬೆಳವಣಿಗೆ ಮತ್ತು ಜೀವಕ್ಕೆ ಹಾನಿಕಾರಕವಾಗಿ ಪರಿಣಮಿಸುತ್ತವೆ.
ಪರಿಹಾರವೇನು?
           ಸಮುದ್ರದ ತಳದಲ್ಲಿ ಈಗಾಗಲೇ ಅಗಾಧ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿದ್ದು,ಇವುಗಳನ್ನು ಯಾವುದೇ ವಿಧಾನದಿಂದ ತೆರವುಗೊಳಿಸುವುದು ಅಕ್ಷರಶಃ ಅಸಾಧ್ಯವೂ ಹೌದು.ಭೂಮಿಯಿಂದ,ಸಮುದ್ರದಲ್ಲಿ ಸಂಚರಿಸುವ ಹಡಗುಗಳಿಂದ ಮತ್ತು ಕಡಲ ತಡಿಯಲ್ಲಿರುವ ಉದ್ದಿಮೆಗಳಿಂದ ತ್ಯಾಜ್ಯಗಳು ಸಾಗರವನ್ನು ಸೇರುವುದನ್ನು ತಕ್ಷಣದಿಂದಲೇ ತಡೆಗಟ್ಟಿ ದರೂ,ಈಗಾಗಲೇ ಸಂಗ್ರಹವಾಗಿರುವ ತ್ಯಾಜ್ಯಗಳು ಮುಂದಿನ ಹಲವಾರು ವರ್ಷಗಳ ಕಾಲ ಜಲಚರಗಳನ್ನು ಕಾಡಲಿವೆ.
ಅದೇನೇ ಇರಲಿ,ಮನುಕುಲಕ್ಕೆ ಮಾರಕವೆನಿಸುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ನಮ್ಮ ಸುತ್ತಮುತ್ತಲ ಪರಿಸರವಲ್ಲದೇ ನಮ್ಮ ಹಾಗೂ ಅನ್ಯ ಜೀವಜಂತುಗಳ ಆರೋಗ್ಯಕ್ಕೂ ಹಾನಿಕಾರಕವಾಗಿ ಪರಿಣಮಿಸಿದ್ದು,ಈ ಅಪಾಯಕಾರಿ ಸಮಸ್ಯೆಯನ್ನು ನಿಯಂತ್ರಿಸಲು ನಾವಿಂದು ಅತಿಯಾಗಿ ಮತ್ತು ಅನಾವಶ್ಯಕವಾಗಿ ಬಳಸಿ ಎಸೆಯುತ್ತಿರುವ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ತೊರೆಯಬೇಕು.ಇದಕ್ಕೆ ತಪ್ಪಿದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತಲೆದೋರುವ ಗಂಭೀರ ಮತ್ತು ಮಾರಕ ಸಮಸ್ಯೆಗಳು ನಮ್ಮ ಮುಂದಿನ ಸಂತತಿಯನ್ನು ಶಾಪದೋಪಾದಿಯಲ್ಲಿ ಪೀಡಿಸುವುದರಲ್ಲಿ ಸಂದೇಹವಿಲ್ಲ ಎನ್ನುವುದನ್ನು ಮರೆಯದಿರಿ.
ಡಾ.ಸಿ.ನಿತ್ಯಾನಂದ ಪೈ,
ಬಳಕೆದಾರರ ಹಿತರಕ್ಷಣಾ ವೇದಿಕೆ 
ಬೊಳುವಾರು 
ಪುತ್ತೂರು . ದ . ಕ  


No comments:

Post a Comment