Saturday, July 4, 2015

AIR POLLUTION AND STROKE



    ಪಕ್ಷಾಘಾತಕ್ಕೆ ಕಾರಣವೆನಿಸಬಲ್ಲ ವಾಯುಮಾಲಿನ್ಯ

ಈ ಲೇಖನದ ತಲೆಬರಹವನ್ನು ಕಂಡು ನಿಮಗೂ ಅಚ್ಚರಿಯಾಗಿರಲೇಬೇಕು. ಜೊತೆಗೆ ಪಕ್ಷಾಘಾತದಂತಹ ಗಂಭೀರ ಸಮಸ್ಯೆಗೆ ವಾಯುಮಾಲಿನ್ಯ ಕಾರಣವೆನಿಸುವುದಾದರೂ ಹೇಗೆ?, ಎನ್ನುವ ಸಂದೇಹವೂ  ನಿಮ್ಮ ಮನಸ್ಸಿನಲ್ಲಿ ಮೂಡಿರಲೇಬೇಕು. ಇದುವರೆಗೆ ಮನುಷ್ಯನ ಶ್ವಾಸಾಂಗಗಳು ಹಾಗೂ ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಕೆಲವೊಂದು ಗಂಭೀರ ಕಾಯಿಲೆಗಳಿಗೆ ವಾಯಮಾಲಿನ್ಯ ಕಾರಣವೆನಿಸುತ್ತಿರುವ ವಿಚಾರ ವೈದ್ಯಕೀಯ ಕ್ಷೇತ್ರದ ಗಮನಕ್ಕೆ ಬಂದು ವರ್ಷಗಳೇ ಕಳೆದಿವೆ. ಆದರೆ ವಾಯುಮಾಲಿನ್ಯದಂತಹ ಸಮಸ್ಯೆಗೆ, ಮನುಷ್ಯನನ್ನು ಹಾಸಿಗೆ ಹಿಡಿಸಬಲ್ಲ ಅಥವಾ ಆತನ ಮರಣಕ್ಕೆ ಕಾರಣವೆನಿಸಬಲ್ಲ ಸಾಮರ್ಥ್ಯವಿದೆ ಎನ್ನುವ ಕುತೂಹಲಕಾರಿ ಅಂಶವು, ಇತೀಚೆಗೆ ನಡೆಸಿದ್ದ ವೈದ್ಯಕೀಯ ಅಧ್ಯಯನದಿಂದ ಖಚಿತವಾಗಿದೆ. ಮಾರ್ಚ್ ತಿಂಗಳ ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ  ಇದನ್ನು ಪ್ರಕಟಿಸಲಾಗಿದೆ.

ವಾಯುಮಾಲಿನ್ಯ – ಪಕ್ಷಾಘಾತ

ಯುನಿವರ್ಸಿಟಿ ಆಫ್ ಎಡಿನ್ ಬರ್ಗ್, ಯು. ಕೆ ಇದರ ನ್ಯೂರಾಲಜಿಸ್ಟ್ ಗಳು ೧೯೯೦ ರಿಂದ ೨೦೧೪ ರ ಅವಧಿಯಲ್ಲಿ ನಡೆಸಿದ್ದ ವೈಜ್ಞಾನಿಕ ಅಧ್ಯಯನಗಳ ವರದಿಗಳನ್ನು ಪುನರ್ ವಿಮರ್ಶಿಸಿದಾಗ, ವಾಯುಮಾಲಿನ್ಯ ಮತ್ತು  ಪಕ್ಷಾಘಾತ ಸಂಬಂಧಿತ ಮರಣಗಳಿಗೆ ಮತ್ತು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಗುವಂತಹ ಆರೋಗ್ಯದ ಸಮಸ್ಯೆಗಳಿಗೆ ಇರುವ ಸಂಬಂಧದ ಬಗ್ಗೆ ಸಾಕಷ್ಟು ಪುರಾವೆಗಳು ಲಭಿಸಿದ್ದವು. ಈ ವಿಜ್ಞಾನಿಗಳಿಗೆ ಅಧಿಕತಮ ಮೋಟಾರು ವಾಹನಗಳ ಹೊಗೆಯೊಂದಿಗೆ ಹೊರಬೀಳುವ ಎರಡು ವಿಧದ ಸೂಕ್ಷ್ಮಾತಿಸೂಕ್ಷ್ಮ ಪದಾರ್ಥಗಳ ಕಣಗಳು ಪಕ್ಷಾಘಾತದ ಸಂಭಾವ್ಯತೆಯ ಅಪಾಯವನ್ನು ಹೆಚ್ಚಿಸುತ್ತವೆ ಎನ್ನುವುದು ಖಚಿತವಾಗಿತ್ತು. ಈ ಸೂಕ್ಷ್ಮಾತಿಸೂಕ್ಷ್ಮ ಪದಾರ್ಥಗಳ ಕಣಗಳು 2.5 ಮೈಕ್ರಾನ್ ಗಾತ್ರದ ಅರ್ಥಾತ್ ಪಿ ಎಂ 2.5 ಹಾಗೂ 10 ಮೈಕ್ರಾನ್  ಗಿಂತಲೂ ಸಣ್ಣ ಗಾತ್ರದವುಗಳಾಗಿದ್ದು, 2.5 ಮೈಕ್ರಾನ್ ಗಿಂತ ಚಿಕ್ಕ ಕಣಗಳಿಗೆ ಹೆಚ್ಚಾಗಿ ಎರವಾಗುವ ವ್ಯಕ್ತಿಗಳಲ್ಲಿ ಈ ಅಪಾಯದ ಸಂಭಾವ್ಯತೆ ಇನ್ನಷ್ಟು ಹೆಚ್ಚುತ್ತದೆ.

ಇಷ್ಟು ಮಾತ್ರವಲ್ಲ, ಈ ವಿಜ್ಞಾನಿಗಳಿಗೆ ಪಕ್ಷಾಘಾತ ಮತ್ತು ಕಾರ್ಬನ್ ಮೊನೊಕ್ಸೈಡ್
, ಸಲ್ಫರ್ ಡೈಆಕ್ಸೈಡ್ ಹಾಗೂ ನೈಟ್ರೋಜೆನ್ ಡೈಆಕ್ಸೈಡ್ ಗಳಂತಹ ಅಪಾಯಕಾರಿ ಅನಿಲಗಳಿಂದ ಉದ್ಭವಿಸುವ  “ ಅನಿಲ ಮಾಲಿನ್ಯ “ ದಿಂದಾಗಿ ಪಕ್ಷಘಾತದ ಅಪಾಯವು ಇನ್ನಷ್ಟು ಹೆಚ್ಚುವ ಸಾಧ್ಯತೆಗಳ ನಡುವಿನ ಕೊಂಡಿಯೊಂದು ಪತ್ತೆಯಾಗಿತ್ತು. ಈ ಅಪಾಯಕಾರಿ ಹಾಗೂ ಪ್ರದೂಷಕಗಳು ಹೆಚ್ಚಾಗಿ ಸಾರಿಗೆ ವಾಹನಗಳು ಮತ್ತು ವಿಲಾಸಿ ಕಾರುಗಳು ಬಳಸುವ “ ಡೀಸೆಲ್ “ ಇಂಧನದಿಂದ ಉದ್ಭವಿಸುತ್ತವೆ. ಈ ಪ್ರದೂಷಕ ಅನಿಲಗಳಲ್ಲಿ ಒಂದಾಗಿರುವ ನೈಟ್ರಸ್ ಆಕ್ಸೈಡ್ ನಿಂದಾಗಿ ಮೆದುಳಿನಲ್ಲಿ ರಕ್ತಸ್ರಾವವಾಗುವ ಮೂಲಕ ಉದ್ಭವಿಸುವ ಪಕ್ಷಾಘಾತ ಸಂಭವಿಸುವ ಸಾಧ್ಯತೆಗಳಿವೆ. ಒಜೊನ್ ಹೊರತುಪಡಿಸಿ ಅನ್ಯ ಅನಿಲರೂಪಿ ಪ್ರದೂಷಕಗಳೆಲ್ಲವೂ, ರಕ್ತದ ಪೂರೈಕೆಯಲ್ಲಿ ಉದ್ಭವಿಸಬಲ್ಲ ಅಡಚಣೆಗಳಿಂದ ಸಂಭವಿಸುವ ಪಕ್ಷಾಘಾತಕ್ಕೆ ಕಾರಣವೆನಿಸುತ್ತವೆ.  ವಾಯುಮಾಲಿನ್ಯದ ಪ್ರಮಾಣ ಅಧಿಕವಾಗಿರುವ ಸಮಯ ಹಾಗೂ ಪ್ರದೇಶಗಳಿಗೆ ಅನುಗುಣವಾಗಿ ಇದಕ್ಕೆ ಎರವಾಗುವ ವ್ಯಕ್ಯಿಗಳು ಪಕ್ಷಘಾತಕ್ಕೆ ಈಡಾಗುವ ಸಾಧ್ಯತೆಗಳೂ ಹೆಚ್ಚುತ್ತವೆ.

ಭಾರತದಲ್ಲಿ ಅಧ್ಯಯನ

ಭಾರತದಲ್ಲಿ ವಾಯುಮಾಲಿನ್ಯ ಮತ್ತು ಪಕ್ಷಾಘಾತದ ಸಂಭಾವ್ಯತೆಯ ಬಗ್ಗೆ ನಡೆಯುತ್ತಿರುವ ಪ್ರಥಮ ಅಧ್ಯಯನದ ನೇತೃತ್ವ ವಹಿಸಿರುವ ಖ್ಯಾತ ನ್ಯೂರಾಲಜಿಸ್ಟ್ ಕಮಲೇಶ್ವರ ಪ್ರಸಾದ್ ಇವರ ಅಭಿಪ್ರಾಯದಂತೆ, ವಾಯುಮಾಲಿನ್ಯವು ಮನುಷ್ಯನ ರಕ್ತನಾಳಗಳ ಗಾತ್ರ ಮತ್ತು ರಕ್ತದ ಜಿಗುಟುತನವನ್ನು ( Viscosity ) ಬದಲಿಸಬಲ್ಲದು. ನಾವು ಉಸಿರಾಡುವ ಗಾಳಿಯೊಂದಿಗೆ ನಮ್ಮ ಶರೀರವನ್ನು ಪ್ರವೇಶಿಸುವ ೨.೫ ಪಿ ಎಂ ಗಾತ್ರದ ಸೂಕ್ಷ್ಮಾತಿಸೂಕ್ಷ್ಮ ಕಣಗಳು, ಸಂಬಂಧವಿಲ್ಲದ ಬಾಹ್ಯಕಾಯಗಳಂತೆ ವರ್ತಿಸಿ, ರಕ್ತನಾಳಗಳ ಒಳಮೈಯ್ಯನ್ನು ಪರಿವರ್ತಿಸಿ ಸಂಕುಚಿತಗೊಳಿಸುತ್ತವೆ. ತತ್ಪರಿಣಾಮವಾಗಿ ಹೆಚ್ಚುವ ರಕ್ತದೊತ್ತಡದಿಂದಾಗಿ ಪಕ್ಷಾಘಾತ ಸಂಭವಿಸುತ್ತದೆ.ವಾಯುಮಾಲಿನ್ಯಕ್ಕೆ ಎರವಾಗುವ ವ್ಯಕ್ತಿಗಳಲ್ಲಿ  ರಕ್ತಸಂಚಾರದಲ್ಲಿ ಉದ್ಭವಿಸುವ ಅಡಚಣೆಗಳ ಪರಿಣಾಮವಾಗಿ ಸಂಭವಿಸಬಲ್ಲ ಪಕ್ಷಾಘಾತದ ಸಂಭಾವ್ಯತೆಯ ಅಪಾಯವು ಹೆಚ್ಚುವುದು ಎನ್ನುವ ಪುರಾವೆಗಳು ಈಗಾಗಲೇ ಲಭಿಸಿವೆ ಎಂದು ಸುಮಾರು ೮೦೦ ಪಕ್ಷಾಘಾತ ಪೀಡಿತರ ಬಗ್ಗೆ ಅಧ್ಯಯನವನ್ನು ನಡೆಸುತ್ತಿರುವ ವೈದ್ಯರು ಹೇಳುತ್ತಾರೆ.

ಈ ಸಂಶೋಧಕರ ತಂಡದ ಅಭಿಪ್ರಾಯದಂತೆ ಪಕ್ಷಾಘಾತಕ್ಕೆ ಮೂಲವೆನಿಸಬಲ್ಲ ಅಧಿಕ ರಕ್ತದ ಒತ್ತಡ, ರಕ್ತದಲ್ಲಿ ಹೆಚ್ಚಿರುವ ಕೊಲೆಸ್ಟರಾಲ್, ಅಧಿಕತೂಕ, ಅತಿಬೊಜ್ಜಿನಂತಹ ಸಮಸ್ಯೆಗಳಿಂದ ಪೀಡಿತರು ಮತ್ತು ವಯೋವೃದ್ಧರು, ವಾಯುಮಾಲಿನ್ಯಕ್ಕೆ ಎರವಾದಾಗ ಇವರಲ್ಲಿ ಪಕ್ಷಾಘಾತ ಸಂಭವಿಸುವ ಅಪಾಯ ಹೆಚ್ಚುವುದು. ಆಗಸ್ಟ್ ೨೦೧೪ ರಲ್ಲಿ ಆರಂಭವಾಗಿದ್ದ ಈ ಅಧ್ಯಯನವು ೨೦೧೬ ರಲ್ಲಿ ಪರಿಪೂರ್ನಗೊಳ್ಳುವ ಸಾಧ್ಯತೆಗಳಿದ್ದು, ಇದರಿಂದ ಅತಿಯಾದ ವಾಯುಮಾಲಿನ್ಯ ಇರುವ ಹಾಗೂ ಜನದಟ್ಟಣೆ ಅತಿಯಾಗಿರುವ ಪ್ರದೇಶಗಳಲ್ಲಿ ವಾಸ್ತವ್ಯವಿರುವ ವ್ಯಕ್ತಿಗಳಲ್ಲಿ ಪಕ್ಷಾಘಾತದ ಅಪಾಯದ  ಪ್ರಮಾಣವನ್ನು ಸೂಚಿಸಲಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಭಾರತದಲ್ಲಿ ವಾಯುಮಾಲಿನ್ಯವು ಗಣನೀಯ ಪ್ರಮಾಣದ ಮರಣಗಳಿಗೆ  ಕಾರಣವೆನಿಸುತ್ತಿದೆ. ೨೦೧೩ ರಲ್ಲಿ ಜನಸಾಮಾನ್ಯರ ಮರಣಕ್ಕೆ ಕಾರಣವೆನಿಸುತ್ತಿರುವ ಸಮಸ್ಯೆಗಳಲ್ಲಿ, ಅಧಿಕ ರಕ್ತದ ಒತ್ತಡ, ಒಳಾಂಗಣ ವಾಯು ಪ್ರದೂಷಣೆ, ಧೂಮಪಾನ ಮತ್ತು ಅಪೌಷ್ಠಿಕತೆಗಳ ನಂತರದ ಸ್ಥಾನವು ವಾಯುಮಾಲಿನ್ಯಕ್ಕೆ ಸಂದಿತ್ತು. ಸೂಕ್ಷ್ಮಾತಿಸೂಕ್ಷ್ಮ ಕಣಗಳಿಂದ ಸಂಭವಿಸುತ್ತಿರುವ ಅಕಾಲಿಕ ಮರಣಗಳ ಪ್ರಮಾಣವು ಭಾರತದಲ್ಲಿ ದಿನೇದಿನೇ ಹೆಚ್ಚುತ್ತಿದೆ. ೨೦೦೦ ನೆ ಇಸವಿಯಲ್ಲಿ ಇದಕ್ಕೆ ಒಂದು ಲಕ್ಷ ಜನರು ಬಲಿಯಾಗಿದ್ದಲ್ಲಿ, ೨೦೧೦ ರಲ್ಲಿ ಈ ಸಂಖ್ಯೆಯು ೬,೨೦,೦೦೦ ಕ್ಕೆ ತಲುಪಿತ್ತು!.

ಅಕಾಲಿಕ ಮರಣಗಳಲ್ಲಿ ಶೇ.೪೮.೬ ರಷ್ಟು ರಕ್ತದ ಪೂರೈಕೆಯಲ್ಲಿ ಅಡಚಣೆಗಳು ಉದ್ಭವಿಸಿರುವ ಕಾರಣದಿಂದ, ಶೇ. ೨೫.೮ ರಷ್ಟು ಪಕ್ಷಾಘಾತದಿಂದ, ಶೇ. ೧೭.೩೨ ರಷ್ಟು ದೀರ್ಘಕಾಲೀನ ಶ್ವಾಸಕೋಶಗಳ ಅಡಚಣೆಯ ಕಾಯಿಲೆಗಳಿಂದ, ಶೇ. ೬.೪ ರಷ್ಟು ಶ್ವಾಸಾಂಗಗಳ ಕೆಳಭಾಗದ ಸೊಂಕುಗಳಿಂದ ಮತ್ತು ೨.೦೨ ಶ್ವಾಸಾಂಗಗಳ ಸೋಂಕುಗಳಿಂದ ಸಂಭವಿಸಿದ್ದವು.

ಈ ಅಧ್ಯಯನದಿಂದ ವಾಯುಮಾಲಿನ್ಯ ಮತ್ತು ಪಕ್ಷಾಘಾತಗಳ ನಡುವಿನ ಕೊಂಡಿಯೊಂದು ಪತ್ತೆಯಾಗಿದ್ದರೂ, ಭಾರತೀಯರಲ್ಲಿ ಇದರ ಅಪಾಯಕಾರಿ ಅಂಶಗಳ ಬಗ್ಗೆ ಸೂಕ್ತ ಮಾಹಿತಿ ಲಭ್ಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ ವಾಯುಮಾಲಿನ್ಯದ ನಿರೀಕ್ಷಣಾ ವ್ಯವಸ್ಥೆಯೇ ಅಸ್ತಿತ್ವದಲ್ಲಿ ಇರಲಿಲ್ಲ. ಇತ್ತೀಚಿಗೆ ಕೇಂದ್ರ ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ದೇಶದ ಮಹಾನಗರಗಳಲ್ಲಿ ಇಂತಹ ವ್ಯವಸ್ಥೆಯನ್ನು ಅನುಷ್ಠಾನಿಸಲಾಗುತ್ತಿದೆ. ಏಕೆಂದರೆ ದೇಶದ ಬಹುತೇಕ ನಗರ ಮತ್ತು ಮಹಾನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಮತ್ತು ತತ್ಪರಿಣಾಮವಾಗಿ ಉದ್ಭವಿಸುತ್ತಿರುವ ಆರೋಗ್ಯದ ಸಮಸ್ಯೆಗಳು ಅನಿಯಂತ್ರಿತವಾಗಿ ಹೆಚ್ಚುತ್ತಿವೆ.

ಭಾರತದಲ್ಲಿ ವಾಯುಮಾಲಿನ್ಯದ ಪ್ರಮಾಣವು ಅತಿಯಾಗಿದೆ. ವಾಯುಮಾಲಿನ್ಯಕ್ಕೆ ಸಂಬಂಧಿಸಿದ ವ್ಯಾಧಿಗಳ ಹೆಚ್ಚಳವೂ ಗಾಬರಿ ಹುಟ್ಟಿಸುವಂತಿದೆ. ಇದೇ ಕಾರಣದಿಂದಾಗಿ ಸರ್ಕಾರವು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ನಾವಿಂದು ಉಸಿರಾಡುವ ಗಾಳಿಯ ಗುಣಮಟ್ಟಗಳನ್ನು ಹೆಚ್ಚಿಸಲೇಬೇಕಾಗಿದೆ. ಏಕೆಂದರೆ ಹಿಂದೆ ವಾಯುಮಾಲಿನ್ಯವು  ಶ್ವಾಸಾಂಗಗಳ ಕಾಯಿಲೆಗಳು ಮತ್ತು ಹೃದಯಾಘಾತಗಳಿಗೆ ಮೂಲವೆನಿಸುತ್ತವೆ ಎಂದು ಭಾವಿಸಲಾಗುತ್ತಿದ್ದು, ಇದೀಗ ಪಕ್ಷಾಘಾತಕ್ಕೂ ಮೂಲವೆನಿಸುತ್ತಿರುವುದು ಸಾಬೀತಾಗಿದೆ. ಬಡವ ಬಲ್ಲಿದರೆನ್ನುವ ಭೇದವಿಲ್ಲದೇ ದೇಶದ ಎಲ್ಲ ಜನರ ಮೇಲೂ ದುಷ್ಪರಿಣಾಮವನ್ನು ಬೀರುತ್ತಿರುವ ವಾಯುಮಾಲಿನ್ಯದ ಸಮಸ್ಯೆಯನ್ನು ನಿಯಂತ್ರಿಸಲು ದೇಶದ ಪ್ರಜೆಗಳೆಲ್ಲರೂ ಸರ್ಕಾರದೊಂದಿಗೆ ಸಹಕರಿಸಬೇಕಿದೆ.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು