Friday, March 4, 2016

BAN ON PLASTIC PRODUCTS IN KARNATAKA



           ಪ್ಲಾಸ್ಟಿಕ್ ನಿಷೇಧದ ನಿರ್ಧಾರ : ಪ್ರಜೆಗಳಿಗೆ ಹಿತಕರ 

ರಾಜ್ಯ ಸಚಿವ ಸಂಪುಟವು ಇದೀಗ ಹಲವಾರು ವಿಧದ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವ ಅಂತಿಮ ಅಧಿಸೂಚನೆಯನ್ನು ಅನುಮೋದಿಸಿದೆ. ರಾಜ್ಯ ಗಜೆಟ್ ನಲ್ಲಿ ಇದು ಪ್ರಕಟಗೊಂಡ ಬಳಿಕ ಜಾರಿಗೆ ಬರಲಿದೆ. ತತ್ಪರಿಣಾಮವಾಗಿ ಸ್ವಚ್ಛ ಕರ್ನಾಟಕ ಮತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ತೊಡಕಾಗಿ ಪರಿಣಮಿಸಿದ್ದ ಬಹುದೊಡ್ಡ ಸಮಸ್ಯೆಯೊಂದು ಪರಿಹಾರಗೊಳ್ಳಲಿದೆ. ರಾಜ್ಯ ಸಚಿವ ಸಂಪುಟದ ಈ ನಿರ್ಧಾರವು ಸ್ವಚ್ಛತೆ ಮತ್ತು ಪ್ರಜೆಗಳ ಆರೋಗ್ಯದ ದೃಷ್ಟಿಯಿಂದ ನಿಶ್ಚಿತವಾಗಿಯೂ ಆರೋಗ್ಯಕರವೆನಿಸಲಿದೆ. 

ಹಿನ್ನೆಲೆ 

ಕರ್ನಾಟಕ ರಾಜ್ಯ ಸರ್ಕಾರವು ೨೦೧೫ ರ  ಅಕ್ಟೋಬರ್ ತಿಂಗಳಿನಲ್ಲಿ ಪರಿಸರ ಸಂರಕ್ಷಣಾ ಕಾಯಿದೆಯ ಕಲಂ  ೫ ರನ್ವಯ ೪೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮತ್ತಿತರ ಉತ್ಪನ್ನಗಳ ಮೇಲೆ ನಿಷೇಧವನ್ನು ಹೇರುವ ಕರಡು ಅಧಿಸೂಚನೆಗೆ ಹಸಿರು ನಿಶಾನೆಯನ್ನು ತೋರಿತ್ತು. ರಾಜ್ಯ ಪರಿಸರ ಮತ್ತು ಅರಣ್ಯ ಇಲಾಖೆಯು ಈ ಬಗ್ಗೆ ಸೂಚನೆಯನ್ನು ಪ್ರಕಟಿಸಿದ್ದು, ಸಾರ್ವಜನಿಕರಿಂದ ಸೂಕ್ತ ಸಲಹೆಗಳು ಅಥವಾ ಆಕ್ಷೇಪಗಳನ್ನು ಆಹ್ವಾನಿಸಿತ್ತು. ರಾಜ್ಯ ಮಂತ್ರಿ ಮಂಡಲದ ಸಭೆಯಲ್ಲಿ ಅಂಗೀಕರಿಸಲ್ಪಟ್ಟಿದ್ದ ಈ  ಕರಡು ಅಧಿಸೂಚನೆಯಲ್ಲಿ ೪೦ ಮೈಕ್ರಾನ್ ಗಿಂತ ಕಡಿಮೆಯ ಪ್ಲಾಸ್ಟಿಕ್ ಕೈಚೀಲ ಮತ್ತಿತರ ಲಕೋಟೆಗಳು, ಜಾಹೀರಾತುಗಳಲ್ಲಿ ಬಳಸುವ ಫ್ಲೆಕ್ಸ್, ಪ್ಲಾಸ್ಟಿಕ್ ತೋರಣಗಳು ಹಾಗೂ ಧ್ವಜಗಳು, ತಟ್ಟೆ, ಲೋಟ, ಚಮಚ, ಪ್ಲಾಸ್ಟಿಕ್ ಹಾಳೆಗಳು, ಥರ್ಮೋಕೂಲ್ ನಿರ್ಮಿತ ತಟ್ಟೆ ಮತ್ತು ಲೋಟ ಇತ್ಯಾದಿ ೧೩ ವಿಧದ ವಸ್ತುಗಳ ತಯಾರಿಕೆ, ಸಾಗಾಣಿಕೆ, ವಿತರಣೆ ಮತ್ತು ಮಾರಾಟಗಳನ್ನೇ ನಿಷೇಧಿಸುವ ಪ್ರಸ್ತಾವನೆ ಇದ್ದಿತು.  ಅಂತಿಮವಾಗಿ ಕೆಲವಿಧದ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವ ಅಂತಿಮ ಅಧಿಸೂಚನೆಯನ್ನು ಸಂಪುಟ ಸಭೆಯಲ್ಲಿ ಅಂಗೀಕರಿಸಿದ್ದರೂ, ಗಜೆಟ್ ಪ್ರಕಟಣೆ ಮತ್ತು ತದನಂತರ ಇದನ್ನು ಅನುಷ್ಠಾನಿಸುವ ಬಗ್ಗೆ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. 

ನಿಷೇಧ ಪರಿಣಾಮಕಾರಿಯಾಗಲಿ

೨೦೧೧ ರಲ್ಲಿ ದೇಶಾದ್ಯಂತ ಪ್ಲಾಸ್ಟಿಕ್ ತ್ಯಾಜ್ಯಗಳ ನಿಭಾವಣೆ ಮತ್ತು ನಿರ್ವಹಣೆಗಳ ನಿಯಮ ೨೦೧೧ ಜಾರಿಗೆ ಬಂದಿದ್ದು, ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳ ತಯಾರಿಕೆ ಮತ್ತು ಮಾರಾಟಗಳನ್ನು ನಿಷೇಧಿಸಲಾಗಿತ್ತು. ತದನಂತರ ಕೆಲ ರಾಜ್ಯಗಳು ಮತ್ತು ಮಹಾನಗರಗಳು ೪೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳ ಮಾರಾಟವನ್ನು ನಿಷೇಧಿಸಿದ್ದವು.ಆದರೆ ಈ ನಿಯಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಕರ ಅಸಹಕಾರಗಳಿಂದಾಗಿ, ಇಂದಿಗೂ ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳನ್ನು ದೇಶಾದ್ಯಂತ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ!.

ಪ್ಲಾಸ್ಟಿಕ್ ಉದ್ದಿಮೆಗಳ ವಕ್ತಾರರು ಹೇಳುವಂತೆ ರಾಜ್ಯದಲ್ಲಿ ತೆಳ್ಳನೆಯ ಪ್ಲಾಸ್ಟಿಕ್ ಕೈಚೀಲಗಳನ್ನು ತಯಾರಿಸದೇ  ಇದ್ದರೂ, ನೆರೆಯ ರಾಜ್ಯಗಳಿಂದ ಇವುಗಳನ್ನು ಕದ್ದುಮುಚ್ಚಿ ಆಮದು ಮಾಡಲಾಗುತ್ತಿದೆ. ಇದರಿಂದಾಗಿ ೨೦ ಮೈಕ್ರಾನ್ ನ ನಮ್ಮ ಉತ್ಪನ್ನಗಳು ಮಾರಾಟವಾಗದೇ ನಷ್ಟ ಸಂಭವಿಸುತ್ತಿದೆ. ಆದರೆ ಕೆಲ ಅಧಿಕಾರಿಗಳು ಹೇಳುವಂತೆ ರಾಜ್ಯದಲ್ಲೂ ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ರಾತ್ರಿಯ ಪಾಳಿಯಲ್ಲಿ ತಯಾರಿಸಿ ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ೨೦ ಮೈಕ್ರಾನ್ ದಪ್ಪದ ಹಾಗೂ ಇದಕ್ಕೂ ತೆಳ್ಳಗಿರುವ ಪ್ಲಾಸ್ಟಿಕ್ ಕೈಚೀಲಗಳ ಬೆಲೆಗಳ ನಡುವೆ ಅಗಾಧ ಅಂತರ ಇರುವುದರಿಂದಾಗಿ, ತೆಳ್ಳಗಿನ ಪ್ಲಾಸ್ಟಿಕ್ ಚೀಲಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಾಗೂ ಇದೇ ಕಾರಣದಿಂದಾಗಿ ಈ ಸಮಸ್ಯೆಯನ್ನು ನಿಯಂತ್ರಿಸುವುದು ಅಸಾಧ್ಯವೆನಿಸುತ್ತಿದೆ.

ತ್ಯಾಜ್ಯಗಳ ಸಮಸ್ಯೆ  

ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹಗಲಿರುಳು ಕಾಡುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯನ್ನು ಆಂಶಿಕವಾಗಿ ಪರಿಹರಿಸಬಲ್ಲ ದಿಟ್ಟ ನಿರ್ಧಾರವನ್ನು ರಾಜ್ಯ ಸರ್ಕಾರ ತಳೆದಿದೆ. ಕೊನೆಗೂ ತುಕ್ಕು ಹಿಡಿದಿರುವ ಸರ್ಕಾರಿ ಯಂತ್ರ ಮತ್ತೆ ಚಲಿಸಲು ಆರಂಭಿಸಿದ ಪರಿಣಾಮವಾಗಿ, ಇದೀಗ  ಮೈಕ್ರಾನ್ ಮತ್ತು ಗುಣಮಟ್ಟಗಳನ್ನು ಪರಿಗಣಿಸದೇ, ಕೈಚೀಲ ಮತ್ತಿತರ ಪ್ಲಾಸ್ಟಿಕ್ ಉತ್ಪನ್ನಗಳು ಹಾಗೂ ಅನ್ಯವಿಧದ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲು ರಾಜ್ಯ ಮಂತ್ರಿಮಂಡಲವು ನಿರ್ಧರಿಸಿದೆ. ಪ್ರಾಯಶಃ ಅನೇಕ ವರ್ಷಗಳಿಂದ ಇಂತಹ ದಿಟ್ಟ ನಿರ್ಧಾರವೊಂದನ್ನು ತಳೆಯಲು ಸರ್ಕಾರವನ್ನು ಒತ್ತಾಯಿಸುತ್ತಿದ್ದ ಸ್ವಯಂ ಸೇವಾ ಸಂಘಟನೆಗಳ ಆಗ್ರಹಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಈ ನಿರ್ಧಾರವು ಅನುಷ್ಠಾನಗೊಂಡ ಬಳಿಕ ರಾಜ್ಯದ ಪ್ರತಿಯೊಂದು ಹಳ್ಳಿಗಳಿಂದ ಆರಂಭಿಸಿ, ರಾಜಧಾನಿಯಾಗಿರುವ ಬೆಂಗಳೂರಿನ ತನಕ ಕಾಣಸಿಗುವ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯು ತಕ್ಕ ಮಟ್ಟಿಗೆ ಪರಿಹಾರಗೊಳ್ಳಲಿದೆ. ಆದರೆ ಈ ಸಮಸ್ಯೆಯು ಸಂಪೂರ್ಣವಾಗಿ ಪರಿಹಾರಗೊಳ್ಳಬೇಕಿದ್ದಲ್ಲಿ, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಅಸಂಖ್ಯ ಗ್ರಾಹಕ ಉತ್ಪನ್ನಗಳನ್ನು ಪ್ಯಾಕ್ ಮಾಡಲು ಬಳಸುವ ವಿವಿಧ ರೀತಿಯ ಪ್ಲಾಸ್ಟಿಕ್ ಗಳನ್ನೂ ನಿಷೇಧಿಸಲೇಬೇಕು. ಇದಕ್ಕೆ ತಪ್ಪಿದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಇವುಗಳಿಂದಾಗಿ ಉದ್ಭವಿಸುವ ವೈವಿಧ್ಯಮಯ ಸಮಸ್ಯೆಗಳನ್ನು ಸಮರ್ಪಕವಾಗಿ ಸಂಪೂರ್ಣವಾಗಿ ಪರಿಹರಿಸುವುದು ಅಸಾಧ್ಯವೆನಿಸಲಿದೆ.

ಸಮಸ್ಯೆ ಪರಿಹಾರವಾಗುವುದೇ?

ಪ್ರಸ್ತುತ ಸರ್ಕಾರವು ಅಂಗೀಕರಿಸಿರುವ ಅಧಿಸೂಚನೆಯಲ್ಲಿ ಪ್ಲಾಸ್ಟಿಕ್ ನಿರ್ಮಿತ ಕೈಚೀಲಗಳು, ಬ್ಯಾನರ್, ತೋರಣ, ಫ್ಲೆಕ್ಸ್, ತಟ್ಟೆ, ಲೋಟ, ಚಮಚ, ಹಾಳೆ, ಥರ್ಮೊಕೂಲ್ ನಿರ್ಮಿತ ತಟ್ಟೆ ಹಾಗೂ ಲೋಟ ಇವೇ ಮುಂತಾದ ಸುಮಾರು ಒಂದು ಡಜನ್ ಉತ್ಪನ್ನಗಳನ್ನು ನಿಷೇಧಿಸುವ ಪ್ರಸ್ತಾವನೆಯಿದೆ. ಆದರೆ ನರ್ಸರಿ ಮತ್ತು ಡೈರಿ ಉದ್ದಿಮೆ, ವೈದ್ಯಕೀಯ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಕೈಚೀಲ ಇತ್ಯಾದಿಗಳಿಗೆ ವಿನಾಯಿತಿ ನೀಡಲಾಗಿದೆ. 

ಕೆಲವರ್ಷಗಳ ಹಿಂದೆ ರಾಜ್ಯ ಸರ್ಕಾರವು ೨೦ ಮೈಕ್ರಾನ್ ಗಿಂತ ಕಡಿಮೆಯ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ನಿಷೇಧಿಸಿತ್ತು. ನಿಷೇಧ ಜಾರಿಯಾದ ಕೆಲವೇ ತಿಂಗಳುಗಳ ಕಾಲ ಕಣ್ಮರೆಯಾಗಿದ್ದ ಅತ್ಯಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳು, ಮುಂದಿನ ಕೆಲವೇ ತಿಂಗಳುಗಳಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ಪ್ರತ್ಯಕ್ಷವಾಗಿದ್ದವು!. ವಿಶೇಷವೆಂದರೆ ಈ ಬಾರಿ ೪೦ ಮೈಕ್ರಾನ್ ಗಿಂತ ಕಡಿಮೆಯಿರುವ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ರಾಜ್ಯದಲ್ಲಿ ತಯಾರಿಸಿ ಹೊರದೇಶಗಳಿಗೆ ರಫ್ತು ಮಾಡಲು ಅವಕಾಶವನ್ನು ನೀಡಲಾಗಿದೆ. ಅರ್ಥಾತ್ ೪೦ ಮೈಕ್ರಾನ್ ಗಿಂತ ತೆಳ್ಳಗಿರುವ ಪ್ಲಾಸ್ಟಿಕ್ ಕೈಚೀಲ ಇತ್ಯಾದಿಗಳನ್ನು ಪ್ಲಾಸ್ಟಿಕ್ ಉತ್ಪನ್ನಗಳ ಘಟಕಗಳು ತಯಾರಿಸಬಹುದಾಗಿದೆ. ಹಾಗೂ ಇದೇ ಕಾರಣದಿಂದಾಗಿ ಇಂತಹ ಉತ್ಪನ್ನಗಳು ರಾಜ್ಯದ ಮಾರುಕಟ್ಟೆಗಳಲ್ಲಿ ಹಿಂದಿನಂತೆ ಗುಪ್ತವಾಗಿ ಮಾರಾಟವಾಗುವ ಸಾಧ್ಯತೆಗಳೂ ಇವೆ. ಇದನ್ನು ನಿಶ್ಚಿತವಾಗಿ ನಿಯಂತ್ರಿಸಬೇಕಿದ್ದಲ್ಲಿ, ಇಂತಹ ಉತ್ಪನ್ನಗಳನ್ನು ರಾಜ್ಯದಲ್ಲಿ ತಯಾರಿಸುವ ಮತ್ತು ವಿದೇಶಗಳಿಗೆ ರಫ್ತು ಮಾಡುವುದನ್ನೂ ನಿಷೇಧಿಸಲೇಬೇಕಾಗುವುದು.

ತ್ಯಾಜ್ಯಗಳು ಕಡಿಮೆಯಾಗಲಿವೆ

ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ಮೂಲೆಮೂಲೆಗಳಲ್ಲಿ ಕಾಣಸಿಗುವ ವೈವಿಧ್ಯಮಯ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಸಭೆ - ಸಮಾರಂಭಗಳ ಸಂದರ್ಭದಲ್ಲಿ ಉತ್ಪನ್ನವಾಗುವ ಪ್ಲಾಸ್ಟಿಕ್ ನಿರ್ಮಿತ ತಟ್ಟೆ, ಲೋಟ, ಚಮಚ ಮತ್ತಿತರ ತ್ಯಾಜ್ಯಗಳ ಪ್ರಮಾಣವು ನಿಸ್ಸಂದೇಹವಾಗಿ ಕಡಿಮೆಯಾಗಲಿದೆ. ಇದರಿಂದಾಗಿ ರಸ್ತೆಯ ಬದಿಗಳಲ್ಲಿನ ಚರಂಡಿಗಳಲ್ಲಿ ವಿಸರ್ಜಿಸಲ್ಪಡುವ ತ್ಯಾಜ್ಯಗಳ ಪ್ರಮಾಣ ಕಡಿಮೆಯಾಗಲಿದ್ದು, ಇವುಗಳನ್ನು ತಿಂದು ಅಸುನೀಗುವ ಪಶುಪಕ್ಷಿಗಳ ಸಂಖ್ಯೆಯೂ ಇಳಿಮುಖವಾಗಲಿದೆ. ಇದಲ್ಲದೇ ಮಳೆಗಾಲದಲ್ಲಿ ಮಳೆನೀರಿನೊಂದಿಗೆ ಹರಿದು ನದಿ ಮತ್ತು ಸಮುದ್ರಗಳನ್ನು ಸೇರುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣವೂ ಸಹಜವಾಗಿಯೇ ಕಡಿಮೆಯಾಗಲಿದೆ.  ಇಷ್ಟು ಮಾತ್ರವಲ್ಲ, ಈ ತ್ಯಾಜ್ಯಗಳಿಂದಾಗಿ ಸಂಭವಿಸುತ್ತಿದ್ದ  ಜಲಪ್ರದೂಷಣೆಯ ಪ್ರಮಾಣವು ನಿಯಂತ್ರಿಸಲ್ಪಡುವುದಲ್ಲದೇ, ಜಲಚರಗಳ ಅಕಾಲಿಕ ಮರಣದ ಪ್ರಮಾಣವೂ ಕಡಿಮೆಯಾಗಲಿದೆ.

ಸರ್ಕಾರದ ಈ ನಿರ್ಧಾರದಿಂದ ಖಾಲಿಜಾಗಗಳು ಮತ್ತು ಚರಂಡಿಗಳಲ್ಲಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಕೊಳಚೆನೀರಿನ ಹರಿವಿಗೆ ಅಡಚಣೆಯಾಗುತ್ತಿದ್ದ ಕಾರಣದಿಂದಾಗಿ ಉದ್ಭವಿಸುತ್ತಿದ್ದ ಅನೇಕ ಆರೋಗ್ಯದ ಸಮಸ್ಯೆಗಳು ಮತ್ತು ಧಾರಾಕಾರ ಮಳೆ ಸುರಿದಾಗ ಉದ್ಭವಿಸುವ ಕೃತಕ ನೆರೆಯ ಸಮಸ್ಯೆಗಳು  ಸ್ವಾಭಾವಿಕವಾಗಿಯೇ ನಿಯಂತ್ರಿಸಲ್ಪಡಲಿವೆ. ಅಂತೆಯೇ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿಗೆ ಬೆಂಕಿ ಹಚ್ಚಿ ಸುಡುವುದರಿಂದ ಉತ್ಪನ್ನವಾಗುವ ಅಪಾಯಕಾರಿ ಹಸಿರುಮನೆ ಅನಿಲಗಳಿಂದಾಗಿ ಹೆಚ್ಚುವ ಜಾಗತಿಕ ತಾಪಮಾನ ಮತ್ತು ತತ್ಪರಿಣಾಮವಾಗಿ ಉದ್ಭವಿಸುವ ಹವಾಮಾನದ ವ್ಯತ್ಯಯದಂತಹ ಗಂಭೀರ ಸಮಸ್ಯೆಗಳೂ ಕಡಿಮೆಯಾಗಲಿವೆ.

ಇವೆಲ್ಲಕ್ಕೂ ಮಿಗಿಲಾಗಿ ರಾಜದ ಸ್ಥಳೀಯ ಸಂಸ್ಥೆಗಳಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿರುವ ಅಗಾಧ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹಣೆ, ಸಾಗಾಟ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ತಗಲುವ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಲಿದೆ. ಇದರೊಂದಿಗೆ ವಿದೇಶಗಳಿಂದ ಆಮದು ಮಾಡುತ್ತಿರುವ ಕಚ್ಚಾ ತೈಲಕ್ಕಾಗಿ ಸರ್ಕಾರವು ವ್ಯಯಿಸುತ್ತಿರುವ ಅಮೂಲ್ಯವಾದ ವಿದೇಶೀ ವಿನಿಮಯವೂ  ಉಳಿತಾಯವಾಗಲಿದೆ.

ಆದರೂ ಕೇವಲ ಕೆಲವಿಧದ ಪ್ಲಾಸ್ಟಿಕ್ ಗಳನ್ನು ನಿಷೇಧಿಸುವುದರಿಂದ ತ್ಯಾಜ್ಯಗಳ ಸಮಸ್ಯೆಯು ಸಂಪೂರ್ಣವಾಗಿ ಪರಿಹಾರಗೊಳ್ಳುವ ಸಾಧ್ಯತೆಗಳಿಲ್ಲ. ಹಾಗೂ ಇದೇ ಕಾರಣದಿಂದಾಗಿ ಸರ್ಕಾರವು ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ. ಪ್ರಸ್ತುತ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೊಳಿಸಿದಂತೆಯೇ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಇವುಗಳು ಉತ್ಪನ್ನವಾಗುವ ಮೂಲಗಳಿಂದಲೇ ಪ್ರತ್ಯೇಕಿಸಿ ಸಂಗ್ರಹಿಸುವ, ಸುರಕ್ಷಿತವಾಗಿ ಸಾಗಿಸುವ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವ ವ್ಯವಸ್ಥೆಗಳನ್ನು ಪ್ರತಿಯೊಂದು ಸ್ಥಳೀಯ ಸಂಸ್ಥೆಗಳಲ್ಲೂ ಒದಗಿಸಬೇಕು. ಉದಾಹರಣೆಗೆ  ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆಗಳ ನಿರ್ಮಾಣದಲ್ಲಿ ಬಳಸುವುದನ್ನು ಕಡ್ಡಾಯಗೊಳಿಸುವ ಮೂಲಕ, ರಸ್ತೆಗಳ ನಿರ್ಮಾಣದ ವೆಚ್ಚವನ್ನು ಉಳಿಸುವ, ರಸ್ತೆಗಳ ಆಯುಷ್ಯವನ್ನು ಹೆಚ್ಚಿಸುವ ಮತ್ತು ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುರಕ್ಷಿತವಾಗಿ ಹಾಗೂ ಉಪಯುಕ್ತವೆನಿಸುವಂತೆ ವಿಲೇವಾರಿ ಮಾಡುವ ವಿಧಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲೇಬೇಕು. ಇಂತಹ ಉಪಕ್ರಮಗಳನ್ನು ಶೀಘ್ರದಲ್ಲಿ ಜಾರಿಗೊಳಿಸದೇ, ಕೇವಲ ನಿರ್ದಿಷ್ಟ ಗುಣಮಟ್ಟದ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವುದರಿಂದ ಅಪೇಕ್ಷಿತ ಫಲಿತಾಂಶ ದೊರೆಯದು ಎನ್ನುವುದನ್ನು ಸರ್ಕಾರ ಅರ್ಥೈಸಿಕೊಳ್ಳಬೇಕಿದೆ.

ಕೊನೆಯ ಮಾತು 

ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವ ನಿರ್ಧಾರವನ್ನು ತಳೆಯಲು ರಾಜ್ಯ ಸರ್ಕಾರವು ಸಾಕಷ್ಟು ಸಮಯವನ್ನು ತೆಗೆದುಕೊಂಡಿದೆ. ಇದೀಗ ಈ ಅಧಿಸೂಚನೆಯನ್ನು ಕ್ಷಿಪ್ರಗತಿಯಲ್ಲಿ ಗಜೆಟ್ ನಲ್ಲಿ ಪ್ರಕಟಿಸುವ ಮೂಲಕ ಇದನ್ನು ಅನುಷ್ಠಾನಿಸಬೇಕಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 





Wednesday, March 2, 2016

HERBAL ANTI DIABETES PILL TO BE LAUNCHED


          ಮಧುಮೇಹ ನಿಯಂತ್ರಿಸಲು ಗಿಡಮೂಲಿಕೆಗಳ ಔಷದ 

ವಿಶ್ವಾದ್ಯಂತ ಅಸಂಖ್ಯ ಜನರನ್ನು ಪೀಡಿಸುತ್ತಿರುವ ಹಾಗೂ ಇಂದಿನ ತನಕ ಈ ವ್ಯಾಧಿಯನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಕಂಡುಹಿಡಿಯಲು ವಿಫಲರಾಗಿರುವ ವೈದ್ಯಕೀಯ ವಿಜ್ಞಾನಿಗಳಿಗೆ ಸವಾಲಾಗಿ ಪರಿಣಮಿಸಿರುವ " ಮಧುಮೇಹ " ವ್ಯಾಧಿಯನ್ನು ನಿಯಂತ್ರಿಸಲು ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಔಷದವೊಂದು ನಮ್ಮ ರಾಜ್ಯದ ಜನತೆಗೆ ಸದ್ಯೋಭವಿಷ್ಯದಲ್ಲಿ ಲಭ್ಯವಾಗಲಿದೆ. BGS - 34 ಎಂದು ಹೆಸರಿಸಲ್ಪಟ್ಟಿರುವ ಈ ಔಷದವು ಒಂದೆರಡು ತಿಂಗಳುಗಳಲ್ಲಿ ರಾಜ್ಯದ ಮಾರುಕಟ್ಟೆಯಲ್ಲಿ ದೊರೆಯಲಿದ್ದು, ಮಧುಮೇಹ ಪೀಡಿತರು ಈಗಾಗಲೇ ಸೇವಿಸುತ್ತಿರುವ ಆಧುನಿಕ ಔಷದಗಳಿಗೆ ಪೂರಕವಾಗಿ ಪರಿಣಮಿಸುವುದಾದರೂ, ಇದು " ಪವಾಡ ಸದೃಶ " ಪರಿಣಾಮವನ್ನು ನೀಡಲು ಅಥವಾ ಮಧುಮೇಹವನ್ನು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಗುಣಪಡಿಸಲಾರದು ಡಾ. ವಿಶಾಲ್ ರಾವ್ ಹೇಳಿದ್ದಾರೆ. ಜೊತೆಗೆ ಆಧುನಿಕ ಮತ್ತು ಆಯುರ್ವೇದ ಔಷದಗಳ ಸಮ್ಮಿಶ್ರ ಚಿಕಿತ್ಸೆಯುಲ್ಲಿ ಆಯುರ್ವೇದ ಔಷದಗಳು ಪರಿಣಾಮಕಾರಿಯಾಗಿರುವುದಾದರೂ, ಮಧುಮೇಹವನ್ನು ನಿಯಂತ್ರಿಸಲು ಜೀವನಶೈಲಿಯ ಬದಲಾವಣೆ ಅತ್ಯವಶ್ಯಕ ಎಂದು ಅಭಿಪ್ರಾಯಿಸಿದ್ದಾರೆ. ಖ್ಯಾತ ಕ್ಯಾನ್ಸರ್ ತಜ್ಞರಾಗಿರುವ ಈ ವೈದ್ಯರು ಆಯುರ್ವೇದ ಔಷದಗಳು ಮತ್ತು ಚಿಕಿತ್ಸೆಯ ಬಗ್ಗೆ ಸಾಕಷ್ಟು ಆಸಕ್ತಿಯನ್ನು ತೋರುತ್ತಿದ್ದಾರೆ. 

ನಿಜ ಹೇಳಬೇಕಿದ್ದಲ್ಲಿ ನೀವು ದಿನನಿತ್ಯ ಓದುವ ಪತ್ರಿಕೆಗಳಲ್ಲಿ ಪ್ರಕಟವಾಗುವ ಅನೇಕ ಜಾಹೀರಾತುಗಳಲ್ಲಿ, ಮಧುಮೇಹ ವ್ಯಾಧಿಯ ಚಿಕಿತ್ಸೆಯಲ್ಲಿ ಬಳಸಬಹುದಾದ ಹಾಗೂ ಗಿಡಮೂಲಿಕೆಗಳಿಂದ ತಯಾರಿಸಿರುವ ಮತ್ತು ಪರ್ಯಾಯ ಪದ್ದತಿಯ ಔಷದಗಳ ಜಾಹೀರಾತುಗಳೂ ಸೇರಿವೆ. ಆದರೆ ಇದುವರೆಗೆ ಯಾವುದೇ ಪದ್ದತಿಯ ವಿಜ್ಞಾನಿಗಳು ಮತ್ತು ವೈದ್ಯರು,ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಆವಿಷ್ಕರಿಸಿಲ್ಲ. ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದವನ್ನು ಪತ್ತೆಹಚ್ಚಿದವರಿಗೆ ವಿಶ್ವ ವಿಖ್ಯಾತ ನೊಬೆಲ್ ಪ್ರಶಸ್ತಿಯೊಂದಿಗೆ ಕೋಟ್ಯಾಂತರ ಡಾಲರ್ ಬಹುಮಾನ ದೊರೆಯುವುದರಲ್ಲಿ ಸಂದೇಹವಿಲ್ಲ. 

ಮಧುಮೇಹ ಎಂದರೇನು? 

ನಿಮ್ಮ ಶರೀರದಲ್ಲಿರುವ ಮೇದೋಜೀರಕ ಗ್ರಂಥಿಗಳಲ್ಲಿನ ಬೀಟಾ ಜೀವಕಣಗಳು ಉತ್ಪಾದಿಸುವ ಇನ್ಸುಲಿನ್ ನ ಪ್ರಮಾಣವು ಕಡಿಮೆಯಾದಾಗ ಅಥವಾ ಸಂಪೂರ್ಣವಾಗಿ ನಶಿಸಿದಾಗ, ನಿಮ್ಮ ರಕ್ತದಲ್ಲಿನ ಗ್ಲುಕೋಸ್ ನ ಪ್ರಮಾಣವು ಅನಿಯಂತ್ರಿತವಾಗಿ ಹೆಚ್ಚುವುದು. ತತ್ಪರಿಣಾಮವಾಗಿ ಮಧುಮೇಹ ವ್ಯಾಧಿ ಉದ್ಭವಿಸುವುದು. ಮಧುಮೇಹವನ್ನು ಸ್ಥೂಲವಾಗಿ ಎರಡು ವಿಧಗಳನ್ನಾಗಿ ವಿಂಗಡಿಸಿದ್ದು, ಇನ್ಸುಲಿನ್ ಅವಲಂಬಿತ ಮತ್ತು ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ ಎಂದು ಕರೆಯಲ್ಪಡುತ್ತವೆ. ಇದಲ್ಲದೆ ಮಹಿಳೆಯರು ಗರ್ಭ ಧರಿಸಿದಾಗ ಪ್ರತ್ಯಕ್ಷವಾಗುವ ಹಾಗೂ ಬಹುತೇಕ ಮಹಿಳೆಯರಲ್ಲಿ ಹೆರಿಗೆಯ ಬಳಿಕ ಅದೃಶ್ಯವಾಗುವ ಮಧುಮೇಹವೂ ಇತ್ತೀಚಿನ ವರ್ಷಗಳಲ್ಲಿ ಅತಿಯಾಗಿ ಕಾಣಸಿಗುತ್ತಿದೆ. ಆದರೆ ಇದನ್ನು ಜೀವನಶೈಲಿಯ ಬದಲಾವಣೆ ಮತ್ತು ಅವಶ್ಯಕತೆಯಿದ್ದಲ್ಲಿ ಸೂಕ್ತ ಔಷದಗಳ ಸೇವನೆಯಿಂದ ನಿಯಂತ್ರಿಸುವುದು ಸುಲಭಸಾಧ್ಯ. 

ಚಿಕಿತ್ಸೆ 

ಇನ್ಸುಲಿನ್ ಅವಲಂಬಿತ ಮಧುಮೇಹ ಪೀಡಿತರು ದಿನನಿತ್ಯ ಇನ್ಸುಲಿನ್ ಚುಚ್ಚು ಮದ್ದನ್ನು ಪಡೆದುಕೊಳ್ಳುವುದು ಅನಿವಾರ್ಯ. ಆದರೆ ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ ಮಧುಮೇಹ ಪೀಡಿತರಿಗೆ ಆಧುನಿಕ ಪದ್ದತಿಯ ಮಾತ್ರೆಗಳ ಸೇವನೆಯಿಂದ ಕಾಯಿಲೆಯನ್ನು ನಿಯಂತ್ರಿಸಬಹುದಾಗಿದೆ. ಅಂತೆಯೇ ಸೌಮ್ಯ ಸ್ವರೂಪದ ಮಧುಮೇಹವನ್ನು ಕೇವಲ ಆಹಾರ ಸೇವನೆಯಲ್ಲಿ ಕಟ್ಟುನಿಟ್ಟಿನ ಪಥ್ಯ, ದೈನಂದಿನ ವ್ಯಾಯಾಮ, ಮಾನಸಿಕ ಒತ್ತಡಗಳಿಂದ ದೂರವಿರುವುದೇ ಮುಂತಾದ ಜೀವನಶೈಲಿಯ ಬದಲಾವಣೆಯಿಂದ ಸಮರ್ಪಕವಾಗಿ ನಿಯಂತ್ರಿಸಬಹುದಾಗಿದೆ. 

ಮಿಥ್ಯೆ 

ಅನೇಕರು ಹೇಳುವಂತೆ ಆಧುನಿಕ ಪದ್ದತಿಯ ಔಷದಗಳನ್ನು ಸೇವಿಸುವ ಮಧುಮೇಹ ಪೀಡಿತರಿಗೆ ಕಣ್ಣು, ಮೂತ್ರಪಿಂಡಗಳು ಮತ್ತು ನರಗಳಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಬಾಧಿಸುತ್ತವೆ ಎನ್ನುವುದು ಅಪ್ಪಟ ಸುಳ್ಳು. ಜಿಹ್ವಾ ಚಾಪಲ್ಯವನ್ನು ಬಿಡಲೊಲ್ಲದ ಮಧುಮೇಹಿಗಳು ಸಕ್ಕರೆ ಹಾಗೂ ಬೆಲ್ಲದಿಂದ ತಯಾರಿಸಿದ ತಿಂಡಿಗಳನ್ನು ಅತಿಯಾಗಿ ಸೇವಿಸುವುದು, ದ್ರಾಕ್ಷಿ, ಮಾವು, ಸಪೋಟ ( ಚಿಕ್ಕು ) ಚೆನ್ನಾಗಿ ಕಳಿತ ಬಾಳೆಹಣ್ಣು ಮತ್ತಿತರ ಅತ್ಯಂತ ಮಧುರವಾದ ಹಣ್ಣುಗಳನ್ನು ಸೇವಿಸುವುದು ಮತ್ತು ನಿಷ್ಕ್ರಿಯ ಜೀವನ ಶೈಲಿಯನ್ನು ಪರಿಪಾಲಿಸಿದಲ್ಲಿ ಯಾವುದೇ ಪದ್ದತಿಯ ಔಷದಗಳನ್ನು ಸೇವಿಸಿದರೂ ಮೇಲೆ ನಮೂದಿಸಿದ ಆರೋಗ್ಯದ ಸಮಸ್ಯೆಗಳು ಬಾಧಿಸುವುದರಲ್ಲಿ ಸಂದೇಹವಿಲ್ಲ. ಆದುದರಿಂದ ಗಿಡಮೂಲಿಕೆಗಳಿಂದ ತಯಾರಿಸಿದ ಔಷದಗಳು ಅಡ್ಡ ಪರಿಣಾಮವನ್ನು ಬೀರುವುದಿಲ್ಲ ಮತ್ತು ಶತಪ್ರತಿಶತ ಸುರಕ್ಷಿತ ಎನ್ನುವುದು ಮಧುಮೇಹ ಚಿಕಿತ್ಸೆಯ ವಿಚಾರದಲ್ಲಿ ನಿಜವಲ್ಲ!. ವಿಶೇಷವೆಂದರೆ ಯಾವುದೇ ಪದ್ದತಿಯ ಔಷದಗಳನ್ನು ಸೇವಿಸುವ ವ್ಯಕ್ತಿಗಳು ತಮ್ಮ ರಕ್ತದಲ್ಲಿನ ಗ್ಲುಕೋಸ್ ನ ಮಟ್ಟವನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಯಶಸ್ವಿಯಾದಲ್ಲಿ, ಅನ್ಯ ವಿಧದ ಆರೋಗ್ಯದ ಸಮಸ್ಯೆಗಳು ಉದ್ಭವಿಸುವ ಮತ್ತು ಉಲ್ಬಣಿಸುವ ಸಾಧ್ಯತೆಗಳು ಅತ್ಯಲ್ಪ ಎನ್ನುವುದರಲ್ಲಿ ಸಂದೇಹವಿಲ್ಲ. 

BGS - 34 

ಕೌನ್ಸಿಲ್ ಆಫ್ ಸಯಂಟಿಫಿಕ್ ಎಂಡ್ ಇಂಡಸ್ಟ್ರಿಯಲ್ ರಿಸರ್ಚ್ ( ಸಿ ಎಸ್ ಐ ಆರ್ ) ಸಂಸ್ಥೆಯು ಸುಮಾರು ಆರು ವರ್ಷಗಳ ಕಾಲ ಶ್ರಮಿಸಿ, ಆರು ವಿಧದ ಗಿಡಮೂಲಿಕೆಗಳನ್ನು ಬಳಸಿ ಸಿದ್ಧಪಡಿಸಿರುವ ಬಿ ಜಿ ಎಸ್ - 34 ನಾಮಧೇಯದ ಮಾತ್ರೆಗಳು, ಮಧುಮೇಹ ಪೀಡಿತರು ಈಗಾಗಲೇ ಸೇವಿಸುತ್ತಿರುವ ಅನ್ಯ ಔಷದಗಳೊಂದಿಗೆ ಮಧುಮೇಹವನ್ನು ನಿಯಂತ್ರಿಸಲು ಪೂರಕವಾಗಿ ಬಳಸಬಹುದಾಗಿದೆ ಎನ್ನುವ ವಿವರವನ್ನು ಪ್ರಕಟಿಸಲಾಗಿದೆ. ಆದರೆ ಈ ಔಷದ ಅಥವಾ ಅನ್ಯ ಯಾವುದೇ ಔಷದಗಳ ಸೇವನೆಯಿಂದ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸುವ ಸಾಧ್ಯತೆಗಳೇ ಇಲ್ಲ ಎನ್ನುವುದನ್ನು ಮರೆಯದಿರಿ. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು