Monday, January 11, 2016

KARNATAKA MLA'S - NO FOREIGN JUNKETS THIS YEAR


ಕರ್ನಾಟಕದ ಶಾಸಕರಿಗೆ ದುರ್ಲಭವೆನಿಸಿರುವ  ವಿದೇಶ ಅಧ್ಯಯನ ಪ್ರವಾಸ

ಕರ್ನಾಟಕದ ಅನೇಕ ಭಾಗಗಳಲ್ಲಿ ವ್ಯಾಪಕವಾಗಿ ತಲೆದೋರಿರುವ ಬರ ಹಾಗೂ ಅಕಾಲಿಕ ಮಳೆಯ ಹಾವಳಿಯಿಂದಾಗಿ ಸಂಭವಿಸಿದ್ದ ಬೆಳೆಹಾನಿಯ ಪರಿಣಾಮವಾಗಿ, ಈ ಬಾರಿಯೂ ರಾಜ್ಯದ ಶಾಸಕರಿಗೆ ಉಚಿತವಾಗಿ ಲಭಿಸುತ್ತಿದ್ದ ವಿದೇಶ ಪ್ರವಾಸದ ಭಾಗ್ಯವು ದುರ್ಲಭವೆನಿಸಿದೆ. ರಾಜ್ಯದ ಜನತೆ ಸಂಕಷ್ಟದಲ್ಲಿರುವಾಗ ಚುನಾಯಿತ ಜನಪ್ರತಿನಿಧಿಗಳು ಸರ್ಕಾರದ ಹಣದಲ್ಲಿ ಮೋಜುಮಸ್ತಿಗಳನ್ನು ಮಾಡುವುದು ಸರಿಯಲ್ಲ ಎನ್ನುವ ಕಾರಣದಿಂದಾಗಿ, ಗತವರ್ಷದಲ್ಲಿ ಶಾಸಕರ ವಿದೇಶ ಪ್ರವಾಸವನ್ನು ರದ್ದುಪಡಿಸಲಾಗಿತ್ತು. ಇದೀಗ ಮತ್ತೊಮ್ಮೆ ಅದೇ ಕಾರಣದಿಂದಾಗಿ ಪ್ರವಾಸವನ್ನು ರದ್ದುಪಡಿಸಲಾಗಿದೆ. ಆದರೆ ಮುಂದೆ ಪರಿಸ್ಥಿತಿ ಸುಧಾರಿಸಿದಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದಾಗಿ ಮಾನ್ಯ ಸಭಾಧ್ಯಕ್ಷರು ಹೇಳಿದ್ದಾರೆ.

ಹಿನ್ನೆಲೆ

ಜೆ ಡಿ ಎಸ್ ಮತ್ತು ಬಿ ಜೆ ಪಿ ಪಕ್ಷಗಳ ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಮೊತ್ತಮೊದಲಿಗೆ ಚೀನಾ ದೇಶಕ್ಕೆ ಭೇಟಿ ನೀಡುವುದರೊಂದಿಗೆ ಆರಂಭವಾಗಿದ್ದ ಕರ್ನಾಟಕದ ಶಾಸಕರ ವಿದೇಶ ಪ್ರವಾಸ ಭಾಗ್ಯವು, ತದನಂತರ ವಿಧಾನಮಂಡಲಗಳ ವಿವಿಧ ಸಮಿತಿಗಳು ಅಧ್ಯಯನದ ನೆಪದಲ್ಲಿ ಸುಪ್ರಸಿದ್ಧ ಅಂತರ ರಾಷ್ಟ್ರೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರಹಸನವಾಗಿ ಮಾರ್ಪಟ್ಟಿತ್ತು. ಈ ಪ್ರವಾಸದಲ್ಲಿ ಭಾಗಿಯಾಗುವ ಒಬ್ಬ ಶಾಸಕರು ಕೇವಲ ೨.೫೦ ಲಕ್ಷ ರೂ. ವ್ಯಯಿಸಬಹುದಾಗಿದ್ದರೂ, ಸಮಿತಿಗಳ ವಿದೇಶ ಪ್ರವಾಸದ ಸಂಪೂರ್ಣ ವೆಚ್ಚವನ್ನು ರಾಜ್ಯಸರ್ಕಾರವೇ ಭರಿಸುತ್ತಿತ್ತು!.

ರಾಜ್ಯದ ಶಾಸಕರ ವಿದೇಶ ಯಾತ್ರೆಯ ಬಗ್ಗೆ ಕರ್ನಾಟಕದಲ್ಲಿ ಮಾತ್ರವಲ್ಲ, ರಾಷ್ಟ್ರೀಯ ಮಟ್ಟದಲ್ಲಿ ಕೂಡಾ ವ್ಯಾಪಕ ಪ್ರತಿರೋಧ ವ್ಯಕ್ತವಾಗಿತ್ತು. ಜೊತೆಗೆ ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರತಿಕೂಲ ಪ್ರತಿಕ್ರಿಯೆಗಳು ಪ್ರಕಟಗೊಂಡಿದ್ದರೂ, ರಾಜ್ಯದಲ್ಲಿ ಲೋಕಸಭಾ ಚುನಾವಣೆಗಳು ಮುಗಿದೊಡನೆ, ನಾಲ್ಕು ಸದನ ಸಮಿತಿಗಳು ವಿದೇಶ ಅಧ್ಯಯನ ಪ್ರವಾಸಕ್ಕೆ ಹೊರಡಲು ಹೊರಡಲು ಪೂರ್ವಸಿದ್ಧತೆಗಳನ್ನು ನಡೆಸಿದ್ದವು. ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿದ್ದ  ಈ ಪ್ರವಾಸಕ್ಕೆ ಅನುಮತಿಯನ್ನು ನೀಡಲು ನಿರಾಕರಿಸಿದ್ದ ವಿಧಾನ ಸಭಾಧ್ಯಕ್ಷರು, ವಿದೇಶ ಪ್ರವಾಸದ ವಿಚಾರದಲ್ಲಿ ಕೆಲವೊಂದು ನೀತಿ ನಿಯಮಗಳು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ನೇಮಿಸಿರುವ ಅಧಿಕೃತ ಸಮಿತಿಯು ತನ್ನ  ಶಿಫಾರಸುಗಳನ್ನು ಸಲ್ಲಿಸಿದ ಬಳಿಕವೇ ಅಂತಿಮ ನಿರ್ಧಾರವನ್ನು ಕೈಗೊಳ್ಳುವುದಾಗಿ ಹೇಳಿದ್ದರು.ಜೊತೆಗೆ ಕಳೆದ ಐದು ವರ್ಷಗಳಲ್ಲಿ ವಿದೇಶ ಪ್ರವಾಸವನ್ನು ಕೈಗೊಂಡಿದ್ದ ಸಮಿತಿಗಳು ಸಲ್ಲಿಸಿದ್ದ ಅಧ್ಯಯನದ ವರದಿಗಳನ್ನು ಪರಿಶೀಲಿಸುವುದಾಗಿಯೂ ಘೋಷಿಸಿದ್ದರು.ತನ್ಮೂಲಕ ೨೦೦೯ ರಲ್ಲಿ ರೂಪಿಸಿದ್ದ ಮಾರ್ಗದರ್ಶಿ ನಿಯಮಗಳ ಬಗ್ಗೆ ತಮಗೇನೂ ತಿಳಿದಿಲ್ಲವೆಂದು ಮತ್ತು ಇದಕ್ಕೂ ಮುನ್ನ ವಿದೇಶ ಪ್ರವಾಸ ಕೈಗೊಂಡಿದ್ದ ಸದನ ಸಮಿತಿಗಳು ತಮಗೆ ಸಲ್ಲಿಸಿದ್ದ ಅಧ್ಯಯನದ ವರದಿಗಳನ್ನು ಇಂದಿನ ತನಕ ತಾವು ಪರಿಶೀಲಿಸಿಲ್ಲ ಎನ್ನುವುದನ್ನು ಸ್ವಯಂ ಧೃಢಪಡಿಸಿದ್ದರು.

ಪುಕ್ಕಟೆ ಪ್ರವಾಸವನ್ನು ಅಂತ್ಯಗೊಳಿಸಿ  


ಕರ್ನಾಟಕ ರಾಜ್ಯದ ವಿಧಾನ ಮಂಡಲಗಳ ವಿವಿಧ ಸದನ ಸಮಿತಿಗಳ ಸದಸ್ಯರಾಗಿರುವ ಶಾಸಕರು ಅಧ್ಯಯನದ ನೆಪದಲ್ಲಿ ಉಚಿತ ವಿದೇಶ ಪ್ರವಾಸ ಕೈಗೊಳ್ಳುವುದನ್ನು ಇದೀಗ  ಅಂತ್ಯಗೊಳಿಸಲೇಬೇಕಾಗಿದೆ. ರಾಜ್ಯದ ಪ್ರಜೆಗಳು ತೆತ್ತ ತೆರಿಗೆಯ ಹಣವನ್ನು ವ್ಯಯಿಸಿ, ಮೋಜು- ಮಸ್ತಿಗಳ ಸಲುವಾಗಿ ಸುಪ್ರಸಿದ್ಧ ವಿದೇಶಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ನಮ್ಮ ಶಾಸಕರು, ಅಲ್ಲಿ ನಡೆಸುವ " ಅಧ್ಯಯನ" ಏನೆಂದು ಜನಸಾಮಾನ್ಯರಿಗೂ ತಿಳಿದಿದೆ. ವಿಶೇಷವೆಂದರೆ ವಿವಿಧ ಸದನ ಸಮಿತಿಗಳ ಕರ್ತವ್ಯ ಹಾಗೂ ಹೊಣೆಗಾರಿಕೆಗಳಿಗೆ ಮತ್ತು ಇವರು ಅಧ್ಯಯನದ ಸಲುವಾಗಿ ಸಂದರ್ಶಿಸುವ ವಿದೇಶಿ ಪ್ರವಾಸಿ ತಾಣಗಳಿಗೆ ಯಾವುದೇ ಸಂಬಂಧ ಇಲ್ಲದಿರುವುದು ಈ ಪ್ರವಾಸದ ಉದ್ದೇಶವನ್ನು ಬಯಲುಗೊಳಿಸುತ್ತದೆ !.
ಶಾಸಕರ ವಿದೇಶ ಪ್ರವಾಸದ ವಿಚಾರದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದ ಪ್ರತಿಕೂಲ ಪ್ರತಿಕ್ರಿಯೆಗಳ ಹೊರತಾಗಿಯೂ, ಕೆಲವರ್ಷಗಳ ಹಿಂದೆ ವಿದೇಶ ಪ್ರವಾಸವನ್ನು ಕೈಗೊಂಡಿದ್ದ ಶಾಸಕರ ಸಂದರ್ಶನವನ್ನು ನಡೆಸಿದ್ದ ರಾಷ್ಟ್ರೀಯ ಖಾಸಗಿ ಟಿ. ವಿ ವಾಹಿನಿಯ ವರದಿಗಾರರ ಪ್ರಶ್ನೆಗಳಿಗೆ ತಬ್ಬಿಬ್ಬಾದ ಶಾಸಕರು ನೀಡಿದ್ದ ಉತ್ತರಗಳು, ಈ ಕಾರ್ಯಕ್ರಮವನ್ನು ವೀಕ್ಷಿಸಿದವರಿಗೆ ಸಾಕಷ್ಟು ಮನೋರಂಜನೆಯನ್ನು ನೀಡಲು ಯಶಸ್ವಿಯಾಗಿತ್ತು!.

ಪ್ರವಾಸಕ್ಕೆ ತಡೆ

ಗತವರ್ಷದಲ್ಲಿ ವಿಧಾನಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪನವರು ರಾಜ್ಯದ ಜನತೆ ಬರಗಾಲದಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಶಾಸಕರು ವಿದೇಶ ಪ್ರವಾಸಕ್ಕೆ ತೆರಳುವುದು ಸರಿಯಲ್ಲ ಎಂದಿದ್ದರು. ಹಾಗೂ ಈ ಬಗ್ಗೆ ಯಾವುದೇ ಪ್ರಸ್ತಾವನೆ ತಮ್ಮ ಬಳಿಗೆ ಬಂದಿಲ್ಲ. ಪ್ರಸ್ತಾವನೆ ಬಂದರೂ ಶಾಸಕರ ವಿದೇಶ ಪ್ರವಾಸದ ವಿಚಾರದಲ್ಲಿ ಸೂಕ್ತ ನೀತಿನಿಯಮಗಳು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ತಾವು ಇದೀಗ ನೇಮಿಸಿರುವ ಸಮಿತಿಯ ವರದಿಯು ಕೈಸೇರಿದ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದಾಗಿಯೂ ಹೇಳಿದ್ದರು.

ದೇ ಸಂದರ್ಭದಲ್ಲಿ  ವಿಧಾನ ಸಭೆಯ ಸಚಿವಾಲಯದ ಕಾರ್ಯದರ್ಶಿಯವರು ಸುತ್ತೊಲೆಯೊಂದನ್ನು ಹೊರಡಿಸಿ, ಯಾವುದೇ ಸದನ ಸಮಿತಿಗಳ ಸದಸ್ಯರಾಗಿರುವ ಶಾಸಕರು ವಿದೇಶ ಪ್ರವಾಸದ ಪ್ರಸ್ತಾವನೆಯನ್ನು ಸಲ್ಲಿಸದಂತೆ ಸೂಚಿಸಿದ್ದರು.ಜೊತೆಗೆ ವಿಧಾನ ಸಭೆಯ ಅಧ್ಯಕ್ಷರು ನೇಮಿಸಿರುವ ಅಧಿಕೃತ ಸಮಿತಿಯು ಈ ಬಗ್ಗೆ ಮಾರ್ಗದರ್ಶಿ ನೀತಿ ನಿಯಮಗಳನ್ನು ರೂಪಿಸುವ ತನಕ ಶಾಸಕರ ವಿದೇಶ ಪ್ರವಾಸವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಘೋಷಿಸಿದ್ದರು.. ಪ್ರಾಯಶಃ ರಾಜ್ಯದ ಅನೇಕ ಭಾಗಗಳಲ್ಲಿ ತೀವ್ರ ಬರಗಾಲ ಬಾಧಿಸುತ್ತಿದ್ದು, ಈ ಸಂದರ್ಭದಲ್ಲಿ ನಮ್ಮ ಶಾಸಕರು ವಿದೇಶಗಳಿಗೆ ತೆರಳಿ ಮೋಜುಮಸ್ತಿ ಮಾಡುವುದು ಸರಿಯಲ್ಲ ಎನ್ನುವ ಟೀಕೆಗೆ ಅವಕಾಶವನ್ನು ನೀಡದಿರಲು ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಅದೇರೀತಿಯಲ್ಲಿ ವಿಧಾನಸಭಾಧ್ಯಕ್ಷರು ತಾವು ನೇಮಿಸಿರುವ ಸಮಿತಿಯ ವರದಿ ಕೈಸೇರಿದ ಬಳಿಕ, ಅದರಲ್ಲಿನ ಶಿಫಾರಸುಗಳನ್ವಯ ಸದನ ಸಮಿತಿಗಳಿಗೆ ವಿದೇಶ ಪ್ರವಾಸಕ್ಕೆ ಅನುಮತಿಯನ್ನು ನೀಡುವುದಾಗಿ  ಹೇಳಿದ್ದು, ಶಾಸಕರ ವಿದೇಶ ಅಧ್ಯಯನ ಪ್ರವಾಸ ರದ್ದುಗೊಳ್ಳುವ ಸಾಧ್ಯತೆಗಳಿಲ್ಲ ಎನ್ನುವುದನ್ನು ಪರೋಕ್ಷವಾಗಿ ಸೂಚಿಸಿದ್ದರು.

ಬದಲಾ ವ್ಯವಸ್ಥೆ

ಮಾನ್ಯ ಸ್ಪೀಕರ್ ನೇಮಿಸಿದ್ದ ಸಮಿತಿಯು ವಿಧಾನಮಂದಲಗಳ ಹಲವಾರು ಸಮಿತಿಗಳ ಬದಲಾಗಿ, ೨೦ - ೨೫ ಶಾಸಕರ ತಂಡಗಳನ್ನು ರಚಿಸಿ ಆಸಕ್ತ ವಿಷಯಗಳ ಬಗ್ಗೆ ಅಧ್ಯನ ನಡೆಸಲು ವಿದೇಶಗಳಿಗೆ ಕಳುಹಿಸುವಂತೆ ಸಲಹೆಯನ್ನು ನೀಡಿತ್ತು. ಅಂತೆಯೇ ಈ ಸಮಿತಿಗಳು ಸ್ವದೇಶಕ್ಕೆ ಮರಳಿದ ಹತ್ತು ದಿನಗಳ ಒಳಗೆ ತಾವು ನಡೆಸಿರುವ ಅಧ್ಯಯನದ ವರದಿಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಬೇಕೆಂದು ಸೂಚಿಸಿತ್ತು.

ಶಾಸಕರು ಇನ್ನುಮುಂದೆ ಕೇಂದ್ರ ವಿದೇಶಾಂಗ ಸಚಿವಾಲಯದ ಮೂಲಕವೇ ವಿದೇಶ ಪ್ರವಾಸ ಕೈಗೊಳ್ಳಬೇಕು ಮತ್ತು ವಿದೇಶಗಳಲ್ಲಿ ಭೇಟಿನೀಡುವ ತಾಣಗಳನ್ನು ಆಯಾ ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳೇ ನಿರ್ಧರಿಸಬೇಕು. ಶಾಸಕರ ವಿದೇಶ ಪ್ರವಾಸದ ಮಾರ್ಗಸೂಚಿ ನಿಯಮಗಳನ್ನು ಸಿದ್ಧಪಡಿಸಲು ರಚಿಸಲಾದ ವಿಧಾನಮಂಡಲದ ಉಭಯ ಸದನಗಳ ಕಾರ್ಯದರ್ಶಿಗಳ ಸಮಿತಿಯು ಇಂತಹ ಶಿಫಾರಸೊಂದನ್ನು ಮಾಡಿತ್ತು.

ಶಾಸಕರು ಯಾವ ವಿಷಯದ ಮೇಲೆ ಯಾವ ದೇಶದಲ್ಲಿ ಅಧ್ಯಯನ ಮಾಡಲು ಪ್ರವಾಸ ಕೈಗೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿ ಮಾಹಿತಿ ನೀಡಬೇಕಾಗುತ್ತದೆ. ಬಳಿಕ ವಿದೇಶಾಂಗ ಸಚಿವಾಲಯವು ಶಾಸಕರು ಹೋಗಬಯಸುವ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಈ ಮಾಹಿತಿಯನ್ನು ರವಾನಿಸಿ, ಎಲ್ಲೆಲ್ಲಿ ಅಧ್ಯಯನವನ್ನು ನಡೆಸಬಹುದು ಎನ್ನುವುದರ ಬಗ್ಗೆ ಪಟ್ಟಿಯನ್ನು ಪಡೆದುಕೊಳ್ಳಬೇಕಾಗುವುದು. ಅಂತೆಯೇ ಅಲ್ಲಿನ ಸರಕಾರಕ್ಕೂ ವಿಷಯವನ್ನು ತಿಳಿಸಿ, ಶಾಸಕರನ್ನು ಸ್ವಾಗತಿಸಿ ಮಾಹಿತಿ ನೀಡುವ ವ್ಯವಸ್ಥೆ ಮಾಡಿಸುವುದು ಇದರ ಉದ್ದೇಶವೆಂದು ಹೇಳಲಾಗಿತ್ತು.
ನಿಜ ಹೇಳಬೇಕಿದ್ದಲ್ಲಿ ಸದನ ಸಮಿತಿಗಳ ಸದಸ್ಯರಾಗಿರುವ ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳ ಶಾಸಕರು ಕೈಗೊಳ್ಳುವ ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಕೆಲವೊಂದು ನೀತಿ ನಿಯಮಗಳನ್ನು ೨೦೦೯ರ ಜೂನ್ ತಿಂಗಳಿನಲ್ಲೇ  ರೂಪಿಸಲಾಗಿತ್ತು. ಆದರೆ ಗತವರ್ಷದಲ್ಲಿ ಇದಕ್ಕಾಗಿ ಮತ್ತೊಂದು ಸಮಿತಿಯನ್ನು  ನೇಮಿಸಿದ್ದೇಕೆ ಎಂದು ನಮಗೂ ತಿಳಿದಿಲ್ಲ!.

ಶಾಸಕರ ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ೨೦೦೯ ರಲ್ಲಿ ರೂಪಿಸಿದ್ದ ನೀತಿನಿಯಮಗಳನ್ನು ಸರ್ಕಾರವು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತಿರಲಿಲ್ಲ. ಉದಾಹರಣೆಗೆ ಕರ್ನಾಟಕ ವಿಧಾನಮಂಡಲದ ೧೫ ಸದನ ಸಮಿತಿಗಳಲ್ಲಿ, ಬಿ. ಜೆ. ಪಿ ಸರ್ಕಾರದ ಅಧಿಕಾರಾವಧಿಯಲ್ಲಿ ೧೨ ಸದನ ಸಮಿತಿಗಳು ವಿದೇಶ ಪ್ರವಾಸವನ್ನು ಕೈಗೊಂಡಿದ್ದವು. ಆದರೆ ಇವುಗಳಲ್ಲಿ ಮೂರು ಸಮಿತಿಗಳು ತಾವು ನಡೆಸಿದ್ದ " ಅಧ್ಯಯನ" ದ ವರದಿಗಳನ್ನೇ ಸಭಾಧ್ಯಕ್ಷರಿಗೆ ಸಲ್ಲಿಸಿರಲಿಲ್ಲ!. ಇನ್ನುಳಿದ ೯ ಸಮಿತಿಗಳು ಸಲ್ಲಿಸಿದ್ದ ವರದಿಗಳನ್ನು ಸಭಾಧ್ಯಕ್ಷರು ಪರಿಶೀಲಿಸಿರಲಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ಶಾಸಕರ ವಸತಿ ಸೌಕರ್ಯಗಳ ಸಮಿತಿ, ವಿಧಾನಸಭೆಯ ಅರ್ಜಿಗಳ ಸಮಿತಿ, ಗ್ರಂಥಾಲಯಗಳ ಸಮಿತಿ ಮತ್ತು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗಳು ತಲಾ ಎರಡುಬಾರಿ ವಿದೇಶ ಪ್ರವಾಸಕ್ಕೆ ತೆರಳಿದ್ದವು!. ಸ್ವಾಮೀ ಇದು ಕೇವಲ ಸ್ಯಾಂಪಲ್ ಅಷ್ಟೇ. ನಮ್ಮ ಶಾಸಕರ ವಿದೇಶ ಪ್ರವಾಸದ ನೈಜ ವಿವರಗಳು ನೂರಾರು ಪುಟಗಳಷ್ಟಿವೆ. ಅವೆಲ್ಲವನ್ನೂ ಇಲ್ಲಿ ಪ್ರಕಟಿಸಲು ಸಾಧ್ಯವೂ ಇಲ್ಲ.

ಅದೇನೇ ಇರಲಿ, ಅಂತಿಮವಾಗಿ ಹೇಳುವುದಾದಲ್ಲಿ  ಜನಸಾಮಾನ್ಯರು ತೆತ್ತ ತೆರಿಗೆಯ ಹಣದಲ್ಲಿ ನಮ್ಮ ಶಾಸಕರು ವಿದೇಶ ಪ್ರವಾಸ ಕೈಗೊಳ್ಳುವುದು ನಿಶ್ಚಿತವಾಗಿಯೂ ಸರಿಯಲ್ಲ.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು