Tuesday, February 24, 2015

SWINE FLU - IS BACK WITH A BANG


ಮರಳಿ ಬಂದಿಹುದು : ಮಾರಕ ಹಂದಿ ಜ್ವರ

೨೦೦೯ ರ ಮಾರ್ಚ್ ತಿಂಗಳಿನಲ್ಲಿ ಮೆಕ್ಸಿಕೋ ದೇಶದ ಪುಟ್ಟ ಬಾಲಕನೊಬ್ಬನನ್ನು ಬಲಿಪಡೆಯುವುದರೊಂದಿಗೆ ತನ್ನ ನೂತನ ಅವತಾರವನ್ನು ತೋರಿದ್ದ ಹಾಗೂ ಹಂದಿಜ್ವರ ಎಂದು ಹೆಸರಿದ್ದ ಈ ವಿನೂತನ ಇನ್ಫ್ಲುಯೆಂಜಾ ಜ್ವರವು, ಕೇವಲ ಎರಡು ತಿಂಗಳುಗಳಲ್ಲಿ ವಿಶ್ವದ ೭೪ ರಾಷ್ಟ್ರಗಳಿಗೆ ಹರಡಿತ್ತು !.

ಫ್ಲೂ ಜ್ವರದ ಪ್ರಭೇದ

ನಮ್ಮ ದೇಶದಲ್ಲಿ ಮಳೆಗಾಲ ಆರಂಭವಾದೊಡನೆ  ಪ್ರತ್ಯಕ್ಷವಾಗುವ ಸಾಮಾನ್ಯ ಫ್ಲೂ ( ಇನ್ಫ್ಲುಯೆಂಜಾ ) ಜ್ವರದ ಲಕ್ಷಣಗಳನ್ನೇ ತೋರುವ ಎಚ್ ೧ ಎನ್ ೧ ಎನ್ನುವ ವೈರಸ್ ಗಳಿಂದ ಉದ್ಭವಿಸುವ ಹಾಗೂ " ಹಂದಿಜ್ವರ " ಎಂದು ಕರೆಯಲ್ಪಡುವ ಸಾಂಕ್ರಾಮಿಕ ವ್ಯಾಧಿಗೆಈ ಬಾರಿ ನೂರಾರು ಅಮಾಯಕರು ಬಲಿಯಾಗಿದ್ದಾರೆ. ಇತ್ತೀಚಿನ ವರದಿಗಳಂತೆ ಸುಮಾರು ೧೩,೦೦೦ ಕ್ಕೂ ಅಧಿಕ ಜನರು ಈ ಸೋಂಕಿನಿಂದ ಬಳಲುತ್ತಿದ್ದು, ೮೦೦ ಕ್ಕೂ ಅಧಿಕಜನರು ಮೃತಪಟ್ಟಿದ್ದಾರೆ.

೨೦೦೯ ರಲ್ಲಿ ಮೊದಲ ಬಾರಿಗೆ ಬಾರತದಲ್ಲಿ ಪತ್ತೆಯಾಗಿದ್ದ ಹಂದಿಜ್ವರವು ೬೯೫ ಜನರಿಗೆ ಹರಡಿದ್ದು, ಇದರಲ್ಲಿ ೧೨೫ ರೋಗಿಗಳು ಮೃತಪಟ್ಟಿದ್ದರು. ಬಳಿಕ ೨೦೧೦ ನೆ ಇಸವಿಯಲ್ಲಿ  ೧೦,೦೦೦ ಕ್ಕೂ ಅಧಿಕ ಮಂದಿಗೆ ಈ  ಸೋಂಕು ಹಬ್ಬಿದ್ದು, ಇದಕ್ಕೆ ೧೦೩೫ ಜನರು ಬಲಿಯಾಗಿದ್ದರು.  ಈ ವ್ಯಾಧಿಗೆ ಕಾರನವೆನಿಸಿರುವ ವೈರಸ್ ಗಳು ಇದೀಗ ಮತ್ತಷ್ಟು ಪ್ರಬಲಗೊಂಡಿದ್ದು, ಕಾಡ್ಗಿಚ್ಚಿನಂತೆ ಹರಡುತ್ತಿವೆ. ವೈದ್ಯಕೀಯ ವಿಜ್ಞಾನಿಗಳ ಅನಿಸಿಕೆಯಂತೆ ಹಂದಿ ಜ್ವರದ ವೈರಸ್ ಗಳು ಕ್ರಮೇಣ " ಪರಿವರ್ತನೆ " ಗೊಳ್ಳುತ್ತಾ, ತಮ್ಮ ತೀವ್ರತೆ ಮತ್ತು ಮಾರಕತೆಗಳನ್ನು ಇನ್ನಷ್ಟು ಹೆಚ್ಚಿಸಿಕೊಂಡಿವೆ.

೨೦೦೯ ರ ಎಪ್ರಿಲ್ ನಲ್ಲಿ ಈ "ನೂತನ ಎಚ್ ೧ ಎನ್ ೧ ವೈರಸ್ " ನ್ನು ಗುರುತಿಸಲಾಗಿದ್ದು, ಇದು ಇನ್ಫ್ಲುಯೆಂಜಾ ಎ ವೈರಸ್ ಗುಂಪಿಗೆ ಸೇರಿದ ವೈರಸ್ ಗಳ ನಾಲ್ಕು ತಳಿಗಳು ಪರಿವರ್ತನೆಗೊಂಡು ಉದ್ಭವಿಸಿರಬೇಕೆಂದು ಊಹಿಸಲಾಗಿದೆ.

ರೋಗ ಲಕ್ಷಣಗಳು

ತಲೆ,ಕೈಕಾಲುಗಳು, ಬೆನ್ನು ಮತ್ತು ಸೊಂಟಗಳಲ್ಲಿ ವಿಪರೀತ ನೋವು, ಶೀನು, ಕೆಮ್ಮು, ಗಂಟಲಿನ ಕೆರೆತ ಹಾಗೂ ನೋವು, ಕೆಲವರಲ್ಲಿ ಅಲ್ಪ ಪ್ರಮಾಣದ ಜ್ವರ  ಹಾಗೂ ಮತ್ತೆ  ಕೆಲವರಲ್ಲಿ ಚಳಿಜ್ವರದೊಂದಿಗೆ ನಡುಕ, ವಾಂತಿಭೇದಿ ಮತ್ತು ವ್ಯಾಧಿ ತೀವ್ರವಾಗಿ ಉಲ್ಬಣಿಸಿದಲ್ಲಿ ನ್ಯುಮೋನಿಯಾ ಅಥವಾ ಶ್ವಾಸಾಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ. ಇದಲ್ಲದೇ ಕೆಲರೋಗಿಗಳಲ್ಲಿ ಶರೀರವನ್ನು ಹಿಂಡಿ ಹಿಪ್ಪೆಮಾಡುವಂತಹ ಕೆಮ್ಮು ತಲೆದೋರುವುದು ಅಪರೂಪವೇನಲ್ಲ.

ಪತ್ತೆಹಚ್ಚುವುದೆಂತು?

ಎಚ್ ೧ ಎನ್ ೧ ವೈರಸ್ ಗಳನ್ನೂ ನಿಖರವಾಗಿ ಪತ್ತೆಹಚ್ಚಬಲ್ಲ ಪರೀಕ್ಷಾ ವಿಧಾನಗಳು ಲಭ್ಯವಿದ್ದರೂ, ಇವುಗಳ ವೆಚ್ಚ ತುಸು ದುಬಾರಿಯಾಗಿದೆ. ಇದರ ಪರೀಕ್ಷಾ ಕಿಟ್ ಗಳನ್ನು ಭಾರತೀಯ ವಿಜ್ಞಾನಿಗಳು ಸಂಶೋಧಿಸಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಬ್ಬ ರೋಗಿಯ ಪರೀಕ್ಷೆಗೆ ಇದೀಗ ರಾಜ್ಯ ಸರ್ಕಾರವು ೨೫೦೦ ರೂ. ನಿಗದಿಸಿದ್ದು, ಇದಕ್ಕೂ ಅಧಿಕ ಶುಲ್ಕವನ್ನು ವಿಧಿಸದಂತೆ ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಿಗೆ ಸೂಚನೆಯನ್ನು ನೀಡಿದೆ.

ಚಿಕಿತ್ಸೆ

ಹಂದಿಜ್ವರ ಪೀಡಿತ ರೋಗಿಗಳಲ್ಲಿ ಕಂಡುಬರುವ ಲಕ್ಷಣಗಳಿಗೆ ಅನುಗುಣವಾಗಿ ಅವಶ್ಯಕ ಔಷದಗಳನ್ನು ನೀಡಲಾಗುವುದಾದರೂ, ಈ ವ್ಯಾಧಿಯನ್ನು ನಿಯಂತ್ರಿಸಲು ತಾಮಿಫ್ಲೂ ಎನ್ನುವ ಔಷದವನ್ನು ನೀಡಲೇಬೇಕಾಗುವುದು. ಇದನ್ನು ವಿದೇಶದಿಂದ ಆಮದು ಮಾಡಬೇಕಾಗಿತ್ತಾದರೂ, ೨೦೧೦ ರಲ್ಲೇ ಇದರ ಜೆನೆರಿಕ್ ರೂಪದ ಔಷದವು ನಮ್ಮ ದೇಶದ ಔಷದ ತಯಾರಿಕಾ ಸಂಸ್ಥೆಗಳು ಸಿದ್ಧಪಡಿಸಿದ್ದವು.ಈ ಔಷದದೊಂದಿಗೆ ರೋಗಿಗೆ ಸಂಪೂರ್ಣ ವಿಶ್ರಾಂತಿ ಮತ್ತು ಸಮೃದ್ಧ ಪೋಷಕಾಂಶಗಳಿರುವ ಆಹಾರವನ್ನು ನೀಡಬೇಕಾಗುವುದು. ಅಲ್ಪಪ್ರಮಾಣದ ರೋಗಿಗಳಲ್ಲಿ ಗಂಭೀರ ಸಮಸ್ಯೆಗಳು ಕಂಡುಬಂದಲ್ಲಿ, ಸಂದರ್ಭೋಚಿತವಾಗಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಹಂದಿಜ್ವರಕ್ಕೆ ಬಲಿಯಾಗುವವರಲ್ಲಿ ವಯೋವೃದ್ಧರು, ದೀರ್ಘಕಾಲೀನ ವ್ಯಾಧಿಗಳಿಂದ ಬಳಲುತ್ತಿದ್ದವರು, ಪ್ರಮುಖ ಅಂಗಾಂಗಗಳಿಗೆ ಸಂಬಂಧಿಸಿದ ವ್ಯಾಧಿಪೀಡಿತರು, ರೋಗನಿರೋಧಕ ಶಕ್ತಿಯ ಕೊರತೆಗೆ ಸಂಬಂಧಿಸಿದ ಆರೋಗ್ಯದ ಸಮಸ್ಯೆಗಳಿಂದ ಪೀಡಿತರು ಮತ್ತು ಮಕ್ಕಳ ಸಂಖ್ಯೆ ಗಣನೀಯವಾಗಿದೆ. ಆದರೆ ಈ ಬಾರಿ ಇದಕ್ಕೆ ಬಲಿಯಾದವರ ಪ್ರಮಾಣವು ತುಸು ಹೆಚ್ಚಾಗಿದೆ.

ತಡೆಗಟ್ಟುವುದೆಂತು?

ಶಂಕಿತ ಹಂದಿಜ್ವರ ಪೀಡಿತರನ್ನು ಪ್ರತ್ಯೇಕವಾಗಿ ಇರಿಸಿ ಅವಶ್ಯಕ ಪರೀಕ್ಷೆಯನ್ನು ನಡೆಸಿ, ಸಂದೇಹ ಧೃಢ ಪಟ್ಟಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡವುದು ಅತ್ಯವಶ್ಯಕವೆನಿಸುವುದು.ಸಾರ್ವಜನಿಕ ಸ್ಥಳಗಳಲ್ಲಿ, ಸಭೆ ಸಮಾರಂಭಗಳಲ್ಲಿ, ಜನಜಂಗುಳಿ ಸೇರುವಲ್ಲಿ ನಿಗದಿತ ಗುಣಮಟ್ಟದ “ ಮಾಸ್ಕ್ “ ಗಳನ್ನು ಧರಿಸುವುದು, ಯಾರನ್ನೇ ಭೇಟಿಯಾದಾಗ ಅಥವಾ ಬೀಳ್ಕೊಡುವಾಗ ಹಸ್ತಲಾಘವ ನೀಡದಿರುವುದು, ತಮ್ಮ ಕಣ್ಣು, ಮೂಗು ಮತ್ತು ಬಾಯಿಗಳನ್ನು ಪದೇ ಪದೇ ಸ್ಪರ್ಶಿಸದಿರುವುದು, ಮತ್ತೊಬ್ಬರು ಬಳಸಿರುವ ವಸ್ತುಗಳನ್ನು ಕೈಯ್ಯಿಂದ ಮುಟ್ಟದಿರುವುದು, ಫ್ಲೂ ಜ್ವರದ ಲಕ್ಷಣಗಳಿರುವ ವ್ಯಕ್ತಿಗಳಿಂದ ದೂರವಿರುವುದು, ಕೆಮ್ಮುವಾಗ ಹಾಗೂ ಶೀನುವಾಗ ಕರವಸ್ತ್ರದಿಂದ ಬಾಯಿ – ಮೂಗುಗಳನ್ನು ಮುಚ್ಚಿಕೊಳ್ಳುವುದು,ಆಗಾಗ ತಮ್ಮ ಕೈಗಳನ್ನು ಸೋಪು ಹಚ್ಚಿ ತೊಳೆಯುವುದು ಹಾಗೂ ಮತ್ತೊಬ್ಬರು ಬಳಸಿದ ಕರವಸ್ತ್ರ ಮತ್ತಿತರ ವಸ್ತುಗಳನ್ನು ಬಳಸದಿರುವುದೇ ಮುಂತಾದ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಈ ವ್ಯಾಧಿಯನ್ನು ತಕ್ಕ ಮಟ್ಟಿಗೆ ತಡೆಗಟ್ಟಬಹುದು.

ಲಸಿಕೆಗಳು ಲಭ್ಯವಿದೆಯೇ?

೨೦೧೦ ರಲ್ಲಿ ನಮ್ಮ ದೇಶದ ಕೆಲ ಭಾಗಗಳಲ್ಲಿ ಹಂದಿಜ್ವರ ಪ್ರತ್ಯಕ್ಷವಾದಾಗ, ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಉಪಚರಿಸುವ ಅರೆವೈದ್ಯಕೀಯ ಸಿಬಂದಿಗಳಿಗೆ ಲಸಿಕೆಯೊಂದನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಈ ಲಸಿಕೆಯು ಇದೀಗ ಪರಿವರ್ತನೆಗೊಂಡಿರುವ ವೈರಸ್ ಗಳ ವಿರುದ್ಧ ಅಪೇಕ್ಷಿತ ರಕ್ಷಣೆಯನ್ನು ನೀಡುವ ಸಾಧ್ಯತೆಗಳಿಲ್ಲ. ಇದೀಗ ಪರಿವರ್ತನೆಗೊಂಡು ಪ್ರಬಲವಾಗಿರುವ ತಳಿಗಳ ವಿರುದ್ಧ ರಕ್ಷಣೆಯನ್ನು ನೀಡಬಲ್ಲ ಲಸಿಕೆಗಳನ್ನು, ವೈದ್ಯಕೀಯ ವಿಜ್ಞಾನಿಗಳು ಇನ್ನಷ್ಟೇ ಸಂಶೋಧಿಸಬೇಕಿದೆ.

ಅದೇನೇ ಇರಲಿ, ಪ್ರಸ್ತುತ ಫ್ಲೂ ಜ್ವರದ ಲಕ್ಷಣಗಳನ್ನು ಹೋಲುವ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಪೀಡಿಸಲು ಆರಂಭಿಸಿದಲ್ಲಿ, ನಿಮ್ಮ ನಂಬಿಗಸ್ತ ವೈದ್ಯರನ್ನು ಸಂದರ್ಶಿಸಿ ಅವರ ಸಲಹೆಯನ್ನು ಪಡೆಯಿರಿ. ಅವರು ಸೂಚಿಸಿದಲ್ಲಿ ಮಾತ್ರ ಎಚ್ ೧ ಎನ್ ೧ ವೈರಸ್ ಗಳ ಇರುವಿಕೆಯನ್ನು ಪತ್ತೆಹಚ್ಚಬಲ್ಲ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ಅನಪೇಕ್ಷಿತ ಹಾಗೂ ಪುಕ್ಕಟೆ ಸಲಹೆಗಳನ್ನು ನೀಡುವ ಬಂಧುಮಿತ್ರರ ಮಾತುಗಳಿಗೆ ಮರುಳಾಗದಿರಿ !.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



Saturday, February 21, 2015

ROAD SAFETY - TODAYS NECESSITY




      ರಸ್ತೆ ಸುರಕ್ಷತೆ : ಇಂದಿನ ಅವಶ್ಯಕತೆ


    ನಿರಂತರವಾಗಿ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ, ಭಾರತೀಯರು ಖರೀದಿಸಿ ಬಳಸುತ್ತಿರುವ ವಾಹನಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ.ಇದರೊಂದಿಗೆ ನಮ್ಮ ದೇಶದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳುಮತ್ತು ಇವುಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಸ್ವಾಭಾವಿಕವಾಗಿಯೇ ಹೆಚ್ಚುತ್ತಿದೆ.

ಈ ಜಗತ್ತಿನಲ್ಲೇ ಅತ್ಯಧಿಕ ಜನರನ್ನು ಬಲಿಪಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಹಾಗೂ ಇದೇ ಕಾರಣದಿಂದಾಗಿ “ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರುವವರ ರಾಜಧಾನಿ “ ಎಂದೇ ಕುಖ್ಯಾತವಾಗಿದೆ. ೨೦೦೭ ರ ತನಕ ಈ ಸ್ಥಾನದಲ್ಲಿದ್ದ ಚೀನಾ ದೇಶವನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಗಳಿಸಿದ್ದ ಭಾರತವು, ಇಂದಿನ ತನಕ ಈ ಸ್ಥಾನವನ್ನು ತೆರವುಗೊಳಿಸಿಲ್ಲ !. 

ಕಳೆದ ೧೦ ವರ್ಷಗಳಲ್ಲಿ ೧೦ ಲಕ್ಷಕ್ಕೂ ಅಧಿಕ ಭಾರತೀಯರು ರಸ್ತೆ ಅಪಘಾತಗಳಿಂದ ಮೃತಪಟ್ಟಿದ್ದಾರೆ. ವಿಶೇಷವೆಂದರೆ ಇದು ಜಾಗತಿಕ ಮಟ್ಟದಲ್ಲಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರುವ ಜನರ ಶೇ. ೧೦ ರಷ್ಟಾಗಿದೆ !.

ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ, ಕಳೆದ ೨೭ ವರ್ಷಗಳಿಂದ ಭಾರತದ ಪ್ರತಿಯೊಂದು ರಾಜ್ಯಗಳಲ್ಲೂ ರಸ್ತೆ ಸುರಕ್ಷತಾ ಸಪ್ತಾಹವನ್ನು ವರ್ಷಂಪ್ರತಿ ಜನವರಿ ತಿಂಗಳಿನಲ್ಲಿ ಆಚರಿಸಲಾಗುತ್ತಿದೆ. ಆದರೆ ಕೇವಲ ಕಾಟಾಚಾರಕ್ಕಾಗಿ ಹಮ್ಮಿಕೊಳ್ಳುವ ಈ ಕಾರ್ಯಕ್ರಮವು, ನಿಗದಿತ ಉದ್ದೇಶವನ್ನು ಈಡೇರಿಸಲು ವಿಫಲವಾಗಿದೆ.

ಅಂಕಿ ಅಂಶಗಳು 

೨೦೧೩ ರಲ್ಲಿ ದೇಶಾದ್ಯಂತ ೪,೪೩,೦೦೧ ರಸ್ತೆ ಅಪಘಾತಗಳು ಸಂಭವಿಸಿದ್ದು, ೧,೩೭,೪೨೩ ಜನರು ಬಲಿಯಾಗಿದ್ದರು. ಜೊತೆಗೆ ೪,೬೯,೮೮೨ ಜನರು ಗಾಯಗೊಂಡಿದ್ದರು. ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರುವವರಲ್ಲಿ ಶೇ. ೫೦ ರಷ್ಟು ಜನರು ಪಾದಚಾರಿಗಳು, ಸೈಕಲ್ ಸವಾರರು ಮತ್ತು ದ್ವಿಚಕ್ರ ವಾಹನ ಸವಾರರಾಗಿರುವುದಲ್ಲದೇ, ೧೫ ರಿಂದ ೨೯ ವರ್ಷ ವಯಸ್ಸಿನವರೇ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ರಸ್ತೆ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡ ಶೇ. ೫೦ ರಷ್ಟು ಜನರು ಸೂಕ್ತ ಸಮಯದಲ್ಲಿ ತುರ್ತು ಚಿಕಿತ್ಸೆ ಲಭಿಸದ ಕಾರಣದಿಂದಾಗಿಯೇ ಮೃತಪಡುತ್ತಾರೆ. ಏಕೆಂದರೆ ಸ್ಥಳದಲ್ಲಿ ಹಾಜರಿರುವ ಶೇ.೭೪ ಜನರು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕೊಂಡೊಯ್ದು ದಾಖಲಿಸಲು ಹಿಂಜರಿಯುತ್ತಾರೆ !.

ನಮ್ಮ ದೇಶದಲ್ಲಿ ಪ್ರತಿ ೪ ನಿಮಿಷಗಳಿಗೆ ಒಬ್ಬ ವ್ಯಕ್ತಿ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದು, ವರ್ಷಂಪ್ರತಿ ಈ ಸಂಖ್ಯೆಯಲ್ಲಿ ಶೇ.೮ ರಷ್ಟು ಹೆಚ್ಚಳವಾಗುತ್ತಿದೆ. ಈ ಪ್ರಮಾಣವು  ಇದೇ ರೀತಿಯಲ್ಲಿ  ಮುಂದುವರೆದಲ್ಲಿ, ೨೦೩೦ ರಲ್ಲಿ ಈ ಸಂಖ್ಯೆಯು ೨.೬೦ ಲಕ್ಷವನ್ನು ತಲುಪಲಿದೆ.

ಕಾರಣಗಳೇನು ?

ಉತ್ತಮ ರಸ್ತೆಗಳ ಹಾಗೂ  ಸುರಕ್ಷಿತ ಕಾಲುದಾರಿಗಳ ಅಭಾವ, ಸಂಚಾರಿ ಪೋಲೀಸರ ಅನುಪಸ್ಥಿತಿ ಅಥವಾ ನಿಷ್ಕ್ರಿಯತೆ, ಸುಗಮ ಸಂಚಾರಕ್ಕಾಗಿ ರೂಪಿಸಿರುವ ಕಾನೂನುಗಳನ್ನು ಅನುಷ್ಠಾನಗೊಳಿಸದಿರುವುದು – ಅನುಸರಿಸದಿರುವುದು, ಕಾನೂನುಗಳನ್ನು ಉಲ್ಲಂಘಿಸಿದವರ ವಿರುದ್ಧ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು  ಕೈಗೊಳ್ಳದಿರುವುದು, ಸಾರಿಗೆ ಮತ್ತು  ಪೋಲೀಸ್ ಇಲಾಖೆಗಳಲ್ಲಿನ ಅನಿಯಂತ್ರಿತ ಭ್ರಷ್ಟಾಚಾರವೇ ಮುಂತಾದ ಕಾರಣಗಳಿಂದಾಗಿ ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳು ಮತ್ತು ಇವುಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಗಳು ದಿನೇದಿನೇ ಹೆಚ್ಚುತ್ತಿವೆ.

ಇದಲ್ಲದೇ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ರಸ್ತೆಗಳ ದುಸ್ಥಿತಿ, ಮೋಟಾರು ವಾಹನಗಳ ಮತ್ತು ಸಾರಿಗೆ ನಿಯಮಗಳ ಉಲ್ಲಂಘನೆ, ಹೆಲ್ಮೆಟ್ – ಸೀಟ್ ಬೆಲ್ಟ್ ಧರಿಸದಿರುವುದು, ಮದ್ಯ – ಅಮಲು ಪದಾರ್ಥ ಸೇವಿಸಿ ವಾಹನ ಚಲಾಯಿಸುವುದು, ಅತಿವೇಗ – ನಿರ್ಲಕ್ಷ್ಯದ ಚಾಲನೆ, ವಾಹನಗಳ ನಡುವೆ ಪೈಪೋಟಿ, ಬೀದಿಬದಿ ವ್ಯಾಪಾರಿಗಳ ಕಾಟ, ರಸ್ತೆ – ರಸ್ತೆಬದಿಗಳ ಅಗೆತ, ಅವೈಜ್ಞಾನಿಕ ರಸ್ತೆ ಉಬ್ಬುಗಳು, ಬೀದಿನಾಯಿ – ಜಾನುವಾರುಗಳ ಕಾಟ, ಅನಿರೀಕ್ಷಿತವಾಗಿ ರಸ್ತೆಯನ್ನು ದಾಟುವ ಪಾದಚಾರಿಗಳು, ಪ್ರಖರವಾದ – ಕಣ್ಣುಕುಕ್ಕುವ ಹೆಡ್ ಲೈಟ್ ,ವಾಹನ ಚಾಲನಾ ನೈಪುಣ್ಯವಿಲ್ಲದವರು – ಅಪ್ರಾಪ್ತರು ಹಾಗೂ ಪರವಾನಿಗೆ ಇಲ್ಲದವರು ಅತಿವೇಗದಲ್ಲಿ ಹಾಗೂ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುವುದು, ಅತಿಯಾದ ವೇಗದಲ್ಲಿ ಚಲಿಸಬಲ್ಲ ಆಧುನಿಕ ವಾಹನಗಳೇ ಮುಂತಾದ ಕಾರಣಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಈ ಸಮಸ್ಯೆಯನ್ನು ನಿಯಂತ್ರಿಸಬಲ್ಲ ಕಾನೂನುಗಳನ್ನು ರೂಪಿಸಿದ್ದರೂ, ಇವುಗಳನ್ನು ರಾಜಾರೋಷವಾಗಿ ಉಲ್ಲಂಘಿಸಲಾಗುತ್ತಿದೆ.

ಬಲಿಯಾಗುತ್ತಿರುವ ಮಕ್ಕಳು  

ವಿಶ್ವಾದ್ಯಂತ ಎಳೆಯ ವಯಸ್ಸಿನ ಮಕ್ಕಳ ಅಕಾಲಿಕ ಮರಣಕ್ಕೆ ರಸ್ತೆ ಅಪಘಾತಗಳೇ ಪ್ರಮುಖ ಕಾರಣವೆನಿಸಿದೆ. ಪ್ರತಿನಿತ್ಯ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಸುಮಾರು ೯೦೦ ಮಕ್ಕಳು ರಸ್ತೆ ಅಪಘಾತಗಳಿಂದ ಮೃತಪಡುತ್ತಿದ್ದಾರೆ. ಇದಲ್ಲದೆ ಸುಮಾರು ೧೦ ಲಕ್ಷ ಮಕ್ಕಳು ಗಂಭೀರ ಗಾಯಗಳಿಗೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ.
ಜಾಗತಿಕ ಮಟ್ಟದಲ್ಲಿ ೨೦೧೦ ರಲ್ಲಿ ಅಪ್ರಾಪ್ತ ಮಕ್ಕಳ ಮರಣಕ್ಕೆ ಮೂಲವೆನಿಸುತ್ತಿದ್ದ ಕಾರಣಗಳಲ್ಲಿ ರಸ್ತೆ ಅಪಘಾತವು ೧೧ ನೆಯ ಸ್ಥಾನದಲ್ಲಿತ್ತು. ಆದರೆ ಮುಂದಿನ ೨೦ ವರ್ಷಗಳಲ್ಲಿ, ಅರ್ಥಾತ್ ೨೦೩೦ ರಲ್ಲಿ ಇದು ೫ ನೆಯ ಸ್ಥಾನಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ. ೨೦೨೦ ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಿಗೆ ಬಲಿಯಾಗಲಿರುವ ಮಕ್ಕಳ ಪ್ರಮಾಣವು ಶೇ. ೧೪೯ ರಷ್ಟು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ನಮ್ಮ ದೇಶದ ಜನಸಂಖ್ಯೆ ಅನಿಯಂತ್ರಿತವಾಗಿ ವೃದ್ಧಿಸುತ್ತಿರುವುದೇ ಇದಕ್ಕೆ ಕಾರಣವೆನಿಸಲಿದೆ.

ಪರಿಹಾರವೇನು ?
ವಾಹನ ಚಾಲನಾ ಪರವಾನಿಗೆಯನ್ನು ನೀಡುವ ಮುನ್ನ ಚಾಲಕರ ನೈಪುಣ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು,ಸಾರಿಗೆ - ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸುವುದು, ನಿಯಮಗಳು - ಕಾನೂನುಗಳನ್ನು ಉಲ್ಲಂಘಿಸಿದ ಚಾಲಕರಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸುವುದು, ಮತ್ತೆ ಇದೇ ತಪ್ಪಿನ ಪುನರಾವರ್ತನೆ ಮಾಡಿದಲ್ಲಿಇನ್ನಷ್ಟು ದಂಡದೊಂದಿಗೆ ನಿಗದಿತ ಅವಧಿಗೆ  ಚಾಲನಾ ಪರವಾನಿಗೆಯನ್ನು ಅಮಾನತು ಮಾಡುವುದು, ಪ್ರತಿಯೊಂದು ನಗರ - ಪಟ್ಟಣಗಳಲ್ಲಿ ಸಂಚಾರ ವಿಭಾಗದ ಪೊಲೀಸರು ನಿಯಮಿತವಾಗಿ ವಾಹನಗಳ - ಚಾಲಕರ ದಾಖಲೆಗಳನ್ನು ಪರಿಶೀಲಿಸುವುದು,ಗಂಭೀರ – ಮಾರಕ  ಅಪಘಾತ ಎಸಗಿದ ಚಾಲಕರ ಪರವಾನಿಗೆಯನ್ನು ರದ್ದುಪಡಿಸುವುದೇ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಸ್ತೆ ಅಪಘಾತಗಳನ್ನು ನಿಯಂತ್ರಿಸಬಹುದಾಗಿದೆ.

ಇದರೊಂದಿಗೆ ಉತ್ತಮ ಗುಣಮಟ್ಟದ ರಸ್ತೆಗಳು, ಸುರಕ್ಷಿತವಾದ ಕಾಲುದಾರಿಗಳುಸಂಚಾರಿ ಪೋಲೀಸರ ಕಣ್ಗಾವಲುಅವಶ್ಯಕತೆಯಿರುವಲ್ಲಿ ಸಂಚಾರ ಸೂಚನಾ ಫಲಕಗಳ ಅಳವಡಿಕೆಪಾದಚಾರಿಗಳು ರಸ್ತೆಯನ್ನು ದಾಟುವಲ್ಲಿ ಜೀಬ್ರಾ ಕ್ರಾಸಿಂಗ್ ಗುರುತಿನ ಅಳವಡಿಕೆ ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಮತ್ತಷ್ಟು ಅಪಘಾತಗಳನ್ನು ತಡೆಗಟ್ಟಬಹುದಾಗಿದೆ. ಅಂತಿಮವಾಗಿ ರಸ್ತೆಗಳನ್ನು ಬಳಸುವ ಪ್ರತಿಯೊಬ್ಬರೂ ಸಾರಿಗೆ - ಸಂಚಾರ ನಿಯಮಗಳನ್ನು ಪರಿಪಾಲಿಸಿದಲ್ಲಿ, ರಸ್ತೆ ಅಪಘಾತಗಳ ಮತ್ತು ಇವುಗಳಿಗೆ ಬಲಿಯಾಗುವರ ಸಂಖ್ಯೆಯನ್ನು ನಿಯಂತ್ರಿಸುವುದು ಅಸಾಧ್ಯವೇನಲ್ಲ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು



Wednesday, February 18, 2015

RTI ACT - CHANGES WILL WEAKEN IT




ಮಾಹಿತಿ ಹಕ್ಕು ಕಾಯಿದೆ : ಇನ್ನಷ್ಟು ದುರ್ಬಲವಾಗುವುದೇ ?

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ೫೮ ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೌಪ್ಯತೆಯ ಮುಸುಕಿನಲ್ಲೇ ಕಾರ್ಯನಿರ್ವಹಿಸುತ್ತಿದ್ದವು. ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದರೂದೇಶದ ಪ್ರಜೆಗಳಿಗೆ ಮಾತ್ರ ತಮಗೆ ಬೇಕಾದ ಮಾಹಿತಿಗಳನ್ನು ಸರ್ಕಾರದಿಂದ ಪಡೆದುಕೊಳ್ಳುವ ಸ್ವಾತಂತ್ರ್ಯವೇ ಇರಲಿಲ್ಲ. ಏಕೆಂದರೆ ೨೦೦೫ ರ ಅಕ್ಟೋಬರ್ ೧೨ ರಂದು ಮಾಹಿತಿ ಪಡೆಯುವ ಹಕ್ಕು ಕಾಯಿದೆಯು ದೇಶಾದ್ಯಂತ ಜಾರಿಗೆ ಬರುವ ತನಕ, " ಸರ್ಕಾರಿ ರಹಸ್ಯಗಳ ಅಧಿನಿಯಮ ೧೯೨೩ ರನ್ವಯ ಸರ್ಕಾರದ ಮಾಹಿತಿಗಳನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವೆನಿಸಿತ್ತು !.

ಪ್ರಬಲ ಅಸ್ತ್ರವೆನಿಸಿದ ಕಾಯಿದೆ

ಮಾಹಿತಿ ಪಡೆಯುವ ಹಕ್ಕು ಕಾಯಿದೆ ೨೦೦೫ ರನ್ವಯ  ಕೆಲವೊಂದು ನಿರ್ದಿಷ್ಟ ಮಾಹಿತಿಗಳನ್ನು ಹೊರತುಪಡಿಸಿ, ಸರ್ಕಾರದ ಸ್ವಾಧೀನದಲ್ಲಿರುವ ಎಲ್ಲ ಮಾಹಿತಿಗಳನ್ನು ಜನಸಾಮಾನ್ಯರು ಪಡೆದುಕೊಳ್ಳ ಬಹುದಾಗಿದೆ. ಈ ಕಾಯಿದೆ ಜಾರಿಗೆ ಬಂದ ಬಳಿಕಸರ್ಕಾರಿ ಅಧಿಕಾರಿಗಳು, ರಾಜಕೀಯ ನೇತಾರರು ಮತ್ತು ಮಂತ್ರಿಮಾಗಧರು ಶಾಮೀಲಾಗಿರುವ ನೂರಾರು ಭ್ರಷ್ಟಾಚಾರಸ್ವಜನ ಪಕ್ಷಪಾತ ಮತ್ತು ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿದ್ದ  ಸಹಸ್ರಾರು ಕೋಟಿ ರೂ.ಗಳ  ಅವ್ಯವಹಾರಗಳ ಪ್ರಕರಣಗಳು ಬಯಲಾಗಿದ್ದವು. ಇದು ಭ್ರಷ್ಟ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು !.

ದುರ್ಬಲಗೊಳಿಸುವ ಹುನ್ನಾರ

  ಭ್ರಷ್ಟ  ರಾಜಕೀಯ ನೇತಾರರು ಮತ್ತು ಅಧಿಕಾರಿಗಳು ತಮ್ಮ ನಿಜವಾದ ಬಣ್ಣ ಬಯಲಾಗುತ್ತದೆ ಎನ್ನುವ   ಕಾರಣದಿಂದಾಗಿ ನಡೆಸಿದ್ದ ಹುನ್ನಾರದ ಪರಿಣಾಮವಾಗಿ,  ಮಾಹಿತಿ ಹಕ್ಕು ಕಾಯಿದೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ಅಂದೇ ಆರಂಭವಾಗಿದ್ದವು. ಜೊತೆಗೆ ನಿರ್ದಿಷ್ಟ ಮಾಹಿತಿಗಳನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಿದ್ದ ಕಾರ್ಯಕರ್ತರ ಅರ್ಜಿಗಳನ್ನೇ ಸ್ವೀಕರಿಸದ, ಸ್ವೀಕರಿಸಿದರೂ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದ, ಅಪೂರ್ಣದಾರಿತಪ್ಪಿಸುವ ಅಥವಾ ಸುಳ್ಳು ಮಾಹಿತಿಗಳನ್ನು ನೀಡಿದ್ದ, ಅರ್ಜಿದಾರರಿಗೆ ಕಿರುಕುಳ ನೀಡಿದ ಅಥವಾ ಬೆದರಿಕೆ ಒಡ್ಡಿದ್ದ ಅಸಂಖ್ಯ ಪ್ರಕರಣಗಳು ವರದಿಯಾಗಿದ್ದವು.

ಅದೇ ರೀತಿಯಲ್ಲಿ ಅಪೇಕ್ಷಿತ ಮಾಹಿತಿಗಳನ್ನು ಒದಗಿಸಲು ನಿಗದಿತ ಶುಲ್ಕಕ್ಕೆ ಬದಲಾಗಿ ಕಾನೂನುಬಾಹಿರವಾಗಿ ದುಬಾರಿ ಶುಲ್ಕವನ್ನು ವಿಧಿಸಿದ್ದ, ನಿರ್ದಿಷ್ಟ ಮಾಹಿತಿಗಳು ( ಕಡತಗಳು ) ತಮ್ಮಲ್ಲಿ ಇಲ್ಲವೆಂದು ಉತ್ತರಿಸಿದ, ಅರ್ಜಿದಾರರ ಮೇಲೆ ಹಲ್ಲೆ ನಡೆಸಿದ್ದ ಮತ್ತು ಕೆಲ ರಾಜ್ಯಗಳಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದ ಅನೇಕ ಪ್ರಕರಣಗಳು ಮಾಧ್ಯಮಗಳಲ್ಲೂ ವರದಿಯಾಗಿತ್ತು. ಇವೆಲ್ಲವುಗಳ ಉದ್ದೇಶವು ಅರ್ಜಿದಾರರು ಅಪೇಕ್ಷಿಸಿರುವ ಮಾಹಿತಿಗಳನ್ನು ನೀಡದೇ ಇರುವ ಮೂಲಕ, ಪ್ರಬಲ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ತಮ್ಮ ಹಿತಾಸಕ್ತಿಯನ್ನು ( ಅವ್ಯವಹಾರಗಳು ಮತ್ತು ಹಗರಣಗಳು ಬಯಲಾಗದಂತೆ ) ಕಾಪಾಡಿಕೊಳ್ಳುವುದೇ ಆಗಿದೆ. ಇಂತಹ ಪ್ರಯತ್ನಗಳು ಈ ಕಾಯಿದೆಯು ಜಾರಿಗೆ ಬಂದು ವರ್ಷ ಕಳೆಯುವಷ್ಟರಲ್ಲೇ ಆರಂಭವಾಗಿದ್ದವು.

ತಿದ್ದುಪಡಿ ಮಾಡುತ್ತಿರುವುದೇಕೆ ?

ಕರ್ನಾಟಕ ರಾಜ್ಯ ಸರ್ಕಾರವು ೨೦೦೮ ರಲ್ಲಿ ಕೆಲ ತಿದ್ದುಪಡಿಗಳನ್ನು ಜಾರಿಗೆ ತರುವ ಮೂಲಕ ಈ ಕಾಯಿದೆಯನ್ನು ತುಸು ದುರ್ಬಲಗೊಳಿಸಲು ಯಶಸ್ವಿಯಾಗಿತ್ತು. ಇವುಗಳಲ್ಲಿ ಅರ್ಜಿದಾರರು ಸಲ್ಲಿಸುವ ಒಂದು ಅರ್ಜಿಯು ಕೇವಲ ಒಂದು ವಿಷಯಕ್ಕೆ ಮಾತ್ರ ಸೀಮಿತವಾಗಿರಬೇಕು ಹಾಗೂ ಅಪೇಕ್ಷಿತ ಮಾಹಿತಿಗಳನ್ನು ಕೋರಿ ನಮೂದಿಸುವ ವಿವರಗಳು ೧೫೦ ಪದಗಳಿಗೆ ಸೀಮಿತವಾಗಿರಬೇಕು ಮತ್ತು ನೇರವಾಗಿ ಪ್ರಶ್ನೆಗಳನ್ನು ಕೇಳುವಂತಿಲ್ಲ ಎನ್ನುವ ತಿದ್ದುಪಡಿಗಳು ಪ್ರಮುಖವಾಗಿದ್ದವು.ಇದಲ್ಲದೇ ಅಪೇಕ್ಷಿತ ಮಾಹಿತಿಗಳನ್ನು ಸಂಗ್ರಹಿಸಲು ತಗಲುವ ವೆಚ್ಚವನ್ನು ಅರ್ಜಿದಾರರೇ ತೆರಬೇಕು ಎನ್ನುವ ಉದ್ದೇಶವೂ ಸರ್ಕಾರಕ್ಕೆ ಇದ್ದಿತು. ಇದು ಜಾರಿಗೆ ಬಂದಿದ್ದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಮ್ಮ ಇಚ್ಛಾನುಸಾರ ವಿಧಿಸುವ ಶುಲ್ಕವನ್ನು ಅರ್ಜಿದಾರರು ತೆರಲೇಬೇಕಾಗುತ್ತಿತ್ತು.ಅದೃಷ್ಟವಶಾತ್ ಈ ತಿದ್ದುಪಡಿಯನ್ನು ಕಾರಣಾಂತರಗಳಿಂದ ಕೈಬಿಡಲಾಗಿತ್ತು.

ಇವೆಲ್ಲಕ್ಕೂ ಮಿಗಿಲಾಗಿ ಅರ್ಜಿದಾರರು ಅಪೇಕ್ಷಿಸಿರುವ ಮಾಹಿತಿಗಳು “ ತೀರಾ ಕ್ಷುಲ್ಲಕ “ ಹಾಗೂ ಸಾ. ಮಾ. ಅಧಿಕಾರಿಗಳಿಗೆ ಕಿರುಕುಳ ನೀಡುವ ಸಲುವಾಗಿಯೇ ಅರ್ಜಿಯನ್ನು ಸಲ್ಲಿಸಲಾಗಿದೆ ಎನ್ನುವ ನೆಪವನ್ನು ಮುಂದೊಡ್ಡಿ, ಅರ್ಜಿಯನ್ನು ಸಲ್ಲಿಸಿದ ೧೫ ದಿನಗಳ ಒಳಗಾಗಿ ತಿರಸ್ಕರಿಸಬಹುದು ಮತ್ತು ಈ ನಿರ್ಧಾರವನ್ನು ಪ್ರಶ್ನಿಸಿ ಮಾಹಿತಿ ಆಯೋಗಕ್ಕೆ ಮೇಲ್ಮನವಿಯನ್ನು ಸಲ್ಲಿಸುವಂತಿಲ್ಲ ಎನ್ನುವ ತಿದ್ದುಪಡಿಯೊಂದನ್ನೂ ಅಂದು ಕೈಬಿಡಲಾಗಿತ್ತು.  ಆದರೆ  ಸರ್ಕಾರ ಜಾರಿಗೊಳಿಸಿದ್ದ ಇತರ ಕೆಲ  ತಿದ್ದುಪಡಿಗಳ ವಿರುದ್ಧ ಮಾಹಿತಿ ಹಕ್ಕು ಕಾರ್ಯಕರ್ತರು ಪ್ರತಿಭಟಿಸಿದ್ದರೂ, ಇವುಗಳನ್ನು ಇಂದಿಗೂ ಹಿಂದಕ್ಕೆ ಪಡೆದಿಲ್ಲ. ಹಾಗೂ ಇವೆಲ್ಲಾ ಕಾರಣಗಳಿಂದಾಗಿ ಈ ಕಾಯಿದೆಯನ್ನು ಪರಿಣಾಮಕಾರಿಯಾಗಿ ಬಳಸುವ ಜನಸಾಮಾನ್ಯರ ಸಂಖ್ಯೆಯೂ ಹೆಚ್ಚಿಲ್ಲ.

ನೂತನ ಶಿಫಾರಸುಗಳು

ಗತವರ್ಷದ ಸೆಪ್ಟೆಂಬರ್ ೨೨ ರಂದು ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಜರಗಿದ್ದ ಸಭೆಯೊಂದರಲ್ಲಿ, ಮಾಹಿತಿ ಹಕ್ಕು ಕಾಯಿದೆಗೆ ಕೆಲವೊಂದು ತಿದ್ದುಪಡಿಗಳನ್ನು ಜಾರಿಗೊಳಿಸುವ ಬಗ್ಗೆ ಚಿಂತನ ಮಂಥನ ನಡೆದಿತ್ತು. ಇದೀಗ ರಾಜ್ಯ ಸರ್ಕಾರವು ಇವುಗಳಲ್ಲಿ ಬಹುತೇಕ ಶಿಫಾರಸುಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ.

ಇವುಗಳಲ್ಲಿ  ಸಿ ಐ ಡಿ ತನಿಖೆ ನಡೆಯುತ್ತಿರುವ ಪ್ರಕರಣಗಳನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿರಿಸುವ ಸಲಹೆಯೂ ಸೇರಿದಂತೆ, ನಾಲ್ಕು ಶಿಫಾರಸುಗಳು  ಪ್ರಮುಖವಾಗಿದ್ದವು. ವಿಶೇಷವೆಂದರೆ ಈ ಸಭೆಯ ಉದ್ದೇಶವು ಮಾಹಿತಿ ಹಕ್ಕು ಕಾಯಿದೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವುದೇ ಆಗಿದ್ದರೂ,ಪದೇಪದೇ ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಮೂಲಕ  ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ಸತಾಯಿಸುವ, ಸರ್ಕಾರಿ ಅಧಿಕಾರಿಗಳ ಮಾತಿನಲ್ಲಿ ಹೇಳುವುದಾದರೆ  " ತಂಟೆಕೋರ ಮಾಹಿತಿ ಹಕ್ಕು ಕಾರ್ಯಕರ್ತ " ರನ್ನು ಕಪ್ಪುಪಟ್ಟಿಗೆ ಸೇರಿಸುವ ಶಿಫಾರಸನ್ನು ಸರ್ಕಾರ ಇದೀಗ ಕೈಬಿಟ್ಟಿದೆ. ಈ ತಿದ್ದುಪಡಿಯು ಜಾರಿಗೆ ಬಂದಲ್ಲಿ ಎಸ್.ಆರ್ . ಹಿರೇಮಠರೂ ಸೇರಿದಂತೆ, ರಾಜ್ಯದ ನೂರಾರು ಮಾಹಿತಿ ಹಕ್ಕು ಕಾರ್ಯಕರ್ತರು ಕಪ್ಪುಪಟ್ಟಿಯಲ್ಲಿ ಸ್ಥಾನವನ್ನು ಗಳಿಸುತ್ತಿದ್ದುದರಲ್ಲಿ ಸಂದೇಹವಿಲ್ಲ !. ಇದಲ್ಲದೇ ಅರ್ಜಿದಾರರಿಗೆ ಅಪೇಕ್ಷಿತ ಮಾಹಿತಿಗಳನ್ನು ಒದಗಿಸುವಾಗ, ಅಂಚೆ ವೆಚ್ಚವನ್ನು ಅವರಿಂದ ವಸೂಲು ಮಾಡುವ ಸಲಹೆಯೂ ಹಾಸ್ಯಾಸ್ಪದವೆನಿಸುತ್ತದೆ. ಏಕೆಂದರೆ ಗತವರ್ಷದಲ್ಲಿ ಕರ್ನಾಟಕದ ವಿಧಾನ ಮಂಡಲಗಳ ವಿವಿಧ ಸಮಿತಿಗಳ ಸದಸ್ಯರಾಗಿರುವ ಶಾಸಕರು ಕೈಗೊಂಡಿದ್ದ ವಿದೇಶ ಪ್ರವಾಸಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡುವಂತೆ ನಾವು ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಮಾಹಿತಿಗಳನ್ನು ನೀಡಲು ಕೆಲ ಸಮಿತಿಗಳ ಸಾ. ಮಾ. ಅಧಿಕಾರಿಗಳು ನೂರಾರು ರೂಪಾಯಿ ಅಂಚೆ ಶುಲ್ಕವನ್ನು ವಸೂಲು ಮಾಡಿದ್ದರು.ತತ್ಪರಿಣಾಮವಾಗಿ ನೂರಾರು ಪುಟಗಳ ಈ ಮಾಹಿತಿಗಳು ಬಳಕೆದಾರರ ಹಿತರಕ್ಷಣಾ ವೇದಿಕೆಯ ಪಾಲಿಗೆ ದುಬಾರಿಯಾಗಿ ಪರಿಣಮಿಸಿದ್ದವು. (ಈ ರೀತಿಯಲ್ಲಿ ಗತವರ್ಷದಲ್ಲೇ ರಾಜ್ಯದಲ್ಲಿ ಜಾರಿಗೆ ಬಂದಿರುವ ಈ ವಿಚಾರವನ್ನು ಮತ್ತೆ ಹೊಸದಾಗಿ ಶಿಫಾರಸು ಮಾಡಿರುವುದಾದರೂ ಏಕೆಂದು ನಮಗೂ ತಿಳಿದಿಲ್ಲ.) ಪ್ರಾಯಶಃ ಕೇಂದ್ರ ಸರಕಾರ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಅರ್ಜಿದಾರರಿಂದ  ಅಂಚೆ ವೆಚ್ಚವನ್ನು ವಸೂಲು ಮಾಡುತ್ತಿರುವುದೇ ಇದಕ್ಕೆ ಕಾರಣವಾಗಿರಲೂಬಹುದು.

 ಆದರೆ ಈ ಕಾಯಿದೆಯನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕಿದ್ದಲ್ಲಿ, ಅಪೇಕ್ಷಿತ ಮಾಹಿತಿಗಳನ್ನು ತಮ್ಮ ಅಂತರ್ಜಾಲ ವಿಳಾಸ ನಮೂದಿಸಿದ ಅರ್ಜಿದಾರರಿಗೆ ಉಚಿತವಾಗಿ ಇ – ಮೇಲ್ ಮೂಲಕ ಕಳಿಸಬಹುದಾಗಿದೆ. ಇದರಿಂದಾಗಿ ಅಪೇಕ್ಷಿತ ಮಾಹಿತಿಗಳನ್ನು ತ್ವರಿತಗತಿಯಲ್ಲಿ ಹಾಗೂ ಅಂಚೆ ಮತ್ತು ಕಾಗದಗಳ ವೆಚ್ಚವಿಲ್ಲದೇ ಕಳುಹಿಸಬಹುದಾಗಿದೆ. ಇ – ಆಡಳಿತವನ್ನು ಅನುಷ್ಠಾನಗೊಳಿಸಲು ಸಿದ್ಧತೆಗಳನ್ನು ನಡೆಸುತ್ತಿರುವ ಸರ್ಕಾರಕ್ಕೆ, ಇಂತಹ ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೊಳಿಸುವುದು ನಿಶ್ಚಿತವಾಗಿಯೂ ಹೊರೆಯೆನಿಸಲಾರದು.

ಕೊನೆಯ ಮಾತು  

ವಿಶೇಷವೆಂದರೆ ದ್ವಿತೀಯ ಆಡಳಿತ ಸುಧಾರಣಾ ಆಯೋಗವು ಗತದಶಕದಲ್ಲಿ ಈ ಕಾಯಿದೆಯನ್ನು ಇನ್ನಷ್ಟು ಪ್ರಬಲಗೊಳಿಸಲು ಸೂಚಿಸಿದ್ದ ಅನೇಕ ಸಲಹೆಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಇದೀಗ ರಾಜ್ಯ ಸರ್ಕಾರವು ಮಾಹಿತಿ ಹಕ್ಕು ಕಾಯಿದೆಯನ್ನು ಇನ್ನಷ್ಟು “ ಜನಪ್ರಿಯ “ ಗೊಳಿಸುವ ನೆಪದಲ್ಲಿ, ಇದನ್ನು ಮತ್ತಷ್ಟು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವುದು ಮಾತ್ರ ಸರ್ವಥಾ ಸಮರ್ಥನೀಯವಲ್ಲ.

ಡಾ.ಸಿ. ನಿತ್ಯಾನಂದ ಪೈ
ಬಳಕೆದಾರರ ಹಿತರಕ್ಷಣಾ ವೇದಿಕೆ
ಪುತ್ತೂರು



Monday, February 16, 2015

FOOD -DONT WASTE IT



ಅಮೂಲ್ಯ ಆಹಾರ ಪದಾರ್ಥಗಳನ್ನು ಪೋಲುಮಾಡದಿರಿ

“ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ “ ಎನ್ನುವ ಆಡುಮಾತು, ನಮ್ಮ ದೇಶದ ರೈತರು – ಕೃಷಿಕರು ಬೆಳೆಯುತ್ತಿರುವ ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳ ಮಟ್ಟಿಗೆ ಅನ್ವರ್ಥವೆನಿಸುತ್ತವೆ. ನಾವಿಂದು ಧಾರಾಳವಾಗಿ ಬೆಳೆಯುತ್ತಿರುವ ಆಹಾರಧಾನ್ಯಗಳನ್ನು ಸುರಕ್ಷಿತವಾಗಿ ಹಾಗೂ ಸುಸ್ಥಿತಿಯಲ್ಲಿ ಸಂರಕ್ಷಿಸಿ ಇರಿಸಬಲ್ಲ ಗೋದಾಮುಗಳು ಹಾಗೂ ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಸುಧೀರ್ಘಕಾಲ ಕೆಡದಂತೆ ಕಾಪಾಡಬಲ್ಲ ಶೈತ್ಯಾಗಾರಗಳ ಕೊರತೆ ಅಥವಾ ಅಭಾವಗಳಿಂದಾಗಿ, ೪೪,೦೦೦ ಕೋಟಿ ರೂ. ಮೌಲ್ಯದ  ಆಹಾರಪದಾರ್ಥಗಳು ಹುಳಹುಪ್ಪಟೆಗಳು- ಹೆಗ್ಗಣಗಳ ಪಾಲಾಗುತ್ತಿವೆ ಅಥವಾ ಕೆಟ್ಟುಹೋಗುತ್ತಿವೆ. ಆದರೆ ಇದೇ ಸಂದರ್ಭದಲ್ಲಿ ನಮ್ಮ ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಜರಗುವ ವಿವಾಹ ನಿಶ್ಚಿತಾರ್ಥ, ವಿವಾಹ ಮತ್ತಿತರ ವಿಶೇಷ ಸಭೆ- ಸಮಾರಂಭಗಳ ಅವಿಭಾಜ್ಯ ಅಂಗವಾಗಿರುವ ಔತಣಕೂಟಗಳಲ್ಲಿ, ಊಟದ ತಟ್ಟೆ ಅಥವಾ ಎಲೆಗಳಲ್ಲಿ ಬಡಿಸಿದ ಭಕ್ಷ ಭೋಜ್ಯಗಳ ಶೇ.೧೫ ರಿಂದ ೩೦ ರಷ್ಟು  ಪಾಲು ಅತಿಥಿಗಳ ಉದರವನ್ನು ಸೇರದೇ ತ್ಯಾಜ್ಯಗಳೊಂದಿಗೆ ಎಸೆಯಲ್ಪಡುತ್ತದೆ!.
=============                ================                        ============               ================


 ಜಗತ್ತಿನಲ್ಲಿ ಮನುಷ್ಯನು ಆರೋಗ್ಯವಂತನಾಗಿ ಜೀವಿಸಲು  ಸ್ವಚ್ಛವಾದ ಗಾಳಿ ಹಾಗೂ ಶುದ್ಧವಾದ ನೀರಿನೊಂದಿಗೆ, ಸಮತೋಲಿತ ಆಹಾರ ಸೇವನೆಯೂ ಅತ್ಯವಶ್ಯಕವೆನಿಸುವುದು. ಆದರೆ ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿನಾವು ಉಸಿರಾಡುವ ಗಾಳಿಕುಡಿಯುವ ನೀರು ಮತ್ತು ಸೇವಿಸುವ ಆಹಾರಗಳ ಗುಣಮಟ್ಟಗಳು ದಿನೇದಿನೇ ನಶಿಸುತ್ತಿವೆಅನೇಕ ದೇಶಗಳಲ್ಲಿ ಕುಡಿಯುವ ನೀರು ಮತ್ತು ಆಹಾರ ಪದಾರ್ಥಗಳ ಕೊರತೆ ಅಥವಾ ಅಭಾವಗಳು ತಲೆದೋರುತ್ತಿವೆಆದರೆ ನಾವಿಂದು ಪೋಲು ಮಾಡುತ್ತಿರುವ ಆಹಾರ ಪದಾರ್ಥಗಳ ಪ್ರಮಾಣವನ್ನು ಗಮನಿಸಿದಲ್ಲಿ, ಮೂರು ಹೊತ್ತಿನ ತುತ್ತಿಗೆ ಗತಿಯಿಲ್ಲದ ಲಕ್ಷಾಂತರ ಜನರ ಹಸಿವನ್ನು ಹಿಂಗಿಸಲು ಇದು ಸಾಕಾಗುತ್ತದೆ!.

ಇದರೊಂದಿಗೆ ಮೂಲಸೌಕರ್ಯಗಳುಬೃಹತ್ ಉದ್ದಿಮೆಗಳು ಮತ್ತು  ವಸತಿ  ವಾಣಿಜ್ಯ ಕಟ್ಟಡ ಇತ್ಯಾದಿಗಳ ನಿರ್ಮಾಣ ಕಾಮಗಾರಿಗಳಿಂದಾಗಿ ನಶಿಸುತ್ತಿರುವ ಕೃಷಿ ಭೂಮಿಯಿಂದಾಗಿ ಹಾಗೂ ಕಾರಣಾಂತರಗಳಿಂದ ಕಷ್ಟನಷ್ಟಗಳಿಗೆ ಈಡಾಗಿರುವ ರೈತರು ಕೃಷಿಯನ್ನು ತ್ಯಜಿಸಿ ತಮ್ಮ ಜಮೀನನ್ನು ಮಾರಾಟ ಮಾಡಿರುವುದರಿಂದಆಹಾರ ಪದಾರ್ಥಗಳ ಕೊರತೆ ಉದ್ಭವಿಸದೇ?, ಎನ್ನುವ ಸಂದೇಹ ನಿಮ್ಮ ಮನದಲ್ಲೂ ಮೂಡಿರಬಹುದುಆದರೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕದೇಶದ ೧೨೫ ಕೋಟಿ ಜನರಿಗೆ ಸಾಕಾಗುವಷ್ಟು ಆಹಾರ ಧಾನ್ಯಗಳು ಮತ್ತು ಹಣ್ಣು  ತರಕಾರಿಗಳನ್ನು ಬೆಳೆಯಲು ನಾವಿಂದು ಯಶಸ್ವಿಯಾಗಿದ್ದೇವೆ
ವಿಶೇಷವೆಂದರೆ ಪ್ರಸ್ತುತ ಜಗತ್ತಿನ ಏಳು ಬಿಲಿಯನ್ ಜನರಿಗೆ ಸಾಕಾಗುವಷ್ಟು ಆಹಾರ ಪದಾರ್ಥಗಳನ್ನು ಪ್ರಪಂಚದ ವಿವಿಧ ರಾಷ್ಟ್ರಗಳು  ಬೆಳೆಯುತ್ತಿವೆ. ಇಷ್ಟು ಮಾತ್ರವಲ್ಲ, ೨೦೫೦ ರಲ್ಲಿ ಜಗತ್ತಿನ ಜನಸಂಖ್ಯೆಯು ಒಂಬತ್ತು ಬಿಲಿಯನ್ ತಲುಪಲಿದೆ ಎಂದು ಅಂದಾಜಿಸಲಾಗಿದ್ದು, ಅಷ್ಟೊಂದು ಜನರಿಗೆ ಬೇಕಾಗುವಷ್ಟು ಆಹಾರ ಪದಾರ್ಥಗಳನ್ನು ಬೆಳೆಯುವ ಸಾಮರ್ಥ್ಯವನ್ನು ಕೂಡಾ ಹೊಂದಿವೆ. ಅರ್ಥಾತ್, ಅನೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಅಪೌಷ್ಠಿಕತೆ ಮತ್ತು ತತ್ಸಂಬಂಧಿತ ಸಮಸ್ಯೆಗಳಿಗೆ ನಾವಿಂದು ಉತ್ಪಾದಿಸುತ್ತಿರುವ ಆಹಾರ ಪದಾರ್ಥಗಳ ಕೊರತೆ ಕಾರಣವಲ್ಲ.  ಸಮಸ್ಯೆಗೆ ನಾವಿಂದು ಪೋಲು ಮಾಡುತ್ತಿರುವ ಅಗಾಧ ಪ್ರಮಾಣದ ಆಹಾರ ಪದಾರ್ಥಗಳೇ ಕಾರಣ ಎಂದಲ್ಲಿ ನಿಮಗೂ ಅಚ್ಚರಿಯಾದೀತು.

ಭಾರತದ ಜನಸಂಖ್ಯೆಯು ನಿರಂತರವಾಗಿ ಹೆಚ್ಚುತ್ತಿದ್ದು, ಇದಕ್ಕೆ ಅನುಗುಣವಾಗಿ ಆಹಾರಪದಾರ್ಥಗಳ ಬೇಡಿಕೆಯ ಪ್ರಮಾಣವೂ ಸ್ವಾಭಾವಿಕವಾಗಿಯೇ  ಹೆಚ್ಚುತ್ತಿದೆ. ಇದರೊಂದಿಗೆ ದೇಶದ ಅನೇಕ ರಾಜ್ಯಗಳಲ್ಲಿ ಗರ್ಭಿಣಿಯರು ಮತ್ತು ಪುಟ್ಟ ಮಕ್ಕಳನ್ನು ಪೀಡಿಸುವ ಅಪೌಷ್ಠಿಕತೆಯು ಅಸಾಮಾನ್ಯ ಸಮಸ್ಯೆಗಳಿಗೆ ಕಾರಣವೆನಿಸುತ್ತಿದೆ.  ಆದರೆ ಇದೇ ಸಂದರ್ಭದಲ್ಲಿ ದೇಶದ ಪ್ರಜೆಗಳು ಅನಾವಶ್ಯಕವಾಗಿ ಆಹಾರಪದಾರ್ಥಗಳನ್ನು ಪೋಲುಮಾಡುತ್ತಿರುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ.

ಸಾಮಾನ್ಯವಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳ  ಉತ್ಪಾದನೆಯ ಪ್ರಮಾಣವು ಹೆಚ್ಚದೇ ಇದ್ದಲ್ಲಿ, ಇವುಗಳ ಕೊರತೆ ತಲೆದೋರುವುದು ಸ್ವಾಭಾವಿಕ. ಜೊತೆಗೆ ಇವುಗಳನ್ನು ಸಂಗ್ರಹಿಸಿ ಸಂರಕ್ಷಿಸುವ ವ್ಯವಸ್ಥೆಗಳನ್ನೂ ಸರಕಾರ ಕಲ್ಪಿಸಬೇಕಾಗುತ್ತದೆ. ಈ ವ್ಯವಸ್ಥೆಯ ಕೊರತೆ ಅಥವಾ ಅಭಾವಗಳಿದ್ದಲ್ಲಿ, ಕೈಗೆ ಬಂದ ತುತ್ತು ಬಾಯಿಗೆ ಬಾರದೇ ವ್ಯರ್ಥವಾಗಿ  ಪೋಲಾಗುತ್ತದೆ. ಉದಾಹರಣೆಗೆ ನಮ್ಮ ದೇಶದಲ್ಲಿ ಸಂರಕ್ಷಣಾ ವ್ಯವಸ್ಥೆಯ ಕೊರತೆಯಿಂದಾಗಿ  ವರ್ಷಂಪ್ರತಿ ೨೧ ದಶಲಕ್ಷ ಟನ್ ಗೋಧಿಯು ಕೆಟ್ಟು ಹೋಗುತ್ತಿದ್ದು, ಇದು ಆಸ್ಟ್ರೇಲಿಯಾ ದೇಶವು ಒಂದು ವರ್ಷದಲ್ಲಿ ಬೆಳೆಯುವ ಗೋಧಿಯ ಪ್ರಮಾಣಕ್ಕೆ ಸಮನಾಗಿದೆ!.

ಭಾರತದಲ್ಲಿ ಆಧುನಿಕ ಕೃಷಿ ಪದ್ದತಿಯನ್ನು ಸಮರ್ಪಕವಾಗಿ ಬಳಸುವ ಮೂಲಕ, ದೇಶದ ಜನತೆಗೆ ಅವಶ್ಯವಿರುವಷ್ಟಕ್ಕಿಂತ ಅಧಿಕ ಪ್ರಮಾಣದ ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತಿದೆ. ೨೦೧೩-೧೪ ನೆ ಸಾಲಿನಲ್ಲಿ ನಾವು ೨೬೩ ದಶಲಕ್ಷ ಟನ್ ಆಹಾರಧಾನ್ಯಗಳನ್ನು ಬೆಳೆದಿದ್ದರೂ, ಪ್ರಜೆಗಳು ಸೇವಿಸಿದ್ದ ಪ್ರಮಾಣವು ಕೇವಲ ೨೨೦ ರಿಂದ ೨೨೫ ದಶಲಕ್ಷ ಟನ್ ಎಂದಲ್ಲಿ ನೀವೂ ನಂಬಲಾರಿರಿ. ಅದೇ ರೀತಿಯಲ್ಲಿ ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದ ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಬೆಳೆಯುವ ದೇಶಗಳ ಯಾದಿಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದ್ದರೂ, ಇವುಗಳ ಶೇ.೪೦ ರಷ್ಟು ಪಾಲು ಸೇವನೆಗೆ ಲಭ್ಯವಾಗದೇ ಕೆಟ್ಟು ಹೋಗುತ್ತದೆ. ಇವುಗಳ ಒಟ್ಟು ಮೌಲ್ಯವು ಸುಮಾರು ೧೩,೩೦೦ ಕೋಟಿಗೂ ಅಧಿಕವಾಗಿದೆ. ಈ ಅಯಾಚಿತ ಕಷ್ಟನಷ್ಟಗಳಿಗೆ ಸೂಕ್ತ ಸಂಗ್ರಹ,ಸಾಗಾಣಿಕೆ, ಸಂರಕ್ಷಣೆ ಮತ್ತು ಮಾರಾಟ ವ್ಯವಸ್ಥೆಗಳ ಕೊರತೆ ಅಥವಾ ಅಭಾವಗಳೇ ಕಾರಣವೆನಿಸಿವೆ.

ಅಪೌಷ್ಠಿಕತೆ

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿರುವ ೭೮ ದೇಶಗಳ ಪಟ್ಟಿಯಲ್ಲಿ, ಭಾರತವು ೬೮ ನೆಯ ಸ್ಥಾನದಲ್ಲಿದೆ. ವಿಶೇಷವೆಂದರೆ ನಮ್ಮ ನೆರೆಯ ಶ್ರೀಲಂಕಾ ದೇಶವು ೪೩, ನೇಪಾಳ ೪೯, ಪಾಕಿಸ್ತಾನ ೫೭ ಮತ್ತು ಬಡ ಬಾಂಗ್ಲಾ ದೇಶವು ೫೮ ನೆಯ ಸ್ಥಾನಗಳಲ್ಲಿವೆ!. ಆದರೂ ನಮ್ಮ ದೇಶದಲ್ಲಿ ಆಹಾರಪದಾರ್ಥಗಳನ್ನು ವ್ಯರ್ಥವಾಗಿ ಪೋಲುಮಾಡುವ ಕೆಟ್ಟ ಹವ್ಯಾಸವು, ದಿನೇದಿನೇ ವೃದ್ಧಿಸುತ್ತಿದೆ. ದೇಶದ ಬಡಜನರನ್ನು ಕಾಡುತ್ತಿರುವ ಅಪೌಷ್ಠಿಕತೆಗೆ, ಇದೊಂದು ಪ್ರಮುಖ ಕಾರಣವೆನಿಸಿದೆ.

ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.೪೮  ರಷ್ಟು ಮಕ್ಕಳು ಕುಂಠಿತ ಬೆಳವಣಿಗೆಯ ಸಮಸ್ಯೆಯಿಂದ ಹಾಗೂ ಶೇ.೪೭ ರಷ್ಟು ಮಕ್ಕಳು ಕಡಿಮೆ ತೂಕದ ಸಮಸ್ಯೆಯಿಂದ  ಬಳಲುತ್ತಿದ್ದು, ಇದಕ್ಕೆ  ಅಪೌಷ್ಠಿಕತೆಯೇ ಮೂಲ ಕಾರಣವಾಗಿದೆ. ಅಂತೆಯೇ ಪುಟ್ಟ ಮಕ್ಕಳ ಅಕಾಲಿಕ ಮರಣಗಳ ಶೇ. ೫೦ ಪ್ರಕರಣಗಳಿಗೂ ಅಪೌಷ್ಠಿಕತೆ ಕಾರಣವೆನಿಸಿದೆ. ಸಂಯುಕ್ತ ರಾಷ್ಟ್ರಗಳು ಸಂಸ್ಥೆಯ ( ಯುನೈಟೆಡ್ ನೇಶನ್ಸ್ )ಆಹಾರ ಮತ್ತು ಕೃಷಿ ಸಂಘಟನೆಯ ಅಭಿಪ್ರಾಯದಂತೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಜಗತ್ತಿನ ಶೇ.  ೨೫ ರಷ್ಟು ಜನರು ಮತ್ತು ಇದೇ ಸಮಸ್ಯೆಯಿಂದ ಬಳಲುತ್ತಿರುವ ಶೇ.೩೩ ರಷ್ಟು ಮಕ್ಕಳು ಭಾರತೀಯರೇ ಆಗಿದ್ದಾರೆ.

ನಾವಿಂದು ನಮ್ಮ ದೇಶದ ಪ್ರಜೆಗಳಿಗೆ ಸಾಕಾಗುವಷ್ಟು ಆಹಾರಪದಾರ್ಥಗಳನ್ನು ಬೆಳೆಯುತ್ತಿದ್ದರೂ, ಗಣನೀಯ ಪ್ರಮಾಣದ ಜನರು ಅಪೌಷ್ಠಿಕತೆಯಿಂದ ಬಳಲುತ್ತಿರುವುದು ಸರಕಾರಕ್ಕೆ ತಿಳಿಯದ ವಿಚಾರವೇನಲ್ಲ. ಆದರೆ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಭವ್ಯ ಭಾರತಕ್ಕೆ, ದೇಶದ ರೈತರು - ಕೃಷಿಕರು ಬೆಳೆದ ದವಸಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಸಂಗ್ರಹಿಸಿ, ಕ್ಷಿಪ್ರಗತಿಯಲ್ಲಿ ಸಾಗಿಸಿ, ಸುರಕ್ಷಿತವಾಗಿ ಸಂರಕ್ಷಿಸಿ ಇರಿಸಬಲ್ಲ ಗೋದಾಮುಗಳು ಮತ್ತು ಶೈತ್ಯಾಗಾರಗಳನ್ನು ನಿರ್ಮಿಸಲು ಆಗದಷ್ಟು ಬಡತನವಿಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ದೇಶದ ಬೊಕ್ಕಸಕ್ಕೆ ಸಹಸ್ರಾರು ಕೋಟಿ  ರೂಪಾಯಿಗಳ ನಷ್ಟದೊಂದಿಗೆ, ಪ್ರಜೆಗಳ ಅನಾರೋಗ್ಯ ಮತ್ತು ಅಕಾಲಿಕ ಮರಣಗಳಿಗೂ ಕಾರಣವೆನಿಸುತ್ತಿರುವ ಈ ವಿಲಕ್ಷಣ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಪರಿಹರಿಸುವ ಇಚ್ಛಾಶಕ್ತಿ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು!.

ಅದೇನೇ ಇರಲಿ, ಜಗತ್ತಿನಲ್ಲಿ ಉತ್ಪಾದಿಸಲ್ಪಡುತ್ತಿರುವ ಶೇ. ೩೩ ರಷ್ಟು ಆಹಾರಪದಾರ್ಥಗಳನ್ನು ಅನಾವಶ್ಯಕವಾಗಿ ಪೋಲುಮಾಡುತ್ತಿರುವ ಜನಸಾಮಾನ್ಯರ ಕೆಟ್ಟ ಹವ್ಯಾಸಕ್ಕೆ ಕಡಿವಾಣವನ್ನು ತೊಡಿಸಲೇಬೇಕಾಗಿದೆ. ಜೊತೆಗೆ ವ್ಯರ್ಥವಾಗಿ ಪೋಲಾಗುತ್ತಿರುವ ಆಹಾರಪದಾರ್ಥಗಳನ್ನು ಉಳಿಸುವುದರೊಂದಿಗೆ,ಮೂರು ಹೊತ್ತಿನ ತುತ್ತಿಗೆ ತತ್ವಾರವಿರುವ ಹಾಗೂ ಅಪೌಷ್ಠಿಕತೆಯ ಸಮಸ್ಯೆಯಿಂದ ಪೀಡಿತರಾದ ಜನರಿಗೆ ಸಮತೋಲಿತ ಆಹಾರವನ್ನು ಒದಗಿಸಬೇಕಾದ ಹೊಣೆಗಾರಿಕೆಯು ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಮೇಲಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು






Thursday, February 12, 2015

MAHARASHTRA : CONTROLLING MOUNTING EXPENSES




ಮಹಾರಾಷ್ಟ್ರ : ಹೆಚ್ಚುತ್ತಿರುವ ಯೋಜನೆಗಳ ವೆಚ್ಚಗಳಿಗೆ ಕಡಿವಾಣ 

ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ವರ್ಷವಿಡೀ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪರಿಪೂರ್ಣಗೊಳ್ಳುವುದೇ ಇಲ್ಲ. ತತ್ಪರಿಣಾಮವಾಗಿ ಇಂತಹ ಯೋಜನೆಗಳ ಖರ್ಚುವೆಚ್ಚಗಳೂ ಪ್ರಾರಂಭಿಕ ಹಂತದಲ್ಲಿ ಸಿದ್ಧಪಡಿಸಿದ್ದ ಅಂದಾಜುಪಟ್ಟಿಗೆ ಅನುಗುಣವಾಗಿ ಇರುವುದಿಲ್ಲ. ಹಾಗೂ ಇದೇ ಕಾರಣದಿಂದಾಗಿ ಯೋಜನೆಗಳ ವೆಚ್ಚವನ್ನು ಮರುಪರಿಷ್ಕರಣೆ ಮಾಡುತ್ತಿರುವ ರಾಜ್ಯ ಸರ್ಕಾರಗಳ ಧೋರಣೆಯಿಂದಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬೊಕ್ಕಸಗಳಿಗೆ ಸಹಸ್ರಾರು ಕೋಟಿ ರೂಪಾಯಿಗಳ ನಷ್ಟ ಸಂಭವಿಸುತ್ತಿದೆ. ಇದನ್ನು ನಿಯಂತ್ರಿಸಲು ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವಿಸ್, ಅತ್ಯಂತ ಪರಿಣಾಮಕಾರಿ ನಿರ್ಧಾರವೊಂದನ್ನು ಜಾರಿಗೊಳಿಸಿದ್ದಾರೆ.

ಹೆಚ್ಚುತ್ತಿರುವ ವೆಚ್ಚಕ್ಕೆ ಕಡಿವಾಣ

ಇತ್ತೀಚೆಗಷ್ಟೇ ಅಧಿಕಾರದ ಗದ್ದುಗೆಯನ್ನು ಏರಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವಿಸ್ ಅವರುರಾಜ್ಯ ಸರ್ಕಾರ ಅನುಷ್ಠಾನಗೊಳಿಸುತ್ತಿರುವ  ಯಾವುದೇ ನಿರ್ಮಾಣ ಕಾಮಗಾರಿಗಳ ಯೋಜನೆಯ ವೆಚ್ಚವನ್ನು ಮರುಪರಿಷ್ಕರಿಸದಂತೆ ವಿವಿಧ ಇಲಾಖೆಗಳಿಗೆ ನಿರ್ದೇಶಿಸಿದ್ದಾರೆ. ಇದಲ್ಲದೇ ಕಾಮಗಾರಿಗಳನ್ನು ಪರಿಪೂರ್ಣಗೊಳಿಸಲು ನಿಗದಿಸಿದ ಕಾಲಾವಧಿ, ಯೋಜನೆಗಳ ವೆಚ್ಚ ಮತ್ತು ಆರ್ಥಿಕ ನಕಾಶೆಗಳುನಿಗದಿತ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ಆರಂಭಿಸುವ ಸಂದರ್ಭದಲ್ಲಿ ನೀಡುವ ಆದೇಶದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು ಎಂದು ಸೂಚಿಸಿದ್ದಾರೆ.ಹಾಗೂ ಯಾವುದೇ ಕಾರಣಕ್ಕೂ ಇದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಾರದು ಎಂದೂ ಆದೇಶಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿರುವ ನಿರ್ಮಾಣ ಕಾಮಗಾರಿಗಳ ವೆಚ್ಚದ ಮರುಪರಿಷ್ಕರಣೆಯ ಸಮಸ್ಯೆಯನ್ನು ಬಗೆಹರಿಸಲು ಮುಖ್ಯಮಂತ್ರಿಗಳು ಹೂಡಿರುವ ಈ ಕಟ್ಟುನಿಟ್ಟಿನ ತಂತ್ರವನ್ನುಅನ್ಯ ರಾಜ್ಯ ಸರ್ಕಾರಗಳೂ ಅನುಕರಿಸಬೇಕಿದೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಧಿಕತಮ ನಿರ್ಮಾಣ ಕಾಮಗಾರಿಗಳಲ್ಲಿ ಸಂಭವಿಸುತ್ತಿರುವ ವಿಳಂಬದಿಂದಾಗಿ, ಹೆಚ್ಚುತ್ತಿರುವ ಯೋಜನೆಯ ಖರ್ಚುವೆಚ್ಚಗಳನ್ನು ನಿಯಂತ್ರಿಸಲು ಇಂತಹ ಉಪಕ್ರಮಗಳು ಅನಿವಾರ್ಯವೆನಿಸುತ್ತವೆ.

೨೦೧೨ ರದ ಕೇಂದ್ರ ಸರ್ಕಾರದ ಇಲಾಖೆಯೊಂದರ ವರದಿಯಂತೆ ಸರ್ಕಾರವು ಅನುಷ್ಠಾನಗೊಳಿಸಿದ್ದ ೫೬೬ ಯೋಜನೆಗಳಲ್ಲಿ ೨೩೪ ಯೋಜನೆಗಳು ನಿಗದಿತ ಅವಧಿಯಲ್ಲಿ ಪರಿಪೂರ್ಣಗೊಂಡಿರಲಿಲ್ಲ. ತತ್ಪರಿಣಾಮವಾಗಿ ಕೇಂದ್ರದ ಬೊಕ್ಕಸಕ್ಕೆ ೧,೨೦,೩೧೯ ಕೋಟಿ ರೂ. ಹೆಚ್ಚುವರಿ ಹೊರೆ ಬಿದ್ದಿತ್ತು !. ಈ ೫೬೬ ಯೋಜನೆಗಳೂ ೫೦೦ ಕೋಟಿ ರೂ. ಗಳಿಗೂ ಅಧಿಕ ಮೊತ್ತದ ಯೋಜನೆಗಳಾಗಿದ್ದು, ಇದಕ್ಕೂ ಕಡಿಮೆ ಮೊತ್ತದ ಯೋಜನೆಗಳನ್ನು ಇಲ್ಲಿ ಪರಿಗಣಿಸಿಲ್ಲ.

ಕರ್ನಾಟಕದ ಉದಾಹರಣೆ

ಬೆಳಗಾವಿಯಲ್ಲಿ ಸುವರ್ಣ ಸೌಧವನ್ನು ನಿರ್ಮಿಸಿ ಚಳಿಗಾಲದ ಅಧಿವೇಶನವನ್ನು ನಡೆಸಲು ರಾಜ್ಯ ಸರ್ಕಾರವು ಗತದಶಕದಲ್ಲೇ ನಿರ್ಧರಿಸಿತ್ತು. ೨೦೦೯ ರಲ್ಲಿ ಇದಕ್ಕಾಗಿ ಬೇಕಾಗುವ ಜಮೀನಿನ ಮೌಲ್ಯವೂ ಸೇರಿದಂತೆ, ೨೫೦.೬೫ ಕೋಟಿ ರೂ.ಗಳ ಅಂದಾಜುಪಟ್ಟಿಯನ್ನು ಸಿದ್ಧಪಡಿಸಿತ್ತು. ಆದರೆ ಸ್ವಲ್ಪ ಸಮಯದ ಬಳಿಕ ಈ ಮೊತ್ತವನ್ನು ೩೫೦ ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿತ್ತು. ಇದನ್ನು ಸಮರ್ಥಿಸಲು ೩೫೨೦ ಚದರ ಅಡಿಗಳ ಹೆಚ್ಚುವರಿ ನಿರ್ಮಾಣದ ನೆಪವನ್ನು ಮುಂದೊಡ್ಡಲಾಗಿತ್ತು. ೦೧-೦೭-೨೦೦೯ ರಲ್ಲಿ ಆರಂಭಗೊಂಡಿದ್ದ ಸೌಧದ ನಿರ್ಮಾಣಕ್ಕೆ ೧೮ ತಿಂಗಳುಗಳ ಕಾಲಾವಧಿಯನ್ನು ನಿಗದಿಸಲಾಗಿತ್ತು. ಆದರೆ ಹಲವಾರು ವರ್ಷಗಳ ಬಳಿಕ ಪರಿಪೂರ್ಣಗೊಂಡಿದ್ದ ಈ ಕಾಮಗಾರಿಯ ವೆಚ್ಚವು, ೪೧೦ ಕೋಟಿಯನ್ನು ಮೀರಿತ್ತು !.

ಅದೇ ರೀತಿಯಲ್ಲಿ ಮೈಸೂರು – ಮಾಣಿ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಳ ಯೋಜನೆಯ ಅಂತಿಮ ಭಾಗವಾಗಿದ್ದ ಸಂಪಾಜೆ – ಮಾಣಿ ನಡುವಿನ ೭೧.೯೦ ಕಿ.ಮೀ. ರಸ್ತೆಯ ಪುನರ್ನಿರ್ಮಾಣದ ಕಾಮಗಾರಿಗಳಿಗೆ ಸುಮಾರು ೧೩೪ ಕೋಟಿ ರೂ.ವೆಚ್ಚವಾಗಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ ೨೦೦೯ ರಲ್ಲಿ ಆಂಧ್ರ ಮೂಲದ ಕೆ ಎಂ ಸಿ ಸಂಸ್ಥೆಗೆ ಇದರ ಗುತ್ತಿಗೆಯನ್ನು ನೀಡುವಾಗ ಈ ಮೊತ್ತವು ೧೭೨.೬೨ ಕೋಟಿ ರೂ.ಗಳಿಗೆ ಏರಿತ್ತು !. ಗುತ್ತಿಗೆಯನ್ನು ನೀಡುವ ಸಂದರ್ಭದಲ್ಲಿ ಈ ಕಾಮಗಾರಿಗಳನ್ನು ಮುಗಿಸಲು ೩೦ ತಿಂಗಳುಗಳ ಕಾಲಾವಕಾಶವನ್ನು ನಿಗದಿಸಿದ್ದರೂ, ಈ ಕಾಮಗಾರಿಗಳು ಇಂದಿನ ತನಕ ಪರಿಪೂರ್ಣಗೊಂಡಿಲ್ಲ. ಹಾಗೂ ಇದೇ ಕಾರಣದಿಂದಾಗಿ ಗುತ್ತಿಗೆಯ ಮೊತ್ತವು ಇನ್ನಷ್ಟು ಹೆಚ್ಚುವುದರಲ್ಲಿ ಸಂದೇಹವಿಲ್ಲ !.

ವಿಶೇಷವೆಂದರೆ ಸಿದ್ದರಾಮಯ್ಯನವರು ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಮೈಸೂರಿನಲ್ಲಿ ಉದ್ಘಾಟಿಸಿದ್ದ ಈ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಳು, ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ವರ್ಷ ಕಳೆದರೂ ಪರಿಪೂರ್ಣಗೊಳ್ಳದಿರುವುದು ವಿಪರ್ಯಾಸವೇ ಸರಿ.

ಅದೇನೇ ಇರಲಿ, ಪ್ರಸ್ತುತ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಜಾರಿಗೊಳಿಸಿರುವ ವಿನೂತನ ಕ್ರಮವನ್ನು, ದೇಶದ ಪ್ರತಿಯೊಂದು ರಾಜ್ಯಗಳಲ್ಲೂ ಅನುಷ್ಠಾನಗೊಳಿಸಲೇಬೇಕು. ತನ್ಮೂಲಕ ದೇಶದ ಪ್ರಜೆಗಳು ತೆತ್ತಿರುವ ತೆರಿಗೆಯ ಹಣವು ಪೋಲಾಗುವುದನ್ನು ತಡೆಗಟ್ಟಲೇಬೇಕೆಂದು ರಾಜ್ಯದ ಪ್ರಜೆಗಳು ಸರ್ಕಾರವನ್ನು ಒತ್ತಾಯಿಸಬೇಕು.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಚಿತ್ರ - ಸಂಪಾಜೆ - ಮಾಣಿ ಹೆದ್ದಾರಿ 


Wednesday, February 11, 2015

ASSAM GOVT. TO CONTROL PESTICIDES IN VEGETABLES

ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಲಿರುವ ಅಸ್ಸಾಂ ಸರ್ಕಾರ

ನಾವಿಂದು ಸೇವಿಸುತ್ತಿರುವ ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಬೆಳೆಯುವಾಗ ಅತಿಯಾದ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಲಾಗುತ್ತಿದೆ ಎನ್ನುವ ವಿಚಾರ ನಿಮಗೂ ತಿಳಿದಿರಲೇಬೇಕು. ರಾಸಾಯನಿಕ ಕೀಟನಾಶಕಗಳ ದುಷ್ಪರಿಣಾಮಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಅರಿತಿರುವ ಜನರು, ತಮ್ಮ ಮನೆಯಂಗಳದಲ್ಲೇ ತರಕಾರಿಗಳನ್ನು ಬೆಳೆಸುತ್ತಾರೆ. ಮತ್ತೆ ಕೆಲವರು ಸಾವಯವ ಪದ್ದತಿಯಲ್ಲಿ ಬೆಳೆದಿರುವ ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಖರೀದಿಸಿ ಬಳಸುತ್ತಾರೆ. ಆದರೆ ದೇಶದ ಪ್ರತಿಯೊಬ್ಬ ಪ್ರಜೆಗೆ ಸಾಕಾಗುವಷ್ಟು ಪ್ರಮಾಣದಲ್ಲಿ ಇವುಗಳನ್ನು ಬೆಳೆಯುವುದು ಅಸಾದ್ಯವಾಗಿರುವುದರಿಂದ, ಮಾರುಕಟ್ಟೆಯಲ್ಲಿ ದೊರೆಯುವ ಹಾಗೂ ಕೀಟನಾಶಕಗಳಿಂದ ಸಮೃದ್ಧವಾಗಿರುವ ಆಹಾರಪದಾರ್ಥಗಳನ್ನೇ ಜನಸಾಮಾನ್ಯರು ಖರೀದಿಸಿ ಸೇವಿಸುತ್ತಾರೆ. ತತ್ಪರಿಣಾಮವಾಗಿ ಅಯಾಚಿತ ಆರೋಗ್ಯದ ಸಮಸ್ಯೆಗಳಿಗೆ ಈಡಾಗುತ್ತಾರೆ.

ಸಾಮಾನ್ಯವಾಗಿ ದೇಶದ ವಿವಿಧ ರಾಜ್ಯಗಳಲ್ಲಿನ ಅಧಿಕತಮ ಕೃಷಿಕರು ಅನಕ್ಷರಸ್ತರಾಗಿದ್ದು, ತಾವು ಜೀವನೋಪಾಯಕ್ಕಾಗಿ ಬೆಳೆಯುವ ಆಹಾರಧಾನ್ಯಗಳು, ಹನ್ನುಹಂಪಳುಗಳು ಮತ್ತು ತರಕಾರಿಗಳನ್ನು ಕೀಟಗಳ ಬಾಧೆಯಿಂದ ರಕ್ಷಿಸಲು, ವಿವಿಧ ರೀತಿಯ ಕೀಟನಾಶಕಗಳನ್ನು ಬಳಸುತ್ತಾರೆ. ಈ ಸಂದರ್ಭದಲ್ಲಿ ಈ ರಾಸಾಯನಿಕ ಕೀಟನಾಶಕಗಳನ್ನು ಯಾವ ಪ್ರಮಾಣದಲ್ಲಿ ಮತ್ತು ಹೇಗೆ ಬಳಸಬೇಕು ಎನ್ನುವುದರ ಮಾಹಿತಿ ತಿಳಿಯದೇ, ತಮಗೆ ತೋಚಿದಷ್ಟು ಪ್ರಮಾಣದಲ್ಲಿ ಬಳಸುತ್ತಾರೆ. ಇದಲ್ಲದೇ ತಮ್ಮ ಬೆಳೆಗಳನ್ನು ಮಾರಾಟಮಾಡಲು ಕೊಂಡೊಯ್ಯುವ ೧೫ ದಿನಗಳಿಗೆ ಮುನ್ನ ಕೀಟನಾಶಕಗಳ ಸಿಂಪಡನೆಯನ್ನು ನಿಲ್ಲಿಸಬೇಕು ಎನ್ನುವ ವಿಚಾರವನ್ನು ನಿರ್ಲಕ್ಷಿಸುತ್ತಾರೆ. ತತ್ಪರಿಣಾಮವಾಗಿ ಗ್ರಾಹಕರು ಖರೀದಿಸುವ ಉತ್ಪನ್ನಗಳಲ್ಲಿ ಕೀಟನಾಶಕಗಳ ಅಂಶವು ನಿಗದಿತ ಮಟ್ಟಕ್ಕಿಂತ ಹೆಚ್ಚಾಗಿ ಇರುವುದರಿಂದ, ಅನಪೇಕ್ಷಿತ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತದೆ. ವಿಶೇಷವೆಂದರೆ ಅನೇಕ ಅನಕ್ಷರಸ್ತ ಕೃಷಿಕರಿಗೆ ತಾವು ಬಳಸುವ ಕೀಟನಾಶಕಗಳ ದುಷ್ಪರಿಣಾಮಗಳ ಬಗ್ಗೆ ಅರಿವಿದ್ದು, ಇವರು ತಮ್ಮ ಮನೆಮಂದಿಗಾಗಿ ಕೀಟನಾಶಕಗಳನ್ನು ಬಳಸದೇ ಪ್ರತ್ಯೇಕವಾಗಿ ಬೆಳೆಸಿರುವ ಬೆಳೆಗಳನ್ನು ಮಾತ್ರ ಸೇವಿಸುತ್ತಾರೆ!.

ಕೀಟನಾಶಕಗಳ ಕಾಟ

೧೯೮೦ ರ ದಶಕದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿನ ಗೇರು ತೋಟಗಳನ್ನು ಬಾಧಿಸುತ್ತಿದ್ದ " ಟೀ ಮಾಸ್ಕಿಟೋ " ಎನ್ನುವ ಕೀಟಗಳನ್ನು ನಾಶಪಡಿಸಲು ವೈಮಾನಿಕವಾಗಿ ಸಿಂಪಡಿಸಿದ್ದ ಎಂಡೋ ಸಲ್ಫಾನ್ ಮತ್ತಿತರ ಕೀಟನಾಶಕಗಳ ದುಷ್ಪರಿಣಾಮಗಳಿಗೆ ಬಲಿಯಾಗಿದ್ದ ನೂರಾರು ಅಮಾಯಕರು ಹಾಗೂ  ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳಿಂದ ನರಳುತ್ತಿರುವ ಮತ್ತು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದ ಮೃತಪಟ್ಟ ಜನರ ಬಗ್ಗೆ ಒಂದಿಷ್ಟು ಮಾಹಿತಿಗಳು ನಿಮಗೂ ತಿಳಿದಿರಬಹುದು. ಅದೇ ರೀತಿಯಲ್ಲಿ ನಮ್ಮ ಜೀವಿತಾವಧಿಯಲ್ಲಿ ಕೀಟನಾಶಕಗಳು ಸಮೃದ್ಧವಾಗಿರುವ ಆಹಾರಪದಾರ್ಥಗಳನ್ನು ಸೇವಿಸಿದಲ್ಲಿ ಉದ್ಭವಿಸಬಲ್ಲ ಅಪಾಯಕಾರಿ ವ್ಯಾಧಿಗಳ ಬಗ್ಗೆ ಕಿಂಚಿತ್ ಮಾಹಿತಿ ತಿಳಿದಿರಬಹುದು. ಆದರೆ ಕೀಟನಾಶಕಗಳನ್ನು ಬಳಸದೇ ಬೆಳೆಸಿರುವ ಆಹಾರಪದಾರ್ಥಗಳು ಲಭ್ಯವಾಗದೇ ಇರುವುದರಿಂದ ಚಿಂತಾಕ್ರಾಂತರಾಗಿರಲೂಬಹುದು.

ಸರ್ಕಾರಗಳ ವೈಫಲ್ಯ

ನಮ್ಮ ದೇಶದ ಸಂವಿಧಾನದಲ್ಲಿ  ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಚ್ಛವಾದ ಗಾಳಿ, ಶುದ್ಧವಾದ ನೀರು ಮತ್ತು ಉತ್ತಮ ಗುಣಮಟ್ಟದ ಆಹಾರಪದಾರ್ಥಗಳನ್ನು( ಆಹಾರ ಭದ್ರತಾ ಕಾಯಿದೆಯಂತೆ )  ಪಡೆಯುವ  ಹಕ್ಕನ್ನು ನೀಡಲಾಗಿದೆ. ಆದರೆ ಇವೆಲ್ಲವನ್ನೂ ಒದಗಿಸಬೇಕಾದ ಹೊಣೆಗಾರಿಕೆಯು ರಾಜ್ಯ ಹಾಗೂಕೆಂದ್ರ ಸರ್ಕಾರಗಳ ಮೇಲಿದೆ. ವಿಶೇಷವೆಂದರೆ ಇವೆಲ್ಲವುಗಳನ್ನು ತನ್ನ ಪ್ರಜೆಗಳಿಗೆ ಒದಗಿಸುವಲ್ಲಿ ರಾಜ್ಯ – ಕೇಂದ್ರ ಸರ್ಕಾರಗಳು  ದಯನೀಯವಾಗಿ ವಿಫಲಗೊಂಡಿವೆ.

ಅಸ್ಸಾಂ ಸರ್ಕಾರ ಮಾದರಿ  

ಆದರೆ ಅಸ್ಸಾಂ ರಾಜ್ಯ ಸರ್ಕಾರವು ತನ್ನ ಪ್ರಜೆಗಳ ಹಿತರಕ್ಷಣೆಯ ದೃಷ್ಠಿಯಿಂದ ರಾಜ್ಯದಲ್ಲಿ ಮಾರಾಟವಾಗುತ್ತಿರುವ ತರಕಾರಿಗಳಲ್ಲಿನ ಕೀಟನಾಶಕಗಳ ಪ್ರಮಾಣವನ್ನು ಪತ್ತೆಹಚ್ಚಲು, ಪ್ರತಿಯೊಂದು ಜಿಲ್ಲೆಗಳಲ್ಲೂ ಪ್ರಯೋಗಾಲಯಗಳನ್ನು ತೆರೆಯಲು ನಿರ್ಧರಿಸಿದೆ. ಜೊತೆಗೆ ಕೀಟನಾಶಕಗಳಿಗೆ ಇತಿಮಿತಿಗಳನ್ನೂ ನಿಗದಿಸಲಿದೆ. ನಿಗದಿತ ಮಿತಿಗಿಂತ ಅಧಿಕ ಪ್ರಮಾಣದ ಕೀಟನಾಶಕಗಳು ಪತ್ತೆಯಾದಲ್ಲಿ, ಇದನ್ನು ಬೆಳೆದವರಿಗೆ ದಂಡವನ್ನು ವಿಧಿಸಲಿದೆ. ಅವಶ್ಯಕತೆ ಇದ್ದಲ್ಲಿ ಇಂತಹ ಕೃಷಿಕರು ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಬೆಳೆಯದಂತೆ ನಿಷೇಧವನ್ನೂ ಹೇರಲಿದೆ ಎಂದು ಅಸ್ಸಾಂ ನ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

ಈ ವ್ಯವಸ್ಥೆಯನ್ನು ಜಾರಿಗೆ ತಂದ ಬಳಿಕ ಜನಸಾಮಾನ್ಯರು ತಮ್ಮ ದೂರುಗಳನ್ನು ತತ್ಸಂಬಂಧಿತ ನಿಯಂತ್ರಣ ಮಂಡಳಿಗೆ ನೀಡಬಹುದಾಗಿದೆ.ಈ ಮಂಡಳಿಯು ಜಿಲ್ಲಾ ಮಟ್ಟದ ಸಮಿತಿಯ ಸಹಯೋಗದಲ್ಲಿ, ಕೃಷಿಕರ ಮೇಲೆ ಕಣ್ಗಾವಲು ಇರಿಸಲಿದೆ.

ಕೊನೆಯ ಮಾತು

ನಮ್ಮ ರಾಜ್ಯದಲ್ಲೂ ಈ ವ್ಯವಸ್ತೆ ಜಾರಿಗೆ ಬಂದಲ್ಲಿ ಹಾಗೂ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದಲ್ಲಿ, ರಾಜ್ಯದ ಪ್ರಜೆಗಳು “ ವಿಷ ಮಾನವ “ ರಾಗುವ ಸಾಧ್ಯತೆಗಳು ನಿಶ್ಚಿತವಾಗಿಯೂ ಕಡಿಮೆಯಾಗಲಿದೆ. ಆದರೆ ನಮ್ಮ ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರ ಎನ್ನುವ ಪಿಡುಗು ಯಾವುದೇ ಕೀಟನಾಶಕಕ್ಕಿಂತಲೂ ಅಪಾಯಕಾರಿ ಎನಿಸಿದ್ದು, ಸರ್ಕಾರವು ಪ್ರಜೆಗಳ ಹಿತದೃಷ್ಟಿಯಿಂದ  ರೂಪಿಸುವ ಕಾನೂನುಗಳನ್ನು ಉಲ್ಲಂಘಿಸುವವರನ್ನು ಶಿಕ್ಷಿಸುವ ಹೊರತಾಗಿ ಅವರನ್ನು ರಕ್ಷಿಸುತ್ತದೆ!.

ಅದೇನೇ ಇರಲಿ, ನೀವು ಮಾರುಕಟ್ಟೆಯಲ್ಲಿ ಹಣ್ಣುಹಂಪಲು ಅಥವಾ ತರಕಾರಿಗಳನ್ನು ಖರೀದಿಸುವಾಗ, ಸೊಟ್ಟನೆಯ ಆಕಾರದ, ಆಕರ್ಷಕವಾಗಿ ಕಾಣಿಸದ ಮತ್ತು ಒಂದಿಷ್ಟು ಕೀಟಗಳ ಬಾಧೆಯ ಲಕ್ಷಣಗಳಿರುವ ಉತ್ಪನ್ನಗಳನ್ನೇ ಕೊಳ್ಳಿರಿ. ಏಕೆಂದರೆ ಇವೆಲ್ಲವೂ ಕೀಟನಾಶಕಗಳನ್ನು ಬಳಸದೇ ಬೆಳೆದಿರುವುದನ್ನು ಸಾಬೀತುಪಡಿಸುತ್ತವೆ.


ಡಾ.ಸಿ.ನಿತ್ಯಾನಂದ ಪೈ,ಪುತ್ತೂರು