Thursday, October 31, 2013

Poison In our Food



                       ಕೀಟನಾಶಕಗಳ ಕಾಟ- ಜನರಿಗೆ ಪ್ರಾಣಸಂಕಟ!

ಸಹಸ್ರಾರು ವರ್ಷಗಳ ಹಿಂದೆ "ವಿಷಕನ್ಯೆ" ಯರನ್ನು ಸೃಷ್ಟಿಸಿ, ಶತ್ರು ರಾಜರನ್ನು ಸುಲಭದಲ್ಲೇ ಸಂಹರಿಸುತ್ತಿದ್ದ ರಾಜ- ಮಹಾರಾಜರುಗಳ ಕಥೆಯನ್ನು ನೀವೂ ಓದಿರಬಹುದು. ಆದರೆ ಇಂದು ನಾವು ಉಸಿರಾಡುವ ಗಾಳಿ, ಕುಡಿಯುವ ನೀರು,  ಸೇವಿಸುವ ಆಹಾರ ಇತ್ಯಾದಿಗಳಲ್ಲಿ ಸಮೃದ್ಧವಾಗಿರುವ ವೈವಿಧ್ಯಮಯ ವಿಷಕಾರಕ ರಾಸಾಯನಿಕಗಳಿಂದಾಗಿ, ನಾವಿಂದು "ವಿಷ ಮಾನವ" ರಾಗುತ್ತಿರುವುದು ನಿಮಗೂ ತಿಳಿದಿರಲಾರದು. 
--------------------               ------------------------                 -------------------                  -------------------               --------------

  ಬಹುರಾಷ್ಟ್ರೀಯ ಸಂಸ್ಥೆಗಳು ಭಾರತದಲ್ಲಿ ಮಾರಾಟ ಮಾಡುತ್ತಿರುವ ಲಘು ಪಾನೀಯ (ಕೋಲಾ) ಗಳಲ್ಲಿ ಕೀಟನಾಶಕಗಳ ಅಂಶಗಳು ಪತ್ತೆಯಾಗಿದ್ದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾದೊಡನೆ ಉದ್ಭವಿಸಿದ್ದ "ಕೋಲಾಹಲ" ವನ್ನು ನೀವೂ ಮರೆತಿರಲಾರಿರಿ. ಆದರೆ ಜನಸಾಮಾನ್ಯರು ಅಪರೂಪದಲ್ಲಿ ಕುಡಿಯುವ ಲಘು ಪಾನೀಯಗಳಿಗಿಂತ, ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಬೆರೆತಿರುವ ಕೀಟನಾಶಕಗಳು ಅತ್ಯಂತ ಅಪಾಯಕಾರಿ ಎಂದು ತಿಳಿದಿರಲಿ. 

ರೋಗಕಾರಕ ರಾಸಾಯನಿಕಗಳು 

ನಾವು ದಿನನಿತ್ಯ ಕುಡಿಯುವ ನೀರು ಹಾಗೂ ಸೇವಿಸುವ ಆಹಾರಗಳಲ್ಲಿ ಯಥೇಚ್ಛವಾಗಿರುವ ಕೀಟನಾಶಕಗಳ ಅಂಶಗಳು, ನಿಸ್ಸಂದೇಹವಾಗಿ ನಮ್ಮ ಆರೋಗ್ಯದ ಹಾಗೂ ಜೀವನದ ಗುಣಮಟ್ಟಗಳನ್ನು ನಿಧಾನವಾಗಿ ನಾಶಮಾಡುತ್ತಿರುವುದು ಸುಳ್ಳೇನಲ್ಲ. ಜನ್ಮದತ್ತ ಕಾಯಿಲೆಗಳಿಂದ ಆರಂಭಿಸಿ, ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಕಾಣಿಸಿಕೊಳ್ಳುವ ಅನೇಕ ಗಂಭೀರ- ಮಾರಕ ವ್ಯಾಧಿಗಳು ಇಂದು ಯೌವ್ವನದಲ್ಲೇ ವ್ಯಾಪಕವಾಗಿ ಕಂಡುಬರುತ್ತಿರಲು, ಆಧುನಿಕ ಜೀವನಶೈಲಿ, ತೀವ್ರ ಮಾನಸಿಕ ಒತ್ತಡ, ಅನುವಂಶಿಕತೆ ಹಾಗೂ ದುಶ್ಚಟಗಳೊಂದಿಗೆ ನಾವಿಂದು ಸೇವಿಸುತ್ತಿರುವ ಅಪಾಯಕಾರಿ ಕೀಟನಾಶಕಗಳೂ ಕಾರಣವಾಗಿವೆ. 

ಭಾರತೀಯರು ಸೇವಿಸುವ ಆಹಾರ ಪದಾರ್ಥಗಳಲ್ಲಿ ಬೆರೆತಿರಬಹುದಾದ ಕೀಟನಾಶಕಗಳನ್ನು ಪತ್ತೆಹಚ್ಚುವ ಪ್ರಯತ್ನವೊಂದು ೧೯೯೩ ರಲ್ಲೇ ನಡೆದಿತ್ತು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯು ಭಾರತದಾದ್ಯಂತ ನಡೆಸಿದ್ದ ಈ ಅಧ್ಯಯನದಲ್ಲಿ ಶೇ. ೩೭ ರಷ್ಟು ಆಹಾರಪದಾರ್ಥಗಳಲ್ಲಿ ಡಿ ಡಿ ಟಿ ಹಾಗೂ ಎಚ್ ಸಿ ಎಚ್ ಎನ್ನುವ ಕೀಟನಾಶಕಗಳು ನಿಗದಿತ ಮಟ್ಟಕ್ಕಿಂತ ಸಾಕಷ್ಟು ಅಧಿಕವಾಗಿದ್ದವು!. 

ಮೂರು ವರ್ಷಗಳ ಬಳಿಕ ಕೇಂದ್ರ ಸರಕಾರವು ಹೊಸದೊಂದು ಅಧ್ಯಯನವನ್ನು ನಡೆಸಲು ಆದೇಶಿಸಿತ್ತು. ನೂತನ ಅಧ್ಯಯನದಲ್ಲಿ ಪರೀಕ್ಷಿಸಲಾಗಿದ್ದ ಶೇ. ೫೧ ರಷ್ಟು ಆಹಾರಪದಾರ್ಥಗಳಲ್ಲಿ (ದವಸ ಧಾನ್ಯಗಳು, ತರಕಾರಿಗಳು, ಹಣ್ಣುಹಂಪಲುಗಳು ,ಹಾಲು ಇತ್ಯಾದಿ)ವಿವಿಧ ರೀತಿಯ ಕೀಟನಾಶಕಗಳ ಅಂಶಗಳು ಪತ್ತೆಯಾಗಿದ್ದವು. ಜೊತೆಗೆ ಇವುಗಳಲ್ಲಿನ ಶೇ. ರಷ್ಟು ವಸ್ತುಗಳಲ್ಲಿ ಕೀಟನಾಶಕಗಳ ಪ್ರಮಾಣವು ನಿಗದಿತ ಮಟ್ಟಕ್ಕಿಂತ ಸಾಕಷ್ಟು ಹೆಚ್ಚಾಗಿದ್ದವು!. 

ವಿಶೇಷವೆಂದರೆ ಕಳೆದ ಹತ್ತು ವರ್ಷಗಳಲ್ಲಿ ಇಂತಹ ಮತ್ತೊಂದು ಅಧ್ಯಯನವನ್ನು ಕೇಂದ್ರ ಸರಕಾರವು ನಡೆಸಿಲ್ಲ. ಇಷ್ಟು ಮಾತ್ರವಲ್ಲ, ವಿಶ್ವ ಆರೋಗ್ಯ ಸಂಸ್ಥೆಯು ಬಹುತೇಕ ರಾಷ್ಟ್ರಗಳಲ್ಲಿ ನಡೆಸುತ್ತಿರುವ ಇದೇ ರೀತಿಯ ಅಧ್ಯಯನವನ್ನು ಭಾರತದಲ್ಲೂ ನಡೆಸುವಂತೆ ಅಧಿಕೃತ ಆಹ್ವಾನವನ್ನೂ ನೀಡಿಲ್ಲ. ಇದೇ ಕಾರಣದಿಂದಾಗಿ ನಮ್ಮ ದೇಶದಲ್ಲಿ ಬಳಸಲ್ಪಡುತ್ತಿರುವ ಕೀಟನಾಶಕ ರಾಸಾಯನಿಕಗಳ ಪ್ರಮಾಣ- ದುಷ್ಪರಿಣಾಮಗಳ ಬಗ್ಗೆ ವಿಸ್ತೃತ ಮಾಹಿತಿಯು ಜನಸಾಮಾನ್ಯರಿಗೆ ಲಭಿಸುತ್ತಿಲ್ಲ. 

ನಮ್ಮ ದೇಶದಲ್ಲಿ ಸುಮಾರು ೧೯೭ ವಿಧದ ಕೀಟನಾಶಕಗಳು ಲಭ್ಯವಿದ್ದು, ಇವುಗಳಲ್ಲಿ ಕನಿಷ್ಠ ೩೦ ವಿಧದ ಕೀಟನಾಶಕಗಳನ್ನು ವ್ಯಾಪಕವಾಗಿ ಬಳಸುತ್ತಿರುವ ಕೃಷಿಕರಿಗೆ, ಇವುಗಳನ್ನು ಸುರಕ್ಷಿತವಾಗಿ ಬಳಸುವ ಬಗ್ಗೆ ಸೂಕ್ತ ಮಾಹಿತಿ ತಿಳಿದಿಲ್ಲ. ಅಂತೆಯೇ ಇವರಿಗೆ ಈ ಬಗ್ಗೆ ಯಾವುದೇ ತರಬೇತಿಯನ್ನು ನೀಡುವ ವ್ಯವಸ್ಥೆಯೂ ಇಲ್ಲ. ಇದಲ್ಲದೆ ಇವುಗಳ ತಯಾರಕರು ತಮ್ಮ ಉತ್ಪನ್ನಗಳೊಂದಿಗೆ ಒದಗಿಸುವ ಸೂಚನೆಗಳನ್ನು ಕೃಷಿಕರು ಗಮನಿಸುವುದಿಲ್ಲ. ಇದೇ ಕಾರಣದಿಂದಾಗಿ ಅಧಿಕತಮ ಕೃಷಿಕರು ತಮಗೆ ತೋಚಿದಷ್ಟು ಪ್ರಮಾಣದ ಕೀಟನಾಶಕಗಳನ್ನು ನೀರಿನಲ್ಲಿ ಬೆರೆಸಿ, ತಮ್ಮ ಬೆಳೆಗಳಿಗೆ ಸಿಂಪಡಿಸುವುದು ವಾಡಿಕೆಯಾಗಿದೆ. 

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುವ ಆಹಾರಪದಾರ್ಥಗಳಲ್ಲಿ ಎಚ್. ಸಿ. ಎಚ್, ಡಿ. ಡಿ, ಟಿ, ಎಂಡೋಸಲ್ಫಾನ್, ಮೆಲಾಥಿಯಾನ್, ಲಿಂಡೆನ್, ಕಾರ್ಬಾಮೆಟ್ಸ್ ಹಾಗೂ ಆರ್ಗನೋ ಫೊಸ್ಫೊರಸ್ ಗಳಲ್ಲದೆ, ಆರ್ಸೆನಿಕ್,ಕಾಪರ್, ಲೆಡ್, ಝಿಂಕ್,ಕ್ಯಾಡ್ಮಿಯಂ ಮುಂತಾದ ವಿಷಕಾರಕ ಲೋಹಗಳ ಅಂಶಗಳೂ ಪತ್ತೆಯಾಗಿವೆ. 

ಬಾಧಕಗಳು 

ಈ ರೀತಿಯ ಅಪಾಯಕಾರಿ ರಾಸಾಯನಿಕಗಳು ಬೆರೆತಿರುವ ಆಹಾರಪದಾರ್ಥಗಳನ್ನು ದಿನನಿತ್ಯ ಸೇವಿಸುವುದರಿಂದ ಮನುಷ್ಯನ ಸ್ವಾಭಾವಿಕ ರೋಗನಿರೋಧಕ ಮತ್ತು ಸಂತಾನೋತ್ಪತ್ತಿ ಶಕ್ತಿಗಳು ಕುಂಠಿತಗೊಳ್ಳುವ ಸಾಧ್ಯತೆಗಳಿವೆ.ಇದಲ್ಲದೇ ಚರ್ಮ,ರಕ್ತ, ರಕ್ತನಾಳಗಳ ಕಾಯಿಲೆಗಳು, ಅಪಸ್ಮಾರ,ಮೆದುಳು- ಸ್ತನಗಳ ಕ್ಯಾನ್ಸರ್,ಮೂತ್ರಪಿಂಡಗಳ ಕಾಯಿಲೆಗಳು, ಜಠರದ ಹುಣ್ಣುಗಳು, ಶಾರೀರಿಕ ಚಲನ ವಲನಗಳ ತೊಂದರೆಗಳು ಮತ್ತು ತಾಯಿಯ ಗರ್ಭದಲ್ಲಿನ ಭ್ರೂಣದ ಮೇಲೂ ತೀವ್ರವಾದ ದುಷ್ಪರಿಣಾಮಗಳನ್ನು ಬೀರುತ್ತವೆ. ಇವೆಲ್ಲಕ್ಕೂ ಮಿಗಿಲಾಗಿ ಇವುಗಳು ನಮ್ಮ ವಂಶವಾಹಿನಿಗಳನ್ನು ಬಾಧಿಸಿದಲ್ಲಿ ಉದ್ಭವಿಸಬಹುದಾದ ಗಂಭೀರ ಸಮಸ್ಯೆಗಳು ನಮ್ಮ ಮುಂದಿನ ಸಂತತಿಯನ್ನು ಶಾಪದೋಪಾದಿಯಲ್ಲಿ ಪೀಡಿಸುತ್ತವೆ. 

ಇಂತಹ ಅಪಾಯಕಾರಿ ಕೀಟನಾಶಕಗಳನ್ನು ಯಾವುದೇ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಪರಿಪಾಲಿಸದೇ ಸಿಂಪಡಿಸುವ ರೈತರಿಗೂ, ಇದರ ದುಷ್ಪರಿಣಾಮಗಳಿಂದ ರಕ್ಷಣೆ ದೊರೆಯುವುದಿಲ್ಲ. ಇಂತಹ ಕಾರ್ಯದಲ್ಲಿ ತೊಡಗಿರುವ ರೈತರಲ್ಲಿ ಸಾಮಾನ್ಯವಾಗಿ ತಲೆನೋವು, ತಲೆ ತಿರುಗುವಿಕೆ ಹಾಗೂ ಕಣ್ಣಿನ ದೃಷ್ಟಿ ಮಸುಕಾಗುವುದೇ ಮುಂತಾದ ಸಣ್ಣಪುಟ್ಟ ಸಮಸ್ಯೆಗಳು ಪ್ರಾರಂಭಿಕ ಹಂತದಲ್ಲಿ ಕಂಡುಬರುತ್ತವೆ. ಆದರೆ ಸುದೀರ್ಘಕಾಲ ಇಂತಹ ರಾಸಾಯನಿಕಗಳ ಸಂಪರ್ಕದಿಂದ ಮೇಲೆ ವಿವರಿಸಿದ ಗಂಭೀರ ಸಮಸ್ಯೆಗಳು ಇವರನ್ನು ತಪ್ಪದೆ ಬಾಧಿಸುತ್ತವೆ. ಹೆಂಗಸರು ಮತ್ತು ಮಕ್ಕಳ ಶರೀರಗಳು ಕೀಟನಾಶಕಗಳನ್ನು ನಿಭಾಯಿಸಲು ಅಸಮರ್ಥವಾಗಿರುವುದರಿಂದ, ಇವರಲ್ಲಿ ಇಂತಹ ದುಷ್ಪರಿಣಾಮಗಳು ಇನ್ನಷ್ಟು ತೀವ್ರವಾಗಿರುತ್ತವೆ. 

ಇವೆಲ್ಲವುಗಳ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಿದ್ದರೂ, ಇಂತಹ ಅಪಾಯಕಾರಿ ರಾಸಾಯನಿಕಗಳ ಬಳಕೆಯು ಇಂದಿಗೂ ಅನಿಯಂತ್ರಿತವಾಗಿ ಸಾಗುತ್ತಿದೆ. ಏಕೆಂದರೆ ಇವುಗಳನ್ನು ನಿಷೇಧಿಸುವ ಅಧಿಕಾರವಿರುವ ಸರಕಾರವೇ ಈ ವಿಚಾರದಲ್ಲಿ ಸುಮ್ಮನಿದೆ. ಜೊತೆಗೆ ಇವುಗಳ ದುಷ್ಪರಿಣಾಮಗಳು ಕ್ಷಿಪ್ರಗತಿಯಲ್ಲಿ ಉದ್ಭವಿಸದೇ, ಸುಮಾರು ೫ ರಿಂದ ೧೫ ವರ್ಷಗಳ ಬಳಿಕವೇ ಕಂಡುಬರುವುದರಿಂದಾಗಿ, ಆಹಾರಪದಾರ್ಥಗಳನ್ನು ಬೆಳೆಯುವ ಕೃಷಿಕರು ಮತ್ತು ಇವುಗಳನ್ನು ಬಳಸುವ ಜನಸಾಮಾನ್ಯರು ಕೀಟನಾಶಕಗಳ ಕಾಟಗಳ ಬಗ್ಗೆ ಕಿಂಚಿತ್ ಕೂಡಾ ಚಿಂತಿತರಾಗಿಲ್ಲ!. 

ಪರಿಹಾರವೇನು?

ನೀವು ದಿನನಿತ್ಯ ಸೇವಿಸುವ ದವಸ ಧಾನ್ಯಗಳು,ತರಕಾರಿ- ಸೊಪ್ಪುಗಳು,ಹಣ್ಣು ಹಂಪಲುಗಳನ್ನು ಬಳಸುವ ಮುನ್ನ ಕನಿಷ್ಠ ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ತನ್ಮಧ್ಯೆ ಎರಡರಿಂದ ಮೂರುಬಾರಿ ಇವುಗಳನ್ನು ತೊಳೆದು ನೀರನ್ನು ಬದಲಾಯಿಸಿ. ಈ ರೀತಿಯಲ್ಲಿ ಸ್ವಚ್ಚಗೊಳಿಸಿದ ದವಸ ಧಾನ್ಯಗಳನ್ನು ಬಿಸಿಲಿನಲ್ಲಿ ಒಣಗಿಸಿದ ಬಳಿಕ ಗಿರಣಿಗಳಲ್ಲಿ ಹಿಟ್ಟು ಮಾಡಿಸಿ. ಅದೇ ರೀತಿಯಲ್ಲಿ ಬೇಯಿಸಬೇಕಾದ ದವಸ ಧಾನ್ಯಗಳನ್ನು ಹಾಗೂ ತರಕಾರಿಗಳನ್ನು ಪ್ರೆಷರ್ ಕುಕರ್ ನಲ್ಲಿ ೧೫೦ ರಿಂದ ೧೯೦ ಡಿಗ್ರಿ ಉಷ್ಣತೆಯಲ್ಲಿ ಬೇಯಿಸಿ ಬಳಸಿರಿ. ಇದರಿಂದಾಗಿ ಇವುಗಳಲ್ಲಿನ ಪೌಷ್ಠಿಕ ಅಂಶಗಳು ಆಂಶಿಕವಾಗಿ ನಶಿಸಿದರೂ, ಇದರಿಂದಾಗಿ ಅಪಾಯಕಾರಿ ರಾಸಾಯನಿಕಗಳು ನಾಶವಾಗುತ್ತವೆ. 

ಅತ್ಯಧಿಕ ಪ್ರಮಾಣದ ಕೀಟನಾಶಕಗಳನ್ನು ಬಳಸಿ ಬೆಳೆಯುವ ದ್ರಾಕ್ಷಿ, ಸೇಬು, ಮಾವುಗಳೇ ಮುಂತಾದ ಹಣ್ಣುಗಳನ್ನು ಹಾಗೂ ಸೊಪ್ಪು ತರಕಾರಿಗಳನ್ನು ಮೇಲಿನಂತೆಯೇ ನೀರಿನಲ್ಲಿ ಮುಳುಗಿಸಿಟ್ಟು ಶುಚಿಗೊಲಿಸಿದ ಬಳಿಕ, ಇವುಗಳನ್ನು ಕತ್ತರಿಸಿದ ಹೋಳುಗಳನ್ನು ಮತ್ತೆ ಕನಿಷ್ಠ ಅರ್ಧ ಗಂಟೆ ನೀರಿನಲ್ಲಿ ಮುಳುಗಿಸಿಡಿ. ಸೊಪ್ಪುಗಳ ಎಲೆಗಳನ್ನು ತೆಗೆದು ಮತ್ತೊಮ್ಮೆ ಸ್ವಚ್ಚಗೊಲಿಸಿದ ಬಳಿಕ ಕೊಂಚ ಉಪ್ಪು ಬೆರೆಸಿದ ನೀರಿನಲ್ಲಿ ಒಂದಿಷ್ಟು ಹೊತ್ತು ನೆನೆಸಿಟ್ಟ ಬಳಿಕವೇ ಉಪಯೋಗಿಸಿ. 

ಅಂತಿಮವಾಗಿ ಈ ಸಮಸ್ಯೆಯನ್ನು ನಿಯಂತ್ರಿಸುವ ಅಥವಾ ಬಗೆಹರಿಸುವಲ್ಲಿ ಸಾವಯವ ಗೊಬ್ಬರ, ಕಹಿಬೇವಿನ ಹಿಂಡಿ- ಎಣ್ಣೆ, ಹೊಗೆಸೊಪ್ಪಿನ ನೀರು ಹಾಗೂ ಗೋಮೂತ್ರಗಳಂತಹ ನೈಸರ್ಗಿಕ ಹಾಗೂ ನಿರಪಾಯಕಾರಿ ಉತ್ಪನ್ನಗಳನ್ನು ಬಳಸಿ ಬೆಳೆಸಿದ ಆಹಾರಪದಾರ್ಥಗಳನ್ನು ಸೇವಿಸುವುದು ನಮ್ಮ ಆರೋಗ್ಯದ ಮತ್ತು ನಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಉತ್ತಮವೆನಿಸೀತು. 

ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಸಾವಯವ ವಿಧಾನದಿಂದ ಬೆಳೆಸಿದ ಕೃಷಿ ಉತ್ಪನ್ನಗಳು ಸಾಕಷ್ಟು ದುಬಾರಿ ಎಂದು ದೂರುವ ಗ್ರಾಹಕರು, ಕೀಟನಾಶಕಗಳ ದುಷ್ಪರಿಣಾಮಗಳೊಂದಿಗೆ ಇದನ್ನು ತುಲನೆ ಮಾಡಿದಲ್ಲಿ ನಿಶ್ಚಿತವಾಗಿಯೂ ಇವುಗಳು ಅಗ್ಗ ಮತ್ತು ಆರೋಗ್ಯಕರ ಎನಿಸುವುದರಲ್ಲಿ ಸಂದೇಹವಿಲ್ಲ!. 

ಇಲ್ಲಿದೆ ಜೀವಂತ ಸಾಕ್ಷಿ 

ನಮ್ಮ ನೆರೆಯ ಕೇರಳ ಮತ್ತು ನಮ್ಮ ದಕ್ಷಿಣ ಕನ್ನಡ ಮತ್ತು ಇತರ ಕೆಲ ಜಿಲ್ಲೆಗಳಲ್ಲಿನ ಸಹಸ್ರಾರು ಎಕರೆ ಗೇರು ತೋಟಗಳಿಗೆ ಕೀಟಗಳ ಬಾಧೆ ತಟ್ಟದಂತೆ, ಸುಮಾರು ಮೂರು ದಶಕಗಳ ಕಾಲ "ಎಂಡೋ ಸಲ್ಫಾನ್" ಕೀಟನಾಶಕವನ್ನು ವೈಮಾನಿಕವಾಗಿ ಸಿಂಪಡಿಸಲಾಗಿತ್ತು. ಹತ್ತಾರು ವರ್ಷಗಳ ಹಿಂದೆ ಈ ಪರಿಸರದ ನಿವಾಸಿಗಳಿಗೆ ಕೆಲ ವಿಧದ ಕ್ಯಾನ್ಸರ್, ಚರ್ಮರೋಗಗಳು,  ಕಾಲುಗಳ ಮಾಂಸ ಪೇಶಿ- ನರಗಳು ಸೆಟೆದುಕೊಂಡು ನಡೆದಾಡಲು ಆಗದಂತಹ ತೊಂದರೆಗಳು ಬಾಧಿಸಲಾರಂಭಿಸಿದ್ದವು. ನವಜಾತ ಶಿಶುಗಳಲ್ಲಿ ಜನ್ಮದತ್ತ ಅಂಗವೈಕಲ್ಯ, ಕುಬ್ಜತೆ, ಶಾರೀರಿಕ- ಮಾನಸಿಕ ಬೆಳವಣಿಗೆಗಳು ಕುಂಠಿತವಾಗುವಂತಹ ಗಂಭೀರ ಆರೋಗ್ಯದ ಸಮಸ್ಯೆಗಳು ಉದ್ಭವಿಸಿದ್ದವು. ಇವೆಲ್ಲಕ್ಕೂ ಮಿಗಿಲಾಗಿ ಅಸಂಖ್ಯ ಅಮಾಯಕರು ಇಂತಹ ವಿಚಿತ್ರ ಕಾಯಿಲೆಗಳಿಂದ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಹಸ್ರಾರು ಜನರು ವೈವಿಧ್ಯಮಯ ವ್ಯಾಧಿಗಳಿಂದ ಬಳಲುತ್ತಾ ಜೀವಂತ ಶವಗಳಂತೆ ಇಂದಿಗೂ ಬದುಕಿದ್ದಾರೆ. 

ತಮ್ಮ ಸಮಸ್ಯೆಗಳಿಗೆ ಎಂಡೋ ಸಲ್ಫಾನ್ ಕಾರನವೆನ್ದರಿತ ಸ್ಥಳೀಯರ ತೀವ್ರ ಪ್ರತಿಭಟನೆಯಿಂದಾಗಿ, ಸರಕಾರವು ಇದನ್ನು ಅಧ್ಯಯನ ಮಾಡಲು ಹಲವಾರು ತಜ್ಞರ ಸಮಿತಿಗಳನ್ನು ನೇಮಿಸಿತ್ತು. ತಜ್ಞರ ತಂಡವು ಈ ಪರಿಸರದ ಮಣ್ಣು,ನೀರು, ತರಕಾರಿಗಳು ಹಾಗೂ ದನಗಳ ಹಾಲು ಮತ್ತು ಜನರ ರಕ್ತದಲ್ಲೂ ಎಂಡೋ ಸಲ್ಫಾನ್ ಕೀಟನಾಶಕದ ಅಂಶವಿರುವುದನ್ನು ಪತ್ತೆಹಚ್ಚಿತ್ತು!. ಅಂತೆಯೇ ಈ ಮಾರಕ ಕೀಟನಾಶಕದ ಸಿಮ್ಪದಿಕೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಆಗ್ರಹಿಸಿತ್ತು. ತತ್ಪರಿಣಾಮವಾಗಿ ಕೇರಳ ರಾಜ್ಯ ಸರಕಾರವು ಈ ಕೀಟನಾಶಕದ ಸಿಂಪಡಿಕೆಯನ್ನು ನಿಷೇಧಿಸಿತ್ತು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೩-೧೧-೨೦೦೬ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ   


Measles


                                              ದಡಾರ : ಇದಕ್ಕೇನು ಪರಿಹಾರ?

  ನಿರ್ದಿಷ್ಟ ವೈರಸ್ ನಿಂದ ಉದ್ಭವಿಸಿ ಪುಟ್ಟ ಮಕ್ಕಳನ್ನು ಪೀಡಿಸುವ, ಕಿಂಚಿತ್ ನಿರ್ಲಕ್ಷ್ಯ ತೋರಿದರೂ ಸಂಕೀರ್ಣ ಸಮಸ್ಯೆಗಳಿಗೆ ಕಾರಣವೆನಿಸುವ ಕಾಯಿಲೆಗಳಲ್ಲಿ "ದಡಾರ " ಪ್ರಮುಖವಾಗಿದೆ. ವೈದ್ಯಕೀಯ ಪರಿಭಾಷೆಯಲ್ಲಿ ಮೀಸಲ್ಸ್ ಹಾಗೂ ಕನ್ನಡದಲ್ಲಿ ದಡಾರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರ ಎಂದು ಕರೆಯಲ್ಪಡುವ ಈ ವ್ಯಾಧಿಯು, ಕೆಲ ಸಂದರ್ಭಗಳಲ್ಲಿ ತಾಳುವ ರೂಪ ನಿಜಕ್ಕೂ ಭಯಂಕರ. 
----------------                              ----------------------------------                                  -------------------------------                                     -----------------------------------

ಜನಸಾಮಾನ್ಯರ ಅದರಲ್ಲೂ ಅವಿದ್ಯಾವಂತ ಗ್ರಾಮೀಣ ನಿವಾಸಿಗಳ ಮನದಲ್ಲಿ ಶಾಶ್ವತವಾಗಿ ಮನೆಮಾಡಿರುವ ಅನೇಕ ತಪ್ಪುಕಲ್ಪನೆಗಳು ಮತ್ತು ಮೂಢನಂಬಿಕೆಗಳಿಗೆ ಕಾರಣವೆನಿಸಿರುವ ವ್ಯಾಧಿಗಳಲ್ಲಿ ದಡಾರವೂ ಒಂದಾಗಿದೆ. ಸಾಮಾನ್ಯವಾಗಿ ಪುಟ್ಟ ಮಕ್ಕಳನ್ನೇ ಕಾಡುವ, ಒಂದಿಷ್ಟು ನಿರ್ಲಕ್ಷ್ಯ ತೋರಿದರೂ ತನ್ನ ಮಾರಕತೆಯನ್ನು ತೋರುವ ಈ ವ್ಯಾಧಿಯು ಕೆಲಸಂದರ್ಭಗಳಲ್ಲಿ ಮಾರಣಾಂತಿಕವೆನಿಸುವುದು. ಆದರೆ ಈ ರೀತಿಯ ಸಂಕೀರ್ಣ ಸಮಸ್ಯೆಗಳು ಉದ್ಭವಿಸಲು ಮಾತಾಪಿತರ ಅಜ್ನಾನದೊಂದಿಗೆ, ಇಂತಹ ಕಾಯಿಲೆಗಳಿಗೆ ಆಧುನಿಕ ವೈದ್ಯಕೀಯ ಚಿಕಿತ್ಸೆ ಸಲ್ಲದು ಎನ್ನುವ ತಪ್ಪುಕಲ್ಪನೆಯೇ ಕಾರಣ. 

ಕೆಲ ದಶಕಗಳ ಹಿಂದೆ ತಮ್ಮ ಮಕ್ಕಳಿಗೆ ದಡಾರ ಆರಂಭವಾದೊಡನೆ ತಮ್ಮ ಮನೆಗೆ "ಅಮ್ಮ" ಅಥವಾ "ದೇವಿ" ಬಂದಿರುವಳೆಂದು ಸಂಭ್ರಮಿಸಿ, ಮದ್ಯ- ಮಾಂಸಗಳ ಸೇವನೆಯನ್ನು ವರ್ಜಿಸಿ, ಪರಿಶುದ್ಧರಾಗಿ ಭಜನೆ,ಪೂಜೆ, ಪುನಸ್ಕಾರಗಳನ್ನು ನಡೆಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುವ ಜನರನ್ನು ನೀವೂ ಕಂಡಿರಬಹುದು. ಅದೇ ರೀತಿಯಲ್ಲಿ "ಉಷ್ಣ" ದಿಂದ ಈ ಕಾಯಿಲೆ ಬಂದಿರುವುದೆಂದು ನಂಬುತ್ತಿದ್ದ ಅನೇಕರು, ವ್ಯಾಧಿ ಪೀಡಿತ ಕಂದನ ಶರೀರವನ್ನು "ತಂಪು" ಗೊಳಿಸುವ ಸಲುವಾಗಿ, ವಿವಿಧ ರೀತಿಯ ಖಾದ್ಯ ಪೆಯಗಳೊಂದಿಗೆ ಮನೆಮದ್ದನ್ನು ನೀಡುವ ಸಂಪ್ರದಾಯವನ್ನು ಇಂದಿಗೂ ನಮ್ಮ ರಾಜ್ಯದ ಅನೇಕ ಭಾಗಗಳಲ್ಲಿ ಕಾಣಬಹುದು!. 

ಈ ರೀತಿಯಲ್ಲಿ ಔಷದೋಪಚಾರಗಳ ಅಭಾವದಿಂದ ಹಾಗೂ ರೋಗಪೀಡಿತ ಕಂದನ ಶರೀರವನ್ನು "ತಂಪು" ಗೊಳಿಸುವ ಪ್ರಯೋಗಗಳೊಂದಿಗೆ, ಮನೆಮದ್ದಿನ ಚಿಕಿತ್ಸೆ ನೀಡಿದ ಪರಿಣಾಮವಾಗಿ ವ್ಯಾಧಿ ಉಲ್ಬಣಿಸಿದೊಡನೆ ಅಥವಾ ಪ್ರಾಣಾಪಾಯದ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸಿದೊಡನೆ ವೈದ್ಯರಲ್ಲಿ ಧಾವಿಸುವ ಜನರ ಸಂಖ್ಯೆಯೂ ಕಡಿಮೆಯೇನಿಲ್ಲ!. 

ಇಂತಹ ಸಂದರ್ಭಗಳಲ್ಲಿ ಚಿಕಿತ್ಸೆಯನ್ನು ನೀಡಲು ನಿರಾಕರಿಸಲಾರದ ಅನಿವಾರ್ಯತೆಯಿಂದಾಗಿ, ವೈದ್ಯರು ಪುಟ್ಟಕಂದನ ಪ್ರಾಣಾಪಾಯದ ಸಾಧ್ಯಾಸಾಧ್ಯತೆಗಳ ಬಗ್ಗೆ ಮಾತಾಪಿತರಿಗೆ ಮುನ್ನೆಚ್ಚರಿಕೆ ನೀಡಿದ ಬಳಿಕವೇ ಚಿಕಿತ್ಸೆಯನ್ನು ನೀಡುತ್ತಾರೆ.ಆದರೂ ಚಿಕಿತ್ಸೆ ಫಲಪ್ರದ ಎನಿಸದೇ ಮಗು ಮೃತಪಟ್ಟಲ್ಲಿ, ಕಂದನ ಮರಣಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ದೂರುವುದು ಅಪರೂಪವೇನಲ್ಲ. 

ದಡಾರ ಎಂದರೇನು?

ಪಾರಾ ಮಿಕ್ಸೋ ಗುಂಪಿಗೆ ಸೇರಿದ " ಮೋರ್ಬಿಲಿ " ಎನ್ನುವ ವೈರಸ್ ಗಳಿಂದ ಉದ್ಭವಿಸುವ ದಡಾರವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಮೀಸಲ್ಸ್ ಎಂದು ಕರೆಯುತ್ತಾರೆ. ಅತ್ಯಂತ ಕ್ಷಿಪ್ರಗತಿಯಲ್ಲಿ ಸಾಂಕ್ರಾಮಿಕವಾಗಿ ಹರಡಿ ತೀವ್ರ ರೂಪವನ್ನು ತಾಳುವ ಈ ವ್ಯಾಧಿಯು, ಆರು ತಿಂಗಳ ಒಳಗಿನ ಹಸುಗೂಸುಗಳನ್ನು ಬಾಧಿಸದು. ಆದರೆ ಐದರಿಂದ ಎಂಟು ವರ್ಷ ವಯಸ್ಸಿನ ಮಕ್ಕಳನ್ನು ಹೆಚ್ಚಾಗಿ ಪೀಡಿಸುವ ಈ ವ್ಯಾಧಿಯು ಬೇಸಗೆಯ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು. 

ರೋಗಪೀಡಿತ ಮಕ್ಕಳ ಜೊಲ್ಲಿನ ಕಣಗಳಿಂದ ಹಾಗೂ ರೋಗಿಯೊಂದಿಗೆ ನೇರ ಸಂಪರ್ಕವಿರುವ ವ್ಯಕ್ತಿಗಳಿಂದ ಈ ವೈರಸ್ ಇತರರಿಗೆ ಹರದಬಲ್ಲದು. ಆರೋಗ್ಯವಂತರ ಶರೀರದಲ್ಲಿ ಪ್ರವೇಶ ಗಳಿಸಿದ ಈ  ವೈರಸ್, ೭ ರಿಂದ ೧೪ ದಿನಗಳಲ್ಲಿ ದಡಾರದ ಲಕ್ಷಣಗಳನ್ನು ತೋರುವುದು. 

ರೋಗ ಲಕ್ಷಣಗಳು 

ಪ್ರಾಥಮಿಕ ಹಂತದಲ್ಲಿ ಜ್ವರ,ಮೈ ಕೈ ನೋವು, ಮೂಗಿನಿಂದ ನೀರಿಳಿಯುವುದು, ಕರ್ಕಶವಾದ ಸದ್ದಿನೊಂದಿಗೆ ಕೆಮ್ಮು, ಕಣ್ಣಾಲಿಗಳ ಉರಿಯೂತ ಹಾಗೂ ಬೆಳಕನ್ನು ನೋಡಲಾಗದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಕೆಲ ಮಕ್ಕಳಲ್ಲಿ ಜ್ವರ ಮತ್ತು ಕೆಮ್ಮುಗಳು ಕ್ಷಿಪ್ರಗತಿಯಲ್ಲಿ ಉಲ್ಬಣಿಸುವುದುಂಟು. ಮುಂದಿನ ಒಂದೆರಡು ದಿನಗಳಲ್ಲೇ ಮಗುವಿನ ಬಾಯಿಯ ಒಳಭಾಗದಲ್ಲಿ "ಕಾಪ್ಲಿಕ್ಸ್ ಸ್ಪಾಟ್" ಎಂದು ಕರೆಯಲ್ಪಡುವ, ಮಧ್ಯದಲ್ಲಿ ಬಿಳಿಯ ಚುಕ್ಕೆಯಿರುವ ಕೆಂಪು ಗುಳ್ಳೆಗಳು ಗುಂಪುಗುಂಪಾಗಿ ಕಾಣಿಸಿಕೊಳ್ಳುತ್ತವೆ. ಮುಂದಿನ ೩ ರಿಂದ ೫ ದಿನಗಳ ಬಳಿಕ ಮಗುವಿನ ಮುಖ- ಕುತ್ತಿಗೆಗಳ ಮೇಲೆ ಪ್ರತ್ಯಕ್ಷವಾಗುವ "ಬೆವರುಸಾಲೆ"ಯಂತಹ ಅಸಂಖ್ಯ ಗುಳ್ಳೆಗಳು ಕ್ರಮೇಣ ಕೈ, ಎದೆ, ಹೊಟ್ಟೆ,ತೊಡೆ ಮತ್ತು ಕಾಲುಗಳ ಮೇಲೆ ಹರಡುತ್ತವೆ. ಈ ಹಂತದಲ್ಲಿ ಕಾಪ್ಲಿಕ್ಸ್ ಸ್ಪಾಟ್ ಗಳು ಮಾಯವಾಗುತ್ತವೆ. ಶರೀರದಾದ್ಯಂತ ಮೂಡಿರುವ ಗುಳ್ಳೆಗಳ ಸಂಖ್ಯೆ ಅತಿಯಾಗಿದ್ದಲ್ಲಿ ವ್ಯಾಧಿಯ ತೀವ್ರತೆಯೂ ಅತಿಯಾಗಿರುತ್ತದೆ. ಸಾಮಾನ್ಯವಾಗಿ ಈ ಗುಳ್ಳೆಗಳು ಮುಂದಿನ ಕೆಲವೇ ದಿನಗಳಲ್ಲಿ ಮಾಯವಾಗಲು ಆರಂಭಿಸುತ್ತವೆ.

ಶರೀರದಾದ್ಯಂತ ಉದ್ಭವಿಸಿದ ಗುಳ್ಳೆಗಳು ಸ್ಪಷ್ಟವಾಗಿ ಗೋಚರಿಸುವ ಸಂದರ್ಭದಲ್ಲಿ, ಮಕ್ಕಳಲ್ಲಿ ತೀವ್ರ ಜ್ವರ ಹಾಗೂ ಕೆಮ್ಮಿನೊಂದಿಗೆ ದೇಹದ ಎಲ್ಲಾ ಭಾಗಗಳಲ್ಲೂ ಅಸಹನೀಯ ತುರಿಕೆ ಬಾಧಿಸುತ್ತದೆ. ಅಂತಿಮ ಹಂತದಲ್ಲಿ ಜ್ವರ ಹಾಗೂ ಕೆಮ್ಮುಗಳು ಕಡಿಮೆಯಾಗುತ್ತಾ ಬಂದಂತೆಯೇ, ಶರೀರದ ಮೇಲೆ ಮೂಡಿದ ಗುಳ್ಳೆಗಳು ಬಾಡುತ್ತಾ ಬಂದು ಕೊನೆಗೆ ಈ ಭಾಗದ ಚರ್ಮದ ಮೇಲ್ಪದರವು ನಿಧಾನವಾಗಿ ಎದ್ದುಬರುತ್ತದೆ. 

ಸಂಕೀರ್ಣ ಸಮಸ್ಯೆಗ

ದಡಾರ ಪೀಡಿತ ಮಕ್ಕಳಲ್ಲಿ ಮೀಸಲ್ಸ್ ವೈರಸ್ ಗಳ ದುಷ್ಪರಿಣಾಮಗಳಿಂದ ಹಾಗೂ ಕೆಲವಿಧದ ಬ್ಯಾಕ್ಟೀರಿಯಾಗಳ ಸೋಂಕಿನಿಂದ ಅನೇಕ ಸಮಸ್ಯೆಗಳು ಉದ್ಭವಿಸಿವ ಸಾಧ್ಯತೆಗಳಿವೆ. ಇವುಗಳಲ್ಲಿ ಸ್ಟ್ರೆಪ್ಟೋಕಾಕಸ್, ಸ್ಟೆಫೈಲೊಕಾಕಸ್, ನ್ಯೂಮೊಕಾಕಸ್ ಮತ್ತು ಇನ್ಫ್ಲುಯೆಂಜೆ ರೋಗಾಣುಗಳು ಪ್ರಮುಖವಾಗಿವೆ. 

ದಡಾರ ಉಳ್ಬನಿಸಿದಲ್ಲಿ ಉರಿಯೂತಕ್ಕೊಳಗಾದ ಕಣ್ಣಾಲಿಗಳಿಗೆ ಹಾಗೂ ಕಿವಿಗಳಿಗೆ ತಗಲಬಹುದಾದ ಇತರ ಸೋಂಕುಗಳು, ಗಂಭೀರ ತೊಂದರೆಗಳಿಗೂ ಕಾರಣವೆನಿಸಬಹುದು. ಅದೇ ರೀತಿಯಲ್ಲಿ ನಿಗದಿತ ಅವಧಿಯ ಬಳಿಕವೂ ಕಾಡುವ ಜ್ವರವನ್ನು ಸೂಕ್ತ ಚಿಕಿತ್ಸೆಯಿಂದ ನಿವಾರಿಸಿಕೊಳ್ಳಬಹುದು. ಇದಲ್ಲದೇ ಚಿಕ್ಕಮಕ್ಕಳಲ್ಲಿ ಬ್ರೊಂಕೋ ನ್ಯುಮೋನಿಯಾ ಹಾಗೂ ತುಸು ದೊಡ್ಡ ಮಕ್ಕಳಲ್ಲಿ ಲೋಬಾರ್ ನ್ಯುಮೋನಿಯಾದಂತಹ ಸಮಸ್ಯೆಗಳು ಕಂಡುಬರಬಹುದು. 

ಮೀಸಲ್ಸ್ ವ್ಯಾಧಿಪೀಡಿತ ಶೇ. ೫೦ ರಷ್ಟು ಮಕ್ಕಳಿಗೆ ಬ್ರಾಂಕೈಟಿಸ್ ಅಥವಾತೀವ್ರ ರೂಪದ ಲಾರಿಂಗೊ ಟ್ರೇಕಿಯೋ ಬ್ರಾಂಕೈಟಿಸ್ ನಂತಹ ಸಮಸ್ಯೆಗಳು ಬಾಧಿಸುತ್ತವೆ. ಜೊತೆಗೆ ಈ ಸಂದರ್ಭದಲ್ಲಿ ಉದ್ಭವಿಸಬಲ್ಲ "ವೈರಲ್ ನ್ಯುಮೋನಿಯ' ಉಲ್ಬಣಿಸಿದಲ್ಲಿ, ರೋಗಿಯ ಮರಣಕ್ಕೂ ಕಾರಣವೆನಿಸುವ ಸಾಧ್ಯತೆಗಳಿವೆ. 

ಕೆಲ ಮಕ್ಕಳಲ್ಲಿ ಅತಿಯಾದ ಬಾಯಿಹುಣ್ಣುಗಳು ಹಾಗೂ ರಕ್ತ ಮಿಶ್ರಿರ ಮಲವಿಸರ್ಜನೆಗಳಂತಹ ತೊಂದರೆಗಳು ಬಾಧಿಸಬಹುದು. ಕ್ಷಯ ರೋಗ ಪೀಡಿತ ಮಗುವಿಗೆ ದಡಾರ ಬಾಧಿಸಿದ ಸಂದರ್ಭದಲ್ಲಿ ಗಂಭೀರ ಸಮಸ್ಯೆಗಳು ಉದ್ಭವಿಸುವುದರಿಂದ, ಚಿಕಿತ್ಸೆ ನೀಡುವ ವೈದ್ಯರು ಮತ್ತು ಕಂದನ ಆರೈಕೆ ಮಾಡುವ ಮಾತಾಪಿತರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುವುದು. 

ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ "ಎನ್ಸೆಫಲೈಟಿಸ್" ಹಾಗೂ" ಹೆಮೊರೇಜಿಕ್ ಮೀಸಲ್ಸ್ " ಎನ್ನುವ ರಕ್ತಸ್ರಾವಕ್ಕೆ ಕಾರಣವೆನಿಸಬಲ್ಲ ವಿಶಿಷ್ಟ ಸಮಸ್ಯೆಗಳು ಪ್ರಾಣಾಪಾಯಕ್ಕೂ ಕಾರಣವೇನಿಸಬಲ್ಲವು. 

ಸುಲಭ ಪರಿಹಾರ 

"ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ" ಎನ್ನುವ ಮುತ್ತಿನಂತಹ ಮಾತುಗಳನ್ನು ನೀವೂ ಕೇಳಿರಬಹುದು. ಇದರಂತೆ ದಡಾರವನ್ನು ನಿಶ್ಚಿತವಾಗಿಯೂ ತಡೆಗಟ್ಟಬಲ್ಲ "ಮೀಸಲ್ಸ್ ಲಸಿಕೆ" ಯನ್ನು ನಿಮ್ಮ ಪುಟ್ಟ ಕಂದನಿಗೆ ಕೊಡಿಸಿ ನಿಶ್ಚಿಂತರಾಗಿರಿ. ಮಗುವಿಗೆ ೧೨ ರಿಂದ ೧೫ ತಿಂಗಳ ವಯಸ್ಸಿನಲ್ಲಿ ಕೊಡಬೇಕಾದ ಈ ಲಸಿಕೆಯು ದುಬಾರಿಯೇನಲ್ಲ. ಅಂತೆಯೇ ನಿಮ್ಮ ಕಂದನಿಗೆ ಮೀಸಲ್ಸ್ ಬಾಧಿಸಿದಲ್ಲಿ ಅನುಭವಿಸಬೇಕಾದ ಸಂಕೀರ್ಣ ಸಮಸ್ಯೆಗಳು ಮತ್ತು ನೀಡಲೇ ಬೇಕಾದ ಚಿಕಿತ್ಸೆಯ ವೆಚ್ಚಗಳೊಂದಿಗೆ ತುಲನೆ ಮಾಡಿದಾಗ, ಈ ಲಸಿಕೆಯ ವೆಚ್ಚವು ತೀರಾ ನಗಣ್ಯವೆನಿಸುವುದು. ಜೊತೆಗೆ ಇದನ್ನು ಕೊಡಿಸುವುದರಿಂದ ನಿಮ್ಮ ಕಂದನಿಗೆ ಈ ವ್ಯಾಧಿಯಿಂದ ರಕ್ಷಣೆ ದೊರೆಯುವುದರೊಂದಿಗೆ, ನಿಮ್ಮ ಮನಸ್ಸಿಗೆ ನೆಮ್ಮದಿಯೂ ದೊರೆಯುವುದರಲ್ಲಿ ಸಂದೇಹವಿಲ್ಲ!. 

ನಿಮಗಿದು ತಿಳಿದಿರಲಿ 

ಅಧಿಕತಮ ಮಕ್ಕಳಲ್ಲಿ ದಡಾರವು ನಿಗದಿತ ಅವಧಿಯಲ್ಲಿ ಗುಣವಾಗಬಲ್ಲದು. ಆದರೆ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಜ್ವರ, ಕೆಮ್ಮು, ಕಣ್ಣಾಲಿಗಳ ಉರಿಯೂತ ಮತ್ತಿತರ ಲಕ್ಷಣಗಳಿಗೆ ಅನುಗುಣವಾಗಿ ಕೆಲವೊಂದು ಔಷದಗಳ ಸೇವನೆ ಅನಿವಾರ್ಯ. 

ಸಾಮಾನ್ಯವಾಗಿ ಆಸ್ಪತ್ರೆಜನ್ಯ ಸೊಂಕುಗಳಿಂದ ಈ ವ್ಯಾಧಿಪೀಡಿತ  ಕಂದನನ್ನು ರಕ್ಷಿಸಲು ಹಾಗೂ ಈ ವ್ಯಾಧಿಯು ಆಸ್ಪತ್ರೆಯಲ್ಲಿ ಇರಬಹುದಾದ ಇತರ ಮಕ್ಕಳಿಗೆ ಹರಡದಿರಲು, ಇವರನ್ನು ಮನೆಯಲ್ಲೇ ಮಲಗಿಸಿ  ವಿಶ್ರಾಂತಿ, ಸೂಕ್ತ ಆಹಾರ ಮತ್ತು ಔಷದಗಳನ್ನು ನೀಡುವುದು ಹಿತಕರ. ಆದರೆ ತೀವ್ರ ಸ್ವರೂಪದ ತೊಂದರೆಗಳು ಬಾಧಿಸಿದಲ್ಲಿ ಮತ್ತು ಪ್ರಾಣಾಪಾಯದ ಸಾಧ್ಯತೆಗಳಿದ್ದಲ್ಲಿ, ತಕ್ಷಣ ಸುಸಜ್ಜಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಬೇಕು. 

ವಿಶೇಷ ತೊಂದರೆಗಳು ಕಾಣಿಸಿಕೊಳ್ಳದೆ ಇದ್ದಲ್ಲಿ ಕಂದನ ಬಾಯಿ, ಕಣ್ಣುಗಳು ಮತ್ತು ಶರೀರವನ್ನು ಸ್ವಚ್ಚ ಹಾಗೂ ನಿರ್ಮಲವಾಗಿ ಇರಿಸಬೇಕು. ಇದರೊಂದಿಗೆ ಸುಲಭದಲ್ಲಿ ಜೀರ್ಣವಾಗುವ ಆಹಾರದೊಂದಿಗೆ ಸಾಕಷ್ಟು ದ್ರವಾಹಾರ (ನೀರು, ಹಣ್ಣಿನ ರಸ ಹಾಗೂ ಹಾಲು) ಗಳನ್ನು ನೀಡಬೇಕು. ಮಗುವಿನ ಶರೀರವನ್ನು ದಿನದಲ್ಲಿ ಕನಿಷ್ಠ ಎರಡು ಬಾರಿ ಒದ್ದೆ ಬಟ್ಟೆಯಿಂದ ಒರೆಸಿದ ಬಳಿಕ ಮೆತ್ತನೆಯ ಟವೆಲ್ ನಿಂದ ಒರೆಸಿ ಸ್ವಚ್ಚಗೊಳಿಸಲೇಬೇಕು. ಆದರೆ ಇದರ ನಂತರ ಶರೀರದಾದ್ಯಂತ ಟಾಲ್ಕಂ ಪೌಡರ್ ಸಿಂಪಡಿಸಿದಲ್ಲಿ ಮಗುವಿನ ಕೆಮ್ಮು ಉಲ್ಬಣಿಸುವುದು ಎನ್ನುವುದನ್ನು ಮರೆಯದಿರಿ. ಅಂತೆಯೇ ಯಾವುದೇ ಕಾರಣಕ್ಕಾಗಿ, ಯಾರೇ ಹೇಳಿದರೂ ಮಗುವಿನ ಶರೀರಕ್ಕೆ ಯಾವುದೇ ಲೆಪಗಳನ್ನು ಹಾಕದಿರಿ. 

ಇವೆಲ್ಲಕ್ಕೂ ಮಿಗಿಲಾಗಿ ಮಂತ್ರ- ತಂತ್ರ, ಭಸ್ಮ, ತಾಯಿತ, ನೂಲು ಕಟ್ಟುವುದು ಹಾಗೂ ದೇವಿಗೆ ಹರಕೆ ಹೇಳಿಕೊಳ್ಳುವುದರಿಂದ ಈ ವ್ಯಾಧಿಯು ಗುಣವಾಗಲಾರದು ಎಂದು ತಿಳಿದಿರಿ. ಅಂತಿಮವಾಗಿ ಈ ಕಾಯಿಲೆಗೆ "ಆಧುನಿಕ ಔಷದಗಳನ್ನೇ ನೀಡಬಾರದು" ಎಂದು ನಿಮ್ಮ ಬಂಧು- ಮಿತ್ರರು ನೀಡಬಹುದಾದ ಉಚಿತ ಸಲಹೆಗಳನ್ನು ಮಾತ್ರ ಪರಿಪಾಲಿಸದಿರಿ!. 

ಡಾ.ಸಿ . ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೧-೦೧-೨೦೦೭ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ     


Wednesday, October 30, 2013

Know your medicines!


                        ಔಷದ ಸೇವನೆಯ ಔಚಿತ್ಯವನ್ನು ಅರಿತುಕೊಳ್ಳಿ!

    ಬಹುತೇಕ ರೋಗಿಗಳು ತಮ್ಮನ್ನು ಕಾಡುತ್ತಿರುವ ಆರೋಗ್ಯದ ಸಮಸ್ಯೆಗಳು ಕ್ಷಣಮಾತ್ರದಲ್ಲಿ ಗುಣವಾಗಬೇಕೆಂದು ಅಪೇಕ್ಷಿಸುವುದು ಸ್ವಾಭಾವಿಕ. ಆದರೆ ಇಂತಹ ಪವಾಡ ಸದೃಶ ಪರಿಣಾಮಗಳನ್ನು ಅಪೇಕ್ಷಿಸುವ ರೋಗಿಗಳು ತಮ್ಮ ಸಮಸ್ಯೆ ಕಿಂಚಿತ್ ಪರಿಹಾರವಾದೊಡನೆ, ವೈದ್ಯರ ಸಲಹೆ- ಸೂಚನೆಗಳನ್ನು ಉಪೇಕ್ಷಿಸುವುದು ಕೂಡಾ ಅಷ್ಟೇ ಸ್ವಾಭಾವಿಕ!. 
---------------                          ------------------                                 --------------                             ---------------------

      ಒಂದೆರಡು ವರ್ಷಗಳಿಂದ ಮಧುಮೇಹಪೀಡಿತರಾಗಿದ್ದ ಸುಂದರರಾಯರು, ವೈದ್ಯರ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವುದರೊಂದಿಗೆ ಪ್ರತಿನಿತ್ಯ ಕ್ರಮಬದ್ಧವಾಗಿ ಔಷದವನ್ನು ಸೇವಿಸುವ ಮೂಲಕ ತಮ್ಮ ಕಾಯಿಲೆಯನ್ನು ಹತೋಟಿಯಲ್ಲಿ ಇರಿಸಿಕೊಂಡಿದ್ದರು. 

ಅದೊಂದು ಮುಂಜಾನೆ ಎಂದಿನಂತೆ ಸಪ್ಪೆ ಚಹಾ ಕುಡಿದು ಕ್ಷೌರ ಮಾಡಿಸಿಕೊಳ್ಳಲು ಸೆಲೂನ್ ಗೆ ಹೋಗಿದ್ದ ರಾಯರು, ತಮ್ಮ ಸರದಿಗಾಗಿ ಸುಮಾರು ಒಂದೂವರೆ ತಾಸು ಕಾಯಬೇಕಾಗಿ ಬಂದಿತ್ತು. ಅಂತಿಮವಾಗಿ ಕ್ಷೌರಕ್ಕೆ ಕುಳಿತ ರಾಯರಿಗೆ ಆಕಸ್ಮಿಕವಾಗಿ ವಿಪರೀತ ಆಯಾಸದೊಂದಿಗೆ ಕಣ್ಣು ಕತ್ತಲಾವರಿಸಿದಂತಾಗಿ, ಶರೀರವಿಡೀ ಬೆವರಲಾರಂಭಿಸಿತ್ತು. ಮರುಕ್ಷಣದಲ್ಲಿ ಪ್ರಜ್ಞಾಹೀನರಾಗಿದ್ದ ರಾಯರು, ಕ್ಷೌರಿಕನ ಪ್ರಥಮ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರು. ಸ್ವಲ್ಪ ಹೊತ್ತಿನ ಬಳಿಕ ಸಾವರಿಸಿಕೊಂಡು ಮನೆಗೆ ಮರಳಿ, ನಿತ್ಯವಿಧಿಗಳನ್ನು ಮುಗಿಸಿ ಉಪಾಹಾರವನ್ನು ಸೇವಿಸಿದ ನಂತರ ಸಮೀಪದ ವೈದ್ಯರಲ್ಲಿ ಹೋಗಿದ್ದರು.  

ರಾಯರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿದ ವೈದ್ಯರ ಮುಖದಲ್ಲಿ ಮಂದಹಾಸ ಮೂಡಿತ್ತು. ಏಕೆಂದರೆ ಚಿಕಿತ್ಸೆ ನೀಡಿದ್ದ ತಜ್ಞವೈದ್ಯರ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪರಿಪಲಿಸುತ್ತಿದ್ದ ರಾಯರು, ಪ್ರಮುಖ ವಿಚಾರವೊಂದನ್ನು ಮರೆತುಬಿಟ್ಟಿದ್ದರು. 

ಮಧುಮೇಹ ರೋಗಿಗಳು ಬೆಳಗಿನ ಉಪಾಹಾರ ಸೇವನೆಗೆ ೩೦ ನಿಮಿಷ ಮೊದಲು ಮಾತ್ರೆಯನ್ನು ಸೇವಿಸುವ ಅಥವಾ ೧೫ ನಿಮಿಷ ಮೊದಲು ಇನ್ಸುಲಿನ್ ಇಂಜೆಕ್ಷನ್ ಪಡೆಯಬೇಕಾಗುವುದು. ಅರ್ಥಾತ್, ಮಾತ್ರೆ ಸೇವಿಸಿದ ಅರ್ಧ ಗಂಟೆಯ ಬಳಿಕ ಅಥವಾ ಇಜೆಕ್ಷನ್ ಪಡೆದ ೧೫ ನಿಮಿಷಗಳ ಬಳಿಕ, ಇವರು ಕಡ್ಡಾಯವಾಗಿ ಆಹಾರವನ್ನು ಸೇವಿಸಲೇಬೇಕು. ಕಾರಣಾಂತರಗಳಿಂದ ಆಹಾರ ಸೇವನೆಗೆ ವಿಳಂಬವಾದಲ್ಲಿ, ಇವರ ರಕ್ತದಲ್ಲಿನ ಸಕ್ಕರೆಯ ಅಂಶ (ಔಷದ  ಸೇವನೆಯ ಪರಿಣಾಮದಿಂದಾಗಿ) ಕಡಿಮೆಯಾಗುವುದರಿಂದ ಸುಂದರ ರಾಯರಿಗೆ ಕಾಣಿಸಿಕೊಂಡ ತೊಂದರೆಗಳು ಹಠಾತ್ತನೆ ಕಾಣಿಸಿಕೊಳ್ಳುತ್ತವೆ. ಮಾತ್ರವಲ್ಲ, ಕೆಲ ಸಂದರ್ಭಗಳಲ್ಲಿ ಪ್ರಾಣಾಪಾಯಕ್ಕೂ ಕಾರಣವೆನಿಸುತ್ತವೆ. 

ಈ ಪ್ರಮುಖ ವಿಚಾರವನ್ನು ಗಮನಿಸಿರದ ರಾಯರು, ಬರಿಹೊಟ್ಟೆಯಲ್ಲಿ ಬೆಳಗಿನ ಚಹಾ ಸೇವಿಸುವಾಗ ಮಧುಮೇಹ ನಿಯಂತ್ರಕ ಮಾತ್ರೆಯನ್ನು ಸೇವಿಸಿದ್ದರೂ, ಅರ್ಧ ಗಂಟೆಯ ಬಳಿಕ ಉಪಾಹಾರ ಸೇವಿಸದಿದ್ದುದೇ ಅವರ ಸಮಸ್ಯೆಗೆ ಕಾರಣವೆನಿಸಿತ್ತು!. 

ಅಜ್ಞಾನ- ತಪ್ಪುಕಲ್ಪನೆಗಳು 

ವಿವಿಧ ಕಾಯಿಲೆಗಳ ಚಿಕಿತ್ಸೆಯಲ್ಲಿ ವೈದ್ಯರು ಬಳಸುವ ವೈವಿಧ್ಯಮಯ ಔಷದಗಳ ಬಗ್ಗೆ ಬಹುತೇಕ ರೋಗಿಗಳಿಗೆ ಸೂಕ್ತ ಮಾಹಿತಿಯೇ ತಿಳಿದಿರುವುದಿಲ್ಲ. ಇದರೊಂದಿಗೆ ಅನೇಕ ಭಾರತೀಯರ ಮನದಲ್ಲಿ ಮನೆಮಾಡಿಕೊಂಡಿರುವ ಮೂಢನಂಬಿಕೆ ಮತ್ತು ಅಜ್ಞಾನಗಳಿಂದಾಗಿ, ಬಹುತೇಕ ರೋಗಿಗಳು ಔಷದ ಸೇವನೆಯ ವಿಚಾರದಲ್ಲಿ ಸಾಕಷ್ಟು ನಿರ್ಲಕ್ಷ್ಯವನ್ನು ತೋರುತ್ತಾರೆ. 

ಅದೇ ರೀತಿಯಲ್ಲಿ ವೈದ್ಯರು ಸೂಚಿಸಿದ ಔಷದಗಳನ್ನು ನಿಗದಿತ ಸಮಯದಲ್ಲಿ,ನಿಗದಿತ ಪ್ರಮಾಣದಲ್ಲಿ, ನಿಗದಿತ ಅವಧಿಗೆ ಸೇವಿಸಲೇಬೇಕು ಎನ್ನುವ ಸಲಹೆಯನ್ನು ನಿರ್ಲಕ್ಷಿಸುತ್ತಾರೆ. ತತ್ಪರಿಣಾಮವಾಗಿ ಕಾಯಿಲೆ ಉಲ್ಬಣಿಸಿದಲ್ಲಿ ಅತೀವ ಸಂಕಷ್ಟಗಳಿಗೂ ಈಡಾಗುತ್ತಾರೆ!. 

ಈ ರೀತಿಯಲ್ಲಿ ತಮಗೆ ಇಷ್ಟಬಂದಂತೆ ಔಷದಗಳನ್ನು ಸೇವಿಸುವ ಹಾಗೂ ಚಿಕಿತ್ಸೆಯನ್ನು ನಿಲ್ಲಿಸುವುದರಿಂದ, ಮುಂದೊಂದು ದಿನ ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸಲು ವೈದ್ಯರು ನೀಡಿದ ಔಷದಗಳಿಂದ ಅಪೇಕ್ಷಿತ ಪರಿಹಾರ ದೊರೆಯದೆ ಇರುವುದರೊಂದಿಗೆ, ಈ ಔಷದಗಳು ನಿಷ್ಪ್ರಯೋಜಕವೆನಿಸುತ್ತವೆ. ಇದರಿಂದಾಗಿ ರೋಗಿಗಳಿಗೆ ವೈದ್ಯರ ಹಾಗೂ ಔಷದಗಳ ಮೇಲಿರುವ ನಂಬಿಕೆಗಳೂ ಮಾಯವಾಗುವುದರಿಂದ ಅನೇಕ ಸಂದೇಹಗಳಿಗೆ ಆಸ್ಪದವನ್ನು ನೀಡುತ್ತದೆ. 

ರೋಗಿಗಳು ವೈದ್ಯರ ಸಲಹೆ ಸೂಚನೆಗಳನ್ನು ಪರಿಪಾಲಿಸದೇ ಇರಲು ಇನ್ನೂ ಅನೇಕ ಕಾರಣಗಳಿವೆ. ಇವುಗಳಲ್ಲಿ ದಿನದಲ್ಲಿ ಇಂತಿಷ್ಟೇ ಬಾರಿ ಸೇವಿಸಬೇಕಾಗಿರುವ ಹಲವಾರು ವಿಧದ ಔಷದಗಳ ಸಂಖ್ಯೆ ಅತಿಯಾಗಿರುವುದರಿಂದ, ಇವುಗಳ ಸೇವನೆಯ ಬಗ್ಗೆ ರೋಗಿಗಳ ಮನದಲ್ಲಿ ಉಂಟಾಗುವ ಗೊಂದಲ, ದುಬಾರಿ ಬೆಲೆಯ ಔಷದಗಳನ್ನು ಖರೀದಿಸುವ ಆರ್ಥಿಕ ಸಾಮರ್ಥ್ಯ ಇಲ್ಲದಿರುವುದು,ಹಿಂದೆ ಔಷದ ಸೇವಿಸಿದಾಗ ಉದ್ಭವಿಸಿರಬಹುದಾದ ಅಲರ್ಜಿ ಪ್ರತಿಕ್ರಿಯೆಗಳು ಅಥವಾ ಅಡ್ಡ ಪರಿಣಾಮಗಳ ಭಯ, ವೈದ್ಯರ ಅಥವಾ ಔಷದಗಳ ಮೇಲೆ ಅವಿಶ್ವಾಸ, ಔಷದ ಸೇವಿಸಲೂ ಬಿಡುವಿಲ್ಲದಂತಹ ಜೀವನಶೈಲಿ ಮತ್ತು ರೋಗಿಯ ವ್ಯಾಧಿ ಮತ್ತು ಚಿಕಿತ್ಸೆಗಳ ಬಗ್ಗೆ ಇವರ ಬಂಧು ಮಿತ್ರರು ನೀಡುವ ಉಚಿತ- ಉದಾರ ಸಲಹೆ ಹಾಗೂ ತಪ್ಪು ಮಾಹಿತಿಗಳು ಪ್ರಮುಖವಾಗಿವೆ. 

ಇದಲ್ಲದೇ ವೈದ್ಯರ ಚಿಕಿತ್ಸೆಯಿಂದ ತಮ್ಮ ಕಾಯಿಲೆ ಕ್ಷಣ ಮಾತ್ರದಲ್ಲಿ ಗುಣವಾಗಬೇಕೆಂದು ಅಪೇಕ್ಷಿಸುವ ರೋಗಿಗಳು ಕಿಂಚಿತ್ ಪರಿಹಾರ ದೊರೆತೊಡನೆ ಚಿಕಿತ್ಸೆಯನ್ನು ನಿಲ್ಲಿಸಿವುದು, ಔಷದ ಸೇವನೆಯೇ ಅಸಹನೀಯವೆನಿಸುವುದು, ಅತಿಯಾದ ಮತ್ತು ಪ್ರಬಲ ಔಷದಗಳ ಸೇವನೆಯಿಂದ ಶರೀರಕ್ಕೆ "ಉಷ್ಣ" ವಾಗುವುದೆಂದು ಭ್ರಮಿಸುವುದು ಮತ್ತು ಔಷದ ಸೇವಿಸಲು ಆಗದಂತಹ ತೊಂದರೆಗಳು (ಉದಾ- ವಾಂತಿ) ಆಕಸ್ಮಿಕವಾಗಿ ಉದ್ಭವಿಸುವುದೇ ಮುಂತಾದ ಕಾರಣಗಳಿಂದಾಗಿ ಅನೇಕ ರೋಗಿಗಳು ಔಷದಗಳನ್ನು ಕ್ರಮಬದ್ಧವಾಗಿ ಸೇವಿಸದೇ ಇರಲು ಕಾರಣವೆನಿಸುತ್ತವೆ. 

ಇವೆಲ್ಲಕ್ಕೂ ಮಿಗಿಲಾಗಿ ವೈದ್ಯರು ಸೂಚಿಸಿದ ಔಷದಗಳ ಪ್ರಮಾಣ ಮತ್ತು ಅವಧಿಗಳನ್ನು ತಾವಾಗಿ ಬದಲಾಯಿಸುವ ರೋಗಿಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ಆದರೆ ಇದರಿಂದಾಗಿ ಮತ್ತೆ ಉಲ್ಬಣಿಸುವ ವ್ಯಾಧಿಯನ್ನು ಮಗುದೊಮ್ಮೆ ಹತೋಟಿಗೆ ತರಲು ಸಾಕಷ್ಟು ಸಮಯಾವಕಾಶದೊಂದಿಗೆ ಧಾರಾಳ ಹಣವೂ ಖರ್ಚಾಗುವುದು. ಜೊತೆಗೆ ರೋಗಿಯು ಮತ್ತಷ್ಟು ದಿನ ವ್ಯಾಧಿಯ ಬಾಧೆಗಳನ್ನು ಅನುಭವಿಸಬೇಕಾಗುವುದು. 

ಸಾಮಾನ್ಯವಾಗಿ ಅಲ್ಪಾವಧಿ ಚಿಕಿತ್ಸೆಯನ್ನು ಪಡೆಯುವ ರೋಗಿಗಳು ಕ್ರಮಬದ್ಧವಾಗಿ ಔಷದಗಳನ್ನು ಸೇವಿಸುತ್ತಾರೆ. ಆದರೆ ದೀರ್ಘಾವಧಿ ಅಥವಾ ಜೀವನ ಪರ್ಯಂತ ಔಷದ ಸೇವಿಸಬೇಕಾದ ಪರಿಸ್ಥಿತಿಯಲ್ಲಿ ಅನೇಕ ರೋಗಿಗಳು ವೈದ್ಯರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವುದಿಲ್ಲ. ಸಣ್ಣಪುಟ್ಟ ಕಾಯಿಲೆಗಳನ್ನು ಶಮನಗೊಳಿಸಲು ಬಳಸುವ ಔಷದಗಳ ಸೇವನೆಯಲ್ಲಿ ಒಂದಿಷ್ಟು ವ್ಯತ್ಯಯವಾದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ತಲೆದೋರಬಹುದು. ಆದರೆ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಸೇವಿಸಲೇ ಬೇಕಾದ ಔಷದಗಳ ಸೇವನೆಯಲ್ಲಿ ಕಿಂಚಿತ್ ವ್ಯತ್ಯಯವಾದರೂ ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುವ ಸಾಧ್ಯತೆಗಳಿವೆ. 

ಕೆಲವೊಂದು ಸಂದರ್ಭಗಳಲ್ಲಿ "ಸೋಂಕಿನಿಂದ" ಉದ್ಭವಿಸುವ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ನಿಗದಿತ ಅವಧಿಗೆ "ಜೀವ ನಿರೋಧಕ" ಔಷದಗಳನ್ನು ಸೇವಿಸದೆ ಇರುವುದರಿಂದಾಗಿ ಇವರ ಕಾಯಿಲೆಯೂ ವಾಸಿಯಾಗುವುದಿಲ್ಲ. ತತ್ಪರಿಣಾಮವಾಗಿ ಇಂತಹ ರೋಗಿಗಳು ತಮ್ಮ ಸಂಪರ್ಕವಿರುವ ಮನೆಮಂದಿ ಹಾಗೂ ಸಹೋದ್ಯೋಗಿಗಳಿಗೆ ತಮ್ಮ ಸೋಂಕನ್ನು ಸುಲಭದಲ್ಲೇ ಹರಡುತ್ತಾರೆ. ಈ ಸರಪಣಿಯು ಇದೇ ರೀತಿಯಲ್ಲಿ ಮುಂದುವರೆದಲ್ಲಿ, ಮುಂದೆ ಸಂಭವಿಸಬಹುದಾದ ಅನಾಹುತವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ನಿಜ ಹೇಳಬೇಕಿದ್ದಲ್ಲಿ ಭಾರತದಲ್ಲಿ ಕ್ಷಯ ಮತ್ತು ಕುಷ್ಠರೋಗಗಳು ನಿರಂತರವಾಗಿ ಹರಡುತ್ತಲೇ ಇರಲು ಇದುವೇ ಪ್ರಮುಖ ಕಾರಣ ಎಂದಲ್ಲಿ ನೀವೂ ನಂಬಲಾರಿರಿ. 

ನಿಮ್ಮ ಶರೀರವನ್ನು ಪ್ರವೇಶಿಸಿ ತನ್ನ ಸಂಖ್ಯೆಯನ್ನು ಇಮ್ಮಡಿಗೊಳಿಸುತ್ತಾ ಕಾಯಿಲೆಗಳನ್ನು ಉಂಟುಮಾಡಬಲ್ಲ ರೋಗಾಣುಗಳನ್ನು ಸಂಪೂರ್ಣವಾಗಿ ನಾಶಗೊಳಿಸುವುದು ಅತ್ಯವಷ್ಯಕೂ ಹೌದು. ಇದಕ್ಕಾಗಿ ಬಳಸುವ ಔಷದಗಳನ್ನು ನಿಗದಿತ ಅವಧಿಗೆ ಸೇವಿಸ್ದಿದ್ದಲ್ಲಿ, ಅಳಿದುಳಿದ ರೋಗಾಣುಗಳು ಮತ್ತೆ ವೃದ್ಧಿಸಿ ಮತ್ತಷ್ಟು ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಜೊತೆಗೆ ಈ ರೋಗಾಣುಗಳು ನೀವು ಅರ್ಧಂಬರ್ಧ ಸೇವಿಸಿ ನಿಲ್ಲಿಸಿದ್ದ ಜೀವ ನಿರೋಧಕ ಔಷದಗಳಿಗೆ ಪ್ರತಿರೋಧಕ ಶಕ್ತಿಯನ್ನೂ ಗಳಿಸಿಕೊಳ್ಳುತ್ತವೆ. ಇದೇ ಕಾರಣದಿಂದಾಗಿ ಮುಂದೆ ಎಂದಾದರೂ ನಿಮಗೆ ಇದೇ ಕಾಯಿಲೆ ಬಾಧಿಸಿದಲ್ಲಿ, ನೀವು ಇದೇ ಔಷದಗಳನ್ನು ನಿಗದಿತ ಅವಧಿಗೆ ಸೇವಿಸಿದರೂ, ವ್ಯಾಧಿಯ ಬಾಧೆ ಕಿಂಚಿತ್ ಕೂಡಾ ಕಡಿಮೆಯಾಗುವ ಸಾಧ್ಯತೆಗಳೇ ಇರುವುದಿಲ್ಲ. 

ಅದೇ ರೀತಿಯಲ್ಲಿ ಔಷದ ಸೇವನೆಯಿಂದ ಶರೀರಕ್ಕೆ "ಉಷ್ಣ" ವಾಗುವುದೆಂದು ನಂಬುವ ಕೆಲ ರೋಗಿಗಳು, ತಮ್ಮ ವೈದ್ಯರು ಸೂಚಿಸಿದ ಔಷದಗಳ ಪ್ರಮಾಣವನ್ನು ತಾವಾಗಿ ಕಡಿಮೆ ಮಾಡಿಕೊಳ್ಳುವುದರಿಂದಲೂ ಮೇಲೆ ವಿವರಿಸಿದ ಸಮಸ್ಯೆಗಳು ತಲೆದೋರುವುದುಂಟು. 

ಜೀವನ ಪರ್ಯಂತ ಸೇವಿಸಬೇಕಾದ ಔಷದಗಳ ಪ್ರಮಾಣವನ್ನು ವೈದ್ಯರ ಸಲಹೆ ಪಡೆಯದೇ ಕಡಿಮೆ ಮಾಡುವುದು ಪ್ರಾಣಾಪಾಯಕ್ಕೆ ಕಾರಣವೆನಿಸಬಹುದು. ಈ ರೀತಿಯ ಪ್ರಯೋಗಗಳನ್ನು ಕೈಗೊಂಡು ಅದೃಷ್ಟವಶಾತ್ ತುರ್ತು ಚಿಕಿತ್ಸೆಯಿಂದ ಜೀವವನ್ನು ಉಳಿಸಿಕೊಂಡರೂ, ಕೆಲ ಗಂಭೀರ ಸಮಸ್ಯೆಗಳು ಶಾಶ್ವತವಾಗಿ ಉಳಿಯಬಹುದು. 

ವೈದ್ಯರಿಗೆ ನೀಡುವ ಶುಲ್ಕವನ್ನು ಉಳಿಸುವ ಸಲುವಾಗಿ ಕೆಲ ರೋಗಿಗಳು ಹಿಂದೊಮ್ಮೆ ವೈದ್ಯರು ಸೂಚಿಸಿದ್ದ ಔಷದಗಳ ಚೀಟಿಯನ್ನು ಮತ್ತೊಮ್ಮೆ ಬಳಸುವುದು ಅಪರೂಪವೇನಲ್ಲ. ಆದರೆ ಇದೀಗ ತನ್ನನ್ನು ಬಾಧಿಸುತ್ತಿರುವ ವ್ಯಾಧಿಯು ಹಿಂದೆ ಬಾಧಿಸಿದ ವ್ಯಾಧಿಯೇ ಎಂದು ಖಚಿತಪಡಿಸಿಕೊಳ್ಳುವುದು ರೋಗಿಯ ಪಾಲಿಗೆ ಅಸಾಧ್ಯವೆನಿಸುವುದು. ಕೇವಲ ವ್ಯಾಧಿ ಲಕ್ಷಣಗಳ ಆಧಾರದ ಮೇಲೆ ಅಂದು ಬಾಧಿಸಿದ್ದ ವ್ಯಾಧಿ ಇಂದು ಪುನರಪಿ ಬಂದೆರಗಿದೆ ಎಂದು ನಂಬಿ, ಅದೇ ಔಷದಗಳನ್ನು ಪ್ರಯೋಗಿಸುವ ರೋಗಿಗಳು, ಬಹುತೇಕ ಸಂದರ್ಭಗಳಲ್ಲಿ ಅನಾವಶ್ಯಕ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. 

ಸಾಮಾನ್ಯವಾಗಿ ವರ್ಷದಲ್ಲಿ ನಾಲ್ಕಾರು ಬಾರಿ ತಲೆದೋರುವ ಶೀತ, ನೆಗಡಿ, ಫ್ಲೂ ಜ್ವರ, ವಾಂತಿ, ಭೇದಿಗಳೇ ಮುಂತಾದ ಸಾಂಕ್ರಾಮಿಕ ರೋಗಗಳು ಉದ್ಭವಿಸಿದಾಗ ಬಹುಸದಸ್ಯರಿರುವ ಕುಟುಂಬಗಳಲ್ಲಿ ಹಲವಾರು ಮಂದಿ ಈ ಪೀದಿಗಳಿಗೆ ಒಳಗಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಆರ್ಥಿಕ ಅಥವಾ ಇತರ ಸಮಸ್ಯೆಗಳಿಂದಾಗಿ ಇವರಲ್ಲಿ ಒಂದಿಬ್ಬರು ಸದಸ್ಯರಿಗಾಗಿ ತಂದಿರುವ ಔಷದಗಳನ್ನೇ ಮನೆಮಂದಿಯೆಲ್ಲರೂ ದೇವರ ಪ್ರಸಾದದಂತೆ ಹಂಚಿ ಸೇವಿಸುತ್ತಾರೆ!. ಇಂತಹ ಚಿಕಿತ್ಸೆಯಿಂದಾಗಿ ಈ ಕುಟುಂಬದ ಯಾವುದೇ ಸದಸ್ಯನಿಗೂ ಸಮರ್ಪಕ ಚಿಕಿತ್ಸೆ ದೊರೆಯದೇ, ಇವರೆಲ್ಲರ ಕಾಯಿಲೆಗಳು ಉಲ್ಬಣಿಸುವುದರೊಂದಿಗೆ ಇನ್ನಷ್ಟು ಜನರಿಗೆ ಹರಡಲು ಕಾರಣವೆನಿಸುತ್ತದೆ. 

ಕೊನೆಯ ಮಾತು 

ಹೊಸ ವೈದ್ಯರಿಗಿಂತ ಹಳೆಯ ರೋಗಿಯೇ ಮಿಗಿಲು ಎನ್ನುವ ಆಡುಮಾತನ್ನು ನೀವೂ ಕೇಳಿರಲೇಬೇಕು. ಆದರೆ ಇದನ್ನು ಯಥಾವತ್ತಾಗಿ ಆಚರಣೆಗೆ ತರುವ ಅನೇಕ ರೋಗಿಗಳು, ತಮ್ಮ ಬಂಧು ಮಿತ್ರರಿಗೆ ತಮ್ಮನ್ನು ಬಾಧಿಸುತ್ತಿರುವ ಕಾಯಿಲೆ ಯಾವುದೆಂದು ಅರಿತೊಡನೆ, ತಾವು ಇದೀಗ ಸೇವಿಸುತ್ತಿರುವ ಔಷದಗಳನ್ನು ಒಂದುಬಾರಿ ಪ್ರಯತ್ನಿಸುವಂತೆ ಒತ್ತಾಯಿಸುತ್ತಾರೆ. ತಮ್ಮ ಕಾಯಿಲೆ, ವಯಸ್ಸು, ಶರೀರದ ತೂಕ ಹಾಗೂ ಇದರೊಂದಿಗೆ ಇರಬಹುದಾದ ಅನ್ಯ ಕಾಯಿಲೆಗಳನ್ನು ಗಮನದಲ್ಲಿರಿಸಿ ವೈದ್ಯರು ತಮಗೆ ನೀಡಿದ ಔಷದವು ಮತ್ತೊಬ್ಬರಿಗೆ ಅಪೇಕ್ಷಿತ ಪರಿಣಾಮಕ್ಕೆ ಬದಲಾಗಿ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಇಂತಹ ಪ್ರಯೋಗಗಳನ್ನು ಪ್ರಯತ್ನಿಸುವ ರೋಗಿಗಳಿಗೆ ಅಯಾಚಿತ ಸಮಸ್ಯೆಗಳು ಬಾಧಿಸುವುದರಲ್ಲಿ ಸಂದೇಹವಿಲ್ಲ ಎನ್ನುವುದನ್ನು ಮರೆಯದಿರಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೪-೦೮-೨೦೦೬ ರ ಸಂಚಿಕೆಯ "ಬಳಕೆದಾರ ಸಮಸ್ಯೆ- ಸಮಾಧಾನ' ಅಂಕಣದಲ್ಲಿ ಪ್ರಕಟಿತ ಲೇಖನ  



Sunday, October 27, 2013

Madhumehada Praabalya: Mootrapindagala vaiphalya


                 ಮಧುಮೇಹದ ಪ್ರಾಬಲ್ಯ: ಮೂತ್ರಪಿಂಡಗಳ ವೈಫಲ್ಯ

     ಸುದೀರ್ಘಕಾಲದಿಂದ  ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೂ, ಈ ವ್ಯಾಧಿಯಿಂದ ಉದ್ಭವಿಸಬಲ್ಲ ಗಂಭೀರ- ಮಾರಕ ಸಮಸ್ಯೆಗಳ ಬಗ್ಗೆ ಅವಶ್ಯಕ ಮಾಹಿತಿ ತಿಳಿದಿರುವುದಿಲ್ಲ. ಸದ್ದು ಮಾಡದ ಹಂತಕನೆಂದು ಕರೆಯಲ್ಪಡುವ ಮೂತ್ರಪಿಂಡಗಳ ವೈಫಲ್ಯವು ಇಂತಹ ಸಮಸ್ಯೆಗಳಲ್ಲಿ ಒಂದಾಗಿದ್ದು, ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
------------------                  ---------------------------                                     ---------------------------                                           ------------------------              -------------------------

           ಪಾಶ್ಚಾತ್ಯರ ಆಧುನಿಕ ಜೀವನ ಶೈಲಿಗೆ ಮಾರುಹೋಗುತ್ತಿರುವ ಭಾರತೀಯರ ಸಂಖ್ಯೆ ವರ್ಷಂಪ್ರತಿ ಹೆಚ್ಚುತ್ತಿರುವುದು ನಿಮಗೂ ತಿಳಿದಿರಲೇಬೇಕು. ಇದಕ್ಕೆ ಅನುಗುಣವಾಗಿ ಅನಿಯಂತ್ರಿತವಾಗಿ ವೃದ್ಧಿಸುತ್ತಿರುವ ಮಧುಮೇಹ ರೋಗಿಗಳ ಸಂಖ್ಯೆಯನ್ನು ಪರಿಗಣಿಸಿದಲ್ಲಿ, ಸದ್ಯೋಭವಿಷ್ಯದಲ್ಲಿ ಭಾರತವು "ವಿಶ್ವದ ಮಧುಮೇಹಿಗಳ ರಾಜಧಾನಿ" ಎನಿಸಲಿದೆ!. 

ಭಾರತೀಯರಲ್ಲಿ ಮಧುಮೇಹ ಪೀಡಿತರ ಸಂಖ್ಯೆ ಅತಿಯಾಗಲು ನಿರ್ದಿಷ್ಟ ಕಾರಣಗಳೂ ಇವೆ. ಆಧುನಿಕ- ಪಾಶ್ಚಾತ್ಯ ಜೀವನಶೈಲಿ, ಸಮೃದ್ಧ ಕ್ಯಾಲರಿಗಳಿರುವ ಆಹಾರ ಸೇವನೆ, ನಿಷ್ಕ್ರಿಯ ಜೀವನಶೈಲಿ, ಹೆಚ್ಚುತ್ತಿರುವ ಸುಖ ವೈಭೋಗಗಳು, ಅಧಿಕ ತೂಕ, ಅತಿಬೊಜ್ಜು, ಅತಿಯಾದ ಮಾನಸಿಕ ಒತ್ತಡ, ವೈವಿಧ್ಯಮಯ ದುಶ್ಚಟಗಳು ಮತ್ತು ಅನುವಂಶಿಕತೆಯೂ ಭಾರತೀಯರಲ್ಲಿ ಮಧುಮೇಹ ಆರಂಭವಾಗುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. 

ಮಧುಮೇಹದ ಪ್ರಭೇದಗಳು 

ಆಧುನಿಕ ವೈದ್ಯಪದ್ದತಿಯಲ್ಲಿ ಮಧುಮೇಹ ವ್ಯಾಧಿಯನ್ನು ಡಯಾಬೆಟೆಸ್ ಮೆಲೈಟಸ್ ಪ್ರಭೇದ-೧ ಮತ್ತು ಪ್ರಭೇದ- ೨ ಎಂದು ಸ್ಥೂಲವಾಗಿ ವಿಂಗಡಿಸಲಾಗಿದೆ. ಪ್ರಭೇದ-೧ ಸಾಮಾನ್ಯವಾಗಿ ಹಸುಗೂಸಿನಿಂದ ಹಿಡಿದು ಹದಿಹರೆಯದ ವ್ಯಕ್ತಿಗಳಲ್ಲಿ ಉದ್ಭವಿಸುತ್ತದೆ. ಈ ರೋಗಿಗಳ ಶರೀರದಲ್ಲಿನ ಮೇದೋಜೀರಕ ಗ್ರಂಥಿಗಳು ಅವಶ್ಯಕ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸದೇ ಇರುವುದರಿಂದ, ಇವರು ಪ್ರತಿನಿತ್ಯ ಇನ್ಸುಲಿನ್ ಇಂಜೆಕ್ಷನ್ ಪಡೆದುಕೊಳ್ಳಬೇಕಾಗುವುದು. ಇದೇ ಕಾರಣದಿಂದ ಪ್ರಭೇದ-೧ ನ್ನು ಇನ್ಸುಲಿನ್ ಅವಲಂಬಿತ ಮಧುಮೇಹ ಎಂದು ಕರೆಯುತ್ತಾರೆ. 

ವಯಸ್ಕರಲ್ಲಿ ಉದ್ಭವಿಸುವ ಮಧುಮೇಹ ಎಂದು ಕರೆಯಲ್ಪಡುವ ಪ್ರಭೇದ-೨ , ಹೆಚ್ಚಾಗಿ ೪೦ ವರ್ಷ ವಯಸ್ಸನ್ನು ಮೀರಿದ ವ್ಯಕ್ತಿಗಳಲ್ಲಿ ಕಂಡುಬರುತ್ತದೆ. ಆದರೆ ಇತ್ತೀಚಿನ ಕೆಲವರ್ಷಗಳಿಂದ ಈ ಪ್ರಭೇದವು, ೩೦ ಅಥವಾ ಇದಕ್ಕೂ ಕಡಿಮೆ ವಯಸ್ಸಿನವರಲ್ಲಿ ಪತ್ತೆಯಾಗುತ್ತಿದೆ. ಈ ರೋಗಿಗಳ ಶರೀರದಲ್ಲಿನ ಮೇದೋಜೀರಕ ಗ್ರಂಥಿಗಳು ಅವಶ್ಯಕ ಪ್ರಮಾಣದ ಇನ್ಸುಲಿನ್ ಉತ್ಪಾದಿಸಿದರೂ, ಇವರ ಶರೀರವು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾಗುವುದು. ಆಹಾರ ಸೇವನೆಯಲ್ಲಿ ಪಥ್ಯ, ಶಾರೀರಿಕ ವ್ಯಾಯಾಮ ಹಾಗೂ ಅಗತ್ಯವಿದ್ದಲ್ಲಿ  ಔಷದ ಸೇವನೆಗಳಿಂದ ಸಮರ್ಪಕವಾಗಿ ನಿಯಂತ್ರಿಸಬಹುದು. ಆದರೆ ಅಪರೂಪದಲ್ಲಿ ಕೆಲರೋಗಿಗಳು ಕೆಲವೊಂದು ಸಂದರ್ಭಗಳಲ್ಲಿ ಇನ್ಸುಲಿನ್ ಇಜೆಕ್ಷನ್ ಪಡೆದುಕೊಳ್ಳಬೇಕಾಗುವುದು. 

ಮೂತ್ರಪಿಂಡಗಳ ವೈಫಲ್ಯ 

ಸಾಮಾನ್ಯವಾಗಿ ಮೂತ್ರಪಿಂಡಗಳ ವೈಫಲ್ಯಕ್ಕೆ ಒಳಗಾಗುವ ಮಧುಮೇಹಿಗಳು, ಸುದೀರ್ಘ ಕಾಲ ಈ ವ್ಯಾಧಿಯಿಂದ ಬಳಲುತ್ತಿರುತ್ತಾರೆ. ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಂತೆ ಪ್ರಭೇದ-೧ ವರ್ಗಕ್ಕೆ ಸೇರಿದ ಶೇ. ೩೦ ಮತ್ತು ಪ್ರಭೇದ-೨ ವರ್ಗಕ್ಕೆ ಸೇರಿದ ಶೇ. ೧೦ ರಿಂದ ೪೦ ರಷ್ಟು ರೋಗಿಗಳು ಅಂತಿಮವಾಗಿ ಮೂತ್ರಪಿಂಡಗಳ ವೈಫಲ್ಯಕ್ಕೆ ತುತ್ತಾಗುತ್ತಾರೆ. ಭಾರತದ ಮಧುಮೇಹ ರೋಗಿಗಳಲ್ಲಿ ಶೇ. ೫ ಕ್ಕೂ ಹೆಚ್ಚು ಮಕ್ಕಳಿದ್ದಾರೆ ಎಂದಲ್ಲಿ ನಿಮಗೂ ಆಶ್ಚರ್ಯವೆನಿಸಬಹುದು. 

ಆದರೆ ಮಧುಮೇಹಿಗಳಿಗೆ ಮಾರಕ ಎನಿಸಬಹುದಾದ ಈ ಸಮಸ್ಯೆಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ, ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಿಂದ ಇದನ್ನು ತಕ್ಕಮಟ್ಟಿಗೆ ತಡೆಗಟ್ಟಬಹುದಾಗಿದೆ. 

ಸಮಸ್ಯೆಯ ಮೂಲ 

ಭವ್ಯ ಭಾರತದ ಶೇ. ೧೦ ರಷ್ಟು ನಗರವಾಸಿಗಳಲ್ಲಿ ಕಂಡುಬರುತ್ತಿರುವ ಮಧುಮೇಹ ವ್ಯಾಧಿಯ ಬಗ್ಗೆ ಹಾಗೂ ಇದರ ದೀರ್ಘಕಾಲೀನ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಿಗೆ, ಅದರಲ್ಲೂ ವಿಶೇಷವಾಗಿ ವಿದ್ಯಾವಂತರಿಗೆ ಅರಿವಿಲ್ಲದಿರುವುದು ಇದಕ್ಕೊಂದು ಪ್ರಮುಖ ಕಾರಣವೂ ಹೌದು. ಮಧುಮೇಹ ಪೀಡಿತರನ್ನು ಹೆಚ್ಚಾಗಿ ಕಾಡುವ ಹೃದಯ ಮತ್ತು ರಕ್ತನಾಳಗಳ ಕಾಯಿಲೆಯನ್ನು ತಡೆಗಟ್ಟುವತ್ತ ಹೆಚ್ಚಿನ ಗಮನ ಹರಿಸುವುದರಿಂದಾಗಿ, ಈ ರೋಗಿಗಳಿಗೆ ತಮ್ಮ ಮೂತ್ರಪಿಂಡಗಳ ಕಾರ್ಯಕ್ಷಮತೆಯಲ್ಲಿ ವ್ಯತ್ಯಯವಾಗುತ್ತಿರುವುದೇ ತಿಳಿಯುವುದಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಪ್ರಾರಂಭಿಕ ಹಂತದಲ್ಲಿ ಸುಲಭವಾಗಿ ತಡೆಗಟ್ಟಬಹುದಾದ ಮೂತ್ರಪಿಂಡಗಳ ವೈಫಲ್ಯವು, ಸದ್ದು ಮಾಡದೆ ಅಂತಿಮ ಹಂತವನ್ನು ತಲುಪುತ್ತದೆ!. 

ವೈಫಲ್ಯದ ಲಕ್ಷಣಗಳು 

ಮೂತ್ರಪಿಂಡಗಳ ವೈಫಲ್ಯವು ಐದು ಹಂತಗಳನ್ನು ಒಳಗೊಂಡಿದ್ದು, "ಅಂತಿಮ ಹಂತದ ಮೂತ್ರಾಂಗಗಳ ವೈಫಲ್ಯ"ದ ಸ್ಥಿತಿಯನ್ನು ತಲುಪಲು ಸುದೀರ್ಘಕಾಲ ತೆಗೆದುಕೊಳ್ಳುವುದು.ಪ್ರಾಥಮಿಕ ಹಂತದಲ್ಲಿ "ಮೈಕ್ರೋ ಅಲ್ಬುಮಿನ್ಯುರಿಯಾ" ಎಂದು ಕರೆಯಲ್ಪಡುವ, ಅತಿಸೂಕ್ಷ್ಮ ಪ್ರಮಾಣದಲ್ಲಿ ರೋಗಿಯ ಮೂತ್ರದಲ್ಲಿ ವಿಸರ್ಜಿಸಲ್ಪಡುವ ಅಲ್ಬ್ಯುಮಿನ್ ಈ ವ್ಯಾಧಿಯ ಪ್ರಾರಂಭಿಕ ಲಕ್ಷಣವಾಗಿದೆ. ಈ ಹಂತದಲ್ಲಿ ಮೂತ್ರಪಿಂಡಗಳ ಕಾರ್ಯಕ್ಷಮತೆಯಲ್ಲಿ ವಿಶೇಷ ನ್ಯೂನತೆಗಳು ಉದ್ಭವಿಸದ ಕಾರಣದಿಂದಾಗಿ, ಸೂಕ್ತ ಚಿಕಿತ್ಸೆಯನ್ನು ಪಡೆದಲ್ಲಿ ಶೇ. ೬೦ ರಿಂದ ೭೦ ರೋಗಿಗಳು ಗುಣಮುಖರಾಗುತ್ತಾರೆ. ಆದರೆ ಪ್ರಾರಂಭಿಕ ಹಂತದಲ್ಲಿರುವ ಈ ಸಮಸ್ಯೆಯನ್ನು ನಿಯಮಿತವಾಗಿ ಮೂತ್ರ ಪರೀಕ್ಷೆ ಮಾಡಿಸಿಕೊಳ್ಳುವ ರೋಗಿಗಳಲ್ಲಿ ಮಾತ್ರ ಪತ್ತೆಹಚ್ಚಬಹುದಾಗಿದೆ. 

ಪ್ರಾರಂಭಿಕ ಹಂತದಲ್ಲಿ ಇದನ್ನು ಪತ್ತೆಹಚ್ಚಲು ವಿಫಲರಾದಲ್ಲಿ ಅಥವಾ ಪತ್ತೆಹಚ್ಚಿದ ಬಳಿಕವೂ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದಲ್ಲಿ, ಕಾಲಕ್ರಮೇಣ ರೋಗಿಯ ಮೂತ್ರದಲ್ಲಿ ವಿಸರ್ಜಿಸಲ್ಪಡುತ್ತಿರುವ ಆಲ್ಬ್ಯುಮಿನ್ ನ ಪ್ರಮಾಣವು ಹೆಚ್ಚುವುದರೊಂದಿಗೆ, ರೋಗಿಯ ಪಾದಗಳಲ್ಲಿ ಬಾವು ಕಾಣಿಸಿಕೊಳ್ಳುವುದು. ಶೇ. ೨೦ ರಿಂದ ೪೦ ರಷ್ಟು ರೋಗಿಗಳಲ್ಲಿ ಮಧುಮೇಹ ಆರಂಭವಾಗಿ ಸುಮಾರು ೧೫ ರಿಂದ ೨೦ ವರ್ಷಗಳ ಅವಧಿಯಲ್ಲಿ ನಿಧಾನವಾಗಿ ವೃದ್ಧಿಸುತ್ತಾ ಹೋಗುವ ಈ ಸಮಸ್ಯೆಯನ್ನು ನಿರ್ಲಕ್ಷಿಸಿದಲ್ಲಿ ಪ್ರಾಣಾಪಾಯ ತಪ್ಪಿದ್ದಲ್ಲ. ಈ ಹಂತದ ಬಳಿಕ ರೋಗಿಯ ಮೂತ್ರಪಿಂಡಗಳ ಕಾರ್ಯಕ್ಷಮತೆಯು ನಿಧಾನವಾಗಿ ನಶಿಸುತ್ತಾ ಹೋಗುವುದು. "ಅಂತಿಮ ಹಂತದ ಮೂತ್ರಾಂಗಗಳ ವೈಫಲ್ಯ" ದ ಸ್ಥಿತಿಯನ್ನು ತಲುಪಲು ಹಲವಾರು ತಿಂಗಳುಗಳೇ ತಗಲುವುದಾದರೂ, ಈ ಅವಧಿಯು ರೋಗಿಯಿಂದ ರೋಗಿಗೆ ಬದಲಾಗಬಹುದು. 

ಸಾಮಾನ್ಯವಾಗಿ ಶೇ. ೩೩ ರಷ್ಟು ಮಧುಮೇಹ ರೋಗಿಗಳು ಅಧಿಕ ರಕ್ತದೊತ್ತಡದಿಂದಲೂ ಬಳಲುತ್ತಾರೆ. ಈ ರೋಗಿಗಳಲ್ಲಿ 'ಡಯಾಬೆಟಿಕ್ ನೆಫ್ರೋಪತಿ" ಅರ್ಥಾತ್, ಮಧುಮೇಹ ವ್ಯಾಧಿಯಿಂದ ಮೂತ್ರಪಿಂಡಗಳಿಗೆ ಹಾನಿಯಾಗಿರುವ ಸ್ಥಿತಿ ಉದ್ಭವಿಸಿದಲ್ಲಿ, ಇಂತಹ ಶೇ. ೭೦ ರಷ್ಟು ರೋಗಿಗಳಿಗೆ ಅಧಿಕ ರಕ್ತದೊತ್ತಡವೂ ಆರಂಭವಾಗುದು. 

ಮೂತ್ರಪಿಂಡಗಳ ವೈಫಲ್ಯ ತಲೆದೋರಿದಂತೆಯೇ ರೋಗಿಯ ರಕ್ತದಲ್ಲಿನ ಯೂರಿಯ ಮತ್ತು ಕ್ರಿಯಾಟಿನಿನ್ ಗಳ ಪ್ರಮಾಣಗಳಲ್ಲಿ ಹೆಚ್ಚಳ ಕಂಡುಬರುವುದು. ಜೊತೆಗೆ ವಾಕರಿಕೆ, ವಾಂತಿ, ಹಸಿವಿಲ್ಲದಿರುವುದು, ಅತಿ ಆಯಾಸ,ನಿಶ್ಶಕ್ತಿ,ಕಾಲಿನ ಮಾಂಸಪೇಶಿಗಳಲ್ಲಿ ಸೆಳೆತ, ತುರಿಕೆ ಮತ್ತು ರಕ್ತಹೀನತೆಗಳಂತಹ ಲಕ್ಷಣಗಳು ಕಂಡುಬರುತ್ತವೆ. ಇದೇ ಸಂದರ್ಭದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವೂ ಕುಸಿಯಲು ಆರಂಭವಾಗುವುದರಿಂದ, ರೋಗಿಯು ದಿನನಿತ್ಯ ಪಡೆದುಕೊಳ್ಳುವ ಇನ್ಸುಲಿನ್ ನ ಪ್ರಮಾಣವನ್ನು ಕಡಿಮೆ ಮಾಡಬೇಕಾಗುವುದು. ಮಧುಮೇಹ ರೋಗಿಗಳಲ್ಲಿ ಮೂತ್ರಪಿಂಡಗಳ ವೈಫಲ್ಯದ ಪರಿಣಾಮವಾಗಿ ಇಂತಹ ಸ್ಥಿತಿ ಉಂಟಾಗುವುದು. 

ಚಿಕಿತ್ಸೆ 

ಮೂತ್ರಪಿಂಡಗಳ ವೈಫಲ್ಯವನ್ನು ನಿಖರವಾಗಿ ಪತ್ತೆಹಚ್ಚಿದ ಬಳಿಕ ಮಧುಮೇಹವನ್ನು ಸಮರ್ಪಕವಾಗಿ ನಿಯಂತ್ರಿಸಲು ರೋಗಿಯು ಸೇವಿಸುತ್ತಿರುವ ಇತರ ಔಷದಗಳನ್ನು ನಿಲ್ಲಿಸಿ, ಇನ್ಸುಲಿನ್ ಇಂಜೆಕ್ಷನ್ ಗಳನ್ನು ಪಡೆದುಕೊಳ್ಳಬೇಕಾಗುವುದು ಅನಿವಾರ್ಯವೂ ಹೌದು. ಏಕೆಂದರೆ ಮಾತ್ರೆಗಳ ಸೇವನೆಯಿಂದ ಮೂತ್ರಪಿಂಡಗಳ ವೈಫಲ್ಯವು ತೀವ್ರಗತಿಯಲ್ಲಿ ಉಲ್ಬಣಿಸುವುದರಿಂದ ಕೆಲವೊಮ್ಮೆ ರೋಗಿಗಳ ಮರಣಕ್ಕೂ ಕಾರಣವೆನಿಸುವ ಸಾಧ್ಯತೆಗಳಿವೆ. ಆದರೂ ಕೆಲರೋಗಿಗಳಲ್ಲಿ ಕೇವಲ ಆಹಾರ ಸೇವನೆಯಲ್ಲಿ ಕಟ್ಟುನಿಟ್ಟಾದ ಪಥ್ಯವನ್ನು ಪರಿಪಾಲಿಸುವುದು ಕೂಡಾ ಅತ್ಯಂತ ಪರಿಣಾಮಕಾರಿ ಎನಿಸುವುದು. 

ಇನ್ಸುಲಿನ್ ಪಡೆದುಕೊಳ್ಳಲು ಆರಂಭಿಸಿದ ರೋಗಿಗಳು ತಮ್ಮ ಮೂತ್ರದಲ್ಲಿನ ಸಕ್ಕರೆಯ ಪ್ರಮಾಣವನ್ನು ಮಾನದಂಡವಾಗಿ ಪರಿಗಣಿಸಿ, ದೈನಂದಿನ ಇನ್ಸುಲಿನ್ ನ ಪ್ರಮಾಣವನ್ನು ನಿಗದಿಸುವುದು ಪ್ರಾಣಾಪಾಯಕ್ಕೆ ಆಹ್ವಾನ ನೀಡಿದಂತಾಗುವುದು. ಏಕೆಂದರೆ ಮೂತ್ರಪಿಂಡಗಳ ವೈಫಲ್ಯದ ಸ್ಥಿತಿಯಲ್ಲಿ ಈ ಪರೀಕ್ಷೆಯು ಸಮರ್ಪಕವೆನಿಸಲಾರದು.

ಅಂತೆಯೇ ಮೂತ್ರಪಿಂಡಗಳ ಕಾರ್ಯಕ್ಷಮತೆಯು ಒಂದುಬಾರಿ ನಶಿಸಲು ಪ್ರಾರಂಭವಾದ ಬಳಿಕ "ಅಂತಿಮ ಹಂತದ ಮೂತ್ರಾಂಗಗಳ ವೈಫಲ್ಯವು ಅನಿವಾರಣೀಯ ಎನಿಸುವುದು. ಈ ಸ್ಥಿತಿಯಲ್ಲಿ ಮೂತ್ರಪಿಂಡಗಳ ಕಾರ್ಯಕ್ಷಮತೆಯು "ಅಧೋಗತಿ" ಯನ್ನು ತಲುಪುವುದರಿಂದಾಗಿ, ಮೂತ್ರಪಿಂಡಗಳ ಕಾರ್ಯಗಳನ್ನು ಕೃತಕ ವಿಧಾನಗಳಿಂದ ನಡೆಸಬೇಕಾಗುವುದು. ಆದರೆ ಈ ವಿಧಾನಗಳು ಅಪೇಕ್ಷಿತ ಪರಿಣಾಮವನ್ನು ನೀಡಬೇಕಿದ್ದಲ್ಲಿ, ಮೂತ್ರಪಿಂಡಗಳ ಸ್ವಾಭಾವಿಕ ಕಾರ್ಯಕ್ಷಮತೆಯ ಮಟ್ಟವು ಶೇ. ೧೦ ರಿಂದ ೧೫ ರಷ್ಟು ಇರಬೇಕಾಗುವುದು. 

ಈ ಅಂತಿಮ ಹಂತದಲ್ಲಿ "ಡಯಾಲೈಸಿಸ್" ಅಥವಾ" ಬದಲಿ ಮೂತ್ರಪಿಂಡ ಜೋಡಣೆ "ಎನ್ನುವ ಎರಡೇ ಚಿಕಿತ್ಸಾ ವಿಧಾನಗಳು ಲಭ್ಯವಿದ್ದು, ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕಾಗುವುದು. ಮಧುಮೇಹ ರೋಗಿಗಳಿಗೆ ವರದಾನವೆನಿಸುವ ಎರಡನೆಯ ವಿಧಾನವು ನಿಶ್ಚಿತವಾಗಿಯೂ ಪ್ರಾಣರಕ್ಷಕವೆನಿಸುವುದು. 

ನಿವಾರಣೆ ಎಂತು

ಡಯಾಬೆಟಿಕ್ ನೆಫ್ರೋಪತಿ ಎನ್ನುವ ಗಂಭೀರ ಸಮಸ್ಯೆಯನ್ನು ತಡೆಗಟ್ಟಲು ಮಧುಮೇಹ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕ್ರಮಬದ್ಧ ಆಹಾರ ಸೇವನೆ, ವ್ಯಾಯಾಮ ಮತ್ತು ಔಷದ ಸೇವನೆಗಳಿಂದ ಅಪೇಕ್ಷಿತ ಮಟ್ಟದಲ್ಲಿ ಕಾಪಾಡಿಕೊಳ್ಳಬೇಕು. ಇದರೊಂದಿಗೆ ನಿಯಮಿತವಾಗಿ ತಮ್ಮ ಮೂತ್ರದ ತಪಾಸಣೆಯನ್ನು ಮಾಡಿಸುತ್ತಿದ್ದಲ್ಲಿ, ಮೈಕ್ರೋ ಅಲ್ಬ್ಯುಮಿನ್ಯೂರಿಯಾ ಪತ್ತೆಯಾದಲ್ಲಿ ವಿಳಂಬಿಸದೇ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. 

ಆರೋಗ್ಯವಂತರ ಮೂತ್ರದಲ್ಲಿ ವಿಸರ್ಜಿಸಲ್ಪಡುವ ಅಲ್ಬ್ಯುಮಿನ್ ನ ಪ್ರಮಾಣವು ದಿನದಲ್ಲಿ ೨೦ ಮಿ. ಗ್ರಾಂ ಗಿಂತಲೂ ಕಡಿಮೆ ಇರುವುದು. ಆದರೆ ನಾಲ್ಕಾರು ಬಾರಿ ಪರೀಕ್ಷಿಸಿದಾಗಲೂ ದಿನದಲ್ಲಿ ೩೦ ರಿಂದ ೩೦೦ ಮಿ. ಗ್ರಾಂ. ಗಳಿಗಿಂತ ಅಧಿಕವಿದ್ದಲ್ಲಿ, ಈ ರೋಗಿಯಲ್ಲಿ ಮೈಕ್ರೋ ಅಲ್ಬ್ಯುಮಿನ್ಯೂರಿಯಾ ಇರುವುದರೊಂದಿಗೆ, ಆತನಲ್ಲಿ ಡಯಾಬೆಟೆಕ್ ನೆಫ್ರೋಪತಿಯ ಇರುವಿಕೆಯನ್ನು ಧೃಡೀಕರಿಸುತ್ತದೆ. 

ಮೂತ್ರದಲ್ಲಿ ವಿಸರ್ಜಿಸಲ್ಪಡುವ ಅಲ್ಬ್ಯುಮಿನ್ ನ ಪ್ರಮಾಣವು ಗಣನೀಯವಾಗಿ ಹೆಚ್ಚಿದಂತೆಯೇ, ಈ ರೋಗಿಗಳ ಅಧಿಕ ರಕ್ತದೊತ್ತಡವನ್ನು ಸಮರ್ಪಕವಾಗಿ ನಿಯಂತ್ರಿಸಬೇಕಾಗುತ್ತದೆ. ಇಂತಹ ರೋಗಿಗಳಲ್ಲಿ ರಕ್ತದೊತ್ತಡದ ಅಪೇಕ್ಷಿತ ಮಟ್ಟವು, ಮಧುಮೇಹ ಅಥವಾ ಮೂತ್ರಪಿಂಡಗಳ ವೈಫಲ್ಯದಿಂದ ಬಳಲದಿರುವ ಇತರ ರೋಗಿಗಳಿಗಿಂತ ತುಸು ಕಡಿಮೆ ಇರಬೇಕಾಗುತ್ತದೆ. ಜೊತೆಗೆ ರಕ್ತದಲ್ಲಿ ಅತಿಯಾಗಿರಬಹುದಾದ ಕೊಲೆಸ್ಟೆರಾಲ್ ನ್ನು ಇಳಿಸುವ ಚಿಕಿತ್ಸೆ, ಅಧಿಕ ತೂಕ ಇದ್ದವರಿಗೆ ತೂಕವನ್ನು ಇಳಿಸುವ ಪ್ರಯತ್ನ, ಧೂಮಪಾನದ ಚಟವಿದ್ದಲ್ಲಿ ಇದನ್ನು ನಿಲ್ಲಿಸುವ ಹಾಗೂ ನೋವು ಮತ್ತು ಉರಿಯೂತ ನಿವಾರಕ ಔಷದಗಳನ್ನು ಸೇವಿಸದಿರುವುದು ಕೂಡಾ ಈ ಸಮಸ್ಯೆಯ ಪರಿಹಾರದಲ್ಲಿ ಮಹತ್ವಪೂರ್ಣವೆನಿಸುವುದು. 

ಇವೆಲ್ಲಕ್ಕೂ ಮಿಗಿಲಾಗಿ ಮಧುಮೇಹ ವ್ಯಾಧಿ ಪೀಡಿತರು ಪ್ರಾರಂಭಿಕ ಹಂತದಿಂದಲೇ ಕ್ರಮಬದ್ಧ ಹಾಗೂ ಕಟ್ಟುನಿಟ್ಟಾದ ಆಹಾರ, ವಿಹಾರ, ವ್ಯಾಯಾಮ ಮತ್ತು ಔಷದ ಸೇವನೆಗಳಿಂದ ತಮ್ಮ ಆರೋಗ್ಯದ ಮಟ್ಟವನ್ನು ಕಾಪಾಡಿಕೊಂಡಲ್ಲಿ, ಮೂತ್ರಾಂಗಗಳ ವೈಫಲ್ಯದಂತಹ ತೊಂದರೆಗಳಿಗೆ ಈಡಾಗುವ ಸಾಧ್ಯತೆಗಳಿರುವುದಿಲ್ಲ ಎನ್ನುವುದನ್ನು ಮರೆಯದಿರಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೧-೦೭-೨೦೦೫ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 


Thursday, October 24, 2013

Paripoorna purushatvavannu padeyiri!-be a macho man! Part-2


                 ಪರಿಪೂರ್ಣ ಪುರುಷತ್ವವನ್ನು ಪಡೆಯಿರಿ!  ಭಾಗ-೨

ನಿಮಿರು ದೌರ್ಬಲ್ಯಕ್ಕೆ"ಸ್ಪ್ರೇ" ಮದ್ದಲ್ಲ!

ರಸಿಕ ರತ್ನಾಕರ ಎಂದೇ ಪ್ರಸಿದ್ಧರಾಗಿರುವ ಆನಂದಮೂರ್ತಿಯವರು "ಸ್ವಯಂ ಚಿಕಿತ್ಸೆ" ಯಲ್ಲಿ ಪರಿಣಿತರು. ಅರವತ್ತರ ಹರೆಯದಲ್ಲೂ ಮೂರ್ತಿಯವರ ಕಾಮಾಸಕ್ತಿ ಕಿಂಚಿತ್ ಕೂಡಾ ಕ್ಷಯಿಸಿರಲಿಲ್ಲ. ತಮ್ಮ ಲೈಂಗಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು "ಮದನಕಾಮೇಶ್ವರಿ ಲೇಹ್ಯ", ಸ್ವರ್ಣ ಭಸ್ಮ ಹಾಗೂ ಇತರ ಕೆಲ ಔಷದಗಳನ್ನು  ಸೇವಿಸುವ ಹವ್ಯಾಸವು ಹಲವಾರು ವರ್ಷಗಳಿಂದ ಇವರಲ್ಲಿತ್ತು. 

ಆದರೆ ಇತ್ತೀಚಿನ ಕೆಲ ತಿಂಗಳುಗಳಿಂದ ಸತತವಾಗಿ ಬಾಧಿಸುತ್ತಿದ್ದ ನಿಮಿರು ದೌರ್ಬಲ್ಯದ ಸಮಸ್ಯೆಯನ್ನು ಪರಿಹರಿಸಲು, ವೃತ್ತ ಪತ್ರಿಕೆಯಾ ಜಾಹೀರಾತಿನಲ್ಲಿ ಕಂಡಿದ್ದ ಅದ್ಭುತ "ಸ್ಪ್ರೇ " ಒಂದನ್ನು ಖರೀದಿಸಿದರು. ಹತ್ತರುಬಾರಿ ಇದನ್ನು ಬಳಸಿದಾಗಳೂ ನಿರೀಕ್ಷಿತ ಪರಿಣಾಮ ದೊರೆಯದಾಗ, ಪರಿಚಿತ ವೈದ್ಯರ ಸಲಹೆಯನ್ನು ಪಡೆಯಲು ತೆರಳಿದ್ದರು. 

ಬಹುತೇಕ ಜನರು ಇಂತಹ ಜಾಹೀರಾತುಗಳನ್ನು ಕಂಡು, ಇದು ಕಾಮೋತ್ತೇಜಕ ಹಾಗೂ ನಿಮಿರು ದೌರ್ಬಲ್ಯಕ್ಕೆ ರಾಮಬಾಣ ಎಂದು ಭಾವಿಸುತ್ತಾರೆ. ಸತ್ಯ ಸಂಗತಿ ಏನೆಂದರೆ ಈ ಸ್ಪ್ರೇ ಯನ್ನು ಬಳಸಿದಾಗ ಶಿಶ್ನದ ತುದಿಯ ಭಾಗದ ಸಂವೇದನೆಗಳು ತಾತ್ಕಾಲಿಕವಾಗಿ ತಡೆಗಟ್ಟಲ್ಪದುವುದರಿಂದ, ಶೀಘ್ರ ಸ್ಖಲನದ ಸಮಸ್ಯೆಗೆ ಕಿಂಚಿತ್ ಪರಿಹಾರ ಲಭಿಸುತ್ತದೆ. ಅರಿವಲಿಕೆಗಾಗಿ ಉಪಯೋಗಿಸುವ ಔಷದವನ್ನು ನೇರವಾಗಿ ಶಿಶ್ನಕ್ಕೆ ಸಿಂಪಡಿಸುವುದರಿಂದ, ಈ ಭಾಗವು ನೋವು ಮತ್ತು ಸ್ಪರ್ಶಜ್ಞಾನವನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳುವುದು. ತತ್ಪರಿಣಾಮವಾಗಿ ಸಂಭೋಗದ ಅವಧಿ ಒಂದಿಷ್ಟು ಹೆಚ್ಚುವುದು!. ಈ ವಿಚಾರವನ್ನು ಅರಿತಿರದ ಅನೇಕರು ಇಂತಹ ರೆಚಕಗಳ ಅದ್ಭುತ ಪರಿಣಾಮಗಳ ಬಗ್ಗೆ, ಅರ್ಥಾತ್ ಇದರಿಂದಾಗಿ ತಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚಿರುವ ಬಗ್ಗೆ ಬೊಗಳೆ ಬಿಡುವುದು ಸುಳ್ಳೇನಲ್ಲ!. 
   ವೀರ್ಯ ಸ್ಖಲನದ ಸಮಸ್ಯೆಗಳು 

ಬ್ಬಹುತೇಕ ಪುರುಷರು ಬಯಸುವ ರತಿಕ್ರೀಡೆಯ ಉತ್ತುಂಗ ಸ್ಥಿತಿಯನ್ನು ತಲುಪುವ ತನಕ ವೀರ್ಯಸ್ಖಲನವನ್ನು ಹತೋಟಿಯಲ್ಲಿಡುವ ಅಪೇಕ್ಷೆಯು, ಅನೇಕರಲ್ಲಿ ನಿರಾಸೆಯಲ್ಲಿ ಪರ್ಯವಸಾನವಾಗುವುದುಂಟು. ಈ ಸಮಸ್ಯೆಯಲ್ಲಿ ಶೀಘ್ರ ಸ್ಖಲನ ಹಾಗೂ ವಿಲಂಬಿತ ಸ್ಖಲನ ಅಥವಾ ಸ್ಖಲನದ ಅಭಾವಗಳೆಂದು ಎರಡು ವಿಧಗಳಿವೆ. 

ಸಂಭೋಗದ ಸಮಯದಲ್ಲಿ ಶಿಶ್ನವು ಯೋನಿಯನ್ನು ಪ್ರವೇಶಿಸುವ ಮೊದಲೇ ಅಥವಾ ಪ್ರವೇಶಿಸಿದೊಡನೆ ಆಗುವ ವೀರ್ಯ ಸ್ಖಲನವನ್ನು ಶೀಘ್ರ ಸ್ಖಲನವೆನ್ನುತ್ತಾರೆ. ಅತ್ಯಧಿಕ ಜನರನ್ನು ಬಾಧಿಸುವ ಶೀಘ್ರ ಸ್ಖಲನದ ಸಮಸ್ಯೆಯು ಸಹಸ್ರಾರು ಪುರುಷರ ನಿದ್ರಾಹೀನತೆ ಹಾಗೂ ಮಾನಸಿಕ ಖಿನ್ನತೆಗೆ ಕಾರಣವೆನಿಸಿದೆ. ಆದರೆ ಲೈಂಗಿಕ ವಿಜ್ಞಾನದ ಕಿಂಚಿತ್ ಅರಿವೂ ಇಲ್ಲದ ವಿದ್ಯಾವಂತರೂ, ಈ ಸಮಸ್ಯೆಯನ್ನು ಗಂಭೀರ ಕಾಯಿಲೆಯಂತೆ ಪರಿಗಣಿಸಿ ತಮ್ಮ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. 

ಸಾಮಾನ್ಯವಾಗಿ ರತಿಸುಖದ ಅನುಭವವೇ ಇಲ್ಲದ ಪುರುಷರಿಗೆ ಪ್ರಥಮ ಸಮಾಗಮದ ಸಂದರ್ಭದಲ್ಲಿ ಇರಬಹುದಾದ ಭಯಮಿಶ್ರಿತ ಕುತೂಹಲ, ಒಂದಿಷ್ಟು ಸಂಕೋಚ, ಕಿಂಚಿತ್ ಉದ್ವೆಗದೊಂದಿಗೆ ಅನಿರ್ವಚನೀಯ ಆನಂದದ ಅನುಭವ ಸವಿಯುವ ಕಾತುರವೇ ಶೀಘ್ರ ಸ್ಖಲನಕ್ಕೆ ಕಾರಣವೆನಿಸಬಲ್ಲದು. ಕೆಲವೇ ದಿನ ಅಥವಾ ವಾರಗಳಲ್ಲಿ ತಾನಾಗಿ ಶಮನಗೊಳ್ಳುವ ಈ ಸಮಸ್ಯೆಯನ್ನೇ ಗಂಭೀರವಾಗಿ ಪರಿಗಣಿಸಿದಲ್ಲಿ, ಮಾನಸಿಕ ಒತ್ತಡ ಹೆಚ್ಚಾಗಿ ಇದರ ಪುನರಾವರ್ತನೆಯಾಗುವ ಸಾಧ್ಯತೆಗಳೇ ಹೆಚ್ಚು!. 

ಶೀಘ್ರ ಸ್ಖಲನಕ್ಕೆ ಕಾರಣಗಳೇನು?

ಶಿಶ್ನದ ಬುಡದ ಸುತ್ತಲೂ ಇರುವ ಮಾಂಸಪೇಶಿಗಳು ಅತೀ ಕ್ರಿಯಾಶೀಲವಾಗಿರುವ ಪರಿಣಾಮದಿಂದಾಗಿ ಶೀಘ್ರ ಸ್ಖಲನ ಸಂಭವಿಸುತ್ತದೆ. ಜೊತೆಗೆ ಯಾವುದೇ ವ್ಯಕ್ತಿ ಈ ಪ್ರಕ್ರಿಯೆಯನ್ನು ತಾನು ಬಯಸಿದಂತೆ ಹತೋಟಿಯಲ್ಲಿ ಇರಿಸುವುದು ಅಸಾಧ್ಯವಾಗಿರುವುದೂ ಮುಖ್ಯ ಕಾರಣವೆನ್ನಬಹುದು.

ಇದಲ್ಲದೇ ಕದ್ದುಮುಚ್ಚಿ ನಡೆಸುವ ಸಂಭೋಗ, ಗರ್ಭಧಾರಣೆಯ ಭೀತಿ, ತನ್ನ ಲೈಂಗಿಕ ಸಾಮರ್ಥ್ಯದ ಬಗ್ಗೆ ಇರುವ ಅವಿಶ್ವಾಸ, ಬಾಲ್ಯ- ಹದಿಹರೆಯದಲ್ಲಿ ಇದ್ದಿರಬಹುದಾದ ಅನೈತಿಕ ಸಂಬಂಧಗಳು(ಯಾರಿಗೂ ಪತ್ತೆಯಾಗದಂತೆ ಗುಟ್ಟಾಗಿ ಮತ್ತು ಕ್ಷಿಪ್ರವಾಗಿ ಮುಗಿಸುವ ಸಂಭೋಗ ಕ್ರಿಯೆ) ಮತ್ತು ಸಂಗಾತಿಯೊಂದಿಗೆ ಸಂಬಂಧದ ಸಮಸ್ಯೆಗಳು ಹೆಚ್ಚಾಗಿ ಶೀಘ್ರ ಸ್ಖಲನಕ್ಕೆ ಕಾರಣವೆನಿಸುತ್ತವೆ. ಶೇ. ೩೦ ರಿಂದ ೩೫ ಪುರುಷರಲ್ಲಿ ಕಂಡುಬರುವ ಈ ಸಮಸ್ಯೆಯು, ತನ್ನನ್ನು ಕಾಡುತ್ತಿದೆ ಎಂದು ಹೇಳಲು ಯಾವ ಪುರುಷರೂ ಸಿದ್ಧರಿಲ್ಲ!. 

ವಿಳಂಬಿತ ಸ್ಖಲನ 

ಅತ್ಯಂತ ಅಪರೂಪವಾಗಿರುವ ಈ ಸಮಸ್ಯೆಯಲ್ಲಿ ರತಿಕ್ರೀಡೆಯ ಅಂತ್ಯದಲ್ಲಿ ಸ್ಖಲನವಾಗದಿರುವುದು ಅಥವಾ ವಿಳಂಬವಾಗಿ ವೀರ್ಯ ಸ್ಖಲನವಾಗುವುದು. ಈ ತೊಂದರೆಗೆ ನಿರ್ದಿಷ್ಟ ಕಾರಣಗಳಿಲ್ಲದಿದ್ದರೂ, ಮಾನಸಿಕ ಕಾರಣಗಳಿರುವ ಸಾಧ್ಯತೆಯೇ ಹೆಚ್ಚು. ತನ್ನ ಲೈಂಗಿಕ ಸಾಮರ್ಥ್ಯದ ಬಗ್ಗೆ ಅಧೈರ್ಯ, ಪತಿ- ಪತ್ನಿಯರ ಸಂಬಂಧದಲ್ಲಿ ತೊಡಕುಗಳು, ವೃದ್ಧಾಪ್ಯ, ಕೆಲವೊಂದು ಔಷದಗಳ ಸೇವನೆ, ಹಾರ್ಮೋನ್ ಗಳ ವ್ಯತ್ಯಯ, ಮಧುಮೇಹ ಹಾಗೂ ಸೊಂಟದ ಭಾಗದಲ್ಲಿನ ನರಗಳು ಹಾಗೂ ಮಾಂಸಪೇಶಿಗಳಿಗೆ ಆಗಿರುವ ಆಘಾತ ಮತ್ತು ಶಸ್ತ್ರಚಿಕಿತ್ಸೆಗಳೂ ಇದಕ್ಕೆ ಕಾರಣವೆನಿಸುವ ಸಾಧ್ಯತೆಗಳಿವೆ. ವಿಶೇಷವೆಂದರೆ ಇಂತಹ ವ್ಯಕ್ತಿಗಳಿಗೆ ಮುಷ್ಟಿ ಮೈಥುನ ಅಥವಾ ಮುಖ ಮೈತುನಗಳ ಸಂದರ್ಭಗಳಲ್ಲಿ ಸ್ವಾಭಾವಿಕವಾಗಿ ವೀರ್ಯ ಸ್ಖಲನವಾಗುವುದುಂಟು!. 

ಅನೇಕ ಜನರ ದಾಂಪತ್ಯ ಜೀವನಕ್ಕೆ ಮುಳುವಾಗಿರುವ,ವಿವಾಹ ವಿಚ್ಛೇದನ ಹಾಗೂ ಅನೈತಿಕ ಸಂಬಂಧಗಳಿಗೂ ಕಾರಣವೆನಿಸಿರುವ ಇಂತಹ ಲೈಂಗಿಕ ಸಮಸ್ಯೆಗಳನ್ನು ಸೂಕ್ತ ಸಮಯದಲ್ಲಿ, ತಜ್ಞ ವೈದ್ಯರಿಂದ ಸಮರ್ಪಕ ಚಿಕಿತ್ಸೆಯನ್ನು ಪಡೆದಲ್ಲಿ ಸುಲಭದಲ್ಲೇ ಪರಿಹರಿಸಿಕೊಳ್ಳಬಹುದಾಗಿದೆ. 

ಆದರೆ "ಸ್ವಯಂ ಘೋಷಿತ ಲೈಂಗಿಕ ತಜ್ಞ "ರು ಈ ಸಮಸ್ಯೆಯನ್ನೇ ಭೀಕರವಾಗಿ ಚಿತ್ರಿಸಿ, ಅಮಾಯಕರಿಂದ ಸಹಸ್ರಾರು ರೂಪಾಯಿಗಳನ್ನು ಸುಲಿಗೆ ಮಾಡುತ್ತಾರೆ. ಈ ಸಮಸ್ಯೆಯ ಮೂಲ ಕಾರಣವನ್ನು ಪತ್ತೆಹಚ್ಚಿ ಸುಲಭದಲ್ಲೇ ಪರಿಹರಿಸಬಹುದಾಗಿದೆ. ಇದಕ್ಕೆ ಮಾನಸಿಕ ಒತ್ತಡ ಕಾರಣವಾಗಿದ್ದಲ್ಲಿ ಆಪ್ತ ಸಂವಾದದ ಮೂಲಕ,  ಯಾವುದೇ ಔಷದಗಳನ್ನು ಸೇವಿಸದೇ ಬಗೆಹರಿಸಬಹುದು. 

ಚಿಕಿತ್ಸೆ ಅವಶ್ಯಕವೇ?

ಮನುಷ್ಯನ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಮೊದಲು ಕಾಯಿಲೆಯನ್ನು ನಿಖರವಾಗಿ ಪತ್ತೆಹಚ್ಚುವುದು ಮತ್ತು ಇದರ ಮೂಲಕಾರಣವನ್ನು ಕಂಡುಹಿಡಿಯುವುದು ಅತ್ಯಗತ್ಯ. ಇದೇ ಕಾರಣದಿಂದಾಗಿ ಲೈಂಗಿಕ ಸಮಸ್ಯೆಗಳಲ್ಲಿ ಮಾನಸಿಕ ಕಾರಣಗಳಿಂದ ಉದ್ಭವಿಸಿರುವ ಸಮಸ್ಯೆಗಳಿಗೆ, ನೀವು ಜಾಹೀರಾತುಗಳಲ್ಲಿ ಕಂಡಿರಬಹುದಾದ ಅದ್ಭುತ ಲೈಂಗಿಕ ಶಕ್ತಿವರ್ಧಕಗಳು ಅಥವಾ ವಯಾಗ್ರಾ ದಂತಹ ಮಾತ್ರೆಗಳು ಯಾವುದೇ ಪರಿಣಾಮವನ್ನು ನೀಡಲಾರವು. ಆದರೆ ಶಾರೀರಿಕ ಕಾರಣಗಳಿಂದ ಉಂಟಾದ ಸಮಸ್ಯೆಗಳಲ್ಲಿ ಕೆಲವೊಮ್ಮೆ ನಿಮ್ಮ ಆತ್ಮವಿಶ್ವಾಸವೇ ನಶಿಸಿರುವ ಸಾಧ್ಯತೆಗಳಿರುವುದರಿಂದ, ಅವಶ್ಯಕ ಔಷದಗಳೊಂದಿಗೆ ಮಾನಸಿಕ ತಜ್ಞರ ಅಥವಾ ಆಪ್ತ ಸಂವಾದಕರ ಚಿಕಿತ್ಸೆಯೂ ಅವಶ್ಯಕವೆನಿಸಬಹುದು. ಉದಾಹರಣೆಗೆ ನಿಮ್ಮ ಶರೀರದಲ್ಲಿ ಉತ್ಪನ್ನವಾಗುವ ಟೆಸ್ಟೋಸ್ಟೆರಾನ್ ಹಾರ್ಮೋನ್ ನ ಪ್ರಮಾಣವು ತೀವ್ರವಾಗಿ ಕಡಿಮೆಯಿದ್ದಲ್ಲಿ, ಸ್ವಯಂ ಚಿಕಿತ್ಸೆಯ ಅಂಗವಾಗಿ ನೀವು ಸೇವಿಸುವ "ಲೈಂಗಿಕ ಶಕ್ತಿವರ್ಧಕ"ಗಳು ನಿರೀಕ್ಷಿತ ಪರಿಣಾಮವನ್ನು ಬೀರಲಾರವು. ತತ್ಪರಿಣಾಮವಾಗಿ ಉದ್ಭವಿಸಬಲ್ಲ ಮಾನಸಿಕ ಒತ್ತಡ ಅತಿಯಾದಲ್ಲಿ, ನಿಮಗೆ ಹಾರ್ಮೋನ್ ಚಿಕಿತ್ಸೆಯೊಂದಿಗೆ ಮಾನಸಿಕ ತಜ್ಞರ ಅಥವಾ ಆಪ್ತ ಸಂವಾದಕರ ಚಿಕಿತ್ಸೆಯನ್ನೂ ನೀಡಬೇಕಾಗುವುದು. 

ಕಾಮಾಸಕ್ತಿಯ ಕೊರತೆ, ನಿಮಿರು ದೌರ್ಬಲ್ಯ ಮತ್ತು ಶೀಘ್ರ ಸ್ಖಲನಗಳಿಗೆ ಅತ್ಯುತ್ತಮ ಚಿಕಿತ್ಸೆ ಲಭ್ಯವಿದೆ. ಮಾತ್ರೆಗಳು,ಕ್ಯಾಪ್ಸೂಲ್ ಗಳು, ಹಾರ್ಮೋನ್ ಇಂಜೆಕ್ಷನ್ ಗಳು, ವಿವಿಧ ರೀತಿಯ ರೇಚಕಗಳು,ಶಿಶ್ನಕ್ಕೆ ನೀಡುವ ಇಂಜೆಕ್ಷನ್ ಗಳು ಮತ್ತು ಶಿಶ್ನದಲ್ಲಿ ಇರಿಸಬಹುದಾದ ನಿಮಿರುಕಾರಕಗಳೇ ಮುಂತಾದ ವೈವಿಧ್ಯಮಯ ಚಿಕಿತ್ಸೆಗಳೂ ಇವೆ. 


ಲೈಂಗಿಕ ಸಮಸ್ಯೆಗಳು ಆರಂಭವಾದೊಡನೆ ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಈ ಬಗ್ಗೆ ಸಂವಾದ ನಡೆಸುವುದು ಹಿತಕರ. ಅಂತೆಯೇ ನಿಮ್ಮ ನಂಬಿಗಸ್ತ ಕುಟುಂಬ ವೈದ್ಯರ ಸಲಹೆ ಪಡೆದು, ಸಂದರ್ಭೋಚಿತವಾಗಿ ಸೂಕ್ತ ತಜ್ಞ ವೈದ್ಯರ ಚಿಕಿತ್ಸೆ ಪಡೆಯುವುದು ಉತ್ತಮ. 

ನಿಮ್ಮ ಸಮಸ್ಯೆಗಳಿಗೆ ಕಾರಣವಾಗಿರಬಹುದಾದ ವಿವಿಧ ಕಾಯಿಲೆಗಳ ಸಮರ್ಪಕ ನಿಯಂತ್ರಣ, ಶಾರೀರಿಕ ವ್ಯಾಯಾಮ- ಕ್ರೀಡೆಗಳಲ್ಲಿ ಭಾಗವಹಿಸುವುದು, ಮಾನಸಿಕ ನೆಮ್ಮದಿಗಾಗಿ ಧ್ಯಾನ- ಯೋಗ ಹಾಗೂ ಸಂಗೀತಗಳಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕ. ಮಾದಕ ದ್ರವ್ಯಗಳ ಸೇವನೆ, ಅತಿ ಮದ್ಯ- ಧೂಮಪಾನಗಳ ವರ್ಜನೆ ಚಿಕಿತ್ಸೆಯ ಪ್ರಾಥಮಿಕ ಅವಶ್ಯಕತೆಯೂ ಹೌದು. ಜೀವನ ಶೈಲಿ ಹಾಗೂ ಆಹಾರ ಸೇವನಾ ಶೈಲಿಗಳಲ್ಲಿ ಅವಶ್ಯಕ ಬದಲಾವಣೆ ಅನಿವಾರ್ಯ. ಇವೆಲ್ಲವುಗಳೊಂದಿಗೆ ತಜ್ಞ ವೈದ್ಯರು ಸೂಚಿಸಿದ ಔಷದಗಳನ್ನು ಕ್ರಮಬದ್ಧವಾಗಿ ಸೇವಿಸುವುದು ನಿಶ್ಚಿತವಾಗಿಯೂ ಅಪೇಕ್ಷಿತ ಪರಿಣಾಮವನ್ನು ನೀಡಬಲ್ಲದು.  

ವೃದ್ಧಾಪ್ಯ ಮತ್ತು ಕಾಮೇಚ್ಛೆ 

"ಹುಣಸೇಮರ ಮುಪ್ಪಾದರೂ ಹುಳಿ ಮುಪ್ಪಾಗದು" ಎಂಬ ಗಾದೆಮಾತು ಅನೇಕ ವೃದ್ಧರ ಲೈಂಗಿಕ ಆಸಕ್ತಿ ಮತ್ತು ಚಟುವಟಿಕೆಗಳಿಗೆ ನೇರವಾಗಿ ಅನ್ವಯಿಸುವುದು ನಿಜ. ವೃದ್ಧಾಪ್ಯದಲ್ಲೂ ಶಾರೀರಿಕ ಮತ್ತು ಲೈಂಗಿಕ ಆರೋಗ್ಯಗಳು ಅತ್ಯುತ್ತಮವಿರುವ ವ್ಯಕ್ತಿಗಳ ಬಗ್ಗೆ "ಮಗಳಿಗೆ ಮದುವೆಯಾದರೂ, ಮುದುಕನಿಗೆ ರತಿಕ್ರೀಡೆಯ ಹುಚ್ಚು ಬಿಟ್ಟಿಲ್ಲ" ಎಂದು ಇಂಥವರ ಪತ್ನಿಯರೇ ಹೇಳುವುದುಂಟು!. 

ಭಾರತೀಯ ನಾರಿಯರು ಮಾಸಿಕ ರಜೋಸ್ರಾವ ನಿಂತೊಡನೆ ತಮ್ಮ ಸುರತ ಸುಖಕ್ಕೆ ವಿದಾಯ ಹೇಳುವುದು ಸಹಜ. ಆದರೆ ೬೦ ವರ್ಷ ವಯಸ್ಸಿನಲ್ಲೂ ಕ್ರಮಬದ್ಧವಾಗಿ ಮುಟ್ಟಾಗುವ ಸ್ತ್ರೀಯರೂ ಕಾಮಾಸಕ್ತಿ ಕಳೆದುಕೊಳ್ಳುವುದು ಕೂಡಾ ಅಪರೂಪವೇನಲ್ಲ. 

ಆದರೆ ಆರೋಗ್ಯವಂತ ಪುರುಷರಲ್ಲಿ ವಯಸ್ಸಾದಂತೆಯೇ ಕಾಮೇಚ್ಛೆ ಹೆಚ್ಚುವ ಸಾಧ್ಯತೆಗಳೂ ಇವೆ. ಈ ಸಂದರ್ಭದಲ್ಲಿ ವಯಸ್ಸಾದ ಪತ್ನಿಗೆ ರಜೋಸ್ರಾವ ನಿಂತ ಕಾರಣದಿಂದಾಗಿ ಸಂಭೋಗದ ಸಮಯದಲ್ಲಿ ಒಂದಿಷ್ಟು ನೋವು ಬಾಧಿಸಬಹುದು. ಇದರ ನಿವಾರಣೆಗಾಗಿ ವೈದ್ಯರು ಸೂಚಿಸುವ ಮುಲಾಮುಗಳನ್ನು ಬಳಸಿ, ವೇದನಾ ರಹಿತ ಸುರತ ಸುಖವನ್ನು ಅನುಭವಿಸುವುದು ಸುಲಭ ಸಾಧ್ಯ. 

ಸ್ತ್ರೀ-ಪುರುಷರಿಬ್ಬರೂ ತಮ್ಮ ವಯಸ್ಸು ಹಾಗೂ ತಮ್ಮ ಶರೀರ ಮತ್ತು ಮನಸ್ಸುಗಳು ಬಯಸುವ ಸುರತ ಸುಖಕ್ಕೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಇಂತಹ ಕ್ಷುಲ್ಲಕ ಕಾರಣಗಳಿಂದ ದಾಂಪತ್ಯ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದು ಸರಿಯಲ್ಲ ಎನ್ನುವುದನ್ನು ಮರೆಯದಿರಿ. 

ಅಂತಿಮವಾಗಿ ಆರೋಗ್ಯಕರ ಜೀವನ ಶೈಲಿಯನ್ನು ಪರಿಪಾಲಿಸುವ, ದೈಹಿಕ ಹಾಗೂ ಮಾನಸಿಕ ಕ್ಷಮತೆಗಳ ಮಟ್ಟ ಉತ್ತಮವಾಗಿರುವ, ಪರಸ್ಪರ ಹೊಂದಾಣಿಕೆ ತೃಪ್ತಿಕರವಾಗಿರುವ ದಂಪತಿಗಳಲ್ಲಿ ಲೈಂಗಿಕ ಸಮಸ್ಯೆಗಳು ಕಂಡುಬರುವುದಿಲ್ಲ ಎನ್ನುವುದು ನೆನಪಿರಲಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೮-೧೨-೨೦೦೩ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 


Wednesday, October 23, 2013

Paripoorna purushatvavannu padeyiri-Be a Macho man!



                      ಪರಿಪೂರ್ಣ ಪುರುಷತ್ವವನ್ನು ಪಡೆಯಿರಿ! ಭಾಗ-೧

ತಮ್ಮ ಪುರುಷತ್ವದ ಬಗ್ಗೆ ಅಂಧಾಭಿಮಾನವಿರುವ ಗಂಡಸರು, ತತ್ ಸಂಬಂಧಿತ ಸಮಸ್ಯೆಗಳು ಉದ್ಭವಿಸಿದಾಗ ಮುಚ್ಚಿಡುವುದೇ ಹೆಚ್ಚು!. ಈ ಬಗ್ಗೆ ತಮ್ಮ ಚಿರಪರಿಚಿತ ಕುಟುಂಬ ವೈದ್ಯರ ಸಲಹೆ ಪಡೆಯಲೂ ನಾಚಿಕೊಂಡು, ಸ್ವಯಂಘೋಷಿತ ಲೈಂಗಿಕ ತಜ್ಞರ ಬಳಿ ತೆರಳಿ ತಲೆಬೋಳಿಸಿಕೊಳ್ಳುವುದು ಸತ್ಯ. ಇಂತಹ ಪ್ರಮಾದಗಳು ಘಟಿಸದಂತೆ, ಪುರುಷರ ಲೈಂಗಿಕ ಸಮಸ್ಯೆಗಳ ಬಗ್ಗೆ ನಿಮಗೊಂದಿಷ್ಟು "ಸತ್ಯ ಸಂಗತಿ" ಗಳನ್ನು ತಿಳಿಸುವ ಪ್ರಯತ್ನವಿದು. 
-------------            --------------------              ------------------                    ------------------             ---------------            ------------------

ಅಮಾಯಕ ಜನರನ್ನೇ ಗುರಿಯಾಗಿಸಿ ನಕಲಿವೈದ್ಯರು ದಿನಪತ್ರಿಕೆಗಳಲ್ಲಿ ನೀಡುವ, ಈ ಲೇಖನದ ತಲೆಬರಹವನ್ನೇ ಹೋಲುವ ವೈವಿಧ್ಯಮಯ ಜಾಹೀರಾತುಗಳನ್ನು ನೀವು ಓದಿರಲೇಬೇಕು. ಪ್ರಸ್ತುತ ಈ ಲೇಖನದ ತಲೆಬರಹವನ್ನು ಕಂಡೊಡನೆ ಇದುವರೆಗೆ ಈ ಪುಟದತ್ತ ಕಣ್ಣು ಹಾಯಿಸದವರೂ ಕುತೂಹಲದಿಂದ ಇದನ್ನು ಓದುತ್ತಿರುವುದು ನಿಜವಾಗಿರಲೇಬೇಕು. 
ನಕಲಿವೈದ್ಯರು ನೀಡುವ ಜಾಹೀರಾತುಗಳಲ್ಲಿ ಹೆಚ್ಚಾಗಿ ಬಳಸುವ ನರದೌರ್ಬಲ್ಯ,ನಿಶ್ಶಕ್ತಿ,ಸ್ವಪ್ನಸ್ಖಲನ, ಶೀಘ್ರ ಸ್ಖಲನ, ತಾರುಣ್ಯ ನಾಶ(?) ದಂತಹ ಪದಗಳ ಅರ್ಥವನ್ನೇ ಅರಿಯದ ಮುಗ್ಧರು, ಸ್ವಯಂ ಘೋಷಿತ ಲೈಂಗಿಕ ತಜ್ಞರ ಬಲಿಪಶುಗಳಾಗುತ್ತಿದ್ದಾರೆ. ಆರೋಗ್ಯವಂತರಿಗೂ ತಮ್ಮ ಪುರುಷತ್ವದ ಬಗ್ಗೆ ಸಂದೇಹ ಮೂಡಿಸಬಲ್ಲ ನಕಲಿವೈದ್ಯರ ಪದವೈಭವಗಳಿಗೆ ಮರುಳಾಗಿ ಕಪೋಲಕಲ್ಪಿತ ಕಾಯಿಲೆಗಳ ಚಿಕಿತ್ಸೆಗಾಗಿ ಸಹಸ್ರಾರು ರೂಪಾಯಿಗಳನ್ನು ಅನಾವಶ್ಯಕವಾಗಿ ವ್ಯಯಿಸದಿರಿ. ಇದರೊಂದಿಗೆ ನಿಮ್ಮ ಶಾರೀರಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗಳನ್ನು ಕಳೆದುಕೊಳ್ಳದಿರಿ. 

ಸಮಸ್ಯೆಗಳ ಮೂಲ 
ಹದಿಹರೆಯಕ್ಕೆ ಕಾಲಿರಿಸಿದೊಡನೆ ಕಂಡುಬರುವ ಶಾರೀರಿಕ ಬದಲಾವಣೆಗಳೊಂದಿಗೆ ಪ್ರಾರಂಭವಾಗುವ ಕಾಮಾಸಕ್ತಿಯು, ವಿರುದ್ಧಲಿಂಗಿಗಳ ಬಗ್ಗೆ ಕುತೂಹಲಭರಿತ ಆಕರ್ಷಣೆಗೆ ಕಾರಣವೆನಿಸುವುದು. ಇದರೊಂದಿಗೆ ಮನದಲ್ಲಿ ಮೂಡುವ ಅವ್ಯಕ್ತ ಭಾವನೆಗಳು, ಸಂದೇಹಗಳು ಅನೇಕ ತಪ್ಪು ಕಲ್ಪನೆಗಳಿಗೆ ಸೂಕ್ತ ಸಮಾಧಾನ ದೊರೆಯದೆ ಮತ್ತಷ್ಟು ಸಮಸ್ಯೆಗಳಿಗೆ ಆಸ್ಪದ ನೀಡುವುದು ಸಾಮಾನ್ಯವೆನಿಸಿದೆ. ಈ ಸಂದರ್ಭದಲ್ಲಿ ಲೈಂಗಿಕ ವಿಷಯಗಳನ್ನು ಅರಿತುಕೊಳ್ಳುವ ಬಯಕೆಯಿಂದ ಬಹುತೇಕ ಜನರು ಓದುವ ಕಳಪೆ ದರ್ಜೆಯ ಅಶ್ಲೀಲ ಸಾಹಿತ್ಯ ಮತ್ತು ವೀಕ್ಷಿಸುವ "ನೀಲಿ ಚಿತ್ರಗಳು", ಲೈಂಗಿಕ ವಿಜ್ಞಾನದ ಬಗ್ಗೆ ಪ್ರಾಥಮಿಕ ಮಾಹಿತಿಯನ್ನೂ ನೀಡುವುದೇ ಇಲ್ಲ!. ತತ್ಪರಿಣಾಮವಾಗಿ ತಮಗೆ ಲಭ್ಯವಾದ ಮಾಹಿತಿಯನ್ನೇ ನಿಜವೆಂದು ಭ್ರಮಿಸಿ, ಮುಂದೆ ನಿಜಜೀವನದಲ್ಲಿ ಅನೇಕರು ಅಯಾಚಿತ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಈ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೆ ತರುವುದು ಹಿತಕರ. ಭಾರತೀಯ ಸಂಸ್ಕೃತಿಯಲ್ಲಿ ಈ ವಿಷಯದ ಬಗ್ಗೆ ಮುಕ್ತವಾಗಿ ಚರ್ಚಿಸುವ ಕಾರಣದಿಂದಾಗಿ, ಅನೇಕ ವಿದ್ಯಾವಂತ ವಿವಾಹಿತರಿಗೂ ಸಂತಾನೋತ್ಪತ್ತಿಗೆ ಸ್ತ್ರೀ- ಪುರುಷ ಸಮಾಗಮ ಅವಶ್ಯಕವೆನ್ನುವ ಅರಿವೇ ಇಲ್ಲ!. ಜಗತ್ಪ್ರಸಿದ್ಧ "ಕಾಮಸೂತ್ರ" ದ ಲೇಖಕ ವಾತ್ಸಾಯನನ ತವರಿನಲ್ಲಿ "ಲೈಂಗಿಕ ಅಜ್ಞಾನ" ಅತ್ಯಧಿಕ ಪ್ರಮಾಣದಲ್ಲಿರುವುದು ಎಂತಹ ವಿಪರ್ಯಾಸ. 

ಶ್ರೀನಿವಾಸನಿಗೆ ಏನಾಗಿತ್ತು?

ಆಗರ್ಭ ಶ್ರೀಮಂತ ಶ್ರೀಧರ ರಾಯರ ಏಕಮಾತ್ರ ಪುತ್ರ ಶ್ರೀನಿವಾಸನಿಗೆ ಅಪ್ರತಿಮ ಸುಂದರಿ ಅಪರ್ಣಾಳೊಂದಿಗೆ ವಿವಾಹ ನೆರವೇರಿತ್ತು. ಎರಡು ವಾರಗಳ ಮಧುಚಂದ್ರಕ್ಕಾಗಿ ದಂಪತಿಗಳು ಸಿಂಗಾಪುರಕ್ಕೆ ಹಾರಿದ್ದರು. 
ಪ್ರಥಮ ರಾತ್ರಿಯ ಬಗ್ಗೆ ಬಹಳಷ್ಟು ಕನಸು ಕಂಡಿದ್ದ ಶ್ರೀನಿವಾಸನ ಕಲ್ಪನೆಯಲ್ಲಿ ಸಾಕಷ್ಟು ಉತ್ಪ್ರೇಕ್ಷೆಯೂ ಇದ್ದಿತು. ಪ್ರಥಮ ಸಮಾಗಮದ ಪ್ರಯತ್ನದಲ್ಲೇ ಆತನಿಗೆ ಶೀಘ್ರ ಸ್ಖಲನವಾಗಿತ್ತು. ಮುಂದಿನ ಆರೇಳು ದಿನಗಳಲ್ಲಿ ಇದೇ ಸಮಸ್ಯೆಯ ಪುನರಾವರ್ತನೆಯಾಗಿತ್ತು. ಮಧುಚಂದ್ರ ಮುಗಿಸಿ ಮನೆಗೆ ಮರಳಿದ ಶ್ರೀನಿವಾಸನ ಮನದಲ್ಲಿ ತನ್ನ ಪುರುಷತ್ವದ ಬಗ್ಗೆ ಒಂದಿಷ್ಟು ಸಂದೇಹವೂ ಮೂಡಿತ್ತು. 
ಪತಿಪತ್ನಿಯರಲ್ಲಿ ಸಾಕಷ್ಟು ಆತ್ಮೀಯತೆ ಮೂಡಲು ಸಂಕೋಚವೂ ಕಾರಣವೆನಿಸಿದ್ದುದರಿಂದ ತನ್ನ ಸಮಸ್ಯೆಯ ಬಗ್ಗೆ ಪತ್ನಿಯ ಬಳಿ ಚರ್ಚಿಸಲು ನಾಚಿ, ತನ್ನ ಚಡ್ಡಿ ದೋಸ್ತಿ ಸಂದೀಪನಲ್ಲಿ ವಿಷಯವನ್ನು ಪ್ರಸ್ಥಾಪಿಸಿದ್ದನು. ವಿಷಯವರಿತ ಸ್ನೇಹಿತನು ತಕ್ಷಣ ಆತನನ್ನು "ಲೈಂಗಿಕ ತಜ್ಞ" ರ ಬಾಲಿ ಕರೆದೊಯ್ದನು. 
ರೋಗಿಯನ್ನು ಪರೀಕ್ಷಿಸಿದ ನಾಟಕವಾಡಿದ ಈ ನಕಲಿ ವೈದ್ಯನು ಶ್ರೀನಿವಾಸನಿಗಿದ್ದ ಮುಷ್ಟಿಮೈಥುನದ ಚಟವೇ ಆತನ ಸಮಸ್ಯೆಗೆ ಕಾರಣ ಹಾಗೂ ಇದರ ಪರಿಣಾಮವಾಗಿ ಆತನಿಗೆ "ತಾರುಣ್ಯ ನಾಶ"ದ ಸಮಸ್ಯೆ ಪೀಡಿಸುವ ಸಾಧ್ಯತೆಯೂ ಇದೆ ಎಂದಿದ್ದನು. ಆರು ತಿಂಗಳುಗಳಲ್ಲಿ ಗುಣವಾಗುವ ಚಿಕಿತ್ಸೆಗೆ ಕೇವಲ ೩೦ ಸಾವಿರ ರೂಪಾಯಿ ವೆಚ್ಚವಾಗಲಿತ್ತು. ಐದು ಸಾವಿರ ನೀಡಿ ಒಂದು ತಿಂಗಳ ಔಷದವನ್ನು ಪಡೆದು ಹಿಂದಿರುಗಿದ ಶ್ರೀನಿವಾಸನಿಗೆ ಮೂರು ವಾರಗಳ ಔಷದ ಸೇವನೆಯ ಬಳಿಕವೂ ನಿರೀಕ್ಷಿತ ಫಲ ದೊರೆಯಲಿಲ್ಲ. ಇದೇ ಕಾರಣದಿಂದಾಗಿ ಹಗಲಿರುಳು ಗುಮ್ಮನಂತೆ ಕಾಡುತ್ತಿದ್ದ ಸಮಸ್ಯೆಗಳು ಇದೀಗ ಮಾನಸಿಕ ಖಿನ್ನತೆಗೂ ಕಾರಣವಾಯಿತು. ಪುತ್ರನ ಮಾನಸಿಕ ಖಿನ್ನತೆಗೆ ಕಾರಣವರಿಯದ ಶ್ರೀಧರ ರಾಯರು, ತಮ್ಮ ಕುಟುಂಬ ವೈದ್ಯರ ಸಲಹೆಯಂತೆ ಮಾನಸಿಕ ತಜ್ಞರ ಬಳಿಗೆ ಮಗನನ್ನು ಕರೆದೊಯ್ದರು. 
ಶ್ರೀನಿವಾಸನೊಂದಿಗೆ ಏಕಾಂತದಲ್ಲಿ ಆಪ್ತ ಸಂವಾದ ನಡೆಸಿದ ಮನೋವೈದ್ಯರಿಗೆ, ಸಮಸ್ಯೆಯ ಮೂಲ ಪತ್ತೆಯಾಗಿತ್ತು. ಇದನ್ನು ಬಗೆಹರಿಸಲು ಶ್ರೀನಿವಾಸನು ತನ್ನ ಪತ್ನಿಯೊಂದಿಗೆ ಓದಲೇಬೇಕಾದ ಲೈಂಗಿಕ ವಿಜ್ಞಾನದ ಪುಸ್ತಕವನ್ನು ನೀಡಿದ ವೈದ್ಯರು,ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ್ದರು. ಅಂತೆಯೇ ಆತನ ಮಾನಸಿಕ ನೆಮ್ಮದಿಗಾಗಿ ಒಂದಿಷ್ಟು ಔಷದ ರಹಿತ(Placebo) ಗುಳಿಗೆಗಳನ್ನು ನೀಡಿ, ಕ್ಷಿಪ್ರಗತಿಯಲ್ಲಿ ಪರಿಣಾಮ ನೀಡುವ ಅದ್ಭುತ ಔಷದವಿದು ಎಂದು ಭರವಸೆಯನ್ನೂ ನೀಡಿದರು. 
ಮೂರು ವಾರಗಳ ಬಳಿಕ ಪತ್ನಿಯೊಂದಿಗೆ ವೈದ್ಯರಲ್ಲಿಗೆ ಬಂದಿದ್ದ ಶ್ರೀನಿವಾಸನ ಸಮಸ್ಯೆ ಪರಿಹಾರವಾಗಿರುವುದು, ಇವರಿಬ್ಬರ ಮುಖಭಾವದಿಂದಲೇ ವೈದ್ಯರಿಗೆ ತಿಳಿಯಿತು. 
ಬಹುತೇಕ ಜನರಲ್ಲಿ ವೈವಾಹಿಕ ಜೀವನದ ಪ್ರಾರಂಭಿಕ ಹಂತದಲ್ಲಿ ಕಂಡುಬರುವ ಶೀಘ್ರ ಸ್ಖಲನ ನಿಶ್ಚಿತವಾಗಿಯೂ ಮುಷ್ಟಿ ಮೈಥುನದ ದುಷ್ಪರಿಣಾಮವಲ್ಲ. ತಾರುಣ್ಯದಲ್ಲಿ ಸ್ತ್ರೀ ಸಂಗದ ಬಗ್ಗೆ ಇರುವ ಅತ್ಯಾಸಕ್ತಿ ಹಾಗೂ ಉದ್ವೇಗಗಳು ಕಾಲಕ್ರಮೇಣ ಹತೋಟಿಗೆ ಬಂದಂತೆ ಮತ್ತು ಪತಿ ಪತ್ನಿಯರ ಅನ್ಯೋನ್ಯತೆ ಹೆಚ್ಚಿದಂತೆ ಇಂತಹ ಕ್ಷುಲ್ಲಕ ಸಮಸ್ಯೆಗಳು ಸ್ವಾಭಾವಿಕವಾಗಿ ಮಾಯವಾಗುತ್ತವೆ. ಅಂತೆಯೇ ಇದಕ್ಕೆ ಚಿಕಿತ್ಸೆ ಇಲ್ಲ ಹಾಗೂ ಚಿಕಿತ್ಸೆಯ ಅವಶ್ಯಕತೆಯೂ ಇಲ್ಲ. ಏಕೆಂದರೆ ಇದೊಂದು ಕಾಯಿಲೆಯೇ ಅಲ್ಲ!. 

ಸಮಸ್ಯೆಗಳ ವೈವಿಧ್ಯ 
ಪುರುಷರ ಲೈಂಗಿಕ ಸಮಸ್ಯೆಗಳನ್ನು ಮೂರು ವಿಧಗಳನ್ನಾಗಿ ವಿಂಗಡಿಸಬಹುದು. ಕಾಮಾಸಕ್ತಿಯ ಕೊರತೆ ಅಥವಾ ಅಭಾವ,ನಿಮಿರು ದೌರ್ಬಲ್ಯ ಹಾಗೂ ನಪುಂಸಕತ್ವ ಮತ್ತು ವೀರ್ಯ ಸ್ಖಲನದ ತೊಂದರೆಗಳೆಂದು ಗುರುತಿಸಲ್ಪಟ್ಟಿರುವ ಈ ಸಮಸ್ಯೆಗಳು ಯೌವ್ವನ, ಮಧ್ಯವಯಸ್ಸು ಹಾಗೂ ವೃದ್ಧಾಪ್ಯಗಳಲ್ಲಿ ಆಕಸ್ಮಿಕವಾಗಿ ಅಥವಾ ನಿಧಾನವಾಗಿ ಸಂಭವಿಸುವ ಸಾಧ್ಯತೆಗಳಿವೆ. ಶಾರೀರಿಕ ಅಥವಾ ಮಾನಸಿಕ ಕಾರಣಗಳಿಂದ ಉದ್ಭವಿಸಬಲ್ಲ ಇಂತಹ ಸಮಸ್ಯೆಗಳು, ಕೆಲವೊಮ್ಮೆ ತಾತ್ಕಾಲಿಕವಾಗಿ ಆರೋಗ್ಯವಂತರನ್ನೂ ಬಾಧಿಸುವುದುಂಟು. 

ಕಾಮಾಸಕ್ತಿಯ ಕೊರತೆ ಅನೇಕರಲ್ಲಿ ಅಪರೂಪದಲ್ಲಿ ಕಂಡುಬರುವ ಸ್ತ್ರೀ ಸಂಗದ ಬಗ್ಗೆ ಅನಾಸಕ್ತಿಗೆ ಅನೇಕ ಕಾರಣಗಳಿವೆ. ಈ ಸಮಸ್ಯೆಗಳಿಗೆ ಆಯಾ ವ್ಯಕ್ತಿಯ ವೈಯ್ಯುಕ್ತಿಕ ಅಥವಾ ಸಂಗಾತಿಯೊಂದಿಗೆ ಇರಲೇಬೇಕಾದ ಪರಸ್ಪರ ಹೊಂದಾಣಿಕೆಯ ತೊಂದರೆಗಳೂ ಕಾರಣವೆನಿಸಬಹುದು. ಕಾಮಾಸಕ್ತಿಯ ಕೊರತೆಗೆ ಪ್ರಮುಖವಾಗಿ ರತಿಕ್ರೀಡೆಯಲ್ಲಿ ಸಂಪೂರ್ಣ ನಿರಾಸಕ್ತಿ ಹಾಗೂ ಸ್ತ್ರೀ ಶರೀರದ ಬಗ್ಗೆ, ಅದರಲ್ಲೂ ಸ್ತ್ರೀಯರ ಪ್ರಜನನಾಂಗಗಳ ಬಗ್ಗೆ ಇರುವ ಅಸಹ್ಯಕರ ಭಾವನೆಗಳು ಮತ್ತು ದ್ವೇಷ  ಕಾರಣವಾಗಿರುತ್ತವೆ.ಶೇ. ೧೨ ರಿಂದ ೧೮ ರಷ್ಟು ಪುರುಷರಲ್ಲಿ ಕಂಡುಬರುವ ಈ ಸಮಸ್ಯೆಗೆ ನಿರ್ದಿಷ್ಟ ಕಾರಣ ಹಾಗೂ ಸೂಕ್ತ ಚಿಕಿತ್ಸೆಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ ಇದುವರೆಗೆ ಗುರುತಿಸಿರುವ ಕಾರಣಗಳಲ್ಲಿ ಮಾನಸಿಕ ಕಾರಣಗಳು ಹಾಗೂ ಶಾರೀರಿಕ ಪ್ರಕ್ರಿಯಗಳಲ್ಲಿನ ಲೋಪದೋಷಗಳು ಪ್ರಮುಖವಾಗಿವೆ. ಇದಲ್ಲದೆ ಪತಿ ಪತ್ನಿಯರ ಸಂಬಂಧದಲ್ಲಿನ ತೊಂದರೆಗಳು, ಕೇವಲ ಒಬ್ಬ ಸಂಗಾತಿಯ ಅಂಗಸಂಗದಿಂದ ಉಂಟಾಗಬಲ್ಲ ನಿರಾಸಕ್ತಿ, ಅತಿಆಯಾಸ, ತೀವ್ರ ಮಾನಸಿಕ ಒತ್ತಡ ಮತ್ತು ಟೆಸ್ಟೋ ಸ್ಟೆರಾನ್ ಹಾರ್ಮೋನ್ ನ ಕೊರತೆಯೂ ಕಾರಣವಾಗುತ್ತವೆ. 
ನರಹರಿಯ ನಪುಂಸಕತ್ವ

ಮಾತಾಪಿತರ ಒತ್ತಾಯಕ್ಕೆ ಮಣಿದು ವಸುಧಾಳನ್ನು ವಿವಾಹವಾಗಿದ್ದ ನರಹರಿಯು, ತನ್ನ ಪತ್ನಿಯನ್ನು ದ್ವೇಷಿಸುತ್ತಿದ್ದನು. ಹದಿಹರೆಯದಲ್ಲೇ ಮನೆಗೆಲಸದ ಹುಡುಗಿಯೊಡನೆ ಅನೈತಿಕ ಸಂಬಂಧ ಬೆಳೆಸಿದ್ದ ಈ ಅತಿಕಾಮಿಗೆ, ಪತ್ನಿಯೊಂದಿಗೆ ಶಾರೀರಿಕ ಸಂಬಂಧ ಇಷ್ಟವಿರಲಿಲ್ಲ. ವಿವಾಹವಾಗಿ ತಿಂಗಳುಗಳೇ ಕಳೆದರೂ ಪತಿಗೆ ತನ್ನ ದೇಹಸುಖದ ಅಪೇಕ್ಷೆ ಇಲ್ಲದಿರಲು ಕಾರಣವೇನೆಂದು ವಸುಧಾಳಿಗೂ ತಿಳಿದಿರಲಿಲ್ಲ. ಅಂತಿಮವಾಗಿ ಸ್ತ್ರೀ ಸಹಜ ಲಜ್ಜೆಯನ್ನು ಹಾಗೂ ಸಂಕೋಚಗಳನ್ನು ತೊರೆದು, ತಾನಾಗಿಯೇ ಒಂದಿಷ್ಟು ಮುಂದುವರೆದಾಗ ನರಹರಿಯ ಶಿಶ್ನ ನಿಮಿರಲೇ ಇಲ್ಲ. ಭ್ರಮಾಧೀನಳಾದ ಆಕೆ ಇರುಳಿಡೀ ನಿದ್ರಿಸಲಿಲ್ಲ. 
ಅದೊಂದುದಿನ ಆಕಸ್ಮಿಕವಾಗಿ ಮನೆಯ ಹಿಂದಿನ ಹಟ್ಟಿಗೆ ಕಟ್ಟಿಗೆ ತರಲೆಂದು ಹೋಗಿದ್ದ ವಸುಧಾಳಿಗೆ, ಮನೆಗೆಲಸದ ಹುಡುಗಿಯೊಂದಿಗೆ ರತಿಕ್ರೀಡೆಯಲ್ಲಿ ತೊಡಗಿರುವ ನರಹರಿಯನ್ನು ಕಂಡು ಆಕಾಶವೇ ತಲೆಗೆ ಬಿದ್ದಂತಾಗಿತ್ತು. 
ನರಹರಿಗೆ ತನ್ನ ಪತ್ನಿಯ ಮೇಲಿದ್ದ ದ್ವೇಷದಿಂದಾಗಿ ಆಕೆಯೊಂದಿಗೆ ಇದ್ದಾಗ ಕಾಮಾಸಕ್ತಿಯ ಅಭಾವ ಮತ್ತು ನಿಮಿರುದೌರ್ಬಲ್ಯಕ್ಕೆ ಕಾರಣವೆನಿಸಿತ್ತು. ಪತಿ-ಪತ್ನಿಯರ ಸಂಬಂಧದ ತೊಡಕುಗಳು ಇಂತಹ ಸಮಸ್ಯೆಗೆ ಕಾರಣವೆನಿಸುವುದು ಅಪರೂಪವೇನಲ್ಲ. 

ನಪುಂಸಕತ್ವ- ನಿಮಿರು ದೌರ್ಬಲ್ಯ 

ಆರೋಗ್ಯವಂತ ವ್ಯಕ್ತಿಗೆ ತೀವ್ರ ಕಾಮೇಚ್ಛೆ ಉಂಟಾದಾಗ ಆತನ ಮೆದುಳು, ನರಮಂಡಲ, ಪಂಚೇಂದ್ರಿಯಗಳು, ಕೆಲವೊಂದು ಮಾಂಸಪೇಶಿಗಳು  ಹಾಗೂ ರಕ್ತನಾಳಗಳ ಪರಸ್ಪರ ಹೊಂದಾಣಿಕೆಯೊಂದಿಗೆ ನಡೆಯುವ ವಿಶಿಷ್ಟ ಪ್ರಕ್ರಿಯೆಗಳಿಂದ ಶಿಶ್ನದಲ್ಲಿರುವ ರಕ್ತನಾಳಗಳಲ್ಲಿ ರಕ್ತ ತುಂಬಿ, ಶಿಶ್ನವು ಗಡಸಾಗುವುದು. ಅದೇರೀತಿಯಲ್ಲಿ ಆರೋಗ್ಯವಂತ ವ್ಯಕ್ತಿಯಲ್ಲೂ ಯಾವುದೇ ಸಂದರ್ಭದಲ್ಲೂ ಶಿಶ್ನದ ನಿಮಿರುವಿಕೆಯೇ ಇಲ್ಲದಿರುವುದು ಶಾಶ್ವತ ನಪುಂಸಕತ್ವದ ಲಕ್ಷಣವಾಗಿದೆ. ಆದರೆ ಹಿಂದೆ ಶಿಶ್ನದ ನಿಮಿರುವಿಕೆ ಸಮರ್ಪಕವಾಗಿದ್ದು, ಇದೀಗ ಕಂಡುಬಂದಿರುವ ಆಂಶಿಕ ಮತ್ತು ಸಂಪೂರ್ಣ ನಿಮಿರು ದೌರ್ಬಲ್ಯವು, ಸಾಮಾನ್ಯವಾಗಿ ಸಮರ್ಪಕ ಚಿಕಿತ್ಸೆಯಿಂದ ಗುಣವಾಗುವುದು. 

ಈ ಸಮಸ್ಯೆಗೆ ಕಾರಣವೇನು?

ಶಿಶ್ನದ ನಿಮಿರುವಿಕೆಯ ಪ್ರಕ್ರಿಯೆಗಳಲ್ಲಿ ಸಂಭವಿಸಬಲ್ಲ ವಿವಿಧ ರೀತಿಯ ತೊಂದರೆ- ಅಡಚಣೆಗಳು ಈ ದೌರ್ಬಲ್ಯಗಳಿಗೆ ಕಾರಣವೆನಿಸಬಹುದು. ಇವುಗಳನ್ನು ಸ್ಥೂಲವಾಗಿ ಶಾರೀರಿಕ ಹಾಗೂ ಮಾನಸಿಕ ಕಾರಣಗಳೆಂದು ವಿಂಗಡಿಸಲಾಗಿದೆ. 

ಶಾರೀರಿಕ ಕಾರಣಗಳಲ್ಲಿ ಅತಿಯಾದ ಕೊಲಸ್ಟೆರಾಲ್, ಟೆಸ್ಟೋಸ್ಟೆರಾನ್ ಹಾರ್ಮೋನ್ ನ ಕೊರತೆ, ಅನಿಯಂತ್ರಿತ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಪಕ್ಷವಾತ, ಪಾರ್ಕಿನ್ಸನ್ಸ್ ಕಾಯಿಲೆ, ಅಲ್ಜೈಮರ್ಸ್, ಅಪಸ್ಮಾರದಂತಹ ಕಾಯಿಲೆಗಳು ಪ್ರಮುಖವಾಗಿವೆ. ಇದಲ್ಲದೆ ಬೆನ್ನುಹುರಿ,  ಮರ್ಮಾಂಗ ಮತ್ತು ಸೊಂಟದ ಮಾಂಸಪೇಶಿಗಳಿಗೆ ಆಘಾತವಾಗುವುದು, ಪ್ರೋಸ್ಟೇಟ್ ಗ್ರಂಥಿಯ ಸಮಸ್ಯೆಗಳು ಹಾಗೂ ಅನೇಕ ಕಾಯಿಲೆಗಳು ಬಾಧಿಸಿದಾಗ ನೀವು ಸೇವಿಸಲೇಬೇಕಾದ ಔಷದಗಳ ಅನಪೇಕ್ಷಿತ ಅಡ್ಡ ಪರಿಣಾಮಗಳೂ ಕಾರಣವೆನಿಸಬಲ್ಲವು. ಇದಲ್ಲದೇ ಮಾದಕ ದ್ರವ್ಯಗಳ ಸೇವನೆ, ಅತಿ ಮದ್ಯ- ಧೂಮಪಾನಗಳು ಕೂಡಾ ನಿಮಿರು ದೌರ್ಬಲ್ಯಕ್ಕೆ ಕಾರಣವೆನಿಸುತ್ತವೆ. 

ಮಾನಸಿಕ ಕಾರಣಗಳಲ್ಲಿ ದಂಪತಿಗಳಲ್ಲಿ ಪರಸ್ಪರ ಸಂಬಂಧದ ಸಮಸ್ಯೆಗಳು, ಮಾನಸಿಕ ಒತ್ತಡ, ಖಿನ್ನತೆ ಹಾಗೂ ಉದ್ವೇಗಗಳು ಪ್ರಮುಖವಾಗಿವೆ. ಇದರೊಂದಿಗೆ ರತಿಕ್ರೀಡೆಯ ಸಂದರ್ಭದಲ್ಲಿ ಸಂಗಾತಿಯ ಅಸಹಕಾರ, ತೀವ್ರ ನೋವು ಮತ್ತು ವೈವಿಧ್ಯತೆಯನ್ನು ಬಯಸುವ ಪುರುಷರಿಗೆ, ಏಕತಾನತೆಯಿಂದಾಗಿ ಪ್ರಾರಂಭವಾಗುವ ನಿಮಿರು ದೌರ್ಬಲ್ಯವು ಅನೇಕರಲ್ಲಿ ಆಗಾಗ ಪುನರಾವರ್ತನೆಯಾಗಬಹುದು. 

ನಿಮಗಿದು ತಿಳಿದಿರಲಿ 

ನಿಮ್ಮನ್ನು ಬಾಧಿಸುವ ನಿಮಿರು ದೌರ್ಬಲ್ಯ ಶಾರೀರಿಕ ಕಾರಣಗಳಿಂದ ಬಂದಿರುವುದೋ ಅಥವಾ ಮಾನಸಿಕ ಕಾರಣಗಳಿಂದ ಬಂದಿರುವುದೋ?, ಎನ್ನುವ ಪ್ರಶ್ನೆಗೆ ನಕಲಿ ವೈದ್ಯರಲ್ಲಿ ಉತ್ತರ ದೊರೆಯುವ ಸಾಧ್ಯತೆಗಳೇ ಇಲ್ಲ!. ಏಕೆಂದರೆ ಇವರಿಗೆ ಈ ಬಗ್ಗೆ ಏನೇನೂ ಮಾಹಿತಿ ತಿಳಿದಿರುವುದೇ ಇಲ್ಲ. 

ಮಾನಸಿಕ ಕಾರಣಗಳಿಂದ ಬಂದಿರುವ ಈ ಸಮಸ್ಯಾ ಪೀಡಿತರಲ್ಲಿ, ಬೆಳಗಿನ ಜಾವ ಮೂತ್ರಕೊಶವು ಮೂತ್ರದಿಂದ ತುಂಬಿದಾಗ, ಮುಷ್ಠಿಮೈಥುನದ ಸಂದರ್ಭದಲ್ಲಿ ಮತ್ತು ಕೆಲವರಿಗೆ ತಮ್ಮ ನಿತ್ಯದ ಸಂಗಾತಿಯನ್ನು ಹೊರತುಪಡಿಸಿ ಇತರ ಸ್ತ್ರೀಯರೊಂದಿಗೆ ಸುಖಿಸುವ ಸಂದರ್ಭದಲ್ಲಿ ಶಿಶ್ನವು ನಿಮಿರುತ್ತದೆ. ಇಂತಹ ಸಮಸ್ಯಾ ಪೀಡಿತರು ಕಾಮೊದ್ದೀಪಕ ಔಷದಗಳನ್ನು ಸೇವಿಸುವುದು ನಿಷ್ಪ್ರಯೋಜಕವೂ ಹೌದು!. 

ಆದರೆ ಶಾರೀರಿಕ ಕಾರಣಗಳಿಂದ ಉದ್ಭವಿಸುವ ನಿಮಿರು ದೌರ್ಬಲ್ಯ ಅಥವಾ ನಪುಂಸಕತ್ವದಲ್ಲಿ ಮೇಲೆ ವಿವರಿಸಿದ ಸಂದರ್ಭಗಳಲ್ಲಿ ಶಿಶ್ನದ ನಿಮಿರುವಿಕೆ ಇರುವುದಿಲ್ಲ. 

ನಿಮ್ಮ ಪತಿಯಲ್ಲಿ ಕಾರಣಾಂತರಗಳಿಂದ ಅಥವಾ ಆಕಸ್ಮಿಕವಾಗಿ ನಿಮಿರು ದೌರ್ಬಲ್ಯ ಉದ್ಭವಿಸಿದಲ್ಲಿ ಜರೆಯದಿರಿ. ಏಕೆಂದರೆ ಇದರಿಂದಾಗಿ ಈ ಸಮಸ್ಯೆಯು ಇನ್ನಷ್ಟು ಉಲ್ಬಣಿಸುವುದು. ಶಾಂತಚಿತ್ತದಿಂದ ಸಮಸ್ಯೆಯ ಕಾರಣವನ್ನರಿಯಲು ಪ್ರಯತ್ನಿಸಿ. ರಸಿಕ ಪತಿಯು ಶಯ್ಯೆಯಲ್ಲಿ ವೈವಿಧ್ಯವನ್ನು ಅಪೇಕ್ಷಿಸಿದಲ್ಲಿ "ಶಯನೇಶು ವೇಶ್ಯಾ' ಎನ್ನುವ ಸೂತ್ರವನ್ನು ಪಾಲಿಸಿ. ಪತಿ ಪತ್ನಿಯರಲ್ಲಿ ಪರಸ್ಪರ ಹೊಂದಾಣಿಕೆ ಹಾಗೂ ಪ್ರೀತಿ ವಿಶ್ವಾಸಗಳು ಇಂತಹ ಸಮಸ್ಯೆಯನ್ನು ದೂರವಿಡುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಪರಸ್ಪರ ಸಂದೇಹ, ಚುಚ್ಚುಮಾತುಗಳು ಹಾಗೂ ಸಂಗಾತಿಯ ಬಯಕೆಗಳನ್ನು ಕಡೆಗಣಿಸುವುದು ಇಂತಹ ಸಮಸ್ಯೆ ಪ್ರಾರಂಭವಾಗಲು ಕಾರಣವೆನಿಸಬಲ್ಲದು. 

ಯಾವುದೇ ಸಂದರ್ಭದಲ್ಲೂ ನಿಮ್ಮ ಬಂಧುಮಿತ್ರರ ಸಲಹೆಯಂತೆ ಯಾವುದೇ ಪದ್ದತಿಯ ಔಷದ- ಇಂಜೆಕ್ಷನ್ ಗಳನ್ನೂ ಪ್ರಯೋಗಿಸದಿರಿ. ಅವಶ್ಯಕತೆ ಇದ್ದಲ್ಲಿ ನಿಮ್ಮ ವಿಶ್ವಾಸಾರ್ಹ ಕುಟುಂಬ ವೈದ್ಯರ ಸಲಹೆ ಪಡೆಯಿರಿ. 

ಭಾಗ-೨ ರಲ್ಲಿ ಲೇಖನ ಮುಂದುವರೆಯಲಿದೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೪-೧೨-೨೦೦೩ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ   

    

Saturday, October 19, 2013

Hand, foot and mouth disease in children



                ಮಕ್ಕಳನ್ನು ಪೀಡಿಸುತ್ತಿರುವ ಕಾಲು ಬಾಯಿ ಕಾಯಿಲೆ 

ರಾಜ್ಯದ ವಿವಿಧ ಭಾಗಗಳಲ್ಲಿ ನೂರಾರು ಜಾನುವಾರುಗಳ ಸಾವಿಗೆ ಕಾರಣವೆನಿಸಿರುವ ಕಾಲು, ಕೈ ಮತ್ತು ಬಾಯಿ ಬೇನೆ ಕಾಯಿಲೆಯು ಮನುಷ್ಯರನ್ನೂ ಕಾಡಬಲ್ಲದು ಎನ್ನುವ ವಿಚಾರ ಅನೇಕರಿಗೆ ತಿಳಿದಿಲ್ಲ. ಅದೃಷ್ಟವಶಾತ್ ಚಿಕ್ಕ ಮಕ್ಕಳನ್ನೇ ಹೆಚ್ಚಾಗಿ ಪೀಡಿಸುವ ಈ ವ್ಯಾಧಿಯು, ಮನುಷ್ಯರಲ್ಲಿ ತನ್ನ ಮಾರಕತೆಯನ್ನು ತೋರುವುದಿಲ್ಲ. ದೇಶದ ಹಲವಾರು ರಾಜ್ಯಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕಂಡುಬರುತ್ತಿರುವ ಈ ವ್ಯಾಧಿಯು, ಕಳೆದ ನಾಲ್ಕಾರು ತಿಂಗಳುಗಳಿಂದ ನಮ್ಮ ರಾಜ್ಯದ ಅನೇಕ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಈ  ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಅಸಂಖ್ಯ ಜನರನ್ನು ಪೀಡಿಸಿರುವ  ಕಾಲು, ಕೈ ಮತ್ತು ಬಾಯಿಬೇನೆ ಎನ್ನುವ ವಿಶಿಷ್ಟ ವ್ಯಾಧಿಗೆ ಕಾರಣವೆನಿಸುವ, ಎಂಟೆರೋ ವೈರಸ್ ಗಳ ಗುಂಪಿಗೆ ಸೇರಿದ ರೋಗಾಣುವನ್ನು ಮೊತ್ತ ಮೊದಲಿಗೆ ಕಾಕ್ಸ್ ಸಾಕ್ಕಿ ಎನ್ನುವ ಊರಿನಲ್ಲಿ ಪತ್ತೆಹಚ್ಚಲಾಗಿತ್ತು. ಈ ಊರಿನ ಇಬ್ಬರು ರೋಗಪೀಡಿತ ವ್ಯಕ್ತಿಗಳಲ್ಲಿ ಡಾಲ್ ಡೋರ್ಫ್ ಎನ್ನುವ ವಿಜ್ಞಾನಿಯು ಈ ವೈರಸ್ ಗಳನ್ನು ಪತ್ತೆಹಚ್ಚಿದ್ದರಿಂದ, ಈ ವೈರಸ್ ಗಳಿಗೆ ಕಾಕ್ಸ್ ಸಾಕ್ಕಿ ಎಂದು ಹೆಸರಿಸಲಾಗಿತ್ತು. 

ಕೇಶವನ "ಕೆಂಪು" ಗುಣವಾಗದೇಕೆ?

ಪುಟ್ಟ ಕೇಶವನಿಗೆ ಅದೊಂದು ದಿನ ಅಲ್ಪ ಪ್ರಮಾಣದ ಜ್ವರ ಕಾಣಿಸಿಕೊಂಡ ಬಳಿಕ ಆತನ ಸ್ವರವೂ ಕರ್ಕಶವಾಗಿತ್ತು. ಪರಿಚಿತ ವೈದ್ಯರು ಮೂರುದಿನಗಳ ಚಿಕಿತ್ಸೆಯನ್ನು ನೀಡಿದರೂ, ಆತನ ಕಾಯಿಲೆ ಗುಣವಾಗಲಿಲ್ಲ. ಆದರೆ ಅಷ್ಟರಲ್ಲೇ ಆತನ ಮುಂಗೈ, ಅಂಗೈ, ಕಾಲು, ಅಂಗಾಲು,ಬಾಯಿಯಲ್ಲಿ ಮತ್ತು ಪೃಷ್ಟಗಳ ಮೇಲೆ ಕೆಂಪುಬಣ್ಣದ ನೂರಾರು ಪುಟ್ಟ ಗುಳ್ಳೆಗಳು ಮೂಡಿದ್ದವು. ಮೊಮ್ಮಗನ ಕಾಯಿಲೆಯನ್ನು 'ಕೆಂಪು" ಎಂದು ಗುರುತಿಸಿದ್ದ ಆತನ ಅಜ್ಜಿಯು, ಕೇಶವನನ್ನು ಹಳ್ಳಿಮದ್ದು ನೀಡುವ ಅಕ್ಕಮ್ಮನಲ್ಲಿಗೆ ಕರೆದೊಯ್ದಳು. ಮಗುವನ್ನು ಪರೀಕ್ಷಿಸಿದ ಅಕ್ಕಮ್ಮನು ಮಂತ್ರಿಸಿದ ಸೀಯಾಳದಿಂದ ಮಗುವಿಗೆ "ಅಭಿಷೇಕ" ಮಾಡಿದ ಬಳಿಕ ಮಂತ್ರಿಸಿದ ನೂಲನ್ನು ಮಣಿಗಂಟಿಗೆ ಕಟ್ಟಿದಳು. ಇದರೊಂದಿಗೆ ಕೆಂಪಿನ ಗುಳ್ಳೆಗಳಿಗೆ ಹಚ್ಚಲು ಲೇಪ ಮತ್ತು ಕುಡಿಸಲು ಕಷಾಯವನ್ನು ನೀಡಿದ್ದಳು. ಆದರೆ ಸೀಯಾ ಮತ್ತು ಕಷಾಯಗಳ ಚಿಕಿತ್ಸೆಗೆ ಮಣಿಯದ ಕೆಂಪು ಇನ್ನಷ್ಟು ಉಲ್ಬಣಿಸಿತ್ತು. 

ಬಾಯಲ್ಲಿ ಮೂಡಿದ್ದ ಹುಣ್ಣುಗಳ ನೋವಿನಿಂದ ಆಹಾರವನ್ನು ಸೇವಿಸಲಾಗದ ಹಾಗೂ ಅಂಗಾಲು ಮತ್ತು ಪೃಷ್ಟದ ಮೇಲಿನ ಗುಳ್ಳೆಗಳ ನೋವಿನಿಂದಾಗಿ ನಡೆಯಲು ಮತ್ತು ಮಲಗಲೂ ಆಗದೇ ನರಳುತ್ತಿದ್ದ ಮಗನ ಸ್ಥಿತಿಯನ್ನು ಕಂಡು ಮರುಗಿದ ಆತನ ತಂದೆಯು, ಕೇಶವನನ್ನು ಚರ್ಮರೋಗ ತಜ್ಞರ ಬಳಿ ಕರೆದೊಯ್ದರು. 

ಸಾವಕಾಶವಾಗಿ ಮಗುವನ್ನು ಪರೀಕ್ಷಿಸಿದ ವೈದ್ಯರಿಗೆ, ಇದು ಕಾಕ್ಸ್ ಸಾಕ್ಕಿ ವೈರಸ್ ಗಳಿಂದ ಉದ್ಭವಿಸಿರುವ ಕೈ, ಕಾಲು ಮತ್ತು ಬಾಯಿಬೇನೆ ಎಂದು ಖಚಿತವಾಗಿತ್ತು. ಅವಶ್ಯಕ ಔಷದಗಳನ್ನು ನೀಡಿದ ವೈದ್ಯರು, ವಾರ ಕಳೆಯುವಷ್ಟರಲ್ಲಿ ಕೆಶವನು ಗುಣಮುಖನಾಗುವ ಭರವಸೆ ನೀಡಿದ್ದರು. ನಾಲ್ಕಾರು ದಿನಗಳಲ್ಲೇ ಬಾಡಲಾರಂಭಿಸಿದ ಗುಳ್ಳೆಗಳು, ಕೆಲವೇ ದಿನಗಳಲ್ಲಿ ಮಾಯವಾಗಿದ್ದವು!. 

ಕಾಕ್ಸ್ ಸಾಕ್ಕಿ ವೈರಸ್ 

೧೯೫೭ ರಲ್ಲಿ ಕೆನಡಾ ದೇಶದಲ್ಲಿ ಉದ್ಭವಿಸಿದ ಬಳಿಕ ಏಷಿಯಾ ಖಂಡದ ಇತರ ದೇಶಗಳಿಗೆ ಹರಡಿದ ಕಾಕ್ಸ್ ಸಾಕ್ಕಿ ವೈರಸ್ ಗಳು, ಸಾಮಾನ್ಯವಾಗಿ ೯ ತಿಂಗಳ ಹಸುಗೂಸಿನಿಂದ ಹಿಡಿದು ೫ ವರ್ಷದ ಮಕ್ಕಳಲ್ಲಿ  ಕೈ, ಕಾಲು ಮತ್ತು ಬಾಯಿಬೇನೆಗೆ ಕಾರಣವೆನಿಸುತ್ತಿದ್ದವು. ಎಂಟೆರೋ ವೈರಸ್ ಗಳ ಗುಂಪಿಗೆ ಸೇರಿದ ಈ ವೈರಸ್ ನ "ಎ " ಪ್ರಭೇದ ೫, ೧೦ ಮತ್ತು ೧೬ ಸಂಖ್ಯೆಯ ತಳಿಗಳು ಕೆಲ ವರ್ಷಗಳ ಹಿಂದೆ ಈ ವ್ಯಾಧಿಗೆ ಕಾರಣವೆನಿಸಿದ್ದವು. ೨೦೦೩ ರಲ್ಲಿ ಕೇರಳದ ಕೊಝಿಕೋಡ್ ನಲ್ಲಿ ಪ್ರತ್ಯಕ್ಶವಾಗಿದ್ದ ಎ- ೧೭ ತಳಿಯು, ಅದಕ್ಕೂ ಮುನ್ನ ಚೀನಾ ಮತ್ತು ಸಿಂಗಾಪುರಗಳಲ್ಲಿ ಅನೇಕ ಹಸುಳೆಗಳ ಮರಣಕ್ಕೂ ಕಾರಣವೆನಿಸಿತ್ತು. ಆದರೆ ಕೊಝಿಕೋಡ್ ನಲ್ಲಿ ಯಾವುದೇ ಸಾವುನೋವುಗಳಿಗೆ ಕಾರಣವೆನಿಸದ ಇದೇ ತಳಿಗಳು ಮತ್ತೆ ೨೦೦೬ ರಲ್ಲಿ ಥಾಣೆ ಮತ್ತು ಪುಣೆಗಳಲ್ಲಿ ಪ್ರತ್ಯಕ್ಷವಾಗಿದ್ದವು. 

ತದನಂತರ ೨೦೦೯ ರಲ್ಲಿ ಮತ್ತೆ ಕೊಝಿಕೋಡ್, ಥಾಣೆ, ಪುಣೆ ನಗರಗಳೊಂದಿಗೆ ವಡೋದರ ಮತ್ತು ಮುಂಬೈ ಗಳಲ್ಲೂ ಉದ್ಭವಿಸಿ ವ್ಯಾಪಕವಾಗಿ ಹರಡುತ್ತಾ, ಮುಂಬೈ ನೊಂದಿಗೆ ನಿಕಟ ಸಂಪರ್ಕವಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಹರಡಿತ್ತು. ೬ ತಿಂಗಳ ಹಸುಗೂಸಿನಿಂದ ಹಿಡಿದು ಹದಿಹರೆಯದವರನ್ನೂ ಕಾಡಿದ್ದ ಕಾಲು ಬಾಯಿಬೇನೆಗೆ, ಈ ವೈರಸ್ ನ ನೂತನ ತಳಿಯನ್ನು ಸಿ ವಿ ಎ- ೬ ಎಂದು ಗುರುತಿಸಲಾಗಿತ್ತು. ಈ ತಳಿಯಿಂದ ಪೀಡಿತ ರೋಗಿಗಳಲ್ಲಿ ವ್ಯಾಧಿಯು ಸೌಮ್ಯ ರೂಪದಲ್ಲಿ ಪ್ರಕಟವಾಗುತ್ತಿದ್ದುದರಿಂದ ಸುಮಾರು ೭ ರಿಂದ ೧೦ ದಿನಗಳಲ್ಲಿ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುತ್ತಿದ್ದರು. 

ಪ್ರಸ್ತುತ ರಾಜ್ಯದ ವಿವಿಧ ಭಾಗಗಳಲ್ಲಿ ಉದ್ಭವಿಸಿ ಅಸಂಖ್ಯ ಜಾನುವಾರುಗಳನ್ನು ಬಲಿಪಡೆಯುತ್ತಿರುವ ಕಾಲು ಬಾಯಿಬೇನೆ ಪ್ರಕರಣಗಳೊಂದಿಗೆ, ಕೆಲವೆಡೆ ಮಕ್ಕಳಲ್ಲಿ ಈ ವೈರಸ್ ನ ಹಾವಳಿಯ ಪ್ರಮಾಣವು ಹೆಚ್ಚುತ್ತಿದೆ. ಶಿಶುವೈದ್ಯರೇ ಹೇಳುವಂತೆ ಕಳೆದ ಹಲವಾರು ವಾರಗಳಿಂದ ಕಾಕ್ಸ್ ಸಾಕ್ಕಿ ವೈರಸ್ ಪೀಡಿತ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆದರೆ ಬಹುತೇಕ ರೋಗಿಗಳಲ್ಲಿ ಸ್ವಯಂ ಶಮನಗೊಳ್ಳುವ ಈ ವ್ಯಾಧಿಯ ಬಗ್ಗೆ ಜನಸಾಮಾನ್ಯರು ಗಾಬರಿ ಪಡಬೇಕಾಗಿಲ್ಲವೆಂದು ಶಿಶುತಜ್ಞರು ಭರವಸೆ ನೀಡಿದ್ದಾರೆ. ವ್ಯಾಧಿ ಪೀಡಿತರಲ್ಲಿ ಕಂಡುಬರುವ ಲಕ್ಷಣಗಳಿಗೆ ಅನುಗುಣವಾಗಿ ಅವಶ್ಯಕ ಔಷದಗಳನ್ನು ಸೇವಿಸುವ ಮೂಲಕ ಇದನ್ನು ಸುಲಭದಲ್ಲೇ ನಿಯಂತ್ರಿಸಬಹುದಾಗಿದೆ. 

ವ್ಯಾಧಿಯ ಲಕ್ಷಣಗಳು 

ಆಕಸ್ಮಿಕವಾಗಿ ಜ್ವರದೊಂದಿಗೆ ಆರಂಭವಾಗುವ ಈ ಕಾಯಿಲೆಯಲ್ಲಿ ಹಸಿವಿಲ್ಲದಿರುವುದು, ಗಂಟಲು ನೋವು, ಧ್ವನಿ ಪೆಟ್ಟಿಗೆಯ ನೋವಿನಿಂದಾಗಿ ಸ್ವರ ಬದಲಾಗುವುದೇ ಮುಂತಾದ ಸಾಮಾನ್ಯ ಶೀತ ಅಥವಾ ಫ್ಲೂ ಜ್ವರದ ಲಕ್ಷಣಗಳು ಕಂಡುಬರುತ್ತವೆ. ಮುಂದಿನ ಒಂದೆರಡು ದಿನಗಳಲ್ಲಿ ಬಾಯಿ, ಕೈ, ಅಂಗೈ, ಕಾಲು, ಅಂಗಾಲು ಹಾಗೂ ಪೃಷ್ಠ ಭಾಗದಲ್ಲಿ ಮತ್ತು ಕೆಲವರಲ್ಲಿ ಬೆನ್ನಿನ ಮೇಲೆ ಬೆವರುಸಾಲೆಯಂತಹ ಗುಳ್ಳೆಗಳು ಮೂಡುತ್ತವೆ. ಈ ಗುಳ್ಳೆಗಳು ಒಂದೆರಡು ದಿನಗಳಲ್ಲೇ ಕೀವು ತುಂಬಿದ ಗುಳ್ಳೆಗಳಾಗಿ ಪರಿವರ್ತನೆಗೊಳ್ಳುತ್ತವೆ. ಹೆಚ್ಚಿನ ರೋಗಿಗಳಲ್ಲಿ ಇಂತಹ ಗುಳ್ಳೆಗಳು ವಿರಳವಾಗಿ ಮೂಡಿದರೂ, ಕೆಲ ಮಕ್ಕಳಲ್ಲಿ ದಟ್ಟವಾಗಿ ಮೂಡುವುದರೊಂದಿಗೆ ಅಸಾಧ್ಯ ತುರಿಕೆ ಮತ್ತು ತೀವ್ರ ನೋವು ಬಾಧಿಸುತ್ತದೆ. ತೀವ್ರ ಯಾತನೆಗೆ ಕಾರಣವೆನಿಸುವ ಈ ಹಂತದಲ್ಲಿ ಪುಟ್ಟ ಮಕ್ಕಳು ರಚ್ಚೆಹಿಡಿದಂತೆ ಅಳುವುದು, ಬಾಯಿ ನೋವಿನಿಂದ ಆಹಾರವನ್ನೇ ಸೇವಿಸದಿರುವುದು, ಅಂಗೈ- ಅಂಗಾಲು ನೋವಿನಿಂದ ಅಂಬೆಗಾಲಿಕ್ಕದೇ ಅಥವಾ ನಡೆಯಲಾರದೇ ಇರುವುದು ಸ್ವಾಭಾವಿಕ. ಆದರೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ನಾಲ್ಕಾರು ದಿನಗಳಲ್ಲೇ ಗುಳ್ಳೆಗಳು ಬಾಡಲು ಆರಂಭಿಸಿ, ಸುಮಾರು ೧೦ ದಿನಗಳಲ್ಲಿ ಮಗು ಸಂಪೂರ್ಣವಾಗಿ ಗುಣಮುಖವಾಗುವುದು.ಬಹುತೇಕ ರೋಗಿಗಳಲ್ಲಿ ಗುಳ್ಳೆಗಳು ಮೂಡಿದ್ದ  ಜಾಗದಲ್ಲಿ ಕಪ್ಪುಕಲೆಗಳು  ಹಲವಾರು ದಿನಗಳ ಕಾಲ ಉಳಿದು, ಬಳಿಕ ಅಲ್ಲಿನ ಚರ್ಮವು ಎದ್ದುಹೋಗುತ್ತದೆ. 

ಅಪರೂಪದಲ್ಲಿ ಈ ವ್ಯಾಧಿಪೀಡಿತ ಕೆಲವು ಮಕ್ಕಳಲ್ಲಿ ಹೃದಯ ಸಂಬಂಧಿ ತೊಂದರೆಗಳು ಮತ್ತು ಮೆದುಳಿನ ಉರಿಯೂತದಂತಹ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಕೊಝಿಕೋಡ್ ನ ಖ್ಯಾತ ಶಿಶುರೋಗ ತಜ್ಞರು ಹೇಳಿದ್ದಾರೆ. ಆದುದರಿಂದ ಇದನ್ನು ನಿರ್ಲಕ್ಷಿಸದೇ ತಜ್ಞವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಹಿತಕರ. 

ಮುನ್ನೆಚ್ಚರಿಕೆ 

ಈ ವ್ಯಾಧಿಪೀಡಿತ ಮಕ್ಕಳ ಸಂಪರ್ಕವಿರುವ ಇತರ ಮಕ್ಕಳಿಗೂ ಇದು ಹರಡುವ ಸಾಧ್ಯತೆಗಳು ಇರುವುದರಿಂದ, ಇತರ ಆರೋಗ್ಯವಂತ ಮಕ್ಕಳನ್ನು ದೂರವಿರಿಸಬೇಕು. ರೋಗಪೀಡಿತ ಮಕ್ಕಳ ಬಾಯಿ, ನಾಸಿಕ ಸ್ರಾವ ಮತ್ತು ಮಲಗಳಲ್ಲಿ ಕಾಕ್ಸ್ ಸಾಕ್ಕಿ ವೈರಸ್ ಗಳು ಇರುವುದರಿಂದ, ಈ ಬಗ್ಗೆ ಮನೆಮಂದಿ ಕಟ್ಟೆಚ್ಚರವಹಿಸಬೇಕು. ರೋಗಿಯ ಆರೈಕೆ ಮಾಡುವ ಹಿರಿಯರೂ ತಮ್ಮ ವೈಯುಕ್ತಿಕ ಸ್ವಚ್ಚತೆಯತ್ತ ಗಮನ ನೀಡುವುದರೊಂದಿಗೆ, ರೋಗಿ ಬಳಸಿದ ಪಾತ್ರೆ, ಬಟ್ಟೆಬರೆಗಳನ್ನು ಸೂಕ್ತ ಕ್ರಿಮಿನಾಶಕಗಳನ್ನು ಬಳಸಿ ತೊಳೆಯಬೇಕು. ವ್ಯಾಧಿಪೀಡಿತ ಮಕ್ಕಳು ಶೌಚಾಲಯದಲ್ಲೇ ಮಲವಿಸರ್ಜನೆ ಮಾಡುವ ಮೂಲಕ ಮತ್ತು ಬಯಲನ್ನು ಶೌಚಾಕ್ಕಾಗಿ ಬಳಸಿದಲ್ಲಿ ಪುಟ್ಟ ಗುಂಡಿಯನ್ನು ತೋಡಿ, ಮಲವಿಸರ್ಜನೆಯ ಬಳಿಕ ಮಣ್ಣಿನಿಂದ ಮುಚ್ಚುವ ಮೂಲಕ ಮಲದಲ್ಲಿರುವ ವೈರಸ್ ಗಳು ಹರಡುವುದನ್ನು ತಡೆಗಟ್ಟಬೇಕು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೩-೧೨- ೨೦೦೯ ರ ಸಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ (ಇದೀಗ ಪರಿಷ್ಕರಿಸಿರುವ)



Thursday, October 17, 2013

Article no.75- Anemia


                                  ರಕ್ತಹೀನತೆಯಿಂದ ರಕ್ಷಿಸಿಕೊಳ್ಳಿ

ಹೊಟ್ಟೆತುಂಬಾ ಉಂಡರೆ ಸಾಲದು. ನೀವು ಸೇವಿಸುವ ಆಹಾರವು ಪೌಷ್ಟಿಕ ಅಂಶಗಳಿಂದ ಸಮೃದ್ಧವಾಗಿರಬೇಕು. ಆಗ ಮಾತ್ರ ರಕ್ತಹೀನತೆಯಿಂದ ರಕ್ಷಿಸಿಕೊಳ್ಳುವುದು ಸುಲಭ ಸಾಧ್ಯವೆನಿಸುವುದು. 
-----------                --------------              --------------------                      ---------------------                       
  ಕೇಶವ ಭಟ್ಟರ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕೂಸಪ್ಪನಿಗೆ ೩೦ ರ ಹರೆಯ. ದಿನದಲ್ಲಿ ಎಂಟು ಗಂಟೆಗಳ ಕಾಲ ಬಿಸಿಲು- ಮಳೆಯೆನ್ನದೇ ದುಡಿಯುತ್ತಿದ್ದ ಆತನಿಗೆ, ಅನಾರೋಗ್ಯವೆಂದರೆ ಏನೆಂದೇ ತಿಳಿದಿರಲಿಲ್ಲ. 

ಆದರೆ ಇತ್ತೀಚಿನ ಕೆಲವು ತಿಂಗಳುಗಳಿಂದ ಕಿಂಚಿತ್ ಶ್ರಮದ ಕೆಲಸ ಮಾಡಿದೊಡನೆ ಏದುಬ್ಬಸ, ಅತಿಆಯಾಸ, ಎದೆ ಢವಗುಟ್ಟುವುದು ಮತ್ತು ಬವಲಿಕೆಗಳು ಆರಂಭವಾಗಿದ್ದವು. ಇದಕ್ಕೆ ಕಾರಣವೇನೆಂದು ಆತನಿಗೆ ಅರಿತಿರಲಿಲ್ಲ. ಆದರೂ ಇದನ್ನು ಅರಿತುಕೊಳ್ಳಲು ವೈದ್ಯರ ಬಳಿಗೂ ಹೋಗಿರಲಿಲ್ಲ!. 

ಅದೊಂದು ದಿನ ಧಣಿಗಳ ಅಂಗಳದಲ್ಲಿ ಕಟ್ಟಿಗೆ ಒಡೆಯುತ್ತಿದ್ದ ಕೂಸಪ್ಪನು, ಆಕಸ್ಮಿಕವಾಗಿ ಕುಸಿದು ಬಿದ್ದು ಪ್ರಜ್ನಾಹೀನನಾಗಿದ್ದನು. ತಕ್ಷಣ ಆತನ ಮುಖಕ್ಕೆ ನೀರು ಚಿಮುಕಿಸಿ,ಪ್ರಥಮ ಚಿಕಿತ್ಸೆ ನೀಡಿದ ಕೇಶವ ಭಟ್ಟರು, ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಅವಶ್ಯಕ ಪರೀಕ್ಷೆಗಳನ್ನು ನಡೆಸಿದ ವೈದ್ಯರಿಗೆ, ಕೂಸಪ್ಪನ ಸಮಸ್ಯೆಗೆ ತೀವ್ರ ರಕ್ತಹೀನತೆಯೇ ಕಾರಣವೆಂದು ತಿಳಿದುಬಂದಿತ್ತು. ದಿನದಲ್ಲಿ ಮೂರು ಬಾರಿ ಅನ್ನ - ಗಂಜಿಗಳನ್ನು ಪೊಗದಸ್ತಾಗಿ ಉಂಡು ತೇಗುವ ತನಗೆ, ರಕ್ತಹೀನತೆ ಬಂದಿರುವುದಾದರೂ ಹೇಗೆಂದು ಆತನಿಗೆ ಅರ್ಥವಾಗಲೇ ಇಲ್ಲ!. 

ರಕ್ತಹೀನತೆ ಎಂದರೇನು?

ಮನುಷ್ಯನ ರಕ್ತದಲ್ಲಿರುವ ಹೆಮೊಗ್ಲೋಬಿನ್ ನ ಪ್ರಮಾಣವು ಕಾರಣಾಂತರಗಳಿಂದ ನಿಗದಿತ ಮಟ್ಟಕ್ಕಿಂತ ಕಡಿಮೆಯಾಗಿರುವ ಸ್ಥಿತಿಯನ್ನು ರಕ್ತಹೀನತೆ ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಅನೀಮಿಯಾ ಎನ್ನುತ್ತಾರೆ. ಅನೀಮಿಯಾದಲ್ಲಿ ಹಲವು ವಿಧಗಳಿದ್ದು , ಇವುಗಳಿಗೆ ವಿಭಿನ್ನ ಕಾರಣಗಳೂ ಇವೆ. ಇವುಗಳ ವಿವರಗಳು ಇಂತಿವೆ. ೧. ಕಬ್ಬಿಣದ ಸತ್ವ ಮತ್ತು ಪೋಷಕಾಂಶಗಳ ಕೊರತೆ. ೨. ಕರುಳಿನಲ್ಲಿ ಸತ್ವ ಮತ್ತು ಪೋಷಕಾಂಶಗಳ ಹೀರುವಿಕೆಯ ತೊಂದರೆಗಳು. ೩. ಶರೀರದ ಕಬ್ಬಿಣದ ಸತ್ವಗಳ ಬೇಡಿಕೆಯ ಪ್ರಮಾಣದಲ್ಲಿ ಹೆಚ್ಚಳ. ೪. ತೀವ್ರ ಅಥವಾ ದೀರ್ಘಕಾಲೀನ ರಕ್ತಸ್ರಾವದ ಸಮಸ್ಯೆಗಳು ಮತ್ತು ಕರುಳಿನ ವ್ಯಾಧಿಗಳು. ೫. ಅಸ್ಥಿ ಮಜ್ಜೆಯಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆ ಕುಂಠಿತವಾಗುವುದು. ೬. ಕಾರಣಾಂತರಗಳಿಂದ ಕೆಂಪು ರಕ್ತಕಣಗಳು ಅತಿಯಾಗಿ ನಾಶವಾಗುವುದು. 

ಜನಸಾಮಾನ್ಯರಲ್ಲಿ ರಕ್ತಹೀನತೆ ಉದ್ಭವಿಸಲು ಈ ಮೇಲಿನ ಕಾರಣಗಳಲ್ಲಿ ಯಾವುದಾದರೂ ಒಂದು ಅಥವಾ ಎರಡು- ಮೂರು ಅಥವಾ ಎಲ್ಲಾ ಅಂಶಗಳೂ ಕಾರಣವೆನಿಸಬಹುದು. 

ರಕ್ತಹೀನತೆಯಲ್ಲಿ ಹಲವಾರು ವೈವಿಧ್ಯಗಲಿದ್ದರೂ, ಇವುಗಳಲ್ಲಿ ಕಬ್ಬಿಣದ ಸತ್ವ ಮತ್ತು ಪೋಷಕಾಂಶಗಳ ಕೊರತೆಯಿಂದ ಉದ್ಭವಿಸುವ ರಕ್ತಹೀನತೆ ಪ್ರಮುಖವಾಗಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಕಂಡುಬರುವ ಈ ಸಮಸ್ಯೆಗೆ, ಬಡತನ ಮತ್ತು ದಾರಿದ್ರ್ಯಗಳೇ ಕಾರಣವೆನ್ನಬಹುದು. 

ರಕ್ತಹೀನತೆಯ ಲಕ್ಷಣಗಳು 

ಒಂದಿಷ್ಟು ಶ್ರಮದ ಕೆಲಸ ಮಾಡಿದೊಡನೆ ಏದುಬ್ಬಸ, ನಿಶ್ಶಕ್ತಿ, ಅತಿ ಆಯಾಸ, ತಲೆನೋವು, ನಿದ್ರಾಹೀನತೆ, ದೃಷ್ಟಿಮಾಂದ್ಯ, ವಾಕರಿಕೆ, ವಾಂತಿ, ಎದೆ ಢವಗುಟ್ಟಿದಂತೆ ಆಗುವುದು, ನಾಡಿ ಮತ್ತು ಹೃದಯ ಬಡಿತಗಳ ವೇಗ ತೀವ್ರಗೊಳ್ಳುವುದು, ಕೈ- ಕಾಲಿನ ಬೆರಳುಗಳಲ್ಲಿ ಸೂಜಿಯಿಂದ ಚುಚ್ಚಿದಂತಹ ಸಂವೇದನೆ, ಅಂಗೈ,ಅಂಗಾಲು, ಮುಖ, ತುಟಿ ಮತ್ತು ಕಣ್ಣುಗಳು ಬಿಳುಚಿಕೊಳ್ಳುವುದೇ ಮುಂತಾದ ಲಕ್ಷಣಗಳು ರಕ್ತಹೀನತೆಯಿಂದ ಬಳಲುವ ವ್ಯಕ್ತಿಗಳಲ್ಲಿ ಕಂಡುಬರುತ್ತವೆ. ತೀವ್ರ ಸ್ವರೂಪದ ರಕ್ತಹೀನತೆಯಲ್ಲಿ ನಾಲಗೆಯ ಉರಿಯೂತ, ಬಾಯಿಹುಣ್ಣುಗಳು, ಆಹಾರವನ್ನು ನುಂಗಲು ಹಾಗೂ ಮಾತನಾಡಲು ಕಷ್ಟವೆನಿಸುವುದು, ಪ್ಲೀಹ (ಸ್ಪ್ಲೀನ್) ವೃದ್ಧಿ, ಉಗುರುಗಳು ಚಮಚದ ಆಕಾರವನ್ನು ತಳೆಯುವುದು ಇತ್ಯಾದಿಗಳೊಂದಿಗೆ, ವಯೋವ್ರುದ್ಧರಲ್ಲಿ ಎದೆ ಮತ್ತು ಕಾಲಿನ ಮಾಂಸ ಪೇಶಿಗಳಲ್ಲಿ ನೋವು, ಪಾದಗಳಲ್ಲಿ ಬಾವು ಮತ್ತು ಹೃದಯ ವೈಫಲ್ಯಗಳಂತಹ ಲಕ್ಷಣಗಳು ಕಂಡುಬರುತ್ತವೆ. 

ಇಂತಹ ಸಮಸ್ಯೆಗಳಿಂದ ಬಳಲುವ ರೋಗಿಗಳ ರಕ್ತದಲ್ಲಿನ ಹೆಮೊಗ್ಲೋಬಿನ್ ನ ಪ್ರಮಾಣವು ಕಡಿಮೆಯಾಗಿರುವುದನ್ನು ಸುಲಭದಲ್ಲೇ ಪತ್ತೆಹಚ್ಚಬಹುದಾಗಿದೆ. ಸಾಮಾನ್ಯವಾಗಿ ಆರೋಗ್ಯವಂತ ಪುರುಷರಲ್ಲಿ ಹೆಮೊಗ್ಲೋಬಿನ್ ನ ಪ್ರಮಾಣವು ೧೩ ರಿಂದ ೧೮ ಗ್ರಾಂ/ ಪ್ರತಿ ೧೦೦ ಮಿ. ಲಿ , ಸ್ತ್ರೀಯರಲ್ಲಿ ೧೧ ರಿಂದ ೧೬ ಮತ್ತು ಮಕ್ಕಳಲ್ಲಿ ೧೧ ರಿಂದ ೧೬.೫ ಇರುವುದು. ಆದರೆ ತೀವ್ರ ರಕ್ತಹೀನತೆ ಇರುವವರಲ್ಲಿ ಈ ಪ್ರಮಾಣವು ೪ ರಿಂದ ೮ ಗ್ರಾಂ ಗಳಿಗೆ ಇಳಿಯುವುದು ಅಪರೂಪವೇನಲ್ಲ. 

ಪೋಷಕಾಂಶಗಳ ಕೊರತೆ 

ಮಾನವ ಶರೀರದ ಮೂಲಭೂತ ಅವಶ್ಯಕತೆಗಳಲ್ಲಿ ಆಹಾರ ಮತ್ತು ನೀರು ಪ್ರಮುಖವಾಗಿವೆ. ಶರೀರದ ಪಾಲನೆ, ಪೋಷಣೆ ಹಾಗೂ ವಿವಿಧ ಜೈವಿಕ ಪ್ರಕ್ರಿಯೆಗಳಿಗೆ ಆಹಾರ ಅತ್ಯವಶ್ಯಕವೆನಿಸುವುದು. ಅಂತೆಯೇ ನಾವು ಸೇವಿಸುವ ಆಹಾರ ಮತ್ತು ನಮ್ಮ ಆರೋಗ್ಯಗಳಿಗೆ ಅವಿನಾಭಾವ ಸಂಬಂಧವಿದೆ. ಉತ್ತಮ ಗುಣಮಟ್ಟದ ಸಮತೋಲಿತ ಆಹಾರವನ್ನು ಸೇವಿಸುವುದರಿಂದ, ನಮ್ಮ ಆರೋಗ್ಯದೊಂದಿಗೆ ರೋಗನಿರೋಧಕ ಶಕ್ತಿಯೂ ಹೆಚ್ಚುವುದು. ಅದೇ ರೀತಿಯಲ್ಲಿ ಇದರಲ್ಲಿ ವ್ಯತ್ಯಯವಾದಾಗ, ನಿಸ್ಸಂದೇಹವಾಗಿ ಅನಾರೋಗ್ಯ ಬಾಧಿಸುವುದು. 

ನಾವು ದಿನನಿತ್ಯ ಸೇವಿಸುವ ವೈವಿಧ್ಯಮಯ ಆಹಾರಗಳಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ಕೊಬ್ಬು,ಜೀವಸತ್ವಗಳು, ಖನಿಜಗಳು, ಲವಣಗಳು, ನಾರುಪದಾರ್ಥ ಮತ್ತು ನೀರು ಎಂದು ವಿನ್ಗದಿಸಬಹುದಾದ ಪೋಷಕಾಂಶಗಳು ನಿರ್ದಿಷ್ಟ ಪ್ರಮಾಣದಲ್ಲಿ ಇರುತ್ತವೆ. ಇವುಗಳಲ್ಲಿ ಯಾವುದಾದರೊಂದು ಪೋಷಕಾಂಶದ ಕೊರತೆ ಉಂಟಾದಾಗ, ಅದಕ್ಕೆ ಸಂಬಂಧಿಸಿದ ಕಾಯಿಲೆ ಪೀಡಿಸುವ ಸಾಧ್ಯತೆ ಇರುತ್ತದೆ. 

ಅವಿದ್ಯಾವಂತ ಕೂಸಪ್ಪನು ದಿನದಲ್ಲಿ ಮೂರು ಹೊತ್ತು ಅನ್ನವನ್ನೇ ಉಣ್ಣುತ್ತಿದ್ದುದರಿಂದ, ಕೇವಲ ಅಕ್ಕಿಯಲ್ಲಿರುವ ಪೋಷಕಾಂಶಗಳು ಮಾತ್ರ ಆತನ ಶರೀರಕ್ಕೆ ಲಭ್ಯವಾಗುತ್ತಿದ್ದವು. ರಕ್ತವರ್ಧಕ ಪೋಷಕಾಂಶಗಳ ಕೊರತೆಯಿಂದಾಗಿಯೇ ಆತನಿಗೆ ತೀವ್ರ ರಕ್ತಹೀನತೆ ಪ್ರಾರಂಭವಾಗಿತ್ತು. ಭಾರತದ ಬಹುತೇಕ ಜನರಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಈ ಸಮಸ್ಯೆಯನ್ನು ಸೂಕ್ತ ಚಿಕಿತ್ಸೆಯಿಂದ ಸರಿಪಡಿಸಬಹುದು. ಆದರೆ ಚಿಕಿತ್ಸೆ ಮುಗಿದ ಬಳಿಕ ಸಮತೋಲಿತ ಆಹಾರವನ್ನು ಕ್ರಮಬದ್ಧವಾಗಿ ದಿನನಿತ್ಯ ಸೇವಿಸದಿದ್ದಲ್ಲಿ "ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ" ಎನ್ನುವಂತೆ, ಸಮಸ್ಯೆ ಮತ್ತೆ ಮರುಕಳಿಸುವುದರಲ್ಲಿ ಸಂದೇಹವಿಲ್ಲ!. 

ನಿವಾರಣೆ 

ದಿನನಿತ್ಯ ಸೇವಿಸುವ ಆಹಾರದಲ್ಲಿ ವಿವಿಧ ಧವಸ- ಧಾನ್ಯಗಳು, ಹಸಿರು ಸೊಪ್ಪು, ತರಕಾರಿಗಳು, ಹಾಲು, ಮೊಸರು, ಬೆಣ್ಣೆ, ತುಪ್ಪ, ಎಣ್ಣೆ, ಮೊಟ್ಟೆ,ಮೀನು, ಮಾಂಸ ಇತ್ಯಾದಿಗಳನ್ನು ಹಿತಮಿತವಾಗಿ ಬಳಸುವುದು ಅವಶ್ಯ. ಜೊತೆಗೆ ದಿನದಲ್ಲಿ ಕನಿಷ್ಠ ಎರಡರಿಂದ ಮೂರು ಲೀಟರ್ ಶುದ್ಧ ನೀರನ್ನು ಕುಡಿಯುವುದು ಅಷ್ಟೇ ಅವಶ್ಯ. 

ಕಬ್ಬಿಣದ ಸತ್ವ ಮತ್ತು ಪೋಷಕಾಂಶಗಳ ಕೊರತೆಯಿಂದ ಉದ್ಭವಿಸಬಲ್ಲ ರಕ್ತಹೀನತೆಯಿಂದ ರಕ್ಷಿಸಿಕೊಳ್ಳಲು ಫೋಲಿಕ್ ಆಸಿಡ್, ಜೀವಸತ್ವ ಬಿ-೧೨ ಮತ್ತು ಕಬ್ಬಿಣದ ಸತ್ವಗಳಿರುವ ಈ ಕೆಳಗಿನ ಆಹಾರಗಳನ್ನು ಸೇವಿಸಿ. ಜೊತೆಗೆ ವರ್ಷದಲ್ಲಿ ಎರಡುಬಾರಿ ಜಂತು ಹುಳಗಳ ನಿವಾರಣೆಗಾಗಿ ತಪ್ಪದೆ ಔಷದ ಸೇವಿಸಿ. 

ಹಸಿರು ಸೊಪ್ಪು, ತರಕಾರಿಗಳು, ಮೊಳಕೆ ಬರಿಸಿದ ಧಾನ್ಯಗಳು, ಮೊಟ್ಟೆ ಮತ್ತು ಲಿವರ್ ಗಳಲ್ಲಿ (ಉದಾ- ಕುರಿಯ ಲಿವರ್) ಫೋಲಿಕ್ ಆಸಿಡ್ ಸಾಕಷ್ಟು ಪ್ರಮಾಣದಲ್ಲಿದೆ. ಹಾಲು ಮತ್ತು ಅದರ ಉತ್ಪನ್ನಗಳು, ಮಾಂಸ, ಜೀವಸತ್ವ ಬಿ-೧೨ ಹಾಗೂ ಸೊಪ್ಪು,ತರಕಾರಿಗಳು, ಧಾನ್ಯಗಳು, ನೆಲಗಡಲೆ, ಸಜ್ಜೆ, ರಾಗಿ ಮತ್ತು ಮೊಟ್ಟೆಗಳಲ್ಲಿ ಕಬ್ಬಿಣದ ಸತ್ವಗಳು ಯಥೇಚ್ಚವಾಗಿ ಲಭ್ಯವಿದೆ. 

ಈ ರೀತಿಯಲ್ಲಿ ಸಮೃದ್ಧ ಸಮತೋಲಿತ ಆಹಾರ ಸೇವನೆಯೊಂದಿಗೆ ನಿಗದಿತ ಸಮಯದಲ್ಲಿ ನಿಯಮಿತವಾಗಿ ನಡಿಗೆ, ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವುದು ರಕ್ತಹೀನತೆಯನ್ನು ದೂರವಿರಿಸಲು ಉಪಯುಕ್ತವೆನಿಸುವುದು. 

ಚಿಕಿತ್ಸೆ 

ನಿರ್ದಿಷ್ಟ ಹಾಗೂ ನಿಖರವಾದ ರಕ್ತ ಪರೀಕ್ಷೆ ಹಾಗೂ ಇನ್ನಿತರ ಪರೀಕ್ಷೆಗಳ ಮೂಲಕ ವಿವಿಧ ರೀತಿಯ ರಕ್ತಹೀನತೆಗಳನ್ನು ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆಯನ್ನು ನಿಗದಿತ ಅವಧಿಗೆ ಪಡೆದುಕೊಳ್ಳಲೇ ಬೇಕು. ಇದರೊಂದಿಗೆ ರಕ್ತಹೀನತೆಗೆ ಕಾರಣವಾಗಿರುವ ದೋಷಪೂರಿತ ಆಹಾರ ಸೇವನಾಕ್ರಮವನ್ನು ಸರಿಪಡಿಸಬೇಕು. ರಕ್ತಸ್ರಾವಕ್ಕೆ ಕಾರಣವಾಗಿರಬಹುದಾದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು, ಮೂಲವ್ಯಾಧಿ, ಕ್ಷಯ, ಜಂತು ಹುಳಗಳ ಬಾಧೆ ಮತ್ತು ಇನ್ನಿತರ ಸಮಸ್ಯೆಗಳಿಗೆ ಸಮರ್ಪಕ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. 

ಆದರೆ ತೀವ್ರ ರಕ್ತಸ್ರಾವದಿಂದ ಪ್ರಾಣಾಪಾಯದ  ಸ್ಥಿತಿಯಲ್ಲಿರುವ ರೋಗಿಗಳಿಗೆ, ಅವಶ್ಯಕ ಪ್ರಮಾಣದ ರಕ್ತವನ್ನೇ ತಕ್ಷಣ ನೀಡಬೇಕಾಗುವುದು. ಸೌಮ್ಯ ರೂಪದ ಸಮಸ್ಯೆಗಲಿದ್ದಲ್ಲಿ ಕಬ್ಬಿಣದ ಸತ್ವ ಮತ್ತು ಜೀವಸತ್ವಗಳ ಮಾತ್ರೆ, ಕ್ಯಾಪ್ಸೂಲ್ ಅಥವಾ ಸಿರಪ್ ಗಳನ್ನೂ ನೀಡಬಹುದು. ಅಪರೂಪದಲ್ಲಿ ಕೆಲ ರೋಗಿಗಳಿಗೆ ಇಂಜೆಕ್ಷನ್ ನೀಡಬೇಕಾಗುವುದು. 

ಒಂಜಿ ಕುಪ್ಪಿ ಟಾನಿಕ್ ಕೊರ್ಲೆ!

ಊರಿಗೆ ಹೊಸದಾಗಿ ಬಂದ ಪ್ರತಿಯೊಬ್ಬ ವೈದ್ಯರಲ್ಲಿ ಸಣಕಲು ಶರೀರದ ತನ್ನ ಮೊಮ್ಮಗನನ್ನು ಕರೆದೊಯ್ಯುವುದು ಚಿನ್ನಮ್ಮನಿಗೆ ರೂಢಿಯಾಗಿತ್ತು. ಮಗುವನ್ನು ದಷ್ಟಪುಷ್ಟವಾಗಿಸಬಲ್ಲ "ಒಂಜಿ ಕುಪ್ಪಿ ಟಾನಿಕ್ ಕೊರ್ಲೆ' ( ಒಂದು ಬಾಟಲಿ ಟಾನಿಕ್ ಕೊಡಿ) ಎಂದು ಅಂಗಲಾಚುತ್ತಿದ್ದ ಚಿನ್ನಮ್ಮ, ವೈದ್ಯರ ಬಳಿ ಆತನನ್ನು ತಪಾಸಣೆ ಮಾಡಿಸುತ್ತಿರಲಿಲ್ಲ. ಇದೇ ಕಾರಣದಿಂದಾಗಿ ಹಲವಾರು ವೈದ್ಯರು ನೀಡಿದ್ದ ಹತ್ತಾರು ಟಾನಿಕ್ ಗಳು ಅಪೇಕ್ಷಿತ ಪರಿಣಾಮವನ್ನು ನೀಡಿರಲಿಲ್ಲ. 

ಆದರೆ ಈ ಬಾರಿ ಚಿನ್ನಮ್ಮ ಭೇಟಿಯಾಗಿದ್ದ ವೈದ್ಯರು ಮಾತ್ರ ತಾನು ಯಾವುದೇ ರೋಗಿಯನ್ನು ಪರೀಕ್ಷಿಸದೆ ಔಷದವನ್ನೇ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದಿದ್ದರು. ಒತ್ತಾಯಪೂರ್ವಕವಾಗಿ ಮಗುವನ್ನು ಪರೀಕ್ಷಿಸಿದ ವೈದ್ಯರಿಗೆ ಜಂತು ಹುಳಗಳ ಬಾಧೆ ಮತ್ತು ಪೋಷಕಾಂಶಗಳ ಕೊರತೆಯೇ ಮಗುವಿನ ಕೃಶಕಾಯಕ್ಕೆ ಕಾರಣವೆಂದು ತಿಳಿಯಿತು. ಚಿಕಿತ್ಸೆಯ ಪ್ರಾರಂಭಿಕ ಹಂತದಲ್ಲಿ ಜಂತು ಹುಳಗಳ ನಿವಾರಣೆಗೆ ಔಷದ ನೀಡಲಾಯಿತು. ಮರುದಿನ ಮಲದೊಂದಿಗೆ ಹೊರಬಿದ್ದ ಜಂತು ಹುಳಗಳನ್ನು ಕಂಡು ಚಿನ್ನಮ್ಮನಿಗೆ ದಿಗಿಲಾಗಿತ್ತು. 

ದ್ವಿತೀಯ ಹಂತದಲ್ಲಿ ವೈದ್ಯರು ನೀಡಿದ್ದ ಟಾನಿಕ್ ಮತ್ತು ಅವರೇ ಸೂಚಿಸಿದ ಸತ್ವಭರಿತ ಆಹಾರಗಳನ್ನು ಮೂರು ತಿಂಗಳ ಕಾಲ ನೀಡಲಾಯಿತು. ಹೊಸ ವೈದ್ಯರ ಚಿಕಿತ್ಸೆ ನಿರೀಕ್ಷೆಗೂ ಮೀರಿದ ಫಲಿತಾಂಶ ನೀಡಲು ಯಶಸ್ವಿಯಾಗಿತ್ತು. ಏಕೆಂದರೆ ನಾಲ್ಕು ವರ್ಷದ ಮೊಮ್ಮಗನನ್ನು ಲೀಲಾಜಾಲವಾಗಿ ಸೊಂಟದಲ್ಲಿ ಹೊತ್ತು ತಿರುಗುತ್ತಿದ್ದ ಚಿನ್ನಮ್ಮನು, ಇದೀಗ ಗುಂಡುಗುಂಡಾಗಿದ್ದ ಆತನನ್ನು ಹೊರಲಾರದೇ ನಡೆಸಿಕೊಂಡು ಹೋಗುತ್ತಿರುವುದೇ ಇದಕ್ಕೆ ಸಾಕ್ಷಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ತರಂಗ ವಾರಪತ್ರಿಕೆಯ ದಿ. ೧೨-೦೮-೨೦೦೪ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ 


Tuesday, October 15, 2013

Bottled water- Problems galore!




                              ಬಾಟಲಿ ನೀರು: ಸಮಸ್ಯೆಗಳು ನೂರಾರು!

   ಒಂದೆರಡು ದಶಕಗಳ ಹಿಂದಿನ ತನಕ ದಕ್ಷಿಣ ಕನ್ನಡ ಜಿಲ್ಲೆಯ ಜನರು ತಮ್ಮ ಮನೆಗಳಿಗೆ ಬಂದ ಅತಿಥಿಗಳಿಗೆ ಕುದಿಸಿ ತಣಿಸಿದ ನೀರಿನೊಂದಿಗೆ ಬೆಲ್ಲವನ್ನು ನೀಡುವ ನೀಡುವ ಸಂಪ್ರದಾಯವಿತ್ತು. ಅತಿಥಿಗಳ ದಣಿವು ಮತ್ತು ಬಾಯಾರಿಕೆಗಳನ್ನು ನೀಗಿಸಲು ಇದು ಉಪಯುಕ್ತವೆನಿಸುತ್ತಿತ್ತು. 

ಆದರೆ ಇಂದು ಬೆಲ್ಲ ಮತ್ತು ನೀರಿನ ಸ್ಥಾನವನ್ನು ಲಘುಪಾನೀಯ ಅಥವಾ ಬಾಟಲೀಕರಿಸಿದ ಕುಡಿಯುವ ನೀರು ಆಕ್ರಮಿಸಿಕೊಂಡಿರುವುದರಿಂದ, ಹಿಂದಿನ ಸಂಪ್ರದಾಯ ಕಣ್ಮರೆಯಾಗಿದೆ. ಜೊತೆಗೆ ಖಾಸಗಿ- ಸರಕಾರೀ ಸಮಾರಂಭಗಳು ಮತ್ತಿತರ ಕಾರ್ಯಕ್ರಮಗಳಲ್ಲಿ, ವೇದಿಕೆಯಲ್ಲಿರುವ ಗಣ್ಯರು- ಅತಿಥಿಗಳ ಮುಂದೆ ಕುಡಿಯುವ ನೀರಿನ ಬಾಟಲಿಗಳು ರಾರಾಜಿಸುತ್ತಿವೆ. ಬಹುತೇಕ ಜನರು ಪರಿಶುದ್ಧವಾಗಿದೆ ಎಂದು ಎಂದು ನಂಬಿರುವ ಈ ಬಾಟಲಿ ನೀರಿನ ಬಳಕೆ ವ್ಯಾಪಕವಾಗಿ ಹೆಚ್ಚಲು ನಿರ್ದಿಷ್ಟ ಕಾರಣಗಳೂ ಇವೆ. 

ಆರೋಗ್ಯ ರಕ್ಷಣೆ 

ಮನುಷ್ಯನು ತನ್ನ ಆರೋಗ್ಯದ ರಕ್ಷಣೆಗಾಗಿ ಅನೇಕ ಮಾರ್ಗೋಪಾಯಗಳನ್ನು ಕಂಡುಹಿಡಿದಿದ್ದಾನೆ. ಇವುಗಳಲ್ಲಿ ಪ್ರಾನಾಪಾಯಕ್ಕೂ ಕಾರಣವೇನಿಸಬಲ್ಲ "ಜಲಜನ್ಯ ಕಾಯಿಲೆ" ಗಳಿಂದ ರಕ್ಷಿಸಿಕೊಳ್ಳಲು ಕುಡಿಯುವ ನೀರನ್ನು ಶುದ್ಧೀಕರಿಸಿ ಸುರಕ್ಷಿತವನ್ನಾಗಿಸುವುದೂ ಒಂದಾಗಿದೆ. 

ನಾವು ಕುಡಿಯಲು ಬಳಸುವ ನೀರನ್ನು ಶುದ್ಧೀಕರಿಸಲು ವಿವಿಧ ತಂತ್ರಗಳು- ಯಂತ್ರಗಳು ಲಭ್ಯವಿದೆ. ಆದರೆ ನೀರನ್ನು ತೆಳ್ಳಗಿನ ಬಟ್ಟೆಯಲ್ಲಿ ಸೋಸಿ, ಒಲೆಯ ಮೇಲಿರಿಸಿ, ಕುಡಿಯಲು ಆರಂಭವಾದ ಬಳಿಕ ಸುಮಾರು ೨೦ ನಿಮಿಷಗಳ ಕಾಲ ಕುದಿಸಿದ ಬಳಿಕ ತಣಿಸಿ ಬಳಸುವುದು ನಿಶ್ಚಿತವಾಗಿಯೂ ಆರೋಗ್ಯಕರ ಎನ್ನುವುದರಲ್ಲಿ ಸಂದೇಹವಿಲ್ಲ. 

ಆದರೆ ಇಂದು ಬಹುತೇಕ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಕ್ಯಾಂಡಲ್ ಫಿಲ್ಟರ್, ನೀರಿನ ನಲ್ಲಿಗೆ ಜೋಡಿಸುವ ಪುಟ್ಟ ಫಿಲ್ಟರ್, ಅಲ್ಟ್ರಾ ವಯೊಲೆಟ್ ಕಿರಣಗಳು ಅಥವಾ ರಿವರ್ಸ್ ಓಸ್ಮೊಸಿಸ್ ತಂತ್ರಜ್ಞಾನವನ್ನು ಬಳಸಿ ನಿರ್ಮಿತವಾದ ಉಪಕರಣಗಳನ್ನು ಬಳಸಲು ಆರಂಭಿಸಿದ್ದಾರೆ. ಇನ್ನು ಕೆಲವರಂತೂ ಮಾರುಕಟ್ಟೆಯಲ್ಲಿ ದೊರೆಯುವ ಶುದ್ಧೀಕರಿಸಿದ ಕುಡಿಯುವ ನೀರಿನ ಬಾಟಲಿಗಳು ಅಥವಾ ಜಾಡಿಗಳನ್ನೇ ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ ಕುಡಿಯುತ್ತಾರೆ. ಅದೇ ರೀತಿಯಲ್ಲಿ ವಿಭಿನ್ನ ವಿಧಾನಗಳನ್ನು ಬಳಸುತ್ತಿರುವ ಪ್ರತಿಯೊಬ್ಬರೂ, ತಾವು ಪರಿಶುದ್ಧವಾದ ನೀರನ್ನೇ ಕುಡಿಯುತ್ತಿದ್ದೇವೆ ಎಂದು ಧೃಢವಾಗಿ ನಂಬುತ್ತಾರೆ. ಇವೆಲ್ಲಕ್ಕೋ ಮಿಗಿಲಾಗಿ ಪರಿಸರ ಪ್ರದೂಷಣೆಯಿಂದಾಗಿ ಕಲುಷಿತಗೊಂಡ ನೀರನ್ನು ಕುಡಿದು ಕಾಯಿಲೆಗಳನ್ನು ಆಹ್ವಾನಿಸುವ ಬದಲಾಗಿ, "ಬಾಟಲೀಕರಿಸಿದ ನೀರು" ಬಳಸುವ ಮೂಲಕ ಇನ್ನಷ್ಟು ಪರಿಸರ ಪ್ರದೂಷಣೆಗೆ ಕಾರಣಕರ್ತರೆನಿಸುತ್ತಾರೆ!. 

ವಾಣಿಜ್ಯ ಸರಕು 

ಶ್ರೀಮಂತ ರಾಷ್ಟ್ರಗಳ ಸಿರಿವಂತ ಜನರು ತಮ್ಮ ಆರೋಗ್ಯ, ಅಂತಸ್ತು ಮತ್ತು ಪ್ರತಿಷ್ಠೆಯ ದ್ಯೋತಕವಾಗಿ ಬಳಸಲಾರಂಭಿಸಿದ ಶುದ್ಧೀಕರಿಸಿದ ಕುಡಿಯುವ ನೀರಿನ ಬಾಟಲಿಗಳ ಉತ್ಪಾದನೆಯು, ಇಂದು ರಕ್ತಬೀಜಾಸುರನಂತೆ ಬೆಳೆಯುತ್ತಿದೆ. ೨೦೦೬ ರಲ್ಲಿ ಅಮೆರಿಕದ ಪ್ರಜೆಗಳು ೩೧ ಬಿಲಿಯನ್ ಬಾಟಲೀಕೃತ ನೀರನ್ನು ಖರೀದಿಸಲು ೧೧ ಬಿಲಿಯನ್ ಡಾಲರ್ ಗಳನ್ನು ವ್ಯಯಿಸಿದ್ದರು. ಈ ವಿಚಾರದಲ್ಲಿ ಭಾರತೀಯರೂ ಹಿಂದಿಲ್ಲ. ಜಗತ್ತಿನಲ್ಲಿ ಅತ್ಯಧಿಕ ಬಾಟಲೀಕೃತ ನೀರನ್ನು ಬಳಸುವ ದೇಶಗಳ ಪಟ್ಟಿಯಲ್ಲಿ ಭಾರತವು ೧೦ ನೇ ಸ್ಥಾನದಲ್ಲಿದೆ. ೧೯೯೦ ರಲ್ಲಿ ಭಾರತೀಯರು ೨ ಮಿಲಿಯನ್ ನೀರಿನ ಬಾಟಲಿಗಳ ಪೆಟ್ಟಿಗೆಗಳನ್ನು ಖರೀದಿಸಿದ್ದು, ೨೦೦೬ ರಲ್ಲಿ ಇದರ ಪ್ರಮಾಣವು ೬೮ ಮಿಲಿಯನ್ ಪೆಟ್ಟಿಗೆಗಳನ್ನು ತಲುಪಿತ್ತು!. 

ಲೀಟರ್ ಒಂದರ ೧೫ ರೂಪಾಯಿಗಳನ್ನು ತೆತ್ತು ನೀವು ಖರೀದಿಸುವ ಬಾಟಲೀಕೃತ ನೀರಿನ ಪರಿಶುದ್ಧತೆಯ ಬಗ್ಗೆ ಸಾಕಷ್ಟು ವಾದ- ವಿವಾದಗಳೂ ನಡೆದಿವೆ. ಇದೇ ದಶಕದ ಆದಿಯಲ್ಲಿ ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಸೆಂಟರ್ ಫಾರ್ ಸಯನ್ಸ್ ಎಂಡ್ ಎನ್ವಯರಾನ್ಮೆಂಟ್ ನ ವಿಜ್ಞಾನಿಗಳು, ಭಾರತದಲ್ಲಿ ತಯಾರಿಸಲ್ಪಟ್ಟು ಮಾರಾಟವಾಗುವ ವಿವಿಧ ತಯಾರಕರ ಉತ್ಪನ್ನಗಳನ್ನು ಪರೀಕ್ಷಿಸಿ, ಇವುಗಳು ಪರಿಶುದ್ಧವಾಗಿಲ್ಲ ಎಂದು ಘೋಷಿಸಿದ್ದರು. ಕಳೆದ ತಿಂಗಳಿನಲ್ಲಿ ವಿಶ್ವವಿಖ್ಯಾತ ಬಹುರಾಷ್ಟ್ರೀಯ ಸಂಸ್ಥೆಯೊಂದು (ಅಮೆರಿಕದಲ್ಲಿ ) ತಾನು ಮಾರಾಟ ಮಾಡುತ್ತಿರುವ ಬಾಟಲೀಕೃತ ನೀರು, ಕೇವಲ ನಲ್ಲಿನೀರಲ್ಲದೆ ಬೇರೇನೂ ಅಲ್ಲವೆಂದು ಅನಿವಾರ್ಯವಾಗಿ ಒಪ್ಪಿಕೊಂಡಿತ್ತು. 

ಭಾರತದಲ್ಲಿ ಮಾರಾಟವಾಗುತ್ತಿರುವ ಶುದ್ಧೀಕರಿಸಿದ ಹಾಗೂ ಬಾತಲೀಕರಿಸಿದ ನೀರಿನ ಗುಣಮಟ್ಟ- ಶುದ್ಧತೆಗಳು ನಿಗದಿತ ಮಟ್ಟದಲ್ಲಿ ಇರುವುದಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ "ಐ ಎಸ ಐ" ಪ್ರಮಾಣಪತ್ರವನ್ನು ನೀಡುವ "ಬಿ ಐ ಎಸ" ಸಂಸ್ಥೆಗೆ, ಭಾರತದ ಸಹಸ್ರಾರು ವಾಣಿಜ್ಯ ಸಂಸ್ಥೆಗಳು ತಮ್ಮ ಉತ್ಪನ್ನಗಳಿಗೆ (ಬಾಟಲೀಕೃತ ನೀರಿಗೆ ) ಪ್ರಮಾಣಪತ್ರವನ್ನು ನೀಡುವಂತೆ ಅರ್ಜಿಗಳನ್ನು ಸಲ್ಲಿಸಿವೆ. ಆದರೆ ಈ ಸಂಸ್ಥೆಯ ಬಾಲಿ ನೀರಿನ ಗುಣಮಟ್ಟ ಹಾಗೂ ಶುದ್ಧಾಶುದ್ಧತೆಗಳನ್ನು ಪರೀಕ್ಷಿಸಲು ಅವಶ್ಯಕ ವ್ಯವಸ್ಥೆ- ಸೌಲಭ್ಯಗಳೇ ಇಲ್ಲದಿರುವುದರಿಂದ, ನಮಗೆ ಲಭ್ಯವಾಗುತ್ತಿರುವ ನೀರಿನ ಪರಿಶುದ್ಧತೆಗೆ ಯಾವುದೇ ಖಾತರಿ ಇಲ್ಲದಂತಾಗಿದೆ!. 

ಲಾಭದಾಯಕ ಉದ್ದಿಮೆ 

ಬಡ ಭಾರತದಲ್ಲಿ ೧೯೯೯-೨೦೦೪ ರ ಅವಧಿಯಲ್ಲಿ ಕುಡಿಯುವ ನೀರಿನ ಬಾಟಲಿಗಳ ಮಾರಾಟವು ಐದು ಪಟ್ಟು ಹೆಚ್ಚಿತ್ತು. ೨೦೦೬ ರಲ್ಲಿ ಅಮೆರಿಕದ ಪ್ರಜೆಗಳು ೩೧ ಬಿಲಿಯನ್ ಲೀಟರ್ ಬಾಟಲೀಕರಿಸಿದ ನೀರಿಗೆ ೧೧ ಬಿಲಿಯನ್ ಡಾಲರ್ ವ್ಯಯಿಸಿದ್ದರು. ವಾರ್ಷಿಕ ಶೇ. ೪೦ ರಷ್ಟು ಬೆಳೆಯುತ್ತಿರುವ, ಸಹಸ್ರಾರು ಕೋತಿ ರೂಪಾಯಿಗಳ ಈ ಉದ್ಯಮವು ಅತ್ಯಂತ ಲಾಭದಾಯಕ ಎನಿಸಿದೆ. ಇದೇ ಕಾರಣದಿಂದ ಭಾರತದಾದ್ಯಂತ ಈಗಾಗಲೇ ೧೦೦೦ ಕ್ಕೂ ಅಧಿಕ ವಾಣಿಜ್ಯ ಸಂಸ್ಥೆಗಳು ಈ ವ್ಯವಹಾರವನ್ನು ಆರಂಭಿಸಿವೆ. 

ಭಾರತದಲ್ಲಿ ಭದ್ರವಾಗಿ ಬೇರೂರಿರುವ ಕೆಲ ಬಹುರಾಷ್ಟ್ರೀಯ ಸಂಸ್ಥೆಗಳು ಅನೇಕ ರಾಜ್ಯಗಳಲ್ಲಿ ಈ ಉದ್ದಿಮೆಯನ್ನು ಆರಂಭಿಸಿ, ಅತ್ಯಲ್ಪ ವೆಚ್ಚದಲ್ಲಿ ಅಪಾರ ಲಾಭವನ್ನು ಗಳಿಸುತ್ತಿವೆ. ಬರಪೀಡಿತ ಜೈಪುರದಲ್ಲಿ ಇಂತಹ ಘಟಕವೊಂದನ್ನು ಆರಂಭಿಸಿರುವ ಬಹುರಾಷ್ಟ್ರೀಯ ಸಂಸ್ಥೆಯೊಂದು ಕೊಳವೆ ಬಾವಿಯನ್ನು ಕೊರೆದು, ಪ್ರತಿನಿತ್ಯ ಲಕ್ಷಾಂತರ ಲೀಟರ್ ಗಳಷ್ಟು ನೀರನ್ನು ಬಳಸುತ್ತಿದೆ. ಅಗಾಧ ಪ್ರಮಾಣದ ನೀರನ್ನು ಬಳಸಿದ್ದಕ್ಕಾಗಿ ಸ್ಥಳೀಯ ಸಂಸ್ಥೆಗೆ ಕೆಲ ವರ್ಷಗಳ ಹಿಂದಿನ ತನಕ ವರ್ಷದಲ್ಲಿ ಕೇವಲ ೨೪ ಸಾವಿರ ರೂಪಾಯಿಗಳನ್ನು ತೆರುತ್ತಿತ್ತು. ಅರ್ಥಾತ್, ಸುಮಾರು ೧೦೦೦ ಲೀಟರ್ ನೀರಿಗೆ ೧೪ ಪೈಸೆ ಶುಲ್ಕವನ್ನು ನೀಡುತ್ತಿತ್ತು. ಅಂದರೆ ತಾನು ಸಿದ್ಧಪಡಿಸುತ್ತಿದ್ದ ಒಂದು ಲೀಟರ್ ಬಾಟಲೀಕೃತ ನೀರಿಗೆ, ಈ ಸಂಸ್ಥೆಯು ೦. ೦೨ ರಿಂದ ೦. ೦೩ ಪೈಸೆಗಳನ್ನು ವ್ಯಯಿಸುತ್ತಿತ್ತು!. 

ಅದೇ ರೀತಿಯಲ್ಲಿ ಈ ನೀರನ್ನು ಶುದ್ಧೀಕರಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿದರೂ, ಒಂದು ಲೀಟರ್ ನೀರಿನ ಶುದ್ಧೀಕರಣದ ವೆಚ್ಚ ಕೇವಲ ೨೫ ಪೈಸೆಗಳಾಗುತ್ತವೆ. ಆದರೆ ಈ ನೀರನ್ನು ತುಂಬಿಸಿ ಮಾರಾಟಮಾಡಲು ಬಳಸುವ ಪ್ಲಾಸ್ಟಿಕ್ ಬಾಟಲಿಯೊಂದಕ್ಕೆ ೩ ರಿಂದ ೪ ರೂ. ಹಾಗೂ ಇವುಗಳ ಸಾಗಾಟ ಮತ್ತು ಈ ಉತ್ಪನ್ನದ ಜಾಹೀರಾತುಗಳಿಗಾಗಿ ವ್ಯಯಿಸುವ ಹಣವನ್ನು ಸೇರಿಸಿದ ಬಳಿಕವೂ ತಯಾರಕರಿಗೆ ಈ ವೆಚ್ಚವು ಹೊರೆಯೆನಿಸುವುದಿಲ್ಲ. ಇದೇ ಕಾರಣದಿಂದಾಗಿ ಬಾಟಲಿಯೊಂದಕ್ಕೆ ೧೫ ರೂ. ಗಳಂತೆ ಮಾರಾಟವಾಗುವ ಈ ವಾಣಿಜ್ಯ ಸರಕು, ಇದರ ತಯಾರಕರಿಗೆ ಕೈತುಂಬಾ ಲಾಭವನ್ನು ತಂದುಕೊಡುವುದರಲ್ಲಿ ಸಂದೇಹವಿಲ್ಲ. 

ವಿಶೇಷವೆಂದರೆ ಸ್ಥಳೀಯ ಸಂಸ್ಥೆಗಳು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ನಮಗೆ ದಿನನಿತ್ಯ ಪೂರೈಸುವ ಶುದ್ಧೀಕರಿಸಿದ ಕುಡಿಯುವ ನೀರಿನ ದರವನ್ನು ಅಪರೂಪದಲ್ಲೊಮ್ಮೆ ಹತ್ತಾರು ರೂಪಾಯಿಗಳಷ್ಟು ಹೆಚ್ಚಿಸಿದಾಗ ತೀವ್ರವಾಗಿ ಪ್ರತಿಭಟಿಸುವ ಜನರು, ದುಬಾರಿ ಬೆಲೆಯನ್ನು ತೆತ್ತು ಬಾಟಲೀಕರಿಸಿದ ನೀರನ್ನು ಖರೀದಿಸಿ ಕುಡಿಯುವುದು ನಂಬಲಸಾಧ್ಯವೆನಿಸುತ್ತದೆ. 

ಅಮೆರಿಕ - ಯುರೋಪ್ ಗಳಲ್ಲಿ ಸಾರ್ವಜನಿಕ ವ್ಯವಸ್ಥೆಯಲ್ಲಿ ಸರಬರಾಜು ಮಾಡುವ ನಲ್ಲಿ ನೀರಿನ ಗುಣಮಟ್ಟ ಹಾಗೂ ಪರಿಶುದ್ಧತೆ,  ಅಲ್ಲಿ ದೊರೆಯುವ ಬಾಟಲೀಕೃತ ನೀರಿಗಿಂತಲೂ ಉತ್ತಮವಾಗಿರುತ್ತದೆ. ಏಕೆಂದರೆ ಅಲ್ಲಿನ ಸರಕಾರಗಳು ಇದಕ್ಕೆ ನಿರ್ದಿಷ್ಟ ಮಾನದಂಡಗಳನ್ನು ರೂಪಿಸಿದ್ದು, ಇದನ್ನು ಸಮರ್ಪಕವಾಗಿ ಪರಿಪಾಲಿಸಲಾಗುತ್ತಿದೆಯೇ ಎಂದು ನಿಯಮಿತವಾಗಿ ಪರೀಕ್ಷಿಸಲಾಗುತ್ತದೆ. 

ಪರಿಸರಕ್ಕೆ ಹಿತಕರವಲ್ಲ 

ಶುದ್ಧೀಕರಿಸಿದ ಬಾಟಲೀಕೃತ ನೀರಿನ ಉದ್ದಿಮೆಯಿಂದಾಗಿ ಪೋಲಾಗುವ ಅಗಾಧ ಪ್ರಮಾಣದ ನೀರು,ವಿದ್ಯುತ್ ಶಕ್ತಿ ಹಾಗೂ ಬಾಟಲಿಗಳ ತಯಾರಿಕೆ ಮತ್ತು ಸಾಗಾಟಗಳಿಗಾಗಿ ಬಳಸಲ್ಪಡುವ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಇವೆಲ್ಲಕ್ಕೂ ಮಿಗಿಲಾಗಿ ಬಳಸಿ ಎಸೆದ ಅಸಂಖ್ಯ ಖಾಲಿ ಬಾಟಲಿಗಳಿಂದ ಸಂಭವಿಸುವ ಪರಿಸರ ಪ್ರದೂಷಣೆ ಹಾಗೂ ತತ್ಪರಿಣಾಮವಾಗಿ ಜಾಗತಿಕ ತಾಪಮಾನದ ಏರಿಕೆಗಳು ಮನುಕುಲಕ್ಕೆ ಮಾರಕವೆನಿಸುತ್ತಿವೆ. ಮಾತ್ರವಲ್ಲ ಶುದ್ಧೀಕರಿಸಿದ ನೀರನ್ನು ಸಿದ್ಧಪಡಿಸುವ ಘಟಕಗಳಿಂದ ಹೊರಬೀಳುವ ತ್ಯಾಜ್ಯಗಳಿಂದ ಸುತ್ತಮುತ್ತಲಿನ ಜಲಮೂಳಗಳೂ ಕಲುಷಿತಗೊಳ್ಳುತ್ತವೆ. ಈ ಅಪಾಯಕಾರೀ ಬೆಳವಣಿಗೆಯನ್ನು ಅಧ್ಯಯನ ಮಾಡಿರುವ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು, ಈ ಸಮಸ್ಯೆಯ ನಿವಾರಣೆಯತ್ತ ಗಮನಹರಿಸುತ್ತಿವೆ. 

ಅಮೆರಿಕದ ಸಾನ್ಫ್ರಾನ್ಸಿಸ್ಕೋ  ನಗರದ ಸರಕಾರೀ ಕಚೇರಿಗಳಲ್ಲಿ ಬಾಟಲೀಕೃತ ನೀರಿನ ಬಳಕೆಯನ್ನು ಇತ್ತೀಚಿಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಏಕೆಂದರೆ ಅಮೆರಿಕದಲ್ಲಿ ದಿನನಿತ್ಯ ೬೦ ಮಿಲಿಯನ್ ನೀರಿನ ಬಾಟಲಿಗಳನ್ನು ಬಳಸಿ ಎಸೆಯಲಾಗುತ್ತಿದ್ದು, ಇವುಗಳನ್ನು ಸಂಗ್ರಹಿಸಿ ಸಮರ್ಪಕವಾಗಿ ವಿಲೇವಾರಿ ಮಾಡುವುದು ಮತ್ತು  ಇವುಗಳಿಂದ ಸಂಭವಿಸುವ ಪರಿಸರ ಪ್ರದೂಷಣೆ, ಸರಕಾರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಸಾಲ್ಟ್ ಲೇಕ್ ಸಿಟಿಯ ಸರಕಾರೀ ನೌಕರರು ಯಾವುದೇ ಸಭೆ- ಸಮಾರಂಭಗಳಲ್ಲಿ ಕುಡಿಯುವ ನೀರಿನ ಬಾಟಲಿಗಳನ್ನು ಪೂರೈಸದಂತೆ ಅಲ್ಲಿನ ಮೇಯರ್ ಗತವರ್ಷದಲ್ಲಿ ಕರೆನೀಡಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿನ ವಿಲಾಸಿ ಹೋಟೆಲ್ ಗಳು ಬಾಟಲೀಕೃತ ನೀರನ್ನು ಗ್ರಾಹಕರಿಗೆ ಸರಬರಾಜು ಮಾಡುವುದನ್ನೇ ನಿಲ್ಲಿಸಿದ್ದವು. 

ಬಾಟಲೀಕೃತ ನೀರನ್ನು ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ ಕುಡಿಯುವುದನ್ನು ನಾವು ಪಾಶ್ಚಾತ್ಯರಿಂದ ಕಲಿತಿರುವುದು ಸತ್ಯ. ಆದರೆ ಇದರಿಂದಾಗಿ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲು ಪಾಶ್ಚಾತ್ಯರು ಕೈಗೊಂಡಿರುವ ನಿರ್ದಾಕ್ಷಿಣ್ಯ ಹಾಗೂ ಕಠಿಣ ಕ್ರಮಗಳನ್ನು ಅನುಕರಿಸಲು ಹಿಂಜರಿಯುವುದು ಏಕೆ?, ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆಗಳೇ ಇಲ್ಲ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಈ ಲೇಖನದಲ್ಲಿ ಪ್ರಕಟಿತ ಅಂಕಿಅಂಶಗಳು ೨೦೦೬ ರಲ್ಲಿ ಇದನ್ನು ಬರೆಯುವಾಗ ಲಭಿಸಿದ್ದವು. 

ಉದಯವಾಣಿ ಪತ್ರಿಕೆಯ ದಿ. ೧೩-೦೯- ೨೦೦೭ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ