Thursday, October 31, 2013

Measles


                                              ದಡಾರ : ಇದಕ್ಕೇನು ಪರಿಹಾರ?

  ನಿರ್ದಿಷ್ಟ ವೈರಸ್ ನಿಂದ ಉದ್ಭವಿಸಿ ಪುಟ್ಟ ಮಕ್ಕಳನ್ನು ಪೀಡಿಸುವ, ಕಿಂಚಿತ್ ನಿರ್ಲಕ್ಷ್ಯ ತೋರಿದರೂ ಸಂಕೀರ್ಣ ಸಮಸ್ಯೆಗಳಿಗೆ ಕಾರಣವೆನಿಸುವ ಕಾಯಿಲೆಗಳಲ್ಲಿ "ದಡಾರ " ಪ್ರಮುಖವಾಗಿದೆ. ವೈದ್ಯಕೀಯ ಪರಿಭಾಷೆಯಲ್ಲಿ ಮೀಸಲ್ಸ್ ಹಾಗೂ ಕನ್ನಡದಲ್ಲಿ ದಡಾರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರ ಎಂದು ಕರೆಯಲ್ಪಡುವ ಈ ವ್ಯಾಧಿಯು, ಕೆಲ ಸಂದರ್ಭಗಳಲ್ಲಿ ತಾಳುವ ರೂಪ ನಿಜಕ್ಕೂ ಭಯಂಕರ. 
----------------                              ----------------------------------                                  -------------------------------                                     -----------------------------------

ಜನಸಾಮಾನ್ಯರ ಅದರಲ್ಲೂ ಅವಿದ್ಯಾವಂತ ಗ್ರಾಮೀಣ ನಿವಾಸಿಗಳ ಮನದಲ್ಲಿ ಶಾಶ್ವತವಾಗಿ ಮನೆಮಾಡಿರುವ ಅನೇಕ ತಪ್ಪುಕಲ್ಪನೆಗಳು ಮತ್ತು ಮೂಢನಂಬಿಕೆಗಳಿಗೆ ಕಾರಣವೆನಿಸಿರುವ ವ್ಯಾಧಿಗಳಲ್ಲಿ ದಡಾರವೂ ಒಂದಾಗಿದೆ. ಸಾಮಾನ್ಯವಾಗಿ ಪುಟ್ಟ ಮಕ್ಕಳನ್ನೇ ಕಾಡುವ, ಒಂದಿಷ್ಟು ನಿರ್ಲಕ್ಷ್ಯ ತೋರಿದರೂ ತನ್ನ ಮಾರಕತೆಯನ್ನು ತೋರುವ ಈ ವ್ಯಾಧಿಯು ಕೆಲಸಂದರ್ಭಗಳಲ್ಲಿ ಮಾರಣಾಂತಿಕವೆನಿಸುವುದು. ಆದರೆ ಈ ರೀತಿಯ ಸಂಕೀರ್ಣ ಸಮಸ್ಯೆಗಳು ಉದ್ಭವಿಸಲು ಮಾತಾಪಿತರ ಅಜ್ನಾನದೊಂದಿಗೆ, ಇಂತಹ ಕಾಯಿಲೆಗಳಿಗೆ ಆಧುನಿಕ ವೈದ್ಯಕೀಯ ಚಿಕಿತ್ಸೆ ಸಲ್ಲದು ಎನ್ನುವ ತಪ್ಪುಕಲ್ಪನೆಯೇ ಕಾರಣ. 

ಕೆಲ ದಶಕಗಳ ಹಿಂದೆ ತಮ್ಮ ಮಕ್ಕಳಿಗೆ ದಡಾರ ಆರಂಭವಾದೊಡನೆ ತಮ್ಮ ಮನೆಗೆ "ಅಮ್ಮ" ಅಥವಾ "ದೇವಿ" ಬಂದಿರುವಳೆಂದು ಸಂಭ್ರಮಿಸಿ, ಮದ್ಯ- ಮಾಂಸಗಳ ಸೇವನೆಯನ್ನು ವರ್ಜಿಸಿ, ಪರಿಶುದ್ಧರಾಗಿ ಭಜನೆ,ಪೂಜೆ, ಪುನಸ್ಕಾರಗಳನ್ನು ನಡೆಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುವ ಜನರನ್ನು ನೀವೂ ಕಂಡಿರಬಹುದು. ಅದೇ ರೀತಿಯಲ್ಲಿ "ಉಷ್ಣ" ದಿಂದ ಈ ಕಾಯಿಲೆ ಬಂದಿರುವುದೆಂದು ನಂಬುತ್ತಿದ್ದ ಅನೇಕರು, ವ್ಯಾಧಿ ಪೀಡಿತ ಕಂದನ ಶರೀರವನ್ನು "ತಂಪು" ಗೊಳಿಸುವ ಸಲುವಾಗಿ, ವಿವಿಧ ರೀತಿಯ ಖಾದ್ಯ ಪೆಯಗಳೊಂದಿಗೆ ಮನೆಮದ್ದನ್ನು ನೀಡುವ ಸಂಪ್ರದಾಯವನ್ನು ಇಂದಿಗೂ ನಮ್ಮ ರಾಜ್ಯದ ಅನೇಕ ಭಾಗಗಳಲ್ಲಿ ಕಾಣಬಹುದು!. 

ಈ ರೀತಿಯಲ್ಲಿ ಔಷದೋಪಚಾರಗಳ ಅಭಾವದಿಂದ ಹಾಗೂ ರೋಗಪೀಡಿತ ಕಂದನ ಶರೀರವನ್ನು "ತಂಪು" ಗೊಳಿಸುವ ಪ್ರಯೋಗಗಳೊಂದಿಗೆ, ಮನೆಮದ್ದಿನ ಚಿಕಿತ್ಸೆ ನೀಡಿದ ಪರಿಣಾಮವಾಗಿ ವ್ಯಾಧಿ ಉಲ್ಬಣಿಸಿದೊಡನೆ ಅಥವಾ ಪ್ರಾಣಾಪಾಯದ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸಿದೊಡನೆ ವೈದ್ಯರಲ್ಲಿ ಧಾವಿಸುವ ಜನರ ಸಂಖ್ಯೆಯೂ ಕಡಿಮೆಯೇನಿಲ್ಲ!. 

ಇಂತಹ ಸಂದರ್ಭಗಳಲ್ಲಿ ಚಿಕಿತ್ಸೆಯನ್ನು ನೀಡಲು ನಿರಾಕರಿಸಲಾರದ ಅನಿವಾರ್ಯತೆಯಿಂದಾಗಿ, ವೈದ್ಯರು ಪುಟ್ಟಕಂದನ ಪ್ರಾಣಾಪಾಯದ ಸಾಧ್ಯಾಸಾಧ್ಯತೆಗಳ ಬಗ್ಗೆ ಮಾತಾಪಿತರಿಗೆ ಮುನ್ನೆಚ್ಚರಿಕೆ ನೀಡಿದ ಬಳಿಕವೇ ಚಿಕಿತ್ಸೆಯನ್ನು ನೀಡುತ್ತಾರೆ.ಆದರೂ ಚಿಕಿತ್ಸೆ ಫಲಪ್ರದ ಎನಿಸದೇ ಮಗು ಮೃತಪಟ್ಟಲ್ಲಿ, ಕಂದನ ಮರಣಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ದೂರುವುದು ಅಪರೂಪವೇನಲ್ಲ. 

ದಡಾರ ಎಂದರೇನು?

ಪಾರಾ ಮಿಕ್ಸೋ ಗುಂಪಿಗೆ ಸೇರಿದ " ಮೋರ್ಬಿಲಿ " ಎನ್ನುವ ವೈರಸ್ ಗಳಿಂದ ಉದ್ಭವಿಸುವ ದಡಾರವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಮೀಸಲ್ಸ್ ಎಂದು ಕರೆಯುತ್ತಾರೆ. ಅತ್ಯಂತ ಕ್ಷಿಪ್ರಗತಿಯಲ್ಲಿ ಸಾಂಕ್ರಾಮಿಕವಾಗಿ ಹರಡಿ ತೀವ್ರ ರೂಪವನ್ನು ತಾಳುವ ಈ ವ್ಯಾಧಿಯು, ಆರು ತಿಂಗಳ ಒಳಗಿನ ಹಸುಗೂಸುಗಳನ್ನು ಬಾಧಿಸದು. ಆದರೆ ಐದರಿಂದ ಎಂಟು ವರ್ಷ ವಯಸ್ಸಿನ ಮಕ್ಕಳನ್ನು ಹೆಚ್ಚಾಗಿ ಪೀಡಿಸುವ ಈ ವ್ಯಾಧಿಯು ಬೇಸಗೆಯ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು. 

ರೋಗಪೀಡಿತ ಮಕ್ಕಳ ಜೊಲ್ಲಿನ ಕಣಗಳಿಂದ ಹಾಗೂ ರೋಗಿಯೊಂದಿಗೆ ನೇರ ಸಂಪರ್ಕವಿರುವ ವ್ಯಕ್ತಿಗಳಿಂದ ಈ ವೈರಸ್ ಇತರರಿಗೆ ಹರದಬಲ್ಲದು. ಆರೋಗ್ಯವಂತರ ಶರೀರದಲ್ಲಿ ಪ್ರವೇಶ ಗಳಿಸಿದ ಈ  ವೈರಸ್, ೭ ರಿಂದ ೧೪ ದಿನಗಳಲ್ಲಿ ದಡಾರದ ಲಕ್ಷಣಗಳನ್ನು ತೋರುವುದು. 

ರೋಗ ಲಕ್ಷಣಗಳು 

ಪ್ರಾಥಮಿಕ ಹಂತದಲ್ಲಿ ಜ್ವರ,ಮೈ ಕೈ ನೋವು, ಮೂಗಿನಿಂದ ನೀರಿಳಿಯುವುದು, ಕರ್ಕಶವಾದ ಸದ್ದಿನೊಂದಿಗೆ ಕೆಮ್ಮು, ಕಣ್ಣಾಲಿಗಳ ಉರಿಯೂತ ಹಾಗೂ ಬೆಳಕನ್ನು ನೋಡಲಾಗದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಕೆಲ ಮಕ್ಕಳಲ್ಲಿ ಜ್ವರ ಮತ್ತು ಕೆಮ್ಮುಗಳು ಕ್ಷಿಪ್ರಗತಿಯಲ್ಲಿ ಉಲ್ಬಣಿಸುವುದುಂಟು. ಮುಂದಿನ ಒಂದೆರಡು ದಿನಗಳಲ್ಲೇ ಮಗುವಿನ ಬಾಯಿಯ ಒಳಭಾಗದಲ್ಲಿ "ಕಾಪ್ಲಿಕ್ಸ್ ಸ್ಪಾಟ್" ಎಂದು ಕರೆಯಲ್ಪಡುವ, ಮಧ್ಯದಲ್ಲಿ ಬಿಳಿಯ ಚುಕ್ಕೆಯಿರುವ ಕೆಂಪು ಗುಳ್ಳೆಗಳು ಗುಂಪುಗುಂಪಾಗಿ ಕಾಣಿಸಿಕೊಳ್ಳುತ್ತವೆ. ಮುಂದಿನ ೩ ರಿಂದ ೫ ದಿನಗಳ ಬಳಿಕ ಮಗುವಿನ ಮುಖ- ಕುತ್ತಿಗೆಗಳ ಮೇಲೆ ಪ್ರತ್ಯಕ್ಷವಾಗುವ "ಬೆವರುಸಾಲೆ"ಯಂತಹ ಅಸಂಖ್ಯ ಗುಳ್ಳೆಗಳು ಕ್ರಮೇಣ ಕೈ, ಎದೆ, ಹೊಟ್ಟೆ,ತೊಡೆ ಮತ್ತು ಕಾಲುಗಳ ಮೇಲೆ ಹರಡುತ್ತವೆ. ಈ ಹಂತದಲ್ಲಿ ಕಾಪ್ಲಿಕ್ಸ್ ಸ್ಪಾಟ್ ಗಳು ಮಾಯವಾಗುತ್ತವೆ. ಶರೀರದಾದ್ಯಂತ ಮೂಡಿರುವ ಗುಳ್ಳೆಗಳ ಸಂಖ್ಯೆ ಅತಿಯಾಗಿದ್ದಲ್ಲಿ ವ್ಯಾಧಿಯ ತೀವ್ರತೆಯೂ ಅತಿಯಾಗಿರುತ್ತದೆ. ಸಾಮಾನ್ಯವಾಗಿ ಈ ಗುಳ್ಳೆಗಳು ಮುಂದಿನ ಕೆಲವೇ ದಿನಗಳಲ್ಲಿ ಮಾಯವಾಗಲು ಆರಂಭಿಸುತ್ತವೆ.

ಶರೀರದಾದ್ಯಂತ ಉದ್ಭವಿಸಿದ ಗುಳ್ಳೆಗಳು ಸ್ಪಷ್ಟವಾಗಿ ಗೋಚರಿಸುವ ಸಂದರ್ಭದಲ್ಲಿ, ಮಕ್ಕಳಲ್ಲಿ ತೀವ್ರ ಜ್ವರ ಹಾಗೂ ಕೆಮ್ಮಿನೊಂದಿಗೆ ದೇಹದ ಎಲ್ಲಾ ಭಾಗಗಳಲ್ಲೂ ಅಸಹನೀಯ ತುರಿಕೆ ಬಾಧಿಸುತ್ತದೆ. ಅಂತಿಮ ಹಂತದಲ್ಲಿ ಜ್ವರ ಹಾಗೂ ಕೆಮ್ಮುಗಳು ಕಡಿಮೆಯಾಗುತ್ತಾ ಬಂದಂತೆಯೇ, ಶರೀರದ ಮೇಲೆ ಮೂಡಿದ ಗುಳ್ಳೆಗಳು ಬಾಡುತ್ತಾ ಬಂದು ಕೊನೆಗೆ ಈ ಭಾಗದ ಚರ್ಮದ ಮೇಲ್ಪದರವು ನಿಧಾನವಾಗಿ ಎದ್ದುಬರುತ್ತದೆ. 

ಸಂಕೀರ್ಣ ಸಮಸ್ಯೆಗ

ದಡಾರ ಪೀಡಿತ ಮಕ್ಕಳಲ್ಲಿ ಮೀಸಲ್ಸ್ ವೈರಸ್ ಗಳ ದುಷ್ಪರಿಣಾಮಗಳಿಂದ ಹಾಗೂ ಕೆಲವಿಧದ ಬ್ಯಾಕ್ಟೀರಿಯಾಗಳ ಸೋಂಕಿನಿಂದ ಅನೇಕ ಸಮಸ್ಯೆಗಳು ಉದ್ಭವಿಸಿವ ಸಾಧ್ಯತೆಗಳಿವೆ. ಇವುಗಳಲ್ಲಿ ಸ್ಟ್ರೆಪ್ಟೋಕಾಕಸ್, ಸ್ಟೆಫೈಲೊಕಾಕಸ್, ನ್ಯೂಮೊಕಾಕಸ್ ಮತ್ತು ಇನ್ಫ್ಲುಯೆಂಜೆ ರೋಗಾಣುಗಳು ಪ್ರಮುಖವಾಗಿವೆ. 

ದಡಾರ ಉಳ್ಬನಿಸಿದಲ್ಲಿ ಉರಿಯೂತಕ್ಕೊಳಗಾದ ಕಣ್ಣಾಲಿಗಳಿಗೆ ಹಾಗೂ ಕಿವಿಗಳಿಗೆ ತಗಲಬಹುದಾದ ಇತರ ಸೋಂಕುಗಳು, ಗಂಭೀರ ತೊಂದರೆಗಳಿಗೂ ಕಾರಣವೆನಿಸಬಹುದು. ಅದೇ ರೀತಿಯಲ್ಲಿ ನಿಗದಿತ ಅವಧಿಯ ಬಳಿಕವೂ ಕಾಡುವ ಜ್ವರವನ್ನು ಸೂಕ್ತ ಚಿಕಿತ್ಸೆಯಿಂದ ನಿವಾರಿಸಿಕೊಳ್ಳಬಹುದು. ಇದಲ್ಲದೇ ಚಿಕ್ಕಮಕ್ಕಳಲ್ಲಿ ಬ್ರೊಂಕೋ ನ್ಯುಮೋನಿಯಾ ಹಾಗೂ ತುಸು ದೊಡ್ಡ ಮಕ್ಕಳಲ್ಲಿ ಲೋಬಾರ್ ನ್ಯುಮೋನಿಯಾದಂತಹ ಸಮಸ್ಯೆಗಳು ಕಂಡುಬರಬಹುದು. 

ಮೀಸಲ್ಸ್ ವ್ಯಾಧಿಪೀಡಿತ ಶೇ. ೫೦ ರಷ್ಟು ಮಕ್ಕಳಿಗೆ ಬ್ರಾಂಕೈಟಿಸ್ ಅಥವಾತೀವ್ರ ರೂಪದ ಲಾರಿಂಗೊ ಟ್ರೇಕಿಯೋ ಬ್ರಾಂಕೈಟಿಸ್ ನಂತಹ ಸಮಸ್ಯೆಗಳು ಬಾಧಿಸುತ್ತವೆ. ಜೊತೆಗೆ ಈ ಸಂದರ್ಭದಲ್ಲಿ ಉದ್ಭವಿಸಬಲ್ಲ "ವೈರಲ್ ನ್ಯುಮೋನಿಯ' ಉಲ್ಬಣಿಸಿದಲ್ಲಿ, ರೋಗಿಯ ಮರಣಕ್ಕೂ ಕಾರಣವೆನಿಸುವ ಸಾಧ್ಯತೆಗಳಿವೆ. 

ಕೆಲ ಮಕ್ಕಳಲ್ಲಿ ಅತಿಯಾದ ಬಾಯಿಹುಣ್ಣುಗಳು ಹಾಗೂ ರಕ್ತ ಮಿಶ್ರಿರ ಮಲವಿಸರ್ಜನೆಗಳಂತಹ ತೊಂದರೆಗಳು ಬಾಧಿಸಬಹುದು. ಕ್ಷಯ ರೋಗ ಪೀಡಿತ ಮಗುವಿಗೆ ದಡಾರ ಬಾಧಿಸಿದ ಸಂದರ್ಭದಲ್ಲಿ ಗಂಭೀರ ಸಮಸ್ಯೆಗಳು ಉದ್ಭವಿಸುವುದರಿಂದ, ಚಿಕಿತ್ಸೆ ನೀಡುವ ವೈದ್ಯರು ಮತ್ತು ಕಂದನ ಆರೈಕೆ ಮಾಡುವ ಮಾತಾಪಿತರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುವುದು. 

ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ "ಎನ್ಸೆಫಲೈಟಿಸ್" ಹಾಗೂ" ಹೆಮೊರೇಜಿಕ್ ಮೀಸಲ್ಸ್ " ಎನ್ನುವ ರಕ್ತಸ್ರಾವಕ್ಕೆ ಕಾರಣವೆನಿಸಬಲ್ಲ ವಿಶಿಷ್ಟ ಸಮಸ್ಯೆಗಳು ಪ್ರಾಣಾಪಾಯಕ್ಕೂ ಕಾರಣವೇನಿಸಬಲ್ಲವು. 

ಸುಲಭ ಪರಿಹಾರ 

"ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ" ಎನ್ನುವ ಮುತ್ತಿನಂತಹ ಮಾತುಗಳನ್ನು ನೀವೂ ಕೇಳಿರಬಹುದು. ಇದರಂತೆ ದಡಾರವನ್ನು ನಿಶ್ಚಿತವಾಗಿಯೂ ತಡೆಗಟ್ಟಬಲ್ಲ "ಮೀಸಲ್ಸ್ ಲಸಿಕೆ" ಯನ್ನು ನಿಮ್ಮ ಪುಟ್ಟ ಕಂದನಿಗೆ ಕೊಡಿಸಿ ನಿಶ್ಚಿಂತರಾಗಿರಿ. ಮಗುವಿಗೆ ೧೨ ರಿಂದ ೧೫ ತಿಂಗಳ ವಯಸ್ಸಿನಲ್ಲಿ ಕೊಡಬೇಕಾದ ಈ ಲಸಿಕೆಯು ದುಬಾರಿಯೇನಲ್ಲ. ಅಂತೆಯೇ ನಿಮ್ಮ ಕಂದನಿಗೆ ಮೀಸಲ್ಸ್ ಬಾಧಿಸಿದಲ್ಲಿ ಅನುಭವಿಸಬೇಕಾದ ಸಂಕೀರ್ಣ ಸಮಸ್ಯೆಗಳು ಮತ್ತು ನೀಡಲೇ ಬೇಕಾದ ಚಿಕಿತ್ಸೆಯ ವೆಚ್ಚಗಳೊಂದಿಗೆ ತುಲನೆ ಮಾಡಿದಾಗ, ಈ ಲಸಿಕೆಯ ವೆಚ್ಚವು ತೀರಾ ನಗಣ್ಯವೆನಿಸುವುದು. ಜೊತೆಗೆ ಇದನ್ನು ಕೊಡಿಸುವುದರಿಂದ ನಿಮ್ಮ ಕಂದನಿಗೆ ಈ ವ್ಯಾಧಿಯಿಂದ ರಕ್ಷಣೆ ದೊರೆಯುವುದರೊಂದಿಗೆ, ನಿಮ್ಮ ಮನಸ್ಸಿಗೆ ನೆಮ್ಮದಿಯೂ ದೊರೆಯುವುದರಲ್ಲಿ ಸಂದೇಹವಿಲ್ಲ!. 

ನಿಮಗಿದು ತಿಳಿದಿರಲಿ 

ಅಧಿಕತಮ ಮಕ್ಕಳಲ್ಲಿ ದಡಾರವು ನಿಗದಿತ ಅವಧಿಯಲ್ಲಿ ಗುಣವಾಗಬಲ್ಲದು. ಆದರೆ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಜ್ವರ, ಕೆಮ್ಮು, ಕಣ್ಣಾಲಿಗಳ ಉರಿಯೂತ ಮತ್ತಿತರ ಲಕ್ಷಣಗಳಿಗೆ ಅನುಗುಣವಾಗಿ ಕೆಲವೊಂದು ಔಷದಗಳ ಸೇವನೆ ಅನಿವಾರ್ಯ. 

ಸಾಮಾನ್ಯವಾಗಿ ಆಸ್ಪತ್ರೆಜನ್ಯ ಸೊಂಕುಗಳಿಂದ ಈ ವ್ಯಾಧಿಪೀಡಿತ  ಕಂದನನ್ನು ರಕ್ಷಿಸಲು ಹಾಗೂ ಈ ವ್ಯಾಧಿಯು ಆಸ್ಪತ್ರೆಯಲ್ಲಿ ಇರಬಹುದಾದ ಇತರ ಮಕ್ಕಳಿಗೆ ಹರಡದಿರಲು, ಇವರನ್ನು ಮನೆಯಲ್ಲೇ ಮಲಗಿಸಿ  ವಿಶ್ರಾಂತಿ, ಸೂಕ್ತ ಆಹಾರ ಮತ್ತು ಔಷದಗಳನ್ನು ನೀಡುವುದು ಹಿತಕರ. ಆದರೆ ತೀವ್ರ ಸ್ವರೂಪದ ತೊಂದರೆಗಳು ಬಾಧಿಸಿದಲ್ಲಿ ಮತ್ತು ಪ್ರಾಣಾಪಾಯದ ಸಾಧ್ಯತೆಗಳಿದ್ದಲ್ಲಿ, ತಕ್ಷಣ ಸುಸಜ್ಜಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಬೇಕು. 

ವಿಶೇಷ ತೊಂದರೆಗಳು ಕಾಣಿಸಿಕೊಳ್ಳದೆ ಇದ್ದಲ್ಲಿ ಕಂದನ ಬಾಯಿ, ಕಣ್ಣುಗಳು ಮತ್ತು ಶರೀರವನ್ನು ಸ್ವಚ್ಚ ಹಾಗೂ ನಿರ್ಮಲವಾಗಿ ಇರಿಸಬೇಕು. ಇದರೊಂದಿಗೆ ಸುಲಭದಲ್ಲಿ ಜೀರ್ಣವಾಗುವ ಆಹಾರದೊಂದಿಗೆ ಸಾಕಷ್ಟು ದ್ರವಾಹಾರ (ನೀರು, ಹಣ್ಣಿನ ರಸ ಹಾಗೂ ಹಾಲು) ಗಳನ್ನು ನೀಡಬೇಕು. ಮಗುವಿನ ಶರೀರವನ್ನು ದಿನದಲ್ಲಿ ಕನಿಷ್ಠ ಎರಡು ಬಾರಿ ಒದ್ದೆ ಬಟ್ಟೆಯಿಂದ ಒರೆಸಿದ ಬಳಿಕ ಮೆತ್ತನೆಯ ಟವೆಲ್ ನಿಂದ ಒರೆಸಿ ಸ್ವಚ್ಚಗೊಳಿಸಲೇಬೇಕು. ಆದರೆ ಇದರ ನಂತರ ಶರೀರದಾದ್ಯಂತ ಟಾಲ್ಕಂ ಪೌಡರ್ ಸಿಂಪಡಿಸಿದಲ್ಲಿ ಮಗುವಿನ ಕೆಮ್ಮು ಉಲ್ಬಣಿಸುವುದು ಎನ್ನುವುದನ್ನು ಮರೆಯದಿರಿ. ಅಂತೆಯೇ ಯಾವುದೇ ಕಾರಣಕ್ಕಾಗಿ, ಯಾರೇ ಹೇಳಿದರೂ ಮಗುವಿನ ಶರೀರಕ್ಕೆ ಯಾವುದೇ ಲೆಪಗಳನ್ನು ಹಾಕದಿರಿ. 

ಇವೆಲ್ಲಕ್ಕೂ ಮಿಗಿಲಾಗಿ ಮಂತ್ರ- ತಂತ್ರ, ಭಸ್ಮ, ತಾಯಿತ, ನೂಲು ಕಟ್ಟುವುದು ಹಾಗೂ ದೇವಿಗೆ ಹರಕೆ ಹೇಳಿಕೊಳ್ಳುವುದರಿಂದ ಈ ವ್ಯಾಧಿಯು ಗುಣವಾಗಲಾರದು ಎಂದು ತಿಳಿದಿರಿ. ಅಂತಿಮವಾಗಿ ಈ ಕಾಯಿಲೆಗೆ "ಆಧುನಿಕ ಔಷದಗಳನ್ನೇ ನೀಡಬಾರದು" ಎಂದು ನಿಮ್ಮ ಬಂಧು- ಮಿತ್ರರು ನೀಡಬಹುದಾದ ಉಚಿತ ಸಲಹೆಗಳನ್ನು ಮಾತ್ರ ಪರಿಪಾಲಿಸದಿರಿ!. 

ಡಾ.ಸಿ . ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೧-೦೧-೨೦೦೭ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ     


No comments:

Post a Comment