Wednesday, October 23, 2013

Paripoorna purushatvavannu padeyiri-Be a Macho man!



                      ಪರಿಪೂರ್ಣ ಪುರುಷತ್ವವನ್ನು ಪಡೆಯಿರಿ! ಭಾಗ-೧

ತಮ್ಮ ಪುರುಷತ್ವದ ಬಗ್ಗೆ ಅಂಧಾಭಿಮಾನವಿರುವ ಗಂಡಸರು, ತತ್ ಸಂಬಂಧಿತ ಸಮಸ್ಯೆಗಳು ಉದ್ಭವಿಸಿದಾಗ ಮುಚ್ಚಿಡುವುದೇ ಹೆಚ್ಚು!. ಈ ಬಗ್ಗೆ ತಮ್ಮ ಚಿರಪರಿಚಿತ ಕುಟುಂಬ ವೈದ್ಯರ ಸಲಹೆ ಪಡೆಯಲೂ ನಾಚಿಕೊಂಡು, ಸ್ವಯಂಘೋಷಿತ ಲೈಂಗಿಕ ತಜ್ಞರ ಬಳಿ ತೆರಳಿ ತಲೆಬೋಳಿಸಿಕೊಳ್ಳುವುದು ಸತ್ಯ. ಇಂತಹ ಪ್ರಮಾದಗಳು ಘಟಿಸದಂತೆ, ಪುರುಷರ ಲೈಂಗಿಕ ಸಮಸ್ಯೆಗಳ ಬಗ್ಗೆ ನಿಮಗೊಂದಿಷ್ಟು "ಸತ್ಯ ಸಂಗತಿ" ಗಳನ್ನು ತಿಳಿಸುವ ಪ್ರಯತ್ನವಿದು. 
-------------            --------------------              ------------------                    ------------------             ---------------            ------------------

ಅಮಾಯಕ ಜನರನ್ನೇ ಗುರಿಯಾಗಿಸಿ ನಕಲಿವೈದ್ಯರು ದಿನಪತ್ರಿಕೆಗಳಲ್ಲಿ ನೀಡುವ, ಈ ಲೇಖನದ ತಲೆಬರಹವನ್ನೇ ಹೋಲುವ ವೈವಿಧ್ಯಮಯ ಜಾಹೀರಾತುಗಳನ್ನು ನೀವು ಓದಿರಲೇಬೇಕು. ಪ್ರಸ್ತುತ ಈ ಲೇಖನದ ತಲೆಬರಹವನ್ನು ಕಂಡೊಡನೆ ಇದುವರೆಗೆ ಈ ಪುಟದತ್ತ ಕಣ್ಣು ಹಾಯಿಸದವರೂ ಕುತೂಹಲದಿಂದ ಇದನ್ನು ಓದುತ್ತಿರುವುದು ನಿಜವಾಗಿರಲೇಬೇಕು. 
ನಕಲಿವೈದ್ಯರು ನೀಡುವ ಜಾಹೀರಾತುಗಳಲ್ಲಿ ಹೆಚ್ಚಾಗಿ ಬಳಸುವ ನರದೌರ್ಬಲ್ಯ,ನಿಶ್ಶಕ್ತಿ,ಸ್ವಪ್ನಸ್ಖಲನ, ಶೀಘ್ರ ಸ್ಖಲನ, ತಾರುಣ್ಯ ನಾಶ(?) ದಂತಹ ಪದಗಳ ಅರ್ಥವನ್ನೇ ಅರಿಯದ ಮುಗ್ಧರು, ಸ್ವಯಂ ಘೋಷಿತ ಲೈಂಗಿಕ ತಜ್ಞರ ಬಲಿಪಶುಗಳಾಗುತ್ತಿದ್ದಾರೆ. ಆರೋಗ್ಯವಂತರಿಗೂ ತಮ್ಮ ಪುರುಷತ್ವದ ಬಗ್ಗೆ ಸಂದೇಹ ಮೂಡಿಸಬಲ್ಲ ನಕಲಿವೈದ್ಯರ ಪದವೈಭವಗಳಿಗೆ ಮರುಳಾಗಿ ಕಪೋಲಕಲ್ಪಿತ ಕಾಯಿಲೆಗಳ ಚಿಕಿತ್ಸೆಗಾಗಿ ಸಹಸ್ರಾರು ರೂಪಾಯಿಗಳನ್ನು ಅನಾವಶ್ಯಕವಾಗಿ ವ್ಯಯಿಸದಿರಿ. ಇದರೊಂದಿಗೆ ನಿಮ್ಮ ಶಾರೀರಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗಳನ್ನು ಕಳೆದುಕೊಳ್ಳದಿರಿ. 

ಸಮಸ್ಯೆಗಳ ಮೂಲ 
ಹದಿಹರೆಯಕ್ಕೆ ಕಾಲಿರಿಸಿದೊಡನೆ ಕಂಡುಬರುವ ಶಾರೀರಿಕ ಬದಲಾವಣೆಗಳೊಂದಿಗೆ ಪ್ರಾರಂಭವಾಗುವ ಕಾಮಾಸಕ್ತಿಯು, ವಿರುದ್ಧಲಿಂಗಿಗಳ ಬಗ್ಗೆ ಕುತೂಹಲಭರಿತ ಆಕರ್ಷಣೆಗೆ ಕಾರಣವೆನಿಸುವುದು. ಇದರೊಂದಿಗೆ ಮನದಲ್ಲಿ ಮೂಡುವ ಅವ್ಯಕ್ತ ಭಾವನೆಗಳು, ಸಂದೇಹಗಳು ಅನೇಕ ತಪ್ಪು ಕಲ್ಪನೆಗಳಿಗೆ ಸೂಕ್ತ ಸಮಾಧಾನ ದೊರೆಯದೆ ಮತ್ತಷ್ಟು ಸಮಸ್ಯೆಗಳಿಗೆ ಆಸ್ಪದ ನೀಡುವುದು ಸಾಮಾನ್ಯವೆನಿಸಿದೆ. ಈ ಸಂದರ್ಭದಲ್ಲಿ ಲೈಂಗಿಕ ವಿಷಯಗಳನ್ನು ಅರಿತುಕೊಳ್ಳುವ ಬಯಕೆಯಿಂದ ಬಹುತೇಕ ಜನರು ಓದುವ ಕಳಪೆ ದರ್ಜೆಯ ಅಶ್ಲೀಲ ಸಾಹಿತ್ಯ ಮತ್ತು ವೀಕ್ಷಿಸುವ "ನೀಲಿ ಚಿತ್ರಗಳು", ಲೈಂಗಿಕ ವಿಜ್ಞಾನದ ಬಗ್ಗೆ ಪ್ರಾಥಮಿಕ ಮಾಹಿತಿಯನ್ನೂ ನೀಡುವುದೇ ಇಲ್ಲ!. ತತ್ಪರಿಣಾಮವಾಗಿ ತಮಗೆ ಲಭ್ಯವಾದ ಮಾಹಿತಿಯನ್ನೇ ನಿಜವೆಂದು ಭ್ರಮಿಸಿ, ಮುಂದೆ ನಿಜಜೀವನದಲ್ಲಿ ಅನೇಕರು ಅಯಾಚಿತ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಈ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೆ ತರುವುದು ಹಿತಕರ. ಭಾರತೀಯ ಸಂಸ್ಕೃತಿಯಲ್ಲಿ ಈ ವಿಷಯದ ಬಗ್ಗೆ ಮುಕ್ತವಾಗಿ ಚರ್ಚಿಸುವ ಕಾರಣದಿಂದಾಗಿ, ಅನೇಕ ವಿದ್ಯಾವಂತ ವಿವಾಹಿತರಿಗೂ ಸಂತಾನೋತ್ಪತ್ತಿಗೆ ಸ್ತ್ರೀ- ಪುರುಷ ಸಮಾಗಮ ಅವಶ್ಯಕವೆನ್ನುವ ಅರಿವೇ ಇಲ್ಲ!. ಜಗತ್ಪ್ರಸಿದ್ಧ "ಕಾಮಸೂತ್ರ" ದ ಲೇಖಕ ವಾತ್ಸಾಯನನ ತವರಿನಲ್ಲಿ "ಲೈಂಗಿಕ ಅಜ್ಞಾನ" ಅತ್ಯಧಿಕ ಪ್ರಮಾಣದಲ್ಲಿರುವುದು ಎಂತಹ ವಿಪರ್ಯಾಸ. 

ಶ್ರೀನಿವಾಸನಿಗೆ ಏನಾಗಿತ್ತು?

ಆಗರ್ಭ ಶ್ರೀಮಂತ ಶ್ರೀಧರ ರಾಯರ ಏಕಮಾತ್ರ ಪುತ್ರ ಶ್ರೀನಿವಾಸನಿಗೆ ಅಪ್ರತಿಮ ಸುಂದರಿ ಅಪರ್ಣಾಳೊಂದಿಗೆ ವಿವಾಹ ನೆರವೇರಿತ್ತು. ಎರಡು ವಾರಗಳ ಮಧುಚಂದ್ರಕ್ಕಾಗಿ ದಂಪತಿಗಳು ಸಿಂಗಾಪುರಕ್ಕೆ ಹಾರಿದ್ದರು. 
ಪ್ರಥಮ ರಾತ್ರಿಯ ಬಗ್ಗೆ ಬಹಳಷ್ಟು ಕನಸು ಕಂಡಿದ್ದ ಶ್ರೀನಿವಾಸನ ಕಲ್ಪನೆಯಲ್ಲಿ ಸಾಕಷ್ಟು ಉತ್ಪ್ರೇಕ್ಷೆಯೂ ಇದ್ದಿತು. ಪ್ರಥಮ ಸಮಾಗಮದ ಪ್ರಯತ್ನದಲ್ಲೇ ಆತನಿಗೆ ಶೀಘ್ರ ಸ್ಖಲನವಾಗಿತ್ತು. ಮುಂದಿನ ಆರೇಳು ದಿನಗಳಲ್ಲಿ ಇದೇ ಸಮಸ್ಯೆಯ ಪುನರಾವರ್ತನೆಯಾಗಿತ್ತು. ಮಧುಚಂದ್ರ ಮುಗಿಸಿ ಮನೆಗೆ ಮರಳಿದ ಶ್ರೀನಿವಾಸನ ಮನದಲ್ಲಿ ತನ್ನ ಪುರುಷತ್ವದ ಬಗ್ಗೆ ಒಂದಿಷ್ಟು ಸಂದೇಹವೂ ಮೂಡಿತ್ತು. 
ಪತಿಪತ್ನಿಯರಲ್ಲಿ ಸಾಕಷ್ಟು ಆತ್ಮೀಯತೆ ಮೂಡಲು ಸಂಕೋಚವೂ ಕಾರಣವೆನಿಸಿದ್ದುದರಿಂದ ತನ್ನ ಸಮಸ್ಯೆಯ ಬಗ್ಗೆ ಪತ್ನಿಯ ಬಳಿ ಚರ್ಚಿಸಲು ನಾಚಿ, ತನ್ನ ಚಡ್ಡಿ ದೋಸ್ತಿ ಸಂದೀಪನಲ್ಲಿ ವಿಷಯವನ್ನು ಪ್ರಸ್ಥಾಪಿಸಿದ್ದನು. ವಿಷಯವರಿತ ಸ್ನೇಹಿತನು ತಕ್ಷಣ ಆತನನ್ನು "ಲೈಂಗಿಕ ತಜ್ಞ" ರ ಬಾಲಿ ಕರೆದೊಯ್ದನು. 
ರೋಗಿಯನ್ನು ಪರೀಕ್ಷಿಸಿದ ನಾಟಕವಾಡಿದ ಈ ನಕಲಿ ವೈದ್ಯನು ಶ್ರೀನಿವಾಸನಿಗಿದ್ದ ಮುಷ್ಟಿಮೈಥುನದ ಚಟವೇ ಆತನ ಸಮಸ್ಯೆಗೆ ಕಾರಣ ಹಾಗೂ ಇದರ ಪರಿಣಾಮವಾಗಿ ಆತನಿಗೆ "ತಾರುಣ್ಯ ನಾಶ"ದ ಸಮಸ್ಯೆ ಪೀಡಿಸುವ ಸಾಧ್ಯತೆಯೂ ಇದೆ ಎಂದಿದ್ದನು. ಆರು ತಿಂಗಳುಗಳಲ್ಲಿ ಗುಣವಾಗುವ ಚಿಕಿತ್ಸೆಗೆ ಕೇವಲ ೩೦ ಸಾವಿರ ರೂಪಾಯಿ ವೆಚ್ಚವಾಗಲಿತ್ತು. ಐದು ಸಾವಿರ ನೀಡಿ ಒಂದು ತಿಂಗಳ ಔಷದವನ್ನು ಪಡೆದು ಹಿಂದಿರುಗಿದ ಶ್ರೀನಿವಾಸನಿಗೆ ಮೂರು ವಾರಗಳ ಔಷದ ಸೇವನೆಯ ಬಳಿಕವೂ ನಿರೀಕ್ಷಿತ ಫಲ ದೊರೆಯಲಿಲ್ಲ. ಇದೇ ಕಾರಣದಿಂದಾಗಿ ಹಗಲಿರುಳು ಗುಮ್ಮನಂತೆ ಕಾಡುತ್ತಿದ್ದ ಸಮಸ್ಯೆಗಳು ಇದೀಗ ಮಾನಸಿಕ ಖಿನ್ನತೆಗೂ ಕಾರಣವಾಯಿತು. ಪುತ್ರನ ಮಾನಸಿಕ ಖಿನ್ನತೆಗೆ ಕಾರಣವರಿಯದ ಶ್ರೀಧರ ರಾಯರು, ತಮ್ಮ ಕುಟುಂಬ ವೈದ್ಯರ ಸಲಹೆಯಂತೆ ಮಾನಸಿಕ ತಜ್ಞರ ಬಳಿಗೆ ಮಗನನ್ನು ಕರೆದೊಯ್ದರು. 
ಶ್ರೀನಿವಾಸನೊಂದಿಗೆ ಏಕಾಂತದಲ್ಲಿ ಆಪ್ತ ಸಂವಾದ ನಡೆಸಿದ ಮನೋವೈದ್ಯರಿಗೆ, ಸಮಸ್ಯೆಯ ಮೂಲ ಪತ್ತೆಯಾಗಿತ್ತು. ಇದನ್ನು ಬಗೆಹರಿಸಲು ಶ್ರೀನಿವಾಸನು ತನ್ನ ಪತ್ನಿಯೊಂದಿಗೆ ಓದಲೇಬೇಕಾದ ಲೈಂಗಿಕ ವಿಜ್ಞಾನದ ಪುಸ್ತಕವನ್ನು ನೀಡಿದ ವೈದ್ಯರು,ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ್ದರು. ಅಂತೆಯೇ ಆತನ ಮಾನಸಿಕ ನೆಮ್ಮದಿಗಾಗಿ ಒಂದಿಷ್ಟು ಔಷದ ರಹಿತ(Placebo) ಗುಳಿಗೆಗಳನ್ನು ನೀಡಿ, ಕ್ಷಿಪ್ರಗತಿಯಲ್ಲಿ ಪರಿಣಾಮ ನೀಡುವ ಅದ್ಭುತ ಔಷದವಿದು ಎಂದು ಭರವಸೆಯನ್ನೂ ನೀಡಿದರು. 
ಮೂರು ವಾರಗಳ ಬಳಿಕ ಪತ್ನಿಯೊಂದಿಗೆ ವೈದ್ಯರಲ್ಲಿಗೆ ಬಂದಿದ್ದ ಶ್ರೀನಿವಾಸನ ಸಮಸ್ಯೆ ಪರಿಹಾರವಾಗಿರುವುದು, ಇವರಿಬ್ಬರ ಮುಖಭಾವದಿಂದಲೇ ವೈದ್ಯರಿಗೆ ತಿಳಿಯಿತು. 
ಬಹುತೇಕ ಜನರಲ್ಲಿ ವೈವಾಹಿಕ ಜೀವನದ ಪ್ರಾರಂಭಿಕ ಹಂತದಲ್ಲಿ ಕಂಡುಬರುವ ಶೀಘ್ರ ಸ್ಖಲನ ನಿಶ್ಚಿತವಾಗಿಯೂ ಮುಷ್ಟಿ ಮೈಥುನದ ದುಷ್ಪರಿಣಾಮವಲ್ಲ. ತಾರುಣ್ಯದಲ್ಲಿ ಸ್ತ್ರೀ ಸಂಗದ ಬಗ್ಗೆ ಇರುವ ಅತ್ಯಾಸಕ್ತಿ ಹಾಗೂ ಉದ್ವೇಗಗಳು ಕಾಲಕ್ರಮೇಣ ಹತೋಟಿಗೆ ಬಂದಂತೆ ಮತ್ತು ಪತಿ ಪತ್ನಿಯರ ಅನ್ಯೋನ್ಯತೆ ಹೆಚ್ಚಿದಂತೆ ಇಂತಹ ಕ್ಷುಲ್ಲಕ ಸಮಸ್ಯೆಗಳು ಸ್ವಾಭಾವಿಕವಾಗಿ ಮಾಯವಾಗುತ್ತವೆ. ಅಂತೆಯೇ ಇದಕ್ಕೆ ಚಿಕಿತ್ಸೆ ಇಲ್ಲ ಹಾಗೂ ಚಿಕಿತ್ಸೆಯ ಅವಶ್ಯಕತೆಯೂ ಇಲ್ಲ. ಏಕೆಂದರೆ ಇದೊಂದು ಕಾಯಿಲೆಯೇ ಅಲ್ಲ!. 

ಸಮಸ್ಯೆಗಳ ವೈವಿಧ್ಯ 
ಪುರುಷರ ಲೈಂಗಿಕ ಸಮಸ್ಯೆಗಳನ್ನು ಮೂರು ವಿಧಗಳನ್ನಾಗಿ ವಿಂಗಡಿಸಬಹುದು. ಕಾಮಾಸಕ್ತಿಯ ಕೊರತೆ ಅಥವಾ ಅಭಾವ,ನಿಮಿರು ದೌರ್ಬಲ್ಯ ಹಾಗೂ ನಪುಂಸಕತ್ವ ಮತ್ತು ವೀರ್ಯ ಸ್ಖಲನದ ತೊಂದರೆಗಳೆಂದು ಗುರುತಿಸಲ್ಪಟ್ಟಿರುವ ಈ ಸಮಸ್ಯೆಗಳು ಯೌವ್ವನ, ಮಧ್ಯವಯಸ್ಸು ಹಾಗೂ ವೃದ್ಧಾಪ್ಯಗಳಲ್ಲಿ ಆಕಸ್ಮಿಕವಾಗಿ ಅಥವಾ ನಿಧಾನವಾಗಿ ಸಂಭವಿಸುವ ಸಾಧ್ಯತೆಗಳಿವೆ. ಶಾರೀರಿಕ ಅಥವಾ ಮಾನಸಿಕ ಕಾರಣಗಳಿಂದ ಉದ್ಭವಿಸಬಲ್ಲ ಇಂತಹ ಸಮಸ್ಯೆಗಳು, ಕೆಲವೊಮ್ಮೆ ತಾತ್ಕಾಲಿಕವಾಗಿ ಆರೋಗ್ಯವಂತರನ್ನೂ ಬಾಧಿಸುವುದುಂಟು. 

ಕಾಮಾಸಕ್ತಿಯ ಕೊರತೆ ಅನೇಕರಲ್ಲಿ ಅಪರೂಪದಲ್ಲಿ ಕಂಡುಬರುವ ಸ್ತ್ರೀ ಸಂಗದ ಬಗ್ಗೆ ಅನಾಸಕ್ತಿಗೆ ಅನೇಕ ಕಾರಣಗಳಿವೆ. ಈ ಸಮಸ್ಯೆಗಳಿಗೆ ಆಯಾ ವ್ಯಕ್ತಿಯ ವೈಯ್ಯುಕ್ತಿಕ ಅಥವಾ ಸಂಗಾತಿಯೊಂದಿಗೆ ಇರಲೇಬೇಕಾದ ಪರಸ್ಪರ ಹೊಂದಾಣಿಕೆಯ ತೊಂದರೆಗಳೂ ಕಾರಣವೆನಿಸಬಹುದು. ಕಾಮಾಸಕ್ತಿಯ ಕೊರತೆಗೆ ಪ್ರಮುಖವಾಗಿ ರತಿಕ್ರೀಡೆಯಲ್ಲಿ ಸಂಪೂರ್ಣ ನಿರಾಸಕ್ತಿ ಹಾಗೂ ಸ್ತ್ರೀ ಶರೀರದ ಬಗ್ಗೆ, ಅದರಲ್ಲೂ ಸ್ತ್ರೀಯರ ಪ್ರಜನನಾಂಗಗಳ ಬಗ್ಗೆ ಇರುವ ಅಸಹ್ಯಕರ ಭಾವನೆಗಳು ಮತ್ತು ದ್ವೇಷ  ಕಾರಣವಾಗಿರುತ್ತವೆ.ಶೇ. ೧೨ ರಿಂದ ೧೮ ರಷ್ಟು ಪುರುಷರಲ್ಲಿ ಕಂಡುಬರುವ ಈ ಸಮಸ್ಯೆಗೆ ನಿರ್ದಿಷ್ಟ ಕಾರಣ ಹಾಗೂ ಸೂಕ್ತ ಚಿಕಿತ್ಸೆಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ ಇದುವರೆಗೆ ಗುರುತಿಸಿರುವ ಕಾರಣಗಳಲ್ಲಿ ಮಾನಸಿಕ ಕಾರಣಗಳು ಹಾಗೂ ಶಾರೀರಿಕ ಪ್ರಕ್ರಿಯಗಳಲ್ಲಿನ ಲೋಪದೋಷಗಳು ಪ್ರಮುಖವಾಗಿವೆ. ಇದಲ್ಲದೆ ಪತಿ ಪತ್ನಿಯರ ಸಂಬಂಧದಲ್ಲಿನ ತೊಂದರೆಗಳು, ಕೇವಲ ಒಬ್ಬ ಸಂಗಾತಿಯ ಅಂಗಸಂಗದಿಂದ ಉಂಟಾಗಬಲ್ಲ ನಿರಾಸಕ್ತಿ, ಅತಿಆಯಾಸ, ತೀವ್ರ ಮಾನಸಿಕ ಒತ್ತಡ ಮತ್ತು ಟೆಸ್ಟೋ ಸ್ಟೆರಾನ್ ಹಾರ್ಮೋನ್ ನ ಕೊರತೆಯೂ ಕಾರಣವಾಗುತ್ತವೆ. 
ನರಹರಿಯ ನಪುಂಸಕತ್ವ

ಮಾತಾಪಿತರ ಒತ್ತಾಯಕ್ಕೆ ಮಣಿದು ವಸುಧಾಳನ್ನು ವಿವಾಹವಾಗಿದ್ದ ನರಹರಿಯು, ತನ್ನ ಪತ್ನಿಯನ್ನು ದ್ವೇಷಿಸುತ್ತಿದ್ದನು. ಹದಿಹರೆಯದಲ್ಲೇ ಮನೆಗೆಲಸದ ಹುಡುಗಿಯೊಡನೆ ಅನೈತಿಕ ಸಂಬಂಧ ಬೆಳೆಸಿದ್ದ ಈ ಅತಿಕಾಮಿಗೆ, ಪತ್ನಿಯೊಂದಿಗೆ ಶಾರೀರಿಕ ಸಂಬಂಧ ಇಷ್ಟವಿರಲಿಲ್ಲ. ವಿವಾಹವಾಗಿ ತಿಂಗಳುಗಳೇ ಕಳೆದರೂ ಪತಿಗೆ ತನ್ನ ದೇಹಸುಖದ ಅಪೇಕ್ಷೆ ಇಲ್ಲದಿರಲು ಕಾರಣವೇನೆಂದು ವಸುಧಾಳಿಗೂ ತಿಳಿದಿರಲಿಲ್ಲ. ಅಂತಿಮವಾಗಿ ಸ್ತ್ರೀ ಸಹಜ ಲಜ್ಜೆಯನ್ನು ಹಾಗೂ ಸಂಕೋಚಗಳನ್ನು ತೊರೆದು, ತಾನಾಗಿಯೇ ಒಂದಿಷ್ಟು ಮುಂದುವರೆದಾಗ ನರಹರಿಯ ಶಿಶ್ನ ನಿಮಿರಲೇ ಇಲ್ಲ. ಭ್ರಮಾಧೀನಳಾದ ಆಕೆ ಇರುಳಿಡೀ ನಿದ್ರಿಸಲಿಲ್ಲ. 
ಅದೊಂದುದಿನ ಆಕಸ್ಮಿಕವಾಗಿ ಮನೆಯ ಹಿಂದಿನ ಹಟ್ಟಿಗೆ ಕಟ್ಟಿಗೆ ತರಲೆಂದು ಹೋಗಿದ್ದ ವಸುಧಾಳಿಗೆ, ಮನೆಗೆಲಸದ ಹುಡುಗಿಯೊಂದಿಗೆ ರತಿಕ್ರೀಡೆಯಲ್ಲಿ ತೊಡಗಿರುವ ನರಹರಿಯನ್ನು ಕಂಡು ಆಕಾಶವೇ ತಲೆಗೆ ಬಿದ್ದಂತಾಗಿತ್ತು. 
ನರಹರಿಗೆ ತನ್ನ ಪತ್ನಿಯ ಮೇಲಿದ್ದ ದ್ವೇಷದಿಂದಾಗಿ ಆಕೆಯೊಂದಿಗೆ ಇದ್ದಾಗ ಕಾಮಾಸಕ್ತಿಯ ಅಭಾವ ಮತ್ತು ನಿಮಿರುದೌರ್ಬಲ್ಯಕ್ಕೆ ಕಾರಣವೆನಿಸಿತ್ತು. ಪತಿ-ಪತ್ನಿಯರ ಸಂಬಂಧದ ತೊಡಕುಗಳು ಇಂತಹ ಸಮಸ್ಯೆಗೆ ಕಾರಣವೆನಿಸುವುದು ಅಪರೂಪವೇನಲ್ಲ. 

ನಪುಂಸಕತ್ವ- ನಿಮಿರು ದೌರ್ಬಲ್ಯ 

ಆರೋಗ್ಯವಂತ ವ್ಯಕ್ತಿಗೆ ತೀವ್ರ ಕಾಮೇಚ್ಛೆ ಉಂಟಾದಾಗ ಆತನ ಮೆದುಳು, ನರಮಂಡಲ, ಪಂಚೇಂದ್ರಿಯಗಳು, ಕೆಲವೊಂದು ಮಾಂಸಪೇಶಿಗಳು  ಹಾಗೂ ರಕ್ತನಾಳಗಳ ಪರಸ್ಪರ ಹೊಂದಾಣಿಕೆಯೊಂದಿಗೆ ನಡೆಯುವ ವಿಶಿಷ್ಟ ಪ್ರಕ್ರಿಯೆಗಳಿಂದ ಶಿಶ್ನದಲ್ಲಿರುವ ರಕ್ತನಾಳಗಳಲ್ಲಿ ರಕ್ತ ತುಂಬಿ, ಶಿಶ್ನವು ಗಡಸಾಗುವುದು. ಅದೇರೀತಿಯಲ್ಲಿ ಆರೋಗ್ಯವಂತ ವ್ಯಕ್ತಿಯಲ್ಲೂ ಯಾವುದೇ ಸಂದರ್ಭದಲ್ಲೂ ಶಿಶ್ನದ ನಿಮಿರುವಿಕೆಯೇ ಇಲ್ಲದಿರುವುದು ಶಾಶ್ವತ ನಪುಂಸಕತ್ವದ ಲಕ್ಷಣವಾಗಿದೆ. ಆದರೆ ಹಿಂದೆ ಶಿಶ್ನದ ನಿಮಿರುವಿಕೆ ಸಮರ್ಪಕವಾಗಿದ್ದು, ಇದೀಗ ಕಂಡುಬಂದಿರುವ ಆಂಶಿಕ ಮತ್ತು ಸಂಪೂರ್ಣ ನಿಮಿರು ದೌರ್ಬಲ್ಯವು, ಸಾಮಾನ್ಯವಾಗಿ ಸಮರ್ಪಕ ಚಿಕಿತ್ಸೆಯಿಂದ ಗುಣವಾಗುವುದು. 

ಈ ಸಮಸ್ಯೆಗೆ ಕಾರಣವೇನು?

ಶಿಶ್ನದ ನಿಮಿರುವಿಕೆಯ ಪ್ರಕ್ರಿಯೆಗಳಲ್ಲಿ ಸಂಭವಿಸಬಲ್ಲ ವಿವಿಧ ರೀತಿಯ ತೊಂದರೆ- ಅಡಚಣೆಗಳು ಈ ದೌರ್ಬಲ್ಯಗಳಿಗೆ ಕಾರಣವೆನಿಸಬಹುದು. ಇವುಗಳನ್ನು ಸ್ಥೂಲವಾಗಿ ಶಾರೀರಿಕ ಹಾಗೂ ಮಾನಸಿಕ ಕಾರಣಗಳೆಂದು ವಿಂಗಡಿಸಲಾಗಿದೆ. 

ಶಾರೀರಿಕ ಕಾರಣಗಳಲ್ಲಿ ಅತಿಯಾದ ಕೊಲಸ್ಟೆರಾಲ್, ಟೆಸ್ಟೋಸ್ಟೆರಾನ್ ಹಾರ್ಮೋನ್ ನ ಕೊರತೆ, ಅನಿಯಂತ್ರಿತ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಪಕ್ಷವಾತ, ಪಾರ್ಕಿನ್ಸನ್ಸ್ ಕಾಯಿಲೆ, ಅಲ್ಜೈಮರ್ಸ್, ಅಪಸ್ಮಾರದಂತಹ ಕಾಯಿಲೆಗಳು ಪ್ರಮುಖವಾಗಿವೆ. ಇದಲ್ಲದೆ ಬೆನ್ನುಹುರಿ,  ಮರ್ಮಾಂಗ ಮತ್ತು ಸೊಂಟದ ಮಾಂಸಪೇಶಿಗಳಿಗೆ ಆಘಾತವಾಗುವುದು, ಪ್ರೋಸ್ಟೇಟ್ ಗ್ರಂಥಿಯ ಸಮಸ್ಯೆಗಳು ಹಾಗೂ ಅನೇಕ ಕಾಯಿಲೆಗಳು ಬಾಧಿಸಿದಾಗ ನೀವು ಸೇವಿಸಲೇಬೇಕಾದ ಔಷದಗಳ ಅನಪೇಕ್ಷಿತ ಅಡ್ಡ ಪರಿಣಾಮಗಳೂ ಕಾರಣವೆನಿಸಬಲ್ಲವು. ಇದಲ್ಲದೇ ಮಾದಕ ದ್ರವ್ಯಗಳ ಸೇವನೆ, ಅತಿ ಮದ್ಯ- ಧೂಮಪಾನಗಳು ಕೂಡಾ ನಿಮಿರು ದೌರ್ಬಲ್ಯಕ್ಕೆ ಕಾರಣವೆನಿಸುತ್ತವೆ. 

ಮಾನಸಿಕ ಕಾರಣಗಳಲ್ಲಿ ದಂಪತಿಗಳಲ್ಲಿ ಪರಸ್ಪರ ಸಂಬಂಧದ ಸಮಸ್ಯೆಗಳು, ಮಾನಸಿಕ ಒತ್ತಡ, ಖಿನ್ನತೆ ಹಾಗೂ ಉದ್ವೇಗಗಳು ಪ್ರಮುಖವಾಗಿವೆ. ಇದರೊಂದಿಗೆ ರತಿಕ್ರೀಡೆಯ ಸಂದರ್ಭದಲ್ಲಿ ಸಂಗಾತಿಯ ಅಸಹಕಾರ, ತೀವ್ರ ನೋವು ಮತ್ತು ವೈವಿಧ್ಯತೆಯನ್ನು ಬಯಸುವ ಪುರುಷರಿಗೆ, ಏಕತಾನತೆಯಿಂದಾಗಿ ಪ್ರಾರಂಭವಾಗುವ ನಿಮಿರು ದೌರ್ಬಲ್ಯವು ಅನೇಕರಲ್ಲಿ ಆಗಾಗ ಪುನರಾವರ್ತನೆಯಾಗಬಹುದು. 

ನಿಮಗಿದು ತಿಳಿದಿರಲಿ 

ನಿಮ್ಮನ್ನು ಬಾಧಿಸುವ ನಿಮಿರು ದೌರ್ಬಲ್ಯ ಶಾರೀರಿಕ ಕಾರಣಗಳಿಂದ ಬಂದಿರುವುದೋ ಅಥವಾ ಮಾನಸಿಕ ಕಾರಣಗಳಿಂದ ಬಂದಿರುವುದೋ?, ಎನ್ನುವ ಪ್ರಶ್ನೆಗೆ ನಕಲಿ ವೈದ್ಯರಲ್ಲಿ ಉತ್ತರ ದೊರೆಯುವ ಸಾಧ್ಯತೆಗಳೇ ಇಲ್ಲ!. ಏಕೆಂದರೆ ಇವರಿಗೆ ಈ ಬಗ್ಗೆ ಏನೇನೂ ಮಾಹಿತಿ ತಿಳಿದಿರುವುದೇ ಇಲ್ಲ. 

ಮಾನಸಿಕ ಕಾರಣಗಳಿಂದ ಬಂದಿರುವ ಈ ಸಮಸ್ಯಾ ಪೀಡಿತರಲ್ಲಿ, ಬೆಳಗಿನ ಜಾವ ಮೂತ್ರಕೊಶವು ಮೂತ್ರದಿಂದ ತುಂಬಿದಾಗ, ಮುಷ್ಠಿಮೈಥುನದ ಸಂದರ್ಭದಲ್ಲಿ ಮತ್ತು ಕೆಲವರಿಗೆ ತಮ್ಮ ನಿತ್ಯದ ಸಂಗಾತಿಯನ್ನು ಹೊರತುಪಡಿಸಿ ಇತರ ಸ್ತ್ರೀಯರೊಂದಿಗೆ ಸುಖಿಸುವ ಸಂದರ್ಭದಲ್ಲಿ ಶಿಶ್ನವು ನಿಮಿರುತ್ತದೆ. ಇಂತಹ ಸಮಸ್ಯಾ ಪೀಡಿತರು ಕಾಮೊದ್ದೀಪಕ ಔಷದಗಳನ್ನು ಸೇವಿಸುವುದು ನಿಷ್ಪ್ರಯೋಜಕವೂ ಹೌದು!. 

ಆದರೆ ಶಾರೀರಿಕ ಕಾರಣಗಳಿಂದ ಉದ್ಭವಿಸುವ ನಿಮಿರು ದೌರ್ಬಲ್ಯ ಅಥವಾ ನಪುಂಸಕತ್ವದಲ್ಲಿ ಮೇಲೆ ವಿವರಿಸಿದ ಸಂದರ್ಭಗಳಲ್ಲಿ ಶಿಶ್ನದ ನಿಮಿರುವಿಕೆ ಇರುವುದಿಲ್ಲ. 

ನಿಮ್ಮ ಪತಿಯಲ್ಲಿ ಕಾರಣಾಂತರಗಳಿಂದ ಅಥವಾ ಆಕಸ್ಮಿಕವಾಗಿ ನಿಮಿರು ದೌರ್ಬಲ್ಯ ಉದ್ಭವಿಸಿದಲ್ಲಿ ಜರೆಯದಿರಿ. ಏಕೆಂದರೆ ಇದರಿಂದಾಗಿ ಈ ಸಮಸ್ಯೆಯು ಇನ್ನಷ್ಟು ಉಲ್ಬಣಿಸುವುದು. ಶಾಂತಚಿತ್ತದಿಂದ ಸಮಸ್ಯೆಯ ಕಾರಣವನ್ನರಿಯಲು ಪ್ರಯತ್ನಿಸಿ. ರಸಿಕ ಪತಿಯು ಶಯ್ಯೆಯಲ್ಲಿ ವೈವಿಧ್ಯವನ್ನು ಅಪೇಕ್ಷಿಸಿದಲ್ಲಿ "ಶಯನೇಶು ವೇಶ್ಯಾ' ಎನ್ನುವ ಸೂತ್ರವನ್ನು ಪಾಲಿಸಿ. ಪತಿ ಪತ್ನಿಯರಲ್ಲಿ ಪರಸ್ಪರ ಹೊಂದಾಣಿಕೆ ಹಾಗೂ ಪ್ರೀತಿ ವಿಶ್ವಾಸಗಳು ಇಂತಹ ಸಮಸ್ಯೆಯನ್ನು ದೂರವಿಡುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಪರಸ್ಪರ ಸಂದೇಹ, ಚುಚ್ಚುಮಾತುಗಳು ಹಾಗೂ ಸಂಗಾತಿಯ ಬಯಕೆಗಳನ್ನು ಕಡೆಗಣಿಸುವುದು ಇಂತಹ ಸಮಸ್ಯೆ ಪ್ರಾರಂಭವಾಗಲು ಕಾರಣವೆನಿಸಬಲ್ಲದು. 

ಯಾವುದೇ ಸಂದರ್ಭದಲ್ಲೂ ನಿಮ್ಮ ಬಂಧುಮಿತ್ರರ ಸಲಹೆಯಂತೆ ಯಾವುದೇ ಪದ್ದತಿಯ ಔಷದ- ಇಂಜೆಕ್ಷನ್ ಗಳನ್ನೂ ಪ್ರಯೋಗಿಸದಿರಿ. ಅವಶ್ಯಕತೆ ಇದ್ದಲ್ಲಿ ನಿಮ್ಮ ವಿಶ್ವಾಸಾರ್ಹ ಕುಟುಂಬ ವೈದ್ಯರ ಸಲಹೆ ಪಡೆಯಿರಿ. 

ಭಾಗ-೨ ರಲ್ಲಿ ಲೇಖನ ಮುಂದುವರೆಯಲಿದೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೪-೧೨-೨೦೦೩ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ   

    

No comments:

Post a Comment