Friday, October 11, 2013

Save oil campaign






  " ಇಂಧನವನ್ನು ಉಳಿಸಿ"  ಅಭಿಯಾನವನ್ನು ಬೆಂಬಲಿಸಿ 

  ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ವೀರಪ್ಪ ಮೊಯಿಲಿಯವರು ವಾರದಲ್ಲಿ ಒಂದು ದಿನ ತಮ್ಮ ಕಚೇರಿಗೆ ಹೋಗಿಬರಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವುದಾಗಿ ಇತ್ತೀಚಿಗೆ ಘೋಷಿಸಿದ್ದರು. ತಮ್ಮ ಸಚಿವಾಲಯದ ಅಧಿಕಾರಿ- ಸಿಬಂದಿಗಳೂ ಇದನ್ನು ಪರಿಪಾಲಿಸುವುದಾಗಿಯೂ ಹೇಳಿದ್ದರು. ಅಂತೆಯೇ ಬುಧವಾರದಂದು ಸಚಿವರು ದೆಹಲಿ ಮೆಟ್ರೋ ರೈಲಿನಲ್ಲಿ ಪಯಣಿಸಿದರೆ, ಇಬ್ಬರು ಹಿರಿಯ ಅಧಿಕಾರಿಗಳು ಸೈಕಲ್ ತುಳಿದು ತಮ್ಮ ಕಚೇರಿಗಳಿಗೆ ಆಗಮಿಸಿದ್ದರು. ಸಚಿವಾಲಯದ ೨೦೦ ಕ್ಕೂ ಅಧಿಕ ಸಿಬಂದಿಗಳು ಮೆಟ್ರೋ, ಬಸ್ ಮತ್ತು ಒಂದು ಕಾರಿನಲ್ಲಿ ಹಲವರು ಪ್ರಯಾಣಿಸುವ ಮೂಲಕ ಇಂಧನ ಉಳಿತಾಯದ ಅಭಿಯಾನಕ್ಕೆ ಬೆಂಬಲವನ್ನು ನೀಡಿದ್ದರು. ಸಚಿವರ ಹೇಳಿಕೆಯಂತೆ ಇದರಿಂದ ಸುಮಾರು ೬೦೦ ಲೀಟರ್ ಇಂಧನ ಉಳಿತಾಯವಾಗಲಿದೆ. ಭಾರತವು ಉತ್ಪಾದಿಸುತ್ತಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಇಂಧನವನ್ನು ಬಳಸುತ್ತಿರುವುದರಿಂದ, ಇದನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಹಾಗೂ ಇದಕ್ಕಾಗಿ ಸಾಕಷ್ಟು ವಿದೇಶಿ ವಿನಿಮಯ ವಿನಿಯೋಗವಾಗುತ್ತಿದೆ. ಈ ಮೊತ್ತದಲ್ಲಿ ಕನಿಷ್ಠ ಐದು ಬಿಲಿಯನ್ ಡಾಲರ್ ಗಳನ್ನು ಉಳಿಸುವ ನಿಟ್ಟಿನಲ್ಲಿ ಇಂಧನ ಸಚಿವರ ಉಪಕ್ರಮ ಯಶಸ್ವಿಯಾಗುವುದೇ ಎನ್ನುವುದನ್ನು ಕಾದು ನೋಡಬೇಕಷ್ಟೇ!. 

ಆದರೆ ಸಚಿವರ ಇಂಧನ ಉಳಿತಾಯದ ಉಪಕ್ರಮವು ಪರೋಕ್ಷವಾಗಿ ದೇಶದ ಜನತೆಯನ್ನು ಪೀಡಿಸುತ್ತಿರುವ ಪರಿಸರ ಪ್ರದೂಷಣೆ ಹಾಗೂ ತತ್ಪರಿಣಾಮವಾಗಿ ಸಂಭವಿಸುವ ವೈವಿಧ್ಯಮಯ ಆರೋಗ್ಯದ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಉಪಯುಕ್ತವೆನಿಸಲಿದೆ. ಇಂಧನ ಸಚಿವರ ಅಭಿಯಾನವನ್ನು ಕೇಂದ್ರ ಮತ್ತು ಎಲ್ಲ ರಾಜ್ಯ ಸರಕಾರಗಳು ಕಟ್ಟುನಿಟ್ಟಾಗಿ ಅನುಕರಿಸಿದಲ್ಲಿ, ದೇಶದ ಜನರ ಆರೋಗ್ಯದ ಮಟ್ಟ, ಉತ್ಪಾದನೆಯ ಪ್ರಮಾಣಗಳು ಹೆಚ್ಚುವುದರೊಂದಿಗೆ,ಸರಕಾರವು ಕಚ್ಚಾ ತೈಲವನ್ನು ಆಮದುಮಾಡಲು ವ್ಯಯಿಸುತ್ತಿರುವ ಅಮೂಲ್ಯವಾದ ವಿದೇಶಿ ವಿನಿಮಯವಲ್ಲದೇ ಪರಿಸರದ ಮೇಲೆ ವಾಹನಗಳ ಧೂಮವು ಬೀರುತ್ತಿರುವ ದುಷ್ಪರಿಣಾಮದ ಪ್ರಮಾಣವೂ ಕಡಿಮೆಯಾಗಲಿದೆ.

ವಾಯುಮಾಲಿನ್ಯ 

ಭಾರತದ ಮಹಾನಗರಗಳನ್ನು ಜ್ಞಾಪಿಸಿದೊಡನೆ ಕಿಕ್ಕಿರಿದ ಜನ- ವಾಹನಸಂದಣಿಗಳೊಂದಿಗೆ, ವಾಯುಮಾಲಿನ್ಯದ ನೆನಪಾಗುವುದು ಸ್ವಾಭಾವಿಕ. ಕೆಲವರ್ಷಗಳಿಂದ ಮಹಾನಗರಗಳಿಗೆ ಸೀಮಿತವಾಗಿದ್ದ ಈ ಸಮಸ್ಯೆಯು ಇದೀಗ ಸಾಂಕ್ರಾಮಿಕ ರೋಗಗಳಂತೆಯೇ, ದೇಶದ ಇತರ ನಗರ ಮತ್ತು ಪಟ್ಟಣಗಳಿಗೂ ಹರಡಲು ಆರಂಭಿಸಿದೆ. ತತ್ಪರಿಣಾಮವಾಗಿ ಈ ವಾಹನಗಳು ಉಗುಳುವ ಅಗಾಧಪ್ರಮಾಣದ ಹೊಗೆಯಿಂದಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದಾಗಿ, ಅನೇಕ ವಿಧದ ಗಂಭೀರ- ಮಾರಕ ವ್ಯಾಧಿಗಳ ಸಂಭಾವ್ಯತೆಗಳೂ ಹೆಚ್ಚುತ್ತಿವೆ. 

ಮನುಷ್ಯನು ಆರೋಗ್ಯದಿಂದ ಬದುಕಲು ಅತ್ಯವಶ್ಯಕವೆನಿಸುವ ಶುದ್ಧವಾದ ಗಾಳಿಯನ್ನು ಉಸಿರಾಡಲು, ದೇಶದ ಮಹಾನಗರಗಳಲ್ಲಿ ಆಸ್ಪದವೇ ಇಲ್ಲದಂತಾಗಿದೆ. ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಲೇ ಇರುವ ವಾಹನಗಳ ಸಂಖ್ಯೆಯೇ ಇದಕ್ಕೆ ಪ್ರಮುಖ ಕಾರಣವೆನಿಸಿದೆ. ವಾಹನಗಳು ಉಗುಳುವ ಹೊಗೆಯಲ್ಲಿ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೊನೊಕ್ಸೈಡ್, ಸಲ್ಫರ್ ಡೈ ಆಕ್ಸೈಡ್, ಆಕ್ಸೈಡ್ ಆಫ್ ನೈಟ್ರೋಜೆನ್ ಇತ್ಯಾದಿ ಹಸಿರುಮನೆ ಅನಿಲಗಳು ಗಣನೀಯ ಪ್ರಮಾಣದಲ್ಲಿ ಇರುತ್ತವೆ. 

ಅನಾರೋಗ್ಯಕ್ಕೆ ಮೂಲ 

ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎನಿಸುವ ಈ ಹಸಿರುಮನೆ ಅನಿಲಗಳ ಸೇವನೆಯಿಂದ ಕಣ್ಣುಗಳಲ್ಲಿ ಉರಿ, ತಲೆನೋವು, ವಾಕರಿಕೆ, ಶ್ವಾಸಾಂಗಗಳ ಕಾಯಿಲೆಗಳು, ಶ್ವಾಸಕೋಶಗಳ ಉರಿಯೂತ, ಅಸ್ತಮಾ, ಅಲರ್ಜಿ, ಕೆಮ್ಮು, ಶೀತ, ಹೃದ್ರೋಗಗಳು ಉಲ್ಬಣಿಸುವುದು ಹಾಗೂ ಕೆಲವಿಧದ ಕ್ಯಾನ್ಸರ್ ಮತ್ತಿತರ ಕಾಯಿಲೆಗಳು ಸಾಧ್ಯತೆಗಳಿವೆ. ಅನಾರೋಗ್ಯಪೀಡಿತ ವ್ಯಕ್ತಿಗಳು ದುಡಿಯಲು ಆಗದಿರುವುದರಿಂದ ದೇಶದ ಉತ್ಪಾದನಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಜೊತೆಗೆ ತಮ್ಮ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪಡೆದುಕೊಳ್ಳುವ ಚಿಕಿತ್ಸೆಗಾಗಿ ಸಾಕಷ್ಟು ಹಣವನ್ನು ವಿನಿಯೋಗಿಸುವುದರಿಂದ, ಜನಸಾಮಾನ್ಯರಿಗೆ ಆರ್ಥಿಕ ಮುಗ್ಗಟ್ಟು ಬಾಧಿಸುವ ಸಾಧ್ಯತೆಗಳಿವೆ. ಈ ರೀತಿಯಲ್ಲಿ ದೇಶದ ಪ್ರಜೆಗಳಿಗೆ ಸಮಸ್ಯೆಗಳ ಸರಮಾಲೆಯೇ ಬಾಧಿಸುವುದರಿಂದ, ದೇಶದ ಅಭಿವೃದ್ಧಿಗೆ ಸ್ವಾಭಾವಿಕವಾಗಿಯೇ ತೊಡಕಾಗಿ ಪರಿಣಮಿಸಲಿದೆ. ಸರಕಾರಕ್ಕೆ ಈ ಸಮಸ್ಯೆಯನ್ನು ಪರಿಹರಿಸಬೇಕೆನ್ನುವ ಇಚ್ಛಾಶಕ್ತಿ ಇದ್ದಲ್ಲಿ ಹಾಗೂ ಜನಸಾಮಾನ್ಯರು ಇದಕ್ಕೆ ಕೈಜೋಡಿಸಿದಲ್ಲಿ, ಇದನ್ನು ಪರಿಹರಿಸುವುದು ಅಸಾಧ್ಯವೇನಲ್ಲ. 

ಪರಿಹಾರ 

 ದೇಶದ ಪ್ರತಿಯೊಬ್ಬ ಪ್ರಜೆಯ ಆರೋಗ್ಯಕ್ಕೆ ಅಪಾಯಕಾರಿಯಾಗಿ  ಪರಿಣಮಿಸುತ್ತಿರುವ ಈ ಸಮಸ್ಯೆಯನ್ನು ಪರಿಹರಿಸಲು,ಹೆಚ್ಚುತ್ತಿರುವ ದೇಶದ ಜನಸಂಖ್ಯೆಯೊಂದಿಗೆ ವಾಹನಗಳ ಸಂಖ್ಯೆಯನ್ನೂ ನಿಯಂತ್ರಿಸಲೇಬೇಕು. ಜೊತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು. ೧೫ ವರ್ಷಗಳಿಗೂ ಹಳೆಯ ಸಾರಿಗೆ ವಾಹನಗಳನ್ನು ಬಳಸದಂತೆ ಕಾನೂನನ್ನು ರೂಪಿಸಬೇಕು. ಸಾರಿಗೆ ವಾಹನಗಳಿಗೆ ಎಲ್. ಎನ್. ಜಿ ಮತ್ತು ಚತುಷ್ಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ಎಲ್. ಪಿ. ಜಿ ಅನಿಲಗಳನ್ನು ಬಳಸಲು ಅವಶ್ಯಕ ಕ್ರಮ ಕೈಗೊಳ್ಳಬೇಕು. ಜೊತೆಗೆ ಬ್ಯಾಟರಿ ಚಾಲಿತ ಪುಟ್ಟ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು, ಇವುಗಳ ಮೇಲೆ ವಿಧಿಸುವ ತೆರಿಗೆಗಳಲ್ಲಿ ಸಾಕಷ್ಟು ವಿನಾಯತಿ ನೀಡಬೇಕು. ಇವೆಲ್ಲಕ್ಕೂ ಮಿಗಿಲಾಗಿ ರಾಜಕಾರಣಿಗಳು ಮತ್ತು ಶ್ರೀಮಂತರು ಬಳಸುವ ದುಬಾರಿಬೆಲೆಯ ವಿಲಾಸಿ ಕಾರುಗಳ ತಯಾರಿಕೆ ಮತ್ತು ಮಾರಾಟಗಳನ್ನು ನಿಯಂತ್ರಿಸಲೇಬೇಕು. ಇಂತಹ ವಾಹನಗಳು ಸಾರ್ವಜನಿಕ ಸಾರಿಗೆ ವಾಹನಗಳಿಗೆ ನೀಡುವ ರಿಯಾಯತಿ ದರದ ಡೀಸೆಲ್ ಬಳಸದಂತೆ ಕಾನೂನನ್ನು ರೂಪಿಸಬೇಕು.ಇದರೊಂದಿಗೆ ಪಾದಚಾರಿಗಳು ನಿರಾತಂಕವಾಗಿ ನಡೆದಾಡಲು ಉತ್ತಮವಾದ ಕಾಲುದಾರಿಗಳನ್ನು ನಿರ್ಮಿಸಬೇಕು. ಜೊತೆಗೆ ಜನರು ಸೈಕಲ್ ಗಳನ್ನು ಬಳಸುವುದನ್ನು ಪ್ರೋತ್ಸಾಹಿಸಲು, ಪ್ರತಿಯೊಂದು ನಗರ- ಪಟ್ಟಣಗಳಲ್ಲಿ ಅತ್ಯಲ್ಪ ಶುಲ್ಕದಲ್ಲಿ ಸೈಕಲ್ ಒದಗಿಸುವ ಹಲವಾರು ಕೇಂದ್ರಗಳನ್ನು ಸ್ಥಾಪಿಸಬೇಕು. ಅಂತೆಯೇ ಸೈಕಲ್ ಸವಾರರಿಗಾಗಿ ರಸ್ತೆಯಲ್ಲಿ ಪ್ರತ್ಯೇಕ ಪಥವನ್ನು ಒದಗಿಸಬೇಕು. 

 ಈ ರೀತಿಯ ಉಪಯುಕ್ತ ಹಾಗೂ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ, ವಾಹನಗಳಿಂದ ಸಂಭವಿಸುತ್ತಿರುವ ವಾಯುಮಾಲಿನ್ಯ ಮತ್ತು ತತ್ಪರಿಣಾಮವಾಗಿ ಉದ್ಭವಿಸುತ್ತಿರುವ ಆರೋಗ್ಯದ ಸಮಸ್ಯೆಗಳು ನಿಶ್ಚಿತವಾಗಿಯೂ ದೇಶದ ಪ್ರಗತಿಗೆ ಕಂಟಕಪ್ರಾಯವಾಗಿ ಪರಿಣಮಿಸಲಿದೆ. 

ಪ್ರಸ್ತುತ ಕೇಂದ್ರದ ಇಂಧನ ಸಚಿವರು ಆರಂಭಿಸಿರುವ ಇಂಧನವನ್ನು ಉಳಿಸಿ ಅಭಿಯಾನದಲ್ಲಿ ಮೇಲೆ ನಮೂದಿಸಿದ ವಿಚಾರಗಳನ್ನು ಅಳವಡಿಸಿಕೊಂಡಲ್ಲಿ, ಇದು ಇನ್ನಷ್ಟು ಪರಿಣಾಮಕಾರಿಯಾಗುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು  


No comments:

Post a Comment