Friday, April 22, 2016

WORMS IN HUMANS


                     ಜಂತುಹುಳವೆಂಬ ಒಡಲ ಪೀಡೆ! 

ನೀವು ಸೇವಿಸಿದ ಆಹಾರದಲ್ಲಿರುವ ಪೌಷ್ಠಿಕಾಂಶಗಳನ್ನು ಕಬಳಿಸುವ ಜಂತು ಹುಳಗಳು, ಅನೇಕ ವಿಧದ ಅನಾರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಬಲ್ಲದು. ಇವುಗಳ ಬಗ್ಗೆ ಅವಶ್ಯಕ ಮಾಹಿತಿಗಳನ್ನು ನೀಡಬೇಕಾದ ಹೊಣೆಗಾರಿಕೆ ವೈದ್ಯರ ಮೇಲಿದೆ. ಇದನ್ನು ತಿಳಿದುಕೊಳ್ಳುವ ತಾಳ್ಮೆ ರೋಗಿ ಮತ್ತು ಆತನ ಕುಟುಂಬದವರಿಗೂ ಇರಲೇಬೇಕಾಗುತ್ತದೆ. ಜಂತು ಹುಳಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಆರ್ಥಿಕವಾಗಿ ಹಿಂದುಳಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಜಂತು ಹುಳಗಳ ಬಾಧೆಯು, ಜನಸಾಮಾನ್ಯರಲ್ಲಿ ಅನೇಕ ವಿಧದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಿದೆ. ಅವಿದ್ಯಾವಂತರ ಅಜ್ಞಾನ, ಕಿತ್ತು ತಿನ್ನುವ ಬಡತನ, ಸಮರ್ಪಕ ಶೌಚಾಲಯಗಳ ಕೊರತೆ ಅಥವಾ ಅಭಾವ, ವೈಯುಕ್ತಿಕ ಆರೋಗ್ಯದ ಬಗ್ಗೆ ಪ್ರಾಥಮಿಕ ಮಾಹಿತಿಯ ಅಭಾವ, ಪರಿಸರ ಮಾಲಿನ್ಯ ಮತ್ತು ಪ್ರಮುಖವಾಗಿ ಶುದ್ಧೀಕರಿಸಿದ ಕುಡಿಯುವ ನೀರಿನ ಅಭಾವಗಳಂತಹ ಕಾರಣಗಳಿಂದಾಗಿ, ಈ ಗಂಭೀರ ಸಮಸ್ಯೆಯನ್ನು ಪರಿಹರಿಸುವಲ್ಲಿ ಬಹುತೇಕ ರಾಷ್ಟ್ರಗಳು ಯಶಸ್ವಿಯಾಗಿಲ್ಲ. ನಮ್ಮ ದೇಶವೂ ಇದಕ್ಕೆ ಅಪವಾದವೆನಿಸಿಲ್ಲ. 

ಮನುಷ್ಯನ ಶರೀರದಲ್ಲಿ ಮನೆಮಾಡಿಕೊಂಡಿರುವ ಜಂತು ಹುಳಗಳು ಆತನು ಸೇವಿಸಿದ ಆಹಾರದಲ್ಲಿರುವ ಪೌಷ್ಠಿಕಾಂಶಗಳನ್ನು ಅನಾಯಾಸವಾಗಿ ಕಬಳಿಸುತ್ತವೆ. ತತ್ಪರಿಣಾಮವಾಗಿ ಪೋಷಕಾಂಶಗಳ ಕೊರತೆಯಿಂದ ಉದ್ಭವಿಸಬಲ್ಲ ವಿವಿಧ ವ್ಯಾಧಿಗಳು ತಲೆದೋರುವ ಸಾಧ್ಯತೆಗಳೂ ಇವೆ. ರಕ್ತಹೀನತೆ, ಅಂಗಾಂಗಗಳು ಹಾಗೂ ಇಂದ್ರಿಯಗಳಿಗೆ ಹಾನಿ ಸಂಭವಿಸುವುದು, ಕರುಳಿನಲ್ಲಿ ಅಡಚಣೆ ಉದ್ಭವಿಸುವುದು ಮತ್ತು ಮನುಷ್ಯನ ಸಾಮಾನ್ಯ ಆರೋಗ್ಯದ ಮಟ್ಟದಲ್ಲಿ ನ್ಯೂನತೆಗಳು ಉಂಟಾಗುವುದೇ ಮುಂತಾದ ಹತ್ತು ಹಲವು ಸಮಸ್ಯೆಗಳು ಜಂತು ಹುಳಗಳಿಂದ ಉದ್ಭವಿಸುವ ಸಾಧ್ಯತೆಗಳಿವೆ. ಅಂತೆಯೇ ವಿವಿಧ ರೀತಿಯ ಜಂತು ಹುಳಗಳಿಂದ ಸಾಮಾನ್ಯ ಅಥವಾ ಗಂಭೀರ ಕಾಯಿಲೆಗಳು ತಲೆದೋರುವ ಸಾಧ್ಯತೆಗಳೂ ಇವೆ. 

ವೈದ್ಯರು ಮತ್ತು ರೋಗಿಗಳ ನಡುವೆ ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿರುವ ಜಂತು ಹುಳಗಳ ಸಮಸ್ಯೆಗಳಿಗೆ, ಅವಿದ್ಯಾವಂತರಲ್ಲಿ ಬೇರೂರಿರುವ ತಪ್ಪುಕಲ್ಪನೆಗಳು ಅಥವಾ ಮೂಢನಂಬಿಕೆಗಳೇ ಕಾರಣವೆನಿಸಿವೆ. ಇದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ.

ಕರಗಿಹೋದ ಹುಳಗಳು! 

ವಯೋವೃದ್ಧೆ ಕಮಲಮ್ಮನಿಗೆ ತನ್ನ ಏಕಮಾತ್ರ ಮೊಮ್ಮಗನೆಂದರೆ ಪಂಚಪ್ರಾಣ. ಮೂರು ವರ್ಷದ ಮುಕುಂದನು ದಿನವಿಡೀ ಹೊಟ್ಟೆಬಾಕನಂತೆ ತಿನ್ನುತ್ತಲೇ ಇದ್ದರೂ, ಆತನ ಕೈಕಾಲುಗಳು ಕಡ್ಡಿಗಳಂತಾಗಿ, ಹೊಟ್ಟೆ ಉಬ್ಬಿಕೊಂಡು ರೋಗಪೀಡಿತನಂತೆ ಕಾಣಿಸುತ್ತಿದ್ದನು.  

ಯುಗಾದಿಯಂದು ಪಟ್ಟಾಗಿ ತಿಂದಿದ್ದ ಮುಕುಂದನಿಗೆ ಸಂಜೆಯ ವೇಳೆಗೆ ಆಕಸ್ಮಿಕವಾಗಿ ವಾಂತಿ ಆರಂಭವಾಗಿತ್ತು. ವಾಂತಿಯೊಂದಿಗೆ ಆತನ ಬಾಯಿ ಮೂಗುಗಳಿಂದಲೂ ನಾಲ್ಕಾರು ಜಂತುಹುಳಗಳು ಹೊರಬಿದ್ದಿದ್ದವು. ಜಂತುಹುಳಗಳು ಉದ್ರೇಕಗೊಂಡಿರುವುದೇ ಇದಕ್ಕೆ ಕಾರಣವೆಂದು ನಿರ್ಧರಿಸಿದ್ದ ಕಮಲಮ್ಮನು ತಮ್ಮ ಕುಟುಂಬ ವೈದ್ಯರಿಂದ ಒತ್ತಾಯಪೂರ್ವಕವಾಗಿ ಇವುಗಳನ್ನು ಶಾಂತಗೊಳಿಸಬಲ್ಲ ಔಷದವನ್ನು ತಂದು ಮೊಮ್ಮಗನಿಗೆ ನೀಡಿದ್ದಳು. 

ಜಂತುಹುಳಗಳು ಉದ್ರೇಕಗೊಂಡು ವಾಂತಿಯಾಗುವ ಸಾಧ್ಯತೆಗಳು ಹಾಗೂ ಇವುಗಳನ್ನು ಶಾಂತಗೊಳಿಸಬಲ್ಲ ಔಷದಗಳೇ ಇಲ್ಲವೆನ್ನುವ ವಿಚಾರ ಅನಕ್ಷರಸ್ಥೆ ಕಮಲಮ್ಮನಿಗೆ ತಿಳಿದಿರಲಿಲ್ಲ. ಆದರೆ ಆಕೆಯೊಂದಿಗೆ ಚರ್ಚಿಸಲು ಸಿದ್ಧರಿಲ್ಲದ ವೈದ್ಯರು ವಾಂತಿ ನಿಲ್ಲಿಸುವ ಔಷದವನ್ನು ನೀಡಿದ್ದುದು ಮಾತ್ರ ಸುಳ್ಳೇನಲ್ಲ!.

ವೈದ್ಯರ ಔಷದ ಸೇವಿಸಿದ ಬಳಿಕ ಸ್ವಸ್ಥನಾದ ಮುಕುಂದನಿಗೆ ಮೂರುದಿನಗಳ ಬಳಿಕ ಜಂತುಹುಳಗಳ ನಿವಾರಣೆಗಾಗಿ ಔಷದವನ್ನು ನೀಡುವಂತೆ ವೈದ್ಯರು ಸೂಚಿಸಿದ್ದರು. ಆದರೆ " ಚಳಿಗಾಲ " ದಲ್ಲಿ ಹುಳಗಳ ನಿವಾರಣೆಗಾಗಿ ಔಷದವನ್ನು ನೀಡಿದರೂ, ಜಂತುಹುಳಗಳು ಹೊರಬೀಳುವುದಿಲ್ಲ ಎಂದು ಎಂದು ಧೃಢವಾಗಿ ನಂಬಿದ್ದ ಕಮಲಮ್ಮನು ವೈದ್ಯರ ಬಳಿ ಹೋಗಿರಲೇ ಇಲ್ಲ. ಏಕೆಂದರೆ ಜಂತುಹುಳಗಳ ನಿವಾರಣೆಗೆ ಚಳಿ - ಮಳೆಗಾಳವೆನ್ನದೇ, ವರ್ಷದ ೩೬೫ ದಿನಗಳಲ್ಲೂ ಔಷದವನ್ನು ನೀಡಬಹುದೆನ್ನುವ ವೈಜ್ಞಾನಿಕ ಸತ್ಯ ಆಕೆಗೆ ತಿಳಿದಿರಲಿಲ್ಲ.  

ಬೇಸಗೆಯ ದಿನಗಳು ಆರಂಭವಾದೊಡನೆ ಮೊಮ್ಮಗನ ಸಲುವಾಗಿ ಹುಳದ ಔಷದವನ್ನು ಪಡೆಯಲು ವೈದ್ಯರ ಬಳಿ ತೆರಳಿದ್ದ ಕಮಲಮ್ಮನಿಗೆ, ಹಲವಾರು ವರ್ಷಗಳಿಂದ ತಾನೂ ಈ ಔಷದವನ್ನು ಸೇವಿಸದಿದ್ದುದು ನೆನಪಾಗಿತ್ತು. ಇದೇ ಕಾರಣದಿಂದಾಗಿ ತಮಗಿಬ್ಬರಿಗೂ ಬೇಕಾಗುವಷ್ಟು ಔಷದವನ್ನು ಪಡೆದುಕೊಂಡು ಹಿಂದಿರುಗಿದ ಆಕೆ, ಅದೇ ರಾತ್ರಿ ಮೊಮ್ಮಗನಿಗೂ ಔಷದವನ್ನು ನೀಡಿ ತಾನೂ ಸೇವಿಸಿದ್ದಳು. 

ಮರುದಿನ ಮುಂಜಾನೆ ಪುಟ್ಟ ಮುಕುಂದನು ಮಲವಿಸರ್ಜನೆ ಮಾಡಿದಾಗ ಹೊರಬಿದ್ದ ಅಸಂಖ್ಯ ಹುಳಗಳನ್ನು ಕಂಡ ಅಜ್ಜಿಗೆ ದಿಗಿಲಾಗಿತ್ತು. ಆದರೆ ಆಕೆಗೆ ಮಾತ್ರ ಒಂದೆರಡು ಬಾರಿ ಹೊಟ್ಟೆನೋವಿನೊಂದಿಗೆ ಮಲವಿಸರ್ಜನೆಯಾದರೂ, ಒಂದೇ ಒಂದು ಜಂತುಹುಳ ಹೊರಬಿದ್ದಿರಲಿಲ್ಲ. ತತ್ಪರಿಣಾಮವಾಗಿ ಆಕೆಯ ಮನದಲ್ಲಿ ಸಂಶಯದ ಹುಳವೊಂದು ಕೊರೆಯಲಾರಂಭಿಸಿತ್ತು. 

ಅದೇ ಸಂಜೆ ವೈದ್ಯರನ್ನು ಭೇಟಿಯಾದ ಕಮಲಮ್ಮನು ತನ್ನ ಪುಟ್ಟ ಮೊಮ್ಮಗನ ಹೊಟ್ಟೆಯಿಂದ ನೂರಾರು ಹುಳಗಳು ಹೊರಬಿದ್ದರೂ, ತನ್ನ ಶರೀರದಿಂದ ಒಂದಾದರೂ ಹುಳ ಹೋಗಿಲ್ಲವೆಂದು ದೂರಿದ್ದಳು. ಆಕೆಯ ಮಾತನ್ನು ಕೇಳಿ ಮೀಸೆಯಡಿಯಲ್ಲೇ ನಕ್ಕ ವೈದ್ಯರು, ಜಂತುಹುಳಗಳು ಕರಗಿ ಹೋಗಿದ್ದುದರಿಂದ ನಿಮಗೆ ಕಾಣಿಸಿಲ್ಲ ಎಂದು ಉತ್ತರಿಸಿದ್ದರು!. ಆದರೆ ಮೊಮ್ಮಗನ ಹೊಟ್ಟೆಯಲ್ಲಿದ್ದ ಹುಳಗಳು ಕರಗದೇ ಹೊರಬಿದ್ದಿದ್ದು ಹೇಗೆ?, ಎಂದು ವೈದ್ಯರನ್ನು ಪ್ರಶ್ನಿಸುವಷ್ಟು ಬುದ್ಧಿಶಕ್ತಿ ಈ ಬಡಪಾಯಿ ವೃದ್ಧೆಯಲ್ಲಿರಲಿಲ್ಲ. ಆಕೆಯ ಹೊಟ್ಟೆಯಲ್ಲಿ ಹುಳಗಳೇ ಇದ್ದಿರದ ಕಾರಣದಿಂದಾಗಿ ಹೊರಬಿದ್ದಿಲ್ಲವೆಂದು ವೈದ್ಯರು ಹೇಳಿದ್ದಲ್ಲಿ, ಆಕೆಯು ವೈದ್ಯರ ಮಾತನ್ನು ನಂಬುವ ಸಾಧ್ಯತೆಗಳೇ ಇರಲಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ವೈದ್ಯರು ಮೇಲಿನ ಉತ್ತರವನ್ನು ನೀಡಿದ್ದರು. ಆಶ್ಚರ್ಯವೆಂದರೆ ವೈದ್ಯರ ಉತ್ತರದಿಂದ ಸಂತುಷ್ಟಳಾದ ಕಮಲಮ್ಮನು ನೆಮ್ಮದಿಯಿಂದ ಮನೆಗೆ ಮರಳಿದ್ದಳು. 

ನಿಜ ಹೇಳಬೇಕಿದ್ದಲ್ಲಿ ತಮ್ಮ ತಲೆ ತಿನ್ನುವ ರೋಗಿಗಳನ್ನು ಸಾಗಹಾಕಲು ಅನೇಕ ವೈದ್ಯರು ನೀಡುವ ಇಂತಹ ಉತ್ತರಗಳು ನೂರಕ್ಕೆ ನೂರಷ್ಟು ಸುಳ್ಳು ಎನ್ನುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಜಂತುಹುಳಗಳ ನಿವಾರಣೆಗಾಗಿ ವೈದ್ಯರು ನೀಡುವ ಯಾವುದೇ ವಿಧದ ಔಷದಗಳ ಸೇವನೆಯಿಂದ ಹುಳಗಳು ಕರಗಿಹೋಗುವ ಸಾಧ್ಯತೆಗಳೇ ಇಲ್ಲ!. 

ಸತ್ಯಸಂಗತಿ ಇಂತಿದೆ 

ಸಾಮಾನ್ಯವಾಗಿ ಜಂತುಹುಳಗಳ ನಿವಾರಣೆಗಾಗಿ ಬಳಸುವ ಔಷದಗಳಲ್ಲಿ ಎರಡುವಿಧಗಳಿವೆ. ಜಂತುಹುಳಗಳನ್ನು ಕೊಲ್ಲುವಂತಹ ಔಷದಗಳನ್ನು ವೈದ್ಯಕೀಯ ಪರಿಭಾಷೆಯಲ್ಲಿ ವರ್ಮಿಸೈಡ್ ಹಾಗೂ ಇವುಗಳನ್ನು ಶರೀರದಿಂದ ಹೊರಹಾಕಬಲ್ಲ ಔಷದಗಳನ್ನು ವರ್ಮಿಫ್ಯೂಜ್ ಎಂದು ಕರೆಯುವರು. 

ಮನುಷ್ಯನನ್ನು ಬಾಧಿಸಬಲ್ಲ ಜಂತುಹುಳಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳನ್ನು ಟ್ರೆಮಟೋಡ್ಸ್, ಸೆಸ್ಟೋಡ್ಸ್ ಮತ್ತು ನೆಮಟೋಡ್ಸ್ ಎನ್ನುತ್ತಾರೆ. ಈ ಮೂರು ಗುಂಪುಗಳಲ್ಲಿ ಹಲವು ಜಾತಿಯ ಹುಳಗಳಿವೆ. ಪ್ರತಿಯೊಂದು ವಿಧದ ಹುಳವೂ ಮನುಷ್ಯನಲ್ಲಿ ವೈವಿಧ್ಯಮಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಬಲ್ಲದು. ಇವುಗಳ ಬಾಧೆ ಅತಿಯಾದಾಗ ರೋಗಿಯ ಶರೀರದಲ್ಲಿ ಕಂಡುಬರುವ ಗುಣಲಕ್ಷಣಗಳನ್ನು ಅಥವಾ ನಿರ್ದಿಷ್ಟ ವ್ಯಾಧಿಯನ್ನು ನಿಖರವಾಗಿ ಗುರುತಿಸುವ ವೈದ್ಯರು, ಸಮಸ್ಯೆಯ ನಿವಾರಣೆಗೆ ಸೂಕ್ತ ಚಿಕಿತ್ಸೆಯನ್ನು ನೀಡುವರು. 

ಸಾಮಾನ್ಯವಾಗಿ ಬಾಲ್ಯಾವಸ್ಥೆಯಲ್ಲಿ ವರ್ಷದಲ್ಲಿ ಎರಡುಬಾರಿ ಸೇವಿಸಬೇಕಾದ ಈ ಔಷದವನ್ನು, ತದನಂತರ ವರ್ಷದಲ್ಲಿ ಒಂದುಬಾರಿಯಾದರೂ ಸೇವಿಸುವುದು ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಮಹತ್ವಪೂರ್ಣವೆನಿಸಬಲ್ಲದು. 

ಅಂದಹಾಗೆ ಕಮಲಮ್ಮನ ಮೊಮ್ಮಗ ಮುಕುಂದನು ಜಂತುಹುಳಗಳ ನಿವಾರಣೆಯ ಬಳಿಕ ಇದೀಗ ಮೈಕೈ ತುಂಬಿಕೊಂಡು ಆರೋಗ್ಯವಂತನಾಗಿದ್ದಾನೆ. ಆರು ತಿಂಗಳ ಹಿಂದಿನ ತನಕ ಆತನು ಬಕಾಸುರನಂತೆ ತಿನ್ನುತ್ತಿದ್ದ ಆಹಾರದಲ್ಲಿನ ಪೋಷಕಾಂಶಗಳು ಜಂತುಹುಳಗಳ ಉದರವನ್ನು ಸೇರುತ್ತಿತ್ತು. ಇದೀಗ ಇವೆಲ್ಲವೂ ಆತನ ಶರೀರಕ್ಕೆ ಲಭಿಸುತ್ತಿರುವುದೇ ಇದಕ್ಕೆ ಕಾರಣವೆನಿಸಿದೆ.

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 

೧೨- ೦೫- ೨೦೦೫ ರ ತರಂಗ ವಾರಪತ್ರಿಕೆಯಲ್ಲಿ ಪ್ರಕಟಿತ ಲೇಖನ.