Saturday, September 26, 2015

PARTICIPATE IN SWACH BHAARAT MISSION



   ಭಾರತವನ್ನು ಸ್ವಚ್ಛ, ಸ್ವಸ್ಥ ಮತ್ತು ಸುಂದರವನ್ನಾಗಿಸಲು ಶ್ರಮಿಸಿ


ಗತವರ್ಷದ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಕಸವನ್ನು ಗುಡಿಸುವ ಮೂಲಕ " ಸ್ವಚ್ಚ ಭಾರತ ಅಭಿಯಾನ " ವನ್ನು  ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ವಾರದಲ್ಲಿ ಎರಡು ಘಂಟೆಗಳಂತೆ, ವರ್ಷದಲ್ಲಿ ೧೦೦ ಘಂಟೆಗಳನ್ನು ಸ್ವಚ್ಛತೆಗಾಗಿ ವಿನಿಯೋಗಿಸಬೇಕು ಎಂದು ವಿನಂತಿಸಿದ್ದರು. ಈ ಅಭಿಯಾನವು ಮುಂದಿನ ಐದು ವರ್ಷಗಳ ಕಾಲ ನಿರಂತರವಾಗಿ ನಡೆಯಲಿದ್ದು, ಗಾಂಧೀಜಿಯವರ ೧೫೦ ನೇ ಜನ್ಮದಿನದಂದು ಸಂಪನ್ನಗೊಳ್ಳಲಿದ್ದು, ಈ ಅವಧಿಯಲ್ಲಿ ನಮ್ಮ ದೇಶವು ಸ್ವಚ್ಛ ಮತ್ತು ಸುಂದರವನ್ನಾಗಿಸಲು ದೇಶದ ಪ್ರಜೆಗಳೆಲ್ಲರೂ ಶ್ರಮಿಸುವಂತೆ ಕರೆನೀಡಿದ್ದರು.

ಗತವರ್ಷದಲ್ಲಿ ಈ ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ ದೇಶದ ಪ್ರತಿಯೊಂದು ರಾಜ್ಯಗಳ ರಾಜಕೀಯ ನೇತಾರರು, ಉನ್ನತ ಅಧಿಕಾರಿಗಳು, ಬೃಹತ್ ಉದ್ದಿಮೆ – ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು ಇದರಲ್ಲಿ ಭಾಗಿಯಾಗಿದ್ದು, ಇನ್ನುಮುಂದೆ ಪ್ರತಿ ತಿಂಗಳಿನಲ್ಲೂ ಸ್ವಚ್ಛತಾ ಕಾರ್ಯಕ್ರಮವನ್ನು ನಿಯಮಿತವಾಗಿ ನಡೆಸುವುದಾಗಿ ಘೋಷಿಸಿದ್ದರು. ಆದರೆ ಈ ಆರಂಭಶೂರತ್ವವು ಒಂದೆರಡು ತಿಂಗಳುಗಳಲ್ಲೇ ಅಂತ್ಯಗೊಂಡಿದ್ದುದು ಮಾತ್ರ ಸುಳ್ಳೇನಲ್ಲ!. ಪ್ರಾಯಶಃ ಮಾಧ್ಯಮಗಳಲ್ಲಿ ಲಭಿಸಲಿರುವ ಪುಕ್ಕಟೆ ಪ್ರಚಾರಕ್ಕಾಗಿ ಭಾಗಿಯಾಗಿದ್ದ ಇವರೆಲ್ಲರೂ, ಇದೀಗ ಅಭಿಯಾನದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮತ್ತೆ ಸಕ್ರಿಯರಾಗಲಿದ್ದಾರೆ. ಆದರೆ  ಕೇವಲ ಪ್ರಚಾರದ ಸಲುವಾಗಿ ಭಾಗಿಯಾಗುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ  ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂತೆಯೇ ದೇಶದ ಜನತೆ ಮನಸ್ಪೂರ್ವಕವಾಗಿ ಇದರಲ್ಲಿ ಭಾಗವಹಿಸಿದಲ್ಲಿ, ಇದು ಯಶಸ್ವಿಯಾಗುವುದರಲ್ಲೂ ಸಂದೇಹವಿಲ್ಲ.

ಅಭಿಯಾನಕ್ಕೆ ಒಂದು ವರ್ಷ

ದೇಶದ ವಿವಿಧ ರಾಜ್ಯಗಳ ಮಾಹಿತಿಯನ್ನು ಪರಿಶೀಲಿಸಿದಾಗ ಈ ಅಭಿಯಾನವು ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಆದರೆ ಪ್ರಧಾನಿಯವರ ಅಪೇಕ್ಷೆಯಂತೆ ದೇಶದ ಪ್ರತಿಯೊಬ್ಬ ಪ್ರಜೆಯು ಇದರಲ್ಲಿ ಭಾಗವಹಿಸಿದ್ದಲ್ಲಿ, ಅಭಿಯಾನವು  ಇನ್ನಷ್ಟು ಯಶಸ್ವಿಯಾಗುತ್ತಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಸ್ಥಳೀಯ ಸಂಸ್ಥೆಗಳು, ರಾಜ್ಯಮತ್ತು ಕೇಂದ್ರ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯಗಳ ಸಂಗ್ರಹ ಮಾತ್ರವಲ್ಲ, ಈ ತ್ಯಾಜ್ಯಗಳನ್ನು ಸುರಕ್ಷಿತ ಮತ್ತು ವೈಜ್ಞಾನಿಕ ವಿಧಿವಿಧಾನಗಳಿಂದ ಪುನರ್ಬಳಕೆ ಹಾಗೂ ಪುನರ್ ಆವರ್ತನಗೊಳಿಸುವ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವ, ಸಿಮೆಂಟ್ ಮತ್ತು ಉಕ್ಕಿನ ಕಾರ್ಖಾನೆಗಳ ಕುಲುಮೆಗಳಲ್ಲಿ ಇಂಧನವನ್ನಾಗಿ ಬಳಸುವ, ಭಗ್ನಗೊಳಿಸಿದ ಕಟ್ಟಡಗಳ ತ್ಯಾಜ್ಯಗಳಿಂದ ಹೊಸ ಕಟ್ಟಡಗಳನ್ನು ಅಥವಾ ಹೊಸ ರಸ್ತೆಗಳನ್ನು ನಿರ್ಮಿಸುವ, ತ್ಯಾಜ್ಯಗಳನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳನ್ನು ಸ್ಥಾಪಿಸುವ, ಸಂಪೂರ್ಣವಾಗಿ ನಿರುಪಯುಕ್ತ ಎನಿಸುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇನ್ಸಿನರೇಟರ್ ಮೂಲಕ ಸುರಕ್ಷಿತವಾಗಿ ದಹಿಸುವ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ವಾಹನಗಳಲ್ಲಿ ಬಳಸಬಹುದಾದ ಇಂಧನವನ್ನು ತಯಾರಿಸಬಲ್ಲ ಘಟಕಗಳನ್ನು ಸ್ಥಾಪಿಸಿದಲ್ಲಿ, ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ಮತ್ತು ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ತುಂಬಿ ತುಳುಕುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳು ಕಣ್ಮರೆಯಾಗಲಿವೆ. ಹಾಗೂ ಇದರಿಂದಾಗಿ ಹೊಸ ಲ್ಯಾಂಡ್ ಫಿಲ್ ಸೈಟ್ ಗಳ ನಿರ್ಮಾಣಕ್ಕಾಗಿ ಸ್ಥಳವನ್ನು ಹುಡುಕುವ ಹಾಗೂ ಸ್ಥಾಪಿಸಲು ತಗಲುವ ವೆಚ್ಚಗಳನ್ನು ಮತ್ತು ಇವುಗಳ ಸ್ಥಾಪನೆಯನ್ನು ವಿರೋಧಿಸುವ ಜನರ ಪ್ರತಿಭಟನೆಗಳನ್ನು ನಿವಾರಿಸಬಹುದಾಗಿದೆ.

ನೀವೇನು ಮಾಡಬಹುದು

ಬಡವ ಶ್ರೀಮಂತರೆನ್ನುವ ಭೇದವಿಲ್ಲದೇ ದೇಶದ ಪ್ರಜೆಗಳೆಲ್ಲರೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು.ಕಾರಣಾಂತರಗಳಿಂದ ಈ ಅಭಿಯಾನದಲ್ಲಿ ಪ್ರತ್ಯಕ್ಷವಾಗಿ ಭಾಗಿಗಳಾಗಲು ಸಾಧ್ಯವಿಲ್ಲದಿದ್ದಲ್ಲಿ, ತಾವು ದಿನನಿತ್ಯ ಉತ್ಪಾದಿಸುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡುವ ಹಾಗೂ ಎಲ್ಲೆಂದರಲ್ಲಿ ಎಸೆಯುವ ಕೆಟ್ಟ ಹವ್ಯಾಸವನ್ನು ತೊರೆಯುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬಹುದಾಗಿದೆ. ಅಂತೆಯೇ ಅಧಿಕತಮ ಜನರು ಅತಿಯಾಗಿ ಬಳಸುವ ಪ್ಲಾಸ್ಟಿಕ್ ಕೈಚೀಲ ಮತ್ತಿತರ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವ, ಪುನರ್ ಬಳಕೆ ಮಾಡುವ ಮೂಲಕ ಹಾಗೂ ನಿರುಪಯುಕ್ತ ಪ್ಲಾಸ್ಟಿಕ್ ಚೀಲಗಳನ್ನು ಪುನರ್ ಆವರ್ತನಗೊಳಿಸುವ ಸಲುವಾಗಿ ಪ್ರತ್ಯೇಕಿಸಿ ಇರಿಸುವ ಮೂಲಕ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ನಿರಾಕರಿಸುವ ಮೂಲಕ, ಇಂತಹ ವಸ್ತುಗಳನ್ನು ತ್ಯಾಜ್ಯ ರೂಪದಲ್ಲಿ ವಿಸರ್ಜಿಸುವುದನ್ನು ಸುಲಭದಲ್ಲೇ ತಡೆಗಟ್ಟಬಹುದಾಗಿದೆ.

ವಿದ್ಯಾರ್ಥಿಗಳಿಗೊಂದು ಅವಕಾಶ

ಶಾಲಾಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವುದರೊಂದಿಗೆ ಒಂದಿಷ್ಟು ಆದಾಯವನ್ನು ಗಳಿಸಬಲ್ಲ ಸುಲಭೋಪಾಯವೊಂದು ಇಂತಿದೆ. ತಮ್ಮ ಮನೆಗಳಲ್ಲಿ, ಶಾಲಾಕಾಲೇಜುಗಳ ಆವರಣಗಳಲ್ಲಿ, ತಾವು ದಿನನಿತ್ಯ ನಡೆದಾಡುವ ರಸ್ತೆಗಳ ಬದಿಗಳಲ್ಲಿ ಕಾಣಸಿಗುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಸ್ವಚ್ಚವಾದ ಪ್ಲಾಸ್ಟಿಕ್ ಕೈಚೀಲ ಇತ್ಯಾದಿಗಳನ್ನು ಸಂಗ್ರಹಿಸಿ, ನಿಮ್ಮದೇ ಊರಿನ ಗುಜರಿ ಅಂಗಡಿಗಳಿಗೆ ನೀಡಬಹುದಾಗಿದೆ. ಅದೇ ರೀತಿಯಲ್ಲಿ ರಟ್ಟಿನ ಪೆಟ್ಟಿಗೆಗಳು ನಿರುಪಯುಕ್ತ ಕಾಗದ ಇತ್ಯಾದಿ ವಸ್ತುಗಳನ್ನು ಒಲೆಯಲ್ಲಿ ಸುಡುವ ಬದಲಾಗಿ, ಇವುಗಳನ್ನು ಕೂಡಾ ಗುಜರಿ ಅಂಗಡಿಗಳಿಗೆ ಮಾರಬಹುದಾಗಿದೆ. ಇದರಿಂದಾಗಿ ತ್ಯಾಜ್ಯಗಳ ಉತ್ಪಾದನೆಯು ಕಡಿಮೆಯಾಗುವುದಲ್ಲದೇ, ನೀವು ಸಂಗ್ರಹಿಸಿ ಮಾರಾಟ ಮಾಡುವ ತ್ಯಾಜ್ಯಗಳ ಪ್ರಮಾಣಕ್ಕೆ ಅನುಗುಣವಾಗಿ ನಿಮಗೆ ಒಂದಿಷ್ಟು ಆದಾಯವೂ ಲಭಿಸುತ್ತದೆ. ನಮ್ಮೂರಿನ ಶಾಲೆಯೊಂದರ ವಿದ್ಯಾರ್ಥಿಗಳು ಈ ವಿಧಾನವನ್ನು ಅನುಸರಿಸುವ ಮೂಲಕ, ತಮಗೆ ಬೇಕಾಗುವ ಸ್ಲೇಟು, ಪುಸ್ತಕ, ಪೆನ್ಸಿಲ್, ಪೆನ್, ಸ್ಕೂಲ್ ಬ್ಯಾಗ್, ಕೊಡೆ ಮತ್ತಿತರ ವಸ್ತುಗಳನ್ನು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಪಡೆಯುತ್ತಿದ್ದಾರೆ. ಈ ವಿಧಾನವನ್ನು ದೇಶದ ಎಲ್ಲ ಶಾಲಾಕಾಲೇಜುಗಳಲ್ಲಿ ಅನುಷ್ಠಾನಿಸಬಹುದಾಗಿದೆ. ತನ್ಮೂಲಕ ವಿದ್ಯಾರ್ಥಿಗಳಿಗೆ ಈ ಅಭಿಯಾನದಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸುವುದರೊಂದಿಗೆ, ಅವರ ಹೊಣೆಗಾರಿಕೆಯನ್ನು ಹೆಚ್ಚಿಸಬಹುದಾಗಿದೆ.

ಮಾರುಕಟ್ಟೆ ಅಥವಾ ಸಮೀಪದ ಅಂಗಡಿಗಳಲ್ಲಿ ಯಾವುದೇ ವಸ್ತುವನ್ನು ಖರೀದಿಸಲು ಹೋಗುವಾಗ ಬಟ್ಟೆಯ ಚೀಲವೊಂದನ್ನು ಒಯ್ಯಿರಿ. ಸರಣಿ ಮಳಿಗೆಗಳಲ್ಲಿ ಖರೀದಿಸುವ ಪ್ರತಿಯೊಂದು ತರಕಾರಿ ಹಾಗೂ ಹಣ್ಣುಗಳನ್ನು ಪ್ರತ್ಯೇಕ ಪ್ಲಾಸ್ಟಿಕ್ ಚೀಲದಲ್ಲಿ ಹಾಕಲೇಬೇಕೆಂದು ಒತ್ತಾಯಿಸಿದಲ್ಲಿ ನಿರಾಕರಿಸಿ. ಇವೆಲ್ಲವುಗಳನ್ನು ತೂಕ ಮಾಡಿದ ಬಳಿಕ ಇವುಗಳ ತೂಕ ಮತ್ತು ಬೆಲೆಯನ್ನು ಸೂಚಿಸುವ  ಸ್ಟಿಕ್ಕರ್ ಗಳನ್ನು ಕೇವಲ ಒಂದು ಪ್ಲಾಸ್ಟಿಕ್ ಚೀಲಕ್ಕೆ ಅಂಟಿಸುವಂತೆ ಸೂಚಿಸಿ. ಅನಿವಾರ್ಯವಾಗಿ ಪ್ಲಾಸ್ಟಿಕ್ ಚೀಲವನ್ನು ವ್ಯಾಪಾರಿಗಳಿಂದ ಪಡೆದುಕೊಂಡಲ್ಲಿ, ಇದನ್ನು ಹಲವಾರು ಬಾರಿ ಪುನರ್ಬಳಸಿ. ಯಾವುದೇ ಸಂದರ್ಭದಲ್ಲೂ ನಿಮ್ಮ ಮನೆಯಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಸಲುವಾಗಿಯೇ ಪ್ಲಾಸ್ಟಿಕ್ ಕೈಚೀಲಗಳನ್ನು ಕೇಳಿ ಪಡೆಯದಿರಿ!.

ಪ್ರಧಾನ ಮಂತ್ರಿಯವರು ಅಪೇಕ್ಷಿಸಿದಂತೆ ಕನಿಷ್ಠ ನೀವು ದಿನನಿತ್ಯ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆಮಾಡಿ.ಉತ್ಪಾದಿಸಿರುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಹಸಿ ತ್ಯಾಜ್ಯಗಳನ್ನು ನಿಮ್ಮ ಆವರಣದಲ್ಲಿರುವ ಮರಗಿಡಗಳ ಬುಡದಲ್ಲಿ ಹಾಕಿರಿ. ಗುಜರಿ ಅಂಗಡಿಗೆ ನೀಡಲು ಆಸಾಧ್ಯವೆನಿಸುವ ಹಾಗೂ ತೀರಾ ನಿರುಪಯುಕ್ತ ಮತ್ತು ಪುನರ್ ಆವರ್ತನಗೊಳಿಸಲಾಗದ ತ್ಯಾಜ್ಯಗಳನ್ನು ಮಾತ್ರ ನಿಮ್ಮ ವಸತಿ – ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯಕರ್ತರಿಗೆ ನೀಡಿ. ನಿಮ್ಮೂರಿನ ಸ್ಥಳೀಯ ಸಂಸ್ಥೆಯು ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ನಿರ್ವಹಿಸಲು ವಿಧಿಸುವ ಶುಲ್ಕವನ್ನು ತಪ್ಪದೆ ಪಾವತಿಸಿ. ಈ ಶುಲ್ಕವನ್ನು ಉಳಿಸುವ ಸಲುವಾಗಿ ತ್ಯಾಜ್ಯಗಳನ್ನು ರಸ್ತೆಬದಿ ಅಥವಾ ಚರಂಡಿಗಳಲ್ಲಿ ಎಸೆಯದಿರಿ. ನಿಮ್ಮ ನೆರೆಕರೆಯ ನಿವಾಸಿಗಳಿಗೂ ಇದೇ ರೀತಿಯಲ್ಲಿ ಸಹಕರಿಸಲು ಪ್ರೇರೇಪಿಸಿ.

ಕೊನೆಯ ಮಾತು

ಆರೋಗ್ಯವೇ ಭಾಗ್ಯ ಎನ್ನುವ ಮುತ್ತಿನಂತಹ ಮಾತುಗಳನ್ನು ನೀವು ಕೇಳಿರಲೇಬೇಕು. ಸ್ವಚ್ಚತೆ ಮತ್ತು ನಮ್ಮ ಆರೋಗ್ಯಕ್ಕೆ ಅವಿನಾಭಾವ ಸಂಬಂಧವಿದೆ. ಸಾಮಾನ್ಯವಾಗಿ ಸ್ವಚ್ಛತೆ ಇರುವಲ್ಲಿ ವ್ಯಾಧಿಗಳ ಬಾಧೆ ಇರುವ ಸಾಧ್ಯತೆಗಳಿಲ್ಲ. ಆದರೆ ಅಸ್ವಚ್ಛ ಪರಿಸರದಲ್ಲಿ ಕಾಯಿಲೆಗಳ ಹಾವಳಿ ಸ್ವಾಭಾವಿಕವಾಗಿಯೇ ಹೆಚ್ಚಾಗಿರುತ್ತದೆ. ಆದುದರಿಂದ ನಿಮ್ಮ ಮನೆ, ಸುತ್ತಲಿನ ಆವರಣ, ಸಮೀಪದ ರಸ್ತೆ, ನಿಮ್ಮ ಕೇರಿ ಮತ್ತು ಊರಿನ ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ, ನಮ್ಮ ದೇಶವನ್ನು ಸ್ವಚ್ಛ, ಸ್ವಸ್ಥ ಮತ್ತು ಸುಂದರ ಭಾರತವನ್ನಾಗಿಸಿ.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು


Thursday, September 10, 2015

ONE UNIT OF ELECTRICITY SAVED IS .............



                 ವಿದ್ಯುತ್ ಉಳಿತಾಯದತ್ತ ಸರ್ಕಾರದ ಚಿತ್ತ

ದಶಕಗಳಿಂದ ವಿದ್ಯುತ್ ಕ್ಷಾಮದ ಸಮಸ್ಯೆಯನ್ನು ಅನುಭವಿಸುತ್ತಿರುವ ಕರ್ನಾಟಕದ ಜನತೆಗೆ ಇದೀಗ ಮುಂಗಾರು ಮಳೆಯ ಕೊರತೆಯಿಂದಾಗಿ, ವಿದ್ಯುತ್ ಕಡಿತದ ಬಿಸಿ ತಟ್ಟುತ್ತಿದೆ. ಇದರೊಂದಿಗೆ ಸುಡು ಬಿಸಿಲಿನ ಬೇಗೆಯಿಂದ ಬಳಲಿ ಬೆಂಡಾಗಿರುವ ಕನ್ನಡಿಗರು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಭೀಕರ ವಿದ್ಯುತ್ ಕ್ಷಾಮದ ಸಮಸ್ಯೆಯನ್ನು ನಿಯಂತ್ರಿಸಲು, ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಅನುಸರಿಸಲು ಆಸಕ್ತಿಯನ್ನು ತೋರುತ್ತಿಲ್ಲ.

ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ದಿನನಿತ್ಯ ೮೦೦೦ ಮೆಗಾವಾಟ್ ವಿದ್ಯುತ್ತಿನ ಬೇಡಿಕೆಯಿದ್ದರೂ, ಪೂರೈಕೆಯ ಪ್ರಮಾಣವು ಸುಮಾರು ೬೦೦೦ ಮೆಗಾವಾಟ್ ಆಗಿದೆ. ಅರ್ಥಾತ್ ಸುಮಾರು ೨೦೦೦ ಮೆಗಾವಾಟ್ ವಿದ್ಯುತ್ತಿನ ಕೊರತೆ ಉದ್ಭವಿಸಿದೆ. ಮುಂಗಾರು ಮಳೆಯ ಪ್ರಮಾಣ ಕಡಿಮೆಯಾಗಿರುವ ಕಾರಣದಿಂದಾಗಿ ರಾಜ್ಯದ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ, ಜಲವಿದ್ಯುತ್ ಉತ್ಪಾದನಾ ಘಟಕಗಳು ಉತ್ಪಾದಿಸುತ್ತಿರುವ ವಿದುತ್ತಿನ ಪ್ರಮಾಣವೂ ಸ್ವಾಭಾವಿಕವಾಗಿಯೇ ಕಡಿಮೆಯಾಗಿದೆ. ಇದರೊಂದಿಗೆ ರಾಜ್ಯದ ಉಷ್ಣ ಮತ್ತು ಅಣುವಿದ್ಯುತ್ ಉತ್ಪಾದನಾ ಘಟಕಗಳು ಕಾರಣಾಂತರದಿಂದ ಉತ್ಪಾದಿಸುತ್ತಿರುವ ವಿದ್ಯುತ್ತಿನ ಪ್ರಮಾಣವೂ ಕಡಿಮೆಯಾಗಿರುವುದರಿಂದ, ವಿದ್ಯುತ್ ಕ್ಷಾಮದ ಸಮಸ್ಯೆ ತಲೆದೋರಿದೆ. ಆದರೆ ವರ್ಷಂಪ್ರತಿ ರಾಜ್ಯದ ವಿದ್ಯುತ್ತಿನ ಬೇಡಿಕೆಯ ಪ್ರಮಾಣವು ಹೆಚ್ಚುತ್ತಲೇ ಇದೆ.

ರಾಜ್ಯದಲ್ಲಿ ಸುರಿಯಲಿರುವ ಹಿಂಗಾರು ಮಳೆಯ ಪ್ರಮಾಣವು ಹೆಚ್ಚಾಗಿ, ಜಲಾಶಯಗಳು ತುಂಬಿದಲ್ಲಿ, ಉಷ್ಣ ವಿದ್ಯುತ್  ಮತ್ತು ಅಣು ವಿದ್ಯುತ್ ಉತ್ಪಾದನಾ ಸ್ಥಾವರಗಳು ತಮ್ಮ ಸಾಮರ್ಥ್ಯಕ್ಕೆ ಸರಿಯಾಗಿ ವಿದ್ಯುತ್ತನ್ನು ಉತ್ಪಾದಿಸಲು ಆರಂಭಿಸಿದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ. ಜೊತೆಗೆ ರಾಜ್ಯ ಸರ್ಕಾರವು ನಮ್ಮದೇ ರಾಜ್ಯದ ಸಕ್ಕರೆ ಹಾಗೂ ಸಿಮೆಂಟ್ ಕಾರ್ಖಾನೆಗಳು ಉತ್ಪಾದಿಸುವ ಮತ್ತು ಹೆಚ್ಚುವರಿ ವಿದ್ಯುತ್ತನ್ನು ಉತ್ಪಾದಿಸುತ್ತಿರುವ ನೆರೆಯ ರಾಜ್ಯಗಳಿಂದ ವಿದ್ಯುತ್ತನ್ನು ಖರೀದಿಸಿದಲ್ಲಿ  ಸಮಸ್ಯೆಯು ತಕ್ಕಮಟ್ಟಿಗೆ ನಿಯಂತ್ರಿಸಬಹುದಾಗಿದೆ. ಇದರೊಂದಿಗೆ ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅವಶ್ಯಕತೆಯೂ ಇದೆ.

ರಾಜ್ಯದಲ್ಲಿ ಉದ್ಭವಿಸಿರುವ ವಿದ್ಯುತ್ ಕ್ಷಾಮದ ಸಮಸ್ಯೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸಲು ಇತರ ಹಲವಾರು ಉಪಕ್ರಮಗಳೊಂದಿಗೆ, ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ದಾರಿದೀಪಗಳನ್ನು ಒಂದು ತಾಸು ತಡವಾಗಿ ಉರಿಸಬೇಕೆಂದು ಇಂಧನ ಸಚಿವರೇ ಆದೇಶಿಸಿದ್ದಾರೆ. ಆದರೆ ದಾರಿದೀಪಗಳು ಬಳಸುವ ವಿದ್ಯುತ್ತಿನಲ್ಲಿ ಇನ್ನಷ್ಟು ಉಳಿತಾಯ ಮಾಡಬೇಕಿದ್ದಲ್ಲಿ, ಸಚಿವರು ಆಯ್ಕೆ ಮಾಡಿರುವುದಕ್ಕಿಂತ ಪರಿಣಾಮಕಾರಿ ವಿಧಾನವೊಂದು ಇಂತಿದೆ.

ದಾರಿದೀಪಗಳ ಸಂಪರ್ಕ ಕಡಿತ

ಸಾಮಾನ್ಯವಾಗಿ ಮಹಾನಗರಗಳನ್ನು ಹೊರತುಪಡಿಸಿ ಅನ್ಯ ನಗರ ಮತ್ತು ಪಟ್ಟಣಗಳಲ್ಲಿ ರಾತ್ರಿ ಹತ್ತು ಗಂಟೆಯ ಬಳಿಕ ಜನಸಂಚಾರ ಸಾಕಷ್ಟು ಕಡಿಮೆ ಇರುತ್ತದೆ. ಆದರೆ ಪ್ರತಿಯೊಂದು ನಗರ - ಪಟ್ಟಣಗಳಲ್ಲಿ ಅನಾವಶ್ಯಕವಾಗಿ ಮತ್ತು ಅವೈಜ್ಞಾನಿಕವಾಗಿ ಅಳವಡಿಸಿರುವ ಅಸಂಖ್ಯ ದಾರಿದೀಪಗಳು ಇರುಳಿಡೀ  ( ಕೆಲವೆಡೆ ಹಗಲಿರುಳು )    ಬೆಳಗುತ್ತವೆ. ಇಂಧನ ಸಚಿವರಿಗೆ ಬೀದಿದೀಪಗಳು ಕಬಳಿಸುವ ಅಗಾಧ ಪ್ರಮಾಣದ ವಿದ್ಯುತ್ತನ್ನು ಉಳಿತಾಯ ಮಾಡಬೇಕೆನ್ನುವ ಉದ್ದೇಶವಿದ್ದಲ್ಲಿ, ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ದಾರಿದೀಪಗಳಲ್ಲಿ ಶೇ. ೫೦ ರಷ್ಟು ದೀಪಗಳ ( ಒಂದು ಕಂಬವನ್ನು ಬಿಟ್ಟು ಮತ್ತೊಂದು ಕಂಬದಲ್ಲಿನ ದೀಪದ ಸಂಪರ್ಕ ಕಡಿತ ) ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಬೇಕು. ಜೊತೆಗೆ ಇತ್ತೀಚಿನ ಕೆಲವರ್ಷಗಳಿಂದ ಹಳ್ಳಿಹಳ್ಳಿಗಳಲ್ಲೂ ಕಾಣಸಿಗುವ ಹೈಮಾಸ್ಟ್ ದೀಪಗಳ ಸಂಪರ್ಕವನ್ನು ಕಡಿತಗೊಳಿಸಬೇಕು. ಇದರಿಂದಾಗಿ ದಾರಿದೀಪಗಳು ಕಬಳಿಸುತ್ತಿರುವ ಶೇ. ೫೦ ರಿಂದ ೬೦ ರಷ್ಟು ವಿದುತ್ತನ್ನು ಅನಾಯಾಸವಾಗಿ ಉಳಿಸಬಹುದಾಗಿದೆ. ಈ ವಿಧಾನವನ್ನು ಅನುಸರಿಸಿದಲ್ಲಿ  ಇಂಧನ ಸಚಿವರ ಅಪೇಕ್ಷೆಯಂತೆ ಒಂದು ರಾತ್ರಿಯಲ್ಲಿ ಒಂದು ಗಂಟೆಯ ವಿದ್ಯುತ್ ಉಳಿತಾಯಕ್ಕೆ ಬದಲಾಗಿ, ಆರು ಗಂಟೆಗಳ ವಿದ್ಯುತ್ ಉಳಿತಾಯವಾಗುವುದರಲ್ಲಿ ಸಂದೇಹವಿಲ್ಲ. ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ಇದನ್ನು ಅನುಷ್ಠಾನಗೊಳಿಸಿದಲ್ಲಿ, ಗಣನೀಯ ಪ್ರಮಾಣದ ವಿದ್ಯುತ್ ಉಳಿತಾಯವಾಗುತ್ತದೆ ಎನ್ನುವುದು ಪ್ರಾಯಶಃ ಇಂಧನ ಸಚಿವರಿಗೂ ಹೊಳೆದಿರಲಿಕ್ಕಿಲ್ಲ!.

ಇದಲ್ಲದೇ ಪ್ರತಿಯೊಂದು ವಸತಿ – ವಾಣಿಜ್ಯ ಕಟ್ಟಡಗಳಲ್ಲಿ ವಿದ್ಯುತ್ ಉಳಿತಾಯಮಾಡಬಲ್ಲ ಸಿ ಎಫ್ ಎಲ್ ಮತ್ತು ಎಲ್ ಇ ಡಿ ದಾರಿದೀಪಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಜನಸಾಮಾನ್ಯರಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಆದೇಶಿಸಬೇಕು. ವಿಶೇಷವಾಗಿ ಕತ್ತಲಾದ ಬಳಿಕ ದಾರಿದೀಪಗಳನ್ನು ಉರಿಸಿ, ನಸುಕು ಮೂಡಿದೊಡನೆ ಆರಿಸುವ ನೌಕರರು ತಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಬೇಕು. ಅದೇ ರೀತಿಯಲ್ಲಿ ಸರ್ಕಾರಿ ಕಛೇರಿಗಳಲ್ಲಿ ದಿನವಿಡೀ ಅನಾವಶ್ಯಕವಾಗಿ ಉರಿಯುವ ದೀಪಗಳು ಮತ್ತು ಫ್ಯಾನ್ ಗಳ ಬಳಕೆಯನ್ನು ನಿಯಂತ್ರಿಸಬೇಕು. ಇದರೊಂದಿಗೆ ಕರೆಂಟು ಕಬಳಿಸುವ ಹವಾನಿಯಂತ್ರಕಗಳ ಬಳಕೆಯನ್ನು ನಿಲ್ಲಿಸಬೇಕು.

ಸರ್ಕಾರದ ಆದೇಶವೇನಾಯಿತು ?

ಕೆಲ ವರ್ಷಗಳ ಹಿಂದೆ ವಿದ್ಯುತ್ ಕ್ಷಾಮದ ಸಮಸ್ಯೆಯು ತುಸು ಉಲ್ಬಣಿಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಘೋಷಿಸಿತ್ತು. ಇವುಗಳಲ್ಲಿ ಆಯ್ದ ಉಪಕ್ರಮಗಳು ಇಂತಿವೆ. ಸರ್ಕಾರಿ ಕಚೇರಿಗಳಲ್ಲಿರುವ ಹಳೆಯ ಟ್ಯೂಬ್ ಲೈಟ್ ಗಳು ಕೆಟ್ಟು ಹೋದಲ್ಲಿ, ಇವುಗಳಿಗೆ ಬದಲಾಗಿ ಸಿ ಎಫ್ ಎಲ್ ದೀಪಗಳನ್ನು ಅಳವಡಿಸಬೇಕು. ನೂತನ ಸರ್ಕಾರಿ ಕಛೇರಿಗಳ ಕಟ್ಟಡಗಳನ್ನು ನಿರ್ಮಿಸುವಾಗ ಸಾಕಷ್ಟು ಗಾಳಿ ಹಾಗೂ ಬೆಳಕು ಬರುವಂತೆ ವಿನ್ಯಾಸಗೊಳಿಸಬೇಕು. ಹಾಗೂ ನೂತನ ಕಟ್ಟಡಗಳಲ್ಲಿ ಕಡ್ಡಾಯವಾಗಿ ಸಿ ಎಫ್ ಎಲ್ ದೀಪಗಳನ್ನೇ ಅಳವಡಿಸಬೇಕು ಎಂದು ಸರ್ಕಾರ ಆದೇಶಿಸಿತ್ತು. ಆದರೆ ಈ ಆದೇಶವು ವಿದ್ಯುತ್ ಮಂಡಳಿಗಳ ಕಚೇರಿಗಳೂ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲೂ ಇಂದಿನ ತನಕ ಅನುಷ್ಠಾನಗೊಂಡಿಲ್ಲ!.  

ರಾಜ್ಯದ ಲಕ್ಷಾಂತರ ಜನರು ತಮ್ಮ ವಸತಿ ಕಟ್ಟಡಗಳಲ್ಲಿ ವಿದ್ಯುತ್ ಉಳಿತಾಯ ಮಾಡುವುದನ್ನು ಪ್ರೋತ್ಸಾಹಿಸಲು ಕೆಲ ವರ್ಷಗಳ ಹಿಂದೆ ಬೆಸ್ಕಾಂ ವಿನೂತನ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯಲ್ಲಿ ಬೆಂಗಳೂರಿನ ನಿವಾಸಿಗಳು ತಮ್ಮ ವಿದ್ಯುತ್ ಬಿಲ್ಲನ್ನು ಪಾವತಿಸುವ ಸಂದರ್ಭದಲ್ಲಿ, ತಾವು ಬಳಸುತ್ತಿದ್ದ ಸಾಮಾನ್ಯ ಬಲ್ಬ್ ಗಳನ್ನು ಬೆಸ್ಕಾಂ ಗೆ ನೀಡಿ, ಇದಕ್ಕೆ ಪ್ರತಿಯಾಗಿ ಅಂದಿನ ದಿನಗಳಲ್ಲಿ ತುಸು ದುಬಾರಿಯಾಗಿದ್ದ ೨ ಅಥವಾ ೩ ಸಿ ಎಫ್ ಎಲ್ ಬಲ್ಬ್ ಗಳನ್ನು ಪಡೆಯಬಹುದಾಗಿತ್ತು. ಈ ಸಿ ಎಫ್ ಎಲ್ ಬಲ್ಬ್ ಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ಬಲ್ಬ್ ಗಳ ಬೆಲೆಯನ್ನು ಪ್ರತಿ ತಿಂಗಳ ವಿದ್ಯುತ್ ಬಿಲ್ಲಿನೊಂದಿಗೆ ಕಂತಿನಲ್ಲಿ ಪಾವತಿಸುವ ಸೌಲಭ್ಯವನ್ನೂ ನೀಡಲಾಗಿತ್ತು. ಆದರೆ ಈ ಉತ್ತಮ ಯೋಜನೆಯು ಅಲ್ಪಾವಧಿಯಲ್ಲೇ ಅಸುನೀಗಿತ್ತು!.

ಅದೇನೇ ಇರಲಿ, ಇದೀಗ ತೀವ್ರ ಸ್ವರೂಪದ ವಿದ್ಯುತ್ ಕ್ಷಾಮದಿಂದಾಗಿ ಜಾರಿಗೆ ಬಂದಿರುವ ಅನಿಯಮಿತ ವಿದ್ಯುತ್ ಕಡಿತವನ್ನು ಜನಸಾಮಾನ್ಯರು ಅನಿವಾರ್ಯವಾಗಿ ಸಹಿಸಿಕೊಳ್ಳಲೇಬೇಕಾಗಿದೆ. ಇದರೊಂದಿಗೆ ಒಂದಿಷ್ಟು ವಿದ್ಯುತ್ ಲಿತಾಯದ ಉಪಕ್ರಮಗಳನ್ನೂ ಅನುಸರಿಸಿದಲ್ಲಿ, ವಿದ್ಯುತ್ ಕಡಿತದ ಬಾಧೆಯೂ ಕೊಂಚ ಕಡಿಮೆಯಾಗಲಿದೆ. ಅಂತಿಮವಾಗಿ ಹೇಳುವುದಾದಲ್ಲಿ “ ಒಂದು ಯೂನಿಟ್ ವಿದ್ಯುತ್ತಿನ ಉಳಿತಾಯವು, ಎರಡು ಯೂನಿಟ್ ವಿದ್ಯುತ್ತಿನ ಉತ್ಪಾದನೆ ಸಮ “ ಎನ್ನುವ ರಾಜ್ಯ ವಿದ್ಯುತ್ ಮಂಡಳಿಯ ಘೋಷಣೆಯನ್ನು ಅಕ್ಷರಶಃ ಪರಿಪಾಲಿಸಬೇಕಾಗಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು