Thursday, September 10, 2015

ONE UNIT OF ELECTRICITY SAVED IS .............



                 ವಿದ್ಯುತ್ ಉಳಿತಾಯದತ್ತ ಸರ್ಕಾರದ ಚಿತ್ತ

ದಶಕಗಳಿಂದ ವಿದ್ಯುತ್ ಕ್ಷಾಮದ ಸಮಸ್ಯೆಯನ್ನು ಅನುಭವಿಸುತ್ತಿರುವ ಕರ್ನಾಟಕದ ಜನತೆಗೆ ಇದೀಗ ಮುಂಗಾರು ಮಳೆಯ ಕೊರತೆಯಿಂದಾಗಿ, ವಿದ್ಯುತ್ ಕಡಿತದ ಬಿಸಿ ತಟ್ಟುತ್ತಿದೆ. ಇದರೊಂದಿಗೆ ಸುಡು ಬಿಸಿಲಿನ ಬೇಗೆಯಿಂದ ಬಳಲಿ ಬೆಂಡಾಗಿರುವ ಕನ್ನಡಿಗರು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಭೀಕರ ವಿದ್ಯುತ್ ಕ್ಷಾಮದ ಸಮಸ್ಯೆಯನ್ನು ನಿಯಂತ್ರಿಸಲು, ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಅನುಸರಿಸಲು ಆಸಕ್ತಿಯನ್ನು ತೋರುತ್ತಿಲ್ಲ.

ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ದಿನನಿತ್ಯ ೮೦೦೦ ಮೆಗಾವಾಟ್ ವಿದ್ಯುತ್ತಿನ ಬೇಡಿಕೆಯಿದ್ದರೂ, ಪೂರೈಕೆಯ ಪ್ರಮಾಣವು ಸುಮಾರು ೬೦೦೦ ಮೆಗಾವಾಟ್ ಆಗಿದೆ. ಅರ್ಥಾತ್ ಸುಮಾರು ೨೦೦೦ ಮೆಗಾವಾಟ್ ವಿದ್ಯುತ್ತಿನ ಕೊರತೆ ಉದ್ಭವಿಸಿದೆ. ಮುಂಗಾರು ಮಳೆಯ ಪ್ರಮಾಣ ಕಡಿಮೆಯಾಗಿರುವ ಕಾರಣದಿಂದಾಗಿ ರಾಜ್ಯದ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ, ಜಲವಿದ್ಯುತ್ ಉತ್ಪಾದನಾ ಘಟಕಗಳು ಉತ್ಪಾದಿಸುತ್ತಿರುವ ವಿದುತ್ತಿನ ಪ್ರಮಾಣವೂ ಸ್ವಾಭಾವಿಕವಾಗಿಯೇ ಕಡಿಮೆಯಾಗಿದೆ. ಇದರೊಂದಿಗೆ ರಾಜ್ಯದ ಉಷ್ಣ ಮತ್ತು ಅಣುವಿದ್ಯುತ್ ಉತ್ಪಾದನಾ ಘಟಕಗಳು ಕಾರಣಾಂತರದಿಂದ ಉತ್ಪಾದಿಸುತ್ತಿರುವ ವಿದ್ಯುತ್ತಿನ ಪ್ರಮಾಣವೂ ಕಡಿಮೆಯಾಗಿರುವುದರಿಂದ, ವಿದ್ಯುತ್ ಕ್ಷಾಮದ ಸಮಸ್ಯೆ ತಲೆದೋರಿದೆ. ಆದರೆ ವರ್ಷಂಪ್ರತಿ ರಾಜ್ಯದ ವಿದ್ಯುತ್ತಿನ ಬೇಡಿಕೆಯ ಪ್ರಮಾಣವು ಹೆಚ್ಚುತ್ತಲೇ ಇದೆ.

ರಾಜ್ಯದಲ್ಲಿ ಸುರಿಯಲಿರುವ ಹಿಂಗಾರು ಮಳೆಯ ಪ್ರಮಾಣವು ಹೆಚ್ಚಾಗಿ, ಜಲಾಶಯಗಳು ತುಂಬಿದಲ್ಲಿ, ಉಷ್ಣ ವಿದ್ಯುತ್  ಮತ್ತು ಅಣು ವಿದ್ಯುತ್ ಉತ್ಪಾದನಾ ಸ್ಥಾವರಗಳು ತಮ್ಮ ಸಾಮರ್ಥ್ಯಕ್ಕೆ ಸರಿಯಾಗಿ ವಿದ್ಯುತ್ತನ್ನು ಉತ್ಪಾದಿಸಲು ಆರಂಭಿಸಿದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ. ಜೊತೆಗೆ ರಾಜ್ಯ ಸರ್ಕಾರವು ನಮ್ಮದೇ ರಾಜ್ಯದ ಸಕ್ಕರೆ ಹಾಗೂ ಸಿಮೆಂಟ್ ಕಾರ್ಖಾನೆಗಳು ಉತ್ಪಾದಿಸುವ ಮತ್ತು ಹೆಚ್ಚುವರಿ ವಿದ್ಯುತ್ತನ್ನು ಉತ್ಪಾದಿಸುತ್ತಿರುವ ನೆರೆಯ ರಾಜ್ಯಗಳಿಂದ ವಿದ್ಯುತ್ತನ್ನು ಖರೀದಿಸಿದಲ್ಲಿ  ಸಮಸ್ಯೆಯು ತಕ್ಕಮಟ್ಟಿಗೆ ನಿಯಂತ್ರಿಸಬಹುದಾಗಿದೆ. ಇದರೊಂದಿಗೆ ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅವಶ್ಯಕತೆಯೂ ಇದೆ.

ರಾಜ್ಯದಲ್ಲಿ ಉದ್ಭವಿಸಿರುವ ವಿದ್ಯುತ್ ಕ್ಷಾಮದ ಸಮಸ್ಯೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸಲು ಇತರ ಹಲವಾರು ಉಪಕ್ರಮಗಳೊಂದಿಗೆ, ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ದಾರಿದೀಪಗಳನ್ನು ಒಂದು ತಾಸು ತಡವಾಗಿ ಉರಿಸಬೇಕೆಂದು ಇಂಧನ ಸಚಿವರೇ ಆದೇಶಿಸಿದ್ದಾರೆ. ಆದರೆ ದಾರಿದೀಪಗಳು ಬಳಸುವ ವಿದ್ಯುತ್ತಿನಲ್ಲಿ ಇನ್ನಷ್ಟು ಉಳಿತಾಯ ಮಾಡಬೇಕಿದ್ದಲ್ಲಿ, ಸಚಿವರು ಆಯ್ಕೆ ಮಾಡಿರುವುದಕ್ಕಿಂತ ಪರಿಣಾಮಕಾರಿ ವಿಧಾನವೊಂದು ಇಂತಿದೆ.

ದಾರಿದೀಪಗಳ ಸಂಪರ್ಕ ಕಡಿತ

ಸಾಮಾನ್ಯವಾಗಿ ಮಹಾನಗರಗಳನ್ನು ಹೊರತುಪಡಿಸಿ ಅನ್ಯ ನಗರ ಮತ್ತು ಪಟ್ಟಣಗಳಲ್ಲಿ ರಾತ್ರಿ ಹತ್ತು ಗಂಟೆಯ ಬಳಿಕ ಜನಸಂಚಾರ ಸಾಕಷ್ಟು ಕಡಿಮೆ ಇರುತ್ತದೆ. ಆದರೆ ಪ್ರತಿಯೊಂದು ನಗರ - ಪಟ್ಟಣಗಳಲ್ಲಿ ಅನಾವಶ್ಯಕವಾಗಿ ಮತ್ತು ಅವೈಜ್ಞಾನಿಕವಾಗಿ ಅಳವಡಿಸಿರುವ ಅಸಂಖ್ಯ ದಾರಿದೀಪಗಳು ಇರುಳಿಡೀ  ( ಕೆಲವೆಡೆ ಹಗಲಿರುಳು )    ಬೆಳಗುತ್ತವೆ. ಇಂಧನ ಸಚಿವರಿಗೆ ಬೀದಿದೀಪಗಳು ಕಬಳಿಸುವ ಅಗಾಧ ಪ್ರಮಾಣದ ವಿದ್ಯುತ್ತನ್ನು ಉಳಿತಾಯ ಮಾಡಬೇಕೆನ್ನುವ ಉದ್ದೇಶವಿದ್ದಲ್ಲಿ, ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ದಾರಿದೀಪಗಳಲ್ಲಿ ಶೇ. ೫೦ ರಷ್ಟು ದೀಪಗಳ ( ಒಂದು ಕಂಬವನ್ನು ಬಿಟ್ಟು ಮತ್ತೊಂದು ಕಂಬದಲ್ಲಿನ ದೀಪದ ಸಂಪರ್ಕ ಕಡಿತ ) ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಬೇಕು. ಜೊತೆಗೆ ಇತ್ತೀಚಿನ ಕೆಲವರ್ಷಗಳಿಂದ ಹಳ್ಳಿಹಳ್ಳಿಗಳಲ್ಲೂ ಕಾಣಸಿಗುವ ಹೈಮಾಸ್ಟ್ ದೀಪಗಳ ಸಂಪರ್ಕವನ್ನು ಕಡಿತಗೊಳಿಸಬೇಕು. ಇದರಿಂದಾಗಿ ದಾರಿದೀಪಗಳು ಕಬಳಿಸುತ್ತಿರುವ ಶೇ. ೫೦ ರಿಂದ ೬೦ ರಷ್ಟು ವಿದುತ್ತನ್ನು ಅನಾಯಾಸವಾಗಿ ಉಳಿಸಬಹುದಾಗಿದೆ. ಈ ವಿಧಾನವನ್ನು ಅನುಸರಿಸಿದಲ್ಲಿ  ಇಂಧನ ಸಚಿವರ ಅಪೇಕ್ಷೆಯಂತೆ ಒಂದು ರಾತ್ರಿಯಲ್ಲಿ ಒಂದು ಗಂಟೆಯ ವಿದ್ಯುತ್ ಉಳಿತಾಯಕ್ಕೆ ಬದಲಾಗಿ, ಆರು ಗಂಟೆಗಳ ವಿದ್ಯುತ್ ಉಳಿತಾಯವಾಗುವುದರಲ್ಲಿ ಸಂದೇಹವಿಲ್ಲ. ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ಇದನ್ನು ಅನುಷ್ಠಾನಗೊಳಿಸಿದಲ್ಲಿ, ಗಣನೀಯ ಪ್ರಮಾಣದ ವಿದ್ಯುತ್ ಉಳಿತಾಯವಾಗುತ್ತದೆ ಎನ್ನುವುದು ಪ್ರಾಯಶಃ ಇಂಧನ ಸಚಿವರಿಗೂ ಹೊಳೆದಿರಲಿಕ್ಕಿಲ್ಲ!.

ಇದಲ್ಲದೇ ಪ್ರತಿಯೊಂದು ವಸತಿ – ವಾಣಿಜ್ಯ ಕಟ್ಟಡಗಳಲ್ಲಿ ವಿದ್ಯುತ್ ಉಳಿತಾಯಮಾಡಬಲ್ಲ ಸಿ ಎಫ್ ಎಲ್ ಮತ್ತು ಎಲ್ ಇ ಡಿ ದಾರಿದೀಪಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಜನಸಾಮಾನ್ಯರಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಆದೇಶಿಸಬೇಕು. ವಿಶೇಷವಾಗಿ ಕತ್ತಲಾದ ಬಳಿಕ ದಾರಿದೀಪಗಳನ್ನು ಉರಿಸಿ, ನಸುಕು ಮೂಡಿದೊಡನೆ ಆರಿಸುವ ನೌಕರರು ತಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಬೇಕು. ಅದೇ ರೀತಿಯಲ್ಲಿ ಸರ್ಕಾರಿ ಕಛೇರಿಗಳಲ್ಲಿ ದಿನವಿಡೀ ಅನಾವಶ್ಯಕವಾಗಿ ಉರಿಯುವ ದೀಪಗಳು ಮತ್ತು ಫ್ಯಾನ್ ಗಳ ಬಳಕೆಯನ್ನು ನಿಯಂತ್ರಿಸಬೇಕು. ಇದರೊಂದಿಗೆ ಕರೆಂಟು ಕಬಳಿಸುವ ಹವಾನಿಯಂತ್ರಕಗಳ ಬಳಕೆಯನ್ನು ನಿಲ್ಲಿಸಬೇಕು.

ಸರ್ಕಾರದ ಆದೇಶವೇನಾಯಿತು ?

ಕೆಲ ವರ್ಷಗಳ ಹಿಂದೆ ವಿದ್ಯುತ್ ಕ್ಷಾಮದ ಸಮಸ್ಯೆಯು ತುಸು ಉಲ್ಬಣಿಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಘೋಷಿಸಿತ್ತು. ಇವುಗಳಲ್ಲಿ ಆಯ್ದ ಉಪಕ್ರಮಗಳು ಇಂತಿವೆ. ಸರ್ಕಾರಿ ಕಚೇರಿಗಳಲ್ಲಿರುವ ಹಳೆಯ ಟ್ಯೂಬ್ ಲೈಟ್ ಗಳು ಕೆಟ್ಟು ಹೋದಲ್ಲಿ, ಇವುಗಳಿಗೆ ಬದಲಾಗಿ ಸಿ ಎಫ್ ಎಲ್ ದೀಪಗಳನ್ನು ಅಳವಡಿಸಬೇಕು. ನೂತನ ಸರ್ಕಾರಿ ಕಛೇರಿಗಳ ಕಟ್ಟಡಗಳನ್ನು ನಿರ್ಮಿಸುವಾಗ ಸಾಕಷ್ಟು ಗಾಳಿ ಹಾಗೂ ಬೆಳಕು ಬರುವಂತೆ ವಿನ್ಯಾಸಗೊಳಿಸಬೇಕು. ಹಾಗೂ ನೂತನ ಕಟ್ಟಡಗಳಲ್ಲಿ ಕಡ್ಡಾಯವಾಗಿ ಸಿ ಎಫ್ ಎಲ್ ದೀಪಗಳನ್ನೇ ಅಳವಡಿಸಬೇಕು ಎಂದು ಸರ್ಕಾರ ಆದೇಶಿಸಿತ್ತು. ಆದರೆ ಈ ಆದೇಶವು ವಿದ್ಯುತ್ ಮಂಡಳಿಗಳ ಕಚೇರಿಗಳೂ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲೂ ಇಂದಿನ ತನಕ ಅನುಷ್ಠಾನಗೊಂಡಿಲ್ಲ!.  

ರಾಜ್ಯದ ಲಕ್ಷಾಂತರ ಜನರು ತಮ್ಮ ವಸತಿ ಕಟ್ಟಡಗಳಲ್ಲಿ ವಿದ್ಯುತ್ ಉಳಿತಾಯ ಮಾಡುವುದನ್ನು ಪ್ರೋತ್ಸಾಹಿಸಲು ಕೆಲ ವರ್ಷಗಳ ಹಿಂದೆ ಬೆಸ್ಕಾಂ ವಿನೂತನ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯಲ್ಲಿ ಬೆಂಗಳೂರಿನ ನಿವಾಸಿಗಳು ತಮ್ಮ ವಿದ್ಯುತ್ ಬಿಲ್ಲನ್ನು ಪಾವತಿಸುವ ಸಂದರ್ಭದಲ್ಲಿ, ತಾವು ಬಳಸುತ್ತಿದ್ದ ಸಾಮಾನ್ಯ ಬಲ್ಬ್ ಗಳನ್ನು ಬೆಸ್ಕಾಂ ಗೆ ನೀಡಿ, ಇದಕ್ಕೆ ಪ್ರತಿಯಾಗಿ ಅಂದಿನ ದಿನಗಳಲ್ಲಿ ತುಸು ದುಬಾರಿಯಾಗಿದ್ದ ೨ ಅಥವಾ ೩ ಸಿ ಎಫ್ ಎಲ್ ಬಲ್ಬ್ ಗಳನ್ನು ಪಡೆಯಬಹುದಾಗಿತ್ತು. ಈ ಸಿ ಎಫ್ ಎಲ್ ಬಲ್ಬ್ ಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ಬಲ್ಬ್ ಗಳ ಬೆಲೆಯನ್ನು ಪ್ರತಿ ತಿಂಗಳ ವಿದ್ಯುತ್ ಬಿಲ್ಲಿನೊಂದಿಗೆ ಕಂತಿನಲ್ಲಿ ಪಾವತಿಸುವ ಸೌಲಭ್ಯವನ್ನೂ ನೀಡಲಾಗಿತ್ತು. ಆದರೆ ಈ ಉತ್ತಮ ಯೋಜನೆಯು ಅಲ್ಪಾವಧಿಯಲ್ಲೇ ಅಸುನೀಗಿತ್ತು!.

ಅದೇನೇ ಇರಲಿ, ಇದೀಗ ತೀವ್ರ ಸ್ವರೂಪದ ವಿದ್ಯುತ್ ಕ್ಷಾಮದಿಂದಾಗಿ ಜಾರಿಗೆ ಬಂದಿರುವ ಅನಿಯಮಿತ ವಿದ್ಯುತ್ ಕಡಿತವನ್ನು ಜನಸಾಮಾನ್ಯರು ಅನಿವಾರ್ಯವಾಗಿ ಸಹಿಸಿಕೊಳ್ಳಲೇಬೇಕಾಗಿದೆ. ಇದರೊಂದಿಗೆ ಒಂದಿಷ್ಟು ವಿದ್ಯುತ್ ಲಿತಾಯದ ಉಪಕ್ರಮಗಳನ್ನೂ ಅನುಸರಿಸಿದಲ್ಲಿ, ವಿದ್ಯುತ್ ಕಡಿತದ ಬಾಧೆಯೂ ಕೊಂಚ ಕಡಿಮೆಯಾಗಲಿದೆ. ಅಂತಿಮವಾಗಿ ಹೇಳುವುದಾದಲ್ಲಿ “ ಒಂದು ಯೂನಿಟ್ ವಿದ್ಯುತ್ತಿನ ಉಳಿತಾಯವು, ಎರಡು ಯೂನಿಟ್ ವಿದ್ಯುತ್ತಿನ ಉತ್ಪಾದನೆ ಸಮ “ ಎನ್ನುವ ರಾಜ್ಯ ವಿದ್ಯುತ್ ಮಂಡಳಿಯ ಘೋಷಣೆಯನ್ನು ಅಕ್ಷರಶಃ ಪರಿಪಾಲಿಸಬೇಕಾಗಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು




No comments:

Post a Comment