Wednesday, August 19, 2015

NO LOAD SHEDDING NEXT YEAR !



       ಮುಂದಿನ ವರ್ಷದಿಂದ ರಾಜ್ಯದಲ್ಲಿ ವಿದ್ಯುತ್ ಕಡಿತವಿಲ್ಲ!

ರಾಜ್ಯದ ಜನತೆಗೆ ಯಾವುದೇ ಪೂರ್ವಸೂಚನೆಯನ್ನೇ ನೀಡದೇ ಹಠಾತ್ ಜಾರಿಗೆ ಬಂದಿರುವ ವಿದ್ಯುತ್ ಕಡಿತದ ಸಮಸ್ಯೆಯಿಂದ ವ್ಯಗ್ರರಾಗಿರುವ ಜನರಿಗೆ, ಲೇಖನದ ತಲೆಬರಹವನ್ನು ಕಂಡು ಅಚ್ಚರಿಯಾಗಿರಬಹುದು. ಹಲವಾರು ವರ್ಷಗಳಿಂದ ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಹೊಣೆಗಾರಿಕೆಯನ್ನು ವಹಿಸಿಕೊಂಡ ಪ್ರತಿಯೊಬ್ಬ ಸಚಿವರು, ವರ್ಷಂಪ್ರತಿ ನೀಡುತ್ತಿದ್ದ  ಹೇಳಿಕೆಯನ್ನೇ ಈ ಲೇಖನದ ತಲೆಬರಹವನ್ನಾಗಿ ಬಳಸಲಾಗಿದೆ. ಈ ಪ್ರಮಖ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ಹಲವಾರು ಮಂತ್ರಿಗಳು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದರೂ, ಇವುಗಳು ಸಮರ್ಪಕವಾಗಿ ಸಕಾಲದಲ್ಲಿ ಅನುಷ್ಠಾನಗೊಂಡ ಹಾಗೂ ವಿದ್ಯುತ್ ಉತ್ಪಾದನೆಯ ಪ್ರಮಾಣ ಹೆಚ್ಚಿದ ನಿದರ್ಶನಗಳೇ ಇಲ್ಲ. ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪನವರು ದೂರದ ಛತ್ತೀಸ್ ಘಡದಲ್ಲಿ ವಿದ್ಯುತ್ ಉತ್ಪಾದನಾ ಘಟಕವೊಂದನ್ನು ಸ್ಥಾಪಿಸಲು ಮುಂದಾಗಿದ್ದರೂ, ಅಲ್ಲಿ ಉತ್ಪಾದನೆಯಾದ ವಿದ್ಯುತ್ತನ್ನು ರಾಜ್ಯಕ್ಕೆ ರವಾನಿಸುವುದು ಹೇಗೆನ್ನುವ ವಿಚಾರವನ್ನು ವಿಮರ್ಶಿಸಿರಲಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಛತ್ತೀಸ್ ಘಡದಿಂದ ನಮ್ಮ ರಾಜ್ಯಕ್ಕೆ ಇಂದಿನತನಕ ವಿದ್ಯುತ್ ಸರಬರಜಾಗಿಲ್ಲ.

ವಿದ್ಯುತ್ ಕ್ಷಾಮ
 ಕೆಲ ವರ್ಷಗಳ ಹಿಂದೆ ಬೇಸಗೆಯ ದಿನಗಳಲ್ಲಿ ಉದ್ಭವಿಸುತ್ತಿದ್ದ ವಿದ್ಯುತ್ ಕ್ಷಾಮದ ಸಮಸ್ಯೆಯು, ಕಾಲಕ್ರಮೇಣ ಚಳಿಗಾಲದಲ್ಲಿ ಮತ್ತು ಇದೀಗ ಮಳೆಗಾಲ ಮುಗಿಯುವ ಮುನ್ನವೇ ತಲೆದೋರುತ್ತಿದೆ. ಈ ವಿಲಕ್ಷಣ ಸಮಸ್ಯೆಗೆ ವಿದ್ಯುತ್ ಉತ್ಪಾದನೆಯ ಪ್ರಮಾಣದಲ್ಲಿ ಕೊರತೆಯೊಂದಿಗೆ, ನಾವಿಂದು ಅನಾವಶ್ಯಕವಾಗಿ ಪೋಲುಮಾಡುತ್ತಿರುವ ಅಗಾಧ ಪ್ರಮಾಣದ ವಿದ್ಯುತ್ ಕೂಡಾ ಪ್ರಮುಖ ಕಾರಣವೆನಿಸಿದೆ. ಆದರೆ " ಒಂದು ಯೂನಿಟ್ ವಿದ್ಯುತ್ತಿನ ಉಳಿತಾಯ, ಎರಡು ಯೂನಿಟ್ ವಿದ್ಯುತ್ತಿನ ಉತ್ಪಾದನೆಗೆ ಸಮ " ಎನ್ನುವ ಘೋಷಣೆಯನ್ನು ರಾಜ್ಯದ ಎಸ್ಕಾಂ ಗಳೂ ಮರೆತುಬಿಟ್ಟಿವೆ!
ಪ್ರಸ್ತುತ ಉಡುಪಿಯ ಯು ಪಿ ಸಿ ಎಲ್ ಘಟಕದಲ್ಲಿ ಉತ್ಪಾದನೆಯಾಗುತ್ತಿದ್ದ ವಿದ್ಯುತ್ತಿನ ಪ್ರಮಾಣದಲ್ಲಿ 1200  ಮೆಗಾವಾಟ್ ಖೋತಾ ಆಗಿದೆ. ಇದರೊಂದಿಗೆ ರಾಯಚೂರು ವಿದ್ಯುತ್ ಉತ್ಪಾದನ  ಕೇಂದ್ರದ ಒಂದು ಘಟಕವೂ ಕೈಕೊಟ್ಟಿದ್ದು, ರಾಜ್ಯಾದ್ಯಂತ ವಿದ್ಯುತ್ ಕಡಿತ ಆರಂಭಗೊಂಡಿದೆ. ವಿದ್ಯುತ್ತಿನ ಉತ್ಪಾದನೆಗಿಂತ ಬೇಡಿಕೆಯ ಪ್ರಮಾಣ ಹೆಚ್ಚಾದಾಗ, ಅನಿವಾರ್ಯವಾಗಿ ಸರ್ಕಾರವು ಇಂತಹ ನಿರ್ಧಾರವನ್ನು ತಳೆಯಬೇಕಾಗುತ್ತದೆ. ವಿಶೇಷವೆಂದರೆ ಈ ಸಮಸ್ಯೆಯು ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಜನತೆಯನ್ನು ಕಾಡುತ್ತಿದ್ದರೂ, ಇದನ್ನು ಸಮರ್ಪಕವಾಗಿ ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ.

ಉತ್ಪಾದನೆಗಿಂತ ಅಧಿಕ ಬೇಡಿಕೆ

ಇಷ್ಟೆಲ್ಲಾ ಸಾಲದೆನ್ನುವಂತೆ ಈ ವರ್ಷದಲ್ಲಿ ಸುರಿದಿರುವ ಮುಂಗಾರು ಮಳೆಯ ಪ್ರಮಾಣವು ಸಾಕಷ್ಟು ಕಡಿಮೆಯಾಗಿದ್ದು, ರಾಜ್ಯದ ಅನೇಕ ಭಾಗಗಳಲ್ಲಿ " ಬರ " ದ ಸಮಸ್ಯೆಯು ತಲೆದೋರಿದೆ. ತತ್ಪರಿಣಾಮವಾಗಿ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸಂಬಂಧಿಸಿದ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಪ್ರಮಾಣವೂ ಸ್ವಾಭಾವಿಕವಾಗಿಯೇ ಕಡಿಮೆಯಾಗಿದೆ. ಲಿಂಗನಮಕ್ಕಿ, ಮಾಣಿ ಮತ್ತು ಸೂಪಾ ಜಲಾಶಯಗಳಲ್ಲಿ ಸಂಗ್ರಹಿತ ನೀರಿನ ಕೊರತೆಯಿಂದಾಗಿ, ಸುಮಾರು 2500 ಮೆಗಾವಾಟ್ ವಿದ್ಯುತ್ತಿನ ಉತ್ಪಾದನೆಯಲ್ಲಿ ಕೊರತೆಯಾಗಲಿದೆ. ಇಷ್ಟು ಮಾತ್ರವಲ್ಲ, ಕೇಂದ್ರದಿಂದ ಲಭಿಸುವ ಸೌರ ವಿದ್ಯುತ್ತಿನ ಪ್ರಮಾಣದಲ್ಲೂ 1000 ಮೆಗಾವಾಟ್ ಕಡಿತಗೊಂಡಿದೆ. ಇವೆಲ್ಲವುಗಳ ಸಂಯುಕ್ತ ಪರಿಣಾಮದಿಂದಾಗಿ, ರಾಜ್ಯಾದಂತ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ.

ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ತಿನ ಬೇಡಿಕೆಯ ಪ್ರಮಾಣವು 9000 ಮೆಗಾವಾಟ್ ಇದ್ದು, ಕೇಂದ್ರದ ಪಾಲು ಸೇರಿದಂತೆ ಪೂರೈಕೆಯ ಪ್ರಮಾಣವು 6000 ದಿಂದ 7000 ಮೆಗಾವಾಟ್ ಗಳಾಗಿವೆ. ಇದರಿಂದಾಗಿ ಪ್ರತಿನಿತ್ಯ ಒಂದರಿಂದ ಎರಡು ಸಾವಿರ ಮೆಗಾವಾಟ್ ವಿದ್ಯುತ್ತಿನ ಕೊರತೆ ತಲೆದೋರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮುಂಗಾರು ಮಳೆ ಅದೃಶ್ಯವಾಗಿದ್ದು, ರಣಬಿಸಿಲು ಕಾಯುತ್ತಿದೆ. ಇದೀಗ ವಿದ್ಯುತ್ ಕಡಿತದ ಬಿಸಿಯು ರಾಜ್ಯದ ವಿವಿಧ ನಗರ ಹಾಗೂ ಪಟ್ಟಣಗಳೊಂದಿಗೆ, ರಾಜಧಾನಿಯ ನಿವಾಸಿಗಳಿಗೂ ತಟ್ಟುತ್ತಿದೆ.

ಉಳಿತಾಯದತ್ತ ಗಮನಹರಿಸಿಲ್ಲ

ವರ್ಷಂಪ್ರತಿ ಕರ್ನಾಟಕದಲ್ಲಿ ವಿದ್ಯುತ್ ಕ್ಷಾಮದ ಸಮಸ್ಯೆ ಉದ್ಭವಿಸುತ್ತಿದ್ದರೂ, ರಾಜ್ಯ ಸರ್ಕಾರ ಮತ್ತು ಎಸ್ಕಾಂ ಗಳು ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಿಸಲು ಪ್ರಾಮಾಣಿಕ ಪ್ರಯತ್ನವನ್ನೇ ನಡೆಸಿಲ್ಲ. ಉದಾಹರಣೆಗೆ ಕೆಲ ವರ್ಷಗಳ ಹಿಂದೆ ಬೆಂಗಳೂರಿನ ನಿವಾಸಿಗಳಿಗೆ ಕೇವಲ 10/- ರೂ.ಗಳಿಗೆ ಅಲ್ಪಪ್ರಮಾಣದ ವಿದ್ಯುತ್ತನ್ನು ಬಳಸುವ ಸಿ ಎಫ್ ಎಲ್ ಬಲ್ಬುಗಳನ್ನು ಒದಗಿಸುವ “ ಬೆಳಕು “ ನಾಮಧೇಯದ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಅಲ್ಪಾವಧಿಯಲ್ಲೇ ಈ ಯೋಜನೆಗೆ ಗ್ರಹಣ ಹಿಡಿದಿತ್ತು.

ಅಂತೆಯೇ ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುಳಿಡೀ ಬೆಳಗುವ ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿ, ಬೀದಿದೀಪಗಳ ಸಂಖ್ಯೆಯನ್ನು ಕಡಿಮೆ ಮಾಡುವುದು, ವಿದ್ಯುತ್ ಕ್ಷಾಮದ ಸಂದರ್ಭದಲ್ಲಿ ಶೇ. 50 ರಷ್ಟು ದಾರಿದೀಪಗಳ ಸಂಪರ್ಕವನ್ನು ಕಡಿತ ಮಾಡುವುದು, ಸಿ ಎಫ್ ಎಲ್ ಅಥವಾ ಎಲ್ ಇ ಡಿ  ದೀಪಗಳನ್ನು ಬಳಸುವುದು, ಕತ್ತಲಾಗುವ ಸಮಯದಲ್ಲಿ ಬೆಳಗಿಸಿ ಸೂರ್ಯ ಮೂಡಿದೊಡನೆ ಆರಿಸುವುದು, ಕರೆಂಟು ಕಬಳಿಸುವ ಸೋಡಿಯಂ ದೀಪಗಳನ್ನು ಬದಲಾಯಿಸುವುದೇ ಮುಂತಾದ ಉಪಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದಲ್ಲಿ ಗಣನೀಯ ಪ್ರಮಾಣದ ವಿದ್ಯುತ್ತನ್ನು ಉಳಿಸಬಹುದಾಗಿದೆ. ಆದರೆ ಇಂತಹ ಉಪಕ್ರಮಗಳನ್ನು ಕೈಗೊಳ್ಳಲು ನಮ್ಮನ್ನಾಳುವವರಿಗೆ ಧೃಢವಾದ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ.

ವಿದ್ಯುತ್ ಕಡಿತದ ಸಂದರ್ಭದಲ್ಲಿ ತತ್ಸಂಬಂಧಿತರನ್ನು ಶಪಿಸುವ ರಾಜ್ಯದ ಪ್ರಜೆಗಳು, ತಮ್ಮ ವಸತಿ – ವಾಣಿಜ್ಯ ಕಟ್ಟಡಗಳಲ್ಲಿ ಸಿ ಎಫ್ ಎಲ್ ಅಥವಾ ಎಲ್ ಇ ಡಿ ದೀಪಗಳನ್ನು ಬಳಸುವುದು, ಸೋಲಾರ್ ವಾಟರ್ ಹೀಟರ್ ಬಳಸುವುದು, ಕರೆಂಟು ಕಬಳಿಸುವ ವಿದ್ಯುತ್ ಉಪಕರಣಗಳ ಬಳಕೆಯನ್ನು ನಿಯಂತ್ರಿಸುವುದೇ ಮುಂತಾದ ವಿಧಾನಗಳಿಂದ ಸಾಕಷ್ಟು ವಿದ್ಯುತ್ತನ್ನು ಉಳಿತಾಯ ಮಾಡಬಹುದಾಗಿದೆ.

ವಿಶೇಷವಾಗಿ ಬೇಸಗೆಯ ದಿನಗಳಲ್ಲಿ ಜರಗುವ ಜಾತ್ರೆ – ಉತ್ಸವಗಳ ಮತ್ತು ವಿಶೇಷ ಸಭೆ – ಸಮಾರಂಭಗಳ ಸಂದರ್ಭಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರವನ್ನು ಕಡಿಮೆ ಮಾಡುವದು ಮತ್ತು ತಡರಾತ್ರಿಯ ಬಳಿಕ ಇವುಗಳನ್ನು ಆರಿಸುವುದರಿಂದ ನೂರಾರು ಯೂನಿಟ್ ವಿದ್ಯುತ್ತನ್ನು ಉಳಿಸಬಹುದಾಗಿದೆ,

ಅಂತಿಮವಾಗಿ ಹೇಳುವುದಾದಲ್ಲಿ ಎಸ್ಕಾಂ ಗಳು, ರಾಜ್ಯದ ಪ್ರಜೆಗಳು ಮತ್ತು ಸರ್ಕಾರ ಕೈಜೋಡಿಸುವ ಮೂಲಕ ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಅನುಸರಿಸುವುದರೊಂದಿಗೆ, ಮುಂದಿನ ಹತ್ತು ವರ್ಷಗಳ ಅವಧಿಗೆ ರಾಜ್ಯದ ಬೇಡಿಕೆಯನ್ನುಪೂರೈಸುವಷ್ಟು ವಿದ್ಯುತ್ತನ್ನು ಉತ್ಪಾದಿಸುವ ಯೋಜನೆಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕಿದೆ. ಇದಕ್ಕೆ ತಪ್ಪಿದಲ್ಲಿ ಮುಂದಿನ ವರ್ಷಗಳಲ್ಲಿ ವಿದ್ಯುತ್ ಕ್ಷಾಮದ ಸಮಸ್ಯೆಯು ರಾಜ್ಯದ ಜನತೆಯನ್ನು ಶಾಪದೋಪಾದಿಯಲ್ಲಿ ಪೀಡಿಸಲಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು

ಚಿತ್ರ – ಎಲ್ ಇ ಡಿ ದಾರಿದೀಪಗಳು






No comments:

Post a Comment